ಸೋಮವಾರ, ಡಿಸೆಂಬರ್ 4, 2017

ಇಂದಿರಾಗಾಂಧಿ ಮತ್ತು ನರೆಂದ್ರಮೋದಿ: ಇಬ್ಬರು ನಾಯಕರ ಕಥೆ


ಅನುಶಿವಸುಂದರ್ 
ಇಂದಿರಾಗಾಂಧಿ ಮತ್ತು ನರೆಂದ್ರಮೋದಿಯವರನ್ನು ಪರಸ್ಪರ ಹೋಲಿಸಬಹುದೇ?

Image result for indira gandhi

ಕೆಲವೊಮ್ಮೆ ಕೆಲವು ವ್ಯಕ್ತಿಗಳು ಹಲವು ಐತಿಹಾಸಿಕ ಬದಲಾವಣೆಗಳನ್ನು ಹುಟ್ಟುಹಾಕುತ್ತಾರೆ. ಆದರೆ ಬದಲಾವಣೆಗಳು ಇತಿಹಾಸದ ಉಪ ಉತ್ಪನ್ನವಷ್ಟೇ ಆಗಿರುತ್ತವೆ. ೨೦೧೭ರ ನವಂಬರ್ ೧೯ರಂದು ಆಚರಿಸಲಾದ ಇಂದಿರಾಗಾಂದಿಯವರ ಜನ್ಮ ಶತಮಾನೊತ್ಸವದ ಸಂದರ್ಭದಲ್ಲಿ ಇಂದಿರಾ ಗಾಂಧಿ ಮತ್ತು ನರೇಂದ್ರ ಮೋದಿಯವರ ವ್ಯಕ್ತಿತ್ವಗಳ ನಡುವಿನ ಸಾಮ್ಯತೆಯ ಬಗ್ಗೆ ನಡೆಯುತ್ತಿರುವ ಚರ್ಚೆಗಳು ಸಂಗತಿಯನ್ನು ಗಮನಿಸುತ್ತಿಲ್ಲ. ಚರ್ಚೆಯಲ್ಲಿ ಕೆಲವು ವಿಶ್ಲೇಷಕರು ಅವಸರವಸರದಿಂದ ಇಬ್ಬರ ನಡುವೆ ಇರುವ ಸಾಮ್ಯತೆಗಳನ್ನು ಪತ್ತೆ ಹಚ್ಚಿದ್ದರೆ ಇನ್ನು ಕೆಲವರು ಪ್ರಯತ್ನವೇ ಅಸಂಬದ್ಧವೆಂದು ತಿರಸ್ಕರಿಸಿದ್ದಾರೆ. ಇಂದಿರಾಗಾಂಧಿ ಮತ್ತು ನರೇಂದ್ರ ಮೋದಿಯವರು ಎರಡು ಭಿನ್ನಭಿನ್ನ ವ್ಯಕ್ತಿತ್ವದವರು. ಆವರ ರಾಜಕೀಯ ನೀತಿಗಳು ಒಂದಕ್ಕೊಂದು ವಿರುದ್ಧ ದಿಕ್ಕಿನವು. ಅದೇ ರೀತಿ ಇಬ್ಬರನ್ನು ರೂಪಿಸಿದ ಐತಿಹಾಸಿಕ ಸಂದರ್ಭಗಳು ವಿಭಿನ್ನವಾದವು. ಆದರೆ ಎಲ್ಲಾ ಸಂಗತಿಗಳು ಅವರಿಬ್ಬರ ನಡುವೆ ಇರುವ ಕೆಲವು ಕುತೂಹಲಕಾರಿಯಾದ ಸಮಾನ ಅಂಶಗಳನ್ನು ಕಾಣದಂತೆ ಮಾಡಬಾರದು. ಎರಡು ಸಂಗತಿಗನ್ನು ಐತಿಹಾಸಿಕವಾಗಿ ಹೋಲಿಸುವಾಗ ಅವುಗಳ ನಡುವೆ ಕೇವಲ ಸಾಮ್ಯತೆಯನ್ನೋ ಅಥವಾ ಪರಿಪೂರ್ಣ ಭಿನ್ನತೆಯನ್ನೋ ಅರಸುವ ಗೀಳಿಗಿಳಿಯದೆ ಅವುಗಳ ನಡುವಿನ ಸಮರೂಪತೆ ಹಾಗೂ ಭಿನ್ನರೂಪತೆಗಳನ್ನು ಮಾತ್ರ ಗಮನಿಸುವುದು ಪ್ರಯೋಜನಕಾರಿಯಾಗಿರುತ್ತದೆ. ದೃಷ್ಟಿಯಿಂದ  ಇಂದಿರಾಗಾಂಧಿ ಮತ್ತು ನರೇಂದ್ರಮೋದಿಯರನ್ನು ಮೌಲ್ಯಮಾಪನ ಮಾಡುವಾಗ ಹಲವು ಅಂಶಗಳನ್ನು ಹೊರಹೊಮ್ಮುತ್ತವೆ.
Image result for modi

ಅವರಿಬ್ಬರ ನಡುವೆ ಇರುವ ಪ್ರಧಾನ ಭಿನ್ನರೂಪತೆ ಏನೆಂದರೆ ಅವರು ರಾಜಕೀಯ ಔನ್ನತ್ಯಕ್ಕೆ ತಲುಪುವಂತೆ ಮಾಡಿದ ಭಿನ್ನ ಭಿನ್ನ ರಾಜಕೀಯ ಸಂದರ್ಭಗಳು. ಗಾಂಧಿಗಿದ್ದ ಏಕಮಾತ್ರ ರಾಜಕೀಯ ಸಂಪತ್ತೆಂದರೆ ಆಕೆಯ ತಂದೆಯ ಪರಂಪರೆ. ಆಕೆಗೆ ಯಾವುದೇ ಪ್ರಾಂತ್ಯಗಳಲ್ಲಾಗಲೀ ಅಥವಾ ಪಕ್ಷದೊಳಗಾಗಲೀ ತನ್ನದೇ ಸ್ವಂತ ಬೆಂಬಲಿಗರ ಪಡೆ ಇರಲಿಲ್ಲ. ಪಕ್ಷದೊಳಗಿದ್ದ ಹಿರಿಯ ನಾಯಕ ಗಣ (ಸಿಂಡಿಕೇಟ್) ಆಕೆಯನ್ನು ಆಯ್ಕೆಮಾಡಿಕೊಂಡರು. ಅನನುಭವಿಯಾದ ಆಕೆಯನ್ನು ಸುಲಭವಾಗಿ ಆಡಿಸಬಹುದೆಂಬುದು ಅವರ ಲೆಕ್ಕಾಚಾರವಾಗಿತ್ತು. ಆಕೆಯನ್ನು ಸರ್ಕಾರದ ಮುಖ್ಯಸ್ಥರನ್ನಾಗಿ ಮಾಡಿದ್ದು ಯಾವುದೇ ಇಂದಿರಾ ಅಲೆ ಅಲ್ಲ. ಆಕೆಯೇ ನಂತರ ಅಂಥ ಒಂದು ಅಲೆಯನು ಸೃಷ್ಟಿಸಿಕೊಳ್ಳಬೇಕಿತ್ತು. ಹೀಗಾಗಿ ಸರ್ಕಾರದೊಳಗಿನ ಆಕೆಯ ಮೊದಲ ದಿನಗಳು ಕತ್ತಿಯ ಮೇಲಿನ ನಡಿಗೆಯೇ ಆಗಿತ್ತು. ಇದಕ್ಕೆ ತದ್ವಿರುದ್ಧವಾಗಿ ಮೋದಿಯವರು ಒಂದು ಜನಪ್ರಿಯತೆಯ ಅಲೆಯ ಮೇಲೆ ಪ್ರಧಾನಿಯಾದರು. ಅದಕ್ಕೆ ಮುಂಚೆ ಅವರಿಗೆ ಗುಜರಾತಿನಲ್ಲಿ ಬಲವಾದ ನೆಲೆಯನ್ನು ಹೊಂದಿದ್ದರು ಮತ್ತು  ಪಕ್ಷದೊಳಗಿನ ಹಿರಿಯರನ್ನು ವೇಳೆಗಾಗಲೇ ಅವರು ಮೂಲೆಗುಂಪು ಮಾಡಿದ್ದರು. ಯಾವುದನ್ನು ಇಂದಿರಾ ಅವರು ನಂತರದಲ್ಲಿ ಹಲವು ತಂತ್ರೋಪಾಯಗಳಿಂದ ಮಾಡಿದರೋ ಅದನ್ನು ಮೋದಿಯವರು ಪ್ರಾರಂಭದಲ್ಲೇ ಮಾಡಿ ಮುಗಿಸಿದ್ದರು. ಒಟ್ಟಿನಲ್ಲಿ ಪ್ರಧಾನಿಯೆಂದರೆ ದೇಶದ ಸಾರ್ವಭೌಮತೆಯ ಸಾಕಾರ ರೂವೆಂದು ಭಾವಿಸುವ ತೆರದಲ್ಲಿ ತಮ್ಮ ಯೋಜನಾ ನೀತಿಗಳನ್ನು ಇಬ್ಬರೂ ಸಹ ಬಳಸಿಕೊಂಡರು.

ಒಂದು ಗಾದೆ ಮಾತು ಹೇಳುವಂತೆ ದುರ್ಬಲ ನಾಯಕರು ಬಿಕ್ಕಟ್ಟಿನ ಸಂದರ್ಭಗಳನ್ನು ಎದುರಿಸುತ್ತಾರೆ, ಆದರೆ ಬಲಿಷ್ಠ ನಾಯಕರು ಅಂಥಾ ಬಿಕ್ಕಟ್ಟುಗಳನ್ನು ತಾವೇ ಸೃಷ್ಟಿಸುತ್ತಾರೆ. ಗಾಂಧಿ ಮತ್ತು ಮೋದಿ ಇಬ್ಬರೂ ಕೂಡ ಖಂಡಿತವಾಗಿ ಎರಡನೇ ವರ್ಗಕ್ಕೆ ಸೇರುತ್ತಾರೆ. ಇಂದಿರಾಗಾಂಧಿಯವರು ಅಂಥ ಒಬ್ಬ ನಾಯಕಿಯಾಗಿ ಹೊರಹೊಮ್ಮಲು ಸ್ವಲ್ಪ ಕಾಲ ತೆಗೆದುಕೊಂಡರು. ಅವರು ಸಮಯದಲ್ಲಿ ತನ್ನ ನಿಯಂತ್ರಣದಲ್ಲಿ ಇರದಿದ್ದ ಕೆಲವು ಸನ್ನಿವೇಶಗಳಿಂದಾಗಿ ರುಪಾಯಿ ಅಪಮೌಲ್ಯೀಕರಣದಂಥ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಯಿತು. ಅದನ್ನು ಬಿಟ್ಟರೆ ಬಹಳ ಬೇಗನೇ ಬಿಕ್ಕಟ್ಟುಗಳನ್ನು ಸೃಷ್ಟಿಸುವಂಥ ಹಲವು ನಿರ್ಧಾರಗಳನ್ನು ತೆಗೆದುಕೊಂಡರು: ರಾಷ್ಟ್ರಪತಿ ಚುನಾವಣೆ, ಬ್ಯಾಂಕುಗಳ ರಾಷ್ಟ್ರೀಕರಣ, ಅಥವಾ ರಾಜಧನ ರದ್ಧತಿ ಹಾಗೂ ತುರ್ತುಸ್ಥಿತಿಯ ಘೊಷಣೆಗಳು..ಅಂಥಾ ಕೆಲವು ಉದಾಹರಣೆಗಳು. ಆದರೆ  ಇಂದಿರಾ ಗಾಂಧಿಯವರಿಗೆ ತಾನು  ಕಾಂಗ್ರೆಸ್ ಪಕ್ಷವನ್ನು ವಿಭಜಿಸಿದ್ದು, ಸಂಸತ್ತು ಮತ್ತು ವಿಧಾನ ಸಭಾ ಚುನಾವಣೆಗಳ ಏಕಕಾಲತೆಯಲ್ಲಿ ಬದಲಾವಣೆ ತಂದದ್ದು, ಸುಪ್ರೀಂ ಕೋರ್ಟು ತೀರ್ಮಾನಗಳನ್ನು ಉಲ್ಲಂಘಿಸಿದಂಥ ಹತ್ತು ಹಲವು ಕ್ರಮಗಳು ವಾಸ್ತವದಲ್ಲಿ ತಾನೇ ಸೃಷ್ಟಿಸಿದ ಬಿಕ್ಕಟ್ಟುಗಳನ್ನು ಬಗೆಹರಿಸಲು ತೆಗೆದುಕೊಳ್ಳಬೇಕಾಗಿ ಬಂದ ಅತಿರೇಕದ ತೀರ್ಮಾನಗಳು ಎಂದು ಕೊನೆಯವರೆಗೂ ಅನಿಸಲೇ ಇಲ್ಲ. ಅದಕ್ಕೆ ತದ್ವಿರುದ್ಧವಾಗಿ ಮೋದಿಯವರೆದುರು ಮೈದಾನ ಖುಲ್ಲಾ ಇತ್ತು. ಹಲವು ದಶಕಗಳಿಂದ ಜತನದಿಂದ ಕಾಯ್ದುಕೊಂಡು ಬಂದಿದ್ದ ಸಾಂಸ್ಥಿಕ ಸ್ವಾಯತ್ತತೆಗಳನ್ನು ಬಿಕ್ಕಟ್ಟಿಗೆ ದೂಡಲಾಯಿತು. ಸಾರ್ವಜನಿಕ ವಿಶ್ವವಿದ್ಯಾಲಯಗಳಿಂದ ಹಿಡಿದು ರಿಸರ್ವ್ ಬ್ಯಾಂಕಿನ ತನಕ ಯಾವ ಸಂಸ್ಥೆಗಳು ಸರ್ಕಾರದ ವಿವೇಚನಾಶೂನ್ಯ ಮಧ್ಯಪ್ರವೇಶದಿಂದ ಪಾರಾಗಲಿಲ್ಲ

ಇನ್ನು ನೀತಿಗಳು ಮತ್ತು ಯೋಜನೆಗಳ ವಿಷಯಗಳಿಗೆ ಬರುವುದಾದರೆ ಎರಡು ಪ್ರಧಾನಿಗಳ ನಡುವೆ ಸಾಕಷ್ಟು ವ್ಯತ್ಯಾಸಗಳಿವೆ. ಇಂದಿರಾಗಾಂಧಿಯವರ ಯೋಜನೆಗಳಲ್ಲಿ ಸ್ಪಷ್ಟವಾದ ಸಮಾಜವಾದಿ ಪದಪುಂಜಗಳಿರುತ್ತಿದ್ದವು. ತುರ್ತು ಪರಿಸ್ಥಿತಿಯನ್ನು ಹೊರತುಪಡಿಸಿ ಅವರ ಮಿಕ್ಕ ಯಾವ ಯೋಜನೆಗಳು ಉದ್ದೇಶಪೂರ್ವಕವಾಗಿ ಬಡವರ ವಿರೋಧಿಯಾಗಿರಲಿಲ್ಲ. ಕೆಲವು ನೀತಿಗಳಂತೂ ಉಳ್ಳವರ ಸವಲತ್ತುಗಳ ಮೇಲೆ ನೇರವಾಗಿ ದಾಳಿ ಮಾಡುವಂಥ ನೀತಿಗಳಾಗಿದ್ದವು.

ಮೋದಿಯವರ ನೀತಿಗಳು ಶುದ್ಧಾಂಗವಾಗಿ ಜನಪ್ರಿಯ ಸೋಗಿನವು. ನೋಟು ನಿಷೇಧ ಮತ್ತು ಜಿಎಸ್ಟಿ ನೀತಿಗಳು ಬಡವರ ಬದುಕಿನ ಮೇಲೆ ನೇರವಾಗಿ ದಾಳಿ ಮಾಡಿವೆ. ಒಂದೆಡೆ ನೀತಿಗಳಿಗಾಗಿ ಜನರು ಸ್ವಲ್ಪ  ತ್ಯಾಗ ಮಾಡಲು ಸಿದ್ಧರಿರಬೇಕೆಂದು ಕರೆಕೊಡಲಾಯಿತು . ಆದರೆ ಶ್ರೀಮಂತರು ಮಾತ್ರ ಕೂದಲೂ ಕೊಂಕದಂತೆ ದಾಳಿಗಳಿಂದ ಸುಲಭವಾಗಿ ಪಾರಾದರು. ಕೆಲವು ವಿಶ್ಲೇಷಕರ ಪ್ರಕಾರ ಬಗೆಯ ಜನರನ್ನು ದಿಗ್ಭ್ರಾಂತಗೊಳಿಸುವ ತಂತ್ರೋಪಾಯವನ್ನು ಅವರು ತಾವು ಪ್ರತಿನಿಧಿಸುವ ಹಿಂದೂತ್ವವಾದಿ ಸಿದ್ಧಾಂತವು ಒಪ್ಪಿಕೊಳ್ಳುವ ಅರಸೊತ್ತಿಗೆಯ ಬಗೆಗಿನ  ಹಿಂದೂವಾದಿ ಪರಿಕಲ್ಪನೆಯಿಂದ ತೆಗೆದುಕೊಂಡಿದ್ದಾರೆಯೇ ವಿನಃ ಪಾಶ್ಚಿಮಾತ್ಯ ಫ್ಯಾಸಿಸ್ಟ್ ಸಿದ್ಧಾಂತದಿಂದಲ್ಲ.

ಎರಡೂ ಪ್ರಧಾನಿಗಳ ನೀತಿಗಳ ದಿಕ್ಕಿನಲ್ಲಿರುವ ವ್ಯತ್ಯಾಸವನ್ನು ಕೆಲವೊಮ್ಮೆ ಅವರ ಜಾಣ್ಮೆಯಲ್ಲಿದ್ದ ವ್ಯತ್ಯಾಸಗಳಿಗೆ ಹೋಲಿಸಲಾಗುತ್ತದೆ. ಗಾಂಧಿಯವರು ಎಂದಿಗೂ ತಮ್ಮ ಸಂಪುಟ ಸಹೋದ್ಯೋಗಿಗಳ ಮೇಲೆ ವಿಶ್ವಾಸವನಿಟ್ಟಿರಲಿಲ್ಲ. ಅವರೇ ಆಯ್ದ ಕೆಲವು ಆಡಳಿತಾಧಿಕಾರಿಗಳು ಮತ್ತು ತಂತ್ರಜ್ನರು ಗಾಂಧಿಯವರಿಗೆ ನೀತಿ ನಿರೂಪಣೆಗಳ ಬಗ್ಗೆ ಸಲಹೆಗಳನ್ನು ನೀಡುತ್ತಿದ್ದರು. ಆದರೆ ಮಹನೀಯರು (ಮಹಿಳೆಯರಲ್ಲ) ಪ್ರತಿಭಾನ್ವಿತರು ಮತ್ತು ವ್ಯಕ್ತಿ ಘನತೆಯುಳ್ಳವರೂ ಆಗಿದ್ದರು. ಆದರೆ ಮೋದಿಯ ಸುತ್ತ ಇರುವವರಲ್ಲಿ ಅದರ ದೊಡ್ಡ ಕೊರತೆ ಇದೆ. ಅಮಿತ್ ಶಾ ಅವರು ಚುನಾವಣೆಗಳನ್ನು ಗೆದ್ದುಕೊಡಬಹುದಷ್ಟೆ. ಆದರೆ ಅವರು ಇಂದಿರಾ ಗಾಂಧಿಯವರಿಗೆ ಪಿ.ಎನ್. ಹಕ್ಸರ್ ಏನಾಗಿದ್ದರೋ ಅಥವಾ ವಿ.ಕೆ. ಕೃಷ್ಣ ಮೆನನ್ ಮತ್ತು ಪಿ.ಸಿ. ಮಹಲನೋಬಿಸ್ ಅವರು ನೆಹರೂ ಅವರಿಗೆ ಏನಾಗಿದ್ದರೋ ಜಾಗವನ್ನು ತುಂಬಲು ಸಾಧ್ಯವಿಲ್ಲ.

ಬೌದ್ಧಿಕ ಅನ್ವೇಷಣೆಗಳ ಬಗ್ಗೆ ಸಂಘ ಪರಿವಾರಕ್ಕಿರುವ ಅಪಾರ ಅಸಹನೆಯೇ ಮೋದಿ ಸರ್ಕಾರದಲ್ಲಿರುವ ಪ್ರತಿಭಾಹೀನತೆಗೆ ಒಂದು ಪ್ರಮುಖ ಕಾರಣ. ವಿಚಾರಶೀಲತೆಯನ್ನೇ ವಿದೇಶಿಯೆಂದೂ, ಆದ್ದರಿಂದ ವರ್ಜ್ಯವೆಂದೂ ಕಾಣುವ ಆಡಳಿತವೊಂದು ಬುದ್ಧಿಜೀವಿಗಳನ್ನು ಮತ್ತು ಚಿಂತಕರನ್ನು ಬಿಡಿ ಸಮರ್ಥ ವೃತ್ತಿಪರರನ್ನೂ ಸಹ ಆಕರ್ಷಿಸುವುದಿಲ್ಲ. ಇಂದಿರಾಗಾಂಧಿಯವರು ರಾಜಕೀಯವನ್ನು ಸಿದ್ಧಾಂತರಹಿತವಾಗಿಸಿದರು ಎಂಬ ಆರೋಪದ ನಡುವೆಯೂ ಕಾಂಗ್ರೆಸ್ ಸಂಘಟನಾತ್ಮಕವಾಗಿ ಒಂದು ಸಡಿಲ ಪಕ್ಷವಾಗಿದ್ದರಿಂದ ಹಲವು ಪ್ರತಿಭಾವಂತರನ್ನು ಆಕರ್ಷಿಸಿತ್ತು. ಆದರೆ ಭಾರತೀಯ ಜನತಾ ಪಕ್ಷವು ಒಂದು ಕಾರ್ಯಕರ್ತರನ್ನಾಧರಿಸಿದ ಪಕ್ಷವಾದ್ದರಿಂದ ಬೌದ್ದಿಕ ಸಂಪನ್ಮೂಲಗಳುಳ್ಳ ವ್ಯಕ್ತಿಗಳ ಹರಿವು ನಿರ್ಭಂಧಿತವಾಗಿರುತ್ತದೆ. ಮೇಲಾಗಿ ಪಕ್ಷದಲ್ಲಿ ರಾಜಕೀಯವಾಗಿ ಪ್ರವರ್ಧಮಾನಕ್ಕೆ ಬರಲು ಆಶಿಸುವವರು ರಾಷ್ಟ್ರೀಯ ಸ್ವಯಂ ಸೇವಾ ಸಂಘ (ಆರೆಸ್ಸೆಸ್) ಕೃಪಾಶೀರ್ವಾದ ಪಡೆದುಕೊಳ್ಳುವುದು ಕಡ್ಡಾಯವಾಗಿರುತ್ತದೆ. ಅದಾಗಬೇಕೆಂದರೆ ಪಕ್ಷ ಪ್ರವೇಶದ ಪ್ರಾರಂಭದಿಂದಲೇ ಅಸಹನೆ ಮತ್ತು ವಿಚಾರಶೂನ್ಯತೆಗಳ ಸಹವಾಸದಲ್ಲಿ ಪಳಗಬೇಕಾಗುತ್ತದೆ. ಇದು ಸಹಜವಾಗಿಯೇ ಬೆಳೆಯಬೇಕಾದ ಪ್ರತಿಭೆಗಳಿಗೆ ಹೇಳಿ ಮಾಡಿಸಿದ ವಾತವರಣವೇನಲ್ಲ.

ಇವರಿಬ್ಬರ ನಡುವೆ ಇರುವ ಪ್ರಧಾನ ಭಿನ್ನರೂಪತೆಯೆಂದರೆ ಅವರ ವ್ಯಕ್ತಿತ್ವಗಳಲ್ಲಿ ಮತ್ತು ರಾಜಕೀಯ ತರಬೇತಿಗಳಲ್ಲಿರುವ ಭಿನ್ನತೆ. ಮೋದಿಯವರು ಕ್ರಮಬದ್ಧತೆಗಳನ್ನು ಗಾಳಿಗೆ ತೂರುವಲ್ಲಿ, ಮತ್ತು ವ್ಯಕ್ತಿ ಆರಾಧನೆಯನ್ನು ಉತ್ತೇಜಿಸುವಲ್ಲಿ ಇಂದಿರಾ ಪರಂಪರೆಯನ್ನು ಅನುಸರಿಸುತ್ತಿದ್ದಾರೆ. ಆದರೆ ಗಾಂಧಿಯವರ ಅಹಮಿಕೆಯ ಹಿಂದೆ ಸುಶಿಕ್ಷತೆ ಮತ್ತು  ಒಂದು ಉದಾರವಾದಿ ಆಧುನಿಕ ಶಿಕ್ಷಣದ ಹಿನ್ನೆಲೆಗಳಿರುತ್ತಿದ್ದವು. ಆಕೆ ಪಡೆದ ರಾಜಕೀಯ ತರಬೇತಿಯು ಎಲ್ಲಾ ವಿಧಿವಿಧಾನಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರದಂತೆ ತಡೆಯುತ್ತಿದ್ದವು. ಹೀಗಾಗಿಯೇ ತುರ್ತುಸ್ಥಿತಿಯನ್ನು ಘೊಷಿಸುವಾಗಲೂ ಅವರು ಸಾಂವಿಧಾನಿಕ ಕಲಮುಗಳನ್ನು ಆಧರಿಸಿದ್ದರು. ಆದರೆ ಮೋದಿಯವರ ವ್ಯಕ್ತಿತ್ವವನ್ನೂ ಮತ್ತು ಅವರ ರಾಜಕೀಯ ಹಿನ್ನೆಲೆಯನ್ನೂ ಗಮನಿಸಿದಾಗ ನಿರ್ಣಾಯಕ ಸಂದರ್ಭಗಳು ಬಂದಾಗ ಅವರು ಸಾಂವಿಧಾನಿಕ ಶಿಷ್ಟಾಚಾರಗಳನ್ನು ಪಾಲಿಸುತ್ತಾರೆಂದು ನಂಬುವುದು ಕಷ್ಟ. ಹೀಗಾಗಿ ಬಾರಿ ಭಾರತವು ಮೊದಲಿಗಿಂತಲೂ ಹೆಚ್ಚಿನ ಕಳವಳಕ್ಕೆ ಗುರಿಯಾಗಿದೆ.
  
ಕೃಪೆ: Economic and Political Weekly                                                    Nov 25, 2017. Vol. 52. No. 47
                                                                                                                                
  (EPW ಅನುವಾದ ಯೋಜನೆಯ ಹೆಚ್ಚಿನ ಮಾಹಿತಿಗಾಗಿ: http://www.epw.in/translation )











ಕಾಮೆಂಟ್‌ಗಳಿಲ್ಲ: