-ಶಿವಸುಂದರ್
The Karnataka Prevention Of
Cow Slaughter And Cattle Preservation (Amendment) Bill, 2009
ಈ ದೇಶವನ್ನು ಮತ್ತು ಈ ದೇಶದ ಅಗತ್ಯಗಳನ್ನು ಬ್ರಾಹ್ಮಣ್ಯದ ಕಣ್ಣಿಂದಲ್ಲದೆ ರೈತಾಪಿಯ ಮತ್ತು ದಮನಿತರ ಕಣ್ಣಿಂದ ಎಂದಿಗೂ ಅರ್ಥಮಾಡಿಕೊಳ್ಳದ ಬಿಜೆಪಿಗೆ ಈ ದೇಶ ಎಂದಿಗೂ ಅರ್ಥವಾಗಿಲ್ಲ. ಹೀಗಾಗಿ ಈ ದೇಶದ ಸಂಸ್ಕೃತಿಯನ್ನು ಉಳಿಸುವ ಹೆಸರಲ್ಲಿ ಅವರು ರೂಪಿಸುತ್ತಿರುವ ಕಾನೂನುಗಳೆಲ್ಲಾ ಈ ದೇಶದ ಬಹುಸಂಖ್ಯಾತರ ಹಿತಾಸಕ್ತಿಗೆ ವಿರುದ್ಧವಾಗಿದೆ ಮತ್ತು ಅವರ ಬದುಕನ್ನು ಮತ್ತಷ್ಟು ದುರ್ಭರಗೊಳಿಸುತ್ತಿದೆ. ಬಿಜೆಪಿ ಪೂರ್ಣ ಬಹುಮತದೊಂದಿಗೆ ರಾಜ್ಯದಲ್ಲಿ ಅಧಿಕಾರ ಹಿಡಿದ ನಂತರ ಒಂದೆಡೆ ಬ್ರಹ್ಮಾಂಡ ಭ್ರಷ್ಟಾಚಾರ ಮಾಡುತ್ತಾ ನಾಡಿನ ತಿಜೋರಿಯನ್ನು ಲೂಟಿ ಹೊಡೆಯುತ್ತಿದ್ದರೆ ಇನ್ನೊಂದೆಡೆ ದಲಿತ, ಶೂದ್ರ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯಗಳ ಸಾಂಸ್ಕ?ೃತಿಕ ಸಂಪನ್ಮೂಲಗಳ ಮೇಲೂ ದಾಳಿ ಮಾಡುತ್ತಾ ಅಲ್ಪಸಂಖ್ಯಾತರಲ್ಲಿ ಅಲ್ಪಸಂಖ್ಯಾತವಾದ ಬ್ರಾಹ್ಮಣೀಯ ಸಂಸ್ಕೃತಿಯನ್ನು ಸಮಾಜದ ಮೇಲೆ ಹೇರಲು ಸತತ ಪ್ರಯತ್ನ ನಡೆಸುತ್ತಿದೆ.
ಈ ನಿಟ್ಟಿನಲ್ಲಿ ಫೆಬ್ರವರಿಯ ಕೊನೆಗೆ ಪ್ರಾರಂಭವಾಗಲಿರುವ ವಿಧಾನಸಭಾ ಅಧಿವೇಶನದಲ್ಲಿ ಅದು ಕರ್ನಾಟಕದಲ್ಲಿ ಗೋಹತ್ಯೆ ನಿಷೇಧ ಮಾಡುವ ಮತ್ತು ಜಾನುವಾರುಗಳ ಸಂರಕ್ಷಣೆ ಮಾಡುವ ಸಲುವಾಗಿ 1964ರಲ್ಲೇ ಜಾರಿಮಾಡಲಾಗಿದ್ದ The Karnataka
Prevention of Cow Slaughter And Cattle Preservation Act-1964 ಗೆ ಹಲವಾರು ದುರುದ್ದೇಶಗಳಿಂದ ಕೂಡಿದ ತಿದ್ದುಪಡಿಗಳನ್ನು ತರಲು The Karnataka
Prevention of Cow Slaughter And Cattle Preservation (Amendment) Bill, 2009 ಎಂಬ ಮಸೂದೆಯನ್ನು ಪಾಸುಮಾಡುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಇದರ ಉದ್ದೇಶ ಗೋಹತ್ಯೆಯನ್ನು ನಿಷೇಧ ಮಾಡುವುದಕ್ಕಿಂತ ಹೆಚ್ಚಾಗಿ ಅದರ ಹೆಸರಲ್ಲಿ ಅಲ್ಪಸಂಖ್ಯಾತರ ಮೇಲೆ ಈಗ ಕಾನೂನು ಬಾಹಿರವಾಗಿ ರಾಜ್ಯದೆಲ್ಲೆಡೆ ಭಜರಂಗಿಗಳು ನಡೆಸುತ್ತಿರುವ ಆಕ್ರಮಗಳನ್ನು ಸಕ್ರಮಗೊಳಿಸುವುದೇ ಆಗಿದೆ. ಮಾಂಸಾಹಾರಿ ಆಹಾರ ಪದ್ಧತಿ- ಅದರಲ್ಲೂ ಗೋಮಾಂಸ ಭಕ್ಷಣೆ ಮಾಡುವ ಮುಸ್ಲಿಂ, ಕ್ರಿಶ್ಚಿಯನ್, ದಲಿತ ಹಾಗೂ ಶೂದ್ರ ಜನಾಂಗಗಳ ಪದ್ಧತಿಗಳ ಮೇಲೆಯೇ ಸಾಂಸ್ಕೃತಿಕ ಆಕ್ರಮಣ ನಡೆಸುವ ಮತ್ತು ನಿರ್ದಿಷ್ಟವಾಗಿ ಮಾಂಸಾಹಾರ ವ್ಯಾಪಾರದಲ್ಲಿ ತೊಡಗಿಕೊಂಡಿರುವ ಮುಸ್ಲಿಮರ ಮೇಲೆ ನಡೆಸುವ ಹಲ್ಲೆಯನ್ನು ಶಾಸನಬದ್ಧಗೊಳಿಸುವ ಉದ್ದೇಶವನ್ನೇ ಈ ಮಸೂದೆ ಹೊಂದಿರುವುದು ಮೇಲ್ನೋಟಕ್ಕೇ ಸ್ಪಷ್ಟವಾಗುತ್ತದೆ.
ಆದರೆ ಈ ಭರತವರ್ಷದಲ್ಲಿ ವಿವಿಧ ಆಹಾರ ಮತ್ತು ಅನನ್ಯ ಸಂಸ್ಕೃತಿಗಳು ವಿಕಸನಗೊಂಡ ಪ್ರಕ್ರಿಯೆ ಅರ್ಥವಾಗದೆ ಈ ಮಸೂದೆಯ ಹಿಂದಿನ ಕರಾಳ ಕಾರಾಸ್ಥಾನಗಳನ್ನು ಅರ್ಥವಾಗುವುದಿಲ್ಲ.
ಒಂದು ಜನಾಂಗ ತನ್ನದೇ ನಿರ್ದಿಷ್ಟ ಪರಿಸರದಲ್ಲಿ ವಿಕಸನಗೊಳ್ಳುವ ಪ್ರಕ್ರಿಯೆಯಲ್ಲಿ ತನದೇ ಅನನ್ಯವಾದ ಸಂಸ್ಕೃತಿ, ಧಾರ್ಮಿಕ ಶ್ರದ್ಧೆ ಮತ್ತು ಆಹಾರಾಭ್ಯಾಸಗಳನ್ನು ರೂಢಿಸಿಕೊಳ್ಳುತ್ತದೆ. ಅದಕ್ಕೆ ಭಿನ್ನವಾದ ಪರಿಸರದಲ್ಲಿ ಅರಳುವ ಸಂಸ್ಕೃತಿಗಳು ಅದಕ್ಕಿಂತ ಭಿನ್ನವಾದ ಆಹಾರ ಪದ್ಧತಿಗಳನ್ನು ಮತ್ತು ಸಂಸ್ಕೃತಿಗಳನ್ನು ರೂಪಿಸಿಕೊಳ್ಳುತ್ತವೆ. ಆದರೆ ಒಂದು ದೇಶವಾಗಿ ಮತ್ತು ಅದರ ನಾಗರಿಕರಾಗಿ ಈ ವಿಭಿನ್ನ ಸಂಸ್ಕೃತಿಯ ಜನಾಂಗಗಳು ಐಕ್ಯಜೀವನ ನಡೆಸುವಾಗ ಪರಸ್ಪರರ ಸಂಸ್ಕೃತಿಯನ್ನು ಗೌರವಿಸುವ ಮತ್ತು ಸಹಬಾಳ್ವೆ ನಡೆಸುವ ಪ್ರಜಾತಾಂತ್ರಿಕ ಸಂಸ್ಕೃತಿ ಅತ್ಯಗತ್ಯವಾಗುತ್ತದೆ. ಅಂಥಾ ಬಹುಸಂಸ್ಕೃತಿ ರಾಷ್ಟ್ರವೊಂದರ ಪ್ರಭುತ್ವಕ್ಕೆ ಈ ಸಾಂಸ್ಕ?ೃತಿಕ ಬಹುತ್ವವನ್ನು ಕಾಪಾಡಿಕೊಂಡು ಬರುವ ಹೊಣೆಗಾರಿಕೆ ಇರುತ್ತದೆ.
ನಮ್ಮ ದೇಶದಲ್ಲಿ ವಿವಿಧ ಐತಿಹಾಸಿಕ ಕಾರಣಗಳಿಂದ ಬಗೆಬಗೆಯ ಆಹಾರ ಸಂಸ್ಕೃತಿಗಳು ನೆಲೆಗೊಂಡಿವೆ. ಈ ದೇಶದ ಹಲವು ಸಹಸ್ರ ವರ್ಷಗಳ ನಾಗರಿಕತೆಯಲ್ಲಿ ಶುದ್ಧ ಶಾಖಾಹಾರಿ ಸಂಸ್ಕೃತಿಯಿಂದ ಮೊದಲುಗೊಂಡು ಗೋಮಾಂಸ ಭಕ್ಷಣೆಯವರೆಗಿನ ವೈವಿಧ್ಯಮಯ ಆಹಾರ ಸಂಸ್ಕೃತಿಗಳು ವಿಕಸನಗೊಂಡಿವೆ. ಇವೆಲ್ಲವೂ ಈ ದೇಶದ ಆಹಾರ ಪದ್ಧತಿಗಳೇ ಆಗಿದ್ದು ಯಾವುದೂ ಮತ್ತೊಂದಕ್ಕಿಂತ ಮೇಲೂ ಅಲ್ಲ, ಕೀಳೂ ಅಲ್ಲ. ಬಹುತ್ವವನ್ನು ಗೌರವಿಸುವ ಪರಂಪರೆಯುಳ್ಳ ನಮ್ಮ ದೇಶದಲ್ಲಿ ಯಾವುದೇ ಆಹಾರಪದ್ಧತಿಯನ್ನು ಹೀನಾಯವಾಗಿ ನೋಡುವ ಅಥವಾ ಯಾವುದಾದರು ಒಂದು ಆಹಾರ ಪದ್ಧತಿಯನ್ನು ಪುರಸ್ಕರಿಸಿ ಮತ್ತೊಂದು ಆಹಾರ ಪದ್ಧತಿಯನ್ನು ನಿಷೇಧಿಸಿದ ಉದಾಹರಣೆಯೂ ಇಲ್ಲ.
ಇಷ್ಟಾಗಿಯೂ ಭಾರತದಲ್ಲಿ ಕೆಲವು ಸಮುದಾಯ ದವರು ಗೋವನ್ನು ಪವಿತ್ರ ಎಂದು ಭಾವಿಸುತ್ತಿರುವುದನ್ನು ಸಮಾಜ ಗೌರವಿಸುತ್ತಲೇ ಬಂದಿದೆ. ಹಾಗೆಯೇ ಗೋವನ್ನು ಒಂದು ಆಹಾರವಾಗಿ ಬಳಸುವವರೂ ಬಹುದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ಹೀಗಾಗಿಯೇ ಸ್ವಾತಂತ್ರ್ಯಾನಂತರದಲ್ಲಿ ನಮ್ಮ ದೇಶದ ಬಹುತ್ವ ಸಂಸ್ಕೃತಿಯ ಆಶಯವನ್ನು ಧ್ಯೇಯವಾಗಿಟ್ಟುಕೊಂಡು ಸಂವಿಧಾನ ರಚನಾ ಸಭೆಯಲ್ಲಿ ಸಾಕಷ್ಟು ಚರ್ಚೆಗಳು ನಡೆದವು.
1948ರ ನವಂಬರ್ 24ರಂದು ಸಂವಿಧಾನ ರಚನಾ ಸಭೆಯಲ್ಲಿ ಈ ಬಗ್ಗೆ ನಡೆದ ಚರ್ಚೆಯಲ್ಲಿ ಪಂಡಿತ್ ಠಾಕೂರ್ ದಾಸ್ ಭಾರ್ಗವ, ಸೇಠ್ ಗೋವಿಂದ್ ದಾಸ್ ಹಾಗೂ ಇನ್ನಿತರ ಕೆಲವು ಹಿಂದೂ ಮೂಲಭೂತವಾದಿಗಳು ಗೋಹತ್ಯಾ ನಿಷೇಧವನ್ನು ಮೂಲಭೂತ ಹಕ್ಕಾಗಿ ಸೇರಿಸಬೇಕೆಂದು ಒತ್ತಾಯಿಸಿದ್ದರು. ಇವರೊಂದಿಗೆ ಆಗಿನ ಯುನೈಟೆಡ್ ಪ್ರಾವಿನ್ಸ್ ಪ್ರದೇಶವನ್ನು ಪ್ರತಿನಿಧಿಸುತ್ತಿದ್ದ ಮುಸ್ಲಿಮ್ ಪ್ರತಿನಿಧಿ ಜೆಡ್.ಹೆಚ್. ಲಾರಿ ಮತ್ತು ಅಸ್ಸಾಮಿನ ಮೊಹಮ್ಮದ್ ಸೈದುಲ್ಲಾ ಎಂಬುವರೂ ಧ್ವನಿಗೂಡಿಸಿದ್ದರು. ಆದರೆ ಡಾ. ಅಂಬೇಡ್ಕರ್, ಅಂದಿನ ಪ್ರಧಾನಿ ನೆಹರೂ ಹಾಗೂ ಇನ್ನಿತರರು ಅದರ ದೂರಗಾಮಿ ಪರಿಣಾಮದ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಟ್ಟರು. ಅಂಥಾ ಒಂದು ಕಾನೂನು ಜಾರಿಗೆ ಬಂದರೆ ರೈತಾಪಿಗಳಿಗೆ ಧಕ್ಕೆ ಬರುವುದರಿಂದ ರೈತಾಪಿಯ ಹಿತಾಸಕ್ತಿಗೂ, ಗೋಮಾಂಸ ಆಹಾರ ಪದ್ಧತಿ ಉಳ್ಳವರ ಆಸಕ್ತಿಗೂ ಮತ್ತು ಗೋವನ್ನು ಪವಿತ್ರ ಎಂದು ಭಾವಿಸುವವರ ಭಾವನೆಗೂ ಧಕ್ಕೆ ಬರದಂತೆ 48ನೇ ಪರಿಚ್ಛೇಧವನ್ನು ಸಂವಿಧಾನದ ನಿರ್ದೇಶನಾ ತತ್ವದಡಿಯಲ್ಲಿ ಸೇರಿಸಲಾಯಿತು.
48 ನೇ ಪರಿಚ್ಛೇಧ:
“The State
shall endeavour to organise agriculture and animal husbandry on modern and
scientific lines and shall in particular take steps for preserving and
improving the breeds of cattle and prohibit the slaughter of cow and other
useful cattle, specially milch and draught cattle and their young stock.”
ಎಂದಷ್ಟೇ ಹೇಳುತ್ತದೆ. ಅಂದರೆ ದೇಶದ ಕೃಷಿಕ್ಷೇತ್ರ ಮತ್ತು ಪಶು ಸಂಗೋಪನೆಯನ್ನು ಆಧುನಿಕ ಮತ್ತು ವೈಜ್ಞಾನಿಕ ನೆಲೆಯಲ್ಲಿ ಪುನರ್‍ಸಂಘಟಿಸಬೇಕು ಹಾಗೂ ಪ್ರಭುತ್ವವು ಕೃಷಿಸೇವೆಯಲ್ಲಿ ಮತ್ತು ಹೈನುಗಾರಿಕೆಯಲ್ಲಿ ಬಳಸಲಾಗುವ ಜಾನುವಾರುಗಳಾದ ಹಸು, ದನ, ಕೋಣ, ಎಮ್ಮೆಯಂಥ ರಾಸುಗಳ ಮತ್ತವುಗಳ ಕರುಗಳ ಹತ್ಯೆ ತಡೆಗಟ್ಟಲು ಮತ್ತು ರಕ್ಷಿಸಲು ಕಾನೂನನ್ನು ರಚಿಸಬೇಕು. ಹಾಗೆಯೇ ಇದರಲ್ಲಿ ಸ್ಪಷ್ಟವಾಗಿ ಕಾಣುವಂತೆ ಈ ಕಲಮಿನಲ್ಲಿ ಗೋಹತ್ಯಾ ನಿಷೇಧವನ್ನು ಸಾರಾಸಗಟಾಗಿ ಮಾಡಬೇಕೆಂಬ ಅಥವಾ ಗೋವು ಮಾತ್ರ ಪವಿತ್ರವೆಂಬ ದೃಷ್ಟಿಯಾಗಲೀ ಇಲ್ಲ.
ಅದೇರೀತಿ 1948ರಲ್ಲಿ ರಚಿಸಲಾದ ದಾತಾರ್ ಸಮಿತಿ `ಸಂಪೂರ್ಣ ಗೋಹತ್ಯಾ ನಿಷೇಧ ಅಪೇಕ್ಷಣೀಯವಾದರೂ ಅದನ್ನು ಎರಡು ಹಂತದಲ್ಲಿ ಮಾಡಬೇಕು. ಮೊದಲ ಹಂತದಲ್ಲಿ 14 ವರ್ಷಕ್ಕೆ ಮೇಲ್ಪಟ್ಟ ಹಸುಗಳನ್ನು ಒಳಗೊಂಡಂತೆ ಇತರ ಜಾನುವಾರುಗಳ ಹತ್ಯೆಗೆ ಅವಕಾಶ ನೀಡಬೇಕು. ಆ ನಂತರ ಕ್ರಮೇಣ, ಸಾಧ್ಯವಾದರೆ ಎರಡು ವರ್ಷಗಳಲ್ಲಿ ಸಂಪೂರ್ಣ ಗೋಹತ್ಯಾ ನಿಷೇಧ ಜಾರಿಗೆ ತರಬೇಕು’ ಎಂದು ಶಿಫಾರಸ್ಸು ಮಾಡಿತ್ತು. ಅದರಂತೆ ಮೊದಲ ಹಂತದ ನಿಷೇಧ ಅಂದರೆ 14 ವರ್ಷಗಳಾಗದ ಗೋವುಗಳ ಹತ್ಯೆಯನ್ನು ನಿಷೇಧಿಸುವ ಕಾನೂನು ಕರ್ನಾಟಕವನ್ನೂ ಒಳ ಗೊಂಡಂತೆ ಹಲವು ರಾಜ್ಯಗಳು ಜಾರಿಗೆ ತಂದವು.
ಆದರೆ 1954ರಲ್ಲಿ ಕೇಂದ್ರ ಕೃಷಿ ಇಲಾಖೆಯ ಆಯುಕ್ತ ನಂದಾರವರ ನೇತೃತ್ವದಲ್ಲಿ ರಚಿಸಲಾಗಿದ್ದ ಸಮಿತಿ `ಭಾರತದಲ್ಲಿ ಸಂಪೂರ್ಣ ಗೋಹತ್ಯಾ ನಿಷೇಧ ಸಾಧ್ಯವೂ ಇಲ್ಲ, ಸಾಧುವೂ ಅಲ್ಲ. ಭಾರತದಲ್ಲಿ ಹಸಿರು ಹುಲ್ಲು ಮತ್ತು ಪಶು ಆಹಾರದ ಕೊರತೆ ಇರುವುದರಿಂದ ಶೇ.40ರಷ್ಟು ಜಾನುವಾರುಗಳನ್ನು ಮಾತ್ರ ಸಾಕಲು ಸಾಧ್ಯ. ಉಳಿದ ಶೇ. 60 ರಾಸುಗಳನ್ನು ಗೊಡ್ಡು ಮಾಡಬೇಕು’ ಎಂದು ಸಲಹೆ ನೀಡಿತ್ತು. ಈ ವರದಿ ನೀಡಿದ್ದು ಮುಸ್ಲಿಮರೂ ಅಲ್ಲ, ಕೃಷಿಯ ಬಗ್ಗೆ ಜ್ಞಾನ ಇಲ್ಲದವರೂ ಅಲ್ಲ ಎಂಬುದನ್ನು ಇಲ್ಲಿ ಒತ್ತಿಹೇಳಲೇ ಬೇಕು. 1976ರಲ್ಲಿ ರಾಷ್ಟ್ರೀಯ ಕೃಷಿ ಆಯೋಗವು ನೀಡಿದ್ದ ವರದಿಯಲ್ಲೂ ಎಮ್ಮೆ ಹಾಗೂ ಇತರ ಹಾಲು ನೀಡುವ ಜಾನುವಾರುಗಳ ಗುಣಮಟ್ಟವನ್ನು ಹೆಚ್ಚಿಸಬೇಕು ಮತ್ತು ಎಮ್ಮೆಗಳನ್ನು ಕೇವಲ ಹಾಲಿಗಾಗಿ ಮಾತ್ರವಲ್ಲದೆ ಉತ್ತಮ ಮಾಂಸ ಪಡೆಯುವ ದೃಷ್ಟಿಯಿಂದಲೂ ಸಾಕಾಣಿಕೆಗೆ ಉತ್ತೇಜನ ನೀಡಬೇಕೆಂದು ವರದಿ ನೀಡಿತ್ತು. ಇದಲ್ಲದೆ ಮೊದಲನೆ ಪಂಚವಾರ್ಷಿಕ ಯೋಜನೆಯಿಂದ ಹಿಡಿದು 11ನೇ ಪಂಚವಾರ್ಷಿಕ ಯೋಜನೆಯವರೆಗೆ ಎಲ್ಲಾ ಯೋಜನೆಗಳು ಜೀವಂತವಿರುವ ಎಲ್ಲಾ ಜಾನುವಾರುಗಳನ್ನು ಸಾಕುವಷ್ಟು ಮೇವು ಹಾಗೂ ಪಶು ಆಹಾರವಿಲ್ಲವೆಂದು ಸ್ಪಷ್ಟವಾಗಿಯೇ ಹೇಳುತ್ತಲೇ ಬಂದಿವೆ.
ಇಂದು ಗೋಹತ್ಯೆಯಿಂದ ಜಾನುವಾರುಗಳ ಸಂಖ್ಯೆ ಇಳಿಯುತ್ತದೆಯೆಂದು ಸಂಘಪರಿವಾರ ಬೊಬ್ಬೆ ಹಾಕುತ್ತಿದೆಯಾದರೂ 1977ರಲ್ಲಿ 17 ಕೋಟಿಯಷ್ಟಿದ್ದ ಜಾನುವಾರುಗಳ ಸಂಖ್ಯೆ ಈಗ 20 ಕೊಟಿಯಷ್ಟಾಗಿದೆಯೆಂದು ಸರ್ಕಾರಿ ಅಂಕಿಅಂಶಗಳೇ ಹೇಳುತ್ತಿವೆ. ಆದರೆ ಪಶು ಸಂರಕ್ಷಣೆಗೆ ನೀಡುತ್ತಿದ್ದ ಹಣ ಮಾತ್ರ 9ನೇ ಯೋಜನೆಯಲ್ಲಿ ಯೋಜನಾ ವೆಚ್ಚದ ಶೇ.1.1ರಷ್ಟಿದ್ದದ್ದು 10ನೇ ಆಯೋಗದಲ್ಲಿ ಶೇ.0.6ಕ್ಕೆ ಇಳಿದಿದೆ. ಹೀಗಾಗಿ ಪಶು ಸಾಕಣೆ ಎಂಬುದು ರೈತನ ಪಾಲಿಗೆ ಮತ್ತೊಂದು ನೇಣುಕುಣಿಕೆಯೇ ಆಗುತ್ತಿದೆ.
1950ರಿಂದೀಚೆಗೆ ದೇಶದ ಹಲವಾರು ರಾಜ್ಯಗಳು ಉಪಯುಕ್ತ ಗೋವು, ಜಾನುವಾರುಗಳು ಮತ್ತು ಅವುಗಳ ಕರುಗಳನ್ನು ರಕ್ಷಿಸುವ ಕಾನೂನನ್ನು ಜಾರಿಗೆ ತಂದಿವೆ. ದೇಶದಲ್ಲಿ ಎಲ್ಲೂ ಸಂಪೂರ್ಣವಾಗಿ ಗೋಹತ್ಯಾ ನಿಷೇಧದ ಕಾನೂನು ಜಾರಿಗೆ ಬಂದಿಲ್ಲ. ಏಕೆಂದರೆ ಅಂಥಾ ಕಾನೂನು ಗೋಮಾಂಸ ತಿನ್ನುವವರನ್ನಷ್ಟೇ ಅಲ್ಲದೆ ಕೃಷಿ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ರೈತರನ್ನು ಇನ್ನಷ್ಟು ಸಂಕಷ್ಟಕ್ಕೆ ಈಡು ಮಾಡುತ್ತದೆ. ಅಲ್ಲದೆ ಸರ್ಕಾರ ರೈತನಿಗೆ ನೀಡುತ್ತಿದ್ದ ಎಲ್ಲಾ ಸಹಾಯ ಮತ್ತು ಸಹಕಾರಗಳನ್ನು ಹಿಂತೆಗೆದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಅನುಪಯುಕ್ತ ಜಾನುವಾರುಗಳ ಕಡ್ಡಾಯ ರಕ್ಷಣೆಯು ರೈತನನ್ನು ಇನ್ನಷ್ಟು ಆತ್ಮಹತ್ಯೆ ಕಡೆಗೆ ದೂಡುತ್ತದೆ.
ಆದರೆ ಅಲ್ಪಸಂಖ್ಯಾತ ದ್ವೇಷವನ್ನೇ ತಮ್ಮ ರಾಜಕೀಯದ ತಿರುಳನ್ನಾಗಿ ಮಾಡಿಕೊಂಡಿರುವ ಹಿಂದೂತ್ವವಾದಿಗಳು ಈ ದೇಶದ ಇತಿಹಾಸವನ್ನು, ಜನತೆಯ ನಂಬಿಕೆ, ವಿಶ್ವಾಸ ಮತ್ತು ಪುರಾಣಗಳನ್ನು ವಿಕೃತವಾಗಿ ತಿರುಚುತ್ತಾ ಬಂದಿದ್ದಾರೆ. ಈ ದೇಶದಲ್ಲಿ ಗೋಮಾಂಸ ಭಕ್ಷಣೆ ಪ್ರಾರಂಭವಾಗಿದ್ದೇ ಮುಸ್ಲಿಂ ದೊರೆಗಳ ದಾಳಿಯ ನಂತರ ಎಂದು ಹೇಳುತ್ತಾ ಇತಿಹಾಸವನ್ನು ವಿಕೃತಗೊಳಿ ಸುತ್ತಿರುವ ಈ ಹಿಂದೂತ್ವವಾದಿಗಳು ಈ ದೇಶದಲ್ಲಿ ಬುದ್ಧಧರ್ಮ ಅಸ್ತಿತ್ವಕ್ಕೆ ಬರುವ ಮುನ್ನ ಆರ್ಯರು ಎಂದು ಹೇಳಿಕೊಳ್ಳುವ ಎಲ್ಲರೂ ಗೋಮಾಂಸ ಭಕ್ಷಕರೇ ಆಗಿದ್ದರೆಂಬುದನ್ನು ಮರೆಮಾಚುತ್ತಿದ್ದಾರೆ. ಮನುಸ್ಮೃತಿ, ತೈತ್ತರೀಯ ಬ್ರಾಹ್ಮಣ, ಹಲವು ವೇದಸ್ಮೃತಿಗಳೂ ಸಹ ಗೋಮಾಂಸ ಭಕ್ಷಣೆಯನ್ನು ನಿಷೇಧಿಸಿರಲಿಲ್ಲ ಎಂಬುದನ್ನು ಸಹ ಮುಚ್ಚಿಡುತ್ತಿದ್ದಾರೆ. ತಮ್ಮ ಶ್ರೇಣಿಕೃತ ಸಾಮಾಜಿಕ ನೀತಿಗೆ ವಿರುದ್ಧವಾಗಿದ್ದ ಬೌದ್ಧ ಧರ್ಮದದಿಂದ ಜನತೆಯನ್ನು ಆಕರ್ಷಿಸಲು ಆವರೆಗೆ ಗೋಮಾಂಸ ಭಕ್ಷಣೆಯನ್ನೇ ಪ್ರಚಾರ ಮಾಡುತ್ತಿದ್ದ ಬ್ರಾಹ್ಮಣಧರ್ಮವು ಗೋಮಾಂಸವನ್ನೇ ಅಲ್ಲದೆ ಮಾಂಸಾಹಾರವನ್ನೇ ತ್ಯಜಿಸಿತೆಂಬುದನ್ನು ಡಾ. ಅಂಬೇಡ್ಕರ್‍ರವರು ತಮ್ಮ “BRAHMIN AND THE DEAD COW” ಎಂಬ ಲೇಖನದಲ್ಲಿ ಸ್ಪಷ್ಟಪಡಿಸುತ್ತಾರೆ. ಹಾಗೆಯೇ ಗೋಮಾಂಸ ಭಕ್ಷಣೆಯನ್ನು ಮುಂದುವರೆಸಿದ್ದರಿಂದಲೇ ದಲಿತರನ್ನು ಹಿಂದೂ ಸಮಾಜ ಅಸ್ಪೃಶ್ಯರನ್ನಾಗಿ ಕಾಣಲು ಕಾರಣವಾಯಿತೆಂದು ವಾದಿಸುತ್ತಾರೆ. ಇಂದಿಗೂ ದಲಿತ, ಆದಿವಾಸಿ ಮತ್ತು ಶೂದ್ರ ಸಮುದಾಯಗಳಿಗೆ ಸುಲಭದಲ್ಲಿ ಸಿಗಬಹುದಾದ ಪೌಷ್ಠಿಕ ಆಹಾರ ಗೋಮಾಂಸವೇ ಆಗಿದೆ. ಈ ಎಲ್ಲಾ ಹಿನ್ನೆಲೆಯಿಂದಲೇ ಡಾ. ಅಂಬೇಡ್ಕರ್‍ರವರು ಗೋಹತ್ಯಾ ನಿಷೇಧವನ್ನು ಸಂವಿಧಾನ ದಲ್ಲಿ ಮೂಲಭೂತ ಹಕ್ಕಾಗಿ ಸೇರಿಸಬಾರದೆಂದೂ ಅಥವಾ ಗೋಮಾಂಸ ಭಕ್ಷಣೆಯನ್ನು ಹೀನಾಯವಾಗಿ ನೋಡಬಾರದೆಂದೂ ಬಲವಾಗಿ ವಾದಿಸಿದ್ದರು. ಆದರೂ ಗೃಹಮಂತ್ರಿ ವಿ.ಎಸ್.ಆಚಾರ್ಯ ಡಾ. ಅಂಬೇಡ್ಕರ್‍ರವರು ಗೋಹತ್ಯಾ ನಿಷೇಧದ ಪರವಾಗಿದ್ದರೆಂದು ಅಧಿಕೃತ ಹೇಳಿಕೆ ನೀಡುತ್ತಾ ಇತಿಹಾಸವನ್ನೇ ತಿರುಚುತ್ತಿದ್ದಾರೆ.
ಕರ್ನಾಟಕದಲ್ಲೂ ಉಪಯುಕ್ತ ಗೋವುಗಳ ರಕ್ಷಣೆ ಮಾಡುವ ಶಾಸನವೊಂದು 1964ರಲ್ಲಿ ಜಾರಿಗೆ ಬಂದಿದೆ.THE KARNATAKA
PREVENTION OF COW SLAUGHTER AND CATTLE PRESERVATION ACT, 1964 ಪ್ರಕಾರ ಗೋಹತ್ಯೆಯನ್ನು ತಡೆಗಟ್ಟುವ ಬಗ್ಗೆ ಅಸ್ಪಷ್ಟವಾದ ಆದೇಶವಿದ್ದರೂ ಕಾಯಿದೆಯ 5 (1) ಮತ್ತು (2) ನೇ ಕಲಮುಗಳಲ್ಲಿ 12 ವರ್ಷಕ್ಕೆ ಮೇಲ್ಪಟ್ಟ ರಾಸುಗಳನ್ನು ಹತ್ಯೆ ಮಾಡಲು ಪರವಾನಗಿ ನೀಡಲಾಗಿದೆ. ಅದಕ್ಕೆ ಪಶುವೈದ್ಯರ ಪರವಾನಗಿಯಷ್ಟೇ ಬೇಕಾಗುತ್ತದೆ. ಈವರೆಗೆ ಕರ್ನಾಟಕದಲ್ಲಿರುವ ಕಸಾಯಿಖಾನೆಗಳೂ ಸಹ ಇದೇ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿವೆ. ಸಾಮಾನ್ಯವಾಗಿ ಸರ್ಕಾರದಿಂದ ಮಾನ್ಯತೆ ಪಡೆದ ಕಸಾಯಿಖಾನೆಗಳಲ್ಲಿ ವ್ಯವಹಾರದಲ್ಲಿರುವ ವ್ಯಾಪಾರಿಗಳ್ಯಾರೂ ಕರುಗಳ ನ್ನಾಗಲಿ, 12 ವರ್ಷ ವಯಸ್ಸಾಗದ ರಾಸುಗಳನ್ನಾಗಲಿ ಕೊಲ್ಲುವುದಿಲ್ಲ. ಎಲ್ಲಾ ವ್ಯವಹಾರಗಳಲ್ಲಿ ಇರುವಂತೆ ಅಲ್ಲಿಯೂ ಕೆಲವರು ಈ ನಿಯಮವನ್ನು ಉಲ್ಲಂಘಿ ಸುತ್ತಾರಾದರೂ ಅಂಥವರ ಮೇಲೆ ಕ್ರಮ ತೆಗೆದು ಕೊಳ್ಳುವುದಕ್ಕೆ ಈ ಕಾಯಿದೆಯಲ್ಲಿ ಅವಕಾಶವಿದೆ.
ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಆಹಾರ ಸಂಸ್ಕೃತಿಯ ಮೇಲೂ ದ್ವೇಷ ರಾಜಕಾರಣ ಮಾಡುತ್ತಾ ಗೋಹತ್ಯೆಯನ್ನಿರಲಿ ಗೋಮಾಂಸ ಭಕ್ಷಣೆಯನ್ನೇ ದೇಶದ್ರೋಹದಷ್ಟು ಅಪರಾಧ ಎಂದು ಬಣ್ಣಿಸುತ್ತಿದೆ. ಅದರ ಮೂಲಕ ಅಲ್ಪಸಂಖ್ಯಾತರ ಮೇಲೆ ಮಾತ್ರವಲ್ಲ ದಲಿತ ಮತ್ತು ಶೂದ್ರರ ಆಹಾರ ಸಂಸ್ಕೃತಿಯ ಮೇಲೂ ಸಾಂಸ್ಕೃತಿಕ ದಾಳಿಯನ್ನು ನಡೆಸುತ್ತಿದೆ.
The Karnataka
Prevention Of Cow Slaughter And Cattle Preservation (Amendment) Bill, 2009 ಎಂಬ ಈ ಮಸೂದೆಯಲ್ಲಿ ಪ್ರಸ್ತಾಪಿಸಲಾಗಿ ರುವ ತಿದ್ದುಪಡಿಯ ಪ್ರಕಾರ ಸರ್ಕಾರ ಯಾವುದೇ ವ್ಯಕ್ತಿಯನ್ನು ಈ ಕಾನೂನನ್ನು ಜಾರಿಗೆ ತರಲು “ಅಧಿಕೃತ ವ್ಯಕ್ತಿ”ಯನ್ನಾಗಿ ನೇಮಿಸಬಹುದು. ಆ ವ್ಯಕ್ತಿಗೆ ಎಲ್ಲಿಯಾದರೂ ಈ ಕಾನೂನು ಉಲ್ಲಂಘನೆಯಾಗುತ್ತಿದೆ ಎಂಬ ಮಾಹಿತಿ ದೊರಕಿದರೆ ಅಂಥ “ಜಾಗವನ್ನು ತಪಾಸಣೆ ಮಾಡುವ”, “ಆ ಜಾನುವಾರುಗಳನ್ನು ಮತ್ತು ಸಾಗಾಟಕ್ಕೆ ಬಳಸುತ್ತಿದ್ದ ವಾಹನವನ್ನು ಜಫ್ತಿ ಮಾಡುವ” ಅಧಿಕಾರವನ್ನು ನೀಡುತ್ತಿದೆ. ಅಲ್ಲದೆ ಜಫ್ತಿಯಾದ ವಾಹನವನ್ನು ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಹರಾಜು ಮಾಡುವ ಅಧಿಕಾರವನ್ನು ಜಿಲ್ಲಾಧಿಕಾರಿಗೆ ನೀಡುತ್ತದೆ. ಇದರ ವಿರುದ್ಧ ಜಿಲ್ಲಾ ನ್ಯಾಯಾಲಯದಾಚೆಗೆ ದಾವೆಯನ್ನು ಹೂಡುವ ಅವಕಾಶವನ್ನೂ ತಿದ್ದುಪಡಿಯು ನಿರಾಕರಿಸುತ್ತದೆ.
ಇವಿಷ್ಟೂ ಸರ್ಕಾರ ಮುದ್ರಿತ ಮಾಹಿತಿಯಲ್ಲಿ ಸೂಚಿಸಿರುವ ತಿದ್ದುಪಡಿಗಳು. ಆದರೆ ಮಂತ್ರಿಗಳು ತಾವು ತರಲಿರುವ ತಿದ್ದುಪಡಿಯು ಗೋಹತ್ಯೆಯನ್ನು ಮಾತ್ರವಲ್ಲ ಗೋಮಾಂಸ ಭಕ್ಷಣೆಯನ್ನೇ ಅಪರಾಧವನ್ನಾಗಿಸುತ್ತದೆ ಎಂದು ಘೋಷಿಸಿದ್ದಾರೆ. ಭಜರಂಗದಳವನ್ನು ಅಧಿಕೃತ “ಗೋ ಸೇವಾ ಸಮಿತಿ”ಗಳನ್ನಾಗಿ ರಚಿಸಿ ಅಧಿಕಾರ ಕೊಡುವ ಮಾತನ್ನಾಡುತ್ತಿದ್ದಾರೆ. ಅಷ್ಟು ಮಾತ್ರವಲ್ಲದೆ ಪತ್ರಿಕಾ ವರದಿಗಳು ಹೇಳುವಂತೆ ಇಂಥಾ ನಿಯಮಗಳ ಉಲ್ಲಂಘನೆ ಮಾಡುವ ಮೂಲಕ ಘಟಿಸಲಾಗುವ ಅಪರಾಧಕ್ಕೆ 25,000 ರೂ. ಇಂದ 50,000 ರೂವರೆಗೆ ದಂಡ ಮತ್ತು 3-7 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸುವ ಪ್ರಸ್ತಾಪವಿದೆ (ಡೆಕ್ಕನ್ ಹೆರಾಲ್ಡ್, ಡಿಸೆಂಬರ್ 13, 2009).
ಅಂದರೆ ಗೋಹತ್ಯೆ ಮಾತ್ರವಲ್ಲ ಗೋ ಸಾಗಾಟ ಮತ್ತು ಗೋಮಾಂಸ ಭಕ್ಷಣೆಯೂ ಸಹ ದೇಶದ್ರೋಹದಂಥ ಅಪರಾಧವಾಗಿಬಿಡುತ್ತದೆ. ಹಾಗಾದಲ್ಲಿ ಅದು ಇಡೀ ಸಮಾಜದ ಮೇಲೆ ಸಂಘಪರಿವಾರಕ್ಕೆ ಅಮಿತವಾದ ಅಧಿಕಾರವನ್ನು ಕೊಟ್ಟು ಕಂಡರಿಯದ ಅರಾಜಕತೆಯನ್ನು ಉಂಟುಮಾಡುತ್ತದೆ. ಹೀಗಾಗಿ ಇದು ಕೇವಲ ಮುಸ್ಲಿಮರ ವಿರುದ್ಧದ ಕಾಯಿದೆ ಮಾತ್ರವಲ್ಲ. ಗೋಮಾಂಸ ಭಕ್ಷಣೆಯನ್ನು ಮಾಡುವ ದಲಿತರ, ಶೂದ್ರರ ಎಲ್ಲಾ ಅಬ್ರಾಹ್ಮಣರನ್ನು ಅಪರಾಧಿ ಗಳನ್ನಾಗಿ ಮಾಡುವ ಕಾಯಿದೆಯಾಗಿದೆ.
ಗೋವನ್ನು ಪವಿತ್ರ ಎಂದು ಭಾವಿಸುವ ಸಮುದಾಯದ ಭಾವನೆಗಳೂ ಗೌರವಾರ್ಹವೇ. ಆದರೆ ಈ ತಿದ್ದುಪಡಿಗಳು ಅವರ ಭಾವನೆಗಳ ದುರುಪಯೋಗ ಮಾಡಿಕೊಂಡು ದಲಿತ, ಶೂದ್ರ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ಭೌತಿಕ ಮತ್ತು ಸಾಂಸ್ಕೃತಿಕ ಹಲ್ಲೆಯನ್ನು ಮಾಡುವ ಉದ್ದೇಶ ಹೊಂದಿದೆ. ಆದ್ದರಿಂದ ಗೋಮಾಂಸ ಭಕ್ಷಣೆ ಮಾಡುವವರೂ, ಮಾಡದವರೂ, ಗೋವನ್ನು ಪವಿತ್ರ ಎಂದು ಭಾವಿಸುವವರು, ಮನುಷ್ಯರ ವಿವಿಧ ಆಹಾರದ ಸಂಸ್ಕೃತಿಗಳೂ ಮುಖ್ಯ ಎಂದು ನಂಬಿರುವವರು ಎಲ್ಲರೂ ಈ ತಿದ್ದುಪಡಿಗಳನ್ನು ವಿರೋಧಿಸಲೇ ಬೇಕಿದೆ.
ಏಕೆಂದರೆ ಇದು ಗೋಹತ್ಯೆಯನ್ನು ನಿಷೇಧಿಸಿ ನರಹತ್ಯೆಯನ್ನು ಪ್ರಚೋದಿಸುವ ಫ್ಯಾಸಿಸ್ಟ್ ಕಾಯಿದೆಯಾಗಿದೆ.