ಮಂಗಳವಾರ, ಜನವರಿ 14, 2014

ಈದ್ ಮಿಲಾದ್, ಕ್ರಿಕೆಟ್ ಮ್ಯಾಚ್, ಧರ್ಮ ರಕ್ಷಣೆ


-ಮುನೀರ್ ಕಾಟಿಪಳ್ಳ

ಸೌಜನ್ಯ: ವರ್ತಮಾನ 
ಕುಳಾಯಿ ಮಂಗಳೂರು ನಗರ ಹೊರವಲಯದ ಗ್ರಾಮ. ಮಂಗಳೂರಿನ ಎಲ್ಲಾ ಊರುಗಳಂತೆ ಇಲ್ಲಿ ಹಿಂದೂಗಳು, ಮುಸ್ಲಿಮರು, ಕ್ರಿಶ್ಚಿಯನ್ನರು ವಾಸವಾಗಿದ್ದಾರೆ. 1990 ನೇ ಇಸವಿಯ ವರೆಗೆ ಇಲ್ಲಿ ಎಲ್ಲಾ ಧರ್ಮದವರು ಜೊತೆಯಾಗಿ ಅನೋನ್ಯತೆಯಿಂದ ಬದುಕುತ್ತಿದ್ದರು. ಮುಸ್ಲಿಂ, ಹಿಂದೂ, ಕ್ರಿಶ್ಚಿಯನ್ನರು ಜೊತೆಯಾಗಿ ತಂಡ ಕಟ್ಟಿಕೊಂಡು ಅಂಡರ್ ಆರ್ಮ್ ಕ್ರಿಕೆಟ್ ಆಡುತ್ತಿದ್ದರು. ಕುಳಾಯಿ ಗ್ರಾಮ ಒಂದರಲ್ಲೇ ಎಂಟು-ಹತ್ತು ಇಂತಹ ಕ್ರಿಕೆಟ್ ತಂಡಗಳಿದ್ದವು.  
rural-cricket-indiaನ್ಯೂಸ್ಟಾರ್, ಅಜೇಯ, ಸೂಪರ್ ಸ್ಟಾರ್, ಫ್ರೆಂಡ್ 
ಸರ್ಕಲ್, ತರುಣ ವೃಂದ ಹೀಗೆ ಧರ್ಮದ ಸೋಂಕಿಲ್ಲದ ಹೆಸರುಗಳನ್ನು ಇಂತಹ ಕ್ರಿಕೆಟ್ ತಂಡಗಳು ಹೊಂದಿದ್ದವು. 90 ರ ದಶಕದ ಆರಂಭದ ನಂತರ ದ.ಕ. ಜಿಲ್ಲೆಯ ಎಲ್ಲೆಡೆ ಆದ ಬದಲಾವಣೆಗಳು ಕುಳಾಯಿಯಲ್ಲೂ ನಡೆಯಿತು. ಹಿಂದೂ, ಮುಸ್ಲಿಂ ಪ್ರಜ್ಞೆಗಳು ಜಾಗೃತವಾಯಿತು. ಒಂದೆರಡು ಸುತ್ತಿನ ಧರ್ಮ ಯುದ್ಧಗಳೂ ನಡೆದುಹೋದವು. ಒಂದಿಬ್ಬರು ಅಮಾಯಕರು ಧರ್ಮ ಯುದ್ಧದಲ್ಲಿ ಹುತಾತ್ಮರಾದರು. ಇದೆಲ್ಲದರ ಮಧ್ಯೆ ಕ್ರಿಕೆಟ್ ಆಟ, ಪ್ರತೀ ಭಾನುವಾರದ ಟೂರ್ನ್‌ಮೆಂಟ್ ತನ್ನದೇ ಹುಮ್ಮಸ್ಸಿನಲ್ಲಿ ಮುಂದುವರಿದಿತ್ತು. ಧರ್ಮ ಯುದ್ಧದ ನೆರಳು ಕ್ರಿಕೆಟ್ ತಂಡಕ್ಕೂ ಸೋಂಕತೊಡಗಿತು. ಧರ್ಮವನ್ನು ಪ್ರತಿನಿಧಿಸುವ ಹೆಸರಿನ ಕ್ರಿಕೆಟ್ ತಂಡಗಳೂ ರಚನೆಗೊಂಡವು. ಹಿಂದೂಗಳಷ್ಟೇ ಸದಸ್ಯರಾಗಿರುವ, ಮುಸ್ಲಿಮಷ್ಟೇ ಆಟ ಆಡುವ ಪರಿಶುದ್ಧ ತಂಡಗಳಾಗಿ ಕುಳಾಯಿಯ ತಂಡಗಳು ಪರಿವರ್ತನೆಗೊಂಡವು. ಭಾನುವಾರದ ಪಂದ್ಯಾಟಗಳಲ್ಲಿ ಹಿಂದೂ, ಮುಸ್ಲಿಂ ತಂಡಗಳು ಮುಖಾಮುಖಿಯಾದಾಗ, ಕ್ರಿಕೆಟ್ ಅಭಿಮಾನಿಗಳಲ್ಲಿ ಧರ್ಮ ಯುದ್ಧದ ಉದ್ವೇಗ. ಸಿಕ್ಸ್, ಫೋರ್ ಹೊಡೆದಾಗ, ವಿಕೆಟ್‌ಗಳು ಬಿದ್ದಾಗ ತಮ್ಮ ಧರ್ಮದ ತಂಡದ ಪರವಾಗಿ ಜಯ ಜಯಕಾರ.
ಇಂತಹ ಊರಿನಲ್ಲಿ ಎರಡು ತಂಡಗಳು ಬೆಟ್ ಕಟ್ಟಿ ಆಡಿದ ಕ್ರಿಕೆಟ್ ಆಟ ಈದ್ ಮಿಲಾದ್ ಹಬ್ಬ, ಅದರ ಮೆರವಣಿಗೆಯನ್ನು ಧರ್ಮಯುದ್ಧದ ಸಮೀಪಕ್ಕೆ ತಂದು ನಿಲ್ಲಿಸಿತು. ಒಂದು ತಂಡದ ಹೆಸರು ಓಂಶಕ್ತಿ. ಹೆಸರೇ ಸೂಚಿಸುವಂತೆ ಹಿಂದೂಗಳದ್ದು. ಮತ್ತೊಂದು ಗ್ರೀನ್ (ಹಸಿರು) ಸ್ಟಾರ್, ಹಸಿರು ಕೇಸರಿಗೆ ಎದುರಾಳಿಯಾಗಿ ಮುಸ್ಲಿಂ ಮೆರವಣಿಗೆಗಳಲ್ಲಿ ಬಳಕೆಯಾಗುವುದರಿಂದ ಗ್ರೀನ್ ಸ್ಟಾರ್ ಮುಸ್ಲಿಂ ಹದಿಹರೆಯದ ಕ್ರಿಕೆಟ್ ಆಟಗಾರರದ್ದು. ಈ ತಂಡಗಳ ಬೆಟ್ಟಿಂಗ್ ಕ್ರಿಕೆಟ್ ಆಟದಲ್ಲಿ ಗ್ರೀನ್ ಸ್ಟಾರ್rural_cricketನಿರಂತರವಾಗಿ ಸೋತು ಕೆಲವು ಸಾವಿರ ಹಣ ಕಳೆದುಕೊಂಡಿತ್ತು. ಅರ್ಧ ದುಡ್ಡು ಪಾವತಿಸಿ ಇನ್ನು ಎರಡು, ಮೂರು ಸಾವಿರಕ್ಕೆ ಕೈ ಎತ್ತಿತ್ತು. ಹಣ ಪಾವತಿಗೆ ಸಂಬಂಧಿಸಿ ಹುಡುಗರ ಮಧ್ಯೆ ಸರಣಿ ಮಾತುಕತೆಗಳು ನಡೆದವು. ಇದೇ ಸಂದರ್ಭದಲ್ಲಿ ಕುಳಾಯಿಯಲ್ಲಿ ಈದ್ ಮಿಲಾದ್ ಆಚರಣೆಯ ಸಂಭ್ರಮ. ಎಲ್ಲಾ ಊರುಗಳಂತೆ ಒಂದು ವಾರ ರಾತ್ರಿ ಹೊತ್ತು ವಿವಿಧ ಕಾರ್ಯಕ್ರಮ, ಮಕ್ಕಳ ಹಾಡು, ಭಾಷಣ, ಕೊನೆಯ ದಿನ ಮಕ್ಕಳಿಂದ ಈದ್ ಮಿಲಾದ್ ಮೆರವಣಿಗೆ. ಈ ಬಾರಿಯ ಈದ್ ಮಿಲಾದ್ ಆಚರಣೆಗೆ ಪ್ರಭಾಕರ ಭಟ್‌ರ ಅಮೋಘ ಭಾಷಣದ ಸ್ಫೂರ್ತಿಯು ಇದ್ದುದರಿಂದ ತಯಾರಿ ಭರ್ಜರಿಯಾಗಿ ನಡೆದಿತ್ತು. ಎಲ್ಲೆಡೆ ಹಸಿರು ಬಾವುಟ, ತೋರಣಗಳು. ಈದ್ ಮಿಲಾದ್ ಮೆರವಣಿಗೆಯ ಹಿಂದಿನ ದಿನ ರಾತ್ರಿ ಗ್ರೀನ್ ಸ್ಟಾರ್, ಓಂಶಕ್ತಿ ತಂಡಗಳ ಕ್ರಿಕೆಟ್ ಬೆಟ್ಟಿಂಗ್ ಬಾಕಿ ಹಣದ ಮಾತುಕತೆ ಮುಂದುವರಿದಿದೆ. ಪಂಚಾತಿಕೆ ವಿಫಲವಾಗಿ ಗ್ರೀನ್ ಸ್ಟಾರ್‌ನ ಮುಸ್ಲಿಂ ಹುಡುಗನಿಗೆ ಓಂ ಶಕ್ತಿಯ ಹಿಂದೂ ಹುಡುಗರು ವಿಕೆಟ್‌ನಿಂದ ಬಡಿದು ತಲೆ ಒಡೆದಿದ್ದಾರೆ. ಪೆಟ್ಟು ತಿಂದವ ಆಸ್ಪತ್ರೆ ಸೇರಿದರೆ, ಸುದ್ದಿ ಮಸೀದಿ ತಲುಪಿದೆ. ಅಲ್ಲಿ ಮಕ್ಕಳ ಹಾಡಿನ ಸ್ಪರ್ಧೆಯಲ್ಲಿ ಸೇರಿದ್ದ ಮಕ್ಕಳು, ಮಹಿಳೆಯರಲ್ಲಿ ಭಯ ಮೂಡಿದರೆ, ಯುವಕರಲ್ಲಿ ಆಕ್ರೋಶ. ತಮ್ಮವರಿಗೆ ಬಡಿದವರನ್ನು ಬಿಡಬಾರದು ಎಂಬ ಧರ್ಮರಕ್ಷಣೆಯ ಕಿಚ್ಚು. ಹಿರಿಯರ ಮಾತುಕೇಳದ ಗ್ರೀನ್ ಸ್ಟಾರ್‌ನ ಕೆಲ ಹುಡುಗರು ಹಸಿರು ತೋರಣ ಬಾವುಟಗಳ ಮಧ್ಯೆಯೇ ತಮ್ಮವನಿಗೆ ಹೊಡೆದವರನ್ನು ಹುಡುಕಾಡಲು ಹೊರಟಿದ್ದಾರೆ. ಅವರು ಅಡಗಿರಬಹುದಾದ ಮನೆಯ ಕದ ತಟ್ಟಿದ್ದಾರೆ. ಆವಾಜ್ ಹಾಕಿದ್ದಾರೆ. ಮಕ್ಕಳು, ಮಹಿಳೆಯರು ಭಯದಿಂದ ಮನೆ ಸೇರಿದ್ದಾರೆ.
ಬೆಳಿಗ್ಗೆಯಾದರೆ, ಮಿಲಾದ್ ಮೆರವಣಿಗೆ. ಅಷ್ಟರಲ್ಲಿ ಸುದ್ದಿ ವಾಟ್ಸಪ್, ಮೊಬೈಲ್ ಮೂಲಕ ಹತ್ತೂರು ತಲುಪಿದೆ. ಈದ್ ಮಿಲಾದ್ ಮೆರವಣಿಗೆಯಲ್ಲಿ ಹಸಿರು ಬಾವುಟಗಳು ಸ್ವಲ್ಪ ಹೆಚ್ಚೇ ಉತ್ಸಾಹದಲ್ಲಿ ಹಾರಾಡತೊಡಗಿದೆ. ಹತ್ತಿರದ ಊರುಗಳ ಅಪರಿಚಿತ ಯುವಕರೂ ಧರ್ಮ ರಕ್ಷಣೆಗಾಗಿ ತಮ್ಮ ಊರಿನ ಮಿಲಾದ್ ಬಿಟ್ಟು ಕುಳಾಯಿಗೆ ಬಂದಿದ್ದಾರೆ. ಮಸೀದಿಯಿಂದ ನೂರಿನ್ನೂರು ಮೀಟರ್ ದೂರದ ಭಜನಾ ಮಂದಿರದ ಬಳಿಯೂ ಊರಿನ ಹಿಂದೂ ಯುವಕರ ಜೊತೆಗೆ ಅಪರಿಚಿತ ಧರ್ಮ ರಕ್ಷಕರ ದೊಡ್ಡ ದಂಡು ಸೇರಿದೆ. ಇನ್ನೇನು ಧರ್ಮಯುದ್ಧ ನಡೆಯಬೇಕು. ಊರಿಡೀ ಆತಂಕ, ಪೊಲೀಸ್ ಲಾಠಿ ಬೂಟುಗಳ ಕವಾಯತು, ಜೀಪುಗಳ ತಿರುಗಾಟ, Eid-e-Milad-mangaloreಈದ್ ಮಿಲಾದ್ ಮೆರವಣಿಗೆಯ ಸಂಭ್ರಮಕ್ಕಾಗಿ ಕಾದಿದ್ದ ಮುಸ್ಲಿಂ ಪುಟಾಣಿಗಳ ಕಣ್ಣಲ್ಲಿ ಸಣ್ಣ ಭಯ. ಮಿಲಾದ್ ಮೆರವಣಿಗೆ ಸಾಗುವಾಗ ರಸ್ತೆ ಬದಿಯ ತಮ್ಮ ಮನೆಯ ಮುಂದೆ ನಿಂತು ಸಿಹಿತಿಂಡಿ ಪಡೆದು ಶುಭಾಶಯ ಹೇಳುವ ಹಿಂದೂ ಮಕ್ಕಳು, ಮಹಿಳೆಯರು ಈ ಬಾರಿ ಮನೆಯ ಒಳಭಾಗಕ್ಕೆ ಸರಿದಿದ್ದರು. ಅಂತೂ ಪೊಲೀಸರ ಬಿಗಿ ಬಂದೋಬಸ್ತ್, ಮುಸ್ಲಿಂ ಮಸೀದಿ ಕಮಿಟಿಯವರ ಜವಾಬ್ದಾರಿಯುತ ನಡವಳಿಕೆಯಿಂದಾಗಿ ಆಕ್ರೋಶಿತ ಯುವಕರ ಗೊಣಗಾಟಗಳ ಮಧ್ಯೆ ಮುಖಾಮುಖಿ ತಪ್ಪಿದೆ. ಧರ್ಮಯುದ್ದವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.
ವಾರದ ನಂತರ ಮತ್ತೆ ಕ್ರಿಕೆಟ್ ಆಟ ಶುರುವಾಗುತ್ತದೆ. ಮುಂದೆ ಚುನಾವಣೆ ಬೇರೆ ನಡೆಯಲಿದೆ. ಮೋದಿಯೋ ಮತ್ತೊಬ್ಬನೋ ಪ್ರಧಾನಿ ಆಗಬೇಕಿದೆ. ಮಗದೊಬ್ಬನು ಸಂಸದನಾಗಬೇಕಿದೆ. ಹಾಗಾಗಿ ಧರ್ಮವನ್ನು ರಕ್ಷಿಸಬೇಕಿದೆ.
ಹಬ್ಬಗಳು ಮರಳಿ ಬರುತ್ತವೆ, ಮೆರವಣಿಗೆಗಳೂ ಸಹ. ಆದರೆ ಮಿಲಾದ್ ಸಂಭ್ರಮದಲ್ಲಿ ಅರಳಬೇಕಾಗಿದ್ದ ಆ ಮುಗ್ಧ ಮಕ್ಕಳ ನಗುವನ್ನು, ಸಂತೋಷವನ್ನು ಮರಳಿ ತರುವುದು ಯಾರು? ಇದು ಮಂಗಳೂರಿನ ಪ್ರತಿಯೊಂದು ಗ್ರಾಮದ ಸ್ಥಿತಿ… ಧರ್ಮ ರಕ್ಷಕರಿಂದ ಮಂಗಳೂರನ್ನು ಮುಕ್ತಿಗೊಳಿಸುವುದು ಹೇಗೆ?

ಕಾಮೆಂಟ್‌ಗಳಿಲ್ಲ: