ಗುರುವಾರ, ಜನವರಿ 30, 2014

ಹಣಕ್ಕೆ ಹೀರಿಕೊಳ್ಳುವ ಗುಣವಿದೆ, ಹುಷಾರು!






ಸೌಜನ್ಯ: ವಿಜಯ ಕರ್ನಾಟಕ

   ಭೆಟ್ಟಿಯಾದ ಯುವ ಕವಿಯೊಬ್ಬರನ್ನು 'ಬನ್ನಿ ಧಾರವಾಡಕ್ಕೆ' ಎಂದು ಮಮತೆಯಿಂದ ಕರೆದೆ. 'ಅಯ್ಯೋ ಬರೋದಿತ್ತು ಕಣ್ರಿ. ಈ ಸಲ ತಪ್ಪಿಹೋಯ್ತು. ಮುಂದಿನ ಸಾಹಿತ್ಯ ಸಂಭ್ರಮಕ್ಕೆ ಖಂಡಿತಾ ಬರ‌್ಬೇಕು, ಕರ‌್ದ ಮೇಲೆ ಬರೋದು ಚೆನ್ನಾಗಿರುತ್ತೆ...' ಎದುರಿದ್ದ ನನ್ನನ್ನು ಮರೆತು ಆತ ತನ್ನೊಂದಿಗೇ ತಾ ಮಾತನಾಡಿದಂತಿತ್ತು. ನಾ ಅವಾಕ್ಕಾಗಿ ನಿಂತಿದ್ದೆ. ಅಧೋಲೋಕದಿಂದ ಬಂದ ಪ್ರತಿಭಾವಂತನ ಮಾತುಗಳಿಗೆ ತತ್ತರಿಸಿದ್ದೆ. ಸಾಹಿತ್ಯ ಲೋಕಕ್ಕೆ ಹರಿದುಬರುತ್ತಿರುವ ಖಾಸಗಿ ಬಂಡವಾಳದ ಸೆಳವು ನಿಂತ ನೆಲವನ್ನೇ ತಪ್ಪಿಸುತ್ತಿದೆ. ನನ್ನ ಕಿವಿ ತಮಟೆಗಳಲ್ಲಿ ಹಲಗೆಯ ಢಪ್ಪಿನೊಂದಿಗೆ ಆ ಧ್ವನಿ- ''ದೊಡ್ಡ ಗೌಡರ ಬಾಗಿಲಿಗೆ ನಮ್ಮ ಎಲುಬಿನ ತ್ವಾರಣಾ...'' ರಾಮಕಷ್ಣ ಪರಮಹಂಸರು ಹೇಳುತ್ತಿದ್ದರಂತೆ ? ''ಹಣಕ್ಕೆ ಹೀರಿಕೊಳ್ಳುವ ಗುಣವಿದೆ, ಹುಷಾರು!''

ಕಳೆದೆರಡು ದಶಕಗಳಲ್ಲಿ ಖಾಸಗಿ ಬಂಡವಾಳ ಕಲೆ-ಸಾಹಿತ್ಯದ ವಲಯಗಳಲ್ಲಿ ಅತಿಕ್ರಮವಾಗಿ ಪ್ರವೇಶಿಸಿದೆ. ಸರ್ಕಾರಿ ಉತ್ಸವಗಳಲ್ಲೂ ಪ್ರಾಯೋಜಕತ್ವಗಳು ನಡೆದಿವೆ. ಹಿಂದೆ ಸಾಕ್ಷರತಾ ಆಂದೋಲನದಲ್ಲಿ, ಭಾರತ ಜ್ಞಾನವಿಜ್ಞಾನ ಸಮಿತಿ ಜಾಥಾ, ಅಭಿಯಾನಗಳಲ್ಲಿ ಹಳ್ಳಿಯ ಯುವಕಲಾವಿದರಿದ್ದರು. ಅಲ್ಲಿ ಸಾಮಾಜಿಕ ನ್ಯಾಯವನ್ನು ಒತ್ತಾಯಿಸುವ ಕ್ರಾಂತಿಗೀತೆಗಳು ಅನುರಣಿತೊಡಗಿದ್ದವು. ಅವು ಗ್ರಾಮೀಣ ಜನರನ್ನು ತೀವ್ರವಾಗಿ ಪ್ರಭಾವಿಸಿದ್ದವು. ಪ್ರಭುತ್ವವನ್ನು ಪ್ರಶ್ನಿಸುವ ಕೆಚ್ಚನ್ನು ಕಲಿಸಿದ್ದವು. ಇತ್ತೀಚಿನ ದಿನಗಳಲ್ಲಿ ಇಂತಹ ಕಲಾತಂಡಗಳು ಸರ್ಕಾರಿ ಕಪಾಪೋಷಿತ ಸಾಂಸ್ಕೃತಿಕ ತಂಡಗಳಾಗಿ ಬದಲಾಗಿವೆ. ಅನುದಾನದ ಮತ್ತು ಅವಕಾಶದ ಹೆಚ್ಚಳ ಸಾಮಾಜಿಕ ಚಳುವಳಿಯ ಪ್ರೇರಕ ಶಕ್ತಿಯನ್ನು ಸರ್ಕಾರಿ ಸೌಲಭ್ಯದ ಪ್ರಚಾರದ ಹಾಡುಗಳಿಗೆ ಮತ್ತು ಹಾಸ್ಯ ಪ್ರಸಂಗಗಳಿಗೆ ಬದಲಿಸಿದೆ. ಕ್ರಾಂತಿಗೀತೆಗಳು ಗುಜರಿಯಾಗಿವೆ. ಊರ ಅತ್ಮಶಕ್ತಿಯಂತಿದ್ದ ಸರ್ಕಾರಿ ಕನ್ನಡ ಶಾಲೆಗಳು ಮುಚ್ಚುತ್ತಿವೆ. ಕೂಡಿ ಬದುಕುವುದನ್ನು ಕಲಿಸಿದ್ದ ಪುಣ್ಯಕ್ಷೇತ್ರಗಳವು. ಯಾವಾಗ ಖಾಸಗಿ ಶಾಲೆಗಳ ಬಾಹ್ಯ ಶಿಸ್ತಿನ ಉರುವಣೆ ಆರಂಭವಾಯಿತೋ ಆಗಿನಿಂದ ಊರಿಗೊಂದು ಶಾಲೆಯಿದ್ದದ್ದು ಬದಲಾಯ್ತು. ಬಡವರಿಗೆ ಸರ್ಕಾರಿ ಶಾಲೆ, ಇದ್ದುಳ್ಳವರಿಗೆ ಖಾಸಗಿ ಶಾಲೆ ಎಂದಾಯಿತು.

ಇಂತಹದೇ ಬೆಳವಣಿಗೆ ಸಾಹಿತ್ಯ ಸಂಗೀತ ವಲಯಗಳಲ್ಲಿ ನಡೆಯಲಾರಂಭಿಸಿದೆಯೇ? ಇತ್ತೀಚೆಗೆ ಸಾಹಿತ್ಯದ ವಿಚಾರವನ್ನು ಚರ್ಚಿಸುವ ಗುತ್ತಿಗೆಯನ್ನು ಖಾಸಗಿ ಬಂಡವಾಳಗಾರರು ನಿರ್ವಹಿಸುತ್ತಿದ್ದಾರೆ. ಬರಹ ಯಾವತ್ತೂ ಧಾರಣೆ ಕುಸಿಯದ ಸರಕು ಎನ್ನುವುದು ಅವರಿಗೆ ತಿಳಿದಿದೆ. ಬರವಣಿಗೆ ಹೇಗಿರಬೇಕು? ಎಂಬ ಚರ್ಚೆಯನ್ನು ತಾದಾತ್ಮ್ಯದಿಂದ ಮಾಡುತ್ತ ಬರಹ ಯಾಕೆ ಬೇಕು? ಎಂಬ ಮತ್ತೊಂದು ಮಗ್ಗಲನ್ನು ಹೈಜಾಕ್ ಮಾಡಲಾಗುತ್ತಿದೆ. ಬಂಡವಾಳವು ಸಾಮಾಜಿಕ ಅಭಿಪ್ರಾಯ ಉತ್ಪಾದಿಸುವ ಘಟಕವೂ ಆಗಿರುವುದರಿಂದ ತನಗೆ ಪ್ರತಿಸ್ಪರ್ಧಿಯಾಗಬಲ್ಲ ಬರಹಲೋಕವನ್ನು ನಿರ್ಬೀಜೀಕರಣಗೊಳಿಸುವುದು ಅದರ ಉದ್ದೇಶ. ಕಲೆ ಸಾಹಿತ್ಯಗಳು ಯಾವತ್ತಿನಿಂದಲೂ ಸಾಮಾಜಿಕ ನ್ಯಾಯವನ್ನು ಒಡಲೊಳಗಿಟ್ಟುಕೊಂಡಿವೆ. ದಮನಿತರ ಪರವಾಗಿ ದನಿಯೆತ್ತಿವೆ. ಕತಿ ಏನು ಹೇಳುತ್ತಿದೆ ಮತ್ತು ಹೇಗೆ ಹೇಳುತ್ತಿದೆ- ಇದೊಂದು 'ಗಂಡಭೇರುಂಡ ನ್ಯಾಯ'. ಆದರೆ ಧಾರವಾಡದ ಸಾಹಿತ್ಯ ಸಂಭ್ರಮದಲ್ಲಿ ಭೈರಪ್ಪನವರು- ಆವರಣ ಮತ್ತು ಕವಲು ಕಾದಂಬರಿಗಳಲ್ಲಿ ಪ್ರಯೋಗಿಸಿದ ಹೊಸ ನಿರೂಪಣಾ ತಂತ್ರದ ಬಗ್ಗೆ ಚರ್ಚೆಯಾಗಲಿಲ್ಲ ಎಂದು ಬೇಸರಿಸಿಕೊಂಡಿದ್ದು ವರದಿಯಾಗಿದೆ. ಕತಿ ಏನು ಹೇಳುತ್ತಿದೆ ಎನ್ನುವುದಕ್ಕಿಂತ ಹೇಗೆ ಹೇಳುತ್ತಿದೆ ಎನ್ನುವುದು ಮುಖ್ಯವಾಗಬೇಕು ಎಂಬ ವಾದವಿದು. ಇಂಥ ವಾದಗಳು ಬೆಳೆದಷ್ಟೂ 'ಭೈರಪ್ಪನವರ ಆ ಎರಡು ಕತಿಗಳು ಸಮಸ್ಯಾತ್ಮಕವಾಗಿದೆ.' ಎಂದ ನಾ. ಡಿಸೋಜಾರಂಥವರು ತಮ್ಮ ಮಾತು ಹಿಂತೆಗೆದುಕೊಳ್ಳುತ್ತಲೇ ಇರಬೇಕಾಗುತ್ತದೆ, ಹಲವು ವಿರುದ್ಧ ತಾತ್ವಿಕತೆಗಳನ್ನು ಒಂದೆಡೆ ಕೂಡಿಸಿ ರಸವತ್ತಾದ ಚರ್ಚೆಯ ವಿಧಿ ವಿಧಾನವನ್ನು ಏರ್ಪಡಿಸಿ ಸೈದ್ಧಾಂತಿಕತೆಯ ಮೈಲಿಗೆಯನ್ನು ತೊಳೆದು ಶುದ್ಧ ಸಾಹಿತ್ಯದ ಭಂಡಾರವನ್ನು ತಯಾರಿಸಿ ಮುಂದಿನ ತಲೆಮಾರಿಗೆ ಕೈದಾಟಿಸಲಾಗುತ್ತದೆ. ಬರಹ ಎಂದರೆ 'ಹಾಗೆ ಸುಮ್ಮನೆ' ಹೊತ್ತುಗಳೆಯುವ ಸತ್ಸಂಗ, ಕಲಾತ್ಮಕ ವಹಿವಾಟು. ಹಣಕೊಟ್ಟು ಒಳಬಂದು ಸುವ್ಯವಸ್ಥಿತವಾಗಿ ಕಾಲಯಾಪನೆ ಮಾಡುವ ಜಾಗ. ಹೀಗೆ ಸಂಕಟಗಳಿಲ್ಲದ ನೋವಿಲ್ಲದ ಸಾಮಾಜಿಕ ಜವಾಬ್ದಾರಿ ಇತ್ಯಾದಿ ಅನಗತ್ಯಗಳಿಲ್ಲದ ಸಂಭ್ರಮವೇ ಆಗುತ್ತದೆ. ಮುಂದಿನ ತಲೆಮಾರಿಗೆ ಈ ಕ್ಲಾಸ್‌ಗಳು ಯಾವ ಧೋರಣೆಯನ್ನು ಬೆಳೆಸುತ್ತವೆ?

ಇಂತಹ ಕಾರ್ಪೋರೇಟ್ ಸಮಾವೇಶಗಳನ್ನು ಅಟ್ಟಕ್ಕೇರಿಸುತ್ತ ಸಾಹಿತ್ಯ ಸಮ್ಮೇಳನಗಳನ್ನು ಹಗುರಗೊಳಿಸುವ ಚರ್ಚೆಗಳು ನಡೆಯುತ್ತವೆ. ಸಾಹಿತ್ಯ ಸಮ್ಮೇಳನಗಳು ನೂರಕ್ಕೆ ನೂರರಷ್ಟು ಸರಿಯಾಗಿವೆ ಎಂದಲ್ಲ. ಅದಕ್ಕೊಂದು ಪ್ರಜಾಸತ್ತಾತ್ಮಕ ಸ್ವರೂಪವಿದೆ. ಜನಸಾಮಾನ್ಯರ ಪಾಲ್ಗೊಳ್ಳುವಿಕೆಯಿದೆ. ಲಕ್ಷಾಂತರ ಜನ ಕನ್ನಡ ಸಾಹಿತ್ಯದ ಹೆಸರಿನಲ್ಲಿ ಒಂದೆಡೆ ಸೇರುತ್ತಾರೆ. ಪುಸ್ತಕಗಳನ್ನು ಕೊಳ್ಳುತ್ತಾರೆ. ಕವಿತೆಗಳನ್ನು ಆಲಿಸುತ್ತಾರೆ. ರಾಜಕಾರಣಿಗಳ ಅನಗತ್ಯ ಪಾಲುದಾರಿಕೆ, ಸಮ್ಮೇಳನಾಧ್ಯಕ್ಷರ ಮೆರವಣಿಗೆ, ಸೌಲಭ್ಯ ಮತ್ತು ಶಿಸ್ತಿನ ಕೊರತೆ ಹೀಗೆ ಸರಿಪಡಿಸಬೇಕಾದ ಹಲವು ಅಂಶಗಳು ಅಲ್ಲಿವೆ ನಿಜ. ಆದರೆ ಸಾಹಿತ್ಯ ಪರಿಷತ್ತಿನೊಂದಿಗೂ ಸಮ್ಮೇಳನಗಳೊಂದಿಗೂ ನಿರಂತರ ಸಂಪರ್ಕವಿಟ್ಟುಕೊಂಡೇ ಬೆಳೆದ ಲೇಖಕರಿಗೆ ಈ ತಪ್ಪುಗಳನ್ನು ಸರಿಪಡಿಸುವುದು ತಮ್ಮ ಜವಾಬ್ದಾರಿ ಎನಿಸಲಿಲ್ಲವೆ? ಒಂದು ಕಾಲದಲ್ಲಿ ಸಾಹಿತ್ಯ ಸಮ್ಮೇಳನಗಳು ಹಿರಿಯ ಲೇಖಕರನ್ನು ಕಣ್ತುಂಬಿಸಿಕೊಳ್ಳುವ ತಾಣಗಳಾಗಿದ್ದವು. ಆದರೆ ಈಗದು ಕಾರ್ಪೋರೇಟ್ ಸಮಾವೇಶಗಳಲ್ಲಿ ಸಾಧ್ಯವಾಗುತ್ತಿರುವುದು ಏನನ್ನು ಸೂಚಿಸುತ್ತಿದೆ? ದಲಿತ-ಬಂಡಾಯ ಲೇಖಕರು ಪರಿಷತ್ತಿನ ಕಾರ್ಯಕ್ರಮಗಳಲ್ಲಿ ಭಾಗವಹಿಸದಿರುವ ಆ ಕಾಲದಲ್ಲಿ ಪರಿಷತ್ತಿಗೆ ಪ್ರಜಾಸತ್ತೀಯವಾದ ನೆಲೆಯಿದೆ ಎಂದು ಹೇಳುತ್ತಿದ್ದವರಿಗೆ ಈಗ ಯಾಕದು ಅಪಥ್ಯ? ದಲಿತ-ಬಂಡಾಯ ಧೋರಣೆಯ ಪ್ರವೇಶದಿಂದ ಮೈಲಿಗೆಯಾಗಿ ಹೊಸ ಸಾಹಿತ್ಯದ ಮಠಗಳು ಅಗತ್ಯ ಎನ್ನಿಸಿದವೇ?

ನಮ್ಮ ಈ ಕಾಲದಲ್ಲಿ ಸಾಂಸ್ಕೃತಿಕ ಎಂಬ ಬ್ಯಾನರ್ ಅಡಿಯಲ್ಲಿ ಏನು ಬೇಕಾದರೂ ಮಾಡಬಹುದು. ಸಂಸ್ಕೃತಿಯನ್ನು 'ಒಂದು ಚಹರೆ'ಯಾಗಿ ನಿರೂಪಿಸುವಾಗ ಮೇಲ್ಜಾತಿ ಮತ್ತು ಮೇಲ್ವರ್ಗಗಳ ಚಿಂತನೆಗಳು ಬಿಂಬಿಸಲ್ಪಡುತ್ತವೆ. ಇದು ಎತ್ತರದಲ್ಲಿ ನಿಂತು ನೋಡಿದಂತೆ. ಎಲ್ಲೆಲ್ಲೂ ಸುಂದರ ಎಲ್ಲವೂ ಸುಂದರ, 'ಆನು ಹಾರುವನೆಂದಡೆ ಕೂಡಲಸಂಗಯ್ಯ ನಗುವನಯ್ಯ' ಎಂದು ಬದುಕಿದ ಬಸವಣ್ಣನಂತೆ ಕೆಲವರು ಇದ್ದರು, ಇದ್ದಾರೆ. ಜಿ.ಎಸ್.ಎಸ್. ಅಂಥವರಾಗಿದ್ದರು. ಅವರು 40 ವರ್ಷಗಳ ಕೆಳಗೆ ಸಂಯೋಜಿಸುತ್ತಿದ್ದ ಆ ವಿಚಾರ ಸಂಕಿರಣಗಳಿಗೂ ಸಂಭ್ರಮದಲ್ಲಿ ನಡೆದ ಚರ್ಚೆಗಳಿಗೂ ಅದೆಂಥ ಸಂಬಂಧ? ಅವರು ನಿರ್ವಹಿಸಿದ್ದ ವಿಷಯಗಳ ಆದ್ಯತೆ, ಅವು ನಡೆಯುತ್ತಿದ್ದ ಸರಳ ವಿಧಾನವೇ ಬೇರೆ. ಮಾತಿನ ಮಾತಿಗೆ ಹೀಗೆ ಹೋಲಿಸಿಬಿಡಬಹುದೇ? ಪರ‌್ಯಾಯದ ಅನ್ವೇಷಕ ಗೌತಮ ಬುದ್ಧನನ್ನೇ ದಶಾವತಾರಗಳ ಗದ್ದುಗೆಗೆ ನೆಲೆಗೊಳಿಸಿದ ಪರಂಪರೆಯಲ್ಲವೇ?

ಕ್ರಿಕೆಟಿಗರು ಮತ್ತು ಸಿನಿಮಾ ತಾರೆಯರಂತೆ ಬರಹಗಾರರನ್ನು ಸೆಲಿಬ್ರಿಟಿಗಳಾಗಿ ಬಂಡವಾಳವಾದ ಬಿಂಬಿಸುತ್ತಿದೆ. ಇದು ಬರಹಗಾರರ ಚಿಂತನೆಯನ್ನು ತನ್ನ ಮೂಲದಿಂದ ಶಿಫ್ಟ್ ಮಾಡುತ್ತದೆ. ಸಮಾಜದ ದುಃಖ ಅನುಕಂಪದ ವಿಷಯವಾಗುತ್ತದೆ. ನಟರಿಗೆ ದೇಹ ಮಾರ್ಕೇಟ್ ಆದಂತೆ ಲೇಖಕರಿಗೆ ಸಂವೇದನೆ ಮಾರ್ಕೇಟ್ ಆಗುತ್ತದೆ. ಬರಹ, ಮಾತು, ನಗು, ಸರಳತೆ ಸ್ನೇಹ ಎಲ್ಲವೂ ಎಕ್ಸಪೋಸಿವ್ ತಂತ್ರಗಳಾಗುವುದೆಂದರೆ, ಬಂಡವಾಳವಾದದ ಕಡೆಯ ಗೆಲುವಿನ ಪತಾಕೆ ನೆಡುವುದೆಂದೇ ಅರ್ಥ. ಬಹುತ್ವವನ್ನು ತನ್ನ ಗುಣವಾಗಿಸಿಕೊಂಡು ಬಾಳಿದ ಭಾಷೆಯಲ್ಲಿ 'ಕನ್ನಡದ ಮುಖ್ಯ ಬರಹಗಾರರು ಒಂದೆಡೆ ಸೇರಿದ' ಎಂದು ಎಗ್ಗಿಲ್ಲದೆ ಬರೆಯುವುದೆಂದರೆ ಸಾಂಸ್ಕೃತಿಕ ಭಯೋತ್ಪಾದನೆಯನ್ನು ಉಂಟುಮಾಡುವುದೇ ಆಗಿದೆ. ಈ ಭಯಕ್ಕೆ ಸಿಕ್ಕಿದ್ದ ಆ ಯುವಕವಿ ತತ್ತರಿಸಿದ್ದ. 'ಮುಂದಿನ ಸಲವಾದರೂ ಬರುವೆ' ಎಂದಿದ್ದ. ಆತ ಬರಬಹುದು, ಬರುತ್ತಾನೆ. ಆದರೆ ಅವನು ಬಂದ ಹಾದಿಯ ಬದಿಗೆ ''ಇಂದು ನಮ್ಮ ನೆಲ ಬೇಡುತ್ತಿರೋದು ಪ್ರಗತಿಶೀಲ ಸಾಹಿತ್ಯವನ್ನೇ. ಈ ಹಿಂದೆ ತಲೆಯಲ್ಲಿ ಹುಟ್ಟಿ ತಲೆಯಲ್ಲೇ ಸತ್ತ ಪ್ರಗತಿಶೀಲತೆ ಈಗ ಪಾದಗಳನ್ನು ಬೇಡುತ್ತಿದೆ. ದಲಿತರು ಬರೆದರೂ ಸ್ವಲ್ಪಕಾಲ ಪ್ರತಿಭಟನೆಗಾಗಿ ಬರೆದು ನಂತರ ನಮ್ಮಂತೆ ಬರೆದಾರು ಎಂಬ ತೀರ್ಮಾನಕ್ಕೆ ಬರುತ್ತಾರೆ''. ಎಂಬ ದೇವನೂರು ಮಹಾದೇವರ ಮಾತು ನರಳುತ್ತಿರುತ್ತದೆ.

ಕಾಮೆಂಟ್‌ಗಳಿಲ್ಲ: