ಸೋಮವಾರ, ಮಾರ್ಚ್ 31, 2014

ಏಕಾಂತದ ತಲ್ಲಣದಲ್ಲಿ ತೇಲುವ ಹಾಯಿದೋಣಿ - 'ಕೋಯಾದ್'


-ಚರಿತಾ



   ಭೂಮಿ- ಆಕಾಶ- ಮನಸ್ಸು -ಎಲ್ಲವನ್ನೂ ಆವರಿಸಿಕೊಂಡಂತಿರುವ ನೀರು...ನಿರಂತರ ಹರಿವಿನ ನದಿಯ ಒಡಲಿನಿಂದಲೇ ಹುಟ್ಟುಪಡೆದಂತೆ ಅಲೆಗಳನ್ನು ತಬ್ಬಿ ತೊಡರುವ ಪುಟ್ಟ ಹಾಯಿದೋಣಿ... ಆ ದೋಣಿಯ ಮಗನಂತಿರುವ ಆತ..ತನ್ನಪ್ಪನಿಂದ ಬಳುವಳಿಯಾಗಿ ಬಂದ ಆಸ್ತಿಯೆಂದರೆ ಈ ದೋಣಿಯೊಂದೆ. ಬಾಲ್ಯದಲ್ಲೆ ಅಮ್ಮನನ್ನು ಕಳೆದುಕೊಂಡವನಿಗೆ ಈ ನದಿಯ ಅಗಾಧತೆ ಮತ್ತು ದೋಣಿಯ ಮೈಸೆಳವು ಅಮ್ಮನ ಅಪ್ಪುಗೆಯಷ್ಟೇ ಆಪ್ತ.. ಇದು ಅಸ್ಸಾಮಿನ 'ಮಿಶಿಂಗ್' ಎಂಬ ಬುಡಕಟ್ಟು ಭಾಷೆಯ ಸಿನಿಮಾ  'ಕೋಯಾದ್' (ನಿರ್ದೇಶಕಿ : ಮಂಜು ಬೋರಾಹ್). ಮೊದಲು ಕೆಲಹೊತ್ತು ತಡವರಿಸುವ ನಿರೂಪಣೆ ನಿಧಾನವಾಗಿ ನದಿಯ ಹರಿವಿನೊಂದಿಗೆ ನಿಮ್ಮನ್ನೂ ಸೆಳೆದುಕೊಳ್ಳುತ್ತದೆ. 

   ಮತ್ತೊಂದು ಮದುವೆಯ ಆತುರದಲ್ಲಿರುವ ಗಂಡನಿಂದ ದೂರಾಗಿ, ಮಗನೊಂದಿಗೆ ತನ್ನ ತವರಿಗೆ ಮರಳುವ ಅವಳು, ತನ್ನಷ್ಟಕ್ಕೆ ತಾನಿರಲು ಬಿಡದ ಜನರ ಕೊಳಕು ದಾಹಕ್ಕೆ ಬಲಿಯಾಗಿ ನದೀಪಾಲಾಗುತ್ತಾಳೆ. ಅವಳ ಒಬ್ಬನೇ ಮಗ ಪೌಕಾಮ್ ತನ್ನ ಮಲತಾಯಿಯ ನಿರ್ಲಕ್ಷ್ಯದ ನಡುವೆಯೇ ಮನಸುಕೊಟ್ಟು ಕಲಿತದ್ದೆಂದರೆ -  ನದಿಯಲ್ಲಿ ತೇಲಿಬರುವ ಕಟ್ಟಿಗೆಗಳನ್ನು ಸಂಗ್ರಹಿಸಿ ಮಾರಿ ಬದುಕುವುದು. ಅಪ್ಪನಿಂದ ಪಡೆದದ್ದೂ ಆ ದೋಣಿಯೊಂದನ್ನೆ. ಅಂತೆಯೆ ಅದೇ ಅವನ ಸರ್ವಸ್ವ.


   ಬಾಲ್ಯದಿಂದಲೇ ಮನುಷ್ಯ ಸಂಬಂಧಗಳ ಜಟಿಲತೆ, ಕುಟಿಲತೆಗಳ ಕಹಿಯನ್ನು ಕಂಡವನು ಅವನು. ಬಹುಷಃ ಅವನ ಪಾಲಿಗೆ ಒದಗಿಬಂದ ಒಂದೇ ನೆಮ್ಮದಿಯೆಂದರೆ, ಅವನ ಹೆಂಡತಿಯ ಪ್ರೀತಿ. ದುಡಿಮೆಯೊಂದನ್ನೆ ಗುರಿಯಾಗಿಸಿಕೊಂಡ ಪೌಕಾಮ್ ಗೆ ತನ್ನ ದೊಡ್ಡ ಮಗನನ್ನು ಡಾಕ್ಟರ್ ಮಾಡುವಾಸೆ. ಅದಕ್ಕಾಗಿ ಗಾಳಿ, ಮಳೆ, ಹಗಲು-ರಾತ್ರಿ ಎನ್ನದೆ ನದಿಯೊಡಲಲ್ಲಿ ತನ್ನ ದೋಣಿಯ ಜೊತೆ ತೇಲುತ್ತಾನೆ.. ಅವನೆಡೆಗೆ ತೇಲಿಬರುವ ಮರದ ದಿಮ್ಮಿಗಳೇ ಅವನ ಪಾಲಿನ ಖಜಾನೆ.

   ಅವನ ಮೈಮನಸ್ಸೆಲ್ಲವೂ ನದಿಯ ಅಗಾಧ ಹರಿವಿನಂತೆ ಮೌನ ಮತ್ತು ಗಂಭೀರ. ಇಡೀ ಚಿತ್ರದ ಮುಕ್ಕಾಲು ಪಾಲು ಇಂಥ ಗಂಭೀರ ಹರಿವಿನ ಜೊತೆಗೇ ಸಾಗುತ್ತದೆ. ಅವನಿಗೆ 'ಮಾತು' ಬರುವುದು ಅವನ ಆಳದ ಗಾಯಗಳು ಕಲಕಿ, ರಾಡಿಯಾದಾಗ ಮಾತ್ರ. ತಾನು ಅತಿಯಾಗಿ ನೆಚ್ಚಿದ ನಂಟಿನಿಂದಲೂ ನೆಮ್ಮದಿ ದೂರವೆನಿಸಿದಾಗ ಪೌಕಾಮ್ ಮಾತಾಡತೊಡಗುತ್ತಾನೆ. ಅದೂ ಚೀತ್ಕಾರ, ರೋದನೆಯ ದನಿಯಲ್ಲಿ ಹುಟ್ಟಿದ ಮಾತುಗಳು..


   ತಾನೇ ಒಂದು ನದಿಯಂತೆ ನಿರಂತರ ಹರಿಯುತ್ತ ಮುಕ್ಕಾಲು ಜೀವನ ಸವೆಸಿರುವ ಇವನು, ತನ್ನ ಕೊನೆಗಾಲದಲ್ಲಿ ನಿಮಿಷಮಾತ್ರ ಜೋರಾಗಿ ಉರಿದು ಆರಿಹೋಗುವ ಎಣ್ಣೆಬತ್ತಿದ ದೀಪದಂತೆ ಕಾಣುತ್ತಾನೆ. ಇಡೀ ಚಿತ್ರದ ತುಂಬ ಹರಡಿಕೊಂಡಿರುವ ಮಬ್ಬುಗತ್ತಲಿನಂಥ ಮೌನ ಕೊನೆಗೆ ಇವನ ಆರ್ತತೆಯ ಏಕಾಂತದಲ್ಲಿ ಕಪ್ಪಗೆ ಹೆಪ್ಪುಗಟ್ಟುತ್ತದೆ.. ನೋಡುಗನೊಳಗೆ ಆ ಆಕ್ರಂದದ ಅಲೆಗಳು ಹರಡಿಕೊಳ್ಳುತ್ತವೆ...

   ಮನುಷ್ಯ ಸಂಬಂಧಗಳ ಸಂಕೀರ್ಣತೆಯನ್ನು ಮಾರಕ ಯಾತನೆಯಂಥ ಮೌನದ ಹೊದಿಕೆಯಲ್ಲೇ ಅರ್ಥಮಾಡಿಸುತ್ತದೆ ಈ ಚಿತ್ರ. ಇಡೀ ಚಿತ್ರದ 'ಮೂಡ್' ಕಟ್ಟಿಕೊಡುವಲ್ಲಿ ಶ್ರಮಿಸಿರುವುದು ಇಲ್ಲಿನ ಸಿನಿಮಾಟೋಗ್ರಫಿ ಮತ್ತು ಹಿನ್ನೆಲೆ ಸಂಗೀತ. ಪೌಕಾಮ್ ನ ಒಳಹೊರಗನ್ನು ಅತ್ಯಂತ ಸಮರ್ಥವಾಗಿ ಚಿತ್ರಸಲಾಗಿದೆ. ಆದರೆ, ಕೊನೆಗೂ ನನ್ನಲ್ಲಿ ಉಳಿದ ಪ್ರಶ್ನೆಗಳು ಇವು : ಸಂಬಂಧಗಳ ಸ್ವಾರ್ಥ, ಜಾಳುತನದಿಂದ ಬೇಸತ್ತು ಬದುಕಿನ ಬಗೆಗೆ ಗಾಢ ನಿರಾಸೆ ತಳೆಯುವ ಪೌಕಾಮ್ ಗೆ ತನ್ನ ಹೆಂಡತಿಯ ಅಗಾಧ ಪ್ರೀತಿ ಯಾಕೆ ಆಸರೆಯೆನಿಸಲಿಲ್ಲ? ತನ್ನ ಗಂಡನನ್ನು ತನಗಿಂತಲೂ ಹೆಚ್ಚು ನೆಚ್ಚಿಕೊಂಡವಳ ಪ್ರೀತಿ, ಕಾಳಜಿ ಯಾಕೆ ಅವನಿಗೆ ಬದುಕಿನ ಏಕೈಕ ಸೌಂದರ್ಯದಂತೆ ಭಾಸವಾಗಲಿಲ್ಲ? ಹೆಂಡತಿಯ ಅಸ್ತಿತ್ವ ಕೇವಲ ಭೌತಿಕ ನೆಲೆಯದ್ದಾಗಿ ಮಾತ್ರ ಉಳಿದುಬಿಟ್ಟಿದ್ದು ಯಾಕೆ? ...

   ಇದು 'ಭಾರತೀಯ ರಿವಾಜು'ಗಳನ್ನು ಹೊದ್ದುಕೊಂಡ ಗಂಡಸಿನ ಮನಸ್ಥಿತಿಯಂತೆ ಕಾಣುತ್ತದೆ. ತನ್ನ ತಾಯಿಯ ದುರದೃಷ್ಟಕರ ಹಣೆಬರಹ ಕಂಡಿದ್ದವನಿಗೆ ತನ್ನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಹೆಂಡತಿ ಯಾಕೆ ಆತ್ಮಸಖಿಯಾಗಲಿಲ್ಲ? ಇದು ನನ್ನ ಮಟ್ಟಿಗೆ ಆದರ್ಶದ ಕನವರಿಕೆಯೂ ಇರಬಹುದೇನೊ! 

   ಯಾಕೋ  ಅವನ ಏಕಾಂತದ ತಲ್ಲಣಗಳ ಸುಳಿಯಲ್ಲಿ ಅವಳ ಪ್ರೀತಿಯ ದೋಣಿ ಒಂಟಿಯಾದಂತೆ ನನಗನಿಸಿತು.

ಕಾಮೆಂಟ್‌ಗಳಿಲ್ಲ: