ಶುಕ್ರವಾರ, ಡಿಸೆಂಬರ್ 25, 2015

ಭಗವದ್ಗೀತೆಗೆ ಆಪರೇಷನ್ ಅಗತ್ಯವಿದೆಯೇ?

- ಸಿ.ಎಸ್.ದ್ವಾರಕಾನಾಥ್
ಈಚೆಗೆ ಮಂಗಳೂರಿನಲ್ಲಿ ನಡೆದ 'ಜನನುಡಿ' ಕಾರ್ಯಕ್ರಮದಲ್ಲಿ ದೇವನೂರು ಮಹದೇವರವರು ಮಾತನಾಡುತ್ತಾ "...ನಾನಿವತ್ತು ಭಗವತ್‍ಗೀತೆಯಲ್ಲಿನ ತಾರತಮ್ಯದ ರೋಗದ ಗಡ್ಡೆಗಳನ್ನು ಆಪರೇಷನ್ ಮಾಡಿ ಬಿಸಾಕಿ ಗೀತೆಯನ್ನು ಉಳಿಸಿಕೊಳ್ಳಬೇಕಿದೆ.." ಎಂದು ಮಾತನಾಡುತ್ತಾ ಕುವೆಂಪು ದರ್ಶನದ ಪ್ರತಿಮಾ ದೃಷ್ಟಿ ಪಡೆಯಬೇಕು ಎಂದು ಹೇಳುತ್ತಾ ಮುಂದುವರೆದು. "...ಪುರಾಣ ಕಾವ್ಯ ಹಿಡಿದುಕೊಂಡು ಗಾಂಧೀಜಿ ಬಳಿ ಹೋದರೆ ಪ್ರಾರ್ಥನೆ, ಭಜನೆ ಮಾಡುತ್ತಾರೆ, ಅಂಬೇಡ್ಕರ್ ವಾಸ್ತವ ಎಂಬಂತೆ ಮುರಿದು ವಿಶ್ಲೇಷಿಸುತ್ತಾರೆ, ಪೆರಿಯಾರ್ ಮುರಿದು ಎಸೆಯುತ್ತಾರೆ, ಕಾರ್ಲ್ ಮಾಕ್ರ್ಸ್ 'ಧರ್ಮದ ಜತೆ ಬೆರೆತ ಕಾವ್ಯ ಅಫೀಮು' ಎಂದು ಕಡೆಗಣಿಸುತ್ತಾರೆ. ಈ ಗುಂಪಲ್ಲಿ ಲೋಹಿಯಾರಿಗೆ ಮಾತ್ರ ಪುರಾಣ ಕಾವ್ಯ ಕಾಣುವ ಕಣ್ಣಿದೆ, ಕುವೆಂಪು ಅವರಂತೂ ಸಾಂಸ್ಕøತಿಕ ವಿವೇಕ ಅನ್ನಿಸಿಬಿಡುತ್ತಾರೆ..." ಎಂದು ವಿಶ್ಲೇಷಿಸುತ್ತಾರೆ!

ದೇವನೂರು ಮಹದೇವ ಅಂದರೆ ಈ ನಾಡಿನ 'ಸಾಕ್ಷಿಪ್ರಜ್ಞೆ' ಇವರು ಯಾವುದನ್ನೂ ಆಳವಾಗಿ ಯೋಚಿಸದೆ ಮಾತಾಡುವುದಿಲ್ಲ, ಬರೆಯುವುದಿಲ್ಲ, ಅಷ್ಟೇ ಏಕೆ ಅವರು ಭಾಷಣಕ್ಕೆ ಒಪ್ಪಿಕೊಳ್ಳುವುದೇ ಕಷ್ಟ ಆದರೆ ಒಮ್ಮೆ ಒಪ್ಪಿಕೊಂಡರೆ ಹೆಚ್ಚು ಮಾತಾಡದೆ ಕನಿಷ್ಟ ಐದು ನಿಮಿಷ ಮಾತನಾಡಲು ಒಂದು ವಾರ ತಾಲೀಮು ನಡೆಸುವಂತಿರುತ್ತಾರೆ, ಪ್ರತಿ ಅಕ್ಷರವನ್ನು, ಪ್ರತಿ ಶಬ್ದವನ್ನು ತೂಗಿ ಅಳೆದು ಮಾತನಾಡುತ್ತಾರೆ, ಅಂದರೆ ಅದರ ಅರ್ಥ ಮಾತು ಎಂದರೆ ಉಢಾಪೆಯಾಗಬಾರದು, ಲಘುವಾಗಬಾರದು ಎಂಬ ಕಾರಣಕ್ಕೆ ಅಷ್ಟೊಂದು ಎಚ್ಚರವಹಿಸುವರು. ಮಹದೇವ ಅವರು ಮಾತನಾಡಿದರೆ ಬಸವಣ್ಣನವರ ವಚನದ ಮುತ್ತಿನ ಹಾರದಂತಿರುತ್ತದೆ... ಮಹದೇವ ಮಾತನಾಡಿದರೆ ಸಾಕ್ಷಾತ್ ಮಲೆಮಹದೇಶ್ವರನೇ ಮಾತನಾಡಿದನೇನೋ ಎನ್ನುವಂತೆ ಈ ನಾಡು ಅವರತ್ತ ಕೇಳಿಸಿಕೊಳ್ಳುತ್ತದೆ.

ಭಗವತ್ಗೀತೆಯ ಬಗ್ಗೆ ಕೆಲವಾರು ತಿಂಗಳ ಹಿಂದೆ ಸಾಕಷ್ಟು ಚರ್ಚೆ, ಪ್ರತಿಭಟನೆ, ವಾದ, ವಿವಾದ ಎಲ್ಲವೂ ಆಗಿ, ತಣ್ಣಗಾಗಿದ್ದು ಆಯಿತು ಭಗವತ್ಗೀತೆ ಅಂದೂ Issue ಆಗಿರಲಿಲ್ಲ, ಇಂದು Issue ಅಲ್ಲ, ಅಂದರೆ ಜ್ವಲಂತ ಸಮಸ್ಯೆಯಲ್ಲ. ಈ ಸನ್ನಿವೇಶದಲ್ಲಿ ಮತ್ತೆ ಮಹದೇವರವರು ಭಗವತ್ಗೀತೆಯನ್ನು ತಂದು ಆಪರೇಷನ್ ಮಾಡಬೇಕೆನ್ನುತ್ತಾರೆ ಎಂಬುದು ನನ್ನಂತವರಿಗೆ ಗೊಂದಲಕ್ಕೀಡುಮಾಡಿದೆ! ಅದರಲ್ಲೂ ಗೊಳ್ವಾಲ್ಕರ್ ಕೈಯಲ್ಲೂ ಭಗವತ್ಗೀತೆಯಿದೆ, ಮಹಾತ್ಮ ಗಾಂಧೀಜಿಯವರ ಕೈಯಲ್ಲೂ ಭಗವತ್ಗೀತೆಯಿದೆ ದೇವನೂರರು ಇದರಲ್ಲಿ ಯಾವ ಭಗವತ್ಗೀತೆಗೆ ಶಸ್ತ್ರಕ್ರಿಯೆ ನಡಿಸಿ, ಯಾವ ಭಗವತ್ಗೀತೆಯ ರೋಗದ ಗಡ್ಡೆಗಳನ್ನು ಕತ್ತರಿಸಿ ಎಸೆದು, ಯಾವ ಭಗವತ್ಗೀತೆಯನ್ನು ಉಳಿಸಿಕೊಳ್ಳುತ್ತಾರೆ? ಎನ್ನುವುದು ಪ್ರಶ್ನೆ.

ಬಾಬಾಸಾಹೇಬ ಡಾ.ಅಂಬೇಡ್ಕರ್ ಅವರಂತೂ ತಮ್ಮ Revolution and Counter Revolution in Ancient India ಎಂಬ ಕೃತಿಯಲ್ಲಿ ದೇವನೂರರು ಹೇಳುವಂತೆ ಭಗವತ್ಗೀತೆಯನ್ನು ಕೇವಲ ಮುರಿದು ವಿಶ್ಲೇಷಿಸುವುದು ಮಾತ್ರವಲ್ಲ, ಅದರ ಅಂತಿಮ ತೀರ್ಪನ್ನು ಕೂಡ ನೀಡುತ್ತಾ ಅದು Gospel Truth ಅಲ್ಲ ಎಂದು ತಣ್ಣಗೆ ನಿರಾಕರಿಸಿಬಿಡುತ್ತಾರೆ.

ಅಂಬೇಡ್ಕರ್‍ರವರ ವಿಸ್ತೃತ ವಿಶ್ಲೇಷಣೆಯ ಹಿನ್ನೆಲೆಯಲ್ಲಿ ನೋಡಿದರೆ ಪೆರಿಯಾರ್ ಮುರಿದು ಎಸೆಯುವುದು ಕೂಡ ಅಕ್ಷರಶಃ ನಿಜ, ಕಾರ್ಲ್ ಮಾರ್ಕ್ಸ 'ಧರ್ಮದ ಜತೆ ಬೆರೆತ ಕಾವ್ಯ ಅಫೀಮು' ಎನ್ನುವುದೂ ಅಷ್ಟೇ ಸತ್ಯ. ಇನ್ನು ಗಾಂಧೀಜಿ ಅದನ್ನು ಭಜನೆ ಮಾಡಿದ್ದನ್ನು ಈ ದೇಶ ಈಗಾಗಲೇ ಕಂಡಿದೆ, ಇನ್ನು ಪುರಾಣ ಕಾವ್ಯ ಕಾಣುವ ಕಣ್ಣನ್ನು ದೇವನೂರರಲ್ಲಿರುವ ಲೋಹಿಯಾ ಮಾತ್ರ ಕಾಣಲು ಸಾಧ್ಯ, ಕುವೆಂಪು ಇದನ್ನು ಸಾಂಸ್ಕೃತಿಕ ವಿವೇಕ ಎಂದು ಸ್ವೀಕರಿಸುವ ಬಗ್ಗೆ ನಮ್ಮದೇ ಅನುಮಾನಗಳಿವೆ. ಇಷ್ಟಕ್ಕೂ ಇಷ್ಟೆಲ್ಲಾ ಗೊಂದಲಗೊಳಿಸಿದ ಭಗವತ್ಗೀ‍ತೆಯನ್ನು ಆರೋಗ್ಯಗೊಳಿಸಿ ಉಳಿಸಿಕೊಳ್ಳುವ ಜರೂರು ಯಾರಿಗಿದೆ? ಅರ್ಥವಾಗುತ್ತಿಲ್ಲ. ಹುಲುಮಾನವರಿಗಂತೂ ಇದ್ದಂತೆ ತೋರುತ್ತಿಲ್ಲ...

ಜನನುಡಿ ನಡೆದದ್ದು ಕೋಮುದಳ್ಳುರಿಯ ಮೇಲೆ ನಿಂತ ಮಂಗಳೂರಿನಲ್ಲಿ, ಅದನ್ನು ಸಂಘಟಿಸಿದ ಹುಡುಗರು ಪ್ರಗತಿಪರ, ಮಾನವೀಯ ಮೌಲ್ಯಗಳಲ್ಲಿ ನಂಬಿಕೆ ಇಟ್ಟವರು, ಅವರ ಉದ್ದೇಶ ಇದ್ದದ್ದು ಕೋಮುವಾದದ ವಿರುದ್ಧ ಜನಾಭಿಪ್ರಾಯ ಮೂಡಿಸುವುದು, ಕೋಮು ಸೌಹಾರ್ಧತೆಯ ವಾತಾವರಣವನ್ನು ಸೃಷ್ಟಿಸುವುದಾಗಿತ್ತು, ಇಂತಹ ಕಾರ್ಯಕ್ರಮವನ್ನು ಉಧ್ಘಾಟಿಸಲು ಹೊರಟ ದೇವನೂರು ಅಲ್ಲಿರುವ ಜ್ವಲಂತ ಸಮಸ್ಯೆಯ ಬಗ್ಗೆ ಮಾತನಾಡುತ್ತಾರೆಂದು ಎಲ್ಲರೂ ನಿರೀಕ್ಷಿಸಿದ್ದರು. ಅಂದರೆ ಅವರು Issue ಬಗ್ಗೆ ಮಾತನಾಡುತ್ತಾರೆ ಎಂಬುದು, ಇಲ್ಲಿ ಭಗವತ್ಗೀತೆ Non-Issue.

ಒಂದು ಕಾಲದಲ್ಲಿ ಕಾಂಗ್ರೆಸ್‍ಮಯವಾಗಿದ್ದ ದಕ್ಷಿಣಕನ್ನಡ ಜಿಲ್ಲೆ ಕ್ರಮೇಣ ದಟ್ಟ ಕೋಮುವಾದಕ್ಕೇ ತಿರುಗಿದ್ದು ನಮ್ಮ ಕಣ್ಣಮುಂದಿದೆ. ಜಾತ್ಯಾತೀತ, ಮತಾತೀತ ಕಾಂಗ್ರೆಸ್ ನಾಯಕರ್ಯಾರೂ ಇದಕ್ಕೆ ಮುಖಾಮುಖಿಯಾಗಲಿಲ್ಲ, ಈ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಲಿಲ್ಲ, ಬದಲಾಗಿ ದಕ್ಷಿಣಕನ್ನಡ ಜಿಲ್ಲೆಯನ್ನೇ ತೊರೆದು ಪಲಾಯನವಾಗಿಬಿಟ್ಟರು! ಹಾಗೆ ಪಲಾಯನವಾದವರು ಕಾಂಗ್ರೆಸ್‍ನಲ್ಲಿ 'ರಾಷ್ಟ್ರನಾಯಕ'ರಾಗಿಬಿಟ್ಟರು!! ಜನಾರ್ಧನ ಪೂಜಾರಿಯಂತವರನ್ನು ಹೊರತುಪಡಿಸಿದರೆ ಮಿಕ್ಕಂತೆ ವೀರಪ್ಪಮೊಯ್ಲಿ, ಮಾರ್ಗರೆಟ್ ಆಳ್ವ, ಆಸ್ಕರ್ ಪರ್ನಾಂಡಿಸ್ ರಿಂದ ಹಿಡಿದು ಬಿ.ಕೆ.ಹರಿಪ್ರಸಾದ್‍ವರೆಗೆ ಯಾರೂ ಸೀನಿಯರ್ ಕಾಂಗ್ರೆಸ್ ನಾಯಕರು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೋಮುವಾದವನ್ನು ದಿಕ್ಕರಿಸಿ ನಿಲ್ಲಲೇಯಿಲ್ಲ.

ಈಗ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಒಂದಷ್ಟು ಹೊಸ ತಲೆಮಾರಿನಿಂದಾಗಿ ಅಥವಾ ಸಂಘಪರಿವಾರದ ಅಕ್ರಮಗಳಿಂದಾಗಿ ಕಾಂಗ್ರೆಸ್ ಮತ್ತೆ ತಲೆಎತ್ತಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಮೂರು ಜನ ಮಂತ್ರಿಗಳಿದ್ದಾರೆ, ಕಾಂಗ್ರೆಸ್ ಸರ್ಕಾರವೇ ಆಳ್ವಿಕೆಯಲ್ಲಿದೆ ಆದರೆ ಇಲ್ಲಿ ಮತೀಯವಾದಿಗಳ ಮೇಲುಗೈ ಮಾತ್ರ ಹಾಗೆಯೇ ಮುಂದುವರೆದಿದೆ. ಕೊಬ್ರಾಪೋಸ್ಟ್ ನಂತಹ ಹಲವಾರು ಸಮೀಕ್ಷಕರು ಇಲ್ಲಿ ಸಮೀಕ್ಷೆ ಮಾಡಿ ಇಲ್ಲಿನ ಪೊಲೀಸ್ ವ್ಯವಸ್ಥೆಯಲ್ಲಿ ಶೇ.60 ಮತೀಯವಾದಿಗಳಿದ್ದಾರೆಂದು ಹೇಳಿದೆ ಆದರೆ ಇದನ್ನು ಸರಿಪಡಿಸಲು ಇನ್ನೂ ಈ 'ಜಾತ್ಯಾತೀತ' ಕಾಂಗ್ರೆಸ್ ಸರ್ಕಾರಕ್ಕೆ ಸಾಧ್ಯವಾಗಿಲ್ಲ?
ಕೋಮುಶಕ್ತಿಗಳನ್ನು ಹಿಮ್ಮೆಟ್ಟಿಸಬೇಕು ಎಂದೇ ದೇವನೂರು ಮಹದೇವರಂತಹ ಅನೇಕ ಪ್ರಜ್ಞಾವಂತರು ಕಾಂಗ್ರೆಸ್ಸಿಗೆ ಬೆಂಬಲಿಸಿದರು. ಕಾಂಗ್ರೆಸ್ ಕೂಡ ಇದರ ಫಲಾಫಲವನ್ನು ಸಮರ್ಪಕವಾಗಿ ಪಡೆದುಕೊಂಡಿತು.

ಹಿಂದೆ ಲಂಕೇಶರು ತಮ್ಮ ಪತ್ರಿಕೆಯಲ್ಲಿ ಕೆಟ್ಟ ಸರ್ಕಾರದ ವಿರುದ್ಧ ಬರೆಯುತ್ತಾ ಉತ್ತಮ ಸರ್ಕಾರ ತರಲು ಪ್ರಯತ್ನಿಸುತ್ತಿದ್ದರು. ಮತ್ತೊಂದು ಹೊಸ ಸರ್ಕಾರ ಬಂದ ಮೇಲೆ ಆ ಸರ್ಕಾರಕ್ಕೆ Critical Support ನೀಡುತ್ತಾ ಟೀಕಿಸುತ್ತಲೇ ಆ ಸರ್ಕಾರವನ್ನು ಸರಿಪಡಿಸಲು ಪ್ರಯತ್ನಿಸುತ್ತಿದ್ದರು. ಆದರೆ ಈಗಿನ ಪ್ರಜ್ಞಾವಂತರು ಹೊಸ ಸರ್ಕಾರ ಬರಲು ಕಾರಣರಾಗಿ ಸರ್ಕಾರ ಬಂದು ಮೂವತ್ತು ತಿಂಗಳಾದ ಮೇಲೂ ತೂಕಡಿಸುತಿದ್ದರೂ ಬೇಷರತ್ ಬೆಂಬಲ ನೀಡುತ್ತಲೇ ಇದ್ದಾರೆ! ದುರಂತವೆಂದರೆ ಪ್ರಗತಿಪರರು, ಪ್ರಜ್ಞಾವಂತರು ಎನಿಸಿಕೊಂಡ ಕಮ್ಯುನಿಸ್ಟರು, ಸಮಾಜವಾದಿಗಳು, ದಲಿತ ಹೋರಾಟಗಾರರು, ರೈತ ಹೋರಾಟಗಾರರು ಎಲ್ಲರೂ ಕೂಡಿಯೇ ಸರ್ಕಾರದೊಂದಿಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಪಾಲ್ಗೊಳುತ್ತಲೇ ಈ ಸರ್ಕಾರದ ತಪ್ಪುಗಳಿಗೆ ಜಾಣಮೌನ ತೋರುತ್ತಾ ಕೇಂದ್ರದ ಬಿಜೆಪಿ ಸರ್ಕಾರವನ್ನು ಟೀಕಿಸುವುದು ಯಾವ ನೈತಿಕತೆಯಿಂದ?

ದೇವನೂರರು ಮಾತನಾಡಿದರೆ ಒಂದು ಸೂಚನೆಕೊಟ್ಟರೆ ಇಡೀ ಸರ್ಕಾರವೇ ತಲೆಭಾಗಿ ಕೇಳಿಸಿಕೊಳ್ಳುತ್ತದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮತೀಯವಾದದಂತಹ ಗಾಡ ಸಮಸ್ಯೆಯೊಂದಿಗೆ ಇಲ್ಲಿನ ಕೊರಗರ, ಮಲೆಕುಡಿಯರ, ಮುಖ್ರಿಯರ, ಮನ್ಸರ, ಬಿಲ್ಲವರ, ಬೆಸ್ತರ ಅನೇಕಾನೇಕ ಸಮಸ್ಯೆಗಳಿವೆ, ಇವನೆಲ್ಲಾ ಮತೀಯವಾದ ತನ್ನ ಕೇಸರಿ ಜಂಡಾದಲ್ಲಿ ಸುತ್ತಿ ಕಟ್ಟಿಟ್ಟಿದೆ. ಇದನ್ನು ಬಿಡುಗಡೆಗೊಳಿಸುವ, ಕೈಯಲ್ಲಿರುವ ಸರ್ಕಾರದ ಅಧಿಕಾರವನ್ನು ಚಲಾಯಿಸುವ ಮಾತುಗಳನ್ನು ಆಡಬೇಕಿತ್ತು ಎಂಬುದು ಎಲ್ಲರ ಆಶಯವಾಗಿತ್ತು.

ಇಂದು ನಮಗೆ ಸಂವಿಧಾನವಿದೆ, ಇದರಲ್ಲಿ ಸಮಾನತೆ, ಸಹೋದರತ್ವ, ಸಹಬಾಳ್ವೆ ಎಲ್ಲವೂ ಇದೆ. ಇದನ್ನು ಜಾರಿಗೊಳಿಸಲು ಸರ್ಕಾರ ಬದ್ದತೆ ತೋರಬೇಕು, ಇದನ್ನು ಗಟ್ಟಿಯಾಗಿ ಸರ್ಕಾರಕ್ಕೆ ಹೇಳುವ ಛಾತಿ ದೇವನೂರುರಂತವರಿಗೆ ಮಾತ್ರ ಸಾಧ್ಯ.

ಭಗವತ್ಗೀತೆಯನ್ನು ಉಳಿಸಿಕೊಳ್ಳುವ ಮಾತು ದೇವನೂರರ ಪ್ರಕಾರ ಸಾಂಸ್ಕೃತಿಕ ವಿವೇಕವಿರಬಹುದು. ಇದು ಎಂದಾದರು ಜನಸಾಮಾನ್ಯರ ಸ್ವತ್ತಾಗಿದ್ದರೆ, ಒಡವೆಯಾಗಿದ್ದರೆ ಅದನ್ನು ಉಳಿಸಿಕೊಳ್ಳುವಂತ ಮಾತನ್ನು ಜನಸಾಮಾನ್ಯರೇ ಆಡುತಿದ್ದರೇನೋ?

ಅಂದು ಅಂಬೇಡ್ಕರ್ ಇಲ್ಲದ 'ಗಾಂಧಿ' ಚಿತ್ರನೋಡಬಾರದೆಂದು ದಲಿತ ಸಂಘರ್ಷ ಸಮಿತಿ ತೀರ್ಮಾನಿಸಿದಾಗ, ಕದ್ದು ಗಾಂಧಿ ಚಿತ್ರನೋಡಿ 'ಲಂಕೇಶ್ ಪತ್ರಿಕೆ'ಯಲ್ಲಿ ಬರೆದ ದೇವನೂರು ನಮ್ಮ ಹೀರೋ ಆಗಿದ್ದರು! ಆ ವಯಸ್ಸಿನಲ್ಲಿ ಆ ಮನಸ್ಥಿತಿಯಲ್ಲಿ ಅಂಬೇಡ್ಕರ್ ಅವರನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಿದ್ದ ನಮ್ಮ 'ಸ್ಪೃಶ್ಯ' ಮನಸ್ಸುಗಳಿಗೆ ಸಹಜವಾಗಿಯೇ ದೇವನೂರು ಹತ್ತಿರವಾಗುತ್ತಿದ್ದರು, ಆದರೆ ಇಂದು...?

ದೇವನೂರರನ್ನು ಸೇರಿಸಿದಂತೆ ನಾವೆಲ್ಲಾ ಯಾಕೆ ಆಗಾಗ ಇಂತಹ ಮಾತಾಡುತ್ತೇವೆ? ಜನಮತದಲ್ಲಿ ದೇವನೂರರು ಮಾತಾಡಲು ಆರಂಭಿಸಿದಾಗ ಆಡಿದ ಮಾತುಗಳನ್ನು ದೇವನೂರರಿಗೇ ನೆನಪಿಸುತ್ತಾ ಮುಗಿಸುವೆ....

"ನಾನು ಗಮನಿಸಿದಂತೆ ಈಗೀಗ ಎಲ್ಲರೂ ಚೆನ್ನಾಗಿ ಮಾತಾಡುತ್ತಿದ್ದಾರೆ. ನಾನೂ ಕೂಡ! ಆದರೆ ನಮ್ಮ ಮಾತಿನ ಆಶಯಗಳು ಏನಿದೆಯೋ ಅದಕ್ಕೆ ವಿರುದ್ಧವಾದ ವಿದ್ಯಮಾನಗಳು ಸಮಾಜದಲ್ಲಿ ಹೆಚ್ಚುತ್ತಲೇ ಇವೆ. ಹಾಗಾದರೆ ಎಲ್ಲಿ ತಾಳ ತಪ್ಪುತ್ತಿದೆ? ಸಮಾನತೆ ಆಶಯದ ನಮ್ಮ ಮಾತುಗಳು ಕೇವಲ ಕೌಶಲ (Skill) ಆಗಿಬಿಟ್ಟಿದೆಯಾ? ಅಥವಾ ನಮ್ಮ ಹುಡುಕಾಟ ಸ್ಥಗಿತಗೊಂಡು ನಾವು ಪೀಠಸ್ಥರಾಗಿ ಪ್ರವಚಕರಂತೆ ರಂಜನೆ ಕೊಡುತ್ತಿದ್ದೇವೆಯಾ? ಇಲ್ಲಿ ನಿಂತು ನಮ್ಮನ್ನೂ ನಮ್ಮ ಮಾತುಗಳನ್ನೂ ನಾವೀಗ ನೋಡಿಕೊಳ್ಳಬೇಕಾಗಿದೆ... " 

ಕಾಮೆಂಟ್‌ಗಳಿಲ್ಲ: