ಬುಧವಾರ, ಮಾರ್ಚ್ 19, 2014

ಪದಗಳ ತಿರುಳು ಮತ್ತು ಚಹರೆ

ಕೆ.ವಿ.ನಾರಾಯಣ
ಸೌಜನ್ಯ:ವಿಜಯ ಕರ್ನಾಟಕ
ಪದವಿರಲಿ ಎದೆಯಲಿ
ಒಂದು ಪದ ಎಂದಮೇಲೆ ಅದಕ್ಕೊಂದು ಅರ್ಥವಿರಲೇಬೇಕು. ಹೀಗಾಗಿಯೇ ಅದು, 'ಪದಾರ್ಥ ಚಿಂತಾಮಣಿ'. ಹಾಗೆ ನೋಡಿದರೆ ಒಂದಲ್ಲ, ಪದವೊಂದಕ್ಕೆ ಹಲವು ಅರ್ಥಗಳಿರುತ್ತವೆ. ಅದು ಸಮಯ-ಸಂದರ್ಭದ ಮೇಲೆ ಅವಲಂಬಿತ. ಆದರೆ, ಎಷ್ಟೋ ಸಲ ನಾವು ಅರ್ಥವನ್ನೇ ತಿಳಿದುಕೊಳ್ಳದೆ, ಬಿಡುಬೀಸಾಗಿ ಕೆಲವು ಪದಗಳನ್ನು ಬಳಸುತ್ತಿರುತ್ತೇವೆ. ಈಗ ಇಂಥ ಪಾಡು ಪಡುತ್ತಿರುವ ಪದವೆಂದರೆ 'ಅರಾಜಕತೆ' ಮತ್ತು ಅದರ ಇನ್ನಿತರ ರೂಪಗಳು. ಆದರೆ, ಹೀಗಾದಾಗ ನಮ್ಮ ತಿಳಿವಿನ ದಾರಿಗಳು ಮುಚ್ಚಿಹೋಗಿರುತ್ತವೆ. 'ಅರಾಜಕತೆ'ಯ ನೆಪದಲ್ಲಿ ಪದಗಳ ಆಳ-ಅಗಲಗಳನ್ನು ತಿಳಿಯೋಣ ಬನ್ನಿ.
**

ಪದಗಳಿಗೆ ತಿರುಳು ಇರುವಂತೆ ಒಂದು ಚಹರೆಯೂ ಇರುತ್ತದೆ. ಕೆಲವೊಮ್ಮೆ ನಾವು ಪದಗಳನ್ನು ಅವುಗಳ ತಿರುಳನ್ನು ತಿಳಿಯದೆ ಬಳಸುತ್ತಿರುತ್ತೇವೆ. ಹಾಗೆಯೇ ಅವುಗಳ ಚಹರೆಯನ್ನೂ ತಿಳಿಯುವ ಗೋಜಿಗೆ ಹೋಗುವುದಿಲ್ಲ. ಅಂತಹ ಒಂದೆರಡು ನಿರೂಪಣೆಗಳನ್ನು ನಿಮ್ಮ ಮುಂದೆ ಇರಿಸುತ್ತೇನೆ.

ಒಂದು ಹಳೆಯ ಕತೆಯೊಂದಿಗೆ ಮೊದಲು ಮಾಡುತ್ತೇನೆ (ಕತೆಯಲ್ಲ; ದಿಟವಾಗಿ ನಡೆದದ್ದು. ಆದರೆ ಹೇಳುವ ರೀತಿಯಲ್ಲಿ ಇದು ಕತೆಯ ಹಾಗೆ ಇದೆ). ಸುಮಾರು ಎರಡೂವರೆ ದಶಕಗಳ ಹಿಂದೆ ಕನ್ನಡದ ಹಿರಿಯ ಬರಹಗಾರ ಮಾಸ್ತಿಯವರೊಡನೆ ಮಾತಾಡುತ್ತಿದ್ದಾಗ ಇದು ನಡೆದದ್ದು. ಮಾಸ್ತಿಯವರು 'ಜೀವನ' ಪತ್ರಿಕೆಯ ಸಂಪಾದಕರಾಗಿ ಬರೆಯುತ್ತಿದ್ದ ಟಿಪ್ಪಣಿಗಳ ಹಿಂದಿದ್ದ ರಾಜಕೀಯ ನಿಲುವುಗಳ ಬಗೆಗೆ ಮಾತು ಬಂತು. ನಾನು 'ನಿಮ್ಮದು ಲಿಬರಲ್ ನಿಲುವು ಆಗಿತ್ತಲ್ಲವೆ' ಎಂದು ಕೇಳಿದೆ. ಆಗವರು 'ಲಿಬರಲ್ ಎಂದರೇನು' ಎಂದು ಕೇಳಿದರು. ನಾನು 'ಉದಾರವಾದಿ ನಿಲುವು' ಎಂದು ಹೇಳಿದೆ. ಅದಕ್ಕವರು 'ಉದಾರವಾದಿ ಎಂದರೇನು' ಎಂದು ನನ್ನನ್ನೇ ಕೇಳಿದರು. ಗೊತ್ತಿದ್ದೂ ಗೊತ್ತಿದ್ದೂ ನನ್ನನ್ನು ಈ ಹಿರಿಯರು ಪೇಚಿಗೆ ಸಿಲುಕಿಸುತ್ತಿದ್ದಾರೆಂದು ತಿಳಿದು ನಾನು 'ಉದಾರವಾದಿ ಎಂದರೆ ಲಿಬರಲ್ ಎಂಬ ಪದಕ್ಕೆ ಸಾಟಿಯಾಗಿ ಬಳಕೆಯಲ್ಲಿದೆಯಲ್ಲವೇ' ಎಂದು ಕೇಳಿದೆ. 'ಅದು ಸರಿ. ನೀವು ಆ ಪದವನ್ನು ಬಳಸುತ್ತಿದ್ದೀರಿ ಎಂದರೆ ಅದರ ತಿರುಳು ನಿಮಗೆ ಗೊತ್ತಿರಬೇಕಲ್ಲವೇ? ಹಾಗಾಗಿ ಉದಾರವಾದಿ ಎಂದರೇನು ಎಂಬುದನ್ನು ನನಗೆ ತಿಳಿಯುವಂತೆ ಹೇಳಿ' ಎಂದರು. ನಾನು ಮಾತಾಡದೆ ಕುಳಿತದ್ದನ್ನು ಕಂಡು. 'ಇಂಗ್ಲ್ಲಿಶಿನವರು ಬಳಸಿದ ಅಂತ ತಿಳಿದು ನೀವು ಒಂದು ಪದ ಕಟ್ಟಿ ಬಳಸಲು ಮೊದಲು ಮಾಡುತ್ತೀರಿ. ಅದರ ತಿರುಳು ನಿಮ್ಮ ತಿಳಿವಿಗೆ ಬಾರದಿದ್ದರೂ ಪದದ ಹಿಂದೆ ಅವಿತು ಅದನ್ನು ಬಳಸುತ್ತೀರಿ ಅಲ್ಲವೇ?' ಎಂದು ಕೆಣಕಿದರು. ನಾನು ಮಾಸ್ತಿಯವರನ್ನು ಉದಾರವಾದಿ ಎಂದು ಬಣ್ಣಿಸಿದಾಗ ಅದು ಕೇವಲ ವಿವರಣೆಯ ಮಾತು ಮಾತ್ರ ಆಗಿರಲಿಲ್ಲ. ಆ ಹೊತ್ತಿಗೆ ಉದಾರವಾದಿಯಾಗಿರುವುದು ಎಂದರೆ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವವರ ನಿಲುವು ಎಂಬ ನನ್ನ (ಹಾಗೆಯೇ ನನ್ನಂತೆ ಹಲವರ) ತಿಳುವಳಿಕೆಯೂ ಅಲ್ಲಿ ನೆಲೆಯೂರಿತ್ತು. ಮಾಸ್ತಿಯವರು ನನ್ನ ಆ ತಿಳುವಳಿಕೆಯನ್ನು ಕೆದಕಲು ಈ ಹಾದಿಯನ್ನು ಹಿಡಿದಿದ್ದರು.


ಈ ಮಾತುಕತೆಯ ಬಳಿಕವೂ ನಾನು ಇಂಗ್ಲಿಶ್ ಪದವೊಂದಕ್ಕೆ ಕನ್ನಡದಲ್ಲಿ (ಸಂಸ್ಕತದ) ಪದವೊಂದನ್ನು ಸುಮ್ಮನೆ ಬಳಸುವುದರಲ್ಲಿ ತಪ್ಪಿದೆಯೆಂಬ ತಿಳುವಳಿಕೆಯನ್ನು ಪಡೆಯಲಿಲ್ಲ. ಆದರೆ ಪದಕ್ಕೆ ಪದವನ್ನು ಸಾಟಿ ಮಾಡಿಕೊಳ್ಳುವಾಗ ಕೇವಲ ಒಂದು ಪದವನ್ನು ಮಾತ್ರ ಕಟ್ಟಿಕೊಳ್ಳುತ್ತಿರುವುದಿಲ್ಲ; ಅದರೊಡನೆ ಆ ಪದದ ತಿರುಳಿನ ಬಗೆಗೆ ಒಂದು ನಿಲುವನ್ನೂ ಪಡೆದುಕೊಂಡಿರುತ್ತೇವೆ ಎನ್ನುವುದನ್ನು ಅರಿತುಕೊಳ್ಳಲು ಬಹಳ ವರುಶಗಳೇ ಹಿಡಿದವು. ಅಲ್ಲದೆ, ಇಂಗ್ಲಿಶಿನ ಪದಕ್ಕೆ (ಹಾಗೆ ನೋಡಿದರೆ ಯಾವುದೇ ನುಡಿಯ ಪದಕ್ಕೆ) ಒಂದು ಚರಿತ್ರೆ ಇರುತ್ತದೆ. ಆ ಚರಿತ್ರೆಯೆ ಅದರ ಚಹರೆ. ಆ ಚಹರೆಯನ್ನು ಬಿಟ್ಟುಕೊಟ್ಟು ಸುಮ್ಮನೆ ಒಂದು ಹೊಸ ಪದವನ್ನು ಕನ್ನಡದಲ್ಲಿ ಜಾರಿಗೆ ತಂದರೆ ಅದರಿಂದ ನಮ್ಮ ಚಿಂತನೆ ಮತ್ತು ಅದನ್ನು ಅನುಸರಿಸಿದ ಮಾತುಕತೆಗಳು ಹಳ್ಳ ಹಿಡಿಯುತ್ತವೆ ಎಂದು ಅರಿಯಬೇಕಾಗಿದೆ.

ಇಂತಹದೇ ಇನ್ನೊಂದು ಈಚಿನ ಪ್ರಸಂಗವನ್ನು ನೋಡೋಣ. ಕೆಲ ದಿನಗಳ ಹಿಂದೆ ಅನಾರ್ಕಿ, ಅನಾರ್ಕಿಸ್ಟ್, ಅನಾರ್ಕಿಸಿಮ್ ಎಂಬ ಪದಗಳು ಮತ್ತೆಮತ್ತೆ ಕೇಳಿಬಂದವು; ಹಾಗೆಯೇ ಬರಹಗಳಲ್ಲೂ ಕಂಡುಬಂದವು. ಅರವಿಂದ ಕೇಜ್ರಿವಾಲರು ತಮ್ಮ ಗೆಳೆಯರೊಡನೆ ಹಕ್ಕೊತ್ತಾಯ ಮಾಡಲು ದೆಹಲಿಯ ಬೀದಿಯಲ್ಲಿ ಕುಳಿತಾಗ ಅವರ ನಡೆಯನ್ನು ಒಪ್ಪದವರು ಅವರನ್ನು ಅನಾರ್ಕಿಸ್ಟ್ ಎಂದರು; ಕೇಜ್ರಿವಾಲರೇ ತಮ್ಮನ್ನು ತಾವು ಹಾಗೆಂದು ಬಣ್ಣಿಸಿಕೊಂಡದ್ದೂ ಉಂಟು. ಆಡಳಿತದ ಚುಕ್ಕಾಣಿ ಹಿಡಿದವರೇ ಹೀಗೆ ಹಕ್ಕೊತ್ತಾಯ ಮಾಡುತ್ತಾ ಕುಳಿತದ್ದು ಎಲ್ಲರಿಗೂ ಒಪ್ಪಿಗೆಯಾಗಲಿಲ್ಲ. ಸಂಸತ್ತಿನಲ್ಲಿ, ರಾಜ್ಯಗಳ ಮೇಲ್ಮನೆಗಳಲ್ಲಿ ಸದಸ್ಯರು ಕೂಗಾಡುವುದು, ಇತರರು ಮಾತಾಡುವಾಗ ಅಡ್ಡಿ ಮಾಡುವುದು, ಮೈಕು ಕಿತ್ತುಕೊಳ್ಳುವುದು, ಗುದ್ದುವುದು, ಬಟ್ಟೆ ಹರಿದುಕೊಳ್ಳುವುದು ಇವೆಲ್ಲವನ್ನೂ ಮಾಡಿದಾಗ ಅಂತಹ ನಡವಳಿಕೆಯನ್ನು ಬಣ್ಣಿಸುವ ವರದಿಗಾರರು 'ಅರಾಜಕತೆ' ಎಂಬ ಪದವನ್ನು ಬಿಡುಬೀಸಾಗಿ ಬಳಸಿದ್ದಾರೆ. ಕನ್ನಡದ ಸುದ್ದಿಹಾಳೆಗಳು, ಟಿವಿ ವರದಿಗಳು ಈ ಪದವನ್ನು ಬಳಸಿದ್ದನ್ನು ಓದಿದ್ದೇವೆ; ಕೇಳಿದ್ದೇವೆ. ಹೀಗೆ ನಡೆದುಕೊಳ್ಳುವ ಕಾಲ ಬಂತಲ್ಲ, ಇನ್ನು ಎಲ್ಲ ಮುಗಿದ ಹಾಗೆಯೇ ಎಂಬ ಸಿನಿಕತನವನ್ನೂ ನಮ್ಮಲ್ಲಿ ಹಲವರು ಬೆಳೆಸಿಕೊಳ್ಳುತ್ತಿದ್ದಾರೆ.

ಅನಾರ್ಕಿಸಂ ಎಂಬುದಕ್ಕೆ ಸಾಟಿಯಾಗಿ ಕನ್ನಡದಲ್ಲಿ ಸಂಸ್ಕತದ ಅರಾಜಕತೆ ಎಂಬ ಪದವನ್ನು ಬಳಸುವುದನ್ನು ಒಪ್ಪಿಕೊಂಡು ಬಿಟ್ಟಿದ್ದೇವೆ. ಇದು ಕೇವಲ ಒಂದು ಸಾಟಿ ಪದವಾಗಿ ಮಾತ್ರ ಉಳಿದಿಲ್ಲ. ಈ ಪದವನ್ನು ಬಳಸುವಾಗ ಅದು ಕೇವಲ ಒಂದು ವರ‌್ತನೆಯ ಬಣ್ಣನೆ ಎಂದು ತಿಳಿಯುವ ಹಾಗಿಲ್ಲ. ಏಕೆಂದರೆ ಅಂತಹ ವರ‌್ತನೆಯನ್ನು ಅರಾಜಕ ಎಂದು ಬಣ್ಣಿಸುವವರು ಹಾಗೆ ವರ್ತಿಸುವುದನ್ನು ತಾವು ಒಪ್ಪುವುದಿಲ್ಲ ಎಂಬುದನ್ನೂ ಹೇಳುತ್ತಿರುತ್ತಾರೆ. ಅಂದರೆ ಅರಾಜಕತೆ ಎನ್ನುವುದು ನಾವು ಬಯಸುವ ನಡವಳಿಕೆಯಲ್ಲ ಎಂಬುದು ಬಹುಮಟ್ಟಿಗೆ ಹಲವರ ತಿಳುವಳಿಕೆಯಾಗಿರುತ್ತದೆ.

ರಾಜ, ರಾಜಕ, ಅರಾಜಕ, ಅರಾಜಕತೆ ಇವು ಬಳಕೆಯಲ್ಲಿರುವ ಪದಗಳು (ಅರಾಜ ಎಂಬ ಪದ ಇರಬಹುದಾದರೂ ಕನ್ನಡದಲ್ಲಿ ಅದರ ಬಳಕೆಯನ್ನು ನಾನು ಕಂಡಿಲ್ಲ). ಅರಾಜಕ ಎಂಬ ಪದದಲ್ಲಿ ರಾಜ ಎಂಬ ಪದ ಇದ್ದರೂ ನೇರವಾಗಿ ಆ ಪದಕ್ಕೂ ಅರಾಜಕತೆಗೂ ನಂಟು ಇಲ್ಲ. ಅನಾರ್ಕಿ ಎಂಬ ಪದಕ್ಕೆ ಸಾಟಿಯಾಗಿ ಅರಾಜಕ ಪದವನ್ನು ಆಯ್ದುಕೊಂಡು ಬಳಸುವಾಗ ನಾವು ಕೇವಲ ಒಂದು ಪದವನ್ನು ಮಾತ್ರ ಆಯ್ದುಕೊಳ್ಳದೇ ಅದರ ಜತೆಗೆ ಒಂದು ನಿಲುವನ್ನೂ ಆಯ್ದುಕೊಂಡು ಬಿಟ್ಟಿದ್ದೇವೆ. ಅರಾಜಕತೆ ಎನ್ನುವುದನ್ನು ನಾವು ಬಯಸುವುದೂ ಇಲ್ಲ; ಅದನ್ನು ಒಪ್ಪುವುದೂ ಇಲ್ಲ ಎನ್ನುವುದೇ ಆ ನಿಲುವು. ನಮ್ಮ ಸುತ್ತ ಮಾತುಗಳ ಲೋಕವನ್ನೇ ಕಟ್ಟುವ ಜನರೂ ಈ ನಿಲುವನ್ನೇ ಗಟ್ಟಿ ಮಾಡುವವರಾಗಿದ್ದಾರೆ.


ದಿಟಕ್ಕೂ ಅನಾರ್ಕಿ ಎಂದರೇನು? ಯಾರು ಅನಾರ್ಕಿಸ್ಟರು? ಯಜಮಾನಿಕೆ ನಡೆಸುವವರು, ಅಧಿಕಾರ ಹೊಂದಿರುವವರು ತಮ್ಮ ಯಜಮಾನಿಕೆಗೆ, ಅಧಿಕಾರಕ್ಕೆ ಇರುವ ತಳಹದಿಗಳೇನು ಎಂಬುದನ್ನು ಸಾಬೀತು ಮಾಡಬೇಕು. ಅದು ಅವರ ಹೊಣೆ. ಅದು ತಮಗೆ ತನ್ನಿಂದ ತಾನೇ ಒದಗಿ ಬಂದಿದೆ ಎಂದೋ ಯಾರೂ ತಮ್ಮನ್ನು ಪ್ರಶ್ನಿಸುವಂತಿಲ್ಲ ಎಂದು ವಾದಿಸಿದರೆ ಆಗ ಅದನ್ನು ನಿರಾಕರಿಸುವ ನಡೆ ಬೇಕಾಗುತ್ತದೆ. ಹೀಗೆ ಯಜಮಾನಿಕೆ ಮಾಡುವವರನ್ನು, ಅಧಿಕಾರ ನಡೆಸುವವರನ್ನು ನಿಮಗೆ ಈ ಹಕ್ಕನ್ನು ಯಾರು ಕೊಟ್ಟರು ಎಂದು ಕೇಳುವುದು; ನಿಮ್ಮ ಯಜಮಾನಿಕೆಯನ್ನು ನಾವು ಒಪ್ಪುವುದಿಲ್ಲ ಎಂದು ಹೇಳುವುದೇ ಅನಾರ್ಕಿಸಂ. ಯಜಮಾನಿಕೆ ನಡೆಸುವರು ಹಕ್ಕುಗಳನ್ನು ಕಿತ್ತುಕೊಂಡಾಗ, ಏರುಪೇರನ್ನು ಹುಟ್ಟಿದಾಗ ಹಾಗೆ ಮಾಡಲು ಅವರಿಗೆ ಯಾರು ಅನುಮತಿ ಕೊಟ್ಟವರು ಎಂದು ಕೇಳುವವರೇ ಅನಾರ್ಕಿಸ್ಟ್. ಅಂದರೆ ಎಲ್ಲೆಲ್ಲಿ ಹಿಡಿತವಿಲ್ಲದ ಯಜಮಾನಿಕೆ ಇರುವುದೋ, ಎಲ್ಲಿ ಯಜಮಾನಿಕೆ ನಡೆಸುವವರೇ ತಮ್ಮನ್ನು ಕೇಳುವವರು ಯಾರೂ ಇಲ್ಲ ಎಂದು ಮೆರೆಯುತ್ತಾರೋ ಅಲ್ಲ್ಲೆಲ್ಲಾ ಅನಾರ್ಕಿಸ್ಟರು ಇದ್ದೇ ಇರುತ್ತಾರೆ.

ಕೊಂಚ ಹಳೆಯ ಕತೆಯನ್ನು ನೋಡಿ. ವೈದಿಕತೆ, ಆಚರಣೆಗಳು ಎದುರಾಳಿಗಳಿಲ್ಲವೆಂದು ಮೆರೆದಾಗ, ರಾಜತ್ವಕ್ಕೆ ಲಗಾಮುಗಳಿಲ್ಲದೇ ಹೋದಾಗ ಈ ಎರಡೂ ಬಗೆಯ ಯಜಮಾನಿಕೆಗಳ ಎದುರು ನಿಂತವರು ಅನಾರ್ಕಿಸ್ಟರೇ ಅಲ್ಲವೇ? ಅವರು ನಿಯಮಗಳನ್ನು ಮೀರಿದರು; ಅಚ್ಚುಕಟ್ಟ್ಟಾಗಿರುವುದನ್ನು ತಲೆಕೆಳಗು ಮಾಡಿದರು. ಯಜಮಾನಿಕೆಗೆ ಸವಾಲು ಎಸೆದರು. ಹಾಗೆ ನೋಡಿದರೆ ಎಲ್ಲ ಕಾಲಗಳಲ್ಲೂ ಒಂದಲ್ಲ ಒಂದು ಬಗೆಯ ಅನಾರ್ಕಿಸಂ ಇದ್ದದ್ದೇ. ಎಲ್ಲ ಕಾಲಗಳಲ್ಲೂ ಅನಾರ್ಕಿಸಂ ಎಂಬುದು ಯಜಮಾನಿಕೆಯನ್ನು ಮುರಿಯುವುದರಲ್ಲಿ ಗೆಲುವು ಕಂಡಿತೋ ಇಲ್ಲವೋ ಎಂಬುದನ್ನು ನಿಕ್ಕಿಯಾಗಿ ಹೀಗೇ ಎಂದು ಹೇಳಲು ಬರುವುದಿಲ್ಲ. ಆದರೆ ಅದು ಎಲ್ಲ ಕಾಲಗಳಲ್ಲೂ ತಾನು ಇದ್ದೇನೆಂದು ತೋರಿಸಿಕೊಂಡಿರುವುದಂತೂ ದಿಟ.

ಅನಾರ್ಕಿಸಂ ದಾರಿಯೋ ಇಲ್ಲವೇ ಗುರಿಯೋ? ಅಂದರೆ ಯಜಮಾನಿಕೆಯನ್ನು ಮುರಿದು ಅದರ ಬದಲಾಗಿ ಅದರ ಜಾಗದಲ್ಲಿ ತಲೆ ಎತ್ತ ಬೇಕಾದ ನೆಲೆಗಳನ್ನು ಅನಾರ್ಕಿಸಂ ತನ್ನ ಗುರಿಯನ್ನಾಗಿ ಇರಿಸಿಕೊಂಡಿರುತ್ತದೋ ಇಲ್ಲವೇ ಯಜಮಾನಿಕೆಗೆ ಸವಾಲು ಹಾಕಲು ಬೇಕಾದ ಒಳ ಮತ್ತು ಹೊರದಾರಿಗಳನ್ನು ಮಾತ್ರ ಹುಡುಕುತ್ತಿರುತ್ತದೋ? ಚರಿತ್ರೆಯುದ್ದಕ್ಕೂ ಅನಾರ್ಕಿಸಂ ಈ ಎರಡೂ ನೆಲೆಗಳಲ್ಲಿ ಕಂಡುಬಂದಿದೆ. ಅನಾರ್ಕಿಸಂ ಎಂಬುದು ಬದಲಿ ನೆಲೆಯಾಗಿದ್ದರೆ, ಅಂದರೆ ಅದೊಂದು ಗುರಿ ಎಂದುಕೊಂಡರೆ ನಮ್ಮ ಚರಿತ್ರೆಯಲ್ಲಿ ಅದೊಂದು ಈಡೇರದ ಬಯಕೆಯಾಗಿಯೇ ಕಂಡುಬರುತ್ತದೆ. ಬಿಡುಗಡೆ ಮತ್ತು ಕಟ್ಟುಪಾಡುಗಳೆರಡೂ ಇದ್ದು ಹೊರಗಿನ ಯಾವ ಒತ್ತಾಯವಾಗಲೀ ಇರದ ಮತ್ತು ಒತ್ತಾಯವನ್ನು ಹೇರುವ ಯಜಮಾನಿಕೆಯಾಗಲೀ ಇಲ್ಲದಿರುವ ನೆಲೆಯನ್ನು ಅನಾರ್ಕಿಸಂ ಬಯಸುತ್ತದೆ. ಒಂದು ವೇಳೆ ಅನಾರ್ಕಿಸಂ ಒಂದು ದಾರಿ ಎನ್ನುವುದಾದರೆ ಅದು ಯಜಮಾನಿಕೆಯ ನೆಲೆಗಳಿಗೆ ಎಚ್ಚರಿಕೆಯನ್ನು ನೀಡುವ, ಅದು ಹದ್ದು ಮೀರದಂತೆ ನೋಡಿಕೊಳ್ಳುವ ಕೆಲಸವನ್ನು ಮಾಡುತ್ತಿರುತ್ತದೆ ಎಂದುಕೊಳ್ಳಬೇಕಾಗುತ್ತದೆ.

ಇದೆಲ್ಲವನ್ನೂ ನೋಡಿದಾಗ ಯಾರಾದರೂ ಅನಾರ್ಕಿಸ್ಟ್ ಆಗಿದ್ದರೆ ಇಲ್ಲವೇ ಹಾಗೆಂದು ತಮ್ಮನ್ನು ತಾವು ಕರೆದುಕೊಂಡರೆ ನಾವು ಅವರನ್ನು ಬುಡಮೇಲುಕಾರರೆಂದು, ಅಚ್ಚುಕಟ್ಟಾಗಿರುವ ಜೋಡಣೆಯನ್ನು ಹಾಳುಗೆಡಹುವವರೆಂದು, ನಿಯಮಗಳ ಪಾಲನೆಗೆ ಸೊಪ್ಪುಹಾಕದವರೆಂದು ತಿಳಿಯಬೇಕಾಗಿಲ್ಲ ಎನ್ನುವುದು ಗೊತ್ತಾಗುತ್ತದೆ. ಅನಾರ್ಕಿ ಇಲ್ಲವೇ ನಾವು ಬಣ್ಣಿಸುವಂತೆ ಅರಾಜಕತೆ ಎನ್ನುವುದು ಗೊಂದಲ, ಗೋಜಲುಗಳಿಗೆ ಸಾಟಿಯಾದ ಪದವಲ್ಲ. ಗೊಂದಲ ಹುಟ್ಟಿಸುವವರಿಗೆ, ದೊಂಬಿ ಮಾಡುವವರಿಗೆ ಗುರಿಗಳಿರುವುದಿಲ್ಲ. ಆದರೆ ಆನಾರ್ಕಿಸಂ ಎನ್ನುವುದು ಒಂದು ರಾಜಕೀಯ ಚೌಕಟ್ಟು. ಕೇವಲ ದೊಂಬಿ ಮಾತ್ರ ಅದರ ಗುರಿಯಾಗಲಾರದು.


ಮಂದಿಯಾಳ್ವಿಕೆಯ ಏರ್ಪಾಟಿನಲ್ಲಿ, ಅಂದರೆ ಪ್ರಜಾಪ್ರಭುತ್ವದಲ್ಲಿ ನಾವು ಒಪ್ಪದ ನಿಲುವನ್ನು ಮುಂದಿಡಲು ಚರ್ಚೆ, ಮಾತುಕತೆ ಇವೇ ಮುಂತಾದ ದಾರಿಗಳಿವೆ; ಅದಕ್ಕಾಗಿಯೇ ಏರ್ಪಾಟಾದ ಸದನಗಳಿವೆ ಎಂದು ಹೇಳುವುದುಂಟು. ಇವರು ಅನಾರ್ಕಿಯನ್ನು ಒಪ್ಪದವರು. ದಿಟ, ಮಾತಾಡುವ ಹಕ್ಕು ಎಲ್ಲರಿಗೂ ಇದೆ. ಆದರೆ ಬೇರೆಯವರ ಮಾತು ಕೇಳಿಸಿಕೊಳ್ಳುವ ಹೊಣೆ ಎಲ್ಲರಿಗೂ ಇಲ್ಲವಲ್ಲ. ಮಾತುಕತೆ, ಚರ್ಚೆಗಳ ಗುರಿ, ಸದನಗಳ ನಡಾವಳಿಗಳು ಸಹಮತವನ್ನು ಬಲಪಡಿಸುವುಕ್ಕಾಗಿ ಇರಬೇಕು. ಆದರೆ ಅಲ್ಲೆಲ್ಲಾ ಅಂತಹ ಸಹಮತ ಉಂಟಾಗುವುದನ್ನು ತಪ್ಪಿಸುವುದೇ ಗುರಿಯಾದರೆ ಏನು ಮಾಡುವುದು. ಯುದ್ಧ ತಪ್ಪಿಸಲು ಸಂಧಿಗಾಗಿ ಬಂದ ಕೃಷ್ಣ ಬರುವ ಮೊದಲೇ 'ಕಾಳಗವನ್ನು ಬಲಿದು ಬಹೆನು' ಎಂದು ಮಾತು ಕೊಟ್ಟು ಬಂದಿದ್ದರೆ ಸಂಧಿ ನಡೆಯುವುದು ಎಲ್ಲಿಂದ? ಅಂದರೆ ಕಾಲಕಾಲಕ್ಕೆ ಮಂದಿಯಾಳ್ವಿಕೆಯ ಏರ್ಪಾಟು ಹುಟ್ಟುಹಾಕುವ ಅಧಿಕಾರ ಕೇಂದ್ರಗಳ ಹಿಂದಿನ ಅತಾರ್ಕಿಕತೆಗಳನ್ನು ಬಯಲು ಮಾಡಬೇಕಾಗುತ್ತದೆ. ಅವುಗಳಿಗೆ ಆ ಅಧಿಕಾರ ಬಂದುದೆಲ್ಲಿಂದ ಎಂದು ಕೇಳಬೇಕಾಗುತ್ತದೆ. ಅದಕ್ಕಾಗಿಯೇ ಅನಾರ್ಕಿಸಂನ ದಾರಿಗಳು ತೆರೆದುಕೊಳ್ಳುತ್ತವೆ.


ಹಾಗಿದ್ದರೆ ಈ ಬರಹದ ಗುರಿ ಏನು? ಇದೆಲ್ಲವನ್ನೂ ಹೇಳಿದ್ದು ಅನಾರ್ಕಿಸಂನ ಬಗೆಗೆ ವಕಾಲತ್ತು ಮಾಡುವುದಕ್ಕಾಗಿ ಅಲ್ಲ. ಒಂದು ಪದವನ್ನು ಬಳಸುವಾಗ ಅದು ನಮ್ಮ ಬದುಕಿನಲ್ಲಿ ಯಾಕೆ ನೆಲೆಗೊಂಡಿದೆ ಎಂಬುದನ್ನು ತಿಳಿಯದೇ ಬಳಸುವುದು ಸರಿಯಲ್ಲ ಎಂದು ಹೇಳುವುದು. ಅಲ್ಲದೆ ಪದಗಳ ಮೊರೆ ಹೊಕ್ಕು ಅವುಗಳ ಹಿಂದೆ ಅವಿತುಕೊಂಡು ನಮ್ಮ ತಿಳಿವನ್ನು, ತಿಳಿವಿನ ದಾರಿಗಳನ್ನು ಮುಚ್ಚಿಕೊಳ್ಳುವುದು ಸರಿಯಲ್ಲ ಎಂದು ಅರಿತುಕೊಳ್ಳುವುದು ಈ ಬರಹದ ಗುರಿ.
***

ಸಾಮಾಜಿಕ ಮತ್ತು ರಾಜಕೀಯ ಪ್ರಜ್ಞೆ ನಮ್ಮೊಳಗೆ ಜಾಗೃತವಾಗುತ್ತಿದ್ದಂತೆ ವ್ಯವಸ್ಥೆ, ಆಡಳಿತ ಮತ್ತು ಅರಾಜಕತೆ ಕುರಿತ ಆಲೋಚನೆಗಳು ಏಳುತ್ತವೆ. ಸದ್ಯದ ರಾಜಕೀಯ ಚಿತ್ರಣದಲ್ಲಿ ಅರಾಜಕತೆಯ ಕುರಿತು ಹಲವು ಆಯಾಮಗಳಲ್ಲಿ ಚರ್ಚೆ ನಡೆಯುತ್ತಿದೆ. ದಶಕಗಳ ಹಿಂದೆ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿದ್ದ ಭಿನ್ನ ವಿಚಾರಧಾರೆಗಳ ಇಬ್ಬರು ನಾಯಕರು ಆ ಕಾಲದಲ್ಲಿ ಅರಾಜಕತೆಯನ್ನು ಹೇಗೆ ಗ್ರಹಿಸಿಕೊಂಡಿದ್ದರು ಎಂಬುದನ್ನು ಇಲ್ಲಿ ನೋಡಬಹುದು.

ಗಾಂಧಿ ಪ್ರತಿಪಾದನೆ
ಗಾಂಧೀಜಿಯ ಸತ್ಯಾಗ್ರಹವನ್ನು ಅರಾಜಕತೆಯ ಅಸ್ತ್ರವನ್ನಾಗಿ ಅನೇಕ ಇತಿಹಾಸಕಾರರು ಗುರುತಿಸುತ್ತಾರೆ. ಕೆನಡಾದ ಲೇಖಕ ಜಾರ್ಜ್ ವುಡ್‌ಕಾಕ್, ಗಾಂಧಿ ತಮ್ಮನ್ನು ಅರಾಜಕತೆಯ ಪ್ರತಿನಿಧಿಯಾಗಿ ಗುರುತಿಸಿಕೊಂಡಿದ್ದರು ಎನ್ನುತ್ತಾರೆ. ಗಾಂಧೀಜಿ ಅವರ ಹೇಳಿಕೆಯನ್ನೇ ಇಲ್ಲಿ ಉಲ್ಲೇಖಿಸಬಹುದು: 'ದುಷ್ಟ ವ್ಯವಸ್ಥೆ ಯಾವುದೇ ಉದ್ದೇಶದಿಂದಾದುದಲ್ಲ. ಅದು ಸಾಮಾಜಿಕ ಪಿಡುಗಿನ ಫಲ. ಉದಾಹರಣೆಗೆ ಮಾರುತಕ್ಕೆ ಸಮುದ್ರದಲ್ಲಿ ಅಲೆಗಳನ್ನು ಉಕ್ಕಿಸುವ ಉದ್ದೇಶವೇನಿರುವುದಿಲ್ಲ. ಆದರೆ ಮಾರುತದ ಪರಿಣಾಮದಿಂದಾಗಿ ಅಲೆಗಳು ಉಕ್ಕುತ್ತವೆ. ಹಾಗೆಯೇ, ದುಷ್ಟವ್ಯವಸ್ಥೆಯನ್ನು ಕಿತ್ತೊಗೆಯಬೇಕೆಂದರೆ ಅದಕ್ಕೆ ಕಾರಣವಾಗುವ ಪೂರ್ವಸ್ಥಿತಿಯೇ ಇಲ್ಲದಂತೆ ಮಾಡುವುದು'.

'ವ್ಯಕ್ತಿಗೆ ಆತ್ಮ ಎಂಬುದಿರುತ್ತದೆ. ಆದರೆ ವ್ಯವಸ್ಥೆ ಆತ್ಮವಿಲ್ಲದ ಯಂತ್ರವಿದ್ದಂತೆ. ಹಿಂಸೆಯಿಂದಲೇ ಅದರ ಅಸ್ವಿತ್ವವನ್ನು ಉಳಿಸಿಕೊಳ್ಳುತ್ತದೆ. ಹಿಂಸೆಯಿಂದ ವ್ಯವಸ್ಥೆಯನ್ನು ದೂರ ಮಾಡುವುದು ಕಷ್ಟ' ಎಂದು ಹೇಳುತ್ತಿದ್ದ ಅವರು ಅಹಿಂಸೆಯ ಮಾರ್ಗ ಅನುಸರಿಸಲು ಅರಾಜಕತೆಯೂ ಬೇಕು ಎಂಬ ನಿಲುವನ್ನು ತಾಳಿದ್ದರು.


ಸಾಮೂಹಿಕ ವಿಮೋಚನೆಯತ್ತ ಗಾಂಧಿ ಆಸಕ್ತಿಯತ್ತ ವಾಲಿದ್ದು ಕೂಡ ವ್ಯಕ್ತಿವಾದಿ ಅರಾಜಕತೆ ಚಿಂತನೆಯಿಂದ. ವ್ಯಕ್ತಿಯೊಬ್ಬ ಆತ್ಮಸಾಕ್ಷಿಯೇ, ವ್ಯವಸ್ಥೆಯೊಂದರ ಸಮರ್ಥ ಸ್ವರೂಪ ಎಂಬುದು ಅವರ ನಿಲುವಾಗಿತ್ತು. ಸ್ವರಾಜ್ಯ ಕಲ್ಪನೆಯ ವ್ಯಕ್ತಿಗತವಾದದ ಒಲವಿನಿಂದಾಗಿಯೇ ಅವರು ಸಂಸದೀಯ ರಾಜಕಾರಣ, ರಾಜಕೀಯ ಪಕ್ಷಗಳ ಬಗ್ಗೆ ಒಲವು ತೋರಿಸಿರಲಿಲ್ಲ. ಅಂದಹಾಗೆ, ಗಾಂಧಿ ಅವರ ಈ ಆಲೋಚನೆಗಳನ್ನು ಪ್ರಭಾವಿಸಿದ್ದು ಪ್ರಸಿದ್ಧ ಲೇಖಕ ಲಿಯೋ ಟಾಲ್‌ಸ್ಟಾಲ್ ಅವರ 'ದಿ ಕಿಂಗ್‌ಡಮ್ ಆಫ್ ಗಾಡ್ ವಿತಿನ್ ಯೂ' ಕೃತಿ.
***

ಕ್ರಾಂತಿಕಾರಿಯ ಸ್ವಾತಂತ್ರ್ಯದ ಮಾರ್ಗ
ಗಾಂಧಿ ಅಹಿಂಸೆಯ ಹೋರಾಟ ತೀವ್ರತೆ ಪಡೆದುಕೊಳ್ಳುತ್ತಿದ್ದ ಕಾಲದಲ್ಲೇ ಕ್ರಾಂತಿಕಾರಿಗಳು ಸ್ವಾತಂತ್ರ್ಯ ಹೋರಾಟದ ಹುರುಪಿನಲ್ಲಿದ್ದರು. ಅವರಲ್ಲಿ ಒಬ್ಬರು ಭಗತ್ ಸಿಂಗ್. ಪಾಶ್ಚಾತ್ಯ ಕಲ್ಪನೆಯಾಗಿದ್ದ ಕಮ್ಯುನಿಸಂ ಮತ್ತು ಅರಾಜಕತೆಯಿಂದ ಅವರು ಆಕರ್ಷಿತರಾಗಿದ್ದರು. ಆ ಕಾಲದಲ್ಲಿ ಹೋರಾಟಗಾರರನ್ನು ಪ್ರಭಾವಿಸಿದ್ದ ಮಿಖೈಲ ಬಕುನಿನ್, ಕಾರ್ಲ್ ಮಾರ್ಕ್ಸ್, ವ್ಲಾಡಿಮಿರ್ ಲೆನಿನ್, ಲಿಯೋನ್ ಟ್ರಾಟ್‌ಸ್ಕಿಯವರನ್ನು ಓದಿಕೊಂಡಿದ್ದರು. ಅರಾಜಕತೆಯನ್ನು ಕುರಿತು ಪಂಜಾಬಿ ಪತ್ರಿಕೆ 'ಕೀರ್ತಿ'ಯಲ್ಲಿ 1928ರಲ್ಲಿ ಸರಣಿ ಲೇಖನಗಳನ್ನು ಬರೆದರು. ಈ ಲೇಖನಗಳಲ್ಲಿ ಅವರು, 'ಜನ ಅರಾಜಕತೆ ಎಂಬ ಪದದ ಬಗ್ಗೆಯೇ ಆತಂಕವಿಟ್ಟುಕೊಂಡಿದ್ದಾರೆ. ಅರಾಜಕತೆ ಎಂಬ ಪದವನ್ನು ತಪ್ಪಾಗಿ ಬಳಸಲಾಗಿದೆ. ಭಾರತದ ಕ್ರಾಂತಿಕಾರಿಗಳನ್ನು ಅರಾಜಕತೆಯ ಪ್ರತಿನಿಧಿಗಳು ಎಂದು ಜರೆದಿದ್ದಾರೆ. ಈ ಮೂಲಕ ನಮ್ಮನ್ನು ಕುಖ್ಯಾತರೆಂದು ದೂಷಿಸಲಾಗುತ್ತಿದೆ. ಅರಾಜಕತೆ ಎಂದರೆ ಆಳುವವನ ಗೈರು, ಆಳುವ ವ್ಯವಸ್ಥೆಯೊಂದನ್ನು ರದ್ದು ಮಾಡುವುದು. ಹಾಗೆಂದು ನಿಯಮಗಳೇ ಇಲ್ಲದಿರುವುದು ಎಂದಲ್ಲ. ಅರಾಜಕತೆಯ ಅಂತಿಮ ಗುರಿ ಸಂಪೂರ್ಣ ಸ್ವಾತಂತ್ರ ್ಯ. ಅದರ ಪ್ರಕಾರ ಯಾರೂ ದೇವರು, ಧರ್ಮವನ್ನು ಒಪ್ಪಿಕೊಂಡವರಾಗಿರುವುದಿಲ್ಲ. ಹಣ, ಅಧಿಕಾರಗಳ ವ್ಯಾಮೋಹಿಗಳಾಗಿರುವುದಿಲ್ಲ. ಬಂಧಿಸುವ ಸರಪಳಿಗಳಾಗಲಿ, ಸಂಸ್ಥೆಯಾಗಲೀ ಇರುವುದಿಲ್ಲ' ಎಂದು ಬರೆದಿದ್ದರು.
***

ದಿ ಸೀಕ್ರೆಟ್ ಏಜೆಂಟ್
20ನೇ ಶತಮಾನದ ಪ್ರಸಿದ್ಧ ಇಂಗ್ಲಿಷ್ ಕಾದಂಬರಿಕಾರ ಜೋಸೆಫ್ ಕಾನ್ರಾಡ್ ಬರೆದ 'ದಿ ಸೀಕ್ರೆಟ್ ಏಜೆಂಟ್' ಭಯೋತ್ಪಾದನೆಯ ಜೊತೆಗೆ ಅರಾಜಕತೆಯನ್ನು ಕುರಿತು ವಿವಿಧ ಚಿಂತನೆಗಳನ್ನು ನಮ್ಮ ಮುಂದಿಡುತ್ತದೆ.

ಗ್ರೀನ್‌ವಿಚ್‌ನಲ್ಲಿರುವ ರಾಯಲ್ ಅಬ್ಸರ‌್ವೇಟರಿಯನ್ನು ಸ್ಫೋಟಿಸುವುದಕ್ಕೆ ಸೀಕ್ರೆಟ್ ಏಜೆಂಟನೊಬ್ಬ ಯೋಜಿಸುವ ಉದ್ದೇಶದ ಸುತ್ತ ಕಾದಂಬರಿಯನ್ನು ಹೆಣೆದಿದ್ದಾನೆ ಕಾನ್ರಾಡ್. ಈ ಮೂಲಕ ಆಳುವ ವರ್ಗಕ್ಕೆ ಘಾಸಿ ಉಂಟುಮಾಡುವುದು ಉದ್ದೇಶ. ತನ್ನ ಗೆಳೆಯರೊಂದಿಗೆ ಸೇರಿ ಈ ಉದ್ದೇಶಕ್ಕಾಗಿ ತಯಾರಿ ನಡೆಸುತ್ತಾರೆ.

ಕಾನ್ರಾಡ್ ಅರಾಜಕತೆಯ ರಾಜಕೀಯ ಕ್ರಾಂತಿಯನ್ನು ಹುಚ್ಚು ನಿಲುವಿನಂತೆ ನೋಡದೆ, ಯುವಕರು ಅತಿ ಎನ್ನಿಸುವ ಇಂಥ ರಾಜಕೀಯ ನಿಲುವಿನತ್ತ ಹೇಗೆ ವಾಲುತ್ತಾರೆ ಎಂಬುದನ್ನು ಅವಲೋಕಿಸುವ ಪ್ರಯತ್ನ ಮಾಡಿದ್ದಾನೆ. 100 ವರ್ಷಗಳ ಹಿಂದೆಯೇ ಬಂದ ಈ ಕಾದಂಬರಿ, ಆ ಹೊತ್ತಿಗೆ ರಾಜಕೀಯ ಸ್ಥಿತ್ಯಂತರಗಳ ಕುರಿತು ಸೂಕ್ಷ್ಮವಾದ, ಘನವಾದ ಆಲೋಚನೆಗಳ ಮೂಲಕ ಗಮನ ಸೆಳೆದಿತ್ತು.

ಕಾಮೆಂಟ್‌ಗಳಿಲ್ಲ: