ಮಂಗಳವಾರ, ಜುಲೈ 15, 2014

ಕೊರಗ ಸಮುದಾಯದ ಚಿತ್ರಗಳು ಭಾಗ-3


Koragerna Alipu Oripu
23 hours ago · Edited





ಕೊರಗರ ಶ್ರೀಮಂತಿಕೆ!

ವೈವಾಹಿಕ ಸಂಬಂಧಗಳು ಬಂದಾಗ, ಯಾವುದೇ ಮುಂದುವರಿಯುತ್ತಿರುವ ಅಥವಾ ಮುಂದುವರಿದಿರುವ ಜನಾಂಗಗಳು - 'ವರದಕ್ಷಿಣೆ'ಯ (ತುಳುವಿನಲ್ಲಿ 'ಬದಿ' ಎನ್ನುತ್ತಾರೆ.) ವಿಚಾರವನ್ನು ತಮ್ಮ ಹಮ್ಮು ಬಿಮ್ಮಗೆ ಸರಿಯಾಗಿಯೇ ಪ್ರತಿಪಾದಿಸುತ್ತದೆ, ಅದನ್ನು ತಮ್ಮ ಗತ್ತು ಗೈರತ್ತಿನ ಸಂಕೇತವಾಗಿ ತೋರ್ಪಡಿಸುತ್ತದೆ. ಆದರೆ, ಸಂಬಂಧದಲ್ಲಿ ಅತೀ ಶ್ರೀಮಂತಿಕೆಯನ್ನೇ ಮೇಲೈಸಿಕೊಂಡಿರುವ, ಸಾಮಾಜಿಕವಾಗಿ ಅತೀ ಹಿಂದುಳಿದಿರುವ - ಈ ಕೊರಗ ಸಮುದಾಯ ವೈವಾಹಿಕ ವಿಚಾರದಲ್ಲಿಯೂ, 'ಬದಿ'ಯನ್ನು ಬದಿಗಿರಿಸಿ ತನ್ನ ಹಿರಿಮೆಯನ್ನು ಇತರ ಶ್ರೀಮಂತ ಸಮುದಾಯ ನಾಚುವಂತೆ ಮೆರೆಯುತ್ತಿದೆ. (ಕೊರಗ ಸಮುದಾಯದಲ್ಲಿ ವರದಕ್ಷಿಣೆಯ ಪ್ರಸ್ತಾಪವೇ ಬರುವುದಿಲ್ಲ!) ಆಶ್ಚರ್ಯವಾದರೂ ನಿಜ!
- ಹೃದಯ

ಅಂದು ಪರಾವಲಂಬಿ ಕುಡುಕ, ಇಂದು ಸ್ವಾವಲಂಬಿ ಕೃಷಿಕ!

ಕಂಠಪೂರ್ತಿ ಕುಡಿದು ತೂರಾಡುತ್ತಾ, ಇಹ ಪರದ ಪರಿವೆಯೇ ಇಲ್ಲದಂತ್ತಿದ್ದ, ಊರಿಗೆಲ್ಲ 'ಗೇಲಿಯ ವಸ್ತು'ವಾಗಿದ್ದ - ಒಬ್ಬ ಅನಕ್ಷರಸ್ಥ ಕೊರಗ ಬಂಧು, ಬರೀ ಒಂದೇ ಒಂದು ದಿನದ ಆಂದೋಲನದ ಮೂಲಕ ಬದುಕನ್ನು ಸ್ವಯಂಪರಿವರ್ತಿಸಿಕೊಂಡು ಆದರ್ಶ ಕೃಷಿಕನಾಗಿ ಬಾಳುತ್ತಿರುವ ಸ್ವಾಭಿಮಾನಿ/ ಸ್ವಾವಲಂಬಿ ಕೊರಗ ಬಂಧುವೊಬ್ಬರ ಯಶಸ್ವಿ ಜೀವನ ಚಿತ್ರಣವನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ...

ಪಿತ್ರಾರ್ಜಿತವಾಗಿ ಸಿಕ್ಕ ಬರೇ 64 ಸೆಂಟ್ಸ್ ಜಾಗದಲ್ಲಿ 110 ಮಲ್ಲಿಗೆ ಗಿಡ, 150 ಕರಿಮೆಣಸು ಬಳ್ಳಿ, 43 ಫಲಭರಿತ ತೆಂಗಿನ ಮರ, ಅಡಿಕೆ, ಬಾಳೆ, ಪಪ್ಪಾಯಿ, ಅನನಾಸು, ಕಾಫಿಗಿಡ, ನೆಲಕಡಲೆ, ಚುಕ್ಕು, ಮಾವು... ಅಬ್ಬಬ್ಬಾ... ಜಮೀನು ತುಂಬಾ ಹಸಿರು ಹಸಿರಾಗಿರುವ ಮರ -ಗಿಡ - ಬಳ್ಳಿ - ತೋಟಗಾರಿಕಾ ಬೆಳೆಗಳು...
ತೋಟಕ್ಕೆ ನೀರು ಹಾಯಿಸಿಕೊಳ್ಳಲು ಎರಡು ಬಾವಿಗಳು, ಎರಡು ಪಂಪ್ ಸೆಟ್ಗಳಿವೆ. ಮನೆ ಅಡುಗೆಗೆ ಗೋಬರ್ ಗ್ಯಾಸ್ ಬಳಸುತ್ತಿದ್ದಾರೆ. ಜೆರ್ಸಿ ಮತ್ತು ದೇಸಿ ತಳಿಯ ದನಗಳಿದ್ದು, ಹತ್ತಿರದ ಡೈರಿಗೆ ದಿನಂಪ್ರತಿ 7 ಲೀಟರ್ ಹಾಲು ಸರಬರಾಜು ಮಾಡುತ್ತಿದ್ದಾರೆ.

ಜಮೀನಿನಲ್ಲಿಯೇ ದುಡಿದು ಬಂದ ಹಣವನ್ನು ಮನೆ ಖರ್ಚಿಗೆ ಬಳಸಿ ಉಳಿದ ಒಂದಿಷ್ಟು ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಇಟ್ಟಿದ್ದಾರೆ. ನಾಲ್ಕು ಎಲೈಸಿ ಪಾಲಿಸಿಗಳಿಗೆ ತಿಂಗಳು ತಿಂಗಳು ಹಣ ಪೊರೈಸುತ್ತಿದ್ದಾರೆ. ಪತ್ನಿ ಮಕ್ಕಳಿಗೆ ಚಿನ್ನ ಮಾಡಿಸಿದ್ದಾರೆ. ಹೊಸ ಮನೆ ನಿರ್ಮಿಸಿದ್ದಾರೆ. ಬರೇ ಮಲ್ಲಿಗೆ ಕೃಷಿಯಿಂದಲೇ ವಾರ್ಷಿಕ 70,000/- ಆದಾಯ ಗಳಿಸುತ್ತಿದ್ದಾರೆ! ಇದೆಲ್ಲ ಸಾಧ್ಯವಾಗಿದ್ದು ಬರೇ ಇಪ್ಪತ್ತು ವರ್ಷದ ತನ್ನ ಪರಿವರ್ತಿತ ಬದುಕಿನಲ್ಲಿ!


ಇಪ್ಪತ್ತು ವರ್ಷಗಳ ಕೆಳಗೆ ಕುಡಿತವನ್ನೇ ಬದುಕಾಗಿಸಿಕೊಂಡಿದ್ದ, ಹೆಂಡತಿ ಮಕ್ಕಳಿಗೆ ಹೊಡೆಯುತ್ತಿದ್ದ, ಎಲ್ಲರಿಂದಲೂ ತಿರಸ್ಕ್ರತ ಭಾವನೆಗೆ ಒಳಗಾಗಿದ್ದ ಒಬ್ಬ ಆದಿವಾಸಿ ಕೊರಗ ಬಂಧುವಿನ ಬಾಳಿನಲ್ಲಿ ಬದಲಾವಣೆಗೆ ಕಾರಣವಾದದ್ದು - ಸಾಕ್ಷರತಾ ಆಂದೋಲನ.
'ಅರ್ಧ ಆಯಸ್ಸು ಮುಗಿದ ಮೇಲೆ ಇನ್ಯಾಕೆ ಅಕ್ಷರದ ನೆಂಟಸ್ಥಿಕೆ..?' ಎಂದು ಮೊದಮೊದಲು ಸಾಕ್ಷರತಾ ಆಂದೋಲನದ ಪ್ರೇರಕಿಯರಿಗೆ ಸಾಬೂಬು ನೀಡಿ ಜಾರಿಕೊಳ್ಳುತ್ತಿದ್ದಾತನಿಗೆ ಕಾರ್ಯಕರ್ತೆಯರ ಮತ್ತು ಹೆಂಡತಿಯ ನಿರಂತರ ಒತ್ತಡಕ್ಕೆ ಮಣಿದು ಕೊನೆಗೂ ಅರೆಮನಸಿನಲ್ಲಿ ಆಸಕ್ತಿ ನೀಡಿದರು. 1994ರಲ್ಲಿ ಮಂಗಳೂರು ನಗರದಲ್ಲಿ ಜರಗಿದ ನವಸಾಕ್ಷರರ ಬೃಹತ್ ಮೆರವಣಿಗೆಯಲ್ಲಿ ಪಾಲ್ಗೊಂಡ ಆ ಕೊರಗ ಬಂಧು, ಆ ಒಂದು ದಿನದ ಕ್ರಾಂತಿ ಚಳುವಳಿ, ಬದುಕಿನ ದಿಕ್ಕನ್ನೇ ಬದಲಿಸುವ ಕ್ರಾಂತಿಗೆ ನಾಂದಿಯಾಯಿತು. 'ಶಿಕ್ಷಣವೇ ಶಕ್ತಿ', 'ಕೂಡಿ ಕಲಿಯೋಣ ಒಂದಾಗಿ ಬಾಳೋಣ', 'ಹೆಂಡ ಸಾರಾಯಿ ಸಹವಾಸ ಹೆಂಡತಿ ಮಕ್ಕಳು ಉಪವಾಸ' ಎಂಬ ಕ್ರಾಂತಿ ಘೋಷಣೆಗಳು ಅವರಿಗೆ ಕುಡುಕನಾಗಿದ್ದರೂ ನವ ಹುರುಪನ್ನು ತಂದಿತು. ಮನೆಗೆ ವಾಪಾಸಾದ ಮೇಲೂ ಆ ಕ್ರಾಂತಿ ಘೋಷಣೆಗಳೇ ಮನಸ್ಸನ್ನು ಕಾಡಲು ಆರಂಭಿಸಿತು. ಅದೇ ಕೊನೆ, ಮತ್ತೆಂದೂ ಅವರು ಕುಡಿತಕ್ಕೆ ದಾಸರಾಗಲೇ ಇಲ್ಲ! ಅಲ್ಲಿಂದಲೇ ಆದರ್ಶದ ಬದುಕು ಆರಂಭವಾದದ್ದು, ಅವತ್ತಿಂದಲೇ ಕೃಷಿಕರಾದದ್ದು! ಅವರೇ, ನಮ್ಮ ಆದಿವಾಸಿ ಕೊರಗ ಜನಾಂಗದ - ಮುಂಗುಲಿ ಕೊರಗ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಿಯ್ಯಾರು ಗ್ರಾಮದ ಜೋಡುಕಟ್ಟೆಯಲ್ಲಿ ಬರಡು ಭೂಮಿಯನ್ನು ಹಸಿರಾಗಿಸಿ, ಬರಡು ಬದುಕನ್ನು ಹಸನಾಗಿಸಿ, ಕೊರಗ ಜನಾಂಗಕ್ಕೆ ಆದರ್ಶಪ್ರಾಯವಾದವರು! ಕುಡಿತ ಎಂಬ ಮಾರಿಯಿಂದ ಬೇರ್ಪಟ್ಟು ಕೃಷಿಕ ಎಂಬ ಅಲಂಕಾರಿತ ಪಟ್ಟದಲ್ಲಿ ಶೋಭಿಸುತ್ತಿರುವ ಮುಂಗುಲಿಯವರಿಗೆ ಪ್ರೀತಿಯ ಅಭಿನಂಧನೆಗಳು.
- ಹೃದಯ
ಕೊರಗ ಸಮುದಾಯದಲ್ಲಿ ಮಹಿಳಾ ಹಿತರಕ್ಷಣೆ

-ಸುನೀತಾ ಬಂಗೇರ, ಬೆಳುವಾಯಿ
ಬದಲಾದ ಕಾಲಘಟ್ಟದಲ್ಲಿ, ಕೊರಗ ಮಹಿಳೆ ‘ಹಿಂದಿನ’ವರಿಗಿಂತ - ಈಗ ಹೆಚ್ಚು ಅದೃಷ್ಟಶಾಲಿ ಎನ್ನಬಹುದು. ಹಿಂದಿನಿಂದಲೂ ಕೊರಗ ಮಹಿಳೆಯ ಕುರಿತಾಗಿ, ಸಮಾಜದಲ್ಲಿರುವ - ಗೌರವಯುತವಾದ ಮಾತೃ ಭಾವನೆ ಮತ್ತು ಏಕತೆಯ ಪರಿಕಲ್ಪನೆ ಇತರ ಎಲ್ಲಾ ಆದಿವಾಸಿ (ಗಿರಿಜನ) ಮತ್ತು ಪ್ರಭಾವಶಾಲಿ ಸಮುದಾಯಕ್ಕಿಂತಲೂ ಕೊರಗ ಸಮುದಾಯದವರಲ್ಲಿ ಹೆಚ್ಚು ಪ್ರಗತಿಪರವಾಗಿದೆ. ಆದಿಕಾಲದ ಕೊರಗ ಮಹಿಳೆಯರು ತಮ್ಮ ದೇಹವನ್ನು ಸೊಪ್ಪು ಮತ್ತು ಅಲಂಕೃತ ಮಣಿಸರಗಳಿಂದ ಮುಚ್ಚಿಕೊಳ್ಳುತ್ತಿದ್ದರು. ಈಗ ಎಲ್ಲವೂ ಅನುಕೂಲಕರವಾಗಿ ಮಾರ್ಪಾಟಾಗಿದೆ. ಹಾಗಾಗಿಯೇ ಕೊರಗ ಮಹಿಳೆಯರು ‘ಹಿಂದಿನವರಿಗಿಂತ’ ಹೆಚ್ಚು ಅದೃಷ್ಠಶಾಲಿ ಎಂದಿರುವುದು.


ಕೊರಗ ಸಮುದಾಯವನ್ನು ಹೊರತು ಪದಿಸಿದರೆ ಒಟ್ಟು ಸಮಾಜದಲ್ಲಿ - ಮಹಿಳೆಯರ ಕುರಿತಾಗಿ ‘ತಾರತಮ್ಯ’ ಕಂಡು ಬರುತ್ತದೆ. ಮುಖ್ಯವಾಗಿ- ಹೆಣ್ಣು ಭ್ರೂಣ ಹತ್ಯೆ... ಶ್ರೀಮಂತ ಕುಟುಂಬಗಳು ತಮ್ಮ ಆಸ್ತಿ ಪಾಸ್ತಿ ಪರರ ಪಾಲಾಗಬಹುದೆಂಬ ಭೀತಿಯಲ್ಲಿ ಮತ್ತು ಗಂಡು ಮಗುವಾದರೆ ಆಸ್ತಿ ತಮ್ಮಲ್ಲೇ ಉಳಿಯಬಹುದೆಂಬ ದುರಾಲೋಚನೆಯಿಂದಾಗಿ- ಹೆಣ್ಣು ಭ್ರೂಣ ಹತ್ಯೆಗೆ ಮುಂದಾಗುತ್ತಾರೆ ಎಂಬುದು ವಾಸ್ತವವಾದರೆ, ಕೊರಗ ಸಮುದಾಯದಲ್ಲಿ ಇಂತಹ ಪ್ರಕರಣಗಳೇ ಕಂಡು ಬಂದಿಲ್ಲ. ಇದು ಕೊರಗರ ಹೃದಯ ಶ್ರಿಮಂತಿಕೆ. ಇದಕ್ಕೆ ಕೊರಗ ಸಮುದಾಯದ ಆಧರಣೀಯ ದೈವ ‘ಅಪ್ಪ- ಬೈಕಾಡ್ತಿ ’(ಕೊರಗ ಸಮುದಾಯದ ಕುಲದೈವ - ಕೊರಗ ತನಿಯನ ತಾಯಿ)ಯ ಭಯ - ಭಕ್ತಿ ಕಾರಣವಾಗಿರಬಹುದು.

ಇಂದಿನ ಔದ್ಯೋಗಿಕ ರಂಗ, ಸಂಘಟನೆ, ಶಿಕ್ಷಣ, ಆಧುನಿಕತೆ, ಸಮಾಜದ ಬದಲಾದ ದೃಷ್ಟಿಕೋನಗಳು ಹೆಚ್ಚು ಪ್ರಗತಿಪರವಾಗಿದೆ. ಒಟ್ಟು ಸಮಾಜ ಕೊರಗ ಸಮುದಾಯದಲ್ಲಿ ಮಹಿಳಾ ಹಿತಚಿಂತನೆಯ ದೃಷ್ಟಿಕೋನವನ್ನು ಅನುಸರಿಸಿದರೆ, ಎಲ್ಲಾ ಸಮುದಾಯದ ಮಹಿಳೆಯರೂ ಸುರಕ್ಷಿತರಾಗಬಹುದು.

ಕಾಮೆಂಟ್‌ಗಳಿಲ್ಲ: