ಭಾನುವಾರ, ಜುಲೈ 13, 2014

ಕೊರಗ ಸಮುದಾಯದ ಚಿತ್ರಗಳು ಭಾಗ-2


ಕೊರಗರು ಸೂರ್ಯವಂಶಸ್ಥರೇ ಅಲ್ಲ.
ಕೊರಗ ಆದಿವಾಸಿ ಸಮುದಾಯದ ಕುರಿತಾಗಿ ಹಲವಾರು ಇತಿಹಾಸಕಾರರು ಅಭ್ಯಸಿಸಿ ಸಂಶೋಧನಾ ಕೃತಿಗಳನ್ನು ಹೊರತಂದಿದರಾದರೂ, ಕೆಲವೇ ಕೆಲವೊಂದು ಕಲ್ಪಿತ ವಿಚಾರಗಳನೊಳಗೊಂಡೇ ತಮ್ಮ ಅಧ್ಯಯನಗಳನ್ನು ಪೂರ್ಣಗೊಳಿಸಿದ್ದಾರೆ. ಈ ಕಲ್ಪಿತ ವಿಚಾರಗಳಲ್ಲಿ ಬಹು ದೊಡ್ಡ ಪ್ರಮಾದವೇ - 'ಕೊರಗರು ಸೂರ್ಯವಂಶ'ಸ್ಥರೆಂದಿರುವುದು. ಈ ಕಲ್ಪಿತ ಮಾಹಿತಿಯನ್ನು ಕೆಲವೊಂದು ಲೇಖಕರು ಅನುಮೋದಿಸಿದ್ದಾರೆ ಎಂಬುದೇ ದುರಂತ.
ಸೂರ್ಯವಂಶ - ಕವಿರತ್ನ ಕಾಳಿದಾಸನ ಮಹಾಕಾವ್ಯದಲ್ಲಿ ಕಂಡುಬರುವ ಪ್ರಾಚೀನ ದೇವಸಂತತಿಯ ವಂಶ. ಸೂರ್ಯವಂಶ ಎಂಬುದು ಕ್ಷತ್ರಿಯ ಕುಲದ ವಂಶ. ಶ್ರೀ ಮನ್ನಾರಾಯಣ ಮಗನಾದ ಬ್ರಹ್ಮನ ಅಂಗದಿಂದ ಹುಟ್ಟಿದನೇ ಮರೀಚ ಬ್ರಹ್ಮ. ಈತನ ಮಗ ಕಶ್ಯಪ ಬ್ರಹ್ಮ. ಈತನ ಮಗ ವಿವಸ್ವಂತ ಸೂರ್ಯ. ಈತನ ಪುತ್ರ ವೈವಸ್ವಂತ ಮನು. (ಈತನಿಂದಲೇ ಮಾನವ ಸಂತತಿ ಹುಟ್ಟಿತು ಎಂಬುದು ಮಹಾಕಾವ್ಯಗಳ ವರ್ಣನೆ) ಮನುವಿನ ಮಕ್ಕಳು ವೇನ, ಧೃಷ್ಣು, ನರಿಷ್ಯಂತ, ನಾಭಿ, ಇಕ್ಷಾಕು, ಕಾರೂಷ, ಶರ್ಯಾ, ಇಳಾ (ಮಗಳು; ಈಕೆಯ ಗಂಡ ಚಂದ್ರ. ಈತನಿಂದ ಚಂದ್ರವಂಶ ಪ್ರಾರಂಭವಾಗುತ್ತದೆ)
ಇಕ್ಷಾಕು ಮನುವಿನ ಮಗ - ಕ್ಷಾತ್ರ. ಸೂರ್ಯವಂಶ ಪ್ರವರ್ತಕ ಇಕ್ಷಾಕು ಅಯೋಧ್ಯೆಯ ಮೊದಲ ಅರಸ. ನಂತರ - ಕುಕ್ಷಿ, ವಿಕುಕ್ಷಿ, ಬಾಣ, ಅನರಣ್ಯ, ಪೃಥ, ತ್ರಿಶಂಕು, ಧುಂಧುಮಾರ, ಯುವನಾಶ್ವ, ಮಾಂಧಿರ, ಸುಸಂಧಿ, ಧವಸಂಧಿ ಪ್ರಸೇನಜಿತ್, ಭರತ, ಅಸಿತ, ಸಗರ, ಅಸಮಂಜ, ಅಂಶುಮಂತ, ದಿಲೀಪ, ಭಗೀರಥ, ಕಾಕುತ್ಸ್ಥ, ರಘ. ಇಲ್ಲಿಗೆ ಸೂರ್ಯವಂಶ ಕೊನೆಗೊಂಡು ರಘುವಂಶ ಪ್ರರಂಭವಾಗುತ್ತದೆ. ಇದಿಷ್ಟು ಸೂರ್ಯವಂಶದ ವಂಶಾವಳಿ.
ಈ ಸೂರ್ಯವಂಶ ಕ್ಷತ್ರಿಯರಾದ್ದರಿಂದ ಇವರ ವಂಶಾವಳಿ ಮಗನಿಂದ ಮಗನಿಗೆ ಹಸ್ತಾಂತರವಾಗುತ್ತಾ ಬಂದಿದೆ. ಈ ವಂಶ ಪುರುಷ ಪ್ರಧಾನ ವಂಶವಾದರಿಂದಾಗಿ, ಇಲ್ಲಿ ಮಹಿಳೆಗೆ ಯಾವುದೇ ರೀತಿಯ ಗೌರವ ಸ್ಥಾನಮಾನಗಳಿಲ್ಲ ಎಂಬುದು ಗಮನಿಸಬೇಕಾದ ವಿಚಾರ. ಮತ್ತು ತಂದೆಯಿಂದ ಮಗನಿಗೆ ಅಧಿಕಾರ ಹಸ್ತಾಂತರವಾಗುತ್ತಾ ಬಂದಿದೆ.
ಇನ್ನು ಕೊರಗರ ಸಮುದಾಯ ಕ್ಷತ್ರೀಯ ಕುಲದವರೂ ಅಲ್ಲ. ಧರ್ಮಯುದ್ಧವನ್ನು ಮಾಡಿದವರೂ ಅಲ್ಲ. ಬದಲಾಗಿ ಈ ಸಮಾಜದಲ್ಲಿ, ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ - ಪಂಚಂಮರಿಗಿಂತಲೂ ಕಡೆಯಾಗಿ ಬದುಕು ಸವೆಸಿದವರು. ಕೊರಗ ಸಮುದಾಯದಲ್ಲಿ ಮಹಿಳೆಯೇ ಪ್ರಧಾನ. ಆಕೆಯ ಮಾತೇ ಅಂತಿಮ. ಹಾಗಾಗಿ ತಮ್ಮ ಕುಲದೈವ - ಕೊರಗ ತನಿಯ (ಕೊರಗಜ್ಜ)ನನ್ನು ನಂಬಿ ಆರಾಧಿಸುವಾಗ, ಅಲ್ಲಿ ಕೊರಗ ತನಿಯನ ತಾಯಿ 'ಅಪ್ಪೆ ಬೈಕಾಡ್ತಿ'ಗೂ ಸ್ಥಾನ ನೀಡುತ್ತಾರೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಕೊರಗರಲ್ಲಿ ವಂಶಾವಳಿಗಳು ತಾಯಿಯಿಂದ ಮಗಳಿಗೆ ಬದಲಾಗುತ್ತದೆ. ತಂದೆಯಿಂದ ಮಗನಿಗಲ್ಲ. ಕೊರಗರು ಸೂರ್ಯೋಪಾಸಕರು ಹೌದು. ಸೂರ್ಯವಂಶಸ್ಥರಲ್ಲ. ಬೆಳಕ ನೀಡುವ ದೇವರ ಜೊತೆಗೆ ಪ್ರಕೃತಿಯನ್ನೂ ದೇವರೆಂದು ನಂಬಿಕೊಂಡು ಬಂದವರು ಕೊರಗರು. ಸೂರ್ಯನನ್ನು ಆರಾಧಿಸಿದವರೆಲ್ಲ ಸೂರ್ಯವಂಶಸ್ಥರಾಗಲು ಸಾಧ್ಯವಿಲ್ಲ. ಕೊರಗರನ್ನು ಸೂರ್ಯವಂಶಸ್ಥರೆಂದಿರುವುದು ಇತಿಹಾಸಕಾರರ ತಪ್ಪು ಗೃಹಿಕೆ ಮತ್ತು ಇತಿಹಾಸಕಾರರ ಈ ಗೃಹಿಕೆಯನ್ನು ಯಾವೊಬ್ಬ ಕೊರಗ ಬಂಧುವೂ ಗಣನೆಗೆ ತೆಗೆದುಕೊಂಡಿಲ್ಲ!
- ಹೃದಯ


ಇತರ ಸಮುದಾಯದ ಜಾನಪದ ಕುಣಿತಗಳಲ್ಲಿ ಕೊರಗರ ಉಪಸ್ಥಿತಿ! ಏನಿದರ ಒಳಮರ್ಮ?

ಜಾನಪದ ಸಾಂಸ್ಕೃತಿಕ ಲೋಕಕ್ಕೆ ತನ್ನದೇ ಆದ ಸಂಪ್ರದಾಯ ಬದ್ಧ ಕೊಡುಗೆಗಳನ್ನು ನೀಡುತ್ತಾ ಬಂದಿರುವುದೇ ತಳಮಟ್ಟದ ಸಮುದಾಯಗಳು. ಇವರು ತಮ್ಮ ಪಾಡ್ದಾನ, ಕುಣಿತ ಮತ್ತು ವೇಷಭೂಷಣಗಳಿಂದ ಜನಪದ ಕುಣಿತಗಳ ಸಿರಿವಂತಿಕೆಯನ್ನು ಈಗಲೂ ಉಳಿಸಿಕೊಂಡು ಬಂದಿದ್ದಾರೆ. ಈ ಸಾಂಸ್ಕೃತಿಕ ವೈಭವದ ಹುಟ್ಟಿಗೆ ಕಾರಣವೇ, ಅನಕ್ಷರಸ್ಥತನ. ತೀರಾ ಹಿಂದುಳಿದ ಸಮುದಾಯಗಳ ಇಂಥಹ ಜನಮನ ಸೂರೆಗೊಂಡ ಜಾನಪದ ಸೊಗಡಿನಲ್ಲಿ ಕೊರಗ ಅಸ್ತಿತ್ವ ಹೇಗಿತ್ತು? ಎಂಬುದಕ್ಕೆ ಇಲ್ಲಿದೆ ನಿದರ್ಶನ.

ಬಾಲೆ ಸಾಂತು : ತುಳುನಾಡಿನ ಮರಾಠಿ ನಾಯ್ಕರ ಆಚರಣಾತ್ಮಕ ಕುಣಿತಗಳಲ್ಲಿ ‘ಬಾಲೆ ಸಾಂತು’ ಕೂಡಾ ಒಂದು. ಬಂಟ್ವಾಳ, ಎಣ್ಮಕಜೆ, ಕೋಡಂದೂರು ಮುಂತಾದ ಪ್ರದೇಶಗಳಲ್ಲಿ ಹೆಚ್ಚಾಗಿ ಚಾಲ್ತಿಯಲ್ಲಿತ್ತಾದರೂ, ಇತ್ತೀಚೆಗೆ ಇದು ಎಲ್ಲೂ ಕಂಡು ಬಂದಿಲ್ಲ. ಈ ಒಂದು ಆಚರಣೆಯಲ್ಲಿ - ಪ್ರತ್ಯಕ್ಷವಾಗಿಯಲ್ಲದಿದ್ದರೂ, ಕೊರಗ ಜನಾಂಗದ ಉಪಸ್ಥಿತಿ ಇತ್ತು ಎಂದು ಡಾ.ಸ.ಚಿ. ರಮೇಶ್ ರವರ ‘ಕರ್ನಾಟಕದ ಜಾನಪದ ಆಚರಣೆಗಳು’ ಎನ್ನುವ ಪುಸ್ತಕದಿಂದ ತಿಳಿದು ಬರುತ್ತದೆ.

ಬಾಲೆ ಸಾಂತು ಕಲಾ ತಂಡದಲ್ಲಿ ಹನ್ನೊಂದು ಮಂದಿ ವೇಷಧಾರಿಗಳಿರುತ್ತಾರೆ. ಸನ್ಯಾಸಿ, ಅರ್ಚಕ(ಪೂಜೆ ಭಟ್ಟ), ಗುರಿಕಾರ, ಪೂಜಾರಿ( ದೈವ ನರ್ತಕ), ಕೊರಗ ಮತ್ತು ಕೊರಪೊಳು (ಕೊರಗ ಮಹಿಳೆ) ಸಾಹೇಬ ಮತ್ತು ಮಂಗ ಕುಣಿಸುವವ ಇತ್ಯಾದಿ. ಈ ವೇಷಧಾರಿಗಳು ಕಾಸರಕದ ಮರದಡಿ ಕಲ್ಲೊಂದನ್ನು ಪ್ರತಿಷ್ಠಾಪಿಸಿ ಶಾರದಾಂಬೆಯನ್ನು ಸ್ಮರಿಸುತ್ತಾರೆ. ನಂತರ ಮನೆ - ಮನೆಗಳಿಗೆ ತೆರಳಿ, ಮರಾಠಿ ಭಾಷೆಯ ಹಾಡು ಹಾಡುತ್ತಾ... ‘ಶೃಂಗೇರಿಚೆ ಶಿಷ್ಯರಮಿ ಬಾಲ್ಚಾಲ್ಯೊ ಬಾಲೆ ಸಾಂತು, ಕಾಟ್ಮರೊ ಜೋಗಿರಮಿ ಬಾಲ್ ಬಾಲ್ಯೊ ಬಾಲೆ ಸಾಂತು’ ಎಂದು ಗುರಿಕಾರ ಹಾಡುತ್ತಿದ್ದಂತೆ - ಇತರ ಕಲಾವಿದರು ‘ಬಾಲ್ ಬಾಲೋ ಬಾಲ್ ಸಾಂತು’ ಎಂದು ಸೊಲ್ಲನ್ನು ಹಾಡುತ್ತಾ ಕುಣಿಯುತ್ತಾರೆ. ಬಾಲೆ ಸಾಂತು ಆಚರಣೆಯಿಂದ ಊರಿನ ಅನಿಷ್ಟ ದೂರವಾಗುತ್ತದೆ ಎಂದು ನಂಬುತ್ತಾರೆ. ಇದನ್ನು ಮರಾಠಿ ನಾಯ್ಕ ಸಮುದಾಯದವರು ಮಾತ್ರ ಪ್ರಸ್ತುತಪಡಿಸುತ್ತಾರೆ. ಕೊರಗರಲ್ಲ, ಕೊರಗರ ನೃತ್ಯ ಪ್ರಕಾರವೂ ಇದಲ್ಲ.

ಚೆನ್ನು ಕುಣಿತ : ಈ ಜನಪದ ನೃತ್ಯ ಪ್ರಕಾರವನ್ನು ‘ಕೋಪಾಲ’ (ನಲಿಕೆ) ಜನಾಂಗದವರು ಮಾತ್ರ ಆಚರಿಸಿಕೊಂಡು ಬರುತ್ತಾರೆ. ಬೆಳ್ತಂಗಡಿ ಪ್ರಾಂತ್ಯದಲ್ಲಿ ಈ ವೇಷ ಹೆಚ್ಚಾಗಿ ಕಂಡು ಬರುತ್ತದೆ. ಕೋಪಾಲ ಜನಾಂಗದ ಸಾಂಸ್ಕೃತಿಕ ಮೂಲ ಸ್ತ್ರೀ - ‘ಚೆನ್ನು’ ವಿನ ಕುರಿತಾಗಿ ಆರಾಧಿಸಿ ನಲಿವ ನೃತ್ಯ ಪ್ರಕಾರವಿದು. ಈ ಚೆನ್ನು ವೇಷದ ಜೊತೆಯಲ್ಲಿ 'ಕೊರಗ' ಎಂಬ ಪಾತ್ರಧಾರಿ ವೇಷವೂ ಇರುವುದು ವಿಶೇಷ! ಆದರೆ, ಈ ನೃತ್ಯ ಪ್ರಕಾರವೂ ಕೊರಗರದ್ದಲ್ಲ.

ಕಂಗೀಲು ಕುಣಿತ : ಇದು ಕರಾವಳಿ ಕರ್ನಾಟಕದಲ್ಲಿ ಆಚರಣೆಯಲ್ಲಿರುವ ಆರಾಧನಾ ಪದ್ಧತಿಯ ಪೂಜಾ ಕುಣಿತ. ಮಾಯಿ ತಿಂಗಳ ಹುಣ್ಣಿಮೆಯ ಬೆಳದಿಂಗಳಲ್ಲಿ , ಮೂರು ದಿನ ರಾತ್ರಿ ಮತ್ತು ಮೂರು ದಿನ ಹಗಲು - ಗೊಡ್ಡ ಜನಾಂಗದವರಿಂದ ನಡೆಸಿಕೊಂಡು ಬರುವ ವಿಶಿಷ್ಟ ಕುಣಿತ. ಪುರುಷ ಪ್ರಧಾನವಾದ ಈ ಕುಣಿತದಲ್ಲಿ - ಪಾತ್ರಧಾರಿಗಳು ತಮ್ಮ ಉಡುಪು ಮತ್ತು ಶಿರಸ್ತ್ರಾನವಾಗಿ ತೆಂಗಿನ ಸಿರಿಯನ್ನು ಕಟ್ಟಿಕೊಂಡು ಡೋಲು - ಚೆಂಡೆಯ ನಾದಕ್ಕೆ ತಕ್ಕುದಾಗಿ ಕುಣಿಯುತ್ತಾರೆ. ಇದರಲ್ಲಿ ‘ನಾಗಿ’ ಎನ್ನುವ ‘ಕೊರಗ ವೇಷ’ವೂ ಇರುತ್ತದೆ. ಈತನ ಸುತ್ತ ಇತರ ವೇಷಧಾರಿಗಳು ಕುಣಿಯುತ್ತಾರೆ. ಈ 'ನಾಗಿ (ಕೊರಗ)ವೇಷ' ಮನೆಯ ಹಿಂಬಾಗದಲ್ಲಿ ಹೋಗಿ ದಾನ ಪಡೆಯುವುದು ಮತ್ತು ಭಕ್ತಾದಿಗಳಿಗೆ ತನ್ನ ಹಣೆಯಲ್ಲಿನ ಕಪ್ಪು ಮಸಿ (ಕರಿಗಂಧ -- ಕೊರಗ ತನಿಯನ ಆರಾಧಕರು ಹಾಕುವುದು ಕೂಡಾ ಕರಿಗಂಧವನ್ನೇ!) ಯನ್ನು ಭಕ್ತಾಧಿಗಳ ಹಣೆಗೆ ಸೋಕಿಸುವುದು (ಸ್ಪರ್ಶಿಸುವುದಿಲ್ಲ!) ಕಂಗೀಲು ಆರಾಧನಾ ಪದ್ಧತಿಯ ವಿಶೇಷ! ಇದು ತೀರಾ ಹಿಂದುಳಿದ 'ಗೊಡ್ಡ ಸಮಾಜ'ದ ಜಾನಪದ ಕುಣಿತ, ಬದಲಿಗೆ ಕೊರಗರದಲ್ಲ.

ಇಲ್ಲಿ ಗಂಭೀರವಾದ ಪ್ರಶ್ನೆ ಎಂದರೆ, ಈ ಎಲ್ಲಾ ಜನಪದ ಪ್ರಕಾರಗಳ ಕುಣಿತಗಳಲ್ಲಿ ‘ಕೊರಗ’ರ ಮಧ್ಯಸ್ತಿಕೆ ಹೇಗೆ ಬಂದಿರಬಹುದು? ಏನು ಕಾರಣವಿರಬಹುದು? ಏನಿದರ ಒಳಮರ್ಮ? ಇತರ ತಳಮಟ್ಟದ ಸಮುದಾಯಗಳಿಗೂ, ಆದಿವಾಸಿ ಪಂಗಡದ ‘ಕೊರಗ’ ಜನರಿಗೂ ಏನಾದರೂ ‘ಸಾಂಸ್ಕೃತಿಕ - ಸಂಬಂಧ’ವಿರಬಹುದೇ? ಕೊರಗರ ವೇಷಗಳನ್ನು ಹಾಕುವುದು ಮತ್ತು ಸಾರ್ವಜನಿಕವಾಗಿ ಪ್ರದರ್ಶಿಸುವುದು ‘ಅಜಲು ನಿಷೇಧ ಕಾಯಿದೆ’ಯ ಉಲ್ಲಂಘನೆಯಾಗುತ್ತದೆ. ಹೀಗಿರುವಾಗ ಕೊರಗರ ಪಾತ್ರಗಳನ್ನು ಹೊಂದಿರುವ - ಚೆನ್ನು ಕುಣಿತ, ಬಾಲೆ ಸಾಂತು ಮತ್ತು ಕಂಗೀಲು ನೃತ್ಯಗಳು - ಕಾಯಿದೆಯನ್ನು ಉಲ್ಲಂಘಿಸಿದಂತಾಗುವುದಿಲ್ಲವೇ? ಕೋಲ ನೃತ್ಯಗಳನ್ನು ಸಾರ್ವಜನಿಕ ರಂಗಸ್ಥಳದಲ್ಲಿ ಪ್ರದರ್ಶಿಸುವಂತಿಲ್ಲ. ಆದರೆ - ಇದೇ ರಂಗಕರ್ಮಿಗಳು (ದೈವನರ್ತಕರು) ಜಾನಪದ ನೃತ್ಯದ ಹೆಸರಿನಲ್ಲಿ ‘ ಕೊರಗ ವೇಷ’ವನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದು ಅಪರಾಧವಾಗುವುದಿಲ್ಲವೇ? ಕೊರಗ ಅಭಿವೃದ್ಧಿ ಸಂಘಟನೆಗಳು ಮತ್ತು ಜಾನಪದ ವಿಶ್ಲೇಷಕರು ಏನೆನ್ನುತ್ತಾರೆ.
- ಹೃದಯ

ಬದುಕೆಂಬ ರಥದ ಸ್ವ- ಸಾರಥಿಗಳು...

ಕೊರಗರು ಮೂಲತಃ ಸ್ವಉದ್ಯೋಗಿಗಳು! ಕಾಡಿನಲ್ಲಿ ಹೇರಳವಾಗಿ ದೊರಕುತ್ತಿದ್ದ ಬಿದಿರು - ಬಿಳಲುಗಳಿಂದ, ಬುಟ್ಟಿ ಮತ್ತಿತ್ತರ ಪರಿಕರಗಳನ್ನು ಮಾಡಿ, ಇತರರಿಗೆ ಮಾರಿ ಜೀವನ ಸಾಗಿಸುತ್ತದ್ದವರು. ಜೇನು ಮತ್ತು ವನಸ್ಪತಿಗಳು -ಆಹಾರದ ಮತ್ತು ಸ್ವಉದ್ಯೋಗದ ಮೂಲಗಳಾಗಿದ್ದವು. ಕಾಡಿನೊಳಗಿನ ಸ್ವಚ್ಛಂದ ಬದುಕು - ಜೀವನದ ಪಾಠವನ್ನು ಮತ್ತು ಸ್ವಉದ್ಯೋಗದ ನೆಲೆಯನ್ನು ಒದಗಿಸಿತ್ತು. ಕಾಡೆಂದರೆ ಬದುಕು, ಕಾಡೆಂದರೆ ನಾವು ಮತ್ತು ನಾವು ಕಾಡಿನ ಮಕ್ಕಳು ಎನ್ನುವುದೇ ಜೀವನದ ಸಿದ್ದಾಂತವಾಗಿತ್ತು.

ಕಾಲಚಕ್ರದ ಬದುಕಿನಲ್ಲಿ, ಬದಲಾವಣೆಯೆಂಬ ಗತಿಚಕ್ರವು ತಮಗರಿವಿಲ್ಲದಂತೆ ಪಥವನ್ನು ಬದಲಿಸಿದಾಗ, ಕೊರಗರು ಅನುಭೋಗದ ವಸ್ತುವಾಗಿಬಿಟ್ಟರು. ಅಜಲು ಪದ್ಧತಿಯೆಂಬ ದಾಸ್ಯದ ವ್ಯವಸ್ಥೆಯ ಸ್ಥಿತಿಗತಿಯೊಂದು ಕೊರಗರ ಸ್ವವಲಂಬನೆಯ ಬದುಕಿನ ಮೂಲ ಸೆಲೆಯನ್ನು ಕಸಿದುಬಿಟ್ಟತು. ಕೊರಗರು ಊರವರ ಚಾಕರಿಯನ್ನು ಕಡ್ಡಾಯವಾಗಿ ಮಾಡಬೇಕಾಯಿತು. ತಮ್ಮ ಸ್ವಉದ್ಯೋಗದ ಪರಿಕರಗಳಾದ ಬುಟ್ಟಿ ಮತ್ತಿತರ ವಸ್ತುಗಳನ್ನು, ಊರ ದನಿಗಳಿಗೆ ಉಚಿತವಾಗಿ ನೀಡಲೇಬೇಕಿತ್ತು. ಏಕೆಂದರೆ, ಅದು ಸೇವೆಯ ರೂಪದ ಊಳಿಗಮಾನ್ಯ ಎಂಬ ಕ್ರೂರ ವ್ಯವಸ್ಥೆಯಾಗಿತ್ತು. ಉಚಿತವಾಗಿ ಬುಟ್ಟಿ ಮತ್ತು ಕಾಡುಡ್ಪತ್ತಿಗಳನ್ನು ಕೊಡಬೇಕಾಗಿ ಬಂದಾಗ, ಹೊಟ್ಟೆಯ ಹಸಿವನ್ನು ನೀಗಿಸಲು - ಎಂಜಲನ್ನ ತಿನ್ನಬೇಕಾಗಿ ಬಂತು. ಕೊರಗರ ಸ್ವಉದ್ಯೋಗ ಕಣ್ಮರೆಯಾಗುತ್ತಾ, ದಾಸ್ಯದ ಬೇಗುದಿಯಲ್ಲಿ ಸಿಲುಕಬೇಕಾಯಿತು.


ಬದುಕು ನಿಂತ ನೀರಲ್ಲ! ಬದಲಾವಣೆಗಳಿಂದ ಕೂಡಿದ ಹರಿವ ನೀರಿನಂತೆ, ಸದಾ ತನ್ನ ಚಲನವಲನಗಳನ್ನು ಬದಲಿಸುತ್ತಾ, ವಿಸ್ತರಿಸುತ್ತಿರುತ್ತದೆ. ಕೊರಗರ 'ಬದಲಾವಣೆಯ ಹಿನ್ನಲೆ'ಯ ಸ್ವರೂಪವನ್ನು ಸಂಕ್ಷಿಪ್ತವಾಗಿ ವಿವರಿಸುವುದಾದರೆ..., ಪರಿವರ್ತನೆಯ ತಂಗಾಳಿ ಹಿತಾನುಭವದಂತೆ ಮೂಡತೊಡಗಿತು. ಸಂಘಟನೆ, ಶಿಕ್ಷಣ ಮತ್ತು ಕಲಿತುಕೊಂಡ ಬದುಕಿನ ಪಾಠ - ಹಲವಾರು ಬದಲಾವಣೆಯ ಬಿರುಗಾಳಿಯನ್ನೇ ಎಬ್ಬಿಸಿತು. ಕೊರಗ ಬಂಧುಗಳು ಸಂಘಟನೆಯಿಂದಾಗಿ, ಸದಾ ಸಮುದಾಯದ ಹಿತಚಿಂತನೆಯನ್ನೇ ಮಾಡಲಾರಂಭಿಸಿದರು. ಸರಕಾರದೊಂದಿಗೆ ತಮ್ಮ ಹಕ್ಕುಗಳಿಗಾಗಿ ಮತ್ತು ಸ್ವಚ್ಛಂದ ಬದುಕಿಗಾಗಿ ಸೌಮ್ಯಸಂಘರ್ಷಕ್ಕಿಳಿದರು. 'ಅವಮಾನವೀಯ ಅಜಲು' ನಿಷೇದದಿಂದಗಿ ನಿಜವಾದ 'ಬದುಕಿನ ಸ್ವತಂತ್ರ್ಯ'ದ ಸವಿಯನ್ನು ಪಡೆದರು. ಆಶಾಜೀವಿಗಳಾಗಿ ಮತ್ತೆ ಸ್ವಉದ್ಯೋಗದ ಕನಸನ್ನು ಕಾಣಲಾರಂಭಿಸಿದರು.

ಕನಸು ಜೀವನದ ಪಥವನ್ನೇ ಬದಲಿಸುತ್ತದಂತೆ! ಹಿತಚಿಂತಕರ ಮಾತು, ಕೊರಗರ ಬದುಕಿನಲ್ಲಿಯೂ ಹಲವಾರು ಸ್ವಉದ್ಯೋಗಿ ಆಕಾಂಕ್ಷಿಗಳನ್ನು ಸೃಷ್ಠಿಸಿತು. ಕೊರಗರು ಪರರ ಸೇವೆ ಮಾಡುವವರಲ್ಲ, ಕೊರಗರೆಂದರೆ ಕೈಲಾಗದವರಲ್ಲ ಎಂಬುದನ್ನು ಸಾಧಿಸಲು ಮುಂದಾದರು. ಆ ಸಾಹಸಿಗರ ಸಾಲಿನಲ್ಲಿಂದು - ೨೦೦ಕ್ಕೂ ಹೆಚ್ಚು ರಿಕ್ಷಾ ಚಾಲಕರು ಮತ್ತು ಮಾಲಕರಿದ್ದಾರೆ. ಸ್ವಂತ ಲಾರಿ ಮತ್ತು ಕಾರುಗಳನ್ನು ಓಡಿಸುವವರಿದ್ದಾರೆ. ಟೈಲರ್ ಗಳಿದ್ದಾರೆ, ಡೋಬಿ ಅಂಗಡಿ ಮಾಲಕರಿದ್ದಾರೆ, ಮಲ್ಲಿಗೆ ಕೃಷಿಕರಿದ್ದಾರೆ, ಎಕರೆಗಟ್ಟಲೆ ಪ್ರದೇಶದಲ್ಲಿ ಕೃಷಿ ಮತ್ತು ತೋಟಗಾರಿಕೆ ಮಾಡಿ ವಾರ್ಷಿಕ ಲಕ್ಷಾಂತರ ರೂಪಾಯಿ ಆದಾಯಗಳಿಸುವ - 'ಪ್ರಗತಿಪರ ಕೃಷಿಕ' ಎಂದು ಬಿರುದನ್ನು ಪಡೆದವರೂ ಇದ್ದಾರೆ. ಅವರೆಲ್ಲರೂ - ತಾವು ಕೊರಗರು, 'ಕೊರಗುವುದು ನಮ್ಮ ಬದುಕಲ್ಲ' ಎನ್ನುವ ಸಂದೇಶವನ್ನು ಧನಿಕ ಮತ್ತು ಶೃಮಿಕ ವರ್ಗಕ್ಕೆ ಸಾರಿದವರು! ಬದುಕೆಂಬ ರಥದ ಸ್ವಸಾರಥಿಗಳಿವರು. ಕನಸು ಮತ್ತು ಕನಸು ನನಸು ಮಾಡುವ ಮನಸು - ಇವೆರಡರ ಫಲವೇ ಇದು! ಕನಸು ಸಾಕಾರಗೊಳಿಸಿದ ಆ ಸಧಕರಿಗಿದೋ ನನ್ನದೊಂದು ಪ್ರೀತಿಪೂರ್ವಕ ಅಕ್ಷರ ನಮನಗಳು...
- ಹೃದಯ
 —
ಕೊರಗರಲ್ಲಿ ಒಳ ಪಂಗಡಗಳು ಇದ್ದವೆಂದು ಬರೆದ ಇತಿಹಾಸಕಾರರು!
ಹುಭಾಶಿಕ ಎಂಬ 'ಕಾಡಿ ಕೂಜೆ' (ಕಾಡಿನ ಮಗ)ನ ಹತ್ಯೆ ಮಾಡಿದ ಪಾಲೆಗಾರರ ಈ ಸಮಾಜ - ಕೊರಗರಿಗೆ ಕೆಲವೊಂದು ಘೋರ ಕಟ್ಟುಪಾಡುಗಳನ್ನು, ವಿಧಿ ನಿಷೇದಗಳನ್ನು ಜಾರಿಗೊಳಿಸಿತ್ತು. ಸ್ಪರ್ಶ ವರ್ಣಗಳ ಅರಿವೇ ಇಲ್ಲದ ಕೊರಗರನ್ನು ಅಸ್ಪ್ರಶ್ಯರ ಸಾಲಿಗೆ ಸೇರಿಸಲಾಗಿತ್ತು.

ಅಸ್ಪ್ರಶ್ಯತೆ ತಾರತಮ್ಯದ ಪಿಡುಗಿಗೆ ಅಂಟಿಕೊಂಡ ಕೊರಗ ಸಮುದಾಯವು ಅಕ್ಷರ ಕಲಿಯುವಂತಿರಲಿಲ್ಲ. ದೇವಸ್ಥಾನಗಳಿಗೆ ಪ್ರವೇಶಿಸುವುದನ್ನು, ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡುವುದನ್ನು ಮತ್ತು ಕಾಡಿನಿಂದ ಊರಿಗೆ ಬಂದಾಗ ಉಗುಳುವುದನ್ನೂ ನಿಷೇಧಿಸಲಾಗಿತ್ತು!! ಹೀಗಾಗಿ, ಕೊರಗರು ಕಾಡಿನಿಂದ ಊರಿಗೆ ಬಂದಾಗ ಎಂಜಲು ಉಗುಳಲು ತಮ್ಮ ಸೊಂಟಕ್ಕೆ ಬಿದಿರಿನ ಬೊಂಬನ್ನು (ತುಳುವಿನಲ್ಲಿ 'ಅಂಡೆ' ಎನ್ನುತ್ತಾರೆ) ಕಟ್ಟಕೊಳ್ಳುತ್ತಿದ್ದರು. ಇದಕ್ಕೆ ಇವರನ್ನು ಊರಿನ ಇತರ ಜನವರ್ಗದವರು 'ಅಂಡೆ ಕೊರಗರು', ಎಂಜಲು ಉಗುಳಲು ತೆಂಗಿನ ಕಾಯಿಯ ಒಣ 'ಗೆರಟೆ' (ತುಳುವಿನಲ್ಲಿ 'ತಿಪ್ಪಿ' ಎನ್ನತ್ತಾರೆ) ಕಟ್ಟಿಕೊಂಡ ಕೊರಗರನ್ನು 'ತಿಪ್ಪಿ ಕೊರಗರು' ಎಂದು ಕರೆದರು.

ಕಾಡಿನಿಂದ ಊರಿಗೆ ಬಂದು ಅಜಲು ಸೇವೆ ಮಾಡುತ್ತಿದ್ದ ಕೊರಗರಿಗೆ ಸೊಪ್ಪಿನ ಬದಲು ಮಾನ ಮುಚ್ಚಿಕೊಳ್ಳಲು ಊರಿನವರು ಹೆಣಕ್ಕೆ ಹಾಕಿದ ಬಟ್ಟೆಯನ್ನೋ, ಹರಕಲು ಬಟ್ಟೆಯನ್ನೋ ಕೊಡುತ್ತಿದ್ದರು. ಹೀಗೆ ಬಟ್ಟೆ ತೊಟ್ಟುಕೊಂಡ ಕೊರಗರನ್ನು ಊರಿನ ಇತರ ಜನವರ್ಗದವರು 'ಕುಂಟು ಕೊರಗರು' ಎಂದು ಕರೆದರು (ಕುಂಟು ತುಳು ಪದ; ಬಟ್ಟೆ ಎಂದರ್ಥ). ಕಾಡಿನಲ್ಲಿಯೇ ಇದ್ದು ತನ್ನ ಕೆಲಸವನ್ನು ನಿರ್ವಹಿಸಿಕೊಂಡು, ಬರೇ ಸೊಪ್ಪು ಅಥವಾ ಪ್ರಾಣಿಗಳ ಚರ್ಮವನ್ನು ಸುತ್ತಿ ಬದುಕುತ್ತಿದ್ದವರು 'ಸೊಪ್ಪು ಕೊರಗರು' ಎಂದು ಕರೆಯಲ್ಪಟ್ಟರು. ಕಿವಿಗೆ ವಂಟಿ ಚುಚ್ಚಿಸಿಕೊಂಡ ಕೊರಗರನ್ನು ತುಳುವರು 'ವಂಟಿ ಕೊರಗರು' ಎಂದು ಕರೆಯಲಾರಂಭಿಸಿದರು. ಕೊರಗರನ್ನು 'ಅಂಡೆ, ಕುಂಟು, ತಿಪ್ಪಿ, ಸೊಪ್ಪು, ವಂಟಿ' ಎಂದು ಗುರುತಿಸಿ ಕರೆದದ್ದು ಇತರ ಜನ ವರ್ಗದವರೇ ಹೊರತು, ಸ್ವತಃ ಕೊರಗರಲ್ಲ! ಸಮಾನತೆ ಬಯಸುತ್ತಿದ್ದ ಕೊರಗರು ತಮ್ಮನ್ನು ತಾವು ಈ ರೀತಿ ಎಂದೂ ಗುರುತಿಸಿದ್ದಿಲ್ಲ ಮತ್ತು ಪ್ರತ್ಯೇಕ ಪಂಗಡಗಳನ್ನ ಕಟ್ಟಿಕೊಂಡವರೇ ಅಲ್ಲ. ಇದು ಸಮಾಜದ ವಿಭಾಜಕ ದೃಷ್ಠಿಯಿಂದಾಗಿ ಉಂಟಾದ ಗೊಂದಲ! ದುರಾದೃಷ್ಟವಶಾತ್, ಎಲ್ಲಾ ಇತಿಹಾಸಕಾರರು, ಸಂಶೋಧಕರು, ಚಿಂತಕರು ಮತ್ತು ಬರಹಗಾರರು - ನೈಜತೆಯನ್ನು ವಿಮರ್ಶಿಸದೆ ಕೊರಗರಲ್ಲಿ ಒಳಪಂಗಡಗಳು ಇದ್ದವೆಂದು, ಹಾಗೆಯೇ ಬರೆದುಬಿಟ್ಟಿದ್ದಾರೆ!
- ಹೃದಯ

ಕಾಮೆಂಟ್‌ಗಳಿಲ್ಲ: