ಶನಿವಾರ, ಮೇ 26, 2012

ಬೇಡರ ಸಂಸ್ಕೃತಿಯಲ್ಲಿ ಪಶುಪಾಲನಾ ಕುರುಹುಗಳು



ಡಾ. ಸಣ್ಣ ಪಾಪಯ್ಯ


ಹೆಸರುಗಳು ಸಂಸ್ಕೃತಿ ಅಧ್ಯಯನದ ಪ್ರಮುಖ ಆಕರಗಳು.  ಹೆಸರುಗಳು ಅಂದ ತಕ್ಷಣ ನಮಗೆ ನೆನಪಾಗುವುದು ವ್ಯಕ್ತಿನಾಮಗಳು ಮತ್ತು ಸ್ಥಳನಾಮಗಳು.  ಕುಲಗಳ ಹೆಸರು(ಕುಲನಾಮ) ಗೋತ್ರ, ಪಂಗಡದ ಹೆಸರುಗಳೂ ಸಹ ಆಯಾ ಸಮುದಾಯದ ಸಾಂಸ್ಕೃತಿಕ, ಚಾರಿತ್ರಿಕ ಮತ್ತು ಭಾಷಿಕ ಅಧ್ಯಯನಕ್ಕೆ ಸಹಕಾರಿಯಾಗಬಲ್ಲವು.  ಹೆಸರು ಅನೇಕ ಸಾಂಸ್ಕೃತಿಕ ಅಂಶಗಳ ಸಂಗಮವಾಗಿರುತ್ತದೆ.  “ಒಂದು ಹೆಸರಿನಲ್ಲಿ ಒಂದು ಜೀವನ ಕ್ರಮದ ಚರಿತ್ರೆಯಿರುತ್ತದೆ ಎಂಬುದನ್ನು ಗಮನಿಸಬೇಕು.  ಅಂದರೆ ನೇರವಾಗಿ ಜೀವನಕ್ರಮದ ಸಂಗತಿಗಳನ್ನು ಹೇಳುವುದಿಲ್ಲವಾದರೂ ಅದರ ಒಟ್ಟಂದವನ್ನು ಪರೋಕ್ಷ ನೆಲೆಯಲ್ಲಿ ತೆರೆದು ತೋರಿಸುವ ಮೂಲಾಧಾರಗಳಾಗಿ ನಾಮಗಳು ಮಹತ್ವದ ಪಾತ್ರವಹಿಸುತ್ತವೆ” (ಡಾ.ಜಾಜಿ ದೇವೇಂದ್ರಪ್ಪ ಆಂಧ್ರ-ಕರ್ನಾಟಕ ಗಡಿಪ್ರದೇಶದ ಸ್ಥಳನಾಮಗಳು. ಪುಟ-೩) ಎಂಬುದನ್ನು ಗಮನಿಸಿದರೆ ನಾಮಗಳು ಸಾಂಸ್ಕೃತಿಕ ಅಧ್ಯನದಲ್ಲಿ ಎಷ್ಟೊಂದು ಮಹತ್ತರವಾದವುಗಳೆಂದು ತಿಳಿಯುತ್ತದೆ.

ಬೇಡರಲ್ಲಿ ಪ್ರಧಾನವಾಗಿ ಎರಡು ಪಂಗಡಗಳಿವೆ.  ಒಂದು ಮ್ಯಾಸಬೇಡರು ಇನ್ನೊಂದು ಊರುಬೇಡರು.  ಈ ನಿಬಂಧದಲ್ಲಿ ಮ್ಯಾಸಬೇಡರ ಕುಲಗಳ ಹೆಸರು, (ಕುಲನಾಮ) ಗೋತ್ರ, ಪಂಗಡದ ಹೆಸರು ಮತ್ತು ವ್ಯಕ್ತಿನಾಮಗಳಲ್ಲಿ ಕಾಣಸಿಗುವ ಪಶುಪಾಲನೆಗೆ ಸಂಬಂಧಿಸಿದ ಸಂಗತಿಗಳನ್ನು ಮಾತ್ರ ವಿಶ್ಲೇಷಿಸುವ ಪ್ರಯತ್ನಮಾಡಲಾಗಿದೆ. 

ಬೇಡರು ಅಥವಾ ಮ್ಯಾಸಬೇಡರು ಎಂದ ತಕ್ಷಣ ನಮ್ಮ ಕಲ್ಪನೆಗೆ ಬರುವುದು ಬೇಟೆ, ಬೇಟೆಯಾಡುವುದು.  ಮ್ಯಾಸಬೇಡರು ಎಂದರೆ ಬೇಟೆಯಾಡುವವರು, ಪ್ರಾಣಿಗಳನ್ನು ಬೇಟೆಯಾಡಿ ತಿನ್ನುವವರು ಎಂದು ಸಹಜವಾಗಿಯೇ ವ್ಯಾಖ್ಯಾನಿಸುವರು.  ಮ್ಯಾಸ ಪದ ಮೇಯಿಸು ಎಂಬ ಪದದಿಂದ ನಿಷ್ಪನ್ನವಾಗಿರಬಹುದು.  (ಎಸ್.ಎಸ್.ಅಂಗಡಿ ಕರ್ನಾಟಕ ಬುಡಕಟ್ಟು ಭಾಷೆ, ಪುಟ -೨೪೪) ಎಂಬ ಈ ವಾಕ್ಯದಲ್ಲಿಯೇ ಪಶುಪಾಲನೆಯ ಸೂಚನೆಯಿರುವುದನ್ನು ಗಮನಿಸಬಹುದು.

ಆದಿಮಾನವ ಆಹಾರಕ್ಕಾಗಿ ಪ್ರಾಣಿಗಳನ್ನು ಬೇಟೆಯಾಡಿ ತನ್ನ ಹಸಿವನ್ನು ನೀಗಿಸಿಕೊಳ್ಳುತ್ತಿದ್ದು, ಕಾಲಾಂತರದಲ್ಲಿ ತನ್ನ ಆಹಾರ ಪದ್ಧತಿಯನ್ನು ಬದಲಾಯಿಸಿಕೊಂಡ.  ಈ ವರ್ಗದ ಜನ ಅಂದರೆ ಮ್ಯಾಸಬೇಡರು ಬೇಟೆ ಸಂಸ್ಕೃತಿಯನ್ನು ಇತರೆ ವರ್ಗದ ಜನರಿಗಿಂತ ಸ್ವಲ್ಪ ಹೆಚ್ಚು ಕಾಲ ಮುಂದುವರೆಸಿಕೊಂಡು ಬಂದಿರಬಹುದು. ಅಂದ ಮಾತ್ರಕ್ಕೆ ಬೇಟೆಯಾಡುವುದೇ ಪ್ರಧಾನ ವೃತ್ತಿಯಾಗಿತ್ತು ಎಂದು ಭಾವಿಸಿದರೆ ಸರಿಯಾಗಿ ಅರ್ಥೈಸಿದಂತಾಗಲಾರದು. 

ಬೇಡನಾಯಕರು ಹಿಂದಿನ ಶತಮಾನಗಳಲ್ಲಿ ಕುರಿ ಸಾಕಿದುದಕ್ಕಿಂತ, ವ್ಯವಸಾಯ ಮಾಡಿದ್ದಕ್ಕಿಂತ ಕೇವಲ ಪಶುಪಾಲನೆ ಮಾಡಿದ್ದೇ ಹೆಚ್ಚು ಎಂಬುದು ಈಗಲೂ ಸ್ಪಷ್ಟವಾಗುವ ಸಂಗತಿ.  (ಕೃಷ್ಣಮೂರ್ತಿ ಹನೂರು, ಮ್ಯಾಸಬೇಡರು ಪುಟ-೪೫) ಬೇಡರ ಬೇಟೆ ಸಂಸ್ಕೃತಿ ಬಗೆಗೆ ಶಾಸನ, ಪುರಾಣ ಕಾವ್ಯ ನಾಟಕಗಳಲ್ಲಿ ಅನೇಕ ಆಧಾರಗಳು ಸಿಗುತ್ತವೆಯಾದರೂ ಆ ಸಂಬಂಧದ ಆಚರಣೆಗಳು ನಿತ್ಯ ಬದುಕಿನಲ್ಲಿ ಹಾಸುಹೊಕ್ಕಾಗಿ ಉಳಿದು ಬಂದಿಲ್ಲ.ಅವು ಕೇವಲ ಆಚರಣಾತ್ಮಕ ನೆಲೆಗಳಲ್ಲಿ ಮಾತ್ರ ಅಭಿವ್ಯಕ್ತಿಗೊಳ್ಳುತ್ತವೆ ಎಂಬುದು ಗಮನಾರ್ಹ ಸಂಗತಿ.  ಈ ದಿಶೆಯಲ್ಲಿ ಬೇಡನಾಯಕರ ಚರಿತ್ರೆಯನ್ನು ಇನ್ನೊಂದು ಮಗ್ಗುಲಿನಿಂದ ನೋಡುವ ಅವಶ್ಯಕತೆಯಿದೆ.  


ಮ್ಯಾಸಬೇಡರ ಮನೆ ಮಾತು ತೆಲುಗು.  ಕರ್ನಾಟಕದ ಕನ್ನಡ ಪರಿಸರದಲ್ಲಿದ್ದರೂ ಮನೆಮಾತಾಗಿ ಈಗಲೂ ತೆಲುಗನ್ನೇ ಬಳಸುತ್ತಿದ್ದಾರೆ.  ಅಲ್ಲದೆ ಇವರ ಕುಲಗಳ ಹೆಸರು/ ಗೋತ್ರ/ ಪಂಗಡದ ಹೆಸರುಗಳೆಲ್ಲವೂ ತೆಲುಗಿನಲ್ಲಿಯೇ ಇವೆ.  ಈ ಅಂಶಗಳು ಈ ಸಮುದಾಯದ ಚಾರಿತ್ರಿಕ ಅಧ್ಯಯನಕ್ಕೆ ಸಹಕಾರಿಯಾಗಬಹುದು.

ಸಾಮಾನ್ಯವಾಗಿ ಯಾವುದೇ ಸಮುದಾಯವು ತನ್ನ ಜೀವನ ಕ್ರಮದ ಅಭಿವ್ಯಕ್ತಿಯ ದ್ಯೋತಕವಾಗಿ ಹೆಸರು, ಕುಲನಾಮ, ಗೋತ್ರದ ಹೆಸರುಗಳನ್ನು ನಿರ್ದೇಶನ ಮಾಡಿಕೊಳ್ಳುವುದುಂಟು.  ಮ್ಯಾಸಬೇಡರ ಮುಖ್ಯ ಕಸುಬು ಪಶುಪಾಲನೆಯಾಗಿದ್ದು, ಈ ಸಂಬಂಧಿಯಾದ ಅನೇಕ ಸಂಗತಿಗಳು ಅವರ ಕುಲಗಳ ಹೆಸರು, ಗೋತ್ರ, ಪಂಗಡ ಮತ್ತು ವ್ಯಕ್ತಿನಾಮಗಳಲ್ಲಿ ಅಡಕವಾಗಿರುದನ್ನು ಕಾಣಬಹುದಾಗಿದೆ.  “ದನಕರುಗಳ ಹೆಸರಲ್ಲಿ ಬೆಡಗು ಹುಟ್ಟಿದಂತೆ ಆಡುಕುರಿಗಳ ಮೇಲೂ ಬೆಡಗುಗಳಿವೆ” (ಕೃಷ್ಣಮೂರ್ತಿ ಹನೂರು, ಮ್ಯಾಸಬೇಡರು ಪುಟ-೬೧) ಎಂಬ ಈ ಮಾತಿನಿಂದ ಪಶುಪಾಲನೆ ಅವರ ಜೀವನದಲ್ಲಿ ಎಷ್ಟೊಂದು ಪ್ರಮುಖವಾಗಿತ್ತು ಹಾಗೂ ಅದು ಹೇಗೆ ಅದರ ಬದುಕಿನ ಮೇಲೆ ನೇರವಾಗಿ ಪರಿಣಾಮಬೀರಿದೆ ಎಂಬುದನ್ನು ತಿಳಿಯಬಹುದಾಗಿದೆ. 

ಕೃಷಿ ಹೇಗೆ ಬಹುಜನರು ಸೇರಿ ಮಾಡುವ ವೃತ್ತಿಯಾಗಿದೆಯೋ ಅದೇ ರೀತಿ ಪಶುಪಾಲನೆಯೂ ಕೂಡ.  ಪಶುಪಾಲನೆ ಎಂದರೆ ಕೇವಲ ದನಗಳ ಪಾಲನೆ ಎಂದು ಭಾವಿಸಬೇಕಾಗಿಲ್ಲ.  ದನಗಳ ಜೊತೆಗೆ, ಕುರಿ, ಮೇಕೆ, ಎಮ್ಮೆಗಳನ್ನು ಸಹ ಸಾಕುತ್ತಿದ್ದರು.  ಹಸುಗಳ ಪಾಲನೆ ಒಬ್ಬರದಾದರೆ, ಎತ್ತುಗಳ ಪಾಲನೆ ಇನ್ನೊಬ್ಬರದು,  ಕರುಗಳ ಪಾಲನೆ ಮತ್ತೊಬ್ಬರದು ಕುರಿಮೇಕೆಗಳ ಪಾಲನೆ ಒಬ್ಬೊಬ್ಬರದಾದರೆ ಅವುಗಳ ಮರಿಗಳ ಪಾಲನೆ ಮತ್ತೊಬ್ಬರದು.  ಹೀಗೆ ಪಶುಪಾಲನೆಗೆ ಸಂಬಂಧಿಸಿದ ಒಂದೊಂದು ಕೆಲಸವನ್ನು ನಿರ್ವಹಿಸಲು ಒಬ್ಬೊಬ್ಬ ವ್ಯಕ್ತಿ ಮೀಸಲಾಗಿರುತ್ತಿದ್ದ,  ಹೀಗೆ ಪ್ರತಿಯೊಬ್ಬ ವ್ಯಕ್ತಿಯೂ ನಿರ್ವಹಿಸುತ್ತಿದ್ದ ವೃತ್ತಿಯೇ ಮುಂದೆ ಆ ಸಂತತಿಯ ಕುಲಗಳ ಹೆಸರಾಗಿ (ಕುಲನಾಮ) ರೂಢಿಗೆ ಬಂದಿರುವುದನ್ನು ಮನಗಾಣಬಹುದು. 

ಉದಾಹರಣೆಗೆ : 
ಎನುಮಲೋರು - (ಎಮ್ಮೆ ಕಾಯುವವರು, ತೆಲುಗಿನಲ್ಲಿ ಎನುಮು ಎಂದರೆ ಎಮ್ಮೆ ಎಂದರ್ಥ)
ಗೊಡ್ಲಾರು ( ಕುರಿಕಾಯುವವರು, ಗೊಡ್ಲು ಎಂದರೆ ಕುರಿಗಳು ಎಂದರ್ಥ)
ಎದ್ಲಾರು ( ಎತ್ತುಕಾಯುವವರು, ಎದ್ದು ಎಂದರೆ ಎತ್ತು ಎಂದರ್ಥ)
ಪಡ್ಲಾರು ( ಆಕಳ ಮಣಕ ಕಾಯುವವರು, ಪಡ್ಡ ಎಂದರೆ ಮಣಕ ಎಂದರ್ಥ)
ಪೈಲಾರು ( ಕರುಪಾಲನೆ ಮಾಡುವವರು,  ಪೈಯ್ಯಿ ಎಂದರೆ ಕರು ಎಂದರ್ಥ)
ಪೋತ್ಲಾರು ( ಹೋತುಗಳ ಪಾಲನೆ ಮಾಡುವವರು, ಪೋತು ಎಂದರೆ ಹೋತು ಎಂದರ್ಥ)
ಮಂದ್ಲಾರು ( ಕುರಿ, ಮೇಕೆ ದನಗಳ ಹಿಂಡನ್ನು ಹೊಲಗದ್ದೆಗಳಲ್ಲಿ ಮಲಗಿಸುವವರು)


ಹೀಗೆ ನೇರವಾಗಿ ವೃತ್ತಿಗಳೇ ಕುಲನಾಮಗಳಾಗಿ ಬಳಕೆಯಾಗಿವೆ.  ಈ ಮೇಲೆ ಸೂಚಿಸಿದ ಕುಲಗಳ ಹೆಸರುಗಳಲ್ಲೂ ಅನೇಕ ಒಳಪಂಗಡಗಳಿವೆ.  ಉದಾಹರಣೆಗೆ ಎದ್ಲಾರು ಎಂದರೆ ಎತ್ತುಗಳನ್ನು ಕಾಯುವವ ಎಂಬುದನ್ನು ಮೇಲೆ ಹೇಳಲಾಗಿದೆ.  ಇಲ್ಲಿ ಎತ್ತುಗಳು ಎಂದರೆ ಸಾಧಾರಣ ಎತ್ತುಗಳಿಗಿಂತ ಧಾರ್ಮಿಕ ಸಂಬಂಧಿಯಾದ ಎತ್ತುಗಳ ಪರಿಪಾಲಕ ಎನ್ನುವ ಅರ್ಥದಲ್ಲಿ ಬಳಕೆಯಾಗುತ್ತಿದೆ.  ಮ್ಯಾಸಬೇಡರಿಗೆ ನಿಜವಾದ ದೈವ ಎಂದರೆ ಎತ್ತುಗಳೇ.  ಇಡೀ ಮ್ಯಾಸಮಂಡಲಕ್ಕೆ ಮೂಲ ದೈವವೆಂದರೆ ಶ್ರೀಶೈಲ ಮುತ್ತೆಗಾರ ಎತ್ತುಗಳು.  ಮ್ಯಾಸಬೇಡರ ಪರಿಭಾಷೆಯಲ್ಲಿಯೇ ಹೇಳುವುದಾದರೆ ? ಮಲ್ಲಯ್ಯದ್ಲು, ಮಲ್ಲಯ ಎತ್ತುಗಳು, ಮುತ್ತೆಗಾರು. 

ಇವರು ಬೇರೆ ಬೇರೆ ಪ್ರದೇಶಗಳಲ್ಲಿ ತಮ್ಮ ಸಾಂಸ್ಕೃತಿಕ ನಾಯಕರ ಹೆಸರುಗಳಲ್ಲಿ ಅಥವಾ ಕುಲದೈವದ ಹೆಸರುಗಳಲ್ಲಿ ರಾಸುಗಳನ್ನು ಬಿಟ್ಟು ಆರಾಧನಾ ಮನೋಭಾವದಿಂದ ಪರಿಪಾಲನೆ ಮಾಡುವ ಪದ್ಧತಿಯಿದೆ.  ಹೀಗೆ ಬೇರೆ ಬೇರೆ ಹೆಸರಿನ ರಾಸುಗಳನ್ನು ಪರಿಪಾಲನೆ ಮಾಡುವ ಒಬ್ಬೊಬ್ಬ ವ್ಯಕ್ತಿ ಅಥವಾ ಒಂದೊಂದು ಗುಂಪಿಗೂ ಅದೇ ಸಾಂಸ್ಕೃತಿಕ ನಾಯಕರ ಅಥವಾ ದೈವದ ಹೆಸರಿನ ರಾಸುಗಳ ಹೆಸರೇ ಅವರ ಕುಲನಾಮಗಳಾಗಿ ಸೇರಿಕೊಂಡಿರುವುದನ್ನು ಗಮನಿಸಬಹುದು.

ಉದಾಹರಣೆ
ದಡ್ಡೆ ಎದ್ಲಾರು ? ದಡ್ಡಿಸೂರ ನಾಯಕನ ಹೆಸರಿನಲ್ಲಿರುವ ರಾಸುಗಳ ಪರಿಪಾಲನೆ ಮಾಡುವವರು
ಗುಡ್ಡಮೆದ್ಲಾರು ? ಗುಡ್ಡದದೈವದ ಹೆಸರಿನಲ್ಲಿರುವ ರಾಸುಗಳ ಪರಿಪಾಲನೆ ಮಾಡುವವರು
ದ್ಯಾವರೆದ್ಲಾರು - ದೇವರ  ಹೆಸರಿನಲ್ಲಿರುವ ರಾಸುಗಳ ಪರಿಪಾಲನೆ ಮಾಡುವವರು
ಮಲ್ಲಯೆದ್ಲಾರು ? ಮಲ್ಲಯ್ಯನ ಹೆಸರಿನಲ್ಲಿರುವ ರಾಸುಗಳ ಪರಿಪಾಲನೆ ಮಾಡುವವರು
ಪಾಪಯೆದ್ಲಾರು- ಪಾಪನಾಯಕ ಹೆಸರಿನಲ್ಲಿರುವ ರಾಸುಗಳ ಪರಿಪಾಲನೆ ಮಾಡುವವರು


ಈ ಮೇಲಿನ ಕುಲನಾಮಗಳಲ್ಲಿ ಉಲ್ಲೇಖವಾಗಿರುವ ಎದ್ಲಾರು ಎಂಬ ಪದದ ಇನ್ನೊಂದು  ವಿಶೇಷವನ್ನೂ ಗಮನಿಸಬೇಕು.  ತೆಲುಗಿನಲ್ಲಿ ಎದ್ದು ಎಂದರೆ ಎತ್ತು ಎಂದರ್ಥ.  ಅಂದರೆ ದೇವರ ಹೆಸರಿನಲ್ಲಿ ಬಿಟ್ಟ ರಾಸುಗಳಲ್ಲಿ ಕೇವಲ ಎತ್ತುಗಳು ಮಾತ್ರ ಇರದೆ, ಹಸುಗಳೂ, ಕರುಗಳೂ ಇರುತ್ತವೆ.  ಹೀಗಿದ್ದಾಗ್ಯೂ ಕೂಡ ಎತ್ತುಗಳು ಎಂದು ಕರೆಯುವುದೇ ಪರಿಪಾಟು.  ಇದಕ್ಕೆ ಇನ್ನೂ ಒಂದು ಕಾರಣವೂ ಇರಬಹುದು.  ಅದೇನೆಂದರೆ ದೈವದ ಹೆಸರಿನಲ್ಲಿ ಬಿಟ್ಟ ರಾಸುಗಳನ್ನು ಆಯಾ ದೈವದ ಪರಿಸೆ, ಜಾತ್ರೆಗಳಲ್ಲಿ ಸಾಮಾನ್ಯವಾಗಿ ಎತ್ತುಗಳನ್ನು ಮಾತ್ರ ಬಳಸುವುದುಂಟು.  ಹಾಗಾಗಿ ಧಾರ್ಮಿಕ ಕಾರ್ಯಗಳಿಗೆ ಎತ್ತುಗಳೇ ಮುಖ್ಯವಾಗಿರುವುದರಿಂದ ಹಾಗೆ ಕರೆಯುವ ರೂಢಿ ಇದ್ದರೂ ಇರಬಹುದು.  ಈ ಎತ್ತುಗಳ ನಾಯಕ ಅಥವಾ ಮುಖಂಡನಿಗೆ ಕಿಲಾರಿ ಎಂದು ಕರೆಯುತ್ತಾರೆ.  ಇದು ವ್ಯಕ್ತಿನಾಮಗಳಲ್ಲಿ ವಿಶೇಷಣವಾಗಿ ಬಳಕೆಯಾಗುತ್ತದೆ.    

ದೇವರ ಹೆಸರಿನಲ್ಲಿ ರಾಸುಗಳನ್ನು ಬಿಡುವಂತೆ ಕುರಿಗಳನ್ನು ಸಹ ಬಿಡುವ ಪದ್ಧತಿ ಇವರಲ್ಲಿದೆ.  ಹೀಗೆ ದೈವದ ಹೆಸರಿನಲ್ಲಿ ಬಿಟ್ಟ ಕುರಿಗಳನ್ನು ಪರಿಪಾಲನೆ ಮಾಡುವವರಿಗೆ ದೇವರ ಗೊಡ್ಲಾರು - ದೇವರ ಕುರಿಯೋರು (ಗೊರೆ ಎಂದರೆ ಕುರಿ, ಗೊಡ್ಲು ಎಂದರೆ ಕುರಿಗಳು) ಎಂಬ ಕುಲನಾಮದಿಂದ ಕರೆಯುವ ರೂಢಿ ಇದೆ.  ದೇವರ ಹೆಸರಿನ ರಾಸುಗಳನ್ನು ಪರಿಪಾಲನೆ ಮಾಡುವ ಸಂಪ್ರದಾಯ ಈಗಲೂ ಇದ್ದು,  ಕುರಿಗಳನ್ನು ಪರಿಪಾಲನೆ ಮಾಡುವ ಪದ್ಧತಿ ಕೈಬಿಟ್ಟು ಹೋದಂತೆ ತೋರುತ್ತದೆ.  ಆದರೆ ಹಿಂದೆ ಈ ಪದ್ಧತಿ ಇತ್ತು ಎಂಬುದಕ್ಕೆ ಈ ಕುಲನಾಮವೇ ಆಧಾರವಾಗಿದೆ. 


ತೆಲುಗಿನಲ್ಲಿ “ಮ್ಯಾಕ” ಎಂದರೆ ಮೇಕೆ ಎಂದರ್ಥ. ಮೇಕೆ ಕಾಯುವವರಿಗೆ “ಮ್ಯಾಕಲಾರು” ಎಂದು ಕರೆಯುವರು, ಮೇಕೆಗಳನ್ನು ಮಾತ್ರ ಪೋಷಣೆ ಮಾಡುವಂತೆ, ಹೋತುಗಳನ್ನಷ್ಟೆ ಸಾಕುವ ಅಥವಾ ಪರಿಪಾಲನೆ ಮಾಡುವ ಪದ್ಧತಿಯಿದ್ದು, ಅವರಿಗೆ ಪೋತ್ಲಾರು ಎಂದೇ ಕರೆಯುವರು.  ಇದೇ ಅವರ ಕುಲನಾಮವೂ ಆಗಿದೆ.  ಸಾಮಾನ್ಯವಾಗಿ ಈ ಮೇಕೆ ಅಥವಾ ಹೋತುಗಳು ಬಿಳಿ, ಕೆಂಪು ಮತ್ತು ಕಪ್ಪು ಬಣ್ಣದ್ದಾಗಿರುತ್ತವೆ.  ಹೋತುಗಳನ್ನು ಮಾತ್ರ ಸಾಕುವವರು ಹವ್ಯಾಸಕ್ಕಾಗಿಯೋ, ಇತರರ ಹೋತುಗಳಿಂದ ಪ್ರತ್ಯೇಕತೆಯನ್ನು ಗುರುತಿಸಿಕೊಳ್ಳುವುದಕ್ಕಾಗಿಯೋ ಒಂದೇ ಬಣ್ಣದ ಹೋತುಗಳನ್ನು ಸಾಕುವರು.  ಹೀಗೆ ಒಂದೊಂದು ಪ್ರತ್ಯೇಕ ಬಣ್ಣದ ಹೋತುಗಳನ್ನು ಪರಿಪಾಲನೆ ಮಾಡುವವರಿಗೆ ಅದೇ ಹೋತುಗಳ ಬಣ್ಣದ ಕುಲನಾಮದಿಂದ ಕರೆಯುವುದು ತುಂಬಾ ಕುತೂಹಲಕರವಾಗಿದೆ.

ಉದಾಹರಣೆಗೆ:

ನಲ್ಲಬೋತ್ಲಾರು (ನಲ್ಲ ಎಂದರೆ - ಕಪ್ಪು, ಪೋತು ಎಂದರೆ, ಹೋತು- ಕಪ್ಪು ಹೋತುಗಳನ್ನು ಪರಿಪಾಲನೆ ಮಾಡುವವರು).
ಯರ ಬೋತ್ಲಾರು (ಯರ್ರ- ಎಂದರೆ ಕೆಂಪು, ಕೆಂಪು ಹೋತುಗಳನ್ನು ಪರಿಪಾಲನೆ ಮಾಡುವವರು).

ಹೀಗೆ ಒಂದೇ ಬಣ್ಣದ ಹೋತುಗಳನ್ನು ಸಾಕುವಂತೆ ಒಂದೇ ಬಣ್ಣದ ಕುರಿಗಳನ್ನೂ ಸಹ ಸಾಕುವರು.  ಕೆಂಪು ಬಣ್ಣದ ಕುರಿಗಳನ್ನು ಸಾಕಿರುವವರಿಗೆ ಯರಗೊಡ್ಲಾರು(ಕೆಂಪು ಕುರೋರು) ಎಂಬ ಕುಲನಾಮದಿಂದ ಕರೆಯುವರು.  ಯರಗೊಡ್ಲಾರು ಎಂಬ ಕುಲನಾಮವಿದ್ದಂತೆ ನಲ್ಲಗೊಡ್ಲಾರು ಎಂಬ ಹೆಸರಿನ ಕುಲನಾಮ ಇದ್ದಂತಿಲ್ಲ.  ಪ್ರಾಯಶಃ ಕುರಿಗಳ ಸಹಜ ಬಣ್ಣ ಕಪ್ಪು ಆಗಿರುವುದರಿಂದ ಮತ್ತು ಅದೇ ಬಣ್ಣದ ಕುರಿಗಳನ್ನು ಅನೇಕರು ಪಾಲನೆ ಮಾಡುತ್ತಿದ್ದುದರಿಂದ ಅದೊಂದು ವಿಶೇಷವಾಗಿ ಕಂಡಿರದೇ ಇರಬಹುದು.

ಮಾಂಸಹಾರಿಗಳಾದ ಮ್ಯಾಸಬೇಡರಲ್ಲಿ ದೇವರಿಗೆ ಪ್ರಾಣಿ ಬಲಿ ಕೊಡುವುದು ಮೊದಲಿನಿಂದಲೂ ರೂಢಿಯಲ್ಲಿರುವ ಪದ್ಧತಿ, ಹರಕೆಯ ಪ್ರಾಣಿಯನ್ನು ಬಲಿಕೊಡುವಾಗ ನಿಲ್ಲಿಸಿ ಕಡಿಯುವುದು ಇಲ್ಲವೆ ಮಲಗಿಸಿ ಕೊಯ್ಯುವುದುಂಟು.  ಆದರೆ ಇವರಲ್ಲಿ ಇನ್ನೊಂದು ವಿಶೇಷ ಬಲಿ ಪದ್ಧತಿಯಿದೆ.  ದೇವರಿಗೆ ಹರಕೆಯ ಬಲಿಯಾಗಿ ಕಪ್ಪುಹೋತನ್ನು ಬಿಡುವರು.  ಇದನ್ನು ಗಾವುಹೋತು ಅಥವಾ ಗಾಂಬೋತು ಎಂದು ಕರೆಯುತ್ತಾರೆ. ಈ ಗಾವುಹೋತನ್ನು ಇತರೆ ಹರಕೆಯ ಬಲಿಗಳ ಮಾದರಿಯಲ್ಲಿ ಕಡಿಯುವುದಾಗಲೀ, ಕೊಯ್ಯುವುದಾಗಲೀ ಮಾಡದೆ, ಇಬ್ಬರು ಪುರುಷರು ಆ ಹೋತಿನ ಬಾಯಿಯನ್ನು ಅರಚದಂತೆ ಗಟ್ಟಿಯಾಗಿ ಹಿಡಿದುಕೊಂಡು, ಬಾಯಿಯಿಂದಲೇ ಆ ಹೋತಿನ, ತುಟಿ, ನಾಲಿಗೆ ಎಲ್ಲವನ್ನು ಸೀಳಿಬಿಡುತ್ತಾರೆ.  ಹಬ್ಬ, ಉತ್ಸವಗಳಲ್ಲಿ ಈ ಕಾಯಕ ಮಾಡುವವರಿಗೆ ಗಾಂಬೋತ್ಲು- ಗಾಂಪೋತ್ಲು ಎಂಬ ಕುಲನಾಮದಿಂದಲೇ ಕರೆಯುವುದು ವಾಡಿಕೆಯಾಗಿದೆ.


ಮಂದ್ಲಾರು ಎಂಬುದು ಮ್ಯಾಸಬೇಡರಲ್ಲಿ ಮುಖ್ಯವಾದ ಪಂಗಡ.  ಕೃಷ್ಣಮೂರ್ತಿ ಹನೂರವರು ಈ ಪಂಗಡದ ಬಗ್ಗೆ ಉಲ್ಲೇಖ ಮಾಡುತ್ತಾ ಪ್ರಮುಖ ಬೆಡಗಾದ ಮಂದಲೋರು ಎಂಬ ಹೆಸರು ಎತ್ತುಗಳ ಗುಂಪಿಗೆ ಸಂಬಂಧಪಟ್ಟ ಹೆಸರು.  ದನಕರುಗಳನ್ನು ಕಾಯುವವರೆಲ್ಲ ಮಂದಲೋರು ಆಗಿ, ಇದರಲ್ಲಿ ಬೇರೆ ಬೇರೆ ಗುಂಪುಗಳು ಬೆಳೆಯುತ್ತಾ ಹೋದಂತೆಲ್ಲ ಗುಂಪಿಗೆ ಪ್ರಮುಖವಾದ ವ್ಯಕ್ತಿಯ ಮೇಲೋ ಅವರವರು ರೂಢಿಸಿಕೊಂಡು ಸಂಪ್ರದಾಯದ ಮೇಲೋ ಬೆಡಗುಗಳು ಹುಟ್ಟಿಕೊಂಡವು (ಕೃಣ್ಷಮೂರ್ತಿ ಹನೂರು ಮ್ಯಾಸಬೇಡರು ಪುಟ ೬೧) ಎಂದು ವ್ಯಾಖ್ಯಾನಿಸುತ್ತಾರೆ.  ಇವರು ಹೇಳುವ ಹಾಗೆ ಮಂದಲೋರು ಎಂಬುದು ಎತ್ತುಗಳ ಗುಂಪಿಗೆ ಮಾತ್ರ ಸಂಬಂಧಪಟ್ಟದಲ್ಲ. ಮತ್ತು ದನಕರುಗಳನ್ನು ಕಾಯುವವರೆಲ್ಲರೂ ಮಂದಲೋರು ಅಲ್ಲ. ಎನುಮಲೋರು ಪಂಗಡವೂ ಒಳಗೊಂಡಂತೆ ಬೇರೆ ಬೇರೆ ಪಂಗಡಗಳಲ್ಲೂ ದನಕರುಗಳನ್ನು ಕಾಯುವವರುಂಟು ಮತ್ತು ಮಂದ್ಲಾರು ಎಂಬುದು ಎತ್ತುಗಳಿಗೆ ಮಾತ್ರ ಸೀಮಿತವಾಗಿರದೆ, ಕುರಿ, ಮೇಕೆ ಯಾವುದೇ ಬಗೆಯ ಮಂದೆ ಕಾಯಕ ಮಾಡುವವರು ಆಗಿರಬಹುದು. 

ಬಿತ್ತುವ ಭೂಮಿಯನ್ನು ಫಲವತ್ತಾಗಿಸಲು ಗೊಬ್ಬರದ ಸಲುವಾಗಿ ಕುರಿ, ಮೇಕೆ, ದನಗಳ ಹಿಂಡನ್ನು ಹೊಲಗಳಲ್ಲಿಯೇ ಮಲಗಿಸುತ್ತಿದ್ದರು.  ಅಂದರೆ ಜಾನುವಾರುಗಳು ತಮ್ಮ ಹಟ್ಟಿ ಬಿಟ್ಟು ಹೊಲಗಳಲ್ಲಿ ತಂಗುವ ಕ್ರಮವನ್ನೇ ‘ಮಂದೆ’ ಎಂದು ಕರೆಯುವರು.  ಈ ಮಂದೆ ಕಾಯಕವನ್ನು ಮಾಡುವವರಿಗೆ ಮಂದ್ಲೋರು ಎಂಬ ಗೋತ್ರದಿಂದ ಕರೆಯುವರು.

‘ಬಂತ್ಲಾರು’ ಎಂಬುದು ಮ್ಯಾಸಬೇಡರಲ್ಲಿರುವ ಒಂದು ಪಂಗಡದ ಹೆಸರು.  ತೆಲುಗಿನಲ್ಲಿ ‘ಬಂತ’ ಎಂದರೆ ಕಂಬಳಿ ಎಂದರ್ಥ.  ಜಾನುವಾರುಗಳು ಮಂದೆಗೆ ಹೋದಾಗ, ಅವುಗಳ ಪೋಷಕರು ಸಾಮಾನ್ಯವಾಗಿ ಮನೆಗೆ ಬರುವುದಿಲ್ಲ.  ಅವರಿಗೆ ಬೇಕಾದ ಅಗತ್ಯಗಳನ್ನು ಮನೆಯಿಂದಲೇ ಸರಬರಾಜು ಮಾಡುತ್ತಾರೆ.  ಮಂದೆಗೆ ಹೋದಾಗ ಬಯಲಲ್ಲೇ ಮಲಗಬೇಕಾಗಿದ್ದರಿಂದ ಬೆಚ್ಚನೆಯ ಹೊದಿಕೆಯನ್ನು ಬಳಸುತ್ತಿದ್ದರು.  ಅವರ ಬೆಚ್ಚನೆಯ ಹೊದಿಕೆಯೆಂದರೆ ಕಂಬಳಿ.  ಈ ಕಂಬಳಿಯನ್ನು ಸಾಯಂಕಾಲ ತೆಗೆದುಕೊಂಡು ಹೋಗಿ, ಬೆಳಿಗ್ಗೆ ವಾಪಾಸ್ಸು ಮನೆಗೆ ತರುವರು.  ಈ ವೃತ್ತಿ ಮಾಡುವವರಿಗೆ ಬಂತ್ಲಾರು ಎಂಬ ಕುಲನಾಮ ಸೇರಿ ಹಾಗೆಯೇ ಅದು ಮುಂದುವರೆದುಕೊಂಡು ಬಂದಿರಬಹುದು. 

ರಾಸುಗಳು ಹಟ್ಟಿಯಲ್ಲಿ ಅಥವಾ ಹಟ್ಟಿಯಿಂದ ಹೊರಗೆ ಮೇಯಲು ಹೋಗುವಾಗ ದಾರಿಯಲ್ಲಿ ಸಗಣಿ ಹಾಕುತ್ತವೆ.  ಸಗಣಿ ಪಶುಪಾಲಕರಿಗೆ ಶ್ರೇಷ್ಠವೂ ಆದಾಯದ ಮೂಲವೂ ಆಗಿದೆ.  ಆದ್ದರಿಂದ ಸಗಣಿಯನ್ನು ವ್ಯರ್ಥ ಮಾಡದೆ ಕಲೆಹಾಕುತ್ತಾರೆ.  ಈ ರಾಸುಗಳ ಸಗಣಿಯನ್ನು ಕಲೆಹಾಕಲಿಕ್ಕೆಂದೇ ಕೆಲವರು ಮೀಸಲಾಗಿರುತ್ತಿದ್ದರು.  ಅವರು ಸಗಣಿಯನ್ನು ಬುಟ್ಟಿಯಲ್ಲಿ ಹಾಕಿಕೊಂಡು ತಿಪ್ಪೆಗೆ ಕೊಂಡ್ಹೋಗುತ್ತಾರೆ  ತೆಲುಗಿನಲ್ಲಿ ‘ಗಂಪ’ ಎಂದರೆ ಬುಟ್ಟಿ ಎಂದರ್ಥ.  ಈ ಕಾಯಕ ಮಾಡುವವರಿಗೆ ‘ಗಂಪಲಾರು’ ಅಥವಾ ‘ಬುಟ್ಟಗಲಾರು’ ಎಂಬ ಗೋತ್ರದಿಂದ ಕರೆಯುವರು.  ಕಾಲಾಂತರದಲ್ಲಿ ಇದು ಧಾರ್ಮಿಕ ವ್ಯಾಪ್ತಿಯನ್ನು ಸಹ ಪಡೆದುಕೊಂಡಂತಿದೆ. 

ಮ್ಯಾಸಬೇಡರ ಕುಲ, ಗೋತ್ರ, ಪಂಗಡಗಳ ಹೆಸರುಗಳಲ್ಲಿ ಪಶುಪಾಲನಾ ಸಂಬಂಧಿ ಪಳಿಯುಳಿಕೆಗಳು ಕಾಣಸಿಗುವಂತೆ ಅವರ ವ್ಯಕ್ತಿ ನಾಮಗಳಲ್ಲಿಯೂ ಗುರುತಿಸಬಹುದು.

ಉದಾಹರಣೆಗೆ: 
ಆವುಲಯ್ಯ (ಆವು ಎಂದರೆ ಹಸು, ಹಸು ಕಾಯುವವ)
ಮ್ಯಾಕಲಯ್ಯ  ( ಮ್ಯಾಕ ಎಂದರೆ ಮೇಕೆ, ಮೇಕೆ ಕಾಯುವವ)
ಗೊಡ್ಲಯ್ಯ ( ಗೊಡ್ಲು ಎಂದರೆ ಕುರಿಗಳು, ಕುರಿ ಕಾಯುವವ)
ಎದ್ಲಯ್ಯ ( ಎದ್ಲು ಎಂದರೆ ಎತ್ತುಗಳು, ಎತ್ತು ಕಾಯುವವ)
ಪಾಲಯ್ಯ ( ಪಾಲು ಎಂದರೆ ಹಾಲು, ಹಾಲು ಕರೆಯುವವ)

ಮೇಲಿನ ಹೆಸರುಗಳಲ್ಲಿ ಪಶುಪಾಲನೆಗೆ ಸಂಬಂಧಿಸಿದ ಅಂಶಗಳು ನೇರವಾಗಿ ವ್ಯಕ್ತಿನಾಮದ ಜೊತೆ ಅಂಟಿಕೊಂಡಿವೆ.  ಕೆಲವೊಮ್ಮೆ ಇವು ಹೆಸರಿನ ವಿಶೇಷಣಗಳಾಗಿಯೂ ಬಳಕೆಯಾಗುವುದುಂಟು.

ಉದಾಹರಣೆಗೆ: 

ಮ್ಯಾಕಲ ಪಾಪಯ್ಯ
ಗೊಡ್ಲ ಬೋರಯ್ಯ
ಎದ್ಲಾರು ಬೈಯ್ಯಣ್ಣ
ಆವುಲು ಓಬಯ್ಯ
ಪೈಲಾರು ಸೂರಯ್ಯ
ಪಡ್ಲಾರು ಪಾಪಯ್ಯ
ಗಂಪಲಾರು ಸಿದ್ಧಯ್ಯ

ಮ್ಯಾಸಬೇಡರಲ್ಲಿ ಬಳಕೆಯಲ್ಲಿರುವ ಕೆಲವು ಗಾದೆಗಳು ಸಹ ಈ ಸಂಬಂಧಿಯ ಸೂಚನೆಗಳನ್ನು ನೀಡುತ್ತವೆ.

ಉದಾಹರಣೆಗೆ: 
ಎತ್ತಿನ ಕಳ್ಳ ಹಗ್ಗ ಮಾರತಾನೆ
ರಾಸಿಗೆ ಮೇವಿಲ್ಲ ಬೇಡನಿಗೆ ಮದ್ದಿಲ್ಲ
ಕುಲಕ್ಕೆ ಕುಲವೇ ಮೂಲ, ಕುಂಟೆತ್ತು ಹೊಲಕ್ಕೆ ಮೂಲ 

ಮೊದಲಾದ ಗಾದೆಗಳಲ್ಲಿಯೂ ಸಹ ಪಶುಪಾಲನೆಗೆ ಸಂಬಂಧಿಸಿದ ಅಂಶಗಳನ್ನು ಕಾಣಬಹುದಾಗಿದೆ. ಇದೇ ರೀತಿ ಮ್ಯಾಸಬೇಡರ ಕುಲನಾಮ, ಗೋತ್ರ, ಪಂಗಡದ ಹೆಸರು ಮತ್ತು ವ್ಯಕ್ತಿನಾಮಗಳನ್ನ ಹೊಸ ಅಧ್ಯಯನ ಶಿಸ್ತಿಗೆ ಅಳವಡಿಸಿದರೆ ಇನ್ನೂ ಅನೇಕ ಹೊಸ ಒಳಹುಗಳು ಗೋಚರಿಸಬಹುದು. ಬೇಡರೆಂದರೆ ಬೇಟೆಯಷ್ಟೇ ಅಲ್ಲ.  ಅದಕ್ಕಿಂತಲೂ ಮುಖ್ಯವಾಗಿ ಪಶುಪಾಲನೆ ಅವರ ಜೀವನದ ಮುಖ್ಯ ವೃತ್ತಿಯಾಗಿದ್ದು, ಅದು ಅವರ ಸಾಂಸ್ಕೃತಿಕ ಬದುಕಿನ ಮೇಲೆ ಮುದ್ರೆಯೊತ್ತಿದೆ ಎಂದೇ ಹೇಳಬಹುದು. 

ಡಾ.ಸಣ್ಣಪಾಪಯ್ಯ
ಅತಿಥಿ ಉಪನ್ಯಾಸಕರು
ದಕ್ಷಿಣ ಪ್ರಾದೇಶಿಕ ಭಾಷಾ ಕೇಂದ್ರ,
ಭಾರತೀಯ ಭಾಷಾ ಸಂಸ್ಥಾನ, 
ಮಾನಸಗಂಗೋತ್ರಿ, ಮೈಸೂರು.



****




ಸೋಮವಾರ, ಮೇ 21, 2012

ಜಾನಪದ ಪಧವೀದರರ ಸಮಸ್ಯೆ ಕುರಿತ ಎರಡು ಪತ್ರಗಳು



( ಜಾನಪದವನ್ನು ಒಂದು ಶಿಸ್ತನ್ನಾಗಿ ಕಲಿತವರಿಗೆ ಭವಿಷ್ಯವೆಲ್ಲಿದೆ? ಎನ್ನುವ ಪ್ರಶ್ನೆಯನ್ನು ಆಧರಿಸಿ ಪ್ರಜಾವಾಣಿ ಪತ್ರಿಕೆಯ ವಾಚಕರ ವಾಣಿಯಲ್ಲಿ ಎರಡು ಪತ್ರಗಳು ಪ್ರಕಟವಾಗಿವೆ. ಇದು ಸಹಜವಾಗಿ ಜಾನಪದ ಕಲಿತವರ ಆತಂಕ. ಈ ಆತಂಕವನ್ನು ಜಾನಪದ ವಿಶ್ವವಿದ್ಯಾಲಯ ದೂರ ಮಾಡಬೇಕಾಗಿದೆ. ಅಥವಾ ಈ ಎರಡೂ ಪತ್ರಗಳನ್ನು ಆಧರಿಸಿ ಜಾನಪದ ವಿವಿ ಜಾನಪದ ಕಲಿತವರಿಗೆ ಅಭಯ ನೀಡುವ ಪ್ರಯತ್ನವನ್ನಂತೂ ಮಾಡಬೇಕಿದೆ-ಸಂ)


ಜಾನಪದ ಕಲಿತವರಿಗೆ ಭವಿಷ್ಯವೆಲ್ಲಿದೆ?
May 14, 2012 prajavani vachakaravani


ಈಚೆಗೆ ಜಾನಪದ ವಿಶ್ವವಿದ್ಯಾಲಯವು ಜಾನಪದ ಎಂ.ಎ ಒಳಗೊಂಡಂತೆ, ಜಾನಪದ ಸಂಬಂಧಿ ಇತರೆ ಕೋರ್ಸ್‌ಗಳನ್ನು ಆರಂಭಿಸುವ ಬಗ್ಗೆ ಸುದ್ದಿಯಾಗಿದೆ. ಹೀಗೆ ಆರಂಭಿಸುವ ಮುನ್ನ ಜಾನಪದ ವಿವಿಯಲ್ಲಿ  ಕಲಿತವರ  ಮುಂದಿನ ಭವಿಷ್ಯ ಏನು ಎನ್ನುವುದರ ಬಗ್ಗೆಯೂ ಚಿಂತನೆ ನಡೆಸಬೇಕಾಗಿದೆ. ಕಾರಣ ನನ್ನನ್ನು ಒಳಗೊಂಡಂತೆ ಜಾನಪದ ಎಂ.ಎ ಮಾಡಿದ ಬಹುತೇಕರಿಗೆ ಹ್ದ್ದುದೆಗಳಿಲ್ಲದೆ ಬದುಕು ಡೋಲಾಯಮಾನವಾಗಿದೆ. 

 ಹಾಗಾಗಿ ಈ ಶೈಕ್ಷಣಿಕ ವರ್ಷದಿಂದಲೇ ಜಾನಪದವನ್ನು ಪಿ.ಯು, ಬಿ.ಎ ಮುಂತಾದ ತರಗತಿಗಳಿಗೆ ಒಂದು ಕಡ್ಡಾಯ ಪಠ್ಯವಾಗುವಂತೆ, ಪದವಿ ಕಾಲೇಜಿನ ಕನ್ನಡ ಉಪನ್ಯಾಸಕ ಹುದ್ದೆಗೆ ಜಾನಪದ ಎಂ.ಎ ಮಾಡಿದವರನ್ನು ಅರ್ಹರನ್ನಾಗಿಸುವಂತೆ ಜಾನಪದ ವಿಶ್ವವಿದ್ಯಾಲಯವು ಶ್ರಮಿಸಬೇಕಿದೆ. 


ಇದು ಸಾಧ್ಯವಾದರೆ ಜಾನಪದ ಎಂ.ಎ ಮತ್ತಿತರ ಕೋರ್ಸ್‌ಗಳಿಗೆ ಬೆಲೆ ಬರುತ್ತದೆ. ಹಾಗೆ ಮಾಡದೆ ಜಾನಪದವನ್ನು ಕಲಿಯುವ ಕೋರ್ಸ್‌ಗಳನ್ನು ಆರಂಭಿಸಿದರೆ, ವಿಶ್ವವಿದ್ಯಾಲಯವೇ ನಿರುದ್ಯೋಗಿಗಳನ್ನು ಸೃಷ್ಟಿಸಿದಂತಾಗುತ್ತದೆ.


`ಜಾನಪದ' ಪದವೀಧರರ ಭವಿಷ್ಯ
May 22, 2012 prajavani vachakaravani

ಜಾನಪದ ವಿಶ್ವ ವಿದ್ಯಾಲಯವು ಪ್ರಸಕ್ತ ಶೈಕ್ಷಣಿಕ ವರ್ಷ (2012-13)ದಿಂದಲೇ ಜಾನಪದ ಸ್ನಾತಕೋತ್ತರ ಪದವಿ ಕೋರ್ಸುಗಳಿಗೆ ಸಿದ್ಧತೆ ನಡೆಸಿರುವುದು ಒಳ್ಳೆಯ ಬೆಳವಣಿಗೆ. ಕರ್ನಾಟಕದಲ್ಲಿ ಇಂತಹ ವಿಶ್ವವಿದ್ಯಾಲಯ ಎಂದೋ ಆರಂಭವಾಗಬೇಕಿತ್ತು. ತಡವಾಗಿಯಾದರೂ ವಿ ವಿ ಸ್ಥಾಪನೆಯಾಗಿರುವುದು ಉತ್ತಮ ಬೆಳವಣಿಗೆ. 

ಜಾನಪದ ಎಂ. ಎ. ಪದವಿಧರರ ನಿರುದ್ಯೋಗ ಸಮಸ್ಯೆ ಕುರಿತು ಈಗ ಚರ್ಚೆ (ಪ್ರ ವಾ ವಾ ಮೇ.14) ನಡೆಯುತ್ತಿದೆ. ಜಾನಪದ ಸ್ನಾತಕೋತ್ತರ ಪದವಿ ಪಡೆದವರು ಮಾತ್ರ ನಿರುದ್ಯೋಗಿಗಳಾಗಿಲ್ಲ ಎಂಬುದನ್ನು ಟೀಕಾಕಾರರು ಮರೆಯಬಾರದು. 

ಜಾನಪದವನ್ನು ಕೇವಲ ಸಾಹಿತ್ಯಕ್ಕಷ್ಟೇ ಸೀಮಿತಗೊಳಿಸಿ ಅಧ್ಯಯನ ಮಾಡುವ ವಿಷಯವಲ್ಲ. ಅದು ಬಹುಶಿಸ್ತಿನ ಅಧ್ಯಯನ. ಸಾಹಿತ್ಯ, ಸಂಸ್ಕೃತಿ, ಕಲೆ, ಕಲಾವಿದರು ಹೀಗೆ ಮಾನವನ ಸಮಸ್ತ ಬದುಕನ್ನು ಜಾಗತಿಕ ಮಾರುಕಟ್ಟೆಯ ದೃಷ್ಟಿಯಿರಿಸಿಕೊಂಡ ಅಧ್ಯಯನ.
 
ಇತರ ವಿಶ್ವವಿದ್ಯಾಲಯಗಳು ಜಾನಪದ ಸಾಹಿತ್ಯಕ್ಕೆ ಹೆಚ್ಚು ಒತ್ತು ನೀಡಿ ಅದರ ವಿಸ್ತಾರ ಹಾಗೂ ಬಹುಮಾಧ್ಯಮದ ಅಧ್ಯಯನವನ್ನು ಕೈಗೊಳ್ಳದೇ ಇರುವುದು ದುರದೃಷ್ಟಕರ. 

ಜಾನಪದ ವಿ ವಿಯು ಜಾಗತಿಕ ದೃಷ್ಟಿಕೋನದ ಹಿನ್ನೆಲೆಯಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನಕ್ಕೆ ಅವಕಾಶ ಕಲ್ಪಿಸಿದರೆ ಬಹುಶಃ ನಿರುದ್ಯೋಗದ ಸಮಸ್ಯೆ ಬರಲಾರದು.

ಶನಿವಾರ, ಮೇ 19, 2012

ಕನ್ನಡ ದೇಸಿ ಅಂದರೆ ನೀರುಳ್ಳಿ


  
 -ಪುರುಷೋತ್ತಮ ಬಿಳಿಮಲೆ
  ಕೃಪೆ: ವಿಯಯ ಕರ್ನಾಟಕ  

  ಜಾಗತೀಕರಣದ ಇಂದಿನ ಸಂದರ್ಭದಲ್ಲಿ ಸಹಜವಾಗಿ ಮತ್ತು ಸುಲಭವಾಗಿ ಸಂಭವಿಸುವ ಎಲ್ಲ ಬಗೆಯ ವಿದೇಶೀ ಪ್ರಭಾವಗಳ ವಿರುದ್ಧ ಕನ್ನಡವನ್ನು ಎತ್ತಿ ಕಟ್ಟಿ ವಿವರಿಸುವ ಜನಪ್ರಿಯ ಚಿಂತನಾ ಕ್ರಮವೊಂದನ್ನು ನಾವು ಇಂದು ಎಲ್ಲೆಡೆ ಕಾಣುತ್ತಿದ್ದೇವೆ. ಕನ್ನಡಕ್ಕೆ ಕನ್ನಡದ್ದೇ ಆದ ಯೋಚನಾ ಕ್ರಮ ಇದೆಯೆಂದೂ, ಕಾರಣಾಂತರಗಳಿಂದ ನಾವೀಗ ಅದನ್ನು ಮರೆತು ಬಿಟ್ಟಿದ್ದೇವೆಯೆಂದೂ, ಜಾನಪದ, ಭಾಷೆ, ವ್ಯಾಕರಣ ಮತ್ತಿತರ ಪರಿಕರಗಳ ಮೂಲಕ ಮತ್ತೆ ಅದನ್ನು ನೆನಪಿಗೆ ತಂದುಕೊಂಡು, ಕನ್ನಡ ದೇಸಿಯೊಂದನ್ನು ಕಟ್ಟಿಬೇಕೆಂದೂ ವಾದಿಸಲಾಗುತ್ತಿದೆ. ಹಾಗಾದರೆ ಕನ್ನಡಅಂದರೆ ಏನು? ಅದು ರೂಪುಗೊಳ್ಳುವ ಬಗೆ ಹೇಗೆ?

   ಕನ್ನಡದ ಚರಿತ್ರೆಯನ್ನು ಗಮನಿಸೋಣ. ಕ್ರಿ.ಶ. 840ರಲ್ಲಿ ರಚಿತವಾಗಿದೆ ಎನ್ನಲಾದ ವಡ್ಡಾರಾಧನೆಎಂಬ ಗದ್ಯಕೃತಿಯಲ್ಲಿನ ಭದ್ರಬಾಹು ಭಟಾರರ ಕತೆಯ ಪ್ರಕಾರ ಸಂಪ್ರತಿ ಚಂದ್ರಗುಪ್ತನ ಕಾಲದಲ್ಲಿ ಉತ್ತರ ಭಾರತದಲ್ಲಿ 12 ವರ್ಷಗಳ ಕಾಲ ಭೀಕರ ಬರಗಾಲ ಬರುತ್ತದೆ. ಹನ್ನೆರಡು ವರ್ಷಗಳವರೆಗೆ ಈ ನಾಡೊಳು ಅನಾವೃಷ್ಟಿಯಾಗಿ ಮಹಾರೌದ್ರ ಪ್ರಸವವಾಗಿ, ಮಧ್ಯದೇಶವೆಲ್ಲವೂ ಪಾಳುಬಿದ್ದು, ನಾಡೊಳಿರುವ ಋಷಿಗಳಿಗೆ ವೃತ ಭಂಗವಾಗುವುದರಿಂದಾಗಿ ದಕ್ಷಿಣಾ ಪಥಕ್ಕೆ ಹೋಗೋಣಎಂದು ಹೇಳುವ ಭದ್ರಬಾಹು ಭಟಾರರು ಮುಂದೆ ಸಂಪ್ರತಿ ಚಂದ್ರಗುಪ್ತರ ಜೊತೆ ದಕ್ಷಿಣಾ ಪಥಕ್ಕೆ ತೆರಳುತ್ತಾರೆ.

  ದಕ್ಷಿಣಾ ಪಥದಲ್ಲಿ ಅತ್ಯಂತ ಪ್ರಶಸ್ತವಾದ ಕಳ್ಬಪ್ಪು ನಾಡು ‘ ( ಈಗಣ ಶ್ರವಣಬೆಳಗೊಳ) ವಿಗೆ ಬಂದುಅಲ್ಲಿಯೇ ನೆಲೆ ನಿಲ್ಲುತ್ತಾರೆ. ಈ ಘಟನೆ ನಡೆದಿರಬಹುದಾದ ಕಾಲ ಸುಮಾರುಕ್ರಿಸ್ತ ಶಕ ಪೂರ್ವ 3 ನೇ ಶತಮಾನ. ಆ ಕಾಲದ ದಕ್ಷಿಣ ಭಾರತದ ಚರಿತ್ರೆಯನ್ನು ಅವಲೋಕಿಸಿದರೆ, ಕನರ್ಾಟಕದ ಈ ಭೂಭಾಗಕ್ಕಿಂತ ತಮಿಳುನಾಡಿನ ಚೋಳಮಂಡಲದ ತಂಜಾವೂರು ಪ್ರದೇಶ ಹೆಚ್ಚು ಫಲವತ್ತಾಗಿತ್ತು. ಬದುಕುವುದಕ್ಕೆ ಅನುಕೂಲವಾಗಿದ್ದ ಸ್ಥಳವಾಗಿತ್ತು ಅದು. ಆದರೆ ಸಂಪ್ರತಿ ಚಂದ್ರಗುಪ್ತರು ಮತ್ತು ಭದ್ರ ಬಾಹು ಭಟಾರರು ತಮ್ಮ ದಕ್ಷಿಣಾ ಪಥದ ವಲಸೆಗೆ ಆಯ್ದುಕೊಂಡದ್ದು ತಮಿಳುನಾಡಿನ ಆ ಫಲವತ್ತಾದ ಭೂ ಭಾಗವನ್ನಲ್ಲ, ಬದಲು ಕನರ್ಾಟಕದ ಕನ್ನಡ ಭಾಷಾ ಪ್ರದೇಶವನ್ನು. ಜೈನರು ಮುಂದೆ ಕನರ್ಾಟಕವನ್ನು ಜಿನಧರ್ಮದಆಡುಂಬೊಲಂಮಾಡಿಕೊಂಡರು. ಕನ್ನಡಕ್ಕೆ ಪಂಪ , ಪೊನ್ನ, ರನ್ನ, ನಾಗಚಂದ್ರ, ಜನ್ನ ಮೊದಲಾದ ಅತ್ಯಂತ ಮುಖ್ಯ ಕವಿಗಳನ್ನು ಕೊಟ್ಟ ಜೈನರು ಕನ್ನಡ ಸಂವೇದನೆಯನ್ನು ಅತ್ಯಂತ ನವಿರಾಗಿ ರೂಪಿಸಿದರು. ಜೈನರ ಪ್ರಾಬಲ್ಯಕ್ಕೂ ಮುನ್ನ ಕನರ್ಾಟಕಕ್ಕೆ ಆಗಮಿಸಿದ ಬೌದ್ಧರು ಕೂಡಾ ಮಧ್ಯ ಕನರ್ಾಟಕವನ್ನು ಬೌದ್ಧಧರ್ಮ ಪ್ರಸಾರದ ಕೇಂದ್ರವನ್ನಾಗಿ ಮಾಡಿಕೊಂಡು, ಸನ್ನತಿ, ಡಂಬಳ, ಕದರಿ, ಕೊಪ್ಪಳ, ಬ್ರಹ್ಮಗಿರಿ, ಮಸ್ಕಿ ಮೊದಲಾದ ಪ್ರದೇಶಗಳೆಲ್ಲ ವಾಸಿಸಿ ಕನ್ನಡ ಸಂಸ್ಕೃತಿಯ ಆದಿಮ ಗುಣಗಳ ರೂಪುಗೊಳ್ಳುವಿಕೆಯಲ್ಲಿ ಗಮನಾರ್ಹವಾಗಿ ಪಾಲ್ಗೊಂಡರು.


    ಮೇಲು ನೋಟಕ್ಕೆ ಕಾಣೆೆಯಾದಂತಿರುವ ಬೌದ್ಧಧರ್ಮವು ಕನರ್ಾಟಕದ ಅನೇಕ ಜನಪದ ಆಚರಣೆಗಳಲ್ಲಿ ಸೂಕ್ಷ್ಮವಾಗಿ ಇಂದಿಗೂ ಉಳಿದು ಬಂದಿದೆ. ಇಂದು ನಾವು ಕನ್ನಡದ್ದೇ ಎಂದು ಹೇಳುವ ವಚನ ಚಳುವಳಿಯ ಕಾಲದಲ್ಲಿ ಉತ್ತರದ ಕಾಶ್ಮೀರದಿಂದ ಕಲ್ಯಾಣಕ್ಕೆ ಬಂದ ಜನರು ತಮ್ಮ ಅರಿವಿನ ನೆಲೆಗಳನ್ನು ಕನ್ನಡಕ್ಕೆ ಒದಗಿಸಿಕೊಟ್ಟರು. ತಮಿಳುನಾಡಿನಲ್ಲಿ ಬಗೆಬಗೆಯ ಒತ್ತಡಗಳಿಗೆ ಗುರಿಯಾದ ರಾಮಾನುಜಾಚಾರ್ಯರು ಕೊನೆಗೂ ಕನ್ನಡದ ಮಣ್ಣಿಗೇ ಬಂದಾಗ ಕನ್ನಡಿಗರು ಅವರನ್ನು ತಿರಸ್ಕರಿಸಲಿಲ್ಲ. ಕ್ರಿಶ್ತಶಕ ಪೂರ್ವದಲ್ಲಿಯೇ ಕರಾವಳಿಗೆ ಆಗಮಿಸಿದ ಮುಸ್ಲಿಮರು ಮುಂದೆ ಬಿಜಾಪುರದಿಂದ ನಾಡನ್ನು ಆಳಿದರು. ಕರಾವಳಿಯಲ್ಲಿ ಆಲಿ ಭೂತ, ಬಬ್ಬರ್ಯ ಭೂತಗಳು ಸೃಸ್ಟಿಯಾಗಿ ಪೂರ್ಣ ದೇಸೀ ಎಂದೇ ಪರಿಗಣಿತವಾದ ಪಾಡ್ದನಗಳ ಒಳಗೂ ಮುಸ್ಲಿಮ್ ನಾಯಕರು ಕಾಣಿಸಿಕೊಂಡರು. ಇಡೀ ಉತ್ತರ ಕರ್ನಾಟಕವು ಸೂಫಿ ಸಂತರ ನೆಲೆವೀಡಾಯಿತು. ಸಾವಿರಾರು ಮೈಲುಗಳ ದೂರದಲ್ಲಿ ಬಾಯಿಗೆ ನೀರಿಲ್ಲದೆ ಸತ್ತ ಅಸಗರನನ್ನು ಅಭಿಮನ್ಯುಗೆ ಹೋಲಿಸಿ ಕನ್ನಡ ಕಣ್ಣೀರಿಟ್ಟಿತು. ವಸಾಹತು ಕಾಲಘಟ್ಟದಲ್ಲಿ ಕ್ರಿಶ್ಚಿಯನ್ ಮಿಷನರಿಗಳು ಮಂಗಳೂರು, ಬಳ್ಳಾರಿ, ಧಾರವಾಡಗಳಲ್ಲಿ ಯಾವ ತೊಂದರೆಗಳಿಲ್ಲದೇ ಕೆಲಸಮಾಡಿದರು. 19-20ನೇ ಶತಮಾನದಲ್ಲಿ ಕನ್ನಡವು ಪಶ್ಚಿಮದ ವಿಚಾರಧಾರೆಗೆ ತನ್ನನ್ನು ಮುಕ್ತವಾಗಿ ತೆರೆದುಕೊಂಡು ಕಾದಂಬರಿ, ಸಣ್ಣಕತೆ, ಭಾವಗೀತೆಯೇ ಮೊದಲಾದ ಅನೇಕ ಪ್ರಕಾರಗಳನ್ನು ಪ್ರತೀತಗೊಳಿಸಿಕೊಳ್ಳುತ್ತಾ ಬೆಳೆದದ್ದು ನಮಗೆಲ್ಲ ತಿಳಿದೇ ಇದೆ.


 ಚಾರಿತ್ರಿಕವಾಗಿ ಕನ್ನಡದ ಮಣ್ಣು ಬರಮಾಡಿಕೊಂಡ ಜನ ಸಮುದಾಯಗಳೆಷ್ಟು? ಇಥಿಯೋಪಿಯಾದಿಂದ ಕ್ರಿಸ್ತ ಶಕದಾರಂಭದಲ್ಲಿ ಗುಜರಾತಿನ ಮೂಲಕ ಭಾರತಕ್ಕೆ ಆಗಮಿಸಿದ ಹಬಶಿಗುಂಪಿನ ಯೋಧರು, ದೆಹಲಿ ಸುಲ್ತಾನರ ಕೈಕೆಳಗೆ ಕೆಲಸ ಮಾಡಿ, 1459ರ ಹೊತ್ತಿಗೆ ದೆಹಲಿಯಿಂದ ಬಂಗಾಳದವರೆಗೆ ವ್ಯಾಪಿಸಿಕೊಂಡು, ಕೊನೆಗೆ ಕನರ್ಾಟಕದ ಬಹುಮನಿ ಸುಲ್ತಾನರ ಕೈಕೆಳಗೆ ಮಿಲಿಟರಿ ಅಧಿಕಾರಿಗಳಾಗಿ ಕೆಲಸ ಮಾಡಿ, ಅಂತಿಮವಾಗಿ ಕರ್ನಾಟಕದಲ್ಲ್ಲಿಯೇ ನೆಲೆನಿಂತರು. ಮುಂದೆ ಲಂಬಾಣಿಗಳು, ಸಿದ್ಧಿಯರು, ಮತ್ತಿತರ ನೂರಾರು ಸಮುದಾಯಗಳು ಕರ್ನಾಟಕವನ್ನು ತಮ್ಮ ನೆಲೆವೀಡಾಗಿ ಆರಿಸಿಕೊಂಡು ಕನ್ನಡ ಸಂಸ್ಕೃತಿಯ ಭಾಗವಾಗಿ ಬೆಳೆದರು. ಯಾರನ್ನೂ ತಿರಸ್ಕರಿಸದ ಅಥವಾ ಹೊರ ಹಾಕದ ಕರ್ನಾಟಕವು ಎಲ್ಲ ಧರ್ಮಗಳನ್ನೂ, ಸಮುದಾಯಗಳನ್ನು ಒಳಗೊಳ್ಳುವ ವಿಶಿಷ್ಟತೆಯನ್ನು ಮೆರೆಯಿತು. ಇಂದಿಗೂ ಉತ್ತರ ಭಾರತದ ಲಕ್ಷಾಂತರ ಜನರು ಬೆಂಗಳೂರನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡಿದ್ದಾರೆ. ಅಸಹನೆ ಕನ್ನಡದ ಗುಣವಲ್ಲ.


  ಹೀಗೆ ರೂಪುಗೊಂಡ ಮತ್ತು ರೂಪುಗೊಳ್ಳುತ್ತಿರುವ ಕನ್ನಡವನ್ನು ಅನ್ಯಪ್ರಭಾವಗಳಿಂದ ಮುಕ್ತಗೊಳಿಸಿ ನೋಡಲಾಗುವುದಿಲ್ಲ. ಜೈನರಾಮಾಯಣದ ಪ್ರಭಾವದಿಂದ ಕನರ್ಾಟಕದ ಮಣ್ಣಿನ ಕಲೆಯೆಂದೇ ಬಣ್ಣಿಸಲಾದ ಯಕ್ಷಗಾನವು ಪ್ರಭಾವಿತಗೊಂಡು ದುರಂತ ರಾವಣನನ್ನು ಸೃಜಿಸಿಕೊಂಡಿದೆ. ಅಬ್ಧಿಯುಂ ಒಮ್ಮೆ ಕಾಲ ವಶದಿಂದ ಮರ್ಯಾದೆಯಂದಾಂಟದೇಎಂಬ ರಾವಣನಕುರಿತ ಕವಿವಾಣಿಯನ್ನು ಶೇಣಿ ಗೋಪಾಲಕೃಷ್ಣ ಭಟ್ಟರು ಯಕ್ಷಗಾನ ರಂಗಭೂಮಿಯಲ್ಲಿ ಅನವರತ ಅನುರಣಿಸುವಂತೆ ಮಂಡಿಸುತ್ತಿದ್ದರು. ಬಾಗಲಕೋಟೆಯ ಇಬ್ರಾಹಿಂ ಸುತಾರರು ಕನ್ನಡದಲ್ಲಿ ಪವಿತ್ರ ಕುರಾನಿನ ಸಂದೇಶವನ್ನು ರವಾನಿಸುವ ಪರಿಯನ್ನು ನಾವೆಲ್ಲ ಕೇಳಿದ್ದೇವೆ. ಉತ್ತರದಿಂದ ಆಗಮಿಸಿದ ಬೌದ್ಧರ ಕೇಂದ್ರವಾಗಿದ್ದ ಕದರಿಯು ಇಂದು ಕನ್ನಡಿಗರ ಕೇಂದ್ರವಾಗಿ ಬೆಳೆದಿದೆ. ವ್ಯಾಸನ ಭಾರತ ಕುಮಾರವ್ಯಾಸನ ಭಾರತವಾಗಿ ನಮ್ಮ ಮುಂದಿದೆ. ಜೈಮಿನಿಯ ಭಾರತವು ಲಕ್ಷ್ಮೀಶನ ಜೈಮಿನಿ ಭಾರತವಾಗಿ ಕನ್ನಡದ ಮಣ್ಣಲ್ಲಿ ಆಳವಾಗಿ ಬೇರೂರಿದೆ. ಕರಾವಳಿ ಕನರ್ಾಟಕದಲ್ಲಿ ಕನ್ನಡ ಜೈಮಿನಿ ಭಾರತದ ನಾಲ್ಕಾರು ಪದ್ಯಗಳನ್ನು ಬಾಯಿ ಪಾಠ ಹೇಳದಿದ್ದರೆ ಅವನಿಗೆ ಯಾರೂ ಹೆಣ್ಣು ಕೊಡುತ್ತಿರಲ್ಲ ಎಂಬುದು ಈ ಕಾವ್ಯದ ಜನಪ್ರಿಯತೆಗೆ ಸಾಕ್ಷಿ. ಅನೇಕ ಮೌಖಿಕ ಕಾವ್ಯಗಳು ಆರಂಭದಲ್ಲಿ ಅಕ್ಷರ ಮಾತೆಯನ್ನೂ ನೆನಪಿಸಿಕೊಳ್ಳುತ್ತವೆ.


   ಹೀಗೆ ಅನ್ಯ ಪ್ರಭಾವಗಳನ್ನು ಅರಗಿಸಿಕೊಂಡು, ಅವನ್ನು ಪುನರ್ ಸೃಸ್ಟಿಸಿಕೊಂಡು ಕನ್ನಡ ಬೆಳೆದಿದೆ. ಕನ್ನಡ ಸಂಸ್ಕೃತಿಗೆ ಅಂಥ ಗುಣವೊಂದಿದೆ. ಭಾರತದ ಅನೇಕ ಭಾಷೆಗಳಿಗೆ ಈ ಗುಣವಿಲ್ಲ. ತಮಿಳು ಭಾಷೆಯೂ ಸೇರಿದಂತೆ ಅನೇಕ ಭಾಷೆಗಳು ಒಂದು ಬಗೆಯ ಪ್ರತಿರೋಧವನ್ನು ಒಡಲಲ್ಲಿ ಇರಿಸಿಕೊಂಡು ಬೆಳೆಯುತ್ತಿವೆ. ಇಂಥ ಸಂದರ್ಭದಲ್ಲಿ ಕನ್ನಡ ದೇಸಿಯನ್ನು ಅರ್ಥಮಾಡಿಕೊಳ್ಳುವಾಗ, ಅದರ ಬಗ್ಗೆ ಮಾತಾಡುವಾಗ ವಿಶೇಷ ಎಚ್ಚರದ ಅಗತ್ಯವಿದೆ. ಕನ್ನಡ ದೇಸಿಯನ್ನು ಪ್ರತಿಪಾದಿಸುವಾಗ, ಅದರಿಂದ ಉತ್ತರ ಭಾರತದಿಂದ ಆಗಮಿಸಿದ ಜೈನ, ಬೌದ್ಧರಚಿಂತನ ಕ್ರಮಗಳನ್ನು ತೆಗೆದರೆ, ಸಂಸ್ಕೃತದಿಂದ ಆಗಮಿಸಿದ ವ್ಯಾಸ, ಜೈಮಿನಿ ವಾಲ್ಮೀಕಿಗಳನ್ನು ಮರೆತರೆ, ಕಾಶ್ಮೀರದಿಂದ ಆಗಮಿಸಿದ ಶೈವ ಸಿದ್ಧಾಂತಗಳನ್ನು ಬಿಟ್ಟರೆ, ಸೂಫಿಗಳ ಪ್ರಭಾವದತತ್ವ ಪದಗಳನ್ನು ಬದಿಗಿಟ್ಟರೆ, 20 ನೇ ಶತಮಾನದ ವಸಾಹತೀಕರಣದ ಚಿಂತನಾ ಕ್ರಮಗಳನ್ನು ತಿರಸ್ಕರಿಸಿದರೆ, ಹೀಗೆ ಎಲ್ಲವನ್ನೂ ತೆಗೆಯುತ್ತಾ ಹೋದರೆ ಅಲ್ಲಿ ಉಳಿಯುವುದು ಏನು? ಈರುಳ್ಳಿ ಸಿಪ್ಪೆಯನ್ನು ಒಂದೊಂದಾಗಿ ತೆಗೆದರೆ ಅಲ್ಲಿ ಹೇಗೆ ಏನೂ ಉಳಿಯುವುದಿಲ್ಲವೋ ಹಾಗಾದೀತು ಪರಿಸ್ಥಿತಿ. ಹಾಗೆ ಮಾಡುವುದರ ಬದಲು ಕನ್ನಡ ಸಂಸ್ಕೃತಿಯನ್ನು ಇಡಿಯಾಗಿ ಮತ್ತು ಮುಕ್ತವಾಗಿ ಪರಿಭಾವಿಸಿಕೊಳ್ಳುವುದು ಒಳಿತು.

ಗುರುವಾರ, ಮೇ 17, 2012

ಪಿ.ಕೆ.ರಾಜಶೇಖರ್ ಅವರೊಂದಿಗೆ ಮಾತುಕತೆ: ಕಬಳಿಕೆ ಮಾಧ್ಯಮಗಳಿಂದ ಜನಪದ ‘ಧನಪದ’




(ಪಿರಿಯಾಪಟ್ಟಣದಲ್ಲಿ ನಡೆದ 10 ನೇ ಮೈಸೂರು ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಪಿ.ಕೆ.ರಾಜಶೇಖರ್ ಅವರನ್ನು ಸಂದರ್ಶನ ಮಾಡಿ ವಿಜಯ ಕರ್ನಾಟಕ ಮೈಸೂರು ವಿಭಾಗವು ಪ್ರಕಟಿಸಿತ್ತು. ಈ ಮಾತುಗಳನ್ನು ಕನ್ನಡ ಜಾನಪದ ಬ್ಲಾಗಿನಲ್ಲೂ ಪ್ರಕಟಿಸಲಾಗುತ್ತಿದೆ.)


ಪಿರಿಯಾಪಟ್ಟಣ ಕೆಂಪೇಗೌಡ ರಾಜಶೇಖರ ...
ಹೀಗೆಂದರೆ ಗುರುತು ಹಿಡಿಯುವುದು ಕಷ್ಟ . ಅದೇ, ‘ಪಿಕೆಆರ್ ಎನ್ನಿ ,ವಿದ್ವತ್‌ಕ್ಷೇತ್ರ,‘ವಿದ್ಯಾರ್ಥಿವಿಶ್ವದಲ್ಲಿ ಫೇಮಸ್. 
ಮೈಸೂರು ಜಿಲ್ಲೆ ಪಿರಿಯಾಪಟ್ಟಣದ  ಪಿ.ಡಿ.ಕೆಂಪೇಗೌಡ -ಪುಟ್ಟಮ್ಮ ದಂಪತಿ ಪುತ್ರ ರಾಜಶೇಖರ  ಅವರು ಅಧ್ಯಾಪಕರಾಗಿ,ಜನಪದ ವಿದ್ವಾಂಸರಾಗಿ, ಗಾಯಕರಾಗಿ ಕಟ್ಟಿಕೊಂಡ  ವೃತ್ತಿ-ಪ್ರವೃತ್ತಿಯ ಬದುಕು ಜನಪದ ಜೋಗಿಯ ಘನ ಗೌರವವನ್ನು ತಂದು ಕೊಟ್ಟಿದೆ.
ಜಾನಪದ ಕ್ಷೇತ್ರದ ಕೃಷಿಕರಲ್ಲಿ ಪಿಕೆಆರ್ ಅವರದ್ದು ಮುಂಚೂಣಿ ಹೆಸರು. ಸಂಶೋಧನಾ ವಿದ್ಯಾರ್ಥಿಯಾಗಿ ದ್ದಾಗಲೇ ೧೫೦೦ ಪುಟಗಳ ಬೃಹತ್ ಕೃತಿ ಮಲೆಯ ಮಾದೇ ಶ್ವರಜನಪದ ಮಹಾಕಾವ್ಯವನ್ನು ಪ್ರಕಟಿಸಿದ ಹೆಚ್ಚುಗಾರಿಕೆ ಅವರದ್ದು. ಜಾನಪದ ಸಾಹಿತ್ಯ ಸೌಧದ ಹೆಗ್ಗಂಬಎಂದು ವಿದ್ವಾಂಸರಿಂದ ಪ್ರಶಂಸೆಗೆ ಪಾತ್ರವಾಗಿದ್ದ ಈ ಕೃತಿಗೆ ೧೯೭೪ರಲ್ಲಿಯೇ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗರಿ.
ಕವಿತೆ,ಭಾಷಾಶಾಸ್ತ್ರ, ಜೀವನ ಚರಿತ್ರೆ, ಅನುವಾದ ,ಮಕ್ಕಳ ಸಾಹಿತ್ಯ,ಜಾನಪದವೂ ಸೇರಿ ೭೦ಕ್ಕೂ ಹೆಚ್ಚು ಮೌಲಿಕ ಕೃತಿಗಳ ಪ್ರಕಟಣೆ. ಈ ಪೈಕಿ ಬಹುಪಾಲು ಜಾನಪದ ಆವೃತ. ೨೦೦೪ರಲ್ಲಿ ಪ್ರಕಟವಾದ ಜನಪದ ಮಹಾಭಾರತಮತ್ತೊಂದು ಜನಪದ ಮಹಾಕಾವ್ಯ.
ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯಿಂದ ೧೯೯೬ರಲ್ಲಿ ಜಾನ ಪದ ತಜ್ಞಪ್ರಶಸ್ತಿ. ೨೦೦೫-೦೬ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ. ಮಾತ್ರ ವಲ್ಲ, ಅನೇಕ ಸಂಘ ಸಂಸ್ಥೆಗಳಿಂದ ಹತ್ತಾರು ಪ್ರಶಸ್ತಿ,ಮಾನ ಸಮ್ಮಾನ.

ಮಹಾರಾಜ ಕಾಲೇಜಿನಲ್ಲಿ ಹಲವು ವರ್ಷ, ಮಾನಸಗಂಗೋತ್ರಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕೊನೆಯ ನಾಲ್ಕಾರು ವರ್ಷ ಕನ್ನಡ ಪ್ರಾಧ್ಯಾಪಕ ರಾಗಿ ವಿದ್ಯಾರ್ಥಿಗಳನ್ನು ಸೂಜಿಗಲ್ಲಿನಂತೆ  ಸೆಳೆಯುತ್ತಿದ ಅವರು, ಇತ್ತೀಚೆಗಷ್ಟೆ  ವೃತ್ತಿಯಿಂದ ನಿವೃತ್ತರಾಗಿದ್ದಾರೆ. ಆದರೆ,ಪ್ರವೃತ್ತಿ ಅವಿಶ್ರಾಂತ. ಬಗಲು ಚೀಲ ನೇತುಹಾಕಿಕೊಂಡು ಈಗಲೂ ಜನರ ಪದಸಂಗ್ರಹ ನಿರತ.
ಜನಪದ ವಿದ್ವಾಂಸ,ವಿದ್ಯಾರ್ಥಿಪ್ರಿಯ ಅಧ್ಯಾಪಕ ಅಷ್ಟೇ ಅಲ್ಲ. ಅವರಲ್ಲೊಬ್ಬ ಶ್ರೇಷ್ಠ ಗಾಯಕನೂ ಇದ್ದಾನೆ. ಜನರ ಪದಕ್ಕೆ  ಇಂಪು ನೀಡಿ,ದೇಸಿ ಕಂಪನ್ನು ವಿಶ್ವ ವ್ಯಾಪಿ ಗೊಳಿಸಿದ್ದಾರೆ. ಮೂಲ ಮಟ್ಟುಗಳಲ್ಲೇ  ಜನಪದವನ್ನು ಹಾಡಿ ಶ್ರೀಮಂತ ಗೊಳಿಸುತ್ತಿರುವ ಹೊನ್ನಾರುತಂಡದ ರೂವಾರಿಯೂ ಹೌದು. ಈ ತಂಡ ಅಮೆ ರಿಕದ ಚಿಕಾಗೋದಲ್ಲಿ ನಡೆದ ೫ನೇ ಅಕ್ಕ ಸಮ್ಮೇಳನದಲ್ಲಿ ಹಾಡಿದ್ದು ವಿಶೇಷ.ಮೂಲ ಮಟ್ಟುಗಳಲ್ಲಿ ಹಾಡಿದ ಕ್ಯಾಸೆಟ್‌ಗಳೂ ಜನಪ್ರಿಯ. 

ವರ್ಷದ ಹಿಂದೆ ಅವರ ಶಿಷ್ಯರು, ಅಭಿಮಾನಿಗಳು ಸಾವಿರ ಪುಟಗಳ ಅಭಿನಂದನಾ ಗ್ರಂಥ ಜಾನಪದ ಜೋಗಿಯನ್ನು ಕಟ್ಟಿ, ಸಮರ್ಪಿಸಿದ್ದಾರೆ. ಜೋಗಿಪದಕ್ಕೆ ಅನ್ವರ್ಥವಾಗೇ  ಜನಪದ ಕ್ಷೇತ್ರದಲ್ಲಿ ಅವರು ಕಾರ‍್ಯಶೀಲರು. ಜನಪದ ಕಲಾಶಾಲೆಯೊಂದನ್ನು ಕಟ್ಟಬೇಕೆಂಬುದು ಅವರ ಮಹದಾಸೆ.
ಈಗ  ತವರೂರು ಪಿರಿಯಾಪಟ್ಟಣದಲ್ಲಿ ನಡೆಯುತ್ತಿರುವ ಜಿಲ್ಲಾ ಸಾಹಿತ್ಯ ಸಮ್ಮೇಳನದ  ಸರ್ವಾಧ್ಯಕ್ಷ ಸ್ಥಾನದ ಗೌರವ. ತಾಲೂಕಿನ ಪ್ರತಿ ಹಳ್ಳಿಯನ್ನು ಅಲೆದು, ಜನಪದವನ್ನು ಸಂಗ್ರಹಿಸಿರುವ  ಅವರಿಗೆ  ಇದು ಅರ್ಹ ಗೌರವ. 

ಸಮ್ಮೇಳನಾಧ್ಯಕ್ಷರಾಗಿರುವ  ಖುಷಿಯಲ್ಲಿ ಅವರು ವಿಜಯ ಕರ್ನಾಟಕದ ಜತೆ ಮುಕ್ತ ವಾಗಿ ಮಾತನಾಡಿದ್ದಾರೆ. ಸಹಜವಾಗಿಯೇ ಮಾತೆಲ್ಲ ಜನಪದವಾಗಿದೆ. ಈ ಕ್ಷೇತ್ರದ ಕುರಿತ ಕಾಳಜಿ,ಕಳಕಳಿಗಳು ವ್ಯಕ್ತವಾಗಿವೆ.

ಕನ್ನಡ-ಜನಪದ ಸಮಾನ ದುಃಖ

-
ಕನ್ನಡ ಭಾಷೆ ಮತ್ತು ಜನಪದದ್ದು ಸಮಾನ ದುಃಖ. ಎರಡರ ದುರ್ಗತಿಯೂ ಒಂದೇ ಥರ. ಆಧುನಿಕತೆಯ ಅಬ್ಬರದಲ್ಲಿ ಎಲ್ಲವನ್ನೂ ಕಳೆದುಕೊಳ್ಳುತ್ತಿದ್ದೇವೆ. ಕಬಳಿಕೆ ಮಾಧ್ಯಮಗಳು ಜನಪದವನ್ನು ಪರಿಷ್ಕರಿಸಿ ಧನಪದ ವನ್ನಾಗಿಸಿವೆ. ಉಳಿಸಿ ಕೊಳ್ಳಲು ಏನು ಮಾಡಬೇಕು ಎನ್ನುವುದೇ ಗೊಂದಲಕಾರಿ.ಇದೇ ಸ್ಥಿತಿ ಮುಂದುವರಿದರೆ ಫೋಕ್ಲೋರ್ ಜೋಕ್ಲೋರ್ಆಗುವ ಅಪಾಯವಿದೆ.
-
ಕನ್ನಡಕ್ಕೆ ಮನ,ಮನೆ ಮುಚ್ಚುತ್ತಿದೆ. ಕನ್ನಡ ಮೇಷ್ಟ್ರುಗಳ ಮಕ್ಕಳೂ ಅಮೆರಿಕ  ಪಾಲಾಗುತ್ತಿದ್ದಾರೆ. ಕೇಳಿದರೆ, ಅವರವರ ಆಯ್ಕೆಎಂದು ತೇಲಿಸುತ್ತಾರೆ. ಇಂಥ ಸಮಯ ಸಾಧಕ ಕನ್ನಡ ಪ್ರೇಮ ದುರ್ದೈವ. ಶ್ರೀಮಂತರು,ಶಿಷ್ಟರಿಗೆ ಇಂಗ್ಲಿಷ್ ಶಿಕ್ಷಣ, ಬಡವರು,ದುರ್ಬಲರಿಗೆ  ಮಾತ್ರ ಕನ್ನಡ ಎನ್ನುವುದು ಈಗಿನ ಸ್ಥಿತಿ. ಇದು ಬದಲಾಗಿ,ಎಲ್ಲರಿಗೂ ಸಮಾನ ಶಿಕ್ಷಣ ವ್ಯವಸ್ಥೆ ಜಾರಿ ಆಗದಿದ್ದರೆ  ಕನ್ನಡವನ್ನು ಉಳಿಸಿಕೊಳ್ಳುವುದು ಅಸಾಧ್ಯ.


ಜನಪದಉಳಿಸಿ,ಬೆಳೆಸಲು ...

-
ಶ್ರೇಷ್ಠ ಜನಪದ ಗಾಯಕರನ್ನು ಗುರುತಿಸಿ,ನಾಡಿನ ವಿವಿಧೆಡೆ ನಿರಂತರ ಕಾರ‍್ಯಕ್ರಮ ಏರ್ಪಡಿಸಬೇಕು.ಆಕಾಶವಾಣಿ,ದೂರದರ್ಶನಗಳಲ್ಲಿ ಹೆಚ್ಚು ಅವಕಾಶ ಅಗತ್ಯ. ಕಲಾವಿದರಿಗೆ ಒಂದಷ್ಟು ನೆರವು,ಗೌರವ  ನೀಡಿದರಷ್ಟೇ ಸಾಲದು.
-
ತಾಲೂಕು ಅಥವಾ ಜಿಲ್ಲೆಗೊಂದು ಜನಪದ ವಿದ್ಯಾಸಂಸ್ಥೆ  ಸ್ಥಾಪನೆ ಸೂಕ್ತ. ಜನಪದ ಅಕಾಡೆಮಿ ತಾಲೂಕು,ಜಿಲ್ಲಾಮಟ್ಟದ ಸಂಘ ಸಂಸ್ಥೆಗಳ  ಸಹಯೋಗದಲ್ಲಿ ಜನಪದ ಗೀತ ಗಾಯನ ತರಬೇತಿ ಶಿಬಿರ  ಏರ್ಪಡಿಸಬೇಕು.ಶಾಲಾ ಕಾಲೇಜುಗಳಲ್ಲಿ ಜನಪದ ಸಂಗೀತದ ಕಲಿಕೆ ಕಡ್ಡಾಯವಾಗಬೇಕು.ಮೂಲ ಮಟ್ಟುಗಳಲ್ಲಿ ಹಾಡುವವರನ್ನೇ  ಸಂಪನ್ಮೂಲ ವ್ಯಕ್ತಿಗಳನ್ನಾಗಿ ಕರೆಸಬೇಕು. ಮೂಲವನ್ನು ಅನುಕರಿಸುವ ಸಮರ್ಥರನ್ನೇ ಕಲಿಕಾರ್ಥಿಗಳನ್ನಾಗಿ ಆಯ್ಕೆ ಮಾಡಬೇಕು.
-
ಪ್ರತಿ ಜಿಲ್ಲೆಯಲ್ಲೂ ಜನಪದ ವಸ್ತುಸಂಗ್ರಹಾಲಯ ಸ್ಥಾಪಿಸ ಬೇಕು. ಮೌಖಿಕ,ಭೌತಿಕ ಸಂಸ್ಕೃತಿಗೆ ಸಂಬಂಧಿಸಿದ ವಸ್ತು, ಪ್ರದರ್ಶನಾತ್ಮಕ ಕಲೆಗಳನ್ನೆಲ್ಲ ಇಲ್ಲಿ ಸಂರಕ್ಷಿಸಬೇಕು. ಪ್ರದರ್ಶನಾತ್ಮಕ ಕಲೆಗಳ ತರಬೇತಿ ಕೇಂದ್ರ ಮತ್ತು ಜನಪದ ಅಧ್ಯಯನ ಕೇಂದ್ರ ವಾಗಿಯೂ ಕೆಲಸ ಮಾಡಬೇಕು. ಜನಪದ ಜೀವನದ ಸತ್ವ ಮತ್ತು ತತ್ತ್ವಗಳು ಮಾನವ  ಪ್ರೀತಿಯ ಸಂವರ್ಧನೆಗೆ ನೆರವಾಗುವ ಬಗೆಯನ್ನು ಕಲಿಸಬೇಕು.ಇದರಿಂದ ಜಾನಪದದಲ್ಲಿ ನಿರಂತರ ಜೀವಂತಕ್ಕೆ ಕಾಪಿಟ್ಟುಕೊಳ್ಳುವುದು ಸಾಧ್ಯ.

ಮೂಲ ಮಟ್ಟು ಇತ್ಯಾದಿ...

-
ಜನಪದ ಸಂಗೀತದ ಮೂಲಮಟ್ಟುಗಳಲ್ಲಿ ಮಾರ್ಪಾಡು  ಅಪಾಯಕಾರಿ. ಕಾಯಕ ಸಂಬಂಧಿ ಗೀತೆಗಳು ಆಯಾ ಕಾಯಕಕ್ಕೆ ಹೊಂದುವ ಮಟ್ಟು,ತಾಳಗಳಲ್ಲಿರುತ್ತವೆ. ಮಾರ್ಪಾಡಾದರೆ ಮಟ್ಟಿಗೆ ಧಕ್ಕೆ. ಸ್ವಲ್ಪ ಅವಕಾಶ ಕೊಟ್ಟರೂ ಮೂಲವನ್ನು ಪೂರ್ಣ ವಾಗಿ ಕೈಬಿಡುವ ಅಪಾಯ. ಶಾಸ್ತ್ರೀಯ ಸಂಗೀತದಂತೆಯೇ ಜನಪದ ಸಂಗೀತಕ್ಕೂ ತನ್ನ ತನದ ಅಗತ್ಯವಿದೆ. ಜನಪ್ರಿಯತೆ ಯೊಂದೇ ಶ್ರೇಷ್ಠತೆಯ ಮಾನದಂಡವಾಗಬಾರದು. ಆದ್ದರಿಂದ ಮೂಲ ಕಲಾವಿದರಿಗೆ ತಮ್ಮ ಅನನ್ಯತೆಯನ್ನು ಉಳಿಸಿಕೊಳ್ಳ ಬೇಕಾದ ಬಗ್ಗೆ ಅರಿವು ಮೂಡಿಸುವ ಕಾರ‍್ಯಕ್ರಮ ಹಮ್ಮಿಕೊಳ್ಳ ಬೇಕು.

ವಾದ್ಯ,ಪರಿಕರ ವಿಶೇಷ...

ವಿಶೇಷ ವಾದ್ಯಗಳಿಂದಲೇ ವೃತಿ ಗಾಯಕರ ಪ್ರತಿ ತಂಡ ತಮ್ಮದೇ ವೈಶಿಷ್ಟ್ಯವನ್ನು ಉಳಿಸಿಕೊಂಡಿವೆ. ಆದ್ದರಿಂದ ಜನಪದ ಗಾಯಕರಿಗೆ ಶಿಷ್ಟ ವಾದ್ಯಗಳ ಅಗತ್ಯವಿಲ್ಲ. ಬಳಸಿದರೆ ಕಲಸು ಮೇಲೋಗರವಾಗಿ ಸಂಪ್ರದಾಯ ವೈಶಿಷ್ಟ್ಯ ನಾಶವಾಗುತ್ತದೆ. ಕ್ಯಾಸೆಟ್‌ಗಳಲ್ಲಿ ಹಾಡಿದ ಹೆಚ್ಚಿನ ಗಾಯಕರು ಇಂಥ ಸ್ಥಿತಿಗೆ ಕಾರಣವಾಗಿದ್ದು, ಗೀತೆಗಳನ್ನು ಮೂಲ ರೂಪದಲ್ಲಿ ತೋರಿಸು ವಲ್ಲಿ ಸೋತಿದ್ದಾರೆ. 
-
ಅನಾಹುತ,ಅಚಾತುರ್ಯಗಳ ಕಲ್ಪನೆ ಇಲ್ಲದ ಹವ್ಯಾಸಿ ಗಾಯಕರು, ಸಿನಿಮಾ ಮಂದಿ ಜನಪದ ಗೀತೆಗಳನ್ನು ಜನಪ್ರಿಯ ಗೊಳಿಸುತ್ತಿದ್ದೇವೆಎಂದು ಬೀಗುತ್ತಿದ್ದಾರೆ. ವಾಸ್ತವವಾಗಿ ಇದು ಜನಪದ ಸಂಗೀತದ ವಿಕೃತಿ.ಮೂಲಕ್ಕೆ ಹೊನ್ನ ಶೂಲ‘ !

ಪ್ರಸ್ತುತದ ಸಂಶೋಧನೆ ಕುರಿತು...

-
ಸ್ನಾತಕೋತ್ತರ ತರಗತಿಗಳಲ್ಲಿ ಜನಪದ ಅಧ್ಯಯನ  ಪ್ರಾರಂಭ ವಾದ ನಂತರ  ಸಂಶೋಧನೆಗೆ ನೂರಾರು ವಿಷಯಗಳು ಗೋಚರಿಸುತ್ತಿವೆ ಎನ್ನುವುದು ನಿಜ. ಆದರೆ,ವಿದ್ವತ್ತು, ಕ್ಷೇತ್ರಕಾರ‍್ಯ, ಚಿಂತನ ಶೀಲತೆಗಳ ಕೊರತೆಯ ಕಾರಣಕ್ಕೆ ಡಾಕ್ಟರೇಟ್ ಪ್ರಬಂಧ ಗಳು ಪೇಲವವಾಗುತ್ತಿವೆ. ಮಾರ್ಗದರ್ಶಕರು, ತೀರ್ಪುಗಾರರ  ತಜ್ಞತೆಯೂ ಅನುಮಾನಾರ್ಹ. ವಿದ್ಯಾರ್ಥಿಗಳು ನೀಡಿದ ತಪ್ಪು ಉಲ್ಲೇಖಗಳನ್ನೇ  ‘ತಜ್ಞರು ಅನುಮೋದಿಸಿದ ಉದಾಹರಣೆ ಗಳೂ ಇವೆ. 
-
ಜಾತಿ ಮತ್ತಿತರ ಕಾರಣದಿಂದ ಅನಾರೋಗ್ಯಕರ ವರ್ತುಲ ಗಳೂ  ಸೃಷ್ಟಿಯಾಗುತ್ತಿವೆ. ಪ್ರಬಂಧಗಳು ಬೂಸಾ ಬೆಟ್ಟದಂತೆ ಬೆಳೆದರೆ ಪ್ರಯೋಜನವಿಲ್ಲ. ಸತ್ವಪೂರ್ಣ, ಸತ್ಯನಿಷ್ಠ  ಸಂಶೋಧನೆ ಗಳ ಅಗತ್ಯವಿದೆ. ಇದಕ್ಕೆ ಶುದ್ಧ ಮನಸ್ಸಿನ  ಸಂಶೋಧನಾ ವಿದ್ಯಾರ್ಥಿಗಳು, ತಜ್ಞ ಮಾರ್ಗದರ್ಶಕರ ಅಗತ್ಯವೂ ಇದೆ.

ಜನಪದ  ಒಡನಾಟ

-
ಜನಪದದ ಒಡನಾಟ,ನಿರಂತರ ತಿರುಗಾಟದಿಂದ ನಷ್ಟವಾಗಿ ದ್ದೇನೂ ಇಲ್ಲ. ಈ ಕ್ಷೇತ್ರ ಕಾರ‍್ಯದಲ್ಲಿ ದಕ್ಕಿದ  ಸುಖ,ಸಂತೋಷ, ಸಂತೃಪ್ತಿ ಎಷ್ಟೇ ಹಣ ಕೊಟ್ಟರೂ  ಸಿಗಲಾರದಷ್ಟು. ಇಂಥ ಪಾರಮಾರ್ಥಿಕ  ಸುಖವೇ ನಿಜವಾದ ಸುಖ ಎಂದು ಭಾವಿಸಿದ ವನು ನಾನು.
-‘
ಜನಪದ ಮಹಾಭಾರತ ಜನಪದರಲ್ಲಿ ಇದೆ ಎಂಬ ಕಲ್ಪನೆಯೇ ಇರಲಿಲ್ಲ. ನಿರಂತರ ಕ್ಷೇತ್ರಕಾರ‍್ಯದಿಂದ ಮಾತ್ರ ಇಂಥ ಅಗೋಚರ  ಸಂಗತಿಗಳು ಬೆಳಕಿಗೆ ಬರುತ್ತವೆ. ಸಾಧ್ಯವಾದಷ್ಟು ಜನಪದ ಸಾಮಗ್ರಿಯನ್ನು ಸಂಗ್ರಹಿಸಿಕೊಳ್ಳುವ ಕೆಲಸ  ಜರೂರಾಗಿ ನಡೆಯಬೇಕು. ಇಲ್ಲವೇ  ಈಗ ಆಗಿರುವ ನಷ್ಟದ ಜತೆಗೆ ಇನ್ನಷ್ಟನ್ನು ಕಳೆದುಕೊಳ್ಳುತ್ತೇವೆ. ಎಲ್ಲವನ್ನೂ ಹಾಳುಮಾಡಿದ ಮೇಲೆ ಕಳೆದುಕೊಂಡದ್ದನ್ನು ಉಳಿಸಿಕೊಳ್ಳಬೇಕಿತ್ತು ಎಂದು ಹಳಹಳಿಸಿದರೆ ಏನೂ ಪ್ರಯೋಜನವಿಲ್ಲ.