ಸೋಮವಾರ, ಡಿಸೆಂಬರ್ 4, 2017

ರಾಬರ್ಟ್ ಮುಗಾಬೆ: ಆಫ್ರಿಕಾದ ಕೊನೆಯ ವಿಮೋಚಕ

    ಅನುಶಿವಸುಂದರ್ 
Image result for robert mugabe

ರಾಬರ್ಟ್ ಮುಗಾಬೆಯವರ ಪತನದಿಂದ ಜಿಂಬಾಬ್ವೆಗೆ ಹೆಚ್ಚಿನ ಬಿಡುಗಡೆಯೇನೂ ದೊರೆತಿಲ್ಲ.

 ಎಂದೆಂದಿಗೂ ರಾಷ್ಟ್ರಾಧ್ಯಕ್ಷರಾಗಿಯೇ ಮುಂದುವರೆಯುವಂತಿದ್ದ ಜಿಂಬಾಬ್ವೆಯ ಅಧ್ಯಕ್ಷ ರಾಬರ್ಟ್ ಮುಗಾಬೆಯವರನ್ನು ಅಧ್ಯಕ್ಷ ಸ್ಥಾನದಿಂದ ಪದಚುತಿಗೊಳಿಸಲಾಗಿದೆ. ಅದು ಒಂದು ಬಗೆಯ  ಉತ್ಸಾಹೋನ್ಮಾದಗಳನ್ನೇ ಸೃಷ್ಟಿಸಿದೆ. ಇದರಿಂದಾಗಿ ಮುಗಾಬೆಯವರ ಸ್ಥಾನಕ್ಕೆ ಬಂದಿರುವ ಎಮರ್ಸನ್ ಮಂಗಾಗ್ವ ಅವರು ದೇಶಕ್ಕೆ ಸ್ವಾತಂತ್ರ್ಯ ಮತ್ತು ಸಮೃದ್ಧಿಯಿಂದ ತುಂಬಿದ ಭವಿಷ್ಯವನ್ನು ಕೊಡುವುದಾಗಿ ನೀಡಿರುವ ಭರವಸೆಯಲ್ಲಿ ಎಷ್ಟು ತಥ್ಯಾಂಶವಿದೆ ಎಂಬುದನ್ನು ಯಾರೂ ಪರಿಶೀಲಿಸಲಾಗುತ್ತಿಲ್ಲ. ಮಂಗಾಗ್ವ ಅವರು ಒಂದು ಕಾಲದ ತಮ್ಮ ಗುರುಗಳಾದ ಮುಗಾಬೆಯವರಿಂದ ಆಳವಾದ ಒಡಕಿನಿಂದ ಕೂಡಿರುವ ಪಕ್ಷದ ವಾರಸತ್ವವನ್ನು ಪಡೆದುಕೊಂಡಿದ್ದಾರೆ. ಮತ್ತು  ಪಕ್ಷದಲ್ಲಿ ಗುಂಪುಗಾರಿಕೆಯನ್ನು ಬಲಪ್ರಯೋಗದಿಂದ  ಹತ್ತಿಕ್ಕುವ ಪರಂಪರೆಯಿದೆ.

ಮುಗಾಬೆಯವರಿಗೆ ರಾಜೀನಾಮೆ ನೀಡುವ ಅವಕಾಶವನ್ನು ನೀಡಲಾಗಿತ್ತುಕಳೆದ ಎರಡು ದಶಕಗಳಿಂದ ಜಾಗತಿಕ ದಿಗ್ಭಂಧನಕ್ಕೊಳಗಾಗಿದ್ದ ನಾಯಕ ತನ್ನ ದೇಶವನ್ನು ವಸಾಹತುಶಾಹಿಗಳಿಂದ ವಿಮೋಚನೆ ಮಾಡಿದ ಕೀರ್ತಿಯ ಪ್ರಭಾವಳಿಯಿಂದಾಗಿಯೇ ಅಧಿಕಾರದಲ್ಲಿ ಮುಂದುವರೆಯಲು ಸಾಧ್ಯವಾಗಿತ್ತು. ಹೀಗಾಗಿ ಈಗಲೂ ಸಾಕಷ್ಟು ವಸಾಹತುಶಾಹಿ ವಿರೋಧಿ ಹೋರಾಟಗಾರರೇ ಇರುವ ಜಿಂಬಾಬ್ವೆಯ ಸೇನಾಧಿಕಾರಿಗಳು ತಮ್ಮ ನಾಯಕನಿಗೆ ಗೌರವದಿಂದ ಅಧಿಕಾರದಿಂದ ನಿರ್ಗಮಿಸಲು ಒಂದು ಅವಕಾಶವನ್ನು ಕೊಟ್ಟಿದ್ದರು. ಆದರೆ ಮುಗಾಬೆಯವರ ಮಟ್ಟಿಗೆ ರಾಜೀನಾಮೆ ಕೊಡುವುದೆಂದರೆ ತನ್ನ ಇತ್ತೀಚಿನ ಹಲವು ತಿಳಿಗೇಡಿ ಹಾಗೂ ಮುಠಾಳತನಗಳನ್ನು ಬಿಟ್ಟುಕೊಡುವುದಕ್ಕೆ ಸಮನಾಗಿತ್ತು. ಅವರ  ಅಂಥಾ ಮೂರ್ಖತನಗಳಲ್ಲಿ ತಮ್ಮ ವಾರಸುದಾರಿಕೆಗಾಗಿ ನಡೆಯುತ್ತಿದ್ದ ಪೈಪೋಟಿಯಲ್ಲಿ ಚಿಕ್ಕ ವಯಸ್ಸಿನ ತನ್ನ ಎರಡನೇ ಹೆಂಡತಿಯಾದ ಗ್ರೇಸ್ ಕಡೆಗೆ ವಾಲುತ್ತಿದ್ದದ್ದು ಪ್ರಧಾನವಾಗಿತ್ತು.

ಹೀಗಾಗಿ ಅಂತಿಮವಾಗಿ ಇದು ಜಿಂಬಾಬ್ವೆಯ ಸಂಸತ್ತಿನಲ್ಲಿ ರಾಷ್ಟ್ರಪತಿಯನ್ನು ಪದಚ್ಯುತಿಗೊಳಿಸುವ ಸಂಸದೀಯ ಪ್ರಕ್ರಿಯೆಗಳು ಪ್ರಾರಂಭಗೊಳ್ಳುವಂತೆ ಮಾಡಿತ್ತು. ಹೀಗೆ ಉಪಾಧ್ಯಕ್ಷರಾಗಿದ್ದ  ಮಂಗಾಗ್ವರನ್ನು ಪದಚ್ಯುತಗೊಳಿಸಿದ್ದರಿಂದ ಪ್ರಾರಂಭಗೊಂಡ ಘಟನಾವಳಿಗಳು, ಸ್ವಲ್ಪಕಾಲ ದೇಶಭ್ರಷ್ಟರಾಗಿ ದಕ್ಷಿಣ ಆಫ್ರಿಕಾದಲ್ಲಿದ್ದ ಮಂಗಾಗ್ವೆಯವರು ವಿಜಯೋತ್ಸಾಹದಿಂದ ಮರಳುವವರೆಗೂ ಮುಂದುವರೆಯಿತು. ಅವರು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವುದರ ಜೊತೆಜೊತೆಗೆಉದ್ದುದ್ದವಾಗಿ ಬಿರುಕಾಗಿರುವ ದೇಶದಲ್ಲಿ ಹೊಸ ಅಧ್ಯಕ್ಷರು ಯಾವ ಬಗೆಯಲ್ಲಿ ಮರುಸಂಧಾನವನ್ನು ಮಾಡಲು ಸಾಧ್ಯ ಎಂಬ ಪ್ರಶ್ನೆಯೂ ಹುಟ್ಟಿಕೊಂಡಿದೆ. ವಸಾಹತುಶಾಹಿಗಳೊಂದಿನ ಯುದ್ಧದಲ್ಲಿ ಭಾಗವಹಿಸಿದ್ದ ಅಂದಿನ ಯುದ್ಧವೀರರಲ್ಲಿ ಹಲವರನ್ನು ಸೈನ್ಯದೊಳಗೆ ಸೇರಿಸಿಕೊಳ್ಳಲಾಗಿದ್ದರೆ ಕೆಲವರು ನಿವೃತ್ತರಾಗಿ ಹಳ್ಳಿಗಾಡಿನಲ್ಲಿ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಇವರೇ  ಮುಗಾಬೆಯವರ ಪ್ರಧಾನ ಬೆಂಬಲಿಗರು. ಅವರು ತಮ್ಮ ನಿಷ್ಟೆಯನ್ನು ಬದಲಿಸಿದಲ್ಲಿ ಮಂಗಾಗ್ವೆಯವರ ಅಧಿಕಾರ ನಿರಾತಂಕವಾಗಲಿದೆ. ಆಗ ಅವರು ತನ್ನ ಮಾಜಿ ಗುರುಗಳ ರೀತಿಯಲ್ಲಿ ತಂತ್ರೋಪಾಯಗಳಲ್ಲಿ ತೊಡಗುವ ಮೂಲಕ ಅಧಿಕಾರದಲ್ಲಿ ಮುಂದುವರೆಯಬಹುದು  ಅಥವಾ ಪ್ರಾಮಾಣಿಕವಾಗಿ ನೈಜ ಮರುಸಂಧಾನ ಪ್ರಕ್ರಿಯೆಯಗಳಲ್ಲಿ ತೊಡಗಬಹುದು.

ಆಳುವ ಪಕ್ಷದೊಳಗಿನ ಗ್ರೇಸ್ ಮುಗಾಬೆಯವರ ನೇತೃತ್ವದ ಜಿಂಬಾಬ್ವೆ ನ್ಯಾಷನಲ್ ಯೂನಿಯನ್ ಪೇಟ್ರಿಯಾಟಿಕ್ ಫ್ರಂಟ್ (ಜೆಡ್..ಎನ್.ಯು-ಪಿಎಫ್) ಬಣಕ್ಕೆ ಹಿನ್ನೆಡೆಯುಂಟಾಗಿದೆ. ಆದರೆ ಅವರೇನೂ ಹಿಂದೆ ಸರಿದಿಲ್ಲ. ಅವರಿಗೆ ಜಿಂಬಾಬ್ವೆಯ ನಗರ ಪ್ರಾಂತ್ಯಗಳಲ್ಲಿ ದೇಶ ವಿಮೋಚನೆಯ ನಂತರ ಜನಿಸಿದ ಪೀಳಿಗೆಯ ಬೆಂಬಲವಿದೆ. ಪೀಳಿಗೆಯ ಕುಂದುಕೊರತೆಗಳನ್ನು ಬಗೆಹರಿಸುವುದು ಮಂಗಾಗ್ವೆಯವರ ರಾಜಕೀಯ ಜಾಣ್ಮೆಯನ್ನು ಒರೆಗೆ ಹಚ್ಚಲಿದೆ.

ಮಂಗಾಗ್ವೆಯವರು ಜಿಂಬಾಬ್ವೆಯು ವಿಮೋಚನೆಯನ್ನು ಪಡೆದಾಗಲಿಂದಲೂ ಮತ್ತು ನಡನಡುವೆ ಅಂತರಿಕ ಸಂಘರ್ಷಗಳಿಂದ ತತ್ತರಿಸುತ್ತಿದ್ದಾಗಲೂ ದೇಶದ ಇತಿಹಾಸzಲ್ಲಿ ಒಬ್ಬ ಪ್ರಮುಖ ಪಾತ್ರವಹಿಸಿದ್ದಾರೆ. ಜಿಂಬಾಬ್ವೆಯು ವಿಮೋಚನೆಗೊಂಡ ಮೊದಲ ದಶಕದಲ್ಲಿ ದೇಶದ ಅಂತರಿಕ ಭದ್ರತೆ ಮತ್ತು ಕಾನೂನು ಮಂತ್ರಿಯಾಗಿದ್ದ ಮಂಗಾಗ್ವೆ ತನ್ನ ಪಕ್ಷದ ಎದುರಾಳಿ ಚಳವಳಿಯಾಗಿದ್ದ ಜೋಷುವಾ ನಕಾಮೋ ಜಿಂಬಾಬ್ವೆ ಆಫ್ರಿಕನ್ ಪೀಪಲ್ಸ್ ಯೂನಿಯನ್ (ಜೆಡ್..ಪಿ.ಯು.)ಅನ್ನು ಕ್ರೂರವಾಗಿ ಹತ್ತಿಕ್ಕುವಲ್ಲಿ ಪ್ರಧಾನ ಪಾತ್ರವಹಿಸಿದ್ದರು.

ಕಾಲಘಟ್ಟದಲ್ಲಿ ಆಫ್ರಿಕಾದ ದಕ್ಷಿಣ ಭಾಗವು ಅಮೆರಿಕ ಮತ್ತು ರಷ್ಯಾ ಅಗ್ರ ರಾಷ್ಟ್ರಗಳ ನಡುವಿನ ಶೀತಲಯುದ್ಧದ ಮತ್ತೊಂದು ರಣಾಂಗಣವಾಗಿದ್ದವು. ಅದರಲ್ಲೂ ಹೊಸದಾಗಿ ವಿಮೋಚನೆಗೊಂಡಿದ್ದ ಅಂಗೋಲ ಮತ್ತು ಮೊಜಾಂಬಿಕ್ ದೇಶಗಳು ಅಗ್ರರಾಷ್ಟ್ರಗಳ ನಡುವಿನ ಸಂಘರ್ಷದ ದಾಳದ ಕಾಯಿಗಳಾಗಿದ್ದವು. ಹೀಗಾಗಿ ಒಂದು ದೇಶದೊಳಗೆ ವಿಮೋಚನಾ ಹೋರಾಟ ನಡೆಸುತ್ತಿದ್ದವರಿಗೆ ಪ್ರತಿಯಾಗಿ ಮತ್ತೊಂದು ಹೋರಾಟ ಕಟ್ಟುತ್ತಿದ್ದವರನ್ನು ಎರಡರಲ್ಲೊಂದು ಅಗ್ರ ರಾಷ್ಟ್ರವು ನೈಜ ವಿಮೋಚನ ಹೋರಾಟವೆಂದು ಮಾನ್ಯ ಮಾಡುತ್ತಿದ್ದವು. ಯಾರ ಜೊತೆ ಪಶ್ಚಿಮ ದೇಶಗಳು ಯುದ್ಧ ನಡೆಸುತ್ತವೆಂಬ ಆಧಾರದಲ್ಲಿ ಆಯಾ ಹೋರಾಟಗಳಿಗೆ ರಾಷ್ಟ್ರೀಯವಾದಿ ಎಂಬ ಮಾನ್ಯತೆ ದಕ್ಕುತ್ತಿತ್ತುಜಿಂಬಾಬ್ವೆಯು ತನ್ನ ದೇಶದೊಳಗೆ ಬಿಳಿಯ ಜನರಿಗೆ ವಿಶೇಷ ಸೌಲಭ್ಯಗಳುಳ್ಳ ಪ್ರದೇಶಗಳ ತಂಟೆಗೇ ಹೋಗದೇ ಪಶ್ಚಿಮದ ದೇಶಗಳು ನಿಗದಿ ಮಾಡಿದ್ದ ನಿಯಮಗಳನ್ನು ಪಾಲಿಸಿದ್ದರಿಂದ ೧೯೮೦ರುದ್ದಕ್ಕೂ ನಡೆದ ಅಂತರಿಕ ಸಂಘರ್ಷದಲ್ಲಿ ಅದು ಅಪಾರ ಕ್ರೌರ್ಯಗಳನ್ನೆಸಗಿದರೂ ಹೆಚ್ಚಿನ ಜಾಗತಿಕ ಟೀಕೆಗಳಿಗೆ ಗುರಿಯಗದೆ ಬಚಾವಾಗಿತ್ತು.

ಇದಕ್ಕೆ ಹೋಲಿಸಿದಲ್ಲಿ ೧೯೯೦ರಲ್ಲಿ ದಕ್ಷಿಣ ಆಫ್ರಿಕಾ ದೇಶವು ಬಹುಸಂಖ್ಯಾತ ಕರಿಯರ ಆಳ್ವಿಕೆಯಾಗಿ ಪರಿವರ್ತನೆಗೊಂಡಿದ್ದು ಇದಕ್ಕಿಂತ ಹೆಚ್ಚು ಶಾಂತಿಪೂರ್ಣವಾಗಿತ್ತು. ಏಕೆಂದರೆ ಪ್ರಕ್ರಿಯೆಯು ಶೀತಲಯುದ್ಧದ ಒತ್ತಡಗಳನ್ನು ಅನುಭವಿಸಬೇಕಾಗಲಿಲ್ಲ. ಎಲ್ಲಾ ಸಂದರ್ಭದಲ್ಲೂ ಜಿಂಬಾಬ್ವೆಯು ಪಶ್ಚಿಮವು ಹೇಳಿದಂತೆ ಕೇಳುತ್ತಾ ವಿಶ್ವಾಸವನ್ನು ಉಳಿಸಿಕೊಂಡಿತ್ತು. ತೀವ್ರ ಆರ್ಥಿಕ ಸಂಕಷ್ಟದಲಿದ್ದ ಜಿಂಬಾಬ್ವೆಯು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ವಿಧಿಸಿದ ರಚನಾತ್ಮಕ ಹೊಂದಾಣಿಕಾ ಯೋಜನೆಗಳ ಸಂಕಷ್ಟಗಳನ್ನು ಅತ್ಯಂತ ಸಂಯಮದಿಂದ ಅನುಭವಿಸಿತು.

೧೯೯೮ರಲ್ಲಿ ಮೊಟ್ಟಮೊದಲ ಬಾರಿಗೆ ಜಿಂಬಾಬ್ವೆಯು ತನ್ನ ಸದ್ವರ್ತನೆಯ ವಲಯದಿಂದ ಹೊರಬಂದು ಲಾರೆಂಟ್ ಕಬಿಲರ ಬೆಂಬಲಿಸುತ್ತಾ ಕಾಂಗೋ ದೇಶದಲ್ಲಿ ಸೈನಿಕ ಮಧ್ಯಪ್ರವೇಶವನ್ನು ಮಾಡಿತು. ಇದು ತನ್ನ ವಿಮೋಚನಾ ಹೋರಾಟದ ಸಹವರ್ತಿಗಳ ಹೆಚ್ಚುತ್ತಿದ್ದ ಆಶೊತ್ತರಗಳನ್ನು ಹತ್ತಿಕ್ಕುವಲ್ಲಿ ಮುಗಾಬೆಯವರು ವಿಫಲರಾಗುತ್ತಿದ್ದ ಮೊದಲ ಸಂಕೇತವಾಗಿತ್ತು. ಸೈನಿಕ ಮಧ್ಯ ಪ್ರವೇಶದ ಹಿಂದೆ ಜೋಸೆಫ್ ಕಬಿಲರಿಗೆ ರಾಜಕೀಯ ಬೆಂಬಲವನ್ನು ವ್ಯಕ್ತಪಡಿಸುವ ಉದ್ದೇಶವಿದ್ದರೂ ಆಳದಲ್ಲಿ ಜಿಂಬಾಬ್ವೆಯ ಸೈನ್ಯz ಉನ್ನತಾಧಿಕಾರಿಗಳ ಕೂಟಕ್ಕೆ  ಕಾಂಗೋದ ಖನಿಜ ಸಂಪತ್ತಿನಲ್ಲಿ ಒಂದು ಪಾಲು ಪಡೆಯಬೇಕೆಂಬ ಉದ್ದೇಶವೂ ಇತ್ತು. ೨೦೦೨ರಲ್ಲಿ ವಿಶ್ವಸಂಸ್ಥೆಯು ನಡೆಸಿದ ತನಿಖೆಯು ಕಾಂಗೋ ದೇಶದ ವಜ್ರಗಳ ಕಾನೂನುಬಾಹಿರ ಮಾರಾಟದ ಲಾಭವನ್ನು ಪಡೆದ ರಾಜಕಾರಣಿಗಳಲ್ಲಿ ಮಂಗಾಗ್ವೆಯೂ ಒಬ್ಬರೆಂದು ಗುರುತಿಸಿತ್ತು.

ಇದರಿಂದ ಪಶ್ಚಿಮ ದೇಶಗಳ ಕಣ್ಣು ಕೆಂಪಾದದ್ದು ನಿಜ. ಆದರೆ ಜಾಗತಿಕ ದೊರೆಗಳ ಆಕ್ರೋಶ ನಿಜವಾಗಿ ನೆತ್ತಿಗೇರಿದ್ದು ೨೦೦೦ನೇ ಇಸವಿಯಲ್ಲಿ. ಆಗ ಜಿಂಬಾಬ್ವೆಯು ತ್ವರಿತ ಭೂ ಸುಧಾರಣೆ ಯೋಜನೆಯನ್ನು ಜಾರಿಗೆ ತರಲು ಪ್ರಾರಂಭಿಸಿತು. ವಸಾಹತುಶಾಹಿಗಳಿಂದ ಪಡೆದ ವಿಮೋಚನೆಯಾಗಲೀ, ಐಎಂಎಫ್ ಶರತ್ತುಗಳನ್ನು- ಅವುಗಳಲ್ಲಿ ಬಿಳಿಯರ ಸಂಪತ್ತು ಮತ್ತು ಸವಲತ್ತುಗಳನ್ನು ಮಾನ್ಯ ಮಾಡುವುದೂ ಸೇರಿತ್ತು- ಎದುರಾಡದೆ ಒಪ್ಪಿಕೊಂಡಿದ್ದಕ್ಕಗಲೀ ಯಾವುದೇ ಭೌತಿಕ ಪ್ರಯೋಜನಗಳು ಸಿಗದಿದ್ದರಿಂದ ಮುಗಾಬೆಯವರ ಬೆಂಬಲಿಗರೂ ಅಸಂತುಷ್ಟಗೊಳ್ಳಲಾರಂಭಿಸಿದ್ದರು. ಶಾಸನಬದ್ಧತೆಯ ಮುಸುಕನ್ನು ಹೊಂದಿದ್ದ ಭೂ ಸುಧಾರಣೆಗಳು ಬಹಳ ಬೇಗನೇ ಬಲಪ್ರಯೋಗದ ಮೂಲಕ ಭೂಮಿಯನ್ನು ವಶಪಡಿಸಿಕೊಳ್ಳುವ ಕಾರ್ಯಕ್ರಮವಾಗಿಬಿಟ್ಟಿತು. ಇದರಿಂದ ವಿದೇಶಿ ಬಂಡವಾಳವು ದೇಶ ತೊರೆಯತೊಡಗಿ ಜಿಂಬಾಬ್ವೆಯು ಮತ್ತೊಂದು ತೀವ್ರ ಆರ್ಥಿಕ ಸಂಕಷ್ಟವನ್ನೆದುರಿಸಬೇಕಾಯಿತು. ಬಾರಿ ಐಎಂಎಫ್ ಇನ್ನೂ ಕಠಿಣ ಶರತ್ತುಗಳನ್ನು ಹೇರಿತು. ಆದರೆ ಜಿಂಬಾಬ್ವೆ ಅದಕ್ಕೆ ತಯಾರಿರಲಿಲ್ಲ.

ಆಗ ಪಶ್ಚಿಮ ದೇಶಗಳು ಇನ್ನೂ ನೇರವಾಗಿ ಮಧ್ಯಪ್ರವೇಶ ಮಾಡಲು ಹುಡುಕಿದ ದಾರಿ ಮೋರ್ಗಾನ್ ತ್ಸಾವನ್ಗಿರೈ ನೇತೃತ್ದ ಮೂವ್ಮೆಂಟ್ ಫಾರ್ ಡೆಮಕ್ರಟಿಕ್ ಚೇಂಜ್- ಪ್ರಜಾತಾಂತ್ರಿಕ ಪರಿವರ್ತನೆಯ ಚಳವಳಿ (ಎಂಡಿಸಿ). ಸಾಕಷ್ಟು ಹಣಕಾಸು ಹಾಗೂ ಮಾಧ್ಯಮಗಳ ಬೆಂಬಲ ಹೊಂದಿದ್ದರೂ ಎಂಡಿಸಿಯು ಮುಗಾಬೆ ಹೇರಿದ ಪ್ರಬಲ ಮತ್ತು ಒರಟಾದ ಒತ್ತಡವನ್ನು ಎದುರಿಸಿ ನಿಲ್ಲಲು ಸಾಧ್ಯವಾಗಲಿಲ್ಲ. ಮುಗಾಬೆ ಸರ್ಕಾರದ ದಮನವನ್ನು ಜಾರಿಗೊಳಿಸಿದ್ದು ಮಂಗಾಗ್ವೆ೨೦೦೮ರ ಚುನಾವಣೆಯಲ್ಲಿ ಮುಗಾಬೆ ಮತ್ತು ತ್ಸಾವನ್ಗಿರೈ ನಡುವೆ ಅತ್ಯಂತ ತುರುಸಿನ ಸ್ಪರ್ಧೆ ಏರ್ಪಟ್ಟಿತ್ತು. ಆಗ ಅವರಿಬ್ಬರ ನಡುವೆ ಅಧಿಕಾರದ ಹಂಚಿಕೆಯ ಸೂತ್ರವೊಂದು ಏರ್ಪಡುವಲ್ಲಿ ಪ್ರಮುಖ ಪಾತ್ರವಹಿಸಿದ್ದೂ ಸಹ ಇದೇ ಮಂಗಾಗ್ವೆಯೇ. ಇದರಿಂದ ಮುಗಾಬೆ ಆಡಳಿತಕ್ಕೆ ಅಲ್ಪಾವಧಿ ವ್ಯವಧಾನ ಸಿಕ್ಕಿತು. ಮತ್ತು ಮರುಸಂಧಾನವನ್ನು ರೂಪಿಸಿಕೊಳ್ಳುವಲ್ಲಿ ಮುಗಾಬೆ ತೋರಿದ ಮುಂದೊಡಗಿಗೆ ಪಶ್ಚಿಮ ದೇಶಗಳು ಸ್ವಲ್ಪ ಮೆಚ್ಚುಗೆಯನ್ನೂ ತೋರಿದವು.

ಆಫ್ರಿಕಾದ ವಸಾಹತುಶಾಹಿ ವಿರೋಧಿ ವಿಮೋಚನಾ ನಾಯಕರಲ್ಲಿ ಕೊನೆಯವರಾದ ಮುಗಾಬೆಯವರು ಪದಚ್ಯುತಗೊಂಡು ಇತಿಹಾಸದಲ್ಲಿ ಮರೆಯಾಗುತ್ತಿರುವ ಸಂದರ್ಭವು ಅಲ್ಪಾವಧಿ ಉತ್ಸಾಹೋನ್ಮಾದಗಳನ್ನು ಹುಟ್ಟುಹಾಕಿರುವುದು ನಿಜವಾದರೂ ಅದು ಆಳದಲ್ಲಿ ಮನೆಮಾಡಿರುವ ಬಿರುಕುಗಳನ್ನು ಮುಚ್ಚುವುದಿಲ್ಲ. ಮುಗಾಬೆಯವರ ವಾರಸುದಾರನಾದ ಮಂಗಾಗ್ವೆಯವರಿಗೆ ಬಿರುಕುಗಳಿಗೆ ತೇಪೆ ಹಚ್ಚುವ ಇರಾದೆಯಾಗಲೀ ಸಾಮರ್ಥ್ಯವಾಗಲೀ ಇಲ್ಲ. ಆದರೆ ಒಮ್ಮೆ ಜನರಲ್ಲಿ ಆಶೋತ್ತರಗಳನ್ನು ಉದ್ದೀಪನಗೊಳಿಸಿದ ಮೇಲೆ ಅದೇ ಅವರನ್ನು ಈವರೆಗೆ ಮಾಡಿರದ ಪ್ರಯತ್ನಗಳಿಗೆ ಮತ್ತು ಸಾಧನೆಗಳಿಗೆ ದೂಡಬಹುದು.  
ಕೃಪೆ: Economic and Political Weekly                                                     Nov 25, 2017. Vol. 52. No. 47
                                                                                                           

(EPW ಅನುವಾದ ಯೋಜನೆಯ ಹೆಚ್ಚಿನ ಮಾಹಿತಿಗಾಗಿ: http://www.epw.in/translation )

ಕಾಮೆಂಟ್‌ಗಳಿಲ್ಲ: