ಅನು: ಶಿವಸುಂದರ್
ಸರ್ಕಾರಿ ಶಾಲೆಗಳನ್ನು ಸಬಲಗೊಳಿಸುವ ನಿರ್ದಿಷ್ಟ ಕ್ರಮಗಳು ಕೂಡಲೇ ಜಾರಿಯಾಗಬೇಕು.
ಹೈದರಾಬಾದಿನ ಕೌನ್ಸಿಲ್ ಫಾರ್ ಸೋಷಿಯಲ್ ಡೆವಲಪ್ಮೆಂಟ್ನ ನಿರ್ದೇಶಕಿಯಾದ ಪ್ರೊ. ಕಲ್ಪನಾ ಕನ್ನಾಬಿರನ್ ಬರೆಯುತ್ತಾರೆ:
ಇತ್ತೀಚೆಗೆ ಪ್ರಕಟವಾದ ಅಧ್ಯಯನವೊಂದು ಡಿ-ನೋಟಿಫೈಡ್ ಸಮುದಾಯಗಳ, ಅಲೆಮಾರಿ ಮತ್ತು ಅರೆ-ಅಲೆಮಾರಿ ಬುಡಕಟ್ಟುಗಳ ನಿರ್ದಿಷ್ಟವಾದ ಸಾಮಾಜಿಕ ಅತಂತ್ರತೆಗಳು ಮುಂದುವರೆಯುತ್ತಲೇ ಇವೆಯೆಂಬುದನ್ನು ಮತ್ತೊಮ್ಮೆ ಎತ್ತಿತೋರಿಸಿದೆ. ಅದರಲ್ಲೂ ಈ ಸಮುದಾಯಗಳು ಉದ್ಯೋಗ ಮತ್ತು ಶಿಕ್ಷಣಗಳನ್ನು ದಕ್ಕಿಸಿಕೊಳ್ಳುವಲ್ಲಿ ಎದುರಿಸುವ ಅತಂತ್ರತೆಗಳನ್ನು ಮತ್ತು ಈ ಸಮುದಾಯಗಳು ಈಗಲೂ ಎದುರಿಸುತ್ತಿರುವ ಕಳಂಕದ ಮತ್ತು ಅಪರಾಧಿಕರಣದ ಭೀತಿಗಳನ್ನೂ ಸಹ ಈ ಅಧ್ಯಯನ ವಿಶೇಷವಾಗಿ ಬಯಲುಮಾಡಿದೆ. ಈ ಹಿಂದೆ ಈ ವಿಷಯಗಳನ್ನು ನ್ಯಾಷನಲ್ ಕಮಿಷನ್ ಫಾರ್ ಡಿ ನೋಟಿಫೈದ್, ನೊಮಾಡಿಕ್, ಅಂಡ್ ಸೆಮಿ ನೊಮಾಡಿಕ್ ಟ್ರೈಬ್ಸ್ (ರೆಂಕೆ ಅಯೋಗ, ೨೦೦೮), ರಾಷ್ಟ್ರೀಯ ಸಲಹಾ ಸಮಿತಿಯು ರಚಿಸಿದ ಡಿ- ನೋಟಿಫೈಡ್ ಮತ್ತು ಅಲೆಮಾರಿ ಸಮುದಾಯಗಳ ಪರಿಸ್ಥಿತಿಗಳ ಬಗೆಗಿನ ಅಧ್ಯಯನ ಗುಂಪು ೨೦೧೧ರಲ್ಲಿ ನೀಡಿದ ವರದಿ, ಭಾರತದ ಬುಡಕಟ್ಟು ಸಮುದಾಯಗಳ ಸಮಾಜೋ-ಆರ್ಥಿಕ, ಆರೋಗ್ಯ ಮತ್ತು ಶೈಕ್ಷಣಿಕ ಸ್ಥಿಗತಿಗಳ ಬಗ್ಗೆ ಅಧ್ಯಯನ ನಡೆಸಲು ನೇಮಿಸಲಾಗಿದ್ದ ಉನ್ನತ ಮಟ್ಟದ ಸಮಿತಿಯು ನೀಡಿದ ವರದಿ (ಕ್ಸಾಕ್ಸಾ ವರದಿ, ೨೦೧೪)ಗಳು ಅಧ್ಯಯನ ಮಾಡಿದ್ದವು.
ಈ ಸಮುದಾಯಗಳ ಸಮಾಜೋ-ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿಗತಿಗಳ ಬಗ್ಗೆ ಅಗತ್ಯವಾದ ಮಾಹಿತಿಗಳ ಕೊರತೆಯಿರುವುದನ್ನು ಗಮನಿಸಿದ ಇಂಡಿಯನ್ ಕೌನ್ಸಿಲ್ ಫಾರ್ ಸೋಷಿಯಲ್ ಸೈನ್ಸ್ ರಿಸರ್ಚ್ (ಐಸಿಎಸ್ಎಸ್ಆರ್- ಭಾರತೀಯ ಸಾಮಾಜಿಕ ವಿಜ್ನಾನ ಸಂಶೋಧನಾ ಪರಿಷತ್ತು) ಒಂಭತ್ತು ರಾಜ್ಯಗಳ ವ್ಯಾಪ್ತಿಯಲ್ಲಿ ಈ ಸಮುದಾಯಗಳ ಸಮಾಜೋ-ಆರ್ಥಿಕ ಮತ್ತು ಶೈಕ್ಷಣಿಕ ಸಾಧನೆಗಳನ್ನು ಅಧ್ಯಯನವನ್ನು ಪ್ರಾಯೋಜಿಸಿತು.
ಹೈದರಾಬಾದಿನ ಕೌನ್ಸಿಲ್ ಫಾರ್ ಸೋಷಿಯಲ್ ಡೆವಲಪ್ಮೆಂಟ್ ಸಂಸ್ಥೆಯು ೨೦೧೨-೨೦೧೫ರ ನಡುವೆ ಈ ಅಧ್ಯಯನವನ್ನು ನಡೆಸಿತು ಮತ್ತು ಮಧ್ಯಪ್ರದೇಶ, ಚತ್ತೀಸ್ಘಡ್, ಗುಜರಾತ್, ಗೋವಾ, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿನ ೧೩,೦೦೦ ಕುಟುಂಬಗಳನ್ನು ಈ ಅಧ್ಯಯನದಲ್ಲಿ ಒಳಗೊಂಡಿತ್ತು. ರೆಂಕೆ ಅಯೋಗವು ಗುರುತಿಸಿದ ೩೦೬ ಸಮುದಾಯಗಳಲ್ಲಿ ೭೬ ಸಮುದಾಯಗಳನ್ನು ಇದರಲ್ಲಿ ಅಧ್ಯಯನ ಮಾಡಲಾಯಿತು (ಶೇ.೬೬ರಷ್ಟು ಇತರ ಹಿಂದುಳಿದ ವರ್ಗಗಳು, ಶೇ.೧೬ರಷ್ಟು ಪರಿಶಿಷ್ಟ ಜಾತಿಗಳು ಮತ್ತು ಶೇ.೧೮ರಷ್ಟು ಪರಿಶಿಷ್ಟ ಪಂಗಡಗಳು). ಅಪರಾಧಿಗಳೆಂಬ ಕಳಂಕಕ್ಕೆ ತುತ್ತಾದ ಹಾಗೂ ತುತ್ತಾಗದ ಸಮುದಾಯಗಳೆರಡನ್ನೂ ಅಧ್ಯಯನ ಮಾಡಲಾಯಿತು. ಅಪರಾಧಿಗಳೆಂಬ ಹಣೆಪಟ್ಟಿ ಹೊತ್ತ ಸಮುದಾಯಗಳ ಮೇಲಿನ ನಿರ್ದಿಷ್ಟ ಪರಿಣಾಮಗಳನ್ನು ಅರಿತುಕೊಳ್ಳಲು ಪ್ರತ್ಯೇಕವಾದ ಪಶ್ನಾವಳಿಗಳನ್ನು ರೂಪಿಸಲಾಗಿತ್ತು. ಒಟ್ಟಾರೆಯಾಗಿ ಈ ಅಧ್ಯಯನವು ಡಿ ನೋಟಿಫೈಡ್ ಮತ್ತು ಅಲೆಮಾರಿ ಬುಡಕಟ್ಟುಗಳ ಬಡ ಸಮಾಜೋ-ಆರ್ಥಿಕ ಸ್ಥಿತಿಗತಿ, ಕಳಂಕೀಕರಣ ಮತ್ತು ಕೆಳಮಟ್ಟದ ಶೈಕ್ಷಣಿಕ ಸಾಧನೆಗಳಿಗಿರುವ ನಿಕಟ ಸಂಬಂಧಗಳನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಅಧ್ಯಯನ ಮಾಡಲಾದ ಸಮುದಾಯಗಳು ಪ್ರಧಾನವಾಗಿ ಗ್ರಾಮೀಣವಾಸಿಗಳಾಗಿದ್ದು ಪ್ರಸ್ತುತ ಅವರು ವಾಸಿಸುತ್ತಿರುವ ಪ್ರದೇಶಗಳಲ್ಲಿ ದೀರ್ಘಕಾಲದಿಂದಲೂ (ಸುಮಾರು ೩೦ ವರ್ಷಗಳಿಂದಲೂ) ನೆಲೆಸಿರುವುದು ಕಂಡುಬಂದಿದೆ. ಇದು ಅಲೆಮಾರಿತನದಿಂದ ಸ್ಥಿರನೆಲೆಸುವಿಕೆ ಕಡೆಗೆ ನಡೆದಿರುವ ಸ್ಥಿತ್ಯಂತರವನ್ನು ಸೂಚಿಸುತ್ತದೆ. ಗುಜರಾತಿನಲ್ಲಿ ಶೇ.೨೫ರಷ್ಟು ಕುಟುಂಬಗಳು ಮತ್ತು ಮಧ್ಯಪ್ರದೇಶದಲ್ಲಿ ಶೇ. ೨೨ ರಷ್ಟು ಕುಟುಂಬಗಳು ಸಾಂಪ್ರದಾಯಿಕ ವೃತ್ತಿಗಳನ್ನೇ ಈಗಲೂ ಪ್ರಧಾನ ವೃತ್ತಿಯನ್ನಾಗಿಗಿ ಮುಂದುವರೆಸಿವೆ. ಆದರೆ ಉಳಿದ ರಾಜ್ಯಗಳಲ್ಲಿ ಈ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಬಹುಪಾಲು ಕುಟುಂಬಗಳು ಇದೀಗ ಅತ್ಯಂತ ಕನಿಷ್ಟ ಮಟ್ಟದ ಜೀವನೋಪಾಯವಾದ ಕೃಷಿಯೇತರ ಕೂಲಿಗಳಾಗಿ ಮಾರ್ಪಡುತ್ತಿರುವುದನ್ನು ಈ ಅಧ್ಯಯನ ತಿಳಿಸಿಕೊಡುತ್ತದೆ. ಒತ್ತಡವು ಹೇರಲ್ಪಟ್ಟ ವಲಸೆಯು ಕುಟುಂಬದ ಸ್ಥಿರತೆ ಮತ್ತು ಶೈಕ್ಷಣಿಕ ಅವಕಾಶಗಳ ಮೇಲೆ ನೇರ ಪರಿಣಾಮವನ್ನು ಬೀರುತ್ತವೆ. ಇಲ್ಲಿ ಅಲೆಮಾರಿ ಸಂಸ್ಕೃತಿಗೂ (ಇಲ್ಲಿ ಸಮುದಾಯಗಳು ತಮ್ಮ ವಲಸೆ, ನೆಸೆ ಮತ್ತು ವಸತಿಗಳನ್ನು ಪೂರ್ವಯೋಜಿತವಾಗಿ ಮಾಡುತ್ತಿದ್ದು ಸಾಂಸ್ಕೃತಿಕ ಬೇರುಗಳನ್ನು ಹೊಂದಿರುತ್ತವೆ) ಮತ್ತು ಬಲವಂತದ ಮತ್ತು ಸಂಕಷ್ಟದ ವಲಸೆಗೂ ಇರುವ ವ್ಯತ್ಯಾಸವನ್ನು ಗಮನಿಸಬೇಕು. ಂಕಷ್ಟದಿಂದ ಹೇರಲ್ಪಡುವ ವಲಸೆಯು ಸಮುದಾಯಗಳನ್ನು ಪ್ರತಿಹಂತದಲ್ಲೂ ಅತಂತ್ರತೆಯತ್ತ ದೂಡುತ್ತದೆ. ತಮಿಳುನಾಡು ಮತ್ತು ಚತ್ತೀಸ್ಘಡ್ ನಲ್ಲಿ ವಲಸೆಯು ಶೇ.೪೦ರಷ್ಟಿದ್ದರೆ ತೆಲಂಗಾಣದಲ್ಲಿ ಶೇ. ೫೯ರಷ್ಟಿದೆ. ತೆಲಂಗಾಣದಲ್ಲಿ ಶೇ. ೫೪ರಷ್ಟು ವಲಸೆ ಕುಟುಂಬಗಳು ವರ್ಷಕ್ಕೊಮ್ಮೆ ವಲಸೆ ಹೋಗುತ್ತವೆ ಮತ್ತು ಅದರಲ್ಲಿ ಶೇ.೮೦ರಷ್ಟು ವಲಸೆಗಳು ೨-೩ ತಿಂಗಳ ಅವಧಿಯದ್ದಾಗಿರುತ್ತವೆ. ಒಟ್ಟಾರೆ ಕುಟುಂಬಗಳಲ್ಲಿ ಶೇ.೩೧ರಷ್ಟು ಕುಟುಂಬಗಳು ಕೂಲಿ ಕೆಲಸವನ್ನೇ ಆಧರಿಸಿವೆ. ತಮಿಳುನಾಡಿನಲ್ಲಿ ಶೇ.೫೩ ಕುಟುಂಬಗಳು ಕೃಷಿಯೇತರ ಕೂಲಿಯನ್ನೇ ತಮ್ಮ ಪ್ರಧಾನ ವೃತ್ತಿಯನ್ನಾಗಿ ಮಾಡಿಕೊಂಡಿವೆ.
ಇನ್ನು ಡಿ ನೋಟಿಫೈಡ್ ಸಮುದಾಯಗಳ ಶೈಕ್ಷಣಿಕ ಸ್ಥಿತಿಗತಿಗಳಿಗೆ ಬರುವುದಾದರೆ ಅಧ್ಯಯನ ನಡೆದ ಎಲ್ಲಾ ರಾಜ್ಯಗಳಲ್ಲೂ ಎಂದಿಗೂ ಶಾಲೆಗೆ ಹೋಗದವರ ಸಂಖ್ಯೆ ಶೇ.೨೫ಕ್ಕಿಂತ ಹೆಚ್ಚಾಗಿದೆ. ಮಹಾರಾಷ್ಟ್ರ (ಶೇ.೫.೫), ತಮಿಳುನಾಡು (ಶೇ. ೧೮), ಮತ್ತು ಆಂಧ್ರಪ್ರದೇಶ (ಶೇ.೨೧)ಗಳಲ್ಲಿ ಮಾತ್ರ ಅದು ಶೇ.೨೫ಕ್ಕಿಂತ ಕಡಿಮೆ ಇದೆ. ಆದರೆ ಶಾಲೆಯನ್ನು ಪೂರ್ಣಗೊಳಿಸಿದ್ದೇವೆಂದು ಹೇಳಿದ ಬಹುಪಾಲು ಜನರು ಪ್ರಾಥಮಿಕ ಶಿಕ್ಷಣದ ನಂತರ ಶಾಲೆ ತೊರೆದಿದ್ದರು ಅಥವಾ ಹೆಚ್ಚಿನ ಪ್ರಕರಣಗಳಲ್ಲಿ ಪ್ರೌಢ ಶಿಕ್ಷಣದ ನಂತರವಂತೂ ಶಾಲೆ ತೊರೆದಿದ್ದರು. ಶಾಲೆ ತೊರೆಯಲು ಅಥವಾ ಶಾಲೆಯಲ್ಲಿ ನೊಂದಾಯಿಸದಿರಲು ವಲಸೆಯೇ ಪ್ರಧಾನ ಕಾರಣವೆಂದು ಅಧ್ಯಯನ ನಡೆದ ಎಲ್ಲಾ ರಾಜ್ಯಗಳಲ್ಲೂ ಅಧ್ಯಯನಕ್ಕೊಳಪಟ್ಟ ಕುಟುಂಬದವರು ಹೇಳಿದರು. ಉಪಾಧ್ಯಾಯರುಗಳ ಜೊತೆ ನಡೆಸಿದ ಸಂದರ್ಶನಗಳಲ್ಲಿ ಈ ಸಮುದಾಯಗಳ ವಿದ್ಯಾರ್ಥಿಗಳ ಬಗ್ಗೆ ಇರುವ ನಕಾರಾತ್ಮಕ ಧೋರಣೆಗಳು ಉಪಾಧ್ಯಾಯ-ವಿದ್ಯಾರ್ಥಿಗಳ ನಡುವೆ ಸಕಾರಾತ್ಮಕ ಸಂಬಂಧ ರೂಪುಗೊಳ್ಳದಂತೆ ತಡೆಗಟ್ಟುತ್ತಿರುವುದು ಕಂಡುಬಂದಿತು. ಇದು ವಿದ್ಯಾರ್ಥಿಗಳು ಗೈರುಹಾಜರಾಗಲು ಮತ್ತು ನಿಧಾನವಾಗಿ ಶಾಲೆ ತೊರೆಯಲು ಸಹ ಕಾರಣವಾಗುತ್ತಿದೆ.
ಅತಂತ್ರ ಆದಿವಾಸಿ ಸಮುದಾಯಗಳಲ್ಲಿ ಶಿಕ್ಷಣವನ್ನು ಸಾರ್ವತ್ರೀಕರಿಸುವ ಪ್ರಯತ್ನಗಳಲ್ಲಿ ವಸತಿ ನಿಲಯಗಳು ಮತ್ತು ಆಶ್ರಮಶಾಲೆಗಳು ಪ್ರಮುಖ ಪಾತ್ರವಹಿಸುತ್ತವೆ. ರೆಂಕೆ ಅಯೋಗವು ಪ್ರಾಥಮಿಕ ಮತ್ತು ಉನ್ನತ ಪ್ರಾಥಮಿಕ ಹಂತದಲ್ಲಿ ವಸತಿ ನಿಲಯಗಳಲ್ಲಿ ಅವಕಾಶವನ್ನು ಪಡೆದುಕೊಳ್ಳುವಲ್ಲಿ ಇರುವ ಲಿಂಗ ಅಸಮಾನತೆಯನ್ನು ಬಯಲುಗೊಳಿಸಿದೆ. ಹಾಗೂ ಅದೇ ಸಮಯದಲ್ಲಿ ಮಾಧ್ಯಮಿಕ ಮತ್ತು ಪ್ರೌಢ ಶಿಕ್ಷಣದ ಹಂತದಲ್ಲಿ ಈ ಸಮುದಾಯಗಳ ಗಂಡುಮಕ್ಕಳು ನಾಪತ್ತೆಯಾಗುವುದನ್ನೂ ಸಹ ದಾಖಲಿಸಿದೆ. ಆದರೆ ಡಿ ನೋಟಿಫೈಡ್ ಸಮುದಾಯಗಳ ಮಕ್ಕಳಿಗೆ ವಸತಿ ಶಾಲೆಗಳನ್ನು ಒದಗಿಸಿರುವ ಕಾರಣಕ್ಕೆ ಅವರ ಶೈಕ್ಷಣಿಕ ಸಾಧನೆಗಳು ಹೇಳಿಕೊಳ್ಳುವ ಮಟ್ಟಕ್ಕೇನೂ ಸುಧಾರಿಸಿಲ್ಲವೆಂದು ಪ್ರಸ್ತುತ ಅಧ್ಯಯನವು ತಿಳಿಸುತ್ತದೆ.
ಎಲ್ಲಾ ರಾಜ್ಯಗಳಲ್ಲೂ ಮಕ್ಕಳನ್ನು ಶಾಲೆಗ ಕಳಿಸುವ ಬಗ್ಗೆ ಮತ್ತು ಅವರ ಶಿಕ್ಷಣದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಲ್ಲಿ ಪೋಷಕರ ಭಾಗೀದಾರಿಕೆಯ ಕೊರತೆ ಎದ್ದುಕಾಣುವಂತಿದೆ. ಇದಕ್ಕೆ ಪೋಷಕರು ಅವಿದ್ಯಾವಂತರಾಗಿರುವುದು ಮತ್ತು ಶಿಕ್ಷಣದ ಬಗ್ಗೆ ಅರಿವಿಲ್ಲದಿರುವುದು ಒಂದು ಕಾರಣವಾಗಿದ್ದಿರಬಹುದಾದರೂ, ಆ ಕುಟುಂಬಗಳು ನೆಲೆಸಿರುವ ಸ್ಥಳದಿಂದ ಶಾಲೆಗಳು ತುಂಬಾ ದೂರದಲ್ಲಿರುವುದೇ ಪ್ರಧಾನ ಕಾರಣವಾಗಿದೆ. ಇದೆಲ್ಲದರ ಹೊರತಾಗಿಯೂ ತಮ್ಮ ಗಂಡು ಮತ್ತು ಹೆಣ್ಣು ಮಕ್ಕಳಿಬ್ಬರೂ ಸಮಾನವಾಗಿ ಶಿಕ್ಷಣ ಪಡೆದು ಸರ್ಕಾರಿ ನೌಕರಿ ಗಿಟ್ಟಿಸಿಕೊಳ್ಳಬೇಕೆಂಬುದು ಪೋಷಕರೆಲ್ಲರ ಸಾಮಾನ್ಯ ಆಶಯವಾಗಿದೆ. ಶಾಲಾಶಿಕ್ಷಣವನ್ನು ಮುಂದುವರೆಸಲು ಸಾಧ್ಯವಾಗದಿರುವುದಕ್ಕೆ ಶಾಲೆಯಿರುವ ದೂರವು ಒಂದು ಪ್ರಧಾನ ಕಾರಣವಾಗಿರುವುದನ್ನು ಗಮನದಲ್ಲಿಟ್ಟುಕೊಂಡಾಗ ಶಾಲೆಗಳನ್ನು ಈ ಸಮುದಾಯಗಳು ನೆಲೆಸಿರುವ ಸ್ಥಳಗಳ ಸಮೀಪ ಸ್ಥಾಪಿಸುವ ಮೂಲಕ ಶಾಲೆಯನ್ನು ತೊರೆಯುವವರ ಸಂಖ್ಯೆಯನ್ನು ಕಡಿಮೆ ಮಾಡಬಹುದು ಮತ್ತು ಶಾಲಾ ಶಿಕ್ಷಣವನ್ನು ಮುಂದುವರೆಸುವಂತೆಯೂ ಮಾಡಬಹುದು. ಈ ಮೂಲಕ ತಮ್ಮ ಮಕ್ಕಳ ಶಾಲಾ ಜೀವನದಲ್ಲಿ ಪೋಷಕರು ಮತ್ತು ಸಮುದಾಯಗಳು ಇನ್ನೂ ಹೆಚ್ಚಿನ ರೀತಿಯಲ್ಲಿ ಭಾಗವಹಿಸಲು ಸಹ ಸಾಧ್ಯವಾಗುತ್ತದೆ.
ಈ ಅಧ್ಯಯನದಲ್ಲಿ ಭಾಗವಹಿಸಿದ ಒಂಭತ್ತೂ ರಾಜ್ಯಗಳ ವಿದ್ಯಾರ್ಥಿಗಳಲ್ಲಿ ಮಧ್ಯಪ್ರದೇಶ, ಗುಜರಾತ್, ಮಹಾರಾಷ್ಟ್ರ, ಚತ್ತೀಸ್ ಘಡ್, ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶಗಳ ಶೇ.೮೮-೯೦ರಷ್ಟು ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಲ್ಲಿ ಕಲಿತಿದ್ದರೆ ಆ ಸಂಖ್ಯೆ ತೆಲಂಗಾಣ ಮತ್ತು ಗೋವಾ ರಾಜ್ಯಗಳಲ್ಲಿ ಶೇ.೭೫ರಷ್ಟಿದೆ. ದೇಶದೆಲ್ಲೆಡೆ ಖಾಸಗಿ ಶಾಲೆಗಳ ಭರಾಟೆ ಎಷ್ಟೆಹೆಚ್ಚಿಗೆ ಆಗುತ್ತಿದ್ದರೂ ಅತ್ಯಂತ ಅಲಕ್ಷಿತ ಸಮುದಾಯಗಳ ಮಕ್ಕಳು ಈಗಲೂ ಸರ್ಕಾರಿ ಶಾಲೆಗಳಿಗೇ ಹೋಗುತ್ತಿದ್ದಾರೆಂಬುದನ್ನು ಈ ಅಧ್ಯಯನ ಮತ್ತೊಮ್ಮೆ ಸಾಬೀತುಮಾಡಿದೆ. ಹೀಗಾಗಿ ಸರ್ಕಾರಿ ಶಾಲೆಗಳ ಮೂಲ ಸೌಕರ್ಯ ಹೆಚ್ಚಳ , ಶಿಕ್ಷಕರ ಸಾಮರ್ಥ್ಯ ವೃದ್ಧಿ ಮತ್ತು ಪಠ್ಯಗಳ ಸುಧಾರಣೆಗಳು ತುರ್ತಾಗಿ ಆಗಲೇಬೇಕಿದೆ.
ಈ ಅಧ್ಯಯನದ ಮತ್ತಷ್ಟು ಸಾರ್ವತ್ರಿಕ ಸಾರಾಂಶವೆಂದರೆ ಈಗಿರುವ ಶಿಕ್ಷಣದ ಸಾಂಸ್ಥಿಕ ಸ್ವರೂಪಗಳು ಅತ್ಯಂತ ದುರ್ಬಲವಾಗಿದ್ದು ಕಳಪೆ ಗುಣಮಟ್ಟದ್ದಾಗಿವೆ ಮತ್ತು ಹಲವು ಪೂರ್ವಗ್ರಹಗಳನ್ನು ಹೊತ್ತಿದ್ದು ಅಂತರ್ಗತವಾದ ಹೊರದೂಡುವ ಗುಣಾಂಶಗಳನ್ನು ಹೊಂದಿದೆ. ಇದು ಶಾಲಾ ಶಿಕ್ಷಣಕ್ಕೆ ದೊಡ್ಡ ಅಡೆತಡೆಯನ್ನು ಒಡ್ಡುತ್ತದೆ. ಅಲ್ಲದೆ ಸಮುದಾಯಗಳು ಈ ಅವಕಾಶಗಳನ್ನು ಎಟುಕಿಸಿಕೊಳ್ಳುವಾಗ ಹೇಗೆ ಕೆಲವು ನಿರ್ದಿಷ್ಯ ಸ್ಥಳಿಯ ಅಂಶಗಳು ಪ್ರಭಾವಿಸುತ್ತದೆಬುದನ್ನು ಈ ಅಧ್ಯಯನವು ಎತ್ತಿತೋರಿಸುತ್ತದೆ. ಹಾಗು ಅಸ್ಥಿತ್ವದಲ್ಲಿರುವ ಕ್ರಮಗಳು ಈ ಅತಂತ್ರ ಸಮುದಾಯಗಳ ನಿರ್ದಿಷ್ಟ ಅಗತ್ಯ ಮತ್ತು ಆಶೋತ್ತರಗಳನ್ನು ಗುರುತಿಸುವುದಿಲ್ಲವೆಂಬುದಕ್ಕೂ ಪುರಾವೆಗಳನ್ನು ಒದಗಿಸುತ್ತದೆ. .
ಕೃಪೆ: Economic and Political Weekly,Oct 28, 2017. Vol 52. No. 42-43
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ