ಮಂಗಳವಾರ, ಮಾರ್ಚ್ 25, 2014

ಕಲೆಯಲ್ಲಿ ಸಂಕೋಲೆ
* ಎಚ್ ಎ ಅನಿಲ್ ಕುಮಾರ್

ಸೌಜನ್ಯ: ವಿಜಯ ಕರ್ನಾಟಕ

ಒಂದು ಮ್ಯೂಸಿಯಮ್ಮನ್ನು ಒಳಹೊಕ್ಕು ಅಲ್ಲಿರುವ ಕಲಾಕೃತಿಗಳನ್ನು ನೋಡಿದಾಗ ಕೇವಲ ಕುಂಚದ ಮಹಿಮೆ, ಬಣ್ಣಗಳ ಸಂಯೋಜನೆ, ಭಾವಗಳ ಆಟವನ್ನಷ್ಟೇ ನೋಡುವುದಲ್ಲ. ಅದರಿಂದ ಕಂಗಳಿಗೆ ತೃಪ್ತಿಯಾಗಬಹುದು, ನಿಜ. ಆದರೆ, ಅದರ ಹಿಂದಿನ ಮನಃಸ್ಥಿತಿಯನ್ನೂ ನಾವು ಗ್ರಹಿಸಬೇಕು. ಏಕೆಂದರೆ ಈ ಪ್ರತಿಭೆಯ ಲೋಕದಲ್ಲೂ ಬಿಳಿ ತೊಗಲಿನವರ ಮೇಲಾಟವಿದೆ; ವರ್ಣೀಯರ ಪಾಲಿನ ಸಂಕೋಲೆಗಳಿವೆ; ಗುಲಾಮಗಿರಿಯ ಚಿಹ್ನೆಗಳಿವೆ. ಮೇಲ್ನೋಟಕ್ಕೆ ಮುದ ನೀಡುವ ಮ್ಯೂಸಿಯಂಗಳ ಆಳದಲ್ಲಿ ಅನೇಕ ಅಮಾನವೀಯ ಅಂಶಗಳಿವೆ ಎಂದರೆ ನೀವು ನಂಬಲೇಬೇಕು.

  ಇಪ್ಪತ್ತೈದು ವರ್ಷಗಳ ಹಿಂದೆ ಭೋಪಾಲದ 'ಮ್ಯೂಸಿಯಂ ಆಫ್ ಮ್ಯಾನ್' ಅನ್ನು ನಾನು ಕಲಾವಿದ್ಯಾರ್ಥಿಯಾಗಿ ನೋಡಿದಾಗ ಕಲಾವಿದರಿರಲಿ, ಶ್ರೀಸಾಮಾನ್ಯನೂ ಗಾಬರಿ ಪಡುವಂತಹ ದೃಶ್ಯಗಳನ್ನಲ್ಲಿ ಕಂಡೆ. ಭಾರತದ ಪ್ರಮು ಬುಡಕಟ್ಟು ಜನರ ಮನೆಗಳನ್ನು ಅಲ್ಲಿ ಪುನರ್ಸೃಷ್ಟಿಸಲಾಗಿತ್ತು. ಅಸಲಿ ಬುಡಕಟ್ಟಿನ ಸಂಸಾರಸ್ಥರು ತಮ್ಮ ಅಸು ಆವರಣದಲ್ಲಿ ತೊಡುತ್ತಿದ್ದರು ಎಂದು ಭಾವಿಸಲಾದ ವಸ್ತ್ರಗಳನ್ನು ತೊಟ್ಟು ಮಾನವ ಸಂಗ್ರಹಾಲಯದ ತಮ್ಮ ತಮ್ಮ ಬುಡಕಟ್ಟಿನ ಮನೆಗಳ ಮುಂದೆ ಪಹರೆ ಕಾಯುತ್ತಿದ್ದರು. ಪ್ರತಿ ಸಂಸಾರವೂ ಮೂರು ತಿಂಗಳ ಕಾಲ ಅಲ್ಲಿ 'ವೀಕ್ಷಿತ'ರಾಗಿ (ಪ್ರಾಣಿ ಸಂಗ್ರಹಾಲಯದ ಪಶು-ಪಕ್ಷಿಗಳಂತೆ) ಆ ಮನೆಗಳ ಒಡೆಯರಾಗಿ ವೀಕ್ಷಕರ ಕಣ್ಣಿಗೆ ಆಹಾರವಾಗಲು ವಂತಿಗೆ ಪಡೆಯುತ್ತಿದ್ದರು. ನಮ್ಮ ಗೆಳೆಯರಲ್ಲಿ ಕೆಲವರು ಅಂತಹುದೇ ಕುಟುಂಬದಿಂದ ಬಂದವರಾಗಿದ್ದರು. ಒಂದೆರೆಡು ತಲೆಮಾರುಗಳ ಹಿಂದೆಯಷ್ಟೇ ವಾಸ್ತವವಾಗಿದ್ದದ್ದು ಈಗ ಸಂಗ್ರಹಾಲಯವಾಗಿ ಬಿಟ್ಟಿತ್ತು! ಒರಿಸ್ಸಾದ ಮಾನವ ಸಂಗ್ರಹಾಲಯದಲ್ಲಿ ನಿರ್ಮಿಸಲಾಗಿರುವ ಸಂಗ್ರಹಿತ ಗೃಹವು ನನ್ನ ಬಾಲ್ಯದ ನಮ್ಮ ಮನೆಯನ್ನು ಹೋಲುತ್ತಿತ್ತು! ನಾವು ಬದುಕಿದ ವಾತಾವರಣವನ್ನೇ ನಮ್ಮ ಜೀವಮಾನದಲ್ಲಿ ಸಂಗ್ರಹಾಲಯವನ್ನಾಗಿ ಮಾಡಿದರೆ ಅದು ಗುಲಾಮಗಿರಿಯ ಮೊದಲ ಹೆಜ್ಜೆಯಾಗಿ ಬಿಡುತ್ತದೆ.

ಮಕ್ಕಳು ಪ್ರಾಣಿ ಸಂಗ್ರಹಾಲಯವನ್ನು ನೋಡಲು ಏಕೆ ನಿರಾಸಕ್ತರಾಗುತ್ತಾರೆ ಎಂದು ಜಾನ್ ಬರ್ಜರ್ ಭಾವಿಸುತ್ತಾನೋ ಅಂತಹ ಪರಿಕಲ್ಪನೆಯಲ್ಲೂ ಇಂಥದೇ ಕಾರಣವಿದೆ. ಎಡ್ಡಿ ಚೇಂಬರ್ಸ್‌ ಎಂಬ ಬ್ರಿಸ್ಟಲ್‌ನ ಕಲಾ ವಿದ್ವಾಂಸ, ಕ್ಯುರೇಟರ್ ಲಂಡನ್ನಿನ ಟೇಟ್ ಮಾಡರ್ನ್ ಸಂಗ್ರಹಾಲಯವನ್ನು ಕುರಿತು ಅದು 'ವೈಟ್ ವಾಷ್' ಆಗಿದೆ ಎನ್ನುತ್ತಾನೆ. ಅಲ್ಲಿನ ಅನರ್ಘ್ಯ ಕಲಾಕೃತಿಗಳನ್ನು ಕಾವಲು ಕಾಯುವವರೆಲ್ಲ ಬಿಳಿಯರು. ಅದೇ ಕಟ್ಟಡದ ಕೆಫೆಯಲ್ಲಿ ತಿಂಡಿತೀರ್ಥವನ್ನು ಬಡಿಸುವವರೆಲ್ಲ ಕರಿಯರು ಎಂದು ಆತ ತನ್ನ ಬರವಣಿಗೆಯಲಿ (ಕನೊಟೇಷನ್ಸ್) ನಿರೂಪಿಸುತ್ತಾನೆ. ಬಿಳಿಯರು ಸಂಗ್ರಹಾಲಯದ ಒಡೆತನ ಸ್ಥಾಪಿಸುವುದರ ಮೂಲಕ ಹೇಗೆ ನಮ್ಮನಿಮ್ಮನ್ನೆಲ್ಲ 'ವೈಟ್ ವಾಷ್' ಮಾಡಿಬಿಟ್ಟಿದ್ದಾರೆ ಅಥವಾ ಬಿಳಿಯ-ಸಾರ್ವಭೌಮತ್ವವನ್ನು ಹೇಗೆ ಸ್ಥಾಪಿಸಿದ್ದಾರೆ ಎಂದು ಭಾವಪೂರ್ಣವಾಗಿ ನಿರೂಪಿಸಿದ್ದಾನೆ. ನಮ್ಮ ಕಲ್ಲಿನ ಬಸವನನ್ನು ಬ್ರಿಟಿಷ್ ಕ್ರಿಸ್ಟಿಯಾನ ಕಾವಲು ಕಾಯುತ್ತಿದ್ದದ್ದು ನನ್ನ ಕೆಡುಕು ಮನಸಿಗಂತೂ ವಸಾಹತೀಕರಣೋತ್ತರದ ಸವ್ವಾಸೇರಿನ ವಿಷಯವಾಗಿ ಖುಷಿ ಕೊಟ್ಟಿದ್ದಂತೂ ನಿಜ.

ಸಂಗ್ರಹಾಲಯಗಳನ್ನು ಭೇಟಿ ಮಾಡುವಾಗ ಒಂದು ವಿಷಯ ಗಮನಿಸಿ: ಯಾವ ಸಂಗ್ರಹಾಲಯಗಳಲ್ಲಿ ಬೇರೆ ದೇಶಗಳ ಕಲಾಕೃತಿಗಳನ್ನೂ ಸಂಗ್ರಹಿಸಿರುತ್ತಾರೋ ಅಲ್ಲೆಲ್ಲ ಇತರ ದೇಶಗಳನ್ನು ಗುಲಾಮಗಿರಿಗೆ ಒಡ್ಡಿರುವ ನಿದರ್ಶನಗಳಿರುತ್ತವೆ. ಎಲ್ಲೆಲ್ಲಿ ತಮ್ಮದೇ ದೇಶಗಳ ಸಾಂಸ್ಕತಿಕ ವಸ್ತುಗಳನ್ನು ಶೇಖರಿಸಿರುತ್ತಾರೋ (ಈಜಿಪ್ಟಿನ ಸಂಗ್ರಹಾಲಯದ ಮಮ್ಮಿಗಳಂತೆ) ಅಲ್ಲೆಲ್ಲ ವಿದೇಶೀ ರಾಜ್ಯಾಡಳಿತಕ್ಕೆ ಪ್ರತಿರೋಧ ಒಡ್ಡಿರುವುದನ್ನು ಕಾಣಬಹುದು. ಉದಾಹರಣೆಗೆ ಲಂಡನ್ನಿನ 'ವಿಕ್ಟೋರಿಯಾ ಆಲ್ಬರ್ಟ್ ಸಂಗ್ರಹಾಲಯ'. ರಸ್ತೆರಸ್ತೆಗಳಲ್ಲೂ ಕಂಡುಬರುವ ನಮ್ಮ ಕಲ್ಲಿನ ಬೀದಿ ಬಸವ, ಚಿತ್ರಕಲಾ ಪರಿಷತ್ತಿನಲ್ಲಿ ಕಾಸಿಗೊಂದು ಕೊಸರಿಗೊಂದು ಮಾರಾಟವಾಗುವ ಸಾಂಪ್ರದಾಯಿಕ ಹಾಗೂ ಬುಡಕಟ್ಟು ಚಿತ್ರಕಲೆಗಳೆಲ್ಲ ಅಲ್ಲಿ ಘನಗಾಂಭೀರ್ಯದಲ್ಲಿ 'ಮ್ಯೂಸಿಯಂ ಪೀಸ್'ಗಳಾಗಿ ವಿರಾಜಿಸುತ್ತಿರುತ್ತವೆ. ಈ ನಿಟ್ಟಿನಿಂದ ಸಂಗ್ರಹಾಲಯಗಳು ಮೊದಲಿಗೆ ಶೋಷಣೆಯ ಸಂಕೇತ. ಬೆಂಗಳೂರಿನ ವೆಂಕಟಪ್ಪ ಕಲಾ ಗ್ಯಾಲರಿಯನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿ. ಅಲ್ಲಿ ಕೆ ವೆಂಕಟಪ್ಪ, ಕೆ ಕೆ ಹೆಬ್ಬಾರ್ ಅವರುಗಳ ಕಲಾಕೃತಿಗಳ ಜೊತೆ ರಾಜಾರಾಂ ಎಂಬ ಅನಾಮಿಕ ಶಿಲ್ಪಿಯ ಕೃತಿಗಳೂ ಇವೆ. ಮೊದಲ ಇಬ್ಬರು ಪರಿಚಿತರಾಗಿದ್ದರೆ ಕೊನೆಯವರು ಯಾರ ವಿಮರ್ಶೆಯಲ್ಲೂ ಪ್ರಸ್ತುತವಿರದ, ಕಲಾವಿದರಿಗೇ ಪರಿಚಯವಿರದ ಕಲಾವಿದ! ಇಂತಹ ಕಲಾವಿದ ಸಂಗ್ರಹಯೋಗ್ಯವಾದುದರ ಹಿಂದೆ ನಮ್ಮ ಕಂಗಳನ್ನು ಸಮಕಾಲೀನವಾಗಿ ವಸಾಹತೀಕರಿಸುವ ದಬ್ಬಾಳಿಕೆಯೂ ಇಲ್ಲದಿಲ್ಲ.

ವೆಂಕಟಪ್ಪ ಸಂಗ್ರಹಾಲಯದ ಕಾರ್ಯವಿಧಾನದ ಪ್ರಕಾರ ಏಳು ದಶಕಗಳ ಸ್ವತಂತ್ರ ಕರ್ನಾಟಕದಲ್ಲಿ ಮೂಡಿಬಂದವರು ಕೇವಲ ಹೆಬ್ಬಾರ್, ವೆಂಕಟಪ್ಪ ಹಾಗೂ ರಾಜಾರಾಂ ಎಂದಂತಾಯಿತು. ಇಂತಹ ಆಯ್ಕೆಯ, ನಿರಾಕರಣದ ಪ್ರಕ್ರಿಯೆಯಲ್ಲಿ ಆಡಳಿತದ ಅಜ್ಞಾನದಿಂದುಂಟಾದ ಜ್ಞಾನಕೇಂದ್ರೀಯ ಗುಲಾಮಗಿರಿ ಇದೆ. ಲಂಡನ್ನಿನ 'ಇಂಪೀರಿಯಲ್ ವಾರ್ ಮ್ಯೂಸಿಯಂ' ಹಾಗೂ ಬ್ರಿಸ್ಟಲ್‌ನ 'ಸ್ಲೇವ್ ಮ್ಯೂಸಿಯಂ'ಗಳನ್ನು 'ನೋಡಿ' ಹೊರಬರುವವರಲ್ಲಿ ಬಹುಜನ ತೇವಗೊಂಡ ಕಂಗಳೊಂದಿಗೆ ಕಂಡುಬರುತ್ತಾರೆ. ವ್ಯಕ್ತಿಯನ್ನು ವಸ್ತುವಿನಂತೆ ಭಾವಿಸುವುದು ಗುಲಾಮಗಿರಿಯ ಮೊದಲ ಹಂತವಾದರೆ, ಆತನ ಅಂತಹ ನರಳಿಕೆಯ ಇತಿಹಾಸಕ್ಕೊಂದು ಸಂಗ್ರಹಾಲಯವನ್ನು ರೂಪಿಸುವುದು ತಪ್ಪೊಪ್ಪಿಗೆಯ ಕ್ರಮ ಎಂಬ ನಂಬಿಕೆ ಇದೆ. ಭಾರತೀಯನಾಗಿ ನಾವು ನಮ್ಮ ಪೂರ್ವೇತಿಹಾಸವನ್ನು ಸ್ಮರಿಸಿಕೊಳ್ಳುವಾಗ ಗಾಂಧಿಯಂತಹವರ ಮೂಲಕ ಸ್ವಾದಿಷ್ಟಗೊಳಿಸಬಹುದು ಆದರೆ ಜರ್ಮನ್ ಪ್ರಜೆಯೊಬ್ಬ ಹಿಟ್ಲರನ ಹೆಸರಿನಲ್ಲಿ ಹಾಗೆ ಮಾಡಲಾರ. ಬದಲಿಗೆ 'ಆಸ್ವಿಝ್'ನಲ್ಲಿ ನಡೆದ ನರಮೇಧಕ್ಕೊಂದು ಸಂಗ್ರಹಾಲಯವನ್ನು ನಿರ್ಮಿಸಿ, ಅಲ್ಲಿ ಸತ್ತ ಯಹೂದಿಗಳ, ಸಲಿಂಗಕಾಮಿಗಳ, ಜಿಪ್ಸಿಗಳ ಪಾದರಕ್ಷೆಗಳನ್ನು ಯಥಾವತ್ ಚೌಕಟ್ಟಿನಲ್ಲಿರಿಸಬಹುದು, 'ತಪ್ಪೊಪ್ಪಿಗೆಯ' ರೂಪದಲ್ಲಿ. ಅಂದರೆ ಗುಲಾಮಗಿರಿಯ ಪ್ರಕ್ರಿಯೆಯನ್ನು ಸಂಗ್ರಹಾಲಯವು ತಪ್ಪಿಸಿಕೊಳ್ಳಲು ಸಾಧ್ಯವಿರುವುದು ಸಮಾಜದ ಸಾಧನೆಗಿಂತಲೂ ದುರಂತಗಳಿಗೆ ತಪ್ಪಿತಸ್ಥ ಭಾವವನ್ನು ಉದ್ದೀಪಿಸುವ ಸಂಗ್ರಹಾಲಯಗಳನ್ನು (ಜಲಿಯನ್ ವಾಲಾಬಾಗ್, ಬಾಬ್ರಿ ಮಸೀದಿ, ಗೋಧ್ರಾ ಇತ್ಯಾದಿಗಳ ಸಂಗ್ರಹಾಲಯಗಳು) ಸ್ಥಾಪಿಸುವುದರ ಮೂಲಕ ಮಾತ್ರವೇ?

ಇಂತಹ ತಪ್ಪೊಪ್ಪಿಗೆ ಇಲ್ಲೇ ಹತ್ತಿರದಲ್ಲಿ ನಮ್ಮ ವೆಂಕಟಪ್ಪ ಗ್ಯಾಲರಿಯಿಂದ ಹೊರಬರುವ ಕಲಾಭಿಮಾನಿಗಳಲ್ಲೂ ಉದ್ದೀಪಗೊಂಡಲ್ಲಿ ಅಚ್ಚರಿ ಪಡುವಂಥದ್ದೇನಿಲ್ಲ. 'ಆಯೆ'್ಕ, 'ನಿರಾಕರಣೆ' ಮುಂತಾದುವು ಏಕತ್ರ (ಕಲಾ) ಇತಿಹಾಸ ನಿರ್ಮಾಣದ ಹೀನಸುಳಿಗಳು. ಬದಲಿಗೆ ಐವತ್ತು- ನೂರು ಕರ್ನಾಟಕದ ಕಲಾವಿದರ ತಲಾ ಅರ್ಧ ಡಜನ್ ಕೃತಿಗಳು ವೆಂಕಟಪ್ಪ-ಹೆಬ್ಬಾರರ ಕಲಾಮನೆಗಳನ್ನು ಆವರಿಸಿಕೊಂಡರೆ ಅದು ಕೇವಲ ಸಾಮಾಜಿಕ ನ್ಯಾಯವಾಗುವುದಿಲ್ಲ, ಅದು ಅಂತಃಸ್ಥ ಗುಲಾಮಗಿರಿಯಿಂದ ಬಿಡುಗಡೆ ಹೊಂದುವ ಹೊಸ ಹೆಜ್ಜೆಗಳೂ ಆಗಬಹುದು. ವ್ಯಕ್ತಿಗಳನ್ನು ಗುಲಾಮರನ್ನಾಗಿಸಿ ಒಬ್ಬೊಬ್ಬ ವ್ಯಕ್ತಿಗಳನ್ನು ಒಂದೊಂದು ಬಂದೂಕಿನ ಬದಲಿಗೆ, ಮೂರು ಕಾಸಿನ ಬದಲಿಗೆ ಮಾರಾಟ ಮಾಡಿದ ದಾಖಲೆಗಳನ್ನು ಪ್ರದರ್ಶಿಸುವುದು ಏನನ್ನು ಸಾರುತ್ತದೆ (ಬ್ರಿಸ್ಟಲ್ ಸಂಗ್ರಹಾಲಯದಲ್ಲಿ ಇಂತಹ ಪಟ್ಟಿಯಿದೆ)? ಈ ಶೋಧನೆಯಲ್ಲೊಂದು ವಿಶೇಷವಿದೆ: ಅಲ್ಲಿ ಪ್ರದರ್ಶಿತವಾಗುವ ದಾಖಲೆಗಳೆಲ್ಲ (ಒಂದು ಬಂದೂಕಿನ ಬದಲಿಗೆ ಒಬ್ಬ ಗುಲಾಮ ಹೆಂಗಸು ಅಥವ ಕೆ ವೆಂಕಟಪ್ಪನವರು ಪೆನ್ಸಿಲ್ ಬಳಸಿ ಬರೆದಿರುವ ದಿನಚರಿಯ ಪುಟಗಳು) 'ಆಯ್ಕೆ'ಯ ಶೂಲದಿಂದ ತಪ್ಪಿಸಿಕೊಳ್ಳಲಾಗಿಲ್ಲ. ಡೆರಿಡನ ನಿರ್ವಚನ ವಾದದ ಪ್ರಕಾರ ವೆಂಕಟಪ್ಪನವರ ಒಂದು ದಿನಚರಿಯ ಪುಟದ ಆಯ್ಕೆ ಎಂಬುದು ಆರ್ ಎಂ ಹಡಪದ, ರುಮಾಲೆ ಚೆನ್ನಬಸಪ್ಪ, ಕೆ ಟಿ ಶಿವಪ್ರಸಾದ್ ಅಂತಹವರ ಒಟ್ಟಾರೆ ಜೀವನಸಾಧನೆಯ ಕೃತಿಗಳ ನಿರಾಕರಣೆಯೂ ಹೌದು!

ಸಂಗ್ರಹಾಲಯಗಳು ಸಮಕಾಲೀನ ಗುಲಾಮಗಿರಿಯ ಸಂಕೇತವಾಗಿರುವುದಕ್ಕೆ ಕಾರಣ ಸಂಗ್ರಹಾಲಯ ಇತಿಹಾಸದ ವಂಶವಾಹಿನಿ ಗುಣವೇ. ಸಂಗ್ರಹಾಲಯವೆಂಬುದು ವಸಾಹತೀಕರಣದ ಪ್ರಕ್ರಿಯೆ. ಮೊದಲಿಗೆ ಅವುಗಳು ಅರಮನೆ-ಗುರುಮನೆಗಳಾಗಿದ್ದು, ಕೆಲವರಿಂದ ಕೆಲವರಿಗೆ ಮಾತ್ರ ಪ್ರದರ್ಶಿತವಾಗುತ್ತಿದ್ದ ಕೆಲವೇ ಕೃತಿಗಳ ಪೂರ್ವೇತಿಹಾಸ ಸಂಗ್ರಹಾಲಯದ ಇತಿಹಾಸಕ್ಕಿದೆ. ಕರೋಲ್ ಡಂಕನ್ ಎಂಬ ಕಲಾ ವಿಮರ್ಶಕಿಯ ಪ್ರಕಾರ ಸಂಗ್ರಹಾಲಯವನ್ನು ನೋಡಿಬರುವ ಕ್ರಮವು ಒಂದು 'ಆಚರಣೆ' ಇದ್ದಂತೆ. ರಾಜರನ್ನು ಶ್ರೀಸಾಮಾನ್ಯನು ಭೇಟಿ ಮಾಡುವಾಗ ಅರಮನೆಯಲ್ಲಿ ಹೇಗೆ ನಿರ್ದಿಷ್ಟವಾಗಿ ವಸ್ತ್ರಸಜ್ಜಿತನಾಗಿ, ಸೂತ್ರಬದ್ಧವಾಗಿ ನಡೆದಾಡಬೇಕಿತ್ತೋ ಅಂತಹುದೇ 'ಆಚರಣೆ'ಯನ್ನು ಸಂಗ್ರಹಾಲಯಗಳಲ್ಲಿ ನಾವು ಮಾಡುತ್ತೇವೆ. ಕೃತಿಗಳನ್ನು ಮುಟ್ಟುವಂತಿಲ್ಲ, ಮುಟ್ಟಿದರೆ ಅಲಾರಂ ಗಂಟೆ ಬಡಿದುಕೊಳ್ಳುತ್ತದೆ, ಸಂಕೀರ್ಣವಾದ ಕಟ್ಟಡ ಸಂಕಿರಣದಲ್ಲಿ ಕೃತಿವೀಕ್ಷಣೆ ಮಾಡುವಾಗ 'ಮ್ಯೂಸಿಯಂ ಫಟೀಗ್' ಅನಿವಾರ್ಯ. ಒಂದಷ್ಟು ಕೃತಿಗಳನ್ನು ನೋಡಿದ ಮೇಲೆ, ಮಿಕ್ಕಿದ್ದೆಲ್ಲವೂ ಅಗೋಚರವಾಗುತ್ತದೆ ಎಂಬುದು ಇದರ ಫಟಿಂಗ ಅರ್ಥ. ಇವೆಲ್ಲವನ್ನೂ ಮತ್ತೂ ಇಂತಹವನ್ನು ಆಚರಣೆ (ರಿಚ್ಯುಯಲ್) ಎನ್ನುವುದು.

ಸಂಗ್ರಹಾಲಯಗಳನ್ನು ಏಕೆ ನಾವು ನಿರ್ದಿಷ್ಟ ರೀತಿಯ ಆಚರಣೆಯಲ್ಲಿ ವೀಕ್ಷಿಸುತ್ತೇವೆ ಎಂದು ಕರೋಲ್ ಡಂಕನ್ ವಿವರಿಸುವ ಜಾಣತನದ ಪ್ರಶ್ನೋತ್ತರದ ಹಿಂದೆ ಅದು ದಷ್ಟಿ ಹಾಗೂ ಕಣ್ಣನ್ನು ಗುಲಾಮಗಿರಿಗೆ ಒಳಪಡಿಸುವ ಪ್ರಶ್ನೆಯನ್ನು ತಡೆಹಿಡಿವ ಹುನ್ನಾರವಿದೆ. ಸಂಗ್ರಹಾಲಯವು ಕಲಾಕೃತಿಗಳನ್ನು, ಜ್ಞಾನಕೇಂದ್ರೀಯ ವಸ್ತುಗಳನ್ನು ನಮ್ಮ ಗ್ರಹಿಕೆಗೆ ಬಿಡಿಸಿಡುವುದಿಲ್ಲ. ಯಾವುದನ್ನು ನೋಡಬೇಕು ಎಂದು ಸಂಗ್ರಹಾಲಯವು ನಮ್ಮ ಪರವಾಗಿ ಆಯ್ಕೆ ಮಾಡುವುದೂ ಒಂದು ಜಾಹೀರಾತು ಇದ್ದಂತೆ. ಯಾವುದನ್ನು ನೋಡಬೇಕು ಎಂಬುದರ ಒಳಗೇ ಹೇಗೆ ನೋಡಬೇಕು ಎಂಬುದೂ ನಿರ್ದಿಷ್ಟವಾಗಿ ಬಿಟ್ಟಿರುತ್ತದೆ ಎಂಬ ಅಂಶವೇ ಸಮಕಾಲೀನ ದೃಶ್ಯ ಸಂಸ್ಕೃತಿಯ ಗುಲಾಮಗಿರಿಯ ಒಂದು ಅಧ್ಯಾಯವಾಗಿದೆ. 'ಟ್ವೆಲ್ವ್ ಇಯರ್ಸ್ ಎ ಸ್ಲೇವ್' ಸಿನಿಮಾ ಗುಲಾಮಗಿರಿಯ ಕಥೆಯೊಂದನ್ನು ತಪ್ಪಿತಸ್ಥ, ಅಪಾಲಜೆಟಿಕ್ ಧ್ವನಿಯಲ್ಲಿ ಪ್ರಸ್ತುತಪಡಿಸಿ, ಬಹುಮಾನಕ್ಕೆ ಭಾಜನವಾದುದರ ಹಿಂದೆಯೇ, ಅದಕ್ಕಾಗಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಸ್ವೀಕರಿಸುತ್ತಲೇ ಸ್ಟೀವ್ ಮ್ಯಾಕ್ವಿನ್ ಹೇಳಿದ್ದು- 'ಇನ್ನೂ ಜೀವಂತವಿರುವ ಎರಡು ಕೋಟಿ ಗುಲಾಮರಿಗಾಗಿ ಈ ಆಸ್ಕರ್' ಎಂದು. ಈ ಹೇಳಿಕೆಯ ಹಿಂದೆ ಸಂಗ್ರಹಾಲಯಗಳ ದೃಶ್ಯ-ಗುಲಾಮಗಿರಿಯ ಸೂಚನೆ ಇದೆ. 

ಗುಲಾಮಗಿರಿ ಎಂಬುದು ಭವಿಷ್ಯತ್ ಕಾಲದಿಂದ ಬರುವ ಒತ್ತಡಗಳಿಗೆ ಈಗಲೇ ತಲೆ ಬಾಗಿಬಿಡುವ ಕ್ರಿಯೆ. ಅದರಿಂದ ಬಿಡುಗಡೆ ಎಂದರೆ ಕ್ಷೀಣ ಪ್ರತಿರೋಧವನ್ನಾದರೂ ಅಭಿವ್ಯಕ್ತಿಸುವ ಕ್ರಮ. ಇಂತಹ ನಿರೀಕ್ಷೆಗಳಲ್ಲಿ ಫಲ ಅನಿವಾರ್ಯವೇನಲ್ಲ. ಆದ್ದರಿಂದಲೇ 'ಎಲ್ಗಿನ್ ಮಾರ್ಬಲ್ಸ್' ಎಂದೇ ಖ್ಯಾತವಾಗಿರುವ ಗ್ರೀಕ್ ಶಿಲ್ಪಗಳ ಕಥೆ ಗಮನಿಸಿ. ಬ್ರಿಟಿಷ್ ವಸಾಹತುಶಾಹಿಗಳು ಗ್ರೀಕ್ ಶಿಲ್ಪಗಳನ್ನು ಗ್ರೀಸಿನಿಂದ ಸಾಗಿಸಿ ವಿಕ್ಟೋರಿಯ ಆಲ್ಬರ್ಟ್ ಸಂಗ್ರಹಾಲಯದಲ್ಲಿರಿಸಿದ್ದರು. ಅದನ್ನು ಹಿಂಪಡೆಯಲು (ನಮ್ಮ ಕೊಹಿನೂರ್ ವಜ್ರದಂತೆ) ಶತಾಯುಗತಾಯ ಯತ್ನಿಸಿ ಹಿಂಪಡೆದದ್ದು ಈಗ ದಂತಕಥೆ. ಭಾರತೀಯ ಕೃತಿಗಳನ್ನು ಅಲ್ಲಿನ ಸಂಗ್ರಹಾಲಯಗಳಿಂದ ಹಿಂದಿರುಗಿಸುವಂತೆ ಬ್ರಿಟಿಷರನ್ನು ಒಪ್ಪಿಸಿಬಿಟ್ಟೆವು ಎಂದಿಟ್ಟುಕೊಳ್ಳಿ. ಅವುಗಳನ್ನು ಹಿಂಪಡೆದ ನಂತರ ಅವರಷ್ಟೇ ಮುತುವರ್ಜಿಯಿಂದ ಅವುಗಳನ್ನು ನಾವು ಸಂಗ್ರಹಿಸಿಡಬಲ್ಲೆವೇ ಎಂಬ ವಾಸ್ತವಿಕ ಪ್ರಶ್ನೆ ಬೃಹದಾಕಾರವಾಗಿ ಚರ್ಚೆಗೊಳಗಾಗುತ್ತದೆ. ಈ ಚರ್ಚೆಯ ಅಂತ್ಯ ಏನೇ ಇರಲಿ, ಇದು ಮತ್ತೊಂದು ಮುಖ್ಯ ಅಂಶವನ್ನು ನಿರಂತರವಾಗಿ ತಡೆದಿರಿಸುತ್ತಿರುತ್ತದೆ. ಅಲ್ಲಿಂದ ಹಿಂಪಡೆದ ನಮ್ಮ ವಸ್ತುಗಳನ್ನು ಸಂಗ್ರಹಿಸಿಡುವ ಬದಲಿಗೆ, ಅದೇ ಗುಲಾಮಗಿರಿಯ ಸ್ಮತಿಯಾಚೆಗೆ ರಕ್ಷಿಸಿಡುವ ಕ್ರಮ ಯಾವುದು? ಎಂಬ ಪ್ರಶ್ನೆಯನ್ನು ನಾವು ಕೇಳಲು ನಿರಾಕರಿಸುತ್ತೇವೆ. ಏಕೆಂದರೆ ನಮ್ಮ ಮನೋಸ್ಥಿತಿಯು ವಿಕ್ಟೋರಿಯಾಆಲ್ಬರ್ಟ್ ಸಂಗ್ರಹಾಲಯವನ್ನು ಕಟ್ಟಿದ ಕ್ಷಣದ ಮನೋಭಾವಕ್ಕಿಂತಲೂ ಭಿನ್ನವೇನಲ್ಲ. ಡಿ ಆರ್ ನಾಗರಾಜ್ ಹೇಳುವಂತೆ, 'ಮೆಕಾಲೆಯ ಮಕ್ಕಳಾಗುವ ಚಟ'ವು ನಮ್ಮ ಬೆನ್ನು ಹತ್ತಿದೆ.

ಕೊನೆಯದಾಗಿ, ಗುಲಾಮಗಿರಿ ಸಮಕಾಲೀನವಾಗಿ ಅತ್ಯಂತ ಸೂಕ್ಷ್ಮವೂ ಸೂಚ್ಯವೂ ಆಗಿದೆ, ಅದು ಇಲ್ಲವೇ ಇಲ್ಲವೆಂಬಷ್ಟು. ನಾರ್ಮನ್ ಬ್ರೈಸನ್ ಹೇಳುವ ಒಂದು ವಿಷಯವು ಇದನ್ನು ಸ್ಪಷ್ಟಗೊಳಿಸುತ್ತದೆ. ಕಲಾಪ್ರಕಾರಗಳಲ್ಲಿ ಸ್ಟಿಲ್ ಲೈಫ್ ಚಿತ್ರಗಳು (ವಸ್ತುಗಳ ಚಿತ್ರಣ), ಭಾವಚಿತ್ರಗಳಿಗಿಂತಲೂ, ನಿಸರ್ಗ ಚಿತ್ರಗಳಿಗಿಂತಲೂ ತಾವು ಕೀಳು ಎಂದು ಈಗಾಗಲೇ ಒಪ್ಪಿಕೊಂಡುಬಿಟ್ಟಿವೆ. ಈ ಮನೋಸ್ಥಿತಿಯನ್ನು ಆತ 'ಅನೊರೆಕ್ಸಿಕ್' ಎನ್ನುತ್ತಾನೆ. ಉಳಿದೆರೆಡರ ಸಮಕ್ಕೆ ಈ ಸ್ಟಿಲ್ ಲೈಫ್ ಪ್ರಕಾರವನ್ನು ಎಳೆದು ತಂದು ನಿಲ್ಲಿಸಲು ಮೊದಲಿಗೆ ನಾವು ಮಾಡಬೇಕಾದ ಕೆಲಸವೆಂದರೆ ತನ್ನ ಅಂಚಿನ ಪರಿಸ್ಥಿತಿಯನ್ನು ಮನಸಾರ ಸ್ವೀಕರಿಸುವ ಮನೋಭಾವವನ್ನು ಸ್ಥಿರ-ಚಿತ್ರಗಳಿಂದ ತೊಡೆಯುವುದು ಹೇಗೆ ಎಂಬುದು. ಸಂಗ್ರಹಾಲಯಗಳ ಹೊರಗೂ ಕಲಾಕೃತಿಗಳ ಅಸ್ತಿತ್ವ ಸಾಧ್ಯವಾಗಿಸಿದಲ್ಲಿ ಇದು ಸಾಧ್ಯ. ಆಗ ಕಲೆಯನ್ನು 'ವಸ್ತು'ಗಳ ರೂಪದಲ್ಲಿ ಸೃಷ್ಟಿಸುವುದನ್ನು ನಿಲ್ಲಿಸಿ 'ಕ್ರಿಯಾತ್ಮಕ ಕ್ರಿಯೆಗಳ' ರೂಪಗಳಲ್ಲಿ ಸೃಷ್ಟಿಸಬೇಕಾಗುತ್ತದೆ. ಸಮಕಾಲೀನ ಕಲಾಕೃತಿಗಳು ಹೀಗೆ ಸೃಷ್ಟಿಗೊಳ್ಳುತ್ತಿವೆ ಕೂಡ. ಆದರೆ ಆಧುನಿಕ ಮನೋಭಾವದ ಸಂಗ್ರಹಾಲಯಗಳಿಗೆ ಈ ಸುದ್ದಿ ಇನ್ನೂ ತಲುಪಿಲ್ಲವಷ್ಟೆ. ಸೃಜನಶೀಲ ಗುಲಾಮಗಿರಿಯು ಸ್ಟಾಕ್‌ಹೋಂ ಸಿಂಡ್ರೋಮ್‌ನಿಂದ (ಅಪಹರಣಕಾರನಿಗೇ ಸಹಾನುಭೂತಿ ವ್ಯಕ್ತಪಡಿಸಿ ಬಿಡುವುದು) ನರಳುತ್ತಿರುವ ಕಾಲಘಟ್ಟ ನಮ್ಮದು.

ಕಾಮೆಂಟ್‌ಗಳಿಲ್ಲ: