ಗುರುವಾರ, ಮೇ 17, 2012

ಪಿ.ಕೆ.ರಾಜಶೇಖರ್ ಅವರೊಂದಿಗೆ ಮಾತುಕತೆ: ಕಬಳಿಕೆ ಮಾಧ್ಯಮಗಳಿಂದ ಜನಪದ ‘ಧನಪದ’




(ಪಿರಿಯಾಪಟ್ಟಣದಲ್ಲಿ ನಡೆದ 10 ನೇ ಮೈಸೂರು ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಪಿ.ಕೆ.ರಾಜಶೇಖರ್ ಅವರನ್ನು ಸಂದರ್ಶನ ಮಾಡಿ ವಿಜಯ ಕರ್ನಾಟಕ ಮೈಸೂರು ವಿಭಾಗವು ಪ್ರಕಟಿಸಿತ್ತು. ಈ ಮಾತುಗಳನ್ನು ಕನ್ನಡ ಜಾನಪದ ಬ್ಲಾಗಿನಲ್ಲೂ ಪ್ರಕಟಿಸಲಾಗುತ್ತಿದೆ.)


ಪಿರಿಯಾಪಟ್ಟಣ ಕೆಂಪೇಗೌಡ ರಾಜಶೇಖರ ...
ಹೀಗೆಂದರೆ ಗುರುತು ಹಿಡಿಯುವುದು ಕಷ್ಟ . ಅದೇ, ‘ಪಿಕೆಆರ್ ಎನ್ನಿ ,ವಿದ್ವತ್‌ಕ್ಷೇತ್ರ,‘ವಿದ್ಯಾರ್ಥಿವಿಶ್ವದಲ್ಲಿ ಫೇಮಸ್. 
ಮೈಸೂರು ಜಿಲ್ಲೆ ಪಿರಿಯಾಪಟ್ಟಣದ  ಪಿ.ಡಿ.ಕೆಂಪೇಗೌಡ -ಪುಟ್ಟಮ್ಮ ದಂಪತಿ ಪುತ್ರ ರಾಜಶೇಖರ  ಅವರು ಅಧ್ಯಾಪಕರಾಗಿ,ಜನಪದ ವಿದ್ವಾಂಸರಾಗಿ, ಗಾಯಕರಾಗಿ ಕಟ್ಟಿಕೊಂಡ  ವೃತ್ತಿ-ಪ್ರವೃತ್ತಿಯ ಬದುಕು ಜನಪದ ಜೋಗಿಯ ಘನ ಗೌರವವನ್ನು ತಂದು ಕೊಟ್ಟಿದೆ.
ಜಾನಪದ ಕ್ಷೇತ್ರದ ಕೃಷಿಕರಲ್ಲಿ ಪಿಕೆಆರ್ ಅವರದ್ದು ಮುಂಚೂಣಿ ಹೆಸರು. ಸಂಶೋಧನಾ ವಿದ್ಯಾರ್ಥಿಯಾಗಿ ದ್ದಾಗಲೇ ೧೫೦೦ ಪುಟಗಳ ಬೃಹತ್ ಕೃತಿ ಮಲೆಯ ಮಾದೇ ಶ್ವರಜನಪದ ಮಹಾಕಾವ್ಯವನ್ನು ಪ್ರಕಟಿಸಿದ ಹೆಚ್ಚುಗಾರಿಕೆ ಅವರದ್ದು. ಜಾನಪದ ಸಾಹಿತ್ಯ ಸೌಧದ ಹೆಗ್ಗಂಬಎಂದು ವಿದ್ವಾಂಸರಿಂದ ಪ್ರಶಂಸೆಗೆ ಪಾತ್ರವಾಗಿದ್ದ ಈ ಕೃತಿಗೆ ೧೯೭೪ರಲ್ಲಿಯೇ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗರಿ.
ಕವಿತೆ,ಭಾಷಾಶಾಸ್ತ್ರ, ಜೀವನ ಚರಿತ್ರೆ, ಅನುವಾದ ,ಮಕ್ಕಳ ಸಾಹಿತ್ಯ,ಜಾನಪದವೂ ಸೇರಿ ೭೦ಕ್ಕೂ ಹೆಚ್ಚು ಮೌಲಿಕ ಕೃತಿಗಳ ಪ್ರಕಟಣೆ. ಈ ಪೈಕಿ ಬಹುಪಾಲು ಜಾನಪದ ಆವೃತ. ೨೦೦೪ರಲ್ಲಿ ಪ್ರಕಟವಾದ ಜನಪದ ಮಹಾಭಾರತಮತ್ತೊಂದು ಜನಪದ ಮಹಾಕಾವ್ಯ.
ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯಿಂದ ೧೯೯೬ರಲ್ಲಿ ಜಾನ ಪದ ತಜ್ಞಪ್ರಶಸ್ತಿ. ೨೦೦೫-೦೬ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ. ಮಾತ್ರ ವಲ್ಲ, ಅನೇಕ ಸಂಘ ಸಂಸ್ಥೆಗಳಿಂದ ಹತ್ತಾರು ಪ್ರಶಸ್ತಿ,ಮಾನ ಸಮ್ಮಾನ.

ಮಹಾರಾಜ ಕಾಲೇಜಿನಲ್ಲಿ ಹಲವು ವರ್ಷ, ಮಾನಸಗಂಗೋತ್ರಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕೊನೆಯ ನಾಲ್ಕಾರು ವರ್ಷ ಕನ್ನಡ ಪ್ರಾಧ್ಯಾಪಕ ರಾಗಿ ವಿದ್ಯಾರ್ಥಿಗಳನ್ನು ಸೂಜಿಗಲ್ಲಿನಂತೆ  ಸೆಳೆಯುತ್ತಿದ ಅವರು, ಇತ್ತೀಚೆಗಷ್ಟೆ  ವೃತ್ತಿಯಿಂದ ನಿವೃತ್ತರಾಗಿದ್ದಾರೆ. ಆದರೆ,ಪ್ರವೃತ್ತಿ ಅವಿಶ್ರಾಂತ. ಬಗಲು ಚೀಲ ನೇತುಹಾಕಿಕೊಂಡು ಈಗಲೂ ಜನರ ಪದಸಂಗ್ರಹ ನಿರತ.
ಜನಪದ ವಿದ್ವಾಂಸ,ವಿದ್ಯಾರ್ಥಿಪ್ರಿಯ ಅಧ್ಯಾಪಕ ಅಷ್ಟೇ ಅಲ್ಲ. ಅವರಲ್ಲೊಬ್ಬ ಶ್ರೇಷ್ಠ ಗಾಯಕನೂ ಇದ್ದಾನೆ. ಜನರ ಪದಕ್ಕೆ  ಇಂಪು ನೀಡಿ,ದೇಸಿ ಕಂಪನ್ನು ವಿಶ್ವ ವ್ಯಾಪಿ ಗೊಳಿಸಿದ್ದಾರೆ. ಮೂಲ ಮಟ್ಟುಗಳಲ್ಲೇ  ಜನಪದವನ್ನು ಹಾಡಿ ಶ್ರೀಮಂತ ಗೊಳಿಸುತ್ತಿರುವ ಹೊನ್ನಾರುತಂಡದ ರೂವಾರಿಯೂ ಹೌದು. ಈ ತಂಡ ಅಮೆ ರಿಕದ ಚಿಕಾಗೋದಲ್ಲಿ ನಡೆದ ೫ನೇ ಅಕ್ಕ ಸಮ್ಮೇಳನದಲ್ಲಿ ಹಾಡಿದ್ದು ವಿಶೇಷ.ಮೂಲ ಮಟ್ಟುಗಳಲ್ಲಿ ಹಾಡಿದ ಕ್ಯಾಸೆಟ್‌ಗಳೂ ಜನಪ್ರಿಯ. 

ವರ್ಷದ ಹಿಂದೆ ಅವರ ಶಿಷ್ಯರು, ಅಭಿಮಾನಿಗಳು ಸಾವಿರ ಪುಟಗಳ ಅಭಿನಂದನಾ ಗ್ರಂಥ ಜಾನಪದ ಜೋಗಿಯನ್ನು ಕಟ್ಟಿ, ಸಮರ್ಪಿಸಿದ್ದಾರೆ. ಜೋಗಿಪದಕ್ಕೆ ಅನ್ವರ್ಥವಾಗೇ  ಜನಪದ ಕ್ಷೇತ್ರದಲ್ಲಿ ಅವರು ಕಾರ‍್ಯಶೀಲರು. ಜನಪದ ಕಲಾಶಾಲೆಯೊಂದನ್ನು ಕಟ್ಟಬೇಕೆಂಬುದು ಅವರ ಮಹದಾಸೆ.
ಈಗ  ತವರೂರು ಪಿರಿಯಾಪಟ್ಟಣದಲ್ಲಿ ನಡೆಯುತ್ತಿರುವ ಜಿಲ್ಲಾ ಸಾಹಿತ್ಯ ಸಮ್ಮೇಳನದ  ಸರ್ವಾಧ್ಯಕ್ಷ ಸ್ಥಾನದ ಗೌರವ. ತಾಲೂಕಿನ ಪ್ರತಿ ಹಳ್ಳಿಯನ್ನು ಅಲೆದು, ಜನಪದವನ್ನು ಸಂಗ್ರಹಿಸಿರುವ  ಅವರಿಗೆ  ಇದು ಅರ್ಹ ಗೌರವ. 

ಸಮ್ಮೇಳನಾಧ್ಯಕ್ಷರಾಗಿರುವ  ಖುಷಿಯಲ್ಲಿ ಅವರು ವಿಜಯ ಕರ್ನಾಟಕದ ಜತೆ ಮುಕ್ತ ವಾಗಿ ಮಾತನಾಡಿದ್ದಾರೆ. ಸಹಜವಾಗಿಯೇ ಮಾತೆಲ್ಲ ಜನಪದವಾಗಿದೆ. ಈ ಕ್ಷೇತ್ರದ ಕುರಿತ ಕಾಳಜಿ,ಕಳಕಳಿಗಳು ವ್ಯಕ್ತವಾಗಿವೆ.

ಕನ್ನಡ-ಜನಪದ ಸಮಾನ ದುಃಖ

-
ಕನ್ನಡ ಭಾಷೆ ಮತ್ತು ಜನಪದದ್ದು ಸಮಾನ ದುಃಖ. ಎರಡರ ದುರ್ಗತಿಯೂ ಒಂದೇ ಥರ. ಆಧುನಿಕತೆಯ ಅಬ್ಬರದಲ್ಲಿ ಎಲ್ಲವನ್ನೂ ಕಳೆದುಕೊಳ್ಳುತ್ತಿದ್ದೇವೆ. ಕಬಳಿಕೆ ಮಾಧ್ಯಮಗಳು ಜನಪದವನ್ನು ಪರಿಷ್ಕರಿಸಿ ಧನಪದ ವನ್ನಾಗಿಸಿವೆ. ಉಳಿಸಿ ಕೊಳ್ಳಲು ಏನು ಮಾಡಬೇಕು ಎನ್ನುವುದೇ ಗೊಂದಲಕಾರಿ.ಇದೇ ಸ್ಥಿತಿ ಮುಂದುವರಿದರೆ ಫೋಕ್ಲೋರ್ ಜೋಕ್ಲೋರ್ಆಗುವ ಅಪಾಯವಿದೆ.
-
ಕನ್ನಡಕ್ಕೆ ಮನ,ಮನೆ ಮುಚ್ಚುತ್ತಿದೆ. ಕನ್ನಡ ಮೇಷ್ಟ್ರುಗಳ ಮಕ್ಕಳೂ ಅಮೆರಿಕ  ಪಾಲಾಗುತ್ತಿದ್ದಾರೆ. ಕೇಳಿದರೆ, ಅವರವರ ಆಯ್ಕೆಎಂದು ತೇಲಿಸುತ್ತಾರೆ. ಇಂಥ ಸಮಯ ಸಾಧಕ ಕನ್ನಡ ಪ್ರೇಮ ದುರ್ದೈವ. ಶ್ರೀಮಂತರು,ಶಿಷ್ಟರಿಗೆ ಇಂಗ್ಲಿಷ್ ಶಿಕ್ಷಣ, ಬಡವರು,ದುರ್ಬಲರಿಗೆ  ಮಾತ್ರ ಕನ್ನಡ ಎನ್ನುವುದು ಈಗಿನ ಸ್ಥಿತಿ. ಇದು ಬದಲಾಗಿ,ಎಲ್ಲರಿಗೂ ಸಮಾನ ಶಿಕ್ಷಣ ವ್ಯವಸ್ಥೆ ಜಾರಿ ಆಗದಿದ್ದರೆ  ಕನ್ನಡವನ್ನು ಉಳಿಸಿಕೊಳ್ಳುವುದು ಅಸಾಧ್ಯ.


ಜನಪದಉಳಿಸಿ,ಬೆಳೆಸಲು ...

-
ಶ್ರೇಷ್ಠ ಜನಪದ ಗಾಯಕರನ್ನು ಗುರುತಿಸಿ,ನಾಡಿನ ವಿವಿಧೆಡೆ ನಿರಂತರ ಕಾರ‍್ಯಕ್ರಮ ಏರ್ಪಡಿಸಬೇಕು.ಆಕಾಶವಾಣಿ,ದೂರದರ್ಶನಗಳಲ್ಲಿ ಹೆಚ್ಚು ಅವಕಾಶ ಅಗತ್ಯ. ಕಲಾವಿದರಿಗೆ ಒಂದಷ್ಟು ನೆರವು,ಗೌರವ  ನೀಡಿದರಷ್ಟೇ ಸಾಲದು.
-
ತಾಲೂಕು ಅಥವಾ ಜಿಲ್ಲೆಗೊಂದು ಜನಪದ ವಿದ್ಯಾಸಂಸ್ಥೆ  ಸ್ಥಾಪನೆ ಸೂಕ್ತ. ಜನಪದ ಅಕಾಡೆಮಿ ತಾಲೂಕು,ಜಿಲ್ಲಾಮಟ್ಟದ ಸಂಘ ಸಂಸ್ಥೆಗಳ  ಸಹಯೋಗದಲ್ಲಿ ಜನಪದ ಗೀತ ಗಾಯನ ತರಬೇತಿ ಶಿಬಿರ  ಏರ್ಪಡಿಸಬೇಕು.ಶಾಲಾ ಕಾಲೇಜುಗಳಲ್ಲಿ ಜನಪದ ಸಂಗೀತದ ಕಲಿಕೆ ಕಡ್ಡಾಯವಾಗಬೇಕು.ಮೂಲ ಮಟ್ಟುಗಳಲ್ಲಿ ಹಾಡುವವರನ್ನೇ  ಸಂಪನ್ಮೂಲ ವ್ಯಕ್ತಿಗಳನ್ನಾಗಿ ಕರೆಸಬೇಕು. ಮೂಲವನ್ನು ಅನುಕರಿಸುವ ಸಮರ್ಥರನ್ನೇ ಕಲಿಕಾರ್ಥಿಗಳನ್ನಾಗಿ ಆಯ್ಕೆ ಮಾಡಬೇಕು.
-
ಪ್ರತಿ ಜಿಲ್ಲೆಯಲ್ಲೂ ಜನಪದ ವಸ್ತುಸಂಗ್ರಹಾಲಯ ಸ್ಥಾಪಿಸ ಬೇಕು. ಮೌಖಿಕ,ಭೌತಿಕ ಸಂಸ್ಕೃತಿಗೆ ಸಂಬಂಧಿಸಿದ ವಸ್ತು, ಪ್ರದರ್ಶನಾತ್ಮಕ ಕಲೆಗಳನ್ನೆಲ್ಲ ಇಲ್ಲಿ ಸಂರಕ್ಷಿಸಬೇಕು. ಪ್ರದರ್ಶನಾತ್ಮಕ ಕಲೆಗಳ ತರಬೇತಿ ಕೇಂದ್ರ ಮತ್ತು ಜನಪದ ಅಧ್ಯಯನ ಕೇಂದ್ರ ವಾಗಿಯೂ ಕೆಲಸ ಮಾಡಬೇಕು. ಜನಪದ ಜೀವನದ ಸತ್ವ ಮತ್ತು ತತ್ತ್ವಗಳು ಮಾನವ  ಪ್ರೀತಿಯ ಸಂವರ್ಧನೆಗೆ ನೆರವಾಗುವ ಬಗೆಯನ್ನು ಕಲಿಸಬೇಕು.ಇದರಿಂದ ಜಾನಪದದಲ್ಲಿ ನಿರಂತರ ಜೀವಂತಕ್ಕೆ ಕಾಪಿಟ್ಟುಕೊಳ್ಳುವುದು ಸಾಧ್ಯ.

ಮೂಲ ಮಟ್ಟು ಇತ್ಯಾದಿ...

-
ಜನಪದ ಸಂಗೀತದ ಮೂಲಮಟ್ಟುಗಳಲ್ಲಿ ಮಾರ್ಪಾಡು  ಅಪಾಯಕಾರಿ. ಕಾಯಕ ಸಂಬಂಧಿ ಗೀತೆಗಳು ಆಯಾ ಕಾಯಕಕ್ಕೆ ಹೊಂದುವ ಮಟ್ಟು,ತಾಳಗಳಲ್ಲಿರುತ್ತವೆ. ಮಾರ್ಪಾಡಾದರೆ ಮಟ್ಟಿಗೆ ಧಕ್ಕೆ. ಸ್ವಲ್ಪ ಅವಕಾಶ ಕೊಟ್ಟರೂ ಮೂಲವನ್ನು ಪೂರ್ಣ ವಾಗಿ ಕೈಬಿಡುವ ಅಪಾಯ. ಶಾಸ್ತ್ರೀಯ ಸಂಗೀತದಂತೆಯೇ ಜನಪದ ಸಂಗೀತಕ್ಕೂ ತನ್ನ ತನದ ಅಗತ್ಯವಿದೆ. ಜನಪ್ರಿಯತೆ ಯೊಂದೇ ಶ್ರೇಷ್ಠತೆಯ ಮಾನದಂಡವಾಗಬಾರದು. ಆದ್ದರಿಂದ ಮೂಲ ಕಲಾವಿದರಿಗೆ ತಮ್ಮ ಅನನ್ಯತೆಯನ್ನು ಉಳಿಸಿಕೊಳ್ಳ ಬೇಕಾದ ಬಗ್ಗೆ ಅರಿವು ಮೂಡಿಸುವ ಕಾರ‍್ಯಕ್ರಮ ಹಮ್ಮಿಕೊಳ್ಳ ಬೇಕು.

ವಾದ್ಯ,ಪರಿಕರ ವಿಶೇಷ...

ವಿಶೇಷ ವಾದ್ಯಗಳಿಂದಲೇ ವೃತಿ ಗಾಯಕರ ಪ್ರತಿ ತಂಡ ತಮ್ಮದೇ ವೈಶಿಷ್ಟ್ಯವನ್ನು ಉಳಿಸಿಕೊಂಡಿವೆ. ಆದ್ದರಿಂದ ಜನಪದ ಗಾಯಕರಿಗೆ ಶಿಷ್ಟ ವಾದ್ಯಗಳ ಅಗತ್ಯವಿಲ್ಲ. ಬಳಸಿದರೆ ಕಲಸು ಮೇಲೋಗರವಾಗಿ ಸಂಪ್ರದಾಯ ವೈಶಿಷ್ಟ್ಯ ನಾಶವಾಗುತ್ತದೆ. ಕ್ಯಾಸೆಟ್‌ಗಳಲ್ಲಿ ಹಾಡಿದ ಹೆಚ್ಚಿನ ಗಾಯಕರು ಇಂಥ ಸ್ಥಿತಿಗೆ ಕಾರಣವಾಗಿದ್ದು, ಗೀತೆಗಳನ್ನು ಮೂಲ ರೂಪದಲ್ಲಿ ತೋರಿಸು ವಲ್ಲಿ ಸೋತಿದ್ದಾರೆ. 
-
ಅನಾಹುತ,ಅಚಾತುರ್ಯಗಳ ಕಲ್ಪನೆ ಇಲ್ಲದ ಹವ್ಯಾಸಿ ಗಾಯಕರು, ಸಿನಿಮಾ ಮಂದಿ ಜನಪದ ಗೀತೆಗಳನ್ನು ಜನಪ್ರಿಯ ಗೊಳಿಸುತ್ತಿದ್ದೇವೆಎಂದು ಬೀಗುತ್ತಿದ್ದಾರೆ. ವಾಸ್ತವವಾಗಿ ಇದು ಜನಪದ ಸಂಗೀತದ ವಿಕೃತಿ.ಮೂಲಕ್ಕೆ ಹೊನ್ನ ಶೂಲ‘ !

ಪ್ರಸ್ತುತದ ಸಂಶೋಧನೆ ಕುರಿತು...

-
ಸ್ನಾತಕೋತ್ತರ ತರಗತಿಗಳಲ್ಲಿ ಜನಪದ ಅಧ್ಯಯನ  ಪ್ರಾರಂಭ ವಾದ ನಂತರ  ಸಂಶೋಧನೆಗೆ ನೂರಾರು ವಿಷಯಗಳು ಗೋಚರಿಸುತ್ತಿವೆ ಎನ್ನುವುದು ನಿಜ. ಆದರೆ,ವಿದ್ವತ್ತು, ಕ್ಷೇತ್ರಕಾರ‍್ಯ, ಚಿಂತನ ಶೀಲತೆಗಳ ಕೊರತೆಯ ಕಾರಣಕ್ಕೆ ಡಾಕ್ಟರೇಟ್ ಪ್ರಬಂಧ ಗಳು ಪೇಲವವಾಗುತ್ತಿವೆ. ಮಾರ್ಗದರ್ಶಕರು, ತೀರ್ಪುಗಾರರ  ತಜ್ಞತೆಯೂ ಅನುಮಾನಾರ್ಹ. ವಿದ್ಯಾರ್ಥಿಗಳು ನೀಡಿದ ತಪ್ಪು ಉಲ್ಲೇಖಗಳನ್ನೇ  ‘ತಜ್ಞರು ಅನುಮೋದಿಸಿದ ಉದಾಹರಣೆ ಗಳೂ ಇವೆ. 
-
ಜಾತಿ ಮತ್ತಿತರ ಕಾರಣದಿಂದ ಅನಾರೋಗ್ಯಕರ ವರ್ತುಲ ಗಳೂ  ಸೃಷ್ಟಿಯಾಗುತ್ತಿವೆ. ಪ್ರಬಂಧಗಳು ಬೂಸಾ ಬೆಟ್ಟದಂತೆ ಬೆಳೆದರೆ ಪ್ರಯೋಜನವಿಲ್ಲ. ಸತ್ವಪೂರ್ಣ, ಸತ್ಯನಿಷ್ಠ  ಸಂಶೋಧನೆ ಗಳ ಅಗತ್ಯವಿದೆ. ಇದಕ್ಕೆ ಶುದ್ಧ ಮನಸ್ಸಿನ  ಸಂಶೋಧನಾ ವಿದ್ಯಾರ್ಥಿಗಳು, ತಜ್ಞ ಮಾರ್ಗದರ್ಶಕರ ಅಗತ್ಯವೂ ಇದೆ.

ಜನಪದ  ಒಡನಾಟ

-
ಜನಪದದ ಒಡನಾಟ,ನಿರಂತರ ತಿರುಗಾಟದಿಂದ ನಷ್ಟವಾಗಿ ದ್ದೇನೂ ಇಲ್ಲ. ಈ ಕ್ಷೇತ್ರ ಕಾರ‍್ಯದಲ್ಲಿ ದಕ್ಕಿದ  ಸುಖ,ಸಂತೋಷ, ಸಂತೃಪ್ತಿ ಎಷ್ಟೇ ಹಣ ಕೊಟ್ಟರೂ  ಸಿಗಲಾರದಷ್ಟು. ಇಂಥ ಪಾರಮಾರ್ಥಿಕ  ಸುಖವೇ ನಿಜವಾದ ಸುಖ ಎಂದು ಭಾವಿಸಿದ ವನು ನಾನು.
-‘
ಜನಪದ ಮಹಾಭಾರತ ಜನಪದರಲ್ಲಿ ಇದೆ ಎಂಬ ಕಲ್ಪನೆಯೇ ಇರಲಿಲ್ಲ. ನಿರಂತರ ಕ್ಷೇತ್ರಕಾರ‍್ಯದಿಂದ ಮಾತ್ರ ಇಂಥ ಅಗೋಚರ  ಸಂಗತಿಗಳು ಬೆಳಕಿಗೆ ಬರುತ್ತವೆ. ಸಾಧ್ಯವಾದಷ್ಟು ಜನಪದ ಸಾಮಗ್ರಿಯನ್ನು ಸಂಗ್ರಹಿಸಿಕೊಳ್ಳುವ ಕೆಲಸ  ಜರೂರಾಗಿ ನಡೆಯಬೇಕು. ಇಲ್ಲವೇ  ಈಗ ಆಗಿರುವ ನಷ್ಟದ ಜತೆಗೆ ಇನ್ನಷ್ಟನ್ನು ಕಳೆದುಕೊಳ್ಳುತ್ತೇವೆ. ಎಲ್ಲವನ್ನೂ ಹಾಳುಮಾಡಿದ ಮೇಲೆ ಕಳೆದುಕೊಂಡದ್ದನ್ನು ಉಳಿಸಿಕೊಳ್ಳಬೇಕಿತ್ತು ಎಂದು ಹಳಹಳಿಸಿದರೆ ಏನೂ ಪ್ರಯೋಜನವಿಲ್ಲ.




ಕಾಮೆಂಟ್‌ಗಳಿಲ್ಲ: