ಮಂಗಳವಾರ, ಸೆಪ್ಟೆಂಬರ್ 26, 2017

ಸತ್ಯೋತ್ತರ ಕಾಲ ಮತ್ತು ಅಣೆಕಟ್ಟುಗಳು


        ಅನುಶಿವಸುಂದರ್
Image result for Dam
ಸರ್ದಾರ್ ಸರೋವರ್ ಅಣೆಕಟ್ಟೆಯು ಒಂದು ನ್ಯಾಯರಹಿತ ಮತ್ತು ಅಸ್ಥಿರ ಅಭಿವೃದ್ಧಿ ಮಾದರಿಗೆ ಉದಾಹರಣೆಯಾಗಿದೆ.

ಸತ್ಯೋತ್ತರ ಯುಗ ಮತ್ತು ಪರ್ಯಾಯ ಸತ್ಯಗಳ ಕಾಲದಲ್ಲಿ ತನ್ನ ೬೭ನೇ ಹುಟ್ಟುಹಬ್ಬದ ದಿವಾದ ಸೆಪ್ಟೆಂಬರ್ ೧೭ರಂದು ಬಹು ಉಪಯೋಗಿ ಸರ್ದಾರ್ ಸರೋವರ್ ಅಣೆಕಟ್ಟನ್ನು ಉದ್ಘಾಟನೆ ಮಾಡುತ್ತಾ ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರು ನೀಡಿದ ಹೇಳಿಕೆಗಳ ಬಗ್ಗೆ ಯಾರೂ ಅಚ್ಚರಿಗೊಳ್ಳುವ ಅಗತ್ಯವಿಲ್ಲ. ಕಳೆದ ಮೂವತ್ತು ವರ್ಷಗಳಿಂದ ಅತ್ಯಂತ ಸಂಕೀರ್ಣತೆಗಳಿಂದ ಮತ್ತು ವಿವಾದಗಳಿಂದ ಕೂಡಿದ ಅಣೆಕಟ್ಟೆಯ ಇತಿಹಾಸವನ್ನು ಸಂಪೂರ್ಣವಾಗಿ ನಗಣ್ಯಗೊಳಿಸಿದ ಮೋದಿಯವರು ವಿಶ್ವಬ್ಯಾಂಕ್ ಸಹಾಯ ಮಾಡದಿದ್ದರೂ ನಾವು ಈಯೋಜನೆಯನ್ನು ಮಾಡಿಯೇ ತೀರುವುದಾಗಿ ನಿರ್ಧರಿಸಿದ್ದೆವು ಎಂದು ಹೇಳಿಕೊಂಡರು. ಆದರೆ ವಾಸ್ತವವು ಅವರ ಹೇಳಿಕೆಗಿಂತ ಭಿನ್ನವಾಗಿವೆ. ಅಷ್ಟು ಮಾತ್ರವಲ್ಲ. ವಿಶ್ವಬ್ಯಾಂಕು ಯೋಜನೆಯಿಂದ ಹಿಂದೆ ಸರಿದ ನಂತರ ಗುಜರಾತಿನ ದೇವಸ್ಥಾನಗಳು ನೀಡಿದ ದೇಣಿಗೆಯಿಂದ ಯೋಜನೆಗೆ ಹಣಕಾಸನು ಹೊಂದಿಸಿಕೊಳ್ಳಲಾಯಿತೆಂದೂ ಸಹ ಅವರು ಹೇಳಿದ್ದಾರೆ. ಇದೂ ಕೂಡಾ ಸತ್ಯಕ್ಕೆ ತುಂಬಾ ದೂರವಾದ ಸಂಗತಿಯಾಗಿದೆ.

 ನರ್ಮದಾ ನದಿಯ ಮೇಲೆ ಕಟ್ಟಲಾಗುತ್ತಿರುವ ೩೦೦೦ ಸಣ್ಣ, ೧೩೫ ಮಧ್ಯಮ ಗಾತ್ರದ ಮತ್ತು ೩೦ ಬೃಹತ್ ಅಣೆಕಟ್ಟುಗಳಲ್ಲಿ ಒಂದಾದ ಸರ್ದಾರ್ ಸರೋವರ್ ಅಣೆಕಟ್ಟನ್ನು ದೇವಸ್ಥಾನಗಳು ನೀಡಿದ ದೇಣಿಗೆಯಿಂದ ಕಟ್ಟಲಾಗಿಲ್ಲ. ಯೋಜನೆಗೆ ೩೦೦ ಮಿಲಿಯನ್ ಡಾಲರ್ ಮೊತ್ತದ ಹಣದ ಸಹಕಾರ ನೀಡುವ ಒಪ್ಪಂದ ಮಾಡಿಕೊಂಡಿದ್ದ ವಿಶ್ವಬ್ಯಾಂಕು ೧೯೯೩ರಲ್ಲಿ ತನ್ನ ಕೊನೆಯ ಕಂತನ್ನು ನೀಡಿ ಯೋಜನೆಯಿಂದ ಹಿಂದೆ ಸರಿದ ಮೇಲೆ ಸರ್ಕಾರದ ಹಣದಿಂದಲೇ ಯೊಜನೆಯನ್ನು ಪೂರ್ತಿಗೊಳಿಸಲಾಯಿತು. ವಿಶ್ವಬ್ಯಾಂಕು ಯೋಜನೆಯಿಂದ ಹಿಂದೆ ಸರಿದದ್ದು ಮತ್ತು ಯೋಜನೆಯ ವಿರುದ್ಧ ನಡೆದ ಜನತೆಯ ಪ್ರತಿರೋಧಗಳು ಯೋಜನೆಯ ಇತಿಹಾಸದ ಅಂತರ್ಗತ ಕಥನಗಳಾಗಿವೆ. ಭಾರತವು ಮುಂದೆ ಸಾಗುತ್ತಿರುವ ಹೊತ್ತಿನಲ್ಲಿ ಇತಿಹಾಸದ ಕಥನದಿಂದ ಭಾರತವು ಕೆಲವು ಪಾಠಗಳನ್ನು ಕಲಿತುಕೊಳ್ಳಲೇ ಬೇಕಿದೆ. ಆದರೆ ಮೋದಿಯವರು ಇವೆಲ್ಲವನ್ನೂ ಯೋಜನೆಯ ಬಗೆಗಿನ ದುಷ್ಪ್ರಚಾರ ವೆಂದು ತಳ್ಳಿಹಾಕಿದ್ದಾರೆ. ಅಧಿಕಾರದಲ್ಲೇ ಯಾವುದೇ ಪಕ್ಷವಿದ್ದರೂ, ಒಂದು ಜವಾಬ್ದಾರಿಯುತ, iಪಾಲುಳ್ಳ, ಮತ್ತು ಸುಸ್ಥಿರವಾದ ಅಭಿವೃದ್ಧಿಯ ಸಂದೇಶವು ಇನ್ನೂ ಯಾರಿಗೂ ಅರ್ಥವಾಗಿಲ್ಲವೆಂಬುದನ್ನೇ ಇದು ಎತ್ತಿತೋರಿಸುತ್ತದೆ.

ವಿಶ್ವಬ್ಯಾಂಕು ತಾನು ಹಣಕಾಸು ನೆರವು ನೀಡುತ್ತಿದ್ದ ಯೋಜನೆಯ ಪರಿಣಾಮಗಳನ್ನು ಅರ್ಥಮಾಡಿಕೊಳ್ಳಲು ತಾನೇ ಒಂದು ಸ್ವತಂತ್ರ ಸಂಸ್ಥೆಯನ್ನು ನೇಮಿಸಿತು. ಅದರ ವರದಿಯನ್ನು ಆಧರಿಸಿಯೇ ಅದು ಯೋಜನೆಯಿಂದ ಹಿಂದೆ ಸರಿಯಿತು. ಯೋಜನೆಯು ಪರಿಹಾರ ಮತ್ತು ಪುನರ್ವಸತಿ ಹಾಗೂ ಪರಿಸರದ ವಿಷಯಗಳನ್ನು ವಿಶ್ವಬ್ಯಾಂಕಿನ ನೀತಿಗನುಗುಣವಾಗಿ ಅನುಷ್ಠಾನಕ್ಕೆ ತರುತ್ತಿಲ್ಲವೆಂದು ಸ್ವತಂತ್ರ ಸಮಿತಿಯು ವರದಿಯನ್ನು ನೀಡಿತ್ತು. ಹೀಗಾಗಿ ವಿಶ್ವಬ್ಯಾಂಕಿಗೆ ಯೋಜನೆಯಿಂದ ಹಿಂದೆ ಸರಿಯುವುದನ್ನು ಬಿಟ್ಟು ಬೇರೆ ಯಾವುದೇ ಆಯ್ಕೆಗಳಿರಲಿಲ್ಲ. ಪರ್ಯಾಯ ಸಮೀಕ್ಷಾ ವರದಿಯು ಯೋಜನಾ ಸಂತ್ರಸ್ತರ ಕಾಳಜಿಗಳಿಗೆ ಧ್ವನಿಯಾಗುತ್ತಾ ಯೋಜನೆಯ ವಿರುದ್ಧ ಹೋರಾಡುತ್ತಿದ್ದ  ನರ್ಮದಾ ಬಚಾವ್ ಅಂದೋಲನ (ಎನ್ಬಿಎ) ಕಳವಳಗಳನ್ನೂ ಸಹ ಪುರಸ್ಕರಿಸಿತು. ವಾಸ್ತವವಾಗಿ ಜಗತ್ತಿನ ಇನ್ನೂ ಹಲವಾರು ಕಡೆಗಳಲ್ಲಿ ಇಂಥಾ ಬೃಹತ್ ಅಣೆಕಟ್ಟು ಯೋಜನೆಗಳ ವಿರುದ್ಧ ಇದೇ ಬಗೆಯ ಕಾಳಜಿ ಮತ್ತು ಕಳವಳಗಳನ್ನು ವ್ಯಕ್ತಪಡಿಸಲಾಗುತ್ತಿತ್ತು. ಇವೆಲ್ಲವೂ ಒಟ್ಟುಗೂಡಿ ೧೯೯೮ರಲ್ಲಿ ಬೃಹತ್ ಅಣೆಕಟ್ಟುಗಳ ಬಗೆಗಿನ ಜಾಗತಿಕ ಅಯೋಗವೊಂದು (ವರ್ಲ್ಡ್ ಕಮಿಷನ್ ಆನ್ ಡ್ಯಾಮ್ಸ್) ನೇಮಕಗೊಂಡು ಬೃಹತ್ ಅಣೆಕಟ್ಟುಗಳ ಪರಿಕಲ್ಪನೆಯ ಬಗ್ಗೆಯೇ ಮರುಚಿಂತನೆಯು ಪ್ರಾರಂಭವಾಯಿತು. ಆಗಿನಿಂದ ಇಂಥಾ ಬೃಹತ್ ಯೋಜನೆಗಳಿಗೆ ಹಣದ ಹರಿವು ಕಡಿಮೆಯಾಗತೊಡಗಿರುವುದು ಮಾತ್ರವಲ್ಲದೆ, ಇಂಥಾ ಯೋಜನೆಗಳು ಉಂಟು ಮಾಡುವ ಬೃಹತ್ ಸಾಮಾಜಿಕ ಮತ್ತು ಪರಿಸರ ವಿನಾಶಗಳನ್ನು ಸಹ ನಿಧಾನವಾಗಿ ಗುರುತಿಸಲಾಗುತ್ತಿದೆ.

ಅಣೆಕಟ್ಟುಗಳನ್ನು ಆಧುನಿಕ ಭಾರತದ ದೇವಸ್ಥಾನಗಳೆಂದು ಕರೆದಿದ್ದ ಜವಹರ್ಲಾಲ್ ನೆಹ್ರೂರವರೇ ಸರ್ದಾರ್ ಸರೋವರ ಅಣೆಕಟ್ಟಿಗೆ ೧೯೬೧ರಲ್ಲಿ ಶಂಕುಸ್ಥಾಪನೆ ಮಾಡಿದ್ದರೂ ಸಹ ಇಂಥಾ ಯೋಜನೆಗಳ ದೈತ್ಯ ಸ್ವರೂಪದ ಬಗ್ಗೆ ಸಂದೇಹಗಳನ್ನು ವ್ಯಕ್ತಪಡಿಸುತ್ತಿದ್ದರೆಂಬುದನ್ನು ಇಲ್ಲಿ ನಾವು ನೆನಪಿಸಿಕೊಳ್ಳಬೇಕು. ಸಮಯದಲ್ಲಿ ಯೋಜನೆಗಳ ಗಾತ್ರ ದೊಡ್ಡದಾದಷ್ಟೂ, ಹೂಡಿಕೆಯೂ ಹೆಚ್ಚಾಗುವುದರಿಂದ ಪ್ರಯೋಜನಗಳು ಹೆಚ್ಚಾಗುತ್ತವೆಂದು ಭಾವಿಸಲಾಗುತ್ತಿತ್ತು. ೧೯೮೭ರಲ್ಲಿ ಸರ್ದಾರ್ ಸರೋವರದ ನಿರ್ಮಾಣ ಪ್ರಾರಂಭವಾಗುವ ಹೊತ್ತಿಗಾಗಲೇ ಇಂಥಾ ತಿಳವಳಿಕೆಗಳ ಬಗ್ಗೆ ಗಂಭೀರವಾದ ಪ್ರಶ್ನೆಗಳನ್ನು ಎತ್ತಲಾಗಿತ್ತು. ಹಾಗೂ ಮೊಟ್ಟ ಮೊದಲಬಾರಿಗೆ ಇಂಥಾ ಯೋಜನೆಗಳ ಸಾಮಾಜಿಕ ಮತ್ತು ಪರಿಸರಾತ್ಮಕ ವೆಚ್ಚಗಳ ಬಗ್ಗೆ ಸ್ಥೂಲವಾದ ಪ್ರಶ್ನೆಗಳನ್ನು ಕೇಳಲಾಯಿತು. ೧೩೮.೬೮ ಮೀಟರ್ಗಳಷ್ತು ಎತ್ತರವಾದ  ಸರ್ದಾರ್ ಸರೋವರ್ ಅಣೆಕಟ್ಟನ್ನು ಕಟ್ಟಲು ತಗುಲಿದ ಕಳೆದ ಮೂವತ್ತು ವರ್ಷಗಳ ಅವಧಿಯಲ್ಲಿ ಪ್ರಶ್ನೆಗಳು ಸಹ ಹೆಚ್ಚೆಚ್ಚು ಮಾನ್ಯತೆಗಳನ್ನು ಪಡೆದುಕೊಳ್ಳುತ್ತಾ ಬಂದಿದೆ. ಈಗ ವೆಚ್ಚ-ಲಾಭಗಳ ಲೆಕ್ಕಾಚಾರಗಳು ಕೇವಲ ಅಂಕಿಸಂಖ್ಯೆಗಳ ವ್ಯವಹಾರವಾಗಿ ಉಳಿದಿಲ್ಲ; ಈಗ ಜನರಿಗೆ ಮತ್ತು ಪರಿಸರಕ್ಕೆ ತಗುಲುವ ಹಾನಿಯನ್ನು ವೆಚ್ಚಕ್ಕೆ ಸೇರಿಸಿ ಲೆಕ್ಕಹಾಕಲೇ ಬೇಕಾಗಿದೆ.

ಅದೇ ರೀತಿ ಎಷ್ಟೇ ಅಡೆತಡೆಗಳು ಎದುರಾದರೂ ತನ್ನಿಂದಾಗಿಯೇ ಯೋಜನೆಯು ಪೂರ್ಣಗೊಳ್ಳುವಂತಾಯಿತೆಂದು ಜನರು ನಂಬಬೇಕೆಂದು ಮೋದಿ ಬಯಸುತ್ತಾರೆ. ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸರ್ದಾರ್ ಸರೋವರ್ ಯೋಜನೆಯನ್ನು ಗುಜರಾತಿಗಳ ಪ್ರತಿಷ್ಯೆಯ ಪ್ರಶ್ನೆಯಾಗಿಸಿದ್ದು ಮತ್ತು ಹಾಗು ಅದನ್ನು ವಿರೋಧಿಸುವ ಪ್ರತಿಯೊಬ್ಬರೂ ಗುಜರಾತ್ ವಿರೋಧಿಗಳೆಂಬಂತೆ ಬಿಂಬಿಸಿದ್ದೂ ನಿಜ. ಆದರೆ ವಾಸ್ತವವೇನೆಂದರೆ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಪ್ರತಿಯೊಂದು ಸರ್ಕಾರಗಳು ಬಿಗ್ ಈಸ್ ಬ್ಯೂಟಿಫುಲ್ (ದೊಡ್ಡ ಯೋಜನೆಗಳೇ ಅಭಿವೃದ್ಧಿಗೆ ಪೂರಕಎಂಬ ಚಿಂತನೆಯನ್ನು ಉಳ್ಳವರಾಗಿದ್ದರಿಂದಲೇ ಯೋಜನೆಯು ಕಾರ್ಯಗತವಾಯಿತು. ನರ್ಮದಾ ಬಚಾವ್ ಆಂದೋಲನವು ಯೋಜನೆಯನ್ನು ವಿರೋಧಿಸಿ ಹಲವಾರು ವರ್ಷಗಳಿಂದ ಹೋರಾಡುತ್ತಿದ್ದರೂ, ಅಸಮರ್ಪಕ ಪರಿಹಾರ ಮತ್ತು ಪುನರ್ವಸತಿಗಳ ಬಗ್ಗೆ ಸುಪ್ರೀಂ ಕೋರ್ಟಿನಲ್ಲಿ ಹಲವಾರು ದಾವೆಗಳಿದ್ದರೂ, ೨೦೧೪ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಕೆಲವೇ ತಿಂಗಳುಗಳಲ್ಲಿ ನರ್ಮದಾ ನಿಯಂಯ್ರಣಾ ಪ್ರಾಧಿಕಾರವು (ಎನ್ಸಿಎ) ಯೋಜನೆಯನ್ನು ಪೂರ್ಣಗೊಳಿಸಲು ಅನುಮತಿ ನೀಡಿಬಿಟ್ಟಿತು. ಆವರೆಗೆ ಅಣೆಕಟ್ಟಿನ ಎತ್ತರ ೧೨೧.೯೨ ಮೀಟರೆಂದು ನಿಗದಿಗೊಳಿಸಲಾಗಿತ್ತು. ಅಣೆಕಟ್ಟಿನ ಎತ್ತರ ಅಷ್ಟಿದ್ದಾಗಲೇ ಅದರಿಂದ ಸಂತ್ರಸ್ತರಾಗಿದ್ದ ಸಾವಿರಾರು ಕುಟುಂಬಗಳು ಸರಿಯಾದ ಪರಿಹಾರ ಮತ್ತು ಪುನರ್ವಸತಿ ದಕ್ಕಿಲ್ಲವೆಂದು ಹೋರಾಡುತ್ತಿದ್ದರು. ಹಾಗಿದ್ದರೂ ನರ್ಮದಾ ನಿಯಂತ್ರಣ ಪ್ರಾಧಿಕಾರವು ಯೋಜನೆಯ ಎತ್ತರವನ್ನು  ೧೩೮.೬೮ ಮೀಟರಿಗೆ ಎತ್ತರಿಸಲು ಅನುಮತಿ ನೀಡಿತು. ಪ್ರಾಧಿಕಾರದ ನಿರ್ಧಾರವನ್ನು ವಿದ್ವಾಂಸರು, ಜಲಪರಿಣಿತರು, ಮತ್ತು ಕಾರ್ಯಕರ್ತರು  ತಮ್ಮ ಬಹಿರಂಗ ಪತ್ರದಲ್ಲಿ  ಅವಸರದಿಂದ ಮಾಡಿದ, ಅವಿವೇಕದಿಂದ ಕೂಡಿದ ಅನಾಹುತಕಾರಿ ತೀರ್ಮಾನವೆಂದು ಬಣ್ಣಿಸಿದ್ದರು. ಆದರೂ ಪ್ರಾಧಿಕಾರವು ಇಂಥಾ ಅನಾಹುತಕಾರಿ ತೀರ್ಮಾನ ಏಕೆ ಕೈಗೊಂಡಿತೆಂಬುದು ಈಗಲೂ ನಿಗೂಢವಾಗಿದೆ. ತಾನೇ ನಿರ್ಧಾರವನ್ನು ತೆಗೆದುಕೊಳ್ಳಲು ಪ್ರೇರೇಪಿಸಿದೆ ಎಂದು ಮೋದಿಯವರು ಹೇಳದ ಹೊರತು ನಿಗೂಢವನ್ನು ಬೇಧಿಸುವುದು ದುಸ್ಸಾಧ್ಯ

ಸರ್ದಾರ್ ಸರೋವರ್ ಅಣೆಕಟ್ಟು ಮತ್ತು ನರ್ಮದಾ ನದಿಯ ಮೇಲೆ ಕಟ್ಟಲಾಗುತ್ತಿರುವ ಇತರ ಅಣೆಕಟ್ಟುಗಳ ಬಗ್ಗೆ ಈಗಾಗಲೇ ರೀಮುಗಳಗಟ್ಟಲೇ ಬರೆಯಲಾಗಿದೆ. ಯೋಜನೆಯ ಸಂತ್ರಸ್ತರಿರುವ ಗುಜರಾತ್, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ಮೂರೂ ರಾಜ್ಯಗಳಲ್ಲಿ ಪರಿಹಾರ ಮತ್ತು ಪುನರ್ವಸತಿ ಕ್ರಮಗಳು ಅತ್ಯಂತ ಅಸಮರ್ಪಕವಾಗಿದೆಯೆಂಬುದನ್ನು ಎಲ್ಲಾ ಅಧ್ಯಯನಗಳೂ ಸಾಬೀತುಪಡಿಸಿವೆ. ಅತ್ಯಂತ ಹೆಚ್ಚಿನ ಸಂತ್ರಸ್ತರಿರುವ ಮಧ್ಯಪ್ರದೇಶದಲ್ಲಿ ಸಂತ್ರಸ್ತ ಕುಟುಂಬಗಳ ಸಂಖ್ಯೆಯ ಬಗ್ಗೆ ಈಗಲೂ ವಿವಾದ ಮುಂದುವರೆದಿದೆ. ಸಂತ್ರಸ್ತರು ಕಳೆದುಕೊಂಡ ಭೂಮಿಗೆ ಬದಲಾಗಿ ಭೂಮಿಯನ್ನೇ ಕೊಡಬೇಕೆಂದು ತಾಕೀತು ಮಾಡಿದ್ದ ನರ್ಮದಾ ಜಲ ವಿವಾದ ನ್ಯಾಯಮಂಡಳಿ ಕೊಟ್ಟ ತೀರ್ಮಾನವನ್ನು ಧಿಕ್ಕರಿಸಿರುವ ಮಧ್ಯಪ್ರದೇಶ ಸರ್ಕಾರವು ಹಣಕಾಸು ಪರಿಹಾರವನ್ನು ಕೊಡಲು ಮುಂದಾಗಿದೆ. ಹೀಗಾಗಿ ಈಗಲೂ ಸಾವಿರಾರು ಸಂತ್ರಸ್ತ ಕುಟುಂಬಗಳು ತಮ್ಮ ಜಮೀನು ಮುಳುಗಡೆ ಆಗುವ ಮುನ್ನ ಸರಿಯಾದ ಮತ್ತು ನ್ಯಾಯಯುತವಾದ ಪರಿಹಾರ ದೊರಕಬೇಕೆಂದು ಹೋರಾಡುತ್ತಿದ್ದಾರೆ. ಮತ್ತೊಂದು ಕಡೆ ಯೋಜನೆಯಿಂದ ಆಗುವ ಲಾಭಗಳ ಬಗ್ಗೆ ಅತ್ಯಂತ ಉತ್ಪ್ರೇಕ್ಷೆಯಿಂದ ಕೂಡಿದ ಪ್ರಚಾರಗಳು ನಡೆಯುತ್ತಿವೆ. ಆದರೆ, ವಾಸ್ತವವೆಂದರೆ ನೀರು ಹರಿಸಲು ಮತ್ತು ರೈತರಿಗೆ ತಲುಪಿಸಲು ಬೇಕಾದ ಕಾಲುವೆ ಇನ್ನಿತ್ಯಾದಿ ಮೂಲಭೂತ ಸೌಕರ್ಯಗಳನ್ನು ಇನ್ನೂ ನಿರ್ಮಿಸಿಯೇ ಇಲ್ಲ. ಮತ್ತು ಇದರಿಂದ ಸ್ಥಳಾಂತರಗೊಳ್ಳುವವರ ವೆಚ್ಚಗಳನ್ನೂ ಇನ್ನೂ ಲೆಕ್ಕಕ್ಕೆ ಸೇರಿಸಿಲ್ಲ.

ಇದೊಂದು ಇಂಜಿನಿಯರಿಂಗ್ ಪವಾಡವೆಂದು ಮೋದಿ ಬಣ್ಣಿಸಿದ್ದಾರೆ. ಆದರೆ ಪವಾಡಕ್ಕೆ ಸಾಮಾನ್ಯ ಜನರು ತಮ್ಮ ಭೂಮಿ ಮತ್ತು ಜೀವನೋಪಾಯಗಳನ್ನು ಕಳೆದುಕೊಳ್ಳುವ ಮೂಲಕ ಅತಿಯಾದ ಬೆಲೆಯನ್ನು ತೆತ್ತಿದ್ದಾರೆ. ಬದಲಿಗೆ ಇದರಿಂದ ಅವರಿಗೆ ಯಾವ ಪ್ರಯೋಜನಗಳು ಆಗಿಲ್ಲ. ಇಷ್ಟೆಲ್ಲಾ ಆದಮೇಲೂ ಮೋದಿಯವರು ಯೋಜನೆಯಿಂದ ಸ್ಥಳಾಂತರಗೊಂಡ ಆದಿವಾಸಿಗಳ ತ್ಯಾಗಕ್ಕೆ ಕೃತಜ್ನತೆ ಎಂದು ಹೇಳಿದ್ದಾರೆ. ಇದಕ್ಕಿಂತ ಹೆಚ್ಚಿನ ಸಂವೇದನಾ ರಹಿತ ಹೇಳಿಕೆ ಮತ್ತೊಂದು ಇರಲು ಸಾಧ್ಯವಿಲ್ಲ.

                               
ಕೃಪೆ: Economic and Political Weekly, Sep 23, 2017. Vol. 52. No. 38

                                                                                        







ಕಾಮೆಂಟ್‌ಗಳಿಲ್ಲ: