ಸೋಮವಾರ, ಮೇ 29, 2017

ತಾಯಂದಿರ ಹೆಸರಿನಲ್ಲಿ...

ಅನುಶಿವಸುಂದರ್
mother ಗೆ ಚಿತ್ರದ ಫಲಿತಾಂಶ
mother ಗೆ ಚಿತ್ರದ ಫಲಿತಾಂಶ

ತಾಯಂದರಿಗೆ ನೀಡಬೇಕಾದ ಸೌಕರ್ಯಗಳ ಕುರಿತು ಸರ್ಕಾರವು ತೆಗೆದುಕೊಂಡಿರುವ ಎರಡು ವಿಭಿನ್ನ ನಿರ್ಧಾರಗಳು ತಾರತಮ್ಯದಿಂದ ಕೂಡಿವೆ.

ಕಾರ್ಮಿಕ ಕಾನುನುಗಳಿಗೆ ತರುತ್ತಿರುವ ತಿದ್ದುಪಡಿಗಳು ಕಾರ್ಮಿಕರ ಹಕ್ಕುಗಳಿಗೆ ಮತ್ತು ಕಾರ್ಮಿಕ ಕಲ್ಯಾಣ ಯೋಜನೆಗಳಿಗೆ ವ್ಯಾಪಕವಾಗಿ ಕತ್ತರಿ ಹಾಕುತ್ತಿರುವ ಹೊತ್ತಿನಲ್ಲಿ ವರ್ಷದ ಪ್ರಾರಂಭದಲ್ಲಿ ಸಂಸತ್ತಿನಲ್ಲಿ ಅನುಮೋದಿಸಲಾದ ಮೆಟರ್ನಿಟಿ ಬೆನಿಫಿಟ್ (ಅಮೆಂಡ್ಮೆಂಟ್) ಆಕ್ಟ್ (ಎಂಬಿಎ)-೨೦೧೭ (ತಾಯ್ತನ ಸವಲತ್ತು (ತಿದ್ದುಪಡಿ) ಕಾಯಿದೆ-೨೦೧೭) ಖಂಡಿತಾ ಸ್ವಾಗತಾರ್ಹವಾಗಿದೆ. ಇತ್ತೀಚೆಗೆ ಲೋಕಸಭೆಯು ತಾಯ್ತನ ಸವಲತ್ತು ಕಾಯಿದೆ-೧೯೬೧ರ ಕಾಯಿದೆಗೆ ಅನುಮೋದಿಸಿದ ತಿದ್ದುಪಡಿಯೊಂದು ಗರ್ಭಿಣಿ ಮಹಿಳೆಗೆ ೨೬ ವಾರಗಳ ಕಾಲ ಸಂಬಳ ಸಹಿತ ರಜೆಯನ್ನು ಖಾತರಿ ಪಡಿಸುತ್ತದೆ. ಇದನ್ನು ಆಕೆ ಎರಡು ಬದುಕುಳಿಯುವ ಮಕ್ಕಳನ್ನು ಹೊಂದುವವರೆಗೂ ಪಡೆದುಕೊಳ್ಳಹುದು. ಮೊದಲು ರಜೆ ಕೇವಲ ೧೨ ವಾರ್ಗಳಿಗೆ ಸೀಮಿತವಾಗಿತ್ತು. ಇದೂ ಮತ್ತು ಕಾಯಿದೆಗೆ ತಂದಿರುವ ಇನ್ನಿತರ ತಿದ್ದುಪಡಿಗಳು ನಿಸ್ಸಂಶಯವಾಗಿ ಪ್ರಶಂಸನೀಯವಾಗಿವೆ.
mother ಗೆ ಚಿತ್ರದ ಫಲಿತಾಂಶ

ಆದರೆ ಬದಲಾವಣೆಗಳಲ್ಲಿರುವ ಸಮಸ್ಯೆಯೇನೆಂದರೆ ಅವು ಯಾವ ಮಹಿಳೆಯರಿಗೆ ಮತ್ತು ಕುಟುಂಬಗಳಿಗೆ ಇಂಥಾ ಬದಲಾವಣೆಗಳ ಸೌಲಭ್ಯಗಳು ಅತಿಹೆಚ್ಚು ಅಗತ್ಯವಿದೆಯೋ ಅಂಥವರಿಗೆ ತಲುಪುವಷ್ಟು ವ್ಯಾಪಕವಾಗಿಯೂ ಇಲ್ಲ ಮತ್ತು ಎಟುಕುವಂತೆಯೂ ಇಲ್ಲ. ಹಾಗೂ ಮಗುವಿನ ಪೋಷಣೆಯ ಜವಾಬ್ದಾರಿಯನ್ನು ತಂದೆತಾಯಿಗಳಿಬ್ಬರಿಗೂ ಸಮಾನವಾಗಿ ಹಂಚಬಲ್ಲಂಥ ಸಂಗತಿಗಳನ್ನೂ ಸಹ ಇದು ಪರಿಗಣಿಸಿಲ್ಲ್ಲ. ವಿಪರ್ಯಾಸವೆಂದರೆ ಕಾಯಿದೆಯ ಬದಲಾವಣೆಯ ಪ್ರಯೋಜನಗಳು ಸಾಬೀತಾಗುವ ಮುನ್ನವೇ ಕೇಂದ್ರ ಸಂಪುಟವು ಮೆಟರ್ನಿಟಿ ಬೆನಿಫಿಟ್ ಪ್ರೋಗ್ರಾಂ (ತಾಯ್ತನ ಸವಲತ್ತು ಯೋಜನೆ)ಗೆ (ತಾಯ್ತನ  ಸವಲತ್ತು ತಿದ್ದುಪಡಿ ಕಾಯಿದೆ ಮತ್ತು ತಾಯ್ತನ ಸವಲತ್ತು ಯೋಜನೆಗಳು ಒಂದೇ ಅಲ್ಲ ಎನ್ನುವುದು ಓದುಗರ ಗಮನಕ್ಕೆ) ಒಂದು ತಿದ್ದುಪಡಿಯನ್ನು ತಂದು ಯೋಜನೆಂi ಜರೂರಿಯಿದ್ದ ಬಹುದೊಡ್ಡ ಸಂಖ್ಯೆಯ ಮಹಿಳೆಯರನ್ನು ಫಲಾನುಭವಿಗಳಾಗದಂತೆ ಅನರ್ಹಗೊಳಿಸಿದೆ. ಹೀಗಾಗಿ ಒಂದೆಡೆ ಕೊಡುತ್ತಿರುವುದೇ ಕಡಿಮೆ ಎನ್ನುವುದು ಒಂದೆಡೆಯಾದರೆ ಮತ್ತೊಂದೆಡೆ ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಕಿತ್ತುಕೊಳ್ಳಲಾಗುತ್ತಿದೆ. ಅಷ್ಟು ಮಾತ್ರವಲ್ಲದೆ ತಿದ್ದುಪಡಿಗಳು ಮಹಿಳಾ ಕಾರ್ಮಿಕರ ವಿಭಿನ್ನ ವಿಭಾಗಗಳ ನಡುವೆಯೂ ತಾರತಮ್ಯವೆಸಗುತ್ತದೆ.

ತಿದ್ದುಪಡಿಯಾದ ಕಾಯಿದೆಯು ೧೦ಕ್ಕಿಂತ ಹೆಚ್ಚು ಜನರನ್ನು ನೇಮಕಾತಿ ಮಾಡಿಕೊಂಡಿರುವ ಎಲ್ಲಾ ಸಂಸ್ಥೆಗಳಿಗೂ ಅನ್ವಯಿಸುತ್ತದೆ ಮತ್ತು ೧೮ ಲಕ್ಷ ಮಹಿಳಾ ಕಾರ್ಮಿಕರು ಯೋಜನೆಯಡಿ ಫಲಾನುಭವಿಗಳಾಗಲಿದ್ದಾರೆ. ೫೦ಕ್ಕಿಂತ ಹೆಚ್ಚು ಕಾರ್ಮಿಕರನ್ನು ಅಥವಾ ೩೦ಕ್ಕೂ ಹೆಚ್ಚು ಮಹಿಳಾ ಕಾರ್ಮಿಕರನ್ನು ನೇಮಕಾತಿ ಮಾಡಿಕೊಂಡಿರುವ ಸಂಸ್ಥೆಯು ತನ್ನ ಕಚೇರಿಯಲ್ಲಿ ಅಥವಾ ಅಲ್ಲಿಂದ ೫೦೦ ಮೀಟರ್ ದೂರದ ವ್ಯಾಪ್ತಿಯೊಳಗೆ ಒಂದು ಶಿಶುಪಾಲನಾ ಕೇಂದ್ರವನ್ನು ಸ್ಥಾಪಿಸಬೇಕು ಮತ್ತು ಕೆಲಸ ಅವಧಿಯಲ್ಲಿ ನಾಲಕ್ಕು ಬಾರಿ ಅಲ್ಲಿಗೆ ಭೇಟಿ ನೀಡಲು ತಾಯಿಗೆ ಅವಕಾಶ ಮಾಡಿಕೊಡಬೇಕಾದದ್ದು ಕಡ್ಡಾಯ. ಸಂಬಳ ಸಹಿತ ರಜೆಯನ್ನು ಪಡೆದುಕೊಂಡ ನಂತರದ ಅವಧಿಯಲ್ಲಿ ಆಕೆಯ ಕೆಲಸದ ಸ್ವರೂಪವು ಅವಕಾಶ ಕೊಡುವುದಾದದಲ್ಲಿ ಮತ್ತು ಮಾಲೀಕರು ಸಮ್ಮತಿಸುವುದಾದದಲ್ಲಿ ಮನೆಯಿಂದ ಕೆಲಸ ಮಾಡುವುದಕ್ಕೂ ಅವಕಾಶವನ್ನು ಕಲ್ಪಿಸಬೇಕು. ಬಾಡಿಗೆ ತಾಯಂದಿರನ್ನು ನಿಯೋಜಿಸಿಕೊಳ್ಳುವ ಮತ್ತು ತಿಂಗಳಿಗಿಂತ ಕಡಿಮೆ ವಯಸ್ಸಿನ ಮಗುವನ್ನು ದತ್ತು ತೆಗೆದುಕೊಳ್ಳುವ ಮಹಿಳೆಯೂ ಸಹ ೧೨ ವಾರಗಳ ತಾಯ್ತನದ ರಜೆಯನ್ನು ಪಡೆದುಕೊಳ್ಳಬಹುದು. ಜಗತ್ತಿನಾದ್ಯಂತ ನಡೆದಿರುವ ಸಂಶೋಧನೆಗಳು ಮತ್ತು ಅನುಭವಗಳು ಲಭಿತ ಹೆರಿಗೆ ರಜೆಯು ಶಿಶು ಮರಣದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆಯೆಂಬುದನ್ನೂ ಮತ್ತು ಇದರ ಭಾಗವಾಗಿ ಮೊಲೆಯೂಡಿಸುವುದು ಹೆಚ್ಚಾಗುವುದರಿಂದ ಶಿಶುವಿನ ಆರೋಗ್ಯವೂ ಉತ್ತಮಗೊಳ್ಳುತ್ತದೆಂದು ಸಾಬೀತುಪಡಿಸಿದೆ. ಅಲ್ಲದೆ ಇದು ತಾಯಂದಿರು ತಮ್ಮ ಮೇಲಿನ  ಒತ್ತಡವನ್ನು ನಿಭಾಯಿಸಲೂ ಸಹಕರಿಸುತ್ತದೆ.

ಆದರೆ ಮಹಿಳಾ ಉದ್ಯೋಗದ ಸುತ್ತಾ ಹಲವಾರು ಸಮಾಜೋ-ಆರ್ಥಿಕ ಸಂಗತಿಗಳು ಹೆಣೆದುಕೊಂಡಿವೆ. ಹೀಗಾಗಿ ಇಂಥಾ ಹಲವಾರು ಪ್ರಶಂಸನೀಯ ಕಲ್ಯಾಣ ಕ್ರಮಗಳು ಮಾಲೀಕರು ಮಾಡಬೇಕಾದ ವೆಚ್ಚವನ್ನು ಹೆಚ್ಚಿಸುವುದರಿಂದ ಅವರು ಮಹಿಳೆಯರನ್ನು ನೇಮಕಾತಿ ಮಾಡಿಕೊಳ್ಳುವುದನ್ನೇ ನಿಲ್ಲಿಬಿಡಬಹುದೇ ಎಂಬ ಆತಂಕವನ್ನೂ ಜೊತೆಜೊತೆಗೇ ಹುಟ್ಟಿಸುತ್ತದೆ. ಕಾಯಿದೆಯೂ ಸಹ ಅದಕ್ಕೆ ಅಪವಾದವೇನೂ ಅಲ್ಲ. ಇಂದಿನ ದಿನಗಳಲ್ಲಿ ಇಂಥಾ ಕಲ್ಯಾಣ ಕ್ರಮಗಳ ವೆಚ್ಚವನ್ನು ಸಾಮಾನ್ಯವಾಗಿ ಸರ್ಕಾರಗಳು ಭರಿಸುವುದಿಲ್ಲ. ಅಥವಾ ಪೂರ್ತಿಯಾಗಿ ಭರಿಸುವುದಿಲ್ಲ. ಹೀಗಾಗಿ ಅವುಗಳ ಆರ್ಥಿಕ ಹೊರೆಯನ್ನು ಖಾಸಗಿ ಕ್ಷೇತ್ರದ ಮಾಲಿಕರೇ ಭರಿಸುವಂತಾಗುತ್ತದೆ. ಹೀಗಾಗಿ ಕಾಯಿದೆಯೂ ಸಹ ಒಂದೋ ಅನುಷ್ಠಾನದಲ್ಲಿ ವಿಫಲವಾಗುತ್ತದೆ ಅಥವಾ ಸಣ್ಣ ಮತ್ತು ಮಧ್ಯಮ ಗಾತ್ರದ ಖಾಸಗಿ ಉದ್ಯಮಿಗಳು ಮಹಿಳಾ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳುವುದನ್ನೇ ನಿಲ್ಲಿಬಿಡಬಹುದು. ಇದನ್ನು ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐಎಲ್) ಅಧ್ಯಯನದ ಹಿನ್ನೆಲೆಯಲ್ಲೇ ನೋಡಬೇಕು. ಅದು ನೀಡಿರುವ ಅಂಕಿಅಂಶಗಳ ಪ್ರಕಾರ ೨೦೦೫ರ ನಂತರದಲ್ಲಿ ಭಾರತದ ಕಾರ್ಮಿಕ ಶಕ್ತಿಯಲ್ಲಿ ದುಡಿಯ ಬಲ್ಲ ವಯೋಮಾನದ ಮಹಿಳೆಯರ ಪಾಲು ಶೇ.೧೦ರಷ್ಟು ಕಡಿಮೆಯಾಗಿದೆ.

ಮತ್ತೊಂದೆಡೆ, ಕೆಲಸದ ಸ್ಥಳಗಳಲ್ಲಿ  ಶಿಶುಪಾಲನ ಕೇಂದ್ರಗಳ ಸ್ಥಾಪನೆಯಾಗುವುದರಿಂದ ಮತ್ತು ದೀರ್ಘಾವಧಿಯ ಸಂಬಳ ಸಹಿತ ರಜೆಗಳು ದೊರೆಯುವುದರಿಂದ, ಕಾಯಿದೆಯು ಸಂಘಟಿತ ಕ್ಷೇತ್ರದಲ್ಲಿರುವ ಕಿರಿಯ ಹಾಗೂ ಮಧ್ಯಮ ವಯಸ್ಕ ಮಹಿಳಾ ಕಾರ್ಮಿಕರು ಕೆಲಸದಲ್ಲಿ ಮುಂದುವರೆಯಲು ಉತ್ತೇಜನವನ್ನೂ ನೀಡಬಹುದೆಂಬ ಸಾಧ್ಯತೆಯ ಬಗ್ಗೆಯೂ ಕೆಲವು ಆಶಾವಾದಿಗಳು ಗಮನ ಸೆಳೆಯುತ್ತಾರೆ.

ಮತ್ತೊಂದು ನಕಾರಾತ್ಮಕ ಅಂಶವೆಂದರೆ ಎಂಬಿಎ ಕಾಯಿದೆಯು ಮೆನೆಗೆಲಸ ಮಾಡುವ, ಕೃಷಿ ಕಾರ್ಮಿಕರಾಗಿ ದುಡಿಯುವ ಹಾಗೂ ಕೌಟುಂಬಿಕ ಉದ್ಯಮಗಳಂಥ ಅಸಂಘಟಿತ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಒಟ್ಟಾರೆ ಮಹಿಳಾ ಕಾರ್ಮಿಕರಲ್ಲಿ ಶೇ. ೯೦- ೯೭ರಷ್ಟಿರುವ ಮಹಿಳಾ ಕಾರ್ಮಿಕರನ್ನು ತನ್ನ ವ್ಯಾಪ್ತಿಯಿಂದ ಹೊರಗೇ ಇಟ್ಟಿದೆ. ಅಲ್ಲದೆ ತಿದ್ದುಪಡಿಯು ತಂದೆತನದ ರಜೆಯ ಬಗ್ಗೆಯೂ ಗಮನ ಹರಿಸಿಲ್ಲ. ಈಗಿರುವಂತೆ ಕೇಂದ್ರ ಸರ್ಕಾರದ ಪುರುಷ ಉದ್ಯೋಗಿಗಳು ೧೫ ದಿನಗಳ ತಂದೆತನದ ರಜೆಯನ್ನು ಪಡೆಯುತ್ತಾರೆ. ಮತ್ತು ಇದನ್ನು ನಿಧಾನವಾಗಿಯಾದರೂ ಖಾಸಗಿ ಕ್ಷೇತ್ರವೂ ಪಾಲಿಸಲು ಪ್ರಾರಂಭಿಸಿದೆ. ಇದನ್ನು ಗಮನಿಸದ ಕಾಯಿದೆಯು ಸಹಜವಾಗಿಯೇ ಮಗುವಿನ  ಪೋಷಣೆಯ ಸಂಪೂರ್ಣ ಜವಾಬ್ದಾರಿ ಮಹಿಳೆಯದ್ದೇ ಎಂಬ ಪಿತೃ ಪ್ರಧಾನ ಮೌಲ್ಯಕ್ಕೇ ಪುಷ್ಟಿಯನ್ನೊದಗಿಸುತ್ತದೆ.

ಇನ್ನು ತಾಯ್ತನ ಸವಲತ್ತು ಯೋಜನೆ (ಎಂಬಿಪಿ) ಬಗ್ಗೆ ಹೇಳುವುದಾದರೆ, ಪ್ರಧಾನಿ ನರೇಂದ್ರ ಮೋದಿಯವರು ೨೦೧೬ರ ಡಿಸೆಂಬರ್ ೩೧ ರಂದು ಗರ್ಭಿಣಿಯರಿಗೆ ಮತ್ತು ಮೊಲೆಯೂಡಿಸುವ ತಾಯಂದರಿಗೆ ಕೊಡುತ್ತಿದ್ದ ಮೊತ್ತವನ್ನು ಹಣವನ್ನು ೬೦೦೦ ಕೋಟಿ ರೂಪಾಯಿಗಳಿಗೆ ಏರಿಸಲಾಗುವುದೆಂದು ಅತ್ಯಂತ ಅಬ್ಬರದಿಂದ ಘೋಷಿಸಿದರು. ಆದರೆ ಇತ್ತೀಚೆಗೆ ಕೇಂದ್ರ ಸಂಪುಟವು ಸೌಲಭ್ಯವನ್ನು ಕೇವಲ ಮೊದಲ ಜೀವಂತ ಮಗುವಿಗೆ ಮಾತ್ರ ಎಂದು ಸೀಮಿತಗೊಳಿಸಿದೆ. ಅದೇನೇ ಇದ್ದರೂ ಯೋಜನೆಯು ಇಂದಿರಾಗಾಂಧಿ ಮಾತ್ರೂತ್ವ ಸಹಯೋಗ್ ಯೋಜನೆ (ಐಜಿಎಂಎಸ್ವೈ) ಎಂಬ ಹೆಸರಿನಲ್ಲಿ ೨೦೧೦ರಿಂದಲೂ ೫೦ ಜಿಲ್ಲೆಗಳಲ್ಲಿ ಅಸ್ಥಿತ್ವದಲ್ಲಿತ್ತು. ಸಾಮಾಜಿಕ ಕಾರ್ಯಕರ್ತರು ಗುರುತಿಸುವಂತೆ ೨೦೧೭ರ ತಾಯ್ತನ ಕಾಯಿದೆಗೆ ಹೋಲಿಸಿದಲ್ಲಿ ತಾಯ್ತನ ಸವಲತ್ತು ಯೋಜನೆ ಹಲವು ತಾರತಮ್ಯಗಳಿಂದ ಕೂಡಿದೆ. ಹಿಂದಿನ ಐಜಿಎಂಎಸ್ವೈ ಯೋಜನೆ ಸೌಲಭ್ಯವನ್ನು ಎರಡು ಮಕ್ಕಳ ಮತ್ತು ಮದುವೆಯಾದ ವಯಸ್ಸಿನ ಅರ್ಹತೆಗಳ ನಿರ್ಬಂಧಗಳಿಗೊಳಪಟ್ಟಿತ್ತು. ನಿರ್ಬಂಧಗಳನ್ನು ಕಿತ್ತುಹಾಕಬೇಕೆಂಬ ಬೇಡಿಕೆಗೂ ಕೇಂದ್ರ ಸಂಪುಟವು ಕಿವಿಗೊಟ್ಟಿಲ್ಲ. ತಾಯ್ತನದ ಸೌಲಭ್ಯಗಳ ಅಸಂಘಟಿತ ಮಹಿಳಾ ಕಾರ್ಮಿಕರನ್ನೂ ಒಳಗೊಂಡಂತೆ ಎಲ್ಲಾ ದುರ್ಬಲ ಮಹಿಳೆಯರಿಗೂ ಸಾರ್ವತ್ರಿಕವಾಗಿ ಮತ್ತು ಬೇಶರತ್ತಾಗಿ ಲಭ್ಯವಾಗಬೇಕೆಂಬ ಹಕ್ಕೊತ್ತಾಯಗಳಿರುವಾಗ ಕೇಂದ್ರವು ತನ್ನ ತಾಯ್ತನ ಯೋಜನೆಯನ್ನು ಒಂದು ಮಗುವಿನ ತಾಯ್ತನಕ್ಕೆ ಮಾತ್ರ ಸೀಮಿತಗೊಳಿಸುವುದು ಒಂದು ಪ್ರತಿಗಾಮಿ ಕ್ರಮವಾಗಿದೆ.
mother ಗೆ ಚಿತ್ರದ ಫಲಿತಾಂಶ

ಉದ್ಯೋಗಾವಕಾಶಗಳ ಸಾಮಾನ್ಯ ಲಕ್ಷಣಗಳನ್ನೂ ಮತ್ತು ಕಾರ್ಮಿಕಶಕ್ತಿಯಲ್ಲಿ ಮಹಿಳೆಯರ ಪಾಲನ್ನು ಗಮನಲ್ಲಿಟ್ಟುಕೊಂಡು ಯೋಚಿಸಿದಲ್ಲಿ ಮಹಿಳೆಯರಿಗೆ ತಾಯ್ತನದ ಸೌಲಭ್ಯಗಳನ್ನು ಒದಗಿಸುವುದು ಎರಡಲಗಿನ ಕತ್ತರಿಯಂತೆ. ಇದು ಮುಂದುವರೆದ ದೇಶಗಳ ಸಂದರ್ಭದಷ್ಟೇ ಭಾರತದ ಸಂದರ್ಭಕ್ಕೂ ಅನ್ವಯವಾಗುತ್ತದೆ. ಸಂಘಟಿತ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರಿಗೆ ನೀಡಲಾಗುವ ವಿಶೇಷ ಸವಲತ್ತುಗಳು ಉದ್ಯೋಗಾಕಾಂಕ್ಷಿಗಳನ್ನು ದಂಡಿಸುವ ಅಸ್ತ್ರವಾಗದಂತೆ ನೋಡಿಕೊಳ್ಳುವ ಕ್ರಮಗಳೊಂದಿಗೆ ಜಾರಿಯಾಗಬೇಕು. ಹಾಗೂ ಸೌಲಭ್ಯಗಳು ಅಸಂಘಟಿತ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಕಾರ್ಮಿಕರಿಗೂ ವಿಸ್ತರಿಸಬೇಕು.

  ಕೃಪೆ: Economic and Political Weekly
  May 27, 2017. Vol. 52. No. 21

                                                                                                              
ಕಾಮೆಂಟ್‌ಗಳಿಲ್ಲ: