ಭಾನುವಾರ, ಮೇ 7, 2017

ರೋಷಾವೇಷಗಳ ನಂತರವೂ ಉಳಿದುಕೊಳ್ಳುವ ಅಸಲಿ ಸವಾಲು



ಅನುಶಿವಸುಂದರ್
war ಗೆ ಚಿತ್ರದ ಫಲಿತಾಂಶ

ಭಾರತ ಸರ್ಕಾರವು ತನ್ನದೇ ಜನರ ಒಂದು ವರ್ಗದ ಮೇಲೆ ನಡೆಸಿರುವ  ಯುದ್ಧವನ್ನು ನಾವು ತಡೆಯುವುದಾದರೂ ಹೇಗೆ

ಭಾರತದ ಒಳಗೆ ನಡೆಯುತ್ತಿರುವ ಅಂತರ್ಯುದ್ಧದಲ್ಲಿ ಸಾಯುತ್ತಿರುವ ಎರಡು ಕಡೆಯ ಶಸ್ತ್ರಧಾರಿ ಕಾದಾಳುಗಳು (ಮತ್ತು ನಾಗರಿಕರು) ನಮ್ಮವರೇ ಆಗಿದ್ದಾರೆ. ಆದರೆ ಮಾಧ್ಯಮಗಳು ಮತ್ತು ಸರ್ಕಾರ ಹಾಗೆ ಭಾವಿಸುವುದಿಲ್ಲ. ಉದಾಹರಣೆಗೆ ೨೦೧೭ರ ಏಪ್ರಿಲ್ ೨೪ರಂದು ದಕ್ಷಿಣ ಚತ್ತೀಸ್ಘಡ್ ಸುಕ್ಮಾದಲ್ಲಿ ದಿಢೀರ್ ದಾಳಿಗೆ ಬಲಿಯಾಗಿ ಸಾವನ್ನಪ್ಪಿದ ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್- ಸಿಆರ್ಪಿಎಫ್ (ಕೇಂದ್ರೀಯ ಮೀಸಲು ಪೊಲೀಸ್ ಪಡೆ) ೭೪ನೇ ಬೆಟಾಲಿಯನ್ ೨೪ ಯೋಧರ ಬಗ್ಗೆ ದೊಡ್ಡ ಮಾಧ್ಯಮಗಳ ಮತ್ತು ಅಧಿಕೃತ ಪ್ರತಿಕ್ರಿಯೆಗಳನ್ನೂ ಮತ್ತು ೨೦೧೬ರ ಅಕ್ಟೋಬರ್ ೧೩ ರಂದು ಮಲ್ಕಾನ್ಗಿರಿ (ಒಡಿಷಾ)ಯಲ್ಲಿ ಆಂಧ್ರಪ್ರದೇಶದ ಗ್ರೇ ಹೌಂಡ್ ಪೊಲೀಸರು ಪೀಪಲ್ಸ್ ಲಿಬರೇಷನ್ ಗೆರಿಲ್ಲಾ ಆರ್ಮಿ - ಪಿಎಲ್ಜಿಎ (ಜನ ವಿಮೋಚನಾ ಗೆರಿಲ್ಲಾ ಸೈನ್ಯ) ೨೪ ಮಾವೋವಾದಿ ಗೆರಿಲ್ಲಾಗಳನ್ನು ಹೊಡೆದುರುಳಿಸಿದಾಗ ತೋರಿಸಿದ ಪ್ರತಿಕ್ರಿಯೆಯ ಜೊತೆ ಹೋಲಿಸಿ ನೋಡಿ. ಮೊದಲ ಪ್ರಕರಣದಲ್ಲಿ ದೊಡ್ಡ ಮಾಧ್ಯಮಗಳ ಮತ್ತು ಅಧಿಕೃತ ಪ್ರತಿಕ್ರಿಯೆಯಲ್ಲಿ ಉನ್ಮಾದ ಮತ್ತು ಆಕ್ರೋಶಗಳೇ ಎದ್ದು ಕಾಣುತ್ತಿದ್ದರೆ ಎರಡನೇ ಪ್ರಕರಣದ ಬಗ್ಗೆ ಹರ್ಷೋತ್ಕರ್ಷ ಮತ್ತು ಆನಂದಾತಿಶಯಗಳು ತುಂಬಿತುಳುಕುತ್ತಿದ್ದವು. ಆದರೆ ಈಗ ಅಬ್ಬರಗಳು ಇಳಿದಿದ್ದು ಭಾರತದ ಪ್ರಭುತ್ವ ಮತ್ತು ಮಾವೋವಾದಿಗಳ ನಡುವೆ ನಡೆಯುತ್ತಿರುವ ಅಂತರ್ಯುದ್ಧದ ಬಗ್ಗೆ ಈಗಲಾದರೂ ಸಮತೋಲನದಿಂದ ಪರ್ಯಾಲೋಚನೆ ಮಾಡುವ ಅಗತ್ಯವಿದೆ.

ಒಂದೆಡೆ ಮಲ್ಕಾನ್ಗಿರಿಯಲ್ಲಿ  ೨೪ ಮಾವೋವಾದಿ ಗೆರಿಲ್ಲಾಗಳು ದಿಢೀರ್ ದಾಳಿಯಲ್ಲಿ ಬಲಿಯಾದರು; ಕಳೆದ ನಾಲ್ಕೈದು ವರ್ಷಗಳಿಂದ ಒಂದೇ ಪ್ರದೇಶದಲ್ಲಿ ನಿಯೋಜನೆಗೊಂಡಿದ್ದ ಕಾರಣದಿಂದ ಸಂಭವಿಸಿದ ಹಲವು ಅಚಾತುರ್ಯಗಳ ಕಾರಣದಿಂದಾಗಿ ಸುಕ್ಮಾದಲ್ಲಿ ಶಸ್ತ್ರಾಸ್ತ್ರ ಸಜ್ಜಿತವಾದ ಸಿಆರ್ಪಿಎಫ್ ಘಟಕವೊಂದು ಮಾರಣಾಂತಿಕ ದಾಳಿಗೆ ಗುರಿಯಾಯಿತು.
ಸರ್ಕಾರವು ಎಡಪಂಥೀಯ ಉಗ್ರಗಾಮಿಗಳ ಪ್ರಭಾವವಿರುವ ಪ್ರದೇಶಗಳಲ್ಲಿ ಕಾನೂನಿನ ಮತ್ತು ಸಂವಿಧಾನದ ಆಳ್ವಿಕೆಯನ್ನು ಜಾರಿ ಮಾಡುವ ಸಲುವಾಗಿಯೇ ಎಡಪಂಥೀಯ ಉಗ್ರಗಾಮಿಗಳ ವಿರುದ್ಧ ಸೆಣಸುತ್ತಿದೆಯೆಂದು ಹೇಳಿಕೊಳ್ಳುತ್ತಿದೆ. ಆದರೆ ಸರ್ಕಾರದ ಅಧಿಕೃತ ಹೇಳಿಕೆಗಳು ಯುದ್ಧದ ಪರಿಸ್ಥಿತಿ, ಸೈನಿಕ ಕಾರ್ಯಾಚರಣೆ, ಪ್ರದೇಶಗಳ ಸ್ವಾಧೀನ, ಮತ್ತು ರಸ್ತೆಯನ್ನು ಮುಕ್ತಗೊಳಿಸುವ ತಂಡ ಎಂಬಂಥ ಪದಪುಂಜಗಳಿಂದ ತುಂಬಿತುಳುಕುತ್ತಿರುತ್ತವೆ. ಪೊಲೀಸರಂತೂ ನಕ್ಸಲ್ ಸಂಬಂಧೀ ಅಪರಾಧಗಳನ್ನು ಎಸಗಿದ್ದಾರೆಂಬ ಆರೋಪದ ಮೇಲೆ ಬಸ್ತರ್ ಜೈಲುಗಳಲ್ಲಿ ಕೊಳೆಹಾಕಿರುವ ಆದಿವಾಸಿಗಳಿಗೆ ನೆರವನ್ನು ಮತ್ತು ಸಹಕಾರವನ್ನು ನೀಡಲು ಬಂದ ವಕೀಲರನ್ನು, ವರದಿಗಾರರನ್ನು ಮತ್ತು ರಾಜಕೀಯ ಹಾಗೂ ಸಾಮಾಜಿಕ ಕಾರ್ಯಕರ್ತರನ್ನು ಬೇಟೆಯಾಡುತ್ತಿದ್ದಾರೆ. ಬಸ್ತರ್ ಪ್ರದೇಶದಲ್ಲಿರುವ ಸರ್ಕಾರೀ ಪಡೆಗಳ ಸಂಖ್ಯೆ ೮೦,೦೦೦. ಆದರೆ ಮಾವೋವಾದಿಗಳ ಸಂಖ್ಯೆ ಹೆಚ್ಚೆಂದರೆ ೪೦೦೦. ಎಂದರೆ :೨೦ ಪ್ರಮಾಣದಲ್ಲಿ ಅಲ್ಲಿ ಪೊಲೀಸ್ ಪಡೆಗಳನ್ನು ಜಮಾಯಿಸಲಾಗಿದೆ. ನಿಜ ಹೇಳಬೇಕೆಂದರೆ ಬಸ್ತರ್ನಲ್ಲಿ ಭಾರತ ಸರ್ಕಾರದ ಸಶಸ್ತ್ರ ಪಡೆಗಳು ಮತ್ತು ಮಾವೋವಾದಿಗಳ ನೇತೃತ್ವದ ಗೆರಿಲ್ಲಾ ಪಡೆಗಳ ನಡುವೆ ಒಂದು ಸಾಂಪ್ರದಾಯಿಕ ಯುದ್ಧವೇ ನಡೆಯುತ್ತಿದೆಸರ್ಕಾರವು ಮಾವೋವಾದಿಗಳನ್ನು ಮಾತ್ರವಲ್ಲದೆ ಅಲ್ಲಿನ ಆದಿವಾಸಿಗಳನ್ನು ಮತ್ತು ಅವರ ನೆರವಿಗೆ ಬರುವ ಎಲ್ಲರ ಮೇಲೂ ಯುದ್ಧ ಸಾರಿದೆ. ಹೀಗಾಗಿ ವಾಸ್ತವದಲ್ಲಿ ಯಾವ ಯುದ್ಧನೀತಿಯನ್ನಾಗಲೀ, ಕಾನೂನನ್ನಾಗಲೀ ಪಾಲಿಸದ ಸರ್ಕಾರವು ತನ್ನದೇ ಆದ ಜನವರ್ಗದ ಮೇಲೆ ಒಂದು ಕ್ರೂರಯುದ್ಧವನ್ನೇ ನಡೆಸುತ್ತಿದೆ.

ಒಂದು ವೇಳೆ ಯುದ್ಧವೆಂಬುದು ಮತ್ತೊಂದು ರೀತಿಯಲ್ಲಿ ರಾಜಕೀಯದ ಮುಂದುವರೆಕೆಯೇ ಆಗಿದ್ದಲ್ಲಿ ನಾವು ಸರಳ ಪ್ರಶ್ನೆಯೊಂದನ್ನು ಕೇಳಲೇ ಬೇಕಾಗುತ್ತದೆ: ಯುದ್ಧಕ್ಕೆ ಕಾರಣವಾಗಿರುವ ಸರ್ಕಾರದ ಮತ್ತು ಮಾವೋವಾದಿಗಳ ರಾಜಕೀಯಗಳೇನು?

ಇದರ ಬಗ್ಗೆ ಸರ್ಕಾರದ ಅಧಿಕೃತ ಉತ್ತರವೇನೆಂದರೆ ತಾನು ಅಲ್ಲಿ ಅಭಿವೃದ್ಧಿಯನ್ನು ತರಲು ಪ್ರಯತ್ನಿಸುತ್ತಿದ್ದರೆ ಮಾವೋವಾದಿಗಳು ಅದನ್ನು ತಡೆಗಟ್ಟುತ್ತಿದ್ದಾರೆ. ಸರ್ಕಾರದ ಪ್ರಕಾರ ಅಭಿವೃದ್ಧಿಯೆಂದರೆ ಅಲ್ಲಿನ ಅರಣ್ಯದ ಮೂಲಕ ರಸ್ತೆಗಳನ್ನು ನಿರ್ಮಿಸುವುದು, ಶಾಲೆ ಮತ್ತು ವೈದ್ಯಕೀಯ ಸೌಕರ್ಯಗಳನ್ನು ಒದಗಿಸುವುದು ಇತ್ಯಾದಿ.. ಆದರೆ ಸರ್ಕಾರದ ಪಡೆಗಳ ಶೀಘ್ರ ಓಡಾಟಕ್ಕೆ ಅನುಕೂಲ ಮಾಡಿಕೊಡುತ್ತದೆಂಬ ಕಾರಣಕ್ಕೆ ಮಾವೋವಾದಿಗಳು ರಸ್ತೆಗಳ ನಿರ್ಮಾಣವನ್ನು ವಿರೋಧಿಸುತ್ತಿರುವುದನ್ನು ಬಿಟ್ಟರೆ ಇತರ ವಿಷಯಗಳಿಗೆ ತಡೆಯೊಡ್ಡಿದ ಪುರಾವೆಗಳಿಲ್ಲ. ಅರಣ್ಯದಿಂದ ನಕ್ಸಲೈಟರನ್ನು ಹೊರದೂಡದೆ ಗಣಿಗಾರಿಕೆ ಕ್ಷೇತ್ರದಲ್ಲಿ ದೇಶವು ವಿದೇಶಿ ಬಂಡವಾಳವನ್ನು ಆಕರ್ಷಿಸುವುದು ಸಾಧ್ಯವಿಲ್ಲವೆಂದು ಸಾಕ್ಷಾತ್ ಮಾಜಿ ಪ್ರಧಾನಿಗಳಾದ ಮನಮೋಹನ್ ಸಿಂಗ್ರವರೇ ಹೇಳಿದ್ದರು. ನರೇಂದ್ರ ಮೋದಿ ಸರ್ಕಾರವು ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. ಜಾರ್ಖಂಡ್ ಆದಿವಾಸಿಗಳಿಗೆ ರಕ್ಷಣೆ ಒದಗಿಸುತ್ತಿದ್ದ ೧೯೦೮ರ ಚೋಟಾನಾಗಪುರ್ ಗೇಣಿ ಕಾಯಿದೆಗೆ ತಿದ್ದುಪಡಿ ತಂದು ಅದನ್ನು ಸಹ ಇಲ್ಲವಾಗಿಸುತ್ತಿದೆ. ಅಷ್ಟು ಮಾತ್ರವಲ್ಲದೆ ಉತ್ತರ ಚತ್ತೀಸ್ಘಡದಲ್ಲಿ ೨೦೦೬ರ ಶೆಡ್ಯೂಲ್ಡ್ ಟ್ರೈಬ್ ಮತ್ತು ಇತರ ಅರಣ್ಯವಾಸಿಗಳ (ಅರಣ್ಯ ಹಕ್ಕುಗಳ ಮಾನ್ಯತೆ) ಕಾಯಿದೆಯ ಪ್ರಕಾರ ಆದಿವಾಸಿಗಳಿಗೆ ದತ್ತವಾಗಿದ್ದ  ಸಮುದಾಯ ಅರಣ್ಯ ಹಕ್ಕನ್ನು ಸಹ ಗಾಳಿಗೆ ತೂರಲು ಖಾಸಗಿ ಗಣಿಗಾರಿಕೆ ಕಂಪನಿಗಳಿಗೆ ಅನುವು ಮಾಡಿಕೊಟ್ಟಿದೆ. ಇದರ ಜೊತೆಗೆ ರಸ್ತೆ ನಿರ್ಮಾಣಕ್ಕೆಂದು ಅಡೆತಡೆಯಿಲ್ಲದೆ ಮರಗಳನ್ನು ಕಡಿಯುತ್ತಿರುವುದರಿಂದ ಅರಣ್ಯ ಛಾವಣಿಯೇ ಇಲ್ಲವಾಗುತ್ತಿದ್ದು ಭೂಸವೆತವೂ ಉಂಟಾಗುತ್ತಿದೆ. ಇದೇ ರೀತಿ ಪಶ್ಚಿಮ ಸಿಂಗ್ಭೂಮಿ ಅರಣ್ಯ ಪ್ರದೇಶದಲ್ಲಿ ತೆರೆದ ಕಬ್ಬಿಣ ಅದಿರು ಗಣಿಗಾರಿಕೆ ನಡೆಸಲು ಗಣಿ ಕಂಪನಿಗಳು ಕಾಲಿಟ್ಟಿದ್ದವು. ಆಗ ಅವುಗಳ ರಕ್ಷಣೆಗೆಂದು ನಿಯೋಜಿಸಲ್ಪಟ್ಟ ಸಿಆರ್ಪಿಎಫ್ ಪಡೆಗಳಿಗೆ ೧೭ ಶಿಬಿರಗಳನ್ನು ನಿರ್ಮಿಸುವಾಗಲೂ ಸಾನಂದ್ ಅರಣ್ಯಪ್ರದೇಶದಲ್ಲಿ ಇದೇ ರೀತಿಯ ಭೂ ಸವೆತ ಅರಣ್ಯ ಛಾವಣಿ ಕುಸಿತವಾಗಿತ್ತು.

ಬೆಳವಣಿಗೆಗಳು ನಮ್ಮನ್ನು ಎತ್ತ ಕೊಂಡೊಯ್ಯುತ್ತಿದೆ? ಸುಕ್ಮಾದಲ್ಲಿ ಪ್ರಾಣ ಕಳೆದುಕೊಂಡ ಯೋಧರ ಬಗ್ಗೆ ಖಂಡಿತಾ ನಾವು ದುಃಖ ಪಡಲೇ ಬೇಕು. ಏಕೆಂದರೆ ಮಲ್ಕಾನ್ಗಿರಿ ದಾಳಿಯಲ್ಲಿ ಬಲಿಯಾದ ಮಾವೊವಾದಿ ಗೆರಿಲ್ಲಾಗಳಂತೆ ಯೋಧರೂ ಸಹ ನಮ್ಮ ಸಮಾಜದ ಶ್ರಮಜೀವಿ ಮತ್ತು ಸಣ್ಣ ರೈತಾಪಿ ವರ್ಗಗಳಿಂದ ಬಂದವರೇ ಆಗಿದ್ದಾರೆ. ಆದರೆ ಸೈನಿಕರು ಮತ್ತು ಗೆರಿಲ್ಲಾಗಳು ಸಂಪೂರ್ಣ ಭಿನ್ನ ಭಿನ್ನವಾದ ಆಶಯ ಮತ್ತು ಪ್ರೇರಣೆಗಳಿಂದ ಯುದ್ಧದಲ್ಲಿ ತೊಡಗಿಕೊಂಡಿದ್ದಾರೆ. ಒಬ್ಬ ಯೋಧನು ತನ್ನ ಜೀವನವನ್ನು ಇದ್ದಿದ್ದರಲ್ಲಿ ಉತ್ತಮಗೊಳಿಸಿಕೊಳ್ಳುವ ಆಶಯವನ್ನು ಹೊತ್ತು ಸಿಆರ್ಪಿಎಫ್ ಗೆ ಸೇರುತ್ತಾನೆ. ಅದಕ್ಕೆ ತದ್ವಿರುದ್ಧವಾಗಿ ಪಿಎಲ್ಜಿಎ ಗೆರಿಲ್ಲಾ ಸಂಬಳದ ಆಸೆಯಿಂದ ಸೇರುವುದಿಲ್ಲ. ಕಸಿದುಕೊಳ್ಳಲ್ಪಟ್ಟ ತಮ್ಮ ಸಮುದಾಯದ ಜಮೀನು ಮತ್ತು ಅರಣ್ಯವನ್ನು ವಾಪಸ್ ಗಳಿಸಿಕೊಳ್ಳುವ ಆಶಯದಿಂದ ಅವರು ಪ್ರೇರಿತರಾಗಿರುತ್ತಾರೆ. ಖಂಡಿತವಾಗಿ ನಾವೆಲ್ಲರೂ ಯುದ್ಧವು ಕೊನೆಗಾಣಬೇಕೆಂದು ಆಶಿಸುತ್ತೇವೆ. ಆದರೆ ಹಾಗಾಗಬೇಕೆಂದರೆ ಬಸ್ತರ್ ಮತ್ತಿತರ ಪ್ರದೇಶಗಳಲ್ಲಿ ಆದಿವಾಸಿಗಳು ಏಕೆ ಆಕ್ರೋಶಗೊಂಡಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಅಷ್ಟು ಮಾತ್ರವಲ್ಲದೆ ಭೂಮಿ ಮತ್ತು ಅರಣ್ಯದ ಕಬಳಿಕೆಯ ವಿರುದ್ಧ ತಾವು ನಡೆಸುತ್ತಿರುವ ಹೋರಾಟದಲಿ ಅವರು ಏಕೆ ಮಾವೋವಾದಿಗಳ ನಾಯಕತ್ವದಲ್ಲಿ ವಿಶ್ವಾಸವಿಟ್ಟಿದ್ದಾರೆಂಬುದನ್ನೂ ಸಹ ನಾವು ಅರ್ಥಮಾಡಿಕೊಳ್ಳಬೇಕಾಗುತ್ತದೆ.

ಆದರೆ ಸತ್ಯವನ್ನು ಎಲ್ಲಾ ಸರ್ಕಾರಗಳು ನಿರಾಕರಿಸುತ್ತಲೇ ಬಂದಿವೆ. ಆದರೂ ೨೦೧೩ರಲ್ಲಿ ಮಾಜಿ ಗ್ರಾಮೀಣಾಭಿವೃದ್ಧಿ ಮಂತ್ರಿ ಜೈರಾಮ್ ರಮೇಶ್ ಅವರು ಅಧಿಸೂಚಿತ (ಶೆಡ್ಯೂಲ್ಡ್) ಪ್ರದೇಶಗಳಲ್ಲಿ ಮುಂದಿನ ಹತ್ತು ವರ್ಷಗಳ ಕಾಲ ಎಲ್ಲಾ ರೀತಿಯ ಗಣಿಗಾರಿಕೆಯನ್ನು ನಿಷೇಧಿಸಬೇಕೆಂದು ಒಂದು ಪ್ರಸ್ತಾಪವನ್ನು ಮುಂದಿಟ್ಟಿದ್ದರುಪ್ರಾಯಶಃ, ಅದು, ನಿಚ್ಚಳವಾಗಿರುವ ಸತ್ಯವನ್ನು ಎದುರಿಸುವಲ್ಲಿ, ಒಂದು ಉತ್ತಮ ಹೆಜ್ಜೆಯಾಗಬಹುದು.
   
ಕೃಪೆ: Economic and Political Weekly
         May 6, 2017. Vol. 52. No.18

                                                                                                                                










ಕಾಮೆಂಟ್‌ಗಳಿಲ್ಲ: