-ಪ್ರೊ.ಶಿವರಾಮಯ್ಯ
(ಪ್ರೊ.ಶಿವರಾಮಯ್ಯ ಅವರು ನಿಷ್ಠುರ ವಿಮರ್ಶೆಯನ್ನು ಆಗಾಗ ಬರೆಯುತ್ತಿರುತ್ತಾರೆ. ಅಂತಹ ಭಿನ್ನ ವಿಮರ್ಶೆಯನ್ನು ಚಂದ್ರಶೇಖರ ಕಂಬಾರ ಅವರ ಶಿಖರಸೂರ್ಯ ಕಾದಂಬರಿಯ ಬಗ್ಗೆ ಬರೆದಿದ್ದಾರೆ. ಕಂಬಾರರನ್ನು ಹಾಡಿ ಹೊಗಳುವವರ ಮಧ್ಯೆ ಈ ಬರಹ ಭಿನ್ನವಾಗಿ ಕಾಣುತ್ತದೆ. ಕನ್ನಡ ಜಾನಪದ ಓದಿಗೆ ಇಲ್ಲಿ ಪ್ರಕಟಿಸಲಾಗಿದೆ. ಲೇಖನ ಕಳಿಸಿಕೊಟ್ಟ ಶಿವರಾಮಯ್ಯ ಅವರಿಗೆ ಕೃತಜ್ಞತೆಗಳು)
****
ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆ ಘೋಡಗೇರಿ ಎಂಬ ಚಿಕ್ಕ ಹಳ್ಳಿಯ ಬಡ ಕುಟುಂಬದಲ್ಲಿ ಹುಟ್ಟಿ ಬಂದ ಚಂದ್ರಶೇಖರ ಕಂಬಾರರು ಕವಿ, ನಾಟಕಕಾರ, ಕಾದಂಬರಿಕಾರ, ಸಂಸ್ಕೃತಿ ಚಿಂತಕ, ಜಾನಪದ ವಿದ್ವಾಂಸ, ಚಲನಚಿತ್ರ ನಿರ್ದೇಶಕ ಮುಂತಾಗಿ ಕನ್ನಡ ನಾಡಿನ ಮನೆ ಮಾತಾಗಿರುವ ಲೇಖಕ. ಇವರು ಇಲ್ಲಿಯವರೆಗೆ ೮ ಕವನಸಂಕಲನಗಳು, ೨೨ ನಾಟಕಗಳು, ೫ ಕಥೆ, ಕಾದಂಬರಿಗಳು ಹಾಗೂ ಹಲವಾರು ಜಾನಪದ ಸಂಸ್ಕೃತಿ ಸಂಶೋಧನಾ ಮತ್ತು ರಂಗಭೂಮಿಗೆ ಸಂಬಂಧಿಸಿದ ಗ್ರಂಥಗಳೂ ಸೇರಿ ಸುಮಾರು ೫೦ ಕೃತಿಗಳನ್ನು ಪ್ರಕಟಿಸಿದ್ದಾರೆ. ಇತ್ತೀಚೆಗೆ ಭಾರತ ಸಾಹಿತ್ಯ ಲೋಕದ ಅತ್ಯುಚ್ಛ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರೂ ಆಗಿದ್ದಾರೆ. ಚಕೋರಿ (ಕಾವ್ಯ) ಹಾಗೂ ಶಿಖರಸೂರ್ಯ (ಕಾದಂಬರಿ)ಗಳು ಕಂಬಾರರ ಅತಿ ಮುಖ್ಯ ಕೃತಿಗಳೆಂದು ಹೇಳಲಾಗುತ್ತಿದೆ.
ಕನಕಪುರಿಯ ಕೊನೆಯ ದೊರೆ ಶಿಖರ ಸೂರ್ಯ. ಇವನ ಇತಿಹಾಸ ಶಿವಾಪುರದಿಂದ ಸುರುವಾಗುತ್ತದೆ. ಆದರೆ ಅವನ ಕುಲ ಮೂಲಗಳಿಗೆ ಸಂಬಂಧಿಸಿದಂತೆ, ಕಂಬಾರರ ಇನ್ನೊಂದು ಕಾವ್ಯ ’ ಚಕೋರಿ’ಯಲ್ಲಿ ಕೆಲವು ಮಾಹಿತಿಗಳು ದೊರೆಯುತ್ತವೆ. ಆ ಪ್ರಕಾರ ’ ಚಕೋರಿ’ಯ ನಾಯಕ ಚಂದ ಮುತ್ತ ಮತ್ತು ಚಿನ್ನ ಮುತ್ತ (ಇವನೇ ಆಮೇಲೆ ಜಯಸೂರ್ಯ, ಶಿಖರಸೂರ್ಯ ಎಂದು ತನ್ನ ಹೆಸರನ್ನು ಬದಲಾಯಿಸಿಕೊಳ್ಳುತ್ತಾನೆ) ಇವರು ಸೋದರ ಸಂಬಂಧಿಗಳು. ಇವರ ವಂಶದ ಚರಿತ್ರೆ ಇಂತಿದೆ.
ಶಿವದೇವರ ಹಣೆಯ ಬೆವರ ಹನಿ ಭೂಲೋಕದ ಮೇಲೆ ಬಿದ್ದಾಗ ಒಬ್ಬ ನರಮಾನವ ಹುಟ್ಟಿಕೊಂಡ. ’ಅಧೋ ಲೋಕದಲ್ಲಿರುವ ಮಾಯಕಾರ್ತಿಯನ್ನು ವರಿಸಿ ಸುಖವಾಗಿರು’ ಎಂದು ಶಿವದೇವರು ಅವನಿಗೆ ಅಪ್ಪಣೆ ಮಾಡಿದರು. ಆ ನರಮಾನವನು ಅಧೋಲೋಕಕ್ಕೆ ಹೋಗಿ ಮಾಯಕಾರ್ತಿಯನ್ನು ಕರೆದೊಕೊಂಡು ಮೇಲೆ ಬರುವಾಗ ಸರ್ಪ ಸೈತಾನನು ಅವನ ಎಡಗಾಲು ಹಿಡಿದು ಜಗ್ಗಲಾರಂಭಿಸಿದ, ಬಲಭಾಗವನ್ನು ಮಾಯಕಾರ್ತಿ ಮೇಲೆ ಎಳೆಯ ತೊಡಗಿದಳು. ನರಮಾನವ ಸೀಳಿ ಎರಡಾದ. ಶಿವ ದೇವರ ಅಪೇಕ್ಷೆಯಂತೆ ಸೂರ್ಯನ ಬೆಳಕಿನಿಂದ ಬಲಭಾಗ ಪೂರ್ಣಗೊಂಡಿತು. ಚಂದ್ರನ ಬೆಳಕಿನಿಂದ ಎಡಭಾಗ ಪೂರ್ಣಗೊಂಡಿತು. ಹೀಗೆ ಒಬ್ಬ ನರಮಾನವ ಎರಡಾಗಿ ಅಣ್ಣ ತಮ್ಮ ಆದರು. ಅವರನ್ನು ಶಿವದೇವರು ’ ಮಾನವರಿಗೆ ದೊಡ್ಡವರಾಗಿ ದೇವರಿಗೆ ಸಣ್ಣವರಾಗಿ ಬಾಳಿರಯ್ಯ’ ಎಂದು ಆಶೀರ್ವದಿಸಿದನು. ಅಲ್ಲಿಂದ ಸಂಸಾರದ ದಂದುಗ ಪ್ರಾರಂಭವಾಯಿತು. ಶಿವಾಪುರವೆಂಬ ಹಟ್ಟಿ ಕಟ್ಟಿದರು. ದನಕರುಗಳನ್ನು ಜೋಪಾನ ಮಾಡುವ ಗೊಲ್ಲಕುಲ ಉದಯಿಸಿತು. ಅಣ್ಣನದು ಸೂರ್ಯನ ಬೆಡಗು. ತಮ್ಮನದು ಚಂದ್ರನ ಬೆಡಗು. ಶಿವದೇವರು ಅವರಿಗೆ ಪುಣ್ಯಕೋಟಿಯ ಒಂದೊಂದು ಕೊಂಬು ನೀಡಿದರು. ಅಣ್ಣ ಕೊಂಬೂದಿದಾಗ ೬೪ ವಿದ್ಯೆಗಳು, ತಮ್ಮ ಕೊಂಬೂದಿದಾಗ ಸಂಗೀತ ಸಾಹಿತ್ಯ ಮುಂತಾದ ಕಲೆಗಳು ಹುಟ್ಟಿಕೊಂಡವು. ಶಿವಾಪುರದ ಹಟ್ಟಿಯಲ್ಲಿ ಯಕ್ಷಿಯ ವರದಿಂದ ಸೂರ್ಯನ ಬೆಡಗಿನ ದಂಪತಿಗಳಿಗೆ ಚಿನ್ನ ಮುತ್ತನೂ, ಚಂದ್ರ ಬೆಡಗಿನ ದಂಪತಿಗಳಿಗೆ ಚಂದ ಮುತ್ತನೂ ಹುಟ್ಟಿದರು.
(ಆಧಾರ : ಡಾ. ಬಸವರಾಜ ಮಲಶೆಟ್ಟಿಯವರ ಪುಸ್ತಕ ಚಂದ್ರಶೇಖರ ಕಂಬಾರ ಪುಟ, ೪೫-೪೬)
ಹೀಗೆ ಕವಲೊಡೆದ ಸೂರ್ಯ ಬೆಡಗಿನ ಚಂದ ಮುತ್ತನ ಕಥೆ ಕಂಬಾರರ ’ಶಿಖರ ಸೂರ್ಯ’ ಕಾದಂಬರಿಗೂ; ಚಂದ್ರ ಬೆಡಗಿನ ಚಂದ ಮುತ್ತನ ಕಥೆ ಅವರ ’ಚಕೋರಿ’ ಕಾವ್ಯಕ್ಕೂ ವಸ್ತು ಆದವು. ಈ ಕೃತಿಗಳು ಒಂದು ರೀತಿಯಲ್ಲಿ ಸೂರ್ಯ ವಂಶದ ರಾಮಾಯಣ ಕಥೆಯನ್ನೂ, ಚಂದ್ರ ವಂಶದ ಮಹಾಭಾರತ ಕಥೆಯನ್ನೂ ನೆನಪಿಗೆ ತಂದರೂ ಆ ಕಥಾವಸ್ತುವಿನೊಂದಿಗೆ ಯಾವುದೇ ಸಂಬಂಧವಿಲ್ಲ. ಆರ್ಯೇತರ ಸಂಸ್ಕೃತಿಯ ಅಚ್ಛ ದ್ರಾವಿಡ ಸಂಸ್ಕೃತಿಯ ಆದಿಮ ಕೃತಿಗಳಂತಿರುವ, ಸಂಗಮ್ ಯುಗದ ಪ್ರಾಚೀನ ತಮಿಳಿನ ಯಮಳ ಕಾವ್ಯಗಳಾದ ಶಿಲಪ್ಪದಿ ಕಾರಮ್ (ಇಳಂಗೋಅಡಿಗಳ್) ಹಾಗೂ ಮಣಿಮೇಕಲಮ್ (ಚಾತ್ತನಾರ್) ಮಹಾಕಾವ್ಯಗಳಂತೆ ಕಂಬಾರರ ಚಕೋರಿ ಮತ್ತು ಶಿಖರ ಸೂರ್ಯ ಕೃತಿಗಳು ಸಹ ಅಚ್ಛ ದ್ರಾವಿಡ ಕಥಾ ರಚನೆಗಳೇ. ಮೇಲೆ ಹೇಳಿದ ಮೂಲ ಕಥೆ ಕರ್ನಾಟಕ ಗೊಲ್ಲರ ಒಂದು ಬಣದ ಸೃಷ್ಟಿ ಕಥನ. ಸ್ಥಳೀಯವಾದ ಆ ಕಥಾ ಕಣಜಕ್ಕೆ ಕಂಬಾರರು ಋಣಿಯಾಗಿದ್ದಾರೆ. ಕೇವಲ ಸಂಗೀತ ನಾಟ್ಯ ಸಾಧನೆಯಲ್ಲಿ ತನ್ನನ್ನು ತೊಡಗಿಸಿಕೊಂಡ ಚಂದಮುತ್ತ ’ಚಕೋರಿ’ಯಲ್ಲಿ ದುರಂತಮಯ ಪಾತ್ರವಾದರೆ, ವಿದ್ಯೆಯ ಬೆನ್ನು ಹತ್ತಿ ಹೊರಟ ಚಿನ್ನಮುತ್ತ ಆತ್ಮನಾಶದಲ್ಲಿ ಪರ್ಯವಸಾನವಾಗುತ್ತಾನೆ. ’ಶಿಖರ ಸೂರ್ಯ’ದಲ್ಲಿ, ನೆಲಮುಟ್ಟವ ಪ್ರೀತಿಯ ಚಂದಮುತ್ತ ಯಕ್ಷಿ-ಚಕೋರಿಯ ಉತ್ಥಾನಕ್ಕಾಗಿ ತನ್ನನ್ನೇ ತೆತ್ತುಕೊಂಡು ಅಂತರಶಿಲೆಯಾಗಿ ರಾಮಾಯಣದ ಅಹಲ್ಯೆಯ ಪ್ರಸಂಗವನ್ನು ನೆನಪಿಗೆ ತರುತ್ತಾನೆ. ಪ್ರೇಮದ ವಿಜಯದ ಕಥೆಯಾದ ನಾಗವರ್ಮನ ಕಾದಂಬರಿಯನ್ನು ಹೋಲುವ, ಈ ಜಾನಪದ ವಚನ ಕಥನ ’ಚಕೋರಿ’ಭಾವಗೀತಾತ್ಮಕವಾದ ರಚನೆಯಾಗಿ ನಮ್ಮನ್ನು ಬಹುಕಾಲ ಕಾಡುತ್ತದೆ. ಅದಕ್ಕೆ ಕಾರಣ ಇದು ಬುಡಕಟ್ಟು ಜನರ ಮುಗ್ಧ ಪ್ರಣಯ ಕಥೆಯ ಜೀವದ್ರವ್ಯವನ್ನು ಹೀರಿ ಬೆಳೆದಿರುವುದು.
ಮೇಲು ಸಂಸ್ಕೃತಿಯ ಮಹಾಕಾವ್ಯ ರಾಮಾಯಣದಲ್ಲಿ ಸೂರ್ಯವಂಶಿ ರಾಜಕುವರ ಶಿಲೆಯಾಗಿದ್ದ ಗೌತಮ ಸತಿ ಅಹಲ್ಯೆಯನ್ನು ಸಜೀವಗೊಳಿಸಿ ಉದ್ಧರಿಸಿದರೆ, ಈ ಬುಡಕಟ್ಟು ಕಾವ್ಯ ಕಥೆ ಚಕೋರಿಯಲ್ಲಿ ಚಂದ್ರಕುಲದ ಚಂದಮುತ್ತನು ಶಿಲೆಯಾಗಿದ್ದ ಯಕ್ಷಿಯನ್ನು ಉದ್ಧರಿಸಿ ತಾನೇ ಅಂತರಶಿಲೆಯಾಗಿ ಪರಿಣಮಿಸಿದ್ದು ನಮ್ಮ ಬದುಕಿವ ವ್ಯಂಗ್ಯ.
ಇನ್ನು ಕಂಬಾರರೇ ಹೇಳುವಂತೆ ಶಿಖರ ಸೂರ್ಯ ಕಾದಂಬರಿಯನ್ನು ಒಂದು ಸ್ವತಂತ್ರ ಕೃತಿ ಎಂದಾದರೂ ನೋಡಬಹುದು. ಅಥವಾ ಚಕೋರಿಯ ಎರಡನೆಯ ಭಾಗವೆಂದಾದರೂ ನೋಡಬಹುದು. ಚಕೋರಿ ಒಬ್ಬ ಕಲಾವಿದನ ಪರಿಪೂರ್ಣತೆಯ ಅನ್ವೇಷಣೆಯನ್ನು ಹೇಳುವ ಕೃತಿಯಾದರೆ, ಶಿಖರ ಸೂರ್ಯ ವಿದ್ಯೆಯ ಮೂಲಕ ಹಣ ಅಧಿಕಾರದ ಅನ್ವೇಷಣೆ ಮಾಡುವಾತನ ಕಥೆ. ಆದರೆ ಇಲ್ಲಿಗೆ ಚಕೋರಿಯಲ್ಲಿ ಬರುವ ಕಲೆ ಮತ್ತು ವಿದ್ಯೆಗಳಿಗೆ ಸಂಬಂಧಪಟ್ಟ ಪುರಾಣದ ವಿವರಣೆ ಸಂಪೂರ್ಣವಾಗುತ್ತದೆ. (ಲೇಖಕರ ಮಾತು)
ಕಾದಂಬರಿ ಎಂಬುದು ಇತಿಹಾಸದ ಅಗತ್ಯಗಳನ್ನು ಪೂರೈಸಲು ಮಹಾಕಾವ್ಯದ ಬದಲು ಹುಟ್ಟಿಕೊಂಡಿರುವ ಸಾಹಿತ್ಯ ಪ್ರಕಾರ ಎನ್ನುವ ಕಂಬಾರರು ಚಕೋರಿಯನ್ನು ವಚನ ಕಥಾನಕವೆಂದೂ, ’ಶಿಖರ ಸೂರ್ಯ’ ಕೃತಿಯನ್ನು ಕಾದಂಬರಿ ಎಂದೂ ಕರೆದಿದ್ದಾರೆ. ಚಕೋರಿಯನ್ನು ಕನಸುಗಳು ಹೇಳಿದರೆ, ಕಾದಂಬರಿಯನ್ನು ಇತಿಹಾಸಕಾರರೆಂಬ ಹೆಳವರು ಹೇಳುತ್ತಾರೆ. ಕಂಬಾರರ ಈ ಅವಳಿ ಕೃತಿಗಳು ರೂಪ, ರಚನೆ, ಶೈಲಿ, ತಂತ್ರ ಎಲ್ಲದರಲ್ಲೂ ವಿಭಿನ್ನ. ಕನಸುಗಳು ಬಿತ್ತರಿಸುವ ಚಕೋರಿಯ ಕಥನತಂತ್ರ ಜನಪದ ಸಾಹಿತ್ಯದ ಭಾವಗೀತಾತ್ಮಕ ಗುಣವನ್ನು ಪಡೆದ ರಚನೆಯಾದರೆ, ಶಿಖರ ಸೂರ್ಯ ಕಾದಂಬರಿಯ ತಂತ್ರ ವಿಭಿನ್ನವಾಗಿದ್ದು, ಇತ್ತೀಚಿನ ಜಾಗತಿಕ ಖ್ಯಾತಿಯ ಜೆ.ಕೆ ರೌಲಿಂಗ್ ಳ ಹ್ಯಾರಿ ಪಾಟರ್ ಕೃತಿಯನ್ನು ನೆನಪಿಸುತ್ತ ಭೂ ಭುವನವನ್ನೆಲ್ಲ ಸುತ್ತು ಹಾಕುವ ಗದ್ಯ ಶೈಲಿಯದ್ದಾಗಿದೆ. ಅದು ಚಕೋರಿಯ ಗೊಲ್ಲರ ಹಟ್ಟಿಯಿಂದ ಹೊರಟು ಶಿವಾಪುರ ಗುಡ್ಡದ ಕೊರಕಲಿಗೆ ಬಿದ್ದು, ಅಲ್ಲಿಂದೆದ್ದು , ಕನಕಪುರಿಗೆ ಓಡಿ, ಛಪ್ಪನ್ನೈವತ್ತಾರು ದೇಶಂಗಳ ಸುತ್ತಿ, ಬಿಳಿಗಿರಿಗೆ ಹತ್ತಿ, ಕಂಚಿಗೆ ಮುಟ್ಟಿ, ಹದ್ದಿನ ಕೊಳ್ಳಕ್ಕೆ ಜಿಗಿದು, ಗರುಡನ ಬೆಟ್ಟಕ್ಕೆ ಹತ್ತಿ, ಶಿವಾಪುರ ಹಾಗೂ ಕನಕಪುರಿಗಳಿಗೆ ಬಂದು ಕಡೆಗೆ ಹದ್ದಿನ ಬೆಟ್ಟಕ್ಕೆ ಹಾರುತ್ತದೆ.
ಚಕೋರಿಯ ನಾಯಕ ಚಂದಮುತ್ತ ಸಕಲ ಜೀವಿಗಳಿಗೆ ಲೇಸ ಬಯಸುವ ಪ್ರೇಮಲ ಜೀವಿಯಾದರೆ, ಶಿಖರ ಸೂರ್ಯ (ಚಿನ್ನಮುತ್ತ)ನ ಖಳನಾಯಕತ್ವದ ಗುಣಗಳು ’ಚಕೋರಿ’ಯಲ್ಲಿಯೇ ವ್ಯಕ್ತವಾಗುತ್ತವೆ. ಅವನ ಪರಿಸರನಾಶದ ಅಣುವಿಕಿರಣ ಬೀಜಗಳು ಇಲ್ಲಿಯೆ ಮೊಳಕೆಯೊಡೆಯುತ್ತಿವೆ. ಆ ಒಂದೆರಡು ಸನ್ನಿವೇಶಗಳು ಹೀಗಿವೆ;
ಚಕೋರಿಯ ಜಾತ್ರೆಯಲ್ಲಿ ಚಿತ್ರಿತವಾಗಿರುವಂತೆ ದಾಯಾದಿಗಳಾದ ಚಿನ್ನಮುತ್ತನಿಗೂ ಚಂದಮುತ್ತನಿಗೂ ಕೊಳಲೂದುವುದರಲ್ಲಿ ಪಂದ್ಯ ಬೀಳುತ್ತದೆ. ಆದರೆ ಚಿನ್ನಮುತ್ತ ಚಂದಮುತ್ತನೊಂದಿಗೆ ಸ್ಪರ್ಧಿಸಲಾರದೆ ಅವಮಾನಿತನಾಗುತ್ತಾನೆ. ಜನಪದರ ಬದುಕಿನ ಜೀವ ಜೀವಾಳವೇ ಕನಸು, ಕಾಯುವಿಕೆ. ಇಲ್ಲವಾದರೆ ಎದೆಯೊಡೆದು ಸಾಯಬೇಕಾಗುತ್ತದೆ. ಎಂದರೆ ವಾಸ್ತವ ಅಷ್ಟು ಭಯಾನಕ - ಅನೇಕ ವೇಳೆ. ಅವರು ಕನಸು ಕೈಗೂಡುವವರೆಗೆ ಕಾಯಲೇಬೇಕಲ್ಲ? ಚಿನ್ನಮುತ್ತನಿಗೆ ಅಂಥ ವ್ಯವಧಾನವೇ ಇಲ್ಲ. ಚಂದಮುತ್ತನೊಂದಿಗೆ ಸ್ಪರ್ಧಿಸಿ ಸೋತುದಕ್ಕೆ ಮುನಿದುಕೊಳ್ಳುತ್ತಾನೆ. ಇನ್ನೊಂದು ಪ್ರಸಂಗದಲ್ಲಿ ಸರೋವರದಲ್ಲಿ ತನ್ನ ಪಾಡಿಗೆ ತಾನು ವಿಹರಿಸುತ್ತಿದ್ದ ಹಂಸ ಒಂದನ್ನು ಕೊಂದು ಬಿಡುತ್ತಾನೆ. ಆಗ ಹೆಣ್ಣು ಹಕ್ಕಿ (ಹಂಸಿ) ಬಿಟ್ಟ ಬಾಣದಂತೆ ಇವನತ್ತ ದೃಷ್ಟಿನೆಟ್ಟು ಆಕ್ರಮಣಕ್ಕೆ ಹಾರಿಬರುತ್ತದೆ. ಭಯಗೊಂಡ ಚಿನ್ನಮುತ್ತ ಅದರ ದೃಷ್ಟಿಯಿಂದ ಮರೆಯಾಗುತ್ತಾನೆ. ಹೀಗೆ ಒಂದು ಪಕ್ಷಿಯನ್ನು ಎದುರಿಸಲಾರದ ನೈತಿಕವಾಗಿ ಹೇಡಿಯಾದ ಅವನನ್ನೇ ಆ ಹಂಸಿ ನೆಟ್ಟ ನೋಟದಿಂದ ನೋಡಲು, ಅನಿವಾರ‍್ಯವಾಗಿ ಅದರ ಭೇಟಿಗೆ ಹೋಗುತ್ತಾನೆ. ಆದರೆ ಆ ಮೋಸಗಾರ ನಡುವಿಗೆ ಚಿಕ್ಕ ಚೂರಿಯನ್ನೂ, ಕೈಯಲ್ಲಿ ದೊಣ್ಣೆಯನ್ನೂ ಹಿಡಿದುಕೊಂಡು ಹೋಗಿ ಚಂದಮುತ್ತನ ಮೇಲಿನ ಅಸೂಯೆಯಿಂದ ಆ ಹಂಸಿಯನ್ನು ಕೊಂದು, ಅನಂತರ ಪಾಪ ಪ್ರಜ್ಞೆಯಿಂದ ತೊಳಲುತ್ತಾನೆ. ಹೀಗೆ ಮುಂದೆ ಶಿಖರ ಸೂರ್ಯನಾದಾಗಿನ ಚಿನ್ನಮುತ್ತನ ಭಂಡತನ, ಹೇಡಿತನ ಹಾಗೂ ಕ್ರೌರ್ಯದ ಲಕ್ಷಣಗಳು ಚಕೋರಿಯಲ್ಲಿಯೆ ಸೂಚಿತವಾಗಿವೆ. ಬದುಕಿದ್ದಾಗಲೇ ಕಥೆಯಾಗಿ, ಲಾವಣಿಯಾಗಿ, ದೇವತೆಯಾಗಿ ಪವಾಡಗಳ ಮೆರೆದ ಚಂದಮುತ್ತನ ಭಾಗಾದಿ ಚಿನ್ನಮುತ್ತ ಶಿಖರ ಸೂರ್ಯ ಕಾದಂಬರಿಯ ನಾಯಕ ಪುರುಷ. ಇವನೂ ಕಲಾವಿದವಾಗಲು ಪ್ರಯತ್ನಿಸಿ, ಸಾಧ್ಯವಾಗದೆ ಮಲೆಯಾಳಿ ಮಂತ್ರ ತಂತ್ರಾದಿ ವಾಮಾಚಾರ ಅನುಸರಿಸಿ, ಆಗಲೂ ಸಾಧ್ಯವಾಗದೆ ಗುರುಶಾಪಕ್ಕೆ ಗುರಿಯಾಗಿ ಎರಡು ಮೂರು ವರ್ಷ ಅಲ್ಲಲ್ಲಿ ಅಲೆದಾಡಿ, ಕೊನೆಗೆ ಆತ್ಮಹತ್ಯೆ ಮಾಡಿಕೊಳ್ಳಲೆಂದು ಕಾಡಿನ ಕಮರಿಗೆ ಜಿಗಿದು ಸ್ಮೃತಿತಪ್ಪಿ ಬಿದ್ದವನು. ಅಂಥವನನ್ನು ಶಿವಾಪುರದ ಜಟ್ಟಿಗ ಎತ್ತಿ ತಂದು ಉಪಚರಿಸಿ ಕನಕಪುರಿಯ ಇತಿಹಾಸಕ್ಕೆ ಕಾಣಿಕೆಯಾಗಿ ಕೊಟ್ಟ. ಕಾಡಿನ ಕಮರಿಯಲ್ಲಿ ಬೇಹುಷಾರಾಗಿ (ಪ್ರಜ್ಞೆತಪ್ಪಿ) ಬಿದ್ದಿದ್ದ ಚಿನ್ನಮುತ್ತನನ್ನು ಜಟ್ಟಿಗ ದಯಮಾಡಿ ಶಿವಾಪುರಕ್ಕೆ ಎತ್ತಿಕೊಂಡು ಬಂದನಲ್ಲ, ಅಲ್ಲಿಂದ ಮುಂದೆ ಶಿಖರ ಸೂರ್ಯನ ಇತಿಹಾಸ ಕಥನ ಆರಂಭವಾಗುತ್ತದೆ.(ಪ್ರಸ್ತಾವನೆ).
ಇನ್ನು ಶಿಖರ ಸೂರ್ಯನ ಚರಿತ್ರೆ ಎಂದರೆ ಅದು ಅವನ ಲೈಂಗಿಕತೆ (Sex) ಹಾಗೂ ಅಪರಾಧ (ಅಡಿime)ಗಳ ಚರಿತ್ರಯೇ ಆಗಿದೆ. ಈ ಚಾರಿತ್ರ್ಯ ಹೀನನ ಚರಿತ್ರೆಯನ್ನು ಸ್ವಲ್ಪ ಅವಧರಿಸಬಹುದು :
ಶಿವಾಪುರ ಗುಡ್ಡದ ಕೊರಕಲಿನಲ್ಲಿ ಬಿದ್ದು ಹೆಣವಾಗುತ್ತಿದ್ದ ಚಿನ್ನಮುತ್ತನನ್ನು ಜಟ್ಟಿಗ ಎತ್ತಿ ತಂದು ಅವನ ಗೆಳತಿ ಬೆಳ್ಳಿಯ ಹಾರೈಕೆಗೆ ಬಿಡುತ್ತಾನೆ. ಬೆಳ್ಳಿ ಅವನಿಗೆ ಮದ್ದುಮಾಡಿ ಪುನಃ ಜೀವ ಕೊಡುತ್ತಾಳೆ. ಚಿನ್ನಮುತ್ತ ಅವರಿಗೆ ತನ್ನ ಹೆಸರು ಮರೆಯಿಸಿ ಜಯಸೂರ್ಯನೆಂದು ಹೇಳಿಕೊಳ್ಳುತ್ತಾನೆ. ಗುರು ಶಿವಪಾದರು ಅವನನ್ನು ವಜ್ರಕಾಯನನ್ನಾಗಿ ಮಾಡಿ ರಸವಿದ್ಯೆಯನ್ನು ಉಪದೇಶಿಸುತ್ತಾರೆ.
ಆದರೇನು? ಕಾಮಕ್ಕೆ ಕಣ್ಣಿಲ್ಲ; ಆಶೆಗೆ ಕೊನೆಯಿಲ್ಲ. ಚಂದುಳ್ಳಿ ಹೆಣ್ಣು ಬೆಳ್ಳಿಯ ಮೇಲೆ ಕಣ್ಣಿಟ್ಟ ಜಯಸೂರ್ಯ. ಅವಳ ಮತ್ತು ಜಟ್ಟಿಗರ ಮದುವೆಯಾಗುತ್ತದೆ. ಪ್ರಸ್ಥದ ದಿನ ಸಂಜೆ ಜಟ್ಟಿಗ ಮಡುವಿಗೆ ಮುಳುಗಿ ಬರಲು ಹೋದಾಗ ಹಿಂಬಾಲಿಸಿ ಹೋದ ಜಯಸೂರ್ಯ ಅವನ ತಲೆಮೇಲೆ ಬಂಡೆಗಲ್ಲು ಹಾಕಿ ಮಡುವಿನಲ್ಲೇ ಮರಣ ಹೊಂದುವಂತೆ ಮಾಡಿ, ಅವನ ಮನೆಗೆ ಬಂದು, ಅಷ್ಟರಲ್ಲಿ ಇನಿಯನ ಬರುವನ್ನೇ ಹಾರೈಸಿ ಅರೆನಿದ್ರೆಗೆ ಸಂದಿದ್ದ ಬೆಳ್ಳಿಯ ಮೇಲೆ ಅತ್ಯಾಚಾರಕ್ಕೆಳಸುತ್ತಾನೆ. ಆದರೆ ದಿಗ್ಮೂಢಳಾದ ಬೆಳ್ಳಿ ಕಿವಿ ಮೇಲೆ ರೋಮವಿದ್ದ ಜಯಸೂರ್ಯನನ್ನು ಸ್ಪರ್ಶ ಮಾತ್ರದಿಂದಲೇ ಗುರ್ತಿಸಿ, ಸಿಟ್ಟಿನಿಂದ ಝಾಡಿಸಿ ಒದೆಯುತ್ತಾಳೆ. ಅವನು ಬಿದ್ದೆದ್ದು ಓಡುತ್ತಾನೆ.
ಹೀಗೆ ಬೆಳ್ಳಿಯಿಂದ ಒದೆತಿಂದು, ಕುರುಮುನಿ(ಸಹಪಾಠಿ) ಯಿಂದ ಏಟುತಿಂದು ಓಡಿ ಬರುವಾಗ ಜಯಸೂರ್ಯ ಯೋಚನೆ ಮಾಡಿದ್ದು; ದೂರದೂರಕ್ಕೆ ಶಿವಾಪುರದ ಯಾರೂ, ಅಂದರೆ ಗಾಳಿ ಕೂಡ ಸುಳಿಯದ ಕಡೆ ಬದುಕಬೇಕೆಂದು; ಬದುಕಿ ಸೇಡು ತೀರಿಸಿಕೊಳ್ಳಬೇಕೆಂದು ನಿರ್ಧರಿಸಿದ್ದ. ನಾಲ್ಕು ರಾತ್ರಿ ಮೂರು ಹಗಲು ಓಡಿಬಂದು ಕಾಡಿನಲ್ಲಿ ವಿಶ್ರಮಿಸಿಕೊಳ್ಳುತ್ತಿದ್ದ ಸಮಯದಲ್ಲಿ ಪ್ರಧಾನಿ ಅರ್ಥಕೌಶಲನ ಸೇವಕ ಹೊಳೆಯನನ್ನು ಸಂಧಿಸಿದ. ಕನಕಪುರಿಯ ವಿಷಯ, ಅರ್ಥಕೌಶಲ ಮತ್ತು ರಾಜನ ವಿಚಾರ ಗೊತ್ತಾಯಿತು. ಈತ ಹೊಳೆಯನನ್ನು ಕೊಂದು ಅವನದೇ ಕುದುರೆಯೇರಿ ಕನಕಪುರಿಗೆ ಬಂದು ಅರ್ಥಕೌಶಲನ ಮೂಲಕ ಅರಮನೆಗೆ ಪ್ರವೇಶ ಪಡೆದುಕೊಳ್ಳುತ್ತಾನೆ.
ಇಲ್ಲಿಂದ ಮುಂದೆ ಶಿಖರ ಸೂರ್ಯನೆಂದು ಹೆಸರು ಬದಲಿಸಿಕೊಂಡನು. ತಾನು ಕಲಿತಿದ್ದ ವೈದ್ಯ ಜ್ಞಾನದಿಂದ ಹಲವು ಕಾಲದಿಂದ ಮಲಗಿದ್ದ ರೋಗಿ ಗುಣಾಧಿಕ್ಯ ಮಹಾರಾಜನನ್ನು ಅಡ್ಡಾಡುವಂತೆ ಮಾಡಿದ. ಇದರಿಂದ ಪ್ರಸನ್ನಳಾದ ಹಿರಿಯ ರಾಣಿ ಇವನನ್ನು ತನ್ನ ಆಪ್ತ ವಲಯಕ್ಕೆ ಸೇರಿಸಿಕೊಂಡಳು. ರಾಜ ವೈದ್ಯ ಚಂಡೀದಾಸ ಹಿರಿಯ ರಾಣಿಯ ಪ್ರಿಯಕರನಾಗಿದ್ದ. ಅವನ ಮಗಳು ವಿದ್ಯುಲ್ಲತೆ ಎಂಬುವವಳು ವಿಷಕನ್ಯೆ. ಶಿಖರಸೂರ್ಯ ಅವಳನ್ನು ತನ್ನ ಪ್ರಯೋಗ ಪಶುವನ್ನಾಗಿ ಬಳಸಿಕೊಂಡು ತಾನು ವಿಷವೈದ್ಯನೆಂಬುದನ್ನು ಖಚಿತಪಡಿಸಿಕೊಳ್ಳುವನು.
ಕನಕಪುರಿಯ ಮಹಾರಾಜನಿಗೆ ಇಬ್ಬರು ರಾಣಿಯರು. ಹಿರಿಯ ರಾಣಿಗೆ ಆದಿತ್ಯಪ್ರಭನೆಂಬ ಮಗ. ಆದರೆ ಅವನು ಚಂಡೀದಾಸನನ್ನೇ ಹೋಲುತ್ತಿದ್ದ. ಕಿರಿಯರಾಣಿ ಚಿಕ್ಕಮ್ಮಣ್ಣಿಗೆ ಇಬ್ಬರು ಮಕ್ಕಳು. ತರುಣಚಂದ್ರ ಎಂಬ ಹುಡುಗನ ಕಥೆ ಚಂದ್ರಹಾಸನ ಕಥೆಯಾಯಿತು. ಅವನನ್ನು ಹಿರಿಯರಾಣಿ ಕೊಲೆಗೈಯ್ಯಲು ಸಂಚು ಹೂಡಿದಳಾದರೂ ಆ ಮಗುವನ್ನು ಕೊಲೆಗಾರರು ಶಿವಾಪುರಕ್ಕೆ ತಲುಪಿಸಿದರು. ಅಲ್ಲಿ ಅವನು ಬೆಳ್ಳಿಯ ಮಗನಾಗಿ ಗುರು ಶಿವಪಾದರ ಶಿಷ್ಯನಾಗಿ ’ನಿನ್ನಡಿ’ ಎಂಬ ಹೆಸರಿನಿಂದ ಬೆಳೆದು ದೊಡ್ಡವನಾದ.
ಕಿರಿಯ ರಾಣಿಯ ಮಗಳು ಛಾಯಾದೇವಿಯನ್ನು ಶಿಖರಸೂರ್ಯ ಮದುವೆಯಾಗಿ ಅರಮನೆಯ ರಕ್ತ ಸಂಬಂಧ ಬೆಳೆಸಿದ. ಛಾಯಾದೇವಿ ಶಿಖರ ಸೂರ್ಯರಿಗೆ ರವಿಕೀರ್ತಿ ಮತ್ತು ಮುದ್ದುಗೌರಿ ಎಂಬ ಇಬ್ಬರು ಮಕ್ಕಳು. ಮಗ ರವಿಕೀರ್ತಿ ಕಂಚಿಯ ವಿದ್ಯಾಪೀಠದಲ್ಲಿ ಸ್ನಾತಕ ವಿದ್ಯೆ ಕಲಿಯುತ್ತಿದ್ದಾಗ ಅಲ್ಲಿನ ಓರ್ವ ಶಿಲ್ಪಿಯ ಮಗಳು ವಾಸಂತಿ ಎಂಬ ಹೆಣ್ಣಿನಲ್ಲಿ ಅನುರಕ್ತನಾದ. ಇತ್ತ ಕಾರಣಾಂತರದಿಂದ ತಾಯಿಯ ತವರೂರು ಬಿಳಿಗಿರಿಯಲ್ಲಿದ್ದ ಮಗಳು ಮುದ್ದುಗೌರಿ ಕನ್ಯಾನ್ವೇಷಣೆಯಲ್ಲಿ ಬಂದಿದ್ದ, ನಿನ್ನಡಿ ಒಡ್ಡಿದ ಪರೀಕ್ಷೆಯಲ್ಲಿ ಗೆದ್ದು ಅವನನ್ನು ವರಿಸುತ್ತಾಳೆ. ಆದರೆ ಕನಕಪುರಿಯ ಮಹಾರಾಜನ ಮರಣಾನಂತರ, ಚಂಡಿದಾಸ ನಗರವನ್ನು ತೊರೆದ ಮೇಲೆ, ಹಿರಿಯ ರಾಣಿಗೆ ಬೆಂಬಲವಾಗಿ ನಿಂತಿದ್ದ ಸರ್ವಾಧಿಕಾರಿ ಶಿಖರ ಸೂರ್ಯನಿಗೆ ತನ್ನ ಮಕ್ಕಳು, ಇಂಥ ಸಾಮಾನ್ಯರನ್ನು ಮದುವೆಯಾಗುವುದು ಅವನ ಅಂತಸ್ತಿಗೆ ಸರಿಬರಲಿಲ್ಲ. ಆದ್ದರಿಂದ ಆ ಸಂಬಂಧಗಳನ್ನು ತುಂಡರಿಸಲು ಸಮಯ ಕಾಯುತ್ತಿದ್ದ. ಇತ್ತ ಯುವರಾಜ ಆದಿತ್ಯಪ್ರಭನ ಪಟ್ಟಬಂಧ ಮಹೋತ್ಸವಕ್ಕೆಂದು ರವಿಕೀರ್ತಿಯನ್ನು ಕರೆಸಿಕೊಂಡ ಶಿಖರಸೂರ್ಯ ಅತ್ತ ಕಂಚಿಯಲ್ಲಿದ್ದ ಶಿಲ್ಪಿಯನ್ನೂ ಅವನ ಮಗಳು ವಾಸಂತಿಯನ್ನೂ ಮತ್ತು ಮಗುವನ್ನೂ ಸಹ ಕೊಲೆ ಮಾಡಿಸಿದ. ಆ ವಿಚಾರ ಕೇಳಿ ರವಿಕೀರ್ತಿಗೆ ಬುದ್ಧಿ ಭ್ರಮಣೆಯಾಯಿತು. ಇತ್ತ ನಿನ್ನಡಿಗೆ ಬಸುರಿಯಾಗಿದ್ದ ಮುದ್ದು ಗೌರಿಯದು ಇನ್ನೊಂದು ಕಥೆ. ಅವಳು ಅರಮನೆ ತೊರೆದು ಶಿವಾಪುರಗುಡ್ಡಕ್ಕೆ ಹೋಗುತ್ತಿದ್ದ ಜೋಗತಿಯರ ತಂಡ ಸೇರಿ ಪ್ರಯಾಣಿಸುತ್ತಾಳೆ. ರಾಜಭಟರು ಹಿಂಬಾಲಿಸುತ್ತಾರಾದರೂ ಸೆರೆ ಸಿಕ್ಕಲಿಲ್ಲ. ಶಿಖರಸೂರ್ಯನಿಗೆ ಇದು ಸೈರಣೆಯಾಗಲಿಲ್ಲ.
ಧಾನ್ಯದಿಂದ ಚಿನ್ನ ಮಾಡುವ, ಪೊರಕೆಕಡ್ಡಿಗಳಿಂದ ಸೈನಿಕರನ್ನು ಮಾಡುವ ಶಿಖರ ಸೂರ್ಯ ಕನಕಪುರಿಯ ಸುತ್ತಣ ಸೀಮೆಗಳನ್ನು ಆಕ್ರಮಿಸಿಕೊಂಡ. ವ್ಯಾಪಾರ-ವಹಿವಾಟಿನಿಂದ ನಗರ ಅಭಿವೃದ್ಧಿ ಪಥದಲ್ಲಿ ನಾಗಾಲೋಟ ಕಂಡಿತು. ಲಾಭಕೋರ ವರ್ತಕ ಸಂಘಗಳು ಬಲಿಷ್ಠವಾಗಿ ಬೆಳೆದು ನಗರದಲ್ಲಿ ಬೀಡು ಬಿಟ್ಟವು. ಮಹಾರಾಣಿ ತನ್ನ ಭೋಗ ಜೀವನದಲ್ಲಿ ಮಗ್ನಳಾದಳು. ಯುವರಾಜ ಆದಿತ್ಯಪ್ರಭ ತಂದೆಯಂತೆಯೇ ರೋಗಿಷ್ಠನಾಗಿ ಹಾಸಿಗೆ ಹಿಡಿದ. ಶಿಖರಸೂರ್ಯ ಇಂಥ ಅನುಕೂಲವನ್ನು ಬಿಟ್ಟು ಕೊಡುವನೇ? ಮಹಾರಾಣಿಯನ್ನು ಕೈವಶ ಮಾಡಿಕೊಳ್ಳಲು ಹಿಂಜರಿಯಲಿಲ್ಲ. ಚಂಡೀದಾಸನ ನಿರ್ಗಮನದಿಂದ ಅಸಹಾಯಕಳಾದ ಮಹಾರಾಣಿಯನ್ನು ಮೂಲೆಗೊತ್ತಿ ತಾನೇ ಮಹಾರಾಜನಾದ. ಆದರೂ ಅವನ ಕಾಮ ತಣಿಯಲಿಲ್ಲ. ತಾನು ವಿಷಪುರುಷನೆಂಬುದು ತಿಳಿದೂ ಸಹ ರಾಣಿಯನ್ನು ಸಂಭೋಗಿಸಿದ. ಅದರ ಪರಿಣಾಮವಾಗಿ ಅವಳು ಮಡಿದರೂ ನಿಟ್ಟಿಲ್ಲದೆ ಅವಳ ಶವದೊಂದಿಗೂ ಕೂಡಿದ. ಆದರೆ ತನ್ನ ಮಕ್ಕಳು ಹಿಡಿದ ದಾರಿ ಮಾತ್ರ ಅವನ ಅಧಿಕಾರ ಅಂತಸ್ತಿಗೆ ಒಪ್ಪಿಗೆ ಇಲ್ಲ. ತನ್ನ ಮಗಳು ಗೌರಿಯನ್ನು ಕೈ ಹಿಡಿದ ನಿನ್ನಡಿ ಮತ್ತು ತನ್ನನ್ನು ಒದ್ದು ಅವಮಾನಗೊಳಿಸಿದ ಬೆಳ್ಳಿ ಹಾಗೂ ಗುರು ಶಿವಪಾದರ ಮೇಲೆ ಸೇಡು ತೀರಿಸಿಕೊಳ್ಳಲು ಹೊಂಚಿ ಹೊರಟ. ಆದರೂ ನಿಃಶಸ್ತ್ರಿಕರಾದ ಶಿವಾಪುರದ ಜನರ ಮುಂದೆ ಇವನ ’ರೊಬೊಟ್’ ಸೈನಿಕರಾಗಲೀ, ಅವರ ಸಿಡಿತಲೆ ಫಿರಂಗಿ ಗಾಡಿಗಳಾಗಲೀ ನಿಲ್ಲಲಾಗಲಿಲ್ಲ. ಅವನ ಯುದ್ಧ ಸಾಮಗ್ರಿ ಹಾಗೂ ಸೈನಿಕರನ್ನು ಶಿವಾಪುರದ ಗುಡ್ಡದಿಂದ ಕೊರಕಲಿಗೆ ತಳ್ಳಿ ಬಿಡುತ್ತಾರೆ. (ವಾಸ್ತವವಾಗಿ ಇದು ಸಾಧ್ಯವೇ? ಎನ್ನುವ ಮಾತು ಬೇರೆ) ಶಿಖರಸೂರ್ಯನಿಗೆ ನಿನ್ನಡಿಯನ್ನು ಮುಟ್ಟಲಾಗಲಿಲ್ಲ, ಬೆಳ್ಳಿಯ ಬಳಿ ಸುಳಿಯಲಾಗಲಿಲ್ಲ, ಗೌರಿಯನ್ನು ಎದುರಿಸಲಾಗಲಿಲ್ಲ. ಆದರೂ ಅವನ ದುರ್ಬುದ್ಧಿ ಮಣಿಯಲಿಲ್ಲ.
ಅಷ್ಟರಲ್ಲಿ ಬುದ್ಧಿಭ್ರಮಣೆಗೊಂಡ ಮಗ ರವಿಕೀರ್ತಿ, ವಿದ್ಯುಲ್ಲತೆಯಿದ್ದ ಉಪವನಕ್ಕೆ ಹೋಗಿ, ಅವಳನ್ನು ವಾಸಂತಿ ಎಂದೇ ಭ್ರಮಿಸಿ ಆಲಂಗಿಸಲು ಹೋಗಿ ಸಾವನ್ನಪ್ಪುತ್ತಾನೆ. ಆ ಆಘಾತದಿಂದ ಅವಳು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಶಿವಾಪುರದಿಂದ ಹೊರಟ ಶಿಖರ ಸೂರ್ಯ ತನ್ನ ಪ್ರೇಯಸಿ ಮತ್ತು ಮಗನಿಗೆ ’ಮಣ್ಣುಕೊಟ್ಟು’ ಕನಕಪುರಿಗೆ ಹಿಂದಿರುಗುತ್ತಾನೆ. ಆ ವೇಳೆಗೆ ನಗರಕ್ಕೆ ದೊಡ್ಡ ರೋಗ ಬಡಿದು ಊರು ಸ್ಮಶಾನ ಸದೃಶವಾಗಿರುತ್ತದೆ.
ಇಂಥ ಆಪತ್ತಿನಲ್ಲಿ ನಿನ್ನಡಿ ಮತ್ತು ಚಂಡಿದಾಸರು ಪುರಪ್ರವೇಶ ಮಾಡುತ್ತಾರೆ. ಅವರು ಜೀವ ಇದ್ದವರಿಗೆ ಮೊದಲು ಮದ್ದು ಕೊಡುತ್ತ, ಶವಗಳಿಗೆ ಸಂಸ್ಕಾರ ಮಾಡಿ, ಗಂಜಿ ಕೇಂದ್ರಗಳನ್ನು ತೆರೆದು ಜೀವ ರಕ್ಷಕರಾಗುತ್ತಾರೆ. ಆದರೆ ಗಂಜಿಗೂ ಗತಿ ಇಲ್ಲದ ಭೀಕರ ಕ್ಷಾಮ ಆವರಿಸುತ್ತದೆ. ಅರಮನೆಯ ಕಣಜಗಳಲ್ಲಿ ದವಸ ಧನ್ಯ ಭರ್ತಿ ಇದ್ದರೂ ಮಹಾರಾಜ ಶಿಖರಸೂರ್ಯ ಬಿಡಿ ಕಾಳೂ ಕೊಡುವುದಿಲ್ಲ. ಜನರು ದಂಗೆ ಎದ್ದರು. ಅವರ ದಂಗೆಗೆ ನಿನ್ನಡಿಯೇ ಪ್ರಚೋದನೆ ನೀಡುತ್ತಿದ್ದಾನೆಂದು ಆಪಾದಿಸಿ ಅವನನ್ನು ಸೆರೆ ಹಿಡಿಯಲು ಹೇಳುತ್ತಾನೆ. ಆದರೆ ಜನರು ಇವನ ಕಾಪಟ್ಯಕ್ಕೆ ಸೊಪ್ಪು ಹಾಕದೆ, ಅರಮನೆ ಬಾಗಿಲನ್ನು ಮುರಿದು ಒಳಗೆ ನುಗ್ಗಿ ಹೋಗಲು ಪ್ರಯತ್ನಿಸುತ್ತಾರೆ. ಅಷ್ಟರಲ್ಲಿ ಶಿಖರಸೂರ್ಯನು ಅರಮನೆಯ ಕಳಸ ಗೋಪುರದ ಶಿಖರವೇರಿ, ಒಳನುಗ್ಗಿದ ಜನ ಹಾಹಾಕಾರ ಮಾಡುತ್ತ ನೋಡು ನೋಡುತ್ತಿದ್ದಂತೆಯೇ ರೆಕ್ಕೆ ಬಂದ ರಣ ಹದ್ದಿನಂತೆ ಕೈಗಳನ್ನು ಬೀಸುತ್ತಾ ಹದ್ದಿನ ಬೆಟ್ಟಕ್ಕೆ ಹಾರಿ ಹೋಗುತ್ತಾನೆ. ಇದಿಷ್ಟೂ ಶಿಖರಸೂರ್ಯ ಕಾದಂಬರಿಯ ಸಿಂಹಾವಲೋಕನ ಮಾದರಿ ಸಂಕ್ಷಿಪ್ತ ಕಥೆ.
ಕನ್ನಡ ವಿಮರ್ಶೆ ಕಂಬಾರರ ಸಾಹಿತ್ಯವನ್ನು ಕುರಿತು ಬಿಡು ಬೀಸಾಗಿಯೇ ಕೊಂಡಾಡಿದೆ. ಸಿ.ಎನ್. ರಾಮಚಂದ್ರನ್ ಅವರು ’ಅಮ್ಮ’ನ ಕಥನವಾಗಿ ಈ ಕಾದಂಬರಿ ಯಶಸ್ವಿಯಾಗುತ್ತದೆ ಎನ್ನುತ್ತಾರೆ. (ಪ್ರಜಾವಾಣಿ ಸಾಪ್ತಾಹಿಕ ೨೫.೯.೧೦) ಇನ್ನೂ ಹಲವಾರು ಜನ ವಿಮರ್ಶಕರು ಕಂಬಾರರ ಸಾಹಿತ್ಯವನ್ನು ಕುರಿತು ಅದರಲ್ಲೂ ಶಿಖರ ಸೂರ್ಯ ಕಾದಂಬರಿಯನ್ನು ಕುರಿತು ಮೆಚ್ಚಿಗೆಯ ಮಾತನ್ನಾಡಿದ್ದಾರೆ.
’ರಾಷ್ಟ್ರಗಳು ಅಳಿದರೂ ಶಿವಾಪುರ ಅಳಿಯುವುದಿಲ್ಲ’
(ಯು.ಆರ್. ಅನಂತಮೂರ್ತಿ, ಎಲ್ಲಿದೆ ಶಿವಾಪುರ? ಕವನ ಸಂಕಲನದ ಮುನ್ನುಡಿ)
’ಶಿಖರಸೂರ್ಯ ಕಂಬಾರರ ಕಾವ್ಯ ತಪಸ್ಸಿನ ಫಲ’
(ಎಚ್. ಎಸ್. ಶಿವಪ್ರಕಾಶ್, ಶಿಖರ ಸೂರ್ಯ ಮುನ್ನುಡಿಯಿಂದ)
’ದಾರ್ಶನಿಕ ನಿಲುವು ಎಂದರೇನೆಂಬುದನ್ನು ಅರಿಯಲು ಉತ್ಸುಕರಾಗಿರುವವರು ಈ ಕಾದಂಬರಿಯನ್ನು ಒಮ್ಮೆ ಓದಬೇಕು’ (ಮಾಧವ ಕುಲಕರ್ಣಿ, ಶಿಖರಸೂರ್ಯ, ಬೆನ್ನುಡಿ)
’ಕನ್ನಡದಲ್ಲಿ ಮಲೆಗಳಲ್ಲಿ ಮದುಮಗಳು ಆದ ಮೇಲೆ ಮನಸ್ಸಿನಲ್ಲಿ ಊರಿ ನಿಲ್ಲುವ ಕೃತಿ ಶಿಖರಸೂರ್ಯ’
(ಎನ್.ಎಸ್.ಶಂಕರ, ಶಿಖರಸೂರ್ಯ, ಬೆನ್ನುಡಿ)
ಹೀಗೆ ಏಕ ಪ್ರಕಾರವಾಗಿ ಕಂಬಾರರ ಸಾಹಿತ್ಯವನ್ನು ಕುರಿತು ಕನ್ನಡ ವಿಮರ್ಶೆ ಹೊಗಳಲು ಮುಖ್ಯ ಕಾರಣ, ಕಂಬಾರರು ಸಾಹಿತ್ಯ ರಚನೆಯ ಸಂದರ್ಭದಲ್ಲಿ ಅತ್ತಿತ್ತ ನೋಡದೆ ಪ್ರಜ್ಞಾಪೂರ್ವಕವಾಗಿ, ಅವರು ಮೂಲ ದ್ರಾವಿಡ ಹಾಗೂ ಕನ್ನಡ ದೇಸಿಗೆ ಒಲಿದದ್ದು ಎಂದೆನಿಸುತ್ತದೆ. ವಸ್ತು, ಭಾಷೆ, ಶೈಲಿ, ತಂತ್ರ ಇತ್ಯಾದಿ ಪ್ರತಿಯೊಂದರಲ್ಲೂ ಅವರು ಕನ್ನಡ ದೇಸಿಯನ್ನು ಪುನರ್ ಪ್ರತಿಷ್ಠಾಪಿಸಲು ತೊಡಗಿದ್ದು. ನವೋದಯದವರು ಪಶ್ಚಿಮದ ವಿದ್ಯೆಯಿಂದ ಪೂರ್ವಪರಂಪರೆಯನ್ನು ಶೋಧಿಸಲು ಹೊರಟರೆ; ನವ್ಯದವರು ಕೂಡ ಪಶ್ಚಿಮ ವಿದ್ಯೆಯಿಂದಲೇ ಪೂರ್ವ ಮೀಮಾಂಸಾ ಕಾಂಡವನ್ನು ಬಗೆಯಲು ತೊಡಗಿದರೆ; ಪ್ರಗತಿ ಶೀಲರು ಎಡಪಂಥೀಯ ಧೋರಣೆಯಿಂದ ಸಾಮಾಜಿಕ ವಿಪ್ಲವವನ್ನು ಸಾಧಿಸಲು ಹೆಣಗಿದರೆ, ದಲಿತ-ಬಂಡಾಯದವರು ಸಾಮಾಜಿಕ ಬದ್ಧತೆಯ ಮೂಲಕ ನವ ಸಮಾಜವನ್ನು ಕಟ್ಟಲು ಉಪಕ್ರಮಿಸಿದರೆ; ಕಂಬಾರರು ಮಾತ್ರ ಕನ್ನಡ ಜಾನಪದ ಸತ್ವವನ್ನು ’ಹೇಳತೇನ ಕೇಳ’ ಎಂದು ಹಾಡುತ್ತಾ ಹೊರಟರು. ಅವರ ಮೊದಲ ಕಾವ್ಯ ಸಂಕಲನ ಮುಗುಳು (೧೯೫೮) ಮೊದಲುಗೊಂಡು ಇತ್ತೀಚಿನ ಶಿವರಾತ್ರಿ (೨೦೧೧) ನಾಟಕದವರೆಗೆ ಸುಮಾರು ಅರ್ಧ ಶತಮಾನ ಕಾಲ ಇವರು ’ಮರೆತೇನಂದರ ಮರೆಯಲಿ ಹ್ಯಾಂಗ’ ಎಂದು ಕನ್ನಡ ಜನಪದ ಜಗತ್ತಿಗೆ ಮಾರು ಹೋಗಿ ಅದರ ಹಾಡು ಪಾಡನ್ನು ಶೋಧಿಸಿ, ವಿಸ್ತರಿಸಿ, ಪುನರ್ ಸೃಷ್ಟಿಗೊಳಿಸುತ್ತಾ ಬಂದರು.
ಆದರೆ, ಚಂದ್ರಶೇಖರ ಕಂಬಾರರ ಉಳಿದ ಕೃತಿಗಳ ಮಾತಂತಿರಲಿ; ಪ್ರಸ್ತುತ ವಿಮರ್ಶಕರಿಂದ ಬಹುವಾಗಿ ಹೊಗಳಿಕೆಗೆ ಪಾತ್ರವಾಗಿರುವ ’ಶಿಖರಸೂರ್ಯ’ ಕೃತಿ ಈ ಎಲ್ಲ ಹೊಗಳಿಕೆಗೆ ಅರ್ಹವೇ ಎಂಬ ಪ್ರಶ್ನೆ ನನ್ನದು. ಆದ್ದರಿಂದ ಈ ಪ್ರತಿಕ್ರಿಯೆ.
"ಈ ಜೀವ್ವೇ ಆ ಜೀವಕ ನಡೀ" (ಕುಸುಮಬಾಲೆ) ಎಂಬಂಥ ಜೀವ ಸಂಸ್ಕೃತಿಗೆ ಹೊರತಾಗಿ ’ಒಂದು ಜೀವಿಗೆ ಮೈಯೆಲ್ಲ ವಿಷವು’ ಎಂಬಂತೆ ಶಿಖರಸೂರ್ಯ ಕಾದಂಬರಿಯ ಈ ಖಳನಾಯಕ ಉಂಡ ಮನೆಗೆ ಎರಡು ಬಗೆವ ತಾಯ್ಗಂಡನೂ, ಕಟುಕನೂ, ಕಾಮಾತುರನೂ, ಜೀವ ವಿರೋಧಿಯೂ, ಪರಿಸರ ವಿರೋಧಿಯೂ, ಲೋಕಕಂಟಕನೂ, ನಿರ್ದಯನೂ, ಕ್ರೂರಿಯೂ, ಕೊಲೆಪಾತಕನೂ, ಪಲಾಯನವಾದಿಯೂ, ಹೇಡಿಯೂ, ಅಂಜುಬುರುಕನೂ ಆಗಿರುತ್ತಾನೆ.ಇಂಥವನ ಕಥೆಯನ್ನು ಲೇಖಕರು ಇಷ್ಟು ವಿಜೃಂಭಿಸಿ, ಕಾದಂಬರಿಗೆ ಅವನದೇ ಹೆಸರಿಟ್ಟು ಹೇಳಿರುವ ಕಾರಣವಾದರೂ ಏನು? ಇಂಥ ಒಂದು ಕಾದಂಬರಿಯನ್ನು ಕುರಿತು ನಮ್ಮ ನಡುವಿನ ಕವಿಯೂ, ವಿಮರ್ಶಕರೂ ಹಾಗೂ ಸಂಸ್ಕೃತಿ ಚಿಂತಕರೂ ಆದ ಎಚ್. ಎಸ್. ಶಿವಪ್ರಕಾಶ್ ಶಿಖರಸೂರ್ಯ ’ಶ್ರೇಷ್ಠ ಮಹಾಕಾವ್ಯಗಳ ಹಾಗೆ ವಿಶ್ವಾತ್ಮಕ ಗುಣಗಳನ್ನು ಹೊಂದಿರುವ, ಎಪಿಕ್ ತರಹದ್ದು’- ಎಂದೆಲ್ಲ ಕೊಂಡಾಡಿರುವುದನ್ನು ಕಂಡರೆ ಸೋಜಿಗವಾಗುತ್ತದೆ. ಏಕೆಂದರೆ ಹೆಣ್ಣಿನ ವಿಚಾರದಲ್ಲಿ ಮಾತ್ರ ಈ ಕಾದಂಬರಿಯ ಸಂವೇದನೆ ಪುರುಷ ಪ್ರಧಾನ ನೆಲೆಯದು.
ಮೊಟ್ಟ ಮೊದಲಿಗೆ ಇವನು ಕೊಳ್ಳದಲ್ಲಿ ಬಿದ್ದು ಸಾಯುತ್ತಿದ್ದವನನ್ನು ಶಿವಾಪುರಕ್ಕೆ ಎತ್ತಿ ತಂದು ಬೆಳ್ಳಿಯ ಬಳಿ ಬಿಟ್ಟ ಜಟ್ಟಿಗನ ಮೇಲೆ ಬಂಡೆ ಕಲ್ಲು ಹಾಕಿ ಸಾಯಿಸಿದ ’ತಲೆ ಹೊಯ್ಕ’, ಎರಡನೆಯದಾಗಿ ಮದ್ದು ಕೊಟ್ಟು ಉಪಚರಿಸಿ ಜೀವದಾನ ಮಾಡಿದ ತಾಯಿಗೆ ಸಮಾನ ಬೆಳ್ಳಿಯ ಮೇಲೆ ಅತ್ಯಾಚಾರ ಮಾಡಿದ ಕಾಮುಕ; ಮೂರನೆಯದಾಗಿ ಕುದುರೆ ಸವಾರ ಹೊಳೆಯನನ್ನು ವಿನಾಕಾರಣ ಕೊಂದ ಕೊಲೆ ಪಾತಕ, ನಾಲ್ಕನೆಯದಾಗಿ ತನ್ನ ವಿಷ ವಿದ್ಯೆಯ ಪರೀಕ್ಷೆಗೆಂದು ವಿದ್ಯುಲ್ಲತೆಯನ್ನು ಪ್ರಯೋಗ ಪಶುವನ್ನಾಗಿ ಮಾಡಿಕೊಂಡ ವಿಟ ಪುರುಷ, ಐದನೆಯದಾಗಿ ಅರಮನೆಯ ಸಂಬಂಧಕ್ಕಾಗಿ ರಾಜಕುಮಾರಿ ಛಾಯಾದೇವಿಯನ್ನು ಮದುವೆಯಾದ ವಂಚಕ; ಆರನೆಯದಾಗಿ ಹಣ, ಅಂತಸ್ತು, ಅಧಿಕಾರಕ್ಕಾಗಿ ತನ್ನ ಮಕ್ಕಳನ್ನೂ ಲೆಕ್ಕಿಸದ ಕಟುಕ; ಮಗ ರವಿಕೀರ್ತಿ ಪ್ರೀತಿಸಿದ ವಾಸಂತಿಯನ್ನೂ ಅವಳ ಕೂಸನ್ನೂ ಅವಳ ತಂದೆಯನ್ನೂ ಕೊಲ್ಲಿಸಿದ ನೀಚ; ಒಲಿದವನ ಜೊತೆ ಹೋಗಿ ಬಾಳಲು ಹೊರಟ ಮಗಳು ಮುದ್ದು ಗೌರಿಯನ್ನು ಹಿಡಿದು ತರಲು ರಾಜಭಟರನ್ನು ಕಳುಹಿಸಿದ ನಿರ್ದಯಿ; ಕಡೆಗೆ, ಮಹಾರಾಣಿಯ ಸೌಂದರ್ಯಕ್ಕೆ ಮಾರುಹೋಗಿ ಅವಳು ಸತ್ತು ಹೋಗಿದ್ದರೂ ಇಡೀ ರಾತ್ರಿ ಅವಳ ಹೆಣದೊಂದಿಗೇ ಸುಖಿಸಿದ ಕಾಮಪಿಶಾಚಿ. ಶಿಖರಸೂರ್ಯ ಇಂಥ ಕೀಚಕನಾಗಿದ್ದರೂ ಸಹ ಎಚ್.ಎಸ್. ಶಿವಪ್ರಕಾಶ್ ಮುನ್ನುಡಿಯಲ್ಲಿ ಈ ಮಹಾರಾಣಿಯನ್ನು ಕುರಿತು ಷೇಕ್ಸ್ ಪಿಯರನ ಕ್ಲಿಯೋಪಾತ್ರಳಂಥ ’ರಾಜಸೂಳೆ’ ಎಂದಿರುವುದು ಅನ್ಯಾಯ. ಇದು ಅವರವರ ಮನೋಧರ್ಮಕ್ಕೆ ಹಿಡಿದ ಕನ್ನಡಿಯೇ ಸರಿ. ಈ ಇಬ್ಬರನ್ನೂ ’ರಾಜಸೂಳೆ’ ಯರೆಂದು ಕರೆಯುವುದು ಕೂಡ ಪುರುಷಾಧಿಕ್ಯ ಸಂಸ್ಕೃತಿಯ ಗರ್ವಿತ ನಿರ್ವಚನವೇ. ಶಿಖರಸೂರ್ಯನಾದರೊ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ‍್ಯಗಳೆಂಬ ಅರಿಷಡ್ವರ್ಗಗಳ ಸಾಕಾರ ರೂಪನೇ. ಈತ ತನ್ನ ರಸವಿದ್ಯೆಯ ಬಲದಿಂದ ಸೈನಿಕರನ್ನು ಸೃಷ್ಟಿಸಿ ಕನಕಗಿರಿಯ ಸುತ್ತಣ ಛಪ್ಪನ್ನೈವತ್ತಾರು ದೇಶಗಳನ್ನು ಕತ್ತಿಯ ಮೊನೆಯಲ್ಲಿ ಗೆದ್ದುಕೊಂಡವನು. ಅರಮನೆಯಲ್ಲಿ ತನ್ನ ವಿರುದ್ಧ ಇರುವವರನ್ನು ಒಬ್ಬೊಬ್ಬರನ್ನಾಗಿ ಮುಗಿಸಿದವನು, ಇಲ್ಲವೇ ದೂರ ಅಟ್ಟಿದವನು. ಒಟ್ಟಾರೆ ಶಿಖರ ಸೂರ್ಯ ಕಾದಂಬರಿಯು ಲೈಂಗಿಕತೆ ಹಾಗೂ ಅಪರಾಧ (Sex ಚಿಟಿಜ ಅಡಿime) ಗಳ ಆಡೊಂಬಲವಾಗಿದೆ. ಇದಕ್ಕಾಗಿ ಶಿಖರ ಸೂರ್ಯನಲ್ಲಿ ಸಾಸಿವೆಯಷ್ಟು ಪಶ್ಚಾತ್ತಾಪವಿಲ್ಲ; ಅಪರಾಧ ಪ್ರಜ್ಞೆ ಎಂಬುದಂತೂ ಇಲ್ಲವೇ ಇಲ್ಲ. ಕೇವಲ ಪಲಾಯನವಾದಿ.
ಹಾಗಾದರೆ ಅಂತಿಮವಾಗಿ ಈ ಕೃತಿಯ ಮೆಸೇಜ್ ಏನು? ಯಾವ ಪುರುಷಾರ್ಥಕ್ಕೆ ಕಂಬಾರರು ಶಿಖರಸೂರ್ಯನನ್ನು ಇಷ್ಟು ವಿಜೃಂಭಿಸುತ್ತಾರೆ? ವಾಸ್ತವವಾಗಿ ಕನಕಪುರಿಗೆ ಮುಖಾಮುಖಿಯಾಗುವ ಶಕ್ತಿ ಸಾಮರ್ಥ್ಯ ಇಂದಿನ ಶಿವಾಪುರಕ್ಕೆ ಉಂಟೆ? ಅಥವಾ ಡಾ. ಕುಂಸಿ ಉಮೇಶ್ ಹೇಳುವಂತೆ, ಕಂಬಾರರು ಕೇವಲ ’ಕಾಡು-ಹುಲಿ, ಕುದುರೆ-ಗೌಡ, ಕರ್ರೆವ್ವ-ಎಲ್ಲವ್ವ-ಗುಡ್ಡದನಿರಾಣಿಯಂತಹ ಅತಿಮಾನುಷ ನೆಲೆಯಿಂದ ಗತದ ಮೋಹವನ್ನು ಮತ್ತೆ ಮತ್ತೆ ಆವಾಹಿಸಿಕೊಂಡು ದುಡಿಯುವ ಸೃಜನಶೀಲ ಮೋಹವುಳ್ಳವರೇ? (ಸಂಪಾದಕ ಆರ್.ಜಿ.ಹಳ್ಳಿ ನಾಗರಾಜ. ಅನ್ವೇಷಣೆ-ಸಂಚಿಕೆ ೬೯-ಜುಲೈ-ಸೆಪ್ಟೆಂಬರ್-೨೦೧೧) ಎಂದರೆ ಕಂಬಾರರ ಶಿವಾಪುರ ಎಲ್ಲಿದೆ ? ನವಿಲು ಕುಣಿವ ಶಿವಾಪುರದ ಗುಡ್ಡಗಳಲ್ಲಿ ಈಗ ಕುರುಡು ಕಾಂಚಾಣ ಕುಣಿಯುತ್ತಿದೆ, ಕಾಲಿಗೆ ಬಿದ್ದವರ ತುಳಿಯುತ್ತಿದೆ. ಇಂಡಿಯಾದ ಹಳ್ಳಿಗಳು ಸದ್ಯ ತನ್ನೊಳಗೆ ಜಾತೀಯತೆ, ದ್ವೇಷ, ಕೊಲೆ, ಹಾದರ, ಹಿಂಸೆಗಳನ್ನು ತುಂಬಿಕೊಂಡು ಕಂಬಾಲಪಲ್ಲಿ, ಖೈರ್ಲಾಂಜಿಗಳಂತೆ ಸುಟ್ಟು ಹೋಗುತ್ತಿಲ್ಲವೇ? ಅವು ತನ್ನೊಳಗಿನ ಹಿಂಸೆಯನ್ನು ಹತ್ತಿಕ್ಕಿಕೊಳ್ಳಲಾರದ, ಹೊರಗಿನ ಹಿಂಸೆಯನ್ನು ತಡೆದುಕೊಳ್ಳಲಾರದ ಅಸಹಾಯಕ ಸ್ಥಿತಿಯಲ್ಲಿವೆ. ಅವುಗಳನ್ನು ಯಾವ ಯಲ್ಲಮ್ಮ, ಶಿವಾಪುರದಮ್ಮ, ಕರ್ರೆವ್ವ, ದುರ್ಗಮ್ಮ, ಜೋಕುಮಾರ, ಋಷ್ಯಶೃಂಗರೂ ರಕ್ಷಿಸಲಾರದವರಾಗಿದ್ದಾರೆ. ಅಥವಾ ಹಿಂದೆಯೂ ರಕ್ಷಿಸಲಾರದವರಾಗಿದ್ದರು. ಹಾಗಿದ್ದರೆ ಗಾಂಧಿ ಕನಸಿನ ಗ್ರಾಮಸ್ವರಾಜ್ಯ ಏಕಾಗಲಿಲ್ಲ? ಅಥವಾ ಅಂಬೇಡ್ಕರ್ ಆಶಿಸಿದಂತೆ ನಮ್ಮ ಫ್ಯೂಡಲ್ ವ್ಯವಸ್ಥೆಯ ಈ ಗ್ರಾಮೀಣ ಭಾರತ ಕದಲುವುದೇ ಸರಿಯಲ್ಲವೆ ?.
ಆದರೆ ಅನಿಷ್ಟಕ್ಕೆಲ್ಲ ಶನೇಶ್ವರನನ್ನೇ ದೂರುವಂತೆ, ಕನಕಪುರಿಯಂಥ ನಗರಗಳ ಕಂಫರ್ಟ್ ಝೋನಿನಲ್ಲೇ ನಿಂತು, ನಗರಗಳು ನವ ವಸಾಹತು ಶಾಹಿ ಶೋಷಣೆಯ ಕೇಂದ್ರಗಳೆಂದು ’ಗಳಹುವುದು’ ಕೂಡ ನಮ್ಮ ಲೇಖಕರ ಹಾಗೂ ವಿಮರ್ಶಕ ಪ್ರಭುಗಳ ಏಕಪಕ್ಷೀಯ ಧೋರಣೆಯಾಗಿದೆ. ಹೀಗೆನ್ನುವುದಾದರೆ ಇದುವರೆಗೆ ನಾವು ಕಟ್ಟಿಕೊಂಡು ಬಂದ ಪ್ರಜಾತಂತ್ರ ವ್ಯವಸ್ಥೆಯನ್ನೇ ಧಿಕ್ಕರಿಸಿದಂತಲ್ಲವೇ? ತಾತ್ಪರ್ಯವೆಂದರೆ ಕಂಬಾರರು ಕಟ್ಟಿಕೊಡುವ ಶಿವಾಪುರಗಳೆಲ್ಲಾ ’ಬಿಳಿ’ ಎಂದೂ, ಕನಕಪುರಿಗಳೆಲ್ಲಾ ’ಕಪ್ಪು’ ಎಂದೂ ಸರಳೀಕರಿಸುವುದು ಸರಿಯಲ್ಲ- ಅಷ್ಟೆ.
ರಾಣಿಯನ್ನು ಹೆಮ್ಮಾರಿಯನ್ನಾಗಿ ತೋರಿಸಲು ಇಲ್ಲಿ ಚಿತ್ರಿತವಾಗಿರುವ ಭೀಭತ್ಸಶ್ವಾನಕೂಪದ ಕಲ್ಪನೆಯಂತೂ ಸ್ಪೇಯಿನ್‌ನ ಗೂಳಿ ಕಾಳಗದ ಗ್ರ್ಯಾಪ್ಟ್ ಇದ್ದಂತಿದೆ. ’ಅದೇನೇ ಇರಲಿ, ಇಂದಿನ ರಾಜಕಾರಣಕ್ಕೆ ಇದೊಂದು ಉತ್ತಮ ರೂಪಕವೆಂಬುದಂತೂ ನಿಜ’ [ಶಿಖರಸೂರ್ಯ, ಪುಟ ೪೩೨) ಆದರೆ, ನಿರೂಪಕರಾದ ಈ ಹೆಳವರು ಕಂಬಾರರ ಅಂಕೆಗೆ ಒಳಗಾಗದೆ ಇದ್ದಿದ್ದರೆ, ನಮ್ಮನ್ನು ಬಹುಕಾಲ ಕಾಡುವ, ನೆನಪಿನಲ್ಲಿ ಉಳಿಯುವ ಕೃತಿಯಾಗಿ ಇದು ಮೂಡುತ್ತಿತ್ತೇನೋ. ಉದಾಹರಣೆಗೆ, ಬೆಳ್ಳಿಯ ಮೇಲೆ ನಡೆವ ಅತ್ಯಾಚಾರ ಪ್ರಸಂಗ, ಮಹಾರಾಣಿ ಶವದ ಮೇಲೆ ನಡೆವ ಸಂಭೋಗ ಸನ್ನಿವೇಶ, ವಾಸಂತಿಯನ್ನು ಕೊಲ್ಲಿಸಿದ ಪ್ರಸಂಗ-ಮುಂತಾದ ಸಂದರ್ಭಗಳಲ್ಲಿ ಮಾತೃ ಮೂಲ ಸಂಸ್ಕೃತಿಯ ವಕ್ತಾರರಾದ ಈ ಜನಪದ ಕಲಾವಿದರು ಇವನಿಗೆ ಶಾಪ ಹಾಕಿ, ಸಕಲ ಜೀವಕೋಟಿಗೆ ಜೀವದಾಯಕನಾದ ಸೂರ್ಯದೇವನ ಬಗ್ಗೆ ಅಪಾರ ಶ್ರದ್ಧಾಭಕ್ತಿಯುಳ್ಳ ಈ ಜನರು ಶಿಖರ ಸೂರ್ಯನೆಂಬ ಇವನ ಹೆಸರನ್ನು ಕುರಿತು ಛೇಡಿಸಿ ಅಪಹಾಸ್ಯ ಮಾಡದೆ ಬಿಡುತ್ತಿರಲಿಲ್ಲ. ಹೀಗಾಗಿ ಈ ಕಾದಂಬರಿಯ ಅತಿಮಾನುಷ ಜನಪದ ಕಥನವೊಂದನ್ನು ವರ್ತಮಾನದ ಚರಿತ್ರೆಯೊಂದಿಗೆ ಸಮೀಕರಿಸಿದಂತಿದ್ದರೂ ಹೆಳವರು ನಿರೂಪಿಸುವ ಜನಪದ ಕಥನದ ’ಶಿಷ್ಟ ರಕ್ಷಣೆಯ ದುಷ್ಟ ಸಂಹಾರ’ದ ಮಾದರಿಯೂ ಇದಾಗಿಲ್ಲ. ಯಾಕೆಂದರೆ ಹದ್ದಿನ ಬೆಟ್ಟಕ್ಕೆ ಪಲಾಯನ ಮಾಡಿರುವ ಆ ಶಿಖರ ಸೂರ್ಯ ಮತ್ತಷ್ಟು ವಾಮಾಚಾರ ವಿದ್ಯೆಗಳನ್ನು ರೂಢಿಸಿಕೊಂಡು ಕನಕಪುರಿಗೆ ಹಿಂದಿರುಗುವುದಿಲ್ಲವೆಂಬುದಕ್ಕೆ ಯಾವ ಗ್ಯಾರಂಟಿ? ಹೀಗಾಗಿ ಎಚ್. ಎಸ್. ಶಿವಪ್ರಕಾಶ್ ಹಾಡಿ ಹೊಗಳಿರುವ "ಸಾಂಸ್ಕತಿಕ ಮತ್ತು ದಾರ್ಶನಿಕ ಸ್ವಾಮತ್ತತೆಯನ್ನು ಸಾಧಿಸುವ ಕೃತಿ ಇದಾಗಿದೆ" ಎಂಬುದು ಜನಪದ ಸಮಾಜವೆಂದರೆ ಏನೆಂದೂ ಅರಿಯದವರ, ಕೇವಲ ರಷ್ಯಾದ ಮಹಾಕ್ರಾಂತಿ (೧೯೧೭) ನಂತರ ಹುಟ್ಟಿಕೊಂಡ "ನಾ ನಿನಗೆ ನೀ ನನಗೆ" ಎಂಬ ಸಾಹಿತಿ-ಲೇಖಕರ ಸಹಕಾರ ತತ್ವಾಧಾರಿತ (Wಡಿiಣeಡಿs ಅo-oಠಿeಡಿಚಿಣive ಉiಟಜ) ಅನಧಿಕೃತ ಒಪ್ಪಂದದಂತೆ ಕಂಡು ಬರುತ್ತದೆಯಲ್ಲವೆ?
ಕಡೆಯದಾಗಿ, ಬಂಡವಾಳಶಾಹಿ ಸಂಸ್ಥೆಯೊಂದು ಕೊಡಮಾಡುತ್ತಿರುವ ಜ್ಞಾನಪೀಠ ಪ್ರಶಸ್ತಿಯೂ ಇಲ್ಲಿನ ಪುರೋಹಿತ ಶಾಹಿ ವರ್ಗದ ಕೃಪಾಕಟಾಕ್ಷವೂ ಹಾಗೂ ಸಾಹಿತ್ಯ ರಾಜಕಾರಣದ ಲಾಭಿಯೂ ಇಲ್ಲಿ ಸಮೀಕರಣಗೊಂಡಿರುವುದರಿಂದ ಕನ್ನಡಕ್ಕೆ ಇನ್ನೊಂದು ಜ್ಞಾನಪೀಠವನ್ನು ತಂದುಕೊಟ್ಟ ಡಾ. ಚಂದ್ರಶೇಖರ ಕಂಬಾರರು, ಅಂಥ ನಿರಂಕುಶ ಮತಿಯಲ್ಲದ ಕಾರಣ, ಸಾರ್ವಜನಿಕವಾಗಿ ಉಡುಪಿಯ ಪೇಜಾವರ ಶ್ರೀಗಳ ಕಾಲಿಗೆರಗಿದ್ದು ವಿಶೇಷವೇನಲ್ಲ. ತೇಜಸ್ವಿಯವರೆಂದಂತೆ ಭಾರತದಲ್ಲಿ "ರಿಲಿಜಿಯಸ್" ಆಗುವ ಕವಿ ಜನತಾ ದ್ರೋಹಿಯಾಗುತ್ತಾನೇಕೆಂದರೆ ಭಾರತದ ಬಹುಪಾಲು ಧರ್ಮಗಳೆಲ್ಲಾ ಮಾನವೀಯತೆಗೆ ವಿರೋಧಿಗಳಾಗಿವೆ. (ತೇಜಸ್ವಿ. ಹೊಸ ದಿಗಂತದ ಕಡೆಗೆ, ಅಬಚೂರಿನ ಪೋಸ್ಟಾಫೀಸು) ಇನ್ನು ’ ಕನ್ನಡದಲ್ಲಿ ಮಲೆಗಳಲ್ಲಿ ಮದುಮಗಳು ಆದ ಮೇಲೆ ಮನಸ್ಸಿನಲ್ಲಿ ಊರಿ ನಿಲ್ಲುವ ಕೃತಿ ಶಿಖರ ಸೂರ್ಯವೇ’ ಎಂದು ಕೊಂಡಾಡುತ್ತಿರುವ ವಿಮರ್ಶೆ ಬಗ್ಗೆ ಮಾತಾಡದಿರುವುದೇ ಲೇಸು. ಯಾಕೆಂದರೆ, ಕಂಬಾರರು ಹೆಣ್ಣನ್ನು ನೋಡುವ ದೃಷ್ಟಿಯಲ್ಲಿಯೇ ಗೌಡಿಕೆಯ ಗತ್ತು ಇಣುಕುತ್ತದೆ. ಅದು ಶಿಖರಸೂರ್ಯದಲ್ಲಿ ಇನ್ನಷ್ಟು ಚೆನ್ನಾಗಿ ಪ್ರಕಟವಾಗಿದೆ. ಅವರ ’ಸಾಂಬಶಿವ’ ಎಂಬ ಪ್ರಹಸನದಲ್ಲಂತೂ ಹೆಣ್ಣನ್ನು ವೃತ್ತಿರಂಗ ಭೂಮಿಯ ನಾಟಕ ’ಖಾನಾವಳಿ ಚೆನ್ನಿ’ ಗಿಂತ ಕಡೆಯಾಗಿ ಲೇವಡಿ ಮಾಡುತ್ತಾರೆ. ಅದನ್ನು ನೋಡಿದರೆ ಇದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಲೇಖಕರ ಲಕ್ಷಣವೇ ಎಂಬ ದಿಗ್ಭ್ರಮೆ ಹುಟ್ಟುತ್ತದೆ. ಆದ್ದರಿಂದ ಪಾವಿತ್ರ್ಯತೆ ಮತ್ತು ಘನತೆಯ ದೃಷ್ಟಿಯಲ್ಲಿ ಕುವೆಂಪು ಅವರ ’ಮದುಮಗಳು’ ಕೃತಿಯೊಂದಿಗೆ ಕಂಬಾರರ ’ಶಿಖರಸೂರ್ಯ’ ಕಾದಂಬರಿಯನ್ನು ಹೋಲಿಸುವುದೆಂದರೆ ’ಅಮೃತವನ್ನುಂಡು ಗೋಮೂತ್ರದಿಂದ ಬಾಯೊರೆಸಿಕೊಂಡಂತೆ’. ಇದನ್ನು ’ವಿಚಾರ ದಕ್ಷರ್ ವೈಷಮ್ಯವನ್ನುಳಿದು ಕೇಳ್ವುದು’ ಎಂಬಲ್ಲಿಗೆ...
---
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ