ಅನು:ಅನು: ಶಿವಸುಂದರ್
ಬಾಬ್ರಿ ಮಸೀದಿ ಪ್ರಕರಣದಲ್ಲಿ ವರಿಷ್ಠ ನ್ಯಾಯಾಲಯ ಕೊಟ್ಟಿರುವ ಆದೇಶವು ನ್ಯಾಯಾಂಗ ವ್ಯವಸ್ಥೆಯ ಆಳದಲ್ಲಿರುವ ಸಮಸ್ಯೆಗಳನ್ನು ಪರಿಗಣಿಸಿಲ್ಲ.
ಸುಪ್ರಿಂ ಕೋರ್ಟು ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಒಂದು ಉಪಕಾರವನ್ನೇ ಮಾಡಿದಂತಾಗಿದೆ. ಅದು ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿಯನ್ನು ಧಂಸಮಾಡಿದ ಜಾಗದಲ್ಲಿ ರಾಮಮಂದಿರವನ್ನು ಕಟ್ಟುವ ವಿವಾದಾಸ್ಪದ ವಿಷಯವನ್ನು ಜೀವಂತವಾಗುಳಿಸುವುದನ್ನು ಖಾತರಿಗೊಳಿಸಿದೆ. ಹಾಗೆಂದು ಏಪ್ರಿಲ್ ೨೩ ರಂದು ಅದು ಸಿಬಿಐಗೆ ಕೊಟ್ಟ ನಿರ್ದೇಶನದ ಉದ್ದೇಶವೇನೂ ಇದಾಗಿರಲಿಲ್ಲ. ಆ ಆದೇಶದಲ್ಲಿ ವರಿಷ್ಯ ನ್ಯಾಯಾಲಯವು ಬಾಬ್ರಿ ಮಸೀದಿಯನ್ನು ನಾಶಮಾಡಲು ತಂತ್ರ ರೂಪಿಸಿದರೆಂದು ಎಲ್ಕೆ. ಅಡ್ವಾನಿ, ಮುರಳಿ ಮನೋಹರ್ ಜೋಷಿ ಮತ್ತು ಉಮಾ ಭಾರತಿಯಂಥಾ ಬಿಜೆಪಿಯ ಹಿರಿಯ ನಾಯಕರ ಮೇಲಿರುವ ಆರೋಪದ ಪ್ರಕರಣವನ್ನೂ ಮತ್ತು ಮತ್ತು ಆ ಧ್ವಂಸ ಪ್ರಕರಣದಲ್ಲಿ ಪಾಲುಗೊಂಡಿದ್ದ ಕರಸೇವಕರ ಮೇಲಿನ ೨೫ ವರ್ಷಗಳಷ್ಟು ಹಿಂದಿನ ಪ್ರಕರಣಗಳೆರಡನ್ನೂ ಒಟ್ಟುಗೊಳಿಸಿ ಲಖನೌ ನ್ಯಾಯಾಲಯದಲ್ಲಿ ತ್ವರಿತವಾಗಿ ವಿಚಾರಣೆಯನ್ನು ಆಗಗೊಳಿಸಬೇಕೆಂದು ಸಿಬಿಐಗೆ ಆದೇಶ ನೀಡಿತ್ತು. ಆದರೆ ಇದರಿಂದ ಅನುದ್ದೇಶಪೂರ್ವಕವಾಗಿ ಬಿಜೆಪಿಗೆ ಒಂದು ಉಪಕಾರವಾಗಿಬಿಟ್ಟಿದೆ. ಏಕೆಂದರೆ ಗೆಲುಗಳಿಂದ ಬೀಗುತ್ತಿರುವ ಬಿಜೆಪಿಯು ಈ ಆದೇಶವನ್ನು ಬಳಸಿಕೊಳ್ಳುತ್ತಾ ಈ ಕೋಮು ಉನ್ಮಾದಿ ವಿಷಯವನ್ನು ಜೀವಂತವಾಗಿಟ್ಟುಕೊಂಡು ೨೦೧೯ರ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ಹಿಂದೂ ಓಟುಗಳನ್ನು ಸಧೃಢೀಕರಿಸಿಕೊಳ್ಳುವ ಎಲ್ಲಾ ಸಾಧ್ಯತೆಗಳೂ ಇವೆ.
ಈ ಅನುದ್ದೇಶಿತ ದುಷ್ಪರಿಣಾಮಗಳನ್ನು ಬದಿಗಿಟ್ಟರೂ, ವರಿಷ್ಟ ನ್ಯಾಯಾಲಯದ ಈ ಆದೇಶದ ಮಹತ್ವವನ್ನು ಹೇಗೆ ಅಂದಾಜಿಸಬಹುದು? ೧೯೯೨ರ ಡಿಸೆಂಬರ್ ೬ ರಂದು ನೂರಾರು ಕರಸೇವಕರು ಹಾಡುಹಗಲಿನಲ್ಲೇ, ಪೋಲಿಸರ, ಮಾಧ್ಯಮಗಳ ಮತ್ತು ಹುರಿದುಂಬಿಸುತ್ತಾ ನಿಂತಿದ್ದ ರಾಜಕಾರಣಿಗಳೆಲ್ಲರ ಸಮಕ್ಷಮದಲ್ಲೇ ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸುವ ತಮ್ಮ ಯೋಜನೆಯನ್ನು ಪೂರ್ಣಗೊಳಿಸಿದರು. ಇದರ ವಿರುದ್ದ ಎರಡು ಎಫ್ಐಆರ್ ಗಳು ದಾಖಲಾದವು. ಒಂದು ಅದ್ವಾನಿ ಮತ್ತಿತರರ ವಿರುದ್ಧ. ಮತ್ತೊಂದು ಲಕ್ಷಾಂತರ ಅಜ್ನಾತ ಕರಸೇವಕರ ವಿರುದ್ಧ. ಆದರೆ ಇದಕ್ಕೆ ಯಾವ ಅರ್ಥವೂ ಇರಲಿಲ್ಲ. ಏಕೆಂದರೆ ಈ ಪ್ರಕರಣಗಳು ಹತ್ತಾರು ವಿಚಾರಣೆಗಳ, ಮುಂದೂಡಿಕೆಗಳ, ಮತ್ತು ಪ್ರತ್ಯರ್ಜಿಗಳ ಚಕ್ರಗಳಲ್ಲಿ ತೆವಳುತ್ತಾ ತೆವಳುತ್ತಾ ಸಾರಾಂಶದಲ್ಲಿ ಎಲ್ಲಿತ್ತೋ ಅಲ್ಲೇ ಉಳಿದುಕೊಂಡಿತ್ತು. ಈ ಎರಡೂ ಪ್ರಕರಣಗಳ ಕಾನೂನು ಪಯಣದ ಇತಿಹಾಸವು ನಮ್ಮ ನ್ಯಾಯಿಕ ವ್ಯವಸ್ಥೆಯು ಹೇಗೆ ಆಳದಲ್ಲಿ ಕೊಳೆತು ನಾರುತ್ತಿದೆ ಎಂಬುದನ್ನು ಮತ್ತೊಮ್ಮೆ ಬಹಿರಂಗಕ್ಕೆ ತಂದಿದೆ. ಹಾಗಿದ್ದರೂ ಒಂದರ್ಥದಲ್ಲಿ ವರಿಷ್ಠ ನ್ಯಾಯಾಲಯದ ಈ ಆದೇಶವು ಒಂದು ಮಹತ್ವದ ಮಧ್ಯಪ್ರವೇಶವೇ ಆಗಿದೆ. ಈವರೆಗೆ ರಾಯ್ಬರೇಲಿಯಲ್ಲಿ ಮತ್ತು ಲಕ್ನೌಗಳಲ್ಲಿ ಪ್ರತ್ಯೇಕಪ್ರತ್ಯೇಕವಾಗಿ ವಿಚಾರಣೆಯಾಗುತ್ತಿದ್ದ ಈ ಎರಡು ಪ್ರಕರಣಗಳನ್ನು ಜೊತೆಗೂಡಿಸುವ ಮೂಲಕ, ಹಾಗೂ ಅನಗತ್ಯವಾದ ಮುಂದೂಡಿಕೆಗಳಾಗಲೀ, ನ್ಯಾಯಾಧೀಶರ ಬದಲಾವಣೆಗಳಾಗಲೀ ಇಲ್ಲದಿರುವುದನ್ನು ಖಾತರಿಗೊಳಿಸುವ ಮೂಲಕ, ಮತ್ತು ಇನ್ನೆರಡು ವರ್ಷಗಳಲ್ಲಿ ತೀರ್ಪು ನೀಡುವುದನ್ನು ಖಾತರಿಗೊಳಿಸುವ ಮೂಲಕ ನ್ಯಾಯಾಂಗ ವ್ಯವಸ್ಥೆಯಲ್ಲಿರುವ ಸಮಸ್ಯೆಗಳನ್ನು ಸುಪ್ರಿಂ ಕೋರ್ಟು ಸಹ ಒಪ್ಪಿಕೊಂಡಂತಾಗಿದೆ.
ಈ ಮಧ್ಯಪ್ರವೇಶಕ್ಕೆ ಅರ್ಧ ಸಂತೋಷವನ್ನಂತೂ ಕೊಟ್ಟಿದೆ. ಅಷ್ಟೆ. ಅದಕ್ಕಿಂತ ಹೆಚ್ಚಿಲ್ಲ. ಏಕೆಂದರೆ ಎಷ್ಟೇ ಮಹತ್ವಪೂರ್ಣವಾಗಿದ್ದರೂ ಕೇವಲ ಒಂದು ಪ್ರಕರಣವನ್ನು ಹೀಗೆ ನಿಭಾಯಿಸಿದ ಮಾತ್ರಕ್ಕೆ ನಮ್ಮ ನ್ಯಾಯಿಕ ವ್ಯವಸ್ಥೆಯನ್ನು ಒಳಗಿನಿಂದ ಕೊಳೆಸುತ್ತಿರುವ ದೊಡ್ಡ ಸಮಸ್ಯೆಗಳೇನೂ ಬಗೆಹರಿಯುವುದಿಲ್ಲ. ದೇಶದಲ್ಲಿ ಲಕ್ಷಾಂತರ ಪ್ರಕರಣಗಳು ನಿರಂತರ ಮುಂದೂಡಿಕೆಗಳು ಮತ್ತು ನ್ಯಾಯಾಧೀಶರ ಬದಲಾವಣೆಗಳಂಥ ಕೊನೆಯಿಲ್ಲದ ಪ್ರಕ್ರಿಯೆಗಳ ಜಾಲಗಳಲ್ಲಿ ಸಿಲುಕಿಕೊಂಡಿವೆ. ಇದರ ಜೊತೆಗೆ ಸರ್ಕಾರಿ ವಕೀಲರ ಉದಾಸೀನಗಳು ಮತ್ತು ಸಾಕ್ಷಿಗಳನ್ನು ರಕ್ಷಿಸುವಂಥಾ ಯಾವುದೇ ನೀತಿ-ಯೋಜನೆಗಳು ಇಲ್ಲದಿರುವುದರಿಂದ ನ್ಯಾಯಾಲಯದಲ್ಲಿ ಹಾಜರುಪಡಿಸುವ ಮುನ್ನವೇ ಉಲ್ಟಾಹೊಡೆಯುವ ಕೀಲಕ ಸಾಕ್ಷಿಗಳು. ಈ ಕೆಲವು ಗಂಭೀರ ಸಮಸ್ಯೆಗಳತ್ತ ಗಮನಹರಿಸದಿದ್ದಲ್ಲಿ ಇಂಥಾ ಮಧ್ಯಪ್ರವೇಶಗಳು ಕೇವಲ ಅಪರೂಪದ ಅಪವಾದಗಳಷ್ಟೇ ಆಗುಳಿಯುತ್ತವೆ.
ಈ ರೀತಿಯ ಆದೇಶಗಳು ಬಂದಿರುವುದು ಇದೇ ಮೊದಲಲ್ಲವೆಂಬುದನ್ನೂ ಮರೆಯುವಂತಿಲ್ಲ. ೨೦೦೪ರಲ್ಲಿ ಬೆಸ್ಟ್ ಬೇಕರಿ ಪ್ರಕರಣವೆಂದ ಕುಖ್ಯಾತಿ ಪಡೆದ ಪ್ರಕರಣದಲ್ಲಿ (೨೦೦೨ರ ಗುಜರಾತ್ ಕೋಮುವಾದಿ ಹತ್ಯಾಕಾಂಡದಲ್ಲಿ ವಡೋದ್ರಾದಲ್ಲಿ ನಡೆದ ೧೪ ಜನರ ಕಗ್ಗೊಲೆಯ ಪ್ರಕರಣ), ಗುಜರಾತಿನ ವಾತಾವರಣ ಅತ್ಯಂತ ಕೋಮುವಾದೀಕರಣಗೊಂಡು ಕಲುಷಿತಗೊಂಡಿರುವುದನ್ನು ಪರಿಗಣನೆಗೆ ತೆಗೆದುಕೊಂಡ ವರಿಷ್ಠ ನ್ಯಾಯಾಲಯ ಇಂಥಾ ವಾತಾವರಣದಲ್ಲಿ ನ್ಯಾಯವನ್ನು ಕೋರಿ ಬಂದವರಿಗೆ ನ್ಯಾಯ ಸಿಗುವುದಿಲ್ಲವೆಂಬ ತೀರ್ಮಾನಕ್ಕೆ ಬಂದು ಆ ಪ್ರಕರಣವನ್ನು ಗುಜರಾತಿನಿಂದ ಮಹಾರಾಷ್ಟ್ರದ ತ್ವರಿತ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿತ್ತು. ಈ ತೀರ್ಪನ್ನು ನೀಡುವಾಗ ಅದು ಮತ್ತೊಂದು ಮಹತ್ವದ ಪ್ರತಿಪಾದನೆಯನ್ನೂ ಮಾಡಿತ್ತು. ಸತ್ಯದ ಅನ್ವೇಷಣೆಯಲ್ಲಿ ನ್ಯಾಯಾಲಯಗಳು "ಅಮೂರ್ತವಾದ ತಾಂತ್ರಿಕತೆಗಳಲ್ಲಿ ತೇಲಿಹೋಗದೆ" ಕ್ರೀಯಾಶೀಲವಾದ ಮುಂದೊಡಗನ್ನು ತೋರುವುದು ನ್ಯಾಯಾಲಯಗಳ ಅಧಿಕಾರ ವ್ಯಾಪ್ತಿಯೊಳಗೇ ಬರುತ್ತದೆಂದು ಸ್ಪಷ್ಟಪಡಿಸಿತ್ತು. ವಾಸ್ತವವಾಗಿ ಇಂಥಾ ತಾಂತ್ರಿಕ ಔಪಚಾರಿಕತೆಗಳಿಂದಾಗಿಯೇ ಬಾಬ್ರಿ ಮಸೀದಿ ಪ್ರಕರಣದಲ್ಲಿ ೧೯೯೭ರಲ್ಲಿ ಮೊದಲನೇ ದೊಡ್ಡ ವಿಳಂಬ ಉಂಟಾಯಿತು. ಆಗ ಅಲಹಾಬಾದ್ ಉಚ್ಚ ನ್ಯಾಯಾಲಯವು ಈ ಎರಡು ಪ್ರಕರಣಗಳನ್ನು ಕಡ್ಡಾಯವಾಗಿ ರಾಯ್ ಬರೇಲಿ ಮತ್ತು ಲಖನೌಗಳಲ್ಲಿ ಬೇರೆಬೇರೆಯಾಗಿಯೇ ವಿಚಾರಣೆ ನಡೆಸಬೇಕೆಂದು ಆದೇಶ ನೀಡಿದ್ದೇ ಅನಗತ್ಯ ವಿಳಂಬಕ್ಕೆ ಕಾರಣವಾಯಿತು.
ಈಗ ಸ್ವಯಂ ನ್ಯಾಯಾಲಯವೇ ಈ ಪ್ರಕರಣವನ್ನು ಕೇಂದ್ರ ಸ್ಥಾನಕ್ಕೆ ತಂದಿರುವುದರಿಂದ ಈಗಲಾದರೂ ಬಾಬ್ರಿ ಮಸೀದಿ ಧ್ವಂಸದ ನಂತರದ ೨೫ ವರ್ಷಗಳಿಗೆ ಅರ್ಥವೇನೆಂದು ಸರಿಯಾಗಿ ಅಂದಾಜುಮಾಡಬೇಕಿದೆ. ೧೯೯೦ರ ಸೆಪ್ಟೆಂಬರ್ನಲ್ಲಿ ಪ್ರಾರಂಭವಾದ ರಾಮರಥಯಾತ್ರೆಯಿಂದ ಮೊದಲುಗೊಂಡು, ರಾಮ ಮಂದಿರ ನಿರ್ಮಾಣದ ವಿಷಯದ ಸುತ್ತಾ ಜನರನ್ನು ಉದ್ರೇಕಿಸಿ ಒಟ್ಟುಗೂಡಿಸಿ ಅಂತಿಮವಾಗಿ ೧೯೯೨ರ ಡಿಸೆಂಬರ್ ೬ ರಂದು ಬಾಬ್ರಿ ಮಸೀದಿ ಧ್ವಂಸ ಮಾಡುವವರೆಗಿನ ಈ ಅವಧಿಯಲ್ಲಿ ಭಾರತವು ಕೋಮುವಾದಿ ಧೃವೀಕರಣಕ್ಕೆ ತಪ್ಪಿಸಿಕೊಳ್ಳಲಾಗದ ರೀತಿಯಲ್ಲಿ ದೂಡಲ್ಪಟ್ಟಿತು. ನಂತರದಲ್ಲೂ ಹಿಂದೂತ್ವ ಬ್ರಿಗೇಡಿನ ಆಕ್ರಮಣ ಮುಂದುವರೆಯುತ್ತಲೇ ಹೋಗಿ ೨೦೧೪ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಕಂಡರಿಯದ ಗೆಲುವನ್ನು ತಂದುಕೊಟ್ಟಿತು. ಈ ಮುನ್ನೆಡೆ ಈಗಲೂ ಕುಂದಿಲ್ಲವೆಂಬುದನ್ನು ಈ ವರ್ಷದ ಆರಂಭದಲ್ಲಿ ನಡೆದ ಐದು ರಾಜ್ಯಗಳ ಚುನಾವಣಾ ಫಲಿತಾಂಶಗಳು ಎತ್ತಿ ತೋರಿಸುತ್ತಿವೆ. ೧೯೯೨ರಲ್ಲಿ ಮುಂಬೈನಲ್ಲಿ ಮತ್ತು ೨೦೦೨ರಲ್ಲಿ ಗುಜರಾತಿನಲ್ಲೂ ನಡೆದ ಕೋಮು ಗಲಭೆಗಳನ್ನೂ ಒಳಗೊಂಡಂತೆ ದೇಶಾದ್ಯಂತ ಹಲವಾರು ಪ್ರದೇಶಗಳಲ್ಲಿ ಹೆಚ್ಚುತ್ತಲೇ ಇರುವ ಕೋಮು ಗಲಭೆಗಳು ತಾವು ಈ ಪ್ರಜಾತಾಂತ್ರಿಕ ದೇಶದಲ್ಲಿ ಸಮಾನ ನಾಗರಿಕರಾಗಿ ಬದುಕಬಹುದೆಂಬ ಅಲ್ಪಸಂಖ್ಯಾತರ ವಿಶ್ವಾಸವನ್ನು ಅಕ್ಷರಶಃ ಧ್ವಂಸಮಾಡುತ್ತಿದೆ. ೨೦೧೪ರ ನಂತರದಲ್ಲಿ ಈ ಕೋಮುವಾದಿ ವಿಷವು ಪಸರಿಸುತ್ತಿರುವ ವೇಗವು ಅವರ ಅಭದ್ರತೆಯನ್ನು ಮತ್ತಷ್ಟು ಹೆಚ್ಚಿಸಿದೆ.
ನ್ಯಾಯಾಲಯದ ಈ ಆದೇಶವು ಬಿಜೆಪಿಯ ನಾಯಕರ ನಿದ್ದೆಗೆಡಿಸಿದೆಯೆಂದೇನು ಭಾವಿಸಬೇಕಿಲ್ಲ. ಬದಲಿಗೆ ಈ ಆದೇಶ ಹೊರಬಂದಿರುವ ಸಮಯ ಅವರಿಗೆ ಅನಿರೀಕ್ಷಿತ ಅದೃಷ್ಟವನ್ನೇ ತಂದುಕೊಟ್ಟಿದೆ. ಉಮಾಭಾರತಿಯವರು ಈ ಆದೇಶದ ಬಗ್ಗೆ ಕೊಟ್ಟ ವಿಜಯೋನ್ಮಾದದ ಹೇಳಿಕೆಯೇ ಇದಕ್ಕೆ ಪುರಾವೆಯನ್ನು ಒದಗಿಸುತ್ತದೆ. ಒಂದು ವೇಳೆ ನ್ಯಾಯಾಲಯವು ಅದ್ವಾನಿ ಮತ್ತಿತರರ ಮೇಲಿನ ಕುತಂತ್ರದ ಆರೋಪವನ್ನು ಪುರಸ್ಕರಿಸಿದರೂ ಅದರ ವಿರುದ್ಧ ಮೇಲ್ಮನವಿಯನ್ನು ಸಲ್ಲಿಸಲು ಉನ್ನತ ನ್ಯಾಯಾಲಯಗಳಿರುವುದರಿಂದ ಅವರು ಯಾವುದೇ ಚಿಂತೆ ಮಾಡುವ ಅಗತ್ಯವಿರುವುದಿಲ್ಲ. ಒಂದು ವೇಳೆ ಅವರು ದೋಷಮುಕ್ತರಾದಲ್ಲಿ ಬಿಜೆಪಿಗೆ ಸಂಪೂರ್ಣ ಲಾಭ. ನಿಜ ಹೇಳಬೇಕೆಂದರೆ ಕೋಮುಉನ್ಮಾದೀ ವಾತಾವರಣವಿರುವಾಗ ಯಾವುದೇ ರೀತಿಯ ತೀರ್ಪು ಬಂದರೂ ಅದನ್ನು ಚುನಾವಣಾ ಲಾಭಕ್ಕೆ ದುರ್ಬಳಕೆ ಮಾಡಿಕೊಳ್ಳಬಹುದು.
ಸ್ವಾತಂತ್ರ್ಯೋತ್ತರ ಭಾರತದ ಕೋಮುವಾದಿ ಇತಿಹಾಸದ ಘಟ್ಟಗಳನ್ನು ಹಲವಾರು ಘಟನೆಗಳ ಮೂಲಕ ಗುರುತಿಸಬಹುದು. ಆದರೂ, ಹಿಂದೂತ್ವ ರಾಜಕಾರಣಕ್ಕೆ ಕೊಟ್ಟ ದೊಡ್ಡ ಉತ್ತೇಜನದ ಕಾರಣಕ್ಕೆ ೧೯೯೨ರ ಡಿಸೆಂಬರ್ ೬ ಭಿನ್ನವಾಗುಳಿದಿದೆ. ಮತ್ತು ಅದು ಈಗಲೂ ಅವರಿಗೆ ಲಾಭವನ್ನು ತಂದುಕೊಡುತ್ತಲೇ ಇದೆ. ಎರಡು ವರ್ಷಗಳ ನಂತರ ಲಖನೌ ನ್ಯಾಯಾಲಯ ಕೊಡುವ ಆದೇಶವು ಈ ಪ್ರಕ್ರಿಯೆಯಲ್ಲಿ ಮತ್ತೊಂದು ಗಮನಾರ್ಹ ಘಟನೆಯಷ್ಟೇ ಆಗಬಹುದು.
ಕೃಪೆ: Economic and Political Weekly
April 22, 2017. Vol. 52. No. 16
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ