ಸಹರಾನ್ಪುರದಲ್ಲಿ ಉದಯಿಸಿರುವ ಭೀಮ್ ಆರ್ಮಿ (ಭೀಮ ಸೇನೆ)ಯು ಉತ್ತರ ಪ್ರದೇಶದ ದಲಿತರಲ್ಲಿ ಹರಳುಗಟ್ಟುತ್ತಿರುವ ಆಕ್ರಮಣಶೀಲತೆಯನ್ನು ಸೂಚಿಸುತ್ತದೆ
ಅನು: ಶಿವಸುಂದರ್
ಇತ್ತೀಚೆಗೆ ಉತ್ತರ ಪ್ರದೇಶದ ಸಹರಾನ್ಪುರದಲ್ಲಿ ಠಾಕೂರರಿಗೂ ಮತ್ತು ದಲಿತರಿಗೂ ಮಧ್ಯೆ ನಡೆದಿರುವ ಘರ್ಷಣೆಗಳು, ಅಧಿಕಾರದಲ್ಲಿ ಬದಲಾವಣೆಯಾಗುತ್ತಿದ್ದಂತೆ ಅಲ್ಲಿ ವಿಷಮಗೊಳ್ಳುತ್ತಿರುವ ಸಾಮಾಜಿಕ ಸಂಬಂಧಗಳನ್ನೂ ಮತ್ತು ಸಾಂಸ್ಕೃತಿಕ ಹಕ್ಕುದಾರಿಕೆಗಳ (ಅಸರ್ಷನ್) ನಡುವಿನ ಸಂಘರ್ಷವನ್ನೂ ಸೂಚಿಸುತ್ತದೆ. ಕಳೆದ ೧೫ ವರ್ಷಗಳಲ್ಲಿ ಮಾಯಾವತಿಯವರ ಬಹುಜನ್ ಸಮಾಜ ಪಕ್ಷ (ಬಿಎಸ್ಪಿ) ಮತ್ತು ಮುಲಾಯಂ ಸಿಂಗ್ ಯಾದವರ ಸಮಾಜವಾದಿ ಪಕ್ಷ (ಎಸ್ಪಿ)ಗಳು ದಲಿತರ ಮತ್ತು ಹಿಂದುಳಿದ ಜಾತಿಗಳ ಸಾಮಾಜಿಕ ಗೌರವ ಮತ್ತು ಘನತೆಗಳನ್ನು ಎತ್ತಿಹಿಡಿಯುತ್ತಾ ಉತ್ತರ ಪ್ರದೇಶದ ಸಾಮಾಜಿಕ ಮತ್ತು ರಾಜಕೀಯ ವಲಯವನ್ನು ಒಂದಷ್ಟು ಪ್ರಜಾತಾಂತ್ರಿಕಗೊಳಿಸಿದ್ದವು. (ಅದೇ ಸಮಯದಲ್ಲಿ ಅವೆರಡರ ನಡುವೆ ಅಂತರ್ವೈರುಧ್ಯಗಳಿರುವುದೂ ವಾಸ್ತವವೇ.) ಇತ್ತೀಚೆಗೆ ಅಲ್ಲಿ ಭಾರತೀಯ ಜನತಾ ಪಕ್ಷವು (ಬಿಜೆಪಿ) ಚುನಾವಣಾ ವಿಜಯವನ್ನು ಸಾಧಿಸಿ ಠಾಕೂರ್ ಜಾತಿಯ ಯೋಗಿ ಆದಿತ್ಯನಾಥರನ್ನು ಮುಖ್ಯಮಂತ್ರಿಯಾಗಿ ನೇಮಕ ಮಾಡಿರುವುದರಿಂದ ಅಲ್ಲಿ ಮತ್ತೆ ರಾಜಕೀಯ ಅಧಿಕಾರವು ಮೇಲ್ಜಾತಿಗಳ ಕೈಗೆ ಮರಳಿದಂತಾಗಿದೆ. ಇದರಿಂದ ಉತ್ತೇಜಿತರಾಗಿರುವ ಠಾಕೂರ್ ಹಾಗೂ ಮತ್ತಿತರ ಮೇಲ್ಜಾತಿಗಳು ತಮ್ಮ ಮೇಲಾಳ್ತನವನ್ನು ಪುನರ್ ಸ್ಥಾಪಿಸಲು ಈ ರಾಜಕೀಯ ಸಂದರ್ಭವನ್ನು ಬಳಸಿಕೊಳ್ಳುತ್ತಿವೆ.
ಸಹರಾನ್ಪುರ್ ಜಿಲ್ಲೆಯ ಶಬ್ಬೀರ್ಪುರದ ಜಾತವ-ದಲಿತರು ೨೦೧೭ರ ಏಪ್ರಿಲ್ ೨೦ ರಂದು ಅಂಬೇಡ್ಕರ್ ಜಯಂತಿಯ ಸಂದರ್ಭದಲ್ಲಿ ಅಂಬೇಡ್ಕರ್ ಪ್ರತಿಮೆಯೊಂದನ್ನು ಸ್ಥಾಪಿಸಲು ಮುಂದಾದಾಗ ಮೊಟ್ಟ ಮೊದಲ ಘರ್ಷಣೆ ಸಂಭವಿಸಿತು. ಅಂಬೇಡ್ಕರ್ ಜಯಂತಿಗೆ ಮತ್ತು ಪ್ರತಿಮೆ ಸ್ಥಾಪನೆಗೆ ಬೇಕಾದ ಆಡಳಿತಾತ್ಮಕ ಅನುಮತಿಯನ್ನು ತೆಗೆದುಕೊಂಡಿಲ್ಲವೆಂಬುದು ಮಾತ್ರವಲ್ಲದೆ ಅಂಬೇಡ್ಕರ್ ಪ್ರತಿಮೆಯ ತೋರುಬೆರಳು ಮೇಲ್ಜಾತಿಗಳ ಕೇರಿಗಳ ಕಡೆಗೆ ಬೊಟ್ಟುಮಾಡಿದ್ದೂ ಸಹ ಠಾಕೂರರ ಪ್ರತಿರೋಧಕ್ಕೆ ಕಾರಣವಾಯಿತು. ಎರಡನೆ ಘರ್ಷಣೆಯು ಮೇಲ್ಜಾತಿ ಠಾಕೂರರು ಮಧ್ಯಯುಗೀನ ದೊರೆ ಮಹಾರಾಣಾ ಪ್ರತಾಪನ ನೆನಪಿನಲ್ಲಿ ೨೦೧೭ರ ಮೇ ೫ ರಂದು ಮೆರವಣಿಗೆ ಹೊರಟಾಗ ಸಂಭವಿಸಿತು. ಆ ಮೆರವಣಿಗೆಯು ದಲಿತರ ಕಾಲೋನಿಯನ್ನು ಪ್ರವೇಶಿಸಿದಾಗ ದಲಿತರೂ ಸಹ ಈ ಮೆರವಣಿಗೆಗೆ ಆಡಳಿತಾತ್ಮಕ ಅನುಮತಿ ತೆಗೆದುಕೊಂಡಿಲ್ಲವೆಂಬ ಕಾರಣವನ್ನು ಮುಂದೊಡ್ಡಿ ಮೆರವಣಿಗೆಯನ್ನು ತಡೆದರು. ಈ ಬಾರಿ ನಡೆದ ಘರ್ಷಣೆಯಲ್ಲಿ ಎರಡು ಕಡೆಯವರು ಕಲ್ಲು ತೂರಾಟ ನಡೆಸಿದರು. ಆದರೆ ಠಾಕೂರರು ಪುಂಡಾಟವನ್ನು ಮುಂದುವರೆಸಿ ಹಲವಾರು ದಲಿತರ ಮನೆಗಳಿಗೆ ಮತ್ತು ಅಂಗಡಿಗಳಿಗೆ ಬೆಂಕಿ ಹಚ್ಚಿದ್ದು ಮಾತ್ರವಲ್ಲದೆ ಹಲವಾರು ದಲಿತ ನಾಯಕರ ಪ್ರತಿಮೆಗಳನ್ನು, ಪೂಜಾಸ್ಥಳಗಳನ್ನು ವಿರೂಪಗೊಳಿಸಿದರು. ಈ ಹಿಂಸಾಚಾರದಲ್ಲಿ ಒಬ್ಬ ಠಾಕೂರ್ ಯುವಕ ಮೃತನಾದದ್ದಲ್ಲದೆ, ಎರಡೂ ಸಮುದಾಯಗಳಿಗೆ ಸೇರಿದ ಹಲವಾರು ಯುವಕರು ಗಂಭೀರವಾಗಿ ಗಾಯಗೊಂಡರು ಮತ್ತು ಹಿಂಸಾಚಾರಗಳು ಮತ್ತಷ್ಟು ಹೆಚ್ಚುವ ಭಯದಲ್ಲಿ ದಲಿತರು ಸಾಮೂಹಿಕವಾಗಿ ಹಳ್ಳಿಯನ್ನು ತೊರೆದು ಓಡಿಹೋದರು.
ಸಹರಾನ್ಪುರ್ ಜಿಲ್ಲೆಯು ಸಾಮಾಜಿಕವಾಗಿ ಉದ್ರಿಕ್ತ ಸ್ಥಿತಿಯಲ್ಲಿರುವ ಜಿಲ್ಲೆಯೆಂದೇ ಪರಿಗಣಿಸಲ್ಪಟ್ಟಿದ್ದು ಠಾಕೂರ್ ಮತ್ತು ದಲಿತರ ನಡುವೆ ಮಾತ್ರವಲ್ಲದೆ ಹಿಂದೂ ಮತ್ತು ಮುಸ್ಲಿಮರ ನಡುವೆಯೂ ಘರ್ಷಣೆಗಳು ಸಂಭವಿಸುತ್ತಿರುತ್ತವೆ. ಈ ಉದ್ವಿಘ್ನ ಪರಿಸ್ಥಿತಿಯು ರಾಜಕೀಯ ರಂಗದಲ್ಲೂ ಪ್ರತಿಫಲಿತಗೊಂಡಿದ್ದು, ಆ ಕ್ಷೇತ್ರದ ಸಂಸತ್ ಕ್ಷೇತ್ರವನ್ನು ಬಿಜೆಪಿ ಗೆದ್ದುಕೊಂಡಿದ್ದರೆ, ಶಾಸನಸಭಾ ಸ್ಥಾನವನ್ನು ಕಾಂಗ್ರೆಸ್- ಎಸ್ಪಿ ಮೈತ್ರಿಕೂಟ ಗೆದ್ದುಕೊಂಡಿದೆ. ಮುನಿಸಿಪಲ್ ಚುನಾವಣೆ ಮುಂದಿನ ತಿಂಗಳು ನಡೆಯಲಿದೆ. ಸಹರಾನ್ಪುರ್ನ ಜನಸಂಖ್ಯೆಯಲ್ಲಿ ಕೆಳಜಾತಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ದಲಿತರು ಶೇ.೨೬ರಷ್ಟಿದ್ದರೆ ಠಾಕೂರರು ಶೇ.೧೦ರಷ್ಟು ಮಾತ್ರವಿದ್ದಾರೆ. ಆದರೆ ಶಬ್ಬೀರ್ಪುರ್ ಗ್ರಾಮದಲ್ಲಿ ಶೇ.೬೦ರಷ್ಟು ಠಾಕೂರರಿದ್ದರೆ ಶೇ.೧೫ರಷ್ಟು ಮಾತ್ರ ದಲಿತರಿದ್ದಾರೆ. ಬಿಎಸ್ಪಿ ಮತ್ತು ಎಸ್ಪಿ ಪಕ್ಷಗಳ ಬೆಳವಣಿಗೆಯು ದಮನಿತ ಜಾತಿಗಳ ಮತಗಳ ತಳಹದಿಯನ್ನು ಗಟ್ಟಿಗೊಳಿಸಿದ್ದು ಮಾತ್ರವಲ್ಲದೆ ಸಾಮಾಜಿಕ ಮೇಲ್ಚಲನೆಯ ಸಾಧ್ಯತೆಗಳನ್ನೂ ವಿಸ್ತರಿಸಿತ್ತು. ಆದರೆ ಕ್ರಮೇಣ ಈ ಪಕ್ಷಗಳ ಭವಿಷ್ಯಕ್ಕೆ ಮಂಕು ಕವಿಯುತ್ತಿದೆ. ಆದರೂ ಈ ಪಕ್ಷಗಳು ಮಾಡಿದ ನಿರಂತರ ರಾಜಕೀಯ ಒಟ್ಟೋಣವು ದಮನಿತ ಸಮುದಾಯಗಳಲ್ಲಿ ಒಂದು ಸ್ವತಂತ್ರವಾದ ಮತ್ತು ಸಿದ್ಧಾಂತಗಳಿಂದ ಪ್ರೇರಿತವಾದ ಸ್ವಪ್ರತಿಪಾದನೆಯನ್ನು ಹುಟ್ಟುಹಾಕಿದಂತೆ ಕಾಣುತ್ತದೆ. ಜಾತವರು ಸಾಂಪ್ರದಾಯಿಕವಾಗಿ ದಲಿತ ಭಕ್ತಿ ಪಂಥೀಯ ಸಂತನಾದ ಸಂತ ರವಿದಾಸರ ಅನುಯಾಯಿಗಳಾಗಿದ್ದು ಬಲವಾದ ಅಂಬೇಡ್ಕರ್ವಾದಿಗಳಾಗಿ ಬದಲಾಗಿದ್ದಾರೆ. ಸಾಲು ಸಾಲು ಅಂಬೇಡ್ಕರ್ ಜಯಂತಿಗಳು, ಅಂಬೇಡ್ಕರ್ ಪ್ರತಿಮೆ ಮತ್ತು ಪೋಸ್ಟರ್ಗಳು ಎಲ್ಲೆಡೆ ಹರಡುತ್ತಿರುವುದರಲ್ಲಿ ಮತ್ತು ಹಿಂದೂಧರ್ಮದಿಂದ ಮತಾಂತರಗೊಳ್ಳುತ್ತಿರುವುದರಲ್ಲಿ ಇದು ಸ್ಪಷ್ಟವಾಗಿ ಎದ್ದುಕಾಣುತ್ತದೆ.
ಇವುಗಳಲ್ಲಿ ಎಲ್ಲಕ್ಕಿಂತ ಎದ್ದುಕಾಣುವುದು ಭೀಮ್ ಆರ್ಮಿ (ಭೀಮ ಸೇನೆ)ಯ ಉದಯ. ಈ ಸಂಘಟನೆಯು ಜಾತಿ ಆಧಾರಿತ ಹಿಂಸಾಚಾರಗಳ ವಿರುದ್ಧ ಅದರಲ್ಲೂ ಶಬ್ಬೀರ್ಪುರ ಘರ್ಷಣೆಯ ವಿರುದ್ಧ ದಲಿತರ ಪ್ರತಿರೋಧಕ್ಕೆ ನಾಯಕತ್ವ ನೀಡುತ್ತಿರುವುದಲ್ಲದೆ ಪ್ರಭುತ್ವದ ನಿಷ್ಕ್ರಿಯತೆ ಮತ್ತು ಮಾಧ್ಯಮಗಳ ಸಂವೇದನಾಶೂನ್ಯತೆಯ ವಿರುದ್ಧವೂ ಹೋರಾಡುತ್ತಿದೆ. ಇದನ್ನು ಸಹರಾನ್ಪುರದ ಚಂದ್ರಶೇಖರ್ ಆಜ಼ಾದ್ ರಾವಣ್ ಎಂಬ ಯುವ ವಕೀಲ ಸ್ಥಾಪಿಸಿದ್ದು, ಆ ವಲಯದಲ್ಲಿ ದಲಿತರ ಮೇಲೆ ಎಲ್ಲೇ ಹಿಂಸಾಚಾರಗಳು ನಡೆದರೂ ಕೂಡಲೇ ಮಧ್ಯಪ್ರವೇಶಿಸುವ ಮೂಲಕ ಮತ್ತು ಹಿಂಸಾಚಾರಕ್ಕೆ ಕಾರಣರಾದ ಶಕ್ತಿಗಳ ಮತ್ತು ಪೊಲೀಸರ ವಿರುದ್ಧ ವೀರೋಚಿತಚಾಗಿ ಸಂಘರ್ಷ ಮಾಡುವ ಮೂಲಕ ಈ ಭೀಮ್ ಆರ್ಮಿ ದಲಿತ ಯುವಕರಲ್ಲಿ ಅತ್ಯಂತ ಜನಪ್ರಿಯವಾಗುತ್ತಿದೆ. ರಾಜಕೀಯವಾಗಿ ಚುರುಕಾಗಿರುವ, ಸಂವಹನದಲ್ಲಿ ಚತುರರಾಗಿರುವ, ಮಾಧ್ಯಮ ನಿರ್ವಹಣೆಯಲ್ಲಿ ಜಾಣರಾಗಿರುವ ಮತ್ತು ಜಾತಿ ತಾರತಮ್ಯಗಳನ್ನು ಕಿಂಚಿತ್ತೂ ಸಹಿಸದ ಈ ಭೀಮ್ ಆರ್ಮಿ ೧೯೭೦ರ ದಶಕದಲ್ಲಿ ಮಹಾರಾಷ್ಟ್ರದಲ್ಲಿ ಹುಟ್ಟುಕೊಂಡಿದ್ದ ದಲಿತ್ ಪ್ಯಾಂಥರ್ಸ್ ಅನ್ನು ನೆನಪಿಗೆ ತರುತ್ತದೆ. ಬಿಎಸ್ಪಿ ಪಕ್ಷದ ಪರಂಪರೆಯನ್ನು ಒಪ್ಪಿಕೊಳ್ಳುವ ಮತ್ತು ಅದರ ಶಕ್ತಿ ಮತ್ತು ಮಿತಿಗಳೆರಡನ್ನೂ ಅರಿತುಕೊಂಡಿರುವ ಭೀಮ್ ಆರ್ಮಿ ಆ ಪಕ್ಷವನ್ನು ಹೊರದೂಡುವುದರ ಬದಲಿಗೆ ಅದರ ಜೊತೆಜೊತೆಗೇ ತನ್ನ ಅಸ್ಥಿತ್ವವನ್ನು ಕಾಣಬಯಸುತ್ತದೆ. ಉತ್ತರ ಪ್ರದೇಶದ ಪೊಲೀಸರು ಭೀಮ್ ಆರ್ಮಿಯನ್ನು ಸಮಾಜ ವಿರೋಧಿ ಮಾತ್ರವಲ್ಲ ಪ್ರಭುತ್ವ ವಿರೋಧಿ ಸಂಘಟನೆಯೆಂದು ಪಟ್ಟಿ ಕಟ್ಟಲು ಪ್ರಯತ್ನಿಸುತ್ತಿದೆ. ಆದರೆ ಭೀಮ್ ಆರ್ಮಿಯ ಹುಟ್ಟನ್ನು ಉತ್ತರ ಪ್ರದೇಶದ ಎರಡು ಸಾಮಾಜಿಕ ವಾಸ್ತವಗಳ ಹಿನ್ನೆಲೆಯಲ್ಲೇ ಅರ್ಥಮಾಡಿಕೊಳ್ಳಬೇಕಿದೆ. ಅದು ಉತ್ತರ ಪ್ರದೇಶದ ದಲಿತರು ದಿನನಿತ್ಯ ಎದುರಿಸುವ ಹಿಂಸಾಚಾರ ಮತ್ತು ಬಹಿಷ್ಕಾರಗಳು ಹಾಗೂ ಆ ರಾಜ್ಯದ ಸಾರ್ವಜನಿಕ ವಲಯದ ಹೆಚ್ಚುತ್ತಿರುವ ಅಪರಾಧೀಕರಣ. ಇವೆರಡು ಸಾಧ್ಯವಾಗುತ್ತಿರುವುದು ಆ ಪ್ರದೇಶದಲ್ಲಿ ಜಾತಿ-ವರ್ಗ- ಪ್ರಭುತ್ವಗಳ ಮೈತ್ರಿಕೂಟಗಳ ಕೃಪಾಶೀರ್ವಾದದಿಂದ.
ಮೇಲ್ಜಾತಿಗಳಿಗಂತೂ ಅವರು ನಿರೀಕ್ಷಿಸುತ್ತಿದ್ದ ಆ ರಾಜಕೀಯ ಸುಸಂದರ್ಭ ಒದಗಿ ಬಂದಿದೆ.
ಒಬ್ಬ ದುಸ್ಸಾಹಸಿ ದುರಭಿಮಾನಿಯೊಬ್ಬನ ಕೈಯಲ್ಲಿ ಅಧಿಕಾರದ ಚುಕ್ಕಾಣಿಯಿರುವುದರಿಂದ ಠಾಕೂರರಂಥ ಮೇಲ್ಜಾತಿಗಳು ಅಂತಿಮವಾಗಿ ತಮ್ಮ ಕಳೆದುಹೋದ ತಮ್ಮ ಧಾರ್ಮಿಕ ಮತ್ತು ಭೌತಿಕ ಮೇಲಧಿಕಾರವನ್ನು ಪುನರ್ಸ್ಥಾಪಿಸಿಕೊಳ್ಳಲು ಬೇಕಾದ ರಾಜಕೀಯ ಬೆಂಬಲವನ್ನು ಕಂಡುಕೊಂಡಿದ್ದಾರೆ. ಠಾಕೂರ್ ಸಮುದಾಯವನ್ನು ತಮ್ಮೆಡೆಗೆ ಸೆಳೆದುಕೊಳ್ಳುವ ತಂತ್ರದ ಭಾಗವಾಗಿಯೇ ಬಿಜೆಪಿಯು ಮಹಾರಾಣಾ ಪ್ರತಾಪನನ್ನು ಒಬ್ಬ ಸ್ಥಳೀಯ ಮತ್ತು ಸಾಂಸ್ಕೃತಿಕ ನಾಯಕನನ್ನಾಗಿ ಸಂಭ್ರಮಾಚರಣೆಗಳನ್ನು ಮಾಡುವುದನ್ನು ಪ್ರೋತ್ಸಾಹಿಸುತ್ತಾ ಬಂದಿದೆ. ಇದು ಹೆಚ್ಚುತ್ತಿರುವ ಕೃಷಿ ಬಿಕ್ಕಟ್ಟಿನಿಂದ ಮತ್ತು ಕೆಳಜಾತಿಗಳ ಮುನ್ನೆಡೆಯಿಂದ ಅಸಮಾಧಾನಗೊಂಡಿರುವ ಮೇಲ್ಜಾತಿಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಬಿಜೆಪಿ ದೇಶಾದ್ಯಂತ ಅನುಸರಿಸುತ್ತಿರುವ ಕಾರ್ಯತಂತ್ರದ ಭಾಗವೇ ಆಗಿದೆ. ಶಬ್ಬೀರ್ಪುರದ ಘಟನೆಗಳು ಇದಕ್ಕೆ ಪುರಾವೆಯನ್ನೊದಗಿಸುತ್ತವೆ. ಅಲ್ಲಿ ಠಾಕೂರರು ದಾಳಿ ಮಾಡಿದ್ದು ಜಾತವ ದಲಿತರ ಅನನ್ಯತೆ ಮತ್ತು ಮೇಲ್ಚಲನೆಯ ಪ್ರತೀಕಗಳಾಗಿದ್ದ ಭೌತಿಕ ಆಸ್ತಿಪಾಸ್ತಿ ಮತ್ತು ಸಾಂಸ್ಕೃತಿಕ ಪ್ರತಿಮೆಗಳ ಮೇಲೆ. ಇದು ದಲಿತರನ್ನು ಎಲ್ಲಿಡಬೇಕೋ ಅಲ್ಲಿಡಬೇಕು ಅನ್ನುವ ಉದ್ದೇಶದಿಂದ ದಲಿತರ ಮೇಲೆ ಸಾಮಾನ್ಯವಾಗಿ ನಡೆಸುವ ಮತ್ತೊಂದು ಹಿಂಸಾಚಾರದಂತೆ ಆಗದಿರಲು ಪ್ರಧಾನ ಕಾರಣ ಭೀಮ್ ಆರ್ಮಿಯ ಮಧ್ಯ ಪ್ರವೇಶ ಮತ್ತು ನ್ಯಾಯ ಸಿಗುವ ತನಕ ಹಳ್ಳಿಗೆ ಹಿಂತಿರುಗುವುದಿಲ್ಲವೆಂದು ಹಠ ತೊಟ್ಟಿರುವ ಶಬ್ಬೀರ್ಪುರ ದಲಿತರ ನಿರ್ಧಾರ.
ಆದಿತ್ಯನಾಥರ ಮುಸ್ಲಿಮ್ ವಿರೋಧಿ ಹಿನ್ನೆಲೆ ಬಲ್ಲವರಿಗೆ ಉತ್ತರ ಪ್ರದೇಶದಲ್ಲಿ ಬಿಜೆಪಿಯು ಗೆದ್ದ ನಂತರ ಕೋಮು ಉದ್ವಿಘ್ನ ಪರಿಸ್ಥಿತಿಯು ನಿರ್ಮಾಣಗೊಳ್ಳುವುದರ ಬಗ್ಗೆ ಸಂಶಯವೇನೂ ಇರಲಿಲ್ಲ. ಆದರೆ ಅವರ ಅಧಿಕಾರಾವಧಿಯ ಪ್ರಾರಂಭದ ದಿಸೆಯಲ್ಲೇ ಜಾತಿ ಧೃವೀಕರಣಗಳು ಇಷ್ಟು ಬೇಗ ಸಂಭವಿಸುತ್ತಿರುವುದು ಉತ್ತರ ಪ್ರದೇಶದ ಜನರಿಗೆ ಮಾತ್ರವಲ್ಲದೆ ಬಿಜೆಪಿಗೂ ಸಹ ತಲೆ ಬಿಸಿ ಮಾಡುವ ಅಪಾಯದ ಗಂಟೆಯಾಗಿದೆ. ಈ ಬೆಳವಣಿಗೆಗಳ ದೀರ್ಘ ಕಾಲೀನ ರಾಜಕೀಯ ಪರಿಣಾಮಗಳ ಬಗ್ಗೆ ಈಗಲೇ ಸ್ಪಷ್ಟ ಚಿತ್ರಣವು ಸಿಗುತ್ತಿಲ್ಲ್ಲ. ಆದರೆ ಚುನಾವಣೆ ಸಮಯದಲಿ ನಾವು ಹಿಂದೂಗಳು; ಆ ನಂತರ ನಾವು ದಲಿತರು ಎಂಬ ಚಂದ್ರಶೇಖರ್ ಅವರ ಹೇಳಿಕೆಯಲ್ಲಿ ವ್ಯಕ್ತವಾಗಿರುವ ದಲಿತ ಅಸಮಾಧಾನದ ಆಕ್ರಮಶೀಲ ಪ್ರತಿಕ್ರಿಯೆಗಳು ಬಿಜೆಪಿಯ ವಿರುದ್ಧ ಒಂದು ಪ್ರತಿರೋಧದ ಅಲೆಯನ್ನು ಹುಟ್ಟಿಸಬಲ್ಲ ಸಾಧ್ಯತೆಯ ಸೂಚನೆಯನ್ನಂತೂ ನೀಡುತ್ತಿದೆ.
ಕೃಪೆ: Economic and Political Weekly
May 20, 2017. Vol 52. No. 20
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ