ಅನು: ಶಿವಸುಂದರ್
ಆರ್ಥಿಕ ಸಮೀಕ್ಷೆಯ ಸಂಪುಟ-೨ ಸೃಜನಶೀಲವಾಗಿದ್ದರೂ ನವ ಉದಾರವಾದಿ ಆರ್ಥಿಕ ಸುಧಾರಣೆಗಳ ಚೌಕಟ್ಟನ್ನು ಮೀರುವುದಿಲ್ಲ.
ಈವರೆಗೆ ಪಾಲಿಸಿಕೊಂಡು ಬಂದ ಸಂಪ್ರದಾಯಗಳಿಗೆ ಭಿನ್ನವಾಗಿ, ೨೦೧೬-೧೭ರ ಆರ್ಥಿಕ ಸಮೀಕ್ಷೆಯ ಎರಡನೇ ಸಂಪುಟವನ್ನು, ಈ ಸಾಲಿನ ಬಜೆಟ್ಟನ್ನು ಮಂಡಿಸಿದ ಬಹುದಿನಗಳ ನಂತರ ಏನೂ ಸದ್ದು ಗದ್ದಲವಿಲ್ಲದೆ ಬಿಡುಗಡೆ ಮಾಡಲಾಗಿದೆ. ದೇಶದಲ್ಲಿ ಕಳೆದ ವರ್ಷ ನೋಟು ನಿಷೇಧ, ಜಿಎಸ್ಟಿಯ ಜಾರಿ ಮತ್ತು ಕೃಷಿ ಬಿಕ್ಕಟ್ಟಿನಂಥ ಹಲವಾರು ಪ್ರಮುಖ ವಿದ್ಯಮಾನಗಳು ಸಂಭವಿಸಿವೆ. ಅವುಗಳು ದೇಶದ ಆರ್ಥಿಕತೆಯ ಮೇಲೆ ಯಾವ ಬಗೆಯ ಪರಿಣಾಮ ಬೀರಿವೆ ಎಂದು ಅರ್ಥಮಾಡಿಕೊಳ್ಳಲು ಅನುಕೂಲವಾಗುವ ಯಾವುದೇ ವ್ಯವಸ್ಥಿತ ವಿಶ್ಲೇಷಣೆಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ಆಗಲೀ, ಹಣಕಾಸು ಸಚಿವಾಲಯವಾಗಲೀ ಈವರೆಗೆ ಹೊರತಂದಿಲ್ಲ. ಇದರಿಂದ ಉಂಟಾಗಿದ್ದ ನಿರ್ವಾತವನ್ನು ಈ ಸಮೀಕ್ಷೆಯು ಸ್ವಲ್ಪ ಮಟ್ಟಿಗೆ ತುಂಬಿಕೊಡುತ್ತದೆ. ಈ ಸಂಪುಟದಲ್ಲಿ ತನ್ನ ವಿಶ್ಲೇಷಣೆಗೆ ಮತ್ತು ತಾನು ಮಾಡಿರುವ ಭವಿಷ್ಯದ ಪ್ರಸ್ತಾಪಿತ ಯೋಜನೆಗೆ ಪೂರಕವಾಗಿ ಪಾರದರ್ಶಕವಾದ ದತ್ತಾಂಶಗಳನ್ನು ಮತ್ತು ಅಂಕಿಅಂಶಗಳನ್ನು ಸಮೀಕ್ಷೆಯು ನೀಡಿದೆ. ಈ ಪಾರದರ್ಶಕತೆಯು ಪ್ರಶಂಸನಾರ್ಹವಾಗಿದೆ. ಏಕೆಂದರೆ ಅದು ಅಧಿಕೃತ ಕಥನಗಳಿಗೆ ಪರ್ಯಾಯವಾದ ವ್ಯಾಖ್ಯಾನಗಳನ್ನು ಸಾಧ್ಯಗೊಳಿಸುತ್ತದೆ. ದತ್ತಾಂಶಗಳನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಬಿಡುಗಡೆ ಮಾಡಿರುವುದೂ ಸಹ ಅಷ್ಟೇ ಸ್ವಾಗತಾರ್ಹವಾಗಿದೆ. ಆದರೆ ಈ ದತ್ತಾಂಶಗಳ ಪರ್ಯಾಯ ವ್ಯಾಖ್ಯಾನಗಳು ಭಾರತದ ಆರ್ಥಿಕತೆಯ ಬಗ್ಗೆ ನಿರಾಶಾದಾಯಕ ಚಿತ್ರಣವನ್ನೇ ನೀಡುತ್ತದೆ. ಆರ್ಥಿಕ ಸುಧಾರಣೆಗಳನ್ನು ರೂಪಿಸುವ ಮತ್ತು ಕಾರ್ಯಗತಗೊಳಿಸುವ ಪ್ರಕ್ರಿಯೆಯಲ್ಲಿ ವಿತರಣಾ ನ್ಯಾಯದ ಗುರಿಗಳನ್ನು ಲೆಕ್ಕಕ್ಕೆ ಇಟ್ಟುಕೊಳ್ಳದ ಆರ್ಥಿಕ ಸಿದ್ಧಾಂತವೇ ಈ ಆರ್ಥಿಕ ಸಮೀಕ್ಷೆಯ ಸಿದ್ಧಾಂತವೂ ಆಗಿದೆಯೆಂಬುದು ಗೊತ್ತಾಗುತ್ತದೆ.
ಈ ಸಮೀಕ್ಷೆಯು ಜಿಎಸ್ಟಿ ವ್ಯವಸ್ಥೆಯು ರಾಜ್ಯಗಳ ಸ್ವಾಯತ್ತತೆಯ ಪ್ರಶ್ನೆಯನ್ನು ನಿರ್ಲಕ್ಷಿಸಿರುವ ಅಂಶವನ್ನು ಗಣನೆಗೇ ತೆಗೆದುಕೊಳ್ಳುವುದಿಲ್ಲ. ಆ ಅಂಶವನ್ನು ಹೊರತುಪಡಿಸಿ ನೋಡಿದರೆ ಜಿಎಸ್ಟಿ ವ್ಯವಸ್ಥೆಯಿಂದ ಒದಗುವ ಗುಪ್ತ ಮತ್ತು ಬಹಿರಂಗ ಲಾಭಗಳನ್ನು ಈ ಸಮೀಕ್ಷೆಯು ಮನವರಿಕೆ ಮಾಡಿಕೊಡುತ್ತದೆ. ೨೦೧೪ರ ಮಾರ್ಚ್ನಿಂದಾಚೆಗಿನ ಹಣದುಬ್ಬರದ ಬಗ್ಗೆ ಮಾಡಿರುವ ವಿಶ್ಲೇಷಣೆಯು ವಿಶ್ವಾಸಾರ್ಹವಾಗಿದೆ. ಅಂತರರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಮೂಲಭೂತ ಸ್ಥಿತ್ಯಂತರಗಳಾಗಿವೆ. ಭೂಗರ್ಭದೊಳಗಿನ ಹಾಳೆಕಲ್ಲುಗಳ ಪದರಗಳಿಂದ ತೈಲ ಮತ್ತು ಅನಿಲ (ಶೇಲ್ ಆಯಿಲ್ ಅಂಡ್ ಗ್ಯಾಸ್) ಗಳನ್ನು ಪಡೆದುಕೊಳ್ಳುವ ತಂತ್ರಜ್ನಾನದಲ್ಲಿ ಆಗಿರುವ ಮುನ್ನಡೆಯಿಂದಾಗಿ ಸದ್ಯಕ್ಕೆ ತೈಲವನ್ನು ರಫ್ತು ಮಾಡುವ ದೇಶಗಳ (ಒಪಿಇಸಿ) ಮಾರುಕಟ್ಟೆ ಶಕ್ತಿಯು ಕುಸಿದಿದೆ. ಹೀಗಾಗಿ ಸದ್ಯಕ್ಕಂತೂ ಕಚ್ಚಾತೈಲದ ಬೆಲೆಯು ಅಗ್ಗವೂ ಮತ್ತು ಸ್ಥಿರವೂ ಆಗಿರಲಿದೆ. ಜೊತೆಗೆ ನವೀಕರಿಸಬಹುದಾದ ಇಂಧನಗಳು ಅಗ್ಗದ ದರದಲ್ಲಿ ಲಭ್ಯವಾಗುವುದೂ ಸಹ ಇಂಧನಗಳ ಒಟ್ಟಾರೆ ಬೆಲೆಯು ಏರದಂತೆ ಕಡಿವಾಣ ಹಾಕಲಿದೆ. ಈ ಕಡಿಮೆ ಹಣದುಬ್ಬರದ ಕುರುಹುಗಳಿಗೆ ಕಾರಣವಾಗಿರುವ ಮತ್ತೊಂದು ಅಂಶವೆಂದರೆ ಆಹಾರ ಧಾನ್ಯಗಳ ಬೆಲೆಗಳಲ್ಲಿ ಆಗುತ್ತಿರುವ ಇಳಿಕೆ. ವಿವೇಚನಾಯುತ ಕನಿಷ್ಟ ಬೆಂಬಲ ಬೆಲೆಗಳು ಮತ್ತು ಅದರ ಜೊತೆಜೊತೆಗೆ ಪಂಜಾಬ್, ಹರಿಯಾಣ, ಉತ್ತರಪ್ರದೇಶ ಮತ್ತು ಇತ್ತೀಚಿನ ದಿನಗಳಲ್ಲಿ ಮಧ್ಯಪ್ರದೇಶಗಳಂಥ ಅಧಿಕ ಇಳುವರಿ ಮತ್ತು ತೀವ್ರ ನೀರಾವರಿ ಯೋಜನೆಗಳಿಗೆ ಒಳಪಟ್ಟ ರಾಜ್ಯಗಳಿಂದ ದ್ವಿದಳ ಧಾನ್ಯಗಳನ್ನು ಪರಿಣಾಮಕಾರಿಯಾಗಿ ಸಂಗ್ರಹ ಮಾಡುತ್ತಿರುವುದರಿಂದ ಅವುಗಳ ಬೆಲೆಯಲ್ಲಿ ಸ್ಥಿರತೆಯನ್ನು ಸಾಧಿಸಲಾಗಿದೆ ಎಂದು ಹೇಳಲಾಗಿದೆ. ಆದರೆ ಇದು ಆಹಾರ ಧಾನ್ಯಗಳ ನಿರ್ವಹಣೆಯ ಶಾಶ್ವತ ಗುಣಲಕ್ಷಣಗಳಾಗಿರುತ್ತದೆಂಬುದೇನೂ ಖಾತರಿಯಲ್ಲ. ಏಕೆಂದರೆ ಕಳೆದ ಒಂದೂವರೆ ದಶಕದಲ್ಲಿ ಸಾರ್ವಜನಿಕ ಸಂಸ್ಥೆಗಳು ತಮ್ಮ ಆಹಾರ ಧಾನ್ಯಗಳ ಸಾಗಾಣಿಕಾ ಮತ್ತು ನಿರ್ವಹಣಾ ವೆಚ್ಚವನ್ನು ಭರಿಸಲಾಗದೆ ಮುಕ್ತ ಮಾರುಕಟ್ಟೆಯಲ್ಲಿ ಮಾರಿ ಕೈತೊಳೆದುಕೊಂಡ ಎಷ್ಟೋ ಉದಾಹರಣೆಗಳಿವೆ. ಸದ್ಯಕ್ಕಂತೂ ಆಹಾರ ಧಾನ್ಯಗಳ ನಿರ್ವಹಣೆಗೆ ಅನುಸರಿಸಲಾದ ಕ್ರಮಗಳು ಸಕಾರಾತ್ಮಕ ಸೂಚನೆಗಳನ್ನು ಕೊಡುತ್ತಿವೆ ಎಂಬ ಆರ್ಥಿಕ ಸಮೀಕ್ಷೆಯ ಗ್ರಹಿಕೆಗಳು ಸಮಂಜಸವಾಗಿದೆ ಎನ್ನಬಹುದು.
ಕೃಷಿ ಸಾಲ ಮನ್ನಾ: ಆರ್ಥಿಕತೆಯ ಮೇಲೆ ಸ್ಥೂಲ ಪರಿಣಾಮಗಳು (ಫಾರ್ಮ್ ಲೋನ್ ವೇವರ್ಸ್: ಮ್ಯಾಕ್ರೋ ಎಕನಾಮಿಕ್ ಇಂಪ್ಯಾಕ್ಟ್) ಎಂಬ ಶೀರ್ಷಿಕೆಯಡಿ ಈ ಸಮೀಕ್ಷೆಯು ಸಾಲ ಮನ್ನ ಯೊಜನೆಗಳ ಸುದೀರ್ಘವಾದ ಪರಾಮರ್ಶೆಯನ್ನು ಮಾಡುತ್ತದಲ್ಲದೆ ಹಲವಾರು ಬಗೆಯ ಅಂಕಿಅಂಶಗಳನ್ನೂ ಒದಗಿಸುತ್ತದೆ. ಉತ್ತರ ಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ಪಂಜಾಬ್ ಮತ್ತು ತಮಿಳುನಾಡು- ಈ ಐದು ರಾಜ್ಯಗಳು ಕೃಷಿ ಸಾಲ ಮನ್ನಾವನ್ನು ಘೋಷಿಸಿವೆ. ಕ್ರಮೇಣವಾಗಿ ಎಲ್ಲಾ ರಾಜ್ಯಗಳು ಸಹ ಉತ್ತರಪ್ರದೇಶದ ಮಾದರಿಯನ್ನು ಅನುಸರಿಸಿ ಕೃಷಿ ಸಾಲ ಮನ್ನಾ ಮಾಡಬಹುದೆಂದು ಊಹಿಸಿರುವ ಈ ಆರ್ಥಿಕ ಸಮೀಕ್ಷೆಯು ಅದರ ರಾಜ್ಯವಾರು ವೆಚ್ಚವನ್ನು ಊಹಿಸಿದೆ. ಹಾಗೂ ಅವೆಲ್ಲದರ ಒಟ್ಟು ಮೊತ್ತ ೨.೨ -೨.೭ ಲಕ್ಷ ಕೋಟಿಯಷ್ಟಾಗಬಹುದೆಂದು ಅಂದಾಜಿಸಿದೆ. ಆದರೆ ಕೃಷಿ ಸಾಲ ಮನ್ನಾದ ಹೊರೆಯನ್ನು ಆಯಾ ರಾಜ್ಯಗಳು ತಮ್ಮ ತಮ್ಮ ರಾಜಸ್ವದಿಂದಲೇ ಭರಿಸಬೇಕೆಂದು ಘೋಷಿಸಿರುವ ಕೇಂದ್ರ ಸರ್ಕಾರ ಒಂದು ರಾಜಕೀಯ ಮಿತಿಯನ್ನು ನಿಗದಿಮಾಡಿಬಿಟ್ಟಿದೆ. ಒದು ವೇಳೆ ಎಲ್ಲಾ ರಾಜ್ಯಗಳು ಈ ಸಾಲ ಮನ್ನಾ ಯೋಜನೆಯನ್ನು ಜಾರಿಗೆ ತಂದಲ್ಲಿ ಒಟ್ಟಾರೆ ಗ್ರಾಹಕಬೇಡಿಕೆಯಲ್ಲಿ ೧.೧ಲಕ್ಷ ಕೋಟಿಯಷ್ಟು ಅಂದರೆ ಒಟ್ಟಾರೆ ರಾಷ್ಟ್ರೀಯ ಉತ್ಪನ್ನದ ಶೇ.೭ರಷ್ಟು ಕುಸಿತ ಉಂಟಾಗಬಹುದೆಂದು ಎಚ್ಚರಿಸಿದೆ. ಇದರಿಂದಾಗಿ ಈಗಾಗಲೇ ವೇಗವನ್ನು ಕಳೆದುಕೊಳ್ಳುತ್ತಿರುವ ಆರ್ಥಿಕತೆಗೆ ಹಣದಿಳಿವಿನ (ಡಿಪ್ಲೇಷನರಿ) ಆಘಾತವನ್ನು ಕೊಟ್ಟಂತಾಗುತ್ತದೆಂದೂ ಸಹ ಅದು ಕಳವಳ ವ್ಯಕ್ತಪಡಿಸಿದೆ. ಆದರೆ ಇದು ಗಟ್ಟಿಯಾದ ಬುನಾದಿಯಿಲ್ಲದ ಬಹಳ ಊಹಾತ್ಮಕವಾದ ಕಳವಳವೆಂದಷ್ಟೇ ಹೇಳಬಹುದು.
ಕೆಲವು ಕ್ಷೇತ್ರಗಳ ಬಗ್ಗೆ ಈ ಸಮೀಕ್ಷೆಯ ವಿಶ್ಲೇಷಣೆಯು ತುಂಬಾ ನಿರಾಶಾದಾಯಕವಾಗಿದೆ. ಮೊದಲನೆಯದು ಕಳೆದೆರಡು ವರ್ಷಗಳಲ್ಲಿ ಉತ್ತಮ ಮಳೆ ಮತ್ತು ಬೆಳೆಗಳು ಬಂದರೂ ಕೃಷಿ ಬಿಕ್ಕಟ್ಟು ಕಡಿಮೆಯಾಗದ ದ್ವಂದ್ವದ ಕುರಿತು ಮಾಡಿರುವ ವಿಶ್ಲೇಷಣೆ. ಈ ಅಂಶವನ್ನು ತತ್ಕ್ಷಣದ ಮತ್ತು ಅಲ್ಪಕಾಲಿನ ಚೌಕಟಿನಲ್ಲಿ ವಿಶ್ಲೇಷಣೆ ಮಾಡಲಾಗಿದೆ. ಆದರೆ ಕೃಷಿ ಬಿಕ್ಕಟ್ಟು ತುಂಬಾ ಕಾಲದಿಂದಲೂ ಮುಂದುವರೆದುಕೊಂಡು ಬಂದಿದೆ. ರೈತಾಪಿಯು ಅನಿಶ್ಚಿತ ಆದಾಯದ ಜೊತೆಗೆ ಸದಾ ಕಾಲ ಸಾಲದ ಭಾರವನ್ನೂ ಸಹ ಹೊತ್ತುಕೊಂಡೇ ಬಂದಿದೆ. ಗ್ರಾಮೀಣವಾಸಿಗಳ ಒಟ್ಟಾರೆ ಸಾಲದಲ್ಲಿ ಸಾಂಸ್ಥಿಕ ಸಾಲಗಳ ಪ್ರಮಾಣ ತೀರಾ ಕಡಿಮೆ. ಲೇವಾದೇವಿಗಾರರು ಮತ್ತು ಬಡ್ಡಿವ್ಯಾಪಾರಿಗಳಂಥ ಆಸಾಂಸ್ಥಿಕ ಸಾಲದ ಮೂಲಗಳೇ ಹೆಚ್ಚು. ಈ ಸಮಸ್ಯೆಯನ್ನು ದಶಕದ ಹಿಂದೆಯೇ ಸ್ಪಷ್ಟವಾಗಿ ಗುರುತಿಸಿದ್ದರೂ ಸರ್ಕಾರಗಳು ಅದರ ಬಗ್ಗೆ ಯಾವುದೇ ಸಮರ್ಪಕ ಕ್ರಮಗಳನ್ನು ಈವರೆಗೆ ತೆಗೆದುಕೊಂಡಿಲ್ಲ.
ಎರಡನೆಯದು, ನೋಟು ನಿಷೇಧದಿಂದ ಉಂಟಾಗಿರುವ ಅಲ್ಪಕಾಲೀನ ತೊಂದರೆಗಳು ಮತ್ತು ದೊರಕಲಿರುವ ದೀರ್ಘಕಾಲೀನ ಲಾಭಗಳ ಬಗ್ಗೆ ಬರೆದಿರುದ ಸುದೀರ್ಘ ಟಿಪ್ಪಣಿಗಳು. ನೋಟು ನಿಷೇಧದ ನಂತರ ಒಟ್ಟಾರೆ ರಾಷ್ಟ್ರೀಯ ಉತ್ಪನ್ನದ ನಾಮಮಾತ್ರ ಅಭಿವೃದ್ಧಿ ದರವು ವಾಸ್ತವವಾಗಿ ತೀವ್ರಗತಿಯ ಹೆಚ್ಚಳ ಸಾಧಿಸಿದೆ ಎಂದು ಹೇಳಲಾಗಿದೆ.
(ನಾಮಿನಲ್ ಜಿಡಿಪಿ ಗ್ರೋಥ್- ನಾಮಮಾತ್ರ ಒಟ್ಟಾರೆ ರಾಷ್ಟ್ರೀಯ ಉತ್ಪನ್ನದ ಅಭಿವೃದ್ಧಿಗೂ, ನೈಜ ಅಭಿವೃದ್ಧಿ ದರಕ್ಕೂ ವ್ಯತ್ಯಾಸವಿದೆ. ನೈಜ ಅಭಿವೃದ್ಧಿ ದರವನ್ನು ಲೆಕ್ಕಹಾಕುವಾಗ ಹಣದುಬ್ಬರಕ್ಕೆ ತಕ್ಕಂತೆ ಅದರ ನೈಜ ದರವನ್ನು ತುಲನೆ ಮಾಡಲಾಗಿರುತ್ತದೆ. ನಾಮಮಾತ್ರ ದರದಲ್ಲಿ ಹಣದುಬ್ಬರವನ್ನು ಗಣನೆಗೆ ತೆಗೆದುಕೊಂಡಿರುವುದಿಲ್ಲ. ಇದರಿಂದ ಸಾಮಾನ್ಯವಾಗಿ ನೈಜ ಅಭಿವೃದ್ಧಿ ದರಕ್ಕಿಂತ ನಾಮಿನಲ್ ದರ ಹೆಚ್ಚಿರುತ್ತದೆ- ಅನುವಾದಕನ ಟಿಪ್ಪಣಿ)
ಆದರೆ ಇಂಥಾ ಒಂದು ಮಹತ್ವದ ಸರ್ಕಾರಿ ದಾಖಲೆಯು ನೋಟು ನಿಷೇಧದ ನಂತರದಲ್ಲಿ ನಾಮಮಾತ್ರ ಅಭಿವೃದ್ಧಿ ಸಾಧಿಸಿರುವ ಕ್ಷೇತ್ರಗಳು ನೋಟು ನಿಷೇಧದೊಂದಿಗೆ ಯಾವ ಬಗೆಯ ಸಂಬಂಧವನ್ನೂ ಹೊಂದಿರದ ಕ್ಷೇತ್ರಗಳೆಂಬುದನ್ನು ಮಾತ್ರ ಗಣನೆಗೆ ತೆಗೆದುಕೊಳ್ಳದಿರುವುದು ಅತ್ಯಂತ ಆಶ್ಚರ್ಯಕರವಾಗಿದೆ. ೨೦೧೬-೧೭ರ ಮೂರನೇ ಮತ್ತು ನಾಲ್ಕನೇ ತ್ರೈಮಾಸಿಕಗಳಲ್ಲಿ ಸಾರ್ವಜನಿಕ ಆಡಳಿತ, ರಕ್ಷಣೆ ಮತ್ತಿತರ ಸೇವಾ ಕ್ಷೇತ್ರಗಳ ಒಟ್ಟಾರೆ ನಾಮಮಾತ್ರ ಮೌಲ್ಯ ಸಂಚಯನ (ನಾಮಿನಲ್ ಗ್ರಾಸ್ ವ್ಯಲ್ಯೂ ಅಡಿಷನ್) ದಲ್ಲಿ ಹೆಚ್ಚಳವಾಗಿದೆ; ೨೦೧೫-೧೬ರ ಮೂರನೇ ಮತ್ತು ನಾಲ್ಕನೇ ತ್ರೈಮಾಸಿಕಗಳಲ್ಲಿ ಈ ಕ್ಶೇತ್ರಗಳ ಅಭಿವೃದ್ಧಿ ಶೇ.೧೨.೮ ರಷ್ಟಿದ್ದದ್ದು ೨೦೧೬-೧೭ರಲ್ಲಿ ಶೇ.೧೫.೧ ಮತ್ತು ಶೇ.೨೪.೨ರಷ್ಟಕ್ಕೆ ಅನುಕ್ರಮವಾಗಿ ಏರಿದೆ.
ಅದನ್ನು ಹೊರತುಪಡಿಸಿ ನೋಟು ನಿಷೇಧದಿಂದ ನೇರವಾಗಿ ಬಾಧೆಗೊಳಗಾಗಿರುವ ಸರಕು ಉತ್ಪಾದನೆ, ನಿರ್ಮಾಣ, ವ್ಯಾಪಾರ, ಮತ್ತು ಹಣಕಾಸು ಕ್ಷೇತ್ರಗಳ ಅಭಿವೃದ್ಧಿಯಲ್ಲಿ ಕಣ್ಣಿಗೆ ರಾಚುವಷ್ಟು ಇಳಿಕೆ ಕಂಡುಬಂದಿದೆ. ಆರ್ಥಿಕ ಸಮೀಕ್ಷೆಯು ಅಸಂಘಟಿತ ಕ್ಷೇತ್ರದ ಮೇಲೆ ನೋಟು ನಿಷೇಧದ ಪ್ರಭಾವವನ್ನು ಅಂದಾಜು ಮಾಡಲು ದ್ವಿ ಚಕ್ರ ವಾಹನಗಳ ಮಾರಾಟ ಮತ್ತು ಉದ್ಯೋಗ ಖಾತ್ರಿ ಯೋಜನೆಯ ಬೇಡಿಕೆಯ ಪ್ರಮಾಣಗಳನ್ನು ಬಳಸಿಕೊಂಡಿದೆ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಆದ ಹೆಚ್ಚಳವು ಬೇರೆ ವಿಧಿಯಿಲ್ಲದೆ ಆಯ್ಕೆ ಮಾಡಿಕೊಂಡ ಆತ್ಯಂತಿಕ ಬೇಡಿಕೆಯಿಂದ ಆಗಿರುವ ಹೆಚ್ಚಳವಾಗಿದ್ದರೆ ದ್ವಿಚಕ್ರ ವಾಹನಗಳ ಮಾರಾಟವು ಅಸಂಘಟಿತ ಕ್ಷೇತ್ರದ ಮೇಲೆ ನೋಟು ನಿಷೇಧದಿಂದ ಉಂಟಾದ ಪರಿಣಾಮಗಳನ್ನು ಹಿಡಿದುಕೊಡುವಂಥ ವ್ಯವಹಾರವೇ ಅಲ್ಲ. ನೋಟು ನಿಷೇಧದಿಂದ ಅಸಂಘಟಿತ ಕ್ಷೇತ್ರದ ಮೇಲಾಗಿರುವ ಪರಿಣಾಮಗಳನ್ನು ಅಂದಾಜಿಸಲು ಪ್ರಧಾನವಾಗಿ ಅಸಂಘಟಿತ ವಲಯದ ಕಾರ್ಮಿಕರೇ ಹೆಚ್ಚಿರುವ ವಲಯಗಳ ಅಧ್ಯಯನವನ್ನು ಮಾಡಬೇಕಿತ್ತು. ಒಟ್ಟಾರೆ ಮೌಲ್ಯ ಸಂಚಯನ (ಜಿವಿಎ)ದ ಅಭಿವೃದ್ಧಿಯಲ್ಲಿ ಕುಸಿತ ಕಂಡಿರುವ ನಾಲ್ಕೂ ಕ್ಷೇತ್ರಗಳು ನೋಟು ನಿಷೇಧದ ಉಂಟಾದ ಪ್ರತಿಕೂಲ ಪರಿಣಾಮಗಳಿಗೆ ಉದಾಹರಣೆಗಳಾಗಿವೆ.
ಕೊನೆಯದಾಗಿ ಸಾರ್ವಜನಿಕ ವೆಚ್ಚಗಳಿಗೆ ಸಂಬಂಧಪಟ್ಟ ವಿಶ್ಲೇಷಣೆಗಳು (ಅಧ್ಯಾಯ-೨) ಮತ್ತು ಶಿಕ್ಷಣ ಮತ್ತು ಆರೋಗ್ಯಗಳಂಥ ಮಾನವ ಸಂಪನ್ಮೂಲಗಳಿಗೆ ಹೂಡಬೇಕಾದ ಬಂಡವಾಳಕ್ಕೆ ಸಂಬಂಧಪಟ್ಟ ವಿಶ್ಲೇಷಣೆ (ಅಧ್ಯಾಯ-೧೦)ಗಳು ಭಾರತದ ನೈಜ ಅಗತ್ಯಗಳೇನು ಎಂಬುದರ ಬಗ್ಗೆ ಈ ಸಮೀಕ್ಷೆಗೆ ಯಾವುದೇ ಸ್ಪಷ್ಟ ಗ್ರಹಿಕೆ ಇಲ್ಲದಿರುವುದನ್ನು ಎತ್ತಿ ತೋರಿಸುತ್ತದೆ. ಸಾಮಜಿಕ ಮೂಲ ರಚನೆಗಳಲ್ಲಿ ಅತ್ಯಂತ ಕನಿಷ್ಟ ಬಂಡವಾಳ ಹೂಡಿಕೆ ಮಾಡುತ್ತಿರುವುದರ ನೇರ ಪರಿಣಾಮದಿಂದಾಗಿಯೇ ಮಾನವ ಸಂಪನ್ಮೂಲಗಳ ವಿಷಯದಲ್ಲಿ ನಾವು ಸದಾ ಹಿಂದೆಯೇ ಉಳಿದುಕೊಂಡಿದ್ದೇವೆ. ಬಡ ಹಾಗೂ ಮಧ್ಯಮವರ್ಗಗಳ ಅಗತ್ಯಗಳನ್ನು ಸಾರ್ವಜನಿಕ ಸಾಮಾಜಿಕ ವೆಚ್ಚಗಳು ಪೂರೈಸುವುದಾದರೆ ಸಮಾಜದ ಒಟ್ಟಾರೆ ನೈಜ ಕೊಳ್ಳುವ ಶಕ್ತಿಯೂ ಹೆಚ್ಚುತ್ತದೆ. ಆದರೆ ಆರ್ಥಿಕ ಅಭಿವೃದ್ಧಿಗೆ ಸಂಬಂಧಪಟ್ಟ ವಿಶ್ಲೇಷಣೆಗಳಲ್ಲಿ ಹೂಡಿಕೆಗೆ ಸಂಬಂಧಪಟ್ಟ ವಿಷಯಗಳಿಗೆ ಒತ್ತುಕೊಟ್ಟು ಬೇಡಿಕೆಗೆ ಸಂಬಂಧಪಟ್ಟ ವಿಷಯಗಳನ್ನು ಕಡೆಗಣಿಸಲಾಗಿದೆ. ಬ್ರಿಕ್ಸ್ ದೇಶಗಳಲ್ಲಿ (ಬಿಆರ್ಐಸಿಎಸ್-ಬ್ರಿಕ್ಸ್- ಬ್ರೆಜಿಲ್, ರಷಿಯಾ, ಇಂಡಿಯಾ, ಚೀನಾ ಮತ್ತು ದಕ್ಷಿಣ ಆಫ್ರಿಕಾ ದೇಶಗಳು)ಶಿಕ್ಷಣದ ಮೇಲೆ ಖಾಸಗಿ ವೆಚ್ಚಗಳು ಮತ್ತು ಆರೋಗ್ಯದ ಮೇಲೆ ತಮ್ಮ ಸ್ವಂತ ಜೇಬಿನಿಂದ ಮಾಡುತ್ತಿರುವ ವೆಚ್ಚಗಳು ಗಣನೀಯವಾಗಿ ಹೆಚ್ಚಾಗುತ್ತಿರುವುದನ್ನು ಈ ಸಮೀಕ್ಷೆಯು ಉಲ್ಲೇಖಿಸುತ್ತದೆ. ಭಾರತದಲ್ಲಿ ಆರೋಗ್ಯಸೇವೆಗಾಗಿ ಜನರು ಸ್ವಂತ ಜೇಬಿನಿಂದ ಮಾಡುವ ವೆಚ್ಚವು (ಔಟ್ ಆಫ್ ಪಾಕೆಟ್ ಎಕ್ಸ್ಪೆಂಡಿಚರ್) ಶೇ. ೬೦ರಷ್ಟಿದ್ದರೆ ಉಳಿದ ದೇಶಗಳಲ್ಲಿ ಅದು ಶೇ.೧೦-೩೨ರ ಆಸುಪಾಸಿನಲ್ಲಿದೆ. ಶಿಕ್ಷಣದ ಮೇಲೆ ಸಾರ್ವಜನಿಕ ವೆಚ್ಚವು ತನ್ನಿಂದ ತಾನೇ ಹೆಚ್ಚುವುದಿಲ್ಲ. ಅದಾಗಬೇಕೆಂದರೆ ಉನ್ನತ ಶಿಕ್ಷಣಕ್ಕೆಂದೇ ಹೆಚ್ಚಿನ ತೆರಿಗೆಯನ್ನು ಸಂಗ್ರಹಿಸುವುದರ ಮೇಲೆ ಮತ್ತು ಅದಕ್ಕೆ ಬೇಕಾದ ಸಾಲವನ್ನು ಮಾಡುವಷ್ಟರ ಮಟ್ಟಿಗೆ ವಿತ್ತೀಯ ಕೊರತೆಯನ್ನು ಹಿಗ್ಗಿಸುವುದರ ಮೇಲೆ ಒತ್ತನ್ನು ನೀಡಬೇಕು. ಹಾಗೆ ಮಾಡದೆ ಕೇವಲ ಶಿಕ್ಷಣದ ಮತ್ತು ಆರೋಗ್ಯದ ಮೇಲೆ ಸಾರ್ವಜನಿಕ ವೆಚ್ಚವನ್ನು ಹೆಚ್ಚಿಸಬೇಕೆಂಬ ಚರ್ವಿತಚರ್ವಣದ ಮಾತುಗಳನ್ನು ಎಷ್ಟು ಬಾರಿ ಆಡಿದರೂ ಏನೂ ಪ್ರಯೋಜನವಾಗುವುದಿಲ್ಲ. ಆದರೆ ಕಳೆದ ೩೦ ವರ್ಷಗಳಿಂದ ವಿತ್ತೀಯ ಸುಧಾರಣವಾದಿಗಳಿಗೆ ಈ ಸಲಹೆಯೇ ಅಪಥ್ಯವಾಗಿದೆ. ಬಡಜನರ ಅಗತ್ಯಗಳನ್ನು ಪೂರೈಸಲು ಮಾಡುತ್ತಿರುವ ಅತ್ಯಂತ ಕನಿಷ್ಟ ಸಾರ್ವಜನಿಕ ವೆಚ್ಚಗಳಲ್ಲಿ ಬಡಜನರ ಅಗತ್ಯಗಳ ಬಗ್ಗೆ ಇರುವ ನಿರ್ಲಕ್ಷ್ಯವು ವ್ಯಕ್ತವಾಗುತ್ತಿದೆ. ಹಾಗೂ ಆ ಮೂಲಕ ಬಡಜನರ ಬಗೆಗಿನ ನಿರ್ಲಕ್ಷ್ಯ ಮುಂದುವರೆಯುತ್ತಲೇ ಇದೆ.
ಕೃಪೆ: : Economic and Political Weekly
Aug 19, 2017. Vol. 52. No. 33
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ