ಮಂಗಳವಾರ, ಅಕ್ಟೋಬರ್ 12, 2010

ಜಾನಪದ ಅಧ್ಯಯನಕಾರರಿಗೊಂದು ಉಪಯುಕ್ತ ಆಕರ ಗ್ರಂಥ

ಕರ್ನಾಟಕದಲ್ಲಿ ಜಾನಪದ ಅಧ್ಯಯನ ವಿಪುಲವಾಗಿ ನಡೆದಿದೆ. ಆದರೆ ಅದರೆಲ್ಲಾ ಮಾಹಿತಿ ಒಂದೇ ಕಡೆ ಸಿಗುವುದು ವಿರಳ. ಅಂತಹ ಕೊರತೆಯನ್ನು ಜಾನಪದ ಗ್ರಂಥ ಸೂಚಿಗಳು ತುಂಬುತ್ತವೆ. ವಿದ್ವತ್ ವಲಯದಲ್ಲಿ ಹೆಚ್ಚು ಮೌಲ್ಯಯುತವಲ್ಲದ ಈ ಗ್ರಂಥ ಸೂಚಿಗಳು ಮೂಲೆ ಸೇರಿದ ಮುರುಕಲು ಸೈಕಲ್ಲಿನಂತೆ ಗ್ರಂಥಾಲಯಗಳಲ್ಲಿ ಅನಾಥವಾಗಿರುತ್ತವೆ. ಆಯಾ ಕ್ಷೇತ್ರದಲ್ಲಿ ಗಂಭೀರವಾಗಿ ಅಧ್ಯಯನ ಮಾಡಹೊರಟವರಿಗೆ ಅಂತವುಗಳ ಮೌಲ್ಯ ತಿಳಿಯುತ್ತದೆ. ೧೯೭೪ ರಲ್ಲಿ ಹಾ.ಮ ನಾಯಕರು ಮೈಸೂರು ವಿವಿಯಿಂದ, ೨೦೦೦ ದಲ್ಲಿ ಟಿ.ಸಿ ಗುರುಪ್ರಸಾದ್ ಅವರು ಹಂಪಿ ವಿವಿಯಿಂದ ಪ್ರಕಟಿಸಿದ ಕನ್ನಡ ಜಾನಪದ ಗ್ರಂಥ ಸೂಚಿಗಳು ಈ ನೆಲೆಯಲ್ಲಿ ಉಪಯುಕ್ತವಾಗಿವೆ. ಇವುಗಳನ್ನು ಒಳಗೊಂಡಂತೆಯೂ ೨೦೦೪ ರಲ್ಲಿ ದಕ್ಷಿಣ ಭಾರತೀಯ ಭಾಷೆಗಳ ಜಾನಪದ ಸಂಘ (fossils) ತಿರುವನಂತಪುರ ಅವರು ಪ್ರಕಟಿಸಿರುವ ‘ಸಂಕ್ಷಿಪ್ತ ವಿವರಣಾತ್ಮಕ ಕನ್ನಡ ಜಾನಪದ ಗ್ರಂಥಸೂಚಿ’ ಜಾನಪದ ಅಧ್ಯಯನಕಾರರಿಗೆ ತುಂಬಾ ಉಪಯುಕ್ತವಾಗಿದೆ. ಈ ಪುಸ್ತಕವನ್ನು ಕರ್ನಾಟಕ ವಿವಿಯ ಪ್ರೊ.ಹೆಚ್.ಎಮ್.ಮಹೇಶ್ವರಯ್ಯ ಅವರು ಸಂಪಾದಿಸಿದ್ದಾರೆ. ಇದು ಜಾನಪದ ಕ್ಷೇತ್ರಕ್ಕೆ ಸಂಬಂಧಿಸಿದ ೧೯೬೮ ಕೃತಿಗಳ ಪುಟ್ಟ ಪರಿಚಯವನ್ನು ಒಳಗೊಂಡಿದೆ. ತುಂಬಾ ಜಾಗರೂಕತೆಯಿಂದ ಅಚ್ಚುಕಟ್ಟಾಗಿ ರೂಪಿಸಿರುವುದು ಇದರ ಹಿರಿಮೆ. ಇದರಲ್ಲಿ ಸಂಪಾದಕರ ಪರಿಶ್ರಮ ಎದ್ದು ಕಾಣುತ್ತದೆ. ಲೇಖಕರ ಹೆಸರುಗಳ ಅಕಾರಾಧಿಯಾಗಿ ಪುಸ್ತಕಗಳನ್ನು ಪರಿಚಯಿಸಲಾಗಿದೆ. ಅನುಬಂಧದಲ್ಲಿ ಪುಸ್ತಕಗಳ ಅಕಾರಾದಿಯೂ, ಮತ್ತು ವಿಷಯವಾರು ಸಂಖ್ಯಾ ವರ್ಗೀಕರಣವೂ ಇದೆ. ಈ ವರ್ಗೀಕರಣವೇ ಜಾನಪದದ ಯಾವ ಕ್ಷೇತ್ರದಲ್ಲಿ ಹೆಚ್ಚು ಕೆಲಸ ನಡೆದಿದೆ ಮತ್ತು ಯಾವ ಕ್ಷೇತ್ರ ಬರಡಾಗಿದೆ ಎಂಬುದನ್ನು ತೋರಿಸುತ್ತದೆ. ಈ ಕೃತಿ ಹೆಚ್ಚು ಜಾನಪದ ವಿದ್ವಾಂಸರಿಗೆ ಪರಿಚಯವಿದ್ದಂತಿಲ್ಲ. ಕಾರಣ ಗ್ರಂಥಸೂಚಿಯೆಂಬ ಅನಾದರವೂ ಇರಬಹುದು. ಹೊಸದಾಗಿ ಜಾನಪದದಲ್ಲಿ ಅಧ್ಯಯನ ಮಡುವವರಿಗಂತೂ ಇದು ಹೆಚ್ಚು ಉಪಕಾರಿಯಾಗಿದೆ . ಈ ಪುಸ್ತಕವನ್ನು ಸಿದ್ದಪಡಿಸಲು ಸಹಾಯಕ ಸಂಪಾದಕರಾಗಿ ಕೆಲಸ ಮಾಡಿದ ರಾಜೇಶ್ವರಿ ಆರ್.ಕಮ್ಮಾರ್, ಸುಜಾತ ಎಸ್.ಪಿ, ಶೋಭ ಹೂಲಿಕಟ್ಟಿ, ಗೌರೀಶ್ ವಿ.ಪಾಟ್ನೆ, ಶಿವಾಜಿ ಕಾಂಬಳೆ, ಲೀನಾ ಎಸ್. ನಾಯ್ಕ ಇವರ ಶ್ರಮ ನಿಜಕ್ಕೂ ಮೆಚ್ಚುವಂತದ್ದು. ಇಲ್ಲಿ ಹೆಚ್ಚಾಗಿ ಪುಸ್ತಕ ಪರಿಚಯಕ್ಕೆ ಮೂಲ ಕೃತಿಗಳನ್ನು ಅವಲಂಬಿಸಿರುವುದಾಗಿ ಸಂಪಾದಕರು ಹೇಳಿಕೊಂಡಿದ್ದಾರೆ. ಇದು ಮೆಚ್ಚುವಂತಹ ವಿಷಯ. ಹಾಗೆಯೇ ಪ್ರಕಟಿತ ಕೃತಿಗಳಷ್ಟೇ ಅಲ್ಲದೆ ಕರ್ನಾಟಕದ ಎಲ್ಲಾ ವಿಶ್ವವಿದ್ಯಾಲಯಗಳ ಅಪ್ರಕಟಿತ ಜಾನಪದ ಪಿಹೆಚ್.ಡಿ ಮತ್ತು ಎಂಫಿಲ್ ಸಂಶೋಧನ ಪ್ರಬಂಧಗಳನ್ನೂ ಒಳಗೊಂಡಿರುವುದು ಸೂಕ್ತವಾಗಿದೆ. ಮುಖ್ಯವಾಗಿ ಇಷ್ಟು ಜಾನಪದ ಕೃತಿಗಳನ್ನು ಅವಲೋಕಿಸಿ ಒಟ್ಟು ಕನ್ನಡ ಜಾನಪದ ಅಧ್ಯಯನಗಳನ್ನು ಕುರಿತು ಉತ್ತಮ ಒಳನೋಟವನ್ನು ಕೊಡಬಲ್ಲ ಪ್ರಸ್ಥಾವನೆಯನ್ನು ಬರೆಯುವ ಅಗತ್ಯವಿತ್ತು. ಆದರೆ ಈ ವಿಷಯದಲ್ಲಿ ಸಂಪಾದಕರು ಸೋತಿದ್ದಾರೆ. ಅಂತೆಯೇ ಕೆಲವೊಮ್ಮೆ ಹೀಗೆ ಜಾನಪದಕ್ಕೆ ಮಾತ್ರ ಮೀಸಲಾದ ಪುಸ್ತಕಗಳನ್ನು ಗೆರೆಕೊರೆದಂತೆ ವರ್ಗೀಕರಿಸಿ ವಿಭಾಗಿಸುವುದು ಅಪಾಯಕರವೆ. ಕಾರಣ ಜಾನಪದವಲ್ಲದ ಕೃತಿಗಳಲ್ಲೂ ಜಾನಪದದ ಬಗ್ಗೆ ಮಹತ್ವದ ಒಳನೋಟಗಳು ಇರಲಿಕ್ಕೆ ಸಾಧ್ಯವಿದೆ. ಡಿ.ಆರ್. ನಾಗರಾಜ್ ಅವರ ಕೃತಿಗಳು ಸಾಹಿತ್ಯ ವಿಮರ್ಶೆಯೇ ಆಗಿದ್ದರೂ ಅವರ ಒಟ್ಟೂ ಚಿಂತನೆ ದೇಶಿ ಆಲೋಚನೆಯನ್ನು ಕಟ್ಟುವುದಾಗಿತ್ತು. ಹಾಗೆಯೇ ಶಂಬಾ ಜೋಷಿಯವರ ಚಿಂತನೆ, ಕೆವಿಎನ್ ಬರೆಹ , ರಹಮತ್ ತರೀಕೆರೆಯವರ ಸಾಂಸ್ಕೃತಿಕ ಅಧ್ಯಯನಗಳನ್ನು ಉಲ್ಲೇಖಿಸಬಹುದು. ಇಂತಹ ಸಂದರ್ಬದಲ್ಲಿ ಕೃತಿ ಸೂಚಿಯ ಜೊತೆಗೇ ಬಿಡಿ ಬಿಡಿಯಾದ ಲೇಖನ ಸೂಚಿಯ ಅಗತ್ಯವೂ ಇದೆ. ಇಂತಹ ಕೆಲವು ಮಿತಿಗಳ ನಡುವೆ, ಜಾನಪದ ಅಭ್ಯಾಸಿಗಳಿಗೊಂದು ಉಪಯುಕ್ತ ಆಕರವಾಗಿದೆ. ೨೦೦೪ ರ ನಂತರದ ಜಾನಪದ ಪ್ರಕಟಣೆಗಳನ್ನು ಒಳಗೊಂಡು ಈ ಕೃತಿ ಮರು ಮುದ್ರಣವಾಗುವ ಅಗತ್ಯವಿದೆ. ಅಥವಾ ಈ ಪುಸ್ತಕದ ಮುಂದುವರಿದ ಭಾಗವೆಂತಾದರೂ ಪ್ರಕಟವಾಗಬೇಕಾಗಿದೆ.

ಕಾಮೆಂಟ್‌ಗಳಿಲ್ಲ: