ಶನಿವಾರ, ಜನವರಿ 2, 2016

ಕರಾವಳಿ ಕರ್ನಾಟಕದ ಕೋಮುವಾದ


-ಪ್ರೊ.ಚಂದ್ರಪೂಜಾರಿ


 ಕೋಮುವಾದ ಬಲಗೊಳ್ಳಬೇಕಾದರೆ ಒಂದು ಕೋಮಿಗೆ ಸೇರಿದವರು ನಾವೆಲ್ಲ ಒಂದೇ ಎನ್ನುವ ಭಾವನೆ ಸದಾ ಜಾಗ್ರತೆ ಇರಬೇಕು. ಕೋಮು ಭಾವನೆಯನ್ನು ಸದಾ ಎಚ್ಚರ ಇಡಬೇಕಾದರೆ ದಿನನಿತ್ಯದ ಬದುಕಿನಲ್ಲಿ ಅನುಭವಕ್ಕೆ ಬರುವ ಆರ್ಥಿಕ ಮತ್ತು ಸಾಮಾಜಿಕ ಏಣಿಶ್ರೇಣಿಗಳನ್ನು ಕಡೆಗಣಿಸಿ ವ್ಯವಹರಿಸುವ ಸ್ಥಿತಿ ನಿರ್ಮಾಣವಾಗಬೇಕು. ಸಾಮಾಜಿಕ/ಆರ್ಥಿಕ ಏಣಿಶ್ರೇಣಿಗಳನ್ನು ಕಡೆಗಣಿಸಿ ವ್ಯವಹರಿಸಬೇಕಾದರೆ ಸಾಮಾಜಿಕ ವಿಂಗಡನೆಗಳನ್ನು (ಹಿಂದೆ ಮೇಲ್ಜಾತಿ ಮತ್ತು ಕೆಳಜಾತಿ ಎನ್ನುವ ವಿಂಗಡನೆ) ಈಗ ಹಿಂದೂ ಮತ್ತು ಮುಸ್ಲಿಂ ವಿಂಗಡನೆ ಹಲವಾರು ಸಂಕೇತಗಳ, ಆಚರಣೆಗಳ, ಮೌಲ್ಯಗಳ ಮೂಲಕ ಜನಸಾಮಾನ್ಯರ ಪ್ರಜ್ಞೆಯ ಭಾಗವಾಗಿಸಬೇಕಾಗುತ್ತದೆ. ಕರಾವಳಿ ಕರ್ನಾಟಕದ ಕೋಮುವಾದದ ಅಭಿವೃದ್ಧಿ ಕೂಡ ಹೆಚ್ಚು ಕಡಿಮೆ ಇದೇ ಮಾರ್ಗವನ್ನು ಅನುಸರಿಸಿದೆ. ಆಂತರಿಕವಾಗಿ ವಿರೋಧಭಾಸಗಳಿಂದ ತುಂಬಿರುವ ಹಲವಾರು ಜಾತಿಗಳನ್ನು ‘ನಾವೆಲ್ಲ ಒಂದೇ ಎನ್ನುವ ಅಖಂಡತೆಯೊಳಗೆ’ ತುರುಕಿಸಲಾಗಿದೆ. ಇದಕ್ಕಾಗಿ ಅಖಂಡವಾದ ‘ಅನ್ಯ’ವನ್ನು (ಮುಸ್ಲಿಮರನ್ನು) ಸೃಷ್ಟಿಸಲಾಗಿದೆ. ಅನ್ಯರನ್ನು ಅಖಂಡವಾಗಿ ಪರಿಗಣಿಸುವಾಗ ‘ಸ್ವ’ದ ಕಲ್ಪನೆಯೂ ಅಖಂಡ (ಹಿಂದೂಗಳು ನಾವೆಲ್ಲ ಒಂದೇ) ಎನ್ನುವ ಸಂದೇಶ ರವಾನೆಯಾಗುತ್ತದೆ. ಅಷ್ಟು ಮಾತ್ರವಲ್ಲ ಕಲ್ಪಿತ ಅಖಂಡತೆಯನ್ನು ಜನ ಸಾಮಾನ್ಯರ ಪ್ರಜ್ಞೆಯ ಭಾಗವಾಗಿಸಲು ಹಲವಾರು ಸಂಕೇತಗಳ, ಆಚರಣೆಗಳ, ಮೌಲ್ಯಗಳ ಅನ್ವಯಿಕೆಯ ಪರಿಧಿಯನ್ನು ಹಿಗ್ಗಿಸಲಾಗುವುದು. ವೈದಿಕ ಗುಡಿಗೋಪುರಗಳಿಗೆ ಸೀಮಿತವಾಗಿದ್ದ ‘ಓಂ’ ಸಂಕೇತ ಇಂದು ಭೂತಸ್ಥಾನಗಳಲ್ಲೂ ರಾರಾಜಿಸುತ್ತಿದೆ. ಹಿಂದೆ ಶೇಂದಿ ಕುಡಿಯುವ, ಮೀನು, ಮಾಂಸ ತಿನ್ನುವುದರ ಬಗೆಗಿದ್ದ ಹೀನತಾ ಭಾವನೆಯನ್ನು ಇಂದು ದನದ ಮಾಂಸ ಮಾರಾಟ ಮತ್ತು ಬಳಕೆಗೆ ವರ್ಗಾಯಿಸಲಾಗಿದೆ. ಮೇಲಿನ ಸಂಕೇತಗಳು ಜತೆಗೆ ಹಿಂದುತ್ವದ ಶಾಖೆಗಳಲ್ಲಿ, ಸತ್ಯನಾರಾಯಣ  ಪೂಜೆಗಳಲ್ಲಿ, ಹಿಂದುತ್ವಕ್ಕೆ ಸಂಬಂಧಿಸಿದ ಇತರ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರಿಗೆ ತಮ್ಮ ಆರ್ಥಿಕ ಏಕಶ್ರೇಣಿಗಳು ಸೃಷ್ಟಿಸುವ ಭಿನ್ನತೆಗಳು ತಾತ್ಕಾಲಿಕವಾಗಿ ಮರೆಯಾಗಿ ಹಿಂದುಗಳು ನಾವೆಲ್ಲ ಒಂದೇ ಎನ್ನುವ ಭಾವನೆ ಜಾಗ್ರತೆಗೊಳ್ಳುವುದು.
ಆರ್ಥಿಕ ಏಣಿಶ್ರೇಣಿಗಳನ್ನು ಅಲ್ಲಗಳೆಯಲು ಸಾಂಪ್ರದಾಯಿಕ ಗುರುತನ್ನು (ಧರ್ಮವನ್ನು) ಬಳಸುವುದರಿಂದ ಸಹಜವಾಗಿಯೇ ಆ ಸಾಂಪ್ರದಾಯಿಕ ಗುರುತಿನೊಂದಿಗೆ ಸಂಬಂಧ ಹೊಂದಿರುವ ಇತರ ಗುರುತುಗಳು (ಮುಖ್ಯವಾಗಿ ಜಾತಿ) ಕೂಡ ಬಲಗೊಳ್ಳುತ್ತವೆ. ಮೇಲ್ನೋಟಕ್ಕೆ ನಾವೆಲ್ಲ ಒಂದೇ ಎನ್ನುವ ಸಂದರ್ಭದಲ್ಲಿಯೇ ಆಳದಲ್ಲಿ ಜಾತಿಗಳ ನಡುವಿನ ಗೆರೆಗಳು ಇನ್ನೂ ಬಲಿಷ್ಠಗೊಳ್ಳುತ್ತಿವೆ. ಪಬ್ಲಿಕ್ ಡೊಮೈನ್‌ನಲ್ಲಿ ಇರುವವರು, ಸಾಮಾಜಿಕ ನಾಯಕತ್ವ, ಆರ್ಥಿಕ ನಾಯಕತ್ವ, ಸಾಂಸ್ಕೃತಿಕ ನಾಯಕತ್ವ, ಉನ್ನತ ಶಿಕ್ಷಣ, ಉನ್ನತ ಉದ್ಯೋಗಗಳು ಇತ್ಯಾದಿ ಸೂಚ್ಯಾಂಕಗಳ ಮೂಲಕ ಸಾಂಪ್ರದಾಯಿಕ ಏಣಿಶ್ರೇಣಿಗಳ ಜೀವಂತಿಕೆಯನ್ನು ಅರ್ಥಮಾಡಿಕೊಳ್ಳಬಹುದು. ಸ್ಥಳೀಯ ಸಾಂಪ್ರದಾಯಿಕ ಮೇಲ್ವರ್ಗ ಈಗಲೂ ಮೇಲಿನ ಎಲ್ಲ ಸೂಚ್ಯಂಕಗಳಲ್ಲೂ ಮುಂದಿದ್ದು ತಳಸ್ತರದ ಸಮುದಾಯಗಳು ಹಿಂದಿವೆ. ತಳಸ್ತರದ ಸಮುದಾಯಗಳು ಆರ್ಥಿಕವಾಗಿ ಮತ್ತು ರಾಜಕೀಯವಾಗಿ ದಾರಿತಪ್ಪುವುದರ ಜತೆಗೆ ಈ ಬಗೆಯ ಅಖಂಡತೆಯ ಸೃಷ್ಟಿ ಎರಡೂ ಸಮುದಾಯಗಳ (‘ಅನ್ಯ’ ಮತ್ತು ‘ಸ್ವ’ಕ್ಕೆ ಸೇರಿದ) ತಳಸ್ತರದ ಜನರ ಬದುಕನ್ನು ಅಅಸಹನೀಯಗೊಳಿಸಬಹುದು. ಕೋಮುಗಲಭೆಯಂತಹ ಹಿಂಸಾತ್ಮಕ ಘಟನೆಗಳು ಹಾದು ಹೋಗುವ ಸಂಗತಿಗಳು ಶಾಶ್ವತ ಅಲ್ಲ. ಆದರೆ ವಿರೋಧಿ ಕೋಮುಗಳನ್ನು ಸೃಷ್ಟಿಸಲು ಮತ್ತು ಅವುಗಳು ಹಿಂಸಾತ್ಮಕವಾಗಿ ವ್ಯವಹರಿಸಲು ಜನರ ಮನಸ್ಸನ್ನು ಹದಗೊಳಿಸಲು ಸೃಷ್ಟಿಸುವ ಚಿಂತನೆಗಳ ಮತ್ತು ಆಚರಣೆಗಳ ಪ್ರಭಾವ ಒಂದು ಗಳಿಗೆ ಬಂದು ಹೋಗುವ ಸಂಗತಿಗಳಲ್ಲಿ. ಅದು ಜನ ಸಾಮಾನ್ಯರ ಬದುಕನ್ನು ನಿರಂತರವಾಗಿ ಕಾಡುವ ಸಂಗತಿಗಳಾಗುತ್ತವೆ. ಇವುಗಳಿಂದಾಗಿ ಎರಡೂ ಸಮುದಾಯಗಳ ತಳಸ್ತರದ ಜನರು ತಮ್ಮದೇ ಬೇರುಗಳ ಬಗ್ಗೆ (ಊಟ, ಪಾನೀಯ, ಕಸುಬು, ಭಾಷೆ, ಉಡುಗೆ ತೊಡುಗೆ ಇತ್ಯಾದಿಗಳ ಬಗ್ಗೆ) ಒಂದು ಬಗೆಯ ಕೀಳರಿಮೆಯನ್ನು ರೂಢಿಸಿಕೊಂಡು ಇಬ್ಬಂದಿತನದಿಂದ ಬದುಕಬೇಕಾದ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆನೂ ಇದೆ. ಇದಕ್ಕಿಂತಲೂ ಹೆಚ್ಚಾಗಿ ಮೇಲ್ವರ್ಗಗಳ ಅಧಿಕಾರದ ಹೋರಾಟಗಳಲ್ಲಿ ಎರಡೂ ಸಮುದಾಯಗಳ ಯುವಕರು ಗನ್‌ಪೌಡರ್ ತರಹ ಬಳಕೆಯಾಗುತ್ತಾರೆ. ಇದರಿಂದಾಗಿ ಈ ಜನರು ಅನುಭವಿಸಬೇಕಾದ ಇಬ್ಬಂದಿತನ ಮತ್ತು ಖಾಯಂ ಆಗಿ ಮೇಲ್ವರ್ಗ ಸೃಷ್ಟಿಸಿದ ಟ್ರ‍್ಯಾಪ್ ಒಳಗೆ ಬಂಧಿಯಾಗುವುದರ ಚಿತ್ರಣವನ್ನು ಈ ಭಾಗದಲ್ಲಿ ನೋಡಬಹುದು.
ಐವತ್ತರ ದಶಕದಲ್ಲಿ ಆರಂಭವಾದ ವಿಜ್ಞಾನ ಮತ್ತು ತಂತ್ರಜ್ಞಾನಗಳ ಅಡಿಪಾಯ ಹೊಂದಿರುವ ಅಭಿವೃದ್ಧಿ ಪ್ರಕ್ರಿಯೆಯನ್ನು ಜೀರ್ಣಿಸಿಕೊಳ್ಳಬೇಕಾದರೆ ಒಂದೋ ಸಾಕಷ್ಟು ಬಂಡವಾಳದ ಒಡೆತನ ಬೇಕು ಇಲ್ಲವೇ ಆಧುನಿಕ ತಂತ್ರಜ್ಞಾನವನ್ನು ಜೀರ್ಣಿಸಿಕೊಳ್ಳಬೇಕು. ತಳಸ್ತರದ ಸಮುದಾಯಗಳಿಗೆ ಬಂಡವಾಳದ ಒಡೆತನ ಇಲ್ಲ. ಜಿಲ್ಲೆಯ ಬಹುತೇಕ ತಾಂತ್ರಿಕ ಶಿಕ್ಷಣ ನೀಡುವ ಸಂಸ್ಥೆಗಳು ಖಾಸಗಿ ಒಡೆತನದಲ್ಲಿದ್ದು ಕ್ಯಾಪಿಟೇಶನ್ ಕೊಡಲು ಶಕ್ತವಾಗಿದ್ದವರಿಗೆ ಮಾತ್ರ ಲಭ್ಯವಾಗಿತ್ತು. ಆದುದರಿಂದ ಆಧುನಿಕ ತಂತ್ರಜ್ಞಾನವನ್ನು ಜೀರ್ಣಿಸಿಕೊಳ್ಳಲು ತಳಸ್ತರದ ಸಮುದಾಯಗಳಿಗೆ ಸಾಧ್ಯವಾಗಿಲ್ಲ. ಇದರಿಂದಾಗಿ ಅವರು ತಮ್ಮ ಸಾಂಪ್ರದಾಯಿಕ ಕಸುಬುಗಳಿಗೆ ಅಂಟಿಕೊಳ್ಳುವುದು ಅನಿವಾರ್ಯವಾಯಿತು. ಕೆಲವೊಂದು ಸಾಂಪ್ರದಾಯಿಕ ಕಸುಬುಗಳು ಫ್ಯಾಕ್ಟರಿ ಉತ್ಪಾದನೆಯಿಂದ ಮೂಲೆಗುಂಪಾದರೆ (ಕುಂಬಾರಿಕೆ, ಕಮ್ಮಾರಿಕೆ ಇತ್ಯಾದಿಗಳು) ಇನ್ನು ಕೆಲವು ಸಾಂಪ್ರದಾಯಿಕ ಕಸುಬುಗಳು ಆಧುನಿಕ ತಂತ್ರಜ್ಞಾನದ ನಡುವೆಯೂ ಉಸಿರಾಡುತ್ತಿದ್ದವು. ಆದರೆ ಕೋಮುವಾದ, ಮುಖ್ಯವಾಗಿ ಕರಾವಳಿ ಕರ್ನಾಟಕದ ಕೋಮುವಾದಿ ಚಿಂತನೆಗಳು, ಆಚರಣೆಗಳು ತಳಸ್ತರದ ಜನರಿಗಿದ್ದ ಈ ಸಣ್ಣಪುಟ್ಟ ಜೀವನಾವಕಾಶವನ್ನು ಇಲ್ಲದಾಗಿಸಿದೆ. ಇದು ಹೇಗೆಂದು ಕರಾವಳಿ ಕರ್ನಾಟಕದ ಎರಡು ಸಮುದಾಯಗಳ (ಬಿಲ್ಲವರು ಮತ್ತು ಬೆಸ್ತರು) ಉದಾಹರಣೆಯೊಂದಿಗೆ ಅರ್ಥಮಾಡಿಕೊಳ್ಳಲು ಪ್ರಯತ್ನಿಸುವ. ದಕ್ಷಿಣ ಕನ್ನಡದ ಜನಸಂಖ್ಯೆಯಲ್ಲಿ ಶೇ. ೧೯ರಷ್ಟು ಬಿಲ್ಲವರು, ಶೇ. ೪ ರಷ್ಟು ಬೆಸ್ತರಿದ್ದಾರೆ. ಕೃಷಿ, ವೈದ್ಯಕೀಯ, ಪೂಜಾರಿ ವೃತ್ತಿಗಳೊಂದಿಗೆ ಶೇಂದಿ ಇಳಿಸುವುದು ಬಿಲ್ಲವರ ಸಾಂಪ್ರದಾಯಿಕ ಕಸುಬು. ಅದೇ ರೀತಿಯಲ್ಲಿ ಕೃಷಿ, ವ್ಯಾಪಾರಗಳೊಂದಿಗೆ ಮೀನು ಹಿಡಿಯುವುದು ಬೆಸ್ತರ ಸಾಂಪ್ರದಾಯಿಕ ಕಸುಬು. ಸಾಂಪ್ರದಾಯಿಕ ಸಮಾಜ ಈ ಎರಡೂ ಕಸುಬುಗಳನ್ನು ಗೌರವಾನ್ವಿತ ಕಸುಬುಗಳೆಂದು ಪರಿಗಣಿಸಿಲ್ಲ ಎನ್ನುವುದು ಹಿಂದಿನ ಪುಟಗಳಲ್ಲಿ ನೋಡಿದ್ದೇನೆ. ಕಸುಬಿನ ಕಾರಣಕ್ಕಾಗಿ ಎರಡೂ ಸಮುದಾಯಗಳು ಹಲವಾರು ಬಗೆಯ ಬಹಿಷ್ಕಾರಗಳನ್ನು ಸಾಂಪ್ರದಾಯಿಕ ಸಮಾಜದಲ್ಲಿ ಅನುಭವಿಸಬೇಕಿತ್ತು.[1] ಸ್ಥಳೀಯ ಮೇಲ್ಜಾತಿಗಳು ಆರಂಭಿಸಿದ ಮೆಡಿಕಲ್, ಎಂಜಿನಿಯರಿಂಗ್ ಇತ್ಯಾದಿ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಕ್ಯಾಪಿಟೇಶನ್‌ನಿಂದಾಗಿ ಜಿಲ್ಲೆಯ ಕೆಳವರ್ಗ ಅವಕಾಶ ಪಡೆದಿಲ್ಲ.[2] ಸುಮಾರು ಎಪ್ಪತ್ತರ ದಶಕದವರೆಗೆ ಹಲವಾರು ಕಾರಣಗಳಿಂದಾಗಿ ಬಿ.ಎ., ಬಿಕಾಂಗಳಂಥ ಸಾಮಾನ್ಯ ಡಿಗ್ರಿ ಕೂಡ ತಳಸಮುದಾಯಗಳಿಗೆ ಎಟಕುವಂತಿರಲಿಲ್ಲ. ಹೀಗೆ ಶಿಕ್ಷಣದ ಮೂಲಕ ಆಧುನಿಕ ತಂತ್ರಜ್ಞಾನ ಪಡೆಯುವ ಸಾಧ್ಯತೆಯಿಂದ ತಳಸಮುದಾಯಗಳು ವಂಚಿತವಾದುವು. ಎರಡನೇ ಸಾಧ್ಯತೆ ಬಂಡವಾಳ ವಿನಿಯೋಜಿಸಿ ಆಧುನಿಕ ತಂತ್ರಜ್ಞಾನಗಳನ್ನು ಖರೀದಿಸುವುದು. ಇದಕ್ಕೆ ಸಾಕಷ್ಟು ಬಂಡವಾಳದ ಒಡೆತನಬೇಕು. ಎರಡು ಮೂಲಗಳಿಂದ ಬಂಡವಾಳ ಶೇಖರಣ ಸಾಧ್ಯವಾಗಿತ್ತು. ಒಂದು, ವ್ಯಾಪಾರ ಮತ್ತೊಂದು ದೊಡ್ಡ ಪ್ರಮಾಣದ ಕೃಷಿ. ಆಧುನೀಕರಣದ ಆರಂಭದ ದಿನಗಳಲ್ಲಿ ವ್ಯಾಪಾರ ಮಾತ್ರ ಬಂಡವಾಳ ಶೇಖರಣೆಯ ಮುಖ್ಯ ಮೂಲ. ನಂತರದ ದಿನಗಳಲ್ಲಿ ಅದರಲ್ಲೂ ವಾಣಿಜ್ಯ ಬೆಳೆಗಳು ಪ್ರಾಮುಖ್ಯತೆ ಪಡೆಯುವುದರೊಂದಿಗೆ ದೊಡ್ಡ ಕೃಷಿಕರು ಕೂಡ ಬಂಡವಾಳ ಶೇಖರಣೆ ಮಾಡಿ ಆಧುನಿಕ ತಂತ್ರಜ್ಞಾನಗಳ ಮಾಲಿಕರಾಗಲು ಸಾಧ್ಯವಾಯಿತು.[3]ಈ ಎರಡು  ಮೂಲಗಳಿಲ್ಲದ ತಳಸಮುದಾಯಕ್ಕೆ ತಮ್ಮ ಸಾಂಪ್ರದಾಯಿಕ ಕಸುಬುಗಳೇ ಜೀವನಾಧಾರ.
ಆದರೆ ಕೋಮುವಾದದ ಆಳದಲ್ಲಿ ಜೀವಂತವಾಗಿದ್ದ ಸಾಂಪ್ರದಾಯಿಕ ಸಮಾಜದ ಕೆಲವೊಂದು ಮೌಲ್ಯಗಳು ತಳಸಮುದಾಯದ ಸಣ್ಣಪುಟ್ಟ ಜೀವನಾವಕಾಶವನ್ನು ಕಿತ್ತುಕೊಳ್ಳುತ್ತಿದೆ. ಕೆಲವೊಂದು ಉದಾಹರಣೆಯ ಮೂಲಕ ಇದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವ. ಬಿಲ್ಲವ ಸಮುದಾಯಕ್ಕೆ ಸೇರಿದ ಪ್ರಮುಖ ನಾಯಕರೊಬ್ಬರು ತಮ್ಮ ಸಾಂಪ್ರದಾಯಿಕ ಕಸುಬಿನ ಬಗ್ಗೆ ಹೊಂದಿರುವ ಅಭಿಪ್ರಾಯ ಇಂತಿದೆ. ಅವರು ಶಿಕ್ಷಣ ಮುಗಿಸಿ ಕೆಲಸಕ್ಕೆ ಹೋಗುವ ಬದಲು ವ್ಯಾಪಾರ ಆರಂಭಿಸಬೇಕೆಂದು ತೀರ್ಮಾನಿಸಿದರು. ವ್ಯಾಪಾರ ಮಾಡುವ ಆಲೋಚನೆಯನ್ನು ತಮ್ಮ ತಂದೆಯೊಂದಿಗೆ ಹಂಚಿಕೊಂಡರು. ಅವರ ತಂದೆ, ‘ನೀನು ಏನು ವ್ಯಾಪಾರ ಮಾಡಿದರೂ ನನ್ನ ಅಭ್ಯಂತರವೇನಿಲ್ಲ. ಆದರೆ ಸಾರಾಯಿ ಶೇಂದಿ ವ್ಯಾಪಾರ ಮಾಡಿ ನೂರಾರು ಸಂಸಾರಗಳನ್ನು ಹಾಳುಮಾಡಬೇಡ’, ಎಂದು ಹೇಳಿದರಂತೆ. ಅದರಂತೆ ಅವರು ಬೇರೆ ವ್ಯಾಪಾರ ಮಾಡಿದರು. ಬಿಲ್ಲವ ಸಂಘಗಳ ಬಹುತೇಕ ಸಭೆಗಳಲ್ಲಿ ಬಿಲ್ಲವ ನಾಯಕರು ಶೇಂದಿ ತೆಗೆಯುವ ಕಸುಬಿನಿಂದ ಆದಷ್ಟು ಬೇಗ ಬಿಲ್ಲವರು ಕಳಚಿಕೊಳ್ಳಬೇಕೆನ್ನುವ ಸಲಹೆ ನೀಡುತ್ತಿದ್ದರು. ತಮ್ಮ ಸಾಂಪ್ರದಾಯಿಕ ಕಸುಬಿನೊಂದಿಗೆ ಗುರುತಿಸಿಕೊಳ್ಳುವುದು ಬಿಲ್ಲವರಿಗೆ ಕೀಳರಿಮೆಯಾಗಿದೆ. ಅದೇ ರೀತಿಯಲ್ಲಿ ಬೆಸ್ತರಿಗೆ ತಮ್ಮ ಸಾಂಪ್ರದಾಯಿಕ ಕಸುಬಿನೊಂದಿಗೆ ಗುರುತಿಸಿಕೊಳ್ಳುವುದು ಸಮಸ್ಯೆಯಾಗಿದೆ. ಹಾಗೆಂದು ಮೀನು ತಿನ್ನುವವರು ಮತ್ತು ಶೇಂದಿ ಅಥವಾ ಇತರ ಪಾನೀಯಗಳನ್ನು ಕುಡಿಯುವವರ ಸಂಖ್ಯೆ ಕಡಿಮೆಯಾಗಿಲ್ಲ; ಜಾಸ್ತಿಯಾಗಿದೆ. ಕೆಲವು ನೂರು ಮೀಟರಿಗೊಂದು ಬಾರ್ ಮತ್ತು ಮೀನಿನ ಊಟದ ಹೊಟೇಲುಗಳಿವೆ. ಬಾರ್‌ನಲ್ಲಿ ಬೀರ್, ಬ್ರಾಂಡಿ, ವಿಸ್ಕಿಗಳು ದೊರೆಯುತ್ತವೆ. ಇವುಗಳು ಶೇಂದಿಗೆ ಹೋಲಿಸಿದರೆ ಹೆಚ್ಚು ಅಮಲು ಪಾನೀಯ ಮತ್ತು ಆರೋಗ್ಯಕ್ಕೆ ಹಾನಿಕಾರಕ. ಬಾರ್ ಒಂದನ್ನು ಆರಂಭಿಸಲು ಕೆಲವು ಲಕ್ಷ ರೂಪಾಯಿಗಳು ಬೇಕು. ಜತೆಗೆ ಬಾರ್‌ ಮಾಲೀಕ ಶೇಂದಿ ವ್ಯಾಪಾರಿಯ ನಿಕೃಷ್ಟತೆಯನ್ನು ಸಮಾಜದಲ್ಲಿ ಎದುರಿಸಬೇಕಾಗಿಲ್ಲ. ಆದರೆ ಕೆಲವೇ ಕೆಲವು ನೂರು ರೂಪಾಯಿಗಳ ವಿನಿಯೋಜನೆಯಲ್ಲಿ ಮಾಡಬಹುದಾದ ಕುಲಕಸುಬನ್ನು ಮಾಡಲಾರದ ಸ್ಥಿತಿಯಲ್ಲಿ ಸ್ಥಳೀಯ ಬಿಲ್ಲವರ ಯುವಕರಿದ್ದಾರೆ.[4] ಇದೆಂತಹ ವಿಪರ್ಯಾಸ ಮತ್ತು ಎಂತಹ ಶಾಪಗ್ರಸ್ತ ಸಮಾಜ. ಸಾವಿರಾರು ಕುಟುಂಬಗಳಿಗೆ ಏನೇನೂ ಬಂಡವಾಳದ ವಿನಿಯೋಜನೆ ಇಲ್ಲದೆ ಬದುಕನ್ನು ನೀಡುತ್ತಿದ್ದ ಒಂದು ಕಸುಬನ್ನು ಕನಿಷ್ಠವಾಗಿ ಕಂಡ ಸಮಾಜ ಅದೇ ಬಗೆಯ ಅಥವಾ ಅದಕ್ಕಿಂತಲೂ ಹೆಚ್ಚು ಅಪಾಯಕಾರಿ ಮತ್ತು ಕೇವಲ ಬಂಡವಾಳ ಇದ್ದವರು ಮಾತ್ರ ಮಾಡಬಹುದಾದ ಬಾರ್ ಸಂಸ್ಕೃತಿಯನ್ನು ಚಕಾರವೆತ್ತದೆ ಸಹಿಸಿಕೊಂಡಿದೆ.
ಬೆಸ್ತರ ಸ್ಥಿತಿ ಕೂಡ ಹೆಚ್ಚು ಕಡಿಮೆ ಇದೇ ರೀತಿ ಇದೆ. ಕೆಲವು ನೂರು ಅಥವಾ ಸಾವಿರ ರೂಪಾಯಿ ವಿನಿಯೋಜನೆ ಮಾಡಿ (ಬಲೆ ಮತ್ತು ಮರದ ಸಣ್ಣ ಬೋಟ್ ಖರೀದಿಗೆ) ಸಮುದ್ರದ ಭಯ ಇಲ್ಲದ ಯಾರು ಕೂಡ ಆರಂಭಿಸಬಹುದಾದ ಕಸುಬು ಮೀನುಗಾರಿಕೆ. ಪುರುಷರು ಹಿಡಿದು ತಂದ ಮೀನನ್ನು ಮಾರಲು ಬೆಸ್ತರ ಮಹಿಳೆಗೆ ಸಂತೆಯಲ್ಲಿ ಕುಳಿತುಕೊಳ್ಳಲು ಒಂದು ಸಣ್ಣ ಸ್ಥಳವಿದ್ದರೆ ಸಾಕು. ಈ ಕಸುಬು ಕೂಡ ಸಾವಿರಾರು ಕುಟುಂಬಗಳಿಗೆ ಬದುಕನ್ನು ನೀಡಿದೆ. ನಮ್ಮ ಸಾಂಪ್ರದಾಯಿಕ ಸಮಾಜದ ಮೌಲ್ಯಗಳು ಈ ಕಸುಬನ್ನು ಕೂಡ ಅಸಹ್ಯವಾಗಿ ಕಂಡದ್ದು ನಿಜ. ಹಾಗಾಗಿ ಬೆಸ್ತರು ಕೂಡ ತಮ್ಮ ಸಾಂಪ್ರದಾಯಿಕ ಕಸುಬಲ್ಲಿ ಮುಂದುವರಿಯಲು ಇಷ್ಟಪಡುವುದಿಲ್ಲ. ಹಾಗೆಂದು ಮೀನುಗಾರಿಕೆ ನಿಂತಿಲ್ಲ. ಹಿಂದಿನ ಕೆಲವು ಸಾವಿರ ವಿನಿಯೋಜಿಸಿ ಶುರು ಮಾಡುವ ಮೀನುಗಾರಿಕೆಯ ಸ್ಥಳದಲ್ಲಿ ಲಕ್ಷಗಟ್ಟಲೆ ವಿನಿಯೋಜಿಸಿ ಮೆಕಾನೈಸ್ಡ್ ಬೋಟ್ ಮೂಲಕ ಮೀನು ಹಿಡಿಯುವುದು ನಡೆಯುತ್ತಿದೆ.[5] ಇಂತಹ ಸಂದರ್ಭದಲ್ಲಿ ಕಡಿಮೆ ಬಂಡವಾಳ ವಿನಿಯೋಜಿಸಿ ಆರಂಭಿಸಬಹುದಾದ ಅವರ ಸಾಂಪ್ರದಾಯಿಕ ಕಸುಬನ್ನು ಆರಂಭಿಸುವ ಸ್ಥಿತಿಯಲ್ಲಿ ಬೆಸ್ತರ ಯುವಕರಿಲ್ಲ. ಯಾಕೆಂದರೆ ನಮ್ಮ ಕಾಲಕ್ಕೆ ಇದು ಸಾಕು ಮಗನೇ, ನೀನು ಇದೇ ಕಸುಬು ಮಾಡಿ ಮಾನ ಕಳೆದುಕೊಳ್ಳಬೇಡವೆಂದು’ ಅವರ ಹಿರಿಯರೇ ಬುದ್ಧಿವಾದ ಹೇಳುತ್ತಿರುತ್ತಾರೆ. ಆಧುನಿಕ ಸಮಾಜದಲ್ಲಿ ಮಾನ ಕಸುಬಿನಿಂದ ಬರುವುದಲ್ಲ ದುಡ್ಡಿನಿಂದ ಬರುವುದೆಂದು ಬಹುತೇಕ ಯುವಕರಿಗೆ ತಿಳಿದಿದೆ. ಬಾರ್ ಅಥವಾ ಮೆಕಾನೈಸ್ಡ್ ಬೋಟ್‌ ಆರಂಭಿಸಿದರೆ ಮಾನ ತನ್ನಿಂದತಾನೇ ಬರುತ್ತದೆಂದು ಅವರಿಗೂ ತಿಳಿದಿದೆ. ಆದರೆ ಬಾರ್ ಅಥವಾ ಮೆಕಾನೈಸ್ಡ್‌ ಬೋಟ್ ಆರಂಭಿಸಲು ಬಂಡವಾಳ ಎಲ್ಲಿದೆ? ಈ ಬಗೆಯಲ್ಲಿ ಉದ್ಯೋಗ ದೊರಕಿಸಬಹುದಾದ ಶಿಕ್ಷಣ ಇಲ್ಲದವರು ಮತ್ತು ಬಂಡವಾಳ ಹೂಡಿ ತಮ್ಮದೇ ಆಧುನಿಕ ವ್ಯಾಪಾರ ವಹಿವಾಟು ಆರಂಭಿಸಲು ಶಕ್ತರಲ್ಲದ ಸಾವಿರಾರು ಯುವಕರು ಊರಲ್ಲೇ ಉಳಿಯುವುದು ಅನಿವಾರ್ಯವಾಗಿದೆ. ತಮ್ಮ ಜತೆಗೆ ಪ್ರಾಥಮಿಕ ಅಥವಾ ಪ್ರೌಢಶಾಲೆಗಳಲ್ಲಿ ಓದಿದ ತಮ್ಮ ವಾರಗೆಯ ಕೆಲವರ ಸಾಧನೆ (ವಲಸೆ, ಶಿಕ್ಷಣ, ಪಾರಂಪರಿಕ ಸಂಪತ್ತು, ಸಾಮಾಜಿಕ/ರಾಜಕೀಯ ನೆಟ್‌ವರ್ಕ್‌ ಇತ್ಯಾದಿಗಳಿಂದ ಸಾಧ್ಯವಾದ ಸಾಧನೆ) ಊರಲ್ಲೇ ಉಳಿದ ಯುವಕರಲ್ಲಿ ಒಂದು ಕಡೆಯಿಂದ ಹತಾಶೆ ಹೆಚ್ಚಿಸಿದರೆ ಮತ್ತೆ ಕೆಲವರಲ್ಲಿ ನಾವು ಕೂಡ ಸಾಧಿಸಬೇಕೆಂಬ ಛಲವನ್ನು ಸೃಷ್ಟಿಸುತ್ತದೆ. ಆದರೆ ಮೇಲೆ ವಿವರಿಸಿದ ಅಭಿವೃದ್ಧಿ ಮಾದರಿ ಬಂಡವಾಳ ಮತ್ತು ತಂತ್ರಜ್ಞಾನ ಆಧಾರಿತ ಅಭಿವೃದ್ಧಿ (ಮಾದರಿ) ಈ ಯುವಕರಿಗೆ ಅವರು ಬಯಸುವ ಬದುಕಿನ ಅವಕಾಶ ನೀಡುತ್ತಿಲ್ಲ. ಹಾಗೆಂದು ತಮ್ಮ ಸಾಂಪ್ರದಾಯಿಕ ಕಸುಬನ್ನು ಮಾಡಲು ಮಾನ ಮರ್ಯಾದೆ ಅಡ್ಡ ಬರುತ್ತದೆ. ಇಂತಹ ಸ್ಥಿತಿ ಯುವಕರನ್ನು ಇನ್ನೂ ಹತಾಶರನ್ನಾಗಿಸುತ್ತದೆ ಮತ್ತು ಅವರುಗಳು ಸುಲಭದಲ್ಲಿ ಕೋಮುವಾದದ ವಿಷವರ್ತುಲದಲ್ಲಿ ಸಿಕ್ಕಿಕೊಳ್ಳುತ್ತಾರೆ.
ಇತ್ತೀಚಿನ ದಿನಗಳಲ್ಲಿ ಕೋಮುವಾದಿಗಳು ಮತ್ತೊಂದು ರಾಗ ಆರಂಭಿಸಿದ್ದಾರೆ. ದನದ ಮಾಂಸ ತಿನ್ನುವುದು ಮತ್ತು ಮಾರಾಟ ಮಾಡುವುದರ ವಿರುದ್ಧ ಹೋರಾಟ ಆರಂಭಿಸಿದ್ದಾರೆ. ಒಂದು ಕಾಲದಲ್ಲಿ ಪ್ರತಿ ಹಳ್ಳಿಯಲ್ಲಿ ಹಾಲು ಕೊಡದ (ಗೊಡ್ಡು) ದನ ಅಥವಾ ಎಮ್ಮೆಯನ್ನು, ಮುದಿ ಎತ್ತು ಅಥವಾ ಕೋಣವನ್ನು ವ್ಯಾಪಾರಿ ಮಾರುವುದು ಸಾಮಾನ್ಯ ಸಂಗತಿ. ವ್ಯಾಪಾರಿ ಅದನ್ನು ಒಯ್ದು ಏನು ಮಾಡುತ್ತಾನೆ ಎನ್ನುವುದರ ಬಗ್ಗೆ ಯಾರು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಹಳ್ಳಿಯಲ್ಲಿ ದನ ಅಥವಾ ಎಮ್ಮೆ ಸತ್ತರೆ ಹರಿಜನ ಕೇರಿಗೆ ಸುದ್ದಿ ಹೋಗುತ್ತಿತ್ತು. ಅವರು ಬಂದು ಸತ್ತ ದನ ಅಥವಾ ಎಮ್ಮೆಯನ್ನು ಕೊಟ್ಟಿಗೆಯಿಂದ ಹೊರಗೆ ಒಯ್ದು ದೂರದ ಗಿಡದ ಮರೆಯಲ್ಲಿ ಚರ್ಮ ಸುಲಿದು ಮಾಂಸ ಮಾಡಿ ಅಳಿದುಳಿದ ಭಾಗವನ್ನು ಮಣ್ಣು ಮಾಡಿ ಹೋಗುತ್ತಿದ್ದರು. ಉತ್ತರ ಕರ್ನಾಟಕದ ಹಲವು ಹಳ್ಳಿಗಳಲ್ಲಿ ದಲಿತರು ಮುಂದಿಡುತ್ತಿದ್ದ ಹಲವು ಬೇಡಿಕೆಗಳಲ್ಲಿ ದನದ ಮಾರ್ಕೆಟ್ ದೂರ ಇರುವದರಿಂದ ಮಾಂಸಕ್ಕಾಗಿ ಬಸ್ ಪ್ರಯಾಣ ಮಾಡುವ ವೆಚ್ಚ ಒಂದು ಕಡೆ ಆದರೆ ಇವರು ಮಾರ್ಕೆಟ್ ತಲುಪುವ ಹೊತ್ತಿಗೆ ಉತಮ ಮಾಂಸ ಮಾರಾಟ ಆಗಿ ಎಲುಬು ತುಂಬಿದ ಮಾಂಸ ಉಳಿಯುವುದು ಮತ್ತೊಂದು ಕಡೆ.[6]ಟ್ಯುಬರ್‌ಕ್ಯುಲಾಸಿಸ್ (ಟಿಬಿ) ಇರುವವರಿಗೆ ಮಾತ್ರೆಯೊಂದಿಗೆ ಹೆಚ್ಚು ಕ್ಯಾಲ್ಸಿಯಂ ತೆಗೆದುಕೊಳ್ಳಬೇಕೆಂದು ವೈದ್ಯರು ಸಲಹೆ ಮಾಡುವುದು ಸಾಮಾನ್ಯ. ಅತೀ ಕಡಿಮೆ ದರದಲ್ಲಿ ಹೆಚ್ಚು ಕ್ಯಾಲ್ಸಿಯಂ ದೊರೆಯುವುದು ದನದ ಮಾಂಸದಲ್ಲಿ ಮಾತ್ರ. ಕಡಿಮೆ ಆದಾಯ ಇದ್ದು ಹಾಲು, ಮೊಟ್ಟೆ, ಕುರಿ ಕೋಳಿ ಇತ್ಯಾದಿಗಳನ್ನು ಖರೀದಿಸಲು ಸಾಧ್ಯವಾಗದ ಜನರು ದನದ ಮಾಂಸ ತಿನ್ನುವುದು ಅನಿವಾರ್ಯ. ಹೀಗೆ ದನದ ಮಾಂಸವನ್ನು ಕೇವಲ ಮುಸ್ಲಿಮರು ಮಾತ್ರ ತಿನ್ನುತ್ತಾರೆ ಆದುದರಿಂದ ಮುಸ್ಲಿಂ ವಿರೋಧಿ ಕೋಮುವಾದದ ಹೆಸರಿನಲ್ಲಿ ದನದ ಮಾಂಸ ಮಾರಾಟವನ್ನು ವಿರೋಧಿಸಿದರೆ ಕೇವಲ ಮುಸ್ಲಿಮರಿಗೆ ಮಾತ್ರ ನೋವಾಗುವುದಲ್ಲ. ಕಡಿಮೆ ಆದಾಯ ಇರುವ ಪ್ರತಿಯೊಬ್ಬರ ಆಹಾರ ಪದ್ಧತಿಗೆ ಕೋಮುವಾದಿಗಳ ಈ ಧೋರಣೆ ವಿರುದ್ಧ ಇದೆ. ಸಂವಿಧಾನದಲ್ಲಿ ಅಥವಾ ದೇಶದ ಅಥವಾ ರಾಜ್ಯದ ಯಾವುದೇ ಕಾನೂನು ಕೂಡ ದನದ ಮಾಂಸ ತಿನ್ನುವುದನ್ನು ನಿಷೇಧಿಸಿಲ್ಲ. ಇಂತಹ ಸಂದರ್ಭದಲ್ಲಿ ಸರಕಾರಕ್ಕೆ ಕೋಮುವಾದಿಗಳ ದನದ ಮಾಂಸ ವಿರೋಧಿ ಕಾರ್ಯಕ್ರಮಗಳನ್ನು ಹತ್ತಿಕ್ಕಲು ಸಾಧ್ಯವಾಗಿಲ್ಲವೆಂದರೆ ಇದೊಂದು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಸರಕಾರದ ವಿಫಲತೆಯಲ್ಲವೇ?
ಕೋಮುವಾದದ ಬೆಳವಣಿಗೆ ಕೇವಲ ವ್ಯಕ್ತಿ ಅಥವಾ ಸಮುದಾಯಗಳನ್ನು ಮಾತ್ರ ಕಾಡುವುದಿಲ್ಲ. ಇಡೀ ಪ್ರದೇಶದ ವಿದ್ಯಮಾನಗಳನ್ನು ಮೇಲ್ವರ್ಗದ ಪರವಾಗಿ ಮತ್ತು ಕೆಳವರ್ಗದ ವಿರುದ್ಧವಾಗಿ ತಿರುಚುವ ಸಾಧ್ಯತೆ ಇದೆ. ಯಾಕೆಂದರೆ ಕೋಮುವಾದ ಬಲಗೊಳ್ಳುವುದರಿಂದ ಇಡೀ ಸಮಾಜ ಹಿಂದೂ ಮುಸ್ಲಿಮ್ ಎಂದು ಧ್ರುವೀಕರಣಗೊಂಡು ಸಮಾಜದೊಳಗಿನ ಇತರ ವೈರುಧ್ಯಗಳು ಮರೆಯಾಗುತ್ತಿವೆ. ಜಿಲ್ಲೆಯಲ್ಲಿ ಶೇಕಡಾ ಇಪ್ಪತ್ತೈದರಿಂದ ಮೂವತ್ತರಷ್ಟು ರೈತರಿದ್ದಾರೆ. ಅವರಲ್ಲಿ ಶೇಕಡಾ ತೊಂಬತ್ತರಷ್ಟು ಸಣ್ಣ ಮತ್ತು ಅತೀ ಸಣ್ಣ ರೈತರು. ಸಂಘಟಿತ ರೈತ ಹೋರಾಟ ಇಲ್ಲದ ಕಾರಣ ರೈತರ ಯಾವತ್ತು ಸಮಸ್ಯೆಗಳು (ಹಣಕಾಸು, ಮಾರುಕಟ್ಟೆ, ನೀರಾವರಿ ಇತ್ಯಾದಿ) ಸಾಮಾಜಿಕ ಸಮಸ್ಯೆಗಳಾಗಿಲ್ಲ. ಇತ್ತೀಚಿನ ರಾಜ್ಯ ಸರಕಾರದ ಸಾಲ ಮನ್ನಾದ ಲಾಭವನ್ನು ಕೂಡ ಜಿಲ್ಲೆಯ ರೈತರು ಪಡೆಯಲಾಗಲಿಲ್ಲ. ಕಾರಣ ಅವರೆಲ್ಲ ಹೊಸ ಸಾಲ ಮಾಡಿ ಸೊಸೈಟಿಗಳಿಂದ ಪಡೆದ ಹಳೇ ಸಾಲವನ್ನು ಸಂದಾಯ ಮಾಡಿದ್ದರು.[7] ಸತತ ಸಾಲಗಾರರಾಗಿರುವ ಸಂದರ್ಭದಲ್ಲೇ ಸರಕಾರ ಕೊಟ್ಟ ಸಾಲಮನ್ನಾ ಸೌಲಭ್ಯವನ್ನು ಬಳಸಿಕೊಳ್ಳಲಾಗದ ನತದೃಷ್ಟರು. ಅತೀ ಜನ ಸಾಂದ್ರತೆಯುಳ್ಳ ಕೆಲವೇ ಕೆಲವು ಪ್ರದೇಶಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಕೂಡ ಒಂದು. ಜನರು ವಸತಿಗಾಗಿ, ಕೃಷಿಗಾಗಿ, ಸಾರ್ವಜನಿಕ ಸವಲತ್ತುಗಳ ಸೃಷ್ಟಿಗಾಗಿ ಭೂಮಿ ಕೊರತೆಯನ್ನು ಸತತವಾಗಿ ಅನುಭವಿಸುತ್ತಾ ಬಂದಿದ್ದಾರೆ. ಇಂತಹ ಪರಿಸರದಲ್ಲಿ ಸಾವಿರಾರು ಎಕರೆ ಭೂಮಿಗಳನ್ನು ಬಲತ್ಕಾರದಿಂದ ರೈತರಿಂದ ವಶಪಡಿಸಿ ಕೈಗಾರಿಕಾ ಬಳಕೆಗೆ (ಸ್ಪೆಷಲ್ ಎಕಾನಮಿಕ್ ಜೋನ್‌ಗಾಗಿ, ಹೈಡಲ್ ಪವರ್‌ ಯೋಜನೆಗಾಗಿ ಇತ್ಯಾದಿಗಳಿಗಾಗಿ) ಕಡಿಮೆ ದರದಲ್ಲಿ ನೀಡಲಾಗುತ್ತಿದೆ. ಇಂತಹ ಬೆಳವಣಿಗೆಗಳ ವಿರುದ್ಧ ನಡೆಯುವ ಹೋರಾಟಗಳು ಭೂಮಿ ಕಳಕೊಂಡವರ ಸಣ್ಣಪುಟ್ಟ ಹೋರಾಟಗಳಾಗಿವೆ.
ಬಹುತೇಕರ ಸಾಮಾನ್ಯ ಸಮಸ್ಯೆಗಳಾದ ನಿರುದ್ಯೋಗ, ಕುಡಿಯುವ ನೀರು, ವಸತಿ ಇತ್ಯಾದಿ ಮೂಲಭೂತ ಸವಲತ್ತುಗಳ ಕೊರತೆ, ಖಾಸಗಿ ಬಸ್ಸು ಮಾಲಿಕರ ದುಬಾರಿ ದರ ನಿಗದಿ, ಖಾಸಗಿ ಹಾಸ್ಪಿಟಲ್‌ಗಳ ಹಗಲು ದರೋಡೆ ಇತ್ಯಾದಿ ದಿನನಿತ್ಯದ ಸಮಸ್ಯೆಗಳ ವಿರುದ್ಧ ಹೋರಾಟಗಳ ಹಿಂದೆ ಜನರೇ ಇಲ್ಲ. ಮೇಲಿನ ದಿನನಿತ್ಯದ ಸಮಸ್ಯೆಗಳ ವಿರುದ್ಧ ಬಳಸಬೇಕಾದ ಸಿಟ್ಟು, ಅಸಹನೆ, ಆಕ್ರೋಶ, ಆವೇಶ, ಉದ್ವೇಗ ಇತ್ಯಾದಿಗಳನ್ನು ಜನಸಾಮಾನ್ಯರು ಕೋಮುಗಲಭೆಯಲ್ಲಿ ವ್ಯರ್ಥ ವ್ಯಯ ಮಾಡುತ್ತಿದ್ದಾರೆ. ಕ್ರಾಂತಿಯ ಕನಸು ಕಾಣುವ ಮತ್ತು ಸುತ್ತಮುತ್ತ ನಡೆಯುವ ಅನ್ಯಾಯಗಳ ವಿರುದ್ಧ ಸಿಡಿದೇಳುವ ಲಕ್ಷಣಗಳೆಲ್ಲ ವಿದ್ಯಾರ್ಥಿ ಜೀವನದಲ್ಲಿ ಕಂಡಷ್ಟು ನಂತರ ಇರುವುದಿಲ್ಲ. ಆದರೆ ಹಲವಾರು ವರ್ಷಗಳಿಂದ ಕೋಮುಗಲಭೆಯ ಹೆಸರಲ್ಲಿ ಇಲ್ಲಿ ನೆಯುವ ಮಾರಣಹೋಮದ ಬಗ್ಗೆ ಜಿಲ್ಲೆಯ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟಿಸಿದ್ದು ಅಪರೂಪ. ಪ್ರತಿಭಟಿಸುವ ಬದಲು ಈ ಬಗೆಯ (ಹಿಂದೂ ಮುಸ್ಲಿಮ್) ದ್ರುವೀಕರಣವನ್ನು ಅಂತಿಮ ಸತ್ಯವೆಂದು ಬಗೆದು ಅವುಗಳೊಂದಿಗೆ ತಮ್ಮ ಶಕ್ತಿಯನುಸಾರ ಗುರುತಿಸಿಕೊಳ್ಳುವುದು ತಮ್ಮ ಜೀವನದ ಪರಮ ಸಾಧನೆ ಎಂದು ತಿಳಿದುಕೊಂಡು ವ್ಯವಹರಿಸುವ ವಿದ್ಯಾರ್ಥಿಗಳು ಮತ್ತು ಅವರಿಗೆ ಪಾಠ ಮಾಡುವ ಮೇಸ್ಟ್ರುಗಳನ್ನು ಇಲ್ಲಿ ಕಾಣಬಹುದು. ಎಲ್ಲದರಲ್ಲೂ ಬಹುತ್ವವನ್ನು ಬಯಸುವುದು ಮತ್ತು ಬೆಳೆಸುವುದು ಆರೋಗ್ಯವಂತ ಸಮಾಜದ ಲಕ್ಷಣ. ಆದರೆ ಕೋಮುವಾದದ ಬೆಳವಣಿಗೆಯಿಂದಾಗಿ ಇಡೀ ಪ್ರದೇಶವೇ ಏಕಮುಖವಾಗಿ ಚಿಂತಿಸುವ ಮತ್ತು ಪ್ರತಿಕ್ರಿಯಿಸುವ ಒಂದು ವಿಚಿತ್ರ ಸನ್ನಿವೇಶ ಜಿಲ್ಲೆಯಲ್ಲಿದೆ. ಇದರಿಂದಾಗಿ ಇಲ್ಲಿನ ಮೇಲ್ವರ್ಗ ತನ್ನ ಸಂಪತ್ತನ್ನು ಹೆಚ್ಚಿಸಿಕೊಳ್ಳುವ ಮತ್ತು ಆ ಮೂಲಕ ತನ್ನ ಯಜಮಾನಿಕೆಯನ್ನು ವಿಸ್ತರಿಸಿಕೊಳ್ಳುವುದು ಸುಲಭವಾಗಿದೆ. ಆದರೆ ಇಂತಹ ಏಕಮುಖ ಚಿಂತನೆ ಮತ್ತು ವ್ಯವಹಾರ ಜಿಲ್ಲೆಯ ತಳಸಮುದಾಯಗಳಿಗೆ ಶಾಪವಾಗಿದೆ. ತಮ್ಮ ದಿನನಿತ್ಯದ ಬದುಕಿನಲ್ಲಿ ಎದುರಾಗುವ ಅನ್ಯಾಯಗಳನ್ನು, ಶೋಷಣೆಗಳನ್ನು, ದಬ್ಬಾಳಿಕೆಗಳನ್ನು ಎದುರಿಸಲು ಜನಸಾಮಾನ್ಯರಿಗೆ ಅಸಂಖ್ಯಾತ ರಾಜಕೀಯ ಪ್ರಕ್ರಿಯೆಗಳ ಅವಶ್ಯಕತೆ ಇದೆ. ಆದರೆ ಕೋಮುವಾದ ವರ್ಗ, ಲಿಂಗ, ಭಾಷೆ, ಪ್ರದೇಶ, ಸಮುದಾಯ ಇತ್ಯಾದಿ ನೆಲೆಗಳಲ್ಲಿ ಕಟ್ಟಿಕೊಳ್ಳಬಹುದಾದ ಹೋರಾಟಗಳನ್ನು ನಾಶ ಮಾಡಿದೆ. ಇಂತಹ ಅಸಂಖ್ಯಾತ ಹೋರಾಟಗಳ ನೆಲೆಗಳ ಬದಲು ಇಂದು ಜಿಲ್ಲೆಯ ತಳಸಮುದಾಯಕ್ಕೆ ದಕ್ಕಿರುವುದು ಕೇವಲ ಕೋಮು ನೆಲೆಯ ಹೋರಾಟ ಮಾತ್ರ. ಈ ಹೋರಾಟವನ್ನು ಮಾಡುವ ಮೂಲಕ ತಳಸಮುದಾಯದ ಜನರು ತಮ್ಮ ಜೀವ ಸೆಲೆಗಳಾದ ಪ್ರೀತಿ ಪ್ರೇಮಗಳನ್ನು ಶಾಂತಿ ಸಮಾಧಾನಗಳನ್ನು ನಂಬಿಕೆಗಳನ್ನು ಬಲಿಕೊಡಬೇಕಾಗಿದೆ. ಮತ್ತು ಈ ಬಲಿ ಕೂಡ ಯಾರ ಆಸಕ್ತಿಯನ್ನು ಈಡೇರಿಸುವುದಕ್ಕಾಗಿ? ಖಂಡಿತವಾಗಿಯೂ ತಳಸಮುದಾಯದ ಜನರ ಭವಿಷ್ಯಕ್ಕಾಗಿ ಅಲ್ಲ.
ಸುಮಾರು ಎಪ್ಪತ್ತರ ದಶಕದವರೆಗೂ ಕರಾವಳಿ ಕರ್ನಾಟಕದಲ್ಲಿ ಸಮಾಜವನ್ನು ಜಾತಿಯ ಗೆರೆಗಳ ಮೇಲೆ ಪ್ರಧಾನ ಮತ್ತು ಅಧೀನ ಎಂಬ ಸ್ತರಗಳಲ್ಲಿ ವಿಭಜಿಸಿದ್ದು ಬಹಳ ಸ್ಪಷ್ಟವಾಗಿ ಕಂಡು ಬರುತ್ತದೆ. ಈ ಪ್ರಧಾನ ಜಾತಿಗಳನ್ನು ಕೆಲವು ನಿರ್ದಿಷ್ಟಪಡಿಸಿದ ಗುಣಲಕ್ಷಣಗಳ ಮೂಲಕ ಗುರುತಿಸಲಾಗುತ್ತಿತ್ತು. ಅಧೀನ ಜಾತಿಗಳ ಲಕ್ಷಣಗಳು ಈ ಪ್ರಧಾನ ಜಾತಿಗಳ ಲಕ್ಷಣಗಳಿಗೆ ಹೆಚ್ಚು ಕಡಿಮೆ ವಿರೋಧವಾಗಿದ್ದವು. ಈ ಸ್ತರೀಕರಣಗೊಳಿಸುವ ಮತ್ತು ಗುರುತಿಸುವ ಪ್ರಕ್ರಿಯೆಗಳು ಸಂಕಥನದೊಂದಿಗೆ ಸಮಾಜದ ಭೌತಿಕ ಸ್ಥಿತಿಗತಿಗಳ ಮೇಲೆ ಅವಲಂಬಿತವಾಗಿದ್ದವು. ಪ್ರಧಾನ ಜಾತಿಗಳನ್ನು ಗುರುತಿಸಲಾಗುವ ಲಕ್ಷಣಗಳು ಸಹಜವೆಂದು ಭಾವಿಸುವುದು ಆ ಜಾತಿಗಳ ಪ್ರಾಬಲ್ಯಕ್ಕೆ ಮತ್ತು ಯಥಾಸ್ಥಿತಿಯ ಮುಂದುವರಿಕೆಗೆ ಅವಶ್ಯವಾಗಿದ್ದವು. ಸಾಂಸ್ಕೃತಿಕ ಮತ್ತು ಸಾಮಾಜಿಕ ಲೋಕದ ವ್ಯವಹಾರಗಳ ಮೂಲಕ ಆರ್ಥಿಕ ಕ್ಷೇತ್ರದ ಬಲಾಢ್ಯತೆಗೆ ಯಜಮಾನಿಕೆಯ ಮೆರಗನ್ನು ಕಂಡುಕೊಳ್ಳಲಾಯಿತು. ಈ ಬಗೆಯ ಮನುಷ್ಯ ನಿರ್ಮಿತ ಮೇಲು ಕೀಳುಗಳನ್ನು, ಉಚ್ಚನೀಚತೆಯನ್ನು ದೈವ/ದೇವರ ಸೃಷ್ಟಿಯೆಂದು ತಳಸ್ತರದ ಸಮುದಾಯಗಳು ಮೇಲ್ವರ್ಗಗಳ ದಬ್ಬಾಳಿಕೆಯನ್ನು, ಯಜಮಾನಿಕೆಯನ್ನು ಸಹಜವೆಂದು ನಂಬಿ ವ್ಯವಹರಿಸುವ ಕಾಲವಿತ್ತು. ಹೀಗೆ ಸ್ಥಳೀಯ ಸಮಾಜಕ್ಕೆ ‘ಸ್ವ’ ಮತ್ತು ‘ಅನ್ಯ’ದ  ಕಲ್ಪನೆಗಳನ್ನು ಪರಿಣಾಮಕಾರಿಯಾಗಿ ಕಟ್ಟಿಕೊಳ್ಳುವ ಮತ್ತು ಆ ಕಲ್ಪನೆಗಳಿಗನುಗುಣವಾಗಿ ದಿನನಿತ್ಯದ ಬದುಕನ್ನು ನಡೆಸುವ ಅಭ್ಯಾಸ ಹಿಂದಿನಿಂದಲೇ ಇತ್ತು. ಹಿಂದೆ ಜಾತಿ ನೆಲೆಯಲ್ಲಿ ‘ಸ್ವ’ ಮತ್ತು ‘ಅನ್ಯ’ವನ್ನು ಕಟ್ಟಿಕೊಳ್ಳಲಾಗಿತ್ತು. ಹಿಂದಿನ ವಿಂಗಡನೆಯಲ್ಲಿ ಸ್ಥಳೀಯ ಕೆಳಜಾತಿಗಳು ‘ಅನ್ಯ’ದ ಸ್ಥಾನದಲ್ಲಿದ್ದವು. ಆ ಕಾರಣಕ್ಕಾಗಿ ಅವರುಗಳು ಆರ್ಥಿಕ ಅಸಮಾನತೆಯ ಜತೆಜತೆಗೆ ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಅಸಮಾನತೆಗಳನ್ನು ಅನುಭವಿಸಬೇಕಿತ್ತು. ಇಂತಹ ಒಂದು ಪರಿಸರದಲ್ಲಿ ವಸಾಹತು ಆಡಳಿತ ಮತ್ತು ನಂತರದ ಪ್ರಭುತ್ವ ನೇತೃತ್ವದಲ್ಲಿ ನಡೆದ ತಾಂತ್ರಿಕ ಆಧುನೀಕರಣಗಳು ಮಧ್ಯ ಪ್ರವೇಶಗೈದವು.
ವಸಾಹತು ಆಡಳಿತ ಸಂದರ್ಭದಲ್ಲಿ ಸಾಂಪ್ರದಾಯಿಕ ರಾಜಕೀಯ ಅಧಿಕಾರ ಕೇಂದ್ರಗಳು ಪಲ್ಲಟಗೊಂಡು ಹೊಸ ಅಧಿಕಾರ ಕೇಂದ್ರಗಳು ಸ್ಥಾಪಿತವಾದವು. ವಸಾಹತು ಆಡಳಿತ ಸ್ಥಳೀಯ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಆರ್ಥಿಕ ಸಂಬಂಧಗಳನ್ನು ನೇರವಾಗಿ ಪ್ರಶ್ನಿಸಲು ಪ್ರಯತ್ನಿಸಲಿಲ್ಲ. ಆದರೆ ಇದೇ ಸಂದರ್ಭದಲ್ಲಿ ಕ್ರಿಶ್ಚಿಯನ್ ಧರ್ಮ ಕರಾವಳಿ ಕರ್ನಾಟಕದಲ್ಲಿ ತಳವೂರಲು ಪ್ರಯತ್ನ ಮಾಡಿತು. ಸ್ಥಳೀಯರನ್ನು ತಮ್ಮ ಧರ್ಮಕ್ಕೆ ಆಕರ್ಷಿಸಲು ಮತ್ತು ಯಾವುದೋ ಕಾರಣಕ್ಕೆ ಮತಾಂತರಗೊಂಡವರನ್ನು ತಮ್ಮದೇ ಧರ್ಮದಲ್ಲಿ ಉಳಿಸಿಕೊಳ್ಳುವುದು ಕ್ರಿಶ್ಚಿಯನ್ನರಿಗೆ ಅನಿವಾರ್ಯವಾಗಿತ್ತು. ಜತೆಗೆ ವಸಾಹತು ಆಡಳಿತ ಹುಟ್ಟು ಹಾಕಿದ ಅಧಿಕಾರ ಕೇಂದ್ರಗಳಲ್ಲಿ ತಳಸ್ತರದ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಲು ಮಾನವ ಸಂಪನ್ಮೂಲದ ತರಬೇತುಗೊಳಿಸಬೇಕಿತ್ತು. ಈ ಎಲ್ಲ ಉದ್ದೇಶಗಳನ್ನು ಗಮನದಲ್ಲಿಟ್ಟುಕೊಂಡು ಕ್ರಿಶ್ಚಿಯನ್ ಮೆಷಿನರಿಗಳು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದವು. ಹೀಗೆ ಆರಂಭಗೊಂಡ ಶಿಕ್ಷಣ ಸಂಸ್ಥೆಗಳು ಅವುಗಳ ಮೂಲ ಉದ್ದೇಶಕ್ಕೆ ಅಥವಾ ಅವುಗಳು ‘ಸಾರ್ವಜನಿಕವಾಗಿ ಘೋಷಿಸಿಕೊಂಡ ಉದ್ದೇಶಕ್ಕಿಂತ ಭಿನ್ನವಾದ ಕೆಲವೊಂದು ಪರಿಣಾಮಗಳನ್ನು ಸ್ಥಳೀಯ ಸಾಮಾಜಿಕ ಮೌಲ್ಯಗಳ ಮೇಲೆ ಮಾಡಲಾರಂಭಿಸಿದವು. ಲಿಂಗ, ಜಾತಿ ನೆಲೆಯಲ್ಲಿ ವ್ಯಕ್ತಿ ವ್ಯಕ್ತಿಗಳ ನಡುವೆ ಅಸಮಾನತೆ ಆಚರಣೆಗೆ ಪೂರಕವಾಗಿರುವ ಹಲವಾರು ಸಾಮಾಜಿಕ ಆಚರಣೆಗಳನ್ನು ಈ ಕ್ರಿಶ್ಚಿಯನ್ ಮೆಶಿನರಿಗಳ ಕಾರ್ಯಕ್ರಮಗಳು ಮುರಿದವು. ಈ ಬೆಳವಣಿಗೆಗೆ ಸ್ಥಳೀಯ ಸಮಾಜದ ಮೇಲ್ವರ್ಗ ಮಿಶ್ರ ಪ್ರತಿಕ್ರಿಯೆ ನೀಡಿದೆ. ಮೇಲ್ವರ್ಗದ ಒಂದು ಗುಂಪು ಕ್ರಿಶ್ಚಿಯನ್ ಮೆಶಿನರಿಗಳು ಪ್ರತಿಪಾದಿಸುವ ಆಧುನಿಕ ಮೌಲ್ಯಗಳನ್ನು ಬೆಂಬಲಿಸಿದರೆ ಮತ್ತೊಂದು ಗುಂಪು ವಿರೋಧಿಸಲಾರಂಭಿಸಿತು. ಪರ ವಿರೋಧಗಳು ಮೇಲ್‌ಸ್ತರದಲ್ಲೇ ಇದ್ದುದರಿಂದ ವಸಾಹತು ಸಂದರ್ಭದಲ್ಲಿ ಸ್ಥಳೀಯವಾಗಿ ದಕ್ಕಿಸಿಕೊಂಡ ಕೆಲವೊಂದು ಲಾಭಗಳು (ಆಧುನಿಕ ಶಿಕ್ಷಣ, ಅದು ಕೊಡಮಾಡಿದ ಹುದ್ದೆಗಳು, ವ್ಯಾಪಾರ ವಹಿವಾಟು ನಡೆಸಲು ಅನುಕೂಲತೆಗಳು, ಭೂಮಿ ಇತ್ಯಾದಿಗಳು) ಕೂಡ ಮೇಲಸ್ತರದಲ್ಲೇ ಉಳಿದವು. ಕೆಲವೊಂದು ಬಾರಿ ಮತಾಂತರಗಳ ಮೂಲಕ (ಸ್ಥಳೀಯ ಸಮಾಜದ ತಳ ಸಮುದಾಯಗಳ ಜನರು ಮತಾಂತರಗೊಂಡ ಸಂದರ್ಭದಲ್ಲಿ) ವಸಾಹತು ಆಡಳಿತದ ಲಾಭಗಳು ತಳ ಸಮುದಾಯಗಳ ಜನರಿಗೂ ತಲುಪಿದೆ. ವಸಾಹತು ಆಡಳಿತ ಮತ್ತು ಮೆಶಿನರಿಗಳ ಮಧ್ಯಪ್ರದೇಶದಿಂದ ಆದ ಲಾಭನಷ್ಟದ ಲೆಕ್ಕಾಚಾರಕ್ಕಿಂತ ಹೆಚ್ಚು ಆ ಸಂದರ್ಭದಲ್ಲಿ ಸ್ಥಳೀಯ ಮೇಲ್ವರ್ಗ ಅಂದಿನ ಬೆಳವಣಿಗೆಗಳಿಗೆ ಪ್ರತಿಕ್ರಿಯಿಸಿದ ವಿಧಾನ ಇಂದಿನ ಕೋಮುವಾದವನ್ನು ಅರ್ಥಮಾಡಿಕೊಳ್ಳಲು ತುಂಬಾ ಉಪಯುಕ್ತ. ಅಂದು ಕೂಡ ಒಂದು ಕಡೆ ನಮ್ಮಲ್ಲಿನ ಕೊರತೆಗಳನ್ನು ಲೋಪಗಳನ್ನು ಸರಿಪಡಿಸಿಕೊಂಡು ಎಲ್ಲರೂ ಸಮಾನತೆಯಿಂದ ಬಾಳಲು ಅಗತ್ಯವಿರುವ ಮೌಲ್ಯಗಳ, ಸಂಸ್ಥೆಗಳ ಹುಡುಕಾಟಕ್ಕೆ ಪ್ರಾಮಾಣಿಕ ಪ್ರಯತ್ನಗಳು ನಡೆದವು. ಆದರೆ ಅದೇ ಸಂದರ್ಭದಲ್ಲಿ ಮತ್ತೊಂದೆಡೆ ಬಹುತೇಕರಿಗೆ ಮನುಷ್ಯರಾಗಿ ಸಮಾನರಾಗಿ ಬದುಕುವ ಅವಕಾಶಗಳನ್ನು ಸೃಷ್ಟಿಸುವ ಬಗ್ಗೆ ವಿಶೇಷ ಚಿಂತಿಸದೆ ಕ್ರಿಶ್ಚಿಯನ್ ಮೆಶಿನರಿಗಳನ್ನು ‘ಆನ್ಯ’ದ ಸ್ಥಾನದಲ್ಲಿ ನಿಲ್ಲಿಸಿ ಸ್ಥಳೀಯರು ನಾವೆಲ್ಲ ಒಂದೇ ಎನ್ನುವ ‘ಸ್ವ’ದ ಕಲ್ಪನೆಯನ್ನು ಪ್ರಚಾರ ಪಡಿಸಲು ಸ್ಥಳೀಯ ಮೇಲ್ಜಾತಿಗಳ ಒಂದು ಗುಂಪು ಪ್ರಯತ್ನ ನಡೆಸಿತು. ಆದರೆ ಅಂದಿನ ದಿನನಿತ್ಯದ ಬದುಕಿನ ಜಾತಿ, ಲಿಂಗ, ವರ್ಗ ಬೇಧಗಳ ತೀವ್ರತೆ ಎಷ್ಟಿತ್ತೆಂದರೆ ನಾವೆಲ್ಲ ಒಂದೇ ಎನ್ನುವ ಮೇಲ್ಜಾತಿಗಳ ಘೋಷಣೆ ಹುಸಿಯೆಂದು ತಳಸಮುದಾಯಗಳಿಗೆ ಮನವರಿಕೆಯಾಗಲು ವಿಶೇಷ ಕಾಲ ಹಿಡಿಯಲಿಲ್ಲ. ಜತೆಗೆ ವಸಾಹತು ಅಧಿಕಾರ ಕೂಡ ಮೆಶಿನರಿಗಳ ಪರ ಇತ್ತು. ದಿನನಿತ್ಯದ ಬದುಕಿನಲ್ಲಿ ಆಚರಣೆಗೆ ಬಾರದ ‘ನಾವೆಲ್ಲ ಒಂದೇ’ ಎನ್ನುವ ಈ ಘೋಷಣೆಯಿಂದ ನಮಗೆ ಮೋಕ್ಷವಿಲ್ಲವೆಂದು ತಳ ಸಮುದಾಯಗಳ ಹಲವಾರು ಜನರು ಮತಾಂತರಗೊಂಡರು.
ಸ್ವಾತಂತ್ರ‍್ಯ ನಂತರ ನಡೆದ ತಾಂತ್ರಿಕ ಆಧುನೀಕರಣ ಆರಂಭಿಕ ಹಂತಗಳಲ್ಲಿ ವಸಾಹತು ಆಡಳಿತದ ಸುಧಾರಿತ ರೂಪದಲ್ಲೇ ಪರಿಣಾಮ ಬೀರಿದೆ. ಆಧುನಿಕ ಪ್ರಭುತ್ವ ಜಾರಿಗೊಳಿಸಿದ ತಾಂತ್ರಿಕ ಆಧುನೀಕರಣ ಜೊತೆಗೆ ಈ ಪ್ರದೇಶಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಮಿಷನರಿಗಳು ಮತ್ತು ಸ್ಥಳೀಯ ಮೇಲ್ಜಾತಿಗಳು ಕೊಡಮಾಡಿದ್ದನ್ನು ಆರಂಭದ ದಿನಗಳಲ್ಲಿ ಮೇಲ್ಜಾತಿ ಜನರು ತಮ್ಮದಾಗಿಸಿಕೊಂಡರು. ಇದರಿಂದಾಗಿ ಮತ್ತು ಬಹುತೇಕ ಬ್ಯಾಂಕ್‌ಗಳನ್ನು, ಶಾಲಾ ಕಾಲೇಜುಗಳನ್ನು, ಸೊಸೈಟಿಗಳನ್ನು ಸ್ಥಳೀಯ ಮೇಲ್ಜಾತಿ ಜನರು ಆರಂಭಿಸಿದ್ದರಿಂದ ಐವತ್ತು ಎಪ್ಪತ್ತರ ದಶಕಗಳಲ್ಲಿ ಬ್ಯಾಂಕ್‌ಗಳಲ್ಲಿ, ಇನ್ಸೂರೆನ್ಸ್ ಆಫೀಸುಗಳಲ್ಲಿ, ಶಾಲೆ ಕಾಲೇಜುಗಳಲ್ಲಿ ಸ್ಥಳೀಯ ಮೇಲ್ಜಾತಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಪಡೆದರು. ಕೆಳಜಾತಿ ಜನರು ತಮ್ಮ ಅತ್ಯಲ್ಪ ಶಿಕ್ಷಣದಿಂದ ಸಮಾಜದ ಕೆಲವು ಅಧೀನ ಉದ್ಯೋಗಗಳಲ್ಲಿ ಅಂದರೆ ಡ್ರೈವರ್, ಪ್ಲಂಬರ್, ಟೈಲರ್, ಮೆಕಾನಿಕ್ ಇತ್ಯಾದಿಗಳಲ್ಲಿ ಸಮಾಧಾನಪಟ್ಟು ಕೊಳ್ಳಬೇಕಾಯಿತು. ಉಳಿದ ಅವಕಾಶ ವಂಚಿತರು ಪರ ಊರುಗಳಿಗೆ (ಆರಂಭದಲ್ಲಿ ಮುಂಬಯಿ ನಂತರ ಕೊಲ್ಲಿ ರಾಷ್ಟ್ರಗಳಿಗೆ) ವಲಸೆ ಹೋದರು. ತಾಂತ್ರಿಕ ಆಧುನೀಕರಣದ ಭಾಗವಾಗಿ ಬಂದ ರಾಜಕೀಯ ಅಧಿಕಾರ ಕೇಂದ್ರಗಳನ್ನು ಪ್ರಜಾಪ್ರಭುತ್ವ ತತ್ವಗಳಿಗನುಸಾರ ರೂಪಿಸಲು ಮಾಡಿದ ಪ್ರಯತ್ನಗಳು ದೂರಗಾಮಿ ಪರಿಣಾಮ ಬೀರಲು ಆರಂಭಿಸಿದವು. ಪ್ರಜಾಪ್ರಭುತ್ವ ಪ್ರತಿಪಾದಿಸುವ ಆಧುನಿಕ ನಾಗರಿಕ ಜಗತ್ತಿನ ಮನುಷ್ಯರೆಲ್ಲರೂ ಸಮಾನರು ಎಂಬ ತಿಳುವಳಿಕೆ ಏನಿದೆ ಅದು ಬ್ರಾಹ್ಮಣವಾದದ ತಾತ್ವಿಕತೆಯಲ್ಲಿ ಬೆಳೆದು ಬಂದ ಜಾತಿ ಬದ್ಧವಾದ ತಾತ್ವಿಕತೆಗೆ ವಿರುದ್ಧ ಇದೆ. ಯಾಕೆಂದರೆ ಜಾತಿಬದ್ಧತೆ ಹುಟ್ಟಿನಿಂದಲೇ ಮನುಷ್ಯರೆಲ್ಲರೂ ಸಮಾನರು ಎನ್ನುವ ಕಲ್ಪನೆಯನ್ನು ತಿರಸ್ಕರಿಸುತ್ತಿದೆ. ಆದರೆ ಪ್ರಜಾಪ್ರಭುತ್ವದ ತಾತ್ವಿಕ ನೆಲೆಗಳು ಜಾತಿ ಅಥವಾ ಲಿಂಗ ಅಥವಾ ಧರ್ಮದ ನೆಲೆಯಲ್ಲಿ ವ್ಯಕ್ತಿಯೊಬ್ಬರ ಸ್ಥಾನಮಾನಗಳನ್ನು ಅಲ್ಲುಗಳೆಯುವುದಕ್ಕೆ ವಿರುದ್ಧ ಇದೆ.[8] ಈ ಎಲ್ಲ ಬೆಳವಣಿಗೆಗಳು ಸಾಂಪ್ರದಾಯಿಕ ಸಮಾಜದ ಯಜಮಾನಿಕೆ ವರ್ಗಗಳಿಗೆ ನುಂಗಲಾರದ ತುತ್ತಾಯಿತು. ಒಂದು ಕಾಲದಲ್ಲಿ ಮೇಲ್‌ವರ್ಗದ ಜನರು ಕಾಲಲ್ಲಿ ತೋರಿಸಿದ ಕೆಲಸವನ್ನು ತಲೆಯಲ್ಲಿಟ್ಟು ಕೊಂಡು ಮಾಡುತ್ತಿದ್ದ ಜನರು ಇಂದು ಸಾಕಷ್ಟು ಕೂಲಿ ಕೊಟ್ಟು ನಿಗದಿತ ಅವಧಿಗೆ ಕೆಲಸ ಮಾಡಿ ಎಂದು ಮನೆಬಾಗಿಲಿಗೆ ಹೋಗಿ ಕರೆದರೂ ಬರುವುದಿಲ್ಲ. ಹಾಗೆಂದು ಹಿಂದಿನ ರೀತಿಯಲ್ಲಿ ಹೊಡೆದು ಬಡಿದು ಕೂಲಿ ಮಾಡಿಸುವಂತಿಲ್ಲ; ಯಾವುದೋ ಬಗೆಯಲ್ಲಿ ಓಲೈಸಿಯೇ ಕೂಲಿ ಮಾಡಸಬೇಕಾಗಿದೆ. ಒಂದು ಕಾಲದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮೇಲ್ಜಾತಿ ಜನರು ಬರುವಾಗ ದಾರಿಯಿಂದ ದೂರ ಸರಿದು ಗೌರವ ತೋರಿಸುತ್ತಿದ್ದವರು, ಸಾರ್ವಜನಿಕ ಸ್ಥಳಗಳಲ್ಲಿ ಮೇಲ್ಜಾತಿ ಜನರ ಅಸಮಾನ ನಡವಳಿಕೆಯನ್ನು ಒಪ್ಪಿಕೊಂಡವರು, ಎಲ್ಲ ಬಗೆಯ ಅಸಮಾನತೆಗಳನ್ನು ಮೌನವಾಗಿ ಸಹಿಸುತ್ತಿದ್ದ ಜನರು ಎಲ್ಲ ರಂಗಗಳಲ್ಲೂ ಸಮಾನತೆಯನ್ನು ಕೇಳುವುದು ಎಂದಾದರೆ ಮೇಲ್ವರ್ಗದ ಅಹಂಗೆ ಬಾರಿ ಪೆಟ್ಟಲ್ಲವೇ? ಹೀಗೆ ಆಧುನೀಕರಣ ಮಾಡಿದ ಸಿಂಬಾಲಿಕ್ ಬದಲಾವಣೆಗಳು ಸ್ಥಳೀಯ ಮೇಲ್ವರ್ಗದ ಜನರ ಅಹಂಗೆ ದೊಡ್ಡ ಆಘಾತವನ್ನು ನೀಡಿದೆ.
ಈ ಸಿಂಬಾಲಿಕ್ ಬದಲಾವಣೆಗಿಂತ ಹೆಚ್ಚು ಮೇಲ್ಜಾತಿ ಜನರ ಸ್ಥಾನಮಾನವನ್ನು ಮೂಲಭೂತವಾಗಿ ಬದಲಿಸಿದ್ದು ಸಮಷ್ಟಿಯ ಸಂಪನ್ಮೂಲಗಳನ್ನು ಶತಮಾನಗಳಿಂದ ಕುಶಿ ಬಂದಂತೆ ಬಳಸುವ ಅವರ ಹಕ್ಕಿಗೆ ಬಂದ ವಿಪತ್ತು. ಜಲ ಸಂಪನ್ಮೂಲ, ಭೂಮಿ, ಅರಣ್ಯ ಸಂಪನ್ಮೂಲ, ಖನಿಜ ಸಂಪನ್ಮೂಲ ಇತ್ಯಾದಿಗಳ ಬಳಕೆ ತೀರ್ಮಾನದ ಹಕ್ಕನ್ನು ಮೇಲ್ಜಾತಿ ಜನರು ಶತಮಾನಗಳಿಂದ ಅನುಭವಿಸುತ್ತಾ ಬಂದಿದ್ದರು. ಮೇಲ್ಜಾತಿ ಜನರು ಬಳಸಿ ಉಳಿಸಿದ್ದನ್ನು ಕೆಳಜಾತಿ ಜನರಿಗೆ ವಿತರಿಸಲಾಗುತ್ತಿತ್ತು ಮತ್ತು ಅವರು (ಕೆಳಜಾತಿ ಜನರು) ತಮ್ಮ ಪಾಲಿಗೆ ಬಂದುದರಲ್ಲಿ ತೃಪ್ತರಾಗಬೇಕಿತ್ತು, ಹೆಚ್ಚು ಸಂಖ್ಯೆಯಲ್ಲಿರುವ ನಮಗ್ಯಾಕೆ ಕಡಿಮೆ? ಕಡಿಮೆ ಸಂಖ್ಯೆಯಲ್ಲಿರುವ ನಿಮಗ್ಯಾಕೆ ಹೆಚ್ಚು? ಎಂದು ಪ್ರಶ್ನಿಸುವ ಸ್ಥಿತಿ ಇರಲಿಲ್ಲ. ಹೀಗೆ ಸಮಷ್ಟಿಯ ಸಂಪನ್ಮೂಲ ವಿತರಣೆಯನ್ನು ತೀರ್ಮಾನಿಸುವ ಮೇಲ್ಜಾತಿ ಜನರ ಹಕ್ಕು ಸಾಂಪ್ರದಾಯಿಕ ಸಮಾಜದಲ್ಲಿ ಪ್ರಶ್ನಾತೀತವಾಗಿತ್ತು. ಆದರೆ ತಾಂತ್ರಿಕ ಆಧುನೀಕರಣದೊಂದಿಗೆ ಈ ಸ್ಥಿತಿ ಸಂಪೂರ್ಣವಾಗಿ ಬದಲಾಯಿತು. ಸಮಷ್ಟಿಯ ಸಂಪನ್ಮೂಲ (ಭೌತಿಕ ಹಾಗೂ ಸಾಂಸ್ಕೃತಿಕ ಸಂಪನ್ಮೂಲಗಳ) ವಿತರಣೆ ತೀರ್ಮಾನದಾರರು ಕೂಡ ಬದಲಾದರು. ಆಧುನೀಕರಣದೊಂದಿಗೆ ಸಮಷ್ಟಿಯ ಸಂಪನ್ಮೂಲ ವಿತರಣೆ ತೀರ್ಮಾನ ಆಧುನಿಕ ಸಂಸ್ಥೆಗಳಿಗೆ (ಸೊಸೈಟಿ, ಪಂಚಾಯತ್, ವಿಧಾನ ಸಭೆ, ಲೋಕ ಸಭೆ ಇತ್ಯಾದಿಗಳಿಗೆ) ವರ್ಗಾಯಿಸಲ್ಪಟ್ಟಿತು. ಈ ಆಧುನಿಕ ಸಂಸ್ಥೆಗಳ ಸದಸ್ಯತ್ವ ಹುಟ್ಟಿನಿಂದ ಬರುವುದಿಲ್ಲ; ಓಟಿನಿಂದ ಬರುವಂತಾಯಿತು. ಅತೀ ಹೆಚ್ಚು ಓಟು ಪಡೆದ ಯಾರು ಕೂಡ ಈ ಆಧುನಿಕ ಸಂಸ್ಥೆಗಳ ಸದಸ್ಯರಾಗಬಹುದು. ಕೆಳಜಾತಿ ಜನರು ಸಂಖ್ಯೆಯಲ್ಲಿ ಹೆಚ್ಚು ಇದ್ದುದರಿಂದ ಸಹಜವಾಗಿಯೇ ಅವರು ಹೆಚ್ಚು ಓಟು ಪಡೆಯುವುದು ಸುಲಭವಾಯಿತು. ಇದರಿಂದಾಗಿ ಹೆಚ್ಚು ಹೆಚ್ಚು ಕೆಳಜಾತಿ ಜನರು ಮೇಲಿನ ಸಂಸ್ಥೆಗಳಲ್ಲಿ (ಸೊಸೈಟಿ, ಪಂಚಾಯತ್, ವಿಧಾನ ಸಭೆ, ಲೋಕಸಭೆ ಇತ್ಯಾದಿಗಳಲ್ಲಿ) ಸದಸ್ಯರಾಗಲು ಸಾಧ್ಯವಾಯಿತು. ಈ ಬೆಳವಣಿಗೆಯಿಂದಾಗಿ ಸಮಷ್ಟಿಯ ಸಂಪನ್ಮೂಲಗಳ ವಿತರಣೆ ಮೇಲೆ ಮೇಲ್ಜಾತಿ ಜನರ ಹಿಡಿತ ಕಡಿಮೆ ಆಗುವುದರ ಜೊತೆಗೆ ಕೆಳಜಾತಿ ಜನರ ಹಿಡಿತ ಬಲಗೊಳ್ಳುತ್ತಾ ಬಂತು. ಈ ಎಲ್ಲ ಬದಲಾವಣೆಗಳು ಮೇಲ್ವರ್ಗದ ಜನರಿಗೆ ನುಂಗಲಾರದ ತುತ್ತಾಯಿತು. ಹಾಗೆಂದು ಈ ಎಲ್ಲ ಆಘಾತಗಳಿಂದ ಹೊರಬರಲು ಹಿಂದಿನ ರೀತಿಯಲ್ಲಿ ಕೆಳವರ್ಗದ ಜನರ ಮೇಲೆ ನೇರ ದಬ್ಬಾಳಿಕೆ ಅಥವಾ ಯಜಮಾನಿಕೆ ಸಾಧ್ಯವಾಗಿಲ್ಲವಾಗಿತ್ತು.
ಇಂತಹ ಸಂದಿಗ್ಧ ಪರಿಸ್ಥಿತಿಯಿಂದ ಹೊರಬರಲು ಮೇಲ್ವರ್ಗದ ಜನರು ಕಂಡುಕೊಂಡ ಸುಲಭ ದಾರಿಯೆಂದರೆ ಕೋಮುವಾದ. ಮತ್ತೊಂದು ಜಾತಿ ಅಥವಾ ಧರ್ಮದ (ಮುಸ್ಲಿಮರು) ಜನರನ್ನು ಖಳನಾಯಕರನ್ನಾಗಿ ಚಿತ್ರಿಸಿ ನಮ್ಮಲ್ಲೇ ಕುಂದು ಕೊರತೆಗಳಿಗೆ ಈ ಖಳನಾಯಕರೇ ಕಾರಣ ಎಂದು ಕೋಮುವಾದ ಹೇಳುತ್ತದೆ. ಮತ್ತು ಈ ಕೋಮುವಾದ ಕಟ್ಟಿಕೊಡುವ ಚಿತ್ರಣವನ್ನು ನಂಬುವಂತೆ ಮಾಡಲು ಹಲವು ಬಗೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಈ ಎಲ್ಲ ಕಾರ್ಯಕ್ರಮಗಳಲ್ಲೂ ಖಳನಾಯಕರಾಗಿ ಚಿತ್ರಿಸಲ್ಪಟ್ಟ ಸಮುದಾಯದ ಜನರ ಬದುಕು, ಆಚರಣೆಗಳು ಬಹುಸಂಖ್ಯಾತರ ಬದುಕು, ಆಚರಣೆಗಳಿಗೆ ಎಷ್ಟು ಭಿನ್ನ ಮಾತ್ರವಲ್ಲ ವಿರುದ್ಧ ಇವೆ ಎಂದು ಸಾಬೀತುಪಡಿಸಲಾಯಿತು. ಅಷ್ಟು ಮಾತ್ರವಲ್ಲ ಬಹುಸಂಖ್ಯಾತರ ಏಳಿಗೆಗೆ ಅಥವಾ ಅಭಿವೃದ್ಧಿಗೆ ಅಲ್ಪಸಂಖ್ಯಾತ ಕೋಮಿನ ನಾಶ ಎಷ್ಟು ಅಗತ್ಯ ಎಂದು ಸತತವಾಗಿ ಹೇಳಲಾಯಿತು. ಈ ಎಲ್ಲ ಅಂಶಗಳು ಕೋಮುವಾದವನ್ನು ನಂಬುವ ಜನರ ಅರಿವಿಗೆ ಬಾರದೆ ಅವರ ಪ್ರಜ್ಞೆಯ ಭಾಗವಾಗುತ್ತವೆ ಮತ್ತು ಕೋಮು ಗಲಭೆ ಸಂದರ್ಭದಲ್ಲಿ ಅವರೆಲ್ಲ ನೇರ (ಹೊಡೆತ ಬಡಿತ, ಕೊಲೆ ಸುಲಿಗೆಗಳಲ್ಲಿ ಭಾಗವಹಿಸುವುದು) ಮತ್ತು ಪರೋಕ್ಷವಾಗಿ (ಕೋಮುಗಲಭೆಗಳನ್ನು ಹಬ್ಬಿಸುವ ಮಾಹಿತಿಗಳಿಗೆ ವಾಹಕರಾಗುವುದು, ಗಲಭೆಗಳನ್ನು ವಿರೋಧಿಸದಿರುವುದು, ಗಲಭೆಗೆ ಗುರಿಯಾದವರಿಗೆ ರಕ್ಷಣೆ ನೀಡದಿರುವುದು)  ಕೋಮುಗಲಭೆಗಳಲ್ಲಿ ಭಾಗವಹಿಸುವಂತೆ ಮಾಡಿವೆ. ಈ ಬಗೆಯ ಕೋಮುವಾದದಿಂದ ಮೇಲ್ವರ್ಗಕ್ಕೆ ಎರಡು ಲಾಭ. ಒಂದು, ಅಲ್ಪಸ್ವಲ್ಪ ಬಲಗೊಳ್ಳುವ ಅಲ್ಪಸಂಖ್ಯಾತರನ್ನು ಹತೋಟಿಯಲ್ಲಿಟ್ಟುಕೊಳ್ಳುವುದು. ಎರಡು, ಕೆಳಜಾತಿ ಜನರು ಜಾತಿ ನೆಲೆಯಲ್ಲಿ ಒಗ್ಗೂಡಿಸಿದರೆ ಸಾಂಪ್ರದಾಯಿಕ ಯಜಮಾನಿಕೆ ವರ್ಗದ ಯಜಮಾನಿಕೆಗೆ ತೊಂದರೆ. ಕೆಳಜಾತಿ ಜನರನ್ನು ಧರ್ಮದ ನೆಲೆಯಲ್ಲಿ ಒಗ್ಗೂಡಿಸಿದರೆ ಸಾಂಪ್ರದಾಯಿಕ ಯಜಮಾನಿಕೆ ವರ್ಗದ ಆಸಕ್ತಿಗಳನ್ನು ಮುಂದುವರಿಸಲು ತೊಂದರೆಯಾಗುವುದಿಲ್ಲ. ಈ ಉದ್ದೇಶಗಳನ್ನು ಗಮನದಲ್ಲಿಟ್ಟುಕೊಂಡು ಸಾಂಪ್ರದಾಯಿಕ ಯಜಮಾನಿಕ ಜಾತಿಗಳು ಧರ್ಮದ ನೆಲೆಯಲ್ಲಿ ಕೆಳಜಾತಿ ಜನರನ್ನು ಒಗ್ಗೂಡಿಸುವುದು ಕೋಮುವಾದದ ಮತ್ತೊಂದು ಉದ್ದೇಶವಾಯಿತು. ಹೀಗೆ ಮಾಡುವುದರಿಂದ ತಮ್ಮದೇ ಕೋಮಿಗೆ ಸೇರಿದ ಆಧುನೀಕರಣದಿಂದ ಪ್ರಭಾವಿತಗೊಂಡು ಸಾಂಪ್ರದಾಯಿಕ ಸಮಾಜದ ಯಜಮಾನಿಕ ವರ್ಗದ ಮೌಲ್ಯಗಳನ್ನು ಪ್ರಶ್ನಿಸುವ ಕೆಳಜಾತಿ ಜನರನ್ನು ಅಲ್ಪಸಂಖ್ಯಾತ ಕೋಮಿನವರನ್ನು ಸದೆಬಡಿಯಲು ಪ್ರೇರೇಪಿಸಲಾಯಿತು. ಕೆಳಜಾತಿ/ವರ್ಗದ ಜನರು ತಮ್ಮ ಜಾತಿ/ವರ್ಗದ ನೆಲೆಯಲ್ಲಿ ಒಟ್ಟಾಗದಿರುವುದರಿಂದ ಸಮಷ್ಟಿಯ ಸಂಪನ್ಮೂಲ ವಿತರಿಸುವ ಸಂಸ್ಥೆಗಳಲ್ಲಿ ಸದಸ್ಯತ್ವ ಸಾಧ್ಯವಿಲ್ಲದಾಯಿತು. ಇದೇ ಸಂದರ್ಭದಲ್ಲಿ ಹಿಂದುಗಳು ನಾವೆಲ್ಲ ಒಂದೇ ಎಂದು ಹೇಳುತ್ತಾ  ಹಿಂದುಗಳಲ್ಲಿನ ಮೇಲ್ ಜಾತಿಗಳು ಮೇಲಿನ ಎಲ್ಲ ಸಂಸ್ಥೆಗಳಲ್ಲಿ ತಮ್ಮ ಸ್ಥಾನ ಭದ್ರಪಡಿಸಲು ಕೋಮುವಾದ ಸಹಕರಿಸುತ್ತಿದೆ.
____
(ಈ ಲೇಖನವು ಪೋರ್ಮ್‌‌ಡ್/ಕನ್‌ಸ್ಟ್ರಟೆಡ್ ಕಮ್ಯುನಿಟೀಸ್ ಆಂಡ್ ಕಮ್ಯುನಲಿಸಂ ಎ ಸ್ಟಡಿ ಆಫ್ ಗ್ರೋತ್ ಆಫ್ ಕಮ್ಯುನಲಿಸಂ ಇನ್ ಕೋಸ್ಟಲ್ ಕರ್ನಾಟಕ ಎನ್ನುವ ಎಂಚಂದ್ರ ಪೂಜಾರಿಯವರ ಇಂಗ್ಲೀಷ್ ಲೇಖನದ ಭಾಷಾಂತರಅನುವಾದಿತ ಲೇಖನವನ್ನು ಈಗಿನ ಸಂದರ್ಭಕ್ಕೆ ಹೊಂದಾಣಿಕೆ ಮಾಡುವ ಪ್ರಯತ್ನದಲ್ಲಿ ಲೇಖನ ಅದರ ಮೂಲ ರೂಪದಲ್ಲಿ ಉಳಿದಿಲ್ಲಪ್ರತ್ಯೇಕ ಲೇಖನವಾಗಿದೆಅನುವಾದಿಸಲು ಸಹಕರಿಸಿದ ಡಾನಿತ್ಯಾನಂದ ಶೆಟ್ಟಿಯವರನ್ನು ಸಹಲೇಖಕರೆಂದು ಗುರುತಿಸಿದ್ದಾರೆ.)

[1]ಹಾಗೆಂದು ಆ ಸಮುದಾಯಗಳು ತಮ್ಮ ಕಸುಬನ್ನು ಬಿಟ್ಟು ಬದುಕಲು ಸಾಧ್ಯವಿರಲಿಲ್ಲ. ಜತೆಗೆ ತಮ್ಮ ಉತ್ಪಾದನೆಗೆ ಸಾಕಷ್ಟು ಬೇಡಿಕೆ ಇದ್ದುದರಿಂದ (ಶೇಂದಿ ಕುಡಿಯುವವರು ಮತ್ತು ಮೀನು ತಿನ್ನುವವರು ಇದ್ದುದರಿಂದ) ಸಾಂಪ್ರದಾಯಿಕ ವೃತ್ತಿಗಳನ್ನು ಮಾಡಿ ತಮ್ಮ ಜೀವನಾಂಶ ಭರಿಸಿಕೊಳ್ಳುತ್ತಿದ್ದರು.
[2]ಆಧುನೀಕರಣದ ಆರಂಭದ ದಿನಗಳಲ್ಲೇ ತಾಂತ್ರಿಕ ಶಿಕ್ಷಣ ನೀಡುವ ಸಂಸ್ಥೆಗಳನ್ನು ಆರಂಭಿಸಿದ ಜಿಲ್ಲೆಗಳಲ್ಲಿ ದಕ್ಷಿಣ ಕನ್ನಡ ಕೂಡ ಒಂದು. ಮೆಡಿಕಲ್, ಎಂಜಿನಿಯರಿಂಗ್ ಕಾಲೇಜುಗಳು ತುಂಬಾ ಹಿಂದಿನಿಂದಲೇ ಇದ್ದವು. ಇತ್ತೀಚಿನವರೆಗೆ ಜಿಲ್ಲೆಯ ತಳಸಮುದಾಯಗಳ ಬೆರಳೆಣಿಕೆಯಷ್ಟು ಮಂದಿಗೆ ಈ ವಿದ್ಯಾಲಯಗಳಲ್ಲಿ ಓದಲು ಅವಕಾಶ ದೊರೆಯಲಿಲ್ಲ. ಅದಕ್ಕೆ ಬಹುಮುಖ್ಯ ಕಾರಣ ಈ ಸಂಸ್ಥೆಗಳು ಕೇಳುತ್ತಿದ್ದ ಕ್ಯಾಪಿಟೇಶನ್. ಕೆಲವು ಲಕ್ಷಗಳಲ್ಲಿ ಇದ್ದ ಕ್ಯಾಪಿಟೇಶನ್ ಕೊಟ್ಟು ಓದಿಸುವಷ್ಟು ಶಕ್ತಿ ಮೂರು ಹೊತ್ತಿನ ಊಟಕ್ಕೆ ಪರದಾಡುತ್ತಿದ್ದ ತಳಸಮುದಾಯಗಳಿಗೆ ಇರಲಿಲ್ಲ. ಆದುದರಿಂದ ಹೊರಗಿನ ಅನುಕೂಲಸ್ಥರೊಂದಿಗೆ ಸ್ಥಳೀಯ ಅನುಕೂಲಸ್ಥರು ಮಾತ್ರ ಈ ಸಂಸ್ಥೆಗಳ ಲಾಭ ಪಡೆಯಲು ಸಾಧ್ಯವಾಯಿತು.
[3]ಎಂ. ಚಂದ್ರ ಪೂಜಾರಿ, ಟ್ರೆಂಡ್ಸ್ ಇನ್ ಎಂಟರ್‌ಪ್ರನರ್‌ಶಿಪ್‌ ಆಂಡ್ ರೀಜನಲ್ ಡೆವಲಪ್‌ಮೆಂಟ್- ಎ ಸ್ಟಡಿ ವಿದ್‌ ಸ್ಪೇಷಲ್ ರೆಫರೆನ್ಸ್‌ ಟು ದಕ್ಷಿಣ ಕನ್ನಡ ಡಿಸ್ಟ್ರಿಕ್ಟ್, ಮಂಗಳೂರು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ಅಪ್ರಕಟಿತ ಪಿಹೆಚ್.ಡಿ. ಮಹಾಪ್ರಬಂಧ, ೧೯೯೫.
[4]ಮರ ಹತ್ತುವ (ಸ್ಕಿಲ್ ಇದ್ದವರು) ಕಲೆ ಗೊತ್ತಿರುವ ಯಾರು ಕೂಡ ಶೇಂದಿ ತೆಗೆಯಬಹುದು. ಹರಿತವಾದ ಕತ್ತಿ (ಇದನ್ನು ತುಳುವಿನಲ್ಲಿ ತಾರ್ಕತ್ತಿ ಎನ್ನುತ್ತಾರೆ). ಮರ ಹತ್ತಲು ಬಿದಿರಿನ ಏಣಿ (ಇದನ್ನು ತುಳುವಿನಲ್ಲಿ ಕೇರ್ಪು ಎನ್ನುತ್ತಾರೆ) ಮತ್ತು ಶೇಂದಿ ಶೇಖರಿಸಲು ಕೆಲವು ಮಡಿಕೆಗಳು ಶೇಂದಿ ತೆಗೆಯುವ ಕೆಲಸಕ್ಕೆ ಬೇಕಾದ ತಯಾರಿ. ಈ ಎಲ್ಲದಕ್ಕೆ ಈಗ ಹೆಚ್ಚೆಂದರೆ ಕೆಲವು ನೂರು ರೂಪಾಯಿಗಳು ಸಾಕು. ತೆಗೆದ ಶೇಂದಿಯನ್ನು ಮಾರಲು ರಸ್ತೆ ಬದಿಯೇ ಆಗಬೇಕೆಂದಿಲ್ಲ. ಸುಸಜ್ಜಿತ ಕಟ್ಟಡ ಬೇಕೆಂದಿಲ್ಲ. ಕುರ್ಚಿ ಮೇಜುಗಳ ಅವಶ್ಯಕತೆಯಿಲ್ಲ, ದುಬಾರಿ ಗ್ಲಾಸುಗಳು ಬೇಕಿಲ್ಲ. ಶೇಂದಿ ಮರದ ಬುಡದಲ್ಲಿ ಮಣ್ಣಿನ ಮಡಿಕೆಯಲ್ಲಿ ಕುಡಿಯುವ ಗ್ರಾಹಕರು ಎಲ್ಲ ಕಡೆ ಇದ್ದಾರೆ.
[5]ಬೆಸ್ತರು ಅಥವಾ ಬಿಲ್ಲವರು ತಮ್ಮ ಸಾಂಪ್ರದಾಯಕ ಕಸುಬಿಗೆ ಅಂಟಿಕೊಳ್ಳಬೇಕೆನ್ನುವ ವಾದ ಇದಲ್ಲ. ಖಂಡಿತವಾಗಿಯೂ ಅವರು ಕೂಡ ಡಾಕ್ಟರು, ಎಂಜಿನೀಯರ್, ಕಂಪ್ಯೂಟರ್ ಸೈಂಟಿಸ್ಟ್‌ಗಳು ಆಗಬೇಕು. ಆದರೆ ಬಹುತೇಕ ಬಿಲ್ಲವರ ಅಥವಾ ಬೆಸ್ತರ ಅಥವಾ ತಳಸ್ತರದ ಸಮುದಾಯಗಳ ಜನರಿಗೆ ಡಾಕ್ಟರ್, ಎಂಜಿನಿಯರ್ ಆಗುವುದು ಬಿಡಿ ಅವರ ಆರ್ಥಿಕ ಹಿನ್ನೆಲೆಯಿಂದ ಬಿಎ, ಬಿಕಾಂ ಓದುವುದೇ ಕಷ್ಟವಾಗಿದೆ. ಬಿಎ ಬಿಕಾಂ ಓದಿದವರಿಗೆ ಉದ್ಯೋಗದ ಮಾರುಕಟ್ಟೆಯಲ್ಲಿ ಯಾವ ಅವಕಾಶ ಕಾದಿದೆ ಎಂದು ನಮಗೆಲ್ಲ ತಿಳಿದಿದೆ. ಇದನ್ನು ಸರಕಾರಿ ಕೆಲಸ ಸಿಗಬೇಕಾದರೆ ಯೋಗ್ಯತೆಗಿಂತ ಹೆಚ್ಚು ದುಡ್ಡು ಮತ್ತು ಪ್ರಭಾವದ ಅಗತ್ಯ ಇದೆ ಎಂದು ಎಲ್ಲರಿಗೂ ತಿಳಿದ ವಿಷಯ.
[6]ಹೆಚ್ಚಿನ ವಿವರಗಳಿಗೆ ಎಂ. ಚಂದ್ರಪೂಜಾರಿಯವರ, ಜನಾಯೋಜನೆ ಹೈದರಾಬಾದ್ ಕರ್ನಾಟಕದ ಅನುಭವಗಳು, (ವಿದ್ಯಾರಣ್ಯ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ-ಹಂಪಿ, ೨೦೦೪) ಪುಸ್ತಕ ನೋಡಬಹುದು.
[7]ಜಿಲ್ಲೆಯ ಬಹುತೇಕ ಕಡೆ ಇಂದು ಕೂಡ ಸೊಸೈಟಿಗಳು ಸಮಾಜದ ಮೇಲ್ವರ್ಗದ ಹಿಡಿತದಲ್ಲಿವೆ. ಇವರಿಗೆ ತಮ್ಮ ಸೊಸೈಟಿಗಳು ವ್ಯವಸ್ಥಿತವಾಗಿ ನಡೆಯುತ್ತಿವೆ ಎಂದು ಹೊರಗಿನ ಪ್ರಪಂಚಕ್ಕೆ ತೋರಿಸುವುದು ಮುಖ್ಯ. ಇದಕ್ಕಾಗಿ ಪ್ರತಿ ವರ್ಷ ಸಾಲ ಕಟ್ಟಲಾಗದ ರೈತರನ್ನು ಪುಸಲಾಯಿಸಿಯೋ ಅಥವಾ ಒತ್ತಡದಿಂದಲೋ ಹೊಸ ಸಾಲ ಮಾಡಿ ಹಳೇ ಸಾಲವನ್ನು ತೀರಿಸಲು ಒಪ್ಪಿಸುತ್ತಾರೆ.
[8]ಲಿಖಿತ ಸಂವಿಧಾನವನ್ನು ಲೋಕಸಭೆ ಸ್ವೀಕರಿಸಿದ ನಂತರ ಕಾನೂನು ಪ್ರಕಾರ ಜಾತಿ, ಧರ್ಮ, ಲಿಂಗ, ಇತ್ಯಾದಿ ನೆಲೆಗಳಲ್ಲಿ ಸಾರ್ವಜನಿಕವಾಗಿ ಅಸಮಾನತೆ ಆಚರಿಸುವುದು ಕಾನೂನು ಬಾಹಿರ. ಜಾತಿ, ಧರ್ಮ, ಲಿಂಗ ಇತ್ಯಾದಿಗಳ ನೆಲೆಯಲ್ಲಿ ನಡೆಯುವ ಅಸಮಾನತೆಯನ್ನು ತಡೆಗಟ್ಟಲು ಅಸ್ಪೃಶ್ಯತೆ ನಿವಾರಣೆ ಕಾಯಿದೆ, ವರದಕ್ಷಿಣೆ ತಡೆ ಕಾಯಿದೆ, ಮಹಿಳೆಯರಿಗೆ ಆಸ್ತಿಯಲ್ಲಿ ಸಮಪಾಲು, ಕೌಟುಂಬಿಕ ದೌರ್ಜನ್ಯಗಳನ್ನು ತಡೆಯುವ ಕಾಯಿದೆ ಇತ್ಯಾದಿಗಳು ಜಾರಿಗೆ ಬಂದಿವೆ.


ಕಾಮೆಂಟ್‌ಗಳಿಲ್ಲ: