ಭಾನುವಾರ, ಫೆಬ್ರವರಿ 9, 2014

ಇಲಿ ತಿಂಬುವರ ತಟ್ಟೆಗಳು ಅನ್ನ ಕಾಣುವುದೆಂದು?

soujany :vijaykarnataka


ಡೆಲ್ಲಿ ಡೈರಿ: ಇಲಿ ತಿಂಬುವರ ತಟ್ಟೆಗಳು ಅನ್ನ ಕಾಣುವುದೆಂದು?
ರಾಜಧಾನಿ ದಿಲ್ಲಿ ಪತ್ರಿಕೆಗಳ ಪುಟ ತೆರೆದರೆ ನರೇಂದ್ರ ಮೋದಿ, ರಾಹುಲ್ ಗಾಂಧಿ, ಕೇಜ್ರೀವಾಲರೇ ಅಬ್ಬರಿಸುತ್ತಾರೆ. ಆಕಾಶದಲ್ಲೆಲ್ಲೋ ಇರುವ ಯಾರೂ ಕಾಣದ ಸ್ವರ್ಗವನ್ನು ಧರೆಗೆ ಇಳಿಸುವ ಬಣ್ಣಬಣ್ಣದ ಕನಸುಗಳನ್ನು ಹರವಿ ಕೂಗಿ ಕರೆಯುತ್ತಾರೆ-ಅವನ ಕನಸು ಕುರೂಪಿ, ಇತ್ತ ಬನ್ನಿ, ನನ್ನ ಕನಸು ಕೊಳ್ಳಿ ಎಂದು.

ಇಂಥದ್ದೇ ವ್ಯಕ್ತಿ, ಇಲ್ಲವೇ ಇಂಥದ್ದೇ ಪಕ್ಷದ ಪರ ಅಲೆ ಎದ್ದಿದೆ ಎಂದು ಒಂದಲ್ಲ ಒಂದು ಬಗೆಯಲ್ಲಿ ನಿನ್ನೆ ಮೊನ್ನೆ ಹೇಳಿದ್ದನ್ನೇ ಇಂದೂ ಹೇಳಿ ಓದುಗರ ಮಿದುಳು ತೊಳೆಯುವ ಪ್ರಯತ್ನದ ಚುನಾವಣೆ ಸಮೀಕ್ಷೆಗಳು. ಪ್ರಧಾನಿ ಅಭ್ಯರ್ಥಿಗಳು, ಅಭಿವೃದ್ಧಿ ದರಗಳು, ಬಡ್ಡಿ ದರಗಳು, ಕಾರುಗಳು, ಟಿ.ವಿ.ಗಳು, ಏರ್ ಕಂಡೀಷನರ್, ಫ್ರಿಜ್ಜುಗಳ ಮಾರಾಟ ಕುಸಿತ ಕುರಿತ, ಪುಟ ತುಂಬಿ ಚೀತ್ಕರಿಸುವ ಸುದ್ದಿಗಳೇ ಸುದ್ದಿಗಳು.

ಹಸಿವು, ಅವಮಾನ, ಅಸಮಾನತೆ, ಸಂಕಟ, ಶೋಷಣೆಗಳು ಬೈಗುಳದ ಪದಗಳೇನೋ ಅವುಗಳು ಇತಿಹಾಸದ ಯಾವುದೋ ಕಾಲಗರ್ಭದ ಪಳೆಯುಳಿಕೆಗಳೇನೋ ಎಂಬಂತೆ ದೂರ ದೂರ ಇರಿಸಿರುವ ಭಾವನೆ. ಅನ್ನ-ಅರಿವೆಗೆ ಗತಿ ಇಲ್ಲದೆ ನಿತ್ಯ ತುಳಿಸಿಕೊಂಡು ನುಗ್ಗಾಗಿ ಮಣ್ಣು ಸೇರುವ ಕೋಟಿ ಕೋಟಿ ಅವಮಾನಿತ ಬದುಕುಗಳು, ನೋವು ದಹಿಸಿ ರಕ್ತವೇ ಕಣ್ಣೀರಾಗಿ ಕೆನ್ನೆಗೆ ಹರಿಯಿತೆಂಬಂತಹ ಕತೆಗಳು, ಕಾರ್ಪಣ್ಯಗಳನ್ನು ಸುದ್ದಿಯ ಪುಟಗಳು ಮುಟ್ಟಿಸಿಕೊಳ್ಳುವುದೇ ಇಲ್ಲ. ಯಾಕೆಂದರೆ ಕಣ್ಣ ನೀರಿನಲ್ಲಿ ಮಣ್ಣ ಧೂಳಿನಲಿ ಹೊರಳುವವರು ಓದುಗರೇ ಅಲ್ಲ. ಇಂತಹ ಜಾತ್ರೆ ಮರುಳಿನ ಮಧ್ಯದಲ್ಲಿ ಅಚ್ಚರಿ ಎಂಬಂತೆ ಮೊನ್ನೆ ಮೊನ್ನೆ ಅಪರೂಪಕ್ಕೆ ಅಚ್ಚಾದ ಬರಹವೊಂದು ಮನ ಕಲಕಿತು.

ಈತ ಕುಶೀನಗರ ಜಿಲ್ಲೆಯ ಕುಗ್ರಾಮವಾಸಿ. ಹೆಸರು ರಾಮ ಅವತಾರ. ರಾತ್ರಿ ಹೊತ್ತು ಗೋಧಿ, ಭತ್ತಗಳ ಹೊಲ-ಗದ್ದೆಗಳಿಗೆ ಹೋಗುವ ಈ ರಾಮ ಅವತಾರ, ಇಲಿ-ಹೆಗ್ಗಣಗಳ ಬಿಲಗಳನ್ನು ತೋಡುತ್ತಾನೆ. ಅವುಗಳು ಅಲ್ಲಿ ಕೂಡಿಟ್ಟ ಕಾಳುಕಡ್ಡಿಗಳನ್ನು ಕದ್ದು ತಂದು ಹೊಟ್ಟೆ ಹೊರೆಯುತ್ತಾನೆ. ಹೊಲಗಳಿಗೆ ಹಗಲು ಹೆಜ್ಜೆ ಇಟ್ಟರೆ, ಕೀಳು ಜಾತಿಯವನೊಬ್ಬ ಕಾಲಿಟ್ಟು ಭೂತಾಯಿ ಮುನಿಸಿಕೊಂಡರೆ ಫಸಲು ಹಾಳಾದೀತು ಎಂಬುದು ಮೇಲ್ಜಾತಿಯ ಜಮೀನುದಾರನ ಭಯ. ಮುಖ ಮೂತಿ ಮುರಿಯುವಂತೆ ಥಳಿಸಿಕೊಂಡ ನೆನಪು ಆರುವುದೇ ಇಲ್ಲ. ಹೀಗಾಗಿ ಇರುಳು ಇಳಿಯುವುದನ್ನೇ ಕಾಯುತ್ತಾನೆ ರಾಮ ಅವತಾರ. ಮುಸಹರಿ ಎಂಬ ಅಸ್ಪೃಶ್ಯರಲ್ಲಿ ಅಸ್ಪೃಶ್ಯ ಎನಿಸಿದ ಅತಿವಂಚಿತ ಜಾತಿಯಲ್ಲಿ ಜನಿಸಿದ್ದು ಅವತಾರಿಯದೇ ತಪ್ಪು! ಮುಸ್ ಎಂದರೆ ಭೋಜಪುರಿ ಭಾಷೆಯಲ್ಲಿ ಇಲಿ ಎಂದರ್ಥ. ಇಲಿಯನ್ನು ಹಿಡಿದು ಕೊಂದು ತಿನ್ನುವವರು ಮುಸಹರಿಗಳು.

ಕಾಳು ದೊರೆಯುವುದಿಲ್ಲ. ಹಸಿವು ಹಿಂಗುವುದಿಲ್ಲ. ದನಗಳ ಹೊಟ್ಟೆಯಲಿ ಜೀರ್ಣವಾಗದೆ ಉಳಿದ ದವಸದ ಕಾಳುಗಳು ಸೆಗಣಿಯಲ್ಲಿ ಹೊರಬೀಳುವುದು ಸಾಮಾನ್ಯ. ಈ ಕಾಳುಗಳಿಗಾಗಿ ರಾಮ ಅವತಾರಿಯು ಸೆಗಣಿಯನ್ನು ತೊಳೆದು ಸೋಸಿ ತೆಗೆಯುತ್ತಾನೆ. ಕಾಲುವೆಯಲ್ಲಿ ದೊರೆಯುವ ಬಸವನಹುಳುಗಳೇ ಇವನ ಕುಟುಂಬದ ಪಾಲಿನ ವಿಲಾಸಿ ಮಾಂಸಾಹಾರ.

ಅವತಾರಿಗೆ ಮೊಮ್ಮಕ್ಕಳು ನಾಲ್ವರು. ಅವರನ್ನು ಒಂದು ಕೋಣೆಯ ಸರಕಾರಿ ಶಾಲೆಗೆ ಕಳಿಸಿದ. ಆದರೆ ಸರಕಾರ ಈ ಶಾಲೆಯನ್ನು ಮೇಲ್ಜಾತಿಯವರೇ ಹೆಚ್ಚಿನ ಸಂಖ್ಯೆಯಲ್ಲಿದ್ದ ಮತ್ತೊಂದು ಹಟ್ಟಿಗೆ ವರ್ಗಾವಣೆ ಮಾಡಿತ್ತು. ಜಮೀನುದಾರರ ಮಕ್ಕಳು ಮುಸಹರ ಮಕ್ಕಳತ್ತ ಕಲ್ಲು ತೂರಿ ಹಿಂಸಿಸತೊಡಗಿದರು. ಮುಸಹರ ಮಕ್ಕಳತ್ತ ಶಿಕ್ಷಕರಿಗೂ ಅಸಡ್ಡೆ. ಇದೀಗ ಈ ಮಕ್ಕಳು ಕೂಡ ಹೊಲಗಳಲ್ಲಿ ಇಲಿಗಳ ಬಿಲಿ ತೋಡುವುದರಲ್ಲಿ ನಿರತರು.

ಕಂದಾಯ ದಾಖಲೆಗಳ ಪ್ರಕಾರ ರಾಮ ಅವತಾರಿ ಒಂದು ಎಕರೆ ನೆಲದ ಒಡೆಯ. ಆದರೆ ಅಪ್ಪಿತಪ್ಪಿಯೂ ಈ ಜಮೀನಿನ ಬಗೆಗೆ ಉಸಿರೆತ್ತುವುದಿಲ್ಲ. ಯಾಕೆಂದರೆ, ಜಮೀನುದಾರಿ ಪದ್ಧತಿಯನ್ನು ರದ್ದುಗೊಳಿಸಿ ಭೂ ಸುಧಾರಣೆ ಕಾನೂನು ಜಾರಿಗೆ ತಂದ ನಂತರ ಜಮೀನದಾರನಿಂದ ಸರಕಾರ ವಶಪಡಿಸಿಕೊಂಡಿದ್ದ ಒಂದು ಎಕರೆಯಿದು. ಬಲಾಢ್ಯ ಜಮೀನುದಾರನಿಂದ ಜಮೀನು ಕೇಳುವ ಶಕ್ತಿ ಮುಸಹರನಿಗೆ ಯಾವ ಕಾಲಕ್ಕೆ ಬರಬೇಕು? ಸರಕಾರ ಇವನ ಬದುಕನ್ನು ಪ್ರವೇಶ ಮಾಡಿದೆ ಎಂಬುದಕ್ಕೆ ಒಂದು ಪುರಾವೆ ಉಂಟು. ಅದು ಅರ್ಧಂಬರ್ಧ ಕಟ್ಟಿದ ಇಂದಿರಾ ಆವಾಸ ಯೋಜನೆಯ ಸೂರು.

ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಇಂತಹ ಲಕ್ಷ ಲಕ್ಷ ಮುಸಹರಿಗಳು ಹೊತ್ತು ಹೊತ್ತಿನ ಕೂಳಿಗೆ ಹೋರಾಟ ಮಾಡಬೇಕಾದ ದೈನ್ಯ ಬದುಕನ್ನು ಸವೆಸಿದ್ದಾರೆ. ಐವತ್ತಾರು ಅಂಗುಲ ಹರವಿನ ಛಾತಿ ತೆರೆದು ರಾಮ ಅವತಾರಿ ಮುಸಹರಿಯನ್ನು ಮೋದಿ ಸಾಹೇಬರು ಆಲಂಗಿಸಿಯಾರೇ, ರಾಹುಲ್ ಗಾಂಧಿ ಮುಸಹರರ ಮಹಲುಗಳಲ್ಲಿ ಒಪ್ಪೊತ್ತು ಉಂಡು ಇರುಳು ಕಳೆದಾರೆಯೇ ಎಂದು ಕೇಳುತ್ತದೆ ಈ ಬರಹ. ಇದ್ದಾನೆಯೇ ಉತ್ತರ ನೀಡಬಲ್ಲ ಛಾತಿವಂತ?

ಜಾತಿಭೇದದ ತಾರತಮ್ಯದ ತಳಾತಳಕ್ಕೆ ಬಿದ್ದಿರುವ ಈ ಅವಮಾನಿತರು ಅನ್ನ, ಅರಿವೆ, ಅಕ್ಷರ, ಮಾನ, ಅಭಿಮಾನ ಎಲ್ಲವುಗಳಿಂದ ವಂಚಿತರು. ಇಂದಿಗೂ ಬಹುಮಂದಿ ಮುಸಹರರು ಮೇಲುಜಾತಿಗಳ ಜೀತದಾಳುಗಳು. ಇವರ ಶ್ರಮವನ್ನು ಗುತ್ತಿಗೆದಾರ, ಜಮೀನುದಾರ ಸುಲಿಗೆ ಮಾಡುತ್ತಾನೆ. ಹೊತ್ತು ಹುಟ್ಟಿ ಮುಳುಗುವ ತನಕ ದುಡಿದರೂ ಕವಡೆ ಕಾಸು ಕೈಗಿಟ್ಟು ವಂಚಿಸುತ್ತಾನೆ. ಮುಸಹರ ಹೆಣ್ಣಾಳುಗಳಿಗೆ ಅವರದೇ ಗಂಡಾಳುಗಳಿಗಿಂತ ಕಡಿಮೆ ಕೂಲಿ. ಜತೆಗೆ ಇರುಳು ಇಳಿದರೆ ಲೈಂಗಿಕ ಶೋಷಣೆಯ ಬಲಿಪಶುಗಳು.

ಹಂದಿಗೂಡುಗಳಂತಹ ಜೋಪಡಿಗಳಲ್ಲಿ ಆರೆಂಟು ಮಂದಿ ತಲೆ ಮರೆಸಿಕೊಳ್ಳುವ ಮುಸಹರ ಸಂಸಾರಗಳು ಹಸಿವು ತಾಳದೆ ಇಲಿಗಳನ್ನು ಹಿಡಿದು ತಿನ್ನುತ್ತವೆ. ಒಡೆದ ಮಡಕೆ ಕುಡಿಕೆಗಳು, ಹರಿದ ಬಟ್ಟೆಗಳು, ಸೊರಗಿದ ಅರೆಬೆತ್ತಲೆ ದೇಹಗಳೇ ಇವರ ಆಸ್ತಿಪಾಸ್ತಿಗಳು. ರೋಗರುಜಿನಗಳಿಗೆ ತುತ್ತಾಗುವ ಬವಣೆಯ ಬದುಕುಗಳಿಗೆ ಸಾವೇ ದೊಡ್ಡ ವಿಮೋಚನೆ. ಕಲ್ಲು ಗಣಿಗಳಲ್ಲಿ, ಇಟ್ಟಿಗೆ ಭಟ್ಟಿಗಳಲ್ಲಿ, ಹೊಲಗದ್ದೆಗಳಲ್ಲಿ ಜೀತದಾಳುಗಳಾಗಿಯೋ, ಕೂಲಿ ಆಳುಗಳಾಗಿಯೋ ದುಡಿಯುತ್ತಾರೆ ಮುಸಹರಿಗಳು. ಹಳ್ಳಿಗಳ ಹೊರಗೆ ಇವರು ಬದುಕುವ ಕೊಳಕುಕೂಪಗಳನ್ನು 'ಮುಸಹರ ಟೋಲಿ' ಎಂದೇ ಕರೆಯುತ್ತಾರೆ. ಇವರ ಸಾಕ್ಷರತೆಯ ಪ್ರಮಾಣ ನೂರಕ್ಕೆ ಮೂರರಷ್ಟು ಮಾತ್ರ. ಪಟನಾದ ಸಾಮಾಜಿಕ ಸ್ವಯಂಸೇವಾ ಸಂಸ್ಥೆಗಳು ಹೀಗೊಂದು ಲೆಕ್ಕಾಚಾರ ಹಾಕಿವೆ, ಈಗಿನ ಶೋಚನೀಯ ಸ್ಥಿತಿಯೇ ಮುಂದುವರಿದರೆ ಮುಸಹರರು ಪೂರ್ತಿ ಅಕ್ಷರಸ್ಥರಾಗಲು 4,419 ವರ್ಷಗಳೇ ಬೇಕಂತೆ.

ಮುಸಹರರ ಶೋಷಣೆಗೊಂದು ಉದಾಹರಣೆ ನೋಡಿ. ಜವಾಹರ ಮಾಂಝಿ ಎಂಬ ಮುಸಹರ 1980ರಲ್ಲಿ ಕುಟುಂಬದ ಮದುವೆಯೊಂದಕ್ಕೆ 40 ಕೆ.ಜಿ. ಅಕ್ಕಿಯನ್ನು ಹಳ್ಳಿಯ ಹಣವಂತನಿಂದ ಸಾಲವಾಗಿ ಪಡೆದಿದ್ದ. ಈ ಸಾಲ ತೀರಿಸಲು ಹಣವಂತನ ಹೊಲದಲ್ಲಿ ಆತ ಜೀತದಾಳಾಗಿ ದುಡಿದದ್ದು 27 ವರ್ಷ. ಹೇಗೆ ಅಂತೀರಾ? ಕರಾರಿನ ಪ್ರಕಾರ ಮಾಂಝಿ ಜೀತದಾಳಾಗಿ ದುಡಿದ ಪ್ರತಿ ದಿನಕ್ಕೂ ಸಾಲದ ಒಂದು ಕೆ.ಜಿ. ಅಕ್ಕಿ ತೀರಿದಂತೆ. ಅಂದರೆ ಆರು ವಾರಗಳ ಒಳಗಾಗಿ ಆತನ 40 ಕೆ.ಜಿ. ಅಕ್ಕಿ ಸಾಲ ತೀರಬೇಕಿತ್ತು. ಆದರೆ ಮಾಂಝಿ ಅಕ್ಕಿ ಸಾಲ ಮಾಡುತ್ತಲೇ ಹೋದ. ತನ್ನ ಮತ್ತು ತನ್ನ ಹೆಂಡತಿ ಮಕ್ಕಳ ಹೊಟ್ಟೆ ತುಂಬಿಸಬೇಕಿತ್ತಲ್ಲ? 27 ವರ್ಷಗಳ ನಂತರವೂ ತನ್ನ ಸಾಲ ಎಷ್ಟು ತೀರಿತು ಎಂಬ ಲೆಕ್ಕ ಬಗೆಹರಿಯಲಿಲ್ಲ ಅವನಿಗೆ. ಅಮಾನವೀಯ ಪರಿಸ್ಥಿತಿಯಲ್ಲಿ, ಕೆಂಡದಂತಹ ಬಿಸಿಲಿನಲ್ಲಿ ಮೈ ದಣಿಸುತ್ತಲೇ ಹೋದ. ಸಾಲ ತೀರಿತೇ ಎಂದು ಅಪರೂಪಕ್ಕೊಮ್ಮೆ ಕೇಳಲು ಹೋದರೆ ಒಡೆಯ ಥಳಿಸುತ್ತಿದ್ದ ಇಲ್ಲವೇ ಉಪವಾಸ ಕೆಡವುತ್ತಿದ್ದ. ಕೆಲವೊಮ್ಮೆ ಥಳಿತ, ಉಪವಾಸ ಎರಡೂ ಅನುಭವಿಸಬೇಕಿತ್ತು. ಕಡೆಗೆ ಐದು ಸಾವಿರ ರೂಪಾಯಿ ತೆತ್ತರೆ ಬಿಡುಗಡೆಯ ಭರವಸೆಯೇನೋ ದೊರೆಯಿತು. ಆದರೆ ಅಷ್ಟೊಂದು ಹಣವನ್ನು ಬಡ ಮಾಂಝೀ ಎಲ್ಲಿಂದ ತಂದಾನು? ಬಿಹಾರದ ಸಾಲಗಾರರು ವಿಧಿಸುವ ಬಡ್ಡಿದರ ಶೇ.10-20ರದು. ಕಿಬ್ಬದಿಯ ಕೀಲು ಮುರಿಯವಂತಹುದು. 90ರ ಇತ್ತೀಚಿನ ದಶಕದಲ್ಲಿ ಕೂಡ ಉತ್ತರ ಪ್ರದೇಶ, ಬಿಹಾರದಲ್ಲಿ ನಾಲ್ಕು ಲಕ್ಷ ಮುಸಹರರು ಜೀತದಾಳುಗಳಾಗಿ ಬದುಕಿದ್ದರು ಎಂದು ಅಧ್ಯಯನಗಳು ಹೇಳುತ್ತವೆ.

ಉತ್ತರ ಬಿಹಾರದ ಮಧುಬನಿ, ಮುಝಫ್ಫರ್‌ಪುರ ಜಿಲ್ಲೆಗಳಲ್ಲಿ ಹಸಿವಿನ ಬಾಧೆ ತಾಳಲಾರದೆ ಮುಸಹರರು ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳನ್ನೇ ದಲ್ಲಾಳಿಗಳಿಗೆ 400ರಿಂದ 4,000 ರೂಪಾಯಿಗಳಿಗೆ ಮಾರಿಕೊಂಡ ಉದಾರಣೆಗಳಿವೆ. ಮಧುಬನಿಯೊಂದರಲ್ಲೇ ಇಂತಹ ಪ್ರಕರಣಗಳ ಸಂಖ್ಯೆ ಐನೂರು ದಾಟಿದ್ದೂ ಉಂಟು. ಮೇಲ್ಜಾತಿಗಳು ತಮ್ಮನ್ನು ಕುರಿತು ರಚಿಸಿರುವ ಹೀಯಾಳಿಕೆ ಮೂದಲಿಕೆಯ ಮಿಥಕಗಳು ಮತ್ತು ಗಾದೆಗಳನ್ನು ಮುಸಹರರು ಅಂತರ್ಗತ ಮಾಡಿಕೊಂಡಂತಿದೆ. ಕೆಲ ಮುಸಹರರು ತಮ್ಮ ಮಕ್ಕಳನ್ನು ಅಛೂತ (ಅಸ್ಪೃಶ್ಯ), ಸುವ್ವರ್ ಕೇ ಬಚ್ಚೇ (ಹಂದಿಮಗ), ದುಃಖಾನ್ (ದುಃಖಿ), ಸುಖಾಲಿ (ಒಣಕಲ), ಮರ್ನಿಛಿಯಾ (ಸತ್ತಂತವನು), ಬುದ್ಧೂ (ಮುಠ್ಠಾಳ), ಸಡಾಲಿ (ಕೊಳೆತವನು), ಫೆಂಕಿ ಇಲ್ಲವೇ ಫೇಕು (ಬಿಸಾಡಿದವನು) ಎಂದು ಕರೆಯುವುದನ್ನು ಕಾಣಬಹುದು.

ಅಂದಹಾಗೆ ಬಿಹಾರದ ಗಯಾ ಜಿಲ್ಲೆಯಲ್ಲಿ ಮುನ್ನೂರು ಅಡಿ ಬೆಟ್ಟವನ್ನು ಏಕಾಂಗಿಯಾಗಿ ಒಡೆದು ದಾರಿ ಮಾಡಿ ದಂತಕತೆಯೇ ಆಗಿಹೋದ ಅಸೀಮ ಸಾಹಸಿ ದಶರಥ ಮಾಂಝಿಯೂ ಒಬ್ಬ ಮುಸಹರಿ. ಆತ ಕ್ಯಾನ್ಸರಿಗೆ ತುತ್ತಾಗಿ 2007ರಲ್ಲಿ ತೀರಿಹೋದ.

ಕಾಮೆಂಟ್‌ಗಳಿಲ್ಲ: