ಬುಧವಾರ, ನವೆಂಬರ್ 15, 2017

`೧೯೧೭-೨೧ರ ರಷ್ಯಾದ ಮಹಾನ್ ಕ್ರಾಂತಿ’ ಮತ್ತು ಲೆನಿನ್‌ವಾದ


 ಅನುಶಿವಸುಂದರ್
Image result for russia february revolution

ಅಂತರ್ಯುದ್ಧದ ಸಮಯದಲ್ಲಿ ತಲೆದೋರಿದ ಹವಾರು ಲೋಪದೋಷಗಳನ್ನು ಸರಿಪಡಿಸಲು ಲೆನಿನ್ವಾದ ವಿಫಲವಾಯಿತು.

ಬರ್ನಾಡ್ ಡಿಮೆಲ್ಲೋ ಬರೆಯುತ್ತಾರೆ:

ಲೇಖನದ ಶೀರ್ಷಿಕೆಯಲ್ಲಿರುವ ಮೊದಲರ್ಧ ಭಾಗ (’೧೯೧೭-೨೧ರ ರಷ್ಯಾದ ಮಹಾನ್ ಕ್ರಾಂತಿ) ವು ಬೊಲ್ಷೆವಿಕರ ಬಗ್ಗೆ, ೧೯೧೭ರ ರಷ್ಯಾ ಕ್ರಾಂತಿಯ ಬಗ್ಗೆ  ಹಾಗೂ  ನಂತರದ  ಅಂತರ್ಯುದ್ಧದ ಬಗೆಗಿನ ಇತಿಹಾಸಕಾರರಲ್ಲಿ ಅತ್ಯಂತ ಪ್ರಖ್ಯಾತ ಇತಿಹಾಸಕಾರನಾದ ಅಲೆಕ್ಸಾಂಡರ್ ರಬಿನೋವಿಚ್ ಅವರಿಗೆ ಖುಣಿಯಾಗಿದೆ. ಅವರ ಒಂದು ಲೇಖನವು ಇಪಿಡಬ್ಲ್ಯೂ ಪತ್ರಿಕೆಯ   ರಷ್ಯಾ ಕ್ರಾಂತಿಯ ಶತಮಾನೋತ್ಸವ ಸಂಚಿಕೆಯಲ್ಲಿ ಪ್ರಕಟವಾಗಿದೆ. ರಬಿನೋವಿಚ್, ರೆಕ್ಸ್ ವೇಡ್ (ಅವರ ಲೇಖನವೂ ಸಂಚಿಕೆಯಲ್ಲಿ ಪ್ರಕಟವಾಗಿದೆ) ರಂಥವರ ಕೃತಿಗಳು ಪ್ರಕಟವಾದ ನಂತರದಲ್ಲಿ ಮಾಧ್ಯಮಗಳಲ್ಲಿ ರಷ್ಯಾ ಕ್ರಾಂತಿಯ ಬಗ್ಗೆ ಪ್ರಕಟವಾಗುತ್ತಿರುವ ಸುಳ್ಳುಗಳನ್ನು ವಿಶೇಷವಾಗಿ ಬಯಲುಗೊಳಿಸುವ ಅಗತ್ಯವಿಲ್ಲವಾಗಿದೆ

ಹಾಗೆ ನೋಡಿದಲ್ಲಿ ೧೯೧೭-೨೧ರ ನಡುವಿನ ಅವಧಿಯ ಎಲ್ಲಾ ದಾಖಲೆಗಳು ೧೯೯೧ರಿಂದ ಬಹಿರಂಗವಾಗಿ ಲಭ್ಯವಾಗಿದೆ. ಆದರೂ ರಷ್ಯಾ ಕ್ರಾಂತಿಯು ಕೇವಲ ಒಂದು ಕ್ಷಿಪ್ರದಂಗೆ, ಅಥವಾ ಅಧಿಕಾರಸ್ಥರ ವಿರುದ್ಧ ಹುಟ್ಟುಕೊಂಡ ದಿಢೀರ್ ಬಂಡಾಯ ಮಾತ್ರವೆಂಬ ಹಾಗೂ ನಂತರ ಅದನ್ನು ಕಮ್ಯುನಿಸ್ಟರು ಹಿಂಸೆಯ ಮೂಲಕ ಅದನ್ನು ತಮಗೆ ತಕ್ಕಂತೆ ಬಳಸಿಕೊಂಡರೆಂಬ ರೀತಿಯ ಕಥನವೇ ಪ್ರಧಾನಧಾರೆಯಲ್ಲಿ ಹರಿದುಕೊಂಡು ಬಂದಿದೆ. ಹಾಗೂ ಇದು ಅನಿರೀಕ್ಷಿತವೇನಲ್ಲ. ಒಂದು ಕ್ಷಿಪ್ರ ದಂಗೆಯೆಂದರೇನು? ಕ್ಷಿಪ್ರದಂಗೆಯು ಆಡಳಿತಾಧಿಕಾರವನ್ನು ಮಾತ್ರ ಗುರಿಯಾಗಿಟ್ಟುಕೊಂಡು ಹಾಲಿ ಆಳುವವರ್ಗದಲ್ಲಿನ ಒಂದು ಗುಂಪು ಮತ್ತೊಂದು ಗುಂಪಿನಿಂದ ಅಧಿಕಾರವನ್ನು ಕಸಿದುಕೊಳ್ಳುವುದು. ಮತ್ತು ಕ್ರಾಂತಿಯೊಂದರಲ್ಲಿನ ಹಿಂಸೆಯು ಇತರ ಎಲ್ಲಾ ಅಂಶಗಳೊಂದಿಗೆ ಪ್ರಮುಖವಾಗಿ ಕ್ರಾಂತಿಗೆ ಪ್ರತಿಯಾಗಿ ಎಸಗಲ್ಪಡುವ ಪ್ರತಿಕ್ರಾಂತಿಯ ಹಿಂಸೆಯ ಮಟ್ಟದ ಮೇಲೆ ಅವಲಂಬಿಸಿರುತ್ತದೆ. ರಷ್ಯಾದ ಸಂದರ್ಭದಲ್ಲಿ ಪ್ರತಿಕ್ರಾಂತಿಯ ಹಿಂಸಾಚಾರವನ್ನು ಅಂದಿನ ಜಗತ್ತಿನ ಮಹಾನ್ ಶಕ್ತಿಗಳಾದ ಬ್ರಿಟನ್, ಫ್ರಾನ್ಸ್ ಮತ್ತು ಅಮೆರಿಕಗಳು ಬೆಂಬಲಿಸಿದವು. ಒಂದು ಕ್ರಾಂತಿಯ ನೈಜ ಇತಿಹಾಸವನ್ನು  ಅದರ ಪ್ರತಿದ್ವಂದಿಯಾದ ಪ್ರತಿಕ್ರಾಂತಿಯ ಇತಿಹಾಸವನ್ನು ಕಡೆಗಣಿಸಿ ಅಥವಾ ಮರೆಮಾಚಿ ನೋಡಲು ಬರುವುದಿಲ್ಲ. ಹಾಗೂ ಆಧುನಿಕ ಯುಗದಲ್ಲಿ ಪ್ರತಿಕ್ರಾಂತಿಯ ಪ್ರಧಾನ ನೆಲೆ ಸಾಮ್ರಾಜ್ಯಶಾಹಿಯೇ ಆಗಿದೆ.
Image result for russia february revolution

ರಷಿಯಾದಲ್ಲಿ ೧೯೧೭ರ ಫೆಬ್ರವರಿಯಲ್ಲಿ ಮತ್ತು ಅಕ್ಟೋಬರಿನಲ್ಲಿ ಒಟ್ಟು ಎರಡು ಕ್ರಾಂತಿಗಳು ನಡೆದವು. ಮೊದಲನೆಯದು ರಷ್ಯಾದಲ್ಲಿ ಆಳ್ವಿಕೆಯಲ್ಲಿದ್ದ ಏಕಚಕ್ರಾಧಿಪತ್ಯ ಮತ್ತು ಅದು ಸ್ಥಾಪಿಸಿದ್ದ ಸರ್ವಾಧಿಕಾರಿ ಆಡಳಿತಶಾಹಿಯನ್ನು ಕಿತ್ತೊಗೆಯಿತು. ಎರಡನೆಯ ಕ್ರಾಂತಿಯು ಮೊದಲನೆಯ ಕ್ರಾಂತಿಯ ಸಾಧನೆಯನ್ನು ಪ್ರತಿಕ್ರಾಂತಿಕಾರಿಗಳಿಂದ ಕಾಪಾಡಿಕೊಳ್ಳುತ್ತಲೇ ಬಂಡವಾಳಶಾಹಿಯ ವಿರುದ್ಧ ಜನಕ್ರಾಂತಿಯನ್ನು ಸಂಘಟಿಸಿತು. ಗಡೀಪಾರಿನಲ್ಲಿದ್ದ ಲೆನಿನ್ ವರ್ಷ ಏಪ್ರಿಲ್ನಲ್ಲಿ ರಷಿಯಾಗೆ ಮರಳಿದರು. ಮತ್ತು  ತಮ್ಮ ಪ್ರಖ್ಯಾತ ಏಪ್ರಿಲ್ ಸಿದ್ಧಾಂತ ವನ್ನು ಮಂಡಿಸಿದರು. ನಂತರದಲ್ಲೇ ಸಮಾಜವಾದವು ಕ್ರಾಂತಿಕಾರಿ ಕಾರ್ಯಸೂಚಿಯಾಗಿ ಮುನ್ನೆಲೆಗೆ ಬಂದಿತು. ಏಪ್ರಿಲ್ ಕೊನೆಯೆ ವೇಳೆಗೆ ಫೆಬ್ರವರಿ ಕ್ರಾಂತಿಯ ಪ್ರಕ್ರಿಯೆಯಲ್ಲಿ ಕಾರ್ಮಿಕರು ಮತ್ತು ಸೈನಿಕರು ಚುನಾಯಿಸಿದ್ದ ಸಮಿತಿಗಳ ಅರ್ಥಾತ್ ಸೋವಿಯತ್ತುಗಳ ಸರ್ಕಾರವನ್ನು ರಚಿಸಲು ಲೆನಿನ್ನರ ಬೊಲ್ಷೆವಿಕ್ ಪಕ್ಷ ಕರೆನೀಡಿತು. ಸೋವಿಯತ್ತುಗಳಲ್ಲಿ ಬಂಡವಾಳಶಾಹಿಗಳಿಗೆ ಮತ್ತು ದೊಡ್ಡದೊಡ್ಡ ಭೂಮಾಲೀಕರಿಗೆ ಯಾವ ಪ್ರಾತಿನಿಧ್ಯವೂ ಇರಲಿಲ್ಲ.

ಹಾಗೆ ನೋಡಿದರೆ ರಷಿಯಾವು ಸಾಮ್ರಾಜ್ಯಶಾಹಿ ಸರಪಳಿಯಲ್ಲಿ ಅತ್ಯಂತ ದುರ್ಬಲ ಕೊಂಡಿ ಯಾಗಿರುವುದರಿಂದ ರಷಿಯಾದಲ್ಲಿ ಸಂಭವಿಸುವ ಸಮಾಜವಾದಿ ಕ್ರಾಂತಿಯು ನಂತರದಲ್ಲಿ ಇಡೀ ಯೂರೋಪಿನಾದ್ಯಂತ ಸಂಭವಿಸಬಹುದಾದ ಕ್ರಾಂತಿಗೆ ವೇಗವರ್ಧಕವಾಗಿ ಕೆಲಸ ಮಾಡುವುದೆಂದು ಲೆನಿನ್ ಯೋಚಿಸಿದ್ದರು. ಒಂದು ವೇಳೆ ಕ್ರಾಂತಿಯು ಯಾರೋಪಿನಾದ್ಯಂತ ಪಸರಿಸದಿದ್ದರೆ ರಷಿಯಾದ ಕ್ರಾಂತಿಯನ್ನು ಉಳಿಸಿಕೊಳ್ಳುವುದು ಸಹ ಕಷ್ಟವಾಗಲಿದೆ ಎಂಬ ಅರಿವು ಅವರಿಗಿತ್ತು. ಹಾಗೆಯೇ ವಸಾಹತುಶಾಹಿಗಳ ವಿರುದ್ಧ ಹೋರಾಡುತ್ತಿದ್ದ ರಾಷ್ಟ್ರೀಯ ವಿಮೋಚನಾ ಹೋರಾಟಗಳೊಂದಿಗೂ ಮೈತ್ರಿಯನ್ನು ರೂಪಿಸಿಕೊಳ್ಳಬೇಕಾದ ಅಗತ್ಯದ ಬಗ್ಗೆ ಅವರು ಚಿಂತಿಸಿದ್ದರು. ಮೊದಲನೆ ಮಹಾಯುದ್ಧವು ಜಗತ್ತಿನಾದ್ಯಂತ ಅತೀವ ಹಿಂಸೆ, ಅರಾಜಕತೆ, ರೋಗ-ರುಜಿನ, ಕ್ಷಾಮ ಮತ್ತು ಆರ್ಥಿಕ ಸಂಕಷ್ಟಗಳನ್ನು ಹುಟ್ಟುಹಾಕಿತ್ತು. ಇದೇ ಸಮಯದಲ್ಲಿ ಸೈನ್ಯದಲ್ಲೂ ಬಂಡಾಯ ಪ್ರಾರಂಭವಾಗಿತ್ತು ಸಂದರ್ಭದಲ್ಲಿ ಬೋಲ್ಷೆವಿಕರು ಯುದ್ಧವನ್ನು ಕೂಡಲೇ ನಿಲ್ಲಿಸಬೇಕೆಂಬ ಮತ್ತು ಬೇಷರತ್ ಶಾಂತಿಯನ್ನು ಘೋಷಿಸಬೇಕೆಂದು ಆಗ್ರಹಿಸಿದರು. ಅದರ ಜೊತೆಜೊತೆಗೆ ಎಲ್ಲಾ ಯುದ್ಧನಿರತ ದೇಶಗಳ ಕಾರ್ಮಿಕ ವರ್ಗವು ಬಂಡವಾಳಶಾಹಿಗಳ ವಿರುದ್ಧ ಒಗ್ಗೂಡಬೇಕೆಂಬ ಕರೆಯನ್ನೂ ಕೊಟ್ಟಿದ್ದರಿಂದ ಅಲೆಯೋಪಾದಿಯಲ್ಲಿ ಮುನ್ನುಗ್ಗುತ್ತಿದ್ದ ಕಾರ್ಮಿಕರ ಮತ್ತು ಸೈನಿಕರ ಚಳವಳಿಗಳ ಮುಂಚೂಣಿಯನ್ನು ಬೊಲ್ಷೆವಿಕರ ಧ್ಯೇಯ ನಿಷ್ಟ ಬುದ್ಧಿಜೀವಿಗಳು ವಹಿಸಿಕೊಳ್ಳುವಂತಾಯಿತು.

೧೯೧೭ರ ಚಳಿಗಾಲದ ವೇಗಾಗಲೇ ಬೊಲ್ಷೆವಿಕರು ಎಡ ಸಮಾಜವಾದಿ ಕ್ರಾಂತಿಕಾರಿಗಳ ಜೊತೆಗೂಡಿ ಹಲವಾರು ಸೋವಿಯತ್ತುಗಳಲ್ಲಿ ಬಹುಮತವನ್ನು ಪಡೆದಿದ್ದರು. ಜನರ ನಡುವೆ ಕ್ರಾಂತಿಕಾರಿ ಪ್ರಜ್ನೆಯು ತೀವ್ರಗೊಳ್ಳುತ್ತಿದ್ದ ಸಂದರ್ಭದಲ್ಲಿ ಅದರಲ್ಲೂ ವಿಶೇಷವಾಗಿ ಬಂಡಾಯಗಾರರು ಚಳಿಗಾಲದ ಅರಮನೆಯನ್ನು ವಶಪಡಿಸಿಕೊಳ್ಳುವಂಥ ನಿರ್ಣಾಯಕ ಗಳಿಗೆಯಲ್ಲಿ ಬೊಲ್ಷೆವಿಕ್ ಪಕ್ಷವು ಕ್ರಾಂತಿಕಾರಿ ಬಂಡಾಯದ ಮುಂಚೂಣಿ ಸ್ಥಾನದಲ್ಲಿತ್ತು. ಸಂದರ್ಭವು ಹೇಗಿತ್ತೆಂದರೆ ಆಳುವವರ್ಗಗಳು ಇನ್ನು ಒಂದು ಕ್ಷಣವೂ ತಮ್ಮ ಆಳ್ವಿಕೆಯನ್ನು ಮುಂದುವರೆಸಲು ಸಾಧ್ಯವಾಗುತ್ತಿರಲಿಲ್ಲ. ಮತ್ತು ಜನರು ಇನ್ನು ಒಂದು ಕ್ಷಣವೂ ಅವರ ಆಳ್ವಿಕೆಯನ್ನು ಸಹಿಸುವ ಸ್ಥಿತಿಯಲ್ಲಿರಲಿಲ್ಲ. ಹೀಗಾಗಿ ಎರಡನೇ ಆಖಿಲ ರಷಿಯಾ ಸೋವಿಯತ್ತುಗಳ ಮಹಾಧಿವೇಶನ ಮಾಡಿದ ಮೊದಲ ನಿರ್ಣಯವೆಂದರೆ ಎಲ್ಲಾ ಅಧಿಕಾರವು ಸೋವಿಯತ್ತುಗಳಿಗೆ ಎಂಬ ಘೋಷಣೆಯನ್ನು ಅನುಷ್ಠಾನಕ್ಕೆ ತರುವುದು ಮತ್ತು ಎಲ್ಲಾ ಭೂಮಿಗಳನ್ನು ಅದನ್ನು ಉಳುತ್ತಿದ್ದವರ ಒಡೆತನಕ್ಕೆ ಒಪ್ಪಿಸುವಂಥ ಕ್ರಾಂತಿಕಾರಿ ಭೂ ಸುಧಾರಣೆಯನ್ನು ಜಾರಿಗೆ ತರುವುದು.

ಆದರೆ ರಷಿಯಾ ಕ್ರಾಂತಿಯನ್ನು ಸುಲಭವಾಗಿ ಗೆಲ್ಲಲು ಸಾಧ್ಯವಿರಲಿಲ್ಲ. ೧೯೧೭ರ ಆಗಸ್ಟ್ನಲ್ಲಿ ಜನರಲ್ ಕೋರ್ನಿಲೋವ್ ಫೆಬ್ರವರಿ ಕ್ರಾಂತಿಯ ವಿರುದ್ಧ ಮಾಡಿದ ಪ್ರತಿಕ್ರಾಂತಿಕಾರಿ ನಡೆಯು ಸೇನೆಯ ದಂಡನಾಯಕರುಗಳು ನಂತರ ಕ್ರಾಂತಿಯ ವಿರುದ್ಧ ನಡೆಸಿದ ಸೈನಿಕ-ಸರ್ವಾಧಿಕಾರಿ ಮಸಲತ್ತುಗಳ ಮೊದಲ ಅಂಕವಾಗಿತ್ತು. ಆದರೆ ಸೇನೆಯೇ ನಿಧಾನಕ್ಕೆ ವಿಘಟಿತಗೊಂಡು ಬಹುದೊಡ್ಡ ಸಂಖ್ಯೆಯ ಸೈನಿಕರು ಸೇನೆಯನ್ನು ತೊರೆದು ಕ್ರಾಂತಿಕಾರಿ ಪಡೆಗಳನ್ನು ಸೇರಿಕೊಂಡಿದ್ದರಿಂದ ಪ್ರತಿಕ್ರಾಂತಿ ನಡೆಗಳು ನಿಧಾನಕ್ಕೆ ದುರ್ಬಲಗೊಳ್ಳುತ್ತಾ ಸಾಗಿದವು. ಆದರೆ ಜಗತ್ತಿನ ಇತರ ಬೃಹತ್ ರಾಷ್ಟ್ರಗಳ ಮಧ್ಯಪ್ರವೇಶ ಹಾಗೂ ಪ್ರತಿಕ್ರಾಂತಿಕಾರಿ ಶಕ್ತಿಗಳಿಗೆ ಅವರು ನೀಡಿದ ಬೆಂಬಲವು ನಂತರ ನಡೆದ ಅಂತರ್ಯುದ್ಧದಲ್ಲಿ ಕ್ರಾಂತಿಕಾರಿ ಕೆಂಪುಸೇನೆಯ ವಿರುದ್ಧ ತಮ್ಮ ಜೀವನ್ಮರಣದ ಕಾಳಗ ನಡೆಸಲು ಶೋಷಕ ವರ್ಗಗಳ ಬಿಳಿಸೇನೆಗೆ ಶಕ್ತಿಯನ್ನು ಪೂರೈಸಿತು. ಆದರೆ ಯೂರೋಪಿನ ಹಲವಾರು ದೇಶಗಳಲ್ಲಿ ಅಲ್ಲಿನ ಕಾರ್ಮಿಕ ವರ್ಗದ ಪಕ್ಷಗಳು ಪ್ರಾರಂಭಿಸಿದ  ರಷಿಯಾದಿಂದ ಹಿಂದೆ ಸರಿಯಿರಿ ಚಳವಳಿಯಿಂದಾಗಿ ಬೃಹತ್ ಶಕ್ತಿಗಳು ರಷಿಯಾದ ಪ್ರತಿಗಾಮಿ ಶಕ್ತಿಗಳಿಗೆ ಕೊನೆಯವರೆಗೂ ಬೆಂಬಲವನ್ನೂ ಮುಂದುವರೆಸಲು ಸಾಧ್ಯವಾಗಲಿಲ್ಲ. ಏಕೆಂದರೆ ಅಂಥಾ ಒಂದು ಸೋವಿಯತ್ ಚಳವಳಿ ತಮ್ಮ ದೇಶಗಳಲ್ಲೂ ಪಾರ್ರಂಭವಾಗಿಬಿಡುವ ಬಗ್ಗೆ ಮತ್ತು ತಾವು ರಷಿಯಾಗೆ ಕಳಿಸಿರುವ ಸೇನೆಯೊಳಗೆ ಒಂದು ಸೈನಿಕ ಬಂಡಾಯವಾಗುವ ಸಾಧ್ಯತೆಯ ಬಗೆಗೆ ಅವರು ತೀವ್ರ ಆತಂಕಗೊಂಡಿದ್ದರು.

ಒಂದು ಕ್ರಾಂತಿಯ ಜೀವನ್ಮರಣದ ಹೋರಾಟದಲ್ಲಿ ಸಾಮಾಜಿಕ ಶಕ್ತಿಗಳು ಅಂತಿಮವಾಗಿ ಯಾರು ನಮ್ಮ ಜೊತೆಗಿಲ್ಲವೋ ಅವರು ನಮ್ಮ ವಿರುದ್ಧವಾಗಿದ್ದಾರೆ ಎಂಬ ರೀತಿಯಲ್ಲಿ ಎರಡು ವಿರುದ್ಧ ಧೃವಗಳಲ್ಲಿ ದೃವೀಕರಣಗೊಳ್ಳುತ್ತಾರೆ. ದುರದೃಷ್ಟವಶಾತ್, ಉದಾರವಾದಿ ಸಮಾಜವಾದಿ ಪಕ್ಷಗಳು ಕ್ರಾಂತಿಕಾರಿ ಬಣವನ್ನು ತೊರೆದು ಪ್ರತಿಕ್ರಾಂತಿಕಾರಿ ಬಣವನ್ನು ಸೇರಿಕೊಂಡರು. ೧೯೧೭ರ ಆಗಸ್ಟ್ನಲ್ಲಿ ಕೊರ್ನಿಲೋವ್ ನಡೆಸಿದ ವಿಫಲ ಕ್ಷಿಪ್ರಕ್ರಾಂತಿಯನ್ನು ಕೆಡೆಟ್ ಪಕ್ಷವು ಬೆಂಬಲಿಸಿತ್ತೆಂಬ ವಾಸ್ತವದಿಂದ ಅವರು ಯಾವ ಪಾಠಗಳನ್ನೂ ಕಲಿತಂತೆ ಕಾಣಲಿಲ್ಲ

ಆದರೆ ೧೯೧೮ರ ಮಾರ್ಚ್ನಲ್ಲಿ  ಜರ್ಮನಿಯೊಂದಿಗೆ ಮಾಡಿಕೊಂಡ ಬ್ರೆಸ್ತ್-ಲಿತೋವೆಸ್ಕ್ ಒಪ್ಪಂದವನ್ನು ವಿರೋಧಿಸಿ ಎಡ ಸಮಾಜವಾದಿ ಕ್ರಾಂತಿಕಾರಿಗಳು ಬೊಲ್ಷೆವಿಕರ ಸಖ್ಯವನ್ನೊ ತೆರೆದದ್ದು ಮಾತ್ರ ಕ್ರಾಂತಿಗೆ ಪ್ರಮುಖ ಹೊಡೆತವನ್ನು ನೀಡಿತು. ೧೯೧೭-೧೯೧೮ರ ಕ್ರಾಂತಿಯ ಪ್ರಾರಂಭದ ಅವಧಿಯಲ್ಲಿ ಇದ್ದ ಸಂದರ್ಭಕ್ಕಿಂತ ೧೯೧೮ರ ಜುಲೈನಲ್ಲಿ ಪ್ರಾರಂಭಗೊಂಡ ಅಂತರ್ಯುದ್ಧವು ಸಂಪೂರ್ಣವಾಗಿ ಭಿನ್ನವಾಗಿತ್ತು. ಏಕೆಂದರೆ ಅದು  ಅತ್ಯಧಿಕ ಲಾಭಗಳನ್ನು ಪಡೆದುಕೊಳ್ಳಲು ನಡೆದ ಅತ್ಯಂತ ಭೀಭತ್ಸ ಮತ್ತು ರಕ್ತಸಿಕ್ತ ಯುದ್ಧವಾಗಿತ್ತು. ಅದು  ಕ್ರಾಂತಿಯ ತರುಣದಲ್ಲಿ ಅತ್ಯಂತ ಅರಾಜಕ ಪರಿಸ್ಥಿತಿಯೆಡೆಗೆ ದೂಡಲ್ಪಟ್ಟಿದ್ದ ದೇಶವೊಂದರ ಅಧಿಕಾರದ ಚುಕ್ಕಾಣಿಯನ್ನು ಯಾರು ಹಿಡಿಯಲಿದ್ದಾರೆ ಎಂಬುದನ್ನು ನಿರ್ಣಯಿಸುವಂಥ ಯುದ್ಧವಾಗಿತ್ತು. ಎರಡು ಬಣಗಳ ನಡುವೆ ಯಾವುದೇ ಒಪ್ಪಂದಗಳು ಸಾಧ್ಯವಿರಲಿಲ್ಲ; ಅದು ಕೊನೆಯ ಸಾವಿನವರೆಗೂ ನಡೆಯುತ್ತಿದ್ದ ಯುದ್ಧವಾಗಿತ್ತು. ಇತಿಹಾಸಕಾರ ಮೋಷೆ ಲೆವಿನ್ ಹೇಳುವಂತೆ (ಸೋವಿಯತ್ ಸೆಂಚುರಿ, ೨೦೦೫, ಪು.೨೯೬) ಲಭ್ಯವಿದ್ದ ಆರ್ಥಿಕ, ಪ್ರಜಾತಾಂತ್ರಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಸೂಚಕಗಳನ್ನಿಟ್ಟುಕೊಂಡು ಹೇಳುವುದಾದದರೆ, ಅಂತರ್ಯುದ್ಧದ ಕೊನೆಯ ವೇಳೆಗೆ ರಷಿಯಾವು ೫೦ ವರ್ಷಗಳಷ್ಟು ಹಿಂದಕ್ಕೆ ಸರಿದಿತ್ತು. ..೧೯೧೭ರಿಂದ ೧೯೨೧ರ ವರೆಗೆ ನಡೆದ ಎಲ್ಲಾ ಘಟನೆಗಳ ಒಟ್ಟು ಪರಿಣಾಮದಿಂದ ರಷಿಯಾದ ಜನತೆಯು ಅಪಾರ ಸಂಕಷ್ಟಗಳಿಗೆ ಮತ್ತು ಅತ್ಯಧಿಕ ನಷ್ಟಗಳಿಗೆ ತುತ್ತಾಗುವಂತೆ ಮಾಡಿತು.
ಹಾಗಾದಲ್ಲಿ ಕ್ರಾಂತಿಯೇನಾಯಿತು? ಸುಸ್ಪಷ್ಟವಾಗಿ ಕ್ರಾಂತಿಯು ಬಡ ರೈತಾಪಿಯನ್ನು, ಸೈನಿಕರನ್ನೂ (ಬಹುಪಾಲು ಅವರು ಕೂಡಾ ಸಮವಸ್ತ್ರ ಧರಿಸಿದ್ದ ರೈತಾಪಿಯೇ) ಮತ್ತು ಕಾರ್ಮಿಕರನ್ನೂ ಒಳಗೊಂಡಿತ್ತು. ಆದರೆ ಸೈನಿಕ ಸಮವಸ್ತ್ರ ಧರಿಸಿದ್ದರೂ ಬಡ ರೈತಾಪಿಯ ಹಿನ್ನೆಲೆಯವರೇ ಆಗಿದ್ದ ಸೈನಿಕರನ್ನು ಸಂಖ್ಯೆಯನ್ನೂ ಪರಿಗಣಿಸಿದರೆ ಕ್ರಾಂತಿಯಲ್ಲಿ ಭಾಗವಹಿಸಿದ ಕ್ರಾಂತಿಕಾರಿ ಶಕ್ತಿಗಳಲ್ಲಿ ಬಡರೈತಾಪಿಯೇ ಬಹುಸಂಖ್ಯಾತರಾಗಿದ್ದರೆಂಬುದರಲ್ಲಿ ಸಂಶಯವಿಲ್ಲ. ಇದರ ಜೊತೆಗೆ ಕೈಗಾರಿಕಾ ಕಾರ್ಮಿಕ ಸಮುದಾಯದಲ್ಲೂ ಬಹುಪಾಲು ಮಂದಿ  ಅರೆ-ಕಾರ್ಮಿಕ, ಅರೆ -ರೈತಾಪಿಯಾಗಿದ್ದರು. ಹೀಗಾಗಿ ಕ್ರಾಂತಿಯು ಪ್ರಧಾನವಾಗಿ ರೈತಾಪಿ ಮೂಲದ್ದೇ ಆಗಿತ್ತು (ದಿ ಸೋವಿಯತ್ ಂಚುರಿ- ಪು. ೨೮೯). ಆದರೆ ಅದಕ್ಕೆ ಬೌದ್ಧಿಕ ನಾಯಕತ್ವ ಕೊಡುತ್ತಿದ್ದವರು, ವಿಶೇಷವಾಗಿ ಲೆನಿನ್ ಅವರು ೧೯೧೭ರಲ್ಲಿ ಹೆಚ್ಚೂಕಮ್ಮಿ ಒಂದು ಅರಾಜಕವಾದಿ-ಸಮಾಜವಾದಿ ಸ್ವರೂಪದಲ್ಲಿ ಬರೆದ ತಮ್ಮ ಸ್ಟೇಟ್ ಅಂಡ್ ರೆವಲ್ಯೂಷನ್ (ಪ್ರಭುತ್ವ ಮತ್ತು ಕ್ರಾಂತಿ) ಎಂಬ ಕೃತಿಯಲ್ಲಿ ಕ್ರಾಂತಿಯೋತ್ತರ ರಷಿಯಾ ಸಮಾಜವು ಭವಿಷ್ಯದಲ್ಲಿ  ಸಮಾಜವಾದಿ ಹಾದಿಯಲ್ಲಿ ಸಾಗುತ್ತದೆಂದು ಭಾವಿಸಿದ್ದರು.

ಲೆನಿನ್ವಾದವನ್ನು ಒಂದೋ ಅವಿರ್ಮಾಶಾತ್ಮಕವಾಗಿ ಆರಾಧಿಸಲಾಗುತ್ತದೆ. ಅಥವಾ ಸಾರಾಸಗಟು ತಿರಸ್ಕರಿಸಲಾಗುತ್ತದೆ. ಇದರ ನಡುವೆ ಎದ್ದು ಕಾಣುವ ಎರಡು ಅಪರೂಪದ ಅಪಾವಾದವೆಂದರೆ ಪಾಲ್ ಲೆ ಬ್ಲಾಂಕ್ ಅವರ ಲೆನಿನ್ ಅಂಡ್ ದಿ ರೆವುಲ್ಯೂಷನರಿ ಪಾರ್ಟಿ (೧೯೮೯) (ಲೆನಿನ್ ಮತ್ತು ಕ್ರಾಂತಿಕಾರಿ ಪಕ್ಷ) ಹಾಗೂ ಲೆವಿನ್ ಅವರ  ದಿ ಸೋವಿಯತ್ ಸೆಂಚುರಿ (ಸೋವಿಯತ್ ಶತಮಾನ). ಒಂದು ಪಕ್ಷದ ಪ್ರಮುಖ ಕರ್ತವ್ಯ ಬಂಡವಾಳವಾದವನ್ನು ಮೂಲೋತ್ಪಾಟನೆ ಮಾಡಲು ಶ್ರಾಮಿಕ ವರ್ಗದ ಪ್ರಜ್ನೆಯನ್ನು ಹೆಚ್ಚಿಸುವುದು ಎಂಬ ಲೆನಿನ್ನರ ಸಾರರೂಪಿ ಮತ್ತು ಸಾರ್ವತ್ರಿಕ ತಿಳವಳಿಕೆಯನ್ನು ಗಮನದಲ್ಲಿಟ್ಟುಕೊಂಡಾಗಲೂ ಪಕ್ಷದ ಬಗ್ಗೆ ಲೆನಿನ್ನರ ಗ್ರಹಿಕೆಗಳು ಆಯಾ ಸಂದರ್ಭಕ್ಕೆ ಪ್ರತಿಸ್ಪಂದಿಯಾಗಿ ರೂಪುಗೊಂಡ ಕೆಲವು ನಿರ್ದಿಷ್ಟ ಅಂಶಗಳನ್ನೂ ಒಳಗೊಂಡಿದ್ದವು ಎಂಬುದನ್ನು ಮರೆಯಲಾಗುವುದಿಲ್ಲ. ಹೀಗಾಗಿ ಒಟ್ಟಾರೆ ಪಕ್ಷದ ಸ್ವರೂಪವು ಹೇಗಿರಬೇಕೆಂಬ ಬಗ್ಗೆ ಅವರ ಪರಿಕಲ್ಪನೆಗಳು ೧೯೦೨-೦೪ (ವಾಟ್ ಈಸ್ ಟು ಬಿ ಡನ್- ಮಾಡಬೇಕಾದುದೇನು- ಬರೆದ ಅವಧಿ)ರಲ್ಲಿ, ೧೯೦೫-೦೬, ೧೯೦೮-೧೨, ೧೯೪-೧೭, ಮತ್ತು ೧೯೧೮-೨೧ರಲ್ಲಿ ಭಿನ್ನಭಿನ್ನವಾಗಿದ್ದವು. ಆದರೆ ಇವುಗಳಲ್ಲಿ ೧೯೧೮-೨೧ರ ಅವಧಿಯಲ್ಲಿ ಗಂಭೀರವಾದ ದ್ವಂದ್ವಗಳು ಮತ್ತು ವೈರುಧ್ಯಗಳು ತಲೆದೋರಿದ್ದನ್ನು ಪ್ರಮುಖವಾಗಿ ಗಮನಿಸಬೇಕು. ಅವಧಿಯಲ್ಲಿ ಪಕ್ಷದಲ್ಲಿ ಅಧಿಕಾರಶಾಹಿ, ಉನ್ನತವರ್ಗೀಯ, ಶ್ರೇಣೀಕೃತ ಹಾಗೂ ಪಕ್ಷವೇ ಇಡೀ ಜನಸಮುದಾಯಕ್ಕೆ ಅಧಿಕಾರಯುತ ನಿರ್ದೇಶನ ನೀಡುವ ಮತ್ತು ಪಕ್ಷದ ಅಂತರಿಕ ಪ್ರಜಾತಂತ್ರವನ್ನು ಕೇಂದ್ರೀಕರಣ ನೀತಿಗಳೇ ಆವರಿಸಿಕೊಳ್ಳುವ ಅಂಶಗಳು ಆಳವಾಗಿ ನೆಲೆಯೂರಲು ಪ್ರಾರಂಭಿಸಿದವು. ಅವಧಿಯಲ್ಲೇ ತಪ್ಪು ಧೋರಣೆಗಳನ್ನು ಸರಿತಿದ್ದುವ ಕ್ರಮಗಳು ಮತ್ತು ನಡೆಗಳು ಅತ್ಯಂತ ಅವಶ್ಯವಿದ್ದವು. ಆದರೆ ಅವ್ಯಾವುದು ಆಗಲಿಲ್ಲ. ಹೀಗಾಗಿ ಲೆವಿನ್ನರು ತಮ್ಮ ಲೆನಿನ್ಸ್ ಲಾಸ್ಟ್ ಸ್ಟ್ರಗಲ್ (೧೯೬೮) (ಲೆನಿನ್ನರ ಅಂತಿಮ ಹೋರಾಟ) ಮತ್ತು ದಿ ಸೋವಿಯತ್ ಸೆಂಚುರಿ ಎಂಬ ಕೃತಿಗಳಲ್ಲಿ ಲೆನಿನ್ವಾದದಲ್ಲಿ ಪಕ್ಷದ ಕುರಿತು ಅದರ  ಸಾರ್ವತ್ರಿಕ ಅಂಶಗಳ ಪರಿಧಿಯೊಳಗೆಯೇ ನಿರ್ದಿಷ್ಟ ಸಂದರ್ಭಗಳಿಗೆ ಪ್ರತಿಸ್ಪಂದಿಯಾಗಿ ರೂಪುಗೊಂಡ ನಿರ್ದಿಷ್ಟ ಅಂಶಗಳ ಬಗ್ಗೆ ಒತ್ತುಕೊಟ್ಟು ಬರೆದಿದ್ದಾರೆ.

ಅವಧಿಯಲ್ಲಿ ಲೆನಿನ್ ಅತ್ಯಂತ ಜರೂರಾಗಿ ಕಾರ್ಯಸಾಧುವಾದ ಗುರಿಗಳನ್ನು ಸಾಧಿಸಿಕೊಳ್ಳುತ್ತಲೇ ದೀರ್ಘಕಾಲಿನ ಸಮಾಜವಾದಿ ಆದರ್ಶಗಳನ್ನು ಮತ್ತು ದೃಷ್ಟಿಕೋನವನ್ನು ಉಳಿಸಿಕೊಳ್ಳುವ ಕಾರ್ಯಸಾಧು ಮಾರ್ಗಗಳ ಅನ್ವೇಷಣೆಯನ್ನು ಪ್ರಾರಂಭಿಸಿದ್ದರು. ಅದರ ಅರ್ಥ ರೈತಾಪಿಯ ಅಗತ್ಯಗಳ ಬಗ್ಗೆ ಹೆಚಿನ ಗಮನವನ್ನು ನೀಡುವುದು ಮತ್ತು ಪಕ್ಷದೊಳಗೆ ಮೆಲ್ಲಗೆ ಅಡಿಯಿಡುತ್ತಿದ್ದ ಸರ್ವಾಧಿಕಾರಿ ವ್ಯವಸ್ಥೆಯನ್ನು ಸರಿತಿದ್ದುವ ಕ್ರಮಗಳನ್ನು ಕೈಗೊಳ್ಳಬೇಕೆಂಬುದೇ ಆಗಿತ್ತು. ಹಾಗೆ ಮಾಡಬೇಕೆಂದರೆ ಇತರ ಎಲ್ಲಾ ಕ್ರಮಗಳ ಜೊತೆಗೆ ಸ್ಟಾಲಿನ್ನರನ್ನು ಪಕ್ಷದ ಪ್ರಮುಖ ಸ್ಥಾನದಿಂದ ಇಳಿಸಬೇಕಿತ್ತು. ನಿರ್ದಿಷ್ಟವಾದ ಪರಿಸ್ಥಿತಿಗಳಲ್ಲಿ ಐತಿಹಾಸಿಕವಾಗಿ ಸಂಭವಿಸುತ್ತಿದ್ದ ಬದಲಾವಣೆಗಳು ಕೇವಲ ಪರಿಸ್ಥಿತಿಯ ಗ್ರಹಿಕೆಯಲ್ಲಿ ಮಾತ್ರವಲ್ಲದೆ ಬದಲಾವಣೆಯ ವ್ಯೂಹತಂತ್ರದಲ್ಲೂ ಮತ್ತು ಸಾಧಿಸಬೇಕಿದ್ದ ಗುರಿಗಳಲ್ಲೂ ಸಹ ಬದಲಾವಣೆಗಳನ್ನು ಅಪೇಕ್ಷಿಸುತ್ತಿತ್ತು. ದುರಂತವೆಂದರೆ ಲೆನಿನ್ವಾದ-ಬೊಲ್ಷೆವಿಕ್ವಾದ ಹಾಗೂ ಸ್ಟಾಲಿನ್ವಾದಗಳ ನಡುವೆ ನಡೆದ ಸಂಘರ್ಷದಲ್ಲಿ ಸರ್ವಾಧಿಕಾರ ಮತ್ತು ಹಿಂಸೆಗೆ ಪ್ರಥಮ ಪ್ರಾಶಸ್ತ್ಯ ಕೊಡುವ ಸ್ಟಾಲಿನ್ವಾದವೇ ಗೆದ್ದಿತು ಮತ್ತು ತನ್ನೆಲ್ಲ ವಿರೋಧಿಗಳನ್ನು ಸರ್ವನಾಶ ಮಾಡಿತು. (ದಿ ಸೋವಿಯತ್ ಸೆಂಚುರಿ, ಪು.೨೯೯,೩೦೦, ೨೯೮ ಮತ್ತು ೩೦೧). ಹಾಗೆಯೇ ಲೆನಿನ್ವಾದಿಗಳು ಸಮಾಜವಾದಿ ನಿರ್ಮಾಣದಲ್ಲಿ ಬಂದ ವಿಕೃತಿಗಳಾದ ಅಧಿಕಾರಶಾಹಿ, ಉಚ್ಚವರ್ಗೀಯ, ಶ್ರೇಣೀಕರಣ ಮತ್ತು ಜನರ ಪ್ರಜ್ನೆಗೆ ಬದಲಾಗಿ ಪಕ್ಷ ನಿರ್ದೇಶನವನ್ನು ಸ್ಥಾಪಿಸುವ ಧೋರಣೆಗಳನ್ನು ತಡೆಗಟ್ಟಬೇಕೆಂದರೆ ಲೆನಿನ್ವಾದ ಮತ್ತು ಬೊಲ್ಷೆವಿಕ್ ವಾದಗಳ ಬಗ್ಗೆ ಶತಮಾನೋತ್ಸವ ಸಂಚಿಕೆಯಲ್ಲಿರುವ ದಿಲೀಪ್ ಸಿಮಿಯೋನ್ ಮತ್ತು ಮಾರ್ಸೆಲ್ ವಾನ್ ಡೆರ್ ಲಿಂಡೆನ್ ಅವರ ಸಮಾಜವಾದಿ ವಿಮರ್ಶೆಗಳು ಮತ್ತು ಒಳನೋಟಗನ್ನು  ಅಂತರ್ಗತಮಾಡಿಕೊಳ್ಳಬೇಕು.

 \  ಕೃಪೆ: Economic and Political Weekly  Nov 4, 2017. Vol. 52. No. 44

                                                                                               










.


ಕಾಮೆಂಟ್‌ಗಳಿಲ್ಲ: