ಬುಧವಾರ, ನವೆಂಬರ್ 15, 2017

ಬಂಡವಾಳಿಗ ಸಮಾಜದ ಸಮಾಜೋದ್ಧಾರ


   ಅನುಶಿವಸುಂದರ್
Image result for indian banks
ಬ್ಯಾಂಕುಗಳಿಗೆ ಬಂಡವಾಳ ಮರುಪೂರಣ ಮಾಡುವ ನೀತಿಯು ಉತ್ತರಗಳಿಗಿಂತ ಜಾಸ್ತಿ ಪ್ರಶ್ನೆಗಳನ್ನು ಹುಟ್ಟುಹಾಕಿದೆ

ಇದೇ ಅಕ್ಟೋಬರ್ ೨೪ರಂದು ಭಾರತದ ಹಣಕಾಸು ಮಂತ್ರಿ ಅರುಣ್ ಜೈಟ್ಲಿಯವರು ಭಾರತದ ಸಾರ್ವಜನಿಕ ಬ್ಯಾಂಕುಗಳಿಗೆ ಒಟ್ಟಾರೆ .೧೧ ಲಕ್ಷ ಕೋಟಿ ರೂ. ನಷ್ಟು ಬಂಡವಾಳ ಮರುಪೂರಣ ಮಾಡುವುದಾಗಿ ಘೋಷಿಸಿದರು. ಇದರಲ್ಲಿ .೩೫ ಲಕ್ಷ ಕೋಟಿ ರೂ. ನಷ್ಟು ಮೊತ್ತವು ಬಂಡವಾಳ ಮರುಪೂರಣ ಬಾಂಡುಗಳ ಮಾರಾಟ ಮಾಡುವುದರಿಂದ ಒದಗಲಿದೆ ಎಂದು ನಿರೀಕ್ಷಿಸಲಾಗಿದೆ. ಉಳಿದ ೭೬,೦೦೦ ಕೋಟಿ ರೂ ಮೊತ್ತವನ್ನು ಬಜೆಟ್ಟಿನ ಮೂಲಕ ಮತ್ತು ಶೇರುಮಾರುಕಟ್ಟೆಯ ಮೂಲಕ ಸಂಗ್ರಹಿಸಲಾಗುವುದು. ಒಂದೆಡೆ ಮರುಪಾವತಿಯಾಗದ ಸಾಲದ ಮೊತ್ತ ಹೆಚ್ಚುತ್ತಾ ಮತ್ತೊಂದೆಡೆ ಸಾಲ ಪಡೆಯುವ ವ್ಯವಹಾರವು ಕ್ಷೀಣಿಸುತ್ತಿರುವ ಸಂದರ್ಭದಲ್ಲಿ ಬಂಡವಾಳ ಮರುಪೂರಣವು ಉತ್ತಮ ಹೆಜ್ಜೆಯೆಂದು ಕೆಲವು ಮೂಲಗಳು ಮೆಚ್ಚಿಕೊಂಡಿವೆ. ಘೋಷಣೆಯಾದ ತಕ್ಷಣವೇ ಶೇರುಮಾರುಕಟ್ಟೆಯಲ್ಲಿ ಹಲವಾರು ಸಾರ್ವಜನಿಕ ಬ್ಯಾಂಕುಗಳ ವಹಿವಾಟು ತೀವ್ರವಾಗಿ ಏರಿಕೆ ಕಂಡಿತು. ಹೀಗಾಗಿಯೂ ಸರ್ಕಾರದ ಕ್ರಮವನ್ನು ಹಲವಾರು ಸಾರ್ವಜನಿಕ ಬ್ಯಾಂಕರುಗಳು ಮತ್ತು ಶೇರುಮಾರುಕಟ್ಟೆಯ ವಹಿವಾಟುದಾರರು ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ.

ಬಹಳ ಸ್ಪಷ್ಟವಾಗಿ ಎರಡು ನಿರ್ದಿಷ್ಟ ಕಾರಣಗಳಿಂದಾಗಿ ಪ್ರಸ್ತುತ ಬಂಡವಾಳ ಮರುಪೂರಣ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಮೊದಲನೆಯದಾಗಿ ಸಾರ್ವಜನಿಕ ಬ್ಯಾಂಕುಗಳ ಆಸ್ತಿ (ನೀಡಿರುವ ಸಾಲಗಳು) ಗುಣಮಟ್ಟ ದಿನೇದಿನೇ ಕುಸಿಯತೊಡಗಿದೆ. ಭಾರತೀಯ ರಿಸರ್ವ್ ಬ್ಯಾಂಕು (ಆರ್ಬಿಐ)ತನ್ನ ೨೦೧೬-೧೭ರ ವಾರ್ಷಿಕ ವರದಿಯಲ್ಲಿ ಸ್ಪಷ್ಟಪಡಿಸಿರುವಂತೆ ಭಾರತದ ಬ್ಯಾಂಕುಗಳು ನೀಡಿರುವ ಒಟ್ಟಾರೆ ಸಾಲದಲ್ಲಿ ಶೇ.೧೨.೧ರಷ್ಟು ಸಾಲಗಳು ಸಂಕಷ್ಟದ ಸಾಲಗಳಾಗಿಬಿಟ್ಟಿದ್ದು ವಾಪಸಾಗುವುದರ ಬಗ್ಗೆ ಅನುಮಾನಗಳಿವೆ. ಸಂಕಷ್ಟದಲ್ಲಿರುವ ಸಾಲಗಳೆಂದರೆ ಮರುಪಾವತಿಯಾಗದ ಸಾಲಗಳು ಮತ್ತು ಪುನರ್ರಚಿತವಾದ ಹಳೆಯ ಸಾಲಗಳ ಒಟ್ಟು ಸೇರಿದ ಮೊತ್ತಸಾರ್ವಜನಿಕ ಬ್ಯಾಂಕುಗಳು ೨೦೧೬-೧೭ರ ಸಾಲಿನಲ್ಲಿ ನಷ್ಟವನ್ನೇ ತೋರಿಸಿವೆ. ಸಾರ್ವಜನಿಕ ಬ್ಯಾಂಕುಗಳ ಪತನ ೨೦೦೯ರಿಂದಲೇ ಪ್ರಾರಂಭವಾಯಿತು. ೨೦೦೮ರಲ್ಲಿ ಸಂಭವಿಸಿದ ಜಾಗತಿಕ ಹಣಕಾಸು ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಭಾರತದ ಹಣಕಾಸು ನಿಯಂತ್ರಣ ಪ್ರಾಧಿಕಾರಗಳು ನಮ್ಮ ದೇಶದಲ್ಲೂ ಅದೇ ರೀತಿಯ ಬಿಕ್ಕಟ್ಟು ಇದೆ ಎಂದು ಭಾವಿಸಿಕೊಂಡು ಸಾಲಗಳನ್ನು ನೀಡುವ ಧೋರಣೆಯಲ್ಲಿ ಅಪಾರ ಸಡಿಲತೆಯನ್ನು ತೋರಿದವು. ಅದರ ಪರಿಣಾಮವಾಗಿ ಸಾರ್ವಜನಿಕ-ಖಾಸಗಿ ಪಾಲುದಾರಿಕೆ (ಪಿಪಿಪಿ) ನೀತಿಯ ಮುಖಾಂತರ ರೂಪಿಸಲಾದ ಹಲವಾರು ಮೂಲಭೂತ ಸೌಕರ್ಯ ಯೋಜನೆಗಳಿಗೆ ಬ್ಯಾಂಕುಗಳು ಲಕ್ಷಾಂತರ ಕೋಟಿ ರೂಗಳ ಸಾಲವನ್ನು ಉದಾರವಾಗಿ ನೀಡಿದವು. ಸಾಲಗಳನ್ನು ನೀಡುವಲ್ಲಿ ಹಲವಾರು ಸಾರ್ವಜನಿಕ ಬ್ಯಾಂಕುಗಳ ಆಡಳಿತಶಾಹಿಯು ತೋರಿದ ಪಕ್ಷಪಾತಿ ನಿರ್ಧಾರಗಳು ಮತ್ತು ಸರ್ಕಾರವು ಸಹ ಆಯ್ದ ಬಂಡವಾಳಶಾಹಿಗಳಿಗೆ ಉತ್ತೇಜನ ನೀಡಿ ಬೆಳಸಿದ ಕ್ರೋನಿ ಬಂಡವಾಳಶಾಹಿ (ಆಪ್ತಕೂಟ ಬಂಡವಾಳಶಾಹಿ)ಗಳು ಒಟ್ಟು ಸೇರಿ ಬ್ಯಾಂಕುಗಳ ಮರುಪಾವತಿಯಾಗದ ಸಾಲದ ಹೊರೆಯನ್ನು ಹೆಚ್ಚಿಸಿದವು.

ಎರಡನೆಯದಾಗಿ ೨೦೧೪-೧೫ರಿಂದೀಚೆಗೆ ಬ್ಯಾಂಕುಗಳ ಸಾಲನೀಡಿಕೆಯ ಪ್ರಮಾಣದ ವೃದ್ಧಿಯ ದರ ತೀವ್ರವಾಗಿ ಕುಸಿಯುತ್ತಿದ್ದು ೨೦೧೬-೧೭ರಲ್ಲಿ ಅದು ಕೇವಲ ಶೇ..೨ರಷ್ಟಿತ್ತು; ೨೦೧೭ರ ಸೆಪ್ತೆಂಬರ್ ವೇಳೆಗೆ ದರ ಒಂದಂಕಿಗೆ ಕುಸಿದಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಕೃಷಿ ಮತ್ತು ಕೃಷಿ ಆಸುಪಾಸಿನ ಬಾಬತ್ತುಗಳಿಗೆ ಕೊಡುತ್ತಿದ್ದ ಸಾಲ ತೀವ್ರವಾಗಿ ಕಡಿತಗೊಂಡಿದೆ; ಕಳೆದ ವರ್ಷ ಅದು ಶೇ.೧೫.೯ರಷ್ಟು ಏರಿಕೆಯನ್ನು ಕಂಡಿದ್ದರೆ ವರ್ಷ ಅದು ಕೇವಲ ಶೇ..೮ರಷ್ಟು ಮಾತ್ರವಿತ್ತು. ಕಳೆದ ವರ್ಷ ಸೇವಾ ಕ್ಷೇತ್ರಕ್ಕೆ ನೀಡಿದ ಸಾಲ ಶೇ.೧೮.೪ರಷ್ಟು ವೃದ್ಧಿಯನ್ನು ಕಂಡಿದ್ದರೆ ಅದು ವರ್ಷ ಕೇವಲ ಶೇ.೭ಕ್ಕೆ ಇಳಿದಿದೆ. ವರ್ಷಾವಳಿ ಲೆಕ್ಕಾಚಾರದಲ್ಲಿ ಒಟ್ಟಾರೆ ಆಹಾರೇತರ ವಲಯಕ್ಕೆ ಕಳೆದ ವರ್ಷ ನೀಡಿದ ಸಾಲ ಶೇ.೧೦.೮ರಷ್ಟು ಏರಿಕೆಯನ್ನು ಕಂಡಿದ್ದರೆ ವರ್ಷ ಅದು ಕೇವಲ .೧ರಷ್ಟು ಏರಿಕೆಯನ್ನು ಮಾತ್ರ ಕಂಡಿತು.

ಎರಡು ಬೆಳವಣಿಗೆಗಳ ನಡುವೆ ಎಷ್ಟರ ಮಟ್ಟಿಗೆ ಪರಸ್ಪರ ಸಂಬಂಧವಿದೆ? ಮರುಪಾವತಿಯಾಗದ ಸಾ ಒಂದೇ ಸಾಲನೀಡಿಕೆಯ ದರದ ಹೆಚ್ಚಳವನ್ನು ನಿರ್ಬಂಧಿಸುತ್ತಿರುವ ಏಕೈಕ ಅಂಶವೇ? ಹಣಕಾಸು ಇಲಾಖೆ ಮತ್ತು ಅವರ ಸಚಿವಾಲಯಗಳು ಏನೇ ಹೇಳುತ್ತಿದ್ದರೂ ವಾಸ್ತವವೇನೆಂದರೆ ಕಳೆದ ಆರು ತ್ರೈಮಾಸಿಕಗಳಿಂದ ಒಟ್ಟಾರೆ ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಬೆಳವಣಿಗೆಯ ದರ ಒಂದೇ ಸಮನೆ ಕಡಿಮೆಯಾಗುತ್ತಿದೆ. ೨೦೧೭-೧೮ರ ಮೂರನೇ ತ್ರೈಮಾಸಿಕದಲ್ಲಿ ಭಾರತದ ಅಭಿವೃದ್ಧಿ ದರ ಶೇ..೭ಕ್ಕೆ ಕುಸಿದಿದೆ. ಇದು  ಕಳೆದ ಮೂರು ವರ್ಷಗಳಲ್ಲೇ ಅತ್ಯಂತ ಕಡಿಮೆ ಅಭಿವೃದ್ಧಿ ದರವಾಗಿದೆ. ನೋಟು ನಿಷೇಧ ಮತ್ತು ಅವಸರವಸರವಾಗಿ ಜಾರಿ ಮಾಡಿದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ)ಗಳು ಆರ್ಥಿಕ ನಿಧಾನಗತಿಯ ವಿದ್ಯಮಾನವನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ. ಹೀಗೆ ಈಗಾಗಲೇ ಹಿಂದ್ಸರಿತ ಕಂಡಿರುವ ಆರ್ಥಿಕ ವ್ಯವಸ್ಥೆಯೊಂದು ಸರ್ಕಾರದ ಅವಿವೇಕದ ನೀತಿಗಳಿಂದ ಮತ್ತಷ್ಟು ಪೆಟ್ಟನ್ನು ತಿಂದು ಹೈರಾಣಾಗಿ ಉದ್ಯಮಗಳು ಸಾಲಗಳನ್ನು ಪಡೆದುಕೊಳ್ಳಲು ಹಿಂಜರಿಯುತ್ತಿರುವಾಗ  ಬ್ಯಾಂಕುಗಳಿಗೆ ಬಂಡವಾಳ ಮರುಪೂರಣ ಮಾಡುವುದರಿಂದ ಮಾತ್ರ ಉದ್ಯಮಗಳು ಸಾಲವನ್ನು ಪಡೆದುಕೊಂಡು ಹೂಡಿಕೆ ಮಾಡುವಂಥ ವಿಶ್ವಾಸವನ್ನು ಕೊಡುವುದಿಲ್ಲ. ಹಾಗಿದ್ದರೂ ಬ್ಯಾಂಕುಗಳ ಬಂಡವಾಳ ಮರುಪೂರಣದಿಂದ ಅಗಾಧವಾದ್ದನ್ನು ಏಕೆ ನಿರೀಕ್ಷಿಸಲಾಗುತ್ತಿದೆ?

ಬ್ಯಾಂಕುಗಳ ಬಂಡವಾಳ ಮರುಪೂರಣವನ್ನು ಕೃಷಿ ಸಾಲ ಮನ್ನಾದೊಂದಿಗೆ ಹೋಲಿಸಿ ನೋಡಿದಲ್ಲಿ ವೈರುಧ್ಯವು ಇನ್ನು ಸ್ಪಷ್ಟವಾಗಿ ಎದ್ದುಕಾಣುತ್ತದೆ. ಸಾಲವನ್ನು ಮನ್ನ ಮಾಡುವ ಸಂಸ್ಕೃತಿಯು ಪ್ರಾಮಾಣಿಕ ಸಾಲ ಮರುಪಾವತಿ ಸಂಸ್ಕೃತಿಯ ಮೇಲೆ ಕೆಟ್ಟ ಪ್ರಭಾವ ಬೀರಿ ಖಾಸಗಿ ಉದ್ಯಮಿಗಳಿಗೆ ಸಾಲ ದೊರೆಯದಂತೆ ಮಾಡಬಹುದೆಂದು ಹಿಂದೆ ನಮಗೆಲ್ಲಾ ಹೇಳಲಾಗುತ್ತಿತ್ತು. ಹಾಗೆಯೇ ಸಾಲ ಮರುಪಾವತಿ ಮಾಡದವರ ಪಟ್ಟಿಯನ್ನು ಪ್ರಕಟಮಾಡುವಲ್ಲಿ ವ್ಯವಸ್ಥೆಯು ತೋರುತ್ತಿದ್ದ ಅನಾಸಕ್ತಿಯು ನಮಗೆಲ್ಲ ತಿಳಿದ ವಿಷಯವೇ. ಆದರೆ ಅದೇ ಸಮಯದಲ್ಲಿ ದೊಡ್ಡದೊಡ್ಡ ಕಾರ್ಪೊರೇಟ್ ಉದ್ಯಮಪತಿಗಳು ಕೊಟ್ಟ ಸಾಲವನ್ನು ಮರುಪಾವತಿ ಮಾಡದಿದ್ದರೂ ಅದರ ವಸೂಲಾತಿಯ ಬಗ್ಗೆ ಬ್ಯಾಂಕು ಮತ್ತು ಸರ್ಕಾರಗಳು ತೋರುತ್ತಿರುವ ನಿಧಾನ ಧೋರಣೆಯು ಯಾವ ಬಗೆಯ ಸಂದೇಶವನ್ನು ರವಾನೆ ಮಾಡುತ್ತದೆ?ಸಾರ್ವಜನಿಕ ಬ್ಯಾಂಕುಗಳ ಬಂಡವಾಳ ಮರುಪೂರಣ ಮಾಡುವ ನೀತಿಯು ದೊಡ್ಡದೊಡ್ಡ ಸಾಲಗಾರರ ನೈತಿಕ ಅವಘಡಗಳಿಗೆ ಮಾನ್ಯತೆಯನ್ನು ಒದಗಿಸುವುದಿಲ್ಲವೇ? ಇದು ನಷ್ಟವನ್ನು ಸಾಮಾಜೀಕರಣಗೊಳಿಸಿ ಲಾಭವನ್ನು ಖಾಸಗೀಕರಿಸುವ ಬಂಡವಾಳಿಗರ ಸಮಾಜೋದ್ಧಾರವಲ್ಲವೇ? ಮೇಲಾಗಿ ಅದೇ ಬ್ಯಾಂಕುಗಳೇ ತಮ್ಮ ಮರುಪೂರ್ಣ ಬಾಂಡುಗಳನ್ನು ಕೂಡ ಖರೀದಿಸುತ್ತವೆಯೇ? ಹಾಗಿದ್ದಲ್ಲಿ ಪ್ರಕ್ರಿಯೆಯೂ ಸಹ ಖಾಸಗಿ ದೊಡ್ಡ ಸಾಲಗಾರರಿಗೆ ಸಾಲ ದೊರೆಯದಂತೆ ಮಾಡುವುದಿಲ್ಲವೇ? ಯಾವುದೇ ಪ್ರಶ್ನೆಗಳಿಗೆ ಸರಿಯಾದ ಉತ್ತರವಿಲ್ಲ.

ಆದರೆ ಬ್ಯಾಂಕುಗಳ ಬಿಕ್ಕಟ್ಟನ್ನು ಬಗೆಹರಿಸುವ ಬಗೆಗಿನ ನಿರೀಕ್ಷೆಗಳು ಬೇರೆಯದೇ ರೀತಿಯಲ್ಲಿವೆ. ಸರ್ಕಾರವು ೨೦೧೬ರ ಡಿಸೆಂಬರ್ನಲ್ಲಿ ಜಾರಿಗೆ ತಂದ ದಿವಾಳಿಕೋರತನ ಸಂಹಿತೆ ಕಾಯಿದೆಯು ಒಂದು ಹೊಸ ಶಕೆಯನ್ನೇ ಪ್ರಾಂಭಿಸುತ್ತದೆಂದು ನಿರೀಕ್ಷಿಸಲಾಗಿತ್ತು. ಆದರೆ ವಾಸ್ತವ ಬೇರೆಯದೇ ಆಗಿತ್ತು. ಉಕ್ಕು, ವಿದ್ಯುತ್ ಅಥವಾ ದೂರಸಂಪರ್ಕ ಕ್ಷೇತ್ರಗಳು ಈಗಲೂ ಸಂಕಷ್ಟವನ್ನು ಎದುರಿಸುತ್ತಿವೆ. ೨೦೧೭-೧೮ರ ಬಜೆಟ್ಟು ಸಹ ಬ್ಯಾಂಕಿಂಗ್ ಕ್ಷೇತ್ರದ ಬಗ್ಗೆ ಯಾವುದೇ ಹೊಸ ಭರವಸೆಗಳನ್ನು ಹುಟ್ಟಿಸುವಂತಿರಲಿಲ್ಲ. ಹಾಗಿದ್ದಲ್ಲಿ ಬ್ಯಾಂಕುಗಳ ಬಂಡವಾಳ ಮರುಪೂರ್ಣ ನೀತಿಯನ್ನು ಈಗೇಕೆ ಕೈಗೊಳ್ಳಲಾಯಿತು?

ಎರಡು ರಾಜ್ಯಗಳಲ್ಲಿ ಚುನಾವಣೆಗಳು ಸಮೀಪಿಸುತ್ತಿವೆ. ಮತು ಆರ್ಥಿಕ ರಂಗದಲ್ಲಿ ಸರ್ಕಾರದ ವೈಫಲ್ಯಗಳು ನಿಚ್ಚಳವಾಗಿ ಎದ್ದುಕಾಣಲು ಪ್ರಾರಂಭಿಸಿವೆ. ಹಿನ್ನೆಯಲ್ಲಿ ಆರ್ಥಿಕ ಪುನಶ್ಚೇತನಕ್ಕೆ ಸರ್ಕಾರವು ಒದಗಿಸುತ್ತದೆಂದು ಭಾವಿಸಲಾಗಿದ್ದ ವಿತ್ತೀಯ ಪ್ರೇರಣೆ ಇದೇ ಆಗಿರಬಹುದೇ? ಇದು ಶೇರುಮಾರುಕಟ್ಟೆ ದರಗಳನ್ನು ಮತ್ತಷ್ಟು ಏರಿಸಬಹುದೇ? ಇದುವೇ ಹೆಗ್ಗಳಿಕೆಯಿಂದ ಪ್ರಚಾರದಲ್ಲಿರುವ ಮೋದ್ನಾಮಿಕ್ಸ್- ಮೋದಿ ಪ್ರಣೀತ ಆರ್ಥಿಕತೆಯೇ? ಬ್ಯಾಂಕುಗಳ ಪುನರ್ ನಿರ್ಮಾಣದ ಯೋಜನೆ ಏನಾಯಿತು? ಎಲ್ಲಾ ಪ್ರಶ್ನೆಗಳು ಕಾಡುತ್ತಿರುವಾಗ ಬಂಡವಾಳ ಮರುಪೂರಣದ ಯೋಜನೆಗಳು ಉತ್ತರಕ್ಕಿಂತ ಜಾಸ್ತಿ ಪ್ರಶ್ನೆಗಳನ್ನೇ ಹುಟ್ಟುಹಾಕುತ್ತಿದೆ. ಇದೇ ಯೋಜನೆಯ ದೊಡ್ಡ ದೋಷವೂ ಆಗಿದೆ.

       ಕೃಪೆ: Economic and Political Weekly,  Nov 4, 2017. Vol. 52. No.44

                                                                                             











ಕಾಮೆಂಟ್‌ಗಳಿಲ್ಲ: