ಶನಿವಾರ, ಫೆಬ್ರವರಿ 25, 2012

ಮಕ್ಕಳ ಮೊಹರಂ

-ಅರುಣ್ ಜೋಳದಕೂಡ್ಲಿಗಿ

ಮೊಹರಂ ಕರ್ನಾಟಕದ ಬಹುಭಾಗಗಳಲ್ಲಿ ಆಚರಣೆಗೊಳ್ಳುವ ವರ್ಣನಾತ್ಮಕ ಹಬ್ಬ. ಹಲವು ಕಡೆ ಧರ್ಮ ಜಾತಿಗಳ ಹಂಗು ತೊರೆದು ಈ ಆಚರಣೆಯಲ್ಲಿ ಜನ ಪಾಲ್ಗೊಳ್ಳುತ್ತಾರೆ. ಮೂಲತಃ ಇದು ಶೋಕದ ಮೂಲಕ ಹುತಾತ್ಮರ ನೆನಪಿಸಿಕೊಳ್ಳುವ ಆಚರಣೆ. ಆದರೆ ಇದು ಕಾಲಾನಂತರದಲ್ಲಿ ಸಂಭ್ರಮದ ಆಚರಣೆಯಾಗಿ ಬದಲಾಗಿದೆ.

ಮೊಹರಂ ಕಡೆಯ ದಿನದ ನಂತರದ ವಾರ ಚಿಕ್ಕ ಮೊಹರಂ ಎನ್ನುವ ಹಬ್ಬವನ್ನು ಆಚರಿಸಲಾಗುತ್ತದೆ. ಇದನ್ನು ಮರಿ ಮೊಹರಂ ಅಂತಲೂ, ಚಿಕ್ಕ ಜಲದಿ ಅಂತಲೂ ಕರೆಯುತ್ತಾರೆ. ಇದು ಮಕ್ಕಳದೇ ಮೊಹರಂ. ಮಕ್ಕಳೇ ದೇವರು ಕೂರಿಸಿ, ಮಕ್ಕಳೇ ಪೂಜಿಸಿ, ಕೊನೆಗೆ ಅವರೇ ದೇವರನ್ನು ನೀರಿಗೆ ಹಾಕುವಂತಹ ಆಚರಣೆ. ನಿಜಕ್ಕೂ ಮಕ್ಕಳು ಈ ಹಬ್ಬದಲ್ಲಿ ಅತ್ಯಂತ ಖುಷಿ ಮತ್ತು ಸಂಭ್ರಮದಿಂದ ಪಾಲ್ಗೊಳ್ಳುತ್ತಾರೆ.

ಮೊಹರಂ ಹಬ್ಬದ ಲಕ್ಷಣಗಳು ಮಕ್ಕಳು ಸಹಜವಾಗಿ ಭಾಗವಹಿಸುವಂತೆ ಮಾಡುತ್ತವೆ. ಅದಕ್ಕೆ ಕಾಕತಾಳೀಯವಾಗಿ ಚಾರಿತ್ರಿಕ ಸಂಗತಿಗಳು ಇಲ್ಲದಿಲ್ಲ. ಔರಂಗಜೇಬನ ಬಗ್ಗೆ ಇಂಥದ್ದೊಂದು ಐತಿಹ್ಯವಿದೆ. ಔರಂಗಜೇಬನು ಶೋಕಾಚರಣೆಯ ಹಬ್ಬವನ್ನು ಸಂಭ್ರಮದಿಂದ ಆಚರಿಸುವುದು ಬೇಡ ಎಂದು ನಿಷೇದಾಜ್ಞೆ ಹೊರಡಿಸುತ್ತಾನ. ಇದಾದ ಒಂದು ವಾರದ ನಂತರ ಔರಂಗಜೇಬನು ರಾಜ ಪರಿವಾರದ ಜತೆ ಹೊರಗೆ ಹೊರಟಾಗ, ಮೈದಾನದಲ್ಲಿ ಮಕ್ಕಳು ಆಟವಾಡುತ್ತಿದ್ದರಂತೆ, ಆ ಚಿತ್ರ ರಾಜನಿಗೆ ರಣರಂಗದಂತೆಯೂ, ಮಕ್ಕಳು ಆಟವಾಡುವುದು ಯುದ್ಧದ ಸನ್ನಿವೇಷದಂತೆಯೂ, ರಕ್ತ ಚೆಲ್ಲಾಡಿ ರುಂಡ ಮುಂಡಗಳು ಬಿದ್ದಿರುವಂತೆ ಕಂಡು ಬೆಕ್ಕಸ ಬೆರಗಾದನಂತೆ.

ಔರಂಗಜೇಬನು ಆಶ್ಚರ್ಯವಾಗಿ ‘ಇದೇನು ನನಗೆ ಗೊತ್ತಿಲ್ಲದೆ ಯುದ್ಧವೊಂದು ನಡೆಯುತ್ತಿದೆ’ಎಂದು ಮಂತ್ರಿಗಳನ್ನು ಕೇಳಿದ. ಮಂತ್ರಿಗಳಿಗೆ ಆಟದ ಮೈದಾನದಲ್ಲಿ ಮಕ್ಕಳು ಲಗೋರಿ ಆಡುವುದು ಮಾತ್ರ ಕಾಣುತ್ತಿತ್ತು. ಆಗ ಅವರುಗಳು ಅಚ್ಚರಿಗೊಂಡು ‘ಪ್ರಭುಗಳೆ ನಮಗೆ ಮೈದಾನದಲ್ಲಿ ಮಕ್ಕಳು ಲಗೋರಿ ಆಡುವುದು ಮಾತ್ರ ಕಾಣಿಸುತ್ತಿದೆ. ಇದೇನು ನೀವು ಹೀಗೆ ಹೇಳುತ್ತೀರಿ’ ಎನ್ನುತ್ತಾರೆ. ಆಗ ರಾಜನು ವಿಚಲಿತವಾಗಿ ಅರಮನೆಗೆ ಹೋಗಿ ಮಂತ್ರಿಗಳನ್ನು ಕರೆಸಿ, ಹೀಗೆ ಕಾಣಲು ಕಾರಣವೇನು ಎಂದು ಕೇಳಿದಾಗ, ಇದು ಮೊಹರಂ ಹಬ್ಬವನ್ನು ನಿಷೇದಿಸಿದ್ದರ ಪರಿಣಾಮವಿರಬೇಕು ಎಂದು ಅಭಿಪ್ರಾಯ ಪಡುತ್ತಾರೆ.


ಇದನ್ನರಿತ ಔರಂಗಜೇಬನು ಮತ್ತೆ ಮೊಹರಂ ಆಚರಿಸುವಂತೆ ಆಜ್ಞೆ ಹೊರಡಿಸಲು ಸಿದ್ದವಾಗುತ್ತಾನೆ. ಆಗ ಮಂತ್ರಿಗಳು ಪ್ರಭುಗಳೆ ಮೊಹರಂ ನ್ನು ಯಾವಾಗೆಂದರೆ ಆವಾಗ ಮಾಡಲು ಬರುವುದಿಲ್ಲ, ಈಗ ಮೊಹರಂ ಹಬ್ಬವನ್ನು ಮಾಡಲು ಆಗದು, ಬೇಕಾದರೆ ಮಕ್ಕಳಿಗಾಗಿ ಚಿಕ್ಕ ಮೊಹರಂ ಎಂದು ಮಾಡಬಹುದು ಎಂದು ಸಲಹೆ ನೀಡುತ್ತಾರೆ. ರಾಜ ಹಾಗೆಯೆ ಆಗಲಿ ಎಂದನಂತೆ. ಅಂದಿನಿಂದ ರಾಜಾಜ್ಞೆಯಂತೆ ಮಕ್ಕಳ ಮೊಹರಂ ಚಾಲ್ತಿಗೆ ಬಂತಂತೆ. ಇದೊಂದು ಐತಿಹ್ಯವಷ್ಟೆ. ಆದರೆ ಇದು ಮಕ್ಕಳ ಮೊಹರಂಗೆ ಒಂದು ಚಾರಿತ್ರಿಕ ಘಟನೆಯನ್ನು ಜೋಡಿಸುತ್ತದೆ. ಕರ್ನಾಟಕದ ಬಹುಭಾಗಗಳಲ್ಲಿ ಈಗಲೂ ಮಕ್ಕಳ ಮೊಹರಂ ಆಚರಣೆಯಲ್ಲಿದೆ.

ಬಳ್ಳಾರಿ ಜಿಲ್ಲೆಯಲ್ಲಿ ಮೊಹರಂ ಹಬ್ಬದಲ್ಲಿ ಬೇಡರಕಣ್ಣಪ್ಪನ ವೇಷ ಹಾಕುವ ಪರಂಪರೆ ಇದೆ. ಇಲ್ಲಿ ಬೇಡರ ಕಣ್ಣಪ್ಪನ ವೇಷದಾರಿ ಬೆನ್ನಿಗೆ ಮಗುವೊಂದನ್ನು ಕಟ್ಟಿಕೊಂಡು, ಎದುರಿನ ಹುಲಿಗಳನ್ನು ಕತ್ತಿ ಹಿಡಿದು ಹೆದರಿಸುತ್ತಿರುವ ಕುಣಿತವೊಂದಿದೆ. ಅದು ಯಾಕೆಂದು ವಿಚಾರಿಸಿದರೆ ಸಿಕ್ಕ ಕಥನ ಕುತೂಹಲ ಮೂಡಿಸುವಂತಿದೆ.

ಕರ್ಬಲಾದಲ್ಲಿ ಯುದ್ಧ ನಡೆದು ಹುಸೇನನ ಮಗುವೊಂದು ಯುದ್ಧದಲ್ಲಿ ಯಜೀದನ ಕಡೆಯ ಸೈನಿಕರಿಂದ ತಪ್ಪಿಸಿಕೊಂಡು ಕಾಡಲ್ಲಿ ಓಡಿ ಬರುತ್ತದೆಯಂತೆ, ಆಗ ಕಾಡಲ್ಲಿ ಬೇಟೆಯಾಡಿಕೊಂಡಿರುವ ಬೇಡರ ಕಣ್ಣಪ್ಪನು ಆ ಮಗುವನ್ನು ಎತ್ತಿಕೊಂಡು ನೀರು ಕುಡಿಸುತ್ತಾನಂತೆ, ಅಷ್ಟೊತ್ತಿಗೆ ಬೆನ್ನಟ್ಟಿಕೊಂಡು ಬಂದ ಯಜೀದನ ಸೈನಿಕರು ಮಗುವನ್ನು ಬಿಟ್ಟುಕೊಡು ಎಂದು ಕೇಳುತ್ತಾರೆ. ಇದನ್ನರಿತ ಬೇಡರ ಕಣ್ಣಪ್ಪ ಮಗುವನ್ನು ಕೊಡಲು ನಿರಾಕರಿಸಿ, ಈ ಮಗು ನನ್ನ ಆಶ್ರಯದಲ್ಲಿದೆ ಹಾಗಾಗಿ ಈ ಮಗುವನ್ನು ರಕ್ಷಿಸಬೇಕಾದುದು ನನ್ನ ಧರ್ಮ. ನಾನು ನಿಮ್ಮೊಂದಿಗೆ ಯುದ್ಧ ಮಾಡುತ್ತೇನೆಂದು ಹೇಳುತ್ತಾನೆ. ಆಗ ಮಗುವನ್ನು ಬೆನ್ನಿಗೆ ಕಟ್ಟಿಕೊಂಡು ಅವರೊಂದಿಗೆ ಕಾದಾಡಿ ಮಗುವನ್ನು ರಕ್ಷಿಸಿದನಂತೆ. ಈ ನೆನಪನ್ನು ಈಗಿನ ಬೇಡರಕಣ್ಣಪ್ಪನ ವೇಷ, ಕುಣಿತ ಅಡಗಿಸಿಕೊಂಡಂತಿದೆ. ಕರ್ನಾಟಕದಲ್ಲಿ ಬೇಡ ಸಮುದಾಯ ಮೊಹರಂ ಆಚರಿಸಲು ಇರುವ ಕಾರಣಗಳಲ್ಲಿ ಈ ಕಥೆಯೂ ಒಂದೆನ್ನುತ್ತಾರೆ.

ಹೀಗೆ ಮೊಹರಂ ನಲ್ಲಿ ಮಕ್ಕಳು ಸಾಂಕೇತಿಕವಾಗಿಯೂ, ಸಹಜವಾಗಿಯೂ ಭಾಗಿಯಾಗುತ್ತಾರೆ. ಮೊಹರಂ ಹಬ್ಬದಲ್ಲಿ ಹುಸೇನನ ಮಕ್ಕಳ ತೊಟ್ಟಿಲನ್ನು ಇಟ್ಟಿರುತ್ತಾರೆ. ಈ ತೊಟ್ಟಿಲಿಗೆ ಮಕ್ಕಳನ್ನು ಹಾಕುವ ಆಚರಣೆಯೂ ಇದೆ. ಇನ್ನು ಕೆಲವೆಡೆ ಹಸೇನ್ ಹುಸೇನ್ ದೇವರುಗಳ ಜತೆ ಭೀಭಿ ಪಾತೀಮಳನ್ನೂ ಮಕ್ಕಳಾದ ಕಾಸಿಂಪೀರಾ, ಅಬ್ಬಾಸ್‌ಅಲಿ, ಮುಂತಾದ ಸಣ್ಣದೇವರು ಅಥವಾ ಕವಡೆ ಪೀರಾಗಳನ್ನು ಕೂರಿಸುವ ಪರಂಪರೆಯೂ ಇದೆ.

ಮೊಹರಂ ಹಬ್ಬದ ಪ್ರಯುಕ್ತ ಅಲೆಕುಣಿಗೆ ಗುದ್ದಲಿ ಹಾಕಲಾಗುತ್ತದೆ. ಬಹುಪಾಲು ಈ ಕುಣಿಗಳು ತಿರುಗಿದ ಪಿರಮಿಡ್ಡಿನ ಆಕಾರದಲ್ಲಿರುತ್ತವೆ. ಆಗ ಮಕ್ಕಳು ಇದರಲ್ಲಿ ಓಟ ಶುರು ಮಾಡಿಕೊಳ್ಳುತ್ತಾರೆ. ಓಡುವುದು, ಓಡುವವರನ್ನು ಎಳೆದು ಬೀಳಿಸುವುದು, ತಾವೂ ಬಿದ್ದು ಮೈಯೆಲ್ಲಾ ಬೂದಿ ಮಾಡಿಕೊಳ್ಳುವುದು ಹೀಗೆ ತುಂಬಾ ಲವಲವಿಕೆಯಿಂದ ಕೂಡಿರುತ್ತದೆ. ನಾನು ಉಜ್ಜಯನಿಯಲ್ಲಿ ಐದು ಆರನೆ ತರಗತಿ ಓದುವಾಗ, ಶಾಲೆಯ ಎದುರು ಮಸೀದಿಯಿದ್ದ ಕಾರಣ, ಅದರ ಮುಂದೆಯೇ ಅಲೆ ಕುಣಿ ಇರುತ್ತಿತ್ತು. ಈ ಹಬ್ಬ ಮುಗಿಯುವ ತನಕ ಮೇಷ್ಟ್ರು ಇಲ್ಲವೆಂದರೆ ಸಾಕು ನಾವು ಅಲೆಕುಣಿಗೆ ಜಿಗಿದು ತಿರುಗುತ್ತಿದ್ದೆವು. ಹೀಗೆ ತಿರುಗಿ ತಿರುಗಿ ತಲೆ ಸುತ್ತು ಬಂದಾಗ ಸಾರಾಯಿ ಕುಡಿದವರಂತೆ ಓಲಾಡುತ್ತಾ ಗೆಳೆಯರನ್ನು ಚೇಡಿಸುತ್ತಿದ್ದೆವು. ಹೀಗೆ ಅಲೆಕುಣಿಯ ಬಾಲ್ಯದ ನೆನಪುಗಳು ರೋಮಾಂಚನಕಾರಿಯಾಗಿವೆ. ಅಲೆಕುಣಿ ಇರುವ ಊರಿನವರು ಸಹಜವಾಗಿ ಈ ಅದ್ಭುತ ಅನುಭವದಿಂದ ವಂಚಿತರಾಗುವುದು ಕಡಿಮೆಯೆ.



ಇನ್ನು ಮೊಹರಂ ಹಬ್ಬದ ಪ್ರಯುಕ್ತ ಲಾಡಿ (ಕೆಂಪು ಹಳದಿ ದಾರ)ಕಟ್ಟಿಸಿಕೊಳ್ಳುವ ಆಚರಣೆ ಇರುತ್ತದೆ. ಈ ಲಾಡಿಯನ್ನು ಕರುಳಿಗೆ ಹೋಲಿಸುವ ಕಥೆಗಳೂ ಇವೆ. ಸಾಮಾನ್ಯವಾಗಿ ಮಕ್ಕಳಿಗೆ ಲಾಡಿ ಕಟ್ಟಿಸುತ್ತಾರೆ. ಹೀಗೆ ಲಾಡಿ ಕಟ್ಟಿಸಿಕೊಂಡ ಮಕ್ಕಳು ಕನಿಷ್ಟ ಐದು ಮನೆಗಾದರೂ ಹೋಗಿ ಭಿಕ್ಷೆ ಬೇಡಬೇಕೆಂಬ ಪದ್ದತಿ ನಮ್ಮೂರಿನಲ್ಲಿದೆ. ಆಗ ಮಕ್ಕಳು ಗುಂಪು ಕಟ್ಟಿಕೊಂಡು ಮನೆ ಮನೆಗೆ ಹೋಗಿ ‘ಎಮಲೋಮ್ ಎಮಲೋಮ್ ದುಯ್’ ಎನ್ನುವ ಮೂಲಕ ಭಿಕ್ಷೆ ಬೇಡುತ್ತಾರೆ. ಹೀಗೆ ಭಿಕ್ಷೆ ಬೇಡುವುದನ್ನು ಮಕ್ಕಳು ಆಟದಂತೆ ಸಂಭ್ರಮಿಸುತ್ತಾರೆ. ಮಕ್ಕಳು ಊರಾಡಿ ಬಂದ ಕಾಳಲ್ಲಿ ಕಡುಬು ಮಾಡುವುದು, ಅಥವಾ ಆ ಕಾಳನ್ನು ಅಂಗಡಿಯಲ್ಲಿ ಮಾರಿ ಸಕ್ಕರೆಯನ್ನೋ..ಬೆಲ್ಲವನ್ನೋ ಕೊಂಡು ಜನರಿಗೆ ಹಂಚುವುದು ಮಾಡುತ್ತಾರೆ. ಈ ಹಬ್ಬದಲ್ಲಿ ಹಾಕುವ ಸಿದ್ದಕಿ ಸಿದ್ದಿ, ಪೀರ, ಕಳ್ಳಳ್ಳಿ ಬುವ್ವ, ಕರಡಿ, ಹುಲಿ, ಮುಂತಾದ ವೇಷಗಳು ಕುಣಿಯುವಾಗ ಮಕ್ಕಳ ಹಿಂಡು ಕೇಕೆ ಹಾಕುತ್ತಲೂ, ಬೆರಗಿನಿಂದ, ಭಯದಿಂದ ವೀಕ್ಷಿಸುತ್ತಲೂ ನಲಿಡಾಡುತ್ತದೆ.

ಮಕ್ಕಳು ಅನಾರೋಗ್ಯಕ್ಕೆ ತುತ್ತಾದಾಗ, ಅವರು ಗುಣಮುಖವಾಗಲಿ ಎಂದು ಮೊಹರಂ ದೇವರುಗಳಲ್ಲಿ ಹರಕೆ ಹೋರುವ ಪದ್ದತಿಯೊಂದಿದೆ. ಈ ಹರಕೆಗಳು ನಾನಾ ವಿಧವಾಗಿವೆ. ಚಿಕ್ಕ ಮಕ್ಕಳಿಗೆ ಹುಲಿ ವೇಷ ಹಾಕಿಸುವುದಾಗಿಯೂ, ಮಕ್ಕಳ ತೂಕದಷ್ಟು ಬೆಲ್ಲ, ತೆಂಗಿನ ಕಾಯಿ ಕೊಡುವುದಾಗಿಯೂ, ಫಕೀರರನ್ನಾಗಿಸುವುದಾಗಿಯೂ ಪ್ರಾದೇಶಿಕವಾಗಿ ನಾನಾ ಹರಕೆಗಳಿರುತ್ತವೆ. ಈ ಹರಕೆ ತೀರಿಸಲು ಮಕ್ಕಳನ್ನು ಪುಟ್ಟ ಹುಲಿಗಳನ್ನಾಗಿಯೂ, ಫಕೀರರನ್ನಾಗಿಯೂ ಮಾಡುತ್ತಾರೆ. ಇದನ್ನು ಮಕ್ಕಳು ಆಟದಂತೆ ಸಂಭ್ರಮಿಸುತ್ತಾರೆ. ಹೀಗೆ ಮಕ್ಕಳ ಹರಕೆಯನ್ನು ತೀರಿಸುವುದೇ ಹೆಚ್ಚಿರುವ ಕಾರಣ ಮೊಹರಂ ಹಬ್ಬವೇ ಮಕ್ಕಳ ಹಬ್ಬದಂತೆ ಗೋಚರಿಸುತ್ತದೆ.

ಗೌರಿಬಿದನೂರು ತಾಲೂಕಿನ ಅಲಿಪುರದಲ್ಲಿ ಶಿಯಾ ಮುಸ್ಲೀಮರು ಮಾತಂ ಆಚರಣೆ ಮಾಡುವ ಪದ್ದತಿ ಇದೆ. ಇದು ತಲೆಗೆ, ಎದೆಗೆ, ಬೆನ್ನಿಗೆ ಬ್ಲೇಡು ಹಾಕಿಕೊಂಡು ರಕ್ತ ಬರಿಸಿಕೊಂಡು ದುಃಖಿಸುವ ರೀತಿಯದ್ದು. ಅಲ್ಲಿ ಚಿಕ್ಕ ಚಿಕ್ಕ ಮಕ್ಕಳಿಗೂ ಮಾತಂ ಮಾಡುತ್ತಾರೆ. ಆಗ ಮಕ್ಕಳು ಚಿಟ್ಟನೆ ಚೀರಿ ಅಳತೊಡಗುತ್ತವೆ. ಇನ್ನು ಸರಪಣಿ ಬಿಗಿದುಕೊಂಡು ಯುದ್ಧ ಕೈದಿಗಳಾಗುವ ಆಚರಣೆಯೊಂದಿದೆ. ಇದರಲ್ಲಿ ಚಿಕ್ಕ ಮಕ್ಕಳು ಮೈಗೆಲ್ಲಾ ಸರಪಣಿ ಬಿಗಿದುಕೊಂಡು ಅಳುತ್ತಿರುತ್ತವೆ. ಇಲ್ಲಿ ಮಾತ್ರ ಮಕ್ಕಳ ಹರಕೆ ಸಂಭ್ರಮವಾಗದೆ ಹಿಂಸೆಯಂತೆ ಕಾಣುತ್ತದೆ.

ಮೊಹರಂ ಹಬ್ಬ ವಾರಗಟ್ಟಲೆ ಇರುವುದರಿಂದ, ಮಕ್ಕಳಲ್ಲಿ ಈ ಹಬ್ಬದ ಅನುಕರಣೆಯೂ ನಡೆಯುತ್ತದೆ. ಹಬ್ಬದ ನಂತರ ಹೊಸಪೇಟೆ ತಾಲೂಕಿನ ಕಮಲಾಪುರದಲ್ಲಿ ಮಕ್ಕಳು ಉದ್ದನೆಯ ಕೋಲಿಗೆ ಸೀರೆ ಉಡಿಸಿ, ರಟ್ಟಿನ ತುಂಡನ್ನು ಮುಖ ಮಾಡಿ, ಸ್ಲೇಟು, ತಟ್ಟೆಯನ್ನೆ ಹಲಗೆ ಮಾಡಿಕೊಂಡು ಬಾರಿಸುತ್ತಾ ಓಡಾಡುತ್ತಾರೆ. ಅದರಲ್ಲಿ ಕೆಲ ಮಕ್ಕಳು ದೇವರು ಬಂದಂತೆಯೂ, ಕೆಲವರು ಪೂಜಾರಿಗಳಂತೆಯೂ ನಟಿಸುತ್ತಾರೆ. ಹೀಗೆ ಬೇರೆ ಬೇರೆ ಓಣಿಯ ಮಕ್ಕಳು ತಮ್ಮ ತಮ್ಮ ದೇವರುಗಳನ್ನು ಒಂದೆಡೆ ತಂದು ಹಸೇನ್ ಹುಸೇನರನ್ನು ಬೇಟಿ ಮಾಡಿಸುವುದೂ ಇರುತ್ತದೆ. ಹೀಗೆ ಹಳ್ಳಿಗಳಲ್ಲಿ ಹಬ್ಬಗಳ ಅನುಕರಣೆಯನ್ನೇ ಆಟಗಳನ್ನಾಗಿಸಿ ಮಕ್ಕಳು ಆಡುವುದನ್ನು ನೋಡಬಹುದು.

ಮಕ್ಕಳು ಮೊಹರಂ ಹಬ್ಬದಲ್ಲಿ ಭಾಗವಹಿಸುವಿಕೆಯನ್ನು ನೋಡಿದರೆ, ಕುವೆಂಪು ಹೇಳುವಂತೆ ವಿಶ್ವಮಾನವರು ಎನ್ನುವ ಸಂದೇಶ ನೆನಪಾಗುತ್ತದೆ. ಹೀಗೆ ಧರ್ಮ ಜಾತಿಯ ಹಂಗು ತೊರೆದು ಒಂದಾಗುವ ಈ ಹಬ್ಬದಲ್ಲಿ ಮಕ್ಕಳು ಭಾಗವಹಿಸುವುದೂ, ಮಕ್ಕಳೇ ಹಬ್ಬ ಮಾಡುವುದೂ ನಿಜಕ್ಕೂ ಸಂಸ್ಕೃತಿಗಳು ಒಂದರೊಳಗೊಂದು ಬೆರೆಯುವಿಕೆಯನ್ನೂ ತೋರಿಸುತ್ತಿದೆ. ಇದು ನಾವುಗಳು ಹೇಳುವ ಸಾಮರಸ್ಯ ಎನ್ನುವ ಸವಕಲು ಪದದ ಅರ್ಥವನ್ನು ಮೀರಿದ ದ್ವನಿಯೊಂದನ್ನು ಕೇಳಿಸುತ್ತದೆ. ಹೀಗೆ ಮೊಹರಂ ಆಚರಣೆ ಮಕ್ಕಳ ಹಬ್ಬವಾಗಿ ತನಗೆ ತಾನೆ ಜಾತಿ ಮತ ಧರ್ಮದ ಆಚೆ ನಿಲ್ಲುತ್ತದೆ. ನಮ್ಮ ಹಳ್ಳಿಗಳ ಜಾತ್ರೆಗಳಲ್ಲಿಯೂ ಹಿರಿಯ ದಲಿತರು ಊರಂಗಳವನ್ನು ಕಸ ಗುಡಿಸುತ್ತಾ ಜಾತಿ ಶ್ರೇಣೀಕರಣದ ಸಾಕ್ಷ್ಯಗಳಂತೆ ಕಂಡರೆ, ಅವರ ಮಕ್ಕಳು ಎಲ್ಲಾ ಮಕ್ಕಳೊಂದಿಗೆ ಜಾತ್ರೆಯಲ್ಲಿ ನಿರಾತಂಕವಾಗಿ ಭಾಗವಹಿಸುವಿಕೆ ಜಾತಿಯಾಚೆಗೆ ನಿಲ್ಲುತ್ತದೆ. ಹೀಗೆ ಆಚರಣೆಗಳನ್ನು ಮಕ್ಕಳ ನೆಲೆಯಲ್ಲಿ ಮರು ಅಧ್ಯಯನಕ್ಕೆ ಒಳಪಡಿಸುವ ಅಗತ್ಯವಿದ್ದಂತೆ ಕಾಣುತ್ತದೆ.

ಮಂಗಳವಾರ, ಫೆಬ್ರವರಿ 21, 2012

ದರೋಜಿ ಈರಮ್ಮಗೆ ’ಜಾನಪದ ಶ್ರೀ’ ಪ್ರಶಸ್ತಿ

ಸಿ. ಮಂಜುನಾಥ್, ಬಳ್ಳಾರಿ




ಬಳ್ಳಾರಿ ಜಿಲ್ಲೆಯ ಹೆಮ್ಮೆಯ ಜಾನಪದ ಕಲಾವಿದೆ ನಾಡೋಜ ದರೋಜಿ ಈರಮ್ಮ ಅವರು ೨೦೧೦ ನೇ ಸಾಲಿನ ಪ್ರತಿಷ್ಠಿತ ಜಾನಪದ ಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ಬುರ್ರಕಥಾ ಪ್ರಕಾರಕ್ಕೆ ಸಲ್ಲಿಸಿರುವ ಅನುಮಪ ಸೇವೆಯನ್ನು ಗುರುತಿಸಿ ರಾಜ್ಯ ಸರಕಾರ (ಕನ್ನಡ ಮತ್ತು ಸಂಸ್ಕೃತಿ ಇಲಾಖೆ) ಈರಮ್ಮ ಅವರನ್ನು ಜಾನಪದ ಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿದೆ.ಫೆ. ೨೨ ರಂದು ಬುಧವಾರ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಜರುಗಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸದಾನಂದಗೌಡರು ದರೋಜಿ ಈರಮ್ಮ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ರಾಜ್ಯ ಸರಕಾರ ತಮ್ಮನ್ನು ಪ್ರತಿಷ್ಠಿತ ಜಾನಪದ ಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಸಂತಸ ತಂದಿದೆ ಎಂದು ಈರಮ್ಮ ಹರ್ಷ ವ್ಯಕ್ತಪಡಿಸಿದರು.ಹಳೇ ದರೋಜಿಯ ತಮ್ಮ ನಿವಾಸದಲ್ಲಿ ’ಕನ್ನಡ ಜಾನಪದ’ ಕ್ಕೆ ಪ್ರತಿಕ್ರಿಯಿಸಿದ ದರೋಜಿ ಈರಮ್ಮ ಅವರು, ಅಲೆಮಾರಿ ಸಮುದಾಯಕೆ ಸೇರಿದ ತಮ್ಮನ್ನು ಸರಕಾರ ಗುರುತಿಸಿ ಪ್ರಶಸ್ತಿಗೆ ಆಯ್ಕೆಮಾಡಿರುವುದು ನಿಜಕ್ಕೂ ಖುಷಿ ತಂದಿದೆ ಎಂದರು.ಬುರ್ರಕಥಾ ಉಳಿಸಿ ಬೆಳೆಸಲು ಶ್ರಮಿಸುತ್ತಿರುವುದಾಗಿ ತಿಳಿಸಿದ ದರೋಜಿ ಈರಮ್ಮಅವರು, ತಮ್ಮ ಸಮುದಾಯದ ಬಾಲಕಿಯರಿಗೆ ತರಬೇತಿ ನೀಡುತ್ತಿರುವುದಾಗಿ ತಿಳಿಸಿದರು.ತಮ್ಮ ಹಿಂದಿನ ಕಷ್ಟದ ದಿನಗಳನ್ನು ಸ್ಮರಿಸಿಕೊಂಡ ದರೋಜಿ ಈರಮ್ಮ ಅವರು, ಎರಡು ಸೇರು ಜ್ವಾಳಕ್ಕಾಗಿ ಕಥೆ ಹೇಳಿದ್ದೇನೆ. ಹೊಲಗಳಲ್ಲಿ ಕೂಲಿ ಮಾಡಿ, ಕಳೆ ತೆಗೆದು ಹೊಟ್ಟೆ ಹೊರೆದದ್ದನ್ನು ಹೇಳಿದರು. ಏನೇ ಕಷ್ಟ ಬಂದರೂ ಬುರ್ರಕಥೆ ಹೇಳುವುದನ್ನು ಬಿಡಲಿಲ್ಲ ಎಂದರು.

ದರೋಜಿ ಈರಮ್ಮ ಅವರಿಗೆ ರಾಜ್ಯಮಟ್ಟದ ಜಾನಪದ ಶ್ರೀ ಪ್ರಶಸ್ತಿ ಬಂದಿರುವುದಕ್ಕೆ ಬುಡ್ಗ ಜಂಗಮ ಸಮುದಾಯ ಹರ್ಷ ವ್ಯಕ್ತಪಡಿಸಿದೆ.
ಸಮುದಾಯದ ಯುವ ಕಲಾವಿದ ದರೋಜಿ ರಾಮು ಮಾತನಾಡಿ, ಈ ಪ್ರಶಸ್ತಿ ಇಡೀ ಅಲೆಮಾರಿ ಸಮುದಾಯಗಳಿಗೆ ಸಂದ ಗೌರವವಾಗಿದೆ ಎಂದು ತಮ್ಮ ಸಂತಸ ವ್ಯಕ್ತಪಡಿಸಿದರು. ನಿರಕ್ಷರಿ ಅಲೆಮಾರಿ ಬುಡ್ಗ ಜಂಗಮರ ಬುರ್ರಕಥಾ ಈರಮ್ಮ ಕನ್ನಡ ನಾಡಿನ ಅದ್ವಿತೀಯ ಅಪರೂಪದ ಪ್ರತಿಭೆ. ತನ್ನ ಇಡೀ ಬದುಕನ್ನು ಜನಪದ ಕಥನಕಾವ್ಯಗಳ ಗಾಯನಕ್ಕೆ ಮುಡುಪಾಗಿಟ್ಟ ಮಹಾನ್ ಸಾಧಕಿ.

ಬಾಲ ನಾಗಮ್ಮ, ಸ್ಯಾಸಿ ಚಿನ್ನಮ್ಮ, ಎಲ್ಲಮ್ಮ, ಗಂಗಿ ಗೌರಿ, ಕುಮಾರ ರಾಮ, ಕೃಷ್ಣ ಗೊಲ್ಲ, ಬಬ್ಬುಲಿ ನಾಗರೆಡ್ಡಿ, ಆದೋನಿ ಲಕ್ಷ್ಮಮ್ಮ, ಬಲಿ ಚಕ್ರವರ್ತಿ, ಮಾರವಾಡಿ ಸೇಠಿ, ಜೈಸಿಂಗ್ ರಾಜ ಮತ್ತು ಮಹಮದ್ ಖಾನರ ಜನಪದ ಕಥನ ಕಾವ್ಯಗಳು ಸದಾ ಇವರ ತುದಿ ನಾಲಗೆ ಮೇಲೆ! ಸುಮಾರು ಎರಡು ಲಕ್ಷ ಸಾಲುಗಳಷ್ಟು ಅಂದರೆ ಸುಮಾರು ಏಳು ಸಾವಿರ ಪುಟಗಳ ಹರವುಳ್ಳ ಬುರ್ರಕಥಾ ಸಾಹಿತ್ಯವನ್ನು ಇವರ ಪೂರ್ವಜರಿಂದ ತೆಲುಗುವಿನಿಂದ ಕನ್ನಡಕ್ಕೆ ತಂದು ಕನ್ನಡಿಗರಿಗೆ ಪರಿಚಯಿಸಿದ ಅಪ್ರತಿಮ ಸಾಧನೆ ದರೋಜಿ ಈರಮ್ಮ ಅವರದು.

೮೦ರ ಹರೆಯದ ಈರಮ್ಮ ಅವರದು ಅಲೆಮಾರಿ ಬದುಕು. ಗ್ರಾಮಗಳ ಹೊರಗೆ ಗುಡಾರಗಳಲ್ಲಿ ವಾಸ. ೨೦೦೫ರಿಂದ ಜಿಲ್ಲೆಯ ಸಂಡೂರು ತಾಲೂಕಿನ ಹಳೇ ದರೋಜಿ ಗ್ರಾಮದ ಆಶ್ರಯ ಮನೆಯೇ ಪ್ರಸ್ತುತ ಇವರ ಅರಮನೆ. ನಿರಕ್ಷರಿಯಾಗಿದ್ದರೂ ಕನ್ನಡ, ಬುಡ್ಗ, ತೆಲುಗು, ಹಿಂದಿ, ತಮಿಳು ಭಾಷೆಗಳೊಂದಿಗೆ ವ್ಯವಹರಿಸುವ ಚಾಕಚಕ್ಯತೆ ಈರಮ್ಮ ಹೊಂದಿದ್ದಾರೆ.

ತಂದೆ ತಾಯಿಗಳಿಂದ ಬುರ್ರ ವಾದ್ಯ(ಡಿಮ್ಮಿ, ಗಗ್ಗರಿ, ತಂಬೂರಿ)ಗಳನ್ನು ನುಡಿಸುವುದು ಮತ್ತು ಬುರ್ರಕಥೆಗಳನ್ನ ಹಾಡಿ ಪ್ರದರ್ಶಿಸುವುದನ್ನು ಕಲಿತ ಈರಮ್ಮ ೭ ಸಾವಿರ ಪುಟಗಳು, ಎರಡು ಲಕ್ಷ ಸಾಲುಗಳ ೧೧ ಜನಪದ ಹಾಗೂ ಬುಡಕಟ್ಟು ಮಹಾಕಾವ್ಯಗಳನ್ನು ಪ್ರಸ್ತುತ ಪಡಿಸಬಲ್ಲರು.

ಪ್ರಕಟಿತ ಕಾವ್ಯಗಳು:
ಹಂಪಿ ಕನ್ನಡ ವಿವಿಯ ಪ್ರಾಧ್ಯಪಕ ಡಾ. ಕೆ ಎಂ ಮೈತ್ರಿ ಅವರು ಕುಮಾರ ರಾಮ ಮತ್ತು ಕೃಷ್ಣಗೊಲ್ಲರ ಮಹಾ ಕಾವ್ಯ ಮತ್ತು ಎಲ್ಲಮ್ಮನ ಕಥನ ಕಾವ್ಯ ಗಳನ್ನು ಸಂಪಾದಿಸಿದ್ದರೆ, ಮತ್ತೊಬ್ಬ ಪ್ರಾಧ್ಯಪಕ ಡಾ. ಸ ಚಿ ರಮೇಶ್ ಅವರು ಸ್ಯಾಸಿ ಚಿನ್ನಮ್ಮನ ಕಾವ್ಯವನ್ನು ಸಂಪಾದಿಸಿದ್ದಾರೆ.

ಪಿಎಚ್‌ಡಿ ಅಧ್ಯಯನಕ್ಕೆ ವಸ್ತು:
ನಿರಕ್ಷರಿಯಾದರೇನು? ತಮ್ಮ ಅದ್ಭುತ ಪ್ರತಿಭೆಯಿಂದಾಗಿ ಸಂಶೋಧಕರಿಗೆ ಅಧ್ಯಯನ ವಸ್ತುವಾಗಿರುವುದು ಈರಮ್ಮ ಅವರ ಹೆಗ್ಗಳಿಕೆ. ಡಾ. ಕೆ ಎಂ ಮೈತ್ರಿ ಅವರ ಮಾರ್ಗದರ್ಶನದಲ್ಲಿ ಶ್ರೀ ಮತಿ ಸಾರಿಕದೇವಿ ಎಲ್ ಕಾಳಗಿ ಎಂ ಸಂಶೋಧಕರು ’ಬುರ್ರಕಥಾ ಈರಮ್ಮ: ಒಂದು ಅಧ್ಯಯನ’ ಎಂಬ ವಿಷಯದಲ್ಲಿ ಹಂಪಿ ಕನ್ನಡ ವಿವಿಯಲ್ಲಿ ಪಿ. ಎಚ್‌ಡಿ ಅಧ್ಯಯನ ಮಾಡಿ ೨೦೦೬ರಲ್ಲಿ ಡಾಕ್ಟರೇಟ್ ಪದವಿ ಗಳಿಸಿದ್ದಾರೆ.

ಕಳೆದ ೫೦ ವರ್ಷಗಳಿಂದ ಸಾವಿರಾರು ಗ್ರಾಮ, ಕುಗ್ರಾಮಗಳಿಂದ ಹಿಡಿದು ನಗರ, ಪಟ್ಟಣ ಮಾತ್ರವಲ್ಲ ದೇಶದ ರಾಜಧಾನಿ ನವ ದೆಹಲಿಯಲ್ಲೂ ತಮ್ಮ ಕಥನ ಕಾವ್ಯಗಳ ಗಾಯನದ ಸುಧೆ ಹರಿಸಿದ್ದಾರೆ.

೨೦೦೭ ರಲ್ಲಿ ವಾದನ ತೋಡು ಎಂಬ ಸಂಸ್ಥೆ ನವದೆಹಲಿಯಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ಅಲೆಮಾರಿ ಮಹಿಳೆಯರ ನ್ಯಾಯ ಮಂಡಳಿ ಸಮಾವೇಶಕ್ಕೆ ಕರ್ನಾಟಕದಿಂದ ಆಯ್ಕೆಯಾದ ಏಕೈಕ ಪ್ರತಿಭೆಯಾಗಿದ್ದು, ಸಮಾವೇಶದಲ್ಲಿ ಕುಮಾರ ರಾಮನ ಮಹಾ ಕಾವ್ಯವನ್ನು ಪ್ರದರ್ಶಿಸಿ ಜನ ಮನ ಸೆಳೆದಿದ್ದಾರೆ. ಅಲ್ಲದೇ ಪ್ರದರ್ಶನದ ಬಳಿಕ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿರುವುದು ವಿಶೇಷ.
ಹಲವು ಬಾರಿ ಆಕಾಶವಾಣಿ ದೂರದರ್ಶನದಲ್ಲಿ ಇವರ ಬುರ್ರಕಥಾ ಗಾಯನ ಪ್ರಸಾರವಾಗಿವೆ.

ನಾಡೋಜ ಪದವಿ:
ಹತ್ತಾರು ರಾಜ್ಯ, ರಾಷ್ಟ್ರ ಮಟ್ಟದ ಪ್ರಶಸ್ತಿ ಪುರಸ್ಕಾರಗಳು ದರೋಜಿ ಈರಮ್ಮ ಅವರನ್ನು ಹುಡುಕಿಕೊಂಡು ಬಂದಿವೆ. ಹಂಪಿ ಕನ್ನಡ ವಿವಿ ತನ್ನ ೧೫ ಘಟಿಕೋತ್ಸವದಲ್ಲಿ ಪ್ರತಿಷ್ಠಿತ ನಾಡೋಜ ಪದವಿ ನೀಡಿ ಗೌರವಿಸಿದೆ. ೧೯೯೯ ರಲ್ಲಿಯೇ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ೨೦೦೩ ರಲ್ಲಿ ಸಮಾಜ ಕಲ್ಯಾಣ ಇಲಾಖೆ ಡಾ. ಬಿ ಆರ್ ಅಂಬೇಡ್ಕರ್ ಪ್ರಶಸ್ತಿ ನೀಡಿ ಸತ್ಕರಿಸಿದೆ. ಬಳ್ಳಾರಿ ವಿಜಯ ವಿಠಲ ಪ್ರಶಸ್ತಿ, ಆಳ್ವಾಸ್ ನುಡಿ ಸಿರಿ ಪ್ರಶಸ್ತಿ, ಡಾ. ರಾಜಕುಮಾರ್ ಪ್ರಶಸ್ತಿ, ಸಂದೇಶ ಕಲಾ ಪ್ರಶಸ್ತಿ, ಬುರ್ರಕಥಾ ಕಲಾಶ್ರೀ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ-ಪುರಸ್ಕಾರ ಗಳಿಗೆ ಪಾತ್ರರಾಗಿದ್ದಾರೆ.
ಬುರ್ರಕಥಾ ಈರಮ್ಮ ಅವರ ಆತ್ಮಕಥೆ ಪ್ರಕಟವಾಗಿರುವುದು ವಿಶೇಷ. ಜೀವಂತ ದಂತ ಕಥೆಯಾಗಿರುವ ಈರಮ್ಮ ’ತಂದಾನ ತಂದಾನ ತಾನ ತಾನ ತಂದಾನ’ ಎಂಬ ಪಲ್ಲವಿಯೊಂದಿಗೆ ತಮ್ಮ ಗಾಯನ ಆರಂಭಿಸಿದರೆ ಎಂತವರು ಇವರ ಕಥನ ಕಾವ್ಯಕ್ಕೆ ತಲೆಬಾಗುತ್ತಾರೆ. ತಲೆ ತೂಗುತ್ತಾರೆ.

ಶನಿವಾರ, ಫೆಬ್ರವರಿ 11, 2012

ಜಾಲತಾಣದಲ್ಲಿ ಜಾನಪದ-ಪ್ರಜಾವಾಣಿ ಮೆಟ್ರೋದಲ್ಲಿ ಪ್ರಶಂಸೆ

(
10.02.2012 ರ ಮೆಟ್ರೋ ಬೆಂಗಳೂರು ಆವೃತ್ತಿಯಲ್ಲಿ ಕನ್ನಡ ಜಾನಪದ ಬ್ಲಾಗ್ ಬಗ್ಗೆ ಬರೆದಿದ್ದಾರೆ. ಈ ಪ್ರಯತ್ನವನ್ನು ಗುರುತಿಸಿದ್ದಕ್ಕೆ ಪ್ರಜಾವಾಣಿಗೆ ಕೃತಙ್ಜತೆಗಳು. ದೇಶದ, ವಿದೇಶದ ಜಾನಪದ ಸಂಗತಿಗಳನ್ನು ಒಳಗೊಳ್ಳುವ ಸಾದ್ಯತೆಯ ಬಗ್ಗೆ ಸಲಹೆ ನೀಡಿದ್ದಾರೆ, ಮುಂದಿನ ದಿನಗಳಲ್ಲಿ ಆ ನಿಟ್ಟಿನಲ್ಲಿ ಪ್ರಯತ್ನಿಸುವೆ- ಅರುಣ್ )



ಹೊಸ ತಲೆಮಾರಿನ ಬರಹಗಾರರಲ್ಲಿ ಅರುಣ್ ಜೋಳದ ಕೂಡ್ಲಿಗಿ ಅವರದ್ದು ಎದ್ದುಕಾಣುವ ಹೆಸರು. ಕಥೆ, ಕವಿತೆಯೊಂದಿಗೆ ಜಾನಪದ ಅವರ ಆಸಕ್ತಿಯ ಕ್ಷೇತ್ರ, ಅಧ್ಯಯನದ ಕ್ಷೇತ್ರ ಕೂಡ. ಅವರ ಜಾನಪದ ಪ್ರೀತಿಯ ಫಲ- ww.kannadajaanapada.blogspot.in ಜಾಲತಾಣ. `ಜಾನಪದ ಜಗತ್ತಿನ ಹೊಸ ಚಲನೆಯ ಹೊರಳು ನೋಟ` ಎನ್ನುವುದು ತಮ್ಮ ಬ್ಲಾಗ್ ಬಗೆಗಿನ ಅರುಣ್ ಬಣ್ಣನೆ.

ಜಾನಪದ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅರುಣ್ ಅವರ ಓದು, ತಿರುಗಾಟ, ಸಂಶೋಧನೆಗಳ ಕುರಿತಾದ ಬರಹಗಳು ಈ ಬ್ಲಾಗ್‌ನಲ್ಲಿವೆ. ಕಲೆ, ನಂಬಿಕೆ, ಆಚರಣೆ, ವೈದ್ಯ, ಕೃಷಿ- ಹೀಗೆ ಜಾನಪದ ಬದುಕಿನ ವೈವಿಧ್ಯ ಇಲ್ಲಿ ಕಾಣಿಸುತ್ತದೆ.

ತಮ್ಮ ಬರಹಗಳು ಮಾತ್ರವಲ್ಲದೆ, ಜಾನಪದಕ್ಕೆ ಸಂಬಂಧಿಸಿದ ಇತರರ ಬರಹಗಳನ್ನೂ ಹೆಕ್ಕಿ ತಮ್ಮ ಬ್ಲಾಗಲ್ಲಿ ಕಾಣಿಸಿದ್ದಾರೆ. ಅಂತರ್ಜಾಲದ ಮೂಲಕ, ಈ ಹೊತ್ತಿನ ಕನ್ನಡ ಜಾನಪದದ ಕಿರುಪರಿಚಯಕ್ಕೆ ಇದು ಒಳ್ಳೆಯ ಬ್ಲಾಗು.

ಇಲ್ಲಿನ ಬರಹಗಳಲ್ಲಿ ಶೈಕ್ಷಣಿಕ ಶಿಸ್ತು ಕಾಣಿಸಿದರೂ, ಅರುಣ್ ಕವಿಯೂ ಆಗಿರುವುದರಿಂದ ಬರಹಗಳಿಗೊಂದು ಆರ್ದ್ರ ಸಂವಹನದ ಗುಣ ದೊರೆತಿದೆ. ಅರುಣ್ ಅವರ ಕನ್ನಡ ಜಾನಪದ ಬ್ಲಾಗಿನ ಬೀಸು ಇನ್ನಷ್ಟು ವಿಸ್ತಾರಗೊಳ್ಳಲಿಕ್ಕೆ ಸಾಧ್ಯವಿದೆ. ಕನ್ನಡ ಜಾನಪದ ಭಾರತೀಯ ಹಾಗೂ ಜಾಗತಿಕ ಜಾನಪದದೊಂದಿಗೆ ಅನುಸಂಧಾನ ನಡೆಸುವ ಪ್ರಯತ್ನಕ್ಕೆ ಈ ಬ್ಲಾಗ್ ಯಾಕೆ ವೇದಿಕೆಯಾಗಬಾರದು?

***
ಅರುಣ್ ಬರಹದ ಒಂದು ತುಣುಕು
ಐದು ರೂ ನಾಣ್ಯಗಳು ಒಡವೆಗಳಾದ ಕಥೆ
ಬಂಗಾರದ ಬೆಲೆ ಗಗನಕ್ಕೇರುತ್ತಿದೆ. ಹಾಗಾಗಿ ಹಳ್ಳಿಯ ರೈತರಿಗೆ, ಕೂಲಿಕಾರರಿಗೆ ಬಂಗಾರವೆಂಬುದು ಗಗನ ಕುಸುಮವಾಗಿದೆ. ಅದಕ್ಕವರು ಪರ್ಯಾಯಗಳನ್ನು ಅವರದೇ ರೀತಿಯಲ್ಲಿ ಕಂಡುಕೊಳ್ಳುತ್ತಿದ್ದಾರೆ.

ಈಚೆಗೆ ನಾನು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ, ಹೆಣ್ಣುಮಗಳು ಕಂಡಕ್ಟರ್ ಬಳಿ ಇರುವ ಕಂದು ಬಣ್ಣದ ಐದು ರೂನ ಹೊಸ ನಾಣ್ಯಗಳನ್ನು ಕೇಳಿದರು. ಕಂಡಕ್ಟರ್ ನೋಟು ಪಡೆದು ಇರುವ ಹತ್ತಾರು ನಾಣ್ಯಗಳನ್ನು ಕೊಟ್ಟರು. ನಾನು ಕುತೂಹಲದಿಂದ ನಾಣ್ಯಗಳು ಯಾಕೆ ಎಂದು ವಿಚಾರಿಸಿದೆ. ಆಯಮ್ಮ ಒಂದು ಮಾಂಗಲ್ಯ ಸರ ಮಾಡಿಸ್ಬೇಕ್ರಿ ಎಂದರು.

ಕಾರಣ ಕೇಳಿದರೆ ಐದು ರೂಪಾಯಿಯ ನಾಣ್ಯವನ್ನು ಕರಗಿಸಿ ಒಡವೆ ಮಾಡಿಸಿದರೆ ಥೇಟ್ ಬಂಗಾರದ ಬಾಯಿ ಬಡಿಯುವಂತಾಗುತ್ತವೆ. ಅವಕ್ಕೆ ಬಂಗಾರದ ನೀರು ಕುಡಿಸಿದರಂತೂ ಗುರುತಿಸಲಾರದಷ್ಟು ಬಣ್ಣ ತಾಳುತ್ತವೆ ಎನ್ನುವುದು ಆಯಮ್ಮನ ನಿಲುವು.

ನಂತರ ನಮ್ಮೂರಲ್ಲಿ ಈ ಸಂಗತಿ ಕೇಳಿದಾದ ಚೈನು, ಉಂಗುರ, ಮೂಗುತಿ, ಕಳಸ ಮುಂತಾದ ರೂಪಾಂತರಗಳಿಗೆ ಐದು ರೂ ಒಳಗಾದದ್ದು ತಿಳಿಯಿತು. ಐದು ರೂಪಾಯಿಯ ಕಾರಣಕ್ಕೆ ಗಂಡ ಹೆಂಡತಿಯನ್ನು ಬಿಟ್ಟ ಪ್ರಸಂಗವೊಂದನ್ನು ಹೇಳಿದರು.

ಮದುವೆಯಲ್ಲಿ ಗಂಡಿಗೆ ಕೊಡುವ ಉಂಗುರವನ್ನು ಐದು ರೂ ನಾಣ್ಯದಿಂದ ಮಾಡಿಸಿ ಕೊಟ್ಟಿದ್ದಾರೆ. ಅದು ವರ್ಷದ ನಂತರ ಹಿತ್ತಾಳೆಯ ಕಂದು ಬಣ್ಣಕ್ಕೆ ತಿರುಗಿದೆ. ಆಗ ಗಂಡನ ಮನೆಯವರು ಬಂಗಾರದ ಅಂಗಡಿಯಲ್ಲಿ ಪರೀಕ್ಷೆ ಮಾಡಿಸಿದಾಗ ಐದು ರೂಪಾಯಿಯನ್ನು ಕರಗಿಸಿ ಮಾಡಿಸಿದ್ದು ಎಂದು ಗೊತ್ತಾಗಿದೆ.

ಬಂಗಾರದ ಉಂಗುರ ಮಾಡಿಸಿಕೊಂಡು ಮನೆಗೆ ಬಾ ಎಂದು ಗಂಡ ಹೆಂಡತಿಯನ್ನು ತವರಲ್ಲಿ ಬಿಟ್ಟು ಹೋಗಿದ್ದಾನೆ. ಇಂತಹದೇ ಕಥೆಗಳು ಐದು ರೂ ನಾಣ್ಯದ ಸುತ್ತ ಸುತ್ತುವರಿದಿವೆ.

ಇದರ ಹಿಂದೆ ಬಂಗಾರ ಕೊಳ್ಳಲಾಗದ ಅಸಹಾಯಕತೆ, ಒಡವೆಗಳನ್ನು ತೊಡಬೇಕೆಂಬ ಹಪಾಹಪಿ ಇದ್ದಂತಿದೆ. ಹಾಗಾಗಿ ಹಳ್ಳಿಗಳಲ್ಲಿ ಹೊಸ ಐದು ರೂ ನಾಣ್ಯವನ್ನು ಕೂಡಿಡುವ ಸ್ಪರ್ಧೆ ಏರ್ಪಟ್ಟಿದೆ. ನನ್ನ ಬಳಿ ಹತ್ತು ನಾಣ್ಯಗಳಿವೆ, ನನ್ನಲ್ಲಿ ಇಪ್ಪತ್ತು ನಾಣ್ಯಗಳಿವೆ ಎಂಬಂತಹ ಮಾತುಕತೆಗಳು ನಡೆಯುತ್ತಿವೆ.

ಹೀಗೆ ಐದು ರೂ ನಾಣ್ಯಗಳನ್ನು ಸಂಗ್ರಹಿಸಿಡುವುದು ಒಂದು ಹವ್ಯಾಸವೆ ಆಗಿದೆ. ಕೆಲವು ಅಂಗಡಿಯವರು ಈ ನಾಣ್ಯಗಳನ್ನು ಸಂಗ್ರಹಿಸಿ ಹೆಚ್ಚಿನ ಬೆಲೆಗೆ ಮಾರುವುದೂ ಇದೆ. ಇನ್ನು ಅಕ್ಕಸಾಲಿಗರು (ಬಂಗಾರದ ಕೆಲಸ ಮಾಡುವವರು) ಈ ನಾಣ್ಯದ ಒಡವೆಗಳನ್ನು ಮಾಡಿ ಮಾರುವುದೂ ಇದೆ. ಹೀಗೆ ಐದು ರೂಪಾಯಿ ನಾಣ್ಯವು ಜನಸಮುದಾಯದಲ್ಲಿ ಒಡವೆಗಳಾಗಿ ಬೇರೆಯದೇ ರೀತಿಯ ಸಂಬಂಧವನ್ನು ಪಡೆಯುತ್ತಿದೆ.

ಬುಧವಾರ, ಫೆಬ್ರವರಿ 8, 2012

`ಗ್ರಾಮ ಚರಿತ್ರೆ ಕೋಶ' ದುಡುಕಿನ ಅಪಾಯಕಾರಿ ಯೋಜನೆ

ಡಾ. ಲಿಂಗದಹಳ್ಳಿ ಹಾಲಪ್ಪ


ಕರ್ನಾಟಕದಲ್ಲಿ ಹೊಸದಾಗಿ ಸ್ಥಾಪಿಸಲ್ಪಟ್ಟ, ದೇಶದ ಪ್ರಥಮ ಜಾನಪದ ವಿಶ್ವವಿದ್ಯಾಲಯವೆಂಬ ಹೆಗ್ಗಳಿಕೆಗೆ ಪಾತ್ರವಾದ ಕರ್ನಾಟಕದ ಜಾನಪದ ವಿ.ವಿಯು `ಗ್ರಾಮ ಚರಿತ್ರೆ ಕೋಶ` ಎಂಬ ಯೋಜನೆಯನ್ನು ಕೈಗೆತ್ತಿಕೊಂಡು ರಾಜ್ಯದ 36ಸಾವಿರ ಹಳ್ಳಿಗಳ ಚರಿತ್ರೆ ರಚನೆಗೆ ಮುಂದಾಗಿದೆ.

ಈ ಮಹತ್ವದ ಯೋಜನೆಯಡಿ ಒಂದು ಗ್ರಾಮದ ಸಮಕಾಲೀನ ಭಾಷೆ, ಸಂಸ್ಕೃತಿ, ಸೊಗಡು, ನಡವಳಿಕೆಗಳು, ಆಚರಣೆಗಳು ಸಂಪ್ರದಾಯಗಳು ಜಾನಪದದ ನೆಲೆಯಲ್ಲಿ ದಾಖಲೆಗೊಳ್ಳುವುದು ಸ್ವಾಗತಾರ್ಹ. ಆದರೆ ಆಯಾ ಹಳ್ಳಿಯ ಚರಿತ್ರೆ (ಇತಿಹಾಸ) ಸಮರ್ಪಕವಾಗಿ ದಾಖಲಾಗಿಲ್ಲ. ಅದನ್ನು ಆಯಾ ಗ್ರಾಮದ ಹಿರಿಯರ ಹೇಳಿಕೆಗಳ, ಲಭ್ಯ ಆಕರಗಳ ಮೇಲೆ ದಾಖಲು ಮಾಡಲಾಗುವುದು ಎಂಬ ವಿಶ್ವವಿದ್ಯಾಲಯದ ಆಶಯವು ದುಡುಕಿನದ್ದು ಮತ್ತು ಅಪಾಯಕಾರಿಯಾದದ್ದು.


ಒಂದು ಗ್ರಾಮದ ಜನಪದ ಸಂಸ್ಕೃತಿ ಎಂಬುದು ಆಯಾ ಕಾಲದ ಜನಸಾಮಾನ್ಯರ ಜೀವನದೊಂದಿಗೆ ಬೆಸೆದುಕೊಂಡು ಬಂದ ಸಾಮಾಜಿಕ, ಧಾರ್ಮಿಕ, ಆರ್ಥಿಕ ಪದ್ಧತಿಗಳನ್ನು ಹಿಡಿದಿಟ್ಟ ರೀತಿನೀತಿಯಾಗಬೇಕು. ಕೆಳವರ್ಗದ ಸಾಮಾನ್ಯ ಜನತೆಯ ನಿತ್ಯ ಬದುಕಿನ ಸಂಘರ್ಷದ ದಾಖಲೆಯಾಗಿ ಅವರ ವೃತ್ತಿ, ಪ್ರವೃತ್ತಿಗಳನ್ನೊಳಗೊಂಡ ನಂಬಿಕೆ, ಭಾವನೆ, ಆಶಯಗಳ ಅಭಿವ್ಯಕ್ತಿಗೆ ಇಲ್ಲಿ ಪ್ರಾಧಾನ್ಯತೆ ಇರಬೇಕು.

ಆದರೆ ವಿಶ್ವವಿದ್ಯಾಲಯವು ದಾಖಲಿಸ ಹೊರಟ ಚರಿತ್ರೆಯ ಮಾನದಂಡ ಯಾವುದು? ಸತ್ಯಸಂಶೋಧನೆಯ ಒಂದು ಜೀವಂತ ಸಂಶೋಧನಾ ಕ್ರಮಕ್ಕೆ ಇವರು ಯಾವುದನ್ನು ಮಾದರಿಯಾಗಿ ಸ್ವೀಕರಿಸಿದ್ದಾರೆ? ಅವರು ಸಂಪರ್ಕಿಸಲು ಹೊರಟ ಹಿರಿಯ ಜೀವಗಳು ಯಾವ ವರ್ಗಕ್ಕೆ ಸೇರಿದವರು? ಎಂಬುದರ ಕುರಿತು ಸ್ಪಷ್ಟನೆಯ ಅಗತ್ಯವಿದೆ.

ಯಾಕೆಂದರೆ, ಇಂದು ಕರ್ನಾಟಕದ ಬಹಳಷ್ಟು ಗ್ರಾಮಗಳು ದೀರ್ಘಕಾಲದ ಇತಿಹಾಸವಿಲ್ಲದ, ರಾಜಕೀಯ ಹಿಡಿತ ಹೊಂದಿದ, ಜಾತಿ ವಿಭಜಕ ಮಠಗಳೇ ತುಂಬಿದ ಕೆಲವೇ ಕೆಲವು ಬಲಾಢ್ಯ ಜಾತಿಗಳ ಹಿಡಿತದಲ್ಲಿವೆ ಎಂಬುದು ವಾಸ್ತವ ಸಂಗತಿ.


ಅಂಬೇಡ್ಕರ್ ಅವರು `ಗ್ರಾಮಗಳು ಪ್ರಾದೇಶಿಕತೆಯ ಕೊಳೆಗುಂಡಿಗಳು, ಅಜ್ಞಾನದ, ಸಂಕುಚಿತ ಮನೋಭಾವದ, ಜಾತೀಯತೆಯ ಬಿಲಗಳು` ಎಂದು ಕರೆದಿದ್ದರು. ಬಲಾಢ್ಯ ಜಾತಿಯ ಹಿರಿಯರು ಹೇಳಿದ ಆಯಾ ಗ್ರಾಮದ ಚರಿತ್ರೆ, ಅವರ ಒತ್ತಡಕ್ಕೆ ಮಣಿದು ದಾಖಲಿಸಿದ ಇತಿಹಾಸ ನಿಜವಾದ ಚರಿತ್ರೆ ಆಗಬಲ್ಲದೆ? ಈಗಾಗಲೇ ಶಾಸನ, ಕಾವ್ಯ, ತಾಮ್ರಪಟ, ಕೈಪಿಯತ್ತು, ನಿರೂಪಗಳು, ಸನ್ನದುಗಳು ಮುಂತಾದ ಪ್ರಾಚೀನ ದಾಖಲೆಗಳಿಂದ ತಮಗೆ ಬೇಕಾದ ಅಂಶವನ್ನು ಮಾತ್ರ ಆಯ್ಕೆ ಮಾಡಿಕೊಂಡು ದಲಿತ ಹಿಂದುಳಿದ ಶ್ರಮವರ್ಗದ ಸಾಧಕರನ್ನು ಮೂಲೆಗುಂಪು ಮಾಡಿ, ಕರ್ನಾಟಕದ ಚರಿತ್ರೆಯನ್ನು ಅತಿರಂಜಿತಗೊಳಿಸಲಾಗಿದೆ.

ಇದು ಗ್ರಾಮ ಚರಿತ್ರೆಯ ದಾಖಲೀಕರಣದಲ್ಲಿ ಮರುಕಳಿಸುವುದಿಲ್ಲ ಎಂಬುದಕ್ಕೆ ಸಮರ್ಥನೆ ಏನು? ಸಮಾಜದ ಕೆಲವೇ ಕೆಲವು ಮೇಲ್ವರ್ಗದ ಜನರು ಕೊಡುವ ಆಧಾರ, ರಾಜಕೀಯ ಒತ್ತಡ, ತಮ್ಮ ಜಾತಿ ಜನಾಂಗಗಳ ಅತಿರಂಜಿತ ವೈಭವ ಕುರಿತ ಹೇಳಿಕೆಗಳು ನೈಜ ಚರಿತ್ರೆಯನ್ನು ಮರೆಮಾಚುವುದಿಲ್ಲ ಎನ್ನಲು ಆಧಾರವೆಲ್ಲಿಯದು?

ಅಷ್ಟಕ್ಕೂ `ಗ್ರಾಮಗಳ ಚರಿತ್ರೆ` ರಚನೆಗೆ ಜಾನಪದ ವಿಶ್ವವಿದ್ಯಾಲಯಕ್ಕೆ ಅನುಮತಿಯನ್ನು ನೀಡಿದವರು ಯಾರು? ಒಂದು ಪ್ರದೇಶದ ಚರಿತ್ರೆಯನ್ನು ರಚಿಸುವುದು, ಅದನ್ನು ಸಾರ್ವಜನಿಕವಾಗಿ ದಾಖಲಿಸುವುದು `ಜಾನಪದ ವಿಶ್ವವಿದ್ಯಾಲಯ`ದ ಕಾರ್ಯವ್ಯಾಪ್ತಿಗೆ ಬರುತ್ತದೆಯೆ? ಭಾರತದಲ್ಲಿ, ಅದರಲ್ಲೂ ಕರ್ನಾಟಕದ ಸಂದರ್ಭದಲ್ಲಿ ಇತಿಹಾಸವೆಂಬುದು ಇದ್ದವರ, ಮೇಲ್ವರ್ಗದವರ ಹಿತಾಸಕ್ತಿಗಾಗಿಯೇ ರಚಿಸಿದ ಸುಳ್ಳು ಸಾಧನೆಗಳ ಪೊಳ್ಳು ದಾಖಲೆ ಎಂದು ಹೇಳಬಹುದು.

ಕರ್ನಾಟಕದ ಬೀದರ್‌ನಿಂದ ಬೆಂಗಳೂರುವರೆಗಿನ ಎಲ್ಲ ನಗರ ಪ್ರದೇಶದಲ್ಲಿ ಸಿಗುವ ವೃತ್ತಗಳ ಹೆಸರು, ಅಲ್ಲಿ ಅನಾವರಣಗೊಂಡಿರುವ ಚಾರಿತ್ರಿಕ ವ್ಯಕ್ತಿಗಳ ಶಿಲ್ಪಗಳನ್ನು ಗಮನಿಸಿದಾಗ ನಮ್ಮ ಹುಸಿ ಇತಿಹಾಸದ ಪೊರೆ ಅನಾವರಣಗೊಳ್ಳುತ್ತದೆ. ಯುದ್ಧರಂಗವನ್ನು ಕಣ್ಣಿನಿಂದಲೂ ನೋಡದವರು (ಈ ಕುರಿತು ದಾಖಲೆಗಳಿಲ್ಲ) ಕುದುರೆ ಏರಿ ಖಡ್ಗ ಝಳಪಿಸುತ್ತ, ವೀರರಾಜ, ವೀರರಾಣಿ ಎನ್ನಿಸಿದ್ದಾರೆ. ಮತೀಯವಾದಿ, ಕನ್ನಡ ವಿರೋಧಿ ಸಾಮ್ರಾಟನೊಬ್ಬನ ಪಟ್ಟಾಭಿಷೇಕದ ನೆನಪಿನ ಉತ್ಸವವನ್ನು ಕೋಟಿಗಟ್ಟಲೆ ಹಣದಿಂದ ಆಚರಿಸಿ, ಅದೇ ಸಾಮ್ರಾಜ್ಯ ಸ್ಥಾಪಿಸಿದ ಶೂದ್ರ ಶ್ರಮಿಕ ಶೂರರನ್ನು ಕತ್ತಲೆಯಲ್ಲಿಡಲಾಗಿದೆ.

ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಾಣ ತೆತ್ತ ಕೆಳವರ್ಗದ ಹೋರಾಟಗಾರರ ನೆನಪು ಜನಮಾನಸದಿಂದ ಮರೆಯಾಗಿದೆ. ಧರ್ಮ-ಜಾತಿ ಆಧಾರಿತ ಉಳ್ಳವರ ಸಂಘ-ಸಂಸ್ಥೆಗಳು ಅಲ್ಪಸಾಧನೆ ತೋರಿದ ತಮ್ಮವರನ್ನು ಹೊತ್ತು ಮೆರಸುವ ಉತ್ಸವದಲ್ಲಿ, ಈ ನಾಡಿನಲ್ಲಿ ಸಾಮ್ರಾಜ್ಯ ಕಟ್ಟಿ, ಧರ್ಮ-ಸಾಮಾಜಿಕ ಜಾಗೃತಿ ಉಂಟು ಮಾಡಿದ ಬುಡಕಟ್ಟು, ಆದಿಮ ಜನಾಂಗದ ನಾಯಕರನ್ನು ಮೂಲೆಗೆ ತಳ್ಳಿದ್ದಾರೆ. ಇಂತಹ ಸಿದ್ಧಮಾದರಿಯ ಚರಿತ್ರೆ ರಚನೆ ನಮಗೆ ಬೇಕೆ? ಈ ಕುರಿತು ಸಾರ್ವಜನಿಕ ಚರ್ಚೆಯಾಗಲಿ.


`ಭಾರತದ ನಿಜವಾದ ಇತಿಹಾಸ ಮರೆಮಾಚಲ್ಪಟ್ಟು ದಲಿತರ, ಹಿಂದುಳಿದವರ ಸಾಧನೆಯ ಮೇಲೆ ದೂಳಿನ ಮುಸುಕು ಕವಿದಿದೆ. ಈ ದೇಶದ ನೈಜ ಇತಿಹಾಸವನ್ನು ಪುನರ್‌ರಚಿಸಬೇಕಾದ ಅಗತ್ಯವಿದೆ` ಎಂಬುದು ಅಂಬೇಡ್ಕರ್ ಅವರ ಮತ್ತು ನೈಜ ಇತಿಹಾಸ ಸಂಶೋಧಕರ ಅಭಿಪ್ರಾಯ. ಇಂದು ಜಾನಪದ ವಿಶ್ವವಿದ್ಯಾಲಯವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ `ನೈಜ ಇತಿಹಾಸವನ್ನು ಕೆಲವೇ ಪ್ರಭಾವಿ ವ್ಯಕ್ತಿಗಳ ಹೇಳಿಕೆ, ಅವರು ಸೃಷ್ಟಿಸಿದ ಕೃತ್ರಿಮ ಐತಿಹ್ಯಗಳ (ಇತ್ತೀಚಿನ ಪುರಾಣ, ಕಾವ್ಯ, ವಚನ ಇತ್ಯಾದಿ) ಆಧಾರದಲ್ಲಿ ರಚಿಸಲು ಹೊರಟು ಚರಿತ್ರೆಯನ್ನು ಸಮಾಧಿ ಮಾಡಲು ಹೊರಟಿದೆಯೇನೋ ಎಂಬ ಆತಂಕ ಕಾಡುತ್ತದೆ.


ಪ್ರಜಾವಾಣಿ ಸಂಗತ February 08, 2012

ಗುರುವಾರ, ಫೆಬ್ರವರಿ 2, 2012

ಗ್ರಾಮದೇವತೆ: ಹನುಮಂತ

ಪ್ರೊ. ವೀರಣ್ಣ ದಂಡೆ


ನಮಗೆಲ್ಲ ತಿಳಿದಿರುವಂತೆ ಹನುಮಂತನು-ಮಂಗನ ಮೂತಿಯ, ಬಾಲವುಳ್ಳ ಜನಿವಾರ ಧರಿಸಿದ, ಚಂಡಿಕೆ ಬಿಟ್ಟ ರಾಮನ ಸೇವಕ, ಸೀತೆಯನ್ನು ಶೋಧಿಸಿದ ಜಾಣ, ಲಂಕೆಯನ್ನು ಸುಟ್ಟ ಧೀರ.[1] ಈ ವಿವಿಧ ಸಾಹಸಗಳನ್ನು ಕುರಿತ ಒಂದು ಸುದೀರ್ಘ ನಾಟಕವನ್ನು ಹತ್ತು ಅಥವಾ ಹನ್ನೊಂದನೆಯ ಶತಮಾನದಲ್ಲಿದ್ದ ಭೋಜರಾಜನ ಅಪೇಕ್ಷೆ ಯಂತೆ ದಾಮೋದರ ಎಂಬಾತನು ಬರೆದಿದ್ದಾನೆ.[2]
ಹನುಮಂತ, ಅಶ್ವತ್ಥಾಮ, ಬಲಿ, ವ್ಯಾಸ, ವಿಭೀಷಣ, ಕೃಪ, ಪರಶುರಾಮ ಈ ಏಳು ಜನರು ಚಿರಂಜೀವಿಗಳು ಎಂದು ಪುರಾಣಗಳು ನಮಗೆ ಹೇಳಿಕೊಡುತ್ತವೆ. ಇವರಲ್ಲಿ ಹನುಮಂತ ಮತ್ತು ವಿಭೀಷಣರು ಮಾತ್ರ ಜಗತ್ತು ಲಯವಾಗುವವರೆಗೆ ಇರುವವರು. ಉಳಿದವರೆಲ್ಲ ಕೇವಲ ದೀರ್ಘಾಯುಷಿಗಳು ಮಾತ್ರ.

ಮಾನವನು ವಿಕಾಸಗೊಂಡ ಮಂಗನು. ಕೀಳುಸ್ವಭಾವದವನನ್ನು, ಚಂಚಲ ಚಿತ್ತವುಳ್ಳವನನ್ನು ಈಗಲೂ ಮಂಗ ಎಂದೇ ಕರೆಯುತ್ತಾರೆ. ಹನುಮಂತನ ಪೂಜೆ ಮಾಡಿದಂತೆ ಎಂದು ಹೇಳಲಾಗುತ್ತದೆ. ’ಮಂಗನು ಮಾನವನ ಆತ್ಮ ಹೊಂದಿದೆ’ ಎಂಬ ಕಲ್ಪನೆಯೊಂದಿದೆ. ಇದರಿಂದ ಅದನ್ನು ಕೊಲ್ಲಬಾರದೆಂಬ ನಂಬುಗೆ ನಮ್ಮಲ್ಲಿ ಪ್ರಚಲಿತವಿದೆ. ಈಗಲೂ ಮಂಗ ಸತ್ತರೆ-ಹನುಮಂತನ ಗುಡಿಯಲ್ಲಿ ಕೂಡ್ರಿಸಿ, ಮಾನವನಿಗೆ ಮಾಡುವ ರೀತಿಯಲ್ಲಿಯೇ ಮಂಗನಿಗೂ ಸಂಸ್ಕಾರ ಮಾಡುತ್ತಾರೆ. ’ಮಂಗನನ್ನು ಕೊಂದವನು ಮರುಜನ್ಮದಲ್ಲಿ ಮಂಗನಾಗಿಯೇ ಜನಿಸುವನು’ ಎಂಬ ನಂಬುಗೆಯಿದೆ. ಅವಳಿ ಮಕ್ಕಳಲ್ಲಿ ಒಂದು ಕಾದಾಡುವ ಶಕ್ತಿ ಇದ್ದು, ಅದು ಸಣ್ಣ ಮಂಗನ ರೂಪದಲ್ಲಿರುತ್ತದೆ ಎಂದು ಪ್ರೊಟೋನೋವೋದ ಜನಾಂಗ ಭಾವಿಸುತ್ತದೆ. ಅಂತಹ ಮಕ್ಕಳನ್ನು ಯಾವುದೇ ಕಾರಣಕ್ಕಾಗಿ ಕೊಲ್ಲಲಾಗುವುದಿಲ್ಲ, ಕೊಮಿಯನ್ನರು (NKomis) ಗೊರಿಲ್ಲಾದ ಮಾಂಸವನ್ನು ತಿನ್ನುವುದಿಲ್ಲ. ಏಕೆಂದರೆ ಅದು ಮಾನವನ ತಂದೆ ಎಂಬ ನಂಬಿಕೆ ಅವರಲ್ಲಿದೆ. ಆಫ್ರಿಕನ್ನರು ಮತ್ತು ದಕ್ಷಿಣ ಅಮೆರಿಕನ್ನರು ಮಂಗಗಳಿಗೆ ಮಾತು ಬರುತ್ತವೆ. ಆದರೆ ತಮಗೆ ಕೆಲಸ ಹಚ್ಚಬಹುದೆಂಬ ಕಾರಣಕ್ಕಾಗಿ ಹೆದರಿ, ಅವು ಮಾತನಾಡುವುದಿಲ್ಲವೆಂದು ನಂಬುತ್ತಾರೆ. ಅವರಲ್ಲಿಯೇ ಒಂದು ಗುಂಪು-ಒಂದು ಹೆಣ್ಣನ್ನು ಮಂಗವು ಕಾಡಿಗೆ ಕದ್ದೊಯ್ದ ಕಥೆಯನ್ನು ಹೇಳುತ್ತದೆ. ಹೀಗೆ ಪಾಶ್ಚಾತ್ಯರಲ್ಲಿ ಹಾಗೂ ಕಾಡು ಜನಾಂಗಗಳಲ್ಲಿ ಈ ರೀತಿ ಬಾಲವುಳ್ಳ ಮಾನವನ ಬಗ್ಗೆ ಕಥೆಗಳಿವೆ.[3] ಹೀಗೆ ಜಗತ್ತಿನಾದ್ಯಂತ ಮಂಗ-ಮಾನವರಲ್ಲಿ ಸಂಬಂಧ ಕಲ್ಪಿಸುವ ಅನೇಕ ನಂಬುಗೆಗಳಿವೆ.

ಹನುಮಂತನ ಪೂಜೆ ಭಾರತದಲ್ಲಷ್ಟೇ ಅಲ್ಲದೆ, ಜಗತ್ತಿನ ಹಲವೆಡೆಗಳಲ್ಲಿ ಕಾಣಸಿಗುತ್ತದೆ; ಟಾಗೊ (Togo) ಮತ್ತು ಆಫ್ರೀಕಾಗಳ ಕೆಲವು ಹಳ್ಳಿಗಳ ಜನರು ಹನುಮಂತ ದೇವರಿಗೆ ದಿನಾಲು ನೈವೇದ್ಯ ಅರ್ಪಿಸುತ್ತಾರೆ. ಇದರಿಂದ ತಮ್ಮ ಬಯಕೆ ಈಡೇರುತ್ತದೆಂದು ಅವರು ನಂಬುತ್ತಾರೆ. ಕುನಾಮರು (Kunumas) ಮತ್ತು ಬಾರಿ (Bareas) ಜನಗಳು ಕೂಡ ಹನುಮಂತನನ್ನು ಪೂಜಿಸುತ್ತಾರೆಂದು ತಿಳಿದು ಬರುತ್ತದೆ.[4]

‘ಹನು(ನೂ)’ ಎಂದರೆ ’ಉಬ್ಬಿದ ಗದ್ದ’ ಅಥವಾ ’ದವಡೆ’. ಹನುಮಂತನು ತಾನು ಜನಿಸುತ್ತಲೇ ಸೂರ್ಯನನ್ನು ಹಣ್ಣೆಂದು ಭಾವಿಸಿ ನುಂಗಲು ಹಾರಿದಾಗ, ಕೆಳಗೆ ಬಿದ್ದು ಗದ್ದಕ್ಕೆ (ದವಡೆಗೆ) ಪೆಟ್ಟಾಯಿತು. ಅಥವಾ ಇಂದ್ರ ಇಲ್ಲವೆ ಸೂರ್ಯ ಕಪಾಳಕ್ಕೆ ಹೊಡೆದರು ಆಗ ಗದ್ದ ಊದಿಕೊಂಡಿತು. ಈ ಮುಂತಾದ ಐತಿಹ್ಯಗಳು ನಮ್ಮಲ್ಲಿ ಪ್ರಚಲಿತವಾಗಿವೆ. ಮಾತು ಬಾರದವನನ್ನು ಮೂಕನೆಂದು, ಸಣ್ಣ ಮೂಗುಳ್ಳವಳನ್ನು ಮುಕಡಿ ಎಂದು ಅಣಕದ ಹೆಸರಿನಿಂದ ಕರೆಯುವಂತೆ, ಊದಿದ ಗದ್ದ ಅರ್ಥಾತ್ ’ಹನು’ ಉಳ್ಳವನನ್ನು ’ಹನುಮಂತ’, ಅಂದರೆ ’ಊದಿಕೊಂಡ ಗದ್ದವನ’ ಎಂಬ ಅರ್ಥದಿಂದಾಗಿ, ಅಣಕದ ಹೆಸರು ಬಂದಂತೆ ತೋರುತ್ತದೆ. ಆದರೆ, ಆದಿ ಮಾನವನ ಮುಖ ಉಬ್ಬಿಕೊಂಡ ಮುಖವೇ ಆಗಿರುವುದರಿಂದ ಯಾವುದೋ ಕಾರಣಕ್ಕಾಗಿ ಹನುಮಂತನ ಮುಖ ಊದಿಕೊಂಡಿತು ಎಂದು ಹೇಳುವುದು ಬಹುಶ ಕೃತಕ ಸೃಷ್ಟಿ ಎನಿಸುತ್ತದೆ. ’ಹನು’ ಎಂದರೆ ಅಜಾನುಬಾಹು ಎಂಬ ಅರ್ಥವೂ ಬರಬಹುದು. ’ಹನುಮಿಸು’ ಎಂದರೆ ನೆಗೆ, ಹಾರು, ಲಂಘಿಸು ಎಂಬ ಅರ್ಥಗಳೂ ಬರುವುದರಿಂದ, ಹಾರಾಡುವ ಅಸಾಧಾರಣ ಶಕ್ತಿ ಹೊಂದಿರುವನೆಂಬ ಕಲ್ಪನೆಯಿಂದಲೂ ’ಹನುಮಂತ’ಎಂಬ ಹೆಸರು ಬಂದಿರಬಹುದಾಗಿದೆ.


ಪೌರಾಣಿಕ ಕಥೆಯಂತೆ-ಅಂಜನಾದೇವಿ ಎಂಬಾಕೆಯ ಮಗನಾದ್ದರಿಂದ ಹನುಮಂತನಿಗ. ’ಆಂಜನೇಯ’ ಎಂಬ ಹೆಸರು ಬಂದಿತು ಎಂದು ಹೇಳಲಾಗುತ್ತದೆ.[5] ಆದರೆ ’ಅಂಜನ’ ಎಂದರೆ ’ಬಯಕೆಗಪ್ಪ’ ಎಂಬ ಅರ್ಥವಿದೆ. ಹನುಮಂತನ ಮೂರ್ತಿಗೆ ಎಣ್ಣೆ ಸವರಿ, ಜಿಗುಟಾದ ಕಪ್ಪು ಮಸಿ ಮೆತ್ತಿಕೊಂಡಿರುತ್ತದೆ. ಅವನಿಗೆ ಹರಕೆ. ಹೊತ್ತು, ಪ್ರಸಾದವೆಂದು ಈ ಕಪ್ಪು ಸಂಕೇತಗಳು ಬಳಕೆಯಾಗುತ್ತವೆ. ಕರಿಯದಾರ, ಕಪ್ಪು ಮಸಿ, ಕರಿಯಮಣಿಗಳು, ಕಣ್ಣಿನ ಕಾಡಿಗೆ, ಹನುಮಂತನ ಮೂರ್ತಿ ಇರುವ ಕಪ್ಪು ಬಿಲ್ಲೆ-ಇತ್ಯಾದಿಗಳು. ಹೀಗೆ ತಮ್ಮ ಬಯಕೆಯನ್ನು ಈಡೇರಿಸುವ ಈ ಕಪ್ಪು ನಿಶಾನೆಯ ದೇವರನ್ನು ’ಆಂಜನೇಯ’ ಅಂದರೆ-’ಬಯಕೆಗಪ್ಪುಳ್ಳವನು’-ಎಂಬರ್ಥ ಬರುವಂತೆ ಹೆಸರಿಟ್ಟು ಕರೆದಿರಲೂ ಬಹುದಾಗಿದೆ. ರೂಢಿಯಲ್ಲಿ ’ಕರಿಹನುಮ’ ಎಂಬ ಮಾತೂ ಕೇಳುತ್ತೇವೆ.
ಈತ ಗಾಳಿದೇವರು-ಮರುತನಿಗೆ ಹುಟ್ಟಿದುದರಿಂದ ’ಮಾರುತಿ ’ ಎಂಬ ಹೆಸರು ಬಂದಿದೆ ಎನ್ನಲಾತ್ತದೆ. ಆದರೆ ಈತನಲ್ಲಿ ಅಂತರಿಕ್ಷದಲ್ಲಿ ಹಾರಾಡುವ ವಿಲಕ್ಷಣ ಶಕ್ತಿ ಇರುವುದೆಂದು ಕಲ್ಪನೆಯಿರುವುದರಿಂದ ’ಮಾರುತಿ’ಎಂಬ ಹೆಸರು ಬಂದಿರಲೂ ಸಾಧ್ಯವಿದೆ.

ಅವನ ಹೆಸರಿನಲ್ಲಿ ಹೊರಡುವ ಈ ಎಲ್ಲ ಅನೇಕಾರ್ಥಗಳ ಹಿನ್ನಲೆಯಲ್ಲಿ ಅವನ ಬಗೆಗಿನ ಪೌರಾಣಿಕ ಮೂಲಗಳು ಅಲ್ಲಾಡುತ್ತವೆ. ಮೇಲಿನ ವಿವರಗಳನ್ನು ಲಕ್ಷದಲ್ಲಿರಿಸಿ ಕೊಂಡು ಅವನ ಹುಟ್ಟಿನ ಪೌರಾಣಿಕ ಮೂಲಗಳನ್ನು ಅವಲೋಕಿಸಬಹುದಾಗಿದೆ.
ತಾಯಿ ಅಂಜನಾದೇವಿ. ತಂದೆ ಕೇಸರಿ. ಇಬ್ಬರೂ ಗಂಧರ್ವ ಲೋಕಕ್ಕೆ ಸೇರಿದವರು. ಸ್ಪುರದ್ರೂಪಿ ಅಂಜನೆಗೆ ಬಹಳ ದಿನಗಳವರೆಗೆ ಮಕ್ಕಳಾಗಲಿಲ್ಲ. ವನದಲ್ಲಿ ತಿರುಗಾಡುತ್ತಿರುವಾಗ ವಾಯುದೇವನು ಈಕೆಯ ಸೌಂದರ್ಯ್ಕ್ಕೆ ಮಾರುಹೋಗಿ, ಇವಳೊಂದಿಗೆ ಕೂಡಿದುದರಿಂದ ಆಂಜನೇಯ ಅಥವಾ ಮಾರುತಿ ಜನಿಸಿದನು. ಇದು ರಾಮಾಯಣ ಹೇಳುವ ಕಥೆ.
ವೀರಶೈವ ಪುರಾಣಗಳು ಹನುಮಂತನು ಶಿವನ ಮಗನೆಂದು ಹೇಳುತ್ತದೆ: ಕಪಿಗಳ ಕೂಡುವಿಕೆಯನ್ನು ಕಂಡ ಶಿವನು, ಪಾರ್ವತಿಯೊಂದಿಗೆ ಕಪಿಗಳಂತೆ ಕೂಡಿದಾಗ, ಪಾರ್ವತಿ ಗರ್ಭಧರಿಸಿದಳು. “ಆದರೆ ಅದನ್ನು ತಾಳದಾದಾಗ, ವಾಯುವಿನ ಮೂಲಕ ಕುರುಡಿ ಅಂಜನಾದೇವಿಗೆ ಮುಟ್ಟಿಸಲು-ಅದನ್ನು ಸೇವಿಸಿದಳು. ಅಥವಾ ಕಪಿಗಳಂತೆಕೂಡುವಾಗ ವೀರ್ಯೆಸ್ಖಲನವಾಗಿ, ಗಿಡದ ಎಲೆಯ ಮೇಲೆ ಬಿದ್ದಿತು. ಆ ಎಲೆ ಗಿಡದ ಕೆಳಗೆ ಕುರುಡಿ ಅಂಜನಾದೇವಿಯು ಕೈಯಲ್ಲಿ ಬೀಳಲು, ಅದನ್ನು ಸೇವಿಸಿದಳು. ಹೀಗೆ ಗರ್ಭಧರಿಸಿ ಆಂಜನೇಯನನ್ನು ಹೆತ್ತಳು. ಇತ್ಯಾದಿ.
ಇಲ್ಲಿ ಒಂದು ಗಮನಾರ್ಹ ಅಂಶವೆಂದರೆ-ವೈದಿಕರು, ತಮ್ಮ ಪುರಾಣಗಳಲ್ಲಿ-ಹನುಮಂತನು ತಮ್ಮದೇವರಿಗೇ ಸಂಬಧಪಟ್ಟವನು ಎಂಬಂತೆ ಬಣ್ಣಿಸಿದರೆ, ವೀರಶೈವರು-ತಮ್ಮ ದೇವತೆಗಳಿಗೆ ಸಂಬಂಧಪಟ್ಟಂತೆ ವರ್ಣಿಸಲು ಹೆಣಗಾಡಿದ್ದಾರೆ ಎಂಬುದು.


ಈ ಹಿನ್ನೆಲೆಯಲ್ಲಿ ಇನ್ನಷ್ಟು ವಿಷಯ ನೋಡೋಣ: ವೈದಿಕರು ರಾಮಾಯಣದಲ್ಲಿ ಹನುಮಂತನನ್ನು ರಾಮನ ಕೇವಲ ಭಕ್ತನನ್ನಾಗಿ, ಸ್ವಾಮಿಕಾರ್ಯ ನಿರ್ವಹಿಸಲು ಕಂಕಣಬದ್ಧನಾಗಿ ನಿಂತ ಸೇವಕನನ್ನಾಗಿ ಚಿತ್ರಿಸುತ್ತಾರೆ. ಹಾಗೆಯೇ ವೀರಶೈವರು ಹನುಮಂತನ ಲಿಂಗಧಾರಣ ಪ್ರಸಂಗವನ್ನು ನಿರೂಪಿಸುತ್ತಾರೆ.[6] ಏನೆಲ್ಲ ಸೇವೆ ಮಾಡಿದರೂ ತಾನು ಬಯಸಿದ ಅನುಗ್ರಹವನ್ನು ರಾಮನಿಂದ ಕೊಡಲಾಗಲಿಲ್ಲವೆಂಬ ನಿರಾಶೆಯಿಂದ ಹನುಮಂತನು ವೀರಭದ್ರನಿಂದಲಿಂಗದೀಕ್ಷೆ ಪಡೆದು ಮುಕ್ತಿ ಹೊಂದಿದನೆಂದು ವೀರಶೈವ ಪುರಾಣಗಳು ವರ್ಣಿಸುತ್ತವೆ. ಇಲ್ಲಿ ರಾಮನನ್ನು ಕಡೆಗಣಿಸಿ, ತಮ್ಮ ದೇವರಿಂದ ಹನುಮಂತನಿಗೆ ದೀಕ್ಷೆ ಕೊಡಿಸಿ, ಅವನನ್ನು ತಮ್ಮ ದೇವರ ಬಳಗದಲ್ಲಿ ಕೂರಿಸಲು ವೀರಶೈವರು ಪ್ರಯತ್ನಿಸಿರುವುದು ಎದ್ದು ಕಾಣುತ್ತದೆ. ಇನ್ನು ಇಸ್ಲಾಂ ಕಟ್ಟು ಕಥೆಗಳನ್ನು ನೋಡಿದರೆ, ಅವರು-ಮೌಲಾಲಿಯಿಂದ ಹನುಮಂತನು ಸೋಲನ್ನುನುಭವಿಸಿದ ಕಥೆಯನ್ನು ಬಣ್ಣಿಸುತ್ತಾರೆ.ನನಗೆ ದೊರೆತ ಒಂದು ರಿವಾಯತ ಹಾಡಿನ ಸಾರಾಂಶ ಹೀಗಿದೆ: ಹನುಮಂತನು ಎರಡು ಗುಡ್ಡಗಳ ಮಧ್ಯವಾಸವಾಗಿ, ಬೈಗು-ಬೆಳಗು ತಾಲೀಮ ಮಾಡುತ್ತಿದ್ದನು. ಶಕ್ತಿಯಲ್ಲಿ ತನ್ನ ಸಮನಾದವರು ಯಾರೂ ಇಲ್ಲವೆಂದು ಗರ್ವಪಡುತ್ತಿದ್ದನು. ಒಂದು ದಿನ ಮೌಲಾಲಿ ತಿರುಗಾಡುತ್ತ ಆ ಗುಡ್ಡದೆಡೆಗೆ ಬರುವನು. ಹನುಮಂತನ ಪರಿಚಯವಾಗುವುದು. ತಾನು ಮೌಲಾಲಿಯನ್ನು ಮೀರಿಸಲೆಂದೆ ಇಷ್ಟೆಲ್ಲ ಶ್ರಮ ಪಡುತ್ತಿರುವುದಾಗಿ ಹನುಮಂತನು ಹೇಳುವನು. ಆಗ ಮೌಲಾಲಿಯು, ತಾನು ಮೌಲಾಲಿಯ ಸೇವಕನೆಂದೂ, ಮೊದಲು ತನ್ನೊಂದಿಗೆ ಗೆದ್ದು ನಂತರ ಮೌಲಾಲಿಯೊಂದಿಗೆ ಕುಸ್ತಿಯಾಡಬಹುದೆಂದೂ ಹೇಳುವನು. ಇಬ್ಬರಿಗೂ ಕುಸ್ತಿ ಪ್ರಾರಂಭವಾಗುತ್ತದೆ. ಮೌಲಾಲಿಯು ಹನುಮಂತನ ಕಪಾಳಕ್ಕೆ ಏಟುಕೊಡುತ್ತಾನೆ.ತತ್ಪಣಾಮವಾಗಿ ಅವನ ಮುಸುಡಿ ಊದಿಕೊಳ್ಳುತ್ತದೆ.ಮುಖ ಎಡಕ್ಕೆ ತಿರುಗಿಕೊಳ್ಳುತ್ತದೆ. ಹನುಮಂತ ಮೌಲಾಲಿಗೆ ಶರಣು ಹೋಗುತ್ತಾನೆ.
ಈ ಮೇಲಿನ ವಿವರಗಳನ್ನು ಗಮನಿಸಿದರೆ: ಬ್ರಾಹ್ಮಣರು, ವೀರಶೈವರು ಮತ್ತು ಮುಸ್ಲಿಮರು ಹನುಮಂತನು ನನ್ನ ತನ್ನವನೆಂದು, ಖೊಟ್ಟಿ ಸಾಕ್ಷಿಸಗಳನ್ನು ನಿರ್ಮಿಸಿ, ಅವನ ಚರಿತ್ರೆಯನ್ನು ಮಸುಕುಗೊಳಿಸಿದ್ದಾರೆ. ತಮ್ಮ ತಮ್ಮ ದೇವರ ಅಡಿಗಳಲ್ಲಿ ಹಾಕಿ, ಸೇವಕನೆಂದು ಬಣ್ಣಿಸಲು ಹೆಣಗಾಡಿದ್ದಾರೆ ಎಂಬುದು ನಮಗೆ ಹೊಳೆಯುತ್ತದೆ. ಆದುದರಿಂದ ಹನುಮಂತನ ನಿಜವಾದ ವೃತ್ತಾಂತ ಬೇರೆ ಏನೋ ಇದ್ದು, ಅವನು ರಾಮನಿಗಾಗಲಿ, ವೀರಭದ್ರನಿಗಾಗಲಿ ಇಲ್ಲವೆ ಮೌಲಾರಿಗಾಗಲಿ ಸಂಬಂಧಿಸಿದವನಿರಲಿಕ್ಕಿಲ್ಲ ಎಂಬ ಅನುಮಾನ ಬರುತ್ತದೆ. ಹೀಗಿರುವುದರಿಂದ ಹನುಮಂತನು ಈ ಮೂವರಿಗೂ ಸಂಬಂಧಿಸಿರದೆ, ಇವರೆಲ್ಲರಿಗಿಂತ ಪೂರ್ವದಲ್ಲಿ ಯಾವುದೋ ಜನಾಂಗದಿಂದ ಪೂಜೆಗೊಳ್ಳುತ್ತಲಿರುವ ಪ್ರಬಲ ದೇವರಾಗಿದ್ದಾನೆಂದು ತೋರುತ್ತದೆ. ನಂತರ ತಮ್ಮ ತಮ್ಮ ’ದೇವರ ಪ್ರಾಬಲ್ಯ, ಪ್ರಸಾರ ಹೆಚ್ಚಿಸಲು-ಹನುಮಂತನನ್ನು ಅನ್ಯಾಯಕ್ಕೊಳಮಾಡಿದ್ದಾರೆ, ಅತ್ತಿತ್ತ ಎಳೆದಾಡಿದ್ದಾರೆಂದು ಅನಿಸುತ್ತದೆ.
ಹಿಂದುಗಳು ಅನೇಕ ಪ್ರಾಣಿಲಾಂಛನ ಹೊತ್ತ ದೇವರುಗಳನ್ನು ಪೂಜಿಸುತ್ತಾರೆ. ಹನುಮಂತ, ಗಣೇಶ, ನಾಗ ಇತ್ಯಾದಿ. ಇಂಥವುಗಳಲ್ಲಿ ಅತಿ ಪ್ರಮುಖ ಹಾಗೂ ಪ್ರಾಚೀನನೆಂದರೆ ಹನುಮಂತ ದೇವರು. ಅವನ ದೊಡ್ಡಸ್ತಿಕೆಯನ್ನು ನಂತರ ಭಕ್ತಿ ಪಂಥದಲ್ಲಿ-ಮಧ್ಯಕಾಲೀನ ಹಿಂದೂ ಧರ್ಮದಲ್ಲಿ ಕಾಣಿಸಲಾಗಿದೆ. ಅವನನ್ನು ರಾಮನ ಸೇವಕನಂತೆ ಬಣ್ಣಿಸಲಾಗಿದೆ. ಆದರೆ ಭಾರತದಾದ್ಯಂತ ಜನಪದರ ನಂಬಿಕೆ ಯಂತೆ ಅವನು ಕೇವಲ ಒಬ್ಬ ಸೇವಕನಾಗಿ, ಭಕ್ತನಾಗಿ ಕಾಣುವುದಕ್ಕಿಂತ ಹೆಚ್ಚಿಗೆ, ಬಂಜೆಗೆ ಮಕ್ಕಳು ಕೊಡುವ ದೇವರಾಗಿ ಕಾಣುತ್ತಾನೆ. ಅವನು ಒಕ್ಕಲಿಗರಿಂದ ಪೂಜೆಗೊಳ್ಳುವ ದೈವವಾಗಿ, ಅವರ ಬೆಳೆಯನ್ನು ಕಾಪಾಡುವ ದೈವವಾಗಿ ತೋರುತ್ತಾನೆ.

ಆದುದರಿಂದ ಹನುಮಂತನ ಆರಾಧನಾ ಪದ್ಧತಿ ಅನಾದಿ ಕಾಲದ ಜನಾಂಗಗಳಲ್ಲಿ ಇರಬೇಕು. ನಂತರ ಆರ್ಯದರು ಈ ಪದ್ಧತಿಯನ್ನು ಸ್ವೀಕರಿಸಿರಬೇಕು. ಅಂದರೆ-ಹನುಮಂತನು ಆರ್ಯದರಿಗೆ ಸಂಬಂಧಿಸದ, ಅಥವಾ ಆದಿಮ ಜನಾಂಗದ ಇಲ್ಲವೆ ಕೊನೆಗೆ ಬ್ರಾಹ್ಮಣರಲ್ಲದವರಿಂದ ಪೂಜೆಗೊಳ್ಳುತ್ತ ಬಂದು, ನಂತರ ಅನೇಕ ದೇವತೆಗಳೊಂದಿಗೆ ಈತನನ್ನೂ ಎಲ್ಲ ಜನಾಂಗದವರು ಪೂಜೆ ಮಾಡಲು ಪ್ರಾರಂಭಿಸಿರಬೇಕು ಎಂದು ಕ್ರೂಕ್ ಅವರು ಅಭಿಪ್ರಾಯ ಪಡುತ್ತಾರೆ.[7] ವೇದಗಳಲ್ಲಿ ಆಗಾಗಲೆ ಒಂದುಜನಾಂಗ ಒಪ್ಪಿಕೊಂಡ ಧರ್ಮವನ್ನು ಹೇಳುತ್ತದೆ. ಆದುದರಿಂದ ಹನುಮಂತನು ಹೀಗೆ ಯಾವುದೋ ಒಂದು ಧರ್ಮದವರು ಅಧಿಕೃತವಾಗಿ ಸ್ವೀಕರಿಸದೆ ಪೂಜಿಸಲ್ಪಡುವ ದೇವರಾಗಿರಬೇಕೆಂದೂ ಊಹಿಸಲಾಗುತ್ತದೆ. ಹೀಗಾಗಿ ಹನುಮಂತನ ಬಗ್ಗೆಯಾವುದೇ ಅಧಿಕೃತ ದಾಖಲೆಗಳು ನಮಗೆ ಸಿಗುವುದಿಲ್ಲ. ಆದರೂ ಮುಖ್ಯವಾಗಿ ಅವನು ಒಂದು ಜಾತಿ-ವರ್ಗಕ್ಕೆ ಸಂಬಂಧಪಟ್ಟ ದೇವರಾಗಿದ್ದು, ಆ ಮೂಲವನ್ನು ಗುರುತಿಸಲು ನಮ್ಮಿಂದ ಸಾಧ್ಯವಿಲ್ಲ.[8] ಹೀಗಿದ್ದೂ ಹನುಮಂತನು ಡೊಂಬ ವಂಶಕ್ಕೆ ಸೇರಿದವನೂ ಮೇದಾರ ಗೋತ್ರಕ್ಕೆ ಸಂಬಂಧಿಸಿದವನೂ ಎಂದು ಮುಂತಾಗಿ ಊಹಿಸಲಾಗುತ್ತದೆ.[9]
ಈ ಹನುಮಂತನ ಪ್ರಸ್ತಾಪ ವೇದಗಳಲ್ಲಿ ಬರುವುದೇ ಇಲ್ಲವೆಂಬ ಕಾರಣಕ್ಕಾಗಿ ಅವನ ಆರಾಧನೆ ಬಹಳಷ್ಟು ಪ್ರಾಚೀನವಾಗಿರದೆ ಒಂದು ಕಾಡು ಜನಾಂಗದಿಂದ ದತ್ತು ಬಂದುದಾಗಿರಬೇಕೆಂದೂ ಹೇಳಲಾಗುತ್ತದೆ. ಆದರೆ ಋಗ್ವೇದಲ್ಲಿ (x.೮೬) ’ವೃಷಾಕಪಿ’ ಎಂಬ ಪದ ಬರುತ್ತದೆ. ಆ ಪದ ಬಹುಶ ಈ ಹನುಮಂತನನ್ನೇ ಕುರಿತಾಗಿರಬೇಕೆಂದೂ ಊಹಿಸಲಾಗುತ್ತದೆ.[10] ಎಫ್. ಇ. ಪರಾಗೀಟರ್ಸ್‌(Paragiter’s) ಅವರ ಸಂಶೋಧನೆಯನ್ನು (ಜೆ. ಆರ್.ಎ.ಎಸ್. ೧೯೯೩, ಪು. ೪೦೦), ಗಮನಿಸಿ, ಎಕ್ಸ್. ಎಸ್. ಥಾನಿ ನಯಾಗುಮ್) (Thami Nayagam) ಎನ್ನುವವರು ಹೀಗೆ ಬರೆಯುತ್ತಾರೆ:[11] ಎಫ್. ಇ. ಪರಾಗೀಟರ‌ಸ್೦ ಅವರ ವಿಶೇಷ ಸಂಶೋಧನೆ ನಮಗೆ ಹನುಮಂತನ ಬಗೆಗೆ ಈ ರೀತಿ ಗ್ರಹಿಸಲು ಕಾರಣವಾಗುತ್ತದೆ-ಅವನೊಬ್ಬ ಕಪಿದೇವನಾಗಿದ್ದು, ಆರ್ಯ.ರಿಗಿಂತ ಮೊದಲೇ ದ್ರಾವಿಡ ಜನಾಂಗದಿಂದ ಪೂಜೆಗೊಳ್ಳುತ್ತಲಿರುವ ದೇವತೆಯಾಗಿದ್ದಾನೆ. ದ್ರಾವಡರು ಅನಿಗೆ ’ಅಣ್‌ಮಂತಿ’ (Anmanti- ತಮಿಳಿನಲ್ಲಿ) ಎನ್ನುತ್ತಾರೆ. (ಅಣ್ ಎಂದರೆ ಗಂಡು, ಮಂತಿ ಎಂದರೆ ಕಪಿ). ಇದನ್ನು ಆರ್ಯುರು ತಮ್ಮ ಭಾಷೆಗೆ ’ವೃಷಾಕಪಿ’ ಅಂದರೆ ’ಗಂಡುಕಪಿ’ ಎಂದು ಭಾಷಾಂತರಿಸಿ ಕೊಂಡರು. ಮುಂದೆ ಸಾವಕಾಶವಾಗಿ ದ್ರಾವಿಡರ ಈ ಪ್ರಬಲ ದೇವರನ್ನು ಆರ್ಯೆರೂ ಪೂಜಿಸತೊಡಗಿದರು. ನಂತರ ’ಅಣ್‌ಮಂತಿ’ ಎಂಬುದನ್ನೇ ಭಾಷಾಂತರಿಸಿ, ಸಂಸ್ಕೃತದಲ್ಲಿ ’ಹನುಮಂತ’ ಎಂದು ಕರೆಯಲಾಯಿತು. ಈಗಲೂ ಅದೇ ಹೆಸರಿನಿಂದಲೇ ಪ್ರಸಿದ್ಧನಾಗಿದ್ದಾನೆ.
ಈ ಎಲ್ಲ ಮಾತುಗಳನ್ನು ಗಮನಿಸಿ ಇಷ್ಟು ಹೇಳಬಹುದೆಂದು ತೋರುತ್ತದೆ: ಸ್ಥಳೀಯವಾಗಿ ಮಹತ್ವ ಪಡೆದ ವ್ಯಕ್ತಿ ತನ್ನ ಸುತ್ತಲಿನ ಜನರಿಂದ ಪೂಜ್ಯವೆನಿಸಿಕೊಳ್ಳುತ್ತಾನೆ. ಈ ಕಾರಣಕ್ಕಾಗಿ ಅವನ ಪೂಜೆ ಪ್ರಾರಂಭವಾಗುತ್ತದೆ. ನಂತರ ಅಂಥ ಅಂಥ ಯಾವುದೋ ಒಬ್ಬ ವ್ಯಕ್ತಿ ಪುರಾಣಗಳಲ್ಲಿ ಸ್ಥಾನಪಡೆದರೆ, ಅವನ ಸುತ್ತಹೆಣೆಯಲ್ಪಡುವ ಇತರ ಅನೇಕ ಪವಾಡಮಹಿಮೆಗಳಿಂದ ದೇವರಾಗಿ ಜನಗಳಿಂದ ಪೂಜೆ ಗೆಯ್ಸಿಕೊಳ್ಳುತ್ತಾನೆ. ಹಾಗೆಯೇ ದ್ರಾವಿಡ ಜನಾಂಗದ ಒಂದು ಗುಂಪಿನ ನಾಯಕನಾಗಿರಬಹುದಾದ ಹನುಮಂತನು ಯಾವುದೋ ಕಾರಣಕ್ಕಾಗಿ ಸ್ಥಳೀಯವಾಗಿ ಮಹತ್ವ ಪಡೆದು, ಪೂಜ್ಯನೆನಸಿಕೊಂಡು, ಆ ಗುಂಪಿನಿಂದ ಪೂಜೆಗೊಳ್ಳ ತೊಡಗಿ, ಮುಂದೆ ಕ್ರಮೇಣ ದ್ರಾವಿಡರ ಗ್ರಾಮದೇವತೆಯಾಗಿ ಸ್ಥಾನಪಡೆದಂತೆ ತೋರುತ್ತದೆ. ಹೀಗಾಗಿ ಈತ ಮೂಲತಃ ಆರ್ಯ,ರಿಗೆ ಸಂಬಂಧ ಪಡದ ಜನಾಂಗದ-ದ್ರಾವಿಡ-ದೇವರಾಗಿದ್ದನೆಂಬುದು, ವಿದ್ವಾಂಸರ ಹೇಳಿಕೆಯನ್ನು ಗಮನಿಸಿದರೆ ನಿಸ್ಸಂದೇಹವೆನಿಸುತ್ತದೆ.
ಆರ್ಯಸರು ದ್ರಾವಿಡರನ್ನು ಸೋಲಿಸಿ, ದಕ್ಷಿಣಕ್ಕಟ್ಟಿದ ನಂತರ, ದ್ರಾವಿಡರು-ತಾವು ವಾಸ ಮಾಡಿದಲ್ಲೆಲ್ಲ ರಕ್ಷಣೆಗೆಂದು ತಮ್ಮ ಪ್ರಬಲ ದೇವತೆ ಹನುಮಂತನನ್ನು ಯಾವುದೇ ಕಂಕಗಳು-ಬಹುಶ ಆರ್ಯ ರ ಭೀತಿಯೂ ಇರಬೇಕು, ಅವರಿಂದ ಕಾಪಾಡಲು-ಗ್ರಾಮದ ಹೊರಬಾಗಿಲಿಗೆ ಗುಡಿಕಟ್ಟಿ ಇಟ್ಟರು. ಈಗಲೂ ಪ್ರತಿ ಊರಿನ ಹೊರಗೆ ಹನುಮಂತನ ದೇವಾಲಯ ಇರಲು ಕಾರಣ, ಬಹುಶ ಆ ರೂಢಿಯೇ ಸಾಂಪ್ರದಾಯವಾಗಿ ಬೆಳೆದು ಬಂದಂತೆ ತೋರುತ್ತದೆ.
ನಂತರ ಆರ್ಯಿ-ದ್ರಾವಿಡರಲ್ಲಿ ಸಮನ್ವಯ ಬೆಳೆದಂತೆ ದ್ರಾವಿಡರ ಪ್ರಬಲ ದೇವರು-ಹನುಮಂತನನ್ನು ಆರ್ಯೆರೂ ಪೂಜಿಸಲು ಪ್ರಾರಮಭಿಸಿರಬೇಕು. ಆದರೆ ತಮ್ಮಿಂದ ದ್ರಾವಿಡರು ಸೋತ ಸಂಕೇತವಾಗಿ ಅವರ ದೇವರ ಪ್ರಾಬಲ್ಯವನ್ನು ಕಡಮೆ ಮಾಡಲು ಮತ್ತು ತಮ್ಮ ದೇವರ ಪ್ರಾಬಲ್ಯವನ್ನು ಹೆಚ್ಚಿಸಲು-ರಾಮಾಯಣದಲ್ಲಿ ಹನುಮಂತನನ್ನು ರಾಮನ ಸೇವಕನಂತೆ ಚಿತ್ರಿಸಿದರು. ಇದು ದ್ರಾವಿಸರನ್ನು ಅವಹೇಳನ ಮಾಡುವ ಬುದ್ಧಿಯಿಂದಲೂ ಇರಬೇಕು.
ಹೀಗೆ ನಂತರದಲ್ಲಿ ಬ್ರಾಹ್ಮಣರು ಹನುಮಂತನಿಗೆ ಜನಿವಾರ ಹಾಕಿದರು. ಚಂಡಿಕೆ ಹಚ್ಚಿದರು. ವೀರಶೈವರು ಲಿಂಗ ಕಟ್ಟಿದರು. ಇಸ್ಲಾಮರು ಮೌಲಾಲಿಯಿಂದಲೇ ಅವನ ಮುಸುಡಿ ಊದಿಕೊಂಡಿದೆ ಎಂದುಕಲ್ಪಿತ ಕಥೆ ಕಟ್ಟಿ ಹಾಡಿದರು.

ಇದೆಲ್ಲವನ್ನೂ ಗಮನಿಸಿ ಹೀಗೆ ಹೇಳಬಹುದು: ಯಾವುದೋ ಕಾರಣಕ್ಕಾಗಿ ಸ್ಥಳೀಯವಾಗಿ ಮಹತ್ವ ಪಡೆದ ಹನುಮಂತನು-ತನ್ನ ಜನಗಳಿಂದ ಪೂಜೆಗೈಯ್ಸಿಕೊಳ್ಳುತ್ತ, ಕ್ರಮೇಣ ಜನಪ್ರಿಯತೆ ಪಡೆಯುತ್ತ, ನಂಬುಗೆಗಳು ಪ್ರಬಲವಾಗುತ್ತ ಹೋಗಿ-ಪುರಾಣಗಳಲ್ಲಿ ಸ್ಥಾನ ಪಡೆದು, ಬಾರತದಾದ್ಯಂತ ಬಹುದೊಡ್ಡ ದೇವರಾಗಿ ಮಾರ್ಪಟ್ಟನು.
***
ಇನ್ನು ಹನುಮಂತನ ಬಗ್ಗೆ ಜನಪದಲ್ಲಿರುವ ನಂಬುಗೆಗಳನ್ನು ನೋಡೋಣ: ಹನುಮಂತನು ಬಹು ಪೂರ್ವಕಾಲದಿಂದಲೆ ಬಂಜೆಯವರಿಗೆ ಮಕ್ಕಳನ್ನು ಕೊಡುವ ದೇವರೆಂದು ನಂಬಲಾಗುತ್ತದೆ ಎಂದು ಹಿಂದೆಯೇ ಹೇಳಿದೆ. ಈ ನಂಬುಗೆ ಜಾವಾ ದೇಶದ ಜನಾಂಗಗಳಲ್ಲೂ ಇದೆಯೆಂದು ತಿಳಿದು ಬರುತ್ತದೆ. ನಮ್ಮಲ್ಲಿ-ನಡುರಾತ್ರಿ ಬೆತ್ತಲೆಯಾಗಿ ಹನುಮಂತ ದೇವರಿಗೆ ಪೂಜೆ ಸಲ್ಲಿಸಿದರೆ, ಮಕ್ಕಳಾಗುವುವು ಎಂಬ ಮೂಢನಂಬಿಕೆಯಿದೆ.[12] ಹೀಗೆ ಹನುಮಂತನು ಮಕ್ಕಳನ್ನು ಕೊಡುವ ದೇಹರಾದುದರಿಂದ ಜನಪದ ಕಥೆಗಳಲ್ಲೂ ಈ ಭಾವನೆಯನ್ನು ಹೊತ್ತ ಕಥಾ ಘಟಕಗಳು ಕಾಣಸಿಗುತ್ತವೆ: ಒಬ್ಬ ರಾಣಿ ಬಂಜಿ. ರಾಜನು ಆಕೆಯನ್ನು ಊರ ಹೊರಗೆ ಮನೆ ಕಟ್ಟಿ ಇಡುತ್ತಾನೆ. ಸಹಾಯಕ ಮಂಗವು-ರಾಣಿ ಬುರಿಯಾಗಿದ್ದಾಳೆಂದು ಸುಳ್ಳು ಸುದ್ದಿ ಹಬ್‌ಇಬಸುತ್ತದೆ. ಒಂಬತ್ತು ತಿಂಗಳಾದ ನಂತರ ಕೂಸಿನ ಜಡೆ ತೆಗೆಯಲು ಪರಸಿ ಹೊರಡುತ್ತದೆ. ಕಣಕದ ಗೊಂಬೆಯೊಂದನ್ನು ನಿರ್ಮಿಸಿ, ಕುಂಚಿಗೆಯಲ್ಲಿ ಸುತ್ತಿಕೊಂಡು ಮಂಗವೂ ಹೊರಡುತ್ತದೆ. ಮುಂದೆ, ಒಂದುಹನುಮಂತನ ಗುಡಿಯಲ್ಲಿ ಮೂರುತಿಯ ಮುಂದೆ ಗೊಂಬೆಯಿಟ್ಟು ತಾನು ಬಹಿರ್ದೆಸೆಗೆ ಹೋಗಿ ಬರುವವರೆಗೆ ಗೊಂಬೆಯನ್ನು ನಿಗಾಮಾಡಲು ಹನುಮಂತನಿಗೆ ತಾಕೀತು ಮಾಡಿ ಹೋಗುತ್ತದೆ. ತಿರುಗಿ ಬರುವುದರಲ್ಲಿ ಗೊಂಬೆ ಕಾಣದೆ, ಹನುಮಂತನೇ ನುಂಗಿರಬಹುದೆಂದು, ಅವನ ಮೇಲೆ ಅಪಾದನೆ ಹೊರಿಸಿ ತನ್ನಕೂಸು ತನಗೆ ಕೊಡದಿದ್ದರೆ ಹೊಸಲನ್ನು ಮುಖಕ್ಕೆ ಬಳಿಯುವದಾಗಿ ಹೆದರಿಸುತ್ತದೆ.ಹನುಮಂತನು ಹೆದರಿ-ಜೀವವಿರುವ ಕೂಸನ್ನೇ ಉಗುಳುತ್ತಾನೆ ಅಥವಾ ಅವನು ಉಗುಳಿದ ಉಗುಳೇ ಕೂಸಾಗಿ ಮಾರ್ಪಾಡುತ್ತದೆ.
ಇನ್ನೊಂದು ಕಥೆಯಲ್ಲಿ ಒಬ್ಬಳು ತನಗೆ ಗಂಡುಮಗು ಜನಿಸಿದರೆ ’ಅಪ್ಪಳ ತುಪ್ಪಳ’ಏರಿಸುವದಾಗಿ ಹನುಮಂತನಿಗೆ ಹರಕೆ ಹೊರುತ್ತಾಳೆ. ಅವಳಿಗೆ ಗಂಡು ಮಗು ಜನಿಸುತ್ತದೆ.

ಈ ಮೇಲಿನ ಎರಡೂ ಕಥಾ ಘಟಕಗಳಲ್ಲಿ ಒಡಮೂಡಿ ಬಂದಿರುವ ಭಾವನೆ- ’ಹನುಮಂತನು ಮಕ್ಕಳು ಕೊಡುವ ದೇವರಾಗಿದ್ದಾನೆ’ ಎಂಬ ಕಲ್ಪನೆಯಿಂದಲೇ ಎಂಬುದಕ್ಕೆ ಎರಡು ಮಾತಿಲ್ಲ.
ಬಹು ಕಾಲದಿಂದಲೂ ನಂಬಿಕೊಂಡು ಬಂದಿರುವ ಇನ್ನೊಂದು ನಂಬುಗೆಯೆಂದರೆ ಹನುಮಂತನು ಉಳುವವರ ದೇವನಾಗಿದ್ದು, ಅವರ ಫಲ ಕಾಪಾಡುವ ದೈವವಾಗಿದ್ದಾನೆ ಎಂಬುದು. ಇದಕ್ಕೆ ಉದಾಹರಣೆಯಾಗಿ ಒಂದು ಆಚರಣೆಯನ್ನು ನೋಡೋಣ:[13]
ಮದನ ಮನಗಿಸಬೇಕು ಮಂಡಲ ಬರಿಬೇಕು
ಸುತ್ತ ಕರಿಬಂಟ ಕಟ್ಟಬೇಕು
ಒಕ್ಕಲಿಗರು ಜೋಳದ ರಾಶಿಯ ಸಮಯದಲ್ಲಿ ಹಂತಿ ಮುಗಿದು, ಮದನ ಮನಗಿಸಿದ ನಂತರ, ಜೋಳದ ರವದಿಯನ್ನು ಸುಟ್ಟು, ಆ ಕರುಕಿನಿಂದ ಕಣದಲ್ಲಿ ಮಂಡಲ ಬರೆಯುತ್ತಾರೆ. ಅರ್ಧಚಂದ್ರಾಕೃತಿಯ ಹಾಗೂ ’+’ ಈ ಚಿನ್ಹೆಯ ಗುರುತು ಹಾಕುತ್ತಾರೆ. ಇದನ್ನು ’ಕರಿಬಂಟ’ ಎಂದು ಕರೆಯುತ್ತಾರೆ. ಈ ’ಕರಿಬಂಟ’ ಹನುಮಂತನ ವೆಂದು ಹೇಳುತ್ತಾರೆ:
ಕರಿಹನುಮ ನಿನ್ನ ರೂಪ ಬರದೇವು ಬಂಡಿಯ ಮ್ಯಾಲ
ಸಗರ ಶಾಪುರದ ಕರಿಹನುಮ ನಿನನಾಮ
ಬರದೇವು ನಮ್ಮ ಕಣದಾಗ
ಎಂಬ ನಡಿ ಅದಕ್ಕೆ ಸಾಕ್ಷಿಯಾಗಿಯೂ ಇದೆ. ದುಷ್ಟಶಕ್ತಿಯನ್ನು ಸಂಹಾರ ಮಾಡುವವನೂ, ಚೆಲುವನ್ನು ಕೆಡದಂತೆ ಕಾಪಾಡುವವನೂ, ಬಲವನ್ನೂ ಫಲವನ್ನೂ ಕೊಡುವವನೂ ಆದ ಹನುಮಂತನ ಮೇಲೆ ನಂಬುಗೆ ಇಟ್ಟ ಜನ, ಅವನನ್ನು ತಮ್ಮ ಕಣದಲ್ಲಿ ಸಂಕೇತ ತಂದು ಜವಾಬುದಾರಿಯನ್ನು ಹೊರಿಸಿದರು.
ಪ್ರತಿಯೊಂದು ಊರಿಗೂ ಹನುಮಂತನಿರುವಂತೆ ಆತನ ಭಕ್ತರು ಬಳಗವೂ ಅನಂತ. ಆತ ಶನಿಯನ್ನು ಗೆದ್ದ ಬಲವಂತ. ಚೆಲುವಾದ ಮುದ್ದು ಮಗುವಿಗೆ ದೃಷ್ಟಿತಟ್ಟದಿರಲೆಂದು ತಾಯಿ ತನ್ನ ಮಗುವನ್ನು ಹನುಮಪ್ಪನ ದೇವಸ್ಥಾನಕ್ಕೆ ಒಯ್ದು ಆತನ ಮೇಲೆ ಎಣ್ಣೆ ಸುರವಿ, ಮೈಮೇಲಿರುವ ಜಿಗುಟು ಕಪ್ಪು ಮಸಿಯನ್ನು ಪ್ರಸಾದವೆಂದು ತನ್ನ ಮಗುವಿನ ಹಣೆಗೂ ಹಚ್ಚುತ್ತಾಳೆ. ಇದರಿಂದ ತನ್ನಮಗುವಗೆ ಯಾವ ಕೇಡೂ ಬಾರದು ಎಂಬುದು ಮುತ್ತೈದೆಯ ನಂಬುಗೆ. ಸುಂದರ ದೇಹಿಗಳಾದ ಪೈಲ್ವಾನರು ತಮ್ಮ ದೇಹಕ್ಕೆ ಕೆಟ್ಟ ದೃಷ್ಟಿ ಬೀಳದಿರಲೆಂದು, ತಮ್ಮ ಬಲವು ವೃದ್ಧಿಯಾಗಲೆಂದು ಹಾಗೂ ಭೂತಪಿಶಾಚಿ ಮೊದಲಾದ ದುಷ್ಟಶಕ್ತಿಗಳು ಬಡೆದುಕೊಂಡವರು. ಅವುಗಳ ಪರಿಹಾರಕ್ಕಾಗಿ ಹನುಮಪ್ಪನ ಮೂರ್ತಿ ಇರುವ ಬಿಲ್ಲ. ತಾಯಿತಗಳನ್ನು ಕರಿಯದಾರದಲ್ಲಿ ಪವಣಿಸಿ ಕಟ್ಟಿಕೊಳ್ಳುತ್ತಾರೆ. ಇಲ್ಲೆಲ್ಲ ಹನುಮಪ್ಪನೊಂದಿಗೆ ಕಪ್ಪುನಿಶಾನೆ ಬಳಕೆಗೊಳ್ಳುತ್ತಿರುವುದನ್ನು ಕಾಣುತ್ತೇವೆ-ಕರಿಯದಾರ, ಕಪ್ಪು ಮಸಿ, ಕರಿಯಮಣಿ ಮುಂತಾವುದಗಳು.
ತನ್ನ ಜೀವನಕ್ಕೆ ಆಧಾರವಾದ ಬೆಳಸನ್ನು ಮಗುವಿನಂತೆ ಜೋಪಾನಮಾಡಿ. ಕಾಯ್ದು ದುಡಿದು ಒಕ್ಕಲಿಗನು ಬೆಳೆಯನ್ನು ಬೆಳೆಸುತ್ತಾನೆ. ತನ್ನ ಶ್ರಮದ ಫಲಮನೆಗೆ ಬರಲು ತಯಾರಾಗಿದೆ. ತಾನು ದುಡಿದು ಸಂಪಾದಿಸಿದ ವಸ್ತುವಿನ ಮೇಲೆ ಪ್ರೀತಿ ಇರುವುದು ಮನುಷ್ಯನ ಸಹಜ ಗುಣ. ಅಂತಲೇ ಮದನ ಮನಗಿಸಿದ ಮೇಲೆ ತುಂಬಿದ ಕಾಳುಗಳಿಂದ ಬಲು ಸುಂದರವಾಗಿ ಕಾಣುವ ರಾಶಿಯ ಮೇಲೆ ಕಟ್ಟ ದೃಷ್ಟಿ ಬೀಳದಿರಲೆಂದು, ತಮ್ಮ ರಾಶಿ ಹುಲುಸಾಗಲಿ, ಯಾವುದೇ ಕಂಟಕವನ್ನು ತಂದೊಡ್ಡುವ ದುಷ್ಟಶಕ್ತಿಗಳು ಕಣದಲ್ಲಿ ಹೊಗದಿರಲಿ ಎಂದು. ಚೆಲುವನ್ನು ಕಾಪಾಡುವವನೂ, ದುಷ್ಟಶಕ್ತಿಯನ್ನು ನಿವಾರಿಸುವವನೂ ಆದ ಹನುಮಂತನ ರೂಪವನ್ನು ಒಕ್ಕಲಿಗರು ತಮ್ಮ ಕಣದಲ್ಲಿ ಬರೆಯುತ್ತಾರೆ. ಭೂತ-ಪಿಶಾಚಿ ಅಲ್ಲದೆ ಭಾನುಮತಿಯಂತಹ ಕೆಟ್ಟ ವಿದ್ಯಗಳಿಂದ ಕಣದಲ್ಲಿ ಕಾಳು ತಿರುಗಿಸಿಕೊಳ್ಳುವ ಜನ ಇದ್ದಾರೆ. ಹನುಮಂತನ ಮುಂದೆ ಈ ದುಷ್ಟ ಶಕ್ತಿಗಳ ಆಟ ನಡೆಯುವದಿಲ್ಲ ಎಂಬ ನಂಬಿಕೆಯೇ ಇದಕ್ಕೆ ಕಾರಣವೆನ್ನಬೇಕು.
ಬ್ರಹ್ಮಚಾರಿಯಾಗಿ ಉಳಿಯುವುದು ಎಂದರೆ-ತನ್ನ ಸುತ್ತಲಿನವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದರ ಮೂಲಕ ಅವರ ಮೇಲೆ ಪ್ರಭುತ್ವವನ್ನು ಸ್ಥಾಪಿಸುವುದು ಎಂದು ಹೇಳಲಾಗುತ್ತದೆ. ಅಂದರೆ ಇದರಿಂದ ಅಸಾಧಾರಣವಾದ ಶಕ್ತಿ ಮತ್ತು ಅದ್ಬುತ ಯಶಸ್ಸುಗಳು ಪ್ರಾಪ್ತವಾಗುತ್ತವೆ ಎಂದು ನಂಬಲಾಗುತ್ತದೆ. ಚಿರಂಜೀವಿ-ಜಿತೇಂದ್ರಿಯನಾದ ಹನುಮಂತನು ತನ್ನ ವೀರ್ಯ ಶಕ್ತಿಯ ಬಲದಿಂದ ಅನೇಕ ವಿಘ್ನಗಳನ್ನು ನಿವಾರಿಸುವವನಾಗಿದ್ದಾನೆ ಎಂದು ನಂಬಲಾಗುತ್ತದೆ. ಆತ ಶನಿಯನ್ನು ಗೆದ್ದವನಾದ್ದರಿಂದ, ತಮಗೆ ಅನಿಷ್ಟಗಳು ಕಾಡಹತ್ತಿದರೆ, ಹನುಮಂತನ ಪೂಜೆ, ಅಭಿಷೇಕ ಇತ್ಯಾದಿಗಳನ್ನು ಮಾಡಿದರೆ-ಆ ಕಾಡಾಟಗಳು ದೂರವಾಗುತ್ತವೆ ಎಂದೂ ನಂಬುತ್ತಾರೆ. ಹನುಮಂತನು ಶನಿಯನ್ನು ಗೆದ್ದ ಪ್ರಸಂಗವನ್ನು ಹೇಳುವ ಒಂದು ಕಥಾಘಟಕ ಹೀಗಿದೆ: ಶನಿಯು ಎಲ್ಲ ದೇವರುಗಳನ್ನು ಕಾಡಿ, ಗೆ‌ದ್ದು ನಾಳೆ ತನ್ನಲ್ಲಿಗೆ ಬರುವುದಾಗಿ ಹನುಮಂತನಿಗೆ ಸೂಚನೆ ಕೊಡುತ್ತಾನೆ. ಮರುದಿನ ಆತನ ತಲೆಯ ಮೇಲೆ ಬಂದು ಕುಳಿತುಕೊಳ್ಳುತ್ತಾನೆ. ಹನುಮಂತನು ತನ್ನ ಬಾಲದಿಂದ ಗುಡ್ಡವನ್ನೇ ಎತ್ತಿ ಸಾವಕಾಶವಾಗಿ ಶನಿಯ ತಲೆಯ ಮೇಲೆ ಇಡುತ್ತಾನೆ. ಗುಡ್ಡದ ಭಾರವನ್ನು ತಾಳದ ಶನಿ ಹನುಮಂತನಿಗೆ ಶರುಣು ಬರುತ್ತಾನೆ. ಹನುಮಂತನು ತನಗೆ, ತನ್ನ ಭಕ್ತರಿಗೆ ಕಾಡಬಾರದೆಂಬ ಕರಾರಿನ ಮೇಲೆ ಶನಿಯನ್ನು ಬಿಟ್ಟು ಬಿಡುತ್ತಾನೆ.
ಈ ನಂಬಿಕೆಯಿಂದಲೇ ಮಾಟವನ್ನು ಹೋಗಲಾಡಿಸುವಲ್ಲಿಯೂ ಹನುಮಂತನ ಶಕ್ತಿ ಉಪಯೋಗವಾಗುತ್ತದೆಂದು ಹೇಳುತ್ತಾರೆ. ಭಾನಾಮತಿ, ದೆವ್ವ, ಭೂತ-ಪಿಶಾಚಿ ಇತ್ಯಾದಿ ದುಷ್ಟ ಶಕ್ತಿಗಳನ್ನು ಹೊಡೆದೋಡಿಸಲು ಗೈಯ್ಯುವ ಪ್ರತಿಮಾಟ ಹಾಗೂ ಪೂಜೆಗಳಲ್ಲಿ ಹನುಮಂತನ ಪಾತ್ರ ಬಹು ಪ್ರಮುಖವಾದುದು. ಇದೇ ಕಾರಣದಿಂದಲೇ ಮಾಟದಿಂದ ಕಣದಲ್ಲಿಯ ರಾಇಯನ್ನು ಅಪಹರಣ ಮಾಡಲು ಸಾಧ್ಯವಾಗದಂತೆ ನೋಡಿಕೊಳ್ಳಲು ಹನುಮಂತನನ್ನು ’ಕರಿಬಂಟ’ನ ರೂಪದಲ್ಲಿ, ಕಣದಲ್ಲಿ ಕಾಣುತ್ತೇವೆ.

ಇನ್ನೂ ಕೆಲವು ನಂಬಿಕೆಗಳು ಹೀಗಿವೆ: ಶನಿವಾರಕ್ಕೊಮ್ಮೆ ಹಣಮಂತರಿಗೆ ದೇವರಿಗೆ ನಡೆದುಕೊಂಡರೆ ಅನಿಷ್ಟಗಳು ತಪ್ಪುತ್ತವೆ. ಹನುಮಂತನ ಅಂಗಾರವನ್ನು ಅರಿವೆಯಲ್ಲಿ ಹಾಕಿ ಟೊಂಕಕ್ಕೆ ಕಟ್ಟಿಕೊಂಡರೆ ದೆವ್ವ ಸಮೀಪ ಬರುವುದಿಲ್ಲ. ಹೆಣ್ಣಮಕ್ಕಳು ಹನುಮಪ್ಪನಿಗೆ ಪೂಜೆ ಮಾಡಿದರೆ ಲಗ್ನ ತೀವ್ರ ಆಗುತ್ತದೆ ಚಳಿ ಬನ್ನಿಗಿಡದಲ್ಲಿ ವಾಸವಾಗಿರುತ್ತದೆ. ದಸರೆಗೆ ಬನ್ನಿಮುಡಿದು ಬರುವವರೊಂದಿಗೆ ಹನುಮಂತನ ಗುಡಿಗೆ ಬರುತ್ತದೆ. ಅಲ್ಲಿಯೇ ದೀಪಾವಳಿಯ ವರೆಗೆ ಕುಳಿತಿದ್ದು, ದೀಪಾವಳಿ ಪಾಡ್ಯದ ನಸುಕಿನಲ್ಲಿ ಅಗಸನು ಊರಲ್ಲಿ ಆರುತಿ ಬೆಳಗಲು ಬರುವುದಕ್ಕಿಂತ ಮುಂಚೆ ಹನುಮಂತನಿಗೆ ಆರುತಿ ಬೆಳಗಿ ಬರುತ್ತಾನೆ. ಚಳಿಯು ಈ ಅಗಸನ ಕಂಬಳಿಯಲ್ಲಿ ಕುಳಿತುಕೊಂಡು ಮನೆ ಮನೆ ಸೇರುತ್ತದೆ-ಎಂಬ ನಂಬಿಕೆಯಿದೆ.
ಇನ್ನೂ ಕೆಲವು ಆಚರಣೆಗಳು ಹೀಗೆವೆ: ಸೋದರಳಿಯ ಅಥವಾ ಸೋದರ ಸೊಸೆಗೆ ಮೊದಲಿಗೆ ಮೇಲಿನ ಹಲ್ಲು ಹೊರಟರೆ-ಹನುಮಂತನ ಗುಡಿಯಲ್ಲಿ ಒಂದು ಆಚರಣೆ ನಡೆಯುತ್ತದೆ. ಸೋದರ ಮಾವನು ಮೇಲಿನ ಹಲ್ಲು ಹೊರಟ ಕೂಸಿಗಾಗಿ ಅಂಗಿ, ಟೊಪ್ಪಿಗೆ ಅಲ್ಲದೆ ಒಂದು ಸಣ್ಣ ಬೆಳ್ಳಿ ಬಟ್ಟಲನ್ನು ಒಯ್ಯುತ್ತಾನೆ. ಗುಡಿಯ ಬಾಗಿಲಿಗೆ ಪರದೆ ಹಾಕುತ್ತಾರೆ. ಮಗು ಒಳಗೆ ಇರುತ್ತದೆ. ಸೋದರಮಾವ ಹೊರಗಿರುತ್ತಾನೆ. ಪೂಜಾರಿ-ಸೋದರಮಾವನ ತಂದ ಬೆಳ್ಳಿ ಬಟ್ಟಲಿನಿಂದ ಮಗುವಿನ ಹಲ್ಲಿಗೆ ಗೀರಿ ರಕ್ತ ತೆಗೆದು ತಂದು ಸೋದರಮಾವನ ಹಣೆಗೆ ಹಚ್ಚುತ್ತಾನೆ. ನಂತರ ಕೂಸಿನ ಮುಖ ನೋಡುತ್ತಾನೆ. ಅಲ್ಲಿಯವರೆಗೆ ಅಂಥ ಮಗುವಿನ ಮುಖ ಸೋದರಮಾವ ನೋಡಬಾರದು ಎಂಬ ನಂಬಿಕೆಯಿದೆ. ಇನ್ನು ಯಾವುದೇ ಶುಭ ಕಾರ್ಯಕ್ಕೆ ಬೀಗರು ಊರಿಗೆ ಬಂದರೆ ಮೊದಲು ಇಳಿದುಕೊಳ್ಳುವುದು ಹನುಮಂತನ ಗುಡಿಯಲ್ಲಿ ಅಲ್ಲಿಂದ ಅವರಿಗೆ ಮೆರವಣಿಗೆಯಲ್ಲಿ ಕರೆತರುತ್ತಾರೆ. ಮದುವೆಗೆ ಬಂದ ಬೀಗರಂತೂ ಹನುಮನ ಗುಡಿಯಲ್ಲಿ ಇಳಿಯಲೇ ಬೇಕು. ಅಲ್ಲಿಯೇ ಬೀಗರ ಬೇಟಿ ನಡೆಯುವುದು. ಹೀಗೆ ಹನುಮಂತನು ನಮ್ಮ ದಿನನಿತ್ಯದ ಜೀವನ-ಸಂಸಕೃತಿಯೊಂದಿಗೆ ತನ್ನ ಸಂಬಂಧವನ್ನು ನಿರಂತರವಾಗಿ ಗಟ್ಟಿಗೊಳಿಸಿಕೊಳ್ಳುತ್ತಲೇ ಇದ್ದಾನೆ.

ಮಹಾಭಾರತದ ಅರ್ಜುನನು ಹನುಮಂತನ ಲಾಂಛನವುಳ್ಳ ಪತಾಕೆಯನ್ನು ಹೊಂದಿದ್ದ. ಒಂದು ಹಕ್ಕಿಯ ಹೆಸರು ಹನುಮನ ಹಕ್ಕಿ. ಉತ್ತರದಿಕ್ಕಿಗೆ ಹನುಮನ ದಿಕ್ಕು ಎನ್ನುತ್ತಾರೆ. ಕಾರವಾರ ಜಿಲ್ಲೆಯ ’ಹನುಮಾವರ’ ಎಂಬ ಊರು ಈಗ ಹೊನ್ನಾವರವಾಗಿದೆ. ಬೀದರ ಜಿಲ್ಲೆಯಲ್ಲೊಂದು ’ಹನುಮಂತವಾಡಿ’ ಎಂಬ ಊರಿದೆ. ’ಕರಿಹನುಮ್ಯಾ’, ’ಹಣಮಂದೇವರ ಮಾರ್ಯಾಂ ವ’, ’ಕ್ವಾಡಗ’, ಮಾರ್ಯಾಂ್ವ, ಇತ್ಯಾದಿ ಪಡೆನುಡಿಗಳು ಬಳಕೆಯಲ್ಲಿವೆ. ಹನುಮಂತನ ಮುಂದೆ ಹಾರೋ ಗುಬ್ಬಿಯೇ ’ಹನುಮಂತರಾಯ ಹಗ್ಗ ತಿಂದರೆ ಪೂಜಾರಯ್ಯ ಸಾವಿಗೆ ಬಯಸಿದನಂತೆ’, ’ಊರು ಸುಟ್ಟರೂ ಹನುಮಂದೇವರು ಹೊರತೆ’, ’ಮೊದಲು ದೇವರು ಮೂಲೇಲಿದ್ದರೂ ಹನುಮಂತರಾಯಗೆ ದೀಪೋತ್ಸವು’-ಮುಂತಾದ ಗಾದೆಗಳು ಬಳಕೆಯಲ್ಲಿವೆ. ಇದೆಲ್ಲವನ್ನುಳಿದು-ಕೊಜನೆಯದಾಗಿ, ನಮಗೆ ಪೂಜ್ಯೆನಾಗಿರುವ ಅನೇಕ ಮೂಢನಂಬುಗೆಗಳಿಗೆ ಕಾರಣನಾಗಿರುವ ಈ ಹನುಮಂತ ದೇವರ ಬಗ್ಗೆ, ಭಾರತವನ್ನು ಸಂದರ್ಶಿಸಿದ ಪ್ರವಾಸಿಗಳು ಆಡಿದ ಕೆಲವು ಮಾತುಗಳನ್ನು ನೋಡಬಹುದೆಂದು ತೋರುತ್ತದೆ;

ನಿಕೋಲಾಸ್ ಪಿಮೆಂಟಾ (೧೫೯೯-೧೬೧೭) ಎನ್ನುವ ರೋಮ್ ದೇಶದ ಪ್ರವಾಸಿಗನು ೧೫೯೯ ಡಿಸೆಂಬರ ತಿಂಗಳಲ್ಲಿ ಗೋವೆಯಿಂದ ರೋಮಗೆ ಬರೆದ ಪತ್ರದಲ್ಲಿ ಬರೆಯುತ್ತಾನೆ: ’ಪೆರಿಮಾಳ್ ಎಂಬದೇವಸ್ಥಾನದಲ್ಲಿ ’ಹನಿಮಂತ್’ನೆಂಬ ಕಪಿಯನ್ನು ಪೂಜಿಸುತ್ತಾರೆ. ಇವನೂ ದೇವರಾಗಿದ್ದನಂತೆ. ಯಾವ ಕಾರಣವೋ ಇವನೂ ಇನ್ನೂ ಸಾವಿರಾರು ದೇವರುಗಳೂ ಕಪಿಗಳಾಗಿ ಬಿಟ್ಟರಂತೆ. ಕಪಿಯಾಗಿ ಕಪಿಗಳ ಮೇಲೆ ರಾಜ್ಯಭಾರ ಮಾಡುತ್ತಿದ್ದನು. ಒಮ್ಮೆ ರಾಮನಕೋರ್ (ರಾಮೇಶ್ವರ) ದಿಂದ ಸಿಲೋನಿಗೆ ಹೋಗಬೇಕಾಗಿ ಬಂತು. ಹಡಗುಗಳು ಇರಲಿಲ್ಲ. ಈ ಕಾರಣ ಹನುಮಂತ ನೀರಿನ ಮೇಲೆ ನೆಗೆಯುತ್ತ ಹೋದ. ಒಂದೊಂದು ನೆಗೆತಕ್ಕೆ ಒಂದೊಂದು ಒಂದೊಂದು ಮರುಳುಗಡ್ಡೆ ಮಾಡಿಕೊಂಡು ನೆಗೆಯುತ್ತ ತನಗೂ ತನ್ನ ಕಡೆಯವರಿಗೂ ದಾರಿ ಮಾಡಿದ.[14]
ಫಾದರ್ ಅಂತೋಣಿ ಮಾನ್ಸೆರೆಟ್ (೧೫೭೬-೧೬೦೦) ಎನ್ನುವವನು ತನ್ನ ಪ್ರವಾಸ ಕಥನದಲ್ಲಿ ಬರೆಯುತ್ತಾನೆ: ’ಮತುರಾನಮಿಗೆ (ಮಥುರೆ) ಆರು ಮೈಲಿ ದೂರದಲ್ಲಿ ಅನುಮಂತಾಸನ (ಹನುಮಂತ) ದೇವಸ್ಥಾನವಿದೆ. ಅದರ ಬಳಿ ಮುನ್ನೂರು ಕೋತಿಗಳನ್ನು ಸಾರ್ವಜನಿಕರ ಖರ್ಚಿನಲ್ಲಿ ಸಾಕಿದ್ದಾರೆ. ಗಂಟೆಹೊಡೆದಾಗ ಈ ಕೋತಿಗಳು ಆಯುಧಗಳನ್ನು ಹಿಡಿದು ಎರಡು ತಂಡಗಳಾಗಿ ಕಾದಾಡುತ್ತವೆ. ಊಟ ಮಾಡುವ ವೇಳೆಯಲ್ಲಿ ಊಟ ಮಾಡುತ್ತವೆ. ಇದೆಲ್ಲ ದೇವರ ಪ್ರೇರಣೇಯಿಂದ ನಡೆಯುತ್ತದೆಯೆಂದು ಬ್ರಾಹ್ಮಣರು ಹೇಳಿ ಜನಸಾಮಾನ್ಯರನ್ನು ನಂಬಿಸುತ್ತಾರೆ.ಆದರೆ ಕೋತಿಗಳಿಗೆ ಆ ರೀತಿ ಮಾಡಲು ಹೇಳಿಕೊಡುವುರಿಂದ ಅವು ಹಾಗೆ ಮಾಡುತ್ತವೆ ಎಂಬ ವಿಚಾರ ಬಹಳ ಜನಕ್ಕೆ ಗೊತ್ತಿಲ್ಲ. ಮಹದೇವ, ಕೃಷ್ಣ, ಹನುಮಂತ, ಗಣೇಶ ಮುಂತಾದವರಿಗೆ ಸಂಬಂಧಪಟ್ಟ ಕಥೆಗಳು ಕೇಳಲು ಅನರ್ಹವಾದುವುಗಳಷ್ಟೇ ಅಲ್ಲ, ಬುದ್ದಿಗೆ ಹಿಡಿಯುವಂತಹವುಗಳೂ ಇಲ್ಲ. ಇವನ್ನೆಲ್ಲ ನಂಬುವ ಈ ಮೂಢ ಜನಗಳಿಗೆ ಏನು ಹೇಳಬೇಕೋ ಕಾಣೆ’. ೧೫
* * *
________________________________________
[1] ಹನುಮಂತನು ರಾಮನ ೧೨ ಜನ ಮಂತ್ರಿಗಳಲ್ಲಿ ಒಬ್ಬನಾಗಿದ್ದನೆಂದು ಹೇಳಲಾಗಿದೆ. ಬ್ರಹ್ಮಾಂಡ ಪುರಾಣ. ಸಂ. ೧೧೧, ಅ-೭, ಪ-೨೨೩-೨೬, ೨೩೧-೪೪
[2] Encyclopaedia Asiatica, Vol, IV. p-13.
[3] Encyclopaedia of Religion and Ethics, Vol I. p. 522.
[4] ಅದೇ. ಪು 523
[5] ಜನಪದ ಹೇಳಿಕೆಯಂತೆ: ಅಂಜನಾದೇವಿ ಕುರುಡಿ. ಗಿಡದ ಕೆಳಗೆ ಕೈ ತೆರೆದು ಕುಳಿತು, ಕೈಯಲ್ಲಿ ಬಿದ್ದುದನ್ನು ಸ್ವೀಕರಿಸುತ್ತಿದ್ದಳು.ಆಕಾಶಯಾನವಲ್ಲಿದ್ದ ವಾಯುದೇವನು ಉಗುಳಲು, ಅದು ಅಂಜನಾದೇವಿಯ ಕೈಯಲ್ಲಿ ಬಿದ್ದಿತು. ಅದನ್ನೇ ಸೇವಿಸಿದಳು. ಅದರಿಂದ ಗರ್ಭನಿಂತು ಮಾರುತಿ ಜನಿಸಿದನು.
[6] ಹನುಂತನಿಗೆ ವೀರಭದ್ರ ದೇವರಿಂದ ಲಿಂಗಧಾರಣ ಮಾಡಿಸುವ ಪ್ರಸಂಗ ಹೊಂದಿದ ಒಂದು ಬಯಲಾಟ ಕೂಡ ಹೊರಬಿದ್ದಿದೆ: ’ಹನುಮಂತನ ಲಿಂಗಧಾರಣ-ಸಂ. ಸೋಮಶೇಖರ ಇಮ್ರಾಪೂರ, ಇನ್ನೊಂದು ನಾಟಕ, ನಲವಡಿ ಶ್ರೀಕಂಠಶಾಸ್ತ್ರಿಗಳಿಂದ ಶಬಿತವಾಗಿದೆ.
[7] Encyclopaedia of Americal, Vol,6, p-491.
[8] Encyclo Paedia of Religion and Ethics, Vol.I. P.491.
[9] Thurston E. : Castes and tribes of Sluthern India. vol. II, P-324, Cosmo Publications, Delhi, 1975.
[10] Encyclopaedia of Religion and Ethics, Vol. 1, P-491
[11] Tani Nayagam X.S.: Tamil culture and civilization, P.-32-33.
[12] Hutton J.H. : Caste in India. P.-246
[13] ಜನಪದ ಕಥೆಯ ವಸ್ತು ಮತ್ತು ತಂತ್ರ ಎಂಬ ನನ್ನ ಪುಸ್ತಕವೊಂದರಲ್ಲಿಯ ’ಒಕ್ಕಲಿಗನು ಪೂಜಿಸುವ ಎರಡು ಸಂಕೇತ ಶಕ್ತಿಗಳು’ ಎಂಬ ಲೇಖನನಿಂದ ಈ ಕೆಳಗಿನ ವಿವರಣೆಯನ್ನು ಎತ್ತಿಕೊಳ್ಳಲಾಗಿದೆ.
[14] ಪ್ರವಾಸಿ ಕಂಡ ಇಂಡಿಯಾ, ಸಂ.೩, ಪು. ೯೩.
ಪುಸ್ತಕ: ಕರ್ನಾಟಕದ ಗ್ರಾಮದೇವತೆಗಳು
ಲೇಖಕರು: ವೀರಣ್ಣ ದಂಡೆ
ಪ್ರಕಾಶಕರು: ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ