ಸೋಮವಾರ, ಜನವರಿ 16, 2017

ನಮಗೆ ನಾವು ಹೇಳಿಕೊಳ್ಳಬೇಕಾದ ಎಚ್ಚರಿಕೆಯ 17 ಮಾತು


Image may contain: 1 person, sunglasses and outdoor

ಸುಗತ ಶ್ರೀನಿವಾಸರಾಜು


  ಸಮಾಜದ ಎಲ್ಲ ವರ್ಗಗಳ, ವೃತ್ತಿಗಳ, ವ್ಯಾಪಾರಗಳ ಎಚ್ಚರವನ್ನು ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಕಾಯುವ ಜವಾಬ್ದಾರಿಯನ್ನು ಹೊತ್ತ ಅಥವಾ ಹೊರಿಸಿಕೊಂಡ ಪತ್ರಿಕಾರಂಗ, ಅದರ ಹುಳುಕುಗಳನ್ನು, ಅದರ ವೃತ್ತಿಧರ್ಮ ಪಾಲನೆಯ ಹಾದಿಯನ್ನು ಆಗೊಮ್ಮೆ, ಈಗೊಮ್ಮೆ ಸ್ವವಿಮರ್ಶೆ ಮಾಡಿಕೊಳ್ಳುವುದು, ಸ್ವಎಚ್ಚರ ಕಾಯ್ದುಕೊಳ್ಳುವುದು ಬಹಳ ಜರೂರು. ಸಮಾಜ ಎಂಬ ಮೇಜನ್ನು ಸ್ವಚ್ಛ ಮಾಡಲು ಇರುವ ಬಟ್ಟೆಯೇ ಶುಚಿಯಾಗಿಲ್ಲದಿದ್ದರೆ ಅದು ಹಿಂಬಿಡುವ ದುರ್ನಾತ ಆ ಮೇಜಿನ ಮೇಲೆ ಊಟ ಬಡಿಸಲಾಗದಂತೆ ಮಾಡುತ್ತದೆ. ಮತ್ತೊಂದು ವರ್ಷದ ಹಾದಿ ಸವೆಸಿ, ಹೊಸ ವರ್ಷದ ಕದ ತೆರೆದು ನಿಂತಿರುವ ಈ ಸಂದರ್ಭದಲ್ಲಿ ಪತ್ರಕರ್ತರಾಗಿ ನಾವು ನೆನಪಿನಲ್ಲಿಡಬೇಕಾದ ಹದಿ​ನೇ​ಳು ಅಂಶಗಳನ್ನು ನಾನಿಲ್ಲಿ ದಾಖಲಿಸುತ್ತಿದ್ದೇನೆ. ಹದಿ​ನೇ​ಳು ಬೇಕೇ? ಹದಿ​ನೇ​ಳು ಸಾಕೇ? ಹದಿ​ನೇ​ಳೇ ಏಕೆ? ಎಂದು ಹುಟ್ಟಬಹುದಾದ ಪ್ರಶ್ನೆಗಳಿಗೆ ನನ್ನ ಉತ್ತರ ತುಂಬ ಸರಳ: ಕಡಿಮೆ ಎನಿಸಿದರೆ ನಿಮ್ಮದೂ ನಾಲ್ಕು ಸೇರಿಸಿಕೊಳ್ಳಿ, ಜಾಸ್ತಿ ಎನಿಸಿದರೆ ಈ ಪಟ್ಟಿಗೆ ಕತ್ತರಿ ಆಡಿಸಿ. ಕೂಡಿಸಿ, ಕಳೆಯಿರಿ, ವಿಮರ್ಶಿಸಿ ಆದರೆ, ಈ ಹದಿ​ನೇ​ಳು ಅಂಶಗಳೊಂದಿಗೆ ನೀವು ಏಕಾಂತದಲ್ಲಿ ಸಂವಾದಿಸಿದರೆ, ಆತ್ಮಾವಲೋಕನ ಮಾಡಿಕೊಂಡರೆ, ನನ್ನ ವರ್ಷಾಂತ್ಯದ ಶ್ರಮ ಸಾರ್ಥಕವೆಂದು ಭಾವಿಸುತ್ತೇನೆ.

ಈ ಬರಹಕ್ಕೆ ವರ್ಷಾಂತ್ಯದ ಸಂದರ್ಭವಲ್ಲದೆ ಇನ್ನೆರಡು ಸಂದರ್ಭಗಳಿವೆ. ಮೊದಲು, ಹತ್ತಿರತ್ತಿರ ಐದು ವರ್ಷಗಳ ಕನ್ನಡ ಪತ್ರಿಕೋದ್ಯಮದಿಂದ ನಾನು ಕೊಂಚ ಬಿಡುವು ಪಡೆಯುತ್ತಿದ್ದೇನೆ. ಇಷ್ಟುದಿನ ನೋಡಿದ್ದನ್ನು, ಕೇಳಿದ್ದನ್ನು, ಅನುಭವಿಸಿದ್ದನ್ನು, ಕಲಿತದ್ದನ್ನು, ಅತಿ ಸಂಕ್ಷಿಪ್ತ ರೀತಿಯಲ್ಲಿ ದಾಖಲಿಸಲು ಇದೊಂದು ಒಳ್ಳೆಯ ಮಾರ್ಗ. ಹಾಗಂತ, ಇದನ್ನು ನನ್ನ ವಿದಾಯ ಬರವಣಿಗೆ ಎಂದು ಪರಿಭಾವಿಸಬೇಕಿಲ್ಲ. ಏಕೆಂದರೆ, ಮಾತೃಭಾಷೆಗೆ ಬೆನ್ನು ತೋರಿಸಿ ಯಾರೂ ಹೊರಟುಹೋಗುವುದಿಲ್ಲ, ಹೋಗಲಿಕ್ಕೂ ಸಾಧ್ಯವಿಲ್ಲ. ನಮ್ಮ ಅಸ್ಥಿಮಜ್ಜೆಯ ಭಾಗವಾಗಿರುವ ಭಾಷೆ ನಮ್ಮ ಅಸ್ಮಿತೆಯೇ ಆಗಿರುತ್ತದೆ. ಇನ್ನಾವುದೇ ಪೋಷಾಕು ಧರಿಸಿದರೂ ಅದು ಪೋಷಾಕು ಮಾತ್ರ.

ಈ ಹದಿ​ನೇ​ಳು ಅಂಶಗಳಿಗೆ ಮತ್ತೊಂದು ಸಂದರ್ಭವೆಂದರೆ, ನನ್ನ ಅಂಕಣ ಬರವಣಿಗೆಯ ಪುಸ್ತಕ ಹೊರಬಂದಿರುವುದು. ಅದನ್ನು ‘ಕಿತ್ತಳೆ, ನೇರಳೆ, ಪೇರಳೆ: ಅವಸರಕ್ಕೆ ಎಟುಕಿದ ಮಾತು, ಬರಹ’ ಎಂದು ಕರೆದಿದ್ದೇನೆ. ಶೀರ್ಷಿಕೆಯಲ್ಲಿರುವ ಮೂರೂ ಹಣ್ಣುಗಳು ಜನಸಾಮಾನ್ಯರಿಗೆ ಎಟುಕುವಂಥವು. ಅವುಗಳ ರುಚಿ ಭಿನ್ನ. ಒಂದು ಹುಳಿಯಾದರೆ, ಮತ್ತೊಂದು ಒಗರು, ಇನ್ನೊಂದು ಸಿಹಿಯೊಂದಿಗೆ ಸಂಘರ್ಷವಿರುವಂತೆ ನಾಲಿಗೆಯ ಮೇಲೆ ಗಾಢ ಮಸಿಯನ್ನು ಹರಡುತ್ತದೆ. ಈ ಮೂರೂ ಹಣ್ಣುಗಳು ಪತ್ರಿಕೋದ್ಯೋಗದ ನೇರ, ನಿರ್ಭೀತ, ನಿಷ್ಠುರತೆಯ ಆದರ್ಶಕ್ಕೆ ಉಪಮೆಗಳ ಹಾಗೆ, ಹಾಗಂತ ನಾವು ನೋಡಬಹುದು. ನನ್ನ ಈ ಹೊಸ ಪುಸ್ತಕದಲ್ಲಿ ರಾಜಕೀಯ, ಸಂಸ್ಕೃತಿ, ಸಾಹಿತ್ಯದ ಜೊತೆಜೊತೆಗೆ ಪತ್ರಿಕೋದ್ಯೋಗ ಕುರಿತಂತೆ ಅನೇಕ ಲೇಖನಗಳಿವೆ. ಹಿರೀಕರಿಗೆ, ಸರೀಕರಿಗೆ, ತರುಣರಿಗೆ ಈ ಪುಸ್ತಕ ಇಷ್ಟವಾಗಲಿ ಎಂದು ಹಂಬಲಿಸಿದರೆ ಅದರಲ್ಲಿ ಆಕಾಂಕ್ಷೆ ಇದೆಯೇ ಹೊರತು ಸ್ವಾರ್ಥವಿಲ್ಲ ಎಂದು ನಂಬಿದ್ದೇನೆ.

ಇಲ್ಲಿವೆ ಪತ್ರಕರ್ತರಾಗಿ ನಾವೆಲ್ಲರೂ ಮನನ ಮಾಡಬೇಕಾದ ಹದಿ​ನೇ​ಳು ಅಂಶಗಳು:

01.ಪತ್ರಕರ್ತರಾದ ನಾವು ಪತ್ರಕರ್ತರಾಗಿ ವ್ಯವಹರಿಸಬೇಕು. ಜಾತಿ, ಧರ್ಮ, ಮಠ, ಮಾಲೀಕರ, ರಾಜಕಾರಣಿಗಳ ಪ್ರತಿನಿಧಿಗಳಾಗದಂತೆ ಎಚ್ಚರ ವಹಿಸಬೇಕು. ಸುದ್ದಿ, ಸಿದ್ಧಾಂತ, ವಿಚಾರ, ವಿಸ್ಮಯ ಮತ್ತು ವೃತ್ತಿ ಸಂಕಷ್ಟ ಹಂಚಿಕೊಳ್ಳಲು ನಾವು ಸ್ವತಂತ್ರ ಗುಂಪು, ಸಂಸ್ಥೆಗಳನ್ನು ಪೋಷಿಸಬೇಕೇ ಹೊರತು, ಜಾತಿ, ಧರ್ಮ, ರಾಜಕೀಯ ಪಕ್ಷಗಳನ್ನಾಧರಿಸಿದ ಗುಂಪುಗಳನ್ನಲ್ಲ. ಕಾಂಗ್ರೆಸ್‌ ಪತ್ರಕರ್ತ, ಬಿಜೆಪಿ ಪತ್ರಕರ್ತ, ದಲಿತ ಪತ್ರಕರ್ತ, ಬ್ರಾಹ್ಮಣ ಪತ್ರಕರ್ತ, ಹಿಂದುಳಿದ ವರ್ಗಗಳ ಪತ್ರಕರ್ತ, ಒಕ್ಕಲಿಗ ಪತ್ರಕರ್ತ, ಲಿಂಗಾಯಿತ ಪತ್ರಕರ್ತ ಇತ್ಯಾದಿಯಾಗಿ ಗುರುತಿಸಿಕೊಳ್ಳುವ ಬದಲು, ಸ್ವತಂತ್ರ ಪತ್ರಕರ್ತ ಎಂದು ಗುರುತಿಸಿಕೊಳ್ಳುವುದರಲ್ಲಿ ಹೆಮ್ಮೆ ಇದೆ.

02.ಒಂದು ಸುದ್ದಿಮನೆಯಲ್ಲಿ ನಾವು ಪ್ರಜ್ಞಾಪೂರ್ವಕವಾಗಿ ಅನೇಕ ಹಿನ್ನೆಲೆಗಳಿಂದ ಬಂದ ಪತ್ರಕರ್ತರನ್ನು ಒಟ್ಟುಗೂಡಿಸಬೇಕು ಮತ್ತು ಆ ವೈವಿಧ್ಯತೆಯನ್ನು ಸಂಭ್ರಮಿಸಬೇಕು. ಹೀಗೆ ಮಾಡಿದಾಗ ಪತ್ರಿಕೆಯ ಪ್ರಭೆ ಹೆಚ್ಚುತ್ತದೆ ಮತ್ತು ಓದುಗರಿಗೆ ಹತ್ತಿರವಾಗುತ್ತದೆ. ಇದು ವ್ಯವಹಾರ, ವ್ಯಾಪಾರದ ತಂತ್ರವಾಗಿಯೂ ಉತ್ತಮ.

03.ಪತ್ರಕರ್ತರಾದ ನಾವು, ಅಂಕಿ-ಅಂಶ, ವಿಚಾರ, ತರ್ಕದಿಂದ ಹೊರಹೊಮ್ಮುವ ಸತ್ಯದ ಬಗ್ಗೆ ಸದಾ ತಲೆಕೆಡಿಸಿಕೊಳ್ಳಬೇಕು. ಅಭಿಪ್ರಾಯ ಎಂಬುದು ಇದರ ಹಿಂದೆ ನಿಲ್ಲಬೇಕು ಅಥವಾ ಇದರಿಂದ ಹೊರಹೊಮ್ಮಬೇಕು. ಪರಿಶೀಲನೆಗೆ ಒಳಪಡದ ವಿಚಾರ ಅಥವಾ ಸುದ್ದಿಯನ್ನು ನಾವು ಬಿತ್ತರಿಸದಂತೆ ಎಚ್ಚರ ವಹಿಸಬೇಕು. ಸಾಮಾಜಿಕ ಜಾಲತಾಣಗಳ ಮೂಲಕ ಬಿತ್ತಲ್ಪಡುವ ಫರ್ಜಿ ಸುದ್ದಿಗಳನ್ನು (fake news) ಪತ್ರಕರ್ತರು ಸುದ್ದಿಮನೆಗೆ ತಂದು, ಅದಕ್ಕೆ ಒಂದು ಬಗೆಯ ಘನತೆ, ಅಧಿಕೃತತೆಯ ಮೊಹರನ್ನು ಒತ್ತಬಾರದು.

04.ಪತ್ರಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ವ್ಯವಹರಿಸುವಾಗಲೂ ತಾವು ಮೊದಲು ಪತ್ರಕರ್ತರು ಎಂಬುದನ್ನು ಮರೆಯಬಾರದು. ಪತ್ರಕರ್ತರೇ ಗಾಳಿಸುದ್ದಿಗಳ, ಫರ್ಜಿ ಸುದ್ದಿಗಳ ಮೂಲವಾಗಬಾರದು. ಹೀಗಾದಾಗ ಆಗುವ ಅನಾಹುತ ಬಹಳ ದೊಡ್ಡದು.

05.ಪತ್ರಿಕೋದ್ಯಮ ಎಂಬುದು ಪಬ್ಲಿಕ್‌ ರಿಲೇಶನ್ಸ್‌ (ಪಿಆರ್‌) ಅಲ್ಲ ಎಂಬುದನ್ನು ಪತ್ರಕರ್ತರಾದ ನಾವು ಮರೆಯಬಾರದು. ಪ್ರತಿಯೊಂದು ಪುಸ್ತಕ ಬಿಡುಗಡೆ, ಪ್ರಶಸ್ತಿ ಸಮಾರಂಭ, ಮಠದ ಕಾರ್ಯಕ್ರಮ, ರಾಜ್ಯೋತ್ಸವ ಸಮಾರಂಭ, ರಾಜಕಾರಣಿಗಳು ಭಾಗವಹಿಸುವ ಶಿಲಾನ್ಯಾಸ ಕಾರ್ಯಕ್ರಮಗಳನ್ನು ವರದಿ ಮಾಡುವ ಅಗತ್ಯವಿಲ್ಲ. ಹೀಗೆ ವರದಿ ಮಾಡುವುದರ ಮೂಲಕ ಪ್ರಸರಣ ಹೆಚ್ಚುತ್ತದೆ ಎಂಬುದು ಭ್ರಮೆ. ಬದಲಿಗೆ, ಇವು ನಿಜವಾದ ಸುದ್ದಿಗಳ ಸ್ಥಳವನ್ನು ಕಸಿದುಕೊಳ್ಳುತ್ತವೆ. ಒಂದು ವೇಳೆ ಇವುಗಳನ್ನು ವರದಿ ಮಾಡಬೇಕಾದರೂ ಸುದ್ದಿ ಹೆಕ್ಕಿ ತೆಗೆಯುವ ಪತ್ರಿಕೋದ್ಯಮದ ಶಿಸ್ತನ್ನು ಮರೆಯಬಾರದು.

06.ರಾಷ್ಟ್ರಭಕ್ತಿ ತೋರಬೇಕು, ರಾಷ್ಟ್ರದ, ರಾಜ್ಯದ ಹಿತಾಸಕ್ತಿಯನ್ನು ಮರೆಯಬಾರದು ಎಂದು ಪತ್ರಕರ್ತರಿಗೆ ಬೋಧಿಸುವುದು ಹೊಸತಲ್ಲ, ಆದರೆ ಎಲ್ಲ ಭಕ್ತಿ ಮತ್ತು ಹಿತಾಸಕ್ತಿಗಳನ್ನು ಸೀಳಿನೋಡುವ, ನಿರ್ಮಮಕಾರದಿಂದ ವಿಶ್ಲೇಷಿಸುವ ಹಕ್ಕು ಪತ್ರಿಕೋದ್ಯೋಗದ ಆದರ್ಶಗಳಲ್ಲಿ ಬಹಳ ಎತ್ತರದ್ದು. ಬಹಳಷ್ಟುಬಾರಿ ಈ ‘ಭಕ್ತಿ’ ಮತ್ತು ‘ಹಿತಾಸಕ್ತಿ’ಯ ಭಾಷೆಯನ್ನು ರಾಜಕಾರಣಿಗಳು, ಉದ್ಯಮಿ­ಗಳು, ಸರ್ವಾಧಿಕಾರಿಗಳು ತಮ್ಮ ವ್ಯವಹಾರ­ಗಳನ್ನು, ಹುಳುಕುಗಳನ್ನು ಮರೆಮಾಚಲು ಬಳಸುತ್ತಿರುತ್ತಾರೆ. ಈ ಮುಖವಾಡಗಳನ್ನು ಕಳಚುವುದನ್ನು ನಾವು ಮರೆಯಬಾರದು.

07 .ಪತ್ರಿಕೋದ್ಯೋಗ ಎಂಬುದು ಅಧಿಕಾರವಲ್ಲ, ಜವಾಬ್ದಾರಿ ಎಂಬುದನ್ನು ನಾವು ಮರೆಯಬಾರದು. ಸರ್ಕಾರದಲ್ಲಿರುವ ಅಧಿಕಾರದ ವ್ಯವಸ್ಥೆಯನ್ನು (power structure) ಸುದ್ದಿಮನೆಯಲ್ಲಿ ನಾವು ಅನುಕರಿಸಬಾರದು. ಅಂದರೆ, ಸಂಪಾದಕನೊಬ್ಬ ತಾನು ಮುಖ್ಯಮಂತ್ರಿಯಂತೆ ಎಂಬ ಭ್ರಮೆಯಲ್ಲಿ ವ್ಯವಹರಿಸಬಾರದು, ತನ್ನ ಜೊತೆಗಾರರನ್ನು ಅಧಿಕಾರ ಹಂಚಿಕೆಯ ಸೂತ್ರಗಳಿಗೆ ಸಿಗಿಸಬಾರದು. ಸುದ್ದಿಮನೆಯ hierarchies ತೆಳುವಾದಷ್ಟೂ, ಚರ್ಚೆಯ ಕೂಟವಾದಷ್ಟೂ, ನಾವು ಪ್ರಕಟಿಸುವ ಪತ್ರಿಕೆಯ ಬೌದ್ಧಿಕ ಸಮೃದ್ಧತೆ ಹೆಚ್ಚುತ್ತದೆ.

08.ಸಾವು, ನೋವು, ಅತ್ಯಾಚಾರ, ಅನೈತಿಕ ಎಂದು ಕರೆಯಲ್ಪಡುವ ಸಂಬಂಧಗಳು, ಪ್ರೇಮ ವಿವಾಹ, ಪ್ರೀತಿಯ ಹುಚ್ಚು, ಬಡತನದ ಕ್ರೌರ್ಯ, ಸಿರಿತನದ ಅಹಂಕಾರ ಇತ್ಯಾದಿಗಳನ್ನು ವರದಿ ಮಾಡುವಾಗ ಪತ್ರಕರ್ತರಾದ ನಾವು ವಿಶೇಷ ಸೂಕ್ಷ್ಮತೆ ಪ್ರದರ್ಶಿಸಬೇಕು. ಮಾನವ ಸಂಬಂಧಗಳ ಬಗ್ಗೆ ಅಂತಃಕರಣದಿಂದ ಸ್ಪಂದಿಸಬೇಕು.

09.ಸಹಾನುಭೂತಿ ಜೊತೆಗೆ ಪರಾನುಭೂತಿ­ಯನ್ನು ಬೆಳೆಸಿಕೊಳ್ಳುವುದು ಪತ್ರಕರ್ತರ ತಪಸ್ಸಾಗಬೇಕು. ಮಾನವ ಸಂಬಂಧಗಳ ಬಗ್ಗೆ ಒಂದು ವಾಹಿನಿ ಅಥವಾ ಪತ್ರಿಕೆ ಅಸೂಕ್ಷ್ಮ­ವಾಗುವುದು ಎಂದರೆ ತನ್ನ ಬ್ರ್ಯಾಂಡ್‌ ಮೌಲ್ಯ­ವನ್ನು ನಿಧಾನವಾಗಿ ತ್ಯಜಿಸುವುದೇ ಆಗಿದೆ. ಅಲ್ಪಕಾಲದ ಗಳಿಕೆಗಾಗಿ ಬ್ರ್ಯಾಂಡ್‌ ಮೌಲ್ಯ ಕಳೆದು­ಕೊಂಡರೆ ದೀರ್ಘಾವಧಿ­ಯಲ್ಲಿ ಇದು ವ್ಯವಹಾರಕ್ಕೆ ಪೆಟ್ಟು ನೀಡುತ್ತದೆ. ಉತ್ತಮ ಮೌಲ್ಯ­ಗಳು ಉತ್ತಮ ವ್ಯವಹಾರವೂ ಆಗಿರು­ತ್ತದೆ ಎಂಬುದನ್ನು ನಾವು ಮರೆಯಬಾರದು.

10.ಪತ್ರಕರ್ತರಾದ ನಾವು ಎಡ, ಬಲದ ಸೈದ್ಧಾಂತಿಕ ಹಂಗಿಗೆ ಬೀಳಬಾರದು. ಎಡ, ಬಲದ ನಡುವೆ ಸ್ವತಂತ್ರ ಚಿಂತನೆಯ ವಿಚಾರಗಳ ವಿಶಾಲ ಮೈದಾನವಿದೆ, ಅದನ್ನು ನಾವು ಮಧ್ಯಮ ಮಾರ್ಗ ಎಂದು ಕರೆಯದೆ, ಕ್ರಿಯಾಶೀಲತೆಯ ಆಡುಂಬೋಲ ಎಂದು ತಿಳಿಯಬೇಕು. ಎಡ, ಬಲ ಎಂದು ಸರಳೀಕೃತ ಲೇಬಲ್‌ ಹಚ್ಚುವಿಕೆ ಒಂದರ್ಥದಲ್ಲಿ ರಾಜಕೀಯ ಪಿತೂರಿ, ಇನ್ನೊಂದರ್ಥದಲ್ಲಿ ಅಜ್ಞಾನ. ಈ ಪಿತೂರಿ ಮತ್ತು ಅಜ್ಞಾನದ ಬಗ್ಗೆ ನಾವು ಎಚ್ಚರ ವಹಿಸಬೇಕು.

11.ಈಚಿನ ದಿನಗಳಲ್ಲಿ ತಮ್ಮ ಉಳಿವಿಗಾಗಿ ಅಥವಾ ದುರಾಸೆಯಿಂದ ತಮ್ಮ ಆಡಳಿತ ಮಂಡಳಿಗಳಿಗೆ ಜಾಹೀರಾತು ತರುವ ವಾಮಮಾರ್ಗಗಳನ್ನು ಪತ್ರಕರ್ತರೇ ಹೇಳಿಕೊಡುತ್ತಾರೆ. ಪತ್ರಿಕೋದ್ಯೋಗ­ಕ್ಕಾಗಿ ಬೆಳೆಸಿಕೊಂಡ ಪರಿಚಯಗಳನ್ನು ಜಾಹೀರಾತಿಗಾಗಿ ಧಾರೆ ಎರೆಯುತ್ತಾರೆ. ಈ ದೊಡ್ಡ ರಾಜಿ, ಅಂತಿಮವಾಗಿ ಅವರನ್ನು ನಮ್ಮ ವೃತ್ತಿಯಿಂದ ಹೊರಹೋಗುವ ಹಾಗೆ ಮಾಡುತ್ತದೆ.

12.ಒಳ್ಳೆಯ ಸುದ್ದಿಮನೆ ಅಥವಾ ಪತ್ರಿಕೆ ಅಥವಾ ವಾಹಿನಿ ಎಂದರೆ, ಅಲ್ಲಿ ವಿಚಾರಗಳ ಮೇಲುಗೈ ಇರುತ್ತದೆ. ಈಚಿನ ದಿನಗಳಲ್ಲಿ ಸುದ್ದಿಮನೆ, ಪತ್ರಿಕೆ, ವಾಹಿನಿ ಎಂದರೆ ಜಾಹೀರಾತಿಗೆ ಅನ್ವರ್ಥ ಎಂಬಂತಾಗಿದೆ. ಉತ್ತಮ ವಿಚಾರ, ಶ್ರೇಷ್ಠ ವಿನ್ಯಾಸ, ಉತ್ಕೃಷ್ಟಬ್ರ್ಯಾಂಡ್‌ ಸೃಷ್ಟಿಸುತ್ತದೆ. ಈ ಉತ್ಕೃಷ್ಟಬ್ರ್ಯಾಂಡ್‌ಗೆ ಭರಪೂರ ಜಾಹೀರಾತು ಹರಿದುಬರುತ್ತದೆ. ಇದು ಪತ್ರಿಕೋದ್ಯಮದ ವರ್ತುಲ ಪಥವಾಗಿರಬೇಕು.

13.ನಮ್ಮ ಪತ್ರಿಕೋದ್ಯೋಗ ಸಾಹಿತ್ಯ ಮತ್ತು ರಾಜಕಾರಣ ಕೇಂದ್ರವಾಗುವ ಬದಲು, ಸಮಾಜ ಮತ್ತು ಜನಕೇಂದ್ರಿತವಾಗಿರಬೇಕು. ಸಾಹಿತ್ಯ ಮತ್ತು ರಾಜಕಾರಣಕ್ಕಿಂತ ಬದುಕು ದೊಡ್ಡದು.

14.ಪತ್ರಕರ್ತರಾದ ನಾವು ಪ್ರಶಸ್ತಿಗಳ ಬಗ್ಗೆ ಒಂದು ಆರೋಗ್ಯಕರ ಅನುಮಾನವನ್ನು ಇರಿಸಿಕೊಳ್ಳ­ಬೇಕು. ಪ್ರಶಸ್ತಿ ಸ್ವೀಕರಿಸುವುದು ತಪ್ಪಲ್ಲ, ಆದರೆ ಯಾರು ಕೊಡುತ್ತಿದ್ದಾರೆ, ಏಕೆ ಕೊಡುತ್ತಿದ್ದಾರೆ, ಯಾರ ಜೊತೆ ಕೊಡುತ್ತಿದ್ದಾರೆ ಎಂಬುದನ್ನು ಚಿಕಿತ್ಸಕವಾಗಿ ವಿಶ್ಲೇಷಣೆಗೆ ಒಳಪಡಿಸಬೇಕು. ಪ್ರಶಸ್ತಿ ಕೊಡುವ ಸಂಸ್ಥೆ ಪ್ರಶಸ್ತಿಗಳಿಗೆ ರೂಪಿಸಿರುವ ವೃತ್ತಿಶ್ರೇಷ್ಠತೆಯ ಮಾನದಂಡ­ಗಳಾವುವು ಎಂಬುದರ ಬಗ್ಗೆ ಸ್ಪಷ್ಟಕಲ್ಪನೆ ನಮಗಿರಬೇಕು. ಮಾನದಂಡಗಳಿಲ್ಲದೆ ಅದು ವೈಯಕ್ತಿಕ ಇಷ್ಟಾನಿಷ್ಟಗಳಿಗೆ ಸಂಬಂಧಿಸಿದ್ದು ಅಥವಾ ಅದು ಮೀಸಲಾತಿಯ ಫಸಲು ಎಂದಾದರೆ ತಿರಸ್ಕರಿಸುವುದು ಉತ್ತಮ.

15.ನಾವು ನಮ್ಮ ಆಲೋಚನಾ ಕ್ರಮದ ಸಂಕುಚಿತತೆ­ಯಿಂದ ಹೊರಬರಬೇಕು. ನಾವು ಕನ್ನಡದಲ್ಲಿ ಪತ್ರಿಕೋದ್ಯೋಗ ಮಾಡುತ್ತಿದ್ದರೂ ವಿಶ್ವ­ದೊಂದಿಗೆ ವ್ಯವಹರಿಸಬೇಕು. ನಮ್ಮ ನೆಲ, ಜಲ, ಗಡಿಗಳನ್ನು ಗೌರವಿಸುತ್ತಲೇ ಲೋಕದೃಷ್ಟಿಯನ್ನು ಹಿಗ್ಗಿಸಿಕೊಳ್ಳುವ ಪ್ರಯತ್ನ ಸದಾ ಇರಬೇಕು.

16.ವಿಶ್ವಾಸಾರ್ಹತೆಯೊಂದೇ ನಮ್ಮ ಚಲಾವಣೆಯ ನಾಣ್ಯ.

17.ಪತ್ರಿಕೋದ್ಯೋಗ ಆದರ್ಶ ಮತ್ತು ಭರವಸೆಯ ಮೇಲೆ ನಿಂತಿದೆ. ಅದಕ್ಕೆ ಸಾವಿಲ್ಲ. ನಾವು ಸಿನಿಕರಾಗಬೇಕಿಲ್ಲ.
ಹೊಸ ವರ್ಷ ನಮ್ಮೆಲ್ಲರಿಗೂ ಹೊಸ ಅರಿವು, ವಿವೇಕ, ವಿಶಾಲ ಮನಸ್ಸು ಮತ್ತು ಹೃದಯ ದಯಪಾಲಿಸಲಿ

ಕಾಮೆಂಟ್‌ಗಳಿಲ್ಲ: