ಶನಿವಾರ, ಫೆಬ್ರವರಿ 25, 2012

ಮಕ್ಕಳ ಮೊಹರಂ

-ಅರುಣ್ ಜೋಳದಕೂಡ್ಲಿಗಿ

ಮೊಹರಂ ಕರ್ನಾಟಕದ ಬಹುಭಾಗಗಳಲ್ಲಿ ಆಚರಣೆಗೊಳ್ಳುವ ವರ್ಣನಾತ್ಮಕ ಹಬ್ಬ. ಹಲವು ಕಡೆ ಧರ್ಮ ಜಾತಿಗಳ ಹಂಗು ತೊರೆದು ಈ ಆಚರಣೆಯಲ್ಲಿ ಜನ ಪಾಲ್ಗೊಳ್ಳುತ್ತಾರೆ. ಮೂಲತಃ ಇದು ಶೋಕದ ಮೂಲಕ ಹುತಾತ್ಮರ ನೆನಪಿಸಿಕೊಳ್ಳುವ ಆಚರಣೆ. ಆದರೆ ಇದು ಕಾಲಾನಂತರದಲ್ಲಿ ಸಂಭ್ರಮದ ಆಚರಣೆಯಾಗಿ ಬದಲಾಗಿದೆ.

ಮೊಹರಂ ಕಡೆಯ ದಿನದ ನಂತರದ ವಾರ ಚಿಕ್ಕ ಮೊಹರಂ ಎನ್ನುವ ಹಬ್ಬವನ್ನು ಆಚರಿಸಲಾಗುತ್ತದೆ. ಇದನ್ನು ಮರಿ ಮೊಹರಂ ಅಂತಲೂ, ಚಿಕ್ಕ ಜಲದಿ ಅಂತಲೂ ಕರೆಯುತ್ತಾರೆ. ಇದು ಮಕ್ಕಳದೇ ಮೊಹರಂ. ಮಕ್ಕಳೇ ದೇವರು ಕೂರಿಸಿ, ಮಕ್ಕಳೇ ಪೂಜಿಸಿ, ಕೊನೆಗೆ ಅವರೇ ದೇವರನ್ನು ನೀರಿಗೆ ಹಾಕುವಂತಹ ಆಚರಣೆ. ನಿಜಕ್ಕೂ ಮಕ್ಕಳು ಈ ಹಬ್ಬದಲ್ಲಿ ಅತ್ಯಂತ ಖುಷಿ ಮತ್ತು ಸಂಭ್ರಮದಿಂದ ಪಾಲ್ಗೊಳ್ಳುತ್ತಾರೆ.

ಮೊಹರಂ ಹಬ್ಬದ ಲಕ್ಷಣಗಳು ಮಕ್ಕಳು ಸಹಜವಾಗಿ ಭಾಗವಹಿಸುವಂತೆ ಮಾಡುತ್ತವೆ. ಅದಕ್ಕೆ ಕಾಕತಾಳೀಯವಾಗಿ ಚಾರಿತ್ರಿಕ ಸಂಗತಿಗಳು ಇಲ್ಲದಿಲ್ಲ. ಔರಂಗಜೇಬನ ಬಗ್ಗೆ ಇಂಥದ್ದೊಂದು ಐತಿಹ್ಯವಿದೆ. ಔರಂಗಜೇಬನು ಶೋಕಾಚರಣೆಯ ಹಬ್ಬವನ್ನು ಸಂಭ್ರಮದಿಂದ ಆಚರಿಸುವುದು ಬೇಡ ಎಂದು ನಿಷೇದಾಜ್ಞೆ ಹೊರಡಿಸುತ್ತಾನ. ಇದಾದ ಒಂದು ವಾರದ ನಂತರ ಔರಂಗಜೇಬನು ರಾಜ ಪರಿವಾರದ ಜತೆ ಹೊರಗೆ ಹೊರಟಾಗ, ಮೈದಾನದಲ್ಲಿ ಮಕ್ಕಳು ಆಟವಾಡುತ್ತಿದ್ದರಂತೆ, ಆ ಚಿತ್ರ ರಾಜನಿಗೆ ರಣರಂಗದಂತೆಯೂ, ಮಕ್ಕಳು ಆಟವಾಡುವುದು ಯುದ್ಧದ ಸನ್ನಿವೇಷದಂತೆಯೂ, ರಕ್ತ ಚೆಲ್ಲಾಡಿ ರುಂಡ ಮುಂಡಗಳು ಬಿದ್ದಿರುವಂತೆ ಕಂಡು ಬೆಕ್ಕಸ ಬೆರಗಾದನಂತೆ.

ಔರಂಗಜೇಬನು ಆಶ್ಚರ್ಯವಾಗಿ ‘ಇದೇನು ನನಗೆ ಗೊತ್ತಿಲ್ಲದೆ ಯುದ್ಧವೊಂದು ನಡೆಯುತ್ತಿದೆ’ಎಂದು ಮಂತ್ರಿಗಳನ್ನು ಕೇಳಿದ. ಮಂತ್ರಿಗಳಿಗೆ ಆಟದ ಮೈದಾನದಲ್ಲಿ ಮಕ್ಕಳು ಲಗೋರಿ ಆಡುವುದು ಮಾತ್ರ ಕಾಣುತ್ತಿತ್ತು. ಆಗ ಅವರುಗಳು ಅಚ್ಚರಿಗೊಂಡು ‘ಪ್ರಭುಗಳೆ ನಮಗೆ ಮೈದಾನದಲ್ಲಿ ಮಕ್ಕಳು ಲಗೋರಿ ಆಡುವುದು ಮಾತ್ರ ಕಾಣಿಸುತ್ತಿದೆ. ಇದೇನು ನೀವು ಹೀಗೆ ಹೇಳುತ್ತೀರಿ’ ಎನ್ನುತ್ತಾರೆ. ಆಗ ರಾಜನು ವಿಚಲಿತವಾಗಿ ಅರಮನೆಗೆ ಹೋಗಿ ಮಂತ್ರಿಗಳನ್ನು ಕರೆಸಿ, ಹೀಗೆ ಕಾಣಲು ಕಾರಣವೇನು ಎಂದು ಕೇಳಿದಾಗ, ಇದು ಮೊಹರಂ ಹಬ್ಬವನ್ನು ನಿಷೇದಿಸಿದ್ದರ ಪರಿಣಾಮವಿರಬೇಕು ಎಂದು ಅಭಿಪ್ರಾಯ ಪಡುತ್ತಾರೆ.


ಇದನ್ನರಿತ ಔರಂಗಜೇಬನು ಮತ್ತೆ ಮೊಹರಂ ಆಚರಿಸುವಂತೆ ಆಜ್ಞೆ ಹೊರಡಿಸಲು ಸಿದ್ದವಾಗುತ್ತಾನೆ. ಆಗ ಮಂತ್ರಿಗಳು ಪ್ರಭುಗಳೆ ಮೊಹರಂ ನ್ನು ಯಾವಾಗೆಂದರೆ ಆವಾಗ ಮಾಡಲು ಬರುವುದಿಲ್ಲ, ಈಗ ಮೊಹರಂ ಹಬ್ಬವನ್ನು ಮಾಡಲು ಆಗದು, ಬೇಕಾದರೆ ಮಕ್ಕಳಿಗಾಗಿ ಚಿಕ್ಕ ಮೊಹರಂ ಎಂದು ಮಾಡಬಹುದು ಎಂದು ಸಲಹೆ ನೀಡುತ್ತಾರೆ. ರಾಜ ಹಾಗೆಯೆ ಆಗಲಿ ಎಂದನಂತೆ. ಅಂದಿನಿಂದ ರಾಜಾಜ್ಞೆಯಂತೆ ಮಕ್ಕಳ ಮೊಹರಂ ಚಾಲ್ತಿಗೆ ಬಂತಂತೆ. ಇದೊಂದು ಐತಿಹ್ಯವಷ್ಟೆ. ಆದರೆ ಇದು ಮಕ್ಕಳ ಮೊಹರಂಗೆ ಒಂದು ಚಾರಿತ್ರಿಕ ಘಟನೆಯನ್ನು ಜೋಡಿಸುತ್ತದೆ. ಕರ್ನಾಟಕದ ಬಹುಭಾಗಗಳಲ್ಲಿ ಈಗಲೂ ಮಕ್ಕಳ ಮೊಹರಂ ಆಚರಣೆಯಲ್ಲಿದೆ.

ಬಳ್ಳಾರಿ ಜಿಲ್ಲೆಯಲ್ಲಿ ಮೊಹರಂ ಹಬ್ಬದಲ್ಲಿ ಬೇಡರಕಣ್ಣಪ್ಪನ ವೇಷ ಹಾಕುವ ಪರಂಪರೆ ಇದೆ. ಇಲ್ಲಿ ಬೇಡರ ಕಣ್ಣಪ್ಪನ ವೇಷದಾರಿ ಬೆನ್ನಿಗೆ ಮಗುವೊಂದನ್ನು ಕಟ್ಟಿಕೊಂಡು, ಎದುರಿನ ಹುಲಿಗಳನ್ನು ಕತ್ತಿ ಹಿಡಿದು ಹೆದರಿಸುತ್ತಿರುವ ಕುಣಿತವೊಂದಿದೆ. ಅದು ಯಾಕೆಂದು ವಿಚಾರಿಸಿದರೆ ಸಿಕ್ಕ ಕಥನ ಕುತೂಹಲ ಮೂಡಿಸುವಂತಿದೆ.

ಕರ್ಬಲಾದಲ್ಲಿ ಯುದ್ಧ ನಡೆದು ಹುಸೇನನ ಮಗುವೊಂದು ಯುದ್ಧದಲ್ಲಿ ಯಜೀದನ ಕಡೆಯ ಸೈನಿಕರಿಂದ ತಪ್ಪಿಸಿಕೊಂಡು ಕಾಡಲ್ಲಿ ಓಡಿ ಬರುತ್ತದೆಯಂತೆ, ಆಗ ಕಾಡಲ್ಲಿ ಬೇಟೆಯಾಡಿಕೊಂಡಿರುವ ಬೇಡರ ಕಣ್ಣಪ್ಪನು ಆ ಮಗುವನ್ನು ಎತ್ತಿಕೊಂಡು ನೀರು ಕುಡಿಸುತ್ತಾನಂತೆ, ಅಷ್ಟೊತ್ತಿಗೆ ಬೆನ್ನಟ್ಟಿಕೊಂಡು ಬಂದ ಯಜೀದನ ಸೈನಿಕರು ಮಗುವನ್ನು ಬಿಟ್ಟುಕೊಡು ಎಂದು ಕೇಳುತ್ತಾರೆ. ಇದನ್ನರಿತ ಬೇಡರ ಕಣ್ಣಪ್ಪ ಮಗುವನ್ನು ಕೊಡಲು ನಿರಾಕರಿಸಿ, ಈ ಮಗು ನನ್ನ ಆಶ್ರಯದಲ್ಲಿದೆ ಹಾಗಾಗಿ ಈ ಮಗುವನ್ನು ರಕ್ಷಿಸಬೇಕಾದುದು ನನ್ನ ಧರ್ಮ. ನಾನು ನಿಮ್ಮೊಂದಿಗೆ ಯುದ್ಧ ಮಾಡುತ್ತೇನೆಂದು ಹೇಳುತ್ತಾನೆ. ಆಗ ಮಗುವನ್ನು ಬೆನ್ನಿಗೆ ಕಟ್ಟಿಕೊಂಡು ಅವರೊಂದಿಗೆ ಕಾದಾಡಿ ಮಗುವನ್ನು ರಕ್ಷಿಸಿದನಂತೆ. ಈ ನೆನಪನ್ನು ಈಗಿನ ಬೇಡರಕಣ್ಣಪ್ಪನ ವೇಷ, ಕುಣಿತ ಅಡಗಿಸಿಕೊಂಡಂತಿದೆ. ಕರ್ನಾಟಕದಲ್ಲಿ ಬೇಡ ಸಮುದಾಯ ಮೊಹರಂ ಆಚರಿಸಲು ಇರುವ ಕಾರಣಗಳಲ್ಲಿ ಈ ಕಥೆಯೂ ಒಂದೆನ್ನುತ್ತಾರೆ.

ಹೀಗೆ ಮೊಹರಂ ನಲ್ಲಿ ಮಕ್ಕಳು ಸಾಂಕೇತಿಕವಾಗಿಯೂ, ಸಹಜವಾಗಿಯೂ ಭಾಗಿಯಾಗುತ್ತಾರೆ. ಮೊಹರಂ ಹಬ್ಬದಲ್ಲಿ ಹುಸೇನನ ಮಕ್ಕಳ ತೊಟ್ಟಿಲನ್ನು ಇಟ್ಟಿರುತ್ತಾರೆ. ಈ ತೊಟ್ಟಿಲಿಗೆ ಮಕ್ಕಳನ್ನು ಹಾಕುವ ಆಚರಣೆಯೂ ಇದೆ. ಇನ್ನು ಕೆಲವೆಡೆ ಹಸೇನ್ ಹುಸೇನ್ ದೇವರುಗಳ ಜತೆ ಭೀಭಿ ಪಾತೀಮಳನ್ನೂ ಮಕ್ಕಳಾದ ಕಾಸಿಂಪೀರಾ, ಅಬ್ಬಾಸ್‌ಅಲಿ, ಮುಂತಾದ ಸಣ್ಣದೇವರು ಅಥವಾ ಕವಡೆ ಪೀರಾಗಳನ್ನು ಕೂರಿಸುವ ಪರಂಪರೆಯೂ ಇದೆ.

ಮೊಹರಂ ಹಬ್ಬದ ಪ್ರಯುಕ್ತ ಅಲೆಕುಣಿಗೆ ಗುದ್ದಲಿ ಹಾಕಲಾಗುತ್ತದೆ. ಬಹುಪಾಲು ಈ ಕುಣಿಗಳು ತಿರುಗಿದ ಪಿರಮಿಡ್ಡಿನ ಆಕಾರದಲ್ಲಿರುತ್ತವೆ. ಆಗ ಮಕ್ಕಳು ಇದರಲ್ಲಿ ಓಟ ಶುರು ಮಾಡಿಕೊಳ್ಳುತ್ತಾರೆ. ಓಡುವುದು, ಓಡುವವರನ್ನು ಎಳೆದು ಬೀಳಿಸುವುದು, ತಾವೂ ಬಿದ್ದು ಮೈಯೆಲ್ಲಾ ಬೂದಿ ಮಾಡಿಕೊಳ್ಳುವುದು ಹೀಗೆ ತುಂಬಾ ಲವಲವಿಕೆಯಿಂದ ಕೂಡಿರುತ್ತದೆ. ನಾನು ಉಜ್ಜಯನಿಯಲ್ಲಿ ಐದು ಆರನೆ ತರಗತಿ ಓದುವಾಗ, ಶಾಲೆಯ ಎದುರು ಮಸೀದಿಯಿದ್ದ ಕಾರಣ, ಅದರ ಮುಂದೆಯೇ ಅಲೆ ಕುಣಿ ಇರುತ್ತಿತ್ತು. ಈ ಹಬ್ಬ ಮುಗಿಯುವ ತನಕ ಮೇಷ್ಟ್ರು ಇಲ್ಲವೆಂದರೆ ಸಾಕು ನಾವು ಅಲೆಕುಣಿಗೆ ಜಿಗಿದು ತಿರುಗುತ್ತಿದ್ದೆವು. ಹೀಗೆ ತಿರುಗಿ ತಿರುಗಿ ತಲೆ ಸುತ್ತು ಬಂದಾಗ ಸಾರಾಯಿ ಕುಡಿದವರಂತೆ ಓಲಾಡುತ್ತಾ ಗೆಳೆಯರನ್ನು ಚೇಡಿಸುತ್ತಿದ್ದೆವು. ಹೀಗೆ ಅಲೆಕುಣಿಯ ಬಾಲ್ಯದ ನೆನಪುಗಳು ರೋಮಾಂಚನಕಾರಿಯಾಗಿವೆ. ಅಲೆಕುಣಿ ಇರುವ ಊರಿನವರು ಸಹಜವಾಗಿ ಈ ಅದ್ಭುತ ಅನುಭವದಿಂದ ವಂಚಿತರಾಗುವುದು ಕಡಿಮೆಯೆ.ಇನ್ನು ಮೊಹರಂ ಹಬ್ಬದ ಪ್ರಯುಕ್ತ ಲಾಡಿ (ಕೆಂಪು ಹಳದಿ ದಾರ)ಕಟ್ಟಿಸಿಕೊಳ್ಳುವ ಆಚರಣೆ ಇರುತ್ತದೆ. ಈ ಲಾಡಿಯನ್ನು ಕರುಳಿಗೆ ಹೋಲಿಸುವ ಕಥೆಗಳೂ ಇವೆ. ಸಾಮಾನ್ಯವಾಗಿ ಮಕ್ಕಳಿಗೆ ಲಾಡಿ ಕಟ್ಟಿಸುತ್ತಾರೆ. ಹೀಗೆ ಲಾಡಿ ಕಟ್ಟಿಸಿಕೊಂಡ ಮಕ್ಕಳು ಕನಿಷ್ಟ ಐದು ಮನೆಗಾದರೂ ಹೋಗಿ ಭಿಕ್ಷೆ ಬೇಡಬೇಕೆಂಬ ಪದ್ದತಿ ನಮ್ಮೂರಿನಲ್ಲಿದೆ. ಆಗ ಮಕ್ಕಳು ಗುಂಪು ಕಟ್ಟಿಕೊಂಡು ಮನೆ ಮನೆಗೆ ಹೋಗಿ ‘ಎಮಲೋಮ್ ಎಮಲೋಮ್ ದುಯ್’ ಎನ್ನುವ ಮೂಲಕ ಭಿಕ್ಷೆ ಬೇಡುತ್ತಾರೆ. ಹೀಗೆ ಭಿಕ್ಷೆ ಬೇಡುವುದನ್ನು ಮಕ್ಕಳು ಆಟದಂತೆ ಸಂಭ್ರಮಿಸುತ್ತಾರೆ. ಮಕ್ಕಳು ಊರಾಡಿ ಬಂದ ಕಾಳಲ್ಲಿ ಕಡುಬು ಮಾಡುವುದು, ಅಥವಾ ಆ ಕಾಳನ್ನು ಅಂಗಡಿಯಲ್ಲಿ ಮಾರಿ ಸಕ್ಕರೆಯನ್ನೋ..ಬೆಲ್ಲವನ್ನೋ ಕೊಂಡು ಜನರಿಗೆ ಹಂಚುವುದು ಮಾಡುತ್ತಾರೆ. ಈ ಹಬ್ಬದಲ್ಲಿ ಹಾಕುವ ಸಿದ್ದಕಿ ಸಿದ್ದಿ, ಪೀರ, ಕಳ್ಳಳ್ಳಿ ಬುವ್ವ, ಕರಡಿ, ಹುಲಿ, ಮುಂತಾದ ವೇಷಗಳು ಕುಣಿಯುವಾಗ ಮಕ್ಕಳ ಹಿಂಡು ಕೇಕೆ ಹಾಕುತ್ತಲೂ, ಬೆರಗಿನಿಂದ, ಭಯದಿಂದ ವೀಕ್ಷಿಸುತ್ತಲೂ ನಲಿಡಾಡುತ್ತದೆ.

ಮಕ್ಕಳು ಅನಾರೋಗ್ಯಕ್ಕೆ ತುತ್ತಾದಾಗ, ಅವರು ಗುಣಮುಖವಾಗಲಿ ಎಂದು ಮೊಹರಂ ದೇವರುಗಳಲ್ಲಿ ಹರಕೆ ಹೋರುವ ಪದ್ದತಿಯೊಂದಿದೆ. ಈ ಹರಕೆಗಳು ನಾನಾ ವಿಧವಾಗಿವೆ. ಚಿಕ್ಕ ಮಕ್ಕಳಿಗೆ ಹುಲಿ ವೇಷ ಹಾಕಿಸುವುದಾಗಿಯೂ, ಮಕ್ಕಳ ತೂಕದಷ್ಟು ಬೆಲ್ಲ, ತೆಂಗಿನ ಕಾಯಿ ಕೊಡುವುದಾಗಿಯೂ, ಫಕೀರರನ್ನಾಗಿಸುವುದಾಗಿಯೂ ಪ್ರಾದೇಶಿಕವಾಗಿ ನಾನಾ ಹರಕೆಗಳಿರುತ್ತವೆ. ಈ ಹರಕೆ ತೀರಿಸಲು ಮಕ್ಕಳನ್ನು ಪುಟ್ಟ ಹುಲಿಗಳನ್ನಾಗಿಯೂ, ಫಕೀರರನ್ನಾಗಿಯೂ ಮಾಡುತ್ತಾರೆ. ಇದನ್ನು ಮಕ್ಕಳು ಆಟದಂತೆ ಸಂಭ್ರಮಿಸುತ್ತಾರೆ. ಹೀಗೆ ಮಕ್ಕಳ ಹರಕೆಯನ್ನು ತೀರಿಸುವುದೇ ಹೆಚ್ಚಿರುವ ಕಾರಣ ಮೊಹರಂ ಹಬ್ಬವೇ ಮಕ್ಕಳ ಹಬ್ಬದಂತೆ ಗೋಚರಿಸುತ್ತದೆ.

ಗೌರಿಬಿದನೂರು ತಾಲೂಕಿನ ಅಲಿಪುರದಲ್ಲಿ ಶಿಯಾ ಮುಸ್ಲೀಮರು ಮಾತಂ ಆಚರಣೆ ಮಾಡುವ ಪದ್ದತಿ ಇದೆ. ಇದು ತಲೆಗೆ, ಎದೆಗೆ, ಬೆನ್ನಿಗೆ ಬ್ಲೇಡು ಹಾಕಿಕೊಂಡು ರಕ್ತ ಬರಿಸಿಕೊಂಡು ದುಃಖಿಸುವ ರೀತಿಯದ್ದು. ಅಲ್ಲಿ ಚಿಕ್ಕ ಚಿಕ್ಕ ಮಕ್ಕಳಿಗೂ ಮಾತಂ ಮಾಡುತ್ತಾರೆ. ಆಗ ಮಕ್ಕಳು ಚಿಟ್ಟನೆ ಚೀರಿ ಅಳತೊಡಗುತ್ತವೆ. ಇನ್ನು ಸರಪಣಿ ಬಿಗಿದುಕೊಂಡು ಯುದ್ಧ ಕೈದಿಗಳಾಗುವ ಆಚರಣೆಯೊಂದಿದೆ. ಇದರಲ್ಲಿ ಚಿಕ್ಕ ಮಕ್ಕಳು ಮೈಗೆಲ್ಲಾ ಸರಪಣಿ ಬಿಗಿದುಕೊಂಡು ಅಳುತ್ತಿರುತ್ತವೆ. ಇಲ್ಲಿ ಮಾತ್ರ ಮಕ್ಕಳ ಹರಕೆ ಸಂಭ್ರಮವಾಗದೆ ಹಿಂಸೆಯಂತೆ ಕಾಣುತ್ತದೆ.

ಮೊಹರಂ ಹಬ್ಬ ವಾರಗಟ್ಟಲೆ ಇರುವುದರಿಂದ, ಮಕ್ಕಳಲ್ಲಿ ಈ ಹಬ್ಬದ ಅನುಕರಣೆಯೂ ನಡೆಯುತ್ತದೆ. ಹಬ್ಬದ ನಂತರ ಹೊಸಪೇಟೆ ತಾಲೂಕಿನ ಕಮಲಾಪುರದಲ್ಲಿ ಮಕ್ಕಳು ಉದ್ದನೆಯ ಕೋಲಿಗೆ ಸೀರೆ ಉಡಿಸಿ, ರಟ್ಟಿನ ತುಂಡನ್ನು ಮುಖ ಮಾಡಿ, ಸ್ಲೇಟು, ತಟ್ಟೆಯನ್ನೆ ಹಲಗೆ ಮಾಡಿಕೊಂಡು ಬಾರಿಸುತ್ತಾ ಓಡಾಡುತ್ತಾರೆ. ಅದರಲ್ಲಿ ಕೆಲ ಮಕ್ಕಳು ದೇವರು ಬಂದಂತೆಯೂ, ಕೆಲವರು ಪೂಜಾರಿಗಳಂತೆಯೂ ನಟಿಸುತ್ತಾರೆ. ಹೀಗೆ ಬೇರೆ ಬೇರೆ ಓಣಿಯ ಮಕ್ಕಳು ತಮ್ಮ ತಮ್ಮ ದೇವರುಗಳನ್ನು ಒಂದೆಡೆ ತಂದು ಹಸೇನ್ ಹುಸೇನರನ್ನು ಬೇಟಿ ಮಾಡಿಸುವುದೂ ಇರುತ್ತದೆ. ಹೀಗೆ ಹಳ್ಳಿಗಳಲ್ಲಿ ಹಬ್ಬಗಳ ಅನುಕರಣೆಯನ್ನೇ ಆಟಗಳನ್ನಾಗಿಸಿ ಮಕ್ಕಳು ಆಡುವುದನ್ನು ನೋಡಬಹುದು.

ಮಕ್ಕಳು ಮೊಹರಂ ಹಬ್ಬದಲ್ಲಿ ಭಾಗವಹಿಸುವಿಕೆಯನ್ನು ನೋಡಿದರೆ, ಕುವೆಂಪು ಹೇಳುವಂತೆ ವಿಶ್ವಮಾನವರು ಎನ್ನುವ ಸಂದೇಶ ನೆನಪಾಗುತ್ತದೆ. ಹೀಗೆ ಧರ್ಮ ಜಾತಿಯ ಹಂಗು ತೊರೆದು ಒಂದಾಗುವ ಈ ಹಬ್ಬದಲ್ಲಿ ಮಕ್ಕಳು ಭಾಗವಹಿಸುವುದೂ, ಮಕ್ಕಳೇ ಹಬ್ಬ ಮಾಡುವುದೂ ನಿಜಕ್ಕೂ ಸಂಸ್ಕೃತಿಗಳು ಒಂದರೊಳಗೊಂದು ಬೆರೆಯುವಿಕೆಯನ್ನೂ ತೋರಿಸುತ್ತಿದೆ. ಇದು ನಾವುಗಳು ಹೇಳುವ ಸಾಮರಸ್ಯ ಎನ್ನುವ ಸವಕಲು ಪದದ ಅರ್ಥವನ್ನು ಮೀರಿದ ದ್ವನಿಯೊಂದನ್ನು ಕೇಳಿಸುತ್ತದೆ. ಹೀಗೆ ಮೊಹರಂ ಆಚರಣೆ ಮಕ್ಕಳ ಹಬ್ಬವಾಗಿ ತನಗೆ ತಾನೆ ಜಾತಿ ಮತ ಧರ್ಮದ ಆಚೆ ನಿಲ್ಲುತ್ತದೆ. ನಮ್ಮ ಹಳ್ಳಿಗಳ ಜಾತ್ರೆಗಳಲ್ಲಿಯೂ ಹಿರಿಯ ದಲಿತರು ಊರಂಗಳವನ್ನು ಕಸ ಗುಡಿಸುತ್ತಾ ಜಾತಿ ಶ್ರೇಣೀಕರಣದ ಸಾಕ್ಷ್ಯಗಳಂತೆ ಕಂಡರೆ, ಅವರ ಮಕ್ಕಳು ಎಲ್ಲಾ ಮಕ್ಕಳೊಂದಿಗೆ ಜಾತ್ರೆಯಲ್ಲಿ ನಿರಾತಂಕವಾಗಿ ಭಾಗವಹಿಸುವಿಕೆ ಜಾತಿಯಾಚೆಗೆ ನಿಲ್ಲುತ್ತದೆ. ಹೀಗೆ ಆಚರಣೆಗಳನ್ನು ಮಕ್ಕಳ ನೆಲೆಯಲ್ಲಿ ಮರು ಅಧ್ಯಯನಕ್ಕೆ ಒಳಪಡಿಸುವ ಅಗತ್ಯವಿದ್ದಂತೆ ಕಾಣುತ್ತದೆ.

ಕಾಮೆಂಟ್‌ಗಳಿಲ್ಲ: