ಭಾನುವಾರ, ಮಾರ್ಚ್ 18, 2018

ಈಶಾನ್ಯ ಭಾರತದ ವಿಧಾನಸಭಾ ಚುನಾವಣೆ: ಅಧಿಕಾರ ಮೂಲದ ಸಂಬಂಧಗಳು


ಅನುಶಿವಸುಂದರ್ 
Related image

ಈಶಾನ್ಯ ಭಾರತದಲ್ಲಿ ಇತ್ತೀಚೆಗೆ ನಡೆದ ಮೂರೂ ವಿಧಾನಸಭಾ ಚುನಾವಣೆಗಳು ಮೂರು ಭಿನ್ನ ಭಿನ್ನ ಕಥೆಗಳನ್ನು ಹೇಳುತ್ತವೆ.

ಇತ್ತೀಚೆಗೆ ಮೇಘಾಲಯ, ನಾಗಾಲ್ಯಾಂಡ್ ಮತ್ತು ತ್ರಿಪುರಾಗಳಲ್ಲಿ ನಡೆದ ಚುನಾವಣೆಗಳಿಂದ ಉಳಿದ ಭಾರತವು ಬಹು ಮುಖ್ಯ ಪಾಠವೊಂದನ್ನು ಕಲಿಯಬೇಕಿದೆ. ಅದೇನೆಂದರೆ ಯಾವೊಂದು ಚುನಾವಣೆಯ ಫಲಿತಾಂಶಗಳ ಪಾಠಗಳನ್ನು ಸಾರ್ವತ್ರೀಕರಿಸಬಾರದು. ತ್ರಿಪುರಾದಲ್ಲಿ ಕಳೆದ ೨೫ ವರ್ಷಗಳಿಂದ ಅಧಿಕಾರದಲ್ಲಿದ್ದ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) (ಸಿಪಿಎಂ) ವನ್ನು ಭಾರತೀಯ ಜನತಾ ಪಕ್ಷವು (ಬಿಜೆಪಿ) ನಿರ್ಣಾಯಕವಾಗಿ ಸೋಲಿಸಿ ಅಧಿಕಾರವನ್ನು ಪಡೆದುಕೊಂಡಿತು. ಆದರೆ ಇದನ್ನೇ ನೆಪವಾಗಿಸಿಕೊಂಡು ಭಾರತದ ಪ್ರಧಾನ ಧಾರೆ ಮಾಧ್ಯಮಗಳೆಲ್ಲಾ ಈಶಾನ್ಯ ಭಾರತದಾದ್ಯಂತ ಕೇಸರಿ ಪಡೆಗಳ ವಿಜಯಯಾತ್ರೆ ಸಾಗಿದೆಯೆಂದು ಅತಿರಂಜಿಸಿ ಬರೆದವು. ಆದರೆ ಹಾಗೆ ಬರೆಯುವಾಗ ಅವು ಎಂದಿನಂತೆ ಈಶಾನ್ಯ ಭಾರತವೆಂದರೆ ವಿವಿಧ ರಾಜಕೀಯ, ಐತಿಹಾಸಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯುಳ್ಳ ಏಳು (ಈಗ ಸಿಕ್ಕಿಂ ಅನ್ನು ಸೇರಿಸಿದರೆ ಎಂಟು) ವಿಭಿನ್ನ ರಾಜ್ಯಗಳುಳ್ಳ ಪ್ರದೇಶವೆಂಬುದನ್ನು ನಿರ್ಲಕ್ಷಿಸಿದರು. ರಾಜ್ಯಗಳನ್ನು ಏಕರೂಪಿಯಾಗಿ ಭಾವಿಸುವುದೆಂದರೆ ಅವುಗಳ ನಿರ್ದಿಷ್ಟತೆಗಳನ್ನೂ ಮತ್ತು  ಅನನ್ಯತೆಗಳನ್ನು ನಿರಾಕರಿಸುವುದು ಎಂದೇ ಅರ್ಥ. ವಾಸ್ತವವಾಗಿ ತಥಾಕಥಿತ ಪ್ರಧಾನ ಧಾರೆ ಭಾರತೀಯರು ಭಿನ್ನ ಸಂಸ್ಕೃತಿಯುಳ್ಳ ತಮ್ಮನ್ನು ಹೀಗೆ ಒಟ್ಟುರಾಶಿಯಾಗಿ ಸೇರಿಸಿ ಮೂಲೆಗುಂಪು ಮಾಡುವ ಬಗ್ಗೆ ರಾಜ್ಯಗಳ ಜನರಲ್ಲಿ ಅಪಾರ ಅಸಹನೆಯಿದೆ.

ತ್ರಿಪುರಾದಲ್ಲಿ ಅಧಿಕಾರಸ್ಥರ ವಿರೋಧಿ ಭಾವನೆಯ ಅಂಶದೊಂದಿಗೆ ಮತ್ತೊಂದು ಪ್ರಮುಖ ಅಂಶ ಅಲ್ಲಿಯ ಬಿಜೆಪಿಯ ವಿಜಯಕ್ಕೆ ಕಾರಣವಾಯಿತು. ಬಿಜೆಪಿಯ ಹಿಂದೂ ಅಜೆಂಡಾಗಳಿಗೆ ಸ್ಪಂದಿಸುವಂಥ ಹಿಂದೂ ಜನಸಂಖ್ಯೆಯೂ ಅಲ್ಲಿ ದೊಡ್ಡಮಟ್ಟದಲ್ಲಿತ್ತು. ಆದರೆ ಕ್ರಿಶ್ಚಿಯನ್ನರು ಬಹುಸಂಖ್ಯಾತರಾಗಿರುವ ಗಿರಿರಾಜ್ಯಗಳ ಕಥೆ ಇದಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿತ್ತು. ತ್ರ್ರಿಪುರಾzಲ್ಲಿ ಬಿಜೆಪಿಗೆ ಸ್ವಂತಬಲದ ಮೇಲೆ ಸರ್ಕಾರ ರಚಿಸುವಷ್ಟು ಬಹುಮತ ದೊರಕಿದ್ದರೂ ತ್ರಿಪುರಾದ ಗಿರಿಜನರಿಗೆ ಪ್ರತ್ಯೇಕ ರಾಜ್ಯದ ಬೇಕೆಂಬ ಬೇಡಿಕೆಯಿಟ್ಟುಕೊಂಡು ಚಳವಳಿ ನಡೆಸುತ್ತಿರುವ ಇಂಡೀಜೀನಿಯಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾ (ಐಪಿಟಿಎಫ್) ಎಂಬ ಪ್ರಾದೇಶಿಕ ಪಕ್ಷದೊಡನೆ ಹೊಂದಾಣಿಕೆ ಮಾಡಿಕೊಂಡಿತ್ತು ಎಂಬುದನ್ನು ಮರೆಯಬಾರದು. ತ್ರಿಪುರಾದ ಮಟ್ಟಿಗೆ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಐಪಿಟಿಎಫ್ ಒಂದು ಕಿರಿಯ ಪಾಲುದಾರನೇ ಆಗಿದ್ದರೂ ಕೇಂದ್ರ ಸರ್ಕಾರಕ್ಕೆ ಅದು ಸಾಕಷ್ಟು ತಲೆನೋವನ್ನು ಉಂಟು ಮಾಡುವುದಂತೂ ಖಂಡಿತಾ. ಏಕೆಂದರೆ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಪ್ರತ್ಯೇಕ ರಾಜ್ಯದ ಆಗ್ರಹಕ್ಕೆ ಮಣಿಯುವುದು ಅಸಂಭವ.

ಮೇಘಾಲಯ ಮತ್ತು ನಾಗಾಲ್ಯಾಂಡುಗಳಲ್ಲಿ ಅಲ್ಲಿನ ಪ್ರಾದೇಶಿಕ ರಾಜಕಾರಣದ ಸ್ವರೂಪವೇ ಅಲ್ಲಿನ ನೈಜ ಕಥೆಗಳನ್ನು ಬಿಚ್ಚಿಡುತ್ತದೆ. ತಮಗೆ ಪ್ರತ್ಯೇಕ ರಾಜ್ಯ ಬೇಕೆಂದು ಆಲ್ ಪಾರ್ಟಿ ಹಿಲ್ ಲೀಡರ್ಸ್ ಕಾನ್ಫೆರೆನ್ಸ್ (ಎಪಿಎಚ್ಎಲ್ಸಿ) ನೇತೃತ್ವದಲ್ಲಿ ಖಾಸಿಗಳೂ, ಜಾಂತಿಯಾಗಳೂ, ಮತ್ತು ಗರೋವ್ಗಳು ಸತತವಾಗಿ ನಡೆಸಿದ ಸಂಘರ್ಷದ ಭಾಗವಾಗಿ ೧೯೭೨ರಲ್ಲಿ ಅಸ್ಸಾಮಿನ ಭಾಗವಾಗಿದ್ದ ಪ್ರದೇಶಗಳನ್ನು ಬೇರ್ಪಡಿಸಿ ಪ್ರತ್ಯೇಕ ರಾಜ್ಯವಾಗಿ ಘೋಷಿಸಲಾಯಿತು. ಆದರೆ ೧೯೭೬ರ ವೇಳೆಗೆ ಕಾಂಗ್ರೆಸ್ ಚಿತಾವಣೆಗಳಿಂದಾಗಿ ಎಪಿಎಚ್ಎಲ್ಸಿ ವಿಭಜಿತವಾಯಿತು. ವೇಳೆಗೆ ಕೇಂದ್ರದಲ್ಲಿ ಇಂದಿರಾ ಗಾಂಧಿ ಸರ್ಕಾರವಿತ್ತು ಮತ್ತು ದೇಶದ ಮೇಲೆ ತುರ್ತುಸ್ಥಿತಿಯನ್ನು ಘೋಷಿಸಿ ಒಂದು ವರ್ಷವಾಗಿತ್ತು. ಅದಾದ ನಂತರದಲ್ಲಿ ಎಪಿಎಚ್ಎಲ್ಸಿಯ ಬಹುಪಾಲು ಸದಸ್ಯರು ಒಂದೋ ಕಾಂಗ್ರೆಸ್ ಪಕ್ಷವನ್ನು ಸೇರಿಕೊಂಡರು ಅಥವಾ ತಮ್ಮದೇ ಆದ ಸಣ್ಣ ಪುಟ್ಟ ಪ್ರಾದೇಶಿಕ ಗುಂಪುಗಳನ್ನು ರಚಿಸಿಕೊಂಡರು. ಮತ್ತೊಮ್ಮೆ ಅವರೆಲ್ಲರೂ ಒಟ್ಟಿಗೆ ಸೇರಿ ಕಾಂಗ್ರೆಸ್ಸೇತರ ಸರ್ಕಾರ ರಚಿಸುವ ಪ್ರಯತ್ನಪಟ್ಟಿದ್ದು ೨೦೦೮ರಲ್ಲಿ. ಆದರೆ ಅದು ಅಧಿಕಾರ ನಡೆಸಲು ಸಾಧ್ಯವಾದದ್ದು ಕೇವಲ ಒಂದು ವರ್ಷ ಮಾತ್ರ. ಆನಂತರ ರಾಷ್ಟ್ರಪತಿ ಆಡಳಿತ ಜಾರಿಗೆ ಬಂತು. ಹಾಗೂ ಮುಂದೆ ಚುನಾವಣೆ ಆಗುವ ತನಕ ಕಾಂಗ್ರೆಸ್ ಸರ್ಕಾರವೇ ಆಳ್ವಿಕೆಯಲ್ಲಿತ್ತು. ಹಾಲೀ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಕಾಂಗ್ರೆಸ್ ಪಕ್ಷವೇ ಆಯ್ಕೆಯಾದರೂ ಅದರ ದುರಾಡಳಿತದಿಂದಾಗಿ ಮತ್ತು ತನ್ನ ಎದುರಾಳಿಯಾದ ಬಿಜೆಪಿಗಿದ್ದಷ್ಟು ರಾಜಕಿಯ ಚಾತುರ್ಯವಿಲ್ಲದ ಕಾರಣದಿಂದಾಗಿ ಸರ್ಕಾರ ರಚಿಸಲು ಬೇಕಿದ್ದಷ್ಟು ಬಹುಮತವನ್ನು ಕುದುರಿಸಿಕೊಳ್ಳಲಾಗಲಿಲ್ಲ. ಈಗ ಹಾಲೀ ಅಧಿಕಾರದಲ್ಲಿರುವ ಮೈತ್ರಿಕೂಟವು ಒಂದು ವಿಚಿತ್ರ ಭಿನ್ನರಾಶಿಯಾಗಿದ್ದರೂ ಬಿಜೆಪಿಯೇ ಮಿತ್ರಕೂಟದಲ್ಲಿರುವುದರಿಂದ ತಾನೇ ಅದನ್ನು ಕೆಳಗುರುಳಿಸುವುದಕ್ಕೆ ಮುಂದಾಗಲಾರದು.

ನಾಗಾಲ್ಯಾಂಡಿನ ಕಥೆ ಇವೆಲ್ಲಕ್ಕಿಂತ ಭಿನ್ನವಾದದ್ದು. ಪ್ರಾದೇಶಿಕ ಪಕ್ಷಗಳು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷದೊಂದಿಗೆ ಮೈತ್ರಿಯಿಂದಿರಲು ಬಯಸುವ ರಾಜಕಾರಣವನ್ನು ಬಳಸಿಕೊಂಡು ಬಿಜೆಪಿಯು ಎರಡೂ ಪ್ರಾದೇಶಿಕ ಪಕ್ಷಗಳಿಗೂ ಚುನಾವಣೆಗೆ ಮುನ್ನ ಆಸೆ ಹುಟ್ಟಿಸಿತ್ತು. ಟಿ. ಆರ್. ಜೆಲಾಂಗ್ ನೇತೃತ್ವದ ನಾಗ ಪೀಪಲ್ಸ್ ಫ್ರಂಟ್ (ಎನ್ಪಿಎಫ್) ಸರ್ಕಾರವು ಕುಸಿದು ಬಿದ್ದು ಚುನಾವಣೆಗೆ ಮುನ್ನ ಸರ್ಕಾರ ರಚಿಸಿದ್ದ ನೆಯ್ಫಿಯು ರಿಯೋ ಅವರ ನೇತೃತ್ವದ ನ್ಯಾಷನಲ್ ಡೆಮಾಕ್ರಟಿಕ್ ಪ್ರೊಗ್ರೆಸಿವ್ ಪಾರ್ಟಿಯ ಜೊv ಬಿಜೆಪಿಯು ಚುನಾವಣಾ ಪೂರ್ವ ಮೈತ್ರಿಯನ್ನು ಮಾಡಿಕೊಂಡಿತ್ತು. ಯಾವುದೇ ಸತ್ವಯುತ ಕಾರಣವಿಲ್ಲದೆ ಕೇವಲ ರಿಯೊ ಮತ್ತು ಜೆಲಾಂಗ್ ಅವರ ನಡುವಿನ ವ್ಯಕ್ತಿ ಪ್ರತಿಷ್ಟೆಯ ಕಾರಣಗಳಿಂದಾಗಿಯೇ ಎನ್ಪಿಎಫ್ ನಲ್ಲಿ ಉಂಟಾದ ಒಡಕೇ ಬಿಜೆಪಿಗೆ ಮೇಲುಗೈ ಸಾಧಿಸಲು ಅನುವು ಮಾಡಿಕೊಟ್ಟಿತು. ಅಂತಿಮವಾಗಿ ಬಿಜೆಪಿಯು ಎನ್ಡಿಪಿಪಿ ಯೊಂದಿಗೇ ಗಟ್ಟಿಯಾಗಿ ಉಳಿದುಕೊಂಡಿತಲ್ಲದೆ ಇತರ ಸಣ್ಣಪುಟ್ಟ ಪಕ್ಷಗಳನ್ನು ಒಟ್ಟುಗೂಡಿಸಿ ಸರ್ಕಾರವನ್ನು ರಚಿಸಲು ಬೇಕಾದಷ್ಟು ಸಂಖ್ಯೆಯನ್ನು ಒಟ್ಟುಮಾಡಿತು. ಎಲ್ಲಾ ಪಕ್ಷಗಳ ಶಾಸಕರೂ ಆಳುವ ಕೂಟವನ್ನು ಸೇರಿಕೊಂಡು ವಿರೋಧ ಪಕ್ಷವೇ ಇಲ್ಲದಂತಾಗಿದ್ದ ಇತ್ತೀಚಿನ ಇತಿಹಾಸವನ್ನು ಹೊಂದಿರುವ ನಾಗಾಲ್ಯಾಂಡಿನಲ್ಲಿ ಇನ್ನು ಸ್ವಲ್ಪ ಸಮಯದಲ್ಲೇ ಎನ್ಪಿಎಫ್ನಲ್ಲಿ ಮತ್ತೊಂದು ವಿಭಜನೆಯಾಗಿ ಭಿನ್ನಮತೀಯರು ಆಳುವ ಕೂಟವನ್ನು ಸೇರಿಕೊಂಡರೆ ಆಶ್ಚರ್ಯವಿಲ್ಲ. ನಾಗಾಲ್ಯಾಂಡಿನಲ್ಲಿ ಅಧಿಕಾರ ದಾಹವೇ ಭಿನ್ನಭಿನ್ನ ರಾಜಕೀಯ ಶಕ್ತಿಗಳನ್ನು ಒಂದುಗೂಡಿಸುವ ಅಂಟಾಗಿದೆ.

ಹೀಗಾಗಿ ಈಶಾನ್ಯ ಭಾರತದ ಮೂರು ರಾಜ್ಯಗಳ ಚುನಾವಣೆಗಳಿಂದ ಉಳಿದ ಭಾರತವು ಯಾವ ಪಾಠಗಳನ್ನು ಕಲಿಯಬಹುದು? ಮೊದಲನೆಯದಾಗಿ, ತ್ರಿಪುರಾದ ಫಲಿತಾಂಶವು ಇತರ ಎರಡು ರಾಜ್ಯಗಳ ರಾಜಕೀಯ ವಾಸ್ತವಗಳನ್ನು ಪ್ರತಿಫಲಿಸುವುದಿಲ್ಲ. ಬಿಜೆಪಿಯು ತ್ರಿಪುರಾದಲ್ಲಿ ಗೆದ್ದಿದ್ದರೂ ಉಳಿದೆರಡು ರಾಜ್ಯಗಳಲ್ಲಿ ಅದು ಅಲ್ಲಿಯ ಪ್ರಾದೇಶಿಕ ಪಕ್ಷಗಳನ್ನು ಆಧರಿಸಿದೆ. ಎರಡೂ ರಾಜ್ಯಗಳಲ್ಲಿ ಬಿಜೆಪಿಯು ತನ್ನ ಸ್ವಂತ ಬಲದಲ್ಲಿ ಅಧಿಕಾರ ರಚಿಸುವ ಸಾಧ್ಯತೆಯಂತೂ ಸದ್ಯಕ್ಕಿಲ್ಲ. ಎರಡನೆಯದಾಗಿ ತನ್ನನ್ನು ತಾನು ಇತರರಿಗಿಂತ ಭಿನ್ನ ಪಕ್ಷವೆಂದು ತೋರ್ಪಡಿಸಿಕೊಳ್ಳುವ ಬಿಜೆಪಿ ಪಕ್ಷವು ತಾನು ನಿರಂತರವಾಗಿ ವಿರೋಧಿಸುತ್ತಲೇ ಬಂದಿರುವ ಕಾಂಗ್ರೆಸ್ಸಿಗಿಂತ ಯಾವ ರೀತಿಯಿಂದಲೂ ಭಿನ್ನವಿಲ್ಲ. ಅಧಿಕಾರ ಪಡೆಯಲು ಏನು ಬೇಕಾದರು ಮಾಡಬಹುದೆಂಬ ತತ್ವವನ್ನು ಎರಡೂ ಪಕ್ಷಗಳೂ ಪಾಲಿಸುತ್ತವೆ. ಮೂರನೆಯದಾಗಿ, ಕಾಂಗ್ರೆಸ್ಸಿನಂತೆ ಬಿಜೆಪಿಗೆ ರಾಜ್ಯಗಳಲ್ಲಿ ದುರಾಡಳಿತದ ಹಿನ್ನೆಲೆಯಿರದಿರುವುದರಿಂದ ಚುನಾವಣೆಯಲ್ಲಿ ಅಭಿವೃದ್ಧಿ ಮಂತ್ರವನ್ನು ಜನರಿಗೆ ದಾಟಿಸಲು ಸಾಧ್ಯವಾಯಿತು. ಆದರೆ ಅದು ಕೊಟ್ಟಿರುವ ಭರವಸೆಗಳನ್ನು ಈಡೇರಿಸಲು ಅಸಾಧ್ಯವಾಗಿದ್ದು ಸಾರ್ವತ್ರಿಕ ಚುನಾವಣೆ ನಡೆಯಲಿರುವ ಮುಂದೊಂದು ವರ್ಷದಲ್ಲಿ ಅದರ ಪೊಳ್ಳುತನ ಬಯಲಾಗಬಹುದಾಗಿದೆ. ಹಾಗೂ ಕೊನೆಯದಾಗಿ ನೇರಾನೇರಾ ಹಣಾಹಣಿ ನಡೆದ ಅಸ್ಸಾಂ ಮತ್ತು ತ್ರಿಪುರಾಗಳಂಥ ಕಡೆಗಳಲ್ಲಿ ಬಿಜೆಪಿಯು ಪ್ರಬಲವಾದ ಪ್ರತಿಸ್ಪರ್ಧಿಯೆಂಬುದು ನಿಜವೇ ಆದರೂ ಉಳಿದ ಕಡೆಗಳಲ್ಲಿ ಅದು ಅಧಿಕಾರವೆಂಬ ಅಯಸ್ಕಾಂತವನ್ನು ಮುಂದೊಡ್ಡಿ ಪರಸ್ಪರ ತದ್ವಿರುದ್ಧವಾದ ಶಕ್ತಿಗಳನ್ನು ಒಟ್ಟುಗೂಡಿಸುವ ತಂತ್ರೋಪಾಯಗಳ ಮೂಲಕ ಮಾತ್ರವೇ ಗೆಲ್ಲುತ್ತಿದೆ

  ಕೃಪೆ: Economic and Political Weekly,Mar 10,  2018. Vol. 53. No.10
                                                                                                                
 (EPW ಅನುವಾದ ಯೋಜನೆಯ ಹೆಚ್ಚಿನ ಮಾಹಿತಿಗಾಗಿ: http://www.epw.in/translation )









ಕಾಮೆಂಟ್‌ಗಳಿಲ್ಲ: