ಮಂಗಳವಾರ, ಫೆಬ್ರವರಿ 21, 2012

ದರೋಜಿ ಈರಮ್ಮಗೆ ’ಜಾನಪದ ಶ್ರೀ’ ಪ್ರಶಸ್ತಿ

ಸಿ. ಮಂಜುನಾಥ್, ಬಳ್ಳಾರಿ




ಬಳ್ಳಾರಿ ಜಿಲ್ಲೆಯ ಹೆಮ್ಮೆಯ ಜಾನಪದ ಕಲಾವಿದೆ ನಾಡೋಜ ದರೋಜಿ ಈರಮ್ಮ ಅವರು ೨೦೧೦ ನೇ ಸಾಲಿನ ಪ್ರತಿಷ್ಠಿತ ಜಾನಪದ ಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ಬುರ್ರಕಥಾ ಪ್ರಕಾರಕ್ಕೆ ಸಲ್ಲಿಸಿರುವ ಅನುಮಪ ಸೇವೆಯನ್ನು ಗುರುತಿಸಿ ರಾಜ್ಯ ಸರಕಾರ (ಕನ್ನಡ ಮತ್ತು ಸಂಸ್ಕೃತಿ ಇಲಾಖೆ) ಈರಮ್ಮ ಅವರನ್ನು ಜಾನಪದ ಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿದೆ.ಫೆ. ೨೨ ರಂದು ಬುಧವಾರ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಜರುಗಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸದಾನಂದಗೌಡರು ದರೋಜಿ ಈರಮ್ಮ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ರಾಜ್ಯ ಸರಕಾರ ತಮ್ಮನ್ನು ಪ್ರತಿಷ್ಠಿತ ಜಾನಪದ ಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಸಂತಸ ತಂದಿದೆ ಎಂದು ಈರಮ್ಮ ಹರ್ಷ ವ್ಯಕ್ತಪಡಿಸಿದರು.ಹಳೇ ದರೋಜಿಯ ತಮ್ಮ ನಿವಾಸದಲ್ಲಿ ’ಕನ್ನಡ ಜಾನಪದ’ ಕ್ಕೆ ಪ್ರತಿಕ್ರಿಯಿಸಿದ ದರೋಜಿ ಈರಮ್ಮ ಅವರು, ಅಲೆಮಾರಿ ಸಮುದಾಯಕೆ ಸೇರಿದ ತಮ್ಮನ್ನು ಸರಕಾರ ಗುರುತಿಸಿ ಪ್ರಶಸ್ತಿಗೆ ಆಯ್ಕೆಮಾಡಿರುವುದು ನಿಜಕ್ಕೂ ಖುಷಿ ತಂದಿದೆ ಎಂದರು.ಬುರ್ರಕಥಾ ಉಳಿಸಿ ಬೆಳೆಸಲು ಶ್ರಮಿಸುತ್ತಿರುವುದಾಗಿ ತಿಳಿಸಿದ ದರೋಜಿ ಈರಮ್ಮಅವರು, ತಮ್ಮ ಸಮುದಾಯದ ಬಾಲಕಿಯರಿಗೆ ತರಬೇತಿ ನೀಡುತ್ತಿರುವುದಾಗಿ ತಿಳಿಸಿದರು.ತಮ್ಮ ಹಿಂದಿನ ಕಷ್ಟದ ದಿನಗಳನ್ನು ಸ್ಮರಿಸಿಕೊಂಡ ದರೋಜಿ ಈರಮ್ಮ ಅವರು, ಎರಡು ಸೇರು ಜ್ವಾಳಕ್ಕಾಗಿ ಕಥೆ ಹೇಳಿದ್ದೇನೆ. ಹೊಲಗಳಲ್ಲಿ ಕೂಲಿ ಮಾಡಿ, ಕಳೆ ತೆಗೆದು ಹೊಟ್ಟೆ ಹೊರೆದದ್ದನ್ನು ಹೇಳಿದರು. ಏನೇ ಕಷ್ಟ ಬಂದರೂ ಬುರ್ರಕಥೆ ಹೇಳುವುದನ್ನು ಬಿಡಲಿಲ್ಲ ಎಂದರು.

ದರೋಜಿ ಈರಮ್ಮ ಅವರಿಗೆ ರಾಜ್ಯಮಟ್ಟದ ಜಾನಪದ ಶ್ರೀ ಪ್ರಶಸ್ತಿ ಬಂದಿರುವುದಕ್ಕೆ ಬುಡ್ಗ ಜಂಗಮ ಸಮುದಾಯ ಹರ್ಷ ವ್ಯಕ್ತಪಡಿಸಿದೆ.
ಸಮುದಾಯದ ಯುವ ಕಲಾವಿದ ದರೋಜಿ ರಾಮು ಮಾತನಾಡಿ, ಈ ಪ್ರಶಸ್ತಿ ಇಡೀ ಅಲೆಮಾರಿ ಸಮುದಾಯಗಳಿಗೆ ಸಂದ ಗೌರವವಾಗಿದೆ ಎಂದು ತಮ್ಮ ಸಂತಸ ವ್ಯಕ್ತಪಡಿಸಿದರು. ನಿರಕ್ಷರಿ ಅಲೆಮಾರಿ ಬುಡ್ಗ ಜಂಗಮರ ಬುರ್ರಕಥಾ ಈರಮ್ಮ ಕನ್ನಡ ನಾಡಿನ ಅದ್ವಿತೀಯ ಅಪರೂಪದ ಪ್ರತಿಭೆ. ತನ್ನ ಇಡೀ ಬದುಕನ್ನು ಜನಪದ ಕಥನಕಾವ್ಯಗಳ ಗಾಯನಕ್ಕೆ ಮುಡುಪಾಗಿಟ್ಟ ಮಹಾನ್ ಸಾಧಕಿ.

ಬಾಲ ನಾಗಮ್ಮ, ಸ್ಯಾಸಿ ಚಿನ್ನಮ್ಮ, ಎಲ್ಲಮ್ಮ, ಗಂಗಿ ಗೌರಿ, ಕುಮಾರ ರಾಮ, ಕೃಷ್ಣ ಗೊಲ್ಲ, ಬಬ್ಬುಲಿ ನಾಗರೆಡ್ಡಿ, ಆದೋನಿ ಲಕ್ಷ್ಮಮ್ಮ, ಬಲಿ ಚಕ್ರವರ್ತಿ, ಮಾರವಾಡಿ ಸೇಠಿ, ಜೈಸಿಂಗ್ ರಾಜ ಮತ್ತು ಮಹಮದ್ ಖಾನರ ಜನಪದ ಕಥನ ಕಾವ್ಯಗಳು ಸದಾ ಇವರ ತುದಿ ನಾಲಗೆ ಮೇಲೆ! ಸುಮಾರು ಎರಡು ಲಕ್ಷ ಸಾಲುಗಳಷ್ಟು ಅಂದರೆ ಸುಮಾರು ಏಳು ಸಾವಿರ ಪುಟಗಳ ಹರವುಳ್ಳ ಬುರ್ರಕಥಾ ಸಾಹಿತ್ಯವನ್ನು ಇವರ ಪೂರ್ವಜರಿಂದ ತೆಲುಗುವಿನಿಂದ ಕನ್ನಡಕ್ಕೆ ತಂದು ಕನ್ನಡಿಗರಿಗೆ ಪರಿಚಯಿಸಿದ ಅಪ್ರತಿಮ ಸಾಧನೆ ದರೋಜಿ ಈರಮ್ಮ ಅವರದು.

೮೦ರ ಹರೆಯದ ಈರಮ್ಮ ಅವರದು ಅಲೆಮಾರಿ ಬದುಕು. ಗ್ರಾಮಗಳ ಹೊರಗೆ ಗುಡಾರಗಳಲ್ಲಿ ವಾಸ. ೨೦೦೫ರಿಂದ ಜಿಲ್ಲೆಯ ಸಂಡೂರು ತಾಲೂಕಿನ ಹಳೇ ದರೋಜಿ ಗ್ರಾಮದ ಆಶ್ರಯ ಮನೆಯೇ ಪ್ರಸ್ತುತ ಇವರ ಅರಮನೆ. ನಿರಕ್ಷರಿಯಾಗಿದ್ದರೂ ಕನ್ನಡ, ಬುಡ್ಗ, ತೆಲುಗು, ಹಿಂದಿ, ತಮಿಳು ಭಾಷೆಗಳೊಂದಿಗೆ ವ್ಯವಹರಿಸುವ ಚಾಕಚಕ್ಯತೆ ಈರಮ್ಮ ಹೊಂದಿದ್ದಾರೆ.

ತಂದೆ ತಾಯಿಗಳಿಂದ ಬುರ್ರ ವಾದ್ಯ(ಡಿಮ್ಮಿ, ಗಗ್ಗರಿ, ತಂಬೂರಿ)ಗಳನ್ನು ನುಡಿಸುವುದು ಮತ್ತು ಬುರ್ರಕಥೆಗಳನ್ನ ಹಾಡಿ ಪ್ರದರ್ಶಿಸುವುದನ್ನು ಕಲಿತ ಈರಮ್ಮ ೭ ಸಾವಿರ ಪುಟಗಳು, ಎರಡು ಲಕ್ಷ ಸಾಲುಗಳ ೧೧ ಜನಪದ ಹಾಗೂ ಬುಡಕಟ್ಟು ಮಹಾಕಾವ್ಯಗಳನ್ನು ಪ್ರಸ್ತುತ ಪಡಿಸಬಲ್ಲರು.

ಪ್ರಕಟಿತ ಕಾವ್ಯಗಳು:
ಹಂಪಿ ಕನ್ನಡ ವಿವಿಯ ಪ್ರಾಧ್ಯಪಕ ಡಾ. ಕೆ ಎಂ ಮೈತ್ರಿ ಅವರು ಕುಮಾರ ರಾಮ ಮತ್ತು ಕೃಷ್ಣಗೊಲ್ಲರ ಮಹಾ ಕಾವ್ಯ ಮತ್ತು ಎಲ್ಲಮ್ಮನ ಕಥನ ಕಾವ್ಯ ಗಳನ್ನು ಸಂಪಾದಿಸಿದ್ದರೆ, ಮತ್ತೊಬ್ಬ ಪ್ರಾಧ್ಯಪಕ ಡಾ. ಸ ಚಿ ರಮೇಶ್ ಅವರು ಸ್ಯಾಸಿ ಚಿನ್ನಮ್ಮನ ಕಾವ್ಯವನ್ನು ಸಂಪಾದಿಸಿದ್ದಾರೆ.

ಪಿಎಚ್‌ಡಿ ಅಧ್ಯಯನಕ್ಕೆ ವಸ್ತು:
ನಿರಕ್ಷರಿಯಾದರೇನು? ತಮ್ಮ ಅದ್ಭುತ ಪ್ರತಿಭೆಯಿಂದಾಗಿ ಸಂಶೋಧಕರಿಗೆ ಅಧ್ಯಯನ ವಸ್ತುವಾಗಿರುವುದು ಈರಮ್ಮ ಅವರ ಹೆಗ್ಗಳಿಕೆ. ಡಾ. ಕೆ ಎಂ ಮೈತ್ರಿ ಅವರ ಮಾರ್ಗದರ್ಶನದಲ್ಲಿ ಶ್ರೀ ಮತಿ ಸಾರಿಕದೇವಿ ಎಲ್ ಕಾಳಗಿ ಎಂ ಸಂಶೋಧಕರು ’ಬುರ್ರಕಥಾ ಈರಮ್ಮ: ಒಂದು ಅಧ್ಯಯನ’ ಎಂಬ ವಿಷಯದಲ್ಲಿ ಹಂಪಿ ಕನ್ನಡ ವಿವಿಯಲ್ಲಿ ಪಿ. ಎಚ್‌ಡಿ ಅಧ್ಯಯನ ಮಾಡಿ ೨೦೦೬ರಲ್ಲಿ ಡಾಕ್ಟರೇಟ್ ಪದವಿ ಗಳಿಸಿದ್ದಾರೆ.

ಕಳೆದ ೫೦ ವರ್ಷಗಳಿಂದ ಸಾವಿರಾರು ಗ್ರಾಮ, ಕುಗ್ರಾಮಗಳಿಂದ ಹಿಡಿದು ನಗರ, ಪಟ್ಟಣ ಮಾತ್ರವಲ್ಲ ದೇಶದ ರಾಜಧಾನಿ ನವ ದೆಹಲಿಯಲ್ಲೂ ತಮ್ಮ ಕಥನ ಕಾವ್ಯಗಳ ಗಾಯನದ ಸುಧೆ ಹರಿಸಿದ್ದಾರೆ.

೨೦೦೭ ರಲ್ಲಿ ವಾದನ ತೋಡು ಎಂಬ ಸಂಸ್ಥೆ ನವದೆಹಲಿಯಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ಅಲೆಮಾರಿ ಮಹಿಳೆಯರ ನ್ಯಾಯ ಮಂಡಳಿ ಸಮಾವೇಶಕ್ಕೆ ಕರ್ನಾಟಕದಿಂದ ಆಯ್ಕೆಯಾದ ಏಕೈಕ ಪ್ರತಿಭೆಯಾಗಿದ್ದು, ಸಮಾವೇಶದಲ್ಲಿ ಕುಮಾರ ರಾಮನ ಮಹಾ ಕಾವ್ಯವನ್ನು ಪ್ರದರ್ಶಿಸಿ ಜನ ಮನ ಸೆಳೆದಿದ್ದಾರೆ. ಅಲ್ಲದೇ ಪ್ರದರ್ಶನದ ಬಳಿಕ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿರುವುದು ವಿಶೇಷ.
ಹಲವು ಬಾರಿ ಆಕಾಶವಾಣಿ ದೂರದರ್ಶನದಲ್ಲಿ ಇವರ ಬುರ್ರಕಥಾ ಗಾಯನ ಪ್ರಸಾರವಾಗಿವೆ.

ನಾಡೋಜ ಪದವಿ:
ಹತ್ತಾರು ರಾಜ್ಯ, ರಾಷ್ಟ್ರ ಮಟ್ಟದ ಪ್ರಶಸ್ತಿ ಪುರಸ್ಕಾರಗಳು ದರೋಜಿ ಈರಮ್ಮ ಅವರನ್ನು ಹುಡುಕಿಕೊಂಡು ಬಂದಿವೆ. ಹಂಪಿ ಕನ್ನಡ ವಿವಿ ತನ್ನ ೧೫ ಘಟಿಕೋತ್ಸವದಲ್ಲಿ ಪ್ರತಿಷ್ಠಿತ ನಾಡೋಜ ಪದವಿ ನೀಡಿ ಗೌರವಿಸಿದೆ. ೧೯೯೯ ರಲ್ಲಿಯೇ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ೨೦೦೩ ರಲ್ಲಿ ಸಮಾಜ ಕಲ್ಯಾಣ ಇಲಾಖೆ ಡಾ. ಬಿ ಆರ್ ಅಂಬೇಡ್ಕರ್ ಪ್ರಶಸ್ತಿ ನೀಡಿ ಸತ್ಕರಿಸಿದೆ. ಬಳ್ಳಾರಿ ವಿಜಯ ವಿಠಲ ಪ್ರಶಸ್ತಿ, ಆಳ್ವಾಸ್ ನುಡಿ ಸಿರಿ ಪ್ರಶಸ್ತಿ, ಡಾ. ರಾಜಕುಮಾರ್ ಪ್ರಶಸ್ತಿ, ಸಂದೇಶ ಕಲಾ ಪ್ರಶಸ್ತಿ, ಬುರ್ರಕಥಾ ಕಲಾಶ್ರೀ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ-ಪುರಸ್ಕಾರ ಗಳಿಗೆ ಪಾತ್ರರಾಗಿದ್ದಾರೆ.
ಬುರ್ರಕಥಾ ಈರಮ್ಮ ಅವರ ಆತ್ಮಕಥೆ ಪ್ರಕಟವಾಗಿರುವುದು ವಿಶೇಷ. ಜೀವಂತ ದಂತ ಕಥೆಯಾಗಿರುವ ಈರಮ್ಮ ’ತಂದಾನ ತಂದಾನ ತಾನ ತಾನ ತಂದಾನ’ ಎಂಬ ಪಲ್ಲವಿಯೊಂದಿಗೆ ತಮ್ಮ ಗಾಯನ ಆರಂಭಿಸಿದರೆ ಎಂತವರು ಇವರ ಕಥನ ಕಾವ್ಯಕ್ಕೆ ತಲೆಬಾಗುತ್ತಾರೆ. ತಲೆ ತೂಗುತ್ತಾರೆ.

ಕಾಮೆಂಟ್‌ಗಳಿಲ್ಲ: