ಅನು: ಶಿವಸುಂದರ್
ಗೋರಖ್ಪುರ್ ಆಸ್ಪತ್ರೆಯೊಂದರಲ್ಲಿ ಸಂಭವಿಸಿರುವ ೭೦ ಹಸುಕಂದಮ್ಮಗಳ ಸಾವು ಇಡೀ ದೇಶವನ್ನು ತಪ್ಪಿತಸ್ಥರ ಸ್ಥಾನದಲ್ಲಿ ನಿಲ್ಲಿಸಿದೆ.
ಭಾರತದ ೭೦ನೇ ಸ್ವಾತಂತ್ರ್ಯ ದಿನದ ಆಸುಪಾಸಿನಲ್ಲಿ ೭೦ಕ್ಕೂ ಹೆಚ್ಚು ಹಸುಗೂಸುಗಳು ಗೋರಖ್ಪುರ್ನ ಆಸ್ಪತೆಯೊಂದರಲ್ಲಿ ಉಸಿರಿಗಾಗಿ ಪರದಾಡುತ್ತಾ ಅಸುನೀಗಿದವು. ಈ ದೇಶದ ನೈಜ ಸ್ಥಿತಿಗತಿಗಳನ್ನು ಇದಕ್ಕಿಂತ ಬೆತ್ತಲಾಗಿ ತೆರದಿಡುವ ಮತ್ತೊಂದು ವಿದ್ಯಮಾನವು ಇರಲಾರದು. ಉತ್ತರಪ್ರದೇಶದ ಗೋರಖ್ಪುರದ ಬಾಬಾ ರಾಘವ್ ದಾಸ್ (ಬಿಆರ್ಡಿ) ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆಗಸ್ಟ್ ೧೦ರ ಮಧ್ಯರಾತ್ರಿ ಮತ್ತು ಆಗಸ್ಟ್ ೧೧ರ ಬೆಳಗಿನ ಜಾವದ ನಡುವೆ (ರಾತ್ರಿ ೧೧ರಿಂದ ಮಧ್ಯರಾತ್ರಿ ೨ಗಂಟೆಯ ನಡುವೆ) ೩೦ ಎಳೆಗೂಸುಗಳು ಉಸಿರಾಡಲಾಗದೆ ಮೃತಪಟ್ಟವು. ಆ ಮಕ್ಕಳ ಅಪ್ಪ-ಅಮ್ಮಂದಿರೇ ಕೃತಕವಾಗಿ ಉಸಿರುಕೊಡಲು ತುಂಬಾ ಪ್ರಯತ್ನಪಟ್ಟರೂ ಫಲ ನೀಡಲಿಲ್ಲ. ಏಕೆಂದರೆ ಆ ಆಸ್ಪತ್ರೆಯಲ್ಲಿದ್ದ ದ್ರವೀಕೃತ ಆಕ್ಸಿಜನ್ ಟ್ಯಾಂಕುಗಳು ಖಾಲಿಯಾಗಿದ್ದವು.
ತಮ್ಮ ಕಂದಮ್ಮಗ ಪುಟ್ಟ ಮೃತದೇಹವನ್ನು ತಬ್ಬಿಕೊಂಡು ಅತ್ತೂ ಅತ್ತೂ ಸೊರಗಿ ಕೃಶವಾದ ಮುಖಹೊತ್ತು ಆಸ್ಪತ್ರೆಯಿಂದ ಹೊರಬೀಳುತ್ತಿದ್ದ ಪೋಷಕರ ಚಿತ್ರಗಳನ್ನು ಮಾಧ್ಯಮಗಳು ಜಗತ್ತಿನಾದ್ಯಂತ ಬಿತ್ತರಿಸುತ್ತಿದ್ದಂತೆ ರಾಜ್ಯ ಸರ್ಕಾರವು ಎಚ್ಚೆತ್ತುಕೊಂಡಿತು. ಹಾಗೂ ಸಾಮಾನ್ಯವಾಗಿ ಇಂಥಾ ಸಂದರ್ಭಗಳಲ್ಲಿ ನಮ್ಮ ಸರ್ಕಾರಗಳು ಏನನ್ನೂ ಮಾಡುತ್ತಾ ಬಂದಿವೆಯೋ ಅದನ್ನೇ ಮಾಡಿತು. ಎಂದಿನಂತೆ ಈ ದುರಂತಕ್ಕೆ ಹೊಣೆಮಾಡಬೇಕಾದ ಬಲಿಪಶುಗಳನ್ನು ಗುರುತಿಸಲು ಒಂದು ವಿಚಾರಣಾ ಸಮಿತಿಯನ್ನು ಉತ್ತರಪ್ರದೇಶ ರಾಜ್ಯ ಸರ್ಕಾರ ನೇಮಕ ಮಾಡಿತು. ಸರ್ಕಾರದ ಪ್ರಕಾರ ಮಕ್ಕಳು ಸತ್ತಿದ್ದು ಸೋಕಿನಿಂದಲೇ ಹೊರತು ವೈದ್ಯಕೀಯ ನಿರ್ಲಕ್ಷ್ಯದಿಂದಲೂ ಅಲ್ಲ. ಅಥವಾ ಆಕ್ಸಿಜನ್ ಸರಬರಾಜುದಾರರಿಗೆ ದೀರ್ಘಕಾಲದಿಂದ ಹಣ ಪಾವತಿ ಮಾಡದೇ ಇದ್ದಿದ್ದರಿಂದ ಉಂಟಾದ ಆಕ್ಸಿಜನ್ ಕೊರತೆಯಿಂದಲೂ ಅಲ್ಲ್ಲ. ಹೀಗೆ ಉತ್ತರಪ್ರದೇಶ ಸರ್ಕಾರವು ವಿಚಾರಣೆಯು ಪೂರ್ಣಗೊಳ್ಳುವ ಮುನ್ನವೇ ಮತ್ತು ಮರಣೋತ್ತರ ಪರೀಕ್ಷೆಗಳನ್ನು ಸಹ ಮಾಡದೇ ತನ್ನ ತೀರ್ಮಾನವನ್ನು ಘೋಷಿಸಿದೆ. ಮತ್ತು ಈ ಪತ್ರಿಕೆ ಅಚ್ಚಿಗೆ ಹೋಗುವ ಮುನ್ನ ದೊರೆತ ಸಮಾಚಾರದ ಪ್ರಕಾರ ಆಗಸ್ಟ್ ೧೪-೧೬ರ ನಡುವೆ ಇನ್ನೂ ೩೪ ಮಕ್ಕಳು ಆ ಆಸ್ಪತ್ರೆಯ ಮಕ್ಕಳ ತೀವ್ರ ನಿಗಾ ಘಟಕದಲ್ಲಿ ಮತ್ತು ಮೆದುಳುಜ್ವರದ ವಾರ್ಡಿನಲ್ಲಿ ಸಾವನ್ನಪ್ಪಿವೆ.
ಭಾರತದಲ್ಲಿ ದಾಖಲಾಗುವ ಜಪನೀಸ್ ಎನ್ಸಿಫಲೈಟಿಸ್ (ಮೆದುಳು ಜ್ವರ) ಪ್ರಕರಣಗಳಲ್ಲಿ ಶೇ.೭೫ರಷ್ಟು ಪ್ರಕರಣಗಳು ಉತ್ತರಪ್ರದೇಶವೊಂದರಲ್ಲೇ ದಾಖಲಾಗುತ್ತವೆ. ಹಾಗೂ ಉತ್ತರಪ್ರದೇಶ ರಾಜ್ಯದಲ್ಲಿ ಅತಿ ಹೆಚ್ಚು ಮೆದುಳುಜ್ವರದ ಪ್ರಕರಣಗಳು ಗೋರಖ್ಪುರದಲ್ಲಿ ದಾಖಲಾಗುತ್ತವೆ. ಇದು ತೀವ್ರ ರೀತಿಯಲ್ಲಿ ಮೆದುಳುಜ್ವರ ಕುರುಹುಗಳಿಂದ (ಆಕ್ಯೂಟ್ ಎನ್ಸಿಫಲೈಟಿಸ್ ಸಿಂಡ್ರೋಮ್) ಬಾಧೆಗೊಳಗಾಗುವವರ ಸಂಖ್ಯೆಯನ್ನೂ ಒಳಗೊಂಡಿದೆ. ಆಕ್ಯೂಟ್ ಎನ್ಸಿಫಲೈಟಿಸ್ ಸಿಂಡ್ರೋಮ್ ಎಂಬುದು ನಂತರದಲ್ಲಿ ಮೆದುಳುಬಾವಿನ ಮತ್ತು ಮೆದುಳು ಜ್ವರಗಳ ಖಾಯಿಲೆಗೆ ತುತ್ತಾಗುವವರು ತೋರುವ ಕುರುಹುಗಳಿಗೆ ಮತ್ತೊಂದು ಹೆಸರು. ಅತ್ಯಗತ್ಯವಾದ ಪ್ರಾಥಮಿಕ ಕೇಂದ್ರಗಳ ಕೊರತೆ ಇರುವುದರಿಂದ (ಉದಾಹರಣೆಗೆ ಗೋರಖ್ಪುರ
ಜಿಲ್ಲೆಯಲ್ಲಿ ೧೨೦ ಪ್ರಾಥಮಿಕ ಆರೋಗ್ಯ ಕೇಂದ್ರಗಳಿರಬೇಕು. ಆದರೆ ಇರುವುದು ಕೇವಲ ೯೦.) ರೋಗಿಗಳು ಉನ್ನತ ತಪಾಸಣೆ ಮತ್ತು ಶೂಶ್ರೂಷೆಗಳಿಗಾಗಿ ದೂರದೂರುಗಳಿಗೆ ತೆರಳದೆ ಗತ್ಯಂತರವಿಲ್ಲ. ಹೀಗಾಗಿ ಅನಿವಾರ್ಯವಾಗಿ ಗೋರಖ್ಪುರದ ಬಿಆರ್ಡಿಯಂಥ ಆಸ್ಪತ್ರೆಗಳ ಮೇಲೆ ಮೆದುಳು ಜ್ವರ ಬಾಧಿತರಿಗೆ ಮತ್ತು ತೀವ್ರ ಮೆದುಳುಬಾವಿನ ಕುರುಹುಗಳುಳ್ಳ ರೋಗಿಗಳಿಗೆ ಇಲಾಜು ಮಾಡುವ ಸಂಪೂರ್ಣ ಹೊಣೆಗಾರಿಕೆ ಬೀಳುತ್ತದೆ. ಏಕೆಂದರೆ ಬಿಆರ್ಡಿ ಆಸ್ಪತ್ರೆಯು ೩೦೦ ಕಿಮೀ ವ್ಯಾಪ್ತಿಯಲ್ಲಿ ಇರುವ ಏಕೈಕ ರೆಫರಲ್ ಆಸ್ಪತ್ರೆಯಾಗಿದ್ದು ಸುತ್ತಮುತ್ತಲ ೧೫ ಜಿಲ್ಲೆಗಳ ರೋಗಿಗಳಿಗೆ ಸೇವೆಯನ್ನು ಒದಗಿಸುತ್ತದೆ.
ಪರಿಸ್ಥಿತಿ ಹೀಗಿರುವಾಗ ಸೊಳ್ಳೆಗಳಂಥ ಕೀಟಗಳ ಕಡಿತದಿಂದ ಹರಡುವ ಈ ರೋಗವನ್ನು ನಿಯಂತ್ರಿಸುವ ಕ್ರಮಗಳನ್ನೇಕೆ ತೆಗೆದುಕೊಳ್ಳಲಾಗಿಲ್ಲ? ಸಾರ್ವತ್ರಿಕ ಸೋಂಕು ಪ್ರತಿಬಂಧಕ ಯೋಜನೆಯಡಿ ಮೆದುಳುಜ್ವರವನ್ನು ನಿಗ್ರಹಿಸುವ ಲಸಿಕೆಗಳನ್ನು ೨೦೦೬ರಲ್ಲೇ ಒದಗಿಸಲಾಗಿತ್ತು. ಆದರೆ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್- ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್) ೨೦೧೫ರಲ್ಲಿ ಮಾಡಿದ ಸಮೀಕ್ಷೆಯ ಪ್ರಕಾರ ಗೋರಖ್ಪುರ ವಲಯದ ಬಹುಪಾಲು ಮಕ್ಕಳಿಗೆ ಒಂದೋ ಈ ಲಸಿಕೆಯನ್ನು ನೀಡಿರಲಿಲ್ಲ ಅಥವಾ ಕಡ್ಡಾಯವಾಗಿ ನೀಡಬೇಕಿದ್ದ ಎರಡು ಡೋಸುಗಳಲ್ಲಿ ಒಂದನ್ನು ಮಾತ್ರ ನೀಡಲಾಗಿತ್ತು. ಮತ್ತೊಂದು ಕಡೆ ಈ ರೋಗ ಹರಡುವುದನ್ನು ತಡೆಗಟ್ಟಬಲ್ಲ ಕೀಟ ನಿಯಂತ್ರಣ, ಪರಿಣಾಮಕಾರಿ ನಿಗಾ ವ್ಯವಸ್ಥೆ, ಪ್ರಾಥಮಿಕ ಸೂಚನೆ ಕಂಡ ತಕ್ಷಣ ಮಧ್ಯಪ್ರವೇಶ ಮಾಡುವಂಥ ಮತ್ತು ಈ ಕಾಯಿಲೆ ಹರಡಲು ನೆರವಾಗುವ ನೈರ್ಮಲ್ಯರಹಿತ ವಾತಾವರಣವನ್ನು ಸರಿಪಡಿಸುವಂಥ ಯಾವ ಕ್ರಮಗಳನ್ನೂ ತೆಗೆದುಕೊಂಡಿರಲಿಲ್ಲ.
ಕೆಲವು ಅಪವಾದಗಳನ್ನು ಬಿಟ್ಟರೆ, ನಮ್ಮ ಸಾರ್ವಜನಿಕ ಆರೋಗ್ಯ ರಕ್ಷಣೆಯ ದುರ್ಭರ ವ್ಯವಸ್ಥೆಯಲ್ಲಿ ಲಭ್ಯವಾಗುವ ಅಲ್ಪಸ್ವಲ್ಪ ಸೌಲಭ್ಯಗಳೂ ಸಹ ಉತ್ತರಪ್ರದೇಶದ ಮಾತ್ರವಲ್ಲ, ಇಡೀ ದೇಶದಲ್ಲಿ ಬಡವರಿಗೆ ಎಟುಕುತ್ತಿಲ್ಲ ಎಂಬುದು ನಮ್ಮೆಲ್ಲರಿಗೂ ತಿಳಿದ ವಿಷಯವೇ. ಉತ್ತರಪ್ರದೇಶದಲ್ಲಿ ಮಾತ್ರವಲ್ಲದೆ ದೇಶದೆಲ್ಲೆಡೆ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಗಟ್ಟಿಗೊಳಿಸಬೇಕಾದ ಅಗತ್ಯವಿದೆ. ಆಗ ಮಾತ್ರ ಉನ್ನತ ಹಂತದ ಬಿಆರ್ಡಿಯಂಥ ಆಸ್ಪತ್ರೆಗಳ ಮೇಲೆ ನಿಭಾಯಿಸಸಾಧ್ಯವಾದ ಹೊರೆ ಬೀಳುವುದು ತಗ್ಗುತ್ತದೆ. ಮತ್ತೊಂದು ಕಡೆ ಬಿಆರ್ಡಿ ಯಂಥ ಆಸ್ಪತ್ರೆಗಳಲ್ಲಿನ ಸಿಬ್ಬಂದಿಗಳ ಕೊರತೆ ಮತ್ತು ದಶಕಗಳಿಂದ ಕಂಡುಬರುತ್ತಿರುವ ಇಂಥಾ ರೋಗಗಳ ಇಲಾಜು ಮಾಡಲು ಬೇಕಾದ ಮೂಲಭೂತ ಉಪಕರಣಗಳ ಕೊರತೆಯೂ ಕೂಡಾ ಪರಿಸ್ಥಿತಿಯ ಗಂಭೀರತೆಯನ್ನು ಮತ್ತಷ್ಟು ಉಲ್ಬಣಗೊಳಿಸಿದೆ. ವಾಸ್ತವವೆಂದರೆ ೨೦೧೬ರ ಮಹಾ ಲೇಖಪಾಲರ ವರದಿಯ ವರದಿಯ ಪ್ರಕಾರ ಈ ಆಸ್ಪತ್ರೆಯಲ್ಲಿ ಶೇ.೨೭ರಷ್ಟು ವೈದ್ಯಕೀಯ ಉಪಕರಣಗಳ ಕೊರತೆಯಿದೆ. ಮೇಲಾಗಿ, ಈ ಮೆದುಳುಜ್ವರದ ಇಲಾಜಿಗೆ ಉನ್ನತ ಹಂತದ ಆಸ್ಪತ್ರೆಗೆ ರೋಗಿಯನ್ನು ಕರೆದೊಯ್ಯುವ ಮುನ್ನ ಅದರ ತಾಪವನ್ನು ತಗ್ಗಿಸಿ ರೋಗಿಯ ಸ್ಥಿತಿಯನ್ನು ಸ್ಥಿರವಾಗಿಸುವ ಉದ್ದೇಶದಿಂದ ೨೦೧೩ರಲ್ಲಿ ೧೦೪ ವಿಶೇಷ ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಆದರೆ ಬಿಆರ್ಡಿ ಅಸ್ಪತ್ರೆಯ ವೈದ್ಯರುಗಳು ಹೇಳುವಂತೆ ಅವುಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಅದೇನೇ ಇರಲಿ, ಬಹಳಷ್ಟು ಜನರಿಗೆ ಇಂಥಾ ತಾತ್ಕಾಲಿಕ ಕೇಂದ್ರಗಳಲ್ಲಿ ಕೊಡುವ ಚಿಕಿತ್ಸೆಗಳ ಮೇಲೆ ಭರವಸೆ ಇರುವುದಿಲ್ಲ. ಹೀಗಾಗಿ ಇಂಥಾ ವಿಶೇಷ ಕೇಂದ್ರಗಳು ಬಿಆರ್ಡಿಯಂಥಾ ಆಸ್ಪತ್ರೆಗಳ ಮೇಲಿನ ಹೊರೆಯನ್ನೇನೂ ತಗ್ಗಿಸಿಲ್ಲ. ಇವುಗಳ ಜೊತೆಗೆ ನೇಮಕಾತಿ ಮತ್ತು ಖರೀದಿಗಳಲ್ಲಿ ಅಧಿಕಾರಶಾಹಿಯ ಮಧ್ಯಪ್ರವೇಶಗಳು. ಇವೆಲ್ಲದರ ಒಟ್ಟುಮೊತ್ತವಾಗಿ ಅತಿಯಾದ ಹೊರೆಯಿಂದ ತತ್ತರಿಸುವ ಮತ್ತು ಸಾಮರ್ಥ್ಯಹೀನವಾಗಿರುವ ಸಾರ್ವಜನಿಕ ಆಸ್ಪತ್ರೆಯು ಸೃಷ್ಟಿಯಾಗಿದೆ.
ಆಶ್ಚರ್ಯವೆಂದರೆ,
(ಅಥವಾ ಇದಕ್ಕೆ ಆಶ್ಚರ್ಯ ಪಡಲೂ ಬೇಕಿಲ್ಲವೇನೋ..) ೩೦ ಕೂಸುಗಳ ಸಾವಿನ ಸುದ್ದಿ ಹೊರಬಂದ ಕೆಲವೇ ದಿನಗಳಲ್ಲಿ ಕೇಂದ್ರ ಮಂತ್ರಿ ನಿತಿನ್ ಗಡ್ಕರಿಯವರು ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ಬೇಕಾಗುವ ಭೂಮಿ ಇತ್ಯಾದಿ ಸೌಲಭ್ಯಗಳನ್ನು ನೀಡಿ, ಜನರಿಗೆ ಆರೋಗ್ಯಸೇವೆಯನ್ನು ಒದಗಿಸುವ ವ್ಯವಹಾರದಲ್ಲಿ ಖಾಸಗಿಯವರನ್ನು ಒಳಗೊಳ್ಳುವ ಸರ್ಕಾರದ ಅತ್ಯಂತ ಪ್ರೀತಿಪಾತ್ರ ಯೋಜನೆಯನ್ನು ಪುನರುಚ್ಚರಿಸಿದರು. ಸಾರ್ವಜನಿಕ ಆಸ್ಪತ್ರೆಗಳಲ್ಲಿರುವ ಸೌಕರ್ಯಗಳ ಕೊರತೆಯನ್ನು ಖಾಸಗಿ ಸಂಸ್ಥೆಗಳು ಪೂರೈಸುತ್ತವೆಂದು ಅವರು ಹೇಳಿದರು. ಎರಡನೇ ಮತ್ತು ಮೂರನೇ ಹಂತದ ಪಟ್ಟಣಗಳಲ್ಲಿ ನಿರ್ದಿಷ್ಟ ರೋಗಗಳ ನಿವಾರಣೆಗಾಗಿ ಸ್ಥಾಪಿಸಲಾಗಿರುವ ಸಾರ್ವಜನಿಕ ಆಸ್ಪತ್ರೆಗಳನ್ನು ಖಾಸಗೀಕರಿಸಬೇಕೆಂಬ ಪ್ರಸ್ತಾಪವನ್ನು ನೀತಿ ಅಯೋಗವೂ ಸಹ ಮುಂದಿಟ್ಟಿದೆ. ಆರೋಗ್ಯ ಸೇವೆಗಳಲ್ಲಿ ಸಾರ್ವಜನಿಕ-ಖಾಸಗಿ ಪಾಲುದಾರಿಕೆಯ ಸೇವೆಗಳು ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಿದೆಯೆಂಬ ಬಗ್ಗೆ ಯಾವುದೇ ಅಧ್ಯಯನಪೂರ್ಣ ಮಾಹಿತಿಗಳಿಲ್ಲ. ಆದರೆ ಪತ್ರಿಕಾವರದಿಗಳನ್ನು ಗಮನಿಸುವುದಾದರೆ ಅಂಥಾ ಯೋಜನೆಗಳಿಂದ ಬಡಜನರಿಗೆ ಯಾವುದೇ ಪ್ರಯೋಜನವಾಗಿಲ್ಲ.
ಬಿಆರ್ಡಿ ಆಸ್ಪತ್ರೆಯದ್ದು ಸರ್ಕಾರದ ನಿರ್ಲಕ್ಷ್ಯದ ಕಥನವೇ ಆಗಿದ್ದರೂ ಅದು ಕೇವಲ ಹಣಕಾಸು ಸಂಪನ್ಮೂಲದ ಕೊರತೆಯ ಕಥನವಾಗಿಲ್ಲ. ಅದು ಬಡಜನರ ಅಗತ್ಯಗಳ ಬಗೆಗಿರುವ ತಾತ್ಸಾರದ ಕಥನವೂ ಆಗಿದೆ. ಈ ದುರಂತ ಪರಿಸ್ಥಿತಿಯನ್ನು ಖಾಸಗಿ ಬಂಡವಾಳದ ಚುಚ್ಚುಮದ್ದು ಕೊಡುವ ಮೂಲಕ ಉತ್ತಮ ಪಡಿಸಲು ಸಾಧ್ಯವಿಲ್ಲ. ಬದಲಿಗೆ ಆರೋಗ್ಯ ಸೇವೆಯಲ್ಲಿ ಹೆಚ್ಚಿನ ಸಾರ್ವಜನಿಕ ಹೂಡಿಕೆಯಾಗಬೇಕು. ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿನ ಸೌಕರ್ಯಗಳನ್ನು ಉತ್ತಮಪಡಿಸಬೇಕು. ಸಿಬ್ಬಂದಿಗಳನ್ನು ಹೆಚ್ಚಿಸಬೇಕು. ಹಾಗೂ ಬಡಜನರಿಗೆ ತಪಾಸಣೆಯ ಸೇವೆಯನ್ನು ಉಚಿತವಾಗಿಯೂ ಮತ್ತು ಔಷಧಿಗಳನ್ನು ಎಟುಕುವ ಬೆಲೆಯಲ್ಲಿ ದೊರೆಯುವಂತೆ ಮಾಡಬೇಕು. ಆಗ ಮಾತ್ರ ಪರಿಸ್ಥಿತಿಯನ್ನು ಉತ್ತಮಗೊಳ್ಳುತ್ತದೆ. ಹಲವಾರು ವರ್ಷಗಳಿಂದ ಈ ಬೇಡಿಕೆಗಳನ್ನು ಎಲ್ಲಾ ಸರ್ಕಾರಗಳ ಮುಂದೆಯೂ ಮಂಡಿಸುತ್ತಲೇ ಬರಲಾಗಿದೆ. ಆದರೂ ಪ್ರತಿಬಾರಿ ಗೋರಖಪುರದಲ್ಲಿ ನಡೆದಂಥ ದುರಂತ ಸಂಭವಿಸಿದಾಗ ಎದೆಎದೆ ಬಡಿದುಕೊಂಡು ಸದ್ದು ಮಾಡಲಾಗುತ್ತದೆಯೇ ವಿನಃ ಸಾರ್ವಜನಿಕ ಆರೋಗ್ಯ ಸೇವಾ ವ್ಯವಸ್ಥೆಯ ನಿರ್ಲಕ್ಷ್ಯವೆಂಬ ನಿಜವಾದ ಖಾಯಿಲೆಗೆ ನಿರ್ದಿಷ್ಟ ಮತ್ತು ನಿಖರವಾದ ಚಿಕಿತ್ಸೆ ಕೊಡುವ ಯಾವ ಸಣ್ಣ ಕ್ರಮಗಳಿಗೂ ಸರ್ಕಾರ ಮುಂದಾಗುತ್ತಿಲ್ಲ.
ಕೃಪೆ: Economic and Political Weekly
Aug 19, 2017. Vol. 52. No. 33
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ