ಬುಧವಾರ, ಫೆಬ್ರವರಿ 21, 2018

ಕಾಶ್ಮೀರದಲ್ಲಿ ಸೇನೆಯ ಗೋಲಿಬಾರ್: ಈ ದೇಶದಲ್ಲಿ ನ್ಯಾಯ ಸಿಗುವುದಿಲ್ಲ


   ಅನುಶಿವಸುಂದರ್ 
Image result for ಕಾಶ್ಮೀರಿ
ಕಾಶ್ಮೀರದಲ್ಲಿ ಸೈನಿಕ ಸಿಬ್ಬಂದಿಯವರ ಹಕ್ಕುಗಳ ಬಗೆಗೆ ವ್ಯಕ್ತವಾಗುತ್ತಿರುವ ಕಾಳಜಿಗಳು ನಾಗರಿಕರ ಮಾನವಹಕ್ಕುಗಳ ಪ್ರಶ್ನೆಯನ್ನು ಮರೆಮಾಚುತ್ತಿದೆ
ಗೌತಮ್ ನವಲಾಖಾ ಅವರು ಬರೆಯುತ್ತಾರೆ:

ಇದೇ ಜನವರಿ ೨೭ರಂದು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಗವಾನ್ಪೋರ ಹಳ್ಳಿಯಲ್ಲಿ ಭಾರತದ ಸೇನಾ ತುಕಡಿಯೊಂದು ಗೋಲಿಬಾರ್ ನಡೆಸಿತು. ಅದರಿಂದ ನಿಶ್ಯಸ್ತ್ರ ನಾಗರಿಕರು ಬಲಿಯದ್ದರಿಂದ ಅದಕ್ಕೆ ಕಾರಣನಾದ ಸೇನಾಧಿಕಾರಿಯ ಮೇಲೆ ದೂರನ್ನು ದಾಖಲಿಸುವ ಪ್ರಕ್ರಿಯೆಗೆ ಒತ್ತಾಯಿಸಲಾಯಿತು. ಆದರೆ ಇದೀಗ ಸೇನಾಧಿಕಾರಿಯ ಪರಿಸ್ಥಿತಿಯ ಕುರಿತು ಎಲ್ಲಿಲ್ಲದ ಕಾಳಜಿಯು ದೇಶಾದ್ಯಂತ ಸದ್ದು ಮಾಡತೊಡಗಿದೆ. ಇದು  ಕಾಶ್ಮೀರದಲ್ಲಿ  ಬಡಿದೆಬ್ಬಲಾಗಿಸುತ್ತಿರುವ ದೇಶೋನ್ಮಾದವು ನ್ಯಾಯಪ್ರಕ್ರಿಯೆಯ ಮೇಲೆ ಹೇಗೆ ವಿಜಯವನ್ನು ಸಾಧಿಸುತ್ತಲೇ ಬರುತ್ತಿದೆ ಎಂಬುದಕ್ಕೆ ಮತ್ತೊಂದು ವಿಷಾದಕರ ಉದಾಹರಣೆಯಾಗಿದೆ.

ಪ್ರಕರಣದ ಕುರಿತು ಸೈನಿಕರ ಮನೋಸ್ಥೈರ್ಯವನ್ನು ರಕ್ಷಿಸಬೇಕೆಂದು ಕೋರುತ್ತಾ ದಾಖಲಾದ ಅಹವಾಲೊಂದನ್ನು ಸುಪ್ರೀಂ ಕೋರ್ಟಿನಲ್ಲಿ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ಮೂರುಜನರ ಪೀಠವೊಂದು ಫೆಬ್ರವರಿ ೧೨ರಂದು ಆಲಿಸಿತು. ನ್ಯಾಯಾಲಯವು ಪ್ರತಿವಾದಿಯ ಅನುಪಸ್ಥಿತಿಯಲ್ಲಿ ಆದೇಶವನ್ನು ನೀಡಿತು. ಆದೇಶದಲ್ಲಿ ಜಮ್ಮು -ಕಾಶ್ಮೀರ ಪೊಲೀಸಿನ ೧೦ನೇ ಘರ್ವಾಲ್ ರೈಫಲ್ಸ್ ಶಾಖೆಗೆ ಸೇರಿದ ಮೇಜರ್ ಆದಿತ್ಯಕುಮಾರ್ ಅವರ ಮೇಲೆ ಯಾವುದೇ ದಂಡನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಬಾರದೆಂದು ನಿರ್ದೇಶನ ನೀಡಿದೆ. ಇದಕ್ಕೆ ಸ್ವಲ್ಪ ಮುನ್ನ ಫೆಬ್ರವರಿ ರಂದು ರಾಷ್ಟ್ರೀಯ ಮಾನವ ಹಕ್ಕುಗಳ ಅಯೋಗವು ಸೇವೆಯಲ್ಲಿರುವ ಸೇನಾಧಿಕಾರಿಗಳ ಮಕ್ಕಳು ನೀಡಿದ ಅಹವಾಲೊಂದನ್ನು ಅಂಗೀಕರಿಸುತ್ತಾ ಸೈನಿಕರ ರಕ್ಷಣೆಯು ಮುಖ್ಯವಾದ ಕಾಳಜಿಯೆಂದು ಅಭಿಪ್ರಾಯಪಟ್ಟಿದೆ. ಹಾಗೂ ಸೇನಾ ಸಿಬ್ಬಂದಿಯ ಮೇಲೆ ಅರಾಜಕ ಗುಂಪೊಂದು ಕಲ್ಲೂ ತೂರಿ ಹಲ್ಲೆ ಮಾಡಿದ ಪ್ರಕರಣವನ್ನು ತನಿಖೆ ಮಾಡಬೇಕೆಂದು ಆದೇಶಿಸಿದೆ. ಒಂದು ಗಲಭೆಗ್ರಸ್ಥ ಪ್ರದೇಶದಲ್ಲಿ ಕೇವಲ ಅನುಮಾನದ ಮೇಲೆ ಯಾರನ್ನಾದರೂ ಕೊಲ್ಲುವ ಪ್ರಚಂಡ ಅಧಿಕಾರವನ್ನು ಪಡೆದಿರುವ ಸೇನಾ ಸಿಬ್ಬಂದಿಗಳ ಮಾನವ ಹಕ್ಕುಗಳ ಬಗ್ಗೆ ಪ್ರಶ್ನೆಯನ್ನೆಬ್ಬಿಸುತ್ತಾ ಅವರ ದೌರ್ಜನ್ಯಕ್ಕೆ ಬಲಿಯಾಗುತ್ತಿರುವ ನಾಗರಿಕರ ಮಾನವ ಹಕ್ಕುಗಳ ಪ್ರಶ್ನೆಯನ್ನು ಬದಿಗೆ ಸರಿಸಲಾಗುತ್ತಿದೆ. ಇದೀಗ ತನಿಖಾ ಪ್ರಕ್ರಿಯೆಯ ಮೇಲೆಯೇ ತಡೆಯಾಜ್ನೆಯಿರುವುದರಿಂದ ದೂರು ದಾಖಲಿಸುವುದು ಕೂಡಾ ನಿಷಿದ್ದವಾಗಿದೆ.

ಜನವರಿ ೨೮ರಂದು ಭಾರತದ ಸೇನೆಯು ತಾನು ಜನವರಿ ೨೭ರಂದು ಮಾಡಿದ ಗೋಲಿಬಾರ್ ಬಗ್ಗೆ ಒಂದು ಹೇಳಿಕೆಯನ್ನು ನೀಡಿತು. ಅದರಲ್ಲಿ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿರುವುದಲ್ಲದೆ ತಾವು ನಿಗದಿಯಾದ ಕಾರ್ಯಾಚರಣಾ ಕ್ರಮ (ಸ್ಟಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್)ಗಳನ್ನು ಅನುಸರಿಸಿರುವುದಾಗಿ ಒತ್ತಿ ಹೇಳಿದೆ. ಅಂದು ಸೇನೆಯ ಗುಂಡಿಗೆ ಜಾವೆದ್ ಅಹ್ಮದ್ ಭಟ್, ಸುಹೈಲ್ ಜಾವೆದ್ ಲೋನ್ ಮತ್ತು ರಾಯೀಸ್ ಅಹ್ಮದ್ ಗನಾಯ್ ಎಂಬ ಮೂವರು ಯುವಕರು ಬಲಿಯಾಗಿದ್ದರು. ಅಲ್ಲಿ ಸೇರಿದ್ದ ಗುಂಪು ಸೇನೆಯ ಅಧಿಕಾರಿಯೊಬ್ಬರನ್ನು ಕೊಂದು ವಾಹನಕ್ಕೆ ಬೆಂಕಿ ಹಚ್ಚಲು ಮುಂದಾಗಿದ್ದರಿಂದ ತಮ್ಮ ಸ್ವರಕ್ಷಣೆಗಾಗಿ ಗುಂಡು ಹಾರಿಸಲೇ ಬೇಕಾಯಿತೆಂದು ಸೇನೆಯು ಹೇಳಿಕೊಳ್ಳುತ್ತಿದೆ. ಆದರೆ ಘಟನೆಯ ವಿವರಗಳು ಯಾವುದೇ ಹೇಳಿಕೆಯನ್ನು ಸಮರ್ಥಿಸುವುದಿಲ್ಲ. ವಾಸ್ತವ ಸಂಗತಿಗಳು ಬೇರೊಂದು ಕಥೆಯನ್ನೇ ಹೇಳುತ್ತಿವೆ. ಜನವರಿ ೨೪ರಂದು ಚಾಯ್ಗುಂದ್ ಪ್ರದೇಶದಲ್ಲಿ ಇಬ್ಬರು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗೆ ಸೇರಿದ ಮಿಲಿಟೆಂಟ್ರನ್ನು ಸೇನೆಯು ಕೊಂದುಹಾಕಿತ್ತು. ಆದರಿಂದ ಅಲ್ಲಿನ ಪರಿಸ್ಥಿತಿ ಉದ್ವಿಘ್ನವಾಗಿತ್ತು. ಹೀಗಾಗಿ ಸೇನೆಯು ಗವಾನ್ಪೋರ ಮಾರ್ಗದಿಂದ ಹೋಗದಿರುವುದು ಒಳಿತೆಂದು ಪೊಲೀಸರು ಸೇನೆಗೆ ಮಾಹಿತಿ ರವಾನಿಸಿದ್ದರೆಂದು  ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರು ಜನವರಿ ೨೯ರಂದು  ಕಾಶ್ಮೀರದ ಶಾಸನಸಭೆಗೆ ತಿಳಿಸಿದ್ದಾರೆ ದಿನ ಹತರಾದ ಇಬ್ಬರು ಮಿಲಿಟೆಂಟರಲ್ಲಿ ಒಬ್ಬ ವ್ಯಕ್ತಿ ಗವನ್ಪೋರ ಹಳ್ಳಿಗೆ ಸೇರಿದವನಾಗಿದ್ದ. ಚಾಯ್ಗುಂದ್ನಲ್ಲಿ ೪೪-ಆರ್ಆರ್ ತುಕಡಿಗೆ ಸೇರಿದ ಸೈನಿಕರು ಇಬ್ಬರು ಮಿಲಿಟೆಂಟರನ್ನು ಕೊಂದಿದ್ದು ಮಾತ್ರವಲ್ಲದೆ ಇನ್ನೂ ಮೂವರು ನಾಗರಿಕರನ್ನು ಗಾಯಗೊಳಿಸಿದ್ದರು. ಇಬ್ಬರು ಸ್ಥಳೀಯ ಮಿಲಿಟೆಂಟರನ್ನು ಕಳೆದುಕೊಂಡಿದ್ದು ಮಾತ್ರವಲ್ಲದೆ ಸ್ಥಳೀಯವಾಸಿಗಳಿಗೆ ಗಾಯಗಳೂ ಆಗಿದ್ದರ ಪರಿಣಾಮವಾಗಿ ಪ್ರದೇಶದಲ್ಲಿ ಪರಿಸ್ಥಿತಿ ತುಂಬಾ ಗಂಭೀರವಾಗಿತ್ತು.

ಸೇನೆಯು ಪೊಲೀಸರ ಸಲಹೆಯನ್ನು ನಿರ್ಲಕ್ಷ್ಯ ಮಾಡಿತು. ಅಂದು ಬೆಳಿಗ್ಗೆ ಹಳ್ಳಿಯನ್ನು ಹಾದುಹೋದ ಮೊದಲ ಸೇನಾ ತುಕಡಿಯು ಕೊಲ್ಲಲ್ಪಟ್ಟ ಸ್ಥಳೀಯ ಯುವಕನಿಗೆ ಶ್ರದ್ಧಾಂಜಲಿ ಅರ್ಪಿಸುತ್ತಾ ಅಂಟಿಸಿದ್ದ ಭಿತ್ತಿಪತ್ರಗಳ ಬಗ್ಗೆ ಸ್ಥಳೀಯರ ಜೊತೆ ಮಾತಿನ ಚಕಮಕಿ ನಡೆಸಿತ್ತು. ದಿನ ಸುಮಾರು ಮಧ್ಯಾಹ್ನ .೩೦ರ ವೇಳೆಗೆ ಮೇಜರ್ ಆದಿತ್ಯ ಕುಮಾರ್ ನೇತೃತ್ವದ ಮತ್ತೊಂದು ಸೇನಾ ತುಕಡಿಯು ಗವಾನ್ಪೋರ ಹಳ್ಳಿಯ ಮೂಲಕ ಪ್ರಯಾಣ ಮಾಡಲು ನಿರ್ಧರಿಸಿತು. ಈಗಾಗಲೇ ಸ್ಫೋಟಕ ಸನ್ನಿವೇಶದಲ್ಲಿದ್ದ ಗ್ರಾಮವೊಂದರ ಮೂಲಕ ಎರಡೆರದು ಬಾರಿ ಸೇನಾ ತುಕಡಿಯನ್ನು ಕೊಂಡೊಯ್ಯುವುದು ಮತಿಗೇಡಿ ನಿರ್ಧಾರವೇ ಆಗಿತ್ತು. ಸ್ಥಳೀಯ ಪ್ರತ್ಯಕ್ಷದರ್ಷಿಗಳ ಪ್ರಕಾರ ಒಬ್ಬ ಕಿರಿಯ ಸೇನಾಧಿಕಾರಿಯನ್ನು ಗುಂಪೊಂದು ಹತ್ಯೆ ಮಾಡಲು ಪ್ರಯತ್ನಿಸಿತ್ತು ಎಂಬುದು ಕೂಡಾ ಕಟ್ಟುಕಥೆಯೇ ಆಗಿತ್ತು. ಸೇನಾ ವಾಹನದೊಳಗೆ ಕೂತಿದ್ದ ಒಬ್ಬ ಸೇನಾಧಿಕಾರಿಯನ್ನು ಹೇಗೆ ತಾನೇ ಹೊರಗೆಳೆದು ಕೊಲ್ಲಲು ಸಾಧ್ಯ ಎಂದು ಸ್ಥಳೀಯರು ಪ್ರಶ್ನಿಸುತ್ತಾರೆ.

ಕಳೆದ ೨೦೧೭ರ ಮೇ ತಿಂಗಳಿಂದ ಪ್ರಾರಂಭವಾದ ಆಪರೇಷನ್ ಆಲ್ ಔಟ್ ಕಾರ್ಯಾಚರಣೆಯಲ್ಲಿ ಈವರೆಗೆ ೨೧೭ ಮಿಲಿಟೆಂಟುಗಳು, ೧೦೮ ನಾಗರಿಕರೂ ಮತ್ತು ೧೨೫ ಸೇನಾ ಸಿಬ್ಬಂದಿಗಳೂ ಮೃತಪಟ್ಟಿದ್ದಾರೆ. ಮೃತಪಟ್ಟ ೧೦೮ ನಾಗರಿಕರಲ್ಲಿ ೧೯ ಜನ ಸಶಸ್ತ್ರ ಮಿಲಿಟೆಂಟುಗಳ ಜೊತೆ ಸೇನಾ ಸಿಬ್ಬಂದಿಯು ಗುಡಿನ ಚಕಮಕಿ ನಡೆಸುವಾಗ ಬಲಿಯಾಗಿದ್ದಾರೆ. ಚಾಯ್ಗುಂದ್ ಮತ್ತು ಗವಾನ್ಪೊರಾದಲ್ಲಿ ಐವರು ನಾಗರಿಕರು ಬಲಿಯಾಗಿದ್ದಾರೆ.

ಅದೇನೇ ಇರಲ್ಲಿ ಪ್ರಥಮ ವರ್ತಮಾನ ವರದಿ (ಎಫ್ಐಆರ್) ಮೂಲಕ ದೂರನ್ನು ದಾಖಲಿಸುವುದು ಕೇವಲ ಮೊದಲ ಹೆಜ್ಜೆಯಷ್ಟೆ. ಸೇನಾಧಿಕಾರಿಗಳ ವಿರುದ್ಧ ತನಿಖೆಯು ಪೂರ್ಣಗೊಳ್ಳುವುದು ತುಂಬಾ ಅಪರೂಪ. ತನಿಖೆಯು ಪೂರ್ಣಗೊಂಡು ಆರೋಪಪಟ್ಟಿ (ಚಾರ್ಜ್ಶೀಟ್) ತಯಾರಾದರೂ ಅಲ್ಲಿಂದ ಮುಂದೆ ಸೇನಾ ಸಿಬ್ಬಂದಿಯನ್ನು ಕಾನೂನು ಪ್ರಕ್ರಿಯೆಗೆ ಒಳಪಡಿಸಲು ಕೋರ್ಟಿಗಾಗಲೀ ಮತ್ತು ದೂರು ದಾಖಲು ಮಾಡಿರುವ ಸಂತ್ರಸ್ತ ನಾಗರಿಕರಿಗಾಗಲೀ ಕೇಂದ್ರ ಸರ್ಕಾರದ ಅನುಮತಿಯ ಅಗತ್ಯವಿರುತ್ತದೆ. ಹೀಗಾಗಿ ಇಡೀ ಪ್ರಕ್ರಿಯೆ ಹಂತದಲ್ಲಿ ಸಂಪೂರ್ಣವಾಗಿ ಸ್ಥಗಿತಗೊಂಡುಬಿಡುತ್ತದೆ.

 ೨೦೧೮ರ ಜನವರಿ ರಂದು ಕೇಂದ್ರ ಸರ್ಕಾರದ ರಕ್ಷಣಾ ಮಂತ್ರಿಗಳು ರಾಜ್ಯಸಭೆಗೆ ಕೊಟ್ಟಿರುವ ಲಿಖಿತ ಉತ್ತರದ ಪ್ರಕಾರ ಸೇನಾ ಸಿಬ್ಬಂದಿಯ ಮೇಲೆ ಕಾನೂನು ಕ್ರಮಗಳನ್ನು ಜರುಗಿಸಲು ಅನುಮತಿ ಕೋರಿರುವ ೫೦ ಪ್ರಕರಣಗಳಲ್ಲಿ ೪೭ರಲ್ಲಿ ಅನುಮತಿಯನ್ನು ನಿರಾಕರಿಸಲಾಗಿದೆ ಮತ್ತು ಇನ್ನೂ ಮೂರು ಪ್ರಕರಣಗಳು ಪರಿಶೀಲನೆಯಲ್ಲಿದೆ. ಇವುಗಳಲ್ಲಿ ೧೭ ಪ್ರಕರಣಗಳು ನಾಗರಿಕರ ಹತ್ಯೆಗಳಿಗೆ ಸಂಬಂಧಪಟ್ಟವು೧೬ ಪ್ರಕರಣಗಳು ಸಿಬ್ಬಂದಿಯ ವಶದಲ್ಲಿರುವಾಗ ಸಾವು ಸಂಭವಿಸಿದ ಪ್ರಕರಣಗಳು, ಪ್ರಕರಣಗಳು ಸಿಬ್ಬಂದಿಯ ವಶದಲ್ಲಿರುವಾಗ ನಾಪತ್ತೆಯಾಗಿರುವ ಪ್ರಕರಣಗಳು ಮತ್ತು ಪ್ರಕರಣಗಳು ಅತ್ಯಚಾರದ ಆರೋಪದ ಪ್ರಕರಣಗಳು.

ಕಳೆದ ೨೮ ವರ್ಷಗಳಿಂದ ಜಮ್ಮು ಮತ್ತು ಕಾಶ್ಮೀರ ಪ್ರದೇಶವನ್ನು ಗಲಭೆಗ್ರಸ್ಥ ಪ್ರದೇಶವೆಂದೇ ಪರಿಗಣಿಸಲಾಗಿರುವುದರಿಂದ ತಾವು  ಎಸಗುತ್ತಿರುವ ಅಪರಾಧಗಳ ಹೊಣೆಯಿಂದ ಸೇನೆ ಮತ್ತು ಅರೆಸೇನಾ ಪಡೆಗಳು ಪಾರಾಗುತ್ತಾ ಬಂದಿವೆ. ೨೮ ವರ್ಷಗಳಾದ ನಂತರವೂ ಇದೇ ಪರಿಸ್ಥಿತಿ ಮುಂದುವರೆಯುತ್ತಿದೆ ಎಂಬುದು ಭಾರತೀಯ ಜನತಾ ಪಕ್ಷದ ಸರ್ಕಾರದ ಸಂವೇದನಾ ಶೂನ್ಯತೆಯನ್ನೇ ಎತ್ತಿ ತೋರಿಸುತ್ತದೆ. ಕಾಶ್ಮೀರದ ಸಮಸ್ಯೆಗೆ ಸೇನಾತ್ಮಕ ಪರಿಹಾರವೇ ಮದ್ದು ಎಂಬ ಸೂತ್ರವನ್ನು ಮುಂದಿಡುತ್ತಾ ಅಧಿಕಾರರೂಢ ಸರ್ಕಾರಗಳು ಕಾಶ್ಮೀರದಲ್ಲಿ ಹುಟ್ಟುಹಾಕಿರುವ ಸಮಸ್ಯೆಗಳಿಗೆ, ಅದರ ಮುಂದುವರೆಕೆಗೆ ಮತ್ತು ಸಮಸ್ಯೆಯು ಮತ್ತಷ್ಟು ಬಿಗಡಾಯಿಸುತ್ತಿರುವುದಕ್ಕೂ ಪ್ರಕರಣ ಮತ್ತೊಂದು ಸಾಕ್ಷಿಯಾಗಿದೆ.

ಜನವರಿ ೨೮ರಂದು ಸೇನೆಯ ಗುಂಡಿಗೆ ಬಲಿಯಾದ ಸುಹೈಲ್ ಲೋನ್ ಅವರ ತಂದೆ ಜಾವೀದ್ ಅಹ್ಮದ್ ಲೋನ್ ಅವರು ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಗೆ ತಿಳಿಸಿದಂತೆ ನಮಗೆ ಸರ್ಕಾರದಿಂದ ಏನೂ ಬೇಕಾಗಿಲ್ಲ. ನಮಗೆ ಅವರ ಪರಿಹಾರಗಳೂ ಬೇಡ, ಉದ್ಯೋಗವೂ ಬೇಡ, ಅವರು ಮಾಡುವ ತನಿಖೆಗಳೂ ಬೇಡ. ಇದು ಅವರ ಕೋರ್ಟು, ಅವರ ಸೈನ್ಯ, ಅವರ ಪೊಲೀಸು ಮತ್ತು ಅವರದ್ದೇ ಆಡಳಿತ. ಸಂತ್ರಸ್ತ ಜನರೇ ಹೀಗೆ ಭಾವಿಸುತ್ತಿರುವಾಗ ಸೇನಾಪಡೆಗಳಿಗೆ ರಕ್ಷಣೆ ಬೇಕೆಂಬ ವಾದ ಪರಿಸ್ಥಿತಿಯ ಕ್ರೂರ ಪರಿಹಾಸ್ಯದಂತಿದೆ. ಶೋಪಿಯಾನ್ ಪ್ರಕರಣವು ಕಾಶ್ಮೀರದ ಜನಾಭಿಪ್ರಾಯವು ಸೇನಾ ದಬ್ಬಾಳಿಕೆಯ ವಿರುದ್ಧ ಗಟ್ಟಿಯಾಗಿ ರೂಪುಗೊಂಡಿದೆ ಎಂಬುದನ್ನು ತೋರಿಸುತ್ತದೆ. ವಿಪರ್ಯಾಸವೆಂದರೆ ಯಾವುದೇ ಪ್ರಜಾತಾಂತ್ರಿಕ ರಾಜಕೀಯ ಪರಿಹಾರಗಳು ಕಣ್ಣಳತೆಯಲ್ಲಿ ಕಾಣದಿರುವಾಗ ಮತ್ತು ನಿರಂತರವಾಗಿ ನ್ಯಾಯವನ್ನು ನಿರಾಕರಿಸುತ್ತಿರುವಾಗ ತಮಗೆ ಆಜಾದಿ ಬೇಕೆಂಬ ಕಾಶ್ಮೀರಗಳ ಕೂಗು ಮತ್ತಷ್ಟು ನ್ಯಾಯಸಮ್ಮತಗೊಳ್ಳುತ್ತಿದೆ.

(ಗೌತಮ್ ನವಲಾಖಾ ಅವರು ದೆಹಲಿಯಪೀಪಲ್ ಯೂನಿಯನ್ ಫಾರ್ ಡೆಮಾಕ್ರಾಟಿಕ್ ರೈಟ್ಸ್ ಸದಸ್ಯರು)

  ಕೃಪೆ: Economic and Political Weekly,Feb 17,  2018. Vol. 53. No.7
     (EPW ಅನುವಾದ ಯೋಜನೆಯ ಹೆಚ್ಚಿನ ಮಾಹಿತಿಗಾಗಿ: http://www.epw.in/translation )



ನಾಗಾಲ್ಯಾಂಡ್ ಚುನಾವಣೆ: ಅನುಕೂಲಸಿಂಧು ನೀತಿ ಮತ್ತು ತತ್ವಬದ್ಧ ನೀತಿ


   ಅನುಶಿವಸುಂದರ್ 
Image result for nagaland

ನಾಗಾಲ್ಯಾಂಡಿನ ರಾಜಕಾರಣದಲ್ಲಿ ಯಾರೂ ಶಾಶ್ವತ ಮಿತ್ರರೂ ಅಲ್ಲ, ಶತ್ರುಗಳೂ ಅಲ್ಲ.

ಇದೇ ಫೆಬ್ರವರಿ ೨೭ರಂದು ನಾಗಾಲ್ಯಾಂಡಿನಲ್ಲಿ ನಡೆಯಲಿರುವ ಚುನಾವಣೆಯು ಕೇವಲ ವಿವಿಧ ರಾಜಕೀಯ ಪಕ್ಷಗಳ ನಡುವಿನ ಸ್ಪರ್ಧೆಯಾಗಿರದೆ ಅನುಕೂಲಸಿಂಧು ನೀತಿ ಮತ್ತು ತತ್ವಬದ್ಧ ನೀತಿಗಳ ನಡುವಿನ ಸ್ಪರ್ಧೆಯೂ ಆಗಿಬಿಟ್ಟಿದೆ. ರಾಜ್ಯದಲ್ಲಿ ಜನವರಿ ೨೯ರಂದು ೧೧ ರಾಜಕೀಯ ಪಕ್ಷಗಳು ಒಟ್ಟು ಸೇರಿ ಎಲ್ಲಿಯತನಕ ನಾಗಾಗಳ ಭವಿಷ್ಯದ ಸ್ಥಾನಮಾನಗಳ ಕುರಿತು ಕೇಂದ್ರ ಮತ್ತು ನಾಗಾಗಳ ನಡುವೆ ಒಂದು ಒಪ್ಪಂದ ಏರ್ಪಡುವುದಿಲ್ಲವೋ ಅಲ್ಲಿಯತನಕ ತಾವು ಚುನಾವಣೆಗಳಲ್ಲಿ ಭಾಗವಹಿಸಬಾರದೆಂಬ ಒಪ್ಪಂದವನ್ನು ಮಾಡಿಕೊಂಡವು. ಆದರೆ ಕೆಲವೇ ದಿನಗಳಲ್ಲಿ ಒಗ್ಗಟ್ಟಿನ ಬಹಿಷ್ಕಾರ ಕರೆಯ ಒಪ್ಪಂದವು ಕುಸಿದುಬಿತ್ತು. ಭಾರತೀಯ ಜನತಾ ಪಕ್ಷವು ಕೂಡಾ ಹೇಳಿಕೆಗೆ ಸಹಿ ಹಾಕಿತ್ತು. ಆದರೆ ಯಾವ ಚುನಾವಣಾ ಬಹಿಷ್ಕಾರ ಒಪ್ಪಂದವು ಎಲ್ಲರನ್ನು ಒಟ್ಟಿಗೆ ತಂದಿತ್ತೋ ಅದಕ್ಕೆ ಯಾವ ಚುನಾವಣಾ ಪಕ್ಷಗಳು ಬದ್ಧತೆಯನ್ನು ತೋರಲಿಲ್ಲ. ಚುನಾವಣೆಯಲ್ಲಿ ತಾವು ಭಾಗವಹಿಸದೇ ಇರುವ ಲಾಭವನ್ನು ಮತ್ತೊಂದು ಪಕ್ಷವು ಪಡೆದುಕೊಂಡುಬಿಡುವ ಅಪಾಯವನ್ನು ಎದುರಿಸಲು ಯಾವ ಪಕ್ಷಗಳು ಸಿದ್ಧರಿರಲಿಲ್ಲ. ಏಕೆಂದರೆ ಇದೇ ಕಾರಣದಿಂದ ೧೯೯೮ರಲ್ಲಿ ಕಾಂಗ್ರೆಸ್ ಪಕ್ಷವು ನಾಗಾಲ್ಯಾಂಡಿನ ಎಲ್ಲಾ ಸೀಟುಗಳನ್ನೂ ಪ್ರತಿಸ್ಪರ್ಧಿಗಳೇ ಇಲ್ಲದಂತೆ ಗೆದ್ದುಕೊಂಡಿತ್ತು.

ರಾಜಕೀಯ ಮೈತ್ರಿಗಳ ವಿಷಯಕ್ಕೆ ಬರುವುದಾದಲ್ಲಿ ಭಾರತದ ಉಳಿದ ಯಾವುದೇ ಪ್ರದೇಶಕ್ಕಿಂತ ನಾಗಾಲ್ಯಾಂಡು ಒದಗಿಸುವ ಅವಕಾಶಗಳು ಹೆಚ್ಚು. ಹಾಲಿ ಚುನಾವಣೆಯಲ್ಲಿ ಗೆದ್ದುಬಂದಿರುವ ಎಲಾ ೬೦ ಶಾಸಕರೂ ನಾಗಾ ಪೀಪಲ್ಸ್ ಫ್ರಂಟ್ (ಎನ್ಪಿಎಫ್) ನೇತೃತ್ವದ ಆಳುವ ಡೆಮಾಕ್ರಾಟಿಕ್ ಅಲಿಯನ್ಸ್ ಆಫ್ ನಾಗಾಲ್ಯಾಂಡ್ (ಡಿಎಎನ್) ಭಾಗವಾಗಿದ್ದಾರೆ. ಹೀಗಾಗಿ ಅಲ್ಲಿ ವಿರೋಧ ಪಕ್ಷವೆಂಬುದೇ ಇಲ್ಲ. ಎನ್ಪಿಎಫ್ ಪಕ್ಷವು ಬಿಜೆಪಿಯ ದೀರ್ಘಕಾಲೀನ ಮಿತ್ರ ಪಕ್ಷವಾಗಿದೆ. ೨೦೧೫ರಲ್ಲಿ ಎಂಟು ಜನ ಕಾಂಗ್ರೆಸ್ ಶಾಸಕರೂ ಸಹ ಡಿಎಎನ್ ಕೂಟವನ್ನು ಸೇರಿಕೊಂಡುಬಿಟ್ಟರು  ಹೀಗೆ ವಿಚಿತ್ರವೆಂಬಂತೆ ಕಾಂಗ್ರೆಸ್ ಮತ್ತು ಬಿಜೆಪಿಗಳೆರಡೂ ಸಹ ಒಂದೇ ಮೈತ್ರಿಕೂಟದ ಅಂಗಪಕ್ಷಗಳಾಗಿಬಿಟ್ಟಿವೆ. ಹೀಗಿದ್ದರೂ ಚುನಾವಣೆಗೆ ಮುನ್ನ ನಡೆದ ಬೆಳವಣಿಗೆಯಲ್ಲಿ ನಾಗಾಲ್ಯಾಂಡಿನ ಮಾಜಿ ಮುಖ್ಯಮಂತ್ರಿ ನೆಯ್ಫೂ ರಿಯೋ ಅವರ ನೇತೃತ್ವದಲ್ಲಿ ರೂಪುಗೊಂಡಿರುವ ಎನ್ಪಿಎಫ್ ಪ್ರತಿಸ್ಪರ್ಧಿ ಕೂಟವಾದ ನ್ಯಾಷನಲ್ ಡೆಮಾಕ್ರಾಟಿಕ್ ಪ್ರೋಗ್ರೆಸೀವ್ ಪಾರ್ಟಿಗೆ ಬಿಜೆಪಿ ಪಕ್ಷವು ಬೆಂಬಲವನ್ನು ಘೋಷಿಸಿದೆ. ಆದರೆ ಅದೇ ಸಮಯದಲ್ಲಿ ನಾಗಾಲ್ಯಾಂಡಿನ ಹಾಲಿ ಮುಖ್ಯಮಂತ್ರಿ ಟಿ ಆರ್ ಜೆಲಿಯಾಂಗ್ ಅವರು ತಮ್ಮ ಪಕ್ಷವು ಬಿಜೆಪಿಯೊಡನೆ ಚುನಾವಣೋತ್ತರ ಮೈತ್ರಿಯನ್ನು ರಚಿಸಿಕೊಳ್ಳಲು ಸಿದ್ಧವಿದೆಯೆಂದು ಘೋಷಿಸಿದ್ದಾರೆ. ಹೀಗೆ ಇಂದು ನಾಗಾಲ್ಯಾಂಡಿನಲ್ಲಿ ಪರಸ್ಪರ ಬದ್ಧ ವೈರಿಗಳಾದ ಎರಡೂ ಪ್ರಾದೇಶಿಕ ಪಕ್ಷಗಳಿಗೆ ಸಮಾನ ರಾಷ್ಟ್ರೀಯ ಪಕ್ಷವೊಂದರ ಜೊತೆ ಮೈತ್ರಿ ಇದೆ. ಅದೇ ರೀತಿ ಪರಸ್ಪರ ಬದ್ಧ ವೈರಿಗಳಾದ ಎರಡು ರಾಷ್ಟ್ರೀಯ ಪಕ್ಷಗಳಿಗೆ ಒಂದೇ ಪ್ರಾದೇಶಿಕ ಪಕ್ಷದೂಡನೆ ರಾಜಕೀಯ ಮೈತ್ರಿ ಇದೆ.

ಇಂಥ ವಿಚಿತ್ರವಾದ ಸಂದರ್ಭಕ್ಕೆ ಕಾರಣವಾದ ಪರಿಸ್ಥಿತಿಗಳ ವಿವರಣೆ ಸುಪರಿಚಿತವಾದದ್ದೇ ಆಗಿದೆ. ರಾಜ್ಯದ ಚುನಾವಣೆಯಲ್ಲಿ ಗೆಲ್ಲುವ ಪಕ್ಷವು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷದೊಂದಿಗೆ ಮೈತ್ರಿಯನ್ನು ಖಾತರಿಪಡಿಸಿಕೊಳ್ಳಬೇಕಿದೆ. ನಾಗಾಲ್ಯಾಂಡಿನ ರಾಜಕಾರಣವನ್ನು ದಶಕಗಳಿಂದ ಪ್ರಭಾವಿಸುತ್ತಿರುವುದು ಇದೇ ನಿಯಮವೇ ಆಗಿದೆ. ಇತರ ಈಶಾನ್ಯ ರಾಜ್ಯಗಳಂತೆ ನಾಗಾಲ್ಯಾಂಡೂ ಸಹ ತನ್ನ ಅಭಿವೃದ್ಧಿಗೆ ಸಂಪೂರ್ಣವಾಗಿ ಕೇಂದ್ರವನ್ನೇ ಅವಲಂಬಿಸಿದೆ. ಯಾವುದೇ ಚುನಾಯಿತ ಸರ್ಕಾರವೂ ಸಹ ಕೇಂದ್ರದ ಕೃಪೆಯಿಂದ ದೂರವುಳಿಯಲು ಸಾಧ್ಯವೇ ಇಲ್ಲ.

ಆದರೆ ವಾಸ್ತವವು ರಾಜ್ಯದ ರಾಜಕಾರಣದ ಸ್ವರೂಪವನ್ನು ವಿವರಿಸಬಹುದಾದರೂ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷವನ್ನು ಕಟುಟೀಕೆ ಮಾಡುವ ಪಕ್ಷಗಳೂ ಸಹ ಅದರ ಜೊತೆ ಹೊಂದಾಣಿಕೆಯನ್ನೇಕೆ ಮಾಡಿಕೊಳ್ಳುತ್ತವೆ ಎಂಬುದನ್ನು ಅರ್ಥಪಡಿಸುವುದಿಲ್ಲ. ನಾಗಾಲ್ಯಾಂಡಿನಲ್ಲಿ ಈಗ ಹಾಲಿ ಇರುವ ನೈಜ ವಿರೋಧ ಪಕ್ಷಗಳೆಂದರೆ ಅಲ್ಲಿನ ನಾಗರಿಕ ಸಮಾಜ ಮತ್ತು ಚರ್ಚು. ನಾಗಾಲ್ಯಾಂಡಿನ ಬಲಿಷ್ಠ ನಾಗಾಲ್ಯಾಂಡ್ ಬ್ಯಾಪ್ಟಿಸ್ಟ್ ಚರ್ಚ್ ಕೌನ್ಸಿಲ್ ನೀಡಿರುವ ಇತ್ತೀಚಿನ ಮಹತ್ವದ ಹೇಳಿಕೆಯೊಂದರಲ್ಲಿ ಬಿಜೆಪಿಯ ಹಿಂದೂತ್ವದ ಕಾರ್ಯಸೂಚಿಯ ಬಗ್ಗೆ ಎಚ್ಚರಿಸಿದೆ ಮತ್ತು ಅಭಿವೃದ್ಧಿ ಹಾಗೂ ರಾಜಕೀಯ ಪ್ರಯೋಜನಗಳಿಗಾಗಿ ನಮ್ಮ ಧರ್ಮದ ಜೊತೆ ರಾಜಿ ಮಾಡಿಕೊಳ್ಳಬಾರದೆಂದು ಕರೆ ನೀಡಿದೆ. ಚುನಾವಣೆಗಳ ಸಂದರ್ಭಗಳಲ್ಲಿ ಧರ್ಮವನ್ನು ಬಳಸಿಕೊಳ್ಳುವುದರಲ್ಲಿ ಪರಿಣಿತಿಯನ್ನು ಪಡೆದಿರುವ ಬಿಜೆಪಿ ಪಕ್ಷವು ಇದರ ಬಗ್ಗೆ ಪ್ರತಿಕ್ರಿಯಿಸುತ್ತಾ  ನಾಗಾಲ್ಯಾಂಡಿನಲ್ಲಿ ಕೆಲವರು ಚುನಾವಣೆಯ ಸಂದರ್ಭದಲ್ಲಿ ಧರ್ಮದ ಆಧಾರದಲ್ಲಿ ಧೃವೀಕರಣ ಮಾಡುವ ತಂತ್ರವನ್ನು ಪ್ರಮುಖವಾಗಿ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಯಾವುದೇ ಅಳುಕಿಲ್ಲದೆ ದೂರಿದೆಬಿಜೆಪಿಯ ಎಲ್ಲಾ ೨೦ ಉಮೇದುವಾರರು ಕ್ರಿಶ್ಚಿಯನ್ನರು ಮತ್ತು ನಾಗಗಳೇ ಆಗಿರುವುದರಿಂದ ಬ್ಯಾಪ್ಟಿಸ್ಟ್ ಕೌನ್ಸಿಲ್ ಹೇಳಿಕೆ ಹುರಿಯಾಳುಗಳ ಫಲಿತಾಂಶದ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದೆಂಬುದನ್ನು ಕಾದುನೋಡಬೇಕಿದೆ.

ಚುನಾವಣೆಯನ್ನು ಬಹಿಷ್ಕರಿಸಬೇಕೆಂಬ ಕರೆಯನ್ನು ನೀಡಲು ಪ್ರೇರೇಪಿಸಿದ ರಾಜಕೀಯ ತತ್ವವೆಂದರೆ ನಾಗಾಲ್ಯಾಂಡಿನ ರಾಜಕೀಯ ಸ್ಥಾನಮಾನದ ಪ್ರಶ್ನೆ. ೧೯೬೩ರಲ್ಲಿ ನಾಗಾಲ್ಯಾಂಡಿಗೆ ರಾಜ್ಯದ ಸ್ಥಾನಮಾನ ದೊರೆತರೂ ಪ್ರತ್ಯೇಕ ಸಾರ್ವಭೌಮಿ ನಾಗಾ ರಾಷ್ಟ್ರದ ಕನಸು ಮಾತ್ರ ಜೀವಂತವಾಗಿಯೇ ಉಳಿದುಕೊಂಡು ಬಂದಿದೆ. ನಂತರದ ಸರ್ಕಾರಗಳು ನಾಗ ಬಂಡಾಯಗಾರರ ಜೊತೆ ಶಾಂತಿ ಒಪ್ಪಂದವನ್ನು ಮಾಡಿಕೊಳ್ಳುತ್ತಾ ಂದಿರುವುದು ರಾಜ್ಯದಲ್ಲಿ ಒಂದಷ್ಟು ಶಾಂತಿ ನೆಲಸಲು ಕಾರಣವಾಗಿದ್ದರೂ ಸಂಘರ್ಷವಿನ್ನೂ ನಿಂತಿಲ್ಲ. ೨೦೧೫ರ ಆಗಸ್ಟಿನಲ್ಲಿ ನಾಗಾ ಬಂಡಾಯಗಾರ ಬಣಗಳಲ್ಲೇ ಅತಿ ದೊಡ್ಡ ಬಣವಾದ ನ್ಯಾಷನಲ್ ಸೋಷಿಯಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್ (ಐಸಾಕ್- ಮುಯಿವಾ) ಬಣವು ಕೇಂದ್ರ ಸರ್ಕಾರದೊಂದಿಗೆ ಒಂದು ಒಪ್ಪಂದದ ಚೌಕಟ್ಟಿನ ಸೂತ್ರಗಳಿಗೆ  ಸಹಿ ಹಾಕಿತು. ಇದರೊಂದಿಗೆ ನಾಗಾ ಸಮಸ್ಯೆಗೆ ಯಾವುದಾದರೂ ಒಂದು ಬಗೆಯ ಪರಿಹಾರವು ಒದಗಿಬರುತ್ತದೆಂಬ ನಿರೀಕ್ಷೆ ಎಲ್ಲರಲ್ಲೂ ಹೆಚ್ಚಾಯಿತು. ಆದರೂ ಒಪ್ಪಂದದಲ್ಲೇನಿದೆ ಎಂಬುದನ್ನು ಈಗಲೂ ಅತ್ಯಂತ ರಹಸ್ಯವಾಗಿಯೇ ಕಾಪಾಡಿಕೊಂಡು ಬರಲಾಗಿದೆ ಮತ್ತು ಪ್ರತಿ ಕೆಲವು ತಿಂಗಳುಗಳಿಗೊಮ್ಮೆ ಇನ್ನೇನೂ ಒಪ್ಪಂದವು ಬಹಿರಂಗಗೊಳ್ಳುತ್ತದೆಂಬ ನಿರೀಕ್ಷೆಯನ್ನು ಮಾತ್ರ ಪದೇಪದೇ ಹುಟ್ಟುಹಾಕಲಾಗುತ್ತಿದೆ. ಬಗೆಯ ಪರಿಹಾರವೊಂದು ಸಿಗಲಿದೆ ಎಂಬ ನಿರೀಕ್ಷೆಯಿಂದಲೇ ನಾಗಾಲ್ಯಾಂಡಿನ ನಾಗರಿಕ ಸಮಾe, ಚರ್ಚು ಮತ್ತು ರಾಜಕೀಯ ಪಕ್ಷಗಳು ಅಲ್ಲಿಯವರೆಗೆ ಚುನಾವಣೆಯನ್ನು ಮುಂದೂಡಬೇಕೆಂಬ ಒತ್ತಾಯವನ್ನು ಮಾಡುತ್ತಾ ಬಂದಿದ್ದವು.

ಚುನಾವಣೆಗಳ ಫಲಿತಾಂಶಗಳು ಯಾವುದೇ ಸಮಾಧಾನವನ್ನಾಗಲೀ, ಪರಿಹಾರವನ್ನಾಗಲೀ ನೀಡುವ ಸಾಧ್ಯತೆ ಇಲ್ಲ. ಸಾಕಷ್ಟು ಸಂಪನ್ಮೂಲಗಳಿದ್ದಾಗ್ಯೂ ನಾಗಾಲ್ಯಾಂಡಿನ ಅಭಿವೃದ್ಧಿಯು ತುಂಬಾ ಕಡೆಗಣಿಸಲ್ಪಟ್ಟಿದೆ. ಅದರಲ್ಲಿ ಎದ್ದು ಕಾಣುವುದು ರಸ್ತೆಗಳ ಪರಿಸ್ಥಿತಿ. ರಾಜ್ಯದಲ್ಲಿ ಶಿಕ್ಷಣ ಮಟ್ಟ ಹೆಚ್ಚಿದ್ದು ಸುಶಿಕ್ಷಿತ ಯುವ ಜನತೆ ನಿರುದ್ಯೋಗದ ಸಮಸ್ಯೆಯನ್ನೂ ತೀವ್ರವಾಗಿ ಅನುಭವಿಸುತ್ತಿದ್ದಾರೆ. ಮತ್ತೊಂದು ಕಡೆ ರಾಜ್ಯದ ಸಾಮಾನ್ಯ ಜನ ಬಂಡುಕೋರ ಗುಂಪುಗಳಿಗೆ ಶಾಂತಿಯ ಸಲುವಾಗಿ ಪರೋಕ್ಷವಾಗಿ ತೆರಿಗೆಯನ್ನು ಸಲ್ಲಿಸುತ್ತಿದ್ದಾರೆ. ಆದರೆ ಪರೋಕ್ಷ ತೆರಿಗೆಗಳಿಂದಾಗಲೀ, ಕೇಂದ್ರ ಸರ್ಕಾರ ಕೊಡುತ್ತಿರುವ ಅನುದಾನಗಳಿಂದಾಗಲೀ ಅಲ್ಲಿನ ಜನರಿಗೆ ಯಾವುದೇ ಪ್ರಯೋಜನ ಸಿಗುತ್ತಿಲ್ಲ. ಇದು ಅವರನ್ನು ಹತಾಷರನ್ನಾಗಿಸುತ್ತಿದೆ. ಕೇಂದ್ರ ಸರ್ಕಾರದಿಂದ ಬರುವ ಅನುದಾನದ ಬಹಳಷ್ಟು ಭಾಗವು ನೇರವಾಗಿ ಅಧಿಕಾರದಲ್ಲಿರುವ ಕಿಸೆಗಳನ್ನು ಸೇರುತ್ತದೆ. ರಾಜಕೀಯ ಸಿದ್ಧಾಂತಗಳಿಗಿಂತ ಅಧಿಕಾರದಿಂದ ದೊರೆಯುವ ಸಂಪತ್ತು ಮತ್ತು ರಾಜಕೀಯ ಆಶ್ರಯಗಳೇ ರಾಜ್ಯದ ರಾಜಕೀಯವನ್ನು ನಿರ್ದೇಶಿಸುತ್ತಿದೆ.

ರಾಜಕೀಯ ರಂಗ ಇಷ್ಟೊಂದು ಹದಗೆಟ್ಟಿದ್ದರೂ ನಾಗಾಲ್ಯಾಂಡಿನ ನಾಗರಿಕ ಸಮಾಜ ಮಾತ್ರ ಸಾಕಷ್ಟು ಭರವಸೆಗಳನ್ನು ಹುಟ್ಟಿಹಾಕುತ್ತದೆ. ಅದರ ಸದಸ್ಯರು ಶಾಂತಿ ಪ್ರಕ್ರಿಯೆಯು ಮುಂದೆ ಸಾಗಲು ಪ್ರೇರೇಪಿಸಿದ್ದಾರೆ, ರಾಜಕೀಯದಲ್ಲಿರುವ ಭ್ರಷ್ಟಾಚಾರದ ಬಗ್ಗೆ ಧ್ವನಿ ಎತ್ತಿದ್ದಾರೆ ಮತ್ತು ಚುನಾವಣೆಯು ಸ್ವಚ್ಚವಾಗಿರಬೇಕೆಂದು ಆಗ್ರಹಿಸುತ್ತಾ ಜನಾಂದೋಲನಗಳನ್ನು ನಡೆಸಿದ್ದಾರೆ. ಕಳೆದ ವರ್ಷ ಸರ್ಕಾರಿ ಸಂಸ್ಥೆಗಳಲ್ಲಿ ಲಿಂಗ ಪ್ರಾತಿನಿಧ್ಯದಂಥ ವಿಷಯಗಳನ್ನು ನಾಗಾ ಮಹಿಳಾ ಗುಂಪುಗಳು ಎತ್ತಿದ್ದವು. ಸ್ಥಳಿಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ.೩೩ರಷ್ಟು ಮೀಸಲಾತಿ ಯನ್ನು ಪಡೆದುಕೊಳ್ಳುವಲ್ಲಿ ಅವರು ವಿಫಲರಾದರೂ ಲಿಂಗ ಸಮಾನತೆಯ ಬಗ್ಗೆ ನಾಗಾಲ್ಯಾಂಡಂಥ ಸಂಪ್ರದಾಯಶೀಲ ಸಮಾಜದಲ್ಲಿ ಒಂದು ಅರ್ಥಪೂರ್ಣ ಚರ್ಚೆಯನ್ನು ಹುಟ್ಟುಹಾಕುವಲ್ಲಿ ಸಫಲರಾದರು.

ಬರಲಿರುವ ಚುನಾವಣೆಗಳಲ್ಲಿ ಕೇವಲ ಐದು ಮಹಿಳೆಯರು ಮಾತ್ರ ಸ್ಪರ್ಧಿಸುತ್ತಿದ್ದಾರೆ. ೧೯೬೩ರಿಂದ ಈವರೆಗೆ ನಾಗಾಲ್ಯಾಂಡ್ ವಿಧಾನಸಭೆಗೆ ಒಬ್ಬ ಮಹಿಳೆಯೂ ಆಯ್ಕೆಯಾಗಿಲ್ಲ. ಮತ್ತು ಒಂದೇ ಒಂದು ಬಾರಿ ಮಾತ್ರ ಒಬ್ಬ ಮಹಿಳೆ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ನಾಗಲ್ಯಾಂಡಿನೊಳಗೆ ನಾಗಾ ನಾಗರಿಕ ಸಮಾಜವು ಎತ್ತುತ್ತಿರುವ ಪ್ರಶ್ನೆಗಳೇ ರಾಜ್ಯದ ನಿಜವಾದ ರಾಜಕಾರಣವಾಗಿದೆಯೇ ಹೊರತು ಪ್ರತಿ ಕೆಲವು ವರ್ಷಗಳಿಗೊಮ್ಮೆ ನಡೆಯುವ ಚುನಾವಣಾ ನಾಟಕಗಳಲ್ಲ.
 ಕೃಪೆ: Economic and Political Weekly,Feb 17,  2018. Vol. 53. No.7
   (EPW ಅನುವಾದ ಯೋಜನೆಯ ಹೆಚ್ಚಿನ ಮಾಹಿತಿಗಾಗಿ: http://www.epw.in/translation )