-ಶಿವಕುಮಾರ್ ಕಂಪ್ಲಿ, ಕೂಡ್ಲಿಗಿ.
ಕಾವ್ಯ ಕಟ್ಟುವ ಕೆಲಸ ಎಷ್ಟು ಪ್ರಮುಖವೋ ನಮ್ಮ ಪರಂಪರೆಯಲ್ಲಿ ಕಾವ್ಯದ ಹಾಡುವಿಕೆ ಅಷ್ಟೇ ಪ್ರಮುಖವಾದದ್ದು. ಕಮಾರವ್ಯಾಸನು ಹಾಡಿದನೆಂದರೆ...ಎನ್ನುವಲ್ಲಿ ಆ ಅರ್ಥವಿದೆ. ಮುದ್ರಣ ಯಂತ್ರಗಳು ಬರುವ ಮುನ್ನ ಈರೀತಿ ಹಾಡುವಿಕೆ ಎಂಬುದು ಕವಿಯು ಸಮುದಾಯಕ್ಕೆ ಆತ್ಮೀಯವಾಗಿ ನಿವೇದಿಸಿಕೊಳ್ಳುವ ಮುಖ್ಯ ಮಾದರಿಯಾಗಿತ್ತು. ಬಸವಣ್ಣ ’ಆನು ಒಲಿದಂತೆ ಹಾಡುವೆ’ ಎನ್ನುವುದು ಕೇವಲ ಖಾಸಗಿತನ ಮಾತ್ರವಲ್ಲ. ಅದು ಕೂಡಲ ಸಂಗನಿಗೆ ಹಾಗು ಸಮುದಾಯಕ್ಕೆ ತಾನು ನಿವೇದಿಸಿಕೊಳ್ಳ ಬಯಸಿದ ಮಾದರಿ ಕೂಡ ಆಗಿತ್ತು. ಅದರಲ್ಲೂ ಶ್ರಮ ಸಮುದಾಯದೊಳಗೆ ಹುಟ್ಟುವ ಕಾವ್ಯದಲ್ಲಿ ಈ ಬಗೆಯ ಹಾಡುವಿಕೆಯೇ ಪ್ರಧಾನ.
ಜನಪದರಲ್ಲಿ ಹಾಡುವ ಮತ್ತು ರಚಿಸುವ ಕವಿ ಬೇರೆ ಬೇರೆ ಅಲ್ಲ. ಹಾಡುವಿಕೆ ಮತ್ತು ಹಾಡು ಕಟ್ಟುವಿಕೆಗಳು ಬೇರೆ ಬೇರೆಯಾದದ್ದು ’ಆಧುನಿಕತೆ’ ಕಾಲಿಟ್ಟ ಮೇಲೆ. ಮುದ್ರಣ ವ್ಯವಸ್ಥೆ ಬಂದಮೇಲೆ.’ಆಧುನಿಕ’ಕವಿ ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ ಎನ್ನುವಾಗ ಈ ಕವಿ ಜನಪದ ಸಂಪ್ರದಾಯದವನಲ್ಲ ಎಂಬುದೇ ವ್ಯಂಗ್ಯ. ಹೀಗೆ ಹೇಳುವಾಗ ಆತನಿಗೆ ಸಮೂಹ ಬಿಡುವ ಹಠವಿಲ್ಲ. ಆತ ಅದನ್ನು ಬರೆದು ಅಚ್ಚು ಹಾಕಿಸುತ್ತಿದ್ದಾನೆ. ಆದರೆ ಜನಪದ ಕವಿ ’ಎಲ್ಲ ಕೇಳಲಿ’ ಎಂದೇ ಹಾಡುತ್ತಾನೆ. ಹೇಳುವವರು ತನ್ನ ಹಾಡನ್ನ ಕೇಳಲಿಕ್ಕಾಗಿ ಪರಿಪರಿಯಾಗಿ ಮನ ಒಲಿಸುವ ಬಗೆಯನ್ನ ಜನಪದರಲ್ಲಿ ನೋಡುತ್ತೇವೆ.ಇಲಿ ಹಾಡಿಗಿರುವುದು ಸಮುದಾಯವನ್ನ ಬೆಳೆಸುವ ಜೀವ ಪರ ಸಂಸ್ಕೃತಿಯೇ ವಿನಃ ಅಕ್ಷರ ಕಾವ್ಯ ಹೇಳುವ ವ್ಯಕ್ತಿ ಸಂಸ್ಕೃತಿಯಲ್ಲ.
ವಸಾಹತೀಕರಣದಿಂದ ಬಂದ ’ಆಧುನಿಕ’ ಬಾಳಿನಿಂದ ಹಾಡುವ ಮತ್ತು ಕಟ್ಟುವ ಸಂಪ್ರದಾಯವು ವ್ಯಕ್ತಿ ಸಂಪ್ರದಾಯಕ್ಕೆ ಆದ್ಯತೆ ನೀಡುತ್ತ ಹೋಯಿತು. ಅಕ್ಷರವು ಒಂದು ರಾಜಕೀಯ ಶಕ್ತಿಯಾದ ಕಾಲವಿದು. ಹಾಗಾಗಿ ಕವಿತೆ ಸಮುದಾಯಿಕ ಪ್ರಧಾನತೆಯನ್ನು ಕಳೆದುಕೊಳ್ಳುತ್ತಾ ’ವೈಯಕ್ತಿಕ’ರಚನೆಯಾಗಿ ಮಾರ್ಪಟ್ಟಿತು.ಸಂಬಂಧ ಮತ್ತು ಸಹಬಾಳ್ವೆಯನ್ನು ಬೆಳೆಸುವ ಬದುಕಿನ ರೀತಿಯಲ್ಲೇ ಹಿಂದಿನ ಕಾವ್ಯವೂ ಇತ್ತು. ಆಧುನಿಕತೆ ಕಾಲಿಟ್ಟ ಮೇಲೆ ಉಂಟಾದ ನಗರೀಕರಣ, ಹೊಸ ಆರ್ಥಿಕ ರಚನೆಗಳು,ವ್ಯಕ್ತಿಗಳನ್ನು ಅವಿಭಕ್ತ ಕುಟುಂಬದಿಂದ ಬೇರ್ಪಡಿಸಿ ಅವರವರ ಹಂಡತಿ ಮಗುವಿಗೆ ಮಾತ್ರ ಸೀಮಿತವಾಗಿಸುವತ್ತ ಹೊರಟಿತು.ಆಂಗ್ಲರ ಹೊಸ ಬಗೆಯ ಶಿಕ್ಷಣದಿಂದ ಬಂದ ಹೊಸ ಆರ್ಥಿಕ ರಚನೆಗಳು, ವ್ಯಕ್ತಿಗಳ ಖಾಸಗೀತನವನ್ನೇ ಒಂದು ಮೌಲ್ಯವಾಗಿಸಿದವು. ಇದನ್ನೇ ’ಆಧುನಿಕ’ಕಾವ್ಯ ಒಬ್ಬ ವ್ಯಕ್ತಿಯು ರಚನೆ ಮಾಡುವ,ಓದುವ, ಏಕಾಂತವಾಗಿ ಗ್ರಹಿಸುವ ಮಾಧ್ಯಮವಾಗಿಸಿಬಿಟ್ಟಿತು.ತನ್ನವರಿಗಿಂತಲೂ ತನ್ನತನಕ್ಕೆ ಇಲ್ಲಿ ಜಾಗವಾಯಿತು.
ವಸಾಹತೀಕರಣದ ಪ್ರಭಾವ ದೇಸೀಯ ಮತ್ತು ವಿದೇಶಿಯ ಎರಡೂ ರೂಪಗಳಲ್ಲೂ ಘಟಿಸಿದ್ದು ಅಕ್ಷರ ಕಾವ್ಯದೊಳಗೆ. ಮೌಖಿಕ ಕಾವ್ಯದಲ್ಲಿ ಈಬಗೆ ಇಲ್ಲ.ಅಲ್ಲಿ ದೇಸಿಯ ಬಹುಸಂಸ್ಕೃತಿಗಳ ವ್ಯವಸ್ಥೆಯನ್ನ ಗಟ್ಟಿಗೊಳಿಸುವ ಉಮೇದು ಇದೆ.ಉದಾಹರಣೆ:ಬಂಗ್ಲದೊಳಗೆ ಸಾಬ ಬಂದಾನಂತ ಹೇಳಿದರೆ ಕಲ್ತವರು ಹೋಗತಾರ ಓಡೋಡಿ, ಇಂಗ್ಲೀಷ್ ಮಾತಿಲೆ ಟಿಸ್ ಪುಸ್ ಮಾತನಾಡಿ ಉಪಕರ ಮಾಡತಾರ ಲಗುಮಾಡಿ.
ಇಲ್ಲಿನ ಬಂಗ್ಲೆ,ಇಂಗ್ಲೀಷ್ ಸಾಹೇಬ ಮತ್ತು ಅವನ ಭಾಷೆ ಮೂರೂ ಹೇಗೆ ಹೊರರೂಪಿಯಾಗಿ ಅಕರ್ಷಿಸಬಲ್ಲವೆಂಬುದಕ್ಕೆ ಈಎರಡು ಸಾಲುಗಳೇ ಸಾಕು. ಇಲ್ಲಿನ ಈ ರೀತಿ ವ್ಯಂಗ್ಯವೂ ಹೌದು.ಇನ್ನು ಒಳರೂಪಿಯಾಗಿ ಶಕ್ತರಾಜಕೀಯ ವ್ಯವಸ್ಥೆಯೊದು ಹಲವು ಸಂಸ್ಕೃತಿಗಳ ದೇಶೀಯ ರಿವಾಜುಗಳನ್ನು ತನ್ನ ಆರ್ಥಿಕ ಅಸ್ತ್ರಗಳ ಮೂಲಕ ಆಧೀನಗೊಳಿಸಿ ಕೊಳ್ಳುತ್ತದೆ ಎಂಬುದಕ್ಕೆ ಉದಾ;
ಕಂಡ ತಿನ್ನುವ ಕುಲ ಕಡಿಮೆ ಅಂತ ನಮ್ಮವರಿಗೆ ನುಡಿಯುವರು
ಹಂದಿ ತಿನ್ನುವ ಇಂಗ್ಲೆಂಡ್ ದವರಿಗೆ ಒಳಗೆ ಕುರ್ಚಿಹಾಕಿ ಕೂಡ್ರಿಸುವರು೧
ಸಮುದಾಯವಾಗುವಲ್ಲಿ ಜನಪದರು ನುಡಿಯ ಜೊತೆಗೆ ನಾದವನ್ನು,ತಾಳವನ್ನೂ,
ನೃತ್ಯವನ್ನೂ ಹಿಡಿದಿದ್ದಾರೆ. ಹಾಗಾಗಿ ಇಡೀ ಪಂಡಿತ ಕಾವ್ಯ ಪರಂಪರೆಯಲ್ಲಿ ಮೌನದ ಹುಟ್ಟಾಗಿ ಸಂಭವಿಸುತ್ತಿದ್ದ ಕಾವ್ಯ ಆಧುನಿಕವಾಗುವಲ್ಲಿ ಜನ ಸಮುದಾಯದ ನಾದ ಮತ್ತು ನೃತ್ಯಗಳ ಗತ್ತಿನ ಹೆಜ್ಜೆಯವರೆಗೂ ಹರಿದುಬಂದಿದೆ.
ಆಧುನಿಕತೆಯ ಹಿನ್ನೆಲೆಯಲ್ಲಿ ನೋಡಿದಾಗಲೂ ಇಲ್ಲಿನ ಜನಕಾವ್ಯ ಕ್ರಿಯೆ ನಿಂತ ನೀರಾಗಿಲ್ಲ. ಎಳೆಮುರಿದು ಬೆಳೆ ಬಾಡಿಲ್ಲ.ಭಿನ್ನ ಭನ್ನ ಪ್ರಾದೇಶಿಕ ವೈವಿಧ್ಯತೆಗಳ ನೃತ್ಯ,ಗೀತ,ಕಥಾರೂಪಗಳಿಗೆ [ಹರದೇಶಿ-ನಾಗೇಶಿ,ಗೀಗೀಪದ, ಚೌಡಿಕೆ ಪದ] ಇತ್ಯಾದಿ ಆಕೃತಿಗಳಲ್ಲಿ ಭಾಷಿಕ ಹೊಸತನಗಳು ಕಾಣಿಸಿಕೊಂಡರೆ,ತತ್ವಪದ ಮತ್ತು ಲಾವಣಿಗಳಲ್ಲಿ ಭಾಷೆಯ ಜೊತೆಗೆ ಒಳಗಿನ ಬಹು ಸಂಸ್ಕೃತಿಗಳ ಬೆಸುಗೆ ನಡೆದಿದೆ.
ಲಾವಣಿಯ ಆಕೃತಿಯನ್ನ ಕುರಿತಂತೆಭಾಷೆಗೆ ವಸ್ತುವಿಗೆ ಅಭಿವ್ಯಕ್ತಿಗೆ ಜೋರು ನೀಡುವ ಸಲುವಾಗಿ ಅನ್ಯ ಭಾಷಾ ಬಳಕೆ ಅಗತ್ಯವಾದುದು ಎಂದು ಪ್ರತಿಕ್ರಿಯಿಸುವ ಚನ್ನಣ್ಣ ವಾಲೀಕಾರರ ಹೇಳಿಕೆ ಅಷ್ಟು ಸರಳವಲ್ಲ (ಐದು ಸಮಾಜವಾದಿ ಜಾನಪದ ಕಾವ್ಯಗಳು). ಇದಕ್ಕೆ ಇಡೀ ಸಂಸ್ಕೃತಿಯ ಹಿಂದಿನ ಅನೇಕ ಚಾರಿತ್ರಿಕ ಒತ್ತಡಗಳಿರುತ್ತವೆ.
ನುಡಿಗಳ ಕಟ್ಟಡವಾದ ಭಾಷೆಯ ಹಾದಿಯಲ್ಲೂ ಯಾಕೆ ಬಸವ,ಕುಮಾರವ್ಯಾಸ, ಹರಿಹರ ನಂಥದವರು ಹಾಡುವ ಪರಂಪರೆಯಲ್ಲೇ ಭಿನ್ನವಾಗಿದ್ದಾರೆ? ಯಾವ ಬಗೆಯ ಓದುಗರಿಗೆ ಬರೆದಿದ್ದಾರೆ.ಯಾಕೆ ಕುವೆಂಪು,ಬೇಂದ್ರೆ, ಅಡಿಗರಿಗೆ, ಸಿದ್ಧಲಿಂಗಯ್ಯನವರಿಗೆ, ಆಯಾ ರೂಪಗಳೇ ಅನಿವಾರ‍್ಯವಾದುವು? ಎಂದು ಕೇಳಿಕೊಳ್ಳಬೇಕಾಗಿದೆ. ಈ ಅರ್ಥದಲ್ಲೇ ಪರಂಪರೆಯಲ್ಲಿ ಹೊಸ ಚಲನಶೀಲತೆಯಾಗಲೀ ಮತ್ತು ಹೊಸದಾಗಿ ಕಟ್ಟುವ ಕೆಲಸವಾಗಲೀ ಕೇವಲ ಸಾಹಿತ್ಯಕ ಪ್ರಶ್ನೆಗಳು ಮಾತ್ರವಾಗಿರುವುದಿಲ್ಲ.
ಉದಾಹರಣೆಗೆ:ರೈಲುಗಾಡಿ ಆಧುನಿಕತೆಯ ಸಂಕೇತವಗಿ ನಗರೀಕರಣದ ಕ್ರೌರ್ಯವಾಗಿ ನಾಡಿಗೆ ಬರುವಾಗ ಅದುಪರಂಗೇರು ಮಾಡಿದ ಕೌತುಕ ವೆಂದಷ್ಟೇ ಹಾಡಿ ಅದು ಇಲ್ಲಿ ಸುಮ್ಮನಾಗುವುದಿಲ್ಲ.ಇದರಾಚೆಗೆ ದಿಕ್ಕು ದೆಸೆಯೆಲ್ಲ ಮಾಡ್ಯಾರೋ ಸೆಡಕಾ ಎಂದು ಅದರ ಆಗಮನದ ವಿರುದ್ಧದ ಸಿಟ್ಟು ಸೆಡವುಗಳನ್ನೂ ಅದು ಕಟ್ಟಿ ಕೊಡುತ್ತದೆ. ಯಾಕೆ ಈ ಹಾಡು ಈಎರಡೂ ಭಾವವನ್ನು ಹಿಡಿದಿದೆ. ಎನ್ನುವುದಕ್ಕೆ ಕೇವಲ ಈ ಹಾಡಿನ ಒಳ ಮತ್ತು ಹೊರ ರೂಪವನ್ನು ಗಮನಿಸಿದರೆ ತಿಳಿಯದು. ಇದರ ಹೊರಗೆ ಬಂದು ಕಾಸೀಬಾಯಿಯ ಪದ ಗಮನಿಸಿದರೆ ಮೇಲಿನ ಚರ್ಚೆಗೆ ಇನ್ನೊಂದು ಆಯಾಮ ದೊರಕುವುದು.
ಹೊತ್ತು ಹೊಂಟು ಹೊರಳ್ಯಾಡಿ ಅಳತಾಳೋ ಭೂಮಿಗೆ ತೆಲೀ ಬಡದಾ
ತಲಿ ಕೂದಲು ಹರಕೊಂಡು ಎದಿ ಬಡದಾ
ಕಡ್ಲಿಮಟ್ಟಿ ಟೇಸಣಾಗಿತ್ತು ಸುಂದಾ|| ಹಾಹಾ||
ಕಾಸೀಬಾಯಿಯ ದೆಸಿಂದಾ [ಪು.೧೨೦-೧೮೦]
ಹೆಣ್ಣನ್ನು ಈ ರೀತಿ ದಾರುಣ ಸ್ಥಿತಿಗೆ ತಳ್ಳುವಲ್ಲಿ ರೈಲು ಮುಖ್ಯವೇ ಅಲ್ಲ. ಅದರ ಹಿಂದಿನ ಆಳುವ ಸಂಸ್ಕೃತಿಯೂ ಮುಖ್ಯವಾಗಿದೆ. ಈಬಗೆಯ ಬಹುತೇಕ ’ಆಧುನಿಕ’ ಪದಗಳು ಈ ನಾಡಿನ ಬಹು ಸಂಸ್ಕೃತಿಯನ್ನು ಒಡೆಯುವ ಭೀಕರತೆಯನ್ನು ತಂದೊಡ್ಡುವ ಒಂಟಿತನವನ್ನು,ಹೇಳುವ ಪದಗಳಾಗಿವೆ. ಹಾಗಾಗಿ ಆಧುನಿಕ ಕಾವ್ಯಗಳಲ್ಲಿ ಬಂದ ಆರಂಭದ ಕೋರ್ಟನ್ನು,ರೈಲುಗಾಡಿಯನ್ನು,ಕ್ರಿಸ್ತನನ್ನು ಬರಿಯ ಪದಗಳಾಗಿ ನೋಡುವುದಕ್ಕಿಂತ ಅದರೊಳಗಿನ ಸಾಂಸ್ಕೃತಿಕ ಹಿನ್ನೆಲೆಯಲ್ಲೂ ಗಮನಿಸಬೇಕು.
ಇಲ್ಲಿ ’ಮಟಕದ’ ಆಟ ಒಂದು ರೀತಿಯ ಆಕ್ರಮಣವನ್ನು (ವ್ಯಕ್ತಿಯ ದಿವಾಳಿತನವನ್ನು)ಸೂಚಿಸಿದರೆ ಇನ್ನೊಂದು ಪದ ಇಡೀ ದೇಶದ ದಿವಾಳಿತನವನ್ನು ಹೇಳುತ್ತದೆ.
ಉದಾಹರಣೆ:
ಹಿಂದುಸ್ಥಾನ ಖಜಾನಿ ಖಾಲಿಮಾಡಿ
ಇಂಗ್ಲೆಂಡಕ ಒಯ್ಯಾತಾರ ಒಡೋಡಿ
ಬ್ರಟೀಷ್ಪ ಪಾರ್ಲಿಮೆಂಟಿನೊಳು ಕೂಡಿ
ಕಾಯ್ದೆ ತೆಗಿತಾರ ಬಹಳ ಅಡ್ನಾಡಿ
ಇಲ್ಲೆಲ್ಲಾ ’ವಾಚ್ಯ’ವೆನ್ನಲಾಗುವ ಲಯಗಾರಿಕೆ ಇದ್ದರೂ ಇವು ತಮ್ಮ ಒಳಗಿನ ಜೀವಂತವಾಗಿರುವ ಮತ್ತು ಚಲಾವಣೆಯಲ್ಲಿರುವ ಸಾಂಸ್ಕೃತಿಕ ರೂಪಗಳನ್ನು ತನ್ನ ಆಕೃತಿಯಾಗಿರಿಸಿ ಕೊಂಡಿರುತ್ತವೆ. ಆ ಮೂಲಕ ಇವು ’ಶಕ್ತ’ ಎನ್ನಲಾಗುವ ಪರಂಪರೆಗೆ ಎದೆಕೊಡುತ್ತವೆ. ಜೀವ ಸಂಸ್ಕೃತಿ ಹಳ್ಳಿಗಳ ಪ್ರಧಾನ ಕಾಳಜಿಯಾದರೆ ವ್ಯಕ್ತಿ ಸಂಸ್ಕೃತಿ ನಗರದ ಮುಖ್ಯ ನಿಲುವಾಗಿದೆ.ಹಾಗಾಗಿ ಜನಪದರ ಹಾಡುಗಳಲ್ಲಿ, ಮೌಖಿಕ ಚರಿತ್ರೆಗಳಲ್ಲಿ ಬಹು ಸಂಸ್ಕೃತಿಯ ನೆರಳನ್ನ ಗುರುತಿಸ ಬಹುದು.ಜನರ ಜಾಡಿಡಿದ ನಗರದವರ ಕಾವ್ಯಗಳಲ್ಲಿ ಮತ್ತು ಚರಿತ್ರೆಗಳಲ್ಲಿ ವ್ಯಕ್ತಿ ಸಂಸ್ಕೃತಿಯ ಏಕ ಪ್ರಕಾರಗಳ ಒಳಗೂ ಆಧುನಿಕ ಕಾವ್ಯಕ್ಕೆ ಅನೇಕ ಬಗೆಯ ಪ್ರವೇಶಗಳಿವೆ. ಓರಿಯಂಟಲ್ ಅಥವಾ ಪ್ರಾಚ್ಯ ಮಾದರಿ,ಕಲೋನಿಯಲ್ ಅಥವಾ ವಸಾಹತು ಮಾದರಿ,ನ್ಯಾಷಿನಲ್ ಅಥವಾ ರಾಷ್ಟ್ರೀಯ ಮಾದರಿ, ಮಾರ್ಕ್ಸವಾದಿ ಅಥವಾ ವರ್ಗಪ್ರಧಾನ ಮಾದರಿ,ಸಬಾಲ್ಟ್ರನ್ ಅಥವಾ ತಳವರ್ಗದ ಮಾದರಿ.ಹಾಗಾಗಿ ಕಣ್ಣ ನೋಟಕ್ಕನುಗುಣವಾಗಿ ಈ ಕಾವ್ಯ ಚರಿತ್ರೆಯೂ ಭಿನ್ನವಾಗಿ ಕಾಣುತ್ತದೆ ಎನ್ನಬಹುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ