ಪ್ರೊ. ವೀರಣ್ಣ ದಂಡೆ
ನಮಗೆಲ್ಲ ತಿಳಿದಿರುವಂತೆ ಹನುಮಂತನು-ಮಂಗನ ಮೂತಿಯ, ಬಾಲವುಳ್ಳ ಜನಿವಾರ ಧರಿಸಿದ, ಚಂಡಿಕೆ ಬಿಟ್ಟ ರಾಮನ ಸೇವಕ, ಸೀತೆಯನ್ನು ಶೋಧಿಸಿದ ಜಾಣ, ಲಂಕೆಯನ್ನು ಸುಟ್ಟ ಧೀರ.[1] ಈ ವಿವಿಧ ಸಾಹಸಗಳನ್ನು ಕುರಿತ ಒಂದು ಸುದೀರ್ಘ ನಾಟಕವನ್ನು ಹತ್ತು ಅಥವಾ ಹನ್ನೊಂದನೆಯ ಶತಮಾನದಲ್ಲಿದ್ದ ಭೋಜರಾಜನ ಅಪೇಕ್ಷೆ ಯಂತೆ ದಾಮೋದರ ಎಂಬಾತನು ಬರೆದಿದ್ದಾನೆ.[2]
ಹನುಮಂತ, ಅಶ್ವತ್ಥಾಮ, ಬಲಿ, ವ್ಯಾಸ, ವಿಭೀಷಣ, ಕೃಪ, ಪರಶುರಾಮ ಈ ಏಳು ಜನರು ಚಿರಂಜೀವಿಗಳು ಎಂದು ಪುರಾಣಗಳು ನಮಗೆ ಹೇಳಿಕೊಡುತ್ತವೆ. ಇವರಲ್ಲಿ ಹನುಮಂತ ಮತ್ತು ವಿಭೀಷಣರು ಮಾತ್ರ ಜಗತ್ತು ಲಯವಾಗುವವರೆಗೆ ಇರುವವರು. ಉಳಿದವರೆಲ್ಲ ಕೇವಲ ದೀರ್ಘಾಯುಷಿಗಳು ಮಾತ್ರ.
ಮಾನವನು ವಿಕಾಸಗೊಂಡ ಮಂಗನು. ಕೀಳುಸ್ವಭಾವದವನನ್ನು, ಚಂಚಲ ಚಿತ್ತವುಳ್ಳವನನ್ನು ಈಗಲೂ ಮಂಗ ಎಂದೇ ಕರೆಯುತ್ತಾರೆ. ಹನುಮಂತನ ಪೂಜೆ ಮಾಡಿದಂತೆ ಎಂದು ಹೇಳಲಾಗುತ್ತದೆ. ’ಮಂಗನು ಮಾನವನ ಆತ್ಮ ಹೊಂದಿದೆ’ ಎಂಬ ಕಲ್ಪನೆಯೊಂದಿದೆ. ಇದರಿಂದ ಅದನ್ನು ಕೊಲ್ಲಬಾರದೆಂಬ ನಂಬುಗೆ ನಮ್ಮಲ್ಲಿ ಪ್ರಚಲಿತವಿದೆ. ಈಗಲೂ ಮಂಗ ಸತ್ತರೆ-ಹನುಮಂತನ ಗುಡಿಯಲ್ಲಿ ಕೂಡ್ರಿಸಿ, ಮಾನವನಿಗೆ ಮಾಡುವ ರೀತಿಯಲ್ಲಿಯೇ ಮಂಗನಿಗೂ ಸಂಸ್ಕಾರ ಮಾಡುತ್ತಾರೆ. ’ಮಂಗನನ್ನು ಕೊಂದವನು ಮರುಜನ್ಮದಲ್ಲಿ ಮಂಗನಾಗಿಯೇ ಜನಿಸುವನು’ ಎಂಬ ನಂಬುಗೆಯಿದೆ. ಅವಳಿ ಮಕ್ಕಳಲ್ಲಿ ಒಂದು ಕಾದಾಡುವ ಶಕ್ತಿ ಇದ್ದು, ಅದು ಸಣ್ಣ ಮಂಗನ ರೂಪದಲ್ಲಿರುತ್ತದೆ ಎಂದು ಪ್ರೊಟೋನೋವೋದ ಜನಾಂಗ ಭಾವಿಸುತ್ತದೆ. ಅಂತಹ ಮಕ್ಕಳನ್ನು ಯಾವುದೇ ಕಾರಣಕ್ಕಾಗಿ ಕೊಲ್ಲಲಾಗುವುದಿಲ್ಲ, ಕೊಮಿಯನ್ನರು (NKomis) ಗೊರಿಲ್ಲಾದ ಮಾಂಸವನ್ನು ತಿನ್ನುವುದಿಲ್ಲ. ಏಕೆಂದರೆ ಅದು ಮಾನವನ ತಂದೆ ಎಂಬ ನಂಬಿಕೆ ಅವರಲ್ಲಿದೆ. ಆಫ್ರಿಕನ್ನರು ಮತ್ತು ದಕ್ಷಿಣ ಅಮೆರಿಕನ್ನರು ಮಂಗಗಳಿಗೆ ಮಾತು ಬರುತ್ತವೆ. ಆದರೆ ತಮಗೆ ಕೆಲಸ ಹಚ್ಚಬಹುದೆಂಬ ಕಾರಣಕ್ಕಾಗಿ ಹೆದರಿ, ಅವು ಮಾತನಾಡುವುದಿಲ್ಲವೆಂದು ನಂಬುತ್ತಾರೆ. ಅವರಲ್ಲಿಯೇ ಒಂದು ಗುಂಪು-ಒಂದು ಹೆಣ್ಣನ್ನು ಮಂಗವು ಕಾಡಿಗೆ ಕದ್ದೊಯ್ದ ಕಥೆಯನ್ನು ಹೇಳುತ್ತದೆ. ಹೀಗೆ ಪಾಶ್ಚಾತ್ಯರಲ್ಲಿ ಹಾಗೂ ಕಾಡು ಜನಾಂಗಗಳಲ್ಲಿ ಈ ರೀತಿ ಬಾಲವುಳ್ಳ ಮಾನವನ ಬಗ್ಗೆ ಕಥೆಗಳಿವೆ.[3] ಹೀಗೆ ಜಗತ್ತಿನಾದ್ಯಂತ ಮಂಗ-ಮಾನವರಲ್ಲಿ ಸಂಬಂಧ ಕಲ್ಪಿಸುವ ಅನೇಕ ನಂಬುಗೆಗಳಿವೆ.
ಹನುಮಂತನ ಪೂಜೆ ಭಾರತದಲ್ಲಷ್ಟೇ ಅಲ್ಲದೆ, ಜಗತ್ತಿನ ಹಲವೆಡೆಗಳಲ್ಲಿ ಕಾಣಸಿಗುತ್ತದೆ; ಟಾಗೊ (Togo) ಮತ್ತು ಆಫ್ರೀಕಾಗಳ ಕೆಲವು ಹಳ್ಳಿಗಳ ಜನರು ಹನುಮಂತ ದೇವರಿಗೆ ದಿನಾಲು ನೈವೇದ್ಯ ಅರ್ಪಿಸುತ್ತಾರೆ. ಇದರಿಂದ ತಮ್ಮ ಬಯಕೆ ಈಡೇರುತ್ತದೆಂದು ಅವರು ನಂಬುತ್ತಾರೆ. ಕುನಾಮರು (Kunumas) ಮತ್ತು ಬಾರಿ (Bareas) ಜನಗಳು ಕೂಡ ಹನುಮಂತನನ್ನು ಪೂಜಿಸುತ್ತಾರೆಂದು ತಿಳಿದು ಬರುತ್ತದೆ.[4]
‘ಹನು(ನೂ)’ ಎಂದರೆ ’ಉಬ್ಬಿದ ಗದ್ದ’ ಅಥವಾ ’ದವಡೆ’. ಹನುಮಂತನು ತಾನು ಜನಿಸುತ್ತಲೇ ಸೂರ್ಯನನ್ನು ಹಣ್ಣೆಂದು ಭಾವಿಸಿ ನುಂಗಲು ಹಾರಿದಾಗ, ಕೆಳಗೆ ಬಿದ್ದು ಗದ್ದಕ್ಕೆ (ದವಡೆಗೆ) ಪೆಟ್ಟಾಯಿತು. ಅಥವಾ ಇಂದ್ರ ಇಲ್ಲವೆ ಸೂರ್ಯ ಕಪಾಳಕ್ಕೆ ಹೊಡೆದರು ಆಗ ಗದ್ದ ಊದಿಕೊಂಡಿತು. ಈ ಮುಂತಾದ ಐತಿಹ್ಯಗಳು ನಮ್ಮಲ್ಲಿ ಪ್ರಚಲಿತವಾಗಿವೆ. ಮಾತು ಬಾರದವನನ್ನು ಮೂಕನೆಂದು, ಸಣ್ಣ ಮೂಗುಳ್ಳವಳನ್ನು ಮುಕಡಿ ಎಂದು ಅಣಕದ ಹೆಸರಿನಿಂದ ಕರೆಯುವಂತೆ, ಊದಿದ ಗದ್ದ ಅರ್ಥಾತ್ ’ಹನು’ ಉಳ್ಳವನನ್ನು ’ಹನುಮಂತ’, ಅಂದರೆ ’ಊದಿಕೊಂಡ ಗದ್ದವನ’ ಎಂಬ ಅರ್ಥದಿಂದಾಗಿ, ಅಣಕದ ಹೆಸರು ಬಂದಂತೆ ತೋರುತ್ತದೆ. ಆದರೆ, ಆದಿ ಮಾನವನ ಮುಖ ಉಬ್ಬಿಕೊಂಡ ಮುಖವೇ ಆಗಿರುವುದರಿಂದ ಯಾವುದೋ ಕಾರಣಕ್ಕಾಗಿ ಹನುಮಂತನ ಮುಖ ಊದಿಕೊಂಡಿತು ಎಂದು ಹೇಳುವುದು ಬಹುಶ ಕೃತಕ ಸೃಷ್ಟಿ ಎನಿಸುತ್ತದೆ. ’ಹನು’ ಎಂದರೆ ಅಜಾನುಬಾಹು ಎಂಬ ಅರ್ಥವೂ ಬರಬಹುದು. ’ಹನುಮಿಸು’ ಎಂದರೆ ನೆಗೆ, ಹಾರು, ಲಂಘಿಸು ಎಂಬ ಅರ್ಥಗಳೂ ಬರುವುದರಿಂದ, ಹಾರಾಡುವ ಅಸಾಧಾರಣ ಶಕ್ತಿ ಹೊಂದಿರುವನೆಂಬ ಕಲ್ಪನೆಯಿಂದಲೂ ’ಹನುಮಂತ’ಎಂಬ ಹೆಸರು ಬಂದಿರಬಹುದಾಗಿದೆ.
ಪೌರಾಣಿಕ ಕಥೆಯಂತೆ-ಅಂಜನಾದೇವಿ ಎಂಬಾಕೆಯ ಮಗನಾದ್ದರಿಂದ ಹನುಮಂತನಿಗ. ’ಆಂಜನೇಯ’ ಎಂಬ ಹೆಸರು ಬಂದಿತು ಎಂದು ಹೇಳಲಾಗುತ್ತದೆ.[5] ಆದರೆ ’ಅಂಜನ’ ಎಂದರೆ ’ಬಯಕೆಗಪ್ಪ’ ಎಂಬ ಅರ್ಥವಿದೆ. ಹನುಮಂತನ ಮೂರ್ತಿಗೆ ಎಣ್ಣೆ ಸವರಿ, ಜಿಗುಟಾದ ಕಪ್ಪು ಮಸಿ ಮೆತ್ತಿಕೊಂಡಿರುತ್ತದೆ. ಅವನಿಗೆ ಹರಕೆ. ಹೊತ್ತು, ಪ್ರಸಾದವೆಂದು ಈ ಕಪ್ಪು ಸಂಕೇತಗಳು ಬಳಕೆಯಾಗುತ್ತವೆ. ಕರಿಯದಾರ, ಕಪ್ಪು ಮಸಿ, ಕರಿಯಮಣಿಗಳು, ಕಣ್ಣಿನ ಕಾಡಿಗೆ, ಹನುಮಂತನ ಮೂರ್ತಿ ಇರುವ ಕಪ್ಪು ಬಿಲ್ಲೆ-ಇತ್ಯಾದಿಗಳು. ಹೀಗೆ ತಮ್ಮ ಬಯಕೆಯನ್ನು ಈಡೇರಿಸುವ ಈ ಕಪ್ಪು ನಿಶಾನೆಯ ದೇವರನ್ನು ’ಆಂಜನೇಯ’ ಅಂದರೆ-’ಬಯಕೆಗಪ್ಪುಳ್ಳವನು’-ಎಂಬರ್ಥ ಬರುವಂತೆ ಹೆಸರಿಟ್ಟು ಕರೆದಿರಲೂ ಬಹುದಾಗಿದೆ. ರೂಢಿಯಲ್ಲಿ ’ಕರಿಹನುಮ’ ಎಂಬ ಮಾತೂ ಕೇಳುತ್ತೇವೆ.
ಈತ ಗಾಳಿದೇವರು-ಮರುತನಿಗೆ ಹುಟ್ಟಿದುದರಿಂದ ’ಮಾರುತಿ ’ ಎಂಬ ಹೆಸರು ಬಂದಿದೆ ಎನ್ನಲಾತ್ತದೆ. ಆದರೆ ಈತನಲ್ಲಿ ಅಂತರಿಕ್ಷದಲ್ಲಿ ಹಾರಾಡುವ ವಿಲಕ್ಷಣ ಶಕ್ತಿ ಇರುವುದೆಂದು ಕಲ್ಪನೆಯಿರುವುದರಿಂದ ’ಮಾರುತಿ’ಎಂಬ ಹೆಸರು ಬಂದಿರಲೂ ಸಾಧ್ಯವಿದೆ.
ಅವನ ಹೆಸರಿನಲ್ಲಿ ಹೊರಡುವ ಈ ಎಲ್ಲ ಅನೇಕಾರ್ಥಗಳ ಹಿನ್ನಲೆಯಲ್ಲಿ ಅವನ ಬಗೆಗಿನ ಪೌರಾಣಿಕ ಮೂಲಗಳು ಅಲ್ಲಾಡುತ್ತವೆ. ಮೇಲಿನ ವಿವರಗಳನ್ನು ಲಕ್ಷದಲ್ಲಿರಿಸಿ ಕೊಂಡು ಅವನ ಹುಟ್ಟಿನ ಪೌರಾಣಿಕ ಮೂಲಗಳನ್ನು ಅವಲೋಕಿಸಬಹುದಾಗಿದೆ.
ತಾಯಿ ಅಂಜನಾದೇವಿ. ತಂದೆ ಕೇಸರಿ. ಇಬ್ಬರೂ ಗಂಧರ್ವ ಲೋಕಕ್ಕೆ ಸೇರಿದವರು. ಸ್ಪುರದ್ರೂಪಿ ಅಂಜನೆಗೆ ಬಹಳ ದಿನಗಳವರೆಗೆ ಮಕ್ಕಳಾಗಲಿಲ್ಲ. ವನದಲ್ಲಿ ತಿರುಗಾಡುತ್ತಿರುವಾಗ ವಾಯುದೇವನು ಈಕೆಯ ಸೌಂದರ್ಯ್ಕ್ಕೆ ಮಾರುಹೋಗಿ, ಇವಳೊಂದಿಗೆ ಕೂಡಿದುದರಿಂದ ಆಂಜನೇಯ ಅಥವಾ ಮಾರುತಿ ಜನಿಸಿದನು. ಇದು ರಾಮಾಯಣ ಹೇಳುವ ಕಥೆ.
ವೀರಶೈವ ಪುರಾಣಗಳು ಹನುಮಂತನು ಶಿವನ ಮಗನೆಂದು ಹೇಳುತ್ತದೆ: ಕಪಿಗಳ ಕೂಡುವಿಕೆಯನ್ನು ಕಂಡ ಶಿವನು, ಪಾರ್ವತಿಯೊಂದಿಗೆ ಕಪಿಗಳಂತೆ ಕೂಡಿದಾಗ, ಪಾರ್ವತಿ ಗರ್ಭಧರಿಸಿದಳು. “ಆದರೆ ಅದನ್ನು ತಾಳದಾದಾಗ, ವಾಯುವಿನ ಮೂಲಕ ಕುರುಡಿ ಅಂಜನಾದೇವಿಗೆ ಮುಟ್ಟಿಸಲು-ಅದನ್ನು ಸೇವಿಸಿದಳು. ಅಥವಾ ಕಪಿಗಳಂತೆಕೂಡುವಾಗ ವೀರ್ಯೆಸ್ಖಲನವಾಗಿ, ಗಿಡದ ಎಲೆಯ ಮೇಲೆ ಬಿದ್ದಿತು. ಆ ಎಲೆ ಗಿಡದ ಕೆಳಗೆ ಕುರುಡಿ ಅಂಜನಾದೇವಿಯು ಕೈಯಲ್ಲಿ ಬೀಳಲು, ಅದನ್ನು ಸೇವಿಸಿದಳು. ಹೀಗೆ ಗರ್ಭಧರಿಸಿ ಆಂಜನೇಯನನ್ನು ಹೆತ್ತಳು. ಇತ್ಯಾದಿ.
ಇಲ್ಲಿ ಒಂದು ಗಮನಾರ್ಹ ಅಂಶವೆಂದರೆ-ವೈದಿಕರು, ತಮ್ಮ ಪುರಾಣಗಳಲ್ಲಿ-ಹನುಮಂತನು ತಮ್ಮದೇವರಿಗೇ ಸಂಬಧಪಟ್ಟವನು ಎಂಬಂತೆ ಬಣ್ಣಿಸಿದರೆ, ವೀರಶೈವರು-ತಮ್ಮ ದೇವತೆಗಳಿಗೆ ಸಂಬಂಧಪಟ್ಟಂತೆ ವರ್ಣಿಸಲು ಹೆಣಗಾಡಿದ್ದಾರೆ ಎಂಬುದು.
ಈ ಹಿನ್ನೆಲೆಯಲ್ಲಿ ಇನ್ನಷ್ಟು ವಿಷಯ ನೋಡೋಣ: ವೈದಿಕರು ರಾಮಾಯಣದಲ್ಲಿ ಹನುಮಂತನನ್ನು ರಾಮನ ಕೇವಲ ಭಕ್ತನನ್ನಾಗಿ, ಸ್ವಾಮಿಕಾರ್ಯ ನಿರ್ವಹಿಸಲು ಕಂಕಣಬದ್ಧನಾಗಿ ನಿಂತ ಸೇವಕನನ್ನಾಗಿ ಚಿತ್ರಿಸುತ್ತಾರೆ. ಹಾಗೆಯೇ ವೀರಶೈವರು ಹನುಮಂತನ ಲಿಂಗಧಾರಣ ಪ್ರಸಂಗವನ್ನು ನಿರೂಪಿಸುತ್ತಾರೆ.[6] ಏನೆಲ್ಲ ಸೇವೆ ಮಾಡಿದರೂ ತಾನು ಬಯಸಿದ ಅನುಗ್ರಹವನ್ನು ರಾಮನಿಂದ ಕೊಡಲಾಗಲಿಲ್ಲವೆಂಬ ನಿರಾಶೆಯಿಂದ ಹನುಮಂತನು ವೀರಭದ್ರನಿಂದಲಿಂಗದೀಕ್ಷೆ ಪಡೆದು ಮುಕ್ತಿ ಹೊಂದಿದನೆಂದು ವೀರಶೈವ ಪುರಾಣಗಳು ವರ್ಣಿಸುತ್ತವೆ. ಇಲ್ಲಿ ರಾಮನನ್ನು ಕಡೆಗಣಿಸಿ, ತಮ್ಮ ದೇವರಿಂದ ಹನುಮಂತನಿಗೆ ದೀಕ್ಷೆ ಕೊಡಿಸಿ, ಅವನನ್ನು ತಮ್ಮ ದೇವರ ಬಳಗದಲ್ಲಿ ಕೂರಿಸಲು ವೀರಶೈವರು ಪ್ರಯತ್ನಿಸಿರುವುದು ಎದ್ದು ಕಾಣುತ್ತದೆ. ಇನ್ನು ಇಸ್ಲಾಂ ಕಟ್ಟು ಕಥೆಗಳನ್ನು ನೋಡಿದರೆ, ಅವರು-ಮೌಲಾಲಿಯಿಂದ ಹನುಮಂತನು ಸೋಲನ್ನುನುಭವಿಸಿದ ಕಥೆಯನ್ನು ಬಣ್ಣಿಸುತ್ತಾರೆ.ನನಗೆ ದೊರೆತ ಒಂದು ರಿವಾಯತ ಹಾಡಿನ ಸಾರಾಂಶ ಹೀಗಿದೆ: ಹನುಮಂತನು ಎರಡು ಗುಡ್ಡಗಳ ಮಧ್ಯವಾಸವಾಗಿ, ಬೈಗು-ಬೆಳಗು ತಾಲೀಮ ಮಾಡುತ್ತಿದ್ದನು. ಶಕ್ತಿಯಲ್ಲಿ ತನ್ನ ಸಮನಾದವರು ಯಾರೂ ಇಲ್ಲವೆಂದು ಗರ್ವಪಡುತ್ತಿದ್ದನು. ಒಂದು ದಿನ ಮೌಲಾಲಿ ತಿರುಗಾಡುತ್ತ ಆ ಗುಡ್ಡದೆಡೆಗೆ ಬರುವನು. ಹನುಮಂತನ ಪರಿಚಯವಾಗುವುದು. ತಾನು ಮೌಲಾಲಿಯನ್ನು ಮೀರಿಸಲೆಂದೆ ಇಷ್ಟೆಲ್ಲ ಶ್ರಮ ಪಡುತ್ತಿರುವುದಾಗಿ ಹನುಮಂತನು ಹೇಳುವನು. ಆಗ ಮೌಲಾಲಿಯು, ತಾನು ಮೌಲಾಲಿಯ ಸೇವಕನೆಂದೂ, ಮೊದಲು ತನ್ನೊಂದಿಗೆ ಗೆದ್ದು ನಂತರ ಮೌಲಾಲಿಯೊಂದಿಗೆ ಕುಸ್ತಿಯಾಡಬಹುದೆಂದೂ ಹೇಳುವನು. ಇಬ್ಬರಿಗೂ ಕುಸ್ತಿ ಪ್ರಾರಂಭವಾಗುತ್ತದೆ. ಮೌಲಾಲಿಯು ಹನುಮಂತನ ಕಪಾಳಕ್ಕೆ ಏಟುಕೊಡುತ್ತಾನೆ.ತತ್ಪಣಾಮವಾಗಿ ಅವನ ಮುಸುಡಿ ಊದಿಕೊಳ್ಳುತ್ತದೆ.ಮುಖ ಎಡಕ್ಕೆ ತಿರುಗಿಕೊಳ್ಳುತ್ತದೆ. ಹನುಮಂತ ಮೌಲಾಲಿಗೆ ಶರಣು ಹೋಗುತ್ತಾನೆ.
ಈ ಮೇಲಿನ ವಿವರಗಳನ್ನು ಗಮನಿಸಿದರೆ: ಬ್ರಾಹ್ಮಣರು, ವೀರಶೈವರು ಮತ್ತು ಮುಸ್ಲಿಮರು ಹನುಮಂತನು ನನ್ನ ತನ್ನವನೆಂದು, ಖೊಟ್ಟಿ ಸಾಕ್ಷಿಸಗಳನ್ನು ನಿರ್ಮಿಸಿ, ಅವನ ಚರಿತ್ರೆಯನ್ನು ಮಸುಕುಗೊಳಿಸಿದ್ದಾರೆ. ತಮ್ಮ ತಮ್ಮ ದೇವರ ಅಡಿಗಳಲ್ಲಿ ಹಾಕಿ, ಸೇವಕನೆಂದು ಬಣ್ಣಿಸಲು ಹೆಣಗಾಡಿದ್ದಾರೆ ಎಂಬುದು ನಮಗೆ ಹೊಳೆಯುತ್ತದೆ. ಆದುದರಿಂದ ಹನುಮಂತನ ನಿಜವಾದ ವೃತ್ತಾಂತ ಬೇರೆ ಏನೋ ಇದ್ದು, ಅವನು ರಾಮನಿಗಾಗಲಿ, ವೀರಭದ್ರನಿಗಾಗಲಿ ಇಲ್ಲವೆ ಮೌಲಾರಿಗಾಗಲಿ ಸಂಬಂಧಿಸಿದವನಿರಲಿಕ್ಕಿಲ್ಲ ಎಂಬ ಅನುಮಾನ ಬರುತ್ತದೆ. ಹೀಗಿರುವುದರಿಂದ ಹನುಮಂತನು ಈ ಮೂವರಿಗೂ ಸಂಬಂಧಿಸಿರದೆ, ಇವರೆಲ್ಲರಿಗಿಂತ ಪೂರ್ವದಲ್ಲಿ ಯಾವುದೋ ಜನಾಂಗದಿಂದ ಪೂಜೆಗೊಳ್ಳುತ್ತಲಿರುವ ಪ್ರಬಲ ದೇವರಾಗಿದ್ದಾನೆಂದು ತೋರುತ್ತದೆ. ನಂತರ ತಮ್ಮ ತಮ್ಮ ’ದೇವರ ಪ್ರಾಬಲ್ಯ, ಪ್ರಸಾರ ಹೆಚ್ಚಿಸಲು-ಹನುಮಂತನನ್ನು ಅನ್ಯಾಯಕ್ಕೊಳಮಾಡಿದ್ದಾರೆ, ಅತ್ತಿತ್ತ ಎಳೆದಾಡಿದ್ದಾರೆಂದು ಅನಿಸುತ್ತದೆ.
ಹಿಂದುಗಳು ಅನೇಕ ಪ್ರಾಣಿಲಾಂಛನ ಹೊತ್ತ ದೇವರುಗಳನ್ನು ಪೂಜಿಸುತ್ತಾರೆ. ಹನುಮಂತ, ಗಣೇಶ, ನಾಗ ಇತ್ಯಾದಿ. ಇಂಥವುಗಳಲ್ಲಿ ಅತಿ ಪ್ರಮುಖ ಹಾಗೂ ಪ್ರಾಚೀನನೆಂದರೆ ಹನುಮಂತ ದೇವರು. ಅವನ ದೊಡ್ಡಸ್ತಿಕೆಯನ್ನು ನಂತರ ಭಕ್ತಿ ಪಂಥದಲ್ಲಿ-ಮಧ್ಯಕಾಲೀನ ಹಿಂದೂ ಧರ್ಮದಲ್ಲಿ ಕಾಣಿಸಲಾಗಿದೆ. ಅವನನ್ನು ರಾಮನ ಸೇವಕನಂತೆ ಬಣ್ಣಿಸಲಾಗಿದೆ. ಆದರೆ ಭಾರತದಾದ್ಯಂತ ಜನಪದರ ನಂಬಿಕೆ ಯಂತೆ ಅವನು ಕೇವಲ ಒಬ್ಬ ಸೇವಕನಾಗಿ, ಭಕ್ತನಾಗಿ ಕಾಣುವುದಕ್ಕಿಂತ ಹೆಚ್ಚಿಗೆ, ಬಂಜೆಗೆ ಮಕ್ಕಳು ಕೊಡುವ ದೇವರಾಗಿ ಕಾಣುತ್ತಾನೆ. ಅವನು ಒಕ್ಕಲಿಗರಿಂದ ಪೂಜೆಗೊಳ್ಳುವ ದೈವವಾಗಿ, ಅವರ ಬೆಳೆಯನ್ನು ಕಾಪಾಡುವ ದೈವವಾಗಿ ತೋರುತ್ತಾನೆ.
ಆದುದರಿಂದ ಹನುಮಂತನ ಆರಾಧನಾ ಪದ್ಧತಿ ಅನಾದಿ ಕಾಲದ ಜನಾಂಗಗಳಲ್ಲಿ ಇರಬೇಕು. ನಂತರ ಆರ್ಯದರು ಈ ಪದ್ಧತಿಯನ್ನು ಸ್ವೀಕರಿಸಿರಬೇಕು. ಅಂದರೆ-ಹನುಮಂತನು ಆರ್ಯದರಿಗೆ ಸಂಬಂಧಿಸದ, ಅಥವಾ ಆದಿಮ ಜನಾಂಗದ ಇಲ್ಲವೆ ಕೊನೆಗೆ ಬ್ರಾಹ್ಮಣರಲ್ಲದವರಿಂದ ಪೂಜೆಗೊಳ್ಳುತ್ತ ಬಂದು, ನಂತರ ಅನೇಕ ದೇವತೆಗಳೊಂದಿಗೆ ಈತನನ್ನೂ ಎಲ್ಲ ಜನಾಂಗದವರು ಪೂಜೆ ಮಾಡಲು ಪ್ರಾರಂಭಿಸಿರಬೇಕು ಎಂದು ಕ್ರೂಕ್ ಅವರು ಅಭಿಪ್ರಾಯ ಪಡುತ್ತಾರೆ.[7] ವೇದಗಳಲ್ಲಿ ಆಗಾಗಲೆ ಒಂದುಜನಾಂಗ ಒಪ್ಪಿಕೊಂಡ ಧರ್ಮವನ್ನು ಹೇಳುತ್ತದೆ. ಆದುದರಿಂದ ಹನುಮಂತನು ಹೀಗೆ ಯಾವುದೋ ಒಂದು ಧರ್ಮದವರು ಅಧಿಕೃತವಾಗಿ ಸ್ವೀಕರಿಸದೆ ಪೂಜಿಸಲ್ಪಡುವ ದೇವರಾಗಿರಬೇಕೆಂದೂ ಊಹಿಸಲಾಗುತ್ತದೆ. ಹೀಗಾಗಿ ಹನುಮಂತನ ಬಗ್ಗೆಯಾವುದೇ ಅಧಿಕೃತ ದಾಖಲೆಗಳು ನಮಗೆ ಸಿಗುವುದಿಲ್ಲ. ಆದರೂ ಮುಖ್ಯವಾಗಿ ಅವನು ಒಂದು ಜಾತಿ-ವರ್ಗಕ್ಕೆ ಸಂಬಂಧಪಟ್ಟ ದೇವರಾಗಿದ್ದು, ಆ ಮೂಲವನ್ನು ಗುರುತಿಸಲು ನಮ್ಮಿಂದ ಸಾಧ್ಯವಿಲ್ಲ.[8] ಹೀಗಿದ್ದೂ ಹನುಮಂತನು ಡೊಂಬ ವಂಶಕ್ಕೆ ಸೇರಿದವನೂ ಮೇದಾರ ಗೋತ್ರಕ್ಕೆ ಸಂಬಂಧಿಸಿದವನೂ ಎಂದು ಮುಂತಾಗಿ ಊಹಿಸಲಾಗುತ್ತದೆ.[9]
ಈ ಹನುಮಂತನ ಪ್ರಸ್ತಾಪ ವೇದಗಳಲ್ಲಿ ಬರುವುದೇ ಇಲ್ಲವೆಂಬ ಕಾರಣಕ್ಕಾಗಿ ಅವನ ಆರಾಧನೆ ಬಹಳಷ್ಟು ಪ್ರಾಚೀನವಾಗಿರದೆ ಒಂದು ಕಾಡು ಜನಾಂಗದಿಂದ ದತ್ತು ಬಂದುದಾಗಿರಬೇಕೆಂದೂ ಹೇಳಲಾಗುತ್ತದೆ. ಆದರೆ ಋಗ್ವೇದಲ್ಲಿ (x.೮೬) ’ವೃಷಾಕಪಿ’ ಎಂಬ ಪದ ಬರುತ್ತದೆ. ಆ ಪದ ಬಹುಶ ಈ ಹನುಮಂತನನ್ನೇ ಕುರಿತಾಗಿರಬೇಕೆಂದೂ ಊಹಿಸಲಾಗುತ್ತದೆ.[10] ಎಫ್. ಇ. ಪರಾಗೀಟರ್ಸ್(Paragiter’s) ಅವರ ಸಂಶೋಧನೆಯನ್ನು (ಜೆ. ಆರ್.ಎ.ಎಸ್. ೧೯೯೩, ಪು. ೪೦೦), ಗಮನಿಸಿ, ಎಕ್ಸ್. ಎಸ್. ಥಾನಿ ನಯಾಗುಮ್) (Thami Nayagam) ಎನ್ನುವವರು ಹೀಗೆ ಬರೆಯುತ್ತಾರೆ:[11] ಎಫ್. ಇ. ಪರಾಗೀಟರಸ್೦ ಅವರ ವಿಶೇಷ ಸಂಶೋಧನೆ ನಮಗೆ ಹನುಮಂತನ ಬಗೆಗೆ ಈ ರೀತಿ ಗ್ರಹಿಸಲು ಕಾರಣವಾಗುತ್ತದೆ-ಅವನೊಬ್ಬ ಕಪಿದೇವನಾಗಿದ್ದು, ಆರ್ಯ.ರಿಗಿಂತ ಮೊದಲೇ ದ್ರಾವಿಡ ಜನಾಂಗದಿಂದ ಪೂಜೆಗೊಳ್ಳುತ್ತಲಿರುವ ದೇವತೆಯಾಗಿದ್ದಾನೆ. ದ್ರಾವಡರು ಅನಿಗೆ ’ಅಣ್‌ಮಂತಿ’ (Anmanti- ತಮಿಳಿನಲ್ಲಿ) ಎನ್ನುತ್ತಾರೆ. (ಅಣ್ ಎಂದರೆ ಗಂಡು, ಮಂತಿ ಎಂದರೆ ಕಪಿ). ಇದನ್ನು ಆರ್ಯುರು ತಮ್ಮ ಭಾಷೆಗೆ ’ವೃಷಾಕಪಿ’ ಅಂದರೆ ’ಗಂಡುಕಪಿ’ ಎಂದು ಭಾಷಾಂತರಿಸಿ ಕೊಂಡರು. ಮುಂದೆ ಸಾವಕಾಶವಾಗಿ ದ್ರಾವಿಡರ ಈ ಪ್ರಬಲ ದೇವರನ್ನು ಆರ್ಯೆರೂ ಪೂಜಿಸತೊಡಗಿದರು. ನಂತರ ’ಅಣ್‌ಮಂತಿ’ ಎಂಬುದನ್ನೇ ಭಾಷಾಂತರಿಸಿ, ಸಂಸ್ಕೃತದಲ್ಲಿ ’ಹನುಮಂತ’ ಎಂದು ಕರೆಯಲಾಯಿತು. ಈಗಲೂ ಅದೇ ಹೆಸರಿನಿಂದಲೇ ಪ್ರಸಿದ್ಧನಾಗಿದ್ದಾನೆ.
ಈ ಎಲ್ಲ ಮಾತುಗಳನ್ನು ಗಮನಿಸಿ ಇಷ್ಟು ಹೇಳಬಹುದೆಂದು ತೋರುತ್ತದೆ: ಸ್ಥಳೀಯವಾಗಿ ಮಹತ್ವ ಪಡೆದ ವ್ಯಕ್ತಿ ತನ್ನ ಸುತ್ತಲಿನ ಜನರಿಂದ ಪೂಜ್ಯವೆನಿಸಿಕೊಳ್ಳುತ್ತಾನೆ. ಈ ಕಾರಣಕ್ಕಾಗಿ ಅವನ ಪೂಜೆ ಪ್ರಾರಂಭವಾಗುತ್ತದೆ. ನಂತರ ಅಂಥ ಅಂಥ ಯಾವುದೋ ಒಬ್ಬ ವ್ಯಕ್ತಿ ಪುರಾಣಗಳಲ್ಲಿ ಸ್ಥಾನಪಡೆದರೆ, ಅವನ ಸುತ್ತಹೆಣೆಯಲ್ಪಡುವ ಇತರ ಅನೇಕ ಪವಾಡಮಹಿಮೆಗಳಿಂದ ದೇವರಾಗಿ ಜನಗಳಿಂದ ಪೂಜೆ ಗೆಯ್ಸಿಕೊಳ್ಳುತ್ತಾನೆ. ಹಾಗೆಯೇ ದ್ರಾವಿಡ ಜನಾಂಗದ ಒಂದು ಗುಂಪಿನ ನಾಯಕನಾಗಿರಬಹುದಾದ ಹನುಮಂತನು ಯಾವುದೋ ಕಾರಣಕ್ಕಾಗಿ ಸ್ಥಳೀಯವಾಗಿ ಮಹತ್ವ ಪಡೆದು, ಪೂಜ್ಯನೆನಸಿಕೊಂಡು, ಆ ಗುಂಪಿನಿಂದ ಪೂಜೆಗೊಳ್ಳ ತೊಡಗಿ, ಮುಂದೆ ಕ್ರಮೇಣ ದ್ರಾವಿಡರ ಗ್ರಾಮದೇವತೆಯಾಗಿ ಸ್ಥಾನಪಡೆದಂತೆ ತೋರುತ್ತದೆ. ಹೀಗಾಗಿ ಈತ ಮೂಲತಃ ಆರ್ಯ,ರಿಗೆ ಸಂಬಂಧ ಪಡದ ಜನಾಂಗದ-ದ್ರಾವಿಡ-ದೇವರಾಗಿದ್ದನೆಂಬುದು, ವಿದ್ವಾಂಸರ ಹೇಳಿಕೆಯನ್ನು ಗಮನಿಸಿದರೆ ನಿಸ್ಸಂದೇಹವೆನಿಸುತ್ತದೆ.
ಆರ್ಯಸರು ದ್ರಾವಿಡರನ್ನು ಸೋಲಿಸಿ, ದಕ್ಷಿಣಕ್ಕಟ್ಟಿದ ನಂತರ, ದ್ರಾವಿಡರು-ತಾವು ವಾಸ ಮಾಡಿದಲ್ಲೆಲ್ಲ ರಕ್ಷಣೆಗೆಂದು ತಮ್ಮ ಪ್ರಬಲ ದೇವತೆ ಹನುಮಂತನನ್ನು ಯಾವುದೇ ಕಂಕಗಳು-ಬಹುಶ ಆರ್ಯ ರ ಭೀತಿಯೂ ಇರಬೇಕು, ಅವರಿಂದ ಕಾಪಾಡಲು-ಗ್ರಾಮದ ಹೊರಬಾಗಿಲಿಗೆ ಗುಡಿಕಟ್ಟಿ ಇಟ್ಟರು. ಈಗಲೂ ಪ್ರತಿ ಊರಿನ ಹೊರಗೆ ಹನುಮಂತನ ದೇವಾಲಯ ಇರಲು ಕಾರಣ, ಬಹುಶ ಆ ರೂಢಿಯೇ ಸಾಂಪ್ರದಾಯವಾಗಿ ಬೆಳೆದು ಬಂದಂತೆ ತೋರುತ್ತದೆ.
ನಂತರ ಆರ್ಯಿ-ದ್ರಾವಿಡರಲ್ಲಿ ಸಮನ್ವಯ ಬೆಳೆದಂತೆ ದ್ರಾವಿಡರ ಪ್ರಬಲ ದೇವರು-ಹನುಮಂತನನ್ನು ಆರ್ಯೆರೂ ಪೂಜಿಸಲು ಪ್ರಾರಮಭಿಸಿರಬೇಕು. ಆದರೆ ತಮ್ಮಿಂದ ದ್ರಾವಿಡರು ಸೋತ ಸಂಕೇತವಾಗಿ ಅವರ ದೇವರ ಪ್ರಾಬಲ್ಯವನ್ನು ಕಡಮೆ ಮಾಡಲು ಮತ್ತು ತಮ್ಮ ದೇವರ ಪ್ರಾಬಲ್ಯವನ್ನು ಹೆಚ್ಚಿಸಲು-ರಾಮಾಯಣದಲ್ಲಿ ಹನುಮಂತನನ್ನು ರಾಮನ ಸೇವಕನಂತೆ ಚಿತ್ರಿಸಿದರು. ಇದು ದ್ರಾವಿಸರನ್ನು ಅವಹೇಳನ ಮಾಡುವ ಬುದ್ಧಿಯಿಂದಲೂ ಇರಬೇಕು.
ಹೀಗೆ ನಂತರದಲ್ಲಿ ಬ್ರಾಹ್ಮಣರು ಹನುಮಂತನಿಗೆ ಜನಿವಾರ ಹಾಕಿದರು. ಚಂಡಿಕೆ ಹಚ್ಚಿದರು. ವೀರಶೈವರು ಲಿಂಗ ಕಟ್ಟಿದರು. ಇಸ್ಲಾಮರು ಮೌಲಾಲಿಯಿಂದಲೇ ಅವನ ಮುಸುಡಿ ಊದಿಕೊಂಡಿದೆ ಎಂದುಕಲ್ಪಿತ ಕಥೆ ಕಟ್ಟಿ ಹಾಡಿದರು.
ಇದೆಲ್ಲವನ್ನೂ ಗಮನಿಸಿ ಹೀಗೆ ಹೇಳಬಹುದು: ಯಾವುದೋ ಕಾರಣಕ್ಕಾಗಿ ಸ್ಥಳೀಯವಾಗಿ ಮಹತ್ವ ಪಡೆದ ಹನುಮಂತನು-ತನ್ನ ಜನಗಳಿಂದ ಪೂಜೆಗೈಯ್ಸಿಕೊಳ್ಳುತ್ತ, ಕ್ರಮೇಣ ಜನಪ್ರಿಯತೆ ಪಡೆಯುತ್ತ, ನಂಬುಗೆಗಳು ಪ್ರಬಲವಾಗುತ್ತ ಹೋಗಿ-ಪುರಾಣಗಳಲ್ಲಿ ಸ್ಥಾನ ಪಡೆದು, ಬಾರತದಾದ್ಯಂತ ಬಹುದೊಡ್ಡ ದೇವರಾಗಿ ಮಾರ್ಪಟ್ಟನು.
***
ಇನ್ನು ಹನುಮಂತನ ಬಗ್ಗೆ ಜನಪದಲ್ಲಿರುವ ನಂಬುಗೆಗಳನ್ನು ನೋಡೋಣ: ಹನುಮಂತನು ಬಹು ಪೂರ್ವಕಾಲದಿಂದಲೆ ಬಂಜೆಯವರಿಗೆ ಮಕ್ಕಳನ್ನು ಕೊಡುವ ದೇವರೆಂದು ನಂಬಲಾಗುತ್ತದೆ ಎಂದು ಹಿಂದೆಯೇ ಹೇಳಿದೆ. ಈ ನಂಬುಗೆ ಜಾವಾ ದೇಶದ ಜನಾಂಗಗಳಲ್ಲೂ ಇದೆಯೆಂದು ತಿಳಿದು ಬರುತ್ತದೆ. ನಮ್ಮಲ್ಲಿ-ನಡುರಾತ್ರಿ ಬೆತ್ತಲೆಯಾಗಿ ಹನುಮಂತ ದೇವರಿಗೆ ಪೂಜೆ ಸಲ್ಲಿಸಿದರೆ, ಮಕ್ಕಳಾಗುವುವು ಎಂಬ ಮೂಢನಂಬಿಕೆಯಿದೆ.[12] ಹೀಗೆ ಹನುಮಂತನು ಮಕ್ಕಳನ್ನು ಕೊಡುವ ದೇಹರಾದುದರಿಂದ ಜನಪದ ಕಥೆಗಳಲ್ಲೂ ಈ ಭಾವನೆಯನ್ನು ಹೊತ್ತ ಕಥಾ ಘಟಕಗಳು ಕಾಣಸಿಗುತ್ತವೆ: ಒಬ್ಬ ರಾಣಿ ಬಂಜಿ. ರಾಜನು ಆಕೆಯನ್ನು ಊರ ಹೊರಗೆ ಮನೆ ಕಟ್ಟಿ ಇಡುತ್ತಾನೆ. ಸಹಾಯಕ ಮಂಗವು-ರಾಣಿ ಬುರಿಯಾಗಿದ್ದಾಳೆಂದು ಸುಳ್ಳು ಸುದ್ದಿ ಹಬ್‌ಇಬಸುತ್ತದೆ. ಒಂಬತ್ತು ತಿಂಗಳಾದ ನಂತರ ಕೂಸಿನ ಜಡೆ ತೆಗೆಯಲು ಪರಸಿ ಹೊರಡುತ್ತದೆ. ಕಣಕದ ಗೊಂಬೆಯೊಂದನ್ನು ನಿರ್ಮಿಸಿ, ಕುಂಚಿಗೆಯಲ್ಲಿ ಸುತ್ತಿಕೊಂಡು ಮಂಗವೂ ಹೊರಡುತ್ತದೆ. ಮುಂದೆ, ಒಂದುಹನುಮಂತನ ಗುಡಿಯಲ್ಲಿ ಮೂರುತಿಯ ಮುಂದೆ ಗೊಂಬೆಯಿಟ್ಟು ತಾನು ಬಹಿರ್ದೆಸೆಗೆ ಹೋಗಿ ಬರುವವರೆಗೆ ಗೊಂಬೆಯನ್ನು ನಿಗಾಮಾಡಲು ಹನುಮಂತನಿಗೆ ತಾಕೀತು ಮಾಡಿ ಹೋಗುತ್ತದೆ. ತಿರುಗಿ ಬರುವುದರಲ್ಲಿ ಗೊಂಬೆ ಕಾಣದೆ, ಹನುಮಂತನೇ ನುಂಗಿರಬಹುದೆಂದು, ಅವನ ಮೇಲೆ ಅಪಾದನೆ ಹೊರಿಸಿ ತನ್ನಕೂಸು ತನಗೆ ಕೊಡದಿದ್ದರೆ ಹೊಸಲನ್ನು ಮುಖಕ್ಕೆ ಬಳಿಯುವದಾಗಿ ಹೆದರಿಸುತ್ತದೆ.ಹನುಮಂತನು ಹೆದರಿ-ಜೀವವಿರುವ ಕೂಸನ್ನೇ ಉಗುಳುತ್ತಾನೆ ಅಥವಾ ಅವನು ಉಗುಳಿದ ಉಗುಳೇ ಕೂಸಾಗಿ ಮಾರ್ಪಾಡುತ್ತದೆ.
ಇನ್ನೊಂದು ಕಥೆಯಲ್ಲಿ ಒಬ್ಬಳು ತನಗೆ ಗಂಡುಮಗು ಜನಿಸಿದರೆ ’ಅಪ್ಪಳ ತುಪ್ಪಳ’ಏರಿಸುವದಾಗಿ ಹನುಮಂತನಿಗೆ ಹರಕೆ ಹೊರುತ್ತಾಳೆ. ಅವಳಿಗೆ ಗಂಡು ಮಗು ಜನಿಸುತ್ತದೆ.
ಈ ಮೇಲಿನ ಎರಡೂ ಕಥಾ ಘಟಕಗಳಲ್ಲಿ ಒಡಮೂಡಿ ಬಂದಿರುವ ಭಾವನೆ- ’ಹನುಮಂತನು ಮಕ್ಕಳು ಕೊಡುವ ದೇವರಾಗಿದ್ದಾನೆ’ ಎಂಬ ಕಲ್ಪನೆಯಿಂದಲೇ ಎಂಬುದಕ್ಕೆ ಎರಡು ಮಾತಿಲ್ಲ.
ಬಹು ಕಾಲದಿಂದಲೂ ನಂಬಿಕೊಂಡು ಬಂದಿರುವ ಇನ್ನೊಂದು ನಂಬುಗೆಯೆಂದರೆ ಹನುಮಂತನು ಉಳುವವರ ದೇವನಾಗಿದ್ದು, ಅವರ ಫಲ ಕಾಪಾಡುವ ದೈವವಾಗಿದ್ದಾನೆ ಎಂಬುದು. ಇದಕ್ಕೆ ಉದಾಹರಣೆಯಾಗಿ ಒಂದು ಆಚರಣೆಯನ್ನು ನೋಡೋಣ:[13]
ಮದನ ಮನಗಿಸಬೇಕು ಮಂಡಲ ಬರಿಬೇಕು
ಸುತ್ತ ಕರಿಬಂಟ ಕಟ್ಟಬೇಕು
ಒಕ್ಕಲಿಗರು ಜೋಳದ ರಾಶಿಯ ಸಮಯದಲ್ಲಿ ಹಂತಿ ಮುಗಿದು, ಮದನ ಮನಗಿಸಿದ ನಂತರ, ಜೋಳದ ರವದಿಯನ್ನು ಸುಟ್ಟು, ಆ ಕರುಕಿನಿಂದ ಕಣದಲ್ಲಿ ಮಂಡಲ ಬರೆಯುತ್ತಾರೆ. ಅರ್ಧಚಂದ್ರಾಕೃತಿಯ ಹಾಗೂ ’+’ ಈ ಚಿನ್ಹೆಯ ಗುರುತು ಹಾಕುತ್ತಾರೆ. ಇದನ್ನು ’ಕರಿಬಂಟ’ ಎಂದು ಕರೆಯುತ್ತಾರೆ. ಈ ’ಕರಿಬಂಟ’ ಹನುಮಂತನ ವೆಂದು ಹೇಳುತ್ತಾರೆ:
ಕರಿಹನುಮ ನಿನ್ನ ರೂಪ ಬರದೇವು ಬಂಡಿಯ ಮ್ಯಾಲ
ಸಗರ ಶಾಪುರದ ಕರಿಹನುಮ ನಿನನಾಮ
ಬರದೇವು ನಮ್ಮ ಕಣದಾಗ
ಎಂಬ ನಡಿ ಅದಕ್ಕೆ ಸಾಕ್ಷಿಯಾಗಿಯೂ ಇದೆ. ದುಷ್ಟಶಕ್ತಿಯನ್ನು ಸಂಹಾರ ಮಾಡುವವನೂ, ಚೆಲುವನ್ನು ಕೆಡದಂತೆ ಕಾಪಾಡುವವನೂ, ಬಲವನ್ನೂ ಫಲವನ್ನೂ ಕೊಡುವವನೂ ಆದ ಹನುಮಂತನ ಮೇಲೆ ನಂಬುಗೆ ಇಟ್ಟ ಜನ, ಅವನನ್ನು ತಮ್ಮ ಕಣದಲ್ಲಿ ಸಂಕೇತ ತಂದು ಜವಾಬುದಾರಿಯನ್ನು ಹೊರಿಸಿದರು.
ಪ್ರತಿಯೊಂದು ಊರಿಗೂ ಹನುಮಂತನಿರುವಂತೆ ಆತನ ಭಕ್ತರು ಬಳಗವೂ ಅನಂತ. ಆತ ಶನಿಯನ್ನು ಗೆದ್ದ ಬಲವಂತ. ಚೆಲುವಾದ ಮುದ್ದು ಮಗುವಿಗೆ ದೃಷ್ಟಿತಟ್ಟದಿರಲೆಂದು ತಾಯಿ ತನ್ನ ಮಗುವನ್ನು ಹನುಮಪ್ಪನ ದೇವಸ್ಥಾನಕ್ಕೆ ಒಯ್ದು ಆತನ ಮೇಲೆ ಎಣ್ಣೆ ಸುರವಿ, ಮೈಮೇಲಿರುವ ಜಿಗುಟು ಕಪ್ಪು ಮಸಿಯನ್ನು ಪ್ರಸಾದವೆಂದು ತನ್ನ ಮಗುವಿನ ಹಣೆಗೂ ಹಚ್ಚುತ್ತಾಳೆ. ಇದರಿಂದ ತನ್ನಮಗುವಗೆ ಯಾವ ಕೇಡೂ ಬಾರದು ಎಂಬುದು ಮುತ್ತೈದೆಯ ನಂಬುಗೆ. ಸುಂದರ ದೇಹಿಗಳಾದ ಪೈಲ್ವಾನರು ತಮ್ಮ ದೇಹಕ್ಕೆ ಕೆಟ್ಟ ದೃಷ್ಟಿ ಬೀಳದಿರಲೆಂದು, ತಮ್ಮ ಬಲವು ವೃದ್ಧಿಯಾಗಲೆಂದು ಹಾಗೂ ಭೂತಪಿಶಾಚಿ ಮೊದಲಾದ ದುಷ್ಟಶಕ್ತಿಗಳು ಬಡೆದುಕೊಂಡವರು. ಅವುಗಳ ಪರಿಹಾರಕ್ಕಾಗಿ ಹನುಮಪ್ಪನ ಮೂರ್ತಿ ಇರುವ ಬಿಲ್ಲ. ತಾಯಿತಗಳನ್ನು ಕರಿಯದಾರದಲ್ಲಿ ಪವಣಿಸಿ ಕಟ್ಟಿಕೊಳ್ಳುತ್ತಾರೆ. ಇಲ್ಲೆಲ್ಲ ಹನುಮಪ್ಪನೊಂದಿಗೆ ಕಪ್ಪುನಿಶಾನೆ ಬಳಕೆಗೊಳ್ಳುತ್ತಿರುವುದನ್ನು ಕಾಣುತ್ತೇವೆ-ಕರಿಯದಾರ, ಕಪ್ಪು ಮಸಿ, ಕರಿಯಮಣಿ ಮುಂತಾವುದಗಳು.
ತನ್ನ ಜೀವನಕ್ಕೆ ಆಧಾರವಾದ ಬೆಳಸನ್ನು ಮಗುವಿನಂತೆ ಜೋಪಾನಮಾಡಿ. ಕಾಯ್ದು ದುಡಿದು ಒಕ್ಕಲಿಗನು ಬೆಳೆಯನ್ನು ಬೆಳೆಸುತ್ತಾನೆ. ತನ್ನ ಶ್ರಮದ ಫಲಮನೆಗೆ ಬರಲು ತಯಾರಾಗಿದೆ. ತಾನು ದುಡಿದು ಸಂಪಾದಿಸಿದ ವಸ್ತುವಿನ ಮೇಲೆ ಪ್ರೀತಿ ಇರುವುದು ಮನುಷ್ಯನ ಸಹಜ ಗುಣ. ಅಂತಲೇ ಮದನ ಮನಗಿಸಿದ ಮೇಲೆ ತುಂಬಿದ ಕಾಳುಗಳಿಂದ ಬಲು ಸುಂದರವಾಗಿ ಕಾಣುವ ರಾಶಿಯ ಮೇಲೆ ಕಟ್ಟ ದೃಷ್ಟಿ ಬೀಳದಿರಲೆಂದು, ತಮ್ಮ ರಾಶಿ ಹುಲುಸಾಗಲಿ, ಯಾವುದೇ ಕಂಟಕವನ್ನು ತಂದೊಡ್ಡುವ ದುಷ್ಟಶಕ್ತಿಗಳು ಕಣದಲ್ಲಿ ಹೊಗದಿರಲಿ ಎಂದು. ಚೆಲುವನ್ನು ಕಾಪಾಡುವವನೂ, ದುಷ್ಟಶಕ್ತಿಯನ್ನು ನಿವಾರಿಸುವವನೂ ಆದ ಹನುಮಂತನ ರೂಪವನ್ನು ಒಕ್ಕಲಿಗರು ತಮ್ಮ ಕಣದಲ್ಲಿ ಬರೆಯುತ್ತಾರೆ. ಭೂತ-ಪಿಶಾಚಿ ಅಲ್ಲದೆ ಭಾನುಮತಿಯಂತಹ ಕೆಟ್ಟ ವಿದ್ಯಗಳಿಂದ ಕಣದಲ್ಲಿ ಕಾಳು ತಿರುಗಿಸಿಕೊಳ್ಳುವ ಜನ ಇದ್ದಾರೆ. ಹನುಮಂತನ ಮುಂದೆ ಈ ದುಷ್ಟ ಶಕ್ತಿಗಳ ಆಟ ನಡೆಯುವದಿಲ್ಲ ಎಂಬ ನಂಬಿಕೆಯೇ ಇದಕ್ಕೆ ಕಾರಣವೆನ್ನಬೇಕು.
ಬ್ರಹ್ಮಚಾರಿಯಾಗಿ ಉಳಿಯುವುದು ಎಂದರೆ-ತನ್ನ ಸುತ್ತಲಿನವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದರ ಮೂಲಕ ಅವರ ಮೇಲೆ ಪ್ರಭುತ್ವವನ್ನು ಸ್ಥಾಪಿಸುವುದು ಎಂದು ಹೇಳಲಾಗುತ್ತದೆ. ಅಂದರೆ ಇದರಿಂದ ಅಸಾಧಾರಣವಾದ ಶಕ್ತಿ ಮತ್ತು ಅದ್ಬುತ ಯಶಸ್ಸುಗಳು ಪ್ರಾಪ್ತವಾಗುತ್ತವೆ ಎಂದು ನಂಬಲಾಗುತ್ತದೆ. ಚಿರಂಜೀವಿ-ಜಿತೇಂದ್ರಿಯನಾದ ಹನುಮಂತನು ತನ್ನ ವೀರ್ಯ ಶಕ್ತಿಯ ಬಲದಿಂದ ಅನೇಕ ವಿಘ್ನಗಳನ್ನು ನಿವಾರಿಸುವವನಾಗಿದ್ದಾನೆ ಎಂದು ನಂಬಲಾಗುತ್ತದೆ. ಆತ ಶನಿಯನ್ನು ಗೆದ್ದವನಾದ್ದರಿಂದ, ತಮಗೆ ಅನಿಷ್ಟಗಳು ಕಾಡಹತ್ತಿದರೆ, ಹನುಮಂತನ ಪೂಜೆ, ಅಭಿಷೇಕ ಇತ್ಯಾದಿಗಳನ್ನು ಮಾಡಿದರೆ-ಆ ಕಾಡಾಟಗಳು ದೂರವಾಗುತ್ತವೆ ಎಂದೂ ನಂಬುತ್ತಾರೆ. ಹನುಮಂತನು ಶನಿಯನ್ನು ಗೆದ್ದ ಪ್ರಸಂಗವನ್ನು ಹೇಳುವ ಒಂದು ಕಥಾಘಟಕ ಹೀಗಿದೆ: ಶನಿಯು ಎಲ್ಲ ದೇವರುಗಳನ್ನು ಕಾಡಿ, ಗೆದ್ದು ನಾಳೆ ತನ್ನಲ್ಲಿಗೆ ಬರುವುದಾಗಿ ಹನುಮಂತನಿಗೆ ಸೂಚನೆ ಕೊಡುತ್ತಾನೆ. ಮರುದಿನ ಆತನ ತಲೆಯ ಮೇಲೆ ಬಂದು ಕುಳಿತುಕೊಳ್ಳುತ್ತಾನೆ. ಹನುಮಂತನು ತನ್ನ ಬಾಲದಿಂದ ಗುಡ್ಡವನ್ನೇ ಎತ್ತಿ ಸಾವಕಾಶವಾಗಿ ಶನಿಯ ತಲೆಯ ಮೇಲೆ ಇಡುತ್ತಾನೆ. ಗುಡ್ಡದ ಭಾರವನ್ನು ತಾಳದ ಶನಿ ಹನುಮಂತನಿಗೆ ಶರುಣು ಬರುತ್ತಾನೆ. ಹನುಮಂತನು ತನಗೆ, ತನ್ನ ಭಕ್ತರಿಗೆ ಕಾಡಬಾರದೆಂಬ ಕರಾರಿನ ಮೇಲೆ ಶನಿಯನ್ನು ಬಿಟ್ಟು ಬಿಡುತ್ತಾನೆ.
ಈ ನಂಬಿಕೆಯಿಂದಲೇ ಮಾಟವನ್ನು ಹೋಗಲಾಡಿಸುವಲ್ಲಿಯೂ ಹನುಮಂತನ ಶಕ್ತಿ ಉಪಯೋಗವಾಗುತ್ತದೆಂದು ಹೇಳುತ್ತಾರೆ. ಭಾನಾಮತಿ, ದೆವ್ವ, ಭೂತ-ಪಿಶಾಚಿ ಇತ್ಯಾದಿ ದುಷ್ಟ ಶಕ್ತಿಗಳನ್ನು ಹೊಡೆದೋಡಿಸಲು ಗೈಯ್ಯುವ ಪ್ರತಿಮಾಟ ಹಾಗೂ ಪೂಜೆಗಳಲ್ಲಿ ಹನುಮಂತನ ಪಾತ್ರ ಬಹು ಪ್ರಮುಖವಾದುದು. ಇದೇ ಕಾರಣದಿಂದಲೇ ಮಾಟದಿಂದ ಕಣದಲ್ಲಿಯ ರಾಇಯನ್ನು ಅಪಹರಣ ಮಾಡಲು ಸಾಧ್ಯವಾಗದಂತೆ ನೋಡಿಕೊಳ್ಳಲು ಹನುಮಂತನನ್ನು ’ಕರಿಬಂಟ’ನ ರೂಪದಲ್ಲಿ, ಕಣದಲ್ಲಿ ಕಾಣುತ್ತೇವೆ.
ಇನ್ನೂ ಕೆಲವು ನಂಬಿಕೆಗಳು ಹೀಗಿವೆ: ಶನಿವಾರಕ್ಕೊಮ್ಮೆ ಹಣಮಂತರಿಗೆ ದೇವರಿಗೆ ನಡೆದುಕೊಂಡರೆ ಅನಿಷ್ಟಗಳು ತಪ್ಪುತ್ತವೆ. ಹನುಮಂತನ ಅಂಗಾರವನ್ನು ಅರಿವೆಯಲ್ಲಿ ಹಾಕಿ ಟೊಂಕಕ್ಕೆ ಕಟ್ಟಿಕೊಂಡರೆ ದೆವ್ವ ಸಮೀಪ ಬರುವುದಿಲ್ಲ. ಹೆಣ್ಣಮಕ್ಕಳು ಹನುಮಪ್ಪನಿಗೆ ಪೂಜೆ ಮಾಡಿದರೆ ಲಗ್ನ ತೀವ್ರ ಆಗುತ್ತದೆ ಚಳಿ ಬನ್ನಿಗಿಡದಲ್ಲಿ ವಾಸವಾಗಿರುತ್ತದೆ. ದಸರೆಗೆ ಬನ್ನಿಮುಡಿದು ಬರುವವರೊಂದಿಗೆ ಹನುಮಂತನ ಗುಡಿಗೆ ಬರುತ್ತದೆ. ಅಲ್ಲಿಯೇ ದೀಪಾವಳಿಯ ವರೆಗೆ ಕುಳಿತಿದ್ದು, ದೀಪಾವಳಿ ಪಾಡ್ಯದ ನಸುಕಿನಲ್ಲಿ ಅಗಸನು ಊರಲ್ಲಿ ಆರುತಿ ಬೆಳಗಲು ಬರುವುದಕ್ಕಿಂತ ಮುಂಚೆ ಹನುಮಂತನಿಗೆ ಆರುತಿ ಬೆಳಗಿ ಬರುತ್ತಾನೆ. ಚಳಿಯು ಈ ಅಗಸನ ಕಂಬಳಿಯಲ್ಲಿ ಕುಳಿತುಕೊಂಡು ಮನೆ ಮನೆ ಸೇರುತ್ತದೆ-ಎಂಬ ನಂಬಿಕೆಯಿದೆ.
ಇನ್ನೂ ಕೆಲವು ಆಚರಣೆಗಳು ಹೀಗೆವೆ: ಸೋದರಳಿಯ ಅಥವಾ ಸೋದರ ಸೊಸೆಗೆ ಮೊದಲಿಗೆ ಮೇಲಿನ ಹಲ್ಲು ಹೊರಟರೆ-ಹನುಮಂತನ ಗುಡಿಯಲ್ಲಿ ಒಂದು ಆಚರಣೆ ನಡೆಯುತ್ತದೆ. ಸೋದರ ಮಾವನು ಮೇಲಿನ ಹಲ್ಲು ಹೊರಟ ಕೂಸಿಗಾಗಿ ಅಂಗಿ, ಟೊಪ್ಪಿಗೆ ಅಲ್ಲದೆ ಒಂದು ಸಣ್ಣ ಬೆಳ್ಳಿ ಬಟ್ಟಲನ್ನು ಒಯ್ಯುತ್ತಾನೆ. ಗುಡಿಯ ಬಾಗಿಲಿಗೆ ಪರದೆ ಹಾಕುತ್ತಾರೆ. ಮಗು ಒಳಗೆ ಇರುತ್ತದೆ. ಸೋದರಮಾವ ಹೊರಗಿರುತ್ತಾನೆ. ಪೂಜಾರಿ-ಸೋದರಮಾವನ ತಂದ ಬೆಳ್ಳಿ ಬಟ್ಟಲಿನಿಂದ ಮಗುವಿನ ಹಲ್ಲಿಗೆ ಗೀರಿ ರಕ್ತ ತೆಗೆದು ತಂದು ಸೋದರಮಾವನ ಹಣೆಗೆ ಹಚ್ಚುತ್ತಾನೆ. ನಂತರ ಕೂಸಿನ ಮುಖ ನೋಡುತ್ತಾನೆ. ಅಲ್ಲಿಯವರೆಗೆ ಅಂಥ ಮಗುವಿನ ಮುಖ ಸೋದರಮಾವ ನೋಡಬಾರದು ಎಂಬ ನಂಬಿಕೆಯಿದೆ. ಇನ್ನು ಯಾವುದೇ ಶುಭ ಕಾರ್ಯಕ್ಕೆ ಬೀಗರು ಊರಿಗೆ ಬಂದರೆ ಮೊದಲು ಇಳಿದುಕೊಳ್ಳುವುದು ಹನುಮಂತನ ಗುಡಿಯಲ್ಲಿ ಅಲ್ಲಿಂದ ಅವರಿಗೆ ಮೆರವಣಿಗೆಯಲ್ಲಿ ಕರೆತರುತ್ತಾರೆ. ಮದುವೆಗೆ ಬಂದ ಬೀಗರಂತೂ ಹನುಮನ ಗುಡಿಯಲ್ಲಿ ಇಳಿಯಲೇ ಬೇಕು. ಅಲ್ಲಿಯೇ ಬೀಗರ ಬೇಟಿ ನಡೆಯುವುದು. ಹೀಗೆ ಹನುಮಂತನು ನಮ್ಮ ದಿನನಿತ್ಯದ ಜೀವನ-ಸಂಸಕೃತಿಯೊಂದಿಗೆ ತನ್ನ ಸಂಬಂಧವನ್ನು ನಿರಂತರವಾಗಿ ಗಟ್ಟಿಗೊಳಿಸಿಕೊಳ್ಳುತ್ತಲೇ ಇದ್ದಾನೆ.
ಮಹಾಭಾರತದ ಅರ್ಜುನನು ಹನುಮಂತನ ಲಾಂಛನವುಳ್ಳ ಪತಾಕೆಯನ್ನು ಹೊಂದಿದ್ದ. ಒಂದು ಹಕ್ಕಿಯ ಹೆಸರು ಹನುಮನ ಹಕ್ಕಿ. ಉತ್ತರದಿಕ್ಕಿಗೆ ಹನುಮನ ದಿಕ್ಕು ಎನ್ನುತ್ತಾರೆ. ಕಾರವಾರ ಜಿಲ್ಲೆಯ ’ಹನುಮಾವರ’ ಎಂಬ ಊರು ಈಗ ಹೊನ್ನಾವರವಾಗಿದೆ. ಬೀದರ ಜಿಲ್ಲೆಯಲ್ಲೊಂದು ’ಹನುಮಂತವಾಡಿ’ ಎಂಬ ಊರಿದೆ. ’ಕರಿಹನುಮ್ಯಾ’, ’ಹಣಮಂದೇವರ ಮಾರ್ಯಾಂ ವ’, ’ಕ್ವಾಡಗ’, ಮಾರ್ಯಾಂ್ವ, ಇತ್ಯಾದಿ ಪಡೆನುಡಿಗಳು ಬಳಕೆಯಲ್ಲಿವೆ. ಹನುಮಂತನ ಮುಂದೆ ಹಾರೋ ಗುಬ್ಬಿಯೇ ’ಹನುಮಂತರಾಯ ಹಗ್ಗ ತಿಂದರೆ ಪೂಜಾರಯ್ಯ ಸಾವಿಗೆ ಬಯಸಿದನಂತೆ’, ’ಊರು ಸುಟ್ಟರೂ ಹನುಮಂದೇವರು ಹೊರತೆ’, ’ಮೊದಲು ದೇವರು ಮೂಲೇಲಿದ್ದರೂ ಹನುಮಂತರಾಯಗೆ ದೀಪೋತ್ಸವು’-ಮುಂತಾದ ಗಾದೆಗಳು ಬಳಕೆಯಲ್ಲಿವೆ. ಇದೆಲ್ಲವನ್ನುಳಿದು-ಕೊಜನೆಯದಾಗಿ, ನಮಗೆ ಪೂಜ್ಯೆನಾಗಿರುವ ಅನೇಕ ಮೂಢನಂಬುಗೆಗಳಿಗೆ ಕಾರಣನಾಗಿರುವ ಈ ಹನುಮಂತ ದೇವರ ಬಗ್ಗೆ, ಭಾರತವನ್ನು ಸಂದರ್ಶಿಸಿದ ಪ್ರವಾಸಿಗಳು ಆಡಿದ ಕೆಲವು ಮಾತುಗಳನ್ನು ನೋಡಬಹುದೆಂದು ತೋರುತ್ತದೆ;
ನಿಕೋಲಾಸ್ ಪಿಮೆಂಟಾ (೧೫೯೯-೧೬೧೭) ಎನ್ನುವ ರೋಮ್ ದೇಶದ ಪ್ರವಾಸಿಗನು ೧೫೯೯ ಡಿಸೆಂಬರ ತಿಂಗಳಲ್ಲಿ ಗೋವೆಯಿಂದ ರೋಮಗೆ ಬರೆದ ಪತ್ರದಲ್ಲಿ ಬರೆಯುತ್ತಾನೆ: ’ಪೆರಿಮಾಳ್ ಎಂಬದೇವಸ್ಥಾನದಲ್ಲಿ ’ಹನಿಮಂತ್’ನೆಂಬ ಕಪಿಯನ್ನು ಪೂಜಿಸುತ್ತಾರೆ. ಇವನೂ ದೇವರಾಗಿದ್ದನಂತೆ. ಯಾವ ಕಾರಣವೋ ಇವನೂ ಇನ್ನೂ ಸಾವಿರಾರು ದೇವರುಗಳೂ ಕಪಿಗಳಾಗಿ ಬಿಟ್ಟರಂತೆ. ಕಪಿಯಾಗಿ ಕಪಿಗಳ ಮೇಲೆ ರಾಜ್ಯಭಾರ ಮಾಡುತ್ತಿದ್ದನು. ಒಮ್ಮೆ ರಾಮನಕೋರ್ (ರಾಮೇಶ್ವರ) ದಿಂದ ಸಿಲೋನಿಗೆ ಹೋಗಬೇಕಾಗಿ ಬಂತು. ಹಡಗುಗಳು ಇರಲಿಲ್ಲ. ಈ ಕಾರಣ ಹನುಮಂತ ನೀರಿನ ಮೇಲೆ ನೆಗೆಯುತ್ತ ಹೋದ. ಒಂದೊಂದು ನೆಗೆತಕ್ಕೆ ಒಂದೊಂದು ಒಂದೊಂದು ಮರುಳುಗಡ್ಡೆ ಮಾಡಿಕೊಂಡು ನೆಗೆಯುತ್ತ ತನಗೂ ತನ್ನ ಕಡೆಯವರಿಗೂ ದಾರಿ ಮಾಡಿದ.[14]
ಫಾದರ್ ಅಂತೋಣಿ ಮಾನ್ಸೆರೆಟ್ (೧೫೭೬-೧೬೦೦) ಎನ್ನುವವನು ತನ್ನ ಪ್ರವಾಸ ಕಥನದಲ್ಲಿ ಬರೆಯುತ್ತಾನೆ: ’ಮತುರಾನಮಿಗೆ (ಮಥುರೆ) ಆರು ಮೈಲಿ ದೂರದಲ್ಲಿ ಅನುಮಂತಾಸನ (ಹನುಮಂತ) ದೇವಸ್ಥಾನವಿದೆ. ಅದರ ಬಳಿ ಮುನ್ನೂರು ಕೋತಿಗಳನ್ನು ಸಾರ್ವಜನಿಕರ ಖರ್ಚಿನಲ್ಲಿ ಸಾಕಿದ್ದಾರೆ. ಗಂಟೆಹೊಡೆದಾಗ ಈ ಕೋತಿಗಳು ಆಯುಧಗಳನ್ನು ಹಿಡಿದು ಎರಡು ತಂಡಗಳಾಗಿ ಕಾದಾಡುತ್ತವೆ. ಊಟ ಮಾಡುವ ವೇಳೆಯಲ್ಲಿ ಊಟ ಮಾಡುತ್ತವೆ. ಇದೆಲ್ಲ ದೇವರ ಪ್ರೇರಣೇಯಿಂದ ನಡೆಯುತ್ತದೆಯೆಂದು ಬ್ರಾಹ್ಮಣರು ಹೇಳಿ ಜನಸಾಮಾನ್ಯರನ್ನು ನಂಬಿಸುತ್ತಾರೆ.ಆದರೆ ಕೋತಿಗಳಿಗೆ ಆ ರೀತಿ ಮಾಡಲು ಹೇಳಿಕೊಡುವುರಿಂದ ಅವು ಹಾಗೆ ಮಾಡುತ್ತವೆ ಎಂಬ ವಿಚಾರ ಬಹಳ ಜನಕ್ಕೆ ಗೊತ್ತಿಲ್ಲ. ಮಹದೇವ, ಕೃಷ್ಣ, ಹನುಮಂತ, ಗಣೇಶ ಮುಂತಾದವರಿಗೆ ಸಂಬಂಧಪಟ್ಟ ಕಥೆಗಳು ಕೇಳಲು ಅನರ್ಹವಾದುವುಗಳಷ್ಟೇ ಅಲ್ಲ, ಬುದ್ದಿಗೆ ಹಿಡಿಯುವಂತಹವುಗಳೂ ಇಲ್ಲ. ಇವನ್ನೆಲ್ಲ ನಂಬುವ ಈ ಮೂಢ ಜನಗಳಿಗೆ ಏನು ಹೇಳಬೇಕೋ ಕಾಣೆ’. ೧೫
* * *
________________________________________
[1] ಹನುಮಂತನು ರಾಮನ ೧೨ ಜನ ಮಂತ್ರಿಗಳಲ್ಲಿ ಒಬ್ಬನಾಗಿದ್ದನೆಂದು ಹೇಳಲಾಗಿದೆ. ಬ್ರಹ್ಮಾಂಡ ಪುರಾಣ. ಸಂ. ೧೧೧, ಅ-೭, ಪ-೨೨೩-೨೬, ೨೩೧-೪೪
[2] Encyclopaedia Asiatica, Vol, IV. p-13.
[3] Encyclopaedia of Religion and Ethics, Vol I. p. 522.
[4] ಅದೇ. ಪು 523
[5] ಜನಪದ ಹೇಳಿಕೆಯಂತೆ: ಅಂಜನಾದೇವಿ ಕುರುಡಿ. ಗಿಡದ ಕೆಳಗೆ ಕೈ ತೆರೆದು ಕುಳಿತು, ಕೈಯಲ್ಲಿ ಬಿದ್ದುದನ್ನು ಸ್ವೀಕರಿಸುತ್ತಿದ್ದಳು.ಆಕಾಶಯಾನವಲ್ಲಿದ್ದ ವಾಯುದೇವನು ಉಗುಳಲು, ಅದು ಅಂಜನಾದೇವಿಯ ಕೈಯಲ್ಲಿ ಬಿದ್ದಿತು. ಅದನ್ನೇ ಸೇವಿಸಿದಳು. ಅದರಿಂದ ಗರ್ಭನಿಂತು ಮಾರುತಿ ಜನಿಸಿದನು.
[6] ಹನುಂತನಿಗೆ ವೀರಭದ್ರ ದೇವರಿಂದ ಲಿಂಗಧಾರಣ ಮಾಡಿಸುವ ಪ್ರಸಂಗ ಹೊಂದಿದ ಒಂದು ಬಯಲಾಟ ಕೂಡ ಹೊರಬಿದ್ದಿದೆ: ’ಹನುಮಂತನ ಲಿಂಗಧಾರಣ-ಸಂ. ಸೋಮಶೇಖರ ಇಮ್ರಾಪೂರ, ಇನ್ನೊಂದು ನಾಟಕ, ನಲವಡಿ ಶ್ರೀಕಂಠಶಾಸ್ತ್ರಿಗಳಿಂದ ಶಬಿತವಾಗಿದೆ.
[7] Encyclopaedia of Americal, Vol,6, p-491.
[8] Encyclo Paedia of Religion and Ethics, Vol.I. P.491.
[9] Thurston E. : Castes and tribes of Sluthern India. vol. II, P-324, Cosmo Publications, Delhi, 1975.
[10] Encyclopaedia of Religion and Ethics, Vol. 1, P-491
[11] Tani Nayagam X.S.: Tamil culture and civilization, P.-32-33.
[12] Hutton J.H. : Caste in India. P.-246
[13] ಜನಪದ ಕಥೆಯ ವಸ್ತು ಮತ್ತು ತಂತ್ರ ಎಂಬ ನನ್ನ ಪುಸ್ತಕವೊಂದರಲ್ಲಿಯ ’ಒಕ್ಕಲಿಗನು ಪೂಜಿಸುವ ಎರಡು ಸಂಕೇತ ಶಕ್ತಿಗಳು’ ಎಂಬ ಲೇಖನನಿಂದ ಈ ಕೆಳಗಿನ ವಿವರಣೆಯನ್ನು ಎತ್ತಿಕೊಳ್ಳಲಾಗಿದೆ.
[14] ಪ್ರವಾಸಿ ಕಂಡ ಇಂಡಿಯಾ, ಸಂ.೩, ಪು. ೯೩.
ಪುಸ್ತಕ: ಕರ್ನಾಟಕದ ಗ್ರಾಮದೇವತೆಗಳು
ಲೇಖಕರು: ವೀರಣ್ಣ ದಂಡೆ
ಪ್ರಕಾಶಕರು: ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ
ಗುರುವಾರ, ಫೆಬ್ರವರಿ 2, 2012
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
-
- ಡಾ. ಎಚ್.ಜೆ. ಲಕ್ಕಪ್ಪಗೌಡ ನಾಡು-ಮೊದಲ ನೋಟ ಹಸಿರು ವನಗಳ ನಾಡು, ಬೆಟ್ಟ ಘಟ್ಟಗಳ ಬೀಡು. ಶ್ರೀಗಂಧ ಬೀಟೆ ತೇಗ ಹೊನ್ನೆ ನಂದಿ ಮತ್ತಿ ಆಲ ಬೇಲ ಸಂಪಿಗೆ ನೇರಳೆ ಬ...
-
ಎ ಸಿಂಹದಂಥಾ ಸಂಗೊಳ್ಳಿ ರಾಯಾ ಭೂಮಿಗಿ ಬಿದ್ದಂಗ ಸೂರ್ಯನ ಛಾಯಾ ನೆತ್ತರ ಕಾವಲಿ ಹರಿಸಿದಾನೊ ಕಿತ್ತೂರ ನಾಡಾಗ ಭಾಳ ಬಂಟಸ್ತಾನ ಪದವಿ ಇತ್ತ ಅವನ ಹೊಟ್ಟೆಯೊಳಗ ಸೃ...
-
ಶಿಕ್ಷಣ! ಸಂಘಟನೆ!! ಹೋರಾಟ!!! ಎಂದು ಡಾ.ಅಂಬೇಡ್ಕರರು ಹೇಳಿದ್ದಾರೆಯೇ ??? -ಡಾ.ಶಿವಕುಮಾರ್ ಇಂದು ಬಹುತೇಕ ದಲಿತರು ತಾವು ಮಾಡುವ ಕಾರ್ಯಕ್ರಮಗಳಲ್ಲಿ ಶಿಕ್ಷಣ...
1 ಕಾಮೆಂಟ್:
very goog article
ಕಾಮೆಂಟ್ ಪೋಸ್ಟ್ ಮಾಡಿ