ಶುಕ್ರವಾರ, ಡಿಸೆಂಬರ್ 25, 2015

ಸಾಂಸ್ಕೃತಿಕ ಕಣ್ಣಿಗಾಗಿ ಒಂದು ತಪಸ್ಸು


ಸೌಜನ್ಯ: ಪ್ರಜಾವಾಣಿ

ನಾನು ಗಮನಿಸಿದಂತೆ ಈಗೀಗ ಎಲ್ಲರೂ ಚೆನ್ನಾಗಿ ಮಾತಾಡುತ್ತಿದ್ದಾರೆ. ನಾನೂ ಕೂಡ! ಆದರೆ ನಮ್ಮ ಮಾತಿನ ಆಶಯಗಳು ಏನಿದೆಯೋ ಅದಕ್ಕೆ ವಿರುದ್ಧವಾದ ವಿದ್ಯಮಾನಗಳು ಸಮಾಜದಲ್ಲಿ ಹೆಚ್ಚುತ್ತಲೇ ಇವೆ. ಹಾಗಾದರೆ ಎಲ್ಲಿ ತಾಳ ತಪ್ಪುತ್ತಿದೆ? ಸಮಾನತೆ ಆಶಯದ ನಮ್ಮ ಮಾತುಗಳು ಕೇವಲ ಕೌಶಲ (skill) ಆಗಿಬಿಟ್ಟಿದೆಯಾ? ಅಥವಾ ನಮ್ಮ ಹುಡುಕಾಟ ಸ್ಥಗಿತಗೊಂಡು ನಾವು ಪೀಠಸ್ಥರಾಗಿ ಪ್ರವಚಕರಂತೆ ರಂಜನೆ ಕೊಡುತ್ತಿದ್ದೇವೆಯಾ? ಇಲ್ಲಿ ನಿಂತು ನಮ್ಮನ್ನೂ ನಮ್ಮ ಮಾತುಗಳನ್ನೂ ನಾವೀಗ ನೋಡಿಕೊಳ್ಳಬೇಕಾಗಿದೆ.

ಇತ್ತೀಚೆಗೆ ಸಾಂಸ್ಕೃತಿಕ ವಲಯದಲ್ಲಿ ಎರಡು ಸಂಗತಿಗಳು ಹೆಚ್ಚು ಚರ್ಚಿತವಾಯ್ತು. ಒಂದು ರಾಮಾಯಣದ ಶಂಬೂಕ.  ಇನ್ನೊಂದು ಭಗವದ್ಗೀತೆ. ನಾವು ಯಾರೂ ಪ್ರಶ್ನೆ ಕೇಳಿಕೊಳ್ಳಲಿಲ್ಲ! ವಾಲ್ಮೀಕಿ ಸ್ವಯಂ ಶೂದ್ರ. ಆತ ತಾನು ಬರೆದ ಕಾವ್ಯದಲ್ಲಿ ತಾನೇ ತಪಸ್ಸು ಮಾಡಬಾರದು ಎಂದು ಬರೆದುಕೊಳ್ಳಲು ಸಾಧ್ಯವೆ? ನಾವು ಪ್ರಶ್ನಿಸಿಕೊಳ್ಳಲಿಲ್ಲ. ಇಂಥವುಗಳನ್ನು ಹೇಗೆ ಸ್ವೀಕರಿಸಬಹುದೆನ್ನುವುದಕ್ಕೆ ‘ಶೂದ್ರ ತಪಸ್ವಿ’ ನಮ್ಮೊಳಗೇ ಇದೆ. ಜೊತೆಗೆ, ‘ಸಂಸ್ಕೃತಿ ಕ್ರಾಂತಿಗೆ ಕಹಳೆ ನಾಂದಿ’ಯಲ್ಲಿ ಕುವೆಂಪು ನೋಟ ಹೀಗಿದೆ:

‘ನಿಮ್ಮ ಮನೆಯಲ್ಲಿ ನಿಮ್ಮ ಅಜ್ಜಿ ಹಾಕುತ್ತಿದ್ದಂತಹ ಚಿನ್ನದ ಆಭರಣಗಳು, ಬುಗುಡಿಯೋ ಬೆಂಡೋಲೆಯೋ ಅವೆಲ್ಲ ಇರುತ್ತವಲ್ಲ, ಆ ಆಭರಣಗಳನ್ನೆಲ್ಲ ನಿಮ್ಮ ಹೆಂಡತಿ ತೆಗೆದು ಒಲೆಗೆ ಹಾಕಿದರೇನು? ಬಿಸಾಕಿದರೇನು?... ಅದನ್ನೆಲ್ಲ ಕರಗಿಸಿ ಆ ಚಿನ್ನಾನ ನಮ್ಮ ಇಷ್ಟಕ್ಕೆ ಅನುಸಾರವಾಗಿ ನಾವು ಬೇರೆ ರೀತಿಯಲ್ಲಿ ಆಭರಣ ಮಾಡಿಸಿಕೊಂಡು ಉಪಯೋಗಿಸುತ್ತಿದ್ದೇವೆ. ಅಂದರೆ, ಆಭರಣದ ರೂಪ ಯಾವುದಾದರೂ ಇರಲಿ ಆಭರಣದ ವಸ್ತು ಇದೆಯಲ್ಲಾ ಅದು ತುಂಬಾ ಬೆಲೆಯುಳ್ಳದ್ದು, ಅದನ್ನು ಎಸೆದರೆ ಮೂರ್ಖರಾಗುತ್ತೀರಿ. ಹಾಗೆಯೆ ರಾಮಾಯಣ ಮಹಾಭಾರತ ಇತರ ಯಾವುದೇ ಕತೆಗಳಾಗಿರಲಿ ಅವನ್ನು ಬಿಸಾಡುವುದಲ್ಲ, ಅವನ್ನು ಕರಗಿಸಿ ನಮ್ಮ ಹೊಸ ಧ್ಯೇಯ ಹೊಸ ಇಷ್ಟಗಳಿಗೆ ಅನುಸಾರವಾಗಿ ಅವುಗಳನ್ನು ನೀವು ನಿಮ್ಮ ಸಾಹಿತ್ಯದಲ್ಲಿ ಎರಕ ಹೊಯ್ಯಬೇಕು.

ಏಕೆಂದರೆ ಆ ಎರಕಗಳ ಮೂಲಕ, ಆ ಕಥಾವ್ಯಕ್ತಿಗಳ ಮೂಲಕ ನೀವು ನಿಮ್ಮ ಧ್ಯೇಯಗಳನ್ನು ಪ್ರಸಾರ ಮಾಡಲು ತುಂಬಾ ಸುಲಭವಾಗುತ್ತದೆ. ಬೇಗ ಬೇಗ ಹಿಡಿಸುತ್ತದೆ ಜನಗಳಿಗೆ’ ಈ ಮಾತುಗಳನ್ನು ನಾವು ಆಲಿಸಲಿಲ್ಲ. ಹಾಗೆ ಕುವೆಂಪು ಗೀತೆಯನ್ನೂ ಒಪ್ಪಿಕೊಳ್ಳುತ್ತಾರೆ. ಮನಃಶಾಸ್ತ್ರ ಪ್ರಾಕೃತಿಕ ಎಂಬಂತೆ ಇಡೀ ಜಗತ್ತಿಗೇ ಅನ್ವಯಿಸುತ್ತಾರೆ. ಹಿಂದೂಗಳ ವರ್ಣ ಜಾತಿವರ್ಗಗಳಿಗೆ ಹುಟ್ಟನ್ನು ಅನ್ವಯಿಸಿ ಭಗವದ್ಗೀತೆ ಹಾಡುವವರಿಗೆ ಕುವೆಂಪು ಹೀಗೆ ಕೇಳಬೇಕೆಂದು ಕರೆಕೊಡುತ್ತಾರೆ:

‘ಹಿಂದೂಗಳಿಗೆ ಮಾತ್ರ ಎಂದು ಅವರು ಹೇಳಿದರೆ ನೀವು ಹೇಳಬೇಕಾಗುತ್ತದೆ: ‘‘ಹಾಗಾದರೆ ನಿಮ್ಮ ಶ್ರೀಕೃಷ್ಣ ಭಗವಂತನಲ್ಲ, ಅವನೂ ಒಬ್ಬ ಬ್ರಾಹ್ಮಣಪರ ಆಚಾರ್ಯನಾಗುತ್ತಾನೆ. ಅಲ್ಲದೆ, ರಣರಂಗದ ಮಧ್ಯೆ ಶ್ಲೋಕ ರಚಿಸಿ ಹದಿನೆಂಟು ಅಧ್ಯಾಯ ಪದ್ಯದಲ್ಲಿ ಹೇಳುವುದಕ್ಕೆ ಅದೇನು ಯುದ್ಧರಂಗವೊ ಭೋಜನಕೂಟವೊ? ಯಾವನೊ ಪದ್ಯ ರಚನಾ ಸಾಮರ್ಥ್ಯವುಳ್ಳ ಹಾರುವನೆ ಬರೆದಿರಬೇಕು ಗೀತೆಯನ್ನು. ಇಂತಹ ಅವಿವೇಕವನ್ನು ನಾವು ಇನ್ನು ಮುಂದೆ ಸಹಿಸುವುದಿಲ್ಲ. ಒಂದು ವೇಳೆ, ನೀವು ಹೇಳುವಂತೆ ವರ್ಣ ಜಾತಿ ವರ್ಗಗಳನ್ನು ನಿಮ್ಮ ಆ ದೇವರೇ ಸೃಷ್ಟಿ ಮಾಡಿದ್ದರೂ ಅವನ್ನೆಲ್ಲ ಇಂದು ಸರ್ವೋದಯಕ್ಕಾಗಿ ನಾವು ಧ್ವಂಸ ಮಾಡಬೇಕಾಗುತ್ತದೆ. ಕಾಲರಾ, ಪ್ಲೇಗು, ಮಲೇರಿಯಾಗಳನ್ನು ದೇವರೇ ಸೃಷ್ಟಿ ಮಾಡಿದ್ದು ಅಂತಾ ಹೇಳಿ ನಾವು ಸುಮ್ಮನಿರುವುದಕ್ಕೆ ಆದೀತೆ?

ಅನಾರೋಗ್ಯಕರವೂ ಮೃತ್ಯುಕರವೂ ಆಗಿರುವ ಅವನ್ನೆಲ್ಲ ನಾಶಪಡಿಸಿ ನಮ್ಮ ಆರೋಗ್ಯವನ್ನು ನಾವು ರಕ್ಷಿಸಿಕೊಳ್ಳುವಂತೆ ವರ್ಣ ಜಾತಿ ವರ್ಗ ಮೊದಲಾದ ದುರ್ಭಾವನೆಗಳನ್ನೆಲ್ಲ  ಧ್ವಂಸಮಾಡಿ ಸಮಾಜ ಕ್ಷೇಮವನ್ನು ಸಾಧಿಸಿಯೆ ಸಾಧಿಸುತ್ತೇವೆ’’  ಎಂದು’. ಕುವೆಂಪು ಅವರ ಕುಮ್ಮಕಿನ ಮೇಲೆ ನಾನೂ ಗೀತೆ ಮೇಲೂ ಸ್ವಲ್ಪ ಕಣ್ಣಾಡಿಸಿದೆ. ಅದರೊಳಗೆ ಬುದ್ಧಿಸಂನ ಅಂಶಗಳೂ ಸಾಕಷ್ಟು ಇವೆಯಲ್ಲಾ ಅಂತ ಅನ್ನಿಸತೊಡಗಿತು. ಆಳಕ್ಕೆ ಹೋಗುವಷ್ಟು ಪಾಂಡಿತ್ಯ ನನಗಿಲ್ಲವಾಗಿ ಅರ್ಧಕ್ಕೆ ಕೈಬಿಟ್ಟೆ. ಆದರೆ ಇಲ್ಲಿ ಈ ಗೀತೆಯೊಳಗೆ ಏನೋ ಒಂದು ವಂಚನೆ ನಡೆದಿದೆ ಎಂಬ ಅನುಮಾನ ಹೆಚ್ಚತೊಡಗಿತು.

ಭಾರತಕ್ಕೆ ದೇವರು ಮುಖ್ಯವಲ್ಲ, ಜಾತಿವರ್ಣವೇ ಮುಖ್ಯವೆನ್ನುವುದಕ್ಕೆ ದಯಾಪವಾರ್‌ರ ಆತ್ಮಕಥೆಯಲ್ಲಿ ಒಂದು ಘಟನೆ ಒಳ್ಳೆಯ ಉದಾಹರಣೆಯಾಗುತ್ತದೆ-  ಆಗಿನ್ನೂ ದಯಾಪವಾರ್ ಚಿಕ್ಕ ಹುಡುಗ. ತನ್ನ ಅಜ್ಜಿಯ ಮನೆಗೆ ಬಂದಿರುತ್ತಾನೆ. ಅಂದು ಆ ಊರಲ್ಲಿ ದೇವಸ್ಥಾನದೊಳಗೆ ಏನೋ ಗದ್ದಲ ಗಲಾಟೆ ನಡೆಯುತ್ತಿರುತ್ತದೆ. ಕುತೂಹಲಗೊಂಡ ದಯಾಪವಾರ್ ತನ್ನನ್ನು ಮರೆತು ನಿಧಾನಕ್ಕೆ ದೇವಸ್ಥಾನದ ಒಳ ಹೋಗಿ ನೋಡಿದರೆ, ಅಲ್ಲಿ ತಲೆಕೆಟ್ಟ ಸವರ್ಣೀಯ ಹುಚ್ಚನೊಬ್ಬ ದೇವರ ವಿಗ್ರಹಕ್ಕೆ ಚಪ್ಪಲಿಯಲ್ಲಿ ಬಾರಿಸುತ್ತ ಚಪ್ಪಲಿ ಸೇವೆ ಮಾಡುತ್ತಿರುತ್ತಾನೆ. ಅಲ್ಲಿ ನೆರೆದ ಜನಸ್ತೋಮ ಬೆರಗಾಗಿ ಸುಮ್ಮನೆ ನೋಡುತ್ತ ನಿಂತಿರುತ್ತದೆ.

ಅಷ್ಟರಲ್ಲಿ ಅಲ್ಲಿದ್ದ ಯಾರೋ ಒಬ್ಬ  ಅಸ್ಪೃಶ್ಯ ಮಹರ್ ಬಾಲಕ ದೇವಸ್ಥಾನದ ಒಳಕ್ಕೆ ಬಂದಿರುವುದನ್ನು ಗಮನಿಸಿಬಿಟ್ಟಾಗ ಆ ದೇವರಿಗೆ ಚಪ್ಪಲಿಸೇವೆ ನೋಡುತ್ತ ನಿಂತಿದ್ದ ಆ ಜನಸ್ತೋಮ, ಅಸ್ಪೃಶ್ಯ ಬಾಲಕನ ದೇವಸ್ಥಾನದ ಪ್ರವೇಶದಿಂದಾಗಿ ದೇವಾಲಯ ಅಪವಿತ್ರವಾಯಿತೆಂದು ಕುಪಿತರಾಗಿ ಆ ಬಾಲಕನಿಗೆ ಹೊಡೆದುಬಡೆದು ಹೊರಹಾಕುತ್ತಾರೆ. ಯಾರಿಗೆ ಹುಚ್ಚು? ಇದು ಜಾತೀಯ ಹುಚ್ಚು ಭಾರತವಲ್ಲವೆ? ಭಾರತಕ್ಕೆ, ಹುಟ್ಟಿನಿಂದ ನಿರ್ಧರಿತವಾಗುವ ಜಾತಿ ಚಾತುರ್ವರ್ಣವೇ ಬಲಾಢ್ಯರ ಧರ್ಮ; ಇದನ್ನು  ಉಳಿಸಿಕೊಳ್ಳುವುದಕ್ಕಾಗಿ ಪಾಪ ದೇವರನ್ನೂ ಸೇವಕರನ್ನಾಗಿ ಮಾಡಿಟ್ಟುಕೊಂಡಿದ್ದಾರೆ. ಇದನ್ನೆಲ್ಲ  ಒಪ್ಪದ ಬುದ್ಧಿಸಂ ಪರದೇಶಿ ಆಗಬೇಕಾಯ್ತು. ಜೈನ, ಲಿಂಗಾಯತಗಳು ಜಾತಿಯಾಗಿ ಹಿಡ ಮಾಡಿಸಿಕೊಂಡು ಇಲ್ಲಿ ಉಳಿದವು.

ಈಗ, ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಗಳ ಬಗ್ಗೆ ಅಸಹನೆ ಇರುವುದಕ್ಕೂ ಅವು ಭಾರತೀಕರಣವಾಗಿಲ್ಲ ಅರ್ಥಾತ್ ಜಾತಿಯಾಗಿ ರೂಪಾಂತರವಾಗಿಲ್ಲ ಎಂಬುದೂ ಕಾರಣವಾಗಿರಬಹುದು. ಹಾಗೇ ದಲಿತರು ನಾಳೆ ಬುದ್ಧಿಸಂ ಅನ್ನು ಅಪ್ಪಿಕೊಂಡು ಜಾತಿಯಿಂದ ಧರ್ಮಕ್ಕೆ ಬಡ್ತಿ ಪಡೆದು ಭಾರತದಲ್ಲಿ ಧರ್ಮ ಉಳಿದುಬಿಡುತ್ತದೆ ಎಂಬ ಭೀತಿಯೂ ದಲಿತರ ಬಗ್ಗೆ ಇರುವ ಅಸಹನೆಗೆ ಕಾರಣವಾಗಿರಬಹುದು. ಬಲಾಢ್ಯ ಭಾರತೀಯ ಮನಸ್ಸು ಹೀಗಿರುವಾಗ ಗೀತೆಯೊಳಗೆ ಜರುಗಿರಬಹುದಾದ ವಂಚನೆ ಏನಿರಬಹುದು? ಭಾರತದಿಂದ ಬುದ್ಧಿಸಂ ಅನ್ನು ಹೊಡೆದು ಓಡಿಸಿದ ಮೇಲೆ ಆಗ ಬುದ್ಧಿಸಂನಲ್ಲಿ ಪ್ರಚಲಿತವಿದ್ದ ಅದರ ಉನ್ನತ ಮೌಲ್ಯಗಳನ್ನೇ ಹುಟ್ಟಿನಿಂದ ನಿರ್ಧರಿತವಾಗುವ ಜಾತಿವರ್ಣ ರೋಗಗಳನ್ನು ಎತ್ತಿಹಿಡಿಯುವುದಕ್ಕೆ ಗೀತೆಯೊಳಗೆ ಬುದ್ಧಿಸಂನ್ನು ಬಲಿ ಕೊಟ್ಟಿರಬಹುದಾ?

ಭಾರತದ ತುಂಬ ಬಲಿಕತೆಗಳೇ ತುಂಬಿವೆ. ಹಾಗಾಗೆ ಇಲ್ಲಿ ಸೊಳ್ಳೆಯಷ್ಟು ಇರುವವರು ಆನೆಯಷ್ಟು ಇರುವವರ ಜುಟ್ಟು ಹಿಡಿದು ಆಳ್ವಿಕೆ ನಡೆಸುತ್ತಿದ್ದಾರೆ. ಆಯ್ತು, ಈಗ ನಾವೇನು ಮಾಡಬೇಕು? ಜಾತಿವರ್ಣದ ತಾರತಮ್ಯ ರೋಗದ ಗೆಡ್ಡೆಗಳಿಗೆ ಆಪರೇಷನ್ ಮಾಡಿ ಬಿಸಾಕಿ ಬುದ್ಧನಂಶದಿಂದ ಮನುಷ್ಯತ್ವಗೊಳಿಸಿ ಗೀತೆಯನ್ನು ಉಳಿಸಿಕೊಳ್ಳಬೇಕಾಗಿದೆ. ಕುವೆಂಪು ದರ್ಶನದ ಪ್ರತಿಮಾದೃಷ್ಟಿ ಪಡೆದರೆ ನಮಗೂ ಸಾಧ್ಯವಾಗುತ್ತದೆ. ಆದರೆ ನಾವು ಪ್ರತಿಕೃತಿ ದೃಷ್ಟಿಗೆ ಕಟ್ಟುಬಿದ್ದು ಒದ್ದಾಡುತ್ತಿದ್ದೇವೆ. ಇಲ್ಲಿ ಕುವೆಂಪು ಅವರನ್ನು ಸಾರಾಸಗಟು ಒಪ್ಪಬೇಕಾಗಿಲ್ಲ. ಅವರ ಪ್ರತಿಮಾದೃಷ್ಟಿಯನ್ನು ಪಡೆಯುವುದು ಮುಖ್ಯ ಎಂದಷ್ಟೇ ಹೇಳುತ್ತಿದ್ದೇನೆ.

ಪಟ್ಟಭದ್ರರಿಗೆ ಪ್ರತಿಕ್ರಿಯೆ ತೋರಿಸುತ್ತಾ ನಮ್ಮ ಆಯಸ್ಸನ್ನು ವ್ಯಯ ಮಾಡುವುದರ ಬದಲು ಸಮುದಾಯದ ಮನಸ್ಸಿನೊಡನೆ ಕೂಡಿಕೆಯಾಗಿ ನಮ್ಮ ಮಾತು ಸಮುದಾಯದ ಮಾತೂ ಆಗುವಂತಾಗಲು ಏನೇನು ಅಂಥ ಹುಡುಕಬೇಕಾಗಿದೆ. ಆಗ, ನಡೆಯೂ ಸಿಗಬಹುದು. ಆಗ, ಒಂದು ಸಣ್ಣ ಕ್ರಿಯೆಯೂ ದೊಡ್ಡ ಪರಿಣಾಮ ಉಂಟುಮಾಡಬಹುದು. ಈ ಪ್ರತಿಭಾ ಬಂಡವಾಳ ನಮ್ಮಲ್ಲಿ ಇದ್ದಿದ್ದರೆ? ಆ ಪ್ರತಿಮಾ ದೃಷ್ಟಿಯಲ್ಲಿ ಹುಟ್ಟಬಹುದಾದ ಮೂರಂಕದ ಒಂದು ನಾಟಕದ ದೃಶ್ಯಗಳು  ಸ್ಥೂಲವಾಗಿ ಹೀಗೂ ಇರಬಹುದಲ್ಲಾ?- (1) ಸ್ವಯಂ ಶ್ರೀರಾಮಚಂದ್ರನೇ ಸಾಕ್ಷಾತ್ ಬಂದು ‘ಅಯ್ಯ ಇದು ನಾನು ಹುಟ್ಟಿದ ಸ್ಥಳವಲ್ಲ’ ಎಂದು ಹೇಳುವ ದೃಶ್ಯ (2) ಆ ಭಕ್ತರು ಶ್ರೀರಾಮಚಂದ್ರನ ಪುರಾವೆ ಸಿಗದಂತೆ ಕತ್ತುಹಿಸುಕುತ್ತಿರುವ ದೃಶ್ಯ (3) ಬೀದಿಗಳಲ್ಲಿ ಅಧಿಕಾರಕ್ಕಾಗಿ ಸಮುದಾಯಗಳ ನಡುವೆ ದ್ವೇಷದ ಬೆಂಕಿ ಹಚ್ಚುತ್ತಿರುವ ಗದ್ದಲದ ದೃಶ್ಯ- ಕೇವಲ ಮೂರಂಕದ ಅವತಾರದ ನಾಟಕ. ಬೇಕಾದರೆ ಬೇಕಾದನ್ನು ಸೇರಿಸಿಕೊಳ್ಳಿರಿ.

ಸೂಫಿ ಸಂತನೊಬ್ಬ  ಶ್ರೀರಾಮಚಂದ್ರನನ್ನು ಬಚಾವು ಮಾಡುವ ದೃಶ್ಯ ಬಂದರೂ ಅದಕ್ಕೇನು ಅಭ್ಯಂತರ? ಒಟ್ಟಿನಲ್ಲಿ ಇಷ್ಟೇ-ನಾನು ನಿಮ್ಮ ಮನಸ್ಸಿನ ಕೊಳಕ್ಕೆ ನನ್ನ ಗೊಂದಲದ ಕಲ್ಲುಗಳನ್ನು ಎಸೆದು ಅಲೆಗಳನ್ನು ಎಬ್ಬಿಸಲು ಪ್ರಯತ್ನಿಸುತ್ತಿರುವೆ. ಅಲೆಗಳು ಉಂಟಾದರೆ ನಾನು ಕಲ್ಲು ಎಸೆದದ್ದಕ್ಕೂ ಸಾರ್ಥಕ. ಇರಲಿ, ಸಂಸ್ಕೃತ ವಿದ್ವಾಂಸ ಪ್ರೊ. ಷೆಲ್ಡಾನ್ ಪೋಲಾಕ್ ಅವರು ಒಂದು ಸಲ ‘ಮಹಾಭಾರತ ರಾಮಾಯಣಗಳನ್ನು ನೀನು ಹೇಗೆ ಸ್ವೀಕರಿಸುತ್ತೀಯಾ?...’ ಎಂದು ಕೇಳಿದರು. ನಾನೆಂದೆ ‘ಭಾರತದ ಸಮುದಾಯದ ಮನಸ್ಸನ್ನು ಹೊರತೆಗೆದು ಚಾಪೆಯಂತೆ ಹಾಸಿಬಿಟ್ಟರೆ, ಅಲ್ಲಿ ಅರ್ಧಕ್ಕೂ ಹೆಚ್ಚಾಗಿ ರಾಮಾಯಣ ಮಹಾಭಾರತಗಳು ಒಂದಲ್ಲಾ ಒಂದು ರೀತಿಯಲ್ಲಿ ಮಿಳಿತಗೊಂಡಿವೆ’ ಎಂದೆ. ಈ ಪುರಾಣ ಕಾವ್ಯಗಳ ಗಣಿಯಿಂದ ಅದಿರು ಅಗೆದು ಅಲ್ಲಿರಬಹುದಾದ ಚಿನ್ನ ಸೋಸಿ ಒಡವೆ ಮಾಡಿಕೊಳ್ಳದ ನಾವು- ಇಲ್ಲದವರು (Have-nots) ಆಗಿಬಿಟ್ಟಿದ್ದೀವಾ?

ಅದಕ್ಕಾಗೆ ಎಷ್ಟೆಷ್ಟು ಚೆನ್ನಾಗಿ ಮಾತಾಡಿದರೂ ಅಷ್ಟಷ್ಟೆ ಅದಕ್ಕೆ ವಿರುದ್ಧವಾದ ವಿದ್ಯಮಾನಗಳು ಸಮಾಜದಲ್ಲಿ ಜರುಗುತ್ತಿರಬಹುದೇ? ಸಮುದಾಯದ ಮನಸ್ಸಿನೊಡನೆ ನಾವು ಕೂಡಿಕೆಯಾಗಿ ಮಥಿಸಿ ಮರುಹುಟ್ಟು ಪಡೆಯದಿದ್ದರೆ, ನಾವು ಸಮುದಾಯದಿಂದಲೇ ಹೊರಹಾಕಲ್ಪಟ್ಟವರು (Dropouts) ಆಗಿಬಿಡಬಹುದಾ? ಆತಂಕದಿಂದ ಈ ಸಮಸ್ಯೆಗೆ ಪುರಾಣ ಕಾವ್ಯ ಹಿಡಿದುಕೊಂಡು ನಮ್ಮ ಪೂರ್ವಿಕರುಗಳಾದ ಗಾಂಧೀಜಿ ಬಳಿಗೆ ಹೋದರೆ?- ಅವರು ಪ್ರಾರ್ಥನೆ ಭಜನೆ ಮಾಡಿಬಿಡುತ್ತಾರೆ. ಅಂಬೇಡ್ಕರ್?- ವಾಸ್ತವ ಎಂಬಂತೆ ವಿಶ್ಲೇಷಣೆ ಮಾಡುತ್ತಾರೆ. ಇನ್ನು ಪೆರಿಯಾರ್?- ಮುರಿದು ಎಸೆಯುತ್ತಾರೆ. ಕಾರ್ಲ್‌ಮಾರ್ಕ್ಸ್‌ಗೆ ಬಂದರೆ ಈ ವಿಚಾರದಲ್ಲಿ ಆತ ಮಹಾಮಡಿವಂತ, ಧರ್ಮದ ಜೊತೆ ಬೆರೆತ ಕಾವ್ಯ ಅಫೀಮು ಅಂತ ಆ ಕಡೆ ತಲೆಹಾಕಿಯೂ ಮಲಗುವುದಿಲ್ಲ. ಈ ಗುಂಪಲ್ಲಿ ಲೋಹಿಯಾರಿಗೆ ಮಾತ್ರ ಪುರಾಣಕಾವ್ಯ ಕಾಣುವ ಕಣ್ಣಿದೆ. ಕುವೆಂಪು ಅವರಂತೂ ನಮ್ಮ ಸಾಂಸ್ಕೃತಿಕ ವಿವೇಕ ಅನ್ನಿಸಿಬಿಡುತ್ತಾರೆ.

ಈ ವಿವೇಕ ಇದ್ದುದರಿಂದಲೇ ಕುವೆಂಪು ನಾವೆಲ್ಲರೂ ಹುಟ್ಟುವ ಮುಂಚೆಯೇ 1944ರಲ್ಲಿ ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಎಂದು ನಾಡಿಗೆ ಕರೆ ಕೊಡುವ ಸಂದರ್ಭದಲ್ಲಿ ಅವರು ಹೇಳುತ್ತಾರೆ - ‘‘‘ದೇವಾಲಯ ಪ್ರವೇಶ’ದ ಪ್ರಶ್ನೆ ಮುಂತಾದವುಗಳನ್ನು ಕೆಚ್ಚಿನಿಂದ ಮತಿಯ (ಬುದ್ಧಿಯ) ಒರೆಗಲ್ಲಿಗೆ ಹಚ್ಚಿನೋಡಬೇಕು. ಮೊನ್ನೆ ಪತ್ರಿಕೆಗಳಲ್ಲಿ ನಾನು ಓದಿದೆ. ಒಬ್ಬರು ಕೃತವಿದ್ಯಾರಾದ ಗೌರವಸ್ಥರು ದೇವಾಲಯಕ್ಕೆ ಹೋಗಿ ಬಂದುದಕ್ಕೆ ಪ್ರತಿಯಾಗಿ ಸಂಪ್ರೋಕ್ಷಣೆಗೆ ಜುಲುಮಾನೆ ಕೊಡಬೇಕಾಗಿ ಬಂದಿತಂತೆ. ಕಾರಣ, ಅವರು ಅಸ್ಪೃಶ್ಯರ ಜಾತಿಗೆ ಸೇರಿದವರಂತೆ. ಅವರಿಗಿಂತಲೂ ಮೂಢರೂ ಕೊಳಕರೂ ದುಷ್ಟರೂ ರೋಗಿಗಳೂ ದುರಚಾರಿಗಳೂ ಆದ ‘ಸ್ಪೃಶ್ಯ’ರೆಂದೆನಿಸಿಕೊಂಡವರು ಗುಡಿಯೊಳಗೆ ಹೋದರೆ ಮೈಲಿಗೆಯಾಗುವುದಿಲ್ಲವಂತೆ!

‘ಸ್ಪೃಶ್ಯ’ ಯುವಕರು ತಮ್ಮ (ಅಸ್ಪೃಶ್ಯ) ಸೋದರನಿಗಾದ ಅವಮಾನ ತಮ್ಮದೆಂದು ಭಾವಿಸಿ ದೇವಾಲಯಗಳಿಗೆ ಹೋಗುವುದನ್ನೆ ಬಿಟ್ಟು, ಹೊರಗೆ, ಪ್ರಕೃತಿ ಸೌಂದರ್ಯದಲ್ಲಿ, ಉದಯಿಸುವ ಸೂರ್ಯನಲ್ಲಿ, ಸಾಹಿತ್ಯದಲ್ಲಿ, ಸಂಸ್ಕೃತಿಯಲ್ಲಿ, ದರಿದ್ರನಾರಾಯಣನ ಸೇವೆಯಲ್ಲಿ ತಮ್ಮ ದೇವಾಲಯಗಳನ್ನು ಕಟ್ಟಿಕೊಂಡು, ಮತದ ಅನೌದಾರ್ಯವನ್ನು ಮುರಿಯಬೇಕು... ಅಸ್ಪೃಶ್ಯರನ್ನು ದೇವಾಲಯಗಳಿಗೆ ಪ್ರವೇಶ ಮಾಡಲು ಬಿಡಬೇಕೆಂದು ಹೇಳುತ್ತಿರುವುದು ಉಚ್ಚವರ್ಗದ ಹಿಂದೂಗಳ ಪರಿಶುದ್ಧತೆಗಾಗಿ ಮತ್ತು ದೃಷ್ಟಿವೈಶಾಲ್ಯ ಸಾಧನೆಗಾಗಿಯೆ ಹೊರತು ಅಸ್ಪೃಶ್ಯರ ಮೋಕ್ಷಕ್ಕಾಗಿಯಲ್ಲ’’. ಈ ಮಾತಿಗೆ ಈಗ 71ನೇ ವರ್ಷ ನಡೆಯುತ್ತಿದೆ. ಕನಿಷ್ಠ ಈ ಗ್ರಹಿಕೆಯಾದರೂ ಪ್ರಗತಿಪರರು ಅಂದುಕೊಂಡಿರುವ ನಮಗೆ ಇನ್ನೂ ಸಾಧ್ಯವಾಗಿಲ್ಲ. ಆ ನುಡಿಗಳು  ಅಷ್ಟೋ ಇಷ್ಟೋ ಕ್ರಿಯೆಯಾಗಿದ್ದರೂ ನಮ್ಮ ಇಂದಿನ ಬದುಕು ಹೆಚ್ಚು ಸಹ್ಯವಾಗಿರುತ್ತಿತ್ತು. ಜಾತಿಯ ಟೌನ್‌ಷಿಪ್‌ಗಳು ಅಸಹ್ಯವಾಗಿ ಕಾಣಿಸುತಿದ್ದವು.

ಜಾತಿಧರ್ಮದ ಕೊಲೆ ರಕ್ತಪಾತಗಳು ಇಷ್ಟಾಗುತ್ತಿರಲಿಲ್ಲವೇನೋ. ಭೂತವಾದಿಗಳ ಅಂಗಡಿಗಳಲ್ಲಿ ದ್ವೇಷದ ವ್ಯಾಪಾರ ಅಷ್ಟೋ ಇಷ್ಟೋ ತಗ್ಗುತ್ತಿತ್ತು. ಆದರೆ ಏನು ಮಾಡುವುದು? ನಾವೀಗ ಸಾಂಸ್ಕೃತಿಕ ಗರೀಬರಾಗಿದ್ದೇವೆ!? ಇಂದು, ಉದ್ರೇಕ ಉನ್ಮಾದಗಳ ಮುಂದೆ ವಿಚಾರ ವಿವೇಕಗಳು ತತ್ತರಿಸುತ್ತವೆ ಎಂಬ ಅರಿವಿನೊಡನೆ ನಮ್ಮ ಆಶಯಗಳಿಗೆ ತಕ್ಕಂತೆ ನಮ್ಮದೇ ಕ್ರಿಯಾರೂಪಗಳಿಗಾಗಿ ಹುಡುಕಬೇಕಾಗಿದೆ. ಮೊನ್ನೆ ಇಂದೂಧರ್ ಫೋನ್ ಮಾಡಿ ‘ಬೆಂಗಳೂರಲ್ಲಿ ಅಸಹಿಷ್ಣುತೆ ಬಗ್ಗೆ ಸಭೆ ಇದೆ ಬನ್ನಿ’ ಅಂದ.  ‘ನಿನಗೆ ಏನಪ್ಪ ಬೇಕಾಗಿದೆ’ ಅಂದೆ. ‘ಸಹಿಷ್ಣುತೆ’ ಅಂದ. ‘ಹಾಗಾದರೆ ಸಹಿಷ್ಣುತೆಗಾಗಿ ಎಂದು ಚರ್ಚೆ ಮಾಡಿದರೆ ನಾವು ಇಡಬೇಕಾದ ಹೆಜ್ಜೆಗಳ ಸುಳಿವುಗಳಾದರೂ ಸಿಗಬಹುದಲ್ವಾ’ ಅಂದೆ.

ದಾಳಿ (Attack) ಮಾಡುವುದಕ್ಕೆ ಯಾರಾದರೂ ವಿರೋಧಿ ಎದುರಾಗಿ ಇದ್ದರೆ ಮಾತ್ರ ಹೋರಾಡುವ ನಮ್ಮ ಹೋರಾಟಗಾರರ ಜಾಯಮಾನವ ಇದು? ಅದೇ ನಮ್ಮ ಆಶಯಗಳಿಗೆ ತಕ್ಕಂತೆ ಕ್ರಿಯೆ ರೂಪಿಸಿ ನಡೆದ ಹೆಜ್ಜೆಗಳು ನಮ್ಮ ನಡುವೆ ಅಷ್ಟಾಗಿ ಇಲ್ಲವಲ್ಲ ಯಾಕೆ? ಇದು ನಮಗೆ ಬೇಕಾಗಿಲ್ಲವೆ? ಜನನುಡಿಯೂ ಕೂಡ ಆಳ್ವಾಸ್ ನುಡಿಸಿರಿಗೆ ಪ್ರತಿಕ್ರಿಯಾತ್ಮಕವಾಗಿ ಹುಟ್ಟಿದೆ. ಅದು ಈಗ ಪೊರೆ ಕಳಚಿ ಹೊಸಹುಟ್ಟು ಪಡೆಯಬೇಕಾಗಿದೆ. ಸಮುದಾಯದ ಮನಸ್ಸಿನ ತಾಯಿಬಳ್ಳಿಗೆ ಮತ್ತೆ ಕಸಿ ಮಾಡಿಕೊಂಡು ಸಾಂಸ್ಕೃತಿಕ ಕಣ್ಣು ಪಡೆಯಬೇಕಾಗಿದೆ. ಆಗ ನಮ್ಮ ಮಾತು ಸಮುದಾಯದ ಮಾತೂ ಆಗಬಹುದು. ಅದಕ್ಕಾಗಿ- ಹೌದು, ನಾವು ಸಾಂಸ್ಕೃತಿಕ ಕಣ್ಣಿಗಾಗಿ ತಪಸ್ಸು ಮಾಡಬೇಕಾಗಿದೆ.

ಕಾಮೆಂಟ್‌ಗಳಿಲ್ಲ: