ಶುಕ್ರವಾರ, ಆಗಸ್ಟ್ 18, 2017

ಫಿರಂಗಿ (ಟ್ಯಾಂಕ್) ರಾಷ್ಟ್ರೀಯವಾದ


  ಅನುಶಿವಸುಂದರ್

ಭಾರತದ ರಾಷ್ಟ್ರೀಯವಾದಿ ಪರಿಕಲ್ಪನೆಗಳಿಗೂ ಮತ್ತು ಸಶಸ್ತ್ರಪಡೆಗಳಿಗೂ ನಡುವೆ ಇದ್ದ ಸಂಬಂಧಗಳಲ್ಲಿ ಸ್ಪಷ್ಟವಾದ ಬದಲಾವಣೆಗಳು ಬರುತ್ತಿವೆ.
military tanker in jnu campus ಗೆ ಚಿತ್ರದ ಫಲಿತಾಂಶ

ಹಿಂದೆ ಭಾರತೀಯರನ್ನು ನಾಗರಿಕರನ್ನಾಗಿಸುವ ಜವಾಬ್ದಾರಿಯನ್ನು ಬಿಳಿಯರು ತಮ್ಮ ಮೇಲೆ ತಾವೇ ಹೇರಿಕೊಂಡಿದ್ದರು. ಅದೇ ರೀತಿ ಇಂದು ಹಾಲಿ ಕೇಂದ್ರ ಸರ್ಕಾರ ಪ್ರತಿಯೊಬ್ಬ ಭಾರತೀಯನನ್ನು ರಾಷ್ಟ್ರೀಯವಾದಿಂiiನ್ನಾಗಿ ಮಾಡುವ ಜವಾಬ್ದಾರಿಯನ್ನು ತನ್ನ ಮೇಲೆ ಹೇರಿಕೊಂಡಿದೆ. ಇದರ ಹಿಂದೆ  ಭಾರತೀಯರು ಎಷ್ಟು ರಾಷ್ಟ್ರೀಯವಾದಿಗಳಾಗಿರಬೇಕಿತ್ತೋ ಅಷ್ಟು ರಾಷ್ಟ್ರೀಯವಾದಿಗಳಾಗಿಲ್ಲವೆಂಬ ತರ್ಕವಿರುವುದು ಸ್ಪಷ್ಟ. ಗುರಿಯನ್ನು ಸಾಧಿಸಲು ಅದು ಅನುಸರಿಸುತ್ತಿರುವ ವಿಧಾನವೇನೆಂದರೆ ಸಶಸ್ತ್ರಪಡೆಗಳ ಬಗ್ಗೆ ಗೌರವ ಮತ್ತು ಭಯವನ್ನು ಮೂಡಿಸುವುದು. ಭಾರತದ ಸೈನ್ಯದ ಮುಖ್ಯಸ್ಥರಾದ ಬಿಪಿನ್ ರಾವತ್ ಅವರು ಹೇಳಿದಂತೆ  ಜನರು ನಮ್ಮನ್ನು ಕಂಡರೆ ಭಯಪಡಬೇಕು. ಇದು ಭಾರತದ ರಾಷ್ಟ್ರೀಯವಾದಿ ಪರಿಕಲ್ಪನೆಗಳಿಗೂ ಮತ್ತು ಸಶಸ್ತ್ರಪಡೆಗಳಿಗೂ ನಡುವೆ ಇದ್ದ ಸಂಬಂಧಗಳಲ್ಲಿ ಸ್ಪಷ್ಟವಾದ ಬದಲಾವಣೆಯನ್ನು ಸೂಚಿಸುತ್ತದೆ. ಸೈನಿಕರೆಂದರೆ ದೇಶದ ರಕ್ಷಣೆ ಮಾಡಲು ಸಾರ್ವಜನಿಕರ ಹಣದಿಂದ ವೇತನ ಪಡೆಯುವ ಸಾರ್ವಜನಿಕ ಸೇವಕರೆಂಬ ಚಿತ್ರಣವು ಮಾಯವಾಗುತ್ತ ರಾಷ್ಟ್ರೀಯತೆಯ ಬಗ್ಗೆ ನಾಗರಿಕರಿಗೆ ಪಾಠ ಕಲಿಸುವ ಶಿಕ್ಷಕನೆಂಬ ಚಿತ್ರಣ ರೂಪು ಪಡೆಯುತ್ತಿದೆ.

ಸೈನ್ಯದ ಆರಾಧನೆಯ ಇತ್ತೀಚಿನ ಉದಾಹರಣೆಯೆಂದರೆ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯ (ಜೆಎನ್ಯು) ಉಪಕುಲಪತಿ ಎಮ್. ಜಗದೀಶ್ ಕುಮಾರ್ ಅವರು ತಮ್ಮ ವಿಶ್ವವಿದ್ಯಾಲಯದ ಆವರಣದಲ್ಲಿ ಭಾರತೀಯ ಸೈನ್ಯದ ಟ್ಯಾಂಕರ್ (ಫಿರಂಗಿ) ಒಂದನ್ನು ಪ್ರದರ್ಶನಕ್ಕಿಡಲು ಕೋರಿ ಬರೆದಿರುವ ಪತ್ರ. ವಿಶ್ವವಿದ್ಯಾಲಯದ ಪ್ರಮುಖ ಸ್ಥಳವೊಂದರಲ್ಲಿ ಭಾರತೀಯ ಸೈನ್ಯದ ಟ್ಯಾಂಕರ್ ಒಂದನ್ನು ಪ್ರತಿಷ್ಠಾಪಿಸುವ ಮೂಲಕ ವಿದ್ಯಾರ್ಥಿಗಳಲ್ಲಿ  ರಾಷ್ಟ್ರೀಯತೆಯ ಭಾವನೆಯನ್ನೂ ಮತ್ತು ಭಾರತೀಯ ಸೈನ್ಯವು ಮಾಡಿರುವ ಅಮೋಘ ತ್ಯಾಗಗಳನ್ನು ಮತ್ತು ತೋರಿದ ಶೌರ್ಯಗಳನ್ನು ಸದಾ ಜಾಗೃತಗೊಳಿಸಲು ಅವರು ಬಯಸಿದ್ದಾರೆ. ಮನವಿಯನ್ನುಅವರು ಜೆಎನ್ಯು ವಿಶ್ವವಿದ್ಯಾಲಯದಲ್ಲಿ ಪ್ರಪ್ರಥಮ ಬಾರಿಗೆ ನಡೆಸಲಾದ ಕಾರ್ಗಿಲ್ ವಿಜಯ ದಿನದ ಸಮಾರಂಭಕ್ಕೆ ಆಗಮಿಸಿದ್ದ ಕೇಂದ್ರದ ಮಂತ್ರಿಗಳಾದ ವಿ.ಕೆ. ಸಿಂಗ್ ಮತ್ತು ಧರ್ಮೇಂದ್ರ ಪ್ರಧಾನ್ ಅವರಿಗೆ  ಸಲ್ಲಿಸಿದರು. ಯೋಜನೆಯು ಜೆಎನ್ಯುವಿನ  ವಿಚ್ಚಿದ್ರಕಾರಿ-ದೇಶದ್ರೋಹಿ ಮನೋಭಾವದ ವಿದ್ಯಾರ್ಥಿಗಳನ್ನು ದೇಶಭಕ್ತರನ್ನಾಗಿ ಮಾಡಲು ಕೈಗೊಂಡಿರುವ ಸರಣಿ ಕಾರ್ಯಕ್ರಮಗಳ ಭಾಗವಾಗಿದೆ. ಒಂದು ವರ್ಷದ ಕೆಳಗೆ ಕೇಂದ್ರದ ಅಂದಿನ ಮಾನವ ಸಂಪನ್ಮೂಲ ಮಂತ್ರಿಗಳಾಗಿದ್ದ ಸ್ಮೃತಿ ಇರಾನಿಯವರು ಎಲ್ಲಾ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲೂ ದೊಡ್ಡ ದೊಡ್ಡ ರಾಷ್ಟ್ರಧ್ವಜಗಳನ್ನು ಸ್ಥಾಪಿಸಬೇಕೆಂದು ಒತ್ತಾಯಿಸಿದ್ದರು. ಆದರೆ ಅಂಥ ಒಂದು ರಾಷ್ಟ್ರ ಧ್ವಜವು ಜೆಎನ್ಯುನಲ್ಲಿ ಬಹಳ ವರ್ಷಗಳಿಂದಲೂ ಹಾರಾಡುತ್ತಿದೆಯೆಂದು ನಂತರ ಅವರಿಗೆ ಗೊತ್ತಾಯಿತು. ಇದರಿಂದ ನಿರಾಶರಾದ ಅವರು ಸೈನ್ಯದ ಅಧಿಕಾರಿಗಳನ್ನು ಕರೆಸಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ದೇಶಭಕ್ತಿಯ ಪಾಠ ಮಾಡಿಸುವ ಮತ್ತೊಂದು ಯೋಜನೆಯನ್ನು ಮುಂದಿಟ್ಟರು. ಆದರೆ ಆಕೆಯ ದುರದೃಷ್ಟ. ಅವರ ಖಾತೆಯೇ ಬದಲಾವಣೆಯಾಗಿ ತಮ್ಮ ಎಲ್ಲಾ  ಗಮನವನ್ನು ಜವಳಿ ಕ್ಷೇತ್ರದ ಮೇಲೆ ಕೇಂದ್ರೀಕರಿಸುವಂತೆ ಅವರಿಗೆ ಸೂಚಿಸಲಾಯಿತು.

ಸರ್ಕಾರಕ್ಕೆ ಒಂದು ಸಮಾಜದಲ್ಲಿ ವಿಶ್ವವಿದ್ಯಾಲಯಗನ್ನು ಸ್ಥಾಪಿಸುವ  ಉದ್ದೇಶವೇನು ಎಂಬುದರ ಬಗ್ಗೆ  ಕಿಂಚಿತ್ತೂ ತಿಳವಳಿಕೆ ಇದ್ದಂತೆ ಕಾಣುತ್ತಿಲ್ಲ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಅದೇನೇ ಇದ್ದರೂ ಸೈನಿಕರನ್ನು ಧರೆಗಿಳಿದು ಬಂದಿರುವ ದೇವತೆಗಳಂತೆ ಪರಿಗಣಿಸುವಂತಾ ರೀತಿಯಲ್ಲಿ ನಡೆಯುತ್ತಿರುವ ಬದಲಾವಣೆಗಳು ಮಾತ್ರ ಇನ್ನೂ ಹೆಚ್ಚು ಗಾಬರಿ ಮೂಡಿಸುವಂತಿದೆ. ಬೆಳವಣಿಗೆಯು ಹೀಗೆ ಮುಂದುವರೆದರೆ ಪ್ರಜಾತಾಂತ್ರಿಕ ಸಂಸ್ಥೆಗಳನ್ನೇ ಅಪಾಯಕ್ಕೊಡ್ಡಬಹುದು.
ಸೈನಿಕರನ್ನು ದೇಶಪ್ರೇಮದ ರೂಪಕವನ್ನಾಗಿಸುವುದು ಹೊಸತೇನಲ್ಲ. ಆದರೆ ವಸಾಹತುಶಾಹಿ ವಿರೋಧಿ ಹೋರಾಟಗಳ ಮೂಲವನ್ನು ಹೊಂದಿರುವ ಭಾರತೀಯ ರಾಷ್ಟ್ರೀಯವಾದವು ವಸಾಹತು ಆಡಳಿತದ ಬಳುವಳಿಯಾಗಿ ಮುಂದುವರೆದ ಸಶಸ್ತ್ರಪಡೆಗಳ ಜೊತೆಗೆ ಅಂಥಾ ಆಪ್ತ ಸಂಬಂಧವನ್ನೇನೂ ಹೊಂದಿರಲಿಲ್ಲ. ಸ್ವಾತಂತ್ರ್ಯ ಪಡೆದ ನಂತರದ ಪ್ರಾರಂಭಿಕ ವರ್ಷಗಳಲ್ಲಂತೂ ಸೈನ್ಯವನ್ನು ಕಠಿಣ ನಾಗರಿಕ ನಿಯಂತ್ರಣಕ್ಕೊಳಪಟ್ಟ ವೃತ್ತಿಪರ ಪಡೆಯೆಂದೇ ಪರಿಗಣಿಸಲಾಗಿತ್ತು. ಒಬ್ಬ ಆದರ್ಶ ರಾಷ್ಟ್ರೀಯವಾದಿಯೆಂದರೆ ಒಂದೋ ಖಾದಿಧಾರಿ ಸತ್ಯಾಗ್ರಹಿ ಅಥವಾ ಸಾವಿಗೂ ಹೆದರದ ಕ್ರಾಂತಿಕಾರಿಯೆಂಬ ಚಿತ್ರಣವೇ ಪ್ರಧಾನವಾಗಿತ್ತು. ಇಂದು ಅವೆರಡೂ ಸ್ಥಾನವನ್ನು ಸೈನಿಕ ಆಕ್ರಮಿಸಿದ್ದಾನೆ. ೧೯೬೫ರಲ್ಲಿ ಭಾರತ-ಪಾಕಿಸ್ತಾನದ ಯುದ್ಧದ ಸಂದರ್ಭದಲ್ಲಿ ಅಂದಿನ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿಯವರು ಜೈ ಜವಾನ್- ಜೈ ಕಿಸಾನ್ ಎಂಬ ಘೋಷಣೆಯನ್ನು ಹುಟ್ಟುಹಾಕಿದರುಅದರ ಉದ್ದೇಶ ೧೯೬೨ರ ಚೀನಾ-ಭಾರತ ಯುದ್ಧದಿಂದಾಗಿ ಸ್ಥೈರ್ಯಗೆಟ್ಟಿದ್ದ ಸೈನ್ಯದಲ್ಲಿ ಉತ್ಸಾಹ ತುಂಬುವುದಾಗಿತ್ತು. ಆದರೆ ಅದರಲ್ಲೂ ಹೆಗಲಿಗೆ ಹೆಗಲಾಗಿ ನಿಂತ ರೈತ ಮತ್ತು ಸೈನಿಕರಿಬ್ಬರೂ ಆದರ್ಶ ರಾಷ್ಟ್ರ ಸೇವಕರೆಂಬ ಚಿತ್ರಣವೇ ಇತ್ತು. ನಂತರ ಪ್ರಧಾನ ಮಂತ್ರಿ ವಾಜಪೇಯಿ ಅವರು ಘೊಷಣೆಯನ್ನು ಜೈ ಜವಾನ್, ಜೈ ಕಿಸಾನ್, ಜೈ ವಿಜ್ನಾನ್ ಎಂದು ವಿಸ್ತರಿಸುವ ವೇಳೆಗೆ ಭಾರತ ರಾಷ್ಟ್ರೀಯವಾದವು ಉನ್ಮತ್ತ ಸೈನ್ಯವಾದದೊಂದಿಗೆ ಬೆರೆತುಹೋಗಿತ್ತು. ೧೯೯೮ರಲ್ಲಿ ನಡೆಸಲಾದ ಪೋಕ್ರಾನ್ ಅಣುಸ್ಫೋಟವು ಅದಕ್ಕೆ ಅಗತ್ಯವಿದ್ದ ಸಂದರ್ಭವನ್ನು ಒದಗಿಸಿತ್ತು. ಹಾಗೂ ಭಾರತವು ಒಂದು ಅಣ್ವಸ್ತ್ರ ಸಜ್ಜಿತ ರಾಷ್ಟ್ರವಾಗಿ ಉಗಮಗೊಂಡಿದೆಯೆಂಬ ಗರ್ವವೂ ಅದರೊಂದಿಗೆ ಸೇರಿಕೊಂಡಿತು. ಎರಡೂ ಘೋಷಣೆಗಳ ಕಾಲಾವಧಿಯ ನಡುವೆ ೧೯೭೧ರಲ್ಲಿ ಮತ್ತೊಂದು ಯುದ್ಧ ನಡೆದಿತ್ತು. ಹಾಗೂ ೧೯೭೪ರಲ್ಲಿ ಪ್ರಪ್ರಥಮ ಭಾರತೀಯ ಅಣ್ವಸ್ತ್ರ ಪರೀಕ್ಷೆಯನ್ನೂ ನಡೆಸಲಾಗಿತ್ತು. ಆದರೆ ೧೯೯೦ರ ಕೊನೆಯ ಭಾಗದಲ್ಲಾಗಲೇ ಶಾಂತಿ ಮತ್ತು ನಿಶ್ಯಸ್ತ್ರೀಕರಣದ ಬಗ್ಗೆ ಭಾರತದ ತೋರಿಕೆಯ ಬದ್ಧತೆಯ ಮಾತುಗಳು ಕೊನೆಗೊಂಡಿದ್ದವು. ಹೀಗಾಗಿ ೧೯೯೯ರ ಕಾರ್ಗಿಲ್ ಯುದ್ಧದ ಸ್ಮರಣೆಂi ಸಂದರ್ಭದಲ್ಲಿ ಸೈನ್ಯದ ಫಿರಂಗಿಯನ್ನು ಶೈಕ್ಷಣಿಕ ಸಾಧನವನ್ನಾಗಿ ಬಳಸಬೇಕೆಂಬ ಆಲೋಚನೆ ಮೂಡಿರುವುದರಲ್ಲಿ ಆಶ್ಚರ್ಯವೇನಿಲ್ಲ.  

ಇಂದು ಸೈನ್ಯಾಧಿಕಾರಿಗಳೇ ಆದರ್ಶ ರಾಷ್ಟ್ರೀಯವಾದಿಗಳೆಂದು ಸಂಭ್ರಮಿಸುತ್ತಿರುವ ಹೊತ್ತಿನಲ್ಲೇ ಸಶಸ್ತ್ರಪಡೆಗಳ ಕಾರ್ಯನಿರ್ವಹಣೆಯಲ್ಲಿ ರಾಜಕೀಯ ಮಧ್ಯಪ್ರವೇಶವೂ ಹೆಚ್ಚಾಗುತ್ತಿದೆ. ಇಬ್ಬರು ಹಿರಿಯ ಅಧಿಕಾರಿಗಳ ಸೇವಾ ಹಿರಿತನವನ್ನು ಕಡೆಗಣಿಸಿ ಇಂದಿನ ಸೇನಾ ಮುಖ್ಯಸ್ಥರಾದ ಬಿಪಿನ್ ರಾವತ್ ಅವರಿಗೆ ಪದವಿಯನ್ನು ನೀಡಲಾಗಿದೆ. ಹಿಂದೆ ಇಂದಿರಾಗಾಂಧಿಯವರ ಕಾಲದಲ್ಲೂ ಸೇವಾ ಹಿರಿತನವನ್ನು ಪರಿಗಣನೆಗೆ ತೆಗೆದುಕೊಳ್ಳದೆ ಅರುಣ್ ವೈದ್ಯ ಅವರಿಗೆ ಇದೇ ಸ್ಥಾನವನ್ನು ನೀಡಲಾಗಿತ್ತು. ಹೀಗಾಗಿ ಸೇವಾ ಹಿರಿತನದ ಕಡೆಗಣನೆಯಲ್ಲಿ ಹೊಸತಿಲ್ಲ. ಆದರೆ ಹಾಲೀ ಸೇನಾ ಮುಖ್ಯಸ್ಥರು ಯಾವುದೇ ನಿಯಂತ್ರಣಕೊಳ್ಳಪಡದೇ ಎಂಥದ್ದೇ ಸಾರ್ವಜನಿಕ ಘೋಷಣೆ ಮತ್ತು ಹೇಳಿಕೆಗಳನ್ನು ನೀಡಲು ಕೊಟ್ಟಿರುವ ಸ್ವಾತಂತ್ರ್ಯವನ್ನು ಮಾತ್ರ ಹಿಂದೆಂದೂ ಯಾವ ಸೇನಾ ಮುಖ್ಯಸ್ಥರಿಗೂ ಕೊಟ್ಟಿರಲಿಲ್ಲ. ಉದಾಹರಣೆಗೆ ಕಾಶ್ಮಿರದಲ್ಲಿ ಸೇನಾ ತುಕಡಿಯೊಂದು ತನ್ನ ಜೀಪಿನ ಮುಂದೆ ಕಾಶ್ಮೀರಿಯೊಬ್ಬನನ್ನು ಕಟ್ಟಿಹಾಕಿ ಮಾನವ ಗುರಾಣಿಯನ್ನಾಗಿ ಬಳಸಿಕೊಂಡಿದ್ದನ್ನು ಸಮರ್ಥಿಸಿಕೊಂಡು ಅವರು ನೀಡಿದ ಆಘಾತಕಾರಿ ಹೇಳಿಕೆಗೆ ಯಾರೂ ಯಾವ ವಾಗ್ದಂಡನೆಯನ್ನೂ ವಿಧಿಸಲಿಲ್ಲ. ವಿಪರ್ಯಾಸವೆಂದರೆ ಅವರ ಹೇಳಿಕೆಯನ್ನು ಖಂಡಿಸಿದ ಸಾರ್ವಜನಿಕರು ರಾಷ್ಟ್ರ ವಿರೋಧಿಗಳೆಂಬ ಆರೋಪಕ್ಕೆ ಗುರಿಯಾಗಬೇಕಾಯಿತು.

ಉತ್ತರ ಬಂಗಾಳ ವಿಶ್ವವಿದ್ಯಾಲಯದ ಆವರಣದಲ್ಲಿ ಕಳೆದ ೪೦ ವರ್ಷಗಳಿಂದಲೂ ಒಂದು ಸೇನಾ ಫಿರಂಗಿ ಇದೆ. ಆದರೆ ಅದು ಬೇರೊಂದು ವಿದ್ಯಮಾನದ ರೂಪಕವಾಗಿದೆ. ಅದು ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ ಭಾರತ ಸೇನೆಯು ವಶಪಡಿಸಿಕೊಂಡ ಪಾಕಿಸ್ತಾನದ ಟ್ಯಾಂಕರ್. ಅದು ಬಾಹ್ಯ ಶತ್ರುವಿನ ವಿರುದ್ಧದ ಭಾರತದ ಸೇನಾ ವಿಜಯವನ್ನು ಸಂಕೇತಿಸುತ್ತದೆ. ಆದರೆ ಜೆಎನ್ಯು ವಿನ ಉಪಕುಲಪತಿಯು ವಿಶ್ವವಿದ್ಯಾಲಯದ ಆವರಣದಲ್ಲಿ ಭಾರತೀಯ ಸೇನಾಪಡೆಯ ಟ್ಯಾಂಕರ್ ಒಂದನ್ನು ಸ್ಥಾಪಿಸಬೇಕೆಂದು ಕೋರುತ್ತಿದ್ದಾರೆ. ಕಾರಣವೇನೆಂದರೆ ವಿಶ್ವವಿದ್ಯಾಲಯವು ರಾಷ್ಟ್ರದ್ರೋಹಿಗಳ ಅಡ್ಡೆಯಾಗಿದೆಯೆಂದು ಕೆಲವು ಸ್ವಘೋಷಿತ ರಾಷ್ಟ್ರೀಯವಾದಿಗಳು ಮಾಡಿರುವ ಆರೋಪ. ಇಂಥಾ ಒಂದು ವಿದ್ಯಮಾನದ ಪರಿಣಾಮವೇನಾಗುತ್ತದೆ ಎಂಬ ಬಗ್ಗೆ ಯಾರಿಗಾದರೂ ಅನುಮಾನವಿದ್ದರೆ ಅವರು ಕಾರ್ಗಿಲ್ ಯುದ್ಧದ ಸ್ಮರಣೆ ಸಮಾರಂಭದಲ್ಲಿ ಇತರರು ಮಾಡಿದ ಭಾಷಣವನ್ನು ಗಮನಿಸಬಹುದು.

  ಸಮಾರಂಭದಲ್ಲಿ ಮಾತನಾಡಿದ ಖ್ಯಾತ ಕ್ರಿಕೆಟಿಗ ಗೌತಮ್ ಗಂಭೀರ್ ಅವರು ನಾಗರಿಕರಿಗೆ ಸೇನೆಯನ್ನು ಪ್ರಶ್ನಿಸುವ ಹಕ್ಕಿಲ್ಲ ಎಂದು ಘೋಷಿಸಿದರು. ಮತ್ತೊಬ್ಬ ಭಾಷಣಕಾರರಾದ ಖ್ಯಾತ ಬರಹಗಾರ ರಾಜೀವ್ ಮಲ್ಹೋತ್ರಾ ಅವರು  ಸಮಾರಂಭವು ಕೇವಲ ಬಾಹ್ಯ ಯುದ್ಧದಲ್ಲಿ ಕಾರ್ಗಿಲ್ ಅನ್ನು ಮರಳಿ ಗೆದ್ದುಕೊಂಡ ಸ್ಮರಣೆ ಸಮಾರಂಭ ಮಾತ್ರವಲ್ಲ. ಬದಲಿಗೆ ಅಂತರಿಕ ಯುದ್ಧದಲ್ಲಿ ಜೆಎನ್ಯು ಮರಳಿ ವಶಪಡಿಸಿಕೊಳ್ಳುತ್ತಿರುವ ಸಮಾರಂಭವೂ ಆಗಿದೆ ಎಂದು ವ್ಯಾಖ್ಯಾನಿಸಿದರು. ನಿವೃತ್ತ ಸೇನಾಧಿಕಾರಿ ಜಿ.ಡಿ. ಭಕ್ಷಿಯವರಂತೂ ನಾವು ಜೆಎನ್ಯು ವನ್ನು ಗೆದ್ದುಕೊಂಡಿದ್ದಕ್ಕೆ ಮಾತ್ರ ಸಂತೃಪ್ತಿಪಡದೆ ಹೈದರಾಬಾದ್ ಮತ್ತು ಜಾಧವ್ಪುರ್ ವಿಶ್ವವಿದ್ಯಾಲಯದ ಕೋಟೆಗಳನ್ನೂ ವಶಪಡಿಸಿಕೊಳ್ಳಲು ಸಮರ ಸಾರಬೇಕೆಂದು ಅಬ್ಬರಿಸಿದರು. ಇವು ಒಬ್ಬ ಉಪಕುಲಪತಿಗಳ ಉಪಸ್ಥಿತಿಯಲ್ಲಿ ಒಂದು ಸಾರ್ವಜನಿಕ ಕಾರ್ಯಕ್ರಮದಲ್ಲಿ ಆಡಿದ ಮಾತುಗಳು. ಹಾಲೀ ಆಡಳಿತದಡಿ ಸೈನಿಕತ್ವದ ವಿಜೃಂಭಣೆಗಳು ಮತ್ತು ಅದು ಮಾತ್ರ ರಾಷ್ಟ್ರೀಯವಾದದ ಅತ್ಯುನ್ನತ ದ್ಯೋತಕವೆಂಬ ರಾಜಕೀಯ ದಿನೇದಿನೇ ಹೆಚ್ಚುತ್ತಿರುವುದು ಸ್ಪಷ್ಟವಾಗುತ್ತಿದೆ.

  ಕೃಪೆ: Economic and Political Weekly
           Aug 5, 2017. Vol. 52. No. 31

                                                                                              







ಕಾಮೆಂಟ್‌ಗಳಿಲ್ಲ: