ಮಂಗಳವಾರ, ಜನವರಿ 10, 2017

ಲಂಕೇಶರ ಕಾದಂಬರಿಗಳ ‘ಮುಸ್ಸಂಜೆ ವಲಯ’


ಪ್ರೊ.ಕಿಕ್ಕೇರಿ ನಾರಾಯಣ
profile



ಸೌಜನ್ಯ: http://kikkerinarayana.in/

ಲಂಕೇಶ್-೬೦, ಮೈಸೂರು ವಿಚಾರಸಂಕೀರಣದಲ್ಲಿ ಮಾಡಿದ ಭಾಷಣದಿಂದ

ಲಂಕೇಶರ ಕಾದಂಬರಿಗಳ ಬಗ್ಗೆ ಮಾತನಾಡುವುದಕ್ಕೆ ಮೊದಲು ನವ್ಯ ಸಾಹಿತ್ಯದ (ಆಗ ನಾನಿನ್ನು ವಿದ್ಯಾರ್ಥಿ) ಆ ದಿನಗಳನ್ನು ನೆನೆಸಿಕೊಳ್ಳಲಿಕ್ಕೆ ನನಗೆ ಬಹಳ ಇಸ್ತ ಆಗುತ್ತದೆ. ಅನಂತಮೂರ್ತಿ, ತೇಜಸ್ವಿ, ಲಂಕೇಶರು ನಮಗೆ ಆ ಕಾಲಕ್ಕೆ ಪೂರ್ಣತೇಜಸ್ವಿಗಳಂತೆ ಕಾಣುತ್ತಿದ್ದರು. ಇವರ ಬರವಣಿಗೆಯ ಪ್ರಭಾವದಲ್ಲಿ ನಾವು ಏನಾಗಿದ್ವಿ ಅಂತಂದ್ರೆ ಮಾಸ್ತಿಯಾಗಲಿ, ಕುವೆಂಪು ಆಗಲಿ, ಬೇಂದ್ರೆಯಾಗಲೀ ನಮಗೆ ಕಾಣುತ್ತಿರಲಿಲ್ಲ. ಹಾಗೆ ಈ ಮೂವರೇ ನಮಗೆ ಪೂರ್ಣಸೂರ್ಯ ಪ್ರಭೆಯ ಹಾಗೆ ಕಾಣುತ್ತಿದ್ದರು. ಆಗ ಹುಡುಗರಾಗಿದ್ದ ನಮಗೆ ಸಾಹಿತ್ಯದ ರೂಪುರೇಷೆಗಳು ಮನಸ್ಸಿನಲ್ಲಿ ಮೂಡುತ್ತಿದ್ದ ಹೊತ್ತಿನಲ್ಲಿ ಮಾಸ್ತಿ, ಕುವೆಂಪು, ಬೇಂದ್ರೆ, ಪು.ತಿ.ನ. ಇವರೆಲ್ಲ ಕಾಣದ ಹಾಗೆ ನವ್ಯ ಸಾಹಿತ್ಯದ ಪ್ರಭೆ ಮಾತ್ರ ನಮ್ಮ ಕಣ್ಣಿಗೆ ರಾಚುತ್ತಿತ್ತು. 

ಅನಂತಮೂರ್ತಿಯವರು ನಮ್ಮ ಸಂಸ್ಕೃತಿಗೆ ತಮ್ಮ ಕಾದಂಬರಿಗಳ ಮೂಲಕ ಹೊಸ ವ್ಯಾಖ್ಯಾನಗಳನ್ನು ಬರೆಯುತ್ತಿದ್ದಾರೆ, ಲಂಕೇಶರು ವ್ಯಕ್ತಿ ಪ್ರತಿಕ್ಷಣ ಎಷ್ಟು ತೀವ್ರವಾಗಿ ಬದುಕಬಲ್ಲ ಎಂಬುದನ್ನು ಹೇಳುತ್ತಿದ್ದರು. ತೇಜಸ್ವಿಯವರು ನಿಗೂಢತೆಯ ಬೆನ್ನು ಹತ್ತಿ ತಮ್ಮ ನಿರೂಪಣೆಯನ್ನು ಬಹಳ ಸೊಗಸಾಗಿ ಮುಂದಿಟ್ಟುಕೊಂಡು ನಮ್ಮನ್ನು ಓದಿಸಹತ್ತಿದ್ದರು. ಪ್ರಾಯಶಃ ಈ ಮೂರು ಲೇಖಕರು ನವ್ಯದ ಮೂರು ದಾರಿಯನ್ನು ಈ ರೀತಿಯಲ್ಲಿ ಕಂಡುಕೊಂಡವರು. ಅನಂತಮೂರ್ತಿಯವರು ಒಂದು ರೀತಿಯಲ್ಲಿ ಒಂದು ಮಾದರಿಯನ್ನು ಸೃಷ್ಟಿಸಿದರು. ಅದು ಸಾಸ್ಕೃತಿಕ ನಾಯಕಂ ಪ್ರತಿನಾಯಕ ಇವರನ್ನ ಪ್ರತಿದ್ವಂದ್ವಿಗಳನ್ನಾಗಿ ಮಾಡಿಕೊಂಡು ಅವರ ವಿಷಯವನ್ನು ನಿಕಷಕ್ಕೆ ಒಡ್ಡಿ ಹೊಸ ಅರಿವನ್ನು ಮೂಡಿಸುವುದಕ್ಕೆ ಪ್ರಯತ್ನ ಮಾಡ್ತಾ ಇದ್ದಾಗ ಲಂಕೇಶರು ಬಹಳ ದುರ್ಬಲವಾದ ನಾಯಕನನ್ನ(ಅಂದರೆ ಒಂದು ರೀತಿಯಲ್ಲಿ anti heroನನ್ನು ತಮ್ಮ ಕಾದಂಬರಿಯಲ್ಲಿ ಸೃಷ್ಟಿಸುತ್ತಾ ಇದ್ದರು ಅಥವಾ ನಾಯಕನೇ ಇಲ್ಲ ‘ಮುಸ್ಸಂಜೆಯ ಕಥಾ ಪ್ರಸಂಗ’ದಂಥ ಕಾದಂಬರಿಯೂ ಬಂತು. 
lankesh ಗೆ ಚಿತ್ರದ ಫಲಿತಾಂಶ


  ತೇಜಸ್ವಿಯವರು ನಾಯಕ, ಪ್ರತಿನಾಯಕ ಇಂಥವರನ್ನು ಸೃಷ್ಟಿಸದೆ ಮನುಷ್ಯನೂ ಸಹ ಈ ವಿಶ್ವದಲ್ಲಿ ಉಳಿದ ಪ್ರಾಣಿ, ಪಕ್ಷಿಗಳಂತೆ ಪ್ರಕೃತಿಯಲ್ಲಿ ಒಂದು ಎಂಬಂತೆ ಸೃಷ್ಟಿಸಿಕೊಂಡು ನಿಗೂಢತೆಯ ಅನ್ವೇಷಣೆಗಿಳಿದು ಅದನ್ನು ಅರ್ಥಮಾಡಿಕೊಳ್ಳಲು ವಿಜ್ಞಾನದ ಆಲೋಚನೆ ಅವಶ್ಯವೆಂದು ತೋರಿಸಿಕೊಟ್ಟರು. ಈ ಮೂವರು ಲೇಖಕರು ನಮ್ಮ ಯುವಜನಾಂಗಕ್ಕೆ ಹೊಸ ಅರಿವಿನ ಸ್ಪೋಟವನ್ನ, ಎಪಿಸ್ಟಮೊಲಾಜಿಕಲ್ ಬ್ರೇಕ್ ಅಂತ ಏನು ಕರೀತೀವಿ ಅದನ್ನ ಉಂಟು ಮಾಡಿದರು ಎನ್ನುವುದರಲ್ಲಿ ಸಂಶಯ ಇಲ್ಲ. ಈಗ ಲಂಕೇಶರ ಕಾದಂಬರಿಗಳಾದ ‘ಬಿರುಕು’,’ಮುಸ್ಸಂಜೆಯ ಕಥಾ ಪ್ರಸಂಗ’,’ಅಕ್ಕ’ ಇವುಗಳ ಬಗ್ಗೆ ಗಮನ ಹರಿಸಿ ಕನ್ನಡ ಕಾದಂಬರಿಗಳ ಲೋಕಕ್ಕೆ ಅವರ ಕಾಣಿಕೆ ಏನು ಎಂಬುದನ್ನು ಪರಿಶೀಲಿಸಬಹುದು. ಆದರೆ ಲಂಕೇಶರ ಸಂದರ್ಭದಲ್ಲಿ ಇವು ಕೇವಲ ಲಂಕೇಶ್ ಕಾದಂಬರಿಗಳ ಗುಣಗಳು, ಇವು ಅವರ ಕತೆಯ ಗುಣಗಳು. ಇವು ಅವರ ಬರಹದ ಗುಣಗಳು ಅಂತ ಬೇರ್ಪಡಿಸುವುದು ಕಸ್ತ. ಈ ಎಲ್ಲಾ ರೀತಿಯ ಬರಹಗಳ ಹಿಂದಿರುವುದು ಒಂದೇ ರೀತಿಯ ಮನಸ್ಸು ಎಂದು ತಿಳಿಯಬಹುದು. ಆದರೆ ಇಲ್ಲಿ ಕಾದಂಬರಿ ಪ್ರಕಾರದ ಬಗ್ಗೆ ಮಾತನಾಡಬೇಕಾಗಿರುವುದರಿಂದ ಅವರ ಒಟ್ಟು ಬರಹದ ಕೇಕನ್ನು ಒಂದು ಸ್ಲೈಸ್ ಮಾಡಿ ಕತ್ತರಿಸಿಕೊಂಡು ನೋಡಬೇಕಾಗಿದೆ. 

  ಹೀಗೆ ನೋಡುವಾಗ ಪ್ರತಿಯೊಂದು ಕಾದಂಬರಿಯನ್ನು ಪ್ರತ್ಯೇಕವಾಗಿ ನೋಡದೆ ಈ ಕಾದಂಬರಿಯನ್ನು ಸೃಜಿಸುವ ಮನಸ್ಸು ಎಂಥದ್ದು ಎಂದು ನೋಡೋದು ಹೆಚ್ಚು ಸೂಕ್ತ ಅಂತ ಅನಿಸುತ್ತದೆ. ಲಂಕೇಶರ ಕಾದಂಬರಿಗಳಲ್ಲಿ ಬರುವ ಪಾತ್ರಗಳು ಆಯಾಕ್ಷಣದ ಬದುಕಿಗೆ ತೀವ್ರವಾಗಿ ಬದುಕುವ ಮತ್ತು ಪ್ರತಿಕ್ರಿಯಿಸುವ ಪತ್ರಗಳು. ‘ಬಿರುಕು’ವೀಣೆ ಬಸವರಾಜು ಕಳ್ಳನಾಗಿ, ಸುಳ್ಳನಾಗಿ ನಿಮಿಷಕ್ಕೊಂದು ಥರ ಮಾತಾಡುವ ಗೋಸುಂಬೆಯಂತೆ, ಬೊಗಳೆಯಾಗಿ ಕಾಣುತ್ತಲೇ ತನ್ನ ಸುಪ್ತ ಮನಸ್ಸಿನ ಪ್ರತಿಕ್ರಿಯೆಗಳನ್ನು ವ್ಯಕ್ತಮಾದುವಾಗ ಮಾತ್ರ ನಿಜವಾದ ಮನುಷ್ಯನಾಗುತ್ತಾನೆ, ಗತ್ತಿಯಾಗುತ್ತಾನೆ. ಆಯಾಕ್ಷಣದ ಅನಿಸಿಕೆಗಳು, ಪ್ರತಿಕ್ರಿಯೆಗಳು ಬರುವುದರಿಂದ ಒಂದೇ ಪಾತ್ರವು ಅನೇಕ ವೈರುಧ್ಯಗಳಲ್ಲಿ ಬದುಕುತ್ತಿರುವಂತೆ ಕಾಣಿಸುತ್ತವೆ, ಇದು ಬಹಳ ಮುಖ್ಯವಾಗಿ ಲಂಕೇಶರಲ್ಲಿ ಇರುವಂತಹ ಅನನ್ಯತೆಯ ಒಂದು ವಿಷಯ ಅಂತ ಹೇಳಿ ನಾವು ತಿಳಿದುಕೊಳ್ಳಬಹುದು. ಲಂಕೇಶ ಏನು ಮಾಡುತ್ತಾರೆ ಅಂದರೆ ಒಂದೇ ಪಾತ್ರದಲ್ಲಿ ಇರುತಕ್ಕಂತಹ ಗುಣಗಳು, ಅವಗುಣಗಳು, ಅವನ ಶಕ್ತಿ, ಅವನ weakness ಇವೆಲ್ಲವನ್ನೂ ಒಟ್ಟಿಗೆ ಹಿಡಿಯೋದಕ್ಕೆ ಶುರು ಮಾಡುತ್ತಾರೆ. ಇದಕ್ಕೆ ಮುಖ್ಯ ಕಾರಣ ಏನು ಅಂದರೆ ಪ್ರಾಯಶಃ ಆಯಾ ಕ್ಷಣಕ್ಕೆ, ಆಯಾ ಸಂದರ್ಭಕ್ಕೆ ಆ ಪಾತ್ರಗಳು ಬದುಕುತ್ತಾ ಇರುವುದನ್ನು ನೋಡುವಾಗ ಅದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾ ಇರುತ್ತವೆ ಎಂದು ತೋರಿಸಿಕೊಡುವುದಕ್ಕೆ ಈ ರೀತಿಯ ಪಾತ್ರಗಳನ್ನೂ ಸೃಷ್ಟಿಸುತ್ತಾ ಇರುತ್ತಾರೆ. 

  ಈ ಮೂಲಕ ಪ್ರಾಯಶಃ ಅನಂತಮೂರ್ತಿಯವರಿಂದ ಲಂಕೇಶರು ಭಿನ್ನವಾಗಿಯೂ ಇದ್ದರ ಅಂತ ನೋಡಬಹುದು. ‘ಮುಸ್ಸಂಜೆ’ಯಾ ಸಾವಂತ್ರಿಗೆ ಅವ್ವ ರಂಗವ್ವ ತನ್ನ ಪ್ರಿಯಕರನೋಡನೆಯ ಒಡನಾಟವನ್ನು ಸಹಿಸದ, ತನ್ನ್ನ ತಮ್ಮನಿಗೆ ಮಾಡುವೆ ಮಾಡುವ ಕ್ರೂರಿಯಂತೆಯೂ ತನ್ನೆಲ್ಲ ಆಸೆಗೆ ಅಡ್ಡಬರುವಂತೆಯೂ ಕಾಣುತ್ತಾಳೆ. ಆದರೆ ಮಂಜ ಮತ್ತು ಸಾವಂತ್ರಿಯ ಪ್ರಣಯವನ್ನು ನೋಡಿದ ಜನ ಅವರ ವ್ಯಭಿಚಾರದಿಂದ ತಮ್ಮ ಧರ್ಮಕ್ಕೆ ಅವಹೇಳನವಾಯಿತೆಂದು ಕಿವಿ ಕೂದಲು ಕತ್ತರಿಸಿ ಮೆರವಣಿಗೆ ಮಾಡುತ್ತೇವೆಂದು ಕೂಗಾಡಿಕೊಂಡು ಬಂದಾಗ ರಂಗವಾ ಅವರನ್ನ ಮನೆಮುಂದೆ ಕರೆದುಕೊಂಡು ಬಂದು ಕೈಯ ಕುಡಗೋಲನ್ನು ಎತ್ತಿ ಕ್ರೂರ ಧ್ವನಿಯಲ್ಲಿ ಶಾಪ ಹಾಕಿ ಮಂಜ ಮಾತು ಸಾವಂತ್ರಿಯನ್ನು ಎಳೆಗರುವಿನಂತೆ ಹಿಡಿದು ಗಾಡಿಯಿಂದ ಕೆಳಕ್ಕೆ ಎಲ್ದುಕೊಂಡು ತನ್ನ ಸೊಂಟದಲ್ಲಿದ್ದ ತಾಳೀಸರವನ್ನು ಮಂಜನಿಗೆ ಕೊಟ್ಟು ಅದನು ಸಾವಂತ್ರಿಯ ಕೊರಳಿಗೆ ಕಟ್ಟುವಂತೆ ಹೇಳುತ್ತಾಳೆ. ಇದು ತೀರ ಅನಿರೀಕ್ಷಿತವಾದಂತಹ ತಿರುವು. ಆಮೇಲೆ ಹೇಳುತ್ತಾಳೆ ‘ಅದೇನಾಗುತ್ತೋ ನಾನು ನೋಡ್ಕೋತೀನಿ. ಸುಖವಾಗಿರು ನನ್ನ ಸುಡಗಾಡು ಮಗಳೆ’ ಲಂಕೇಶರ ಮೂರು ಕಾದಂಬರಿಗಳಲ್ಲೂ ಇಂಥ ಉದಾಹರಣೆಗಳನ್ನು ನಾವು ಕೊಡಬಹುದು. 

 ಈ ರೀತಿಯ ಎರಡು ದ್ವಂದ್ವಗಳನ್ನು ಒಟ್ಟಿಗೆ ಸೇರಿಸಿ ನೋಡುವಂಥದ್ದು ಲಂಕೇಶರ ಅನನ್ಯವಾಗ ಗುಣ ಅಂತ ನಾನು ತಿಳಿದಿಕೊಂಡಿದ್ದೀನಿ. ಅದೇ ರೀತಿ ಉಡುಪನಿಗೆ, ಅ ಹಳ್ಳಿಯ ವಾತಾವರಣವನ್ನೆಲ್ಲ ನೋಡಿದ ಉಡುಪನಿಗೆ ಏನು ಅನ್ನಿಸುತ್ತದೆ ಅಂದರೆ ತಮ್ಮ ಎಲ್ಲಾ ದುರಂತಗಳು ಎಷ್ಟು ವಿಚಿತ್ರವಾದವು, ಎಷ್ಟರಮಟ್ಟಿಗೆ ಕ್ಷಣದ ಮನಸ್ಥಿಯ ಮೇಲೆ ನಿಂತಿರುತ್ತದೆ ಎಂದು, ಅದೇ ರೀತಿಯಲ್ಲಿ ಆ ಹಳ್ಳಿಯ ಜನರ ನಡವಳಿಕೆಗಳಿಗೆ ಪ್ರತಿಕ್ರಿಯಿಸಬೇಕಾದರೆ ಉಡುಪ ಒಂದು ರೀತಿಯ marxism ಅನ್ನು ಉಪಯೋಗಿಸುತ್ತಾನೆ. ಅದೂ ವಿಫಲವಾದಾಗ ಲೋಹಿಯಾವಾದವನ್ನು ತೆಗೆದುಕೊಂಡು ಬರುತ್ತಾನೆ. ಅದೂ ಸಾಕಾಗದೆ ಹೋದಾಗ ಗಾಂಧೀವಾದವನ್ನು ತೆಗೆದುಕೊಂಡು ಬರುತ್ತಾನೆ. ಆಯಾ ಕ್ಷಣಕ್ಕೆ ವಾದಗಳನ್ನು ಅಲ್ಲಿ ಅನ್ವಯಿಸಿಕೊಂಡು ನೋಡುವಂಥ ಗುಣವನ್ನು ಪಡೆದಿದ್ದಾನೆ. ಇದೇ ರೀತಿ ‘ಅಕ್ಕ’ ಕಾದಂಬರಿಯ ಬೈಗುಳ ಮತ್ತು ಪ್ರೀತಿ. ಕ್ಯಾತನ ಅಕ್ಕ ದೇವೀರಿಯ ಪ್ರೀತಿ ಕ್ಯಾತನಿಗೆ ಕಾಣಿಸಿಕೊಳ್ಳುವ ಬಗೆ ಹೀಗಿದೆ: “ಕೊಳಗೇರಿಯ ರೌಡಿ ಗ್ಯಾಂಗಿನ ಖಡವ, ನಾಗರ ಇವರನ್ನು ನಿತ್ಯ ಬಯ್ಯುತ್ತಿದ್ದಳು. ಬಯ್ದರೂ ಒಮ್ಮೊಮ್ಮೆ ಉಪ್ಪಿಟ್ಟು ಬೆಲ್ಲದ ಕಾಫಿಯನ್ನು ಕೊಡುತ್ತಿದ್ದಳು”. ಪ್ರೀತಿ – ದ್ವೇಷ ಇವೆರಡೂ ಒಬೋಬ್ಬರಲ್ಲೇ ಒಟ್ಟೊಟ್ಟಿಗೇ ಇರುವಂಥದ್ದು. ಆಯಾ ಕ್ಷಣದಲ್ಲಿ ವ್ಯಕ್ತಮಾಡುವಂಥದ್ದು ಎಂದು ಹೇಳುವುದು ಲಂಕೆಶದ ಗುಣ. ಒಂದು ಸಾರಿ ‘ದೇವೀರಿ ಅನ್ನೋ ಬಜಾರಿ ಬಲೇ ಹರಾಮಿ ಹೆಂಗಸು’ ಎನ್ನಿಸುವ ಕ್ಯಾತನಿಗೆ ಮತ್ತೊಂದು ಕ್ಷಣದಲ್ಲಿ ದೇವೀರಿ ತುಂಬಾ ಒಳ್ಳೆಯವಳು ಅಂತ ಅನ್ನಿಸುತ್ತದೆ. ಮತ್ತೊಂದು ಕ್ಷದಲ್ಲಿ “ಮನೆಗೆ ಹೋಗಕ್ಕೆ ಯಾಕೋ ಬ್ಯಾಸರ, ಮುಂಚೆ ಹೀಗಿರಲಿಲ್ಲ. ದೇವೀರಿ ಹೊತ್ತು ಮುಳುಗೋ ಅಷ್ಟರಾಗೆ ಬಂದು ಕಾಯ್ತ್ಹಿದ್ಲು. ನಾನು ಹೋದ ಕೂಡಲೇ ಬಂದು ಒಂಚೂರು ರೊಟ್ಟಿನಾದ್ರೂ ಕೊಡುತ್ತಿದ್ಲು. ಈಗ ನಾನು ಮನೆಗೆ ಹೋಗೋದು ನನ್ನ ಹಣೆಬರಹ. ಅದಕ್ಕಿಂತ ನೋವಿನ ವಿಚಾರ ಅಂದರೆ ಆಕೆ ಈಗ ಇಲ್ಲದಿದ್ದರೆ ಮನಸ್ಸಿಗೆ ಹಳಾರವಾಗಿರುತ್ತೆ. ಇದ್ಯಾಕೆ ಹಿಂಗಾಗಬೇಕು ಹೇಳ್ತೀರಾ”. ಹೀಗೆ ಆಯಾಕ್ಷಣಕ್ಕೆ ಪ್ರತಿಕ್ರಿಯಿಸುವ ಪಾತ್ರಗಳನ್ನೂ ನಾವು ನೋಡುತ್ತೇವೆ. 

  ಕೆಟ್ಟವರೆಂದುಕೊಂದವರು ಒಂದು ಕ್ಷಣದಲ್ಲಿ ಒಳ್ಳೆಯವರಾಗಿಯೂ, ಒಳ್ಳೆಯವರು ಕೆತ್ತವರಾಗಿಯೂ ವರ್ತಿಸುವುದನ್ನು ಒಂದೇ ಪಾತ್ರದಲ್ಲಿ ನಾವು ಕಾಣಬಹುದು, ಈ ದ್ವಂದ್ವ ಒಂದೇ ಪಾತ್ರದಲ್ಲಿ ಹುಟ್ಟುತ್ತದೆ ಮತ್ತು ಅನಿರೀಕ್ಷಿತ ತಿರುವು ಪಡೆಯುತ್ತದೆ. ಏಕೆಂದರೆ ವೈವಿಧ್ಯಮಯ ಶಕ್ತಿಗಳ ತಾಕಲಾಟದ ರಂಗವಾದ ಈ ಬದುಕಿನಲ್ಲಿ ಅಸಂಖ್ಯ ಸಲ ಒಳ್ಳೆಯದನ್ನು ಮಾಡುವ ಮನುಷ್ಯರಿಂದಲೇ ಕೆಟ್ಟದಾಗಿದೆ. ಒಳ್ಳೆಯದನ್ನು ಮಾಡಬೇಕೆಂಬುದು, ಅದರಿಂದ ಆಗುವ ಕೆಡುಕನ್ನು ಗಮನಕ್ಕೆ ತೆಗೆದುಕೊಳ್ಳದಂತೆ ಮಾಡುತ್ತದೆ. ಮತ್ತೆ ಒಳ್ಳೆಯದು ಕೆಲಸಮಯ ಕೆಟ್ಟದರ ಹಾಗೆಯೇ ಇರುತದೆ ಎನ್ನುವುದು ಲಂಕೇಶರ ಅಭಿಪ್ರಾಯ. ಈ ಕ್ಷಣದ ಬದುಕನ್ನ ಹಿಡಿಯುವುದು ಲಂಕೇಶರ ಮುಖ್ಯ ಆಶಯವಾಗಿರುವುದರಿಂದ ಹಿಂದೆ ಆಗಿರುವುದು, ಮುಂದೆ ಅಗೂದೆಲ್ಲ ಈಗ ಆಗೋದರ ಮೇಲೆ ನಿಂತಿದೆ. past and future ಎರಡೂ ಈಗ presentನ ಮೇಲೆ ನಿಂತಿರುತ್ತದೆ. ಲಂಕೇಶರ ಕಾದಂಬರಿಗಳಲ್ಲಿ ಮೇಲು ನೋಟಕ್ಕೆ ಅಮುಖ್ಯ ಎಂದು ಕಂಡುಬರುವ ಘಟನೆಗಳೇ ಇದ್ದಕ್ಕಿದ್ದಂತೆ ಸ್ಫೋಟಗೊಳ್ಳುತ್ತವೆ. ಪ್ರತಿಯೊಬ್ಬ ಮನುಷ್ಯನೂ ಒಂದು ಬಗೆಯ ನೋಟಕ್ಕೆ ಹಾಸ್ಯಾಸ್ಪದವಾಗಿಯೂ, ವಿಚಿತ್ರವಾಗಿಯೂ, ಗಂಭೀರವಾಗಿಯೂ ಅಥವಾ ಎಲ್ಲವೂ ಒಟ್ಟಿಗೆಯೇ ಆಗಿ ಕಾನುತ್ತಾವೆ. ಇವೆಲ್ಲ ಒಟ್ಟಾಗಿಯೇ ಬದುಕಿನ ದುರಂತ ಕೂಡ ನಡೆದುಹೋಗುತ್ತದೆ. ಲಂಕೇಶರ ಕಾದಂಬರಿಯ ಪಾತ್ರಗಳು ವೈರುಧ್ಯಗಳ ಮೊತ್ತವೆಂದು ಕಂಡುಬಂದರೂ ಅದು ಸಹಜ ಎಂಬುದನ್ನು ಬಿಂಬಿಸುತ್ತವೆ. 

ಈ ವಿಷಯವನ್ನು ಹೇಳುವುದಕ್ಕಾಗಿಯೇ ‘ಬಿರುಕು’ವೀಣೆ ಕಥಾನಕದಲ್ಲಿ ನಡೆಯುವ ಘಟನೆಯನ್ನು ಹಿಗ್ಗಿಸಿ, ಅತಿಯಾಗಿ ತೆಗೆದುಕೊಂಡು ಹೋಗಿ ಈ ಸತ್ಯವನ್ನು ತೋರಿಸಲು ಲಂಕೇಶರು ಪ್ರಯತ್ನಿಸುತ್ತಾರೆ. ಅದಕ್ಕಾಗಿಯೇ ‘ಬಿರುಕು’ವಿನ ಬಸವರಾಜು ಯುದ್ದಕ್ಕೂ ಜಗಳಕ್ಕೂ ಇರುವ ವ್ಯತ್ಯಾಸವನ್ನು ಈ ರೀತಿ ಗುರುತಿಸುತ್ತಾನೆ. “ಭಾರತೀಯತೆ ಅಂದರೆ ಇದು. ನೀನು ಹೇಳುತ್ತಿರುವುದು ಯುದ್ದ. ನಾನು ಹೇಳುತ್ತಿರುವುದು ಜಗಳ. ಯುದ್ದು ಒಂದು ರೀತಿಯಲ್ಲಿ ಸಾರ್ವಜನಿಕರಲ್ಲಿ ಹಬ್ಬ. ಆ ಹಬ್ಬದಲ್ಲಿ ಸತ್ತ ಕುರಿಗಳು ಸ್ವರ್ಗಸೇರುತ್ತವಂತೆ. ಬದುಕಿ ಬಂದ ಕುರಿಗಳು ವೀರಾಗ್ರಣಿಗಳಾಗುತ್ತವಂತೆ. ಜಗಳ ಹಾಗಲ್ಲ, ಅದೊಂದು ಪುನರ್ಜನ್ಮದ ಥರ. ಎಷ್ಟು ಚೆನ್ನಾಗಿರುತ್ತೆ – ಈ ಜನ್ಮದಲ್ಲೇ ಪುನರ್ಜನ್ಮ ಆದರೆ, ಚೇತರಿಸಿಕೊಂಡು ಹೊಸ ಬದುಕನ್ನು ನೋಡೋದಾದರೆ” ಪ್ರಾಯಶಃ ಈ ರೀತಿ ಕ್ಷಣದ ಬದುಕನ್ನ ಹೊಸದಾಗಿ ಪುನರ್ಜನ್ಮದಂತೆ ಅಷ್ಟೊಂದು intense ಆಗಿ ಬದುಕೋದು ಕನ್ನಡ ಸಾಹಿತ್ಯದಲ್ಲಿ ಪ್ರಾಯಶಃ ಹರಿಹರನಲ್ಲಿ ಕಂಡುಬರುತ್ತದೆಂದು ಕಾಣುತ್ತದೆ. ಅದುಬಿಟ್ಟರೆ ಲಂಕೇಶರ ಬದುಕಿನಲ್ಲಿ ಈ ಕ್ಷಣದ ಬದುಕನ್ನ ಹಿಡಿಯುವುದು, ಬದುಕುವುದು ಬಹಳ ಮುಖ್ಯವಾಗಿ ಕಾಣಿಸುತ್ತದೆ. ಆದರೆ ಈ ಕ್ಷಣದ ಬದುಕನ್ನ ಹಿಡಿಯುವಾಗ ಡಿ.ಅರ್.ನಾಗರಾಜ್ ಅವರು ಹೇಳಿದ ಹಾಗೆ ಒಂದು ರೀತಿ ಅಚಾರಿತ್ರಿಕವಾಗಿಬಿಡುತ್ತಾರೇನೋ ಅನ್ನಿಸುತ್ತದೆ, ಲಂಕೇಶರು. ಲಂಕೇಶರ ಕಾದಂಬರಿಗಳಲ್ಲಿನ ಇನ್ನೊಂದು ಮುಖ್ಯಗುಣ ಅವರೆಲ ಕಾದಂಬರಿಗಳಲ್ಲಿ ಹರಡಿಕೊಂಡಿರುವಂಥದ್ದು. 

ಅವರ ಕಾದಂಬರಿಗಳಲ್ಲಿ ನನಸು ಎಲ್ಲಿ ಕೊನೆಯಾಗಿ ಕನಸು ಎಲ್ಲಿ ಶುರುವಾಗುತ್ತೆ ಅಂತ ಹೇಳೋದು ದೊಡ್ಡ ಸಮಸ್ಯೆಯಾಗುತ್ತೆ. ಬಸವರಾಜ ತನ್ನ ಹಳ್ಳಿಯ ಹಿನ್ನೆಲೆಯ ಬಗ್ಗೆ ತೀವ್ರತೆಯಿಂದ ಎಷ್ಟೇ ಹೇಳಿಕೊಳ್ಳುತ್ತಿದ್ದರು ಅದು ಅವನ ನಿಜವಾದ ಬದುಕಿನ ಹಳ್ಳಿಯಾಗುವುದಿಲ್ಲ. ಪಟ್ಟಣದ ಒಂದು ವ್ಯವಸ್ತೆಯಿಂದ ಮತ್ತು ಸಂದರ್ಭದಿಂದ ಅದು ಒಂದು ರೀತಿಯಲ್ಲಿ ಕಣಾದ ಹಳ್ಳಿಯಾಗಿ ಮಾರ್ಪಡುತ್ತದೆ. ಅದು ನನಸಾದ ಹಲ್ಲಿಯಾಗುವುದೇ ಇಲ್ಲ. ಪಟ್ಟಣದ ಕೃತಕ ಜೀವನವನ್ನು ಖಂಡಿಸುವಾಗಲೆಲ್ಲ ಇದೊಂದು ಕನಸಿನ ಜೀವನವಾಗಬಾರದಿತ್ತೆ ಅನ್ನಿಸುತ್ತದೆ.ಎಲ್ಲ ವಿಚಿತ್ರಗಳ ಮಧ್ಯೆಯೂ, ರಂಪಗಳ ಮಧ್ಯೆಯೂ ಕೃತಕತೆಗಳ ಮಧ್ಯೆಯೂ ಬೆಂಗಳೂರು ಬಸವರಾಜುವಿಗೆ ಆಕರ್ಷಣೀಯವಾಗಿಯೇ ಇದೆ ಎನಿಸುತ್ತದೆ. ಇನ್ನೊಂದು ಕ್ಷಣದಲ್ಲಿ ಮೂರು ದಿವಸ ರೌಡಿಗಳ ಜೊತೆಯಲ್ಲಿ ಕಳೆದ ಮೇಲೆ ಇದು ಭಾರತವಲ್ಲ, ನಮ್ಮ ವಾತಾವರಣವಲ್ಲ, ಎರವಲು ತಂದ ಖಾಯಿಲೆ ಎ೦ದು ದೃಢವಾಗಿ ನ೦ಬಹತ್ತಿದ ಎ೦ಬ ಅಭಿಪ್ರಾಯವೂ ಇದೆ. ಇದು ಶಿಕ್ಷಿಸುವ ಸ್ಥಳ, ಸೆರೆಮನೆ, ನ್ಯಾಯಾಲಯ ಎಂದು ಅನಿಸಿದ ತಕ್ಷಣವೇ ಇದು ಹಬ್ಬದ ಹಾಗಿದೆ, ಆಟದಂತಿದೆ ಅಂತ ಅ೦ದುಕೊಳ್ಳುತ್ತಾನೆ. 

  ಈ ರೀತಿಯ ತಾಕಲಾಟದಲ್ಲಿ ಬಸವರಾಜುವಿಗೆ ಅನ್ನಿಸುವುದು ಬೆಳಕಿನಲ್ಲಿ ಓಡಬೇಕು, ಕತ್ತಲಿನಲ್ಲಿ ನಡೆಯಬೇಕು ಅಂತ ಜನಕ್ಕೆ ಅದು ಸರಿ ಎನ್ನಿಸುವುದಿಲ್ಲ. ಮಂದ ಬೆಳಕಿನಲ್ಲಿ ಎರಡನ್ನೂ ಮಿಶ್ರಗೊಳಿಸಿ ಸಾಗಬೇಕು ಎನ್ನಿಸುತ್ತದೆ. ಎಲ್ಲಿ ಕೆಟ್ಟ ಪ್ರಪಂಚ ಹೋಗಿ, ಕನಸಿನ, ಅಂದರೆ ಊಹಿಸಿದಂಥ ಪ್ರಪಂಚ ನಿಜವಾಗಲಿ ಎನ್ನುವ ಆಶಯ ಕಾಣುತ್ತದೆ. ‘ಮುಸ್ಸಂಜೆ’ಯಲ್ಲೂ ಸಹ ಈ ರೀತಿ ನನಸು ಕನಸಾಗುವ ಅನೇಕ ಘಟನೆಗಳಿವೆ. ಒಂದು ಉದಾಹರಣೆಯನ್ನು ಮಾತ್ರ ಇಲ್ಲಿ ಕೊಡುತ್ತೇನೆ. ಸಾವಂತ್ರಿ ತನ್ನ ಅವ್ವ ಶಾಸ್ತ್ರಿಯ ಜೊತೆಯಲ್ಲಿ ಮಲಗಿದ್ದನ್ನು ನೋಡುತ್ತಾಳೆ. ಅದೂ ರಾತ್ರಿ ಹೊತ್ತಲ್ಲಿ, ರಸಿಕತೆ ಅಂದರೆ ಹೀಗಿರಬೇಕು ಎಂದು ಅಂದುಕೊಳ್ಳುತ್ತಾಳೆ. ಆದರೆ ರಂಗವ್ವ ತನ್ನ ಮಗಳು , ಮಂಜನೊಡನೆ ಸರಸವಾಡುವುದನ್ನು ಕಂಡು ಅವಳನ್ನು ಹೊಡೆದಾಗ ಸಾವಂತ್ರಿ, “ನೀನಾದರೆ ಶಾಸ್ತ್ರಪ್ಪನ್ ತಾವ ಮಲಕ್ಕೊಬೈದು ನಾಚ್ಕೆಯಾಗಕ್ಕಿಲ್ವ ನಿಂಗೆ” ಅನ್ನುತ್ತಾಳೆ. ರಂಗವ್ವ ತನ್ನ ಕಿವಿಯನ್ನೇ ನಂಬದವಳಂತೆ ಅವಳನ್ನ ನೋಡಿ, “ಏನೇ ನೀ ಹೇಳ್ತಿರೋದು ಏನಾಗೈತೆ ನಿಂಗೆ?” ಎನ್ನುತ್ತಾಳೆ. ಅವ್ವನ ಪ್ರಾಮಾಣಿಕ ಆಶ್ಚರ್ಯ ನೋಡಿ ಸಾವಂತ್ರಿಗೆ ತಾನು ಕಂಡದ್ದು ನನಸೋ ಕನಸೋ ಎಂಬ ಸಂಶಯ ಬಳವಾಗುತ್ತೆ. ಈ ರೀತಿ ಕನಸು ಮತ್ತು ನನಸುಗಳ blend ಅನ್ನು ಲಂಕೇಶರು ತಮ್ಮ ಮೂರು ಕಾದಂಬರಿಗಳಲ್ಲೂಮಾಡಿಕೊಂಡು ಬರುತ್ತಾರೆ. ಇದೆ ರೀತಿ ‘ಅಕ್ಕ’ ಕಾದಂಬರಿಯಲ್ಲೂ ಸಹ. ಅಲ್ಲಿ ಅಕ್ಕ ಬಿಟ್ಟು ಹೊರಟುಹೋಗಿರುತ್ತಾಳೆ. 

  ಮೂರು ದಿವಸವಾದರೂ ಬಂದಿರೋದಿಲ್ಲ. ಆಗ ಕ್ಯಾತ ಹೊಟ್ಟೆ ಹಸಿದುಕೊಂಡು ಮಲಗಿರುತ್ತಾನೆ. ಅವನಿಗೆ ಪೂರ್ಣ ನಿದ್ದೆಯೂ ಬ೦ದಿರುವುದಿಲ್ಲ, ಪೂರ್ಣ ಎಚ್ಚರವೂ ಇರೋದಿಲ್ಲ. ಆ ಒಂದು ಕ್ಷಣದಲ್ಲಿ ಅಕ್ಕ ದೇವೀರಿ ಬಂದು ಕಾಣಿಸಿಕೊಳುತ್ತಾಳೆ. ಕಾಣಿಸಿಕೊ೦ಡು ಕ್ಯಾತನಿಗೆ ಬ್ರೆಡ್ ಕೊಡುವುದಕ್ಕೆ ಬರುತ್ತಾಳೆ. ಕ್ಯಾತ ಅದನ್ನ ಬೇಡ ಎನ್ನುತ್ತಾನೆ. ಆಗ ಅವಳೆನ್ನುವ ಮಾತು ಬಹಳ ಮಾರ್ಮಿಕವಾಗಿದೆ. ಅಲ್ಲೀತನಕ ನರಸಿಂಹ ಮೇಸ್ತ್ರಿ ಅನ್ನೋನು ಬಹಳ ಕೆಟ್ಟವನು ಅಂತ ಚಿತ್ರಿತವಗಿದ್ದರೆ. ಈ ಕನಸಿನಲ್ಲಿ ನರಸಿಂಹ ಮೇಸ್ತ್ರಿ ಬಹಳ ಒಳ್ಳೆಯವನು ಅನ್ನುವ ಚಿತ್ರ ಬರುತ್ತದೆ. “ನರಸಿಂಹ ಮೇಸ್ತ್ರಿ ಈಗ ಬಹಳ ಒಳ್ಳೆಯವನಾಗಿಬಿಟ್ಟಿದ್ದಾನೆ. ಬಾಳ್ ಒಳ್ಳೆಯವನು ಗೊತ್ತಾ, ಕೈ ತುಂಬಾ ಹಣ ಕೊಡುತ್ತಾನೆ. ನನಗೆ ಒಂಚೂರೂ ತೊಂದ್ರೆ ಆಗದ ಹಾಗೆ ನೋಡಿಕೊಳ್ಳುತ್ತಾನೆ” ಅಂದಾಗ ಕ್ಯಾತ “ನನಗೆ ನಿನ್ನ ಮುಖ ನೋಡಿದ್ರೆ ಅಸ್ಯ ಆಗುತ್ತೆ ಹೊಂಟೋಗು ಇಲ್ಲಿಂದ” ಅಂತಾನೆ. ಹೀಗೆ ಕನಸಿಗೆ ಬಂದಾಗ, ಮತ್ತೆ ಅವಳು ಕೆನ್ನೆಗೆ ಹೊದಾದಾಗ ಎಚ್ಚರ ಆಗುತ್ತದೆ. ಎಚ್ಚರ ಆದಾಗ ಅವನಿಗೆ ಅನಿಸಿದ್ದು ಏನೆಂದರೆ ಗುಡಿಸಲು ಬಿಟ್ಟು ದೂರ ಹೊರಟುಹೋಗೋಣ ಅಂತ. ಹಾಗೆ ಹೋಗುತ್ತಿದ್ದಾಗ, ಅಂದರೆ ಈ ನನಸಲ್ಲಿ ನಡೆದುಕೊಂಡು ಹೋಗುತ್ತಾ ಇರುವಾಗ ದೇವೀರಿ ನನಗೆ ಬಂದು ಹೊಡೆದುಬಿಟ್ಟರೆ ಅಂತ ಒಂದು ಸಾರಿ ಅನಿಸಿದರೆ ಮತ್ತೊಂದು ಸಾರಿ ಇದು ಬರೀ ಕನಸಾದರೆ ಅಂತ ಅನ್ನಿಸುತ್ತದೆ. 

   ಹೀಗೆ ಕನಸು – ನನಸು, ನನಸು-ಕನಸು ಅನ್ನೋದನ್ನ ಲಂಕೇಶರು ಸೃಷ್ಟಿಸುವುದು ಕೇವಲ ಕನಸೂ ಅಲ್ಲ, ನನಸೂ ಅಲ್ಲಇದರ ಮಧ್ಯೆ ಇರುವ ಸ್ಥಿತಿಯನ್ನು. ‘ಬಿರುಕು’ ಆಗಲೀ, ‘ಮುಸ್ಸಂಜೆಯ ಕಥಾ ಪ್ರಸಂಗ’ವಾಗಲೀ, ‘ಅಕ್ಕ’ ಆಗಲೀ ಬೆಳೆಯುವುದು ಈ twilight zoneನಲ್ಲಿ. ಈ ಎರಡರ ನಡುವೆ ಒಂದು ಪ್ರಪಂಚವನ್ನು ಸೃಷ್ಟಿಸುತ್ತಾರೆ. ಅದು ಮುಸ್ಸಂಜೆಯಾಗಬಹುದು, ಮುಸ್ಸಂಜೆ ಎನ್ನುವ ಪರಿಕಲ್ಪನೆ ಈ ಮೂರು ಕಾದಂಬರಿಗಳಲ್ಲೂ ಬರುತ್ತದೆ. ಮುಸ್ಸಂಜೆಯಲ್ಲಿ ಕನಸು ನನಸಿನ ಪ್ರವೇಶ ಮುಖ್ಯ ಆಗುತ್ತದೆ. ಈ ರೀತಿ ಓದುಗರ ಮನಸ್ಸಿನಲ್ಲಿ ಲಂಕೇಶರು ಹೊಸ space, ಒಂದು ಹೊಸ ಅವಕಾಶವನ್ನು, ಸೃಷ್ಟಿಸುತ್ತಾರೆ. ಲಂಕೇಶರ ಕಾದಂಬರಿಗಳಲ್ಲಿನ ಇನ್ನೊಂದು ಮುಖ್ಯ ಗುಣ ಅಂದರೆ ಈಗ ಹಾಲಿ ಇರುವ ಜೀವನಕ್ರಮ ಕ್ರುತಿಮವಾದದ್ದು, ಕೆಟ್ತಿರೋದ. ಈ ಕ್ರಮವನ್ನು ಪ್ರವೇಶಿಸಬೇಕಾದರೆ ಅಥವಾ ಹಾಯಬೇಕಾದರೆ ಕಾಡಿಗೆ ಅಂದರೆ ಕ್ರಮವಿಲ್ಲ ಸ್ಥಿತಿಗೆ, ನುಗ್ಗಬೇಕು, ಹೊಸ ಕ್ರಮಕ್ಕಾಗಿ ಕಾಯಬೇಕು ಎಂಬುದನ್ನು ಅವರು ತಮ್ಮ ಮೂರು ಕಾದಂಬರಿಗಳಲ್ಲಿ ನಿರ್ದೇಶಿಸುತ್ತಾರೆ. ‘ಬಿರುಕು’ವಿನ ಬಸವರಾಜು ಹಣ, ಪ್ರಭಾವ, ಸಾಂಸ್ಕೃತಿಕ ಚಟುವಟಿಕೆಗಳು, ಸಾಹಿತ್ಯ ಪ್ರಕಾಶನ, ಸಾಮಾಜಿಕ ಪ್ರತಿಷ್ಠೆ ಇದೆಲ್ಲವೂ ನಾನು ನುಗ್ಗಲಾಗದ ಕಾದೆಂದು ಅಂದುಕೊಳ್ಳುತ್ತಾನೆ. ಲೇಖಕರು ಈ ಕಾಡನ್ನು ಸೂಚಿಸಿ ಬಿಟ್ಟು ಬಿಡುತ್ತಾರೆ. ಎಲ್ಲಾ ಗೋಜಲು ಅನ್ನೋದನ್ನ ಬಿಚ್ಚಿಟ್ಟು ಯಾವ ರೀತಿ ಹೊಸ ಕ್ರಮ ಇರಬೇಕು ಅನ್ನೋದನ್ನ ಓದುಗನಿಗೆ ಬಿಟ್ಟುಬಿಡುತ್ತಾರೆ.ಒಂದು ರೀತಿಯಲ್ಲಿ open text ಆಗಿ ನಮಗೆ ಇವರ ಕಾದಂಬರಿಗಳು ಕಾಣುತ್ತವೆ. ಅಲ್ಲಿ ಓದುಗ ಬಹಳ ಕ್ರಿಯಾಶೀಲನಾಗಬೇಕಾಗುತ್ತದೆ. ಇಲ್ಲಿ ನಮಗೆ ಕಂಡುಬರುವುದು ಕಾದಂಬರಿಗಳಲ್ಲಿ ಅಥವಾ ಯಾವುದೇ ಸಾಹಿತ್ಯಪ್ರಕಾರದಲ್ಲಿ ಎರಡು ರೀತಿಯ ಪುಸ್ತಕಗಳಿರುತ್ತವೆ. 
  ಒಂದು ನಮ್ಮನ್ನ ಸುಮ್ಮನೆಓಡಿಸಿಕೊಂಡು ಹೋಗಿಬಿಡುತ್ತದೆ. ನಾವು ಓದುಗರಾಗಿ ಅದಕ್ಕೆ ಯಾವ ಪ್ರತಿಕ್ರಿಯೆಯನ್ನು ಮಾಡಬೇಕಾಗಿಲ್ಲ ಅಥವಾ ವ್ಯಕ್ತಪಡಿಸಬೇಕಾಗಿಲ್ಲ. ನಮ್ಮನ್ನ ಕೊನೇತನಕ ಕರೆದುಕೊ೦ಡು ಹೋಗಿ ಕೊನೆ ಮುಟ್ಟಿಸಿಬಿಡುತ್ತದೆ. ಸಾಮಾನ್ಯವಾಗಿ popular novels ಅಥವಾ popular literature ಈ ಥರ ಮಾಡುತ್ತವೆ. ಆದರೆ ಇನ್ನೊಂದು ರೀತಿಯ ಕಾದಂಬರಿಗಳು ಇರುತ್ತವೆ ಅಥವಾ ಇನ್ನೊಂದು ರೀತಿಯ ಬರಹಗಳು ಇರುತ್ತವೆ. ನಾವು ಓದುಗರಾಗಿ ಸಕ್ರಿಯವಾಗಿ ಅದರ ಜೊತೆ ಪಾಲ್ಗೊಳ್ಳಬೇಕಾಗುತ್ತದೆ. ನಮ್ಮ ಪಠ್ಯವನ್ನು ನಾವು ಪ್ರತೀ ಸಲ ಓದುತ್ತಾ ಇರುವಾಗಲೂ ನಾವು ನಮ್ಮ ಮನಸ್ಸಿನಲ್ಲಿ ಅದನ್ನ ಬಹಳ active ಆಗಿ, ಕ್ರಿಯಾತ್ಮಕವಾಗಿ ಅದರ ಜೊತೆ ಹೊಸದಾಗಿ ಆ text ಅನ್ನು Create ಮಾಡಿಕೊಳ್ಳುತ್ತಿರುತ್ತೀವಿ. ಲಂಕೇಶರ ಕಾದಂಬರಿಗಳು ನಮಗೆ ಈ ರೀತಿ text ಅನ್ನು Create ಮಾಡಿಕೊಳ್ಳುವುದಕ್ಕೆ ಬೇಕಾದಷ್ಟು ಅವಕಾಶಗಳನ್ನು ಕಲ್ಪಿಸಿಕೊಡುತ್ತವೆ. ಇಂತಹ ಒಂದು ಹೊಸ open Space ಅನ್ನು create ಮಾಡಿಕೊಡುತ್ತವೆ. ಇದರ ಜೊತೆಗೆ ಲೈಂಗಿಕತೆಯ ಹೊಸ ವ್ಯಾಖ್ಯಾನವನ್ನೇ ತಮ್ಮ ಕಾದಂಬರಿಗಳಲ್ಲಿ ಲಂಕೇಶ್ ಅವರು ಸೃಷ್ಟಿಸುತ್ತಾರೆ. ಲಂಕೇಶರ ಕಾದಂಬರಿಗಳಲ್ಲಿ ಪ್ರೀತಿ, ಪ್ರೇಮ, ಲೈಂಗಿಕತೆ ಸರಳವಾಗಿ ಸಿಗದ ವಸ್ತು ಪ್ರೊ. ರಂಗಯ್ಯನ ಮಗಳ ಪ್ರೇಮವಾಗಲೀ , ರೌಡಿ ಗ್ಯಾಂಗಿನಲ್ಲಿ ಬರುವ ಹೆಣ್ಣಾಗಲೀ ಮದುವೆಗೆ propose ಮಾಡಿದ ಹೆಣ್ಣಾಗಲೀ, ಬಸವರಾಜುವಿಗೆ ಯಾರನ್ನೂ ಸಹ ಹೃದಯತುಂಬಿ ಪ್ರೀತಿಸಲಾಗುವುದಿಲ್ಲ. ಪ್ರೊಫೆಸರ್ ಮಗಳು ಲೈಂಗಿಕ ಸಂಬಂಧಕ್ಕೆ ಸಿದ್ದಳಾದರೂ ಬಸವರಾಜುವಿಗೆ ಅದು ಸಾಧ್ಯವಾಗುವುದೇ ಇಲ್ಲ. ‘ಮುಸ್ಸಂಜೆ’ಯಲ್ಲಿ ಕಾಮ, ಪ್ರೀತಿ, ಪ್ರೇಮ ಎಲ್ಲವೂ ಗೋಜಲಾಗಿರುತ್ತದೆ. ‘ಅಕ್ಕ’ ಕಾದಂಬರಿಯಲ್ಲಿ ಪ್ರೀತಿ, ವಿಶ್ವಾಸ ಎಲ್ಲವೂ ಮಣ್ಣು ಪಾಲಾಗುತ್ತದೆ. ಸಿನೆಮಾ ಸೇರುವುದು, ಲೈಂಗಿಕ ಶೋಷಣೆಯಾಗುವುದು, ಅವಳ ತಂಗಿಯನ್ನು ಮುಂದೆ ಅದೇರೀತಿ ಲೈಂಗಿಕ ವ್ಯಾಪಾರಕ್ಕೆ ಸಿದ್ದಪಡಿಸೋದು, ದೇವೀರಿಯ ಪ್ರೇಮ, ಲೈಂಗಿಕತೆ ಎಲ್ಲವೂ ಅಮಾನುಷವಾಗಿ, ಕೃತ್ರಿಮವಾಗಿ, ವ್ಯಂಗ್ಯವಾಗಿ ಕಾಣಿಸಿಕೊಳ್ಳುತ್ತದೆ. 

 ಪ್ರೇಮ ಎನ್ನುವುದು ಈ ಜಗತ್ತಿನಲ್ಲಿ ಮಹತ್ತರ ತ್ಯಾಗಗಳಿಗೆ ಕಾರಣವಾಗಿರುವಂತೆ ಹಾಸಾಸ್ಪದ ತಪ್ಪುಗಳಿಗೂ, ದಡ್ಡತನಗಳಿಗೂ ಕಾರಣವಾಗಿದೆ. ಈ ಲೋಕಕ್ಕೆ ಬೇಡವಾದ ಆದರ್ಶಗಳಿಗೂ ಕಾರಣವಾಗಿದೆ ಅನ್ನೋದು ಇವರ ಕಾದಂಬರಿಗಳನ್ನು ಓದಿದಾಗ ನಮಗೆ ಗೊತ್ತಾಗುತ್ತದೆ. ‘ಮುಸ್ಸಂಜೆಯ ಕಥಾ ಪ್ರಸಂಗ’ದ ಸಾವಂತ್ರಿಯ ಮದುವೆಯಾಗಿ ಅವಳು ತನ್ನ ತಾಯಿಯನ್ನು ಕೊನೆಯಲ್ಲಿ ನೋಡಿದಾಗ ಲಂಕೇಶರು ಇಲ್ಲಿ ಪ್ರೇಮ, ಕಾಮ ಮತ್ತು ಲೈಂಗಿಕತೆಗೆ ಒಂದು ಹೊಸ aesthetic sense ಅನ್ನು ಸೃಷ್ಟಿಮಾಡಿದ್ದಾರೆ ಅಂತ ನನಗೆ ಅನ್ನಿಸುತು. ಸಾವಂತ್ರಿ ಅವ್ವನನ್ನ ಟೀಕಿಸಲು ಆಗಲಿಲ್ಲ. ಅವಳ ಮುಖದ ಒಂದೊಂದು ಗೆರೆಯೂ, ಒಂದೊಂದು ಸುಂದರ ಕತೆಯನ್ನು ಅವಳಿಗೆ ಹೇಳುತ್ತಿದ್ದವು.ನೋವನ್ನು ಪಡೆಯದಾತ ಪ್ರೇಮಿಸಲಾರ, ನೋವು ನಮ್ಮ ಭಾವನೆಗಳನ್ನು ಕಾಲಿನ ಸಪ್ಪಳ, ಬೆದರಿಕೆಯಿಂದ ರಕ್ಷಿಸುತ್ತದೆ. ಪ್ರೇಮವನ್ನೂ ಕೂಡ ಈ ಅರ್ಥದಲ್ಲಲ್ಲದೆ, ಪ್ರೇಮ ಹೇಗೆ ಅಮರವಾಗಲು ಸಾಧ್ಯ? ಇದು ಲ೦ಕೇಶರು ಪ್ರೇಮದ ಬಗ್ಗೆ ಲೈಂಗಿಕತೆಯ ಬಗ್ಗೆ ಸೃಷ್ಟಿಸಿರುವ ಒಂದು ಹೊಸ aesthetics ಅಂತ ನಾನು ಅ೦ದುಕೊ೦ಡಿದ್ದೇನೆ. ಲಂಕೇಶರ ಕಾದಂಬರಿಗಳಲ್ಲಿ ರಾಜಕೇಎಯ, ಸಂಸ್ಕೃತಿ, ಲೈಂಗಿಕತೆ ಇತ್ಯಾದಿಗಳೆಲ್ಲ ಮೇಲುನೋಟಕ್ಕೆ ಬೇರೆಬೇರೆಯಾಗಿ ಕಂಡರೂ ಯಾವುದೋ ರಾಜಕೀಯ ಶಕ್ತಿಯೊಡನೆ ತಾಲೂಕು ಹಾಕಿಕೊಂಡು ಬದುಕುತ್ತಿರುವುದನ್ನು ಚಿತ್ರಿಸುತ್ತವೆ. ಅವೆಲ್ಲವೂ ಅಂತರಾಳದಲ್ಲಿ ಸಮಾಜದ ಬದುಕಿನೊಡನೆ ಸಂಬಂಧವಿಟ್ಟುಕೊಂಡಿವೆ ಎಂಬ ಶೋಧ ನಡೆಯುತ್ತದೆ, ಅಂತರ್ಗತವಾಗಿ ಹರಿದುಬರುತ್ತವೆ. ಇವೆಲ್ಲವುಗಳು ಇದುವರೆಗೆ ಸ್ಥಾಪಿತವಾದ ಸಿದ್ಧಮಾದರಿಗಳನ್ನು ಮುರಿದು ಹೊಸ ಮಾದರಿಯ ಕಡೆಗೆ ಹೋಗಬೇಕೆಂಬುದನ್ನು ಸೂಚಿಸುತ್ತವೆ. 

ಇವುಗಳು ಓದುಗ ತುಂಬಿಕೊಳ್ಳಬೇಕಾದ ಖಾಲಿ ಜಾಗಗಳಾಗುತ್ತವೆ. ಆದ್ದರಿಂದ ಈ ಕಾದಂಬರಿಗಳ ಯಾವೊಂದು ಘಟನೆಯೂ ಯಾನ್ತ್ರಿಕವಲ್ಲ. ನಮ್ಮ ಪ್ರೀತಿಗೆ, ಕುತೂಹಲಕ್ಕೆ ಯೋಗ್ಯವಾದ ಜನ ಭಾವನೆಗಳು ಒಟ್ಟಾಗಿ ಸೇರಿದಾಗ ತಂತ್ರ, ಕುತಂತ್ರ, ಕುಚೋದ್ಯಗಳೆಲ್ಲ ಕೇವಲ ಹೊಸ ಮುಸುಕುಗಳಾಗಿದ್ದು, ಬದುಕಿನ ತುಡಿತ ನಮಗೆ ಗೊತ್ತಾಗಿ ಖೊಟ್ಟಿ ಜಾಣತನದಿಂದ ಮುಕ್ತವಾಗಿ ಉಜ್ವಲವಾಗುತ್ತದೆ ಎನ್ನುವುದು ಲಂಕೇಶರ ನಂಬಿಕೆ ಅಂದುಕೊಂಡಿದ್ದೀನಿ. ಕೊನೆಯದಾಗಿ ಲಂಕೇಶ್ ಅವರು ಯಾವುದೇ ಒಂದು ಪರಿಕಲ್ಪನೆಯನ್ನು ಚಿತ್ರಿಸುವಲ್ಲಿ ಅದಕ್ಕೆ ನಾನಾಮುಖವನ್ನು ಜೋಡಿಸಿರುತ್ತಾರೆ. ಓದುಗರು ಇವರ ಕಾದಂಬರಿಗಳನ್ನು ಓದುವಾಗ ಕೇವಲ passive reader ಆಗಿ ಸ್ವೀಕರಿಸಲು ಸಾಧ್ಯವಿಲ್ಲ. ಹೊಸ ಹೊಸ ಸಾಂಸ್ಕೃತಿಕ, ರಾಜಕೀಯ, ಸಾಮಾಜಿಕ ಅವಕಾಶಗಳನ್ನು ಈ ಕಾದಂಬರಿಕಾರ ಸೃಷ್ಟಿಸುತ್ತಾರೆ. ಇವರ ಕಾದಂಬರಿಯ ಓದುಗ ಸಪ್ಪೆಯಾಗಿರಲು ಸಾಧ್ಯವಿಲ್ಲ. ಕ್ರಿಯಾತ್ಮಕವಾಗಿ ಒಂದುವ ಕ್ರಿಯೆಯಲ್ಲಿ ಪಾಲುಗೊಂಡು ಪ್ರತಿಬಾರಿ ಓದುವಾಗಲೂ ತನ್ನ ಮನಸ್ಸಿನಲ್ಲೇ ಹೊಸದಾಗಿ ಬರೆದುಕೊಳುತ್ತಾ ಹೋಗಬೇಕಾಗುತ್ತದೆ. 

ಹೀಗೆ ಲಂಕೇಶರು ಈ ಮೇಲಿನ ಅಂಶಗಳನ್ನು ತಮ್ಮ ಮೂರು ಕಾದಂಬರಿಗಳನ್ನು ಬರೆಯುವಾಗಲೂ ಉಪಯೋಗಿಸಿಕೊಳ್ಳುವುದರಿ೦ದ ಈ ಮೂರು ಕಾದಂಬರಿಗಳು ಈ ಅಂಶಗಳ ಮೂರು ಅವತಾರಗಳಾಗಿ ಕಂಡುಬರುತ್ತವೆ. ಕಾದಂಬರಿಗಳನ್ನು ಪೌರಾಣಿಕ, ಚಾರಿತ್ರಿಕ ವಸ್ತುಗಳಿ೦ದ ಆಯ್ದುಕೊಳ್ಳದೆ, ಈಗಾಗಲೇ ಸ್ಥಾಪಿತವಾಗಿರುವ ವಸ್ತುವನ್ನು ತೆಗೆದುಕೊಳ್ಳದೆ ಹೊಸ ವ್ಯಾಖ್ಯಾನವನ್ನು ಕೊಡುವುದರಿ೦ದ ಬದುಕುವಿಗೆ ಮುಸ್ಸಂಜೆಯ ವ್ಯಾಖ್ಯಾನ ಕೊಡುವುದರಲ್ಲೇ, twilight Zone ಅನ್ನು ಹಿಡಿಯುವುದರಲ್ಲೇ ಅವರ ಶಕ್ತಿಯಿದೆ. ಮತ್ತೆ ಅದು ಅಚಾರಾತ್ರಿಕವಾದಾಗ ಬರಬಹುದಾದಂತಹ, ಕೆಲವು ಸಿಗಬಹುದಾದಂತಹ ಅನೇಕ ವಿಷಯಗಳು ತಪ್ಪಿಯೂ ಹೋಗುತ್ತವೆ ಅಂತ ಅನಿಸುತ್ತದೆ. ಇದಿಷ್ಟ ನನಗೆ ಲಂಕೇಶರ ಕಾದಂಬರಿಗಳ ಬಗ್ಗೆ ಅನಿಸಿದ್ದು.

ಕಾಮೆಂಟ್‌ಗಳಿಲ್ಲ: