ಸೋಮವಾರ, ಮೇ 21, 2012

ಜಾನಪದ ಪಧವೀದರರ ಸಮಸ್ಯೆ ಕುರಿತ ಎರಡು ಪತ್ರಗಳು( ಜಾನಪದವನ್ನು ಒಂದು ಶಿಸ್ತನ್ನಾಗಿ ಕಲಿತವರಿಗೆ ಭವಿಷ್ಯವೆಲ್ಲಿದೆ? ಎನ್ನುವ ಪ್ರಶ್ನೆಯನ್ನು ಆಧರಿಸಿ ಪ್ರಜಾವಾಣಿ ಪತ್ರಿಕೆಯ ವಾಚಕರ ವಾಣಿಯಲ್ಲಿ ಎರಡು ಪತ್ರಗಳು ಪ್ರಕಟವಾಗಿವೆ. ಇದು ಸಹಜವಾಗಿ ಜಾನಪದ ಕಲಿತವರ ಆತಂಕ. ಈ ಆತಂಕವನ್ನು ಜಾನಪದ ವಿಶ್ವವಿದ್ಯಾಲಯ ದೂರ ಮಾಡಬೇಕಾಗಿದೆ. ಅಥವಾ ಈ ಎರಡೂ ಪತ್ರಗಳನ್ನು ಆಧರಿಸಿ ಜಾನಪದ ವಿವಿ ಜಾನಪದ ಕಲಿತವರಿಗೆ ಅಭಯ ನೀಡುವ ಪ್ರಯತ್ನವನ್ನಂತೂ ಮಾಡಬೇಕಿದೆ-ಸಂ)


ಜಾನಪದ ಕಲಿತವರಿಗೆ ಭವಿಷ್ಯವೆಲ್ಲಿದೆ?
May 14, 2012 prajavani vachakaravani


ಈಚೆಗೆ ಜಾನಪದ ವಿಶ್ವವಿದ್ಯಾಲಯವು ಜಾನಪದ ಎಂ.ಎ ಒಳಗೊಂಡಂತೆ, ಜಾನಪದ ಸಂಬಂಧಿ ಇತರೆ ಕೋರ್ಸ್‌ಗಳನ್ನು ಆರಂಭಿಸುವ ಬಗ್ಗೆ ಸುದ್ದಿಯಾಗಿದೆ. ಹೀಗೆ ಆರಂಭಿಸುವ ಮುನ್ನ ಜಾನಪದ ವಿವಿಯಲ್ಲಿ  ಕಲಿತವರ  ಮುಂದಿನ ಭವಿಷ್ಯ ಏನು ಎನ್ನುವುದರ ಬಗ್ಗೆಯೂ ಚಿಂತನೆ ನಡೆಸಬೇಕಾಗಿದೆ. ಕಾರಣ ನನ್ನನ್ನು ಒಳಗೊಂಡಂತೆ ಜಾನಪದ ಎಂ.ಎ ಮಾಡಿದ ಬಹುತೇಕರಿಗೆ ಹ್ದ್ದುದೆಗಳಿಲ್ಲದೆ ಬದುಕು ಡೋಲಾಯಮಾನವಾಗಿದೆ. 

 ಹಾಗಾಗಿ ಈ ಶೈಕ್ಷಣಿಕ ವರ್ಷದಿಂದಲೇ ಜಾನಪದವನ್ನು ಪಿ.ಯು, ಬಿ.ಎ ಮುಂತಾದ ತರಗತಿಗಳಿಗೆ ಒಂದು ಕಡ್ಡಾಯ ಪಠ್ಯವಾಗುವಂತೆ, ಪದವಿ ಕಾಲೇಜಿನ ಕನ್ನಡ ಉಪನ್ಯಾಸಕ ಹುದ್ದೆಗೆ ಜಾನಪದ ಎಂ.ಎ ಮಾಡಿದವರನ್ನು ಅರ್ಹರನ್ನಾಗಿಸುವಂತೆ ಜಾನಪದ ವಿಶ್ವವಿದ್ಯಾಲಯವು ಶ್ರಮಿಸಬೇಕಿದೆ. 


ಇದು ಸಾಧ್ಯವಾದರೆ ಜಾನಪದ ಎಂ.ಎ ಮತ್ತಿತರ ಕೋರ್ಸ್‌ಗಳಿಗೆ ಬೆಲೆ ಬರುತ್ತದೆ. ಹಾಗೆ ಮಾಡದೆ ಜಾನಪದವನ್ನು ಕಲಿಯುವ ಕೋರ್ಸ್‌ಗಳನ್ನು ಆರಂಭಿಸಿದರೆ, ವಿಶ್ವವಿದ್ಯಾಲಯವೇ ನಿರುದ್ಯೋಗಿಗಳನ್ನು ಸೃಷ್ಟಿಸಿದಂತಾಗುತ್ತದೆ.


`ಜಾನಪದ' ಪದವೀಧರರ ಭವಿಷ್ಯ
May 22, 2012 prajavani vachakaravani

ಜಾನಪದ ವಿಶ್ವ ವಿದ್ಯಾಲಯವು ಪ್ರಸಕ್ತ ಶೈಕ್ಷಣಿಕ ವರ್ಷ (2012-13)ದಿಂದಲೇ ಜಾನಪದ ಸ್ನಾತಕೋತ್ತರ ಪದವಿ ಕೋರ್ಸುಗಳಿಗೆ ಸಿದ್ಧತೆ ನಡೆಸಿರುವುದು ಒಳ್ಳೆಯ ಬೆಳವಣಿಗೆ. ಕರ್ನಾಟಕದಲ್ಲಿ ಇಂತಹ ವಿಶ್ವವಿದ್ಯಾಲಯ ಎಂದೋ ಆರಂಭವಾಗಬೇಕಿತ್ತು. ತಡವಾಗಿಯಾದರೂ ವಿ ವಿ ಸ್ಥಾಪನೆಯಾಗಿರುವುದು ಉತ್ತಮ ಬೆಳವಣಿಗೆ. 

ಜಾನಪದ ಎಂ. ಎ. ಪದವಿಧರರ ನಿರುದ್ಯೋಗ ಸಮಸ್ಯೆ ಕುರಿತು ಈಗ ಚರ್ಚೆ (ಪ್ರ ವಾ ವಾ ಮೇ.14) ನಡೆಯುತ್ತಿದೆ. ಜಾನಪದ ಸ್ನಾತಕೋತ್ತರ ಪದವಿ ಪಡೆದವರು ಮಾತ್ರ ನಿರುದ್ಯೋಗಿಗಳಾಗಿಲ್ಲ ಎಂಬುದನ್ನು ಟೀಕಾಕಾರರು ಮರೆಯಬಾರದು. 

ಜಾನಪದವನ್ನು ಕೇವಲ ಸಾಹಿತ್ಯಕ್ಕಷ್ಟೇ ಸೀಮಿತಗೊಳಿಸಿ ಅಧ್ಯಯನ ಮಾಡುವ ವಿಷಯವಲ್ಲ. ಅದು ಬಹುಶಿಸ್ತಿನ ಅಧ್ಯಯನ. ಸಾಹಿತ್ಯ, ಸಂಸ್ಕೃತಿ, ಕಲೆ, ಕಲಾವಿದರು ಹೀಗೆ ಮಾನವನ ಸಮಸ್ತ ಬದುಕನ್ನು ಜಾಗತಿಕ ಮಾರುಕಟ್ಟೆಯ ದೃಷ್ಟಿಯಿರಿಸಿಕೊಂಡ ಅಧ್ಯಯನ.
 
ಇತರ ವಿಶ್ವವಿದ್ಯಾಲಯಗಳು ಜಾನಪದ ಸಾಹಿತ್ಯಕ್ಕೆ ಹೆಚ್ಚು ಒತ್ತು ನೀಡಿ ಅದರ ವಿಸ್ತಾರ ಹಾಗೂ ಬಹುಮಾಧ್ಯಮದ ಅಧ್ಯಯನವನ್ನು ಕೈಗೊಳ್ಳದೇ ಇರುವುದು ದುರದೃಷ್ಟಕರ. 

ಜಾನಪದ ವಿ ವಿಯು ಜಾಗತಿಕ ದೃಷ್ಟಿಕೋನದ ಹಿನ್ನೆಲೆಯಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನಕ್ಕೆ ಅವಕಾಶ ಕಲ್ಪಿಸಿದರೆ ಬಹುಶಃ ನಿರುದ್ಯೋಗದ ಸಮಸ್ಯೆ ಬರಲಾರದು.

ಕಾಮೆಂಟ್‌ಗಳಿಲ್ಲ: