ಬುಧವಾರ, ಜುಲೈ 2, 2014

ಸ್ನೇಹಮಯಿ ಮಲಶೆಟ್ಟರು






 ಬಸವರಾಜ ಮಲಶೆಟ್ಟರು ಹೊಸಪೇಟೆ ಭಾಗದಲ್ಲಿ ಸಾವಿರಾರು ಶಿಷ್ಯರಿಗೆ ನೇರ ಗುರುಗಳು. ನಾನೊಮ್ಮೆ ಯಾವುದೋ ಸೆಮಿನಾರಿನಲ್ಲಿ ನನ್ನ ಹೆಸರೇಳಿ ಪರಿಚಯ ಮಾಡಿಕೊಂಡಾಗ, ‘ಹೋ..ಬಾರಪ್ಪಾ ನಿನ್ನ ಬರಹಗಳ್ನ ನೋಡ್ತಿರ್ತೀನಿ, ಚೊಲೊ ಬರಿತೀಯಾ, ಎಂದು ನನ್ನ ಮನೆ ಊರು ಅಪ್ಪ ಅವ್ವ ಎಲ್ಲದರ ಬಗ್ಗೆ ಕೇಳಿ ಮೊದಲ ಪರಿಚಯದಲ್ಲೆ ತುಂಬಾ ದಿನದ ಪರಿಚಿತರಂತೆ ಆಪ್ತವಾಗಿಬಿಟ್ಟರು. ಅವರದ್ದೊಂದು ಸಾದಾ ಸೀದಾ ಸ್ನೇಹಮಯಿ ವ್ಯಕ್ತಿತ್ವ.


 ‘ಅರಣಾ, ಕವನ ಗಿವ್ನ ಬರೀತಿಯ ಸರಿ, ಉಂಬಾಕ ಜೀವನಕ್ಕ ಏನಾರ ಮಾಡಕಲ್ಲ, ಯೋಜನೆ ಗೀಜನೆ ಬಾಳ ದಿನ ಕೈ ಹಿಡಿಯಲ್ಲೋ.. ಎಂದು ನಾನು ಕಂಡಾಗಲೊಮ್ಮೆ ಕೆಲಸವಿಲ್ಲದೆ ತಿರುಗುವ ನನಗೆ ವಾಸ್ತವವನ್ನು ನೆನಪಿಸುತ್ತಿದ್ದರು.

 ಎಲ್ಲಿಯೇ ಕಂಡರೂ ಭುಜದಮೇಲೆ ಎಳೆಯ ಗೆಳೆಯರಂತೆ ಕೈಹಾಕಿ, ‘ಛೋಲೋ ಬರೀತೀಯಾಪ್ಪ, ನಮಗೆ ಅದೇನೋ ಇಂಟರ್ನೆಟ್ಟು ಗಿಂಟರ್ನೆಟ್ಟು ಅರ್ಥ ಆಗಲ್ಲ. ಈಗಿನ್ ಹುಡುಗ್ರು ನೀವು, ಅವನ್ನೆಲ್ಲಾ ಕಲೀರಿ ಎಂದು ತಮ್ಮ ಶಕ್ತಿ ಮತ್ತು ಮಿತಿಗಳ ಬಗ್ಗೆ ತುಂಬಾ ಆಪ್ತವಾಗಿ ಮಾತನಾಡುತ್ತಿದ್ದರು.

 ನಾನೊಮ್ಮೆ ಸಾಣೆಹಳ್ಳಿಗೆ ಕಾವ್ಯಕಮ್ಮಟಕ್ಕೆ ಹೋಗಿದ್ದೆ. ಅಲ್ಲಿ ಮಲಶೆಟ್ಟರು ಹತ್ತು ಹದಿನೈದು ದಿನ ಮುಂಚೆಯೇ ಬಂದು ತಂಗಿದ್ದರು. ಆಗ ಅಲ್ಲಿ ಮಹದೇವ ಹಡಪದ್ ಕೂಡ ನಾಟಕವೊಂದನ್ನು ನಿರ್ದೇಶನ ಮಾಡುತ್ತಿದ್ದರು. ವಿಚಾರಿಸಲಾಗಿ ಮಲಶೆಟ್ಟರು ಶಿವಸಂಚಾರ ತಂಡಕ್ಕೆ ಬಯಲಾಟ ಕಲಿಸಲು ಸ್ವ ಇಚ್ಚೆಯಿಂದ ಬಂದಿದ್ದರು. ನಾನಾಗ ಅವರ ಬಳಿ ಮಾತಿಗೆ ಕೂತಾಗ, ‘ನೋಡ ಪಾ ನಮ್ಮ ಬಯಲಾಟನ ಇಂತ ಕ್ಯಾಲ ಇರೋ ಹುಡುಗರಿಗೆ ಕಲಿಸದೇ ಇದ್ರೆ ಮುಂದಿನ ಜಮಾನಕ್ಕ ಉಳಿಯಂಗಿಲ್ಲ ಎನ್ನುವ ಆತಂಕ ವ್ಯಕ್ತ ಪಡಿಸಿದರು. ಅಂತೆಯೇ ಯಕ್ಷಗಾನದ ಹಾಗೆ ನಮ್ಮ ಬಯಲಾಟ ಬೆಳೆಯಲಿಲ್ಲ ಎನ್ನುವುದು ಅವರ ಕೊರಗಾಗಿತ್ತು. ಇಳಿ ವಯಸ್ಸಿನಲ್ಲಿಯೂ ಆರಾಮಾಗಿ ಮನೆಯಲ್ಲಿ ಇರುವುದು ಬಿಟ್ಟು ಉತ್ಸಾಹದಿಂದ ಬಯಲಾಟ ಕಲಿಸಲು ಸಾಣೆಹಳ್ಳಿ ಮಠಕ್ಕೆ ಬಂದದ್ದು ಅವರ ಬಗೆಗಿನ ಗೌರವವನ್ನು ಇಮ್ಮಡಿಸಿತ್ತು.

  ಕಾರಣ ಜಾನಪದ ಪ್ರೊಫೆಸರುಗಳು ಲಕ್ಷಗಟ್ಟಲೆ ಸಂಬಳ ಪಡೆಯುತ್ತಿದ್ದರೂ ಬಗೆಯ ಯಾವುದೇ  ಕನಿಷ್ಠ ಬದ್ಧತೆಯನ್ನು ಉಳಿಸಿಕೊಳ್ಳದ್ದು ನನ್ನ ಕಣ್ಣೆದುರಿಗೆ ಬಂದಿತು. ಅಂತೆಯೇ ಮಲಶೆಟ್ಟರು ಜಡಗೊಂಡ  ವಿಶ್ವವಿದ್ಯಾಲಯದ ಅದ್ಯಾಪಕರುಗಳನ್ನು ಸದಾ ಬೈಯುತ್ತಿದ್ದರು. ತುಂಬಾ ಸಾತ್ವಿಕ ಸಿಟ್ಟಿನಲ್ಲಿ ಒಮ್ಮೊಮ್ಮೆವಿಶ್ವವಿದ್ಯಾಲಯಗಳಲ್ಲಿ ದುಡ್ಡು ತಿನ್ನೋ ಕಳ್ಳರಾ ಬಾಳ ಸೇರಿಕೊಂಡಾರ, ಇನ್ನ ಇಂತವರಿಂದ ಏನು ಸಂಶೋದನೆ ನಡೀತಾತೋ ತಮ್ಮ ಎಂದು ನಕ್ಕು ಮಾತಿನ ಗಂಭೀರತೆಯನ್ನು ತಿಳಿ ಹಾಸ್ಯಕ್ಕೆ ಇಳಿಸುತ್ತಿದ್ದರು. ಇದರ ಹಿಂದೆ ಅವರು ಸಂಶೋಧನೆಗೆ ತೊಡಗಿಕೊಳ್ಳಬೇಕು, ಸೋಮಾರಿಗಳಾಗಬಾರದು ಎನ್ನುವ ಸದಾಶಯ ಇತ್ತೇ ಹೊರತು, ಸಿನಿಕತೆ ಇರಲಿಲ್ಲ.

 ಮಲಶೆಟ್ಟರು ಜಾನಪದ ಕುರಿತಂತೆ ಕೊನೆಗಾಲದವರೆಗೂ ಮಾತನಾಡುತ್ತಿದ್ದರು. ಜಾನಪದ ಸಂಗೀತದ ಬಗ್ಗೆ ಅವರಿಗೆ ತುಂಬಾ ಆಳವಾದ ತಿಳುವಳಿಕೆ ಇತ್ತು. ಅದನ್ನು ಅವರು ಬರೆದ ಜಾನಪದ ವಾದ್ಯಗಳು ಕೃತಿಯಿಂದ ತಿಳಿಯಬಹುದು. ಬಹುಶಃ ಜನಪದ ಸಂಗೀತದ ಬಗ್ಗೆ ಅವರಷ್ಟು ಆಳವಾಗಿ ತಿಳಿದ ಜಾನಪದ ವಿದ್ವಾಂಸರು ವಿರಳವೆಂದೇ ಹೇಳಬೇಕು. ಮುಖ್ಯವಾಗಿ ಉತ್ತರ ಕರ್ನಾಟಕದ ಜನಪದ ನಾಟಕ ಪರಂಪರೆಯ ಬಗ್ಗೆ ಹೆಚ್ಚು ಆಸಕ್ತರಾಗಿದ್ದರು. ಸಂಗ್ಯಾಬಾಳ್ಯ, ಕೃಷ್ಣಪಾರಿಜಾತ ನಾಟಕಗಳ ಬಗ್ಗೆ ರಸಮಯವಾಗಿ ಮಾತನಾಡುತ್ತಿದ್ದರು. ಬಹುಶಃ ಶಿವಸಂಚಾರಕ್ಕೆ ನಾಟಕ ಕಲಿಸಲು ಹೋದದ್ದು ಆಧುನಿಕ ನಾಟಕ ಪರಂಪರೆಯಲ್ಲಿ ಬಯಲಾಟವನ್ನು ಒಗ್ಗಿಸುವ ಕೆಲಸಕ್ಕೆ ಕೈ ಹಾಕಿದ್ದರು ಅನ್ನಿಸುತ್ತದೆ.

 ಮಲಶೆಟ್ಟರ ಜಾನಪದ ಕೆಲಸಕ್ಕೆ ತಕ್ಕನಾದ ಗೌರವ ಸಿಗಲಿಲ್ಲವೆನಿಸುತ್ತದೆ. ಅಥವಾ ಅವರೂ ಯಾವುದೇ ಅವಕಾಶಗಳಿಗೂ ದುಂಬಾಲು ಬಿದ್ದಂತೆ ಕಾಣುವುದಿಲ್ಲ. ಮುಖ್ಯವಾಗಿ ಕರ್ನಾಟಕ ಜಾನಪದ ವಿದ್ವತ್ತಿನಲ್ಲಿ ಪಶ್ಚಿಮದ ಸಿದ್ದಾಂತಗಳ ಬೆನ್ನಿಗೆ ಬಿದ್ದ ವಿದ್ವಾಂಸರಿಗಿಂತ, ಇವರು ಕ್ರಿಯಾಶೀಲರಾಗಿದ್ದರು. ಜನಸಮುದಾಯಗಳ ಜತೆ ಬೆರೆಯುವ ಬೆಸೆಯುವ ಗುಣವನ್ನು ಕೊನೆಗಾಲದವರೆಗೂ ಉಳಿಸಿಕೊಂಡಿದ್ದರು. ಹಾಗಾಗಿಯೇ ಎಲ್ಲಿಯೇ ಮಲಶೆಟ್ಟರು ಇದ್ದರೂ ಅಲ್ಲೊಂದು ಜನರ ಗುಂಪಿರುತ್ತಿತ್ತು, ಗುಂಪಿನಿಂದ ನಗುವಿನ ಅಲೆಗಳು ಏಳುತ್ತಿದ್ದವು. ಅಷ್ಟರ ಮಟ್ಟಿಗೆ ಜೀವನ ಪ್ರೀತಿಯನ್ನು ಮೈಗೂಡಿಸಿಕೊಂಡಿದ್ದರು.

..ಅರುಣಾ..ಮಗಳು ಹೆಂಗೈದಾಳ, ಕೂಸು ಅರಾಮೈತಿಲ್ಲ,  ಎನ್ನುವ ಆಪ್ತವೆನ್ನಿಸುವ ಮಾತುಕತೆ ಈಗಲೂ ಕಿವಿಯಲ್ಲಿ ರಿಂಗಣಿಸುತ್ತವೆ. ಇಂತಹ ಆಪ್ತತೆಯ ಕಾರಣಕ್ಕೆ ಸ್ನೇಹಿತರಂತೆ ಹೆಗಲ ಮೇಲೆ ಕೈ ಹಾಕಿ ನಡೆದಾಡುತ್ತಿರುವ ಮಲಶೆಟ್ಟರು, ನೆನಪುಗಳಲ್ಲಿ ಸದಾ ಹಸಿರಾಗಿರುತ್ತಾರೆ.

ಹಿರಿ ಜೀವಕ್ಕೆ ನನ್ನ ನಮನ.

2 ಕಾಮೆಂಟ್‌ಗಳು:

ಸಿದ್ಧರಾಮ ಹಿರೇಮಠ ಹೇಳಿದರು...

ಅರುಣ್, ನಿಮ್ಮ ಬರಹ ಆಪ್ತವಾಗಿದೆ. ಡಾ.ಬಸವರಾಜ ಮಲಶೆಟ್ಟರು ಎಲ್ಲರೊಂದಿಗೂ ಅಷ್ಟೇ ಆತ್ಮೀಯವಾಗಿ, ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಕೆಲವು ತಿಂಗಳುಗಳ ಹಿಂದೆ ಒಂದು ಕಾರ್ಯಕ್ರಮದಲ್ಲಿ ಭೇಟಿಯಾದಾಗ, ನೀವು ಹೇಳಿದಂತೆಯೇ ನನ್ನ ಹೆಗಲ ಮೇಲೆ ಕೈ ಹಾಕಿ ’ಸಿದ್ರಾಮಾ ನಾವು ಮಾತ್ನಾಡಿ, ಮಾತ್ನಾಡಿನೇ ಟೈಮ್ ಹಾಳು ಮಾಡಿಬಿಟ್ವಿ, ಓದಾಕಾ ಅಗ್ಲಿಲ್ಲ ನೋಡ್, ಇನ್ ಮ್ಯಾಲೆ ಮಾತ್ನಾಡೋದ್ ಕಡಿಮಿ ಮಾಡಿ ಓದ್ಬೇಕಂತ ಮಾಡೀನಿ, ಓದೋದ್ಕಿಂತ ಮಾತ್ನಾಡೋದ ಜಾಸ್ತಿ ಮಾಡೇವಿ ಅಂತ ಅನ್ಸಾಕತ್ತೈತಿ’ ಎಂದು ಮನಬಿಚ್ಚಿ ಮಾತನಾಡಿದರು. ಯಾರೊಂದಿಗೂ ಮಾತನಾಡದ ತಾಣವ ಸೇರಿಬಿಟ್ಟರು.

ಪುರುಷೋತ್ತಮ ಬಿಳಿಮಲೆ ಹೇಳಿದರು...

Thanks for a good tribute. He was a scholar, friend and activist. His experiment in doddata is memorable. I lost one of my good friend