ಭಾನುವಾರ, ಜುಲೈ 27, 2014

ಕೊರಗ ಸಮುದಾಯದ ಚಿತ್ರಗಳು ಭಾಗ-5


ವಿಶ್ವ ಆದಿವಾಸಿ ದಿನಾಚರಣೆ ಮೈಸೂರಿನಲ್ಲಿ

ಆದಿವಾಸಿಗಳ ಸಾಂಸ್ಕೃತಿಕ ಆಚಾರ ವಿಚಾರಗಳ ಮೇಲೆ ಬೆಳಕು ಚೆಲ್ಲುವ 'ವಿಶ್ವ ಆದಿವಾಸಿ ದಿನಾಚರಣೆ' ಆಗಸ್ಟ್ 8 ಮತ್ತು 9 ರಂದು ಮೈಸೂರಿನಲ್ಲಿ ಏರ್ಪಡಿಸಲಾಗಿದೆ. ಆದಿವಾಸಿಗಳ ಮೇಲಿನ ದೌರ್ಜನ್ಯ ನಿರಂತರವಾಗಿದ್ದು ಈ ಬಗ್ಗೆ ಆದಿವಾಸಿಗಳನ್ನು ಜಾಗೃತಗೊಳಿಸುವ ಮತ್ತು ಸರಕಾರದ ಗಮನ ಸೆಳೆಯುವ ಪ್ರಯತ್ನವನ್ನು ಎರಡು ದಿನಗಳ ಕಾಲ ಮಾಡಲಾಗುವುದೆಂದು 'ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್'ನ ರಾಜ್ಯ ಉಪಾಧ್ಯಕ್ಷ ಎಸ್ ಎನ್ ರಾಜಾರಾವ್ ತಿಳಿಸಿದ್ದಾರೆ.

ಮಡಿಕೇರಿಯಲ್ಲಿ ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ವಿವರ ನೀಡಿದ ಅವರು, ಸಮಾರಂಭದಲ್ಲಿ ರಾಜ್ಯದ ಎಲ್ಲಾ ಆದಿವಾಸಿ ಬುಡಕಟ್ಟು ಜನಾಂಗದ ಸಂಗಮವಾಗಲಿದ್ದು ಆ. 8ರಂದು ವಿಚಾರ ಸಂಕಿರಣ ಆ. 9ರಂದು ಸಮಾರೋಪ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಸಮಾಜ ಕಲ್ಯಾಣ ಸಚಿವ ಎಚ್ ಆಂಜನೇಯ, ಕೇಂದ್ರ ಸಚಿವ ಸದಾನಂದ ಗೌಡ, ಮೈಸೂರು ಮತ್ತು ಕೊಡಗು ಜಿಲ್ಲೆಯ ಶಾಸಕರು ಹಾಗು ಸಂಸದರು ಪಾಲ್ಗೊಳ್ಳಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಮಿಟ್ಟು ರಂಜಿತ್, ಬಿ ಜಿ ತಮ್ಮಯ್ಯ ಹಾಗು ಮೋಹನ್ ಉಪಸ್ಥಿತರಿದ್ದರು.ಆದಿವಾಸಿಗಳು, ಅರಣ್ಯ ಕಾಯಿದೆಗಳು ಮತ್ತು ಕೊರಗರ ಹೆಚ್ಚುಗಾರಿಕೆ

ಆದಿವಾಸಿಗಳೇ ಈ ದೇಶದ ಮೂಲನಿವಾಸಿಗಳು. ಮೂಲನಿವಾಸಿಗಳೇ ಈ ದೇಶದ ಅರಣ್ಯ ಸಂರಕ್ಷಕರು. ಅವರೇ ಕಾಡಿನ ಸಂಚಾಲಕರು. ಆದರೆ, ಶತ ಶತಮಾನಗಳಿಂದ ಕಾಡನ್ನು ಬದುಕಾಗಿಸಿ ಪರಿವರ್ತಿಸಿಕೊಂಡ ಆದಿವಾಸಿಗಳನ್ನು - 'ಅರಣ್ಯ ಸಂರಕ್ಷಣಾ ಕಾಯಿದೆ', 'ವನ್ಯ ಜೀವಿ ಸಂರಕ್ಷಣಾ ಕಾಯಿದೆ', 'ಭೂ ಸ್ವಾಧೀನ ಕಾಯಿದೆ' ಮತ್ತು ಅಣೆಕಟ್ಟುಗಳ ನಿರ್ಮಾಣದ ಹೆಸರಿನಲ್ಲಿ ಕಾಡಿನಿಂದ ಒಕ್ಕಲೆಬ್ಬಿಸಲಾಯಿತು. ಆ ಮೂಲಕ ಆದಿವಾಸಿಗಳು ಕಾಡಿನಲ್ಲಿ ಬದುಕುವ ಹಕ್ಕನ್ನೇ ಕಸಿದುಕೊಳ್ಳಲಾಯಿತು.

ಈ ದೇಶದಲ್ಲಿ ಒಟ್ಟು ಜನಸಂಖ್ಯೆಯಲ್ಲಿ 600ಕ್ಕೂ ಹೆಚ್ಚು ಆದಿವಾಸಿ ಪಂಗಡದ 7.5 ಕೋಟಿಗೂ ಹೆಚ್ಚು ಜನರಿದ್ದಾರೆ. ಅದರಲ್ಲಿ, 'ಕೊರಗ ಆದಿವಾಸಿ ಬುಡಕಟ್ಟು ಪಂಗಡ'ವೂ ಸೇರಿ ಒಟ್ಟು 32 ಪಂಗಡಗಳನ್ನು ಭಾರತ ಸರಕಾರ 'ಈ ದೇಶದ ಮೂಲನಿವಾಸಿ'ಗಳೆಂದು ಮಾನ್ಯ ಮಾಡಿದೆ.

ಕರ್ನಾಟಕ ರಾಜ್ಯದ ಬರೇ 9 ಜಿಲ್ಲೆಗಳ 26 ತಾಲೂಕುಗಳಲ್ಲಿ ವಿವಿಧ ಆದಿವಾಸಿ ಪಂಗಡಕ್ಕೆ ಸೇರಿದ 2 ಲಕ್ಷಕ್ಕೂ ಅಧಿಕ ಆದಿವಾಸಿಗಳಿದ್ದಾರೆ. ಬಹುತೇಕ ಪಶ್ಚಿಮ ಘಟ್ಟವೇ ಇವರ ಆಶ್ರಯ ತವರು. ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಕೊಡಗು, ಮೈಸೂರು, ಚಾಮರಾಜನಗರ, ಉತ್ತರ ಕನ್ನಡ, ಶಿವಮೊಗ್ಗ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಆದಿವಾಸಿಗಳು ಚದುರಿ ಹೋಗಿದ್ದಾರೆ.

ಕರ್ನಾಟಕದಲ್ಲಿರುವ ಆದಿವಾಸಿ ಪಂಗಡಗಳೆಂದರೆ - ಜೇನು ಕುರುಬ, ಬೆಟ್ಟ ಕುರುಬ, ಯರವ, ಪಣಿಯ, ಇರುಳಿಗ, ಸೋಲಿಗ, ಕೊರಗ, ಹಲಸರು, ಕಣಿಯನ್ ಮತ್ತು ಮಲೆಕುಡಿಯರು. ಕರ್ನಾಟಕದಲ್ಲಿಯೇ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಆದಿವಾಸಿಗಳ ವಾಸದ ದಟ್ಟ ಕಾಡುಗಳಿವೆ. ಇವರಿಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ತಮ್ಮದೇ ಆದ ಸಾಂಸ್ಕೃತಿಕ ಬದುಕಿದೆ. ಇವರಿಗೆಲ್ಲ ಅರಣ್ಯವೇ ಪ್ರಪಂಚ. ಅರಣ್ಯದ ಉತ್ಪನ್ನಗಳನ್ನು ಬಳಸಿಕೊಂಡೇ, ಅರಣ್ಯವನ್ನು ಪೋಷಿಸಿಕೊಂಡೇ ಬದುಕಿದ್ದಾರೆ. ಆದರೆ, ಅರಣ್ಯ ಸಂರಕ್ಷಣಾ ಕಾಯಿದೆ ಮತ್ತು ವನ್ಯ ಜೀವಿ ಸಂರಕ್ಷಣಾ ಕಾಯಿದೆಗಳು - ಈ ಆದಿವಾಸಿಗಳ ಬದುಕುವ ಹಕ್ಕನ್ನು ಕಸಿದುಕೊಂಡಿತು. ಕಾಡು ಉತ್ಪನ್ನಗಳನ್ನು ಬಳಸುವುದನ್ನು ಮತ್ತು ಬೇಟೆಯಾಡುವುದನ್ನು ನಿಷೇಧಿಸುವ ಮೂಲಕ ಆದಿವಾಸಿಗಳ ಸ್ವಚ್ಛಂದ ಕಾಡಿನ ಬದುಕಿಗೆ ಕೊಡಲಿ ಏಟು ಹಾಕಲಾಯಿತು. ಅಲ್ಲದೆ, ಅವರನ್ನು ತಮ್ಮ ಮೂಲ ನಲೆಯಿಂದ ಸ್ಥಳಾಂತರಿಸುವ ಮೂಲಕ ತಮ್ಮದೇ ಕಾಡಿನಲ್ಲಿ ತಮ್ಮನ್ನು ಪರಕೀಯರನ್ನಾಗಿಸಿ, ಬದುಕುವ ಸ್ವಾತಂತ್ರ್ಯವನ್ನೇ ಮೊಟಕುಗೊಳಿಸಲಾಯಿತು. ಹೀಗೆ, ಅಡವಿ ಮಕ್ಕಳನ್ನು ಸ್ಥಳಾಂತರಿಸಿದ ಸರಕಾರ, ಅವರಿಗೆ ಸರಿಯಾದ ಪುನರ್ವಸತಿ ಕಲ್ಪಿಸುವ ಯೋಜನೆಗಳನ್ನು ಕಾರ್ಯರೂಪಗೊಳಿಸಲಿಲ್ಲ. ಹಾಗಾಗಿ, ಬದುಕುವ ಪರ್ಯಾಯ ಮಾರ್ಗೋಪಾಯಗಳಿಲ್ಲದೇ ಇದ್ದುದರಿಂದ ಬಹುತೇಕ ಗಿರಿಜನರು ಸಾವಿನ ದವಡೆಗೆ ಸಿಲುಕಿದರು. ಇದಕ್ಕೊಂದು ಉತ್ತಮ ನಿದರ್ಶನ - 1970ರಲ್ಲಿ ಮೈಸೂರು ಜಿಲ್ಲೆಯ ದಡದಹಳ್ಳಿ ಗಿರಿಜನ ಕಾಲೋನಿಯಲ್ಲಿ ಹಸಿವಿನಿಂದ 80 ಮಕ್ಕಳು ಸಾವನ್ನಪ್ಪಿದ ಪ್ರಕರಣ. ಹೀಗೆ ಅರಣ್ಯ ಕಾಯಿದೆಗಳು ಆದಿವಾಸಿಗಳ ಬದುಕಿನ ಮೌಲ್ಯಗಳನ್ನು, ಕಾಡಿನೊಂದಿಗಿನ ಚೈತನ್ಯಯುತ ಸಂಸ್ಕೃತಿಯನ್ನು, ಕಾಡಿನ ಅನೋನ್ಯ ಸಂಬಂಧವನ್ನು ಬುಡಮೇಲು ಮಾಡಿದವು.

ಪ್ರತಿಕಾರ?
ಹೀಗೆ, ಕಾಡಿನ ಸ್ವಾತಂತ್ರ್ಯ ಕಳೆದು ಕೊಂಡ ಆದಿವಾಸಿಗಳಲ್ಲಿ ಕೆಲವು ಯುವಕರು ನಕ್ಸಲ್ ಕ್ರಾಂತಿಯತ್ತ ಆಕರ್ಷಿತರಾದರು. ಹಾಗು ಆದಿವಾಸಿಗಳ ಹಾಡಿಗೆ ಭೇಟಿ ನೀಡುತ್ತಾ ಅವರ ಮನಸ್ಸಿಗೆ ಸಲ್ಲದ, ಹುಸಿ ನೆತ್ತರ ಕ್ರಾಂತಿಯ ಬೀಜ ಬಿತ್ತಲು ಆರಂಭಿಸಿದರು. ಆದರೆ, ಮುಗ್ಧ ಮನಸ್ಸಿನ ಆದಿವಾಸಿ ಬಂಧುಗಳು ಆ ಕ್ರಾಂತಿಯ ವಿಚಾರದಿಂದ ದೂರವೇ ಉಳಿದರು. ಅದಕ್ಕೆ ಉತ್ತಮ ನಿದರ್ಶನವೇ ಕೊರಗ ಜನಾಂಗ. ಎಷ್ಟೇ ತೊಂದರೆ ಅನುಭವಿಸಿದರೂ, ತಮ್ಮ ಆದರ್ಶದ ಬದುಕಿಗೆ ವಿಮುಖವಾಗಿ ನಡೆದಿಲ್ಲ. ರಕ್ತದ ಕೋಡಿ ಹರಿಸಿಲ್ಲ. ಒಬ್ಬನೇ ಒಬ್ಬ ಕೂಡಾ ನಕ್ಸಲೇಟ್ ಆಗಿಲ್ಲ. ಇದು ಕೊರಗರ ಹೆಚ್ಚುಗಾರಿಕೆ.
- ಹೃದಯ


ಆ ಮಾದರಿಯ ನಡತೆ...
ಇದೊಂದು ಅಭಿಮಾನದ ವಿಷಯವೇ. ಇಂದಿನ ಕೊರಗ ಯುವ ಜನತೆ ಎದೆ ತಟ್ಟಿ ಹೇಳಬೇಕಾದ ವಿಷಯ ಮತ್ತು ಅದನ್ನು ತಮ್ಮ ಪರಂಪರೆಯಾಗಿ, ತಮ್ಮ ವಂಶದ ಕುರುಹಾಗಿ, ಮಾದರಿಯಾಗಿ ತೆಗೆದುಕೊಳ್ಳಬೇಕಾದ ವಿಷಯ. ಅದೇನೆಂದರೆ ಕೊರಗ ಸಮುದಾಯದ ಯಾರೇ ಹಿರಿಯರ ನಡೆ/ನಡತೆಯನ್ನು ಗಮನಿಸಿದರೂ, ಅವರು ತಮ್ಮ ದಾರಿಯಲ್ಲಿನ ಕಲ್ಲು ಮುಳ್ಳುಗಳನ್ನು ಅಥವಾ ಗಾಜಿನ ಚೂರುಗಳನ್ನು ಬದಿಗೆ ಸರಿಸಿಯೇ ಮುಂದುವರಿಯುತ್ತಾರೆ. ಅದು ತನಗೆ ಅಥವಾ ಆ ದಾರಿ ಹೋಕರಿಗೆ ತೊಂದರೆಯಾಗಬಾರದೆಂಬ ದೃಷ್ಠಿಯಿಂದ. ಹಾಗಂತ ಈ ವಿಚಾರವನ್ನು ಇತರರು ಕೇವಲವಾಗಿ ಪರಿಗಣಿಸಬಹುದು. ಇದು ಎಲ್ಲರೂ ಅನುಸರಿಸುವ ನಡೆ ಎಂದು ಕುಹಕವಾಡಬಹುದು. ಆದರೆ, ಕೊರಗರ ಈ ನಡೆ ಇಂದು ನಿನ್ನೆಯದಲ್ಲ. ವಂಶಪಾರಂಪರ್ಯದ ನಡೆ ಮತ್ತು ಇದು 'ಕಾಡಿನ ನಡೆ'. ಯಾಕೆಂದರೆ ಕಾಡಿನಲ್ಲಿ ನಡೆಯಬೇಕಾದರೆ ಕಲ್ಲು ಮುಳ್ಳುಗಳನ್ನು ಬದಿಗೆ ಸರಿಸಿಯೇ ನಡೆಯಬೇಕು. ಕೊರಗರಿಗೆ ಕಾಡೇ ಬದುಕಾದುದರಿಂದ ಆ ನಡೆ ವಂಶಪಾರಂಪರ್ಯದ ನಡೆಯಾಗಿ ಮುಂದುವರಿದಿದೆ. ಆದರಿಂದ ಈಗಲೂ ದಾರಿಯಲ್ಲಿನ ಕಲ್ಲು ಮುಳ್ಳುಗಳನ್ನು ಸರಿಸಿಯೇ ಮುಂದುವರಿಯುತ್ತಾರೆ ಮತ್ತು ಅದನ್ನು ತಮ್ಮ 'ಧರ್ಮ' ಎನ್ನುತ್ತಾರೆ. ಆ ನಡೆ/ನಡತೆಯನ್ನು ಹಿರಿಯರಲ್ಲಿ ಈಗಲೂ ಕಾಣಬಹುದು. ಆದರೆ, ಕಿರಿಯರಲ್ಲಿ?! ಅದಕ್ಕಾಗಿಯೇ ಆ 'ಮಾದರಿಯ ನಡೆ'ಯನ್ನು ಇಂದಿನ ಯುವಜನತೆ ಮಾದರಿಯಾಗಿ ಮುಂದುವರಿಸಬೇಕು. ಯಾಕೆಂದರೆ ಅದು ನಮ್ಮ ಧರ್ಮ.
- ಹೃದಯ
ಕೊರಗರ ಮುಗ್ಧತೆಯೇ ಬಲಿಪಶುವಾಯಿತೆ?

ಸಾಮಾಜಿಕ ಬದುಕು ಮಾನವ ನಿರ್ಮಿತ ಅದ್ಭುತ ವ್ಯವಸ್ಥೆ. ಈ ವ್ಯವಸ್ಥೆಯಲ್ಲಿ ಮೇಲು - ಕೀಳು ಭಾವನೆಗಳು ಯಾಕೆ ಹುಟ್ಟಿ ಕೊಂಡಿತು ಎಂಬ ಪ್ರಶ್ನೆ ಹೃದಯವಂತರ ಮನವ ಕಾಡುತ್ತದೆ. ಇಂದು ಇಂತಹ ಭೇದಗಳು ನಿರ್ಧಾರವಾಗಲು ಜನರ ವೃತ್ತಿ ಕಾರಣವೆ? ಶಿಕ್ಷಣ ಕಾರಣವೆ? ಬಡತನ ಕಾರಣವೆ? ಅಥವಾ ಜಾತಿ ಕಾರಣವೆ? ಹೌದು. ಇವೆಲ್ಲವುಗಳ ಜೊತೆ ಇನ್ನೂ ಅನೇಕ ವಿಚಾರಗಳಿಂದ ಪ್ರತಿಫಲಿತಗೊಂಡ ಈ ಮೇಲು ಕೀಳು ಭಾವನೆ ಇಂದು ಕೆಲವೊಂದು ಮುಗ್ಧ ಜನಾಂಗಕ್ಕೆ ಭಾರೀ ಹೊಡೆಕವಾಗಿದೆ. ಇಂತಹ ಭಾವನೆಗಳಿಗೆ ಬಲಿಪಶುವಾಗಿರುವ ಜನಾಂಗಗಳಲ್ಲಿ ಕೊರಗ ಜನಾಂಗವೂ ಒಂದಾಗಿದೆ. ಜಾತಿ ವ್ಯವಸ್ಥೆಯ ಕಟ್ಟು ಪಾಡುಗಳು ಇಷ್ಟೊಂದು ಅನ್ಯಾಯ ಮಾಡಿದೆ ಎಂಬುದು ಗಂಭೀರ ವಿಚಾರವಾಗಿದೆ.

ಜಾತಿ ವ್ಯವಸ್ಥೆಯಲ್ಲಿ ನಲುಗಿರುವ ಭಾರತೀಯ ಸಮಾಜದಲ್ಲಿ ಇಂದು ಅನೇಕ ಜಾತಿಗಳು ತಮ್ಮ ಸಾಮರ್ಥ್ಯದಿಂದ ಮುಂದೆ ಬಂದಿರುವುದಾದರೆ, ಈ ಕೊರಗ ಜನಾಂಗ ಯಾಕೆ ಮುಂದುವರಿದಿಲ್ಲ? ಹೌದು. ಈ ಜನಾಂಗವೂ ಅಭಿವೃದ್ಧಿಯತ್ತ ಹೊರಟಂತಿದೆ. ಆದರೆ, ಉಳಿದ ಜಾತಿಗಳಿಗಿಂತ ಬಹಳಷ್ಟು ಹಿಂದುಳಿದಿದ್ದ ಕಾರಣ, ಅವರ ಸಮನಾಗಿ ಓಡಲು ಅಸಾಧ್ಯವಾಗಿ ಇನ್ನೂ ಪ್ರಯತ್ನಿಸುವುದೇ ಆಗಿದೆ. ಇದೀಗ ಮೇಲ್ವರ್ಗದ ಸ್ಥಾನದಲ್ಲಿರುವ ಜಾತಿ ಭಾಂದವರೂ ಹಿಂದೆ ಬಿದ್ದಿರುವ ತಮ್ಮ ಜೊತೆಗಾರ ಜಾತಿಗಳನ್ನು ತುಳಿಯುವವರಾದರಿಂದ ಆ ಬಡಪಾಯಿ ಜಾತಿಗಳು ಮೇಲೇರುವುದಾದರೂ ಹೇಗೆ?

ಮುಗ್ಧ ಬಡವರಾದ ಕೊರಗರಿಗೂ ಮನಸ್ಸು ಎಂಬುದು ಇದೆ. ಅವರೂ ಭವಿಷ್ಯದ ಕನಸು ಕಾಣುತ್ತಾರೆ. ಅವರ ಮನಸ್ಸೂ ಎಲ್ಲೋ ಒಂದೆಡೆ ನೋವಿನಿಂದ ಈ ರೀತಿ ಕೂಗುತ್ತಿರಬಹುದು.. "ಅಯ್ಯೋ, ನಾವೇನು ತಪ್ಪು ಮಾಡಿದ್ದೇವೆ? ನಮ್ಮನೇಕೆ ಈ ರೀತಿ ದೂರ ಮಾಡುತ್ತಾರೆ? ಎಲ್ಲರಿಗೂ ನ್ಯಾಯವಿರುವಾಗ ನಮಗೆ ಅದೂ ದೂರವಾಯಿತೇಕೆ? ನಮ್ಮ ಮನಸ್ಸನೇಕೆ ಚುಚ್ಚಿ ಹಿಂಸಿಸುತ್ತೀರಿ? ನಿಮಗೂ ಆತ್ಮಸಾಕ್ಷಿ ಎನ್ನುವುದಿಲ್ಲವೆ? ಈ ನೋವು ನಿಮಗೆ ತಿಳಿಯದೆ?" ಇತ್ಯಾದಿ ವೇದನೆಗಳಿಂದ ತುಂಬಿದ ಆ ಆತ್ಮ ಕಿರುಚಿದರೂ ಮೇಲ್ವರ್ಗ ಎನಿಸಿಕೊಂಡ ಆತ್ಮಗಳಿಗೆ ಅದು ಕೇಳಿಸದು! ಹಾಗಾಗಿ, ಈ ಸಮಾಜದ ಮುಖ್ಯವಾಹಿನಿ ಎಂದಿಗೂ ತನ್ನ ನಿಲುವನ್ನು ಬದಲಿಸಲಾರದೆ ಎಂಬುದು ಚಿಂತನೀಯವಾಗಿದೆ.

ಮನಸ್ಸಿನ ಮುಗ್ಧತೆ ಎಲ್ಲಿದೆ ಅಂದರೆ ಇಂದು ಅದು ಈ ಕೊರಗ ಜನಾಂಗದಲ್ಲಿ ಮನೆ ಮಾಡಿದೆ. ಈಗಿನ ಆಧುನಿಕ ಕಾಲದಲ್ಲಿ ಅಪಮೌಲ್ಯವಾಗಿರುವ ಮುಗ್ಧತೆ ಇನ್ನೂ ಇವರ ಬಳಿ ಉಳಿದಿರುವುದು ಯಾಕೆ? ಇದು ಹೊಗಳುವಂತದ್ದೆ. ಇಂದು ಇವರು ಯಾಕೆ ದುಷ್ಟರಾಗಿಲ್ಲ? ಕಳ್ಳ ಕದೀಮರಾಗಿಲ್ಲ? ಈ ವಿಚಾರವನ್ನು ನಮ್ಮ ಚಿಂತನಾಲಹರಿಯಲ್ಲಿ ಓಡಿಸಿದಾಗ ಉತ್ತರ ಸಿಗದಿರದೆ? ಹೌದು. ಇದುವೇ ಈ ಕೊರಗ ಜನಾಂಗದಲ್ಲಿ ಪ್ರಾಮಾಣಿಕತೆ, ಮುಗ್ಧತೆ ಇದೆ ಎಂಬುದಕ್ಕೆ ಸಾಕ್ಷಿ. ಇದನ್ನು ಸಮಾಜದ ಮುಖ್ಯ ವಾಹಿನಿಯ ಬಾಂಧವರು ತಿಳಿದುಕೊಳ್ಳರೇ? ಈ ಮುಗ್ಧತೆಯಿಂದಾಗಿ ಇಡೀ ಜನಾಂಗ ನಿರಂತರವಾಗಿ ಸಾಮಾಜಿಕ ತುಳಿತಕ್ಕೊಳಗಾಗಲು ಕಾರಣ ಎಂದರೆ ತಪ್ಪಾಗದು. ಇಲ್ಲಿ ಹಿರಿಯರೊಬ್ಬರು ಹೇಳಿದ ಮಾತು ಪ್ರಸ್ತುತವೆನಿಸುತ್ತದೆ - " ಬಲಿ ಕೊಡುವವರು ಎಂದಿಗೂ ಕುರಿ ಕೋಳಿಗಳನ್ನೇ ಬಲಿ ಕೊಡುತ್ತಾರೆ. ವಿನಹಃ ಹುಲಿ ಸಿಂಹಗಳನ್ನಲ್ಲ!" ಅಂತೆಯೇ ಸಮಾಜದಲ್ಲಿ ದೌರ್ಜನ್ಯ ದಬ್ಬಾಳಿಕೆಗಳಿಗೆ ಬಲಿಯಾಗುವವರೂ ಮುಗ್ಧರೇ ಆಗಿರುತ್ತಾರೆ.

ಸಮಾಜದಲ್ಲಿ ಈ ಅನ್ಯಾಯವನ್ನು ಸರಿಪಡಿಸಲು ಈಗ ಎಚ್ಚೆತ್ತುಗೊಂಡಿರುವುದು ಸಾಕೆ? ಇನ್ನೂ ಯಾರು ಎಚ್ಚೆತ್ತುಕೊಳ್ಳಬೇಕು? ಸರಕಾರ ಎಚ್ಚರವಾಗಬೇಕಾ? ಅಥವಾ ಈ ಬಲಿಪಶು ಜನಾಂಗವೇ ಹೋರಾಡಬೇಕೆ? ಈ ಪ್ರಶ್ನೆಗೆ ಉತ್ತರ ಸುಲಭಸಾಧ್ಯವೆ? ಸಾಧ್ಯವಿದೆ. ಇದು ಸಮಾಜದಲ್ಲಿ ಕಾರ್ಯನಿರ್ವಹಿಸುವ ಎಲ್ಲ ವ್ಯವಸ್ಥೆಗಳೂ ಸಮನ್ವಯ ರೀತಿಯಲ್ಲಿ ಬದಲಾವಣೆಗೊಂಡು ಮುಂದುವರಿದಾಗ ಈ ಜನಾಂಗದ ಸಮಾಜಿಕ ಭವಿಷ್ಯದಲ್ಲಿ ಒಂದು ಉಜ್ವಲ ಆಶಾಕಿರಣ ಕಾಣಬಹುದು.
- ಸಚ್ಚು ಉಡುಪಿಕಾಮೆಂಟ್‌ಗಳಿಲ್ಲ: