ಬುಧವಾರ, ಮಾರ್ಚ್ 5, 2014

ರಾಮ್ ಗೋಪಾಲ್ ವರ್ಮ ಸಿನಿಮಾಯಾನ ‘ನನ್ನಿಷ್ಟ’


ಸಿನಿವ್ಯಾಮೋಹಿಯ ಸೃಜನಶೀಲ ಕಥನ

-ಅರುಣ್ ಜೋಳದಕೂಡ್ಲಿಗಿ




   ಭಾರತದ ಚಿತ್ರರಂಗದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ ಯುವ ಸಿನಿಮಾ ನಿರ್ದೇಶಕರಲ್ಲಿ ರಾಮ್ ಗೋಪಾಲ್ ವರ್ಮರದು ವಿಶಿಷ್ಟ ಹೆಸರು. ‘ಶಿವ’ ‘ರಂಗೀಲಾ’ ‘ಭೂತ್’ ‘ಸರ್ಕಾರ್’ ‘ಕಂಪೆನಿ’ ಮುಂತಾದ ಸಿನಿಮಾಗಳ ಮೂಲಕ ಆರ್.ಜಿ.ವಿ ಸಿನಿಮಾ ಮಾದರಿಯೊಂದನ್ನು ಸೃಷ್ಟಿಸಿದವರು. ವರ್ಮ ಅವರ ಸಿನೆಮಾ ಜಗತ್ತಿಗೆ ಪ್ರವೇಶ ಪಡೆದಂದಿನಿಂದ ಈಚಿನ ತನಕದ ಬದುಕ ಪಯಣದ ಒಂದಷ್ಟು ನೆನಪುಗಳನ್ನು ಹೆಕ್ಕಿ ಕಟ್ಟಿಕೊಟ್ಟಿರುವ ಅವರ ಅನುಭವ ಜಗತ್ತು ‘ನನ್ನಿಷ್ಟ’ ಕೃತಿರೂಪ.

    ಕನ್ನಡದ ಸಂದರ್ಭದಲ್ಲಿ ಸಿನೆಮಾ ನಿರ್ದೇಶಕರು ತಮ್ಮ ಆತ್ಮಕಥನಗಳನ್ನು ಬರೆದುಕೊಂಡದ್ದು ಕಡಿಮೆ. ಪುಟ್ಟಣ್ಣ ಕಣಗಲ್ ಮೊದಲಾದವರು ತಮ್ಮ ಅನುಭವ ಕಥನಗಳನ್ನು ಬರೆದುಕೊಂಡಿದ್ದರೆ, ಕನ್ನಡ ಸಿನೆಮಾ ಇತಿಹಾಸದ ಭಿನ್ನ ಮಗ್ಗಲುಗಳು ತೆರೆದುಕೊಳ್ಳುತ್ತಿದ್ದವೋ ಏನೋ. ಅಂಥದ್ದೊಂದು ದೊಡ್ಡ ಕೊರತೆ ಕನ್ನಡ ಚಲನಚಿತ್ರ ಇತಿಹಾಸಕ್ಕಿದೆ. ಈಚಿನ ಗುರುಪ್ರಸಾದ್ ಅವರ ‘ಡೈರೆಕ್ಟರ್ ಸ್ಪೆಷಲ್’ ತರಹದ ಕೃತಿಗಳು ಸದ್ಯದ ನಿರ್ದೇಶಕರನ್ನಾದರೂ ಪ್ರಭಾವಿಸಬೇಕಿದೆ. ಕನ್ನಡ ಸಂದರ್ಭದಲ್ಲಿ ಸಾಹಿತಿಗಳ ಆತ್ಮಕಥನಗಳ ಬಾಹುಳ್ಯ ಹೆಚ್ಚಿದೆ. ಹಾಗೆ ನೋಡಿದರೆ, ಬೇರೆ ಬೇರೆ ಕ್ಷೇತ್ರದವರು ಆತ್ಮಕಥೆಗಳನ್ನು ಪ್ರಾಮಾಣಿಕವಾಗಿ ದಾಖಲಿಸಲು ಸಾಧ್ಯವಾದರೆ, ಆಯಾ ಕ್ಷೇತ್ರಗಳ ಬಗೆಗಿದ್ದ ಮೂಡನಂಬಿಕೆ ಮತ್ತು ಭ್ರಮೆಗಳು ಒಡೆಯುತ್ತವೆ. ಸಿನಿಮಾ ತುಂಬಾ ಜನಪ್ರಿಯ ಮತ್ತು ಪ್ರಭಾವಿ ಮಾಧ್ಯಮ. ಇಂತಹ ಮಾಧ್ಯಮದಲ್ಲಿ ಕೆಲಸ ಮಾಡಿದ ಯಶಸ್ವಿ ನಿರ್ದೇಶಕರೊಬ್ಬರ ಬದುಕಿನ ಕಥನ ಯಾವಾಗಲೂ ಕುತೂಹಲ ಮೂಡಿಸುವಂಥದ್ದೆ. ಹಾಗಾಗಿ ವರ್ಮ ಕಥನ ಕೂಡ ಓದುವ ಕುತೂಹಲವನ್ನು ಮೂಡಿಸುತ್ತದೆ.


 ರಾಮ್ ಗೋಪಾಲ್ ವರ್ಮಾ ಸಿನಿಬದುಕಿನಲ್ಲಿ ಇಟ್ಟ ಒಂದೊಂದು ಹೆಜ್ಜೆಗಳನ್ನು ಅದರೆಲ್ಲಾ ಕಾತರ, ಉತ್ಸಾಹ, ಆತಂಕ, ಮುಗ್ಧತೆಗಳು ಮಸುಕಾಗದಂತೆ ನಿರೂಪಿಸಿದ್ದಾರೆ. ಈ ಬಗೆಯ ನಿರೂಪಣೆಯೆ ಓದುವಿಕೆಗೆ ಆಪ್ತತೆಯನ್ನು ತಂದುಕೊಡುತ್ತದೆ. ಸಿನಿಮಾ ಕ್ಷೇತ್ರವೊಂದರಲ್ಲಿ ಹೊಸ ತಲೆಮಾರಿನ ಪ್ರವೇಶಕ್ಕಿರುವ ತೊಡಕುಗಳ ನ್ನು ವಿವರಿಸುತ್ತಾ, ಎಲ್ಲಾ ಕ್ಷೇತ್ರಗಳಲ್ಲೂ ಹೊಸ ತಲೆಮಾರು ಅನುಭವಿಸಬಹುದಾದ ಕಷ್ಟದ ಜತೆ ಲಗತ್ತಿಸುತ್ತಾರೆ. ಪುಸ್ತಕ ಓದಿನಿಂದ ಪುಸ್ತಕವೊಂದು ಹುಟ್ಟುವಂತೆ, ಸಿನಿಮಾಗಳಿಂದಲೇ ಸಿನಿಮಾವೊಂದು ಹುಟ್ಟುವುದನ್ನು, ‘ಶಿವಾ’ ಸಿನೆಮಾಕ್ಕೆ ಇನ್‌ಸ್ಪೈರ್ ಆದ ಸಿನಿಮಾಗಳ ಪಟ್ಟಿಯೊಂದನ್ನು ಕೊಡುತ್ತಾರೆ. ಇಂಹತ ಸಂಗತಿಗಳ ಬಗ್ಗೆ ಹೇಳುವಾಗಲೆಲ್ಲಾ ಹಾಸ್ಯದಲ್ಲಿಯೋ ವ್ಯಂಗ್ಯದಲ್ಲಿಯೋ ತೇಲಿಸುತ್ತಲೇ ವರ್ಮ ತನೇನೋ ಮಹಾನ್ ಸಾಧಿಸಿದ್ದೇನೆಂಬ ಕಾರಣಕ್ಕೆ ಹುಟ್ಟಬಹುದಾದ ಅಹಂ ನಿರಶನ ಮಾಡಿಕೊಳ್ಳುತ್ತಾರೆ.

 ‘ನನ್ನ ಫ್ಲಾಪ್ ಸಿನೆಮಾಗಳೆಲ್ಲವನ್ನೂ ನಾನು ಉದ್ದೇಶಪೂರ್ವಕವಾಗಿ ತೆಗೆದದ್ದು..ಹಾಗೂ ನನ್ನ ಹಿಟ್ ಸಿನಿಮಾಗಳೆಲ್ಲಾ ಅನಿರೀಕ್ಷಿತವಾಗಿ ಸಂಭವಿಸಿದ್ದು’ ಎನ್ನುವಂತಹ ಮಾತುಗಳು ಕಥನದುದ್ದಕ್ಕೂ ಬರುತ್ತವೆ. ಇವುಗಳ ಮೂಲಕ ನಿಜ ಬದುಕಿನಲ್ಲಿ ಸಿನಿಕತೆಯನ್ನು ಮೀರಲು ವರ್ಮ ಮಾಡುವ ಕಸರತ್ತಿನ ಭಾಗಗಳಂತೆ ಕಾಣುತ್ತವೆ. ಹಾಗಾಗಿಯೇ ಬದುಕಿನ ಆಕಸ್ಮಿಕಗಳನ್ನು, ಅನಿರೀಕ್ಷಿತ ತಿರುವುಗಳನ್ನು, ಈಡೇರದ ಮತ್ತು ಈಡೇರಿದ ಕನಸಿನ ಚಿತ್ರಗಳನ್ನು ನವಿರಾಗಿ ಚಿತ್ರಿಸಿದ್ದಾರೆ. ಹುಟ್ಟುಹಬ್ಬಗಳ ಕುರಿತು ಬರೆಯುತ್ತಾ ‘ಹುಟ್ಟಿದ ನಂತರದ ಸಾಧನೆಗಳಲ್ಲಿ ಸೆಲೆಬ್ರೇಷನ್ ಇರಬೇಕು. ಕೇವಲ ಹುಟ್ಟಿದ್ದಕ್ಕೇ ಸೆಲಬ್ರೇಟ್ ಮಾಡಿಕೊಳ್ಳುವ ಜನ ನನ್ನ ದೃಷ್ಟಿಯಲ್ಲಿ ಅತ್ಯಂತ ಕೈಲಾಗದವರು’ ಎನ್ನುತ್ತಾರೆ. ಇಂತಹ ಕಡೆಯಲ್ಲೆಲ್ಲಾ ಸಿನಿಜಗತ್ತಿನಲ್ಲಿ ಇರಬಹುದಾದ ಭ್ರಮೆಗಳನ್ನು ಕಳಚುವ ಹಾಗೆ ಕುಟುಕುತ್ತಾರೆ. ಇಂತಹ ಕಡೆಗಳಲ್ಲಿ ವರ್ಮ ಅವರ ವೈಚಾರಿಕತೆಯು ಪ್ರಖರವಾಗಿ ಗೋಚರಿಸುತ್ತದೆ. 

  ಬ್ರೂಸ್ ಲೀ ಬಗೆಗಿನ ಹುಚ್ಚು ಮೋಹ, ಶ್ರೀದೇವಿ ಬಗೆಗಿನ ಅದಮ್ಯ ಪ್ರೀತಿ, ಗೆಳೆಯ ಜೀನಿಯಸ್ ಸತ್ಯೇಂದ್ರನ ಬಗೆಗಿನ ಅಚ್ಚರಿ, ಕೋವಿಯಂಥ ಹುಡುಗಿಯ ಬಗೆಗಿನ ಸೆಳೆತ, ಕಾಲೇಜು ದಿನಗಳ ಪುಂಡಾಟಿಕೆಯ ನಿರೂಪಣೆಗಳು ವರ್ಮ ಬದುಕಿನ ಹಲವು ಮಜಲುಗಳನ್ನು ಕಾಣಿಸುತ್ತವೆ. ಸಿನಿಮಾವೊಂದರಲ್ಲಿ ರೂಪಿಸುವ ಘಟನೆ ಸನ್ನಿವೇಶವನ್ನು ನಿಜಬದುಕಿನ ಘಟನೆ ಮತ್ತು ಸನ್ನಿವೇಷದಿಂದ ಪುನರ್ ಸೃಷ್ಟಿಮಾಡುವ ಬಗೆಯನ್ನು ಹೇಳುವಾಗ ವಾಸ್ತವವೊಂದು ಕಲಾಕೃತಿಯಾಗುವಲ್ಲಿನ ರೂಪಾಂತರವನ್ನು ವರ್ಮಾ ಚಿತ್ರವತ್ತಾಗಿ ಕಟ್ಟಿಕೊಡುತ್ತಾರೆ. ಸಿನಿಮಾಕ್ಕಾಗಿ ಮಾಡುವ ಹೊಸ ಪ್ರಯೋಗಗಳು ಕೆಲವೊಮ್ಮೆ ಆಕಸ್ಮಿಕ ಸಂಗತಿಗಳಿಂದಾಗಿರುತ್ತವೆ ಎನ್ನುವಂತಹ ವಾಸ್ತವಗಳನ್ನು ಸಿನಿಕತೆಯಿಲ್ಲದೆ ಹೇಳುತ್ತಾರೆ.

 ವರ್ಮ ಒಬ್ಬ ನಿರ್ದೇಶಕರಾಗಿ ಸಮಾಜವನ್ನು ನೋಡುವ, ಅದನ್ನು ಗ್ರಹಿಸುವ ಮತ್ತು ಸಿನೆಮಾದಲ್ಲಿ ತರುವ ಮೂರು ಆಯಾಮಗಳ ಬಗೆಗೆ ಸೂಕ್ಷ್ಮವಾಗಿ ದಾಖಲಿಸಿದ್ದಾರೆ.  ಅವರು ನಿರೂಪಿಸುವ ಕಥನದಲ್ಲಿ ಸಮಾಜದ ಕಣ್ಣೋಟದಿಂದ ತನ್ನನ್ನು ನೋಡಿಕೊಳ್ಳುವುದಕ್ಕಿಂತ, ತನ್ನ ಬದುಕಿನ ಕಣ್ಣೋಟದಿಂದ ಸಮಾಜವನ್ನು ನೋಡುವ ಗುಣವಿದೆ. ನಿರೂಪಣೆಯ ಮಾದರಿಗೆ ಸಿನೆಮಾ ನಿರ್ದೇಶಕನ ಗುಣ ವರ್ಮರಿಗೆ ಅರಿವಿಲ್ಲದಂತೆಯೇ ನುಗ್ಗಿದಂತಿದೆ. 

 ನನ್ನಿಷ್ಟ ಎನ್ನುವಾಗ, ಬೇರೆಯವರ ಇಷ್ಟಾನಿಷ್ಟಗಳಿಗೆ ಬೆಲೆಕೊಡದಿರುವ ಮತ್ತು ನನ್ನಿಷ್ಟವನ್ನು ಬೇರೆಯವರು ಒಪ್ಪಬೇಕೆಂಬ ಜರೂರೇನೂ ಇಲ್ಲ ಎನ್ನುವ ದಾಷ್ಟ್ಯ ಕೂಡ ಕೆಲಸ ಮಾಡುತ್ತದೆ. ಆಗ ತಾನು ಮಾಡುವುದು, ಹೇಳುವುದೆ ಸರಿ ಎನ್ನುವ ಅಹಂ ನಿಷ್ಟ ಮಾತುಗಳು ಹೊಮ್ಮುವ ಸಾಧ್ಯತೆ ಇರುತ್ತದೆ. ವರ್ಮ ಅವರ ನಿರೂಪಣೆಯಲ್ಲಿಯೂ ಆ ಗುಣ ಕಂಡೂ ಕಾಣದ ಹಾಗೆ ಇಣುಕಿದೆ.

  ರಾಮ್ ಗೋಪಾಲ್ ವರ್ಮ ಅವರ ಸಿನಿಮಾಯಾನ ‘ನನ್ನಿಷ್ಟ’ ಕೃತಿಯನ್ನು ಸೃಜನ್ ಕನ್ನಡದ ಓದಿಗೆ ಆಪ್ತವಾಗುವಂತೆ ಕನ್ನಡೀಕರಿಸಿದ್ದಾರೆ. ಈ ಕೃತಿಯನ್ನು ಗಮನಿಸಿದರೆ ಮಹತ್ವದ ತೆಲುಗು ಕೃತಿಗಳನ್ನು, ತೆಲುಗಿನ ಹೊಸ ತಲೆಮಾರಿನ ಬರಹಗಳನ್ನು ಕನ್ನಡಕ್ಕೆ ತರುವ ಕೆಲಸವನ್ನು ಸೃಜನ್ ಕೈಗೆತ್ತಿಕೊಳ್ಳಲಿಕ್ಕೆ ಕಾಲ ಪಕ್ಕಾಗಿದೆ ಅನ್ನಿಸುತ್ತದೆ. ಮೂಲ ತೆಲುಗು ಕೃತಿಗಿಂತಲೂ ಕನ್ನಡದ ಅನುವಾದಿತ ಕೃತಿ ಗುಣಮಟ್ಟದಲ್ಲಿ ಅದ್ಭುತವಾಗಿದೆ ಎಂದು ಸ್ವತಃ ವರ್ಮ ಈ ಕೃತಿಯನ್ನು ಕೈಲಿಡಿದು ಬೆರಗುಗೊಂಡಿದ್ದಾಗಿ ಸೃಜನ್ ಹೇಳುತ್ತಿದ್ದರು. ಅಷ್ಟರಮಟ್ಟಿಗೆ ಪುಸ್ತಕದ ಗುಣಮಟ್ಟವನ್ನು ಕಾಯ್ದುಕೊಳ್ಳುವ ಹಲವು ಪ್ರಯೋಗಗಳು ನಡೆಯುತ್ತಿರುವುದು  ಕನ್ನಡದ ಮಟ್ಟಿಗೆ ಹೆಮ್ಮೆ ಪಡುವ ಸಂಗತಿ. ಅದರಲ್ಲಿ ಪಲ್ಲವ ಪ್ರಕಾಶನದ್ದು ರಾಜಿ ಇಲ್ಲದ ಕೆಲಸ. ಇಂತಹ ಪುಸ್ತಕ ಪ್ರೀತಿಯ ಕಾರಣಕ್ಕೆ ಕೆ.ವೆಂಕಟೇಶ್ ಕೂಡ ಅಭಿನಂದನಾರ್ಹರು. 

  ಸೃಜನ್ ಈಗಾಗಲೆ ನನ್ನಿಷ್ಟದ ಮುಂದುವರಿದ ಭಾಗದಂತಿರುವ ‘ವೋಡ್ಕಾ ವಿತ್ ವರ್ಮ’ (ತೆಲುಗು ಮೂಲ: ಸಿರಾಶ್ರೀ) ಕೃತಿಯನ್ನೂ ಅನುವಾದಿಸಿದ್ದಾರೆ. ಅದಿನ್ನು ಪ್ರಕಟಣೆಯ ಹಂತದಲ್ಲಿದೆ.

ರಾಮ್ ಗೋಪಾಲ್ ವರ್ಮ
ಸಿನಿಮಾಯಾನ ‘ನನ್ನಿಷ್ಟ’
ಕನ್ನಡಕ್ಕೆ: ಸೃಜನ್
೨೦೧೩, ಪುಟ:೧೯೦, ಬೆಲೆ: ೨೦೦/-
ಪಲ್ಲವ ಪ್ರಕಾಶನ, ಹೊಸಪೇಟೆ.
ಸಂಪರ್ಕ:೯೪೮೦೩೫೩೫೦೭

1 ಕಾಮೆಂಟ್‌:

ಹಿಪ್ಪರಗಿ ಸಿದ್ದರಾಮ (Hipparagi Siddaram) ಹೇಳಿದರು...

ಗ್ರಂಥ ವಿಮರ್ಶೆ ಚೆನ್ನಾಗಿದೆ ಸರ್....ಬಳಸಿರುವ ಭಾಷೆಯು ಅಷ್ಟೇ ಮುದ ನೀಡುತ್ತದೆ....ಪುಸ್ತಕ ಕೊಂಡು ತಕ್ಷಣ ಓದಿ ಮುಗಿಸಬೇಕೆನಿಸುತ್ತದೆ...