ಅನು: ಶಿವಸುಂದರ್
ನ್ಯಾಯಾಲಯಗಳು ಭಾರತೀಯ ಕುಟುಂಬವನ್ನು ಕಾಪಾಡುವ ಉಸಾಬರಿಗೆ ಹೋಗದೆ ಹದಗೆಟ್ಟಿರುವ ನ್ಯಾಯದಾನ ವ್ಯವಸ್ಥೆಯನ್ನು ಸರಿಪಡಿಸಬೇಕು.
ಭಾರತದ ವರಿಷ್ಠ ನ್ಯಾಯಾಲಯ ತನ್ನ ಇತ್ತೀಚಿನ ಆದೇಶದ ಮೂಲಕ ಭಾರತದ ಮಹಿಳೆಯರಿಗೆ ಯಾವ ಉಪಕಾರವನ್ನು ಮಾಡಲಿಲ್ಲ. ಬದಲಿಗೆ, ಕಾನೂನಿನ ದುರ್ಬಳಕೆಯನ್ನು ತಡೆತಟ್ಟುವ ಹೆಸರಿನಲ್ಲಿ ಆ ಆದೇಶವು ಸಂತ್ರಸ್ತ ಮಹಿಳೆಯೂ ಸಹ ಕಾನೂನಿನ ಮೊರೆ ಹೋಗುವ ಮುನ್ನ ಹಿಂದೆ ಮುಂದೆ ಯೋಚಿಸುವಂತೆ ಮಾಡಿದೆ. ಜುಲೈ ೨೭ ರಂದು ನೀಡಿದ ಅದೇಶವೊಂದರ ಮೂಲಕ ಸುಪ್ರೀಂ ಕೋರ್ಟು ಭಾರತದ ಅಪರಾಧ ಸಂಹಿತೆ (ಐಪಿಸಿ)ಯ ೪೯೮-ಎ ಕಲಮನ್ನು ಮತ್ತಷ್ಟು ದುರ್ಬಲಗೊಳಿಸಿದೆ. ೧೯೬೧ರ ವರದಕ್ಷಿಣೆ ನಿಷೇಧ ಕಾಯಿದೆಯ ಅಂಶಗಳು ಮದುವೆಯಾದ ತರುಣಿಯರ ಮೇಲೆ ವರದಕ್ಷಿಣೆ ಮತ್ತಿತರ ಕಾರಣಗಳಿಗಾಗಿ ನಡೆಯುವ ಚಿತ್ರಹಿಂಸೆ ಮತ್ತು ಕೊಲೆಗಳನ್ನು ತಡೆಗಟ್ಟುವಷ್ಟು ಶಕ್ತವಾಗಿಲ್ಲವೆಂಬ ಕಾರಣದಿಂದ ೧೯೮೩ರಲ್ಲಿ ೪೯೮-ಎ ನ್ನು ಜಾರಿಗೆ ತರಲಾಯಿತು. ಇದರ ವಿರುದ್ಧ ಭಾರತೀಯ ಕುಟುಂಬವನ್ನು ರಕ್ಷಿಸಿ (ಸೇವ್ ಇಂಡಿಯನ್ ಫ್ಯಾಮಿಲಿ) ಎಂಬ ಗುಂಪೊಂದು ಪ್ರತಿರೋಧ ವ್ಯಕ್ತಪಡಿಸಲು ಪ್ರಾರಂಭಿಸಿತಲ್ಲದೆ ವರದಕ್ಷಿಣೆ ಕಿರುಕುಳವನ್ನು ಸಾಬೀತು ಮಾಡಲಾಗದ ಪ್ರತಿಯೊಂದು ಪ್ರಕರಣವನ್ನು ಸುಳ್ಳೆಂದು ಪ್ರಚಾರ ಮಾಡುತ್ತಾ ೪೯೮-ಎ ಕಲಮಿಗೆ ತಿದ್ದುಪಡಿ ತರಲು ಒತ್ತಡ ಹಾಕಲು ಪ್ರಾರಂಭಿಸಿತು. ದುರದೃಷ್ಟವಶಾತ್ ಸುಪ್ರೀಂ ಕೋರ್ಟು ಆ ಪ್ರಚಾರದ ಪ್ರಮುಖ ಅಂಶವಾಗಿದ್ದ ಕಾನೂನಿನ ದುರ್ಬಳಕೆಯೆಂಬ ಆರೋಪವನ್ನು ಒಪ್ಪಿಕೊಂಡಂತೆ ಕಾಣುತ್ತದೆ.
ಸುಪ್ರಿಂ ಕೋರ್ಟು ರಾಜೇಶ್ ಶರ್ಮಾ ಮತ್ತಿತರರು ಹಾಗೂ ಉತ್ತರಪ್ರದೇಶ ಸರ್ಕಾರದ ನಡುವಿನ ಪ್ರಕರಣದಲ್ಲಿ ನೀಡಿರುವ ಆದೇಶದ ಮೂಲಕ ೪೯೮-ಎ ಕಲಮಿನ ತಥಾಕಥಿತ ದುರ್ಬಳಕೆಯನ್ನು ಸರಿಪಡಿಸಲು ಮುಂದಾಗಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯೂರೋ- ಎನ್‌ಸಿಆರ್‌ಬಿ)ದ ೨೦೧೨ ರ ಅಂಕಿಅಂಶಗಳ ಪ್ರಕಾರ ಮೇಲಿನ ಕಲಮಿನಡಿ ಶಿಕ್ಷೆಗೊಳಪಟ್ಟವರ ಸಂಖ್ಯೆ ಶೇ.೧೪.೪ ಮಾತ್ರವೇ ಇರುವುದನ್ನು ಅದು ಆಧಾರವಾಗಿಟ್ಟುಕೊಂಡಿದೆ. ಈ ಕಲಮಿನಡಿ ಆಗುವ ಶಿಕ್ಷೆಯ ಪ್ರಮಾಣ ಇಷ್ಟು ಕಡಿಮೆ ಇರುವುದೇ ೪೯೮-ಎ ಕಲಮಿನಡಿ ದಾಖಲಾಗುವ ಬಹುಪಾಲು ಪ್ರಕರಣಗಳು ಸುಳ್ಳು ಎಂಬುದನ್ನು ರುಜುವಾತುಪಡಿಸುತ್ತದೆ ಎಂಬ ಅಭಿಪ್ರಾಯಕ್ಕೆ ಸುಪ್ರಿಂ ಕೋರ್ಟು ಬಂದಂತೆ ಕಾಣುತ್ತದೆ. ಇದನ್ನು ತಡೆಗಟ್ಟಲು ಜಿಲ್ಲಾ ಮಟ್ಟದಲ್ಲಿ ಕುಟುಂಬ ಕಲ್ಯಾಣ ಸಮಿತಿಗಳನ್ನು ರಚಿಸಲು ಕೋರ್ಟು ಆದೇಶ ನೀಡಿದೆ. ತನ್ನ ಕುಟುಂಬದವರ ವಿರುದ್ಧ ೪೯೮-ಎ ಕಲಮಿನಡಿ ಕ್ರಿಮಿನಲ್ ದೂರು ದಾಖಲಿಸುವ ಮುನ್ನ ಆ ಮಹಿಳೆಯು ಮೊದಲು ಈ ಸಮಿತಿಯ ಬಳಿ ದೂರನ್ನು ಕೊಂಡೊಯ್ಯಬೇಕು. ಈ ನಾಗರಿಕ ಸಮಿತಿಯಲ್ಲಿ ಕಾನೂನು ಸಹಾಯಕರು/ಸಾಮಾಜಿಕ ಕಾರ್ಯಕರ್ತರು/ನಿವೃತ್ತರು/ಸೇವೆಯಲ್ಲಿರುವ ಅಧಿಕಾರಿಗಳ ಪತ್ನಿಯರು/ಮತ್ತಿತರ ನಾಗರಿಕರು ಇರುತ್ತಾರೆ. ತಮ್ಮ ಬಳಿ ಬಂದ ದೂರನ್ನು ಈ ಸಮಿತಿಯು ಮೊದಲು ಪರಿಶೀಲಿಸಿ ಸಂಬಂಧಪಟ್ಟ ಪೊಲೀಸರಿಗೆ ಒಂದು ತಿಂಗಳ ಒಳಗೆ ವರದಿ ಸಲ್ಲಿಸಬೇಕು. ಆ ನಂತರವೇ ಪೊಲೀಸರು ಮುಂದುವರೆಯಬೇಕು. ಈ ಮಧ್ಯಂತರ ಅವಧಿಯಲ್ಲಿ ದೂರು ನೀಡಿದ ಮಹಿಳೆಯ ಪರಿಸ್ಥಿತಿ ಏನಾಗಿರುತ್ತದೆಂಬ ಬಗ್ಗೆ ನ್ಯಾಯಾಲಯವು ಏನೂ ಯೋಚಿಸಿದಂತೆ ಕಾಣುವುದಿಲ್ಲ. ಮನೆಯಲ್ಲಿ ನಡೆಯುವ ಚಿತ್ರಹಿಂಸೆಯಿಂದ ಪಾರಾಗಲು ಆ ಮಹಿಳೆ ಎಲ್ಲಿಗೆ ಹೋಗಬೇಕು? ಮೇಲಾಗಿ ಈ ನಾಗರಿಕ ಸಮಾಜದ ಸಮಿತಿಯು ಎಲ್ಲಾ ಪೂರ್ವಗ್ರಹಗಳಿಂದ ಮುಕ್ತವಾಗಿರುತ್ತದೆಂದಾಗಲೀ, ಲಂಚ ಅಥವಾ ಇತರ ವಶೀಲಿಗಳಿಗೆ ಒಳಗಾಗಿ ಹಿಂಸಾಚಾರ ನಡೆಸಿದವರ ಪರವಾಗಿಯೇ ವರದಿ ನೀಡುವುದಿಲ್ಲವೆಂದು ಹೇಗೆ ಭಾವಿಸಲು ಸಾಧ್ಯ? ಆ ವರದಿಗಳ ಬಗ್ಗೆ ಆರು ತಿಂಗಳ ನಂತರ ಮರುಮೌಲ್ಯಮಾಪನ ನಡೆಸಬೇಕೆಂದು ನ್ಯಾಯಾಲಯವು ನಿರ್ದೇಶನವನ್ನೇನೋ ನೀಡಿದೆ. ಆದರೆ, ಈ ಆದೇಶದ ಹಿಂದೆ ಮಹಿಳೆಯರು ನೀಡುವ ದೂರುಗಳು ಅಪ್ರಾಮಾಣಿಕವಾಗಿರುತ್ತದೆ ಮತ್ತು ಅವನ್ನು ಜರಡಿ ಹಿಡಿಯಲು ಮತ್ತೊಂದು ಪೂರ್ವಭಾವಿ ಸಾಧನದ ಅಗತ್ಯವಿದೆಯೆಂಬ ಗ್ರಹಿಕೆಯಿದ್ದು ಅದು ಅತ್ಯಂತ ದೋಷಪೂರಿvವಾದ ತಿಳವಳಿಕೆಯಾಗಿದೆ.
ಮದುವೆಯಾದ ಪ್ರಾರಂಭಿಕ ವರ್ಷಗಳಲ್ಲಿ ಮಹಿಳೆಯ ಮೇಲೆ ನಡೆಯುವ ದೌರ್ಜನ್ಯಗಳು ವರದಕ್ಷಿಣೆಗೆ ಸಂಬಂಧಪಟ್ಟವೇ ಆಗಿರುತ್ತವೆ. ವರದಕ್ಷಿಣೆ ನಿಷೇಧ ಕಾಯಿದೆ ಇದ್ದ ಮಾತ್ರಕ್ಕೆ ವರದಕ್ಷಿಣೆ ಕೊಡುವುದಾಗಲೀ ತೆಗೆದುಕೊಳ್ಳುವುದಾಗಲೀ ನಿಂತಿಲ್ಲ. ವಾಸ್ತವವೇನೆಂದರೆ, ಕೊಳ್ಳುಬಾಕತನವನ್ನು ಉತ್ತೇಜಿಸುವ ಆರ್ಥಿಕತೆಯೊಂದಿಗೆ ಇಂಥಾ ಪ್ರಕರಣಗಳ ಸಂಖ್ಯೆಯೂ ಹೆಚ್ಚುತ್ತಿದೆ. ಇದಕ್ಕೆ ವರದಕ್ಷಿಣೆ ಕಿರುಕುಳದಿಂದಾಗಿ ಮದುವೆಯಾದ ಕೆಲವೇ ವರ್ಷಗಳಲ್ಲಿ ತರುಣಿಯರು ಆತ್ಮಹತ್ಯೆ ಮಾಡಿಕೊಳ್ಳುವ ಅಥವಾ ಕೊಲ್ಲಲ್ಪಡುವ ಪ್ರಕರಣಗಳ ಸಂಖ್ಯೆಗಳು ಹೆಚ್ಚುತ್ತಿರುವುದೇ ಸಾಕ್ಷಿ. ಈ ಸಮಸ್ಯೆಯನ್ನು ನಿವಾರಿಸಲೆಂದೇ ೧೯೮೩ರಲ್ಲಿ ನಿರ್ದಿಷ್ಟವಾಗಿ ೪೯೮-ಎ ಕಲಮನ್ನು ಸೇರಿಸಲಾಯಿತು. ಆ ಕಲಮಿನ ಪ್ರಕಾರ ಒಬ್ಬ ಮಹಿಳೆಯ ಗಂಡನಾಗಲೀ ಅಥವಾ ಗಂಡನ ಸಂಬಂಧಿಕರಾಗಲೀ ಆ ಮಹಿಳೆಯನ್ನು ಕ್ರೂರವಾಗಿ ನಡೆಸಿಕೊಂಡರೆ ಅವರಿಗೆ ಮೂರು ವರ್ಷಗಳ ಅವಧಿಗೂ ವಿಸ್ತರಿಸಬಹುದಾದ ಕಾರಾಗೃಹ ಶಿಕ್ಷೆಯನ್ನೂ ಮತ್ತು ದಂಡವನ್ನೂ ವಿಧಿಸಬಹುದು.
ಈ ೪೯೮-ಎ ಕಾಯಿದೆ ಇಷ್ಟೊಂದು ವಿವಾದಕ್ಕೊಳಗಾಗಲು ಕಾರಣವೇನೆಂದರೆ ಅದು ದೂರುದಾರರ ಕುಟುಂಬದವರನ್ನು ಬಂಧಿಸುವ ಅಧಿಕಾರವನ್ನು ಪೊಲೀಸರಿಗೆ ನೀಡುತ್ತದೆ. ಹಲವಾರು ಪ್ರಕರಣಗಳಲ್ಲಿ ಗಂಡ, ಆತನ ತಂದೆ-ತಾಯಿ ಮತ್ತು ಒಡಹುಟ್ಟಿದವರ ಮೇಲೂ ಆರೋಪ ಹೊರಿಸಲಾಗಿರುತ್ತದೆ. ನಂತgದಲ್ಲಿ ಅವರೆಲ್ಲರೂ ಬಂಧನಕ್ಕೆ ಗುರಿಯಾಗುತ್ತಾರೆ. ಆದರೆ ಈ ಅಧಿಕಾರವನ್ನು ನಿರ್ಬಂಧಿಸಿ ಸುಪ್ರೀಂ ಕೋರ್ಟು ಈಗಾಗಲೇ ಆದೇಶವನ್ನು ನೀಡಿದೆ. ೨೦೧೪ರ ಮತ್ತೊಂದು ಪ್ರಕರಣದಲ್ಲಿ ವರಿಷ್ಠ ನ್ಯಾಯಾಲಯವು ೪೯೮-ಎ ಕಲಮಿನಡಿ ಪೊಲೀಸರಿಗಿರುವ ಬಂಧನದ ಅಧಿಕಾರದ ಮೇಲೆ ಅಂಕುಶವನ್ನು ವಿಧಿಸಿದೆ. ಈ ಅಧಿಕಾರವು ಪೊಲೀಸರಿಗೆ ಭ್ರಷ್ಟಾಚಾರದ ದೊಡ್ಡ ರಹದಾರಿಯನ್ನು ಒದಗಿಸಿದೆ ಎಂದು ಆ ಆದೇಶದಲ್ಲಿ ನ್ಯಾಯಾಲಯವು ಅಭಿಪ್ರಾಯಪಟ್ಟಿತ್ತು. ಹಾಗೆ ನೋಡಿದರೆ ಈ ಕಲಮನ್ನು ಪೊಲೀಸರು ಇತರ ಐಪಿಸಿಯ ಕಲಮುಗಳೊಂದಿಗೆ ಬಳಸುತ್ತಾರಾದ್ದರಿಂದ ನ್ಯಾಯಾಲಯದ ಈ ಅಭಿಪ್ರಾಯ ಸೂಕ್ತವಾಗಿಯೇ ಇತ್ತು. ಹೀಗಾಗಿ ೪೯೮-ಎ ಅಡಿಯಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಲು ಮ್ಯಾಜಿಸ್ಟ್ರೇಟರ ಸಮ್ಮತಿ ಕಡ್ಡಾಯವೆಂದು ವರಿಷ್ಠ ನ್ಯಾಯಾಲಯವು ನಿರ್ದೇಶನ ನೀಡಿತ್ತು. ಈ ಆದೇಶದ ಬಂದ ನಂತರ ಕೇಂದ್ರ ಗೃಹ ಇಲಾಖೆಯು ಎಲ್ಲಾ ರಾಜ್ಯ ಸರ್ಕಾರಗಳಿಗೂ ಒಂದು ಸಲಹೆ-ಸೂಚನೆ ಸುತ್ತೋಲೆಯನ್ನು ಕಳಿಸಿತು. ಅದರಲ್ಲಿ ಅದು ೪೯೮-ಎ ನಲ್ಲಿನ ಅಂಶಗಳನ್ನು ಅಸಂತುಷ್ಟರಾದ ಮಹಿಳೆಯರು ತಮ್ಮ ರಕ್ಷಣೆಗೆ ಗುರಾಣಿಯಾಗಿ ಬಳಸುವುದಕ್ಕಿಂತ ಹೆಚ್ಚಾಗಿ ಸೇಡಿನ ಕತ್ತಿಯನ್ನಾಗಿ ಬಳಸುತ್ತಿದ್ದಾರೆಂಬ ಪ್ರಶ್ನಾರ್ಹ ಟಿಪ್ಪಣಿಯನ್ನೂ ಮಾಡಿತ್ತು. ಬಂಧನದ ಅದಿಕಾರವನ್ನು ಈಗಾಗಲೇ ಮೊಟಕುಗೊಳಿಸಿ, ದೂರು ದಾಖಲಿಸುವ ಮಹಿಳೆಯರನ್ನು ಅಸಂತುಷ್ಟ ಮಹಿಳೆಯರೆಂದು ಬಣ್ಣಿಸಿದ ಮೇಲೆ ೪೯೮-ಎ ಕಲಮಿನ ಅಂಶಗಳನ್ನು ಸತ್ವಹೀನಗೊಳಿಸಲು ಹೆಚ್ಚೇನೂ ಮಾಡಬೇಕಿರಲಿಲ್ಲ. ಇತ್ತೀಚಿನ ಆದೇಶದಲ್ಲಿ ಸುಪ್ರೀಂ ಕೋರ್ಟು ಅದನ್ನೂ ಮಾಡಿಮುಗಿಸಿದೆ.
ದೌರ್ಜನ್ಯಗಳಿಗೆ ಒಳಗಾಗುವ ಸಂತ್ರಸ್ತ ಮಹಿಳೆಯರಿಗೆ ನ್ಯಾಯವನ್ನು ಒದಗಿಸುವಲ್ಲಿ ಸವಾಲೊಡ್ಡುತ್ತಿರುವುದು ಕಾನೂನಿನ ಒಳಗಿರುವ ಕೊರತೆಯಲ್ಲ. ಬದಲಿಗೆ ಮುರಿದುಬಿದ್ದಿರುವ ನ್ಯಾಯದಾನ ವ್ಯವಸ್ಥೆ. ಅತ್ಯಚಾರವಿರಲಿ ಅಥವಾ ವರದಕ್ಷಿಣೆ ಕಿರುಕುಳವಿರಲಿ ನೆರವು ಯಾಚಿಸಿ ಪೊಲೀಸ್ ಠಾಣೆಗೆ ಬರುವ ಮಹಿಳೆಗೆ ಯಾವ ಸಹಾಯವೂ ದೊರೆಯುವುದಿಲ್ಲ. ಸರಿಯಾಗಿ ತನಿಖೆ ಮಾಡದಿರುವುದರಿಂದ ಮೊದಲುಗೊಂಡು ನ್ಯಾಯಾಲಯಗಳಲ್ಲಿ ಸಮರ್ಪಕವಾದ ವಾದಗಳನ್ನು ಮಂಡಿಸದೇ ಇರುವ ತನಕ ಹರಡಿಕೊಳ್ಳುವ ಸವಾಲುಗಳು ಬಹಳಷ್ಟು ಪ್ರಕರಣಗಳಲ್ಲಿ ಸತ್ಯವನ್ನು ಸಾಬೀತು ಮಾಡುವುದನ್ನು ಅಸಾಧ್ಯವಾಗಿಸುತ್ತದೆ. ಹೀಗಾಗಿಯೇ ಬಹಳಷ್ಟು ಮಹಿಳೆಯರು ಅರ್ಧದಲ್ಲೇ ಕೈಚೆಲ್ಲಿ ಕೂರುತ್ತಾರೆ. ಹಾಗಾದಾಗ ಆ ಮಹಿಳೆಯು ಸುಳ್ಳು ದೂರನ್ನು ದಾಖಲಿಸಿದ ಅಪವಾದವನ್ನೂ ಹೊರಬೇಕಾಗುತ್ತದೆ ಅಥವಾ ೪೯೮-ಎ ಪ್ರಕರಣಗಳಲ್ಲಿ ಸಂಭವಿಸುವಂತೆ ಕುಟುಂಬವನ್ನು ಕಾಪಾಡುವ ಕಾರಣಕ್ಕಾಗಿ ಸಂದರ್ಭದ ಜೊತೆ ರಾಜಿಯಾಗಬೇಕಾಗುತ್ತದೆ.
ಇಂದು ಕಾಪಾಡಬೇಕಿರುವುದು ಭಾರತೀಯ ಕುಟುಂಬವನ್ನಲ್ಲ. ವಾಸ್ತವವಾಗಿ ಭಾರತೀಯ ಕುಟುಂಬದಿಂದ ಮತ್ತು ಅವಳ ಹಿತಾಸಕ್ತಿಗೆ ವ್ಯತಿರಿಕ್ತವಾಗಿ ಕೆಲಸ ಮಾಡುವ ನ್ಯಾಯದಾನ ವ್ಯವಸ್ಥೆಯಿಂದ ಮಹಿಳೆಯನ್ನು ಕಾಪಾಡಬೇಕಿದೆ.
ಕೃಪೆ: Economic and Political Weekly
Aug 5, 2017. Vol. 52. No. 31
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ