ಮಂಗಳವಾರ, ಜನವರಿ 10, 2017

ಕಥೆಗಳಲ್ಲಿ ತಂತ್ರ ಮತ್ತು ಅಭಿವ್ಯಕ್ತಿ


ಪ್ರೊ.ಕಿಕ್ಕೇರಿ ನಾರಾಯಣ

profile


ಸೌಜನ್ಯ:http://kikkerinarayana.in/

ಪುಸ್ತಕ: ಆಲೆಮನೆ

ಒಂದರ್ಥದಲ್ಲಿ ಪ್ರತಿಯೊಂದು ಕ್ರಿಯಾತ್ಮಕ ಬರಹವೂ ಒಂದು ಸಮಾಜ. ಸಂಸ್ಕೃತಿ ಮತ್ತು ಚರಿತ್ರೆಯೋಡನೆ, ಒಟ್ಟಿನಲ್ಲಿ ಜೀವದೊಡನೆ ಸೂಕ್ಷ್ಮವಾಗಿ ನಡೆಸುವ ಸಂವಾದವಾಗುವುದರ ಜೊತೆಗೆ ವ್ಯಾಖ್ಯಾನವೂ ಆಗಿರುತ್ತದೆ. ಕ್ರಿಯಾತ್ಮಕ ಬರಹಗಾರ ಸಮಾಜವನ್ನು ಭಿನ್ನವಾಗಿ ಗ್ರಹಿಸಿ ಅದನ್ನು ಪ್ರಸ್ತುತಪಡಿಸುವುದಕ್ಕಾಗಿ, ಓದುಗರೊಡನೆ ಸಂವಹನ ನಡೆಸುವುದಕ್ಕಾಗಿ ವಿಭಿನ್ನವಾಗಿ ಭಾಷೆಯನ್ನೂ ಬಳಸುತ್ತಾನೆ. ಏಕೆಂದರೆ ಸಾಹಿತ್ಯಕ್ಕೆ ಭಾಷೆಯೇ ದ್ರವ್ಯ. ಕಥೆಗಾರ ತಾನು ಅಂದುಕೊಂಡ ಪರಿಣಾಮವನ್ನು ಒಡ ಮೂಡಿಸಲು, ಈವರೆಗೂ ಓದುಗನ ಅನುಭವಕ್ಕೆ ಬಾರದಿರುವ ರೀತಿಯಲ್ಲಿ ಹೇಳಲು ಪ್ರಯತ್ನಿಸುತ್ತಾನೆ. ಹೀಗೆ ಹೇಳುವಾಗ ಸಾಮಾನ್ಯ ಭಾಷೆ ಸಾಕಾಗದಿದ್ದಾಗ ಮೇಲ್ನೋಟಕ್ಕೆ ಅಸಂಬದ್ದಿವಾಗಿ ಕಾನುವನ್ತೆಯೂ ಚಿತ್ರಿಸುತಾನೆ. ಸಾಮಾನ್ಯ ಕ್ರಮವನ್ನು ಬಿಟ್ಟು ವಿಶಿಷ್ಟ ಕ್ರಮವನ್ನು ಅನುಸರಿಸುತ್ತಾನೆ. ಹೀಗೆ ತಾನು ನಿರೀಕ್ಷಿಸಿದ ಪರಿಣಾಮವನ್ನು ಉಂಟು ಮಾಡಲು ಬಳಸುವ ವಿಧಾನವನ್ನು ತಂತ್ರ ಎಂದು ಕರೆಯಬಹುದು.

ಹಾಗೆ ನೋಡಿದರೆ ತಂತ್ರ, ಸಂವಿಧಾನ, ಸಂಕೇತ, ಪ್ರತಿಮೆ ಇತ್ಯಾದಿ ಪರಿಕಲ್ಪನೆಗಳು ನಮ್ಮ ಸಾಹಿತ್ಯದ ಸಂದರ್ಭದಲ್ಲಿ ಹೆಚ್ಹು ಬಳಕೆಗೆ ಬಂದವು. ಈ ಅಂಶಗಳು ಅದೆಷ್ಟರ ಮಟ್ಟಿಗೆ ಕ್ರಿಯಾತ್ಮಕ ಬರಹಗಳ ಸಂವಾದವನ್ನು ತೆಕ್ಕೆಗೆ ತೆಗೆದುಕೊಂಡುಬಿಟ್ಟಿತೆಂದರೆ ಮಾಸ್ತಿ, ಆನಂದ ಮುಂತಾದ ಕಥೆಗಾರರನ್ನೇ ಸಾಂಸ್ಕೃತಿಕ ಪ್ರಜ್ಞೆಯಿಂದ ದೂರ ಮಾಡಿಬಿಟ್ಟಿತು. ಈ ಸಮಯದಲ್ಲಿ ವಿಮರ್ಶಕರೊಬ್ಬರು ಮಾಸ್ತಿಯವರನ್ನು ಸಂದರ್ಶಿಸಿ ಅವರ ಕಥೆಗಳ ಬಗ್ಗೆ ತಂತ್ರದ ಬಗ್ಗೆ ಕೇಳಿದಾಗ “ತಂತ್ರ ಮಂತ್ರಗಳನ್ನು ಉಪಯೋಗಿಸಲು ನಾನೇನು ಮಲೆಯಾಳಿ ಮಾಂತ್ರಿಕನೆ” ಎಂದು ಉತ್ತರಿಸಿದ್ದು ಮಾರ್ಮಿಕವಾಗಿತ್ತು.

ಈ ಅಂಶವನ್ನು ಹೇಳಹೊರಟಿದ್ದೇಕೆಂದರೆ, ಬೇಸಗರಹಳ್ಳಿಯವರೂ ಬರವಣಿಗೆ ಪ್ರಾರಂಭಿಸಿದ್ದು ನವ್ಯ ಸಾಹಿತ್ಯ ತನ್ನ ಶೃಂಗ ಸ್ತಿತಿಯನ್ನು ಮುಟ್ಟಿದಾಗ. ಆದರೂ ಯಾವ ರೀತಿಯ ಬಾಹ್ಯ ತಂತ್ರಗಳಿಗೂ ಒಳಗಾಗದೆ ಜೀವನ ದ್ರವ್ಯವನ್ನೇ ಗಟ್ಟಿಯಾಗಿ ಆತುಕೊಂಡಿದ್ದು ಬಹಳ ಮುಖ್ಯ. ಏಕೆಂದರೆ ಅನೇಕ ವೇಳೆ ತಂತ್ರಗಳು ಎಷ್ಟೇ ಚೆನ್ನಾಗಿದ್ದರೂ ಒಮ್ಮ ಓದುಗ ಆ ತಂತ್ರವನ್ನು ಭೇದಿಸಿಬಿಟ್ಟರೆ – ಒಗತನು ಬಿಡಿಸಿ ಬಿಟ್ಟಂತೆ – ಸಂತೋಷ ಸಿಗಬಹುದು. ಇಂತಹ ತಾಂತ್ರಿಕತೆ ಉತ್ತಮ ಮಟ್ಟದ್ದಾದರೂ, ಜೀವ ಸೆಲೆಯೇ ಇಲ್ಲದೆ, ಜೀವನ ದ್ರವ್ಯ , ಕಂಡ ಕಾಣ್ಕೆ ತೆಳುವಾಗಿಬಿಡಬಹುದು. ಈ ಮಾದರಿಯ ಕಥೆಗಳು ಕನ್ನಡದಲ್ಲಿ ಬಂದವು. ಹೀಗೆಂದಾಕ್ಷಣ ಬೆಸಗರಹಳ್ಳಿಯವರ ಕಥೆಗಳಲ್ಲಿ ಸಂಕೇತ ಪ್ರತಿಮಗಳು ಇಲ್ಲವೆಂದೇ ಅಲ್ಲ. ‘ಒಂದು ಹುಡುಗನಿಗೆ ಬಿದ್ದ ಕನಸು’, ‘ಪ್ರಜಾಪ್ರಭುತ್ವ ಮತ್ತು ಮೂರು ಮಂಗಗಳು’ ಇತ್ಯಾದಿ ಕಥೆಗಳಲ್ಲಿ ಸಂಕೇತಗಳು ಕಥೆಯ ಮಡಿಲಿನೊಳಗಡೆಯೇ  ಇದೆ. ‘ಬೇಲ’ ಕಥೆಯಲ್ಲಂತೂ ಈ ಸಂಕೇತಗಳು ಬಹಳ ಸೂಕ್ಷ್ಮವಾಗಿ, ಸಹಜವಾಗಿ ಒಡ ಮೂಡಿವೆ.

ಸಾಮಾಜಿಕ ಕಾಳಜಿ, ಜೆ.ಪಿ.ಯವರ ಸಮಗ್ರ ಹೋರಾಟದ ಪರಿಕಲ್ಪನೆ, ನವಿರಾದ ನಾಚ್ ವಾಲೀ ಹೆಣ್ಣಿನ ಸಾನ್ನಿಧ್ಯ, ಅವಳ ಉನ್ನತ ಸಂಸ್ಕೃತಿ ಇವುಗಳು ಸಿಡುಬು ರೋಗ ನಿರ್ಮೂಲನೆಯ ಹಿನ್ನೆಲೆಯಲ್ಲಿ ಸಂಕೇತಗಳು ಎನ್ನಿಸಿಕೊಳ್ಳುವಷ್ಟರಲ್ಲೆ ಸಹಜ ನಿರೂಪಣೆಯಾಗಿ ತಿರುವು ಪಡೆಯುತ್ತಾ, ಇವೆಲ್ಲವೂ ಒಂದರೊಳಗೊಂದು ಮಿಳಿತವಾಗಿ, ಕಥಾನಕವು ಸಾಂಕೇತಿಕತೆ, ಪ್ರತಿಮ, ಪ್ರೀತಿ ಇವುಗಳು ಒಂದು ಇನ್ನೊಂದಾಗಿ ಹರಿದಾಡುತ್ತಾ, ಒಮ್ಮೊಮ್ಮೆ ಒಂದೇ ಎಲ್ಲವೂ ಆಗಿ, ಎಲ್ಲವೂ ಒಂದಾಗಿ ಮುಕ್ತಾಯಗೊಳ್ಳುವ ಸುಕೋಮಲ, ಸುಮಧುರ ಕಥೆಯಾಗಿ ಮೂಡಿ ಬಂದಿದೆ. “ಬೇಲ!” ಸಮಾಜದ ಎಲ್ಲಾ ರೀತಿಯ ಶೋಷಣೆ, ಪಿಡುಗು ಇವೆಲ್ಲ ಅಳಿದಾಗಲೇ ಸಮಗ್ರ ಕ್ರಾಂತಿ ಸಾಧ್ಯವೆಂದು ಹೆಚ್ಚು ಕಾತ್ಯಾತ್ಮಕವಾಗಿ ಸಾರುತ್ತದೆ. ಅಂದರೆ, ಸಾಮಾಜಿಕವಾಗಿ ಮಾತ್ರ ಕ್ರಾಂತಿಯಾದರೆ ಸಾಲದು, ಅದು ಸಾಂಸ್ಕೃತಿಕವಾಗಿಯೂ ರೋಗಗ್ರಸ್ತವಲ್ಲದೆಯೂ ಇರಬೇಕಾಗುತ್ತದೆ ಎಂಬುದನ್ನು ಸಿದ್ದವಾಗುತ್ತದೆ. ಅಲ್ಲದೆ, ಇಲ್ಲಿ ಸಂಪೂರ್ಣ ಕ್ರಾಂತಿಯನ್ನು ಕೇಂದ್ರವಾಗಿಟ್ಟುಕೊಂಡು ನೋಡಿದರೆ, ಬೇಲಳ ಪಾತ್ರ ಒಂದು ರೀತಿ ಕಂಡು ಬಂದರೆ, ಬೇಲಳೆ ಕೇಂದ್ರವಾದಾಗ ಆ ಸುಸಂಸ್ಕೃತ ಗ್ರಹಿಸುವ ರೀತಿ ಎಂಥದ್ದು ಎಂಬುದಕ್ಕೆ ಸಂಕೇತವಾಗುತ್ತದೆ. ಸಿಡುಬು ರೋಗ ಕೇಂದ್ರವಾದರೆ , ಕೇವಲ ‘ಬಾಹ್ಯ ಕುರೂಪ’ ಮಾತ್ರವನ್ನೇ ನಿರ್ಮೂಲನ ಮಾಡುವುದು ಕ್ರಾಂತಿಯಲ್ಲ. ‘ಆಂತರಿಕ ಕುರೂಪ’ವನ್ನು ನಿರ್ಮೂಲನ ಮಾಡಿಕೊಳ್ಳಬೇಕಾಗುವುದೂ ಅಗತ್ಯ ಎಂದು ತಿಳಿಸುತ್ತದೆ. ಈ ರೀತಿ ಈ ಕಥೆಯಲ್ಲಿ ಸಂಕೇತಗಳು ಒಂದರೊಳಗೊಂದು ಹದಗೊಂದು ಮಿಳಿತವಾಗಿಬಿಡುತ್ತವೆ. ಅಷ್ಟೇ ಅಲ್ಲ, ಇವು ಯಾವುದೂ ಸಕೆತವಲ್ಲ ಎಂದು ಸಲೀಸಾಗಿ ಓದಿಕೊಂಡರೂ ಅದರ ಮೂಲದ್ರವ್ಯ ದಕ್ಕದೇ ಇರುವುದಿಲ್ಲ. ಸಮಗ್ರ ಕ್ರಾಂತಿಯ ಅರ್ಥ ವಿಸ್ತಾರವಾಗುತ್ತದೆ.

ವಿಮರ್ಶಕರೊಬ್ಬರು ಈ ಕಥೆಯನ್ನು ಕೇವಲ ಬೆಲೆದಣ್ಣಿನ ಕಥೆಯ ಮಟ್ಟಕ್ಕೆ ಇಳಿಸಿ “ಓದಿ ತುಂಬಾ ಆನಂದಪಡುವ ವಾಚಕನಿಗೆ ಮೌಲ್ಯ ವಿವೇಚನೆ ಕಾಡುತ್ತದೆ. ನಾಯಕ ಬೇರೆ ಹೆಣ್ಣಿನೊಡನೆ ಕಳೆದ ಆತ್ಮೀಯ ಗಳಿಗೆಗಳನ್ನು ನೆನೆದು ಹೆಮ್ಮೆ ಪಡುವಂತೆ, ತನ್ನ ಹೆಂಡತಿ ಪರಪುರುಷನ ಸಹವಾಸದಲ್ಲಿ ಸುಖ ಪಡೆದರೆ ಅದನ್ನು ಭರಿಸುವ ಶಕ್ತಿ ಅವನಿಗಿದೆಯೇ? ಹೆಣ್ಣಿಗೊಂದು ನೀತಿ, ಗಂಡಿಗೊಂದು ನೀತಿ ತಾರತಮ್ಯವಲ್ಲದೆ? ಸಮಾನತಾ ಭಾವದಿಂದ ಪ್ರೇರಿತವಾಗುವ ಈ ಪ್ರಶ್ನೆಗಳನ್ನು ಎದುರಿಸುವ ತಾತ್ವಿಕತೆ ಈ ಕತೆಯಲ್ಲಿಲ್ಲವಾದ್ದರಿಂದ ಅದು ಎಷ್ಟೇ ಮನೋಹರವಾಗಿದ್ದರೂ ಕಳಪೆಯಾಗುತ್ತದೆ” ಎನ್ನುವುದು ಅವರು ಸಾಹಿತ್ಯವನ್ನು ಓದುವ ಬಡತನದ ರೀತಿಯನ್ನು ತೋರಿಸುತ್ತದೆ. ಒಟ್ಟಿನ ಪ್ರಬಂಧ ದ್ವನಿಯನ್ನು ಗ್ರಹಿಸದೆ ಮೂಡಿದ ‘ಹೇಳಿಕೆ’ಯಾಗುತ್ತದೆ.

ಅಂತೆಯೇ ‘ಚೆಲುವನ ಪರಂಗಿ ಗಿಡಗಳು’ ಸೂಕ್ಷಮತೆಯಿಂದ ಕೂಡಿದ ಬರವಣಿಗೆ, ಸ್ವಾಭಾವಿಕವಾಗಿ ಬೆಳೆದ ಕಥೆ. ಸಂಪೂರ್ಣ ಕಥೆಯೇ ಈ ನಾಡಿನ ಸಾತಂತ್ರೋತ್ತರ ಜನಗಳ ಪಾಡಿಗೆ ಸಂಕೇತವಾಗಿ ನಿಲ್ಲುತ್ತದೆ. ಕಥೆಯ ಕೇಂದ್ರ ಕಥೆಯಾಚೆಯಾಲಿ ಕಾಣಿಸಿಕೊಳ್ಳುತ್ತದೆ. ಚಲುವ ಮತ್ತು ಅವನ ಅಪ್ಪ ಮೂಗೂರ ಅಸಹಾಯಕರಂತೆ ಕಂಡುಬಂದರೂ ಸುಬ್ಬಣ್ಣನವರ ಒತ್ತಾಸೆಯಿಂದ ಎದೆಗುಂದದೆ ತಮ್ಮ ಸಾಮಾಜಿಕ, ಆರ್ಥಿಕ ದಬ್ಬಾಳಿಕೆಯೂ ಪ್ರತೀಕವಾದ ಗೋವಿಂದರಾಜುವನ್ನು ಬೇರೆ ರೀತಿಯಿಂದ ‘ಟೀಸ್’ ಮಾಡುವಂತೆ, ಆಚಲಮನಸ್ಸಿನವರಾಗಿ ಮತ್ತೊಮ್ಮೆ ಪರಂಗಿ ಗಿಡಗಳನ್ನು ನೆಡುವುದರ ಮೂಲಕ ತಮ್ಮ “ಬಡತನ ಕೋಪ”ವನ್ನು ಸೃಜನಾತ್ಮಕವಾಗಿ ಪರಿವರ್ತಿಸಿಕೊಂಡು, ದಬ್ಬಾಳಿಕೆಯನ್ನು ಎದುರಿಸಿ ನಿಲ್ಲುವ ಬೇರೆಯ ಪರಿಯನ್ನೇ ಕಂಡುಕೊಳ್ಳುತ್ತಾರೆ. ಇಲ್ಲಿ ಗಾಂಧೀವಾದ ಸಹಜವಾಗಿ ಮೂಡಿ ಬರುತ್ತದೆ. ಶೋಷಣೆ, ದಬ್ಬಾಳಿಕೆ ಇವುಗಳನ್ನು ಎದುರಿಸುವ ಬೇರೊಂದು ದಿಕ್ಕು ಇದೆ ಎಂದು ಸೂಚಿಸುತ್ತದೆ. ಇಲ್ಲಿ ದಬ್ಬಲಿಕೆಗಾಗುವ ಶಿಕ್ಷೆ ಬೇರೆ ಆಯಾಮವನ್ನು ಪಡೆಯುತ್ತದೆ.

ಇದೆ ರೀತಿಯಲ್ಲಿ ಬೆಸಗರಹಳ್ಳಿಯವರ ಕಥೆಗಳಲ್ಲಿ, ಮಂಗ. ಹಾವು, ಮಳೆ ಮುಂತಾದುವು ಬಹಳ ಸಹಜವಾಗಿ ನವಿರಾಗಿ ಕಥೆ ಹುಳುವ ತಂತ್ರವಾಗಿ ಬೆಳೆಯುತ್ತವೆ.

ಅಬಿವ್ಯಕ್ತಿಯ ದೃಷ್ಟಿಯಿಂದ ನೋಡಿದಾಗ ರಾಮಣ್ಣನವರ ಕಥೆಗಳನ್ನು ಸ್ಥೂಲವಾಗಿ ಮೂರು ರೀತಿಯ ಮಾದರಿಯೊಳಗೆ ಹಿಡಿಯಬಹುದು.

ಮೊದಲನೆಯದಾಗಿ ಮಹಾಭಾರತ ಮಾದರಿ:

ಈ ಮಾದರಿಯಲ್ಲಿ ಬರುವ ಕಥೆಗಳು ಒಂದೇ ಜಾತಿಯ, ಮನೆ ಅಥವಾ ಮನೆತನದವರಿಗೆ ಸಂಬಂಧಿಸಿದ ಕಥೆಯಾಗಿರುತ್ತವೆ. ಸುಗ್ಗಿ, ಮಳೆಗರೆಯಿತು ಬಾನು, ನೆಲದ ಉಸಿರು, ಸ್ವಾರ್ಥ ಇತ್ಯಾದಿ ಕಥೆಗಳು ಆಸ್ತಿಗಾಗಿ ತಂದೆ – ಮಗ, ಅಣ್ಣ – ತಮ ಅಥವಾ ತಂದೆ – ಮಗ ಅಣ್ಣ ತಮ್ಮರಂತೆ ಬದುಕುತ್ತಿದ್ದ ವ್ಯಕ್ತಿಗಳ ಪಾತ್ರದಲ್ಲಿ ಬರುವ ವೈಮನಸ್ಯಗಳು ಛಲ, ಶಕುನಿಯಂತಹ ಮಧ್ಯವರ್ತಿಗಳು ಇವರುಗಳಿಂದ ಆಗುವ ನಾಶ ಇತ್ಯಾದಿಗಳನ್ನು ರೂಪಕವಾಗಿ ಬಳಸಿಕೊಳ್ಳುತ್ತವೆ.

ಎರಡನೆಯದಾಗಿ ಸ್ಪ್ರುಶ್ಯ – ಅಸ್ಪೃಶ್ಯರ ನಡುವಿನ ಘರ್ಷಣೆಯ ಮಾದರಿ:

ಇಂಥಹ ಕಥೆಗಳಲ್ಲಿ ಮುಖ್ಯವಾಗಿ ಗೌಡರು ಮತ್ತು ಅಥವಾ ಬ್ರಾಹ್ಮಣರು ಹರಿಜನರೊಡನೆ ನಡೆಯುವ ಘರ್ಷಣೆಗಳಿವೆ. ಜೀತ, ಕಳೆ, ಅಭಿಮಾನ, ಘರ್ಜನೆ, ಹರಕೆಯ ಹಣ , ಕಕರನ ಯುಗಾದಿ, ಚಲುವನ ಪರಂಗಿ ಗಿಡಗಳು, ಈ ಎರಡನೆಯ ಮಾದರಿ ಕಥೆಗಳು. ಮೂರನೆಯದಾಗಿ ಬದಲಾಗುತ್ತಿರುವ ರಾಜಕೀಯ, ಸಾಮಾಜಿಕ, ಅಧಿಕಾರಶಾಹೀ ಹಿನ್ನೆಲೆಯಲ್ಲಿ ಪುನರ್ ಹೊಂದಾಣಿಕೆಗೆ ಒಳಗಾಗುತ್ತಿರುವ ಕಥೆಗಳು. ಇಲ್ಲಿ ಜಾತಿಯ ಹೊರತಾದ ದಬ್ಬಾಳಿಕೆಗಳು ನಡೆಯುತ್ತವೆ. ಮಾನವೀಯ ನೆಲೆಯನ್ನು ಕಂಡುಕೊಳ್ಳಲು ನಡೆಯುತ್ತಿರುವ ಅನುಸಂಧಾನದಂತೆ. ಮನುಷ್ಯನ ಸ್ವಾರ್ಥ ಅದರಿಂದಾಗುವ ಏಳು ಬೀಳುಗಳ ಕಡೆ ವಸ್ತು ವಾಲಿರುತ್ತದೆ. ಉದಾಹರಣೆಗೆ ತಾಯಿ, ಅಭಿಮಾನ, ಸಂತೆಯೊಳಗೊಂದು ಮನೆಯ ಮಾಡಿ ಕಥೆಗಳನ್ನು ಹೆಸರಿಸಬಹುದು. ಈ ಮಾದರಿಗಳ ಮೂಲಕ ಕಥೆಯ ಕರ್ಷಣೆಗೆ ಚಾಲನೆ ಸಿಗುತ್ತದೆ.

ಬೆಸಗರಹಳ್ಳಿಯವರು ತಮ ಎಲ್ಲಾ ಕಥೆಗಳಲ್ಲೂ ಬರುವ ಸಮಾಜ ಮತ್ತು ಅದರ ವಿವಿಧ ಶಕ್ತಿಗಳನ್ನು ಮುಖ್ಯವಾಗಿ ಜಾತಿಶಕ್ತಿ, ರಾಜಕೀಯ ಶಕ್ತಿ ಇವುಗಳನ್ನು ತಮ್ಮ ಅಭಿವ್ಯಕ್ತಿಯ ಮಾಧ್ಯಮವನ್ನಾಗಿ ಮಾಡಿಕೊಂಡು ಅವುಗಳ ವಿವಿಧ ಮಜಲುಗಳನ್ನು ಶೋಧಿಸುತ್ತಾರೆ.

ಇವರ ಕಥೆಗಳಲ್ಲಿ ನಡೆಯುವ ಸಂವಾದ (discourse) ಈ ಜಾತಿ ಶಕ್ತಿ, ರಾಜಕೀಯ ಶಕ್ತಿಗಳು ಸ್ವಾತಂತ್ರೋತ್ತರ ಫೂಡಲ್ ವ್ಯವಸ್ಥೆಗೆ ಸೇರಿದಂಥವು. ಇವುಗಳಲ್ಲಿಯೂ ಎರಡು ಬಗೆಯನು ಕಾಣಬಹುದು. ಮೊದಲನೆಯದಾಗಿ ದಲಿತವರ್ಗದವರು ಮೇಲ್ ವರ್ಗದ ಶೋಷಣೆ, ದಬ್ಬಾಳಿಕೆ ಇವುಗಳನ್ನು ಗುರುತಿಸಿಕೊಂಡು, ಯಾವ ರೀತಿಯಲ್ಲಿ ಅವರನ್ನು ವಿರೋಧಿಸುವುದು ಎಂದು ತಿಳಿಯದೆ, ಒಳಗೊಳಗೆ ಕುದಿಯುತ್ತಿರುವ ಸ್ಥಿತಿ. ಎರಡನೆಯದಾಗಿ ದಲಿತರು ಎಚ್ಚೆತ್ತುಕೊಳ್ಳುವ ಸ್ಥಿತಿಯಲ್ಲಿ ಬದಲಾಗುತ್ತಿರುವ ವ್ಯವಸ್ಥೆಯನ್ನು ಗ್ರಹಿಸಿ ಪ್ರತಿಕ್ರಿಯಿಸುವ ರೀತಿ.

ಯಾವುದೇ ಸಮಾಜವೂ ಅದು ಧರ್ಮಕೇಂದ್ರಿತ ರಾಜಕೀಯ ಶಕ್ತಿಗೆ ಬದಲಾದ ರೀತಿಯ ಸಮಾಜದ ಶಕ್ತಿಗೆ ರಾಜನ ಆಳ್ವಿಕೆಯ ಏಕವ್ಯಕ್ತ ಶಕ್ತಿಗೆ, ಪ್ರಜಾಪ್ರಭುತ್ವ ಸಮಾಜವಾದಿ ಶಕ್ತಿಗೆ ಒಳಗಾಗಿರಬಹುದು. ಈ ಎಲ್ಲಾ ಶಕ್ತಿಗಳು ತಮ್ಮ ತಮ್ಮ ಪ್ರಜೆಗಳನ್ನು ತಮ್ಮದೇ ಆದ ರೀತಿಯ ಶಕ್ತಿ ನಿಯಂತ್ರಣಕ್ಕೆ ಒಳಪಡಿಸುತ್ತಲೇ ಇರುತ್ತವೆ. ಹೀಗೆ ನಿಯಂತ್ರಣಕ್ಕೆ ಒಳಪಡಿಸುವಾಗ ಬೇರೆ ಬೇರೆ ರೀತಿಯ ‘ಶಿಕ್ಷೆ’ಗೂ ಒಳಪಡಿಸುತ್ತಲೇ ಇರುತ್ತದೆ. ಈ ಶಿಕ್ಷೆಗಳು ಕೇವಲ ದೈಹಿಕ ಶಿಕ್ಷೆಯಾಗಿ ಮಾತ್ರ ಪ್ರಕಟವಾಗದೆ, ಮಾನಸಿಕ ಶಿಕ್ಷೆಗೂ ಗುರಿಪಡಿಸುತ್ತಿರುತ್ತವೆ. ಈ ಶಿಕ್ಷೆಗಾಗಿ ವಿವಧ ರೀತಿಯ disciplineಗಳನ್ನು ಕಾಪಾಡಿಕೊಳ್ಳಲು ಹೊಸ ಹೊಸ ಕಾಯಿದೆ, ಕಟ್ಟು ಕಟ್ಟಲೆಗಳನ್ನು ಸೃಷ್ಟಿಸುತ್ತಿರುತ್ತವೆ.

ಫ್ಯೂಡಲ್ ವ್ಯವಸ್ಥೆಗೆ ಸೇರಿದ ಶಿಕ್ಷೆಯಲ್ಲಿ ಪೋಲಿಸರಾಗಲೀ, ಸರ್ಕಾರವಾಗಲೀ ಜನರನ್ನು ನೇರವಾಗಿ ಶಿಕ್ಷೆಗೆ ಒಳಪಡಿಸದಿದ್ದರೂ ಧರ್ಮ, ಆಚರಣೆ(rituals) ಇವುಗಳ ಮೂಲಕ ಶಕ್ತಿ, ರಾಜಕೀಯ ಮತ್ತು discipline (ಕಟ್ಟುಪಾಡು) ಮೀರಿದವರಿಗೆ ಶಿಕ್ಷೆ ಒದಗಿಸುವ ಶಕ್ತಿಯನ್ನು ಪಡೆದಿರುತ್ತವೆ. ಪ್ರಜಾಪ್ರಭುತ್ವದಲ್ಲಿ ಪೊಲೀಸ್ ಮತ್ತು ನ್ಯಾಯಾಂಗಗಳನ್ನು ಧರ್ಮದ ಸ್ಥಾನವನ್ನು ಪಡೆದುಕೊಂಡಿರುತ್ತವೆ. ಎ ಶಕ್ತಿ ರಾಜಕೀಯದ ಜೊತೆ ಯಾವ ರಾಜಕೀಯದಲ್ಲೂ ಸೇರಿಕೊಳ್ಳುವ ಮತ್ತೊಂದು ಅಂಶ “ಲೈಂಗಿಕ ರಾಜಕೀಯ” (sexual politics).

‘ಹರಕೆಯ ಹಣ’ವು ದಲಿತರು ತಮ್ಮ ಸಾಮಾಜಿಕ ಕಾನೂನಿಗೆ, ಹಕ್ಕಿಗೆ ತಮ್ಮನ್ನು ತೆರೆದುಕೊಳ್ಳುತ್ತಿದ್ದಂತೆಯೇ ಅವರ ಮಾತುಗಳು, ಆಲೋಚನೆಗಳು ಶಕ್ತಿ, ರಾಜಕೀಯದಲ್ಲಿ ಕರಗಿ ಹೋಗುತ್ತವೆ ಎಂಬುದನ್ನು ಪ್ರತಿಪಾದಿಸುತ್ತವೆ. ಇವರನ್ನೆಲ್ಲ ಸಮಾಜವನ್ನು ಹದ್ದುಬಸ್ತಿನಲ್ಲಿಡುವ ಸರಕಾರ, ರಾಜಕಾರಣಿಗಳು ಅವರ ಅಜ್ಞಾನ ವರ್ತಿಗಳಾಗಿರುವ ಪೊಲೀಸರು, ಸರಕಾರದ ಅಧಿಕಾರಿಗಳು ವರ್ತಿಸುವ ರೀತಿ ಈಗ ತಾನೇ ಮಾತಿಗೆ ತೆರೆದುಕೊಳ್ಳುತ್ತಿರುವ ಸಂವಾದ(discourse)ವನ್ನು ಹಿಚುಕುಹಾಕಿ ಶಕ್ತಿ ಹೀನಮಾಡಿ ನಗೆಪಾಟಲಿ ಮಾಡುವ ರೀತಿಯನ್ನು ಪ್ರತಿಬಿಂಬಿಸುತ್ತದೆ. ಜಾತಿ-ರಾಜಕೀಯ, ಶಕ್ತಿ-ರಾಜಕೀಯ, ಸರ್ಕಾರದ ಶಕ್ತಿ, ಇವೆಲ್ಲವೂ ಪುನರ್ ವ್ಯವಸ್ಥೆಗೊಳ್ಳುತ್ತಿರುವ ರೀತಿಯ ಮೇಲೆ ಬೆಳಕು ಚೆಲ್ಲುವ ಕಥೆ ‘ಗಾಂಧೀ ಸಂತಾನ’.

ಗೌಡರ ಕೇರಿಯ ದೇವರಿಗೆ ಹರಿಜನರು ತಮ್ಮಡಿಯಾಗುವ ತಲೆತಲಾಂತರದಿಂದ ಬಂದ ritualನಲ್ಲಿ ಆ ಊರಿನ ಗೌಡರು ಹರಿಜನರ ಹೆಣ್ಣು ಮಗಳ (sexual politics) ಲೈಂಗಿಕ ರಾಜಕೀಯತೆಯಂತೆ ರೂಪಾಂತರಗೊಳ್ಳುವುದನ್ನು ಕಾಣಬಹುದು. ಈ ಕಥೆ ಜೀವನ ಹೇಗೆ ಒಂದಕ್ಕೊಂದು ತಾಲೂಕು ಹಾಕಿಕೊಂಡಿದೆ ಎಂಬುದನ್ನು ಸಂಕೀರ್ಣವಾಗಿ ಹೇಳುತ್ತದೆ. ಮೆಣಸನ ಮಾತು, ವಾಗ್ವಾದವೆಲ್ಲ ಅವನನ್ನು ಹುಚ್ಚನೆಂದು ಪರಿಗಣಿಸುವಂತೆ ಮಾಡುತ್ತದೆ. ಮಾತಿಗೆ ಬೆಲೆ ಬರಬೇಕಾದರೆ ಎಷ್ಟೇ ಸತ್ಯವಿದ್ದರೂ ಸಮಾಜದಲ್ಲಿ ಸ್ಥಾನಮಾನವಿರಬೇಕು. ಇಲ್ಲದಿದ್ದರೆ ಅದಕ್ಕೆ ಪ್ರಖರವಾಗಿದ್ದರೂ ಸ್ಥಾನಮಾನವಿರಬೇಕು. ಇಲ್ಲದಿದರೆ ಅದಕ್ಕೆ ಪ್ರಖರವಾಗಿದ್ದರೂ ಸ್ಥಾನಮಾನವಿರುವವರ ಮುಂದೆ ಕ್ಷುಲ್ಲಕವಾಗಿ ಕಾಣುತ್ತದೆ.

‘ದೇವರ ಹೂವು’ ಎಂಬ ಕಥೆಯಲ್ಲಿ ಪರಂಪರಾಗತವಾದ ಫ್ಯುಡಲಿಸಂ ಶಕ್ತಿ ರಾಜಕೀಯ ಕೆಲಸ ಮಾಡುವ ರೀತಿ ಬೇರೆಯಿದೆ. ಇಲ್ಲಿ ಕಳವು ಮಾಡಿದವರಿಗೆ ಅವರಿ ಫ್ಯೂಡಲ್ ವ್ಯವಸ್ಥೆಯ ಶಕ್ತಿ ರಾಜಕೀಯದ ಒಳಗೇ ಬರುವ ಜಾತಿಯವರಾದ್ದರಿಂದ ಇಲ್ಲಿ ದೈಹಿಕ ಶಿಕ್ಷೆ ಇಲ್ಲ. ಕೇವಲ ಮಾನಸಿಕ ಶಿಕ್ಷೆಗೆ ಒಳಗಾಗುತ್ತಾರೆ. ಪಶ್ಚಾತ್ತಾಪ ಪಡುವಂತೆ ಮಾಡುವುದೇ ಈ ಶಿಕ್ಷೆ. ಇದು ಅರಿಕೆಯ ಮೂಲಕ ದೇವರಿಗೆ ಇಂತಿಷ್ಟು ದಿನ ಪೂಜೆ ಮಾಡಲೇಬೇಕೆಂಬ ಶಿಕ್ಷೆ, ಇಲ್ಲಿಯ ವೀರಶೈವ ಮತ್ತು ಗೌಡರ ಜಾತಿಗಳಿಗೆ ಸೇರಿದ ರುದ್ರಮ್ಮ , ಚೆನ್ನಕ್ಕರಿಗೆ ದೊರಕುವ ಶಿಕ್ಷೆ.

ಅದೇ ‘ಜೀತ’ ಕಥೆಯಲ್ಲಿ ಬರುವ ಗೌಡರಲ್ಲಿ ಜೀತಕ್ಕಿರುವ ಚಿಕ್ಕರಾಮ ಮತ್ತು ಪುಟ್ಟಸ್ವಾಮಿ ಎಂಬ ಅಣ್ಣತಮ್ಮಂದಿರಿಗೆ ಸಿಗುವ ಶಿಕ್ಷೆ ದೈಹಿಕವಾದದ್ದು. ‘ಗಾಂಧೀ ಸಂತಾನ’ದಲ್ಲಿ ಜಾತಿಶಕ್ತಿಗಳು ಒಂದು ಗೂಡಿ ದಲಿತ ಮೆಣಸನನ್ನು ಹೆಣವಾಗಿಸುತ್ತವೆ.

‘ಕಳೆ’ ಎಂಬ ಕಥೆಯಲ್ಲಿ ಫ್ಯೂಡಲ್ ವ್ಯವಸ್ಥೆಯ ಕೆತ್ತತನದೊಂದಿಗೆ ಯಾವುದೇ ವ್ಯವಸ್ಥೆಯಲ್ಲಿರುವ ಒಳ್ಳೆಯತನಗಳು ಪ್ರತಿಫಲನಗೊಂಡಿದೆ.

‘ಅಭಿಮಾನ’ ಕಥೆಯಲ್ಲಿ party ಶಕ್ತಿ, ರಾಜಕೆಯ ಕೆಲಸ ಮಾಡಿ ಊರಿನವರೆಲ್ಲ ಛಿದ್ರಗೊಳ್ಳುವಂತೆ ಮಾಡುತ್ತದೆ.

‘ತಾಯಿ’ಯಲ್ಲಿ ಜಮೀನಿನ ಬಗ್ಗೆ ಬಂದ ಹೊಸಕಾನೂನು ಹೊಸ ಸಮಸ್ಯೆಯನ್ನೇ ಸೃಷ್ಟಿಸುತ್ತದೆ.

ಎರಡು ವಿಭಿನ್ನ ಸಂಸ್ಕೃತಿಗಳು ಮುಖಾಮುಖಿಯಾದಾಗ ಅವುಗಳ ಕರ್ಷಣದಿಂದ ಮಹತ್ತಾಗಬಹುದಾಗಿದ್ದ ‘ಹರಕೆಯ ಹಣ’ದಲ್ಲಿ ದಲಿತ ಸಂಸ್ಕೃತಿ – ಭೂಮಾಲೀಕ ಸಂಸ್ಕೃತಿ ಸಾಂಸ್ಕೃತಿಕವಾಗಿ ವಿಶ್ಲೇಷಣೆಗೊಳ್ಳದೆ ಹಣ ಮತ್ತು ಲೈಂಗಿಕ ರಾಜಕೀಯ ಆಗಿ ಪರಿವರ್ತನೆಗೊಳ್ಳುತ್ತದೆ.

ಅಂತೆಯೇ ‘ಕಳೆ’ ಮತ್ತು ‘ಸ್ವಾರ್ಥ’ ಕಥೆಗಳಲ್ಲಿ ಶಂಕರಾಚಾರ್ಯರತತ್ವದ ಅನುಯಾಯಿಯಾಗಿ ಬರುವ ಪಾತ್ರಗಳು ಇದ್ದರೂ ಇಲ್ಲಿ ತಾತ್ವಿಕ(philosophical) ಕರ್ಷಣೆ ಸಾಧ್ಯವಿದ್ದರೂ ಕೇವಲ ಜಮೀನಿನ ಪಾಲಿಗಾಗಿ ಹೊರಾದಡಿಕೊಳ್ಳುವ ಕ್ಷುದ್ರ, ಲೌಕಿಕ ವ್ಯವಹಾರದಲ್ಲಿ ಶಕ್ತಿಯನ್ನು ಪೋಲು ಮಾಡಿಕೊಳ್ಳುವ ಕಥೆಗಳಾಗಿ ದಲಿತ ಹೆಣ್ಣಿನೊಡನೆ ಬೆರೆಯುವ ಕಥೆಯಾಗಷ್ಟೇ ಉಳಿದುಕೊಂಡು ಈ ಕಥೆಗಳು ಸೋತಿವೆ. ಸೈದ್ದಾಂತಿಕವಾಗಿ ಲೌಕಿಕ-ಪಾರಮಾರ್ಥಿಕಗಳ ನಡುವಿನ ಘರ್ಷಣೆಯಾಗಿ ಈ ಕಥೆಗಳು ಬೆಳೆಯುವ ಸಾಧ್ಯತೆ ಇದ್ದೂ ಕಥೆಗಾರ ವಸ್ತುವನ್ನು ನಿರ್ವಹಿಸುವ ರೀತಿಯಲ್ಲಿ ಸೋಲನ್ನುನುಭವಿಸಿದ.

ಇದಕ್ಕೆ ವಿರುದ್ದವಾಗಿಯೇ ಇಂತಹ ಎರಡು ಬೇರೆ ಬೇರೆ ಸಂಸ್ಕೃತಿಯ ಜಾತಿಯ ಹಿನ್ನೆಲೆಯ ಉನ್ನತ ಮನಸ್ಸಿನ ಎರಡು ಪಾತ್ರಗಳು ಮುಖಾಮುಖಿಯಾಗುವ ‘ಗಂಗಾ’ಕಥೆ ಇದನ್ನು ಬಹಳ ಸಮರ್ಥವಾಗಿ ದುಡಿಸಿಕೊಳ್ಳುತ್ತದೆ. ಮಾನವೀಯತೆಗೆ, ಸಿದ್ದಾಂತಕ್ಕೆ, ತಾತಿವ್ಕ ತಿರುವಿಗೆ ಇಲ್ಲಿ ಅವಕಾಶವಿದೆ. ಸಂಕೀರ್ಣವಾಗಿ ಮನಸ್ಸನ್ನು ಹಿಡಿಯಲು ಈ ಕಥೆ ಪ್ರಯತ್ನಿಸುತ್ತದೆ. ಒಬ್ಬ ಅಬ್ರಾಹ್ಮಣ ಮತ್ತೊಬ್ಬ ಬ್ರಾಹ್ಮಣ ಎರಡೂ ಮನಸ್ಸುಗಳು ಕೆಲಸ ಮಾಡುವ ರೀತಿ ಇಲ್ಲಿ ಅತ್ತ್ಯುತ್ತಮವಾಗಿ ಪ್ರತಿಫಲನಗೊಂಡಿದೆ. ಆಗ ತಾನೇ ಒದೆಯುತ್ತಿರುವ ಹೆಣ್ಣು ಕುಡಿಯೊಂದನ್ನು ಮಾನಭಂಗಮಾಡಿದ ವ್ಯಕ್ತಿಗಳಿಗೆ ಎಂಥ ಶಿಕ್ಷೆ ನಿರೀಕ್ಷಿಸುತ್ತೀರಾ ಎಂದು ಕೇಳಿದಾಗ:

“ಹಾಗೆಯೇ ಗಂಗಾಳನ್ನು ಮಾನಭಂಗ ಮಾಡಿ ಕೊಲೆ ಮಾಡಿದ ಪಾಪಿಗಳಿಗೆ ರೌರವ ನರಕ ಕೊಡು ಅಂತ ದೇವರಲ್ಲಿ” ನನ್ನ ವಾಕ್ಯ ಮುಗಿಯುವುದಕ್ಕೆ ಮುಂಚೆಯೇ “ಇಲ್ಲ, ಖಂಡಿತ ಇಲ್ಲ, ಗಂಗಾಳ ಸಾವಿಗೆ ಕಾರಣರಾದವರಿಗೆ ಅದನ್ನು ಮುಚ್ಚಿ ಹಾಕಿದವರಿಗೆ ಯಾವ ಶಿಕ್ಷೆಯನ್ನು ಕೊಡೆಂದು ದೇವರನ್ನು ಆಗ್ರಹಿಸುವುದಿಲ್ಲ. ಬದಲು ಆ ಪಾಪ ಮಾಡಿದವರನ್ನು ಕ್ಷಮಿಸು ಎಂದು ಬೇಡುತ್ತೇನೆ” ಎಮಬ್ ಮಾನವೀಯತೆಯನ್ನು ಮೆರೆಯುವ ಪಾತ್ರಗಳೂ ಸೃಷ್ಟಿಯಾಗಿವೆ. ಇದೆ ರೀತಿ ‘ಮಾನಭಂಗ’ ಕಥೆಯೂ ಸಂಕೀರ್ಣತೆಯಿಂದ ಕೂಡಿದೆ.

ಯಾವುದೇ ದುಷ್ಟ ರಾಜಕೀಯ ಶಕ್ತಿ ತನ್ನ ಕರಾಳ ಛಾಯೆಯನ್ನು ತನ್ನ ಪ್ರಜೆಗಳ ಮೇಲೆ ಬೀರಿದಾಗ satire ಹುಟ್ಟಿಕೊಳ್ಳುತ್ತದೆಂದು ಕಾಣುತ್ತವೆ. ‘The Great Dictator’ ಹಿಟ್ಲರ್ ಅನ್ನು ಅತ್ಯಂತ satirical ಆಗಿ ನೋಡಿದಂತೆ ಅತ್ಯಂತ ಹಾಸ್ಯಾಸ್ಪದ ವ್ಯಕ್ತಿಯನ್ನಾಗಿ ರೂಪಿಸಿದಂತೆ ತುರ್ತು ಪರಿಸ್ಥಿತಿ ಕಾಲದಲ್ಲಿ ಬಂದ ರಾಮಣ್ಣನವರ |ಪ್ರಜಾಪ್ರಭುತ್ವ ಮತ್ತು ಮೂರು ಮಂಗಗಳು” ಕಥೆ ಎಲ್ಲೂ ಸೆಂಟಿಮೆಂಟಲ್ ಆಗದೆ ಪ್ರಜಾಪ್ರಭುತ್ವವು ವಿಡಂಬನಾತ್ಮಕವಾಗಿ ಮೂಡಿಬಂದಿದೆ. ಹೊಸ ಭಾಷೆಯನ್ನೂ ಹೊಸ ಅಭಿವ್ಯಕ್ತಿಯ ವಿಧಾನಗಳನ್ನು ಕಂಡುಕೊಂಡಿದೆ. ‘ಗಾಂಧಿ’, ‘ಪ್ರಜಾಪ್ರಭುತ್ವ ಮತ್ತು ಮೂರು ಮಂಗಗಳು’, ‘ಮಾನಭಂಗ’ ಇವು ಈ ರೀತಿಯ ಕಥೆಗಳು.

ಕಾಮೆಂಟ್‌ಗಳಿಲ್ಲ: