ಭಾನುವಾರ, ಮಾರ್ಚ್ 18, 2018

ನಾಸಿಕ್‌ನಿಂದ ಮುಂಬೈವರೆಗಿನ ರೈತಾಪಿಯ ಲಾಂಗ್‌ಮಾರ್ಚ್


            ಅನುಶಿವಸುಂದರ್ 
Image result for farmers long march

ತೀವ್ರಗೊಳ್ಳುತ್ತಿರುವ ಗ್ರಾಮೀಣ ಬಿಕ್ಕಟ್ಟನ್ನು ಬಗೆಹರಿಸಲು ಬಿಜೆಪಿಯು ಕೃಷಿ ಸಾಲ ಮನ್ನಾದ ಜೊತೆಜೊತೆಗೆ ಕೈಗೊಳ್ಳಬೇಕಾದ ಇತರ ಪರಿಹಾರ ಕ್ರಮಗಳ ಬಗ್ಗೆಯೂ ಗಂಭೀರವಾಗಿ ಚಿಂತಿಸಬೇಕು.

೨೦೦೮ರ ಮಾರ್ಚ ೧೧ರಂದು ಸುಮಾರು ೪೦,೦೦೦ ಕ್ಕೂ ಹೆಚ್ಚು ರೈತರು ಮುಂಬೈ ನಗರಕ್ಕೆ ಮುತ್ತಿಗೆ ಹಾಕಿದರು. ರೈತಸಾಗರದಲ್ಲಿ ಗಂಡಸರು-ಹೆಂಗಸರು, ಮಕ್ಕಳೂ-ವೃದ್ಧರು ಎಲ್ಲರೂ ಇದ್ದರು. ಅವರಲ್ಲಿ ಹಲವರು ಕೆಂಪು ಟೋಪಿ ಮತ್ತು ಬಾವುಟಗಳನ್ನು ಹಿಡಿದುಕೊಂಡಿದ್ದರು. ತಮಗೆ ಕೊಟ್ಟ ಭರವಸೆಗಳನ್ನು ಈಡೇರಿಸದ ಮಹಾರಾಷ್ಟ್ರ ಸರ್ಕಾರಕ್ಕೆ ಪಾಠ ಕಲಿಸಲು ಮುಂಬೈಗೆ ಹರಿದು ಬಂದ ಗ್ರಾಮಿಣ ರೈತಾಪಿ ಜನಸಾಗರ ಅಂದಿನ ಮಟ್ಟಿಗೆ ನಗರ ಮತ್ತು ಗ್ರಾಮಗಳೆಂಬ ವಿರುದ್ಧ ಲೋಕಗಳ ಭಿನ್ನತೆಯನ್ನೇ ಅಳಿಸಿಹಾಕಿತು. ಅವರುಗಳು ನಾಸಿಕ್ನಿಂದ ಮುಂಬೈವರೆಗಿನ ಸುಮಾರು ೧೮೦ ಕಿಮೀ ಗಳಷ್ಟು ದೂರವನ್ನು ನಡೆಯುತ್ತಲೇ ಕ್ರಮಿಸಿದ್ದರು. ಆದರೆ ರ್ಯಾಲಿಯು ಇತರ ಎಲ್ಲಾ ರ್ಯಾಲಿಗಳಿಗಿಂತ ಭಿನ್ನವಾಗಿದ್ದದ್ದು ತಾನು ಕಾಲು ನಡಿಗೆಯಲ್ಲಿ ಕ್ರಮಿಸಿದ ದೂರದಿಂದ ಮಾತ್ರವಲ್ಲಮೊದಲನೆಯದಾಗಿ ಮಹಾ ರ್ಯಾಲಿಯಲ್ಲಿ ಭಾಗವಹಿಸಿದ ಜನತೆಯ ಹಿನ್ನೆಲೆ. ಅದರಲ್ಲಿ ಪ್ರಧಾನವಾಗಿ ಇದ್ದವರು ಅತ್ಯಂತ ಬಡ ರೈತರು ಮತ್ತು ಆದಿವಾಸಿ ಕೃಷಿಕರು. ಎರಡನೆಯದಾಗಿ, ರ್ಯಾಲಿ ನಡೆಸುತ್ತಿದ್ದ ಹೋರಾಟಗಾರರು ಭಾರತದ ಹಣಕಾಸು ಬಂಡವಾಳದ ರಾಜಧಾನಿಯಾದ ಮುಂಬೈ ನಗರದ ಬಿರುಸಿಗೆ ಕಿಂಚಿತ್ತೂ ಧಕ್ಕೆ ಉಂಟುಮಾಡಲಿಲ್ಲ. ಮುಂಬೈ ನಗರವಾಸಿಗಳೂ ಸಹ ವ್ಯತ್ಯಾಸವನ್ನು ಗಮನಿಸಿದರು. ಮುಂಬೈ ನಗರಿಯ ಬಹಳಷ್ಟು ಜನ ತಮ್ಮ ಪಾರಂಪರಿಕ ಜಡತೆಯನ್ನು ತೊರೆದು ನಡೆದು ನಡೆದೂ ಬಸವಳಿದಿದ್ದ ರೈತಾಪಿಗೆ ಆಹಾರ, ಕುಡಿಯುವ ನೀರು ಮತ್ತು ವೈದ್ಯಕೀಯ ನೆರವನ್ನೂ ಸಹ ಒದಗಿಸಿದರು. ಜೊತೆಗೆ ಪ್ರಧಾನಧಾರೆ ಮಾಧ್ಯಮಗಳಲ್ಲಿ ಇದರ ಬಗ್ಗೆ ಬಂದ ವರದಿಗಳು ವಿರೋಧ ಪಕ್ಷಗಳನ್ನೂ ಸಹ ಜಾಗೃತಗೊಳಿಸಿತು. ಎಲ್ಲಾ ಕಾರಣಗಳಿಂದ ರಾಜ್ಯ ಸರ್ಕಾರಕ್ಕೆ ತಪ್ಪಿಸಿಕೊಳ್ಳಲು ಯಾವುದೇ ದಾರಿ ಉಳಿಯಲಿಲ್ಲ.
Image result for farmers long march

ದೇವೇಂದ್ರ ಫಡ್ನವೀಸ್ ನೇತೃತ್ವದ ಬಿಜೆಪಿ ಮತ್ತು ಶಿವಸೇನಾ ಮೈತ್ರಿಕೂಟದ ಸರ್ಕಾರಕ್ಕೆ ಅದರ ಹಿಂದಿನ ಕಾಂಗ್ರೆಸ್ ಸರ್ಕಾರವು ತೀವ್ರಗೊಳ್ಳುತ್ತಿದ್ದ ಕೃಷಿ ಬಿಕ್ಕಟ್ಟನ್ನು ಬಳುವಳಿಯಾಗಿ ನೀಡಿತ್ತು. ಕೇಂದ್ರದ ನೋಟು ನಿಷೇಧ ಮತ್ತು ಜಿಎಸ್ಟಿ ಕ್ರಮಗಳಿಂದ ಕೃಷಿ ಬಿಕ್ಕಟ್ಟು ಇನ್ನಷ್ಟು ಹೆಚ್ಚಾಗಿ ೨೦೧೬-೧೭ರಲ್ಲಿ ತಾರಕಕ್ಕೇರಿತ್ತು. ೨೦೧೭ರ ಪ್ರಾರಂಭದಲ್ಲಿ ಕೃಷಿ ಉತ್ಪನ್ನಗಳ ಬೆಲೆಯು ಐತಿಹಾಸಿಕವಾಗಿ ಅತ್ಯಂತ ತಳಮಟ್ಟಕ್ಕೆ ಕುಸಿದಾಗ ಸಿಪಿಎಂ ಪಕ್ಷದ ಆಲ್ ಇಂಡಿಯಾ ಕಿಸಾನ್ ಸಭಾ (ಎಐಕೆಎಸ್) ವು ಮಾಹರಾಷ್ಟ್ರ ರಾಜ್ಯಾದ್ಯಂತ ರೈತಾಪಿಯನ್ನು ಸಂಘಟಿಸಿ ಬೀದಿಗಿಳಿದು ಪ್ರತಿಭಟನೆ ನಡೆಸಿತ್ತು. ತಮ್ಮ ಹೋರಾಟಗಳಿಂದಾಗಿ ಫಡ್ನವೀಸ್ ಸರ್ಕಾರದಿಂದ ರೈತಾಪಿಯು ೩೦,೦೦೦ ಕೋಟಿ ರೂ. ಗಳಷ್ಟು ಭಾಗಶಃ ಕೃಷಿ ಸಾಲ ಮನ್ನ ಮತ್ತು ಕೃಷಿ ಉತ್ಪನ್ನಗಳ ಬೆಂಬಲ ಬೆಲೆಗೆ ಸೀಮಿತ ಹೆಚ್ಚಳವನ್ನು ಗಳಿಸಿಕೊಳ್ಳಲು ಸಾಧ್ಯವಾಯಿತು. ಆದರೆ ಒಂದು ವರ್ಷದ ನಂತರವೂ ಬಹುಪಾಲು ಕೃಷಿ ಉತ್ಪನ್ನದ ಬೆಲೆಗಳು ಕುಸಿಯುತ್ತಲೇ ಹೋದಾಗ ವ್ಯಗ್ರರಾದ ರೈತಾಪಿಯು ಬೇಷರತ್ ಸಾಲ ಮನ್ನಾ, ನೀರಾವರಿ ಸೌಲಭ್ಯ,ಮತ್ತು ಉಳುತ್ತಿರುವ ಭೂಮಿಯ ಮೇಲಿನ ಹಕ್ಕುಗಳ ಆಗ್ರಹಗಳನ್ನು ಮುಂದಿಟ್ಟುಕೊಂಡು ಮುಂಬೈ ಕಡೆಗೆ ಬೃಹತ್ ಲಾಂಗ್ ಮಾರ್ಚ್ ನಡೆಸಿದರು. ಜನರ ಹೋರಾಟಗಳಿಗೆ ಫಡ್ನವೀಸ್ ಸರ್ಕಾರ ಮಣಿಯಲೇ ಬೇಕಾಯಿತು. ಇದರಿಂದ ರಾಜ್ಯದ ಬೊಕ್ಕಸಕ್ಕೆ ಹೆಚ್ಚುವರಿಯಾಗಿ ೧೦,೦೦೦ ಕೋಟಿ ಹೊರೆ ಬೀಳಲಿದೆ.

ಆದರೆ ಸಾಲ ಮನ್ನ ಎಂಬುದು ಕೇವಲ ಒಂದು ತಾತ್ಕಾಲಿಕ ತಡೆಕ್ರಮವಷ್ಟೆ. ಸಾಲ ಮನ್ನಾ ಎಂಬ ಕ್ರಮವು ಸಾಲದ ಪಾಲಾಗಿರುವ ರೈತನನ್ನು ಮುಕ್ತಗೊಳಿಸಿ ಕೃಷಿ ಚಟುವಟಿಕೆಗಳನ್ನು ಮುಂದುವರೆಸಲು ಬೇಕಾದ ಹೊಸ ಸಾಲಗಳನ್ನು ಪಡೆದುಕೊಳ್ಳಲು ಅರ್ಹಗೊಳಿಸುತ್ತದೆ. ದೇಶದಲ್ಲೇ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರಾಜ್ಯವೆಂಬ ಕುಖ್ಯಾತಿಯುಳ್ಳ ರಾಜ್ಯವೊಂದು ಸಾಲ ಮನ್ನಾ ಮಾಡುವ ನಿರ್ಧಾರ ತೆಗೆದುಕೊಳ್ಳುವಂತಾಗುವುದೂ ಸಹ ಸಣ್ಣ ವಿಷಯವಲ್ಲ. ಅದೇನೇ ಇದ್ದರೂ ಅದೊಂದು ತಾತ್ಕಾಲಿಕ ಕ್ರಮವಷ್ಟೇ ಆಗಿದೆ. ಏಕೆಂದರೆ ಸರ್ಕಾರಗಳು ಎದುರಿಸಬೇಕಾಗಿರುವ ಕಟುಸತ್ಯವೇನೆಂದರೆ ಕೃಷಿ ಕ್ಷೇತ್ರದ ಅಭಿವೃದ್ಧಿ ಗತಿ ಕುಸಿಯುತ್ತಲೇ ಇದ್ದು ರೈತಾಪಿಗಳು ಗಳಿಸುತ್ತಿರುವ ಆದಾಯವು ಕುಸಿಯುತ್ತಿದೆ . ಮತ್ತು ಅದು ರೈತಾಪಿಯು ಬದುಕುಳಿಯಲು ಕೂಡಾ ಸಾಲುವಷ್ಟಿಲ್ಲ. ಇದಕ್ಕೆ ಮುಖ್ಯ ಕಾರಣಗಳೆಂದರೆ ಏರುತ್ತಿರುವ ಒಳಸುರಿ-ಹೂಡಿಕಾ ವೆಚ್ಚ, ಕುಸಿಯುತ್ತಲೇ ಇರುವ ಕೃಷಿ ಉತ್ಪನ್ನಗಳ ಬೆಲೆ, ನೀರು ಮತ್ತು ತಂತ್ರಜ್ನಾನಗಳ ಲಭ್ಯತೆಯಲ್ಲಿ ಅಸಮಾನತೆ, ತೀವ್ರಗೊಳ್ಳುತ್ತಿರುವ ವಾಣಿಜ್ಯ ಬೆಳೆಗಳ ಉತ್ಪಾದನೆ ಮತ್ತು ಅದಕ್ಕೆ ಸರಿಸಮನಾಗಿ ಉತ್ಪಾದಕತೆಯಲ್ಲಿ ಆಗುತ್ತಿರುವ ಕುಸಿತ. ಇದರ ಜೊತೆಗೆ ರೈತಾಪಿಯ ನಿಯಂತ್ರಣದಾಚೆಗಿರುವ ಮಳೆ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿನ ವೈಪರೀತ್ಯಗಳು ಮೇಲಿನ ಎಲ್ಲಾ ಕಾರಣಗಳನ್ನು ಮತ್ತಷ್ಟು ಹದಗೆಡಿಸುತ್ತಿವೆ.

ಕೃಷಿ ಸುಧಾರಣೆಯ ಹಲವಾರು ಕಾರ್ಯಸೂಚಿಗಳಲ್ಲಿ ರೈತ ಚಳವಳಿಗಳ ಗಮನ ಕೃಷಿ ಉತ್ಪನ್ನದ ಬೆಲೆಗಳ ಮೇಲೆ ಏಕಮಾತ್ರವಾಗಿ  ಕೇಂದ್ರೀಕರಣಗೊಂಡ ವಿದ್ಯಮಾನದ ಮೂಲವನ್ನು ೧೯೭೦ರಲ್ಲಿ ಪ್ರಾರಂಭವಾದ ಹೊಸ ರೈತ ಚಳವಳಿಯಲ್ಲಿ ಕಾಣಬಹುದು. ಒಂದೆಡೆ ಹೊಸ ಕಾರ್ಯಸೂಚಿಯು ಸಣ್ಣ ಮತ್ತು ದೊಡ್ಡ ರೈತಾಪಿಗಳ ವಿಶಾಲ ಐಕ್ಯತೆಗೆ ದಾರಿಮಾಡಿಕೊಟ್ಟರೂ ಭೂ ಹಿಡುವಳಿ, ನೀರಾವರಿ, ಕೃಷಿ ಸಾಲ, ಭೂ ಬಳಕೆ ಮತ್ತು ಬೆಳೆ ಪದ್ಧತಿಗಳಂಥ ಮೂಲಭೂತ ಕಾರ್ಯಸೂಚಿಗಳ ಮೇಲಿರಬೇಕಾದ ಗಮನವನ್ನು ಕಡಿತಗೊಳಿಸಿತು. ರಾಷ್ಟ್ರೀಯ ರೈತ ಅಯೋಗ (೨೦೦೪-೦೬) ವರದಿಯ ಭಾಗವಾಗಿ ಎಂ.ಎಸ್. ಸ್ವಾಮಿನಾಥನ್ ಅವರು ನೀಡಿದ ಶಿಫಾರಸ್ಸುಗಳು ಕೆಳದ ಒಂದು ದಶಕದಿಂದ ಎಲ್ಲಾ ರೈತ ಹೋರಾಟಗಳ ಪ್ರಮುಖ ಬೇಡಿಕೆಯಾಗಿವೆ. ಆದರೆ ಸ್ವಾಮಿನಾಥನ್ ವರದಿಯೂ ಸಹ ಕೃಷಿ ಬಿಕ್ಕಟ್ಟನ್ನು ತಡೆಗಟ್ಟುವಲ್ಲಿ ಸಾಲ ಮನ್ನಾ ಮಾತ್ರ ಏಕಮಾತ್ರ ಪರಿಹಾರವಾಗಲಾರದು ಎಂದು ಅಭಿಪ್ರಾಯಪಟ್ಟಿದೆ. ಬದಲಿಗೆ ಅವರು ಆರ್ಥಿಕವಾಗಿ ಮತ್ತು ಪರಿಸರಾತ್ಮವಾಗಿ ಸಂತುಲಿತ ಕೃಷಿಯಲ್ಲಿ ತೊಡಗುವಂತೆ ಮಾಡಲು ಸರ್ಕಾರವು ತಂತ್ರಜ್ನಾನ, ಮಾರಾಟ ಮತ್ತು ರೈತರ ತರಬೇತಿಗಳಲ್ಲಿ ಸಕ್ರಿಯವಾಗಿ ಮಧ್ಯಪ್ರವೇಶಿಸಬೇಕೆಂದು ಶಿಫಾರಸ್ಸು ಮಾಡುತ್ತದೆ. ಅಂಥಾ ದೂರಗಾಮಿ ಸುಧಾರಣೆಗಳು ಇಲ್ಲದಿರುವ ಕಾರಣಗಳಿಂದಾಗಿಯೇ ಗ್ರಾಮೀಣ ಭಾರತವು ವಿವಿಧ ಹಂತದ ಕೃಷಿ ಬಿಕ್ಕಟ್ಟನ್ನು ಎದುರಿಸಬೇಕಾಗಿ ಬಂದಿದೆ. ಮತ್ತು ಅದರ ಪರಿಣಾಮವಾಗಿ ಸಣ್ಣ ಮತ್ತು ಅತಿಸಣ್ಣ ರೈತಾಪಿಯ ಪ್ರಮಾಣ ಮತ್ತು ಅವರು ಎದುರಿಸುತ್ತಿರುವ ಬಿಕ್ಕಟ್ಟಿನ ತೀವ್ರತೆಯೂ ಹೆಚ್ಚುತ್ತಲೇ ಸಾಗಿದೆ.

ಇತ್ತೀಚಿನ ರೈತಾಪಿ ರ್ಯಾಲಿಯಲ್ಲಿ ಆದಿವಾಸಿ ಕೃಷಿಕರು ಭಾಗವಹಿಸಿದ್ದರಿಂದಲೇ ಅದು ಹಿಂದಿನ ರೈತಾಪಿ ರ್ಯಾಲಿಗಳಿಂಗಿಂತ ಭಿನ್ನವಾಗಿತ್ತು. ಅವರು ಭಾರತ ಸರ್ಕಾರವು ಜಾರಿಗೆ ತಂದ ೨೦೦೬ರ ಆದಿವಾಸಿಗಳ ಮತ್ತು ಇತರ ಪಾರಂಪರಿಕ gಣ್ಯವಾಸಿಗಳ (ಅರಣ್ಯ ಹಕ್ಕನ್ನು ಖಾತರಿಗೊಳಿಸುವ) ಕಾಯಿದೆಯನ್ನು ಜಾರಿಗೊಳಿಸಿ ಅರಣ್ಯ ಭೂಮಿಯ ಮೇಲಿನ ತಮ್ಮ ಹಕ್ಕನ್ನು ಖಾತರಿಗೊಳಿಸಬೇಕೆಂಬ ಬೇಡಿಕೆಯನ್ನಿಟ್ಟುಕೊಂಡು ದೊಡ್ಡ ಸಂಖ್ಯ್ಯೆಯಲ್ಲಿ ರ್ಯಾಲಿಯಲ್ಲಿ ಭಾಗವಹಿಸಿದ್ದರು. ಸಮಸ್ಯೆ ಬಗೆಹರಿಯಬೇಕೆಂದರೆ ಅರಣ್ಯ ಭೂಮಿಯ ಒಡೆತನ ಮತ್ತು ಬಳಕೆಯ ಕುರಿತು ಮತ್ತು ಅದರ ಸಂಪನ್ಮೂಲಗಳನ್ನು ನಿರ್ವಹಣೆ ಮಾಡುವ ಹಕ್ಕಿನ ಕುರಿತು ಸುಮಾರು ಕಾಲದಿಂದಲೂ ನೆನೆಗುದಿಗೆ ಬಿದ್ದಿರುವ ಆದಿವಾಸಿಗಳ ಅರ್ಜಿಗಳು ತ್ವರಿತವಾಗಿ ವಿಲೇವಾರಿಯಾಗುವ ಅಗತ್ಯವಿದೆ. ವಿಪರ್ಯಾಸವೆಂದರೆ ಕಾನೂನನ್ನು ಜಾರಿಗೊಳಿಸುವುದರಲ್ಲಿ ಮಹಾರಾಷ್ಟ್ರವು ಉಳಿದೆಲ್ಲಾ ರಾಜ್ಯಗಳಿಗಿಂತ ಮುಂದಿದ್ದರೂ ಪರಿಸ್ಥಿತಿ ಮಾತ್ರ ಇರುವುದು ಹೀಗೆ. ಕೃಷಿ ಆರ್ಥಿಕತೆಯೊಳಗೆ ಆದಿವಾಸಿ ರೈತಾಪಿ ಇನ್ನಷ್ಟು ಅತಂತ್ರತೆಯನ್ನು ಎದುರಿಸುತ್ತಿದ್ದಾರೆ. ಏಕೆಂದರೆ ಆದಿವಾಸಿಗಳು ಐತಿಹಾಸಿಕವಾಗಿ ನೆಲೆಯೂರಿರುವ ಪ್ರದೇಶವನ್ನು ಕಾರ್ಪೊರೇಟ್ ಕುಳಗಳು ಭೂಕಬಳಿಕೆ ಮಾಡುವ ಮೂಲಕ ಅಥವಾ ಪ್ರಭುತ್ವವೇ ಅವರನ್ನು ಎತ್ತಂಗಡಿ ಮಾಡುವ ಮೂಲಕ ಆದಿವಾಸಿಗಳ ಬದುಕನ್ನು ಮತ್ತಷ್ಟು ಅತಂತ್ರವಾಗಿಸುತ್ತಿದ್ದಾರೆ. ಹೀಗಾಗಿ ಭೂಮಿ ಪ್ರಶ್ನೆಯು ಈಗಲೂ  ಜನರನ್ನು ಸಂಘಟಿಸಬಲ್ಲ ಒಂದು ಸಮರ್ಥ ರಾಜಕೀಯ ಅಜೆಂಡಾ ಆಗಿದೆ.

ಮಹಾರಾಷ್ಟ್ರದ ರಾಜಕಾರಣದಲ್ಲಿ ಈವರೆಗೂ ಮರಾಠರ ಅಧಿಪತ್ಯವೇ ಮುಂದುವರೆಯುತ್ತಾ ಬಂದಿರುವುದರಿಂದ ಮಹಾರಾಷ್ಟ್ರದ ಪ್ರಾದೇಶಿಕ ಕೃಷಿ ರಾಜಕಿಯ ಅರ್ಥಿಕತೆಯು ಕಬ್ಬು ಆರ್ಥಿಕತೆಯ ಪರವಾಗಿ ವಾಲಿಕೊಂಡಿದೆ. ಕಬ್ಬನ್ನು ರಾಜ್ಯದ ಒಟ್ಟಾರೆ ಕೃಷಿ ಪ್ರದೇಶದ ಶೇ.೪ರಷ್ಟಲ್ಲಿ ಮಾತ್ರ ಬೆಳೆದರೂ ಅದು ರಾಜ್ಯದ ನೀರಾವರಿ ಸೌಲಭ್ಯದ  ಶೇ.೬೫ರಷ್ಟನ್ನು ಕಬಳಿಸುತ್ತದೆ. ಸರ್ಕಾರದಿಂದ ಪ್ರಮಾಣದ ಬೆಂಬಲವನ್ನು ಪಡೆಯುತ್ತಿದ್ದರೂ ಮಹಾರಾಷ್ಟ್ರದ ಸಕ್ಕರೆ ಸಹಕಾರಿ ಸಂಘಗಳು ಸಹ ತೀವ್ರವಾದ ತಳಮಳವನ್ನು ಎದುರಿಸುತ್ತಿವೆ. ಹೀಗೆ ಹೆಚ್ಚಾಗುತ್ತಿರುವ ಗ್ರಾಮೀಣ ಬಿಕ್ಕಟ್ಟು ಅತ್ಯಗತ್ಯವಾದ ಕೃಷಿ ಸುಧಾರಣೆಯನ್ನು ಜಾರಿ ಮಾಡಲು ಬೇಕಾದ ಭೂಮಿಕೆಯನ್ನು ಬಿಜೆಪಿಗೆ ಒದಗಿಸಿದೆ. ಆದರೆ ಬಿಜೆಪಿಯ ಪರಮಾಪ್ತ್ತ (ಕ್ರೋನಿ) ಬಂಡವಾಳಿಗ ಧಣಿಗಳು ಮತ್ತು ಬಿಜೆಪಿ ಪಕ್ಷದ ಪ್ರಧಾನ ಬೆಂಬಲಿಗರಾದ ನಗರದ ಮಧ್ಯಮವರ್ಗ ಮತ್ತು ವರ್ತಕ ಗಣವು ಅಂಥ ಯಾವುದೇ ಸುಧಾರಣೆಗಳನ್ನು ಖಂಡತುಂಡವಾಗಿ ವಿರೋಧಿಸುತ್ತವೆ. ಆದರೆ ಒಂದು ಚುನಾವಣಾ ವರ್ಷದಲ್ಲಿ ಇತರ ರಾಜ್ಯಗಳು ಮಹಾರಾಷ್ಟ್ರವನ್ನು ಅನುಸರಿಸುವಂತೆ ಮಾಡಬೇಕೆಂದರೆ ಬಿಜೆಪಿಯು ಕತ್ತಿಯ ಮೇಲಿನ ನಡಿಗೆಯನ್ನೇ ಮಾಡಬೇಕಾಗುತ್ತದೆ.


ಕೃಪೆ: Economic and Political WeeklyMar 17,  2018. Vol. 53. No.11
                                                                                                    
 (EPW ಅನುವಾದ ಯೋಜನೆಯ ಹೆಚ್ಚಿನ ಮಾಹಿತಿಗಾಗಿ: http://www.epw.in/translation )












ಕಾಮೆಂಟ್‌ಗಳಿಲ್ಲ: