ಶನಿವಾರ, ಫೆಬ್ರವರಿ 11, 2012

ಜಾಲತಾಣದಲ್ಲಿ ಜಾನಪದ-ಪ್ರಜಾವಾಣಿ ಮೆಟ್ರೋದಲ್ಲಿ ಪ್ರಶಂಸೆ

(
10.02.2012 ರ ಮೆಟ್ರೋ ಬೆಂಗಳೂರು ಆವೃತ್ತಿಯಲ್ಲಿ ಕನ್ನಡ ಜಾನಪದ ಬ್ಲಾಗ್ ಬಗ್ಗೆ ಬರೆದಿದ್ದಾರೆ. ಈ ಪ್ರಯತ್ನವನ್ನು ಗುರುತಿಸಿದ್ದಕ್ಕೆ ಪ್ರಜಾವಾಣಿಗೆ ಕೃತಙ್ಜತೆಗಳು. ದೇಶದ, ವಿದೇಶದ ಜಾನಪದ ಸಂಗತಿಗಳನ್ನು ಒಳಗೊಳ್ಳುವ ಸಾದ್ಯತೆಯ ಬಗ್ಗೆ ಸಲಹೆ ನೀಡಿದ್ದಾರೆ, ಮುಂದಿನ ದಿನಗಳಲ್ಲಿ ಆ ನಿಟ್ಟಿನಲ್ಲಿ ಪ್ರಯತ್ನಿಸುವೆ- ಅರುಣ್ )



ಹೊಸ ತಲೆಮಾರಿನ ಬರಹಗಾರರಲ್ಲಿ ಅರುಣ್ ಜೋಳದ ಕೂಡ್ಲಿಗಿ ಅವರದ್ದು ಎದ್ದುಕಾಣುವ ಹೆಸರು. ಕಥೆ, ಕವಿತೆಯೊಂದಿಗೆ ಜಾನಪದ ಅವರ ಆಸಕ್ತಿಯ ಕ್ಷೇತ್ರ, ಅಧ್ಯಯನದ ಕ್ಷೇತ್ರ ಕೂಡ. ಅವರ ಜಾನಪದ ಪ್ರೀತಿಯ ಫಲ- ww.kannadajaanapada.blogspot.in ಜಾಲತಾಣ. `ಜಾನಪದ ಜಗತ್ತಿನ ಹೊಸ ಚಲನೆಯ ಹೊರಳು ನೋಟ` ಎನ್ನುವುದು ತಮ್ಮ ಬ್ಲಾಗ್ ಬಗೆಗಿನ ಅರುಣ್ ಬಣ್ಣನೆ.

ಜಾನಪದ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅರುಣ್ ಅವರ ಓದು, ತಿರುಗಾಟ, ಸಂಶೋಧನೆಗಳ ಕುರಿತಾದ ಬರಹಗಳು ಈ ಬ್ಲಾಗ್‌ನಲ್ಲಿವೆ. ಕಲೆ, ನಂಬಿಕೆ, ಆಚರಣೆ, ವೈದ್ಯ, ಕೃಷಿ- ಹೀಗೆ ಜಾನಪದ ಬದುಕಿನ ವೈವಿಧ್ಯ ಇಲ್ಲಿ ಕಾಣಿಸುತ್ತದೆ.

ತಮ್ಮ ಬರಹಗಳು ಮಾತ್ರವಲ್ಲದೆ, ಜಾನಪದಕ್ಕೆ ಸಂಬಂಧಿಸಿದ ಇತರರ ಬರಹಗಳನ್ನೂ ಹೆಕ್ಕಿ ತಮ್ಮ ಬ್ಲಾಗಲ್ಲಿ ಕಾಣಿಸಿದ್ದಾರೆ. ಅಂತರ್ಜಾಲದ ಮೂಲಕ, ಈ ಹೊತ್ತಿನ ಕನ್ನಡ ಜಾನಪದದ ಕಿರುಪರಿಚಯಕ್ಕೆ ಇದು ಒಳ್ಳೆಯ ಬ್ಲಾಗು.

ಇಲ್ಲಿನ ಬರಹಗಳಲ್ಲಿ ಶೈಕ್ಷಣಿಕ ಶಿಸ್ತು ಕಾಣಿಸಿದರೂ, ಅರುಣ್ ಕವಿಯೂ ಆಗಿರುವುದರಿಂದ ಬರಹಗಳಿಗೊಂದು ಆರ್ದ್ರ ಸಂವಹನದ ಗುಣ ದೊರೆತಿದೆ. ಅರುಣ್ ಅವರ ಕನ್ನಡ ಜಾನಪದ ಬ್ಲಾಗಿನ ಬೀಸು ಇನ್ನಷ್ಟು ವಿಸ್ತಾರಗೊಳ್ಳಲಿಕ್ಕೆ ಸಾಧ್ಯವಿದೆ. ಕನ್ನಡ ಜಾನಪದ ಭಾರತೀಯ ಹಾಗೂ ಜಾಗತಿಕ ಜಾನಪದದೊಂದಿಗೆ ಅನುಸಂಧಾನ ನಡೆಸುವ ಪ್ರಯತ್ನಕ್ಕೆ ಈ ಬ್ಲಾಗ್ ಯಾಕೆ ವೇದಿಕೆಯಾಗಬಾರದು?

***
ಅರುಣ್ ಬರಹದ ಒಂದು ತುಣುಕು
ಐದು ರೂ ನಾಣ್ಯಗಳು ಒಡವೆಗಳಾದ ಕಥೆ
ಬಂಗಾರದ ಬೆಲೆ ಗಗನಕ್ಕೇರುತ್ತಿದೆ. ಹಾಗಾಗಿ ಹಳ್ಳಿಯ ರೈತರಿಗೆ, ಕೂಲಿಕಾರರಿಗೆ ಬಂಗಾರವೆಂಬುದು ಗಗನ ಕುಸುಮವಾಗಿದೆ. ಅದಕ್ಕವರು ಪರ್ಯಾಯಗಳನ್ನು ಅವರದೇ ರೀತಿಯಲ್ಲಿ ಕಂಡುಕೊಳ್ಳುತ್ತಿದ್ದಾರೆ.

ಈಚೆಗೆ ನಾನು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ, ಹೆಣ್ಣುಮಗಳು ಕಂಡಕ್ಟರ್ ಬಳಿ ಇರುವ ಕಂದು ಬಣ್ಣದ ಐದು ರೂನ ಹೊಸ ನಾಣ್ಯಗಳನ್ನು ಕೇಳಿದರು. ಕಂಡಕ್ಟರ್ ನೋಟು ಪಡೆದು ಇರುವ ಹತ್ತಾರು ನಾಣ್ಯಗಳನ್ನು ಕೊಟ್ಟರು. ನಾನು ಕುತೂಹಲದಿಂದ ನಾಣ್ಯಗಳು ಯಾಕೆ ಎಂದು ವಿಚಾರಿಸಿದೆ. ಆಯಮ್ಮ ಒಂದು ಮಾಂಗಲ್ಯ ಸರ ಮಾಡಿಸ್ಬೇಕ್ರಿ ಎಂದರು.

ಕಾರಣ ಕೇಳಿದರೆ ಐದು ರೂಪಾಯಿಯ ನಾಣ್ಯವನ್ನು ಕರಗಿಸಿ ಒಡವೆ ಮಾಡಿಸಿದರೆ ಥೇಟ್ ಬಂಗಾರದ ಬಾಯಿ ಬಡಿಯುವಂತಾಗುತ್ತವೆ. ಅವಕ್ಕೆ ಬಂಗಾರದ ನೀರು ಕುಡಿಸಿದರಂತೂ ಗುರುತಿಸಲಾರದಷ್ಟು ಬಣ್ಣ ತಾಳುತ್ತವೆ ಎನ್ನುವುದು ಆಯಮ್ಮನ ನಿಲುವು.

ನಂತರ ನಮ್ಮೂರಲ್ಲಿ ಈ ಸಂಗತಿ ಕೇಳಿದಾದ ಚೈನು, ಉಂಗುರ, ಮೂಗುತಿ, ಕಳಸ ಮುಂತಾದ ರೂಪಾಂತರಗಳಿಗೆ ಐದು ರೂ ಒಳಗಾದದ್ದು ತಿಳಿಯಿತು. ಐದು ರೂಪಾಯಿಯ ಕಾರಣಕ್ಕೆ ಗಂಡ ಹೆಂಡತಿಯನ್ನು ಬಿಟ್ಟ ಪ್ರಸಂಗವೊಂದನ್ನು ಹೇಳಿದರು.

ಮದುವೆಯಲ್ಲಿ ಗಂಡಿಗೆ ಕೊಡುವ ಉಂಗುರವನ್ನು ಐದು ರೂ ನಾಣ್ಯದಿಂದ ಮಾಡಿಸಿ ಕೊಟ್ಟಿದ್ದಾರೆ. ಅದು ವರ್ಷದ ನಂತರ ಹಿತ್ತಾಳೆಯ ಕಂದು ಬಣ್ಣಕ್ಕೆ ತಿರುಗಿದೆ. ಆಗ ಗಂಡನ ಮನೆಯವರು ಬಂಗಾರದ ಅಂಗಡಿಯಲ್ಲಿ ಪರೀಕ್ಷೆ ಮಾಡಿಸಿದಾಗ ಐದು ರೂಪಾಯಿಯನ್ನು ಕರಗಿಸಿ ಮಾಡಿಸಿದ್ದು ಎಂದು ಗೊತ್ತಾಗಿದೆ.

ಬಂಗಾರದ ಉಂಗುರ ಮಾಡಿಸಿಕೊಂಡು ಮನೆಗೆ ಬಾ ಎಂದು ಗಂಡ ಹೆಂಡತಿಯನ್ನು ತವರಲ್ಲಿ ಬಿಟ್ಟು ಹೋಗಿದ್ದಾನೆ. ಇಂತಹದೇ ಕಥೆಗಳು ಐದು ರೂ ನಾಣ್ಯದ ಸುತ್ತ ಸುತ್ತುವರಿದಿವೆ.

ಇದರ ಹಿಂದೆ ಬಂಗಾರ ಕೊಳ್ಳಲಾಗದ ಅಸಹಾಯಕತೆ, ಒಡವೆಗಳನ್ನು ತೊಡಬೇಕೆಂಬ ಹಪಾಹಪಿ ಇದ್ದಂತಿದೆ. ಹಾಗಾಗಿ ಹಳ್ಳಿಗಳಲ್ಲಿ ಹೊಸ ಐದು ರೂ ನಾಣ್ಯವನ್ನು ಕೂಡಿಡುವ ಸ್ಪರ್ಧೆ ಏರ್ಪಟ್ಟಿದೆ. ನನ್ನ ಬಳಿ ಹತ್ತು ನಾಣ್ಯಗಳಿವೆ, ನನ್ನಲ್ಲಿ ಇಪ್ಪತ್ತು ನಾಣ್ಯಗಳಿವೆ ಎಂಬಂತಹ ಮಾತುಕತೆಗಳು ನಡೆಯುತ್ತಿವೆ.

ಹೀಗೆ ಐದು ರೂ ನಾಣ್ಯಗಳನ್ನು ಸಂಗ್ರಹಿಸಿಡುವುದು ಒಂದು ಹವ್ಯಾಸವೆ ಆಗಿದೆ. ಕೆಲವು ಅಂಗಡಿಯವರು ಈ ನಾಣ್ಯಗಳನ್ನು ಸಂಗ್ರಹಿಸಿ ಹೆಚ್ಚಿನ ಬೆಲೆಗೆ ಮಾರುವುದೂ ಇದೆ. ಇನ್ನು ಅಕ್ಕಸಾಲಿಗರು (ಬಂಗಾರದ ಕೆಲಸ ಮಾಡುವವರು) ಈ ನಾಣ್ಯದ ಒಡವೆಗಳನ್ನು ಮಾಡಿ ಮಾರುವುದೂ ಇದೆ. ಹೀಗೆ ಐದು ರೂಪಾಯಿ ನಾಣ್ಯವು ಜನಸಮುದಾಯದಲ್ಲಿ ಒಡವೆಗಳಾಗಿ ಬೇರೆಯದೇ ರೀತಿಯ ಸಂಬಂಧವನ್ನು ಪಡೆಯುತ್ತಿದೆ.

ಕಾಮೆಂಟ್‌ಗಳಿಲ್ಲ: