ಗುರುವಾರ, ಏಪ್ರಿಲ್ 3, 2014

ಸಂಸ್ಕೃತಿ ರಕ್ಷಣೆಯ ಹೆಸರಲ್ಲಿ ಹರಿಯುವ ಕಣ್ಣೀರಿಗೆ ಕೊನೆ ಇಲ್ಲವೇ?










-ಇರ್ಷಾದ್
ಸೌಜನ್ಯ: ವರ್ತಮಾನ

“ ನನ್ನ ಕುರಿತು ಅತೀ ಕೆಟ್ಟ ಶಬ್ಧಗಳ ಬಳಕೆ ಮಾಡಿ ಅವಮಾನ ಮಾಡಿದ್ದಾರೆ. ಮಹಿಳೆಯೆಂದು
modannana-tamma ನೋಡದೇ 30 ರಷ್ಟು ಯುವಕರ ಗುಂಪು ನನ್ನನ್ನು ಸುತ್ತುವರಿದು ಹೀನವಾಗಿ ನಿಂದಿಸಿದ್ದಾರೆ. ನನ್ನ ಸೀರೆಯನ್ನು ಎಳೆಯೋದಕ್ಕೆ ಮುಂದಾಗಿದ್ದಾರೆ. ಈ ಎಲ್ಲಾ ಯುವಕರು ಕ್ರಿಮಿನಲ್ ಹಿನ್ನೆಲೆ ಉಳ್ಳವರು. ಕೆಲ ಯುವಕರು ಹಿಂದೂ ಪರ ಸಂಘಟನೆಯೊಂದರ ಸದಸ್ಯರು. ಅನ್ಯಾಯವಾದ ನನಗೆ ದಯಮಾಡಿ ನ್ಯಾಯ ಕೊಡಿಸಿ” ಹೀಗನ್ನುತ್ತಾ ಕಣ್ಣೀರು ಸುರಿಸುತ್ತಾ ತನ್ನ ಮನದಾಳದ ನೋವನ್ನು ಮಾಧ್ಯಮದ ಮುಂದೆ ತೋಡಿಕೊಂಡಿದ್ದು ಮಂಗಳೂರು ಮಹಾನಗರ ಪಾಲಿಕೆಯ ಕುಳಾಯಿ ವಾರ್ಡ್ ನ ಸದಸ್ಯೆ ಪ್ರತಿಭಾ ಕುಳಾಯಿ. ಅದೂ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಮೊಯ್ದಿನ್ ಬಾವಾ ಸಮ್ಮುಖದಲ್ಲಿ ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ.
ದಕ್ಷಿಣ ಕನ್ನಡ ಜಿಲ್ಲೆಯ ಅನೈತಿಕ ಪೊಲೀಸರಿಗೆ ಇಂಥಹಾ ನೂರಾರು ಹೆಣ್ಣುಮಕ್ಕಳ ಕಣ್ಣೀರ ಸುರಿಸಿದ “ಹೆಗ್ಗಳಿಕೆ” ಯ ಇತಿಹಾಸವಿದೆ. ಪ್ರತಿಭಾ ಕುಳಾಯಿ ಕಣ್ಣೀರಿಟ್ಟ ಹಾಗೆ ಸಾಕಷ್ಟು ಅಮಾಯಕ ಯುವತಿಯರು, ಮಹಿಳೆಯರು ಸಂಸ್ಕೃತಿ ರಕ್ಷಕರ ಕೆಂಗಣ್ಣಿಗೆ ಸಿಲುಕಿ ಕಣ್ಣೀರಿಟ್ಟಿದ್ದಾರೆ. ಸುಶಿಕ್ಷಿತ ಮಹಿಳೆಯಾಗಿ ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯೆಯಾಗಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸಕ್ರೀಯ ಕಾರ್ಯಕರ್ತೆಯಾಗಿ ಪ್ರತಿಭಾ ಕುಳಾಯಿ ಮಾಧ್ಯಮದ ಮುಂದೆ ಬಂದು ತನ್ನ ಅಳಲನ್ನು ತೋಡಿಕೊಂಡು ನ್ಯಾಯ ಕೊಡಿಸಿ ಎಂದು ಕೇಳುವ ಧೈರ್ಯವನ್ನು ತೋರಿಸಿದ್ದಾರೆ. ಆದರೆ ಈ ನೈತಿಕ ಪೊಲೀಸರ ಗುಂಡಾಗಿರಿಗೆ ಬಲಿಯಾಗಿ ಅದೆಷ್ಟೋ ಕಾಲೇಜು ವಿದ್ಯಾರ್ಥಿನಿಯರು, ಅಮಾಯಕ ಮಹಿಳೆಯರು ಮಾನ ಮಾರ್ಯಾದೆಗೆ ಅಂಜಿ ಮನೆಯಲ್ಲೇ ಕುಳಿತು ನಿತ್ಯ ಕಣ್ಣೀರಿಟ್ಟಿದ್ದಾರೆ ಹಾಗೂ ಕಣ್ಣೀರಿಡುತ್ತಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೈತಿಕ ಪೊಲೀಸರ ಕೆಂಗಣ್ಣಿಗೆ ಬಿದ್ದು ಅಸಹಾಯಕ ಹೆಣ್ಮಕ್ಕಳು ಕಣ್ಣೀರಿಟ್ಟಿದ್ದು ದೇಶಕ್ಕೆ ಗೊತ್ತಾಗಿರುವುದು 2008 ರಲ್ಲಿ ನಡೆದ ಪಬ್New ದಾಳಿ ಸಂಧರ್ಭದಲ್ಲಿ. ಹಿಂದೂ ಸಂಘಟನೆಯ ಕಾರ್ಯಕರ್ತರು ಸಂಸ್ಕೃತಿ ರಕ್ಷಣೆಯ ಹೆಸರಲ್ಲಿ ಮಂಗಳೂರಿನ ಅಮ್ನೇಶಿಯಾ ಪಬ್ ಮೇಲೆ ದಾಳಿ ಮಾಡಿದ್ದರು. ಪಬ್ ಒಳಗಡೆ ಇದ್ದ ಯುವಕ –ಯುವತಿಯರನ್ನು ಎಳೆದಾಡಿ ಹಿಗ್ಗಾ ಮುಗ್ಗಾ ಥಳಿಸಿದ್ದರು. ಅವಮಾನಕ್ಕೀಡಾದ ಯುವತಿಯರು ಕಣ್ಣೀರು ಸುರಿಸುತ್ತಾ ಎದ್ದು ಬಿದ್ದು ನೈತಿಕ ಪೊಲೀಸರಿಂದ ತಪ್ಪಿಸಿಕೊಳ್ಳೋದಕ್ಕೆ ಪ್ರಯತ್ನ ಪಡುತ್ತಿದ್ದರು. ನೈತಿಕ ಪೊಲೀಸರ ದಾಳಿಗೆ ಸುಸ್ತಾಗಿ ಅತ್ತ ಅವಮಾನವನ್ನೂ ಸಹಿಸಿಕೊಳ್ಳಲಾಗದೇ ಇತ್ತ ಅನ್ಯಾಯವನ್ನು ಪ್ರತಿಭಟಿಸಲಾಗದೆ ಕಣ್ಣೀರು ಸುರಿಸಿ ಅಷ್ಟಕ್ಕೆ ಸುಮ್ಮನಾದರು. ದಕ್ಷಿಣ ಕನ್ನಡ ಜಿಲ್ಲೆಯ ಹೆಣ್ಣಿನ ಕಣ್ಣೀರು ಅಷ್ಟಕ್ಕೆ ನಿಲ್ಲಲಿಲ್ಲ. ನಂತರದಲ್ಲಿ ಮತ್ತೊಮ್ಮೆ ಕರಾವಳಿಯ ಹೆಣ್ಣಿನ ಕಣ್ಣೀರನ್ನು ದೇಶ ನೋಡಿದ್ದು 2012 ರಲ್ಲಿ ನಡೆದ ಹೋಂ ಸ್ಟೇ ದಾಳಿಯ ಸಂಧರ್ಭದಲ್ಲಿ. ಪತ್ರಕರ್ತ ನವೀನ್ ಸೂರಿಂಜೆಯ mangalore_moral1ಕ್ಯಾಮರಾ ಕಣ್ಣಿನಲ್ಲಿ ಅಮಾಯಕ ಹೆಣ್ಣುಮಕ್ಕಳ ಕಣ್ಣೀರು ಸೆರೆಯಾಗಿತ್ತು. ಸ್ನೇಹಿತನೊಬ್ಬನ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಲು ಬಂದಿದ್ದ ಕೆಲವು ಯುವತಿಯರನ್ನು ಸಂಸ್ಕೃತಿ ರಕ್ಷಣೆಯ ಹೆಸರಲ್ಲಿ ಮತ್ತೆ ನೈತಿಕ ಪೊಲೀಸರು ಕಾಡಿದ್ದರು. ಅಲ್ಲಿದ್ದ ಹೆಣ್ಮಕ್ಕಳ ಮೇಲೆ ರಾಕ್ಷಸೀಯ ವರ್ತನೆ ತೋರಿಸಿ ಮನಬಂದಂತೆ ಥಳಿಸಿ ಮಾನಭಂಗ ಮಾಡಿದ್ದರು. ಸಂತಸದ ಪಾರ್ಟಿಗೆ ಆಗಮಿಸಿದ್ದ ಹೆಣ್ಮಕ್ಕಳ ಕಣ್ಣಿನಲ್ಲಿ ಹರಿಯುತ್ತಿದ್ದ ಕಣ್ಣೀರ ಕೋಡಿಯನ್ನು ನಾಗರಿಕ ಸಮಾಜ ನೋಡಿತ್ತು. ಅಲ್ಲಿಯೂ ಹೆಣ್ಣು ಅಸಹಾಯಕಲಾಗಿದ್ದಳು. ಸಮಾಜದ ಮುಂದೆ ಬಂದು ತಮ್ಮ ಮೇಲೆ ಅಮಾನುಷವಾಗಿ ವರ್ತಿಸಿದ ರಾಕ್ಷಸರ ವಿರುದ್ಧ ಸೆಟೆದು ನಿಲ್ಲಲು ಆಕೆಗೆ ಸಾಧ್ಯವಾಗಲಿಲ್ಲ. ಅವಮಾನದ ಕಣ್ಣೀರೇ ಆಕೆಯ ಪಾಲಿಗೆ ಅಂತಿಮವಾಯಿತು. ಈ ಎಲ್ಲಾ ಸಂಧರ್ಭಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ನೈತಿಕ ಪೊಲೀಸರ ದಾಳಿ ಒಳಗಾಗಿ ಹೆಣ್ಣು ಸುರಿಸಿದ ಅವಮಾನದ ಕಣ್ಣೀರನ್ನು ದೇಶ ನೋಡಿತು. ನಾಗರಿಕ ಸಮಾಜ ಪ್ರತಿಭಟಿಸಿತು. ಆರೋಪಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಂಡಿತ್ತು. ಆದರೂ ವ್ಯವಸ್ಥೆಯ ವೈಫಲ್ಯದಿಂದ ಅಸಹಾಯಕರಾದ ಹೆಣ್ಮಕ್ಕಳ ಕಣ್ಣೀರನ್ನು ದೇಶದ ಜನರ ಮುಂದಿಟ್ಟ ತಪ್ಪಿಗೆ ಪತ್ರಕರ್ತ ನವೀನ್ ಸೂರಿಂಜೆ 4 ತಿಂಗಳುಗಳ ಕಾಲ ಜೈಲಲ್ಲಿ ಕೊಳೆಯುವಂತಾಯಿತು.
ಇವುಗಳು ನಾವು ನೀವು ಕಂಡ ದಕ್ಷಿಣ ಕನ್ನಡ ಜಿಲ್ಲೆಯ ಹೆಣ್ಮಕ್ಕಳ ಕಣ್ಣೀರಾಗಿವೆ. ಹೀಗೆ ನಿತ್ಯ ಇಂಥಹಾ ಸಾಕಷ್ಟು ಅಮಾಯಕ ಹೆಣ್ಮಕ್ಕಳು ಉಭಯ ಧರ್ಮಗಳ ಸಂಘಟನೆಗಳ ನೈತಿಕ ಪೊಲೀಸರ ಕಾಟಕ್ಕೆ ಬಲಿಯಾಗಿ ಕಣ್ಣೀರನ್ನು ಸುರಿಸುತ್ತಲೇ ಇದ್ದಾರೆ.
  • ಒಂದು ವರ್ಷದ ಹಿಂದೆ ಮಂಗಳೂರಿನ ಬಜ್ಪೆಯಲ್ಲಿ ಹಿಂದು ಯುವಕನೊಬ್ಬನ ಜೊತೆಯಲ್ಲಿ ಮುಸ್ಲಿಂ ಯುವತಿಯೊಬ್ಬಳು ಕಾರಲ್ಲಿ ತಿರುಗಾಡಿದನ್ನು ಕಂಡು ಮುಸ್ಲಿಂ ಸಂಘಟನೆಗೆ ಸೇರಿದ್ದಾರೆ ಎನ್ನಲಾದ ಯುವಕರ ಗುಂಪು ಜೋಡಿಗಳ ಮೇಲೆ ಮುಗಿಬಿದ್ದಿತ್ತು. ಹಲ್ಲೆಯನ್ನೂ ನಡೆಸಿತ್ತು. ಆ ಸಂಧರ್ಭದಲ್ಲೂ ಅವಮಾನಕ್ಕೆ ಒಳಗಾದ ಮುಸ್ಲಿಂ ಯುವತಿ ಕಣ್ಣೀರಿಟ್ಟಿದ್ದಳು. ಕೈಮುಗಿದು ಅತ್ತು ಗೋಗರಿದಿದ್ದಳು ಆ ಕತ್ತಲಲ್ಲಿ ಅವಳ ಕಣ್ಣೀರು ಯಾರಿಗೂ ಕಾಣಲಿಲ್ಲ.
  • ಸುರತ್ಕಲ್ ಬೀಚ್ ನಲ್ಲಿ ಮುಸ್ಲಿಂ ಯುವಕನೊಬ್ಬನ ಜೊತೆ ಹಿಂದೂ ಯುವತಿಯೊಬ್ಬಳು ಸುತ್ತಾಡುತ್ತಿದ್ದಿದ್ದನ್ನು ಕಂಡ ಹಿಂದೂ ಸಂಘಟನೆಯ ಕಾರ್ಯಕರ್ತರೆನ್ನಲಾದ ಯುವಕರು ದಾಳಿ ಮಾಡಿದ್ದರು. ಅಲ್ಲಿಯೂ ಇದೇ ಪರಿಸ್ಥಿತಿ. ಧರ್ಮ ರಕ್ಷಣೆಯ ಹೆಸರಲ್ಲಿ ಅವಮಾನಕ್ಕೊಳಗಾದ ಹೆಣ್ಣು ಅಲ್ಲಿಯೂ ಕಣ್ಣೀರಿಟ್ಟಿದ್ದಳು ಸಮುದ್ರ ಗಾಳಿಯ ಹೊಡೆತಕ್ಕೆ ಆಕೆಯ ಕಣ್ಣೀರು ಅಲ್ಲೇ ಆರಿ ಹೋಗಿತ್ತು.
  • ಮಂಗಳೂರಿನ ಸುರತ್ಕಲ್ ನಲ್ಲಿ ಉತ್ತರ ಭಾರತ ಮೂಲದ ಯುವತಿಯೊಬ್ಬಳು ತಾನು ಮದುವೆಯಾಗಲಿರುವ ತನ್ನದೇ ಕೋಮಿನ ಯುವಕನ ಜೊತೆಯಲ್ಲಿದ್ದಾಗ ಅವರ ಮೇಲೂ ನೈತಿಕ ಪೊಲೀಸರ ಕಣ್ಣು ಬಿದ್ದಿತ್ತು. ಹಿಂದೂ ಸಂಘಟನೆಯ ಕಾರ್ಯಕರ್ತರೆನ್ನಲಾದ ಗುಂಪು ಅವರ ಮೇಲೆ ಮುಗಿಬಿದ್ದಿತ್ತು. ಎಲ್ಲರ ಮುಂದೆ ಅವಮಾನಕ್ಕೀಡಾದ ಯುವತಿ ಕಣ್ಣೀರು ಸುರಿಸುತ್ತಿದ್ದಳು. ಪಾಪ ಬಡವರಾದ ದೂರದ ಜಾರ್ಖಂಡ್ ಯುವತಿಯ ಕಣ್ಣೀರು ಜಿಲ್ಲೆಯ ಪೊಲೀಸರಿಗೆ ಕಣ್ಣೀರಾಗಿ ಕಾಣಲೇ ಇಲ್ಲ.
  • ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ ಮುಸ್ಲಿಂ ಮಹಿಳೆಯೊಬ್ಬಳಿಗೆ ಸಹಾಯಮಾಡುವ ನೆಪದಲ್ಲಿ ಸಲುಗೆಯಿಂದಿದ್ದಾರೆ ಎಂಬ ಕಾರಣವನ್ನಿಟ್ಟು ಸ್ಥಳೀಯ ಪತ್ರಕರ್ತ ವಿ.ಟಿ ಪ್ರಸಾದ್ ಮೇಲೆ ಮುಸ್ಲಿಂ ಸಂಘಟನೆಯೊಂದಕ್ಕೆ ಸೇರಿದ ಯುವಕರ ಗುಂಪು ಹಲ್ಲೆ ನಡೆಸಿತ್ತು. ವಿ.ಟಿ ಪ್ರಸಾದ್ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಆರೋಪಿಸಲ್ಪಟ್ಟ ಮುಸ್ಲಿಂ ಮಹಿಳೆಗೆ ಹಲ್ಲೆಕೋರರು ಧರ್ಮದ ಜಾಗೃತಿಯ ಹೆಸರಲ್ಲಿ ಅವಮಾನ ಮಾಡಿದ್ದರು. ಅಲ್ಲಿಯೂ ಆ ಬಡಪಾಯಿ ಮಹಿಳೆ ಕಣ್ಣೀರು ಸುರಿಸಿದ್ದಳು. ಪಾಪ ಆಕೆ ಧರಿಸಿದ ಬುರ್ಖಾ ಪರದೆಯ ಒಳಗಿನ ಕಣ್ಣುಗಳಿಂದ ಸುರಿಯುತ್ತಿದ್ದ ಕಣ್ಣೀರು ಹೊರ ಜಗತ್ತಿಗೆ ಕಾಣಲೇ ಇಲ್ಲ.
ಇವುಗಳು ಕೆಲವೊಂದು ಉದಾಹರಣೆಗಳಷ್ಟೇ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೀಗೆ ನಿತ್ಯ ಮಹಿಳೆ ಕಣ್ಣೀರು ಸುರಿಯುತ್ತಲೇ ಇದ್ದಾಳೆ. ಈ ಕಣ್ಣೀರು ಕೆಲವು ಮಾಧ್ಯಮಗಳಲ್ಲಿ ವರದಿಯಾಗುತ್ತವೆ. ಇನ್ನು ಕೆಲವು ಪ್ರಕರಣಗಳು ಹೊರ ಪ್ರಪಂಚದ ಗಮನಕ್ಕೆ ಬಾರದೇ ಮುಚ್ಚಿಹೋಗುತ್ತವೆ. ನೈತಿಕ ಪೊಲೀಸ್ ಗಿರಿ ಪದ್ದತಿಯನ್ನು ಹಿಂದೂ ಪರ ಸಂಘಟನೆಗಳು ದಕ್ಷಿಣ ಕನ್ನಡ ಜಿಲ್ಲೆಗೆ ಪರಿಚಯಿಸಿದವು. ಅದನ್ನು ಮುಸ್ಲಿಂ ಪರ ಸಂಘಟನೆಗಳು ಚಾಚೂ ತಪ್ಪದೆ ಪಾಲಿಸುತ್ತಾ ಬಂದಿವೆ. ಏಟಿಗೆ ಇದಿರೇಟು ಎಂಬ ಮಾದರಿಯಲ್ಲಿ ಉಭಯ ಕೋಮುಗಳ ಸಂಘಟನೆಗಳು ಜಿಲ್ಲೆಯಲ್ಲಿ ನೈತಿಕ ಪೊಲೀಸ್ ಗಿರಿಯನ್ನು ಮಾಡುತ್ತಾ ಬರುತ್ತಿವೆ. ಇದಕ್ಕೆ ಬಲಿಯಾಗುತ್ತಿರುವವರು ಉಭಯ ಧರ್ಮಗಳ ಅಮಾಯಕ ಯುವಕ –ಯುವತಿಯರು. ಮಾರ್ಚ್ 31 ರಂದು ಮಂಗಳೂರಿನ ಸುರತ್ಕಲ್ ಕೋಡಿಕೆರೆಯಲ್ಲಿ ಮಹಿಳಾ ಕಾರ್ಪೋರೇಟರ್ ಮೇಲೆ ನಡೆದದ್ದು ಇಂಥಹಾ ನೈತಿಕ ಪೊಲೀಸರ ದಾಳಿಯೇ.
ಪಾಲಿಕೆ ಸದಸ್ಯೆ ಪ್ರತಿಭಾ ಮೇಲಿನ ಅಕ್ರಮಣಕ್ಕೆ ಕಾರಣ ಅವರು ಸಂಸ್ಕೃತಿಯ ಚೌಟಕ್ಕಿನ unnamedಎಲ್ಲೆ ಮೀರಿದ್ದಾರೆ ಎಂಬ ನೈತಿಕ ಪೊಲೀಸರ ಸಂಶಯ. ಇದುವೇ ಇವರ ನಿದ್ದೆಗೆಡಲು ಪ್ರಮುಖ ಕಾರಣವಾಗಿರುವುದು. ಪ್ರತಿಭಾ ಕುಳಾಯಿ ಅವರು ಚುನಾವಣಾ ಪ್ರಚಾರ ನಡೆಸುತ್ತಿದ್ದ ಸಂಧರ್ಭದಲ್ಲಿ ಅವರನ್ನು ಅಡ್ಡಗಟ್ಟಿದ ತಂಡ ಅವರನ್ನು ತರಾಟೆಗೆ ತೆಗೆದುಕೊಂಡ ಸಂಧರ್ಭದಲ್ಲಿ ನಿಂದಿಸಿದ ರೀತಿ, ಅದಕ್ಕಾಗಿ ಬಳಸಿದ ಪದಗಳು ಇದನ್ನು ಸಾಬೀತುಪಡಿಸುತ್ತವೆ. ವಿಪರ್ಯಾಸವೆಂದರೆ ಮಹಿಳಾ ಜನಪ್ರತಿನಿಧಿಯ ಮೇಲೆ ದೌರ್ಜನ್ಯ ನಡೆಸಿದವರನ್ನು ಬಂಧಿಸಲು ತಮ್ಮ ಕ್ಷೇತ್ರದ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡುವ ಬದಲಾಗಿ ಆ ಕ್ಷೇತ್ರದ ಶಾಸಕ ಮೊಯ್ದಿನ್ ಬಾವಾ ಪ್ರತಿಭಾ ಅವರ ಜೊತೆ ಮಾಧ್ಯಮದ ಮುಂದೆ ಬಂದು ಹಲ್ಲೆಕೋರನ್ನು ಬಂಧಿಸಿ ಅನ್ಯಾಯಕ್ಕೆ ಒಳಗಾದ ಮಹಿಳೆಗೆ ನ್ಯಾಯ ಕೊಡಿಸುವಂತೆ ಕೇಳಿಕೊಳ್ಳುವುದರ ಹಾಸ್ಯಾಸ್ಪದ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಬಾರಿಯ ಬಿಜೆಪಿ ಸರ್ಕಾರದ ಆಡಳಿತ ಅವಧಿಯಲ್ಲಿ ಸಾಕಷ್ಟು ನೈತಿಕ ಪೊಲೀಸ್ ಗಿರಿ ನಡೆದಿತ್ತು. ಇದು ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ರಾಜ್ಯದಲ್ಲಿ ಆಡಳಿತದಲ್ಲಿದ್ದ ಬಿಜೆಪಿ ಸರ್ಕಾರಕ್ಕೆ ನೈತಿಕ ಪೊಲೀಸ್ ಗಿರಿ ಪ್ರಕರಣಗಳು ರಾಷ್ಟ್ರೀಯ ಮಟ್ಟದಲ್ಲಿ ಮುಜುಗರಕ್ಕೀಡುಮಾಡಿತ್ತು. ಜಿಲ್ಲೆಯಲ್ಲಿ ನಡೆಯುತ್ತಿದ್ದ ನೈತಿಕ ಪೊಲೀಸ್ ಗಿರಿಯನ್ನೇ ಪ್ರಮುಖ ಚುನಾವಣಾ ವಿಚಾರವನ್ನಾಗಿಸಿಕೊಂಡು ಜಿಲ್ಲೆಯಲ್ಲಿ ಕಾಂಗ್ರೆಸ್ ಚುನಾವಣಾ ಕಣಕ್ಕಿಳಿದಿತ್ತು. ಅದರಲ್ಲಿ ಯಶಸ್ಸನ್ನೂ ಗಿಟ್ಟಿಸಿಕೊಂಡಿತ್ತು. ಸರ್ಕಾರ ರಚನೆಯಾದ ಅವಧಿಯಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವ ರಮನಾಥ್ ರೈ , ಆರೋಗ್ಯ ಸಚಿವ ಯು.ಟಿ ಖಾದರ್ ಸೇರಿದಂತೆ ಅನೇಕ ಮುಖಂಡರು ನೈತಿಕ ಪೊಲೀಸ್ ಗಿರಿಯ ಕಡಿವಾಣವೇ ನಮ್ಮ ಗುರಿ ಎಂದರು. ಆದರೆ ಕಾಂಗ್ರೆಸ್ ಆಡಳಿತ ಚುಕ್ಕಾಣಿ ಹಿಡಿದ ಒಂದು ವರ್ಷದ ಅವಧಿಯಲ್ಲಿ ಸಾಕಷ್ಟು ನೈತಿಕ ಪೊಲೀಸ್ ಗಿರಿ ಪ್ರಕರಣಗಳು ಅಲ್ಲಲ್ಲಿ ನಡೆಯುತ್ತಿವೆ. ಬಿಜೆಪಿ ಆಡಳಿತ ಅವಧಿಯಲ್ಲಿ ಪ್ರಮುಖ ನೈತಿಕ ಪೊಲೀಸ್ ಗಿರಿ ಪ್ರಕರಣಗಳ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟುವ ಕಾರ್ಯ ಆಗಿತ್ತು. ಆದರೆ ಇದೀಗ ಕಾಂಗ್ರೆಸ್ ಆಡಳಿತದಲ್ಲಿ ಎಲ್ಲೆ ಮೀರುತ್ತಿರುವ ನೈತಿಕ ಪೊಲೀಸ್ ಗಿರಿಯ ಆರೋಪಿಗಳನ್ನು ಕನಿಷ್ಠ ಪಕ್ಷ ಬಂಧಿಸುವ ಕಾರ್ಯವೂ ನಡೆಯದೇ ಇರುವುದು ವಿಪರ್ಯಾಸ. ಆಡಳಿತ ಯಂತ್ರದ ವೈಫಲ್ಯ ಹಾಗೂ ಪೊಲೀಸ್ ಇಲಾಖೆಯ ನಿರ್ಲಕ್ಷ ಇಲ್ಲಿ ಎದ್ದು ಕಾಣುತ್ತಿದೆ. ಹೀಗೆ ನೈತಿಕ ಪೊಲೀಸರ ಅಟ್ಟಹಾಸಕ್ಕೆ ಕಡಿವಾಣ ಹಾಕದೇ ಇದ್ದಲ್ಲಿ ಈ ಜಿಲ್ಲೆಯ ಇನ್ನೆಷ್ಟು ಅಮಾಯಕ ಹೆಣ್ಮಕ್ಕಳು ಕಣ್ಣೀರು ಸುರಿಸಬೇಕಾಗಿ ಬರುತ್ತೋ ?

ಕಾಮೆಂಟ್‌ಗಳಿಲ್ಲ: