ಮಂಗಳವಾರ, ಅಕ್ಟೋಬರ್ 19, 2010

ಸಿದ್ಧ ದೈವಗಳ ಪಲ್ಲಕ್ಕಿ ಉತ್ಸವ

ಡಾ.ಚಂದ್ರಪ್ಪ ಸೊಬಟಿ ಕರ್ನಾಟಕದ ಜನಸಮುದಾಯಗಳಲ್ಲಿ ಸಾಂಸ್ಕೃತಿಕ ನಾಯಕರ ಆರಾಧನೆಯ ಹಲವು ಪರಂಪರೆಗಳಿವೆ. ಅದರಲ್ಲಿ ಕೆಲವು ಹೆಚ್ಚು ಪರಿಚಿತವಾಗದೆ ಆಯಾ ಭಾಗಗಳಲ್ಲಿ ಮಾತ್ರ ಜೀವಂತವಾಗಿವೆ. ಹಾಗೆ ಅಷ್ಟೇನು ಪರಿಚಿತವಲ್ಲದ ಕರ್ನಾಟಕ, ಆಂದ್ರ, ಮಹರಾಷ್ಟ್ರಗಳಲ್ಲಿ ಆರಾಧನೆಗೊಳ್ಳುವ ಸಾಂಸ್ಕೃತಿಕ ನಾಯಕರಲ್ಲಿ ಅಮೋಘಸಿದ್ಧನೂ ಒಬ್ಬ. ಈತ ಆಯಾ ಭಾಗದ ಜನರ ಚೈತನ್ಯದಾಯಕ ಸಂಗತಿಯಾಗಿದ್ದಾನೆ. ಹಾಗಾಗಿಯೇ ಈತನನ್ನು ಬೇಟಿಯಾಗುವ ಸಿದ್ಧ ದೈವಗಳ ಪಲ್ಲಕ್ಕಿ ಉತ್ಸವದಲ್ಲಿ ನೂರಾರು ಪಲ್ಲಕ್ಕಿಗಳು ಒಂದೆಡೆ ಸೇರುತ್ತವೆ. ಇದು ಹಲವು ಸಮುದಾಯಗಳ ಜೀವಂತಿಕೆಯ ನಿಜ ದರ್ಶನವನ್ನು ಮಾಡಿಸುತ್ತದೆ. ಅಮೋಘಸಿದ್ಧ ಹಾಲುಮತದ ಸಾಂಸ್ಕೃತಿಕ ವೀರರಲ್ಲಿ ಒಬ್ಬ. ಶೈವಸಿದ್ಧ ಪಂಥಕ್ಕೆ ಸೇರಿದ ಸಾಂಸ್ಕೃತಿಕ ನಾಯಕ. ಸೋಮಲಿಂಗ ಈತನ ಗುರು. ಮೂಲಗಳ ಪ್ರಕಾರ ಈತ ಹನ್ನೆರಡು-ಹದಿಮೂರನೆ ಶತಮಾನಕ್ಕೆ ಸೇರಿದ ವ್ಯಕ್ತಿ. 'ಸಿದ್ಧಸೋಮನಾಥ' ಎನ್ನುವ ಅಂಕಿತದಲ್ಲಿ ವಚನಗಳನ್ನು ಬರೆದಿದ್ದಾನೆ ಎನ್ನುವ ವಾದಗಳಿವೆ . ಅಮಕಸಿದ್ಧ. ಅಮೋಗಿಸಿದ್ಧ, ಅಮೋಗಿದೇವ, ಅಮಗೋಂಡ ಮುಂತಾದ ಹಲವು ಹೆಸರುಗಳು ಜನರಲ್ಲಿ ಜೀವಂತವಾಗಿವೆ. ಈತನನ್ನು ಪಶುಪಾಲನ ಸಮುದಾಯಗಳು ಕುಲದೈವವಾಗಿ ಆರಾಧಿಸುತ್ತವೆ. ಈತನ ಕ್ಷೇತ್ರ ಮುಮ್ಮೆಟ್ಟಿಗಿರಿ. ಇದು ಬಿಜಾಪುರದಿಂದ ಹನ್ನೆರಡು ಕಿಲೋ ಮೀಟರ್ ಅಂತರದಲ್ಲಿದೆ. ಅಮೋಘಸಿದ್ಧನ ವಂಶ ದೊಡ್ಡದು. ಈತನ ವಂಶದ ಬಗ್ಗೆ ಅನೇಕ ಕಥನಗಳು ಸಿಗುತ್ತವೆ. ಈತನ ವಂಶ ನೂರ ಒಂದರಿಂದ ನವಕೋಟಿಯಾಗಿ ಬೆಳೆಯಿತು ಅನ್ನುವ ರೋಚಕ ನಿರೂಪಣೆಗಳು ಡೊಳ್ಳಿನ ಹಾಡುಗಳಲ್ಲಿವೆ. ಕರ್ನಾಟಕ, ಆಂದ್ರ, ಮಹರಾಷ್ಟ್ರಗಳಲ್ಲಿ ಈತನ ವಂಶಸ್ಥರ, ಶಿಷ್ಯರ ಮಠಗಳಿವೆ. ಇದರಲ್ಲಿ ಶಿಸುಮಕ್ಕಳು, ಒಕ್ಕಲುಮಕ್ಕಳು, ಸಾಕುಮಕ್ಕಳು, ಧರ್ಮದ ಮಕ್ಕಳು, ಪುಣ್ಯದಮಕ್ಕಳು ಸೇರುತ್ತಾರೆ. ಅಂತೆಯೇ ಸೇವಕ ವರ್ಗ, ಸೋತು ಶರಣಾದ ದೈವಗಳು ಸೇರಿಕೊಳ್ಳುತ್ತವೆ. ಕೋಳಿ ಕೂಗಿದಲೆಲ್ಲಾ ಆಮೋಘಸಿದ್ಧನ ಗುಡಿಗಳಿವೆ ಎನ್ನುವ ಗಾದೆ ಜನಪದರಲ್ಲಿದೆ. ಈ ಆಚರಣೆಯಲ್ಲಿ ಮುಖ್ಯವಾಗಿ ಕುರುಬರು, ನಾಯಕರು, ಲಂಬಾಣಿಗರು, ಹೊಲೆಮಾದಿಗರು, ಲಿಂಗಾಯಿತರು ಮುಂತಾದ ತಳ ಸಮುದಾಯಗಳು ಪಾಲ್ಗೊಳ್ಳುತ್ತವೆ. ಇಂದಿಗೂ ಕೆಲವು ಕಡೆ ಮಾದಿಗ ಸಮುದಾಯ ಪೂಜೆ ಮಾಡುತ್ತಿರುವುದು ವಿಶೇಷವಾಗಿದೆ. ಅಮೋಘಸಿದ್ಧ ಲೋಕಕ್ಕೆ ಬಂದ ಕಥನಗಳು ಕುತೂಹಲಕರ. ಹಾಲುಮತಸ್ಥರು ಶಿವನ ಆರಾಧನೆಯನ್ನು ಮರೆತಾಗ ಅವರಲ್ಲಿ ಮತ್ತೆ ಶೈವಾರಾಧನೆಯ ಬೀಜ ಬಿತ್ತುತ್ತಾನೆ ಎನ್ನುವ ನಂಬಿಕೆಗಳಿವೆ. ಇದರ ಪಠ್ಯವೊಂದು ಡೊಳ್ಳಿನ ಹಾಡಿನಲ್ಲಿ ಹೀಗಿದೆ: ಬಾರೋ ಬಾರೋ ನಂದಿವಾನ ಮೂರು ಲೋಕದ ವಳಗವನೆ ಮೂರು ಲೋಕದ ವಳಗೇನೋ ಕರಿತಲೆ ಮಾನವರೆಂಬುವರು ಕರಿತಲೆ ಮಾನವರೆಂಬುವರು ಹಾಲುಮತದವರಿದ್ದಾರೆ ಹಾಲುಮತದವರೆಂಬುವರು ನಮ್ಮ ನಾಮ ನೋಡಿರಿ ನನ್ನ ನಾಮ ನೋಡಪ್ಪ ಮರೆತ ನಡದಾರಂದಾನ ನೀನೆ ಹೋಗಲಿಬೇಕಪ್ಪ, ಉದ್ಧಾರ ಮಾಡಲಿ ಬೇಕಲ್ಲಿ ದೇವರು ಪರಮೇಶೂರನೂ ಹಿಂಗೊಂದು ಲಾಲಿಸಿ ನುಡದಾನೊ.. ಹೀಗೆ ಕಾವ್ಯದಲ್ಲಿ ಹಲವು ಪಾಠಾಂತರಗಳು ಸಿಗುತ್ತವೆ. ಛಟ್ಟಿ ಅಮವಾಸ್ಯೆಯ ದಿನ ( ಸಾಮಾನ್ಯವಾಗಿ ಜನವರಿ, ಪೆಬ್ರವರಿ) 'ಪಲ್ಲಕ್ಕಿ ಉತ್ಸವ'ಕ್ಕೆ ಅಮೋಘಸಿದ್ಧನ ಶಿಷ್ಯ ವೃಂದದ ಪಲ್ಲಕ್ಕಿಗಳು ಬರುತ್ತವೆ. ಪಲ್ಲಕ್ಕಿಗಳು ಒಂದು ಕಡೆ ಸೇರುವುದಕ್ಕೆ 'ಬೇಟಿಯಾಗುವ ಆಚರಣೆ' ಎಂದು ಹೆಸರು. ಹೀಗೆ ದೇವರುಗಳು ಬೇಟಿಯಾಗುವ ಆಚರಣೆಗಳು ಜನಪದರಲ್ಲಿ ಹೆಚ್ಚಾಗಿವೆ. ಮೊಹರಂ ನಲ್ಲಿ ಹಸೇನ್ ಹುಸೇನರು ಬೇಟಿಯಾಗುವ ಆಚರಣೆ ಮನಮಿಡಿಯುವಂತಿರುತ್ತದೆ. ಕಷ್ಟ ಬಂದಾಗ, ಪರಸ್ಪರ ದ್ವೇಶ ಅಸೂಯೆಗಳು ಹೆಚ್ಚಾದಾಗ ಅವುಗಳಲ್ಲಿ ಸಾಮರಸ್ಯ ತರಲು ಈ ಬಗೆಯ ಬೇಟಿಯ ಆಚರಣೆಗಳು ಹುಟ್ಟಿಕೊಂಡಿರಬೇಕು. ಈ ಆಚರಣೆಯಲ್ಲಿ 150ಕ್ಕೂ ಹೆಚ್ಚು ಪಲ್ಲಕ್ಕಿಗಳು ಸೇರುತ್ತವೆ. ಅರಕೇರಿಯ ಗುಡ್ಡದ ಕೆಳಗಿರುವ ಬಯಲು ಜಾಗ ಈ ಆಚರಣೆಗೆ ವೇದಿಕೆಯಾಗುತ್ತದೆ. ನೆರೆದ ಪಲ್ಲಕ್ಕಿಗಳು ಪರಸ್ಪರ ಅಪ್ಪಿಕೊಳ್ಳುತ್ತವೆ. ಈ ಸಂದರ್ಬದಲ್ಲಿ ದೇವರುಗಳೆಲ್ಲಾ ಜೀವತಳೆದಂತೆ ಭಾವಿಸಿ ಜನರು ಭಾವಾವೇಷಕ್ಕೆ ಒಳಗಾಗುತ್ತಾರೆ. ಇದರಲ್ಲಿ ಹೆಣ್ಣು ದೈವ, ಗಂಡು ದೈವ ಲಿಂಗದ ದೈವ, ಲಿಂಗೇತರ ದೈವ ಎನ್ನುವ ಬೇದಭಾವಗಳಿಲ್ಲದೆ ಸಮ್ಮಿಲನವಾಗುತ್ತವೆ. ಈ ಸಮ್ಮಿಲನ ಕದಡುತ್ತಿರುವ ಸಾಮಾಜಿಕ ಸಾಮರಸ್ಯವನ್ನು ಒಂದುಗೂಡಿಸುವ ರೂಪಕದಂತೆ ಕಾಣುತ್ತದೆ. ಅಂದರೆ ಪಲ್ಲಕ್ಕಿ ಹೊತ್ತವರು ಹಲಗೆ ಮತ್ತು ಡೊಳ್ಳಿನ ನಾದಕ್ಕೆ ಕುಣಿಯುತ್ತಾ, ಹಲವು ಪಲ್ಲಕ್ಕಿಗಳನ್ನು ಒಟ್ಟಿಗೆ ಸೇರಿಸುತ್ತಾರೆ. ಸುಮಾರು ಮೂರು ತಾಸುಗಳಿಗೂ ಹೆಚ್ಚು ಸಮಯ ನಡೆವ ಈ ಆಚರಣೆಯನ್ನು ನೋಡುವುದಕ್ಕೆ ಲಕ್ಷಾಂತರ ಜನ ಸೇರುತ್ತಾರೆ. ಜಾತ್ರೆಗೆ ಬಂದವರು ಆವರಣದ ಸುತ್ತ ಕೋಟೆಯಂತೆ ನಿಂತು ಉಘೇ ಉಘೇ ಎಂದು ಘೋಷಣೆ ಕೂಗುತ್ತಾರೆ. ಭಂಡಾರ, ಉತ್ತುತ್ತಿ, ಕುರಿಹುಣ್ಣಿ ಎಸೆಯುತ್ತಾರೆ. ಕ್ಷಣಾರ್ಧದಲ್ಲಿ ಆವರಣವೆಲ್ಲ ಭಂಡಾರಮಯವಾಗುತ್ತದೆ. ಸುಮಾರು ನಾಲ್ಕು ಟನ್ ಭಂಡಾರ ಖರ್ಚಾಗುತ್ತದೆ ಎಂದು ಭಂಡಾರ ವ್ಯಾಪಾರಿಗಳು ಹೇಳುತ್ತಾರೆ. ಸೇರಿದ ಜನರೆಲ್ಲಾ ಭಂಡಾರಮಯ. ಭಂಡಾರ ಆಕಾಶಕ್ಕೆ ಹಾರುತ್ತಿದ್ದರೆ, ಭಕ್ತರು ನಾವು ಹಾರಿಸಿದ ಭಂಡಾರ ಶಿವನ ಪಾದ ಸೇರುತ್ತದೆ ಎಂದು ಭಾವಿಸುತ್ತಾರೆ . ಈ ಆಚರಣೆ ಶೈವಾರಾಧನೆಯ ವಿಸ್ತರಣೆಯಂತೆ ಗೋಚರಿಸುತ್ತದೆ. ಈ ಇಡೀ ಆಚರಣೆ ಧಾರ್ಮಿಕ ಸಂಘರ್ಷ ಮತ್ತು ಸಮ್ಮಿಲನದ ಸಂಕೇತದಂತೆ ಕಾಣುತ್ತದೆ. ಈಗಲೂ ಹಲವು ಪಂಥ, ಜಾತಿ, ಪಂಗಡ, ಪ್ರದೇಶದ ಭಿನ್ನತೆಯನ್ನು ಮರೆತು ಈ ಆಚರಣೆಯಲ್ಲಿ ಜನರು ಭಾಗವಹಿಸುತ್ತಾರೆ. ಬಹುಶಃ ಜನರ ನಡುವೆ ಮತ್ತೆ ಮತ್ತೆ ಒಂದಾಗುವ, ಬೆರೆಯುವ, ಪರಂಪರೆಯನ್ನು ಈ ಆಚರಣೆ ಪ್ರತೀ ವರ್ಷವೂ ಜೀವಂತಗೊಳಿಸುತ್ತದೆ ಅನ್ನಿಸುತ್ತದೆ.

2 ಕಾಮೆಂಟ್‌ಗಳು:

siddha ಹೇಳಿದರು...

ಅರುಣ್, ಲೇಖನ ಓದಿದೆ. ಹಳದಿ ಭಂಡಾರವನ್ನು ತೂರುವುದು ಬಹುಶ: ಮಹಾರಾಷ್ಟ್ರ ಭಾಗದ ಸಂಪ್ರದಾಯವಾಗಿ ಕರ್ನಾಟಕದಲ್ಲಿ ಬೆಳೆದುಬಂದಿರಬಹುದು. ಅಮೋಘಸಿದ್ಧ ಎಂಬ ಹೆಸರು ಸಾಧಕನೊಬ್ಬನನ್ನು ಸೂಚಿಸಬಹುದೇನೋ. ಶೈವಪಂಥದಲ್ಲಿಯೇ ಹಠಯೋಗಿಗಳು ಇದ್ದಂತೆ, ಅಮೋಘಸಿದ್ಧನೂ ಸಹ ಒಬ್ಬ ಹಠಯೋಗಿಯೇ ಇರಬಹುದೆನಿಸುತ್ತದೆ. ಹಲವಾರು ಪಲ್ಲಕ್ಕಿಗಳು ಬಂದು ಭೇಟಿಯಾಗುತ್ತವೆ ಎಂದು ಬರಿದಿದ್ದೀರಿ, ಅವು ಯಾವ ಭಾಗಗಳಿಂದ ಬರುತ್ತವೆ ಎಂಬುದು ಸ್ಪಷ್ಟವಾಗಲಿಲ್ಲ.

ಡಾ. ಚಂದ್ರಪ್ಪ ಸೊಬಟಿ ಹೇಳಿದರು...

ಸಾರ್ ನಿಮ್ಮ ಪ್ರತಿಕ್ರಿಯೆಗಾಗಿ ದನ್ಯವಾದಗಳು. ನಿಮ್ಮ ಅಭಿಪ್ರಾಯ ಸರಿಯಾಗಿದೆ. ಅಮೋಘಸಿದ್ಧನು ಹಟಯೋಗಿ ಪರಂಪರೆಯವನು. ನೀವು ಕೇಳಿದಂತೆ ಅಮೋಘಸಿದ್ಧನ ಶಿಷ್ಯವರ್ಗದ ಮತ್ತು ವಂಶಸ್ಥರ ಪಲ್ಲಕ್ಕಿಗಳು ಕರ್ನಾಟಕ, ಆಂದ್ರ ಪ್ರದೇಶ, ಮಹಾರಾಷ್ಟ್ರ ಮತ್ತು ಗೋವಾದ ಗಡಿನಾಡು ಪ್ರದೇಶದ ಹಳ್ಳಿಗಳಿಂದ ಬರುತ್ತವೆ. ಇದೊಂದು ಗಡಿಗಳನ್ನು ಪಲ್ಲಟಗೊಳಿಸುವಂತಹ ಆಚರಣೆ.
ಡಾ. ಚಂದ್ರಪ್ಪ ಸೊಬಟಿ