ಶನಿವಾರ, ಜನವರಿ 25, 2014

ನೆಲ ಕಣಜ

-ಬಿ.ಶ್ರೀಪಾದ ಭಟ್

ಸೌಜನ್ಯ: ವರ್ತಮಾನ ಡಾಟ್ ಕಮ್


ಹಿರಿಯ ಸ್ನೇಹಿತರಾದ ಎನ್. ಗೋವಿಂದಪ್ಪನವರ ಗ್ರಾಮ ಸಂಸ್ಕೃತಿಯ ಕುರಿತಾದ ಲೇಖನಗಳ ಪುಸ್ತಕ “ನೆಲಕಣಜ” ಮೊನ್ನೆ ಹುಣ್ಣಿಮೆಯಂದು nelakanaja-frontಬಿಡುಗಡೆಯಾಯ್ತು. ಇದನ್ನು ಆದಿಮ ಪ್ರಕಾಶನದವರು ಪ್ರಕಟಿಸಿದ್ದಾರೆ.
ಗೋವಿಂದಪ್ಪನವರು ಮಹಾನ್ ತಾಯ್ತನದ ವ್ಯಕ್ತಿ. ಅವರ ಮಾನವೀಯತೆ ಮತ್ತು ಸದಾ ತುಡಿಯುವ ಅಂತಃಕರಣ, ಹಾಗೂ ಗ್ರಾಮ ಸಂಸ್ಕೃತಿಯ ದಟ್ಟ ಅನುಭವಗಳು ಈ ಗ್ರಾಮೀಣ ಲಯಗಳ ಮತ್ತು ಈ ಮಣ್ಣಿನ ಬದುಕನ್ನು ಕುರಿತಾಗಿ ಅತ್ಯಂತ ಅಪ್ತವಾಗಿ ಮತ್ತು ಪ್ರಾಮಾಣಿಕವಾಗಿ ಬರೆಯುವಂತೆ ಮಾಡಿದೆ. ರಾಮಯ್ಯನವರು ಬೆನ್ನುಡಿಯಲ್ಲಿ ಬರೆದಂತೆ ಇಲ್ಲಿ ಮುರಿದು ಬಿದ್ದಿರುವ ಅರವಂಟಿಕೆಗಳು, ಕಾಣೆಯಾಗುತ್ತಿರುವ ಸಾಲು ಮರಗಳು, ಕಣಜಗಳು, ಮಳೆ ನಕ್ಷತ್ರಗಳು, ಕಂಬಳಿ ಕಾಯಕ ಮುಂತಾದ ಜೀವತೋರಣಗಳ ಸಂಭ್ರಮಗಳನ್ನು, ಪತನಗಳನ್ನು ಗೋವಿಂದಪ್ಪ ಸಶಕ್ತವಾಗಿ ಕಟ್ಟಿಕೊಡುವುದರಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನು ಅವರು ಸಾಧಿಸಿದ್ದು ತಮ್ಮ ಜೀವಪರ ವ್ಯಕ್ತಿತ್ವದಿಂದ. ಕೊಂಚವೂ ಜಡವಾಗಲು ನಿರಾಕರಿಸುವ ಸೂಕ್ಷ್ಮತೆಯಿಂದ.
ಬೌದ್ಧಿಕ ಬಡಿವಾರಗಳನ್ನು ನಿರ್ಲಜ್ಯದಿಂದ ಪ್ರದರ್ಶಿಸುವ, ಸಾಮಾಜಿಕ, ರಾಜಕೀಯ, ಸಾಹಿತ್ಯಕ, ಸಾಂಸ್ಕೃತಿಕ ಪಠ್ಯಗಳ ಆಳವಾದ ಓದಿನಿಂದ, ಚರ್ಚೆಯಿಂದ ದೊರಕಿದ ಅಪಾರ ಜ್ಞಾನವನ್ನು ಅಕಡೆಮಿಕ್‌ನ ಅಹಂಕಾರವನ್ನು ವ್ಯಕ್ತಪಡಿಸಲು ಮಾತ್ರ ಬಳಸುವ ನಮ್ಮ ಅನೇಕ ಯೂನಿವರ್ಸಿಟಿ ಬುದ್ಧಿಜೀವಿಗಳಿಗೆ ಒಂದು ಮಾನವೀಯತೆಯ ಪಾಠದಂತಿದೆ ಇಲ್ಲಿನ ಸರಳರೇಖೆಯಂತಿರುವ ಲೇಖನಗಳು.
ಸರಳವಾಗಿರುವ ಇಲ್ಲಿನ ಲೇಖನಗಳಿಗೆ ಇನ್ನಷ್ಟು ವಿಸ್ತಾರ ಮತ್ತು ಆಳವಾದ ಒಳನೋಟಗಳ ಕೊರತೆಯಿದೆ. ಆದರೆ ಲೇಖಕರು ಮುಂದಿನ ದಿನಗಳಲ್ಲಿ ಈ ಶೈಲಿ ವಿಸ್ತಾರವನ್ನು ಬೇಡುವ ಈ ಬೆಳವಣಿಗೆಯನ್ನು ಸಾಧಿಸಲು ಅಮೂರ್ತವಾದ ಆದರೆ ವ್ಯಾಪಕವಾದ ಗ್ರಹಿಕೆಯನ್ನು ಕಂಡುಕೊಳ್ಳುತ್ತಾರೆ ಎನ್ನುವ ಭರವಸೆಯಂತೂ ಇಲ್ಲಿ ದೊರಕುತ್ತದೆ.
ಗೋವಿಂದಪ್ಪನವರು ಈ ಗ್ರಾಮ ಸಂಸ್ಕೃತಿಯನ್ನು ಸ್ವತಃ ಅನುಭವಿಸಿದವರು, ಕಣ್ಣಾರೆ ಕಂಡವರು ಮತ್ತು ಇಂದು ಅದರ ಕಣ್ಮರೆಗೆ ಸಾಕ್ಷಿಯಾಗುತ್ತಲೇ ಅಸಹಾಯಕತೆಯಿಂದ ವಿಷಾದಿಸುತ್ತಿರುವವರು. ಲೇಖಕರ ಈ ಪ್ರಾಮಾಣಿಕ ಗುಣಗಳೇ nelakanaja-backಇದು ಒಂದು ವರದಿಯಾಗುವ ಅಪಾಯದಿಂದ ಪಾರು ಮಾಡಿದ್ದು. “ಆದಿಮ ಲಿವಿಂಗ್ ಟೈಮ್ಸ್” ಪತ್ರಿಕೆಯಲ್ಲಿ ಪ್ರಕಟಗೊಂಡ ಇಲ್ಲಿನ ಬಹುಪಾಲು ಲೇಖನಗಳು ಆ ಪತ್ರಿಕೆಗೆ ಸದಾ ಅಂಟಿಕೊಳ್ಳುತ್ತಿದ್ದ ಅಕಡೆಮಿಕ್ ಚಿಂತನೆಗಳ ಕ್ಲೀಷೆಯಿಂದ ಪಾರುಮಾಡಿತು ಎಂದು ನಾನು ಭಾವಿಸುತ್ತೇನೆ.

“ನೆಲಕಣಜ – ಗ್ರಾಮ ಸಂಸ್ಕೃತಿಯ ಕೆಲವು ಟಿಪ್ಪಣಿಗಳು”
ಲೇಖಕರು : ಎನ್.ಗೋವಿಂದಪ್ಪ
ಪ್ರಕಾಶಕರು : ಆದಿಮ ಪ್ರಕಾಶನ, ಶಿವಗಂಗೆ, ವಡೇರಹಳ್ಳಿ ಅಂಚೆ, ಕೋಲಾರ – 563101

ಕಾಮೆಂಟ್‌ಗಳಿಲ್ಲ: