ಭಾನುವಾರ, ಮೇ 7, 2017

ಮಣಿಪುರದ ಸಂದೇಶ


 ಅನುಶಿವಸುಂದರ್ 


manipur encounter ಗೆ ಚಿತ್ರದ ಫಲಿತಾಂಶ
ಪೊಳ್ಳು ಎನ್ಕೌಂಟರ್ ಪ್ರಕರಣದಲ್ಲಿ ಸುಪ್ರಿಂ ಕೋರ್ಟು ನೀಡಿರುವ ಆದೇಶ ನಾಗರಿಕರ ಹಕ್ಕುಗಳನ್ನು ಎತ್ತಿಹಿಡಿಯುತ್ತದೆ.

ಮಣಿಪುರದಲ್ಲಿ ನಡೆದ ಪೊಳ್ಳು ಎನ್ಕೌಂಟರ್ಗಳ ಬಗ್ಗೆ ೨೦೧೬ರ ಜುಲೈನಲ್ಲಿ ಸುಪ್ರೀಂ ಕೋರ್ಟು ಒಂದು ಸ್ಪಷ್ಟವಾದ ಆದೇಶವನ್ನು ನೀಡಿತ್ತು. ಕೇಂದ್ರ ಸರ್ಕಾgವು ಆದೇಶದ ವಿರುದ್ಧ ಮರುಪರಿಶೀಲನಾ ಅರ್ಜಿಯನ್ನು ಹಾಕಿಕೊಂಡಿತ್ತು. ಇತ್ತೀಚೆಗೆ ಸುಪ್ರಿಂ ಕೋರ್ಟು ಕೇಂದ್ರ ಸರ್ಕಾರದ ಮರುಪರಿಶೀಲನಾ ಅರ್ಜಿಯನ್ನು ತಿರಸ್ಕರಿಸಿ ಆದೇಶ ಹೊರಡಿಸಿದೆ. ಇದು ಅತ್ಯಂತ ಮಹತ್ವದ ಆದೇಶವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಸರ್ಕಾರವು ಯಾವುದೆಲ್ಲಾ ದೇಶದ ಆಸಕ್ತಿಗೆ ವಿರುದ್ಧವೆಂದು ಭಾವಿಸುತ್ತದೋ ಅಂಥಾ ಎಲ್ಲಾ ಪ್ರತಿರೋಧಗಳನ್ನು ಹತ್ತಿಕ್ಕಲು ತನಗೆ ಇನ್ನೂ ಹೆಚ್ಚು ಅಧಿಕಾರಗಳು ಬೇಕೆಂದು ಕೇಳುತ್ತಿರುವ ಹೊತ್ತಿನಲ್ಲಿ ಸುಪ್ರೀಂ ಕೋರ್ಟಿನ ವಿವೇಕದ ಮಾತುಗಳು ಅದರ ಯುದ್ಧಕೋರತನವನ್ನು ತಡೆಗಟ್ಟಬಹುದಾಗಿದೆ. ಮುಖ್ಯ ನ್ಯಾಯಾಧೀಶರಾದ ಜೆ.ಎಸ್. ಖೇಹರ್ ನೇತೃತ್ವದ ಐದು ನ್ಯಾಯಮೂರ್ತಿಗಳ ಪೀಠವು ಸರ್ಕಾರಕ್ಕೆ ಅತ್ಯಂತ ಸ್ಪಷ್ಟವಾಗಿ ಮಾತುಗಳನ್ನು ಹೇಳಿದೆ: ಮಣಿಪುರದಲ್ಲಿ ಯಾವುದೇ ಯುದ್ಧದ ಅಥವಾ ಯುದ್ಧದ ರೀತಿಯ ಪರಿಸ್ಥಿತಿ ಇಲ್ಲ. ಬದಲಿಗೆ ಸಂವಿಧಾನದಲ್ಲಿ ವ್ಯಾಖ್ಯಾನಿಸಿದಂತೆ ಒಂದು ಅಂತರಿಕ ಗಲಭೆಯ ಸನ್ನಿವೇಶ ಮಾತ್ರವಿದೆ. ಇದಕ್ಕಿಂತ ಹೆಚ್ಚೂ ಇಲ್ಲ. ಕಡಿಮೆಯೂ ಇಲ್ಲ. ಸರ್ಕಾರವು ಮಣಿಪುರದ ಸಂದರ್ಭವನ್ನು ಹೀಗೆಂದು ಮಾತ್ರವೇ ಪರಿಗಣಿಸಿ ಮುಂದಿನ ಹೆಜ್ಜೆಗಳನ್ನು ಇಡಬೇಕು.

ಮಣಿಪುರದ  ಎಕ್ಸ್ಟ್ರಾಜುಡಿಷಿಯಲ್ ಎಕ್ಸಿಕ್ಯೂಷನ್ ವಿಕ್ಟಿಮ್ಸ್ ಫ್ಯಾಮಿಲೀಸ್ ಅಸೋಸಿಯೇಷನ್- ..ವಿ.ಎಫ್..ಎಮ್.- (ಕಾನೂನುಬಾಹಿರ ಕೊಲೆಗಳಿಗೆ ಬಲಿಯಾದವರ ಕುಟುಂಬಗಳ ಸಂಸ್ಥೆ) ಎಂಬ ಸರ್ಕಾರೇತರ ಸಂಸ್ಥೆಯೊಂದು ಮಣಿಪುರದಲ್ಲಿ ೨೦೦೦-೨೦೧೨ರ ನಡುವೆ ಕಾನೂನು ಬಾಹಿರ ಕೊಲೆಗಳಿಗೆ ಬಲಿಯಾದ ೧೫೮೨ ಜನರ ವಿವರಗಳನ್ನು ದಾಖಲಿಸಿಕೊಂಡು ಇದರ ಬಗ್ಗೆ ಸೂಕ್ತ ಕ್ರಮವನ್ನು ಆಗ್ರಹಿಸಿ ಸುಪ್ರೀಂ ಕೋರ್ಟಿನಲ್ಲಿ ೨೦೧೨ರಲ್ಲಿ ರಿಟ್ ಪೆಟಿಷನ್ ಒಂದನ್ನು ಸಲ್ಲಿಸಿತ್ತು. ವರಿಷ್ಟ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದ್ದ   ಅಹವಾಲಿನಲ್ಲಿಬಂಧನ, ಚಿತ್ರಹಿಂಸೆ ಮತ್ತು ನಂತರದಲ್ಲಿ ಕೊಲೆಗಳಲ್ಲಿ ಪರ್ಯಾವಸನವಾದ ಎಲ್ಲಾ ಪ್ರಕರಣಗಳ ಬಗ್ಗೆಯೂ ಸ್ವತಂತ್ರವಾದ ತನಿಖೆ ನಡೆಸಬೇಕೆಂದು ಆಗ್ರಹಿಸಿತ್ತು. ಮತ್ತು ೧೯೫೮ರ ಆರ್ಮ್ಡ್ ಫೋರ್ಸಸ್ ಸ್ಪೆಷಲ್ ಪವರ್ಸ್ ಆಕ್ಟ್ - ಎಎsಎಸ್ಪಿಎ (ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯಿದೆ-೧೯೫೮)ಕಾಯಿದೆಯು ಗಲಭೆ ಪೀಡಿತ ಪ್ರದೇಶಗಳಲ್ಲಿ ಸಶಸ್ತ್ರ ಪಡೆಗಳು ಯಾವುದೇ ಅತಿರೇಕಗಳನ್ನು ನಡೆಸಿದರೂ ಶಿಕ್ಷೆಯಿಂದ ವಿನಾಯತಿ ನೀಡುವುದರಿಂದಾಗಿಯೇ  ಇಂಥಾ  ಕೊಲೆಗಳು ನಡೆದಿವೆಯೆಂದು ವಾದಿಸಿತ್ತು. ಅಹವಾಲನ್ನು ವಿಚಾರಣೆಗೆ ಕೈಗೆತ್ತಿಕೊಂಡ ನಂತರ ವರಿಷ್ಠ ನ್ಯಾಯಾಲಯವು ಆಯ್ದ ಆರು ಪ್ರಕರಣಗಳನ್ನು ಅಮೂಲಾಗ್ರವಾಗಿ ಪರಿಶೀಲಿಸಲು ನ್ಯಾಯಮೂರ್ತಿ ಸಂತೋಷ್ ಹೆಗಡೆಯವರ ನೇತೃತ್ವದ ವಿಶೇಷ ಸಮಿತಿಗೆ ವಹಿಸಿತು. ಸಮಿತಿಯು ಆರೂ ಪ್ರಕರಣಗಳನ್ನೂ ಕಾನೂನುಬಾಹಿರ ಕೊಲೆಗಳೆಂದೇ ಪರಿಗಣಿಸಬೇಕೆಂದು ಅಭಿಪ್ರಾಯಪಟ್ಟಿತು.  
manipur encounter ಗೆ ಚಿತ್ರದ ಫಲಿತಾಂಶ

ಅರ್ಜಿದಾರರ ಮತ್ತೊಂದು ಅಹವಾಲನ್ನೂ ಪುರಸ್ಕರಿಸರಿಸಿರುವ  ಸುಪ್ರೀಂ ಕೋರ್ಟು ಇದೀಗ ಅರ್ಜಿದಾರರು ಕೋರ್ಟಿನ ಗಮನಕ್ಕೆ ತಂದಿರುವ ಒಂದಿಡೀ ಗುಂಪಿನ ಪ್ರಕರಣಗಳನ್ನು ತನಿಖೆ ಮಾಡಲು ಮಣಿಪುರದ ಹೊರಗಿರುವ ಹಿರಿಯ ತನಿಖಾಧಿಕಾರಿಗಳನ್ನೊಳಗೊಂಡ ಒಂದು ಸ್ಪೆಷಲ್ ಇನ್ವೆಸ್ಟಿಗೇಷನ್ ಟೀಮ್- ಎಸ್ಐಟಿ (ವಿಶೇಷ ತನಿಖಾ ತಂಡ)ಯನ್ನು ರಚಿಸಿದೆ. ಅದೇ ರೀತಿ ಮಣಿಪುರದಲ್ಲಿ ಎಎಫ್ಎಸ್ಪಿಎ ಯನ್ನು ರದ್ದು ಪಡಿಸಬೇಕೆಂದು ಆಗ್ರಹಿಸಿ ಇರೋಮ್ ಶರ್ಮಿಳಾ ಅವರು ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹವನ್ನು ಒಳಗೊಂಡಂತೆ ಇಡೀ ಮಣಿಪುರಿಗಳ ಹೋರಾಟವನ್ನು  ಗಮನಿಸಿ ಕೇಂದ್ರ ಸರ್ಕಾರವು ೨೦೧೪ರಲ್ಲಿ ಪರಿಸ್ಥಿತಿಯನ್ನು ಅಧ್ಯಯನ ಮಾಡಿ ವರದಿ ನೀಡಲು ನ್ಯಾಯಮೂರ್ತಿ ಜೀವನ್ ರೆಡ್ಡಿಯವರ ನೇತೃತ್ವದ ಸಮಿತಿಯೊಂದನ್ನು ರಚಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳುವುದು ಅಗತ್ಯ. ಸಮಿತಿಯು ಮಣಿಪುರ ಹಾಗೂ ಇನ್ನಿತರ qಗಳಲ್ಲಿ ನಡೆಯುತ್ತಿರುವ ಹೋರಾಟಗಳು ಅತ್ಯಂತ ಆಳವಾಗಿರುವ ಒಳಗುದಿಗಳ ಹೊರಸೂಚನೆಯಷ್ಟೇ ಆಗಿದೆ ಎಂದು ಅಭಿಪ್ರಾಯ ಪಟ್ಟಿದೆ. ಮತ್ತು  ಎಎಫ್ಎಸ್ಪಿಎ ಯನ್ನು ಹಿಂತೆಗೆದುಕೊಳ್ಳಬೇಕೆಂದು ಬಲವಾಗಿ ಶಿಫಾರಸ್ಸು ಮಾಡಿದೆ. ಇದಲ್ಲದೆ ಅನ್ಲಾಫುಲ್ ಆಕ್ಟಿವಿಟೀಸ್ (ಪ್ರಿವೆನ್ಷನ್) ಆಕ್ಟ್ - ೧೯೬೭ (ಕಾನೂನು ಬಾಹಿರ ಚಟುವಟಿಕೆಗಳ ನಿಗ್ರಹ ಕಾಯಿದೆ) ಗೂ ಕೆಲವು ತಿದ್ದುಪಡಿಗಳನ್ನು ಮಾಡಬೇಕೆಂದು ಕೂಡಾ  ಶಿಫಾರಸ್ಸು ಮಾಡಿದೆಆದರೆ ಶಿಪಾರಸ್ಸುಗಳ ಬಗ್ಗೆ ಈವರೆಗೆ ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗಿಲ್ಲ.

೨೦೧೬ರ ಸುಪ್ರೀಂ ಕೋರ್ಟಿನ ಆದೇಶವನ್ನು ದುರ್ಬಲಗೊಳಿಸುವ ಕೇಂದ್ರ ಸರ್ಕಾರದ ಪ್ರಯತ್ನವನ್ನು ಸುಪ್ರಿಂ ಕೋರ್ಟು ತಳ್ಳಿಹಾಕಿರುವುದರಿಂದ ಕಾನೂನುಬಾಹಿರ ಕೊಲೆಗಳಿಗೆ ಭದ್ರತಾ ಪಡೆಗಳನ್ನು ಈಗ ಯಾವುದೇ ಗೊಂದಲಗಳಿಲ್ಲದೆ ಉತ್ತರದಾಯಿಗಳನ್ನಾಗಿ ಮಾಡಬಹುದು. ಪ್ರಕರಣಗಳು ಮಣಿಪುರಕ್ಕೆ ಸಂಬಂಧಪಟ್ಟವೆ ಆಗಿದ್ದರೂ ಕೋರ್ಟಿನ ಆದೇಶದ ಪರಿಣಾಮ ಮಣಿಪುರದ ಗಡಿಗಳಾಚೆಗೂ ವರ್ತಿಸುತ್ತದೆ. ಸೈನ್ಯವನ್ನು ನಾಗರಿಕ ಅಧಿಕಾರಿಗಳ ನೆರವಿಗೆ ಬಳಸಬಹುದಾದರೂ ಅದು ಯಾವ ಕಾರಣಕ್ಕೂ ಅನಿರ್ದಿಷ್ಟ ಸಮಯದವರೆಗೂ ಮುಂದುವರೆಯಲು ಸಾಧ್ಯವಿಲ್ಲವೆಂದು ನ್ಯಾಯಾಲಯ ಅತ್ಯಂತ ಸ್ಪಷ್ಟವಾದ ಮಾತುಗಳಲ್ಲಿ ತಿಳಿಸಿದೆ. ಅದೇ ರೀತಿ ಗಲಭೆ ಪೀಡಿತ ಪ್ರದೇಶಗಳಲ್ಲಿ ನಿಷೇಧಿತ ಆಯುಧಗಳನ್ನು ಹಿಡಿದೊಯ್ದ ಮಾತ್ರಕ್ಕೆ ಯಾವುದೇ ವ್ಯಕ್ತಿಯನ್ನು ಮಿಲಿಟೆಂಟ್ ಅಥವಾ ಬಂಡುಕೋರರೆಂದು ಪರಿಗಣಿಸಲು ಸಾಧ್ಯವಿಲ್ಲವೆಂದು ತಿಳಿಸಿದೆ. ಅದಕ್ಕಿಂತ ಮತ್ತೊಂದು ಮಹತ್ವದ ಅಭಿಪ್ರಾಯವನ್ನು ನ್ಯಾಯಾಲಯವು ಉಲ್ಲೇಖಿಸಿದೆ: ನಮ್ಮ ಶತ್ರು ಗಳಾಗಿರಬಹುದೆಂಬ ಏಕೈಕ ಆರೋಪ ಅಥವಾ ಅನುಮಾನ ಮಾತ್ರದಿಂದಲೇ ನಮ್ಮದೇ ದೇಶದ ನಾಗರಿಕರನ್ನು ಕೊಂದು ಹಾಕಲು ನಮ್ಮ ಸಶಸ್ತ್ರ ಪಡೆಗಳನ್ನು ನಿಯೋಜಿಸುವುದು ಕೇವಲ ಕಾನೂನಿನ ಆಳ್ವಿಕೆಗೆ ಮಾತ್ರವಲ್ಲ ನಮ್ಮ ದೇಶದ ಪ್ರಜಾತಂತ್ರಕ್ಕೇ ಗಂಡಾಂತರವನ್ನು ಉಂಟುಮಾಡುತ್ತದೆ. ಇಂದು ಕಾಶ್ಮೀರ ಮತ್ತು ಚತ್ತೀಸ್ಘಡಗಳಲ್ಲಿ ಇದೇ ಸಂಭವಿಸುತ್ತಿದ್ದು ನ್ಯಾಯಮೂರ್ತಿ ಮದನ್. ಬಿ. ಲೋಕೂರ್ ಹಾಗೂ ನ್ಯಾಯಮೂರ್ತಿ ಉದಯ್ ಲಲಿತ್ ಅವರು ನೀಡಿರುವ ಆದೇಶದ ಬಗೆಗೆ ತಿಳವಳಿಕೆಯನ್ನು ದೇಶಾದ್ಯಂತ ವಿಸ್ತೃತವಾಗಿ ಹರಡಬೇಕಿದೆ.

   ಪೊಳ್ಳು ಎನ್ಕೌಂಟರ್ಗಳಲ್ಲಿ ಭಾಗವಹಿಸಿದ ಭದ್ರತಾ ಪಡೆಗಳ ಸದಸ್ಯರನ್ನು ಅವರ ಕಾರ್ಯಾಚರಣೆಗಳಿಗೆ ಉತ್ತರದಾಯಿಗಳನ್ನಾಗಿ ಮಾಡಿದರೆ ಅವರು ಒಂದು ಕೈಯನ್ನು ಬೆನ್ನಿಗೆ ಕಟ್ಟಿಕೊಂಡು ಹೋರಾಡುವಂತೆ ಆಗುತ್ತದೆಂದು ಸರ್ಕಾರವು ತನ್ನ ವಾದವನ್ನು ಮುಂದಿಟ್ಟಿತ್ತು. ಆದರೆ ನ್ಯಾಯಾಲಯವು ವಾದವನ್ನು ಪುರಸ್ಕರಿಸಲಿಲ್ಲ. ವಾಸ್ತವವಾಗಿ ತನ್ನದೇ ಪ್ರಜೆಗಳೊಂದಿಗೆ ಅಂತರಿಕ ಯುದ್ಧದಲ್ಲಿ ತೊಡಗಿರುವ ಸರ್ಕಾರವು ಅಂತರಿಕ ಸಂಘರ್ಷ ನಡೆಯುತ್ತಿರುವ ಎಲ್ಲಾ ಪ್ರದೇಶಗಳಲ್ಲೂ ಇದೇ ವಾದವನ್ನು ಮುಂದಿಡುತ್ತಿದೆ. ಆದರೆ ಅಂಥಾ ಅಂತರಿಕ ಸಂಘರ್ಷದ  ಪ್ರದೇಶಗಳಲ್ಲಿ ಜನತೆ ಎರಡೂ ಕೈಗಳನ್ನೂ ಬೆನ್ನಿಗೆ ಕಟ್ಟಿಕೊಂಡೇ ಬದುಕುತ್ತಿರುತ್ತಾರೆಂಬುದನು ಸರ್ಕಾರ ಮರೆತುಬಿಟ್ಟಿದೆ. ಸರಿಸುಮಾರು ೫೦೦೦ ದಷ್ಟಿರಬಹುದಾದ ಬಂಡುಕೋರರನ್ನು ಅಣಗಿಸುವ ಸಲುವಾಗಿ ೨೫ ಲಕ್ಷದಷ್ಟು ಮಣಿಪುರಿಗಳು ಅಕ್ಷರಶಃ ಸೈನಿಕ ಆಕ್ರಮಣದಡಿಯಲ್ಲಿ ಬದುಕುತ್ತಿದ್ದಾರೆ. ಬಂಡುಕೋರರ ಪ್ರಧಾನ ಚಟುವಟಿಕೆಯೇ ಹಣ ವಸೂಲಿಯೆಂಬಂತೆ ಕಂಡುಬರುತ್ತದೆ. ಇಂಥಾ ಪರಿಸ್ಥಿತಿಯು ಎಎಫ್ಎಸ್ಪಿಎ ಅಥವಾ ಯುಎಪಿಎಯ ಮುಂದುವರೆಕೆಯನ್ನು ಹೇಗೆ ಸಮರ್ಥಿಸುತ್ತದೆ? ತನ್ನ  ನೀತಿಗಳ ಕಾರಣದಿಂದಾಗಿ ಭಾರತ ಸರ್ಕಾರವು ಕಾಶ್ಮೀರದಲ್ಲಿ ಬಹುಸಂಖ್ಯಾತ ಜನರಲ್ಲಿ, ವಿಶೇಷವಾಗಿ ಯುವಜನತೆಯಲ್ಲಿ ತಾವು ಭಾರತಕ್ಕೆ ಸೇರಿದವರಲ್ಲವೆಂಬ ಭಾವನೆಗಳನ್ನು ಹುಟ್ಟುಹಾಕಿ ಪರಾಯೀಕರಣಗೊಳಿಸಿದೆ. ಆದರೆ ಆಶ್ಚರ್ಯಕರವಾಗಿ ಮಣಿಪುರದಲ್ಲಿ ಮಾತ್ರ ಭಾರತೀಯ ಆಳ್ವಿಕೆಗೆ ಸಮ್ಮತಿ ಮುಂದುವರೆದಿದೆ. ಇದು ಅಲ್ಲಿ ನಡೆಯುವ ಪ್ರತೀ ಚುನಾವಣೆಗಳಲ್ಲೂ ದೊಡ್ಡ ಸಂಖ್ಯೆಯಲ್ಲಿ ಮತದಾನ ನಡೆಯುವುದರಲ್ಲೂ ವ್ಯಕ್ತವಾಗುತ್ತಿದೆ. ಹಾಗಿದ್ದರೂ, ಇದನ್ನು ಸಾಮಾನ್ಯ ಮಣಿಪುರಿಗಳು ಶಾಂತಿಯುತ ಜೀವನವನ್ನು ನಡೆಸಲು ಬಯಸುತ್ತಾರೆಂಬುದಕ್ಕೆ ಸಾಕ್ಷಿಯೆಂದು ಪರಿಗಣಿಸಲು ಭಾರತ ಸರ್ಕಾರ ನಿರಾಕರಿಸುತ್ತಿದೆ. ಬದಲಿಗೆ ಮಣಿಪುರಿಗಳು ಓಟಿನಿಂದ ತಮ್ಮ ನಾಗರಿಕತ್ವವನ್ನು ಪಡೆದುಕೊಂಡರೂ ಪ್ರಭುತ್ವವಾಗಿ ತನಗಿರುವ ಶಕ್ತಿಯ ಮೂಲಕ ನಾಗರಿಕತ್ವವನ್ನು ತಾನು  ನಿರಾಕರಿಸಬಹುದೆಂದು ಭಾರತ ಸರ್ಕಾರವು ಹೇಳುತ್ತಿರುವಂತೆ ತೋರುತ್ತದೆ. ಸರ್ಕಾರ ನೀಡುತ್ತಿರುವ ಸಂದೇಶ ಸಂಘರ್ಷದ ಪ್ರಾಂತ್ಯಗಳಲ್ಲಿರುವ  ನಾಗರಿಕರಿಗೆ ಮಾತ್ರವಲ್ಲದೆ ದೇಶದ ಎಲ್ಲಾ ನಾಗರಿಕರಿಗೂ ಕಳವಳವನ್ನುಂಟು ಮಾಡಬೇಕು

ಕೃಪೆ: Economic and Political Weekly
        May 6, 2017. Vol. 52. No. 18.
                                                                                                                               






ಕಾಮೆಂಟ್‌ಗಳಿಲ್ಲ: